ಬರವಣಿಗೆ ಪ್ರಖ್ಯಾತಿಗಲ್ಲ, ಅಂತರಾಳದೊಳಗಿರುವ ಆಲೋಚನೆಗಳ ಸಾರುವುದಕೆ

ನಾನು ಬರೆಯಹೊರಟವನಲ್ಲ, ಬರೆಸಿಕೊಂಡವಳು ನೀನು. ನೀನೆಂದರೆ ನನ್ನೊಡಲು, ನನ್ನುಸಿರು ಕನ್ನಡ. ನಾನು ಬದುಕಹೊರಟವನಲ್ಲ ಬಾಳಿಸಿದವಳು ನೀನು ನನ್ನ ಕನಸುಗಳು. ಜೀವನವನ್ನು ಜೀವಿಸಬೇಕು, ನಲಿಯಬೇಕು, ನಗಿಸಬೇಕು, ಹೃದಯಾಂತರಾಳದಲ್ಲಿರುವ ಪ್ರೀತಿಯನ್ನು ಜಗತ್ತಿಗೆ ಹಂಚಬೇಕು, ಹಂಚಬಹುದು ಬರವಣಿಗೆಯ ಮೂಲಕವೂ...

25 August 2017

Center for Education Environment and Community (CEECo)

23 August 2017

ಮಾಸಿದ ನೆನಪಿನಿಂದ ಹಸಿ ಸತ್ಯಗಳುಈ ಬರಣಿಗೆಯನ್ನು ನಾನು 2016ರ ರಲ್ಲಿ ನನ್ನೂರು ಬಾನುಗೊಂದಿಯ ಶಾಲಾಭಿವೃದ್ಧಿ ಮಾಡುತ್ತೇನೆಂದು ಹೊರಟು ಅನುಭವಿಸಿದ ಕಥನವನ್ನು ತಿಳಿಸಲು ಬಯಸಿ ಪ್ರಾರಂಭಿಸಿದೆ. ಆದರೆ, ಅದರ ನಡು ನಡುವೆ ಇದು ಕೇವಲ ನನ್ನೂರಿನ ಸಮಸ್ಯೆ ಮಾತ್ರವಲ್ಲ, ಬಹುತೇಕ ಎಲ್ಲಾ ಊರಿನ ಸಮಸ್ಯೆಯೆಂಬುದನ್ನು ಅರಿತು, ಬೇರೆ ಬೇರೆ ವಿಷಯಗಳನ್ನು ಪ್ರಸ್ತಾಪಿಸಿದ್ದೇನೆ. ಇಲ್ಲಿ ಯಾರೂ ಅನ್ಯತಾ ಭಾವಿಸಬಾರದು. ಏಕೆಂದರೇ, ಒಳ್ಳೆಯದು ಕೆಟ್ಟದ್ದು ಎನ್ನುವ ತಳಹದಿಯ ಮೇಲೆ ಈ ಬರವಣಿಗೆಯನ್ನು ಬರೆದಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಮಹಾನ್ ಚೇತನ, ವಿಶ್ವಮಾನವನಾಗಿರುತ್ತಾನೆ. ಅವನು ದೊಡ್ಡ ವ್ಯಕ್ತಿ ಎನ್ನುವುದನ್ನು ಅವನೇ ನಂಬುವುದಿಲ್ಲ. ಆದ್ದರಿಂದ, ಯಾರೊಬ್ಬರ ನಡುವಳಿಕೆಗಳು ಹುಟ್ಟಿನಿಂದ ಬಂದವಲ್ಲ, ಬೆಳೆಯುತಾ ಸುತ್ತಣ ಪರಿಸರದಿಂದ ಮಾರ್ಪಾಡಾದವುಗಳು, ನನ್ನ ವಿದ್ಯಾಬ್ಯಾಸದ ಜೊತೆಗೆ ಓದುವ ಮತ್ತು ಸುತ್ತಾಡುವ ಹಾಗೂ ವಿಚಾರಗಳನ್ನು ತಿಳಿದಿರುವ ಜನರೊಂದಿಗೆ ಬೆರೆಯದೇ ಇದ್ದಿದ್ದರೇ ಬಹುಶಃ ನಾನು ಕೂಡ ನನ್ನದೇ ಆದ ಪ್ರಪಂಚದಳೊಗೆ ಬದುಕುತ್ತಿದ್ದೆ ಮತ್ತು ಆಲೋಚಿಸುತ್ತಿದ್ದೆ ಎನಿಸುತ್ತದೆ. ಜಗತ್ತಿನಲ್ಲಿ ಯಾರೊಬ್ಬರೂ ಕೆಟ್ಟವರಿಲ್ಲವೆನ್ನುವುದನ್ನು ಮನಸ್ಸಿನಲ್ಲಿಟ್ಟುಕೊಂಡು ಓದಬೇಕಾಗಿ ವಿನಂತಿ. 

ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶ್ರಮವಹಿಸಿದ ನನ್ನ ಕಿರಿಯ ಸ್ನೇಹಿತರಿಗೇ ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತೇನೆ, ಹಗಲು ರಾತ್ರಿ ಶ್ರಮವಹಿಸಿ ದುಡಿದಿದ್ದಾರೆ. ಒಂದೇ ಒಂದು ರೂಪಾಯಿ ನಿರೀಕ್ಷೆಯಿಲ್ಲದೆ ಕೆಲಸ ಮಾಡಿದ್ದಾರೆ. ಅದರ ಜೊತೆಗೆ ಕಾರ್ಯಕ್ರಮಕ್ಕೆ ದೇಣಿಗೆ ನೀಡಿದ ಮತ್ತು ಎಲ್ಲಾ ಕಾರ್ಯಗಳನ್ನು ನೆರವೇರಿಸಿ, ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಸರ್ವರ ಪಾದಾರವಿಂದಗಳಿಗೆ ನನ್ನ ನಮನಗಳು. ನಾನು ಏನೂ ಬೇಕಾದರೂ ಸಾಧಿಸಬಹುದು, ಅತಿ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಬಹುದು, ಆದರೇ ಈ ಕಾರ್ಯಕ್ರಮ ನನಗೆ ನೀಡಿರುವ ಆತ್ಮ ಸಂತೋಷ ಮತ್ತು ತೃಪ್ತಿಯನ್ನು ಬೇರಾವ ಯಶಸ್ಸು ನೀಡಲು ಸಾಧ್ಯವಿಲ್ಲ. ಆದ್ದರಿಂದ ನನ್ನೆಲ್ಲಾ ಬಾನುಗೊಂದಿಯ ಹಿರಿಯರಿಗೆ, ಕಿರಿಯರಿಗೆ, ಪುಟಾಣಿಗಳಿಗೆ, ತಾಯಂದಿಯರಿಗೆ, ತಂಗಿಯರಿಗೆ, ಅಕ್ಕಂದಿರಿಗೆ ನನ್ನ ದೀರ್ಘದಂಡ ನಮಸ್ಕಾರಗಳನ್ನು ಅರ್ಪಿಸಿದ್ದೇನೆ. ಕಾರ್ಯಕ್ರಮದ ವೇಳೆಯಲ್ಲಿ ಅಥವಾ ಅದಾದ ಮೇಲೆ ನನ್ನಿಂದ ಕೆಲವರಿಗೆ ಬೇಸರವಾಗಿದ್ದರೆ ಅಥವಾ ಈ ಬರವಣಿಗೆಯಿಂದ ಬೇಸರವಾದರೇ ಅದು ನನ್ನ ಅನಿಸಿಕೆಯೇ ಹೊರತು ಯಾರನ್ನು ನೋವಿಸುವುದಾಗಲೀ ನಿಂದಿಸುವುದಾಗಲೀ ನನ್ನ ಉದ್ದೇಶವಲ್ಲ ಮತ್ತು ಆ ವರ್ಗಕ್ಕೆ ಸೇರಿದವನು ನಾನಲ್ಲ. 

ನನ್ನೂರಿನ ಅನೇಕರನ್ನು ಸೇರಿಸಿಕೊಂಡು, ಬಹಳಷ್ಟು ಜನರಿಗೆ ನನ್ನ ಬಗ್ಗೆ ಮತ್ತು ನನ್ನ ಅನುಭವಗಳ ಕುರಿತು ತಿಳಿದಿರುವುದಿಲ್ಲ. ನಾನು ಬದುಕನ್ನು ಬದುಕುತ್ತಾ, ಜೀವನವನ್ನು ಜೀವಿಸುತ್ತಾ, ಕಲಿಯುತ್ತಾ ಅಳವಡಿಸುತ್ತಾ ಬದುಕುತ್ತಿರುವವನು. ನಾನು ಫೇಮಸ್ ಆಗಬೇಕೆಂದು ಬರೆಯುವವನು ಅಲ್ಲಾ, ನನಗೆ ಹೆಸರು ಕೀರ್ತಿ ಬರಲೆಂದು ಕೆಲಸ ಮಾಡಿದವನು ಅಲ್ಲಾ. ನಾನು ಮಾಡಿದ್ದು ಮಾಡುತ್ತಿರುವುದೆಲ್ಲವೂ ನನ್ನ ಬದುಕಿಗೆ, ನನ್ನೊಳಗಿರುವ ನನಗೆ, ನಾನೇ ಆಗಿರುವ ನನ್ನಂತರಾಳಕ್ಕೆ ತೃಪ್ತಿ ನೀಡುವುದಕ್ಕೆ. ಒಂದಿಷ್ಟು ಪೀಠಿಕೆಯನ್ನು ನೀಡುತ್ತೇನೆ, ಏಕೆಂದರೆ ಹಲವರಿಗೆ ನಾನು ಏನು ಕೆಲಸ ಮಾಡುತ್ತೇನೆ, ಏನೆಲ್ಲಾ ಕೆಲಸ ಮಾಡಿದ್ದೇನೆಂಬುದರ ಸುಳಿವು ಸಿಗಲೆಂದು. ಇದಕ್ಕೆ ಇನ್ನೊಂದು ಕಾರಣ ನನ್ನ ಬಗ್ಗೆ ನಿಮ್ಮದೇ ಊಹೆಗಳು, ಆಲೋಚನೆಗಳು ಮೂಡದಿರಲಿ ಮತ್ತು ಅವುಗಳು ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡದಿರಲೆಂದು. ನಾನು ಯಾವ್ಯಾವುದೋ ಊರಿಗೆ ಭೇಟಿ ನೀಡಿದಾಗ, ನನ್ನೂರಿಗೂ ಏನಾದರೂ ಮಾಡಬೇಕೆಂಬ ಆಸೆಗಳು ಬರುತ್ತಿದ್ದವು. ಅದರ ಜೊತೆಗೆ ನನ್ನೂರು ಬಾನುಗೊಂದಿಯಲ್ಲಿರು ಸರ್ಕಾರಿ ಶಾಲಾಭಿವೃದ್ಧಿಯ ವಿಷಯಕ್ಕೆ ಬರೋಣ ಮತ್ತು ಸಮುದಾಯವನ್ನು ಸೇರಿಸಿಕೊಂಡು ಅಬಿವೃದ್ಧಿಯತ್ತ ಸಾಗುವ ಯೋಜನೆಯಲ್ಲಿ ನನಗಾದ, ಅನುಭವವನ್ನು ಹೇಳುತ್ತೇನೆ. ಇದೇ ಸತ್ಯವಾಗಿರುವುದೆಂದು ಹೇಳುತ್ತಿಲ್ಲ, ಇದು ನನ್ನ ಅನಿಸಿಕೆಗಳು ಅಥವಾ ನನ್ನ ಮೂಗಿನ ನೇರದ ಪ್ರಸ್ತಾಪವೂ ಇರಬಹುದು. ಇಲ್ಲಿನ ಬರವಣಿಗೆಯಲ್ಲಿ ಅನೇಕಾ ವಿಷಯಗಳು ಬಂದು ನೀವು ಸ್ವಲ್ಪ ಗೊಂದಲಕ್ಕೂ ಹೋಗಬಹುದು, ಹಾಗಾಗಿ ನಿಮಗೆ ಗೊಂದಲಗಳು ಬಂದರೆ ನೀವು ಈ ಬರವಣಿಗೆಯನ್ನು ಸರಿಯಾಗಿಯೇ ಓದುತ್ತಿದ್ದೀರೆಂದು ಅರಿತುಕೊಳ್ಳಿ. 

ಮನುಷ್ಯ ಎಷ್ಟೇ ಕಲಿತರೂ, ಓದಿದರೂ, ಬೆಳೆದರೂ ಅವನ ಸಣ್ಣತನವು ಅವನಿಂದ ತಾನಾಗಿಯೇ ಹೋಗುವುದಿಲ್ಲ. ಏಕೆಂದರೆ, ಒಂದು ಮಗುವು ಜನಿಸಿದಾಗ ಅದು ವಿಶ್ವಮಾನವನಾಗಿ ಜನಿಸಿರುತ್ತದೆ. ಅದಕ್ಕೊಂದು ಜಾತಿಯಿರುವುದಿಲ್ಲ, ಧರ್ಮವಿರುವುದಿಲ್ಲ, ಭಾಷೆ ಇರುವುದಿಲ್ಲ, ರಾಜ್ಯವಿರುವುದಿಲ್ಲ, ದೇಶಗಳ ಗಡಿಯಿರುವುದಿಲ್ಲ, ಅಷ್ಟೆಲ್ಲಾ ಯಾಕೆ ಅದಕ್ಕೊಂದು ಹೆಸರೇ ಇರುವುದಿಲ್ಲ, ಲಿಂಗವೂ ಇರುವುದಿಲ್ಲ. ನಾವು ಅದು ಹುಟ್ಟಿದ ತಕ್ಷಣ ಗಂಡು ಅಥವಾ ಹೆಣ್ಣು ಎನ್ನುವ ಲಿಂಗವನ್ನು ಆಧರಿಸಿ ಒಂದು ವರ್ಗಕ್ಕೆ ಸೇರಿಸುತ್ತೇವೆ, ಅದಕ್ಕೊಂದು ಹೆಸರು ನೀಡಿ ನೀನು ಇವನು/ಇವಳು ಎನ್ನುತ್ತೇವೆ. ಬೆಳೆಯುತ್ತ ಬಂದಂತೆ ನೀನು ಒಳ್ಳೆಯವನು/ಕೆಟ್ಟವನು ಎಂದು ತುಂಬುತ್ತೇವೆ. ನೀನು ಚುರಕು, ನೀನು ದಡ್ಡ, ನಿನಗೆ ವಿದ್ಯೆ ಹತ್ತುವುದಿಲ್ಲ, ನೀನು ಉದ್ದಾರವಾಗುವುದಿಲ್ಲ, ನೀನು ಅದು, ನೀನು ಇದು, ಹೀಗೆ ಹೇಳಿ ಹೇಳಿ, ಮತ್ತು ಅದನ್ನೆ ಆ ಮಗುವು ಕೇಳಿ ಕೇಳಿ ಬೆಳೆಯುತ್ತಾ ಹೋದಂತೆ ಅದನ್ನೇ ಸತ್ಯವೆಂದು ನಂಬುತ್ತದೆ. ಜನಿಸಿದಾಗ ಇಡೀ ಜಗತ್ತನ್ನೆ ಹಿಡಿಯಬಹುದೆಂಬ ಮತ್ತು ಜಗತ್ತೇ ನನ್ನದು ಎನ್ನುವ ತನ್ನ ವಿಶಾಲ ಪ್ರಪಂಚವನ್ನು ಮತ್ತು ಆತ್ಮ ವಿಶ್ವಾಸವನ್ನು ಕುಗ್ಗಿಸಿಕೊಳ್ಳುತ್ತದೆ.  ಅದರಲ್ಲಿಯೂ ಶಾಲೆಗೆ ಸೇರಿದ ಮೇಲೆ ಆ ಭಾವನೆ ಹೆಚ್ಚುತ್ತಾ ಹೋಗುವುದು ವಿಪರ್ಯಾಸವೇ ಸರಿ. ಅವರೊಡನೆ ಸೇರಬೇಡ, ಇವರೊಡನೆ ಸೇರಬೇಡ, ನೀನೇ ಚೆನ್ನಾಗಿ ಓದಬೇಕು ನೀನೇ ಮೊದಲು ಬರಬೇಕು, ಮೊದಲ ಸ್ಥಾನದಲ್ಲಿದ್ದರೇ ಮಾತ್ರ ಬೆಲೆ, ಬೇರೆಯವರ ಜೊತೆ ಅದರಲ್ಲಿಯೂ ಕಡಿಮೆ ಅಂಕ ತೆಗೆದವರ ಜೊತೆಗೆ ಸೇರಬೇಡ ಎಂದು ಆ ಮಗುವಿನ ತಲೆಗೆ ಪೋಷಕರು ಮತ್ತು ಶಿಕ್ಷಕರು ಪೈಪೋಟಿಗೆ ಬಿದ್ದಂತೆ ಏನೇನೋ ತುಂಬುತ್ತಾರೆ. ಎಲ್ಲವನ್ನೂ ಎಲ್ಲರನ್ನೂ ಪ್ರೀತಿಸಬೇಕೆಂದು ಬಯಸಿದ್ದ ಆ ಮಗು ಕಾಲಕ್ರಮೇಣ ಪೈಪೋಟಿಗೆ ಇಳಿಯುತ್ತದೆ. ನಾನು ನನ್ನ ಅಂಕಗಳು, ನನ್ನ ಓದು, ನನ್ನ ಕಲಿಕೆಯೆಂದು ಬೆಳೆದು ಮುಂದೊಂದು ದಿನ ತನ್ನ ತಂದೆ ತಾಯಿಯನ್ನು ಕೂಡ ನನ್ನವರು ಎಂದು ತಿಳಿಯದೇ ನಾನು ಎಂದರೇ ಕೇವಲ ನಾನೂ ಎಂದು ನಂಬಿ, ವೃದ್ಧಾಶ್ರಮಕ್ಕೆ ಬಿಡುತ್ತದೆ.

ಇಷ್ಟೊಂದು ಪೀಠಿಕೆ ಏಕೆನ್ನುವುದನ್ನು ಈಗ ವಿವರಿಸುತ್ತೇನೆ. ನಾನು ನನ್ನೂರು ಬಾನುಗೊಂದಿ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಮ್ಮಿಳನ ಕಾರ್ಯಕ್ರಮವನ್ನು 19ನೇ ತಾರೀಖು ಮಾರ್ಚಿ 2016ರಲ್ಲಿ ಆಯೋಜಿಸಿದ್ದೆ. ಆಯೋಜಿಸಿದ್ದೆ ಎಂದು ಏಕೆ ಹೇಳುತ್ತೇನೆಂದರೆ ಅದರ ಸಂಪೂರ್ಣ ರೂಪು ರೇಷೆಯನ್ನು ಸಿದ್ಧಪಡಿಸಿದ್ದು ನಾನು. ಕಾರ್ಯಕ್ರಮಕ್ಕೆ ಊರಿನ ಎಲ್ಲಾ ಹಳೆಯ ವಿದ್ಯಾರ್ಥಿಗಳು ಸಹಕರಿಸಿದರು, ಓಡಾಡಿದರು ಸಂತೋಷಪಟ್ಟರು. ಅವರೆಲ್ಲರಿಗೂ ನಾನು ಋಣಿಯಾಗಿದ್ದೇನೆ. ಅವರಿಲ್ಲದೇ ಇದ್ದಿದ್ದರೆ ಈ ಕಾರ್ಯಕ್ರಮವೇ ನಡೆಯುತ್ತಿರಲಿಲ್ಲ, ನಡೆದರೂ ಅಷ್ಟೊಂದು ಸುಂದರವಾಗಿರುತ್ತಿಲ್ಲ. 

ಕಾರ್ಯಕ್ರಮ ಆಯೋಜಿಸಿದ ಮೂಲ ಉದ್ದೇಶವನ್ನು ತಿಳಿಸುತ್ತೇನೆ. 
ಮೊದಲನೆಯದಾಗಿ, ನನ್ನೆಲ್ಲಾ ಬರಹಗಳನ್ನು ಗಮನಿಸಿದರೇ ನೀವು ಕಾಣುವುದು ಎರಡು ಪ್ರಮುಖ ವಿಷಯಗಳು. ಅದರಲ್ಲಿ ಮೊದಲನೆಯದು, ನನ್ನ ಈ ದಿನದ ಬೆಳವಣಿಗೆಗೆ ಕಾರಣವಾಗಿರುವ ನನ್ನ ಗುರುಗಳು. ಅದೆಷ್ಟು ಗೌರವ ಸಲ್ಲಿಸಿದರೂ ಕಡಿಮೆ, ಅವರುಗಳ ಆ ದಿನದ ಶ್ರಮವಿಲ್ಲದೇ ಇದ್ದಿದ್ದರೇ ನಾನು ಏನಾಗುತ್ತಿದ್ದೆ ಎನ್ನವುದನ್ನು ಊಹಿಸಿಕೊಳ್ಳುವುದ ಕಷ್ಟವಾಗುತ್ತದೆ. ಆದ್ದರಿಂದ ಅವರಿಗೆ ಗೌರವ ಸಲ್ಲಸಲೇಬೇಕೆಂಬುದು ನನ್ನ ಅನೇಕಾ ದಿನದ ಆಸೆಯಾಗಿತ್ತು. ಎಲ್ಲಾ ಗುರುಗಳಿಗೂ ನಾನು ನೇರವಾಗಿ ಗೌರವ ಸ್ಮರಣೆ ಮಾಡಿದ್ದೆ ಆದರೆ ಸಾರ್ವಜನಿಕವಾಗಿಯೂ ಮಾಡಬೇಕೆಂಬುದು ಕಾಡುತ್ತಿತ್ತು. ಅದರ ಜೊತಗೆ ನನ್ನ ಬಾಲ್ಯದ ದಿನಗಳು, ಶಾಲಾ ದಿನಗಳು, ಅದನ್ನು ಮೆಲುಕು ಹಾಕಬೇಕೆನಿಸುತ್ತಿತ್ತು, ಎಲ್ಲರೊಟ್ಟಿಗೆ ಮತ್ತೊಮ್ಮ ಸೇರಬೇಕೆನಿಸುತ್ತಿತ್ತು. ಏಕೆಂದರೆ, ನನ್ನ ಹೈಸ್ಕೂಲು, ಪಿಯುಸಿ ಎಲ್ಲಾ ಸ್ನೇಹಿತರೊಡನೆ ಸೇರಿ ಈ ರೀತಿಯ ಸಮ್ಮಿಳನಗಳು ನಡೆದಿದ್ದವು, ಆದರೆ ಪ್ರೈಮರಿ ಶಾಲೆಯ ಸ್ನೇಹಿತರೊಟ್ಟಿಗೆ ಸೇರಿರಲಿಲ್ಲ. 

ಎರಡನೆಯದಾಗಿ, ಎಲ್ಲಾ ಊರಿನಲ್ಲಿ ಇರುವಂತೆಯೇ ನಮ್ಮೂರಿನಲ್ಲಿಯೂ ಬೇಕಿಲ್ಲದೆ ಇರುವ ವಿಷಯಕ್ಕೆಲ್ಲಾ ರಾಜಕೀಯ ಬೆರೆಸುತ್ತಾ ಒಗ್ಗಟ್ಟಾಗಿರಬೇಕಿದ್ದ ಊರು ರಾಜಕೀಯದ ಗೊಂದಲಗೂಡಾಗಿದೆ. ಅದನ್ನು ಮೀರಿ ಊರೆಲ್ಲಾ ಒಪ್ಪುವ, ಮೆಚ್ಚುವ ಒಂದು ಕಾರ್ಯಕ್ರಮ ಬೇಕಿತ್ತು. 

ಮೂರನೆಯದಾಗಿ, ಊರಿಂದ ಹೊರಗೆ ಹೋಗಿ ದುಡಿಯುತ್ತಿರುವವರು ಊರಿನವರನ್ನು ಹಣ ಕೇಳದೆ ಅದರಲ್ಲಿಯೂ ಒಂದೇ ಒಂದು ರೂಪಾಯಿ ಕೂಡ ದುರುಪಯೋಗವಾಗದಂತೆ ಕಾರ್ಯಕ್ರಮ ನಡೆಸಿ ಪಾರದರ್ಶತೆಯಿಂದ ಇದು ಮಾದರಿ ಕಾರ್ಯಕ್ರಮವೆಂದು ತೋರಿಸುವ ಅವಶ್ಯಕತೆಯಿತ್ತು. ಒಂದು ಸಣ್ಣ ಕಬ್ಬಡ್ಡಿ ಅಥವಾ ಕ್ರಿಕೇಟ್ ಟೂರ್ನಮೆಂಟ್ ಮಾಡಿದರೂ ಸಾಕು ಅದರಲ್ಲಿಯೂ ಹಣ ಹೊಡೆದು ತಿಂದು ಕುಡಿಯುವುದು ಸರ್ವೇ ಸಾಮಾನ್ಯವಾಗಿದೆ.

ನಾಲ್ಕನೆಯದಾಗಿ, ನಾನು ಈ ಕಾರ್ಯಕ್ರಮವನ್ನು ನಡೆಸಿದ ಮೇಲೆ ಇದರಿಂದ ಬೇರೆ ಯುವ ಜನತೆ ಪ್ರೇರಣೆಗೊಂಡು ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಹೋಗುತ್ತಾರೆಂಬ ವಿಶ್ವಾಸವಿತ್ತು. ಯುವಕರ ತಲೆಗೆ ಈ ರೀತಿಯ ಆಲೋಚನೆಗಳು ಬಂದರೆ ಊರಿನ ಅಬಿವೃದ್ಧಿಯಾಗುವುದೆಂಬ ಹೆಬ್ಬಯಕೆ ನನ್ನದಾಗಿತ್ತು.

ಐದನೆಯದಾಗಿ, ಕಾರ್ಯಕ್ರಮಕ್ಕೆ ಬರುವ ಹಳೆ ವಿದ್ಯಾರ್ಥಿಗಳು ಹಾಳಾಗುತ್ತಿರುವ ಶಾಲೆಯತ್ತ ಗಮನ ನೀಡಿ ಉದ್ದಾರ ಮಾಡುತ್ತಾರೆಂಬ ಅತಿಯಾದ ವಿಶ್ವಾಸವೂ ತುಂಬಿತ್ತು. ಆದರೇ ಆಗಿದ್ದೇನು?

ಇಲ್ಲಿ ಯಾರ ಹೆಸರನ್ನು ಪ್ರಸ್ತಾಪಿಸುವುದಿಲ್ಲ. ಕಾರಣ ಅವರ ಮೇಲೆ ಭಯ ಅಂತಾ ಆಗಲಿ ಅಂಜಿಕೆಯಾಗಲಿ ಇಲ್ಲ, ಇದು ಎಲ್ಲ ಊರಿನಲ್ಲಿಯೂ ಇರುವಂತದ್ದೆ, ಆದ್ದರಿಂದ ಹೆಸರನ್ನು ಪ್ರಸ್ತಾಪಿಸದಿದ್ದರೂ ಕೆಲವರಿಗೆ ತಿಳಿಯುತ್ತದೆ ಮತ್ತು ನಿಮಗು ಇಂತಹ ಅನುಭವಗಳು ಆಗಿರುತ್ತವೆ ಎಂದು ಮುಂದುವರೆಸುತ್ತೇನೆ. ಇಲ್ಲಿನ ವಸ್ಥುಸ್ಥಿತಿ ಕೇವಲ ಒಂದು ಊರಿಗೆ ಸೀಮಿತವಾಗಿಲ್ಲ, ಬಹುತೇಕ ಎಲ್ಲಾ ಹಳ್ಳಿಗಳಲ್ಲಿಯೂ ಇದೆ. ಇದಕ್ಕೆ ಮೂಲ ಕಾರಣ, ನಾನು ಆಗ್ಗಾಗ್ಗೆ ಪ್ರಸ್ತಾಪಿಸುವ ಗುಣಮಟ್ಟದ ಶಿಕ್ಷಣ ಮತ್ತು ಬೌದ್ಧಿಕ ಸಾಮರ್ಥ್ಯ ಮುಖ್ಯವಾಗುತ್ತದೆ ಎಂದರೂ ತಪ್ಪಿಲ್ಲ. ಅಕ್ಷರ ಕಲಿತವರೆಲ್ಲಾ ವಿದ್ಯಾವಂತರು/ಗುಣವಂತರು / ಬುದ್ದಿವಂತರು  ಎನ್ನುವುದು ಮೂರ್ಖತನವೆನ್ನುವುದು ನನ್ನ ನಂಬಿಕೆ. ಕೇವಲ ಹಣವಿದ್ದ ಮಾತ್ರಕ್ಕೆ ಸಿರಿವಂತನಾಗುವುದಿಲ್ಲ, ಅದರಂತೆಯೇ ಓದಿದ ತಕ್ಷಣ, ಪದವಿ ತೆಗೆದುಕೊಂಡ ತಕ್ಷಣ, ಹೆಚ್ಚು ಸಂಬಳ ಬರುವ ಕೆಲಸಕ್ಕೆ ಸೇರಿದ ತಕ್ಷಣ ಅವನು ವಿದ್ಯಾವಂತನಾಗುವುದಿಲ್ಲ ಅಥವಾ ಉತ್ತಮ ವ್ಯಕ್ತಿಯಾಗುವುದಿಲ್ಲ. ವಿದ್ಯಾವಂತ ಎನ್ನುವುದಕ್ಕೆ ಕೆಲವು ಮಾನಕಗಳು, ಮಾನದಂಡಗಳು ಇರಬೇಕು. ಒಬ್ಬ ಸುಶಿಕ್ಷಿತ ಎನಿಸಿಕೊಂಡವನಿಗು ಅಶಿಕ್ಷಿತನಿಗೂ ವ್ಯತ್ಯಾಸ ಗೊತ್ತಾಗುವಂತೆ ಬದುಕಬೇಕು, ನಡುವಳಿಕೆಯಲ್ಲಿ, ಮಾನವಿಯ ಮೌಲ್ಯಗಳಲ್ಲಿ ಅದು ಕಾಣಬೇಕು. 

ನೇರ ವಿಷಯಕ್ಕೆ ಬರೋಣ. ಕಾರ್ಯಕ್ರಮವನ್ನು ಆಯೋಜಿಸುವ ಆಲೋಚನೆ ಬಂದಾಗ ನಾನು ಕೆಲವು ಸ್ನೇಹಿತರನ್ನು ಹಿರಿಯರನ್ನು ಮತ್ತು ಕಿರಿಯರನ್ನು ಮಾತನಾಡಿಸಿದೆ. ಎಲ್ಲರೂ ಸಂತೋಷಪಟ್ಟರು. ಆ ಸಮಯದಲ್ಲಿ ನಾನು ನನ್ನೂರು ಬಾನುಗೊಂದಿಯ ಅನೇಕ ವಿಷಯಗಳನ್ನು ಕೇಳಿ ನಿಬ್ಬೆರಗಾದೆ. ನನ್ನ ಮನೆ ಊರಿನಿಂದ ಹೊರಗಿದೆ, ಹಾಗಾಗಿ, ನಾನು ಬಾನುಗೊಂದಿಯಲ್ಲಿದ್ದರೆ, ನನ್ನ ಮನೆ, ನನ್ನ ತೋಟ, ಕಾವೇರಿ ನದಿ ದಂಡೆ, ನದಿಗೆ ಅಡ್ಡವಾಗಿರುವ ಕಟ್ಟೇಪುರ ಕಟ್ಟೆ, ಇದು ನನ್ನ ಪ್ರಪಂಚ. ಊರಿನ ಜನರೊಂದಿಗೆ ಅತಿಯಾದ ಸಂಪರ್ಕವಿರಲಿಲ್ಲ. ಸಿಕ್ಕಿದವರನ್ನು ಮಾತನಾಡಿಸುವುದು, ಕುಶಲೋಪರಿಗೆ ಮಾತ್ರ ಸೀಮಿತವಾಗಿತ್ತು. ಅದರ ಜೊತಗೆ, ಈ ಕಾರ್ಯಕ್ರಮದ ಮೂಲ ಉದ್ದೇಶ, ನಾನು ದೂರದಿಂದ ಊರಿನಲ್ಲಿರುವ ಹಿರಿಯ ವಿದ್ಯಾರ್ಥಿಗಳಿಗೆ ಸಪೋರ್ಟ್ ಮಾಡುವುದು ಮತ್ತು ಅವರೆಲ್ಲರೂ ಮುಂದಾಳತ್ವ ತೆಗೆದುಕೊಂಡು ಕಾರ್ಯಕ್ರಮ ನಡೆಸುಬೇಕೆಂಬುದಾಗಿತ್ತು. ನಾನು ಹುಡುಗರ ಹತ್ತಿರ ಮತ್ತು ಊರಿನ ಕೆಲವರ ಹತ್ತಿರ ಮಾತನಾಡುತ್ತಾ ಹೋದಂತೆ ವಿಷಯಗಳು ಹೊರಬಂದವು. ಅದರಲ್ಲಿ ಕೆಲವರ ಗುಂಪು, ಕ್ರಿಕೇಟ್ ಟೂರ್ನಿ ಇಡಿಸುವುದು, ಕಬ್ಬಡ್ಡಿ ಆಟ ನಡೆಸುವುದು, ಹಣ ವಸೂಲಿ ಮಾಡುವುದು ಅದರಲ್ಲಿ ರಾತ್ರಿ ಕುಡಿದು ಮಜಾ ಮಾಡುವುದು. ಇವರ್ಯಾರು ಅನಕ್ಷರಸ್ಥರಲ್ಲ, ಚೆನ್ನಾಗಿಯೇ ಓದಿರುವವರು, ಸುವiರಾಗಿ ದುಡಿಯುತ್ತಿರುವವರು, ಕಂಡವರ ಕಾಸಿನಲ್ಲಿ ಕುಡಿದು ಮಜಾ ಉಡಾಯಿಸುವ ಪದ್ದತಿಯನ್ನು ರೂಢಿಸಿಕೊಂಡಿದ್ದರು ಮತ್ತು ಅದರಲ್ಲಿ ಅವರ್ಯಾರಿಗೂ ಅಂಜಿಕೆಯಿಲ್ಲದೆ ಹೆಮ್ಮೆಯಿಂದ ಹೇಳಿಕೊಂಡು ಬೀಗುತ್ತಿದ್ದರು ಎಂದು ತಿಳಿಯಿತು. ಸಂಜೆಯಾದರೇ ಯಾರಾದರೂ ಬಕ್ರಾ ಸಿಕ್ಕರೇ ಸಾಕು ಅವನ ತಲೆಯ ಮೇಲೆ ಕಲ್ಲಿಡಲು ಕಾಯುವ ಮಟ್ಟಕ್ಕೆ ಬಂದಿದ್ದರು ಎಂದು ಕೇಳಿದಾಗ ಅಚ್ಚರಿಯಾಯಿತು.

ಇದರ ಜೊತೆಗೆ ಕೆಲವರು ಎಚ್ಚರ ನೀಡಿದರು. ಹಣಕಾಸಿನ ವ್ಯವಹಾರವನ್ನು ಯಾರಿಗೂ ನೀಡಬೇಡಿ, ನೀವೇ ಇಟ್ಟುಕೊಳ್ಳಿ. ಇಲ್ಲಾ ನಾನು ಇಟ್ಟುಕೊಂಡರೆ ಇವರೆಲ್ಲಾ ಬೆಳೆಯುವುದು ಯಾವಾಗ ವ್ಯವಹಾರ ಮಾಡುವುದು ಯಾವಾಗ ಅದಲ್ಲದೇ ನಾನು ಬಿಡುವಿಲ್ಲ, ನನ್ನದೇ ಕೆಲಸದ ಒತ್ತಡಗಳಿರುತ್ತವೆ. ಒಂದು ಸಲ ನೋಡೋಣ ಇದು ಶಾಲೆಯ ಕೆಲಸ ಇಲ್ಲಿ ಮೋಸ ಮಾಡುವುದಿಲ್ಲವೆನಿಸುತ್ತದೆ ಎಂದೆ. ಅದಕ್ಕೆ ಅವರು ಹೇಳಿದರು, ಅವರು ಗಣಪತಿ ಇಡುವುದಕ್ಕೆ ಸಂಗ್ರಹಿಸಿದ ಹಣವನ್ನೇ ಕುಡಿದು ಉಡಾಯಿಸುತ್ತಾರೆ, ದೇವರ ದುಡ್ಡೇ ಲೆಕ್ಕವಿಲ್ಲ ಇನ್ನೂ ಈ ದುಡ್ಡು ಉಳಿಯುತ್ತದೆಯೇ? ಎಂದು ಕೆಲವು ಉದಾಹರಣೆಗಳನ್ನು ತಿಳಿಸಿದರು. ಅದನ್ನು ಕೇಳಿದ ಮೇಲೆ ನನಗೂ ಸತ್ಯವೆನಿಸಿತು. ಆದ್ದರಿಂದ, ನಾವು ನಡೆಸಬೇಕಿದ್ದ ಮೀಟಿಂಗ್‍ಗೆ ನಾನು ಬಹಳ ಸಿದ್ದನಾಗಿ ಹೋಗಿದ್ದೆ. ಮತ್ತು ಬಹಳ ದೃಢವಾಗಿ ಹೇಳಿದೆ, ಹಣಕಾಸಿನ ಸಂಪೂರ್ಣ ಜವಬ್ದಾರಿ ನನ್ನದು ಮತ್ತು ಪ್ರತಿಯೊಂದು ಪೈಸೆಗೂ ನಾನು ಲೆಕ್ಕ ಕೊಡುತ್ತೇನೆ. ಈ ಕಾರ್ಯಕ್ರಮಕ್ಕೆ ಓಡಾಡುವ ಯಾವುದೇ ಖರ್ಚಿಗೂ ಸಾರ್ವಜನಿಕರ ಹಣವನ್ನು ಬಳಸುವಂತಿಲ್ಲ. ನಾನೂ ಕೂಡ ಬಳಸುವುದಿಲ್ಲ, ಉದಾಹರಣೆಗೆ, ಕಾರ್ಯಕ್ರಮದ ಹಣ ಸಂಗ್ರಹಕ್ಕಾಗಿ ಬೇರೆ ಊರಿಗೆ ಹೋಗುವುದಕ್ಕೆ, ಬಸ್ ಚಾರ್ಜ್‍ಗೆ, ಪೆಟ್ರೋಲ್, ಊಟ ತಿಂಡಿ ಇತರೆಗಾಗಿ ಬಳಸುವಂತಿಲ್ಲ. ಬಹಳ ಕಾರ್ಯಕ್ರಮಗಳಲ್ಲಿ ಚಂದಾ ಎತ್ತುವಾಗ ಇದು ಸರ್ವೇ ಸಾಮಾನ್ಯ. ದೇವಸ್ಥಾನ ಕಟ್ಟಿಸಲು, ಗಣಪತಿ ಇಡುವುದಕ್ಕೆ, ಯಾವುದೋ ಸ್ಪರ್ಧೆಗೆ, ಚಂದಾ ಎತ್ತಿದ ಹಣದಲ್ಲಿಯೇ ಇವರುಗಳ ಊಟ, ಖರ್ಚು ವೆಚ್ಚಗಳನ್ನು ತುಂಬಿಸಿಕೊಳ್ಳುತ್ತಾರೆ. ಹಾಗೆಯೇ ಗಮನಿಸಿ, ಬಾನುಗೊಂದಿಯಿಂದ ಬೆಂಗಳೂರಿಗೆ ಬಂದು 5 ಸಾವಿರ ಚಂದಾ ಎತ್ತುವುದಕ್ಕೆ ಮೂರು ನಾಲ್ಕು ಜನ ಬರುವುದು, ಒಬ್ಬರಿಗೆ ಬಸ್ ಚಾರ್ಜ್ 500ರೂಪಾಯಿ, ಊಟ ತಿಂಡಿ ಖರ್ಚು? ಅವರು ಎತ್ತುವ 5 ಸಾವಿರದಲ್ಲಿ ನಾಲ್ಕು ಸಾವಿರ ಇವರ ಓಡಾಟಕ್ಕೆ ಆಗಿರುತ್ತದೆ. ಆದ್ದರಿಂದ ಈ ಕಾರ್ಯಕ್ರಮದಲ್ಲಿ ಅಂತಹ ಅನವಶ್ಯಕ ಖರ್ಚುಗಳಿಗೆ ಅವಕಾಶ ನೀಡಲಿಲ್ಲ. ನಾನು ಯಾವಾಗ ಓಡಾಡುವುದಕ್ಕೆ ಹಣ ಉಪಯೋಗಿಸುವಂತಿಲ್ಲವೆಂದು ತಿಳಿಸಿದೆ, ಹಣದ ಮೇಲಿನ ಆಸೆಗಾಗಿ ಮೀಟಿಂಗ್‍ಗೆ ಬಂದ ಕೆಲವರು ಹಿಂದುಳಿದರು. ಒಂದಿಬ್ಬರು ಕೇಳಿದರು, ಸ್ವಂತ ಹಣ ಹಾಕಿಕೊಂಡು ಯಾರು ಓಡಾಡುತ್ತಾರೆಂದು. ನಾನು ಓಡಾಡುತ್ತೇನೆ, ನನ್ನ ಸ್ವಂತ ಖರ್ಚಿನಲ್ಲಿ, ಇಷ್ಟವಿರುವವರು ಬನ್ನಿ ಇಲ್ಲದೇ ಇದ್ದರೆ ಓಡಾಡಬೇಡಿ, ನಿಮಗೆ ಹೇಗೆ ಸಹಾಯ ಮಾಡಬಹುದೋ ಹಾಗೆ ಮಾಡಿ ಎಂದೆ. ನನ್ನ ಮಾತಿಗೆ ಅನೇಕ ಕಿರಿಯ ಸ್ನೇಹಿತರು ಹೌದೌದು ನಾವು ಓಡಾಡುತ್ತೇವೆಂದರು. 

ನಾನು ಗಮನಿಸಿದ ಹಾಗೆ ಕನಿಷ್ಟ 15-20 ಹುಡುಗರು ಬಹಳ ಒಳ್ಳೆಯವರು. ಊರಿನ ಬಗ್ಗೆ ಬಹಳ ಕಾಳಜಿಯಿದೆ. ಬೇರೆಯವರ ದುಡ್ಡಿನಲ್ಲಿ ಮಜ ಮಾಡಬೇಕೆಂಬುದಿಲ್ಲ. ಶ್ರಮಜೀವಿಗಳು. ಅವರಿಗೆ ನಾನು ಹೇಳಿದ ಮಾತುಗಳು ಹಿಡಿಸಿದೆವು ಮತ್ತು ನನ್ನ ಮೇಲೂ ನಂಬಿಕೆ ಬಂತು. ಇವರೆಲ್ಲಾ ನನಗಿಂತ ಕನಿಷ್ಟ 5-10 ವರ್ಷ ಚಿಕ್ಕವರು. ಅವರ ಮೇಲೆ ಪ್ರೀತಿ ಮತ್ತು ವಿಶ್ವಾಸ ಒಟ್ಟಿಗೆ ಮೂಡಿತು. ಮೀಟಿಂಗ್ ಆದ ನಂತರದ ದಿನಗಳಲ್ಲಿ ನಾನು ಬೆಂಗಳೂರು, ಮೈಸೂರು, ಹಾಸನ ಎಂದು ಎಲ್ಲಾ ಕಡೆಗೂ ಸುತ್ತಾಡಿದೆ. ಕಿರಿಯ ಸ್ನೇಹಿತರು ಮೈಸೂರು, ಹಾಸನ, ಬೆಂಗಳೂರು ಮತ್ತು ಬೇರೆ ಬೇರೆ ಊರಿನಲ್ಲಿರುವ ಅನೇಕರಿಗೆ ಕರೆ ಮಾಡಿದರು, ಕೆಲವರು ಖುದ್ದಾಗಿ ತಾವೇ ಹೋಗಿ ಬಂದರು. ಇದೆಲ್ಲವೂ ನಡೆಯುವಾಗ ನನ್ನ ತಲೆಯಲ್ಲಿ ಓಡಿದ ಪ್ರಶ್ನೆಗಳೆಂದರೆ, ಯುವ ಶಕ್ತಿ ಉತ್ತಮ ಕೆಲಸಕ್ಕೆ ಸಿದ್ಧವಿರುತ್ತದೆ ಅದನ್ನು ಉಪಯೋಗಿಸಿಕೊಳ್ಳಬೇಕು ಮತ್ತು ಚೈತನ್ಯ ತುಂಬಬೇಕು. ನಮ್ಮಲ್ಲಿ ಪ್ರತಿಯೊಂದನ್ನು ಬಲವಂತದಿಂದ ಹೇಳಿಯೇ ಮಾಡಿಸಬೇಕು. ನಿಮಗೆ ತಮಾಷೆಯೆನಿಸಿದರೂ ಅದು ವಾಸ್ತವ. ಈ ಉದಾಹರಣೆಯನ್ನು ಗಮನಿಸಿ, ಮಗುವಿಗೆ ಊಟ ಮಾಡಿಸುವುದು ಬಲವಂತದಿಂದ, ನಿದ್ದೆ ಮಾಡಿಸುವುದು ಬಲವಂತದಿಂದ, ಶಾಲೆಗೆ ಕಳುಹಿಸುವುದು, ಓದಿಸುವುದು, ಬರೆಯುವದು, ಅಷ್ಟೆಲ್ಲಾ ಏಕೆ, ಕೆಲಸಕ್ಕೆ ಅರ್ಜಿ ಹಾಕಿಸುವುದು, ಕೊನೆಗೆ ಮದುವೆ ಆಗು ಅಂತ ಹೇಳುವುದು, ಹೇಳುವುದೇನು ಮದುವೆ ಮಾಡಿಸುವುದು ಬಲವಂತದಿಂದ. ಇದು ಅಲ್ಲಿಗೇ ನಿಲ್ಲುವುದಿಲ್ಲ, ಮದುವೆಯಾದ ಮೇಲೆ ಬೇಗ ಮಗು ಮಾಡಿಕೋ ಅಂತಾ ಒತ್ತಾಯ ಮಾಡಬೇಕು. ನೈಸರ್ಗಿಕ ಕ್ರಿಯೆಗಳನ್ನೇ ಬಲವಂತವಾಗಿ ಮಾಡಿಸಬೇಕಾದರೇ ಇನ್ನೂ ಈ ರೀತಿಯ ಸಮಾಜಮುಖಿ ಕಾರ್ಯಗಳನ್ನು ಹಾಗೇಯೇ ಮಾಡಿಸುವುದಕ್ಕೆ ಆಗುತ್ತದೆಯೇ? ನನ್ನ ಮೂಲ ಉದ್ದೇಶ ಮನುಷ್ಯ ಸ್ವಂತ ಆಸೆಯಿಂದ ಸ್ಪೂರ್ತಿಯಿಂದ ಕಲಿಯಬೇಕು, ಬಾಳಬೇಕು, ಬದುಕಬೇಕು. ಸದಾ ಯಾರಾದರು ನನಗೆ ಹೇಳಲಿ ಸ್ಪೂರ್ತಿ ಅಥವಾ ನಾಯಕತ್ವ ತೋರಿಸಲಿ ಎಂದು ಕಾಯಬಾರದು, ಹಾಗೆ ಆಲೋಚನಾ ಶಕ್ತಿಯನ್ನು ತುಂಬಬೇಕು. ಆದರೆ ಬಹುತೇಕರು, ಸದಾ ನಾಯಕನನ್ನು ಹುಡುಕುತ್ತಿರುತ್ತಾರೆ, ಯಾರಾದರೂ ಮುಂದಾಳತ್ವ ವಹಿಸಲಿ ಎಂದು ಕಾಯುತ್ತಿರುತ್ತಾರೆ. ಉತ್ತಮ ನಾಯಕ ಸಿಗದೇ ಇದ್ದಾಗ ಸಿಕ್ಕ ಯಾವನೋ ಅಯೋಗ್ಯ ರಾಜಕಾರಣಿಯನ್ನೇ ನಾಯಕನೆಂದು ನಂಬುತ್ತಾರೆ ಮತ್ತು ಆರಾಧಿಸುತ್ತಾರೆ ಆ ಬಲೆಯಿಂದ ಬರಲಾರದೇ ಅವನನ್ನೇ ನಂಬಿ ಕೊಳೆಯುತ್ತಾರೆ.

ಆದರಿಲ್ಲಿ, ನಾಯಕತ್ವವನ್ನು ಹುಟ್ಟಿಹಾಕುವುದು ಸುಲಭದ ಮಾತಾಗಿರಲಿಲ್ಲ. ಅವರೆಲ್ಲರೂ ದುಡಿಯುವುದಕ್ಕೆ ಸಿದ್ದರಿದ್ದರು, ಆದರೇ ನಾಯಕತ್ವವನ್ನು ವಹಿಸಲು ಹಿಂದೇಟು ಹಾಕುತ್ತಿದ್ದರು. ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದಕ್ಕೆ ಹಗಲು ರಾತ್ರಿ ದುಡಿದರು. ಕಾರ್ಯಕ್ರಮದ ಹಿಂದಿನ  ರಾತ್ರಿ ಸುಮಾರು 2 ಗಂಟೆಯ ತನಕ ಕೆಲಸ ಮಾಡಿದರು. ಊಟಕ್ಕೆ ಬಾಳೆ ಎಲೆ, ತೋರಣ ಎಲ್ಲವನ್ನು ಸಿದ್ದಪಡಿಸಿದರು. ಶಾಲಾವರಣ ಸ್ವಚ್ಛಗೊಳಿಸಿದರು, ಊರು ಸುತ್ತಾ ಮನೆ ಮನೆಗೆ ಹೋಗಿ ಆಹ್ವಾನಿಸಿದರು. ಊರಲ್ಲಿ ಹಬ್ಬದ ವಾತಾವರಣ ಮೂಡಿಸಿದರು. ಎಲ್ಲವೂ ನಾವಂದುಕೊಂಡದ್ದಕ್ಕಿಂತ ಚೆನ್ನಾಗಿಯೇ ನಡೆಯಿತು. ಅಲ್ಲಿಯೂ ಒಂದೆರಡು ಕೆಟ್ಟ ಹುಳಗಳು ಕಾರ್ಯಕ್ರಮವನ್ನು ಹಾಳು ಮಾಡಲು ಯತ್ನಿಸಿದವು. ಆದರೆ, ಒಳ್ಳೆತನದ ಮುಂದೆ ಕೆಟ್ಟದ್ದು ಯಾವತ್ತೂ ನಿಲ್ಲುವುದಿಲ್ಲ ಮತ್ತು ಗೆಲ್ಲುವುದಿಲ್ಲ ಎನ್ನುವುದು ಸಾಬೀತಾಯಿತು. ಆ ಸಮಯದಲ್ಲಿ ನನಗೆ ಊರಿನ ಜನರ ಒಳ್ಳೆತನ ಮತ್ತು ಉದಾರತನ ಕಾಣತೊಡಗಿತು. ಅವರು ಸಮಧಾನ ಮಾಡುವ ರೀತಿ ಅವರ ಬಗ್ಗೆ ಹೆಮ್ಮೆ ಎನಿಸಿತು. ಬಿಡು ಹರೀ, ನಾಯಿ ಬೊಗಳಿದರೇ ದೇವಲೋಕ ಹಾಳಾಗುತ್ತಾ? ಒಳ್ಳೆಯ ಕೆಲಸ ಮಾಡುತ್ತಿದ್ದೀಯಾ, ಮುಂದುವರೆಸು ಎಂದು ಹುರಿದುಂಬಿಸಿದರು. ಅವುಗಳು ಯಾವತ್ತಿಗೂ ಹಾಗೇಯೇ ಎಂದರು. ಮುಂಜಾನೆಯಿಂದಲೇ ಹಬ್ಬದ ವಾತಾವರಣವಿದ್ದ ಊರು, ಸಂಜೆಯಾಗುತ್ತಲೇ ಮಿನಿ ದಸರಾದಂತೆ ಕಂಗೊಳಿಸಿತು. ಬೆಂಗಳೂರಿನಿಂದ ಅಲಂಕಾರದ ಹೂವುಗಳನ್ನು ತಂದು ಸಿಂಗರಿಸಿದರು. ಎಲ್ಲಾ ಕಡೆಯಂತೆಯೇ ನಮ್ಮೂರಿನಲ್ಲಿಯೂ ಒಂದಿಬ್ಬರು ಕುಡಿದು ಅವರವರೇ ಹೊಡೆದಾಡಿಕೊಂಡರು. ಅದೆಲ್ಲವು ಇರಲೇಬೇಕಲ್ಲವೇ?

ಸರಿ, ಕಾರ್ಯಕ್ರಮದ ವೀಕ್ಷಕ ವಿವರಣೆಯ ಅಗತ್ಯತೆ ಇಲ್ಲ. ಸಂಕ್ಷಿಪ್ತವಾಗಿ ಮುಗಿಸುತ್ತೇನೆ. ಸುಮಾರು 1500 ಕ್ಕೂ ಹೆಚ್ಚು ಜನರು ಸೇರಿದ್ದರು. ಶ್ರೀಯುತ ಚನ್ನೇಗೌಡರು, ನಿವೃತ್ತ ಎಕ್ಷಿಕ್ಯೂಟಿವ್ ಇಂಜಿನಿಯರ್, ನಮ್ಮೂರಿನ ಮೊದಲ ವಿದ್ಯಾವಂತ, ಸುಸಂಸ್ಕøತ ಮಹಾನ್ ಚೇತನ, ಅವರಿಗೆ ಸನ್ಮಾನ ಮಾಡಿದೆವು. ಶಾಲೆಯಲ್ಲಿ ಓದಿದ ಬಹುತೇಕ ಎಲ್ಲಾ ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಯಾವುದೇ ರಾಜಕೀಯ ವ್ಯಕ್ತಿಗಳಿಗೆ ವೇದಿಕೆಗೆ ಪ್ರವೇಶವಿಲ್ಲವೆಂದು ಆಹ್ವಾನಪತ್ರಿಕೆಯಲ್ಲಿಯೇ ಮುದ್ರಿಸಲಾಗಿತ್ತು. ಅದರಂತೆಯೇ ಊರಿನ ರಾಜಕೀಯ ವ್ಯಕ್ತಿಗಳು ಸೇರಿ ಯಾರನ್ನು ವೇದಿಕೆಯ ಮೇಲೆ ಕೂರುವುದಕ್ಕೆ ಅವಕಾಶ ಕಲ್ಪಿಸಿಕೊಡಲಿಲ್ಲ. ಎಲ್ಲರೂ ಇದನ್ನು ಪಕ್ಷಬೇಧ ಮರೆತು ಒಪ್ಪಿಕೊಂಡರು. ಊರಿನ ಎಲ್ಲಾ ಗಣ್ಯ ವ್ಯಕ್ತಿಗಳು ಮೊದಲ ಸಾಲಿನಲ್ಲಿ ಕುಳಿತು ಸಹಕರಿಸಿದರು. ಇಲ್ಲಿಯ ತನಕ ಸೇವೆ ಸಲ್ಲಿಸಿದ್ದ ಎಲ್ಲಾ ಶಿಕ್ಷಕರಿಗೂ ಸನ್ಮಾನಿಸಿದೆವು. ಬಿಇಓ ಸೇರಿದಂತೆ ಶಿಕ್ಷಣ ಇಲಾಖೆಯ ಪ್ರಮುಖರೆಲ್ಲರೂ ಕಾರ್ಯಕ್ರಮ ಮುಗಿಯುವ ತನಕ ಇದ್ದರು. ಊರಿನ ಸಮಸ್ತರಿಗೂ ಒಳ್ಳೆಯ ರುಚಿಕರವಾದ ಬೂಂದಿ ಪಾಯಸದ ಊಟ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮ ಮುಗಿದ ಮಾರನೆಯ ದಿನವೇ ಕಾರ್ಯಕ್ರಮದ ಹಣ ಸಂಗ್ರಹಣೆ, ದಾನಿಗಳ ಹೆಸರು, ಖರ್ಚು-ವೆಚ್ಚಗಳ ವರದಿಯನ್ನು ಮುದ್ರಿಸಿ ಬಿಲ್ ಸಮೇತ ಊರಿನ ಅಂಗಡಿಗಳ ಮುಂದೆ, ಬಸ್ ಸ್ಟಾಂಡ್ ಮುಂಬಾಗದಲ್ಲಿ ಹಾಗೂ ಶಾಲೆಯ ಮುಂಬಾಗದಲ್ಲಿ ಅಂಟಿಸಿದ್ದೇವು. ಅದರ ಜೊತೆಗೆ ದೇಣಿಗೆ ನೀಡಿದ ಪ್ರತಿಯೊಬ್ಬರಿಗೂ ನೇರವಾಗಿ ಮತ್ತು ಪೋಸ್ಟ್ ಮೂಲಕ ಖರ್ಚುವೆಚ್ಚದ ವರದಿಯನ್ನು ಮತ್ತು ಧನ್ಯವಾದಗಳನ್ನು ಅರ್ಪಿಸಿದೆವು. ಎಲ್ಲಾ ದಾನಿಗಳಿಗೂ ಪ್ರಶಸ್ತಿ ಪತ್ರ ನೀಡಿದೆವು. ಇದರೊಂದಿಗೆ ಕಾರ್ಯಕ್ರಮವು ಪಾರದರ್ಶಕತೆಯಿಂದ ಕೂಡಿತ್ತು ಎನ್ನುವುದನ್ನು ತಿಳಿಸಿದೆವು. ಕಾರ್ಯಕ್ರಮಕ್ಕೆ ಪ್ರಮುಖವಾಗಿ ಓಡಾಡಿದ 15 ಜನ ಹಿರಿಯ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದೆವು. ಇಷ್ಟೆಲ್ಲಾ ಕಾರ್ಯಕ್ರಮ ಆಯೋಜಿಸಿದ ನಾನು ಒಂದೇ ಒಂದು ನೆನಪಿನ ಕಾಣಿಕೆಯನ್ನಾಗಲೀ ಅಥವಾ ಪ್ರಶಸ್ತಿ ಪತ್ರವನ್ನಾಗಲಿ ಇಟ್ಟುಕೊಳ್ಳಲಿಲ್ಲ. ಆಶ್ಚರ್ಯವೆಂದರೇ ಒಬ್ಬನೇ ಒಬ್ಬ ಹುಡುಗ ಕೂಡ ಅಣ್ಣಾ ನೀವು ಯಾಕೆ ನೆನಪಿನ ಕಾಣಿಕೆ ತೆಗೆದುಕೊಳ್ಳಲಿಲ್ಲವೆಂದು ಕೇಳಲಿಲ್ಲ. ಉಳಿದಿದ್ದ ಕೆಲವು ನೆನಪಿನ ಕಾಣಿಕೆಗಳು, ಶಾಲು ಮತ್ತು ಹೂವಿನ ಹಾರವನ್ನು ಕೂಡ ಅಂಗಡಿಗೆ ಹಿಂದುರುಗಿಸಲು ಹೇಳಿದೆ. ಆದರೇ, ಹಿಂದುರುಗಿಸಿದ ಹಣ ನನ್ನ ಕೈ ಸೇರಲೇ ಇಲ್ಲ. ಅಡುಗೆಗೆ ತಂದಿದ್ದ ಸಾಮಾನುಗಳನ್ನು ವಾಪಸ್ಸು ನೀಡಿದೆವು. ಅದರ ನಡುವೆ, ದೂರದಿಂದ ಬಂದಿದ್ದ ಒಬ್ಬರು ಟೀಚರ್‍ಗೆ ಉಳಿದಿದ್ದ ಅಕ್ಕಿ ಮತ್ತು ಸ್ವಲ್ಪ ಸಾಮಾನನ್ನು ಯಾರೋ ಕೊಟ್ಟು ಕಳುಹಿಸಿದೆವು ಎಂದರು. 

ಕಾರ್ಯಕ್ರಮದ ದಿನ ಬೈಕ್‍ನಲ್ಲಿ ಓಡಾಡುವುದಕ್ಕೆ ಪೆಟ್ರೋಲ್ ಖರ್ಚು ಕೊಡಿ ಎಂದು ಕೆಲವು ಹಿರಿಯ ವಿದ್ಯಾರ್ಥಿಗಳು ಕೇಳಿದರು, ನಾನು ಅಂತವರು ಸ್ವಲ್ಪ ದೂರದಲ್ಲಿಯೇ ಇರಿ ಎಂದೆ. ಆ ಗುಂಪಿನಲ್ಲಿ, ದಿನ ನಿತ್ಯ ಕುಡಿಯುವ ಅನೇಕರಿದ್ದರು, ಅದರಲ್ಲಿಯೂ ಕುಡಿಯುವುದಕ್ಕೆ ಐದಾರು ಮೈಲಿ ದೂರ ಹೋಗಿ ಬರುವವರಿದ್ದರು, ಅದಕ್ಕೆಲ್ಲಾ ಲೆಕ್ಕಿಸದ ಇವರುಗಳು ಊರಿನ ಶಾಲೆಯ ಕಾರ್ಯಕ್ರಮಕ್ಕೆ 10-20 ಕೀಮೀ ಓಡಾಡುವುದಕ್ಕೆ ಪೆಟ್ರೋಲ್ ಖರ್ಚು ಕೇಳಿದ್ದು ಸ್ವಲ್ಪ ಬೇಸರವೆನಿಸಿದರೂ ಅವರು ಇರುವುದೇ ಹಾಗೆನಿಸಿತು. ಜನರು ಬಹುತೇಕ ಎಲ್ಲಾ ಕಡೆಯಲ್ಲಿಯೂ ಹೀಗೆಯೇ ಆಗುತ್ತಿದ್ದಾರೆ ಅದರಲ್ಲಿಯೂ ಹಳ್ಳಿಗಳಲ್ಲಿ. ಎಲ್ಲಿಯಾದರೂ ನಾಲ್ಕು ಕಾಸು ಉಚಿತವಾಗಿ ಸಿಕ್ಕರೇ ಸಾಕೆನ್ನುತ್ತಿದ್ದಾರೆ. ಅದನ್ನು ಅವರು ಒಳ್ಳೆಯದಕ್ಕೆ ಉಪಯೋಗಿಸಿದರೆ ಅಡ್ಡಿಯಿಲ್ಲ, ಆದರೆ ಬಹುತೇಕರು ಕುಡಿಯುವುದಕ್ಕೆ ಇಲ್ಲಾ ಸಿಗರೇಟು, ಬೀಡಿ, ಹನ್ಸ್‍ಗಾಗಿ ವ್ಯರ್ಥ ಮಾಡುತ್ತಾರೆ. ಹೇಗೋ ಅಂತೂ ಕಾರ್ಯಕ್ರಮ ಅದ್ದೂರಿ ಯಶಸ್ವಿಯಾಗಿಯೇ ಮುಗಿಯಿತು. 

ಕಾರ್ಯಕ್ರಮ ಮುಗಿದ ಮೇಲೆ ಶುರುವಾಗಿದ್ದು ನಿಜವಾದ ಆಟ. ಕಾರ್ಯಕ್ರಮ ಎಲ್ಲರೂ ಸೇರಿ ಮಾಡಿದ್ದು ಎನ್ನಬೇಕಿದ್ದ ಜನರು ಹರೀಶ ಮಾಡಿಸಿದ್ದು ಎನ್ನುವಂತಾಯಿತು. ನಮ್ಮ ಹುಡುಗರು ಓಡಾಡಿದರೂ ನಾಯಕತ್ವವನ್ನು ತೋರಿಸಿಕೊಳ್ಳಲೇ ಇಲ್ಲ. ಇದೆಲ್ಲವನ್ನು ನಾನು ಕಲಿಸಲಾಗುವುದಿಲ್ಲ. ಆದರೂ ಅನೇಕರಿಗೆ ಹೇಳಿದ್ದೆ, ಹೇಗೆ ನೀವುಗಳು ನಾಯಕರು ಎನ್ನುವುದನ್ನು ತೋರಿಸಬೇಕೆಂದು. ಆದರೇ, ಕಾರ್ಯಕ್ರಮದ ದಿನ ಅವರು ಕೆಲಸಗಳಲ್ಲಿ ತೊಡಗಿದ್ದರು, ಏನೂ ಕೆಲಸ ಮಾಡಿರದ ಕೆಲವರು ಮುಂದಕ್ಕೆ ಬಂದು ನಿಲ್ಲತೊಡಗಿದರು. ಅದು ನನ್ನನ್ನು ಬಹಳ ಕೆರಳಿಸಿತು. ನಾನು ನನ್ನ ತಾಳ್ಮೆ ಕಳೆದುಕೊಂಡು ಒಂದೆರಡು ಬಾರಿ ವೇದಿಕೆಯಲ್ಲಿಯೇ ರೇಗಿದೆ. ಯಾರೋ ಕಷ್ಟಪಡುವುದು ಮತ್ಯಾರೋ ಬಂದು ಓಡಾಡಿ ಹೆಸರು ಗಿಟ್ಟಿಸುವುದು ನನಗೆ ಹಿಡಿಸುವುದಿಲ್ಲ. ಶ್ರಮಿಕನಿಗೆ ಗೌರವ ಸಿಗಬೇಕು. ಕಾರ್ಯಕ್ರಮ ಮುಗಿದ ಮೇಲೆ ಶಾಲಾಭಿವೃದ್ದಿಗಾಗಿ ಶ್ರಮಿಸುವುದಾಗಿ ಮಾತುಕತೆಗಳು ಕೇಳಿಬಂದವು. 

ಇಲ್ಲಿಂದ ಇರುವುದು ಕಥೆಯ ತಿರುವು. ಇಲ್ಲಿ ಹೇಳುವುದೆಲ್ಲವೂ ನನ್ನ ಸ್ವಂತ ಅನಿಸಿಕೆ ಅಬಿಪ್ರಾಯಗಳು ಅವೆಲ್ಲವೂ ಸತ್ಯವೆಂದು ಹೇಳಲಾಗುವುದಿಲ್ಲ. ಆದರೂ ಕೆಲವರ ಕಡೆಯಿಂದ ನನ್ನ ಕಿವಿಗೆ ಬಿದ್ದ ವಿಷಯಗಳಿವು.

ಮೊದಲನೆಯದಾಗಿ, ಕಾರ್ಯಕ್ರಮದ ಸಂಪೂರ್ಣ ಯಶಸ್ಸನ್ನು ನನಗೆ ಸಲ್ಲಿಸಿದರು ಜನರು. ನಾನು ವೇದಿಕೆಯಲ್ಲಿ ಎಲ್ಲರನ್ನು ಅಭಿನಂದಿಸಿದರೂ, ಅವರೇ ಕೆಲಸ ಮಾಡಿದ್ದರೂ ಜನರು ಮಾತ್ರ ಇದು ಹರೀಶನೇ ಮಾಡಿದ್ದು ಎಂದರು. ಇದನ್ನು ಕೆಲವರು ಒಪ್ಪುವುದಕ್ಕೆ ಸಿದ್ಧವಿರಲಿಲ್ಲ ಮತ್ತು ಅದನ್ನು ಸ್ವಂತಕ್ಕೆ ಬಳಸಲು ಕಾಯ್ದಿದ್ದ ಕೆಲವರು ಅವರ ತಲೆಗಳಿಗೆ ವಿಷ ತುಂಬಿದರು ಮತ್ತು ಇವರು ತುಂಬಿಸಿಕೊಂಡರು. ನೀವು ಕಷ್ಟ ಪಟ್ಟಿದ್ದು ಅವನಿಗೆ ಹೆಸರು ಬಂತು ಕೇವಲ ಕೆಲಸ ಮಾಡಿದ್ದು ಅಷ್ಟೆ, ಅದಕ್ಕೆ ಲಾಯಕ್ಕು. ಮುಗ್ದ ಹುಡುಗರಿಗೆ ಅದು ಹೌದು ಎನಿಸಿರಬೇಕು. ಅದಕ್ಕೆ ಸ್ವಲ್ಪ ಹಿಂದೆ ಉಳಿದರು. 

ಎರಡನೆಯದಾಗಿ, ಕೆಲವು ರಾಜಕೀಯ ಮುಖಂಡರುಗಳು, ನನ್ನನ್ನು ವಿರೋಧ ಪಕ್ಷದವನೆಂದರು, ಎರಡು (ಜೆಡಿಸ್ ಮತ್ತು ಕಾಂಗ್ರೇಸ್) ಪಕ್ಷದವರೂ ಅದನ್ನೇ ನಿಜ ಎಂದು ಅವರ ಪಕ್ಷದ ಕೆಲವು ನಿಷ್ಠಾವಂತ ಕಾರ್ಯಕರ್ತರಿಗೆ ತುಂಬಿದರು. ಹಾಗಾಗಿ ಮೊದಲೇ ಭಾವನಾತ್ಮಕವಾಗಿ ರಾಜಕೀಯಕ್ಕೆ ದುಡಿಯುವ ಹುಡುಗರು ನನ್ನಿಂದ ದೂರ ಉಳಿದರು. ಅದರಲ್ಲಿ ಕೆಲವರು ಮಾತ್ರ ನನ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಏನಾದರೂ ಮಾಡಲೇಬೇಕೆಂದು ಪ್ರಯತ್ನಿಸಿದರು. 

ಆ ಸಮಯದಲ್ಲಿ ನಾನು ಶಿಕ್ಷಕರಿಗೆ ಹುರಿದುಬ್ಬಿಸಲು ಏನೆಲ್ಲಾ ಹೇಳಿದೆ. ಆದರೇ, ಅವರುಗಳು ನಿಂತ ನೀರಾಗಿದ್ದರು. ಪೋಷಕರುಗಳು ಮೊದಲೇ ಅವಿದ್ಯಾವಂತರು, ಅವರು ಮಕ್ಕಳ ವಿದ್ಯಾಬ್ಯಾಸದ ಮಹತ್ವವನ್ನು ಅರಿಯಲಾಗದ ಪರಿಸ್ಥಿತಿಯಲ್ಲಿದ್ದರು. ಆದರೂ ಕೆಲವು ಪೋಷಕರು ಸಹಕರಿಸಲು ಮುಂದೆ ಬಂದರು. ಮಕ್ಕಳ ಕಲಿಕೆಗಾಗಿ, ಎಲ್.ಕೆ.ಜಿ ಮತ್ತು ಯು.ಕೆ.ಜಿಗೆ ಅನುಮತಿಯನ್ನು ಪಡೆದುಕೊಂಡು ಬಂದೆ. ಆದರೇ, ಬಂದಿರುವ ಮಾಹಿತಿಯನ್ನು ಶಿಕ್ಷಕರು ಪೋಷಕರಿಗೆ ತಿಳಿಸಲೇ ಇಲ್ಲ. ಮೂರ್ನಾಲ್ಕು ಮೀಟಿಂಗ್‍ಗೆ ಕರೆದೆ, ಕೆಲವೊಮ್ಮೆ ಪೋಷಕರು ಬರುತ್ತಿರಲಿಲ್ಲ, ಮತ್ತೊಮ್ಮೆ ಎಸ್‍ಡಿಎಂಸಿಯವರು ಬರುತ್ತಿರಲಿಲ್ಲ. ಶಿಕ್ಷಕರಂತೂ ಇದೆಲ್ಲವೂ ಯಾಕಾದರೂ ಬೇಕಪ್ಪ ಎನ್ನುವಂತಿರುತ್ತಿದ್ದರು. ಮನುಷ್ಯನಲ್ಲಿ ಸೂಕ್ಷ್ಮತೆಯಿದ್ದರೇ, ಭಾವುಕತೆಯಿದ್ದರೇ ಎಂತಹ ಕ್ರೂರಿಯನ್ನಾದರೂ ತಿದ್ದಬಹುದು, ಬದಲಾಯಿಸಬಹುದು. ಆದರೇ, ನಿರ್ಭಾವುಕನಾದರೆ ಏನನ್ನು ಮಾಡಲಾಗುವುದಿಲ್ಲ. ಮಾಡಬಹುದು, ಬದಲಾಯಿಸಬಹುದೆಂದರೂ ಅಷ್ಟು ಸುದೀರ್ಘ ಸಮಯ ಮತ್ತು ಆಯಸ್ಸು ನಮಗೆ ಇರಬೇಕಲ್ಲವೇ?

ಅದರ ಜೊತೆಗೆ ಹೋದರೆ ಹೋಗಲಿ ಸದ್ಯಾ, ಯಾರಾದರೂ ಒಬ್ಬರು ಅರೆಕಾಲಿಕ ಶಿಕ್ಷಕರನ್ನು ಕೋಡೋಣ, ಕನಿಷ್ಟ ಇಂಗ್ಲೀಷ್ ಆದರೂ ಕಲಿಸೋಣ ಎಂದುಕೊಂಡೆ. ದಿನಕ್ಕೆ ಒಂದು ಅಥವಾ ಎರಡು ಗಂಟೆ ಬಂದು, ಹೇಳಿಕೊಟ್ಟರೂ ಸಾಕೆಂದು, ಹುಡುಕಿದೆ. ಇದೆಲ್ಲವೂ ಮಾಡಲು ಪ್ರಯತ್ನಿಸುತ್ತಿರುವಾಗ, ಊರಿನ ಒಂದಿಬ್ಬರು ಬಿಟ್ಟರೆ ಬೇರಾರು ನನ್ನನ್ನು ಸೇರಿಕೊಳ್ಳಲಿಲ್ಲ. ಊರಿನ ಕೆಲವು ಹುಡುಗಿಯರು ಪಿಯುಸಿ, ಬಿಎ ಮತ್ತು ಡಿಎಡ್ ಮಾಡಿದವರು ಇದ್ದರು. ಅವರನ್ನು ಕೇಳಿದೆ, ಅವರುಗಳು ಕೆಲವರು ಇಂಗ್ಲೀಷ್ ಬರುವುದಿಲ್ಲವೆಂದರು, ಒಬ್ಬರು 1500ರೂಪಾಯಿ ತಿಂಗಳಿಗೆ ಕಡಿಮೆಯಾಯಿತು ಎಂದರು. ನಾನು ಅವರಿಗೆ ಹೇಳಿದೆ ನೀವು ದಿನಕ್ಕೆ ಒಂದು ಗಂಟೆಗಳ ಕಾಲ ಹೇಳಿಕೊಟ್ಟರೂ ಸಾಕು, ಕೇವಲ ಎಬಿಸಿಡಿ ಹೇಳಿಕೊಡಿ ಮತ್ತು ಸ್ವಲ್ಪ ಸ್ವಚ್ಛತೆ ಹಾಗೂ ಶಿಸ್ತನ್ನು ಕಲಿಸಿಕೊಡಿ ಸಾಕೆಂದೆ. ಮತ್ತು, ನೋಡಿ 1500ರೂಪಾಯಿ ಕೊಡುವುದು ನನ್ನ ಜೇಬಿನಿಂದ, ಮುಂದಿನ ವರ್ಷಗಳಲ್ಲಿ ಖಂಡಿತವಾಗಿಯೂ ಹೆಚ್ಚು ಕೊಡುತ್ತೇನೆಂದೆ. ಊರಿನ ಮಕ್ಕಳಿಗೆ ಹೇಳಿಕೊಡಿ, ಹೇಗೂ ನೀವುಗಳು ಬೇರೆ ಎಲ್ಲಿಯೂ ಕೆಲಸಕ್ಕೆ ಹೋಗುತ್ತಿಲ್ಲವೆಂದೆ, ಆದರೇ, ಅವರಿಗೆ ನನ್ನೂರು ನನ್ನ ಶಾಲೆಯೆಂಬುದು ಒಳಗಿನಿಂದ ಬರಲಿಲ್ಲ ಅಥವಾ ಊರ ಉಸಾಬರಿ ನಮಗ್ಯಾಕೆ ಎನ್ನಿಸಿರಲುಬಹುದು. ಗಮನಿಸಿದರೇ ಆ ಹುಡುಗಿಯರು ಕಳೆದ ಒಂದು ವರ್ಷದಿಂದ ಎಲ್ಲಿಯ ಕೆಲಸಕ್ಕೂ ಹೋಗಿಲ್ಲ.


ಆ ಸಮಯದಲ್ಲಿ ನಾನು ಅದೆಷ್ಟು ಹತಾಶೆಗೊಂಡೆನೆಂದರೆ, ಶಾಲಾಭಿವೃದ್ಧಿ ಮಾಡಿಸಲು, ಎಲ್ಲಾ ರಾಜಕೀಯ ಪಕ್ಷದ ಮುಖಂಡರನ್ನು ಕೇಳಿದೆ. ಹಿರಿಯ ವಿದ್ಯಾರ್ಥಿಗಳನ್ನು ಕೇಳಿದೆ, ಊರಿನ ಪೋಷಕರನ್ನು, ಬಿಇಓ ಸಮೇತ ಎಲ್ಲರ ಮನೆ ಬಾಗಿಲಿಗೂ ಹೋಗಿ ಬಂದೆ. ಹಾದಿಯಲ್ಲಿ ಯಾರು ಸಿಕ್ಕಿದರೂ ಶಾಲೆಯನ್ನು ರಿಪೇರಿ ಮಾಡಿಸೋಣ ಸ್ವಲ್ಪ ಕೈಜೋಡಿಸಿ ಎನ್ನುತ್ತಿದ್ದೆ. ನನ್ನ ಹೆಂಡತಿಯೇ ಕೆಲವು ಸಲ ಹೇಳಿದ್ದಾಳೆ, ರೀ ನಿಮಗೆ ಬೇರೆ ಏನು ಕೆಲಸ ಇಲ್ವಾ? ಎಲ್ಲರ ಹತ್ತಿರ ಶಾಲೆಯ ಬಗ್ಗೆಯೇ ಮಾತನಾಡುತ್ತೀರಿ. ಊರಿನ ಉಸಾಬರಿ ನಿಮಗ್ಯಾಕೆ, ಅವರ ಪೋಷಕರಿಗೆ ಇಲ್ಲ? ಎಂದಳು. ಆದರೂ, ಹಿರಿಯರಾದ ಚನ್ನೇಗೌಡರು ಮಂತ್ರಿಗಳನ್ನು ಭೇಟಿ ಮಾಡೋನವೆಂದರು ಸಿದ್ಧರಾಗಿದ್ದ ಸಮಯದಲ್ಲಿ ಸಚಿವರ ಕಛೇರಿಯಿಂದ ಬಿಇಓ ಆಫೀಸಿಗೆ ಕರೆ ಬಂತು, ಶಾಲೆ ರಿಪೇರಿ ಮಾಡಿಸುವುದಕ್ಕೆ ಬಾನುಗೊಂದಿ ಶಾಲೆಯನ್ನು ಸೇರಿಸಿಕೊಳ್ಳಿ ಎಂದರು. ತಾಲ್ಲೂಕು ಪಂಚಾಯಿತಿಯವರು 50ಸಾವಿರ ಮಂಜೂರು ಮಾಡಿಸುವುದಾಗಿ ಹೇಳಿದರು, ಜಿಲ್ಲಾ ಪಂಚಾಯಿತಿಯವರು ಸಹಾಯ ಮಾಡುವುದಾಗಿ ಹೇಳಿದರು. ಅದೆಲ್ಲದರ ಜೊತೆಗೆ ಗ್ರಾಮ ಪಂಚಾಯಿತಿಯವರು ಕೂಡ ಸಹಾಯ ಮಾಡುವುದಾಗಿ ಹೇಳಿದರು. ವಿಚಿತ್ರವೆಂದರೇ, ಇದೆಲ್ಲದರ ನಡುವೆ ಇದೇ ಊರಿಗೆ ಜಿಲ್ಲಾ ಪಂಚಾಯಿತಿಯಿಂದ ಕುಡಿಯುವ ನೀರಿಗಾಗಿ ಅನುದಾನ ಪಡೆದರು. ಒಳ್ಳೆಯದೇ ಅಲ್ಲವಾ ಎನಿಸಬಹುದು? ನಮ್ಮೂರಿಗೆ, ಈಗಾಗಲೇ ಮೂರು ಬೋರ್‍ವೆಲ್ ಒಂದು ಓವರ್‍ಹೆಡ್ ಟ್ಯಾಂಕ್, ಇತ್ತು. ನೀರಿಗೆ ಅಂತಹ ದೊಡ್ಡ ಸಮಸ್ಯೆಯೇ ಇರಲಿಲ್ಲ, ಮನೆ ಮನೆಗೆ ನಲ್ಲಿನೀರಿನ ವ್ಯವಸ್ಥೆಯಿತ್ತು. ಆದರೂ, ಮತ್ತೊಂದು ಸಪರೇಟ್ ಲೈನ್ ಹಾಕಿಸಿದರು, ಇನ್ನೊಂದು ಬೋರ್ ಕೊರೆಸಿದರು. ಯಾವೊಬ್ಬನೂ ಶಾಲೆಯ ಅನುದಾನದ ಬಗ್ಗೆ ಕೇಳಲೇ ಇಲ್ಲ. ಏಕೆಂದರೇ ಗುತ್ತಿಗೆ ಹಣ ಮುಖ್ಯವೆಂದು ಕೆಲವರು ನನಗೆ ತಿಳಿಸಿದರು, ಯಾವುದು ಸತ್ಯವೋ ಯಾವುದು ಸುಳ್ಳೋ !. ನಾನು ನಂತರದ ದಿನಗಳಲ್ಲಿ, ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಫೋನ್ ಮಾಡಿದರೆ, ಸರ್, ನಿಮ್ಮೂರಿನವರೇ ಹೇಳಿದ್ದು ನಮಗೆ ಕುಡಿಯುವ ನೀರಿಗೆ ಅನುದಾನ ಮಾಡಿಕೊಡಿಯೆಂದು, ಅದಕ್ಕಾಗಿಯೇ ನೀಡಿದ್ದೇವೆ, ಅದು ತಪ್ಪಾ? ಎಂದರು. ಅದಾದ ನಂತರ ಊರಿನ ನದಿದಂಡೆಗೆ ಸೋಪಾನ ಕಟ್ಟೆಗೆ ಅನುದಾನ ಪಡೆದುಕೊಂಡರು, ಊರಿನ ಛತ್ರಕ್ಕೆ ಅನುದಾನ ಪಡೆದುಕೊಂಡರು, ಶಾಲೆ ಮಾತ್ರ ಯಾರಿಗೂ ಅನಿವಾರ್ಯತೆ ಎನಿಸಲಿಲ್ಲ. ಬಹುಶಃ ಯಾರದೋ ಮಕ್ಕಳು ಓದುವ ಶಾಲೆ ಎನಿಸಿರಬೇಕು? ಅಥವಾ ಇವರೆಲ್ಲಾ ಓದಿ ವಿದ್ಯಾವಂತರಾದರೆ ಕೆಲಸ ಮಾಡಲು ಕೂಲಿ ಕಾರ್ಮಿಕರು ಸಿಗುವುದಿಲ್ಲವೆನಿಸಿರಬೇಕು.

ಇದರ ಜೊತೆಗೆ ಇನ್ನೊಂದು ಆಲೋಚನೆಯೂ ಬಂತು. ಹೇಗೂ 10-15 ಸಾವಿರ ಹಣ ಉಳಿದಿತ್ತು, ಅದಕ್ಕೆ ಇನ್ನೂ ಸ್ವಲ್ಪ ಸೇರಿಸಿಕೊಂಡು ಶಾಲೆಯ ಒಂದು ಕೊಠಡಿಯ ಮೇಲ್ಛಾವಣಿಯನ್ನಾದರು ಸರಿ ಮಾಡಿಸೋಣ ಅಂದುಕೊಂಡೆ. ಅದರ ಜೊತೆಗೆ ಮತ್ತೊಂದು ಯೋಚನೆಯೂ ಬಂತು, ಈಗಾಗಲೇ ಶಾಲೆಯ ಪರಿಸ್ಥಿತಿ ಹದಗೆಟ್ಟಿದೆ. ಇದು ಹದಗೆಡಲು ಕಾರಣವಾದವರು ಏನು ಮತ್ತು ಯಾರ್ಯಾರು? ಮೊದಲಿಗೆ ಶಿಕ್ಷಕರು ಮತ್ತು ಎರಡನೆಯದು ಎಸ್.ಡಿ.ಎಂ.ಸಿ ಮತ್ತು ಮೂರನೆಯದು ಪೋಷಕರು. ಯಾವುದೇ ಶಾಲೆ ರಾತ್ರೋ ರಾತ್ರಿ ಅಧೋಗತಿಗೆ ಕುಸಿಯುವುದಿಲ್ಲ. ಕಟ್ಟಡ ಹಾಳಾಗುವ ತನಕ ಹಾಳಾಗುವ ತನಕವೇನು? ಹಾಳಾದ ಮೇಲೂ ಯಾರಿಗೂ ಇವರು ಈ ವಿಷಯವನ್ನು ತಿಳಿಸುವ ಅಥವಾ ರಿಪೇರಿ ಮಾಡಿಸುವ ಕ್ರಮಕ್ಕೆ ಮುಂದಾಗಲಿಲ್ಲ. ಇವರೆಲ್ಲರೂ ಇದು ಈ ಮಟ್ಟಕ್ಕೆ ಹಾಳಾಗುವುದನ್ನು ನೋಡುತ್ತಲೇ ಇದ್ದರೂ ಏನನ್ನು ಮಾಡಲಿಲ್ಲವೇಕೆ? ಇವರಿಗೆ ಇದು ನಮ್ಮ ಶಾಲೆ ಎನ್ನುವ ಅಭಿಮಾನವೂ ಬರಲಿಲ್ಲ ಅದು ನಮ್ಮ ಹೆಮ್ಮೆಯ ಶಾಲೆ ಎನ್ನುವ ಆಲೋಚನೆಯಂತೂ ಆ ಕಡೆಗೆ ತಲೆ ಹಾಕಿಯೂ ಮಲಗಲಿಲ್ಲವೆನಿಸುತ್ತದೆ. 

ಈಗ ಸರ್ಕಾರವೇ ಮಾಡಿಸಲಿ ಅಥವಾ ಖಾಸಗಿಯವರೇ ಮಾಡಿಸಲಿ ಅಥವಾ ನಾವುಗಳೇ ಮಾಡಿಸಿದರೂ ಇವರು ಇದನ್ನು ಗಂಬೀರವಾಗಿ ಉಳಿಸಿಕೊಳ್ಳುವುದಿಲ್ಲ. ಆದ್ದರಿಂದ ಹಣಕಾಸಿನ ನೆರವನ್ನು ನಾನು ಹೊರಗಿನಿಂದ ತರುತ್ತೇನೆ, ಆದರೇ, ಊರಿನ ಪೋಷಕರು, ಶಿಕ್ಷಕರು ಮತ್ತು ಎಸ್‍ಡಿಎಂಸಿಯವರು ಕನಿಷ್ಠ ಒಂದು ದಿನಕ್ಕಾದರೂ ನಿಂತು ಶಾಲೆಯ ಕೆಲಸದಲ್ಲಿ ಭಾಗವಹಿಸಲಿ, ಒಂದು ದಿನವಾಗುವುದಿಲ್ಲವೆಂದರೆ ಕನಿಷ್ಠ ಎರಡು ಗಂಟೆಗಳು ಕಾಲ ನಿಲ್ಲಲಿ. ಬಿಇಓ ಸಲಹೆಯಂತೆ ಊರಿನ ಯಾವುದಾದರೂ ತೆಂಗಿನ ಮರಗಳನ್ನು ಮತ್ತು ಅಡಿಕೆ ಮರಗಳನ್ನು ನೋಡಿ ತಂದು ಕವಕೋಲು, ರೀಪೀಸ್ ಹಾಕಿಸಿ, ಹೋಗಿರುವ ಹೆಂಚುಗಳನ್ನು ಬದಲಾಯಿಸಿದರೆ ಸಾಕೆನಿಸಿತು. ಇದು ಶಾಸ್ವತ ಪರಿಹಾರವಲ್ಲ, ಆದರೆ ತಾತ್ಕಾಲಿಕವಾಗಿ ಒಂದು ನೆಮ್ಮದಿಯ ಸೂರನ್ನು ಕೂಡಿಸಬಹುದು. ಯಾವ ಪೋಷಕನಾದರೂ ಸೋರುವ ಶಾಲೆಗೆ ಕಳುಹಿಸುತ್ತಾನೆ? 

ಈ ವಿಷಯವನ್ನು ಚರ್ಚಿಸಲು, ಸ್ವತಃ ಬಿಇಓ ಬಂದರೂ ಪೋಷಕರು ಬರಲಿಲ್ಲ, ಎಸ್‍ಡಿಎಂಸಿ ಮೂರ್ನಾಲ್ಕು ಜನರಿದ್ದರು. ಇಲ್ಲಿ ಸಂಪೂರ್ಣವಾಗಿ ಪೋಷಕರನ್ನು ದೂಷಿಸುವುದಿಲ್ಲ ಅದರ ಜೊತೆಗೆ ಶಿಕ್ಷಕರನ್ನು ದೂಷಿಸುವುದಿಲ್ಲ. ಏಕೆಂದರೆ ಯಾವುದೇ ಶಾಲೆಯ ಉದ್ದಾರಕ್ಕೆ ಎಲ್ಲರೂ ಸಹಕರಿಸಬೇಕು. ಎಲ್ಲರ ನಡುವೆ ಸಾಮರಸ್ಯವಿರಬೇಕು. ನಾನು ನನ್ನ ಪಾಡಿಗೆ ಶಾಲೆಗೆ ಬರುತ್ತೇನೆ ಹೋಗುತ್ತೇನೆ ಎನ್ನವ ದಾಟಿ, ಅಥವಾ ಮಾಸ್ಟರಿಗೆ ಸಂಬಳ ಕೊಡುತ್ತಾರೆ ಅವರು ಮಾಡಲಿ ಎನ್ನು ದೋರಣೆ ಸರಿಯಾಗುವುದಿಲ್ಲ. ಪೋಷಕರು ಶಾಲೆಗೆ ಬರುವುದಿಲ್ಲ, ಇನ್ನೂ ಶಿಕ್ಷಕರೋ ಊರಿನ ಯಾರನ್ನೂ ಮಾತನಾಡಿಸುವುದಿಲ್ಲ. ಇದ್ದರೆ ಈ ಊರು ಹೋದರೆ ಮುಂದಿನ ಊರು ಎನ್ನುವುದು ಅವರ ಅಭಿಪ್ರಾಯ. ಹಾಗಾಗಿ ಆ ದಿನ ಜನರು ಬರಲಿಲ್ಲ, ಇವರು ಅವರಿಗೆ ಬೈಯ್ಯುವುದು, ಅವರು ಇವರನ್ನ ದೂರುವುದು ಆಯಿತು. ಮತ್ತೊಂದು ವಿಷಯವೇನೆಂದರೆ ಇವರ್ಯಾರು ನೇರವಾಗಿ ದೂಷಿಸುವುದಿಲ್ಲ, ಒಬ್ಬರ ಹಿಂದೆ ಒಬ್ಬರು ಬೈಯ್ದಾಡುತ್ತಾರೆ, ಎದುರು ಸಿಕ್ಕರೆ ಮಾಸ್ಟರೇ ಎನ್ನುವ ಪ್ರೀತಿ ನೋಡಬೇಕು. ನನಗೆ ಇದೆಲ್ಲವೂ ಹೊಸ ಪ್ರಪಂಚ. ನಾನು ನೇರ ಮಾತುಗಾರ, ಬೈಯ್ಯುವಾಗಲೂ ಅಷ್ಟೇ ಹೊಗಳುವಾಗಲೂ ಅಷ್ಟೇ. ಹಳ್ಳಿಯಲ್ಲಿ ನಡೆಯುವ ರಾಜಕೀಯ, ದ್ವೇಷ, ಅಸೂಯೆ, ನಗರಗಳಲ್ಲಿ ನಡೆಯುವುದಿಲ್ಲವೆನ್ನುವುದು ನನಗೆ ಅರಿವಾಗತೊಡಗಿತು. ಯಾರನ್ನಾ ನಂಬುವುದು, ಯಾರನ್ನಾ ಬಿಡುವುದು? ನಾನು ಭೇಟಿಯಾಗಿದ್ದಾಗ ಎಲ್ಲವನ್ನೂ ಮಾಡಿಬಿಡೋಣ ಎನ್ನುವ ಮಾಸ್ಟರುಗಳು ನಾನು ಹಿಂದಿರುಗಿದ ಮರುಕ್ಷಣವೇ ಮರೆತುಬಿಡೋರು. ತಮಾಷೆಯೆಂದರೇ ಒಮ್ಮೆ ಮೀಟಿಂಗ್‍ಗೆ ಬಂದಿದ್ದ ಒಬ್ಬರು ಪೋಷಕ ಮಹಾಶಯರು ಇದನ್ನು ಗುತ್ತಿಗೆ ಕೊಡಿ ನಾನೇ ಮಾಡುತ್ತೇನೆಂದರು. ಅದಕ್ಕೆ ನಾನು ಹೇಳಿದೆ, ಅಯ್ಯೋ ಭಗವಂತ ಅಷ್ಟು ದುಡ್ಡಿದ್ದಿದ್ದರೆ ನಿಮ್ಮನ್ನೆಲ್ಲಾ ಏಕೆ ಮೀಟಿಂಗ್ ಕರೆಯಬೇಕಿತ್ತು, ಮತ್ತು ಯಾರಿಗೋ ಕೊಟ್ಟು ಕೆಲಸ ಮಾಡಿಸುವುದು ಯಾರೋ ಅಡಿಗೆ ಮಾಡಿದ್ದನ್ನು ಹೋಗಿ ಉಂಡು ಬಂದಂತೆ ನಾವಾಗಿಯೇ ಮಾಡಿದಾಗ ಅದರ ಕಷ್ಟ ಸುಖಗಳು ಅರ್ಥವಾಗುವುದು. ಅವನು ಆ ದಿನವೇ ಹೇಳಿದ, ಇಂಥಹದ್ದೆಲ್ಲಾ ಆಗುವುದಿಲ್ಲವೆಂದು. 

ಇದರೆ ಜೊತೆಗೆ ಬಹಳ ಬೇಸರದ ಸಂಗತಿಯೇನೆಂದರೆ, ವಿದ್ಯಾರ್ಥಿಗಳಿಗಾಗಿ ಸಸ್ಯಗಳನ್ನು ಬೆಳೆಸುವುದಕ್ಕೆ ಔಷಧಿ ಗಿಡಗಳು, ಹೂವಿನ ಗಿಡಗಳು, ಸೊಪ್ಪು ಮತ್ತು ತರಕಾರಿ ಬೀಜಗಳನ್ನು ತಂದುಕೊಟ್ಟೆ. ಮಕ್ಕಳು ಬೆಳೆಯುವುದಕ್ಕೆ ಆಸಕ್ತಿ ತೋರಿಸಿದರೂ ಮಾಸ್ಟರುಗಳು ನೀರು ಹಾಕುವುದಕ್ಕೂ ಬಿಡಲಿಲ್ಲವೆಂದು ವಿದ್ಯಾರ್ಥಿಗಳು ತಿಳಿಸಿದರು.

ಇದೆಲ್ಲದರ ನಡುವೆ ಬೇಸತ್ತು ಹೋಗಿದ್ದ ನಾನು, ಕೊನೆಗೆ ಕೆಲವರನ್ನು ಸಂಪರ್ಕಿಸಿ ಶಾಲೆಯ ದುರಸ್ತಿ ಕಾರ್ಯವನ್ನು ಶುರು ಮಾಡೋಣ, ಆದರೆ ಪೋಷಕರೆಲ್ಲರೂ ಬರಲೇಬೇಕು, ನೀವು ಕೆಲಸ ಮಾಡದಿದ್ದರೂ ಪರವಾಗಿಲ್ಲವೆಂದೆ. ಆ ದಿನ, ಕೆಲವರು ಒಪ್ಪಿದರು. ನಾನು ಆಚಾರಿಯನ್ನು ಕರೆದು 500ರೂಪಾಯಿ ಅಡ್ವಾನ್ಸ್ ಕೊಟ್ಟೆ. ಮೈಸೂರಿನಲ್ಲಿರುವ ಮಂಜುನಾಥ್ (ಜಿಲ್ಲಾ ಪಂಚಾಯತ್ ಇಂಜಿನಿಯರ್) ಅವರು ಕವಕೋಲು ಕೊಡಿಸುವುದಾಗಿ ಒಪ್ಪಿದರು, ಮಡಿಕೇರಿಯಲ್ಲಿ ಪೋಲಿಸ್ ಇನ್ಸ್ಪೆಕ್ಟರ್ ಆಗಿರುವ ಪ್ರದೀಪ್‍ರವರು ಅಡಿಕೆ ಮರಗಳನ್ನು ಕೊಡುವುದಾಗಿಯೂ ತಿಳಿಸಿದ್ದರು. ಇದಕ್ಕೆಲ್ಲಾ ಊರಿನ ಅಂಗಡಿ ಯೋಗೇಶ್‍ರವರು ಬಹಳ ಮುತುವರ್ಜಿ ವಹಿಸಿ ಮಾಡಿಸಲು ಪ್ರಯತ್ನಿಸಿದರು. ಹೆಂಚು ಇಳಿಸುವ ದಿನವನ್ನು ನಿಗದಿಪಡಿಸಲಾಯಿತು. ಆ ದಿನ ಮೂರು ಜನರು ಮಾತ್ರ ಬಂದರು ಎಂದು ಯೋಗೇಶಣ್ಣ ನನಗೆ ತಿಳಿಸಿದರು. ಅದೆಷ್ಟು ಬೇಸರವಾಯಿತೆಂದರೆ, ನಮ್ಮಪ್ಪ ಮುಂಚಿತವಾಗಿಯೇ ಹೇಳಿದ್ದರು, ನೀನು ಹಳ್ಳಿಗಳಲ್ಲಿ ಕೆಲಸ ಮಾಡುವುದು ಸುಲಭದ ಕೆಲಸವಲ್ಲ. ಜನರು ಒಳ್ಳೆಯ ಕೆಲಸಗಳನ್ನು ಒಪ್ಪುವುದಿಲ್ಲ. ಎಲ್ಲದರಲ್ಲಿಯೂ ರಾಜಕೀಯ ಬೆರೆಸುತ್ತಾರೆ, ಅದೇ ಸಂತೋಷ ಅವರಿಗೆಂದು. ಈಗ ಅದು ನಿಜವೆನಿಸತೊಡಗಿತು. ಏನೂ ಮಾಡಲಾಗದ ಪರಿಸ್ಥಿತಿಯಲ್ಲಿದ್ದೆ.

ನನಗೆ ಎಲ್ಲರನ್ನೂ ಕಾಡಿಯೋ ಬೇಡಿಯೋ 2-3ಲಕ್ಷ ಸಂಗ್ರಹಣೆ ಮಾಡಿ ಕೊಠಡಿ ರಿಪೇರಿ ಮಾಡಿಸುವುದು ಅಂತಹ ಕಷ್ಟವಾಗುತ್ತಿರಲಿಲ್ಲ. ಆದರೇ, ಅದನ್ನು ಮಾಡುತ್ತಿರುವುದು ಯಾರಿಗೇ? ಪೋಷಕರಿಗೆ, ಶಾಲಾ ಶಿಕ್ಷಕರಿಗೆ ಅವರಿಗೆ ಅದರ ಕಾಳಜಿಯಿಲ್ಲದೇ ಹೋದರೆ ಇದು ಮತ್ತೊಂದು ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮವಾಗುತ್ತಿತ್ತು. ಆದ್ದರಿಂದ ನಾನು ಅಂಥಹ ಅರ್ಥವಿಲ್ಲದ ಉಪಯೋಗವಿಲ್ಲದ ಮತ್ತೊಂದು ವ್ಯರ್ಥ ಕಾರ್ಯಕ್ರಮ ಮಾಡಲು ಸಿದ್ದವಿರಲಿಲ್ಲ. ಇಲ್ಲಿ ನಿಮ್ಮ ಗಮನಕ್ಕೆ ತರಬೇಕಾದ ವಿಷಯವನ್ನು ಹೇಳುತ್ತೇನೆ. ಸರ್ಕಾರವು ಅನ್ನಭಾಗ್ಯವೆಂಬುದು ಮಹಾನ್ ಸಾಧನೆಯೆಂಬಂತೆ ಬಿಂಬಿಸುತ್ತದೆ, ಹಸಿದವರಿಗೆ ಅನ್ನ ನೀಡುವುದು ಉತ್ತಮ ಕಾರ್ಯ ಅದನ್ನು ಶ್ಲಾಘಿಸುತ್ತೇನೆ. ನನಗೆ ಹಸಿವಿನ ನೋವು ತಿಳಿದಿದೆ. ತುತ್ತು ಅನ್ನಕ್ಕೆ, ನೀರಿಗೆ ಪರದಾಡಿದ ದಿನಗಳಿವೆ. ಆದರೆ, ಉಚಿತವಾಗಿ ನೀಡುವಾಗ ಅದನ್ನು ದುರುಪಯೋಗಪಡಿಸಿಕೊಳ್ಳುವ ಮತ್ತು ಸರ್ಕಾರದ ಮಹತ್ವದ ಯೋಜನೆಗಳ ಹಿನ್ನಲೆಯನ್ನು ಅರ್ಥೈಸಿಕೊಳ್ಳದ ಜನಗಳ ಬಗ್ಗೆ ಕೆಟ್ಟ ಕೋಪವಿದೆ. ನಾನು ಗಮನಿಸಿದ ಹಾಗೆ, ಅನ್ನ ಭಾಗ್ಯದ ಅಕ್ಕಿಯನ್ನು ಪಡಿತರ ಅಂಗಡಿಯಿಂದ ಒಂದು ರೂಪಾಯಿಗೆ ತಂದು ಅದನ್ನು 13 ರೂಪಾಯಿಗೆ ಮಾರುತ್ತಿದ್ದಾರೆ. ಮಾರುವುದು ಅನ್ನವಿಲ್ಲದ ಜನರಿಗಲ್ಲಾ ಬಸೀರ್ ಎಂಬ ಅಕ್ಕಿ ವ್ಯಾಪಾರಿಗೆ. ಅದನ್ನು ಅವನು ತೆಗೆದುಕೊಂಡು ಹೋಗಿ ಮಿಲ್‍ನಲ್ಲಿ ಬೇರೆ ಪ್ಯಾಕ್ ಮಾಡಿಸಿ ಹೆಚ್ಚಿನ ಹಣಕ್ಕೆ ಮಾರುತ್ತಾನೆ. ಇದು ನಮ್ಮ ತೆರಿಗೆ ಹಣ ಜನರನ್ನು ಸೋಮಾರಿ ಮಾಡುತ್ತಿದ್ದಾರೆಂದು ಕೆಲವರು ಬೊಬ್ಬೆ ಹೊಡೆಯುತ್ತಾರೆ, ಆದರೇ ಅಂಥಹ ಜನರೆದುರೇ ಈ ರೀತಿ ದುರುಪಯೋಗವಾಗುತ್ತಿದ್ದರೂ ಜನ ಮೌನವಹಿಸುತ್ತಿದ್ದಾರೆ. 

ಸರ್ಕಾರದ ಎಲ್ಲಾ ವಸ್ತುಗಳು, ಯೋಜನೆಗಳು ನಮ್ಮ ತೆರಿಗೆ ಹಣದಿಂದ ಬಂದಿರುವುದು ಎನ್ನುವುದನ್ನು ಜನರಿಗೆ ತಿಳಿಸುವುದೇ ಕಷ್ಟವಾಗಿದೆ. ಒಂದು ಕೆಜಿ ಉಪ್ಪು ಕೊಂಡರೂ ಅದಕ್ಕೆ ತೆರಿಗೆ ಪಾವತಿಸುತ್ತೇವೆ, ತೆರಿಗೆ ಎಂದರೇ ಕೇವಲ ಆದಾಯ ತೆರಿಗೆ ಮಾತ್ರವಲ್ಲವೆಂಬುದು ಬಹಳ ಜನಕ್ಕೆ ತಿಳಿದಿಲ್ಲ. ಸರ್ಕಾರ ಹಾಕಲಿ ಅಥವಾ ಸರ್ಕಾರದ ಯೋಜನೆಯಲ್ವಾ ಇರಲಿ ಬಿಡು ಎನ್ನುವುದು, ಬಸ್‍ನಲ್ಲಿ ಪ್ರಯಾಣಿಸುವಾಗ ಹತ್ತು ರೂಪಾಯಿ ಟಿಕೇಟ್ ಬದಲು 8ರೂಪಾಯಿ ಕೊಟ್ಟು ಟಿಕೇಟ್ ಇಲ್ಲದೆ ಪ್ರಯಾಣಿಸಿದ ಹಾಗೆ, ಅದು ಸರ್ಕಾರಕ್ಕೆ ವಂಚಿಸಿ ಕಂಟಕ್ಟರ್‍ನ ಸಾಹುಕಾರ ಮಾಡಿದಂತೆಯೇ ಸರಿ. ಕಂಟ್ರಾಕ್ಟರ್‍ಗಳಿಗೆ, ರಾಜಕಾರಿಣಿಗಳಿಗೆ ಎಲ್ಲರಿಗೂ ಅಷ್ಟೆ ಉಚಿತವಾಗಿ ಸರ್ಕಾರದಿಂದ ಬರುವ ಅನುದಾನಗಳಲ್ಲಿ ಸ್ವಲ್ಪ ಕಡಿಮೆ ಕೊಟ್ಟರೂ ಸರಿ, ಯಾರದೋ ಮನೆಯ ಶೌಚಾಲಯದ ಮುಂದೆ ಫೋಟೋ ತೆಗೆಸಿಕೊಂಡು ಒಂದೇ ಶೌಚಾಲಯಕ್ಕೆ ನಾಲ್ಕೈದು ಜನರಿಗೆ ಅನುದಾನ ಕೊಡಿಸಿರುವ ನಿದರ್ಶನಗಳಿವೆ. ಇರಲಿ ಅದರ ಬಗ್ಗೆ ಮತ್ತೊಮ್ಮೆ ಮಾತನಾಡುತ್ತೇನೆ. 

ಈ ಮೇಲಿನ ಸಾಲುಗಳನ್ನು ಓದಿದ ಮೇಲೆ ನಿಮಗೆ ಕಾಡುತ್ತಿರುವ ಪ್ರಶ್ನೆ, ಶಾಲೆಯ ರಿಪೇರಿ ಕೆಲಸವಾಯ್ತಾ? ಇಲ್ವಾ? ಇಲ್ಲ ಆಗಲಿಲ್ಲ. ಬೇರೆಯವರ ಹಣ ನನ್ನಲ್ಲಿರುವ ತನಕ ನನಗೆ ನೆಮ್ಮದಿಯಿರಲಿಲ್ಲ. ಎಲ್ಲವನ್ನೂ ಪಾರದರ್ಶಕವಾಗಿ ಮಾಡಿದ್ದ ನಾನು, ಕೇವಲ ಹತ್ತು ಹದಿನೈದು ಸಾವಿರ ರೂಪಾಯಿಗಳಿಗೆ ಛೇ ಹಣಕ್ಕಾಗಿ ಸಿದ್ದಾಂತಗಳನ್ನು ಬಿಡುವ ಮನುಷ್ಯ ಅಲ್ಲವೇ ಅಲ್ಲ. ಆದ್ದರಿಂದ, ಉಳಿದಿದ್ದ ಹಣದ ಜೊತೆಗೆ ಇನ್ನೂ ಹೆಚ್ಚು ಹಣವನ್ನು ನಾನೇ ಸೇರಿಸಿಕೊಂಡು ಶಾಲೆಯ ಮಕ್ಕಳಿಗೆ ಶಾಲೆಯ ಫೋಟೋ ಲೋಗೋ ಇರುವಂತಹ ಉತ್ತಮ ಗುಣಮಟ್ಟದ ಬ್ಯಾಗ್, ಪೆನ್, ರಬ್ಬರ್, ಶಾರ್ಪನರ್, ಪೆನ್ಸಿಲ್‍ಗಳು, ಜಿಯೋಮೆಟ್ರಿ ಬಾಕ್ಸ್, ಟೈ, ಬೆಲ್ಟ್,  ನೋಟ್ಸ್‍ಗಳು ಎಲ್ಲವನ್ನು ಕೊಡಿಸಿದೆ. ನಲ್ವತ್ತೊಂದು ಮಕ್ಕಳಿಗೆ ಎಷ್ಟು ಹಣ ಖರ್ಚಾಗಿರಬಹುದೆಂದಬುದನ್ನು ನೀವೇ ಲೆಕ್ಕಹಾಕಿ. ವಿಚಿತ್ರವೆಂದರೆ ಅದನ್ನು ಪಡೆಯುವ ದಿನವೂ ಕೂಡ ಎಸ್‍ಡಿಎಂಸಿಯವರಾಗಲೀ, ಪೋಷಕರಾಗಲಿ ಬರಲಿಲ್ಲ. ಕೇವಲ ಎಸ್‍ಡಿಎಂಸಿ ಅಧ್ಯಕ್ಷರಿದ್ದರು. ಇಷ್ಟನ್ನು ಕೊಡಿಸಿದ ಅದನ್ನು ಮಕ್ಕಳು ದಿನ ನಿತ್ಯ ಧರಿಸಿ ಶಿಸ್ತಿನಲ್ಲಿ ಬರಲೆಂಬುದು ನನ್ನಾಸೆಯಾಗಿತ್ತು. ಆದರೇ, ಕೆಲವು ದಿನಗಳ ನಂತರ ಮತ್ತೊಮ್ಮೆ ಭೇಟಿ ನೀಡಿದಾಗ ಕೆಲವು ವಿದ್ಯಾರ್ಥಿಗಳು ಟೈ ಹಾಕಿಲ್ಲ, ಕೆಲವರು ಬೆಲ್ಟ್ ಹಾಕಿಲ್ಲ ಮತ್ತು ಕೆಲವರು ಯೂನಿಫಾರ್ಮ್ ಕೂಡ ಹಾಕಿರಲಿಲ್ಲ. ಅದನ್ನು ಕೇಳಬೇಕೆಂಬ ಪ್ರಜ್ಞೆ ಕೂಡ ಶಿಕ್ಷಕರಿಗಿರಲಿಲ್ಲ ಮತ್ತು ಪೋಷಕರಿಗೂ ಇರಲಿಲ್ಲ. 

ಇಷ್ಟೆಲ್ಲಾ ಆಗುವಾಗ ಯಾವೊಬ್ಬನೂ ಬಂದು ಏನು ಬೇಕೆಂದು ಕೇಳಲಿಲ್ಲ, ನಾನು ಫೇಸ್‍ಬುಕ್ ಮತ್ತು ವಾಟ್ಸಾಪ್‍ನಲ್ಲಿ ಹಾಕುತ್ತಿದ್ದೆ. ಆದರೆ, ನಾನು ಶಾಲೆಯನ್ನು ಅಭಿವೃದ್ಧಿಯನ್ನು ಮಾಡಲಾಗದೇ ಉಳಿದಿದ್ದ ಹಣಕ್ಕೆ ನನ್ನ ಹಣವನ್ನು ಸೇರಿಸಿ ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿಯನ್ನು ಕೊಡಿಸಿದೆ ಎಂದಾಕ್ಷಣ ವಾಟ್ಸಾಪ್‍ನಲ್ಲಿ ಬೊಬ್ಬೆಯಿಡತೊಡಗಿದರು. ವಿಚಿತ್ರವೆಂದರೆ, ಕಾರ್ಯಕ್ರಮಕ್ಕೆ ಹಣ ಕೇಳಿದಾಗ ಹಣವನ್ನೇ ಕೊಡದೆ ತಪ್ಪಿಸಿಕೊಂಡು ಓಡಾಡಿದವರೆಲ್ಲಾ ಕೇಳಿದರು. ಅದಾದ ಮೇಲೆ ನನಗೆ ಅನಿಸಿದ್ದು ನಾನು ಸರ್ಕಾರಿ ಶಾಲೆಯನ್ನು ಉದ್ದಾರ ಮಾಡಲೇ ಬೇಕೆಂದರೇ ಸಾವಿರಾರು ಶಾಲೆಗಳಿವೆ, ಶಿಕ್ಷಕರು ಮತ್ತು ಪೋಷಕರು ನೆರವನ್ನು ಬಯಸುತ್ತಿರುವ ಶಾಲೆಗೆ ಮಾಡಬಹುದು. ಉಂಡವರಿಗೆ ಅಥವಾ ಹಸಿವಿನ ಬೆಲೆ ತಿಳಿಯದವನಿಗೆ ಅನ್ನ ಹಾಕಿ ಬರುವುದೇನೂ ಇಲ್ಲ. ನನ್ನಂಥಹ ಅನೇಕಾ ಜನರು ಸಮಾಜಕ್ಕೆ ಏನಾದರೂ ಮಾಡಬೇಕೆಂಬ ಭಾವನಾತ್ಮಕ ನೆಲೆಯಲ್ಲಿ ಸಹಾಯ ಮಾಡಲು ಹೋಗುತ್ತಾರೆ ಆದರೆ ಜನರು ಅದನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ ಅಥವಾ ಅದನ್ನು ನಿರ್ಲಕ್ಷ್ಯದಿಂದ ಕಾಣುತ್ತಾರೆ. 

ಮತ್ತೊಂದು ವಿಷಯವೆಂದರೆ, ನನ್ನೂರಿನ ಕೆಲವು ಕಿರಿಯರು ನನ್ನ ಮೇಲಿನ ಅಸಮಧಾನಕ್ಕಾಗಿ ಶಾಲೆಯ ಅಬಿವೃದ್ದಿಗೆ ಕೈಜೋಡಿಸಲಿಲ್ಲವೆಂದರು. ಅದು ಬಹಳ ತಡವಾಗಿ ತಿಳಿಯಿತು. ಅಸಮಧಾನವೆಂದರೆ, ನಾನು ಅವರೆಲ್ಲರನ್ನು ಗಣನೆಗೆ ತೆಗೆದುಕೊಳ್ಳದೆ ಮಕ್ಕಳಿಗೆ ಲೇಖನ ಸಾಮಗ್ರಿ ನೀಡಿದೆಯೆಂದು. ನಾನು ಅವರುಗಳು ಮುಂದೆ ಬರಲಿಲ್ಲವಲ್ಲ, ನಾಯಕತ್ವ ವಹಿಸಿಕೊಳ್ಳಲಿಲ್ಲವಲ್ಲ ಎಂದು ಬೇಸರಗೊಂಡಿದ್ದೆ. ಅವರಿಗೆಲ್ಲಾ ನಾನು ಹೇಳಿದ ಮತ್ತು ಹೇಳುವ ಮಾತೆಂದರೆ, ನಿಮಗೆ ನನ್ನ ಮೇಲೆ ಕೋಪವಿದ್ದರೆ, ಅಸಮಧಾನವಿದ್ದರೆ ನನ್ನ ಮೇಲಿನ ಪೈಪೋಟಿಗೆ ನೀವು ಶಾಲೆಯನ್ನು ಇನ್ನೂ ಹೆಚ್ಚು ಅಬಿವೃದ್ದಿ ಮಾಡುವ ಪಣ ತೊಡಬೇಕು. ಅದನ್ನು ಬಿಟ್ಟು ಕೈಜೊಡಿಸದೆ ಹಾಳಾಗಲಿಯೆನ್ನುವ ಮನೋಭಾವ ಬೆಳೆಸಿಕೊಳ್ಳುವವರನ್ನು ನಾನೆಂದೂ ಅಕ್ಷರಸ್ಥರೆನ್ನುವುದಿಲ್ಲ. ಇಷ್ಟೆಲ್ಲಾ ಆದಮೇಲೆ, ಕೆಲವು ಕೆಟ್ಟ ಸಂಗತಿಗಳನ್ನು ಹೇಳುತ್ತೇನೆ, ಕೇವಲ ಒಳ್ಳೆಯದನ್ನೇ ಬರೆದರೆ ನೀವುಗಳು ನಿಮ್ಮೂರಿನಲ್ಲಿ ಇಂಥಹ ಯೋಜನೆಗಳನ್ನು ಹಾಕಿಕೊಳ್ಳುವಾಗ ಎಡುವುದು ಸಾಧ್ಯವಿದೆ. 

ನಾವು ಆಯೋಜಿಸಲು ಹೊರಟಿದ್ದು, ಹಿರಿಯ ವಿದ್ಯಾರ್ಥಿಗಳ ಸಮ್ಮಿಳನ ಮತ್ತು ಗುರುಗಳಿಗೆ ನಮನ, ಇದಕ್ಕಾಗಿ ನಾವು ದೇಣಿಗೆ ಕೇಳಿದ್ದು ಆ ಶಾಲೆಯಲ್ಲಿ ಓದಿ, ಸ್ಥಿತಿವಂತರಾಗಿದ್ದವರನ್ನು ಮಾತ್ರ. ಅವರ ಪ್ರತಿಕ್ರಿಯೆಗಳನ್ನು ಕೇಳಿ,
ಇದಕ್ಕೆ ಸರ್ಕಾರದ ಹಣವಿರುತ್ತದೆ ನಾವ್ಯಾಕೆ ಕೊಡಬೇಕು – ಇದು ನಮ್ಮೆಲ್ಲರ ಸಮ್ಮಿಳನ ಮತ್ತು 60 ವರ್ಷದಲ್ಲಿ ಮೊದಲ ಬಾರಿಗೆ ನಡೆಯುತ್ತಿದೆ ಎನ್ನುವ ಸಾಮಾನ್ಯ ಪ್ರಜ್ಞೆಯಿರಲಿಲ್ಲ
ನಾವು ಆ ಶಾಲೆಯಲ್ಲಿ ಓದಿಲ್ಲವೆನ್ಸುತ್ತೆ – 1954 ರಿಂದ ಇಲ್ಲಿಯವರೆಗೆ ಸೇರ್ಪಡೆಯಾಗಿರುವ ಎಲ್ಲರ ಪಟ್ಟಿ ನನ್ನ ಬಳಿಯಿತ್ತು, ಅವರಿಗೆ ಅವರ ಬಾಲ್ಯ ನೆನಪಿಲ್ಲವೋ? ಅಥವಾ ಹಣ ನೀಡಬೇಕೆಂಬ ನಾಟಕವೋ?
ನಾಳೆ ಕೊಡುತ್ತೇನೆ, ನಾಳಿದ್ದು – ಆ ನಾಳೆ ಬರಲೇ ಇಲ್ಲ
ಕೆಲವರು ಕಾರ್ಯಕ್ರಮದ ದಿನ ಮೈಕ್ ಹಿಡಿಯಲು ಮುಂದೆ ಬಂದರು, ಹಣ ಕೇಳಿದಾಗ ನಾವು ಇಲ್ಲಿ ಓದಿರಲಿಲ್ಲವೆಂದರು – ಊರಿನ ಕಾರ್ಯಕ್ರಮಕ್ಕೆ 500-1000ರೂಪಾಯಿ ಕೊಡಬಹುದಿತ್ತು, ಮತ್ತು ಇವರೆಲ್ಲರೂ ಎಂಎ, ಎಂಎಸ್ಸಿ ಮಾಡಿ ಉದ್ಯೋಗದಲ್ಲಿದ್ದವರು, ದೊಡ್ಡ ಪ್ರಸಿದ್ಧವೆನಿಸಿಕೊಂಡ ಡಾಕ್ಟರುಗಳು, ಇಂಜಿನಿಯರುಗಳು ಕೂಡ ಹಿಂದೇಟಾಗಿದ್ದರು
ಒಂದಿಷ್ಟು ಜನರು ಹಣ ಕೊಡಬೇಕಾಗುತ್ತದೆಯೆಂದೇ ಕಾರ್ಯಕ್ರಮಕ್ಕೆ ಬರಲಿಲ್ಲವೆಂದರೆ ಒಪ್ಪುತ್ತೀರಾ?

ನನಗೆ ನಕರಾತ್ಮಕವಾಗಿ ಹೇಳಿದವರನ್ನು ತಿಳಿಸುತ್ತೇನೆ,
ಹರೀಶ್ ನಿಮಗೆ ಗೊತ್ತಿಲ್ಲ ಇದೆಲ್ಲಾ ಸುಲಭದ ಕೆಲಸವಲ್ಲ, ನೀವು ಕಾಲೇಜಿನಲ್ಲಿ ಓದುವುದು, ಸಂಶೋಧನೆ ಅಂತಾ ಮಾಡೋದಕ್ಕೂ ಈ ಜನರನ್ನು ಬದಲಾಯಿಸಿ ಕಾರ್ಯಕ್ರಮ ನಡೆಸುವುದಕ್ಕೂ ಬಹಳ ವ್ಯತ್ಯಾಸವಿದೆ
ಎಲ್ಲಾ ಊರಿನಲ್ಲಿಯೂ ಮೂರ್ನಾಲ್ಕು ಜನರು ಮುಖಂಡರಿರುತ್ತಾರೆ (ಪ್ರತಿಯೊಂದು ಪಕ್ಷಕ್ಕೂ), ಅವರ ಹಿಂಬಾಲಕರನ್ನು ನೋಡಬೇಕು, ಯಾವಾ ಮುಖ್ಯಮಂತ್ರಿಯನ್ನು, ಪ್ರಧಾನ ಮಂತ್ರಿಯನ್ನು ಅವರು ಅಷ್ಟು ನಂಬುವುದಿಲ್ಲ, ಆ ಸ್ಥಳೀಯರು ಹೇಳಿದರೇ ಮುಗಿಯಿತು ಅವರು ಒಂದು ರೀತಿಯ ನಡೆದಾಡುವ ದೇವರುಗಳು

ಇಷ್ಟೆಲ್ಲಾ ಆದಮೇಲೆ ಉಪಸಂಹಾರವನ್ನು ಕೊಡುತ್ತೇನೆ. ಬಹಳಷ್ಟು ಜನರು ಅಕ್ಷರ ಕಲಿತು, ಡಿಗ್ರೀ ಮಾಡಿ ಕೆಲಸ ತೆಗೆದುಕೊಂಡು, ಒಂದು ಸೈಟು ಮನೆ ಕಾರು ಕೊಂಡರೆ ಸಿರಿವಂತರು ಬುದ್ದಿವಂತರೆಂದು ನಂಬಿದ್ದಾರೆ. ನಮ್ಮ ಶಿಕ್ಷಣ ವ್ಯವಸ್ಥೆ ಮಗುವನ್ನು ಓದಬೇಕು, ಕಲಿಯಬೇಕು ಕೆಲಸ ತೆಗೆದುಕೊಂಡು ಸಂಪಾದನೆ ಮಾಡಬೇಕೆಂದು ಬೋಧಿಸುತ್ತೇ ವಿನಾಃ, ಸ್ವಾಭಿಮಾನ, ಮೌಲ್ಯ, ಕಂಡವರ ಹಣ ಹೇಸಿಗೆ, ಸಮಾಜಮುಖಿಯಾಗಬೇಕು, ಸದಾ ಸಹಾಯಕ್ಕೆ ಸಿದ್ದನಿರಬೇಕು, ನನ್ನೂರು, ನನ್ನ ಶಾಲೆ, ನನ್ನ ದೇಶವೆಂಬ ಅಭಿಮಾನವನ್ನು ಬೆಳೆಸಲೇ ಇಲ್ಲ. ಹಾಗಾಗಿ ಆ ಮಗುವು ಸ್ವಾರ್ಥದ ಪರಮಾವಧಿಯನ್ನು ತಲುಪುತ್ತದೆ. ಲಂಚಗುಳಿತನ ಅವರಿಗೆ ಹೆಮ್ಮೆಯ ವಿಷಯ. ಯಾರದೋ ಹಣದಲ್ಲಿ ಮಜ ಮಾಡುವುದು ಪ್ರತಿಷ್ಟೆ. ಅಷ್ಟೆಲ್ಲಾ ಏಕೆ, ಒಬ್ಬ ಹೆಣ್ಣು ಮಗಳ ಜೊತೆ ಹೇಗೆ ನಡೆದುಕೊಳ್ಳಬೇಕು ಅಥವಾ ಅವಳನ್ನು ಹೇಗೆ ಕಾಣಬೇಕು, ಗೌರವಿಸಬೇಕೆಂಬುದನ್ನು ನಾವು ಶಾಲೆಯಲ್ಲಿ ಕಲಿಸಿ ಬೆಳೆಸುವುದಿಲ್ಲ. ಕೇವಲ ಬೋಧನೆಯಲ್ಲಿರುತ್ತದೆ. ಒಬ್ಬ ಹೆಣ್ಣು ಮಗಳು ಸ್ವಲ್ಪ ಚುರುಕಾಗಿ ಓಡಾಡಿದರೆ ಅವಳನ್ನು ಬೇರೆಯ ರೀತಿ ಕಾಣುವ ದುಷ್ಟ ಮನಸ್ಥಿತಿಯನ್ನು ಕೊಡುತ್ತಿದೆ. ಪೋಷಕರು ಕೂಡ ಹೊಣೆಗಾರರು, ಅದರ ಜೊತೆಗೆ ಸುತ್ತಣ ಸಮಾಜವೂ ಕೂಡ. ನಾನು ಚಿಕ್ಕವನಿದ್ದಾಗ ಊರಿನ ಯಾವ ಮಗುವು ತಪ್ಪು ಮಾಡಿದರೂ ಯಾರಾದರೂ ಒಬ್ಬರು ಬಂದು ಗದರಿಸಿ ತಿದ್ದು ತಿದ್ದರು. ಆ ಸಮಯದಲ್ಲಿ ಪೋಷಕರೇ ಹೇಳುತ್ತಿದ್ದರು, ಕೊಡು ಒಂದೆರಡನ್ನು ಎಷ್ಟು ಹೇಳಿದರು ಬುದ್ದಿ ಕಲಿಯುವುದಿಲ್ಲವೆಂದು. ಈಗ, ಹೊರಗಿನವರಿರಲಿ ಮನೆಯವರು ಹೊಡೆದರೆ ಸಾಕು ದೊಡ್ಡ ರಾದಾಂತವಾಗುತ್ತದೆ, ಟಿವಿಯವರು ಬಂದು ಬಿಡುತ್ತಾರೆ. ಇನ್ನು ಮಕ್ಕಳು ಭಯ ಭಕ್ತಿಯಿಂದ ಕಲಿಯುವುದೆಲ್ಲಿ?

ಅದರ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಕೋಟ್ಯಾಂತರ ಜನರು ಅವರ ಜೀವನವನ್ನೇ ಕಟ್ಟಿಕೊಳ್ಳಲಾಗದೇ ಒದ್ದಾಡುತ್ತಿದ್ದಾರೆ. ಅವರಿಗೆ ಆ ದಿನದ ಜೀವನವನ್ನು ಸಾಗಿಸುವದೇ ಹರಸಾಹಸ. ಸಾಂಪ್ರದಾಯಿಕವಾಗಿ ಬಂದಿದ್ದ ಆತ್ಮಸ್ಥೈರ್ಯ ವಿಶ್ವಾಸವೆಲ್ಲಾ ಯಾವುದೋ ಒಂದು ಕಡೆಯಲ್ಲಿ ಕಳೆದುಹೋಗುತ್ತಿದೆ. ಓದಿರುವ ವಿದ್ಯಾವಂತ ಸಮುದಾಯ ಸೂಕ್ತ ಕೌಶಲ್ಯಗಳಿಲ್ಲದೇ ಮೌಲ್ಯಗಳ ಬೆಲೆ ಅರಿಯದೇ ಸಂಕುಚಿತವಾಗುತ್ತಿದ್ದಾರೆ. ಇದ್ಯಾವುದು ತಪ್ಪಲ್ಲ. ಏಕೆಂದರೆ ನಾವು ಶಾಲೆಗಳಲ್ಲಿ ಏನನ್ನು ಕಲಿಸಬೇಕಿತ್ತೋ ಅದನ್ನು ಮಾಡಲಿಲ್ಲ, ಅದರ ಜೊತೆಗೆ ಅವರುಗಳು ಬೌದ್ಧಿಕವಾಗಿ ಬೆಳೆಯಲು ಅವಶ್ಯಕವಿದ್ದ ಓದನ್ನು ಅಥವಾ ಓದುವ (ಪುಸ್ತಕಗಳು, ಕಾದಂಬರಿಗಳು, ಇತರೆ ಓದನ್ನು)  ಹವ್ಯಾಸವನ್ನು ಬೆಳೆಸಿಕೊಳ್ಳಲಿಲ್ಲ. ಲೇಖನ ಉದ್ದವಾಗುತ್ತಿದೆ, ಆದರೂ ಬಹುಮುಖ್ಯ ಘಟ್ಟವಿದಾಗಿರುವುದರಿಂದ ಈ ವಿಚಾರಗಳ ಕಿರುಪರಿಚಯ ಮಾಡಿಸಿರುತ್ತೇನೆ. 

ಮನುಷ್ಯ ತಾನಂದು ಕೊಂಡಿರುವುದಕ್ಕಿಂತ ದೊಡ್ಡ ವ್ಯಕ್ತಿಯೆನ್ನುವುದನ್ನು ಮೊದಲು ಅರಿಯಬೇಕು. ಇಡೀ ಜಗತ್ತಿಗೆ ಹಂಚುವಷ್ಟು ಪ್ರೀತಿ ಅವನ ಹೃದಯಾಂತರಾಳದಲ್ಲಿದೆ, ಅದನ್ನು ಅವನು ಹುಡುಕಿಕೊಳ್ಳಬೇಕು ಮತ್ತು ಪಸರಿಸಬೇಕು. ಸ್ವಾರ್ಥತೆಯಿಂದ, ಜಾತಿ, ಧರ್ಮ, ಅಂಧಕಾರ, ಅಂದಾಭಿಮಾನ, ಅಹಂ, ಅಹಂಕಾರ, ಸಣ್ಣತನ, ಇವೆಲ್ಲವನ್ನೂ ಮೀರುವ ಶಕ್ತಿ ಅವನಿಗಿದೆ ಅದನ್ನು ಅರಿಯಬೇಕು, ಅನುಸರಿಸಬೇಕು. ಇದೆಲ್ಲವೂ ಆಗುವುದು ಎರಡರಿಂದ ಮಾತ್ರ, ಮೊದಲನೆಯದಾಗಿ ಉತ್ತಮ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ನಾನು ಗಮನಿಸಿದ ಹಾಗೆ, ಪಠ್ಯ ಪುಸ್ತಕಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ಬಿಟ್ಟರೆ ಬೇರೆ ರೀತಿಯ ಪುಸ್ತಕಗಳನ್ನು ಬಹುತೇಕರು ಓದುವುದಿಲ್ಲ. ಎರಡನೆಯದಾಗಿ, ಜಗತ್ತನ್ನು ಸುತ್ತಬೇಕು ಅಲ್ಲಿನ ಜನರೊಂದಿಗೆ ಬೆರೆಯಬೇಕು. ಬೇರೆಯವರ ಜೀವನವನ್ನು ತಿಳಿಯುವ ಕುತೂಹಲ ಮತ್ತು ಆಸಕ್ತಿಯಿರಬೇಕು. ಜೀವನದ ಬಗ್ಗೆ ಅಸಡ್ಡಿಯಿರಬಾರದು. 

ನಾನು ಸದಾ ಹೇಳುತ್ತಿರುತ್ತೇನೆ. ಮನುಷ್ಯ ಆಲೋಚನೆಗಳಲ್ಲಿ ಮಗ್ನನಾಗಿರಬೇಕು, ಕಲಿಯುತ್ತಿರಬೇಕು, ಬೆಳೆಯುತ್ತಿರಬೇಕು, ಬೆರೆಯುತ್ತಿರಬೇಕು. ಬೌದ್ಧಿಕ ವಿಕಸನ ಬಹಳ ಮುಖ್ಯ. ಇಲ್ಲವಾದಲ್ಲಿ ತಾನೇ ದೊಡ್ಡವನೆಂಬ ಅಹಂ ಅಥವಾ ನಾನೇನೂ ಅಲ್ಲವೆನ್ನುವ ಸಂಕುಚಿತದೊಂದಿಗೆ ಕೊಳೆತುಹೋಗುತ್ತಾನೆ. ಇದರ ಬಗ್ಗೆ ಮುಂದಿನ ಬರವಣಿಗೆಯಲ್ಲಿ ವಿಸ್ತರಿಸುತ್ತೇನೆ. 

21 August 2017

ಬಯಸದೆ ಬಂದ ಭಾಗ್ಯಕ್ಕೆ ನಾ ಋಣಿ!!!
ಸರಿ ಸುಮಾರು ಒಂಬತ್ತು ವರ್ಷಗಳ ಹಿಂದೆ, ಅಂದರೇ,ಪ್ರಪಂಚ ಜಾಗತೀಕರಣದತ್ತ ಮುನ್ನುಗ್ಗುತ್ತಿದ್ದ ವರ್ಷ ೨೦೦೦ ಎಂಬುದು ಅದರ ಹೆಸರು, ನೆನಪಿಸಿಕೊಂಡರೆ ಕಣ್ಣು ಒದ್ದೆಯಾಗುತ್ತವೆ. ಅದೊಂದು, ನೋವಾ? ದುಃಖವಾ? ಸಂಕಟವಾ? ಅಥವಾ ನೀವೆಲ್ಲಾ ಹೇಳುವ ಕೆಟ್ಟ ಸಮಯವಾ? ಅದೊಂದು ಉತ್ತರವಿಲ್ಲದ ಪ್ರಶ್ನೆಯಾಗಿದೆ. ಆ ಪ್ರಶ್ನೆಗಳಿಗೆ ಇಂದಿಗೂ ಉತ್ತರ ದೊರಕಿಲ್ಲ, ಅದಕಿಂತ ಮಿಗಿಲಾಗಿ ಉತ್ತರ ಹುಡುಕುವ ಗೋಜಿಗೆ ಹೋಗಿಲ್ಲ. ಈ ಅಂಕಣವನ್ನು ಬರೆಯಲು ಹೊರಡುವ ಮುನ್ನಾ, ಅಂತಹ ಸಿದ್ದತೆ ಏನು ಮಾಡಿಕೊಂಡು ಹೊರಟಿಲ್ಲ. ನನ್ನ ಭಾವನೆಗಳ ವಿಷಯಕ್ಕೆ ಬಂದಾಗ ನಾನೆಂದು ಸಿದ್ದತೆ ಮಾಡಿಕೊಂಡು ಬರೆದಿಲ್ಲ. ಅಂತರಾಳದಲ್ಲಿ ಉದಯಿಸಿದ ಪ್ರತಿ ಪದಗಳನ್ನು ತಮ್ಮ ಮುಂದಿರಿಸಿದ್ದಿನಿ ಯಾವುದು ಸರಿ ಯಾವುದು ತಪ್ಪೆನ್ನುವ ತಕರಾರಿಗೆ ಹೋಗಿಲ್ಲ. ಇದು ನಾನು ಬಹಳ ಸಂಯಮದ ಅಥವಾ ಬಹಳ ನೇರ ನಡೆಯವನೆಂದು ತೋರಿಸುವುದಕ್ಕಲ್ಲ. ನನ್ನೊಳಗಿರುವ ಕೆಲವು ಪ್ರಶ್ನೆಗಳಿಗೆ ನೇರ ಉತ್ತರ ಹುಡುಕಲು ಹೊರಟಾಗ, ಪ್ರಶ್ನೆಗಳು ನೇರವಿದ್ದರೆ ಉತ್ತಮವೆನ್ನುವುದು ನನ್ನ ಅನಿಸಿಕೆ. ಈಗ ಸಮಯ ಮುಂಜಾನೆ ಮೂರು ಘಂಟೆ ಮೂವತ್ತು ನಿಮಿಷ, ಇಂಥಹ ಮಧ್ಯರಾತ್ರಿ ಬರೆಯಲು ಹೊರಟಾಗ ನನಗನಿಸಿದ್ದು, ಅಲ್ಲಾ ನನಗೆ ನಿದ್ದೆ ಬರುತ್ತಿಲ್ಲಾ, ಅದನ್ನ ಒಪ್ಪಿಕೊಳಬಹುದು. ಆದರೇ ಅದಕ್ಕೊಸ್ಕರವಾಗಿ ಈ ಸರಿ ಹೊತ್ತಿನಲ್ಲಿ ಬರೆಯಲು ಹೊರಟಿರುವುದು! ನಾನು ಮೂರ್ಖನೆಂಬುದು ಬಹಳ ವರ್ಷಗಳ ಹಿಂದೆಯೇ ತೀರ್ಮಾನವಾಗಿದೆ. ಆದರೂ ಇದನ್ನು ಮತ್ತೆ ಮತ್ತೆ ಸಾಕ್ಷಿ ಸಮೇತ ಸಾಬೀತುಪಡಿಸುವ ಅನಿವಾರ್ಯತೆಯಾದರು ಏನಿದೆ?ಇದನ್ನು ಬರೆಯಲು ನನ್ನ ತಲೆಯೊಳಗೆ ಕೊರೆಯುತ್ತಿರುವ ಎಕೈಕ ವಿಷಯ ನನ್ನ ಸ್ನೆಹಿತ ವರ್ಗದಲ್ಲಿ ಮೂಡಿರುವ "ನಾನು ಅದೃಷ್ಟವಂತನೆಂಬ ಕಲ್ಪನೆಯಿರುವುದು". ನನ್ನ ಅನೇಕ ಸ್ನೇಹಿತರು ಇದನ್ನು ಆಗ್ಗಾಗ್ಗೆ ನೇರವಾಗಿ ಮತ್ತು ಹಿಂದೆಯಿಂದಲೂ ಬಳಸುತ್ತಿರುತ್ತಾರೆ. ಅವರಿಗೆ ಉತ್ತರಿಸಲು ಇದನ್ನು ಬರೆಯದೇ ಇದ್ದರೂ ನನ್ನೊಳಗೆ ಇರುವ ಈ ಪ್ರಶ್ನೆಗೆ ಉತ್ತರ ಸಿಕ್ಕೀತೇನೋ ಎಂಬ ವಿಶ್ವಾಸದಿಂದ ಬರೆಯುತ್ತಿದ್ದೇನೆ.

ಈ ೨೦೦೦ ಇಸವಿಯೆಂಬ ವರ್ಷವನ್ನು ನೆನೆದರೆ ನನ್ನ ಮೈ ಒಂದು ಬಗೆಯ ಕಂಪನ ಮಿಡಿಸುತ್ತದೆ. ಅದು ಅಂತಹ ಘೋರ ವರ್ಷವೆಂದರೂ ತಪ್ಪಾಗುವುದಿಲ್ಲ. ಬಾನುಗೊಂದಿಯೆಂಬ ಚಿಕ್ಕ ಹಳ್ಳಿಯ ಕೆಳ ಮಧ್ಯಮ ವರ್ಗದಲ್ಲಿ ಹುಟ್ಟಿ ಬೆಳೆದ ನಾನು, ಇಂದು ಕೊಲೊಂಬೊಗೆ ಅಂತರಾಷ್ಟ್ರೀಯ ವಿಜ್ನಾನಿಗಳ ಕಮ್ಮಟಕ್ಕೆ ಹೋಗುತ್ತಿದ್ದೇನೆ. ಅದೂ ಒಂದೂ ನಯಾ ಪೈಸೆ ಖರ್ಚಿಲ್ಲದೆ, ಸಕಲ ಸವಲತ್ತುಗಳನ್ನು ನೀಡಿ ನನ್ನ ಆಮಂತ್ರಿಸಿದೆ. ನಾನು ಓದಲು ಹೋಗುತ್ತಿದ್ದಾಗ ನನ್ನೂರಿಗೆ ಬಸ್ ಇರಲಿಲ್ಲ. ಬಸ್ ಮುಖ ನೋಡಲು ನಾವು ಮೂರು ಮೈಲಿ ನಡೆದು ಹೋಗಬೇಕಿರುತ್ತಿತ್ತು. ಅಂಥಹ ಹಳ್ಳಿಯಲ್ಲಿ ಹುಟ್ಟಿ ಬೆಳೆದು ಬಂದ ನಾನು ಇಂದು ವಿಮಾನದಲ್ಲಿ ಹೋಗುತ್ತಿದ್ದೇನೆಂದರೆ ನನ್ನನ್ನು ನಾನೇ ನಂಬಲು ಯೋಚಿಸಬೇಕಾಗುತ್ತದೆ, ಅದಲ್ಲದೆ ನನಗೆ ಏನೋ ಒಂದು ಬಗೆಯ ಸಂತೋಷವುಂಟಾಗುತ್ತಿದೆ. ಉತ್ತಮ ಕುಟುಂಬದಿಂದ ಬಂದ ಕೆಲವರಿಗೆ ವಿಮಾನಯಾನ ಈ ಕಾಲದಲ್ಲಿ ಏನ್ ಮಹಾ ಎನಿಸಲುಬಹುದು. ಆದರೇ ಊರಿಗೆ ಟಾರ್ ರಸ್ತೆಯೂ ಇಲ್ಲದ ಮಣ್ಣಿನ ರಸ್ತೆಯಲ್ಲಿ ಬರಿಗಾಲಲ್ಲಿ ನಡೆದು ಓದಿ ಬಂದ ನಾನು ಮೊದಲ ಬಾರಿ ಆಕಾಶದಲ್ಲಿ ಹಾರುವ ಉಕ್ಕಿನ ಹಕ್ಕಿಯಲ್ಲಿ ಹಾರುತ್ತಿರುವುದು ನಿಜಕ್ಕೂ ನನಗೆ ಬಹಳ ಸಂತೋಷ ತಂದಿದೆ. ಅದರಲ್ಲಿಯೂ ಒಬ್ಬ ಆಹ್ವಾನಿತ ಯುವ ವಿಜ್ನಾನಿಯಾಗಿ ಹೋಗುತ್ತಿರುವುದು ನನ್ನ ಅದೃಷ್ಟವಾ? ಇದು ನನ್ನೊಳಗಿರುವ ಪ್ರಶ್ನೆ. ಕೇವಲ ಹತ್ತು ವರ್ಷಗಳ ಹಿಂದೆ ಎರಡು ರೂಪಾಯಿಯಿದ್ದ ವ್ಯಾನ್ ಚಾರ್ಜ್ ಅನ್ನು ಮೂರು ರೂಪಾಯಿ ಮಾಡಿದ್ದಾಗ ನಾನು ನಡೆದು ಹೊಗಿದ್ದೆ. ಈ ವ್ಯಾನ್ ಗಳಲ್ಲಿ ಓಡಾಡುವ ತಂಟೆಯೇಬೇಡವೆಂದಿದ್ದೆ. ಅಂತಹ ನಾನು ಇಂದು ಕನಿಷ್ಟವೆಂದರೂ ನನ್ನ ಸಕಲವೆಲ್ಲವನ್ನೂ ನೋಡಿಕೊಂಡರೂ ಲಕ್ಷ ರೂಪಾಯಿ ಖರ್ಚನ್ನು ಯಾರೋ ನನಗೆ ಕೊಟ್ಟು ನನ್ನ ನಾಲ್ಕು ಮಾತನ್ನು ಕೇಳುತ್ತಾರೆಂದರೆ ಇದನ್ನು ನಿಮ್ಮ ಭಾಷೆಯಲ್ಲಿ ಏನು ಕರೆಯುವಿರಿ?

ನನ್ನ ಹತ್ತನೇ ತರಗತಿ ಮುಗಿದು, ಪಿ.ಯು.ಸಿ.ಗೆ ಸೇರಿದಾಗ ನನಗೆ physics, chemistry, biolgy ಪದಗಳಿಗೆ ಪರ್ಯಾಯ ಅರ್ಥ ಗೊತ್ತಿರಲಿಲ್ಲ. ಆಂಗ್ಲ ಮಾಧ್ಯಮದಿಂದ, ಪೇಟೆಯಿಂದ, ಬಂದ ಹುಡುಗರ ಮುಂದೆ ಮೊದಲೇ ಕುಳ್ಳಗೆ ಕೇವಲ ನಾಲ್ಕಡಿ ಇದ್ದ ನಾನು, ನಿಂತರೂ ಕೂತಂತೆ ಕಾಣುತಿದ್ದೆ. ಅವರ ಮುಂದೆ ನಿಲ್ಲಲು ನನ್ನೊಳಗೆ ಏನೋ ಒಂದು ಬಗೆಯ ಅಂಜಿಕೆ ಇರುತಿತ್ತು. ಓದು ಅನ್ನುವುದು ನನ್ನ ಶತ್ರುವಿನ ಕೆಲಸವೆಂದು ಬಗೆದು, ನನ್ನ ಹಳ್ಳಿ ಭಾಷೆ ಮಾತನಾಡುವ ಕನ್ನಡ ಮಾಧ್ಯಮದಿಂದ ಬಂದವರ ಗೆಳೆತನ ಮಾಡಿಕೊಂಡೆ. ನನ್ನ ಭಾಷೆಯ ಶೈಲಿಯನ್ನು ಮೆಚ್ಚಿಕೊಂಡವರೆಲ್ಲ ನನ್ನ ಗೆಳೆಯರಾದರು. ಮಾತಾಡುವುದರಲ್ಲಿ ನಾನೆಂದು ಹಿಂದೆ ಬಿದ್ದವನಲ್ಲ ಇಂದಿಗೂ ಕೂಡ. ಅಂತೂ ಇಂತೂ ಓದುವುದು ಯಾವುದೋ ಜನ್ಮದ ಪಾಪದ ಫಲವಾಗಿ ಈ ಜನ್ಮದಲ್ಲಿ ಸಿಕ್ಕಿದೆ, ಅದಕ್ಕೆ ಮುಕ್ತಿ ಕೊಡಿಸಲೇ ಬೇಕೆಂದು ನಿರ್ಧರಿಸಿದೆ. ಆದರೂ ನಾನು ಪ್ರಾಮಾನಿಕವಾಗಿ ಕಾಲೇಜಿಗೆ ಹೋಗಿ ಓದಲು ಪ್ರಯತ್ನಿಸಿದ್ದು ಉಂಟು. ಆದರೇ ನಮ್ಮ ಮನಸ್ಥಿತಿಯನ್ನು ಅರಿತು ಪಾಠ ಮಾಡುವ ಸೌಜನ್ಯ ನಮ್ಮ ಉಪನ್ಯಾಸಕರಿಗೆ ಇದ್ದಂತೆ ಕಾಣಲಿಲ್ಲ. ಅವರು, ತಮ್ಮ syllabus ಮುಗಿಸುವುದೊಂದೆ ತಮ್ಮ ಕೆಲಸವೆಂಬಂತೆ ವರ್ತಿಸುತಿದ್ದರು. ನಮ್ಮ ದಡ್ಡತನಕ್ಕೆ ಆರ್ಟ್ಸ್ ತೆಗೆದು ಹೋದುವುದು ಉತ್ತಮವೆಂದೂ ನಮಗೆ ಕಿವಿಮಾತನ್ನು ಹೇಳಿದ್ದರು. ವಿದ್ಯಾಬ್ಯಾಸವೆಂಬುದು ಹುಟ್ಟಿನಿಂದ ಬರಬೇಕು, ಇಲ್ಲದಿದ್ದಲ್ಲಿ ಆಂಗ್ಲಮಾಧ್ಯಮಕ್ಕೆ ಸೇರಿ ನಂತರ ಪಡೆದುಕೊಳ್ಳಬೇಕೆಂದು ತಿಳಿಸಿಕೊಟ್ಟರು. ಅಂತೂ ಇಂತೂ ಎಲ್ಲ ಉಪನ್ಯಾಸಕರೂ ತೀರ್ಮಾನಿಸಿ, ಕಿರು ಪರೀಕ್ಷೆಯಲ್ಲಿ ಫೇಲಾದವರಿಗೆ ೨೫ ಬಾರಿ ಉತ್ತರವನ್ನು ಬರೆಯಬೇಕು ಎಂದರು. ಇದು ಕಾಲೇಜು ಜೀವನದ ಬಗ್ಗೆ ಏನೇನೋ ಕನಸುಗಳನ್ನು ಹೊತ್ತು ಬಂದ ನಮಗೆ ಬಾರಿ ಮಟ್ಟದಲ್ಲೆ ನೋವುಂಟುಮಾಡಿತ್ತು. ಈ ಮನೆಗೆಲಸಗಳೆಲ್ಲಾ ಬಾರಿ ದುಬಾರಿಯಾಗಿ ಕಂಡು ಕಡೆಗೆ ವಿದ್ಯೆಯೆಂಬುದು ನಮಗಲ್ಲ, ಅದರಲ್ಲೂ ವಿಜ್ನಾನ ನಮಗಲ್ಲ, ನಮಗೆ ಕಲಾ ವಿಭಾಗವೇ ಸರಿಯೆನಿಸತೊಡಗಿತ್ತು.

ಕಾಲೇಜಿನ ಕಡೆಗೆ ತಲೆ ಹಾಕಿ ಮಲಗಿದರೆ ನಿದ್ದೆ ಬರುವುದಿಲ್ಲವೆಂಬಷ್ಟು ಬೇಸರವಾಗಿತ್ತು.ಕ್ಲಾಸಿನಲ್ಲಿದ್ದ ಸಮಾನ ಮನಸ್ಕರ ತಂಡವನ್ನು ರಚಿಸಿ,ನಮ್ಮ ಆರ್ಥಿಕ ವ್ಯವಸ್ಥೆಯನ್ನಾದರಿಸಿ ಹತ್ತಿರವಿದ್ದ ಆಕರ್ಷಣೆಯ ತಾಣಗಳನ್ನು ನೋಡತೊಡಗಿದೆವು. ಬೆಟ್ಟದಪುರ ಬೆಟ್ಟ, ವೀರಭೂಮಿ, ನಿಸರ್ಗಧಾಮ ಹೀಗೆ ಹತ್ತು ಹಲವನ್ನು ಸುತ್ತಾಡಿ ಅದಕ್ಕೆ ಚಾರಣವೆಂಬ ಹೆಸರನ್ನು ಕೊಟ್ಟೆವು. ಟ್ಯೂಷನ್ ಬಿಟ್ಟು ಬಹಳ ದಿನಗಳೇ ಆಗಿದ್ದವು, ಫೇಲ್ ಆಗೋದು ಖಚಿತವಾದ ಮೇಲೆ ಸುಮ್ಮನೆ ಅಲ್ಲಿ ಕುಳಿತು ಸಮಯ ವ್ಯರ್ಥ ಮಾಡುವುದು ಬೇಡವೆಂದು ತೀರ್ಮಾನಿಸಿ, ಕಂಡ ಕಂಡ ಕಡೆಗಳಲ್ಲಿ ಕ್ರಿಕೇಟ್ ಆಟವಾಡಲು ಹೊರಟೆವು. ಅದರಿಂದ ಮಹಾನ ಸ್ಥಳೀಯ ಕ್ರೀಕೆಟ್ ಪಂಟರುಗಳೆಲ್ಲ ಪರಿಚವಾದರ. ಕೆಲವು ಬಾರಿ ನಮ್ಮ ಅಪ್ಪನ ಜೊತೆ ನಿಂತಾಗಲೂ ಟೂರ್ನಿಗೆ ಹೋಗಿಲ್ವ ಎಂದು ಕೇಳಿ ಅಪ್ಪನ ಆರೈಕೆಯನ್ನು ಹೆಚ್ಚಿಸಿದ್ದಾರೆ. ಅಪ್ಪ ಮನೆಗೆ ಬಂದು ಅಮ್ಮನ ಮುಂದೆ ನನ್ನ ಗುಣಗಾನ ಮಾಡಲು ಸಹಕರಿಸಿದ್ದಾರೆ. ಆ ಸಮಯಕ್ಕೆ ಸರಿಯಾಗಿ, ನಾನೊಂದು ಹುಡುಗಿಯನ್ನು ಇಷ್ಟಪಟ್ಟು ಅವಳ ಹಿಂದೆ ಅಲೆದು, ಅಲೆದು, ಕೊನೆಗೆ ಅವಳು ಬೆರೊಬ್ಬನನ್ನು ಪ್ರೀತಿಸುತ್ತಾಳೆಂದು ತಿಳಿದು ನಿಂತಾಗ, ನನ್ನ ಆತ್ಮೀಯ ಗೆಳೆಯರು ನಮ್ಮ ಸಂಘ ಬಿಟ್ಟು ಹೋಗದಂತೆ ಆ ದೇವರು ನೀಡಿದ ಕಾಣಿಕೆಯಿದು ಎಂದು ಸಮಧಾನ ಮಾಡಿದ್ದಾರೆ. ಎಲ್ಲದ್ದಕ್ಕೂ ಒಂದು ಕೊನೆಯಿರಬೇಕಲ್ಲ, ಅಂತೂ ಜೂನ್ ೫ ೨೦೦೦ ಮರೆಯಲಾರದ ದಿನ ನನಗೆ, ಪಿ.ಯು.ಸಿ. ಫಲಿತಾಂಶ ಹೊರಕ್ಕೆ ಬಂತು. ಮೊದಲೇ ನಿರೀಕ್ಷಿಸಿದ್ದಂತೆ, ನಾಲ್ಕು ಢಮಾರ್ ಆಗಿದ್ದವು. ಓದೆಂಬ ಮಾಯಾಲೋಕಕ್ಕೆ ನಾವು ಎಂದು ಪ್ರವೆಶಪಡೆಯುವುದಿಲ್ಲವೆಂದು ತೀರ್ಮಾನಿಸಿದೆ.

ಫೇಲ್ ಆಗುವವರೆಗೂ ಅತಿ ಉತ್ಸಾಹದಿಂದ ಮೆರೆಯುತಿದ್ದ ನನ್ನ ಮನಸ್ಸು, ಯಾವುದೋ ಪ್ರಪಾತಕ್ಕೆ ಬಿದ್ದಂತೆ ಆಡತೊಡಗಿತ್ತು. ನಾನು ಫೇಲ್ ಆದ ನಂತರ ನನ್ನ ಸುತ್ತ ಮುತ್ತಲಿನ ಜನರಲ್ಲಿ ಉಂಟಾದ ದಿಡೀರ್ ಬದಲಾವಣೆ ಕಂಡು ನಾನು ಕಂಗಾಲಾಗಿ ಹೋದೆ. ನನ್ನ ಮಾತನಾಡಿಸಲು ಹಿಂಜರಿಯುವಷ್ಟು ನಾನು ದೃಷ್ಟನಾದೆ. ನನ್ನೊಡನೆ ಅವರ ಮಕ್ಕಳನ್ನು ಆಡಲು ಹೋಗಬಾರದು, ಅವನಿಗೆ ಮಾಡುವುದಕ್ಕೆ ಕೆಲಸವಿಲ್ಲ, ನೀವು ಅವನ ರೀತಿ ಗ್ಯಾರೇಜ್ ಪಾಲಾಗುತ್ತೀರಿ, ಎಂದು ಅವರ ಮಕ್ಕಳಿಗೆ ಹಿತವಚನ ಭೋಧಿಸಿದರು. ಇದೇ ಸಮಯಕ್ಕೆ ನನ್ನ ಅಪ್ಪ, ನನ್ನ ಬಗ್ಗೆ ಇದ್ದ ಎಲ್ಲ ಆಸೆಗಳನ್ನು ಗಾಳಿಗೆ ತೂರಿ ಅವನು ಮನೆಗೆ ಬರುವ ಅವಶ್ಯಕತೆಯಿಲ್ಲವೆಂದು ನನ್ನ ಅಮ್ಮನಿಗೆ ಹೇಳಿದ್ದರು. ನಾನು ಆಗ ಅಜ್ಜಿ ಮನೆಯಲ್ಲಿದ್ದೆ, ಗ್ಯಾರೇಜ್ ಕೃಷ್ಣ ನನ್ನ ಆತ್ಮೀಯ, ಅವನಿಲ್ಲದೆ ಇದ್ದರೆ ನಾನು ನನ್ನ ಜೀವನದ ಅಂತಿಮ ಕ್ಷಣಗಳನ್ನು ಎಂದೋ ಅನುಭವಿಸಿತಿದ್ದೆ ಎನಿಸುತ್ತದೆ. ಅಮ್ಮ ನನ್ನನ್ನು ನೋಡಲು ಬಂದಾಗ ಅವಳ ಕಣ್ಣಲ್ಲಿದ್ದ ನೀರನ್ನು ನೋಡಿ, ಹೇಳಿದೆ, ಇಂದು ಅತ್ತರೇ ಏನು ಬರುವುದಿಲ್ಲ, ಇಂಗ್ಲೀಷ್ ಮೀಡಿಯಮ್ ಬೇಡವೆಂದರೂ ಸೇರಿಸಿದ್ದು ನಿಮ್ಮ ಪತಿದೇವರು ತಾನೇ, ಎಂದು ನನ್ನನ್ನು ನಾನು ಸಮರ್ಥಿಸಲೆತ್ನಿಸಿದೆ. ಆದರೂ ಯಾವುದೊ ಪಾಪ ಪ್ರಜ್ನೆ ನನ್ನನ್ನಾವರಿಸಿತು. ನಾನು ಮಾಡಿದು ತಪ್ಪೆನ್ನುವುದು ನನಗೆ ತಿಳಿದಿತ್ತು. ಇದು ನನ್ನ ತಂದೆ ತಾಯಿಗೆ ಮಾಡಿದ ಮೋಸವಲ್ಲ, ನನ್ನಿಂದ ನನಗೆ ಬಗೆದುಕೊಂಡ ದ್ರೋಹವೆಂಬುದರಲ್ಲಿ ಅನುಮಾನವೇ ಇರಲಿಲ್ಲ. ಮನುಷ್ಯ ಎಷ್ಟೇ ಅಧೀನನಾದರೂ ಅವನು ಅಷ್ಟು ಸುಲಭಕ್ಕೆ ತಾನಿರುವ ಸ್ಥಿತಿಯನ್ನು ಸ್ವೀಕರಿಸಲು ಸಿದ್ದವಿರುವುದಿಲ್ಲ. ಇದು ಅವನಿಗೆ ತಿಳಿಯದೇ ಮಾಡುತಿದ್ದಾನೆಂಬುದನ್ನು ನಾನು ಸುತರಾಂ ಒಪ್ಪುವುದಿಲ್ಲ. ಇದು ಅವನ ಉಡಾಫೆತನ ಮತ್ತು ಬೇಜವಬ್ದಾರಿತನವಷ್ಟೆ. ಪ್ರತಿಯೊಬ್ಬ ಮನುಷ್ಯನು ತನ್ನ ಇಂಚಿಂಚೂ ಬದಲಾವಣೆಯನ್ನು ಗಮನಿಸುತ್ತಲೇ ಇರುತ್ತಾನೆ. ಅದು ಪೂರಕವಾದಾಗ ಮಾತ್ರ ಅದನ್ನು ಬಹಿರಂಗಪಡಿಸುತ್ತಾನೆ, ಅದು ಮಾರಕವೇನಿಸಿದರೆ ಅವನೆಂದು ಅದರ ತಂಟೆಗೆ ಹೋಗುವುದಿಲ್ಲ. ಹೋಗುವುದಿರಲಿ ಅದನ್ನು ಪರಿಗಣಿಸುವುದೂ ಇಲ್ಲ.ಆ ದಿನ ಅಮ್ಮನನ್ನು ಕಂಡು ಹೊರಬರುವಾಗ ನನ್ನ ಕಣ್ಣುಗಳು ತುಂಬಿ ಬಂದರೂ, ನಾನು ಅದನ್ನು ತೋರಿಸುವ ಸ್ಥಿತಿಯಲ್ಲಿರಲಿಲ್ಲ. ಈ ಸಮಾಜ ಗಂಡು ಎನ್ನುವ ಪ್ರಾಣಿಯನ್ನು ಒಂದು ಕಲ್ಲಿನಂತೆಯೆ ಬಿಂಬಿಸಿದೆ. ನೀನು ಗಂಡಸು ಅಳಬಾರದು, ನಿನ್ನ ಕಣ್ಣಲ್ಲಿ ಅಳು ಬರಬಾರದು, ನೀನು ಹುಟ್ಟಿರುವುದು ಆಳುವುದಕ್ಕೆ ಅಳುವುದಕ್ಕಲ್ಲ, ಹೀಗೆ ಹತ್ತು ಹಲವು ಅಮುಚಿತ ಸಲಹೆಗಳನ್ನು ಬಾಲ್ಯದಿಂದಲೂ ನಮ್ಮಲ್ಲಿ ಬಿತ್ತಿರಿತ್ತಾರೆ. ಈ ಬೆಳವಣಿಗೆ ನಮ್ಮ ಭಾವನೆಗಳ ಮೇಲೆ ಅದೆಷ್ಟರ ಮಟ್ಟಿಗೆ ಸವಾರಿ ಮಾಡುತ್ತದೆಂದರೆ ನಾವು ನಮ್ಮ ಭಾವನೆಗಳನ್ನು ಬಂಧಿಸಿಡಬೇಕು ಅದನ್ನು ಎಂದು ವ್ಯಕ್ತಪಡಿಸಲೇಬಾರದೆಂಬ ತಪ್ಪು ಕಲ್ಪನೆಯನ್ನು ಸೃಷ್ಟಿಸಿಬಿಡುತ್ತದೆ. ಅಳು ಮನುಷ್ಯನ ಭಾವನೆಗಳನ್ನು ವ್ಯಕ್ತಪಡಿಸುವ ಒಂದು ಮಾರ್ಗವೆಂಬುದನ್ನು ನಾಗರೀಕ ಸಮಾಜ ಮರೆತು ಬಹಳ ದಿನಗಳೇ ಕಳೆದಿವೆ. ಈ ನಿಟ್ಟಿನಲ್ಲಿ ಹುಡುಗಿಯರು ಅದೃಷ್ಟವಂತರೂ ಅವರ ಭಾವನೆಗಳನ್ನು ವ್ಯಕ್ತಪಡಿಸಲು ತಮ್ಮ ಕಣ್ಣೀರನ್ನು ಹರಿಸಬಹುದು, ನಮಗೆ ಆ ಅವಕಾಶವಿಲ್ಲವೇ ಇಲ್ಲ. ಇತ್ತೀಚೆಗೆ ಶ್ರೀಕಾಂತ್ ಕ್ರೀಕೆಟ್ ಸ್ಟೇಡಿಯಂ ನಲ್ಲಿ ಅತ್ತಾಗಲೂ ಕೆಲವರು ಇದನ್ನೇ ಹೇಳಿದ್ದರು.ಗಂಡಸಾಗಿ ಹೆಂಗಸಿನಂತೆ ಅಳುವುದಾ! ಮೊದಲು ಮನುಷ್ಯ ನಂತರ ಲಿಂಗಬೇಧವೆಂಬುದನ್ನು ನಮ್ಮ ಜನತೆ ಒಪ್ಪಿಕೊಳ್ಳಲು ಸಿದ್ದವಿಲ್ಲ. ಹೆಣ್ಣು ಗಂಡು ಅನ್ನೋ ಬೇಧಭಾವವನ್ನು ಮೆರೆಸಿ ಬಾಳುವುದರಲ್ಲಿ ಹಲವು ಮಹಿಳಾ ಮಣೀಯರು ಸಾಧನೆಯನ್ನು ಮೆರೆದಿದ್ದಾರೆ. ಹೀಗೆ ಎಲ್ಲಾ ವಿಷಯಗಳಲ್ಲಿಯೂ ಗಂಡಸು, ಹೆಂಗಸು ಎಂದು ವಿಂಗಡಣೆ ಮಾಡಿ, ಪ್ರತಿ ಸಂಸಾರದಲ್ಲಿಯೂ ಗಲಭೆಯಾಗುವ ಮಟ್ಟಕ್ಕೆ ಮಾಡಿ ಕುಳಿತ್ತಿದ್ದಾರೆ. ಇಂದೂ ಇದು ಯಾವ ಮಟ್ಟಕ್ಕೆ ಬೆಳೆದಿದೆಯೆಂದರೇ ಸುಖವಾಗಿದ್ದ ಸಂಸಾರಗಳು, ಸ್ವಾಭಿಮಾನದ ಹೆಸರಲ್ಲಿ, ಸ್ತ್ರೀ ಧೋರಣೆಯ ಹೆಸರಲ್ಲಿ ಬಿರುಕನ್ನುಂಟುಮಾಡಿವೆ. ಪ್ರಾಣಿಗಳ ಕಣ್ಣಲ್ಲೇ ಕಣ್ಣೀರು ಬರುವಾಗ ನಮ್ಮ ಕಣ್ಣಲ್ಲಿ ಕಣ್ಣೀರು ಬರದ ಮಟ್ಟಕ್ಕೆ ನಮ್ಮ ಮೇಲೆ ನಿಯಂತ್ರಣ ಮಾಡುವುದನ್ನ ಕಂಡರೇ ನನಗೆ ಮೈ ಬಿಸಿಯಾಗುತ್ತದೆ. ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದನ್ನು ತಡೆಯುವುದು, ಹೀಗೆ ನಗಬೇಕು, ಇಷ್ಟೇ ನಗಬೇಕು, ಹೀಗೆ ಪ್ರತಿಯೊಂದಕ್ಕು ಪರಿಮಿತಿ ಇಟ್ಟಿರುವ ಈ ವ್ಯವಸ್ಥೆಯನ್ನು ಕಂಡು ಅಳಲಾರದೆ ನಗಲಾರದೆ ಚಿಂತಿಸುತ್ತೆನೆ. ಇವರು ಆಧುನೀಕರಣದ ಹೆಸರಲ್ಲಿ, ಎಲ್ಲದಕ್ಕೂ ಮಿತಿ ಹಾಕಿ ಬೇಡದೇ ಇರುವುದನ್ನು ಹೆಚ್ಚಿಸಿ ಕುಣಿಯುತ್ತಿರುವುದು ಏಕೆಂಬುದು ನನಗೆ ತಿಳಿದಿಲ್ಲ.

ಅಮ್ಮನ ಕಂಡು ಬಂದ ನಂತರ ಕೃಷ್ಣ ಹೇಳಿದ, "ಯಾಕೋ ಬಿಡು ಮಾರಾಯಾ? ಚಿಂತೆಯಾಕೆ ಮಾಡುತ್ತಿಯಾ? ಈಗ ಚಿಂತಿಸಿದರೆ ಏನು ಬರುತ್ತೆ? ಮೊದಲೇ ಇದರ ಬಗ್ಗೆ ಚಿಂತಿಸಿದರೆ ಪಾಸಾಗುತ್ತಿದ್ದೆ, ಈಗ ಚಿಂತಿಸಿ ಏನು ಬರುವುದಿಲ್ಲ. ಅದು ಸರಿಯೇ ಎನಿಸಿತು. ಇದಾದ ಮೇಲೆ ನನ್ನ ಸಂಬಂಧಿಕರಲ್ಲಿ, ನನ್ನ ಅಪ್ಪನಲ್ಲಿ ಉಂಟಾದ ಬದಲಾವಣೆಯಿಂದಾಗಿ, ನನ್ನ ಹುಟ್ಟೂರಿಗೆ ಮುಖ ತೋರಿಸುವ ಧೈರ್ಯ ನನ್ನಿಂದ ಬರಲಿಲ್ಲ. ಅದು ಅಂಜಿಕೆಯೋ, ನಾಚಿಕೆಯೋ, ಅಧೈರ್ಯವೋ, ಇಂದಿಗೂ ತಿಳಿದಿಲ್ಲ. ಆದರೇ, ಸತತ ಹತ್ತು ತಿಂಗಳುಗಳು ನಾನು ನನ್ನ ಸರ್ವಕುಟುಂಬದಿಂದ, ಸಂಬಂಧಿಕರಿಂದ ಹೊರಗಿದ್ದೆ.ಈಗಲೂ ಅವರ ಬಳಿಗೆ ಹೋಗುವುದಿಲ್ಲ ಅದು ಬೇರೆ ವಿಷಯ. ಆದರೇ ಅವರೇ ನನ್ನೆಡೆಗೆ ಬರುತ್ತಿರುವುದು ನನಗೆ ಒಂದು ಬಗೆಯ ತಾತ್ಸಾರ ಮೂಡಿಸುತ್ತದೆ.ಹಳ್ಳಿಯ ವಾತಾವರಣದಲ್ಲಿ ಬಡಕುಟುಂಬದಿಂದ ಬೆಳೆದು, ೭೦ರ ದಶಕದಲ್ಲೆ ಪದವೀಧರನಾಗಿದ್ದ ನನ್ನ ತಂದೆಯ ಮುಂದೆ ನಿಲ್ಲಲು ನನಗೆ ಧೈರ್ಯ ಬರಲಿಲ್ಲ. ಆ ಮನೆ, ಆ ಊರು ನನ್ನಿಂದ ದೂರವೇ ಉಳಿದಿತ್ತು. ಜಗತ್ತೆಲ್ಲ ಕನಸಿನ ಸೋಗಿನಲ್ಲಿ ಮಲಗಿರುವಾಗ, ನಡು ರಾತ್ರಿಯಲ್ಲಿ, ನಾನು ನನ್ನ ಅಂತರಾಳದಲ್ಲಿ ಕುದಿಯುತ್ತಿದ್ದ ಜ್ವಾಲಮುಖಿಯನ್ನು ನಂದಿಸಲು ಯತ್ನಿಸಿ ಕೊರಗಿ ಕೊರಗಿ ಸೊರಗುತ್ತಿದ್ದೆ. ಈ ಅವಮಾನ, ಅಪಮಾನ, ಇವೆಲ್ಲಾ ನಾನೆ ತಂದುಕೊಂಡವದಾದರೂ, ಕೇವಲ ಒಂದು ಸೋಲಿಗೆ, ಒಂದು ತಪ್ಪಿಗೆ, ಈ ಜಗತ್ತಿಗೆ ನಾನು ಬೇಡದವನಾದೆನೆಂದರೆ! ಇದೆಂತ ಜಗತ್ತು? ಇಲ್ಲಿ ಓಡುವ ಕುದುರೆಗೆ ಮಾತ್ರ ಬೆಲೆಯೆನಿಸುತ್ತದೆ. ಹದಿನಾರು ವರ್ಷ ಹೊಗಳಿ, ಬೆಳೆಸಿದ ಜನ, ಒಮ್ಮೆ ಎಡವಿದ ಮಾತ್ರಕ್ಕೆ ನನ್ನನ್ನು ಬದಿಗೆ ತಳ್ಳಿ ಮುನ್ನುಗ್ಗುತ್ತಿರುವುದನ್ನು ಕಂಡು ಈ ನಾಗರೀಕ ಜನತೆಯ ಮೇಲೆ ನನಗೆ ಅಸಹ್ಯ ಹುಟ್ಟಿಸತೊಡಗಿತು. ಮನುಷ್ಯ ಸೋತು, ಸೋತು, ಸೊರಗಿ ಇನ್ನೇನು ಜೀವನದ ಕೊನೆಯ ಕ್ಷಣಗಳಲ್ಲಿದ್ದೆನೆಂದು ಎನಿಸಿದಾಗ, ತನ್ನೊಳಗೆ ತನಗರಿಯದ ಆಶಾಕಿರಣ ಮೂಡತ್ತದೆ. ಅದು ಗೆದ್ದೇ ಗೆಲ್ಲುತೇನೆಂಬ ಭರವಸೆಯಲ್ಲ, ಗೆಲ್ಲದಿದ್ದರೆ ನಿನ್ನ ಬದುಕಿಲ್ಲ ನೀನು ಸಾಯುತ್ತೀಯ ಎಂಬ ಎಚ್ಚರಿಕೆ.ಅಂದು ನನಗೆ ಆದದ್ದು ಅದೇ. ಗೆಲ್ಲಲೇ ಬೇಕು, ನಿನಗೆ ಓದು, ನಿನ್ನ ಗುರುತು ಈ ಸಮಾಜದಲ್ಲಿ ಉಳಿಸಲಿಲ್ಲವೆಂದರೆ ಈ ಜಗತ್ತು ನಿನಗೆಂದೂ ಚಿಂತಿಸುವುದಿಲ್ಲ. ೩೭ ಮಿಲ್ಲಿಯನ್ ವರ್ಷಗಳ ಈ ಮಾನವ ಸಂತಾನದಲ್ಲಿ ನೀನು ಏನೇನು ಅಲ್ಲಾ, ತಿಳಿದಿಕೊ ನೀನು ಸತ್ತರೂ ಬದುಕಿದರೂ ಇಲ್ಲಿನ ಜೀವನ ನಿರಂತರ. ನೀನು ಬದುಕುತ್ತಿರುವುದು ನಿನಗಾಗಿ, ನಿನ್ನಿಂದ, ನಿನಗೋಸ್ಕರೆ. ಈ ಮಾತುಗಳು ನನ್ನಲ್ಲಿ ಮೂಡಿ ನಾನು ಗೆಲ್ಲಲೇಬೇಕು, ಅಂದುಕೊಂಡಿದ್ದನ್ನು ಸಾಧಿಸಲೇಬೇಕು. ಹೊರಟೆ ಅಂದು ಹೊರಟ ನನ್ನ ಸವಾರಿ ಇಂದಿಗೂ ನಿಂತಿಲ್ಲ.

ಆ ನಡುವೆ, ನಾನು ಗ್ಯಾರೆಜ್ ಮಾಡಬೇಕು, ವಾಹನಗಳನ್ನು ತೆಗೆಯಬೇಕೆಂದು ಬಯಸಿದ್ದೆ. ಅದರ ತಳಬುಡವೂ ತಿಳಿಯದೇ, ಅದನ್ನು ಅರ್ಧಕ್ಕೆ ಬಿಟ್ಟು, ಕೃಷಿ ಚಟುವಟಿಕೆಗೆ ಹೋದೆ. ಅದು ಯಾಕೋ ನನಗೆ ಸರಿ ಹೊಂದಲಿಲ್ಲ. ಅಂತೂ ಇಂತೂ ಪಿ.ಯು.ಸಿ. ಎಂಬ ಮಹಾಯುದ್ದದಲ್ಲಿ ಗೆದ್ದು ಬಂದೆ, ನನ್ನ ನಾಲ್ಕು ವಿಷಯಗಳು ಪಾಸಾಗಿದ್ದವು. ಅಂಕಗಳನ್ನು ಕೇಳಿ ಮೂರ್ಛೇ ಹೋಗುವುದು ಬೇಡ. ಆರ್ಟ್ಸ್ ತೆಗೆದುಕೊಂಡು, ಅಲ್ಲೇ ಓದುತ್ತಿನಿ ಎಂದು ಕೇಳಿದ್ದಕ್ಕೆ, ಅಪ್ಪ ಹೀನ ಮಾನವಾಗಿ ಬೈಯ್ದು ಮೈಸೂರಿಗೆ ಹೋಗಿ ಓದಿ ಹಾಳಾಗು ಎಂದರು. ಅವರಿಚ್ಚೆಯಂತೆಯೇ ಮೈಸೂರಿನ ಯುವರಾಜ ಕಾಲೇಜು ಸೇರಿದೆ, ಹಾಸ್ಟೆಲ್ ಕೂಡ ಸಿಕ್ಕಿತು. ಆದರೇ ಆ ಕಾಲೇಜು ಹುಡುಗರು ಮಾತ್ರ ನನಗೆ ಹಿಡಿಸಲಿಲ್ಲ. ನನಗೆ ಅವರು ತುಂಬಾ ಭಾಲೀಷರಂತೆ ಕಾಣುತಿದ್ದರು. ಅವರ ಮಕ್ಕಳಾಟದ ಜೋಕ್ ಗಳು ಅವರೇ ಮಾಡಿ ಅವರೇ ನಗುವಂತಿದ್ದವು. ಇವರ ಸಹವಾಸವೇ ಬೇಡವೆಂದು ರೂಮಿನಲ್ಲಿ ಓದತೊಡಗಿದೆ. ಸಹವಾಸವೆಂಬಂತೆ ನನಗೆ ಆಗ ಸಿಕ್ಕ ಕೆಲ ಸ್ನೇಹಿತರು ನನ್ನ ಮತಾಂಧತೆಯನ್ನು ಕಂಡು, ಮೊದಲು ಸ್ವಲ್ಪ ಓದಿ ತಿಳಿದಿಕೋ ಎಂದು ತಿಳಿಸಿದರು. ಅದನ್ನು ನಾನು ಬಹಳ ಗಂಭೀರವಾಗಿ ಪರಿಗಣಿಸಿ, ಓದತೊಡಗಿದೆ. ನನ್ನ ವಿಷಯಕ್ಕೆ ಸಂಭಂಧಪಟ್ಟದ್ದನ್ನು ಓದುವುದಕಿಂತ ಬರೀ ಧರ್ಮ, ಆಧ್ಯಾತ್ಮಿಕತೆ, ವೈಚಾರಿಕತೆಯ ಪುಸ್ತಕಗಳನ್ನು ಓದುವುದನ್ನು ಕಂಡ ನನ್ನ ಮಿತ್ರರೂ ಗಾಬರಿಯಾಗತೊಡಗಿದರು. ಸಂಜೆಯಲ್ಲಿ ಕುಡಿದು ಕುಣಿದಾಡುತಿದ್ದ ನನ್ನನ್ನು ಅವರೆಂದೂ ಗಂಭಿರವಾಗಿ ಪರಿಗಣಿಸಿರಲಿಲ್ಲ. ಇವನೊಬ್ಬ ಕುಡಿದು ಕುಣಿದು ಮಲಗಲು ಬಂದಿರುವವನು, ಇವನ ಸ್ನೇಹವೇ ಒಲಿತಲ್ಲವೆಂಬ ತೀರ್ಮಾನಗಳು ಅವರಲ್ಲಿದ್ದವು. ಸಂಜೆಯಾದರೇ ಕುಡಿಯಲು ಅಲೆಯುತ್ತಿದ್ದ ನನ್ನನ್ನು ಕುಡಿದ ಮೇಲೆ ನನ್ನ ಬಾಯಿಂದ ಬರುವ ಮಾತುಗಳನ್ನು ಕೇಳಲು ನನ್ನನ್ನು ಕರೆದು ಮಜ ತೆಗೆದುಕೊಳ್ಳತೊಡಗಿದ್ದರು. ಇದು ನನಗೆ ತಿಳಿದಿದ್ದರೂ ಸ್ನೇಹದ ಹೆಸರಿನಲ್ಲಿ ಈ ಬಗೆಯ ಆನಂದ ಪಡುವ ಅವರ ಮೇಲೆ ನನಗೆ ಕನಿಕರವಿತ್ತು. ನನ್ನೊಳಗೆ ಆಗುತ್ತಿದ್ದ ಬದಲಾವಣೆ ಯಾರಿಗೂ ಕಾಣುತ್ತಿರಲಿಲ್ಲ. ನಿಜ ಹೇಳಬೇಕೆಂದರೆ,ನಮ್ಮ ಕ್ಲಾಸಿನಲ್ಲಿದ್ದ ಅನೇಕ ಹುಡುಗ ಹುಡುಗಿಯರಿಗೆ ನನ್ನ ಹೆಸರು ಹಾಜರಿ ಕರೆಯುವಾಗ ತಿಳಿದಿತ್ತೆ ವಿನಾಃ, ನಾನೇ ಅದು ಎಂದು ತಿಳಿದಿರಲಿಲ್ಲ ಕೊನೆಗೂ ತಿಳಿಯಲಿಲ್ಲ. ಆದರೇ ನಾಗಪ್ಪ ಅಪಹರಣ, ಕಾವೇರಿ ಬಂದ್, ಕಾಲೇಜು ಬಂದ್ ದಿನಗಳಲ್ಲಿ ನನ್ನ ಹೆಸರು ಕಾಲೇಜು ಆವರಣದಲ್ಲಿ ಮಿಂಚುತ್ತಿತ್ತು. ಯಾರ್ಯಾರಿಗೆ ಲ್ಯಾಬ್ ಇದೆ ಅವರೆಲ್ಲ ಬಂದು ಮಗ ಪ್ಲೀಸ್ ಇವತ್ತು ರೆಕಾರ್ಡ್ ಬರೆದಿಲ್ಲ ಕ್ಲಾಸ್ ಬಿಡಿಸಿ ಎಂದು ಗೊಗರೆಯುತಿದ್ದರು. ಅಂತೂ ಇಂತೂ ನನ್ನ ಬಗ್ಗೆ ಯಾರಲ್ಲೂ ಒಳ್ಳೆಯ ಅಭಿಪ್ರಾಯವಿರಲಿಲ್ಲ, ನನಗೂ ಇರಲಿಲ್ಲವೆನೋ! ಮೊದಲ ಬಾರಿ ಫಲಿತಾಂಶ ಬಂದಾಗ ಎಲ್ಲರೂ ಬೆಚ್ಚಿ ಬಿದ್ದಿದ್ದರು. ಕ್ಲಾಸಿನಲ್ಲಿ ಎಂದೂ ಕೂರದ, ಎಂದೂ ಓದದ ಇವನು ಮೊದಲ ದರ್ಜೆಯಲ್ಲಿ ಪಾಸಾಗಿದ್ದಾನೆ! ನಾವು ದಿನ ನಿತ್ಯ ೧೦೦% ಹಾಜರಾತಿಯಿದ್ದವರೂ ಫೇಲ್! ಮೊದಲ ಬಾರಿಗೆ ಅವರ ಮಾತುಗಳು ನಾನು ಪಾಸಾಗಿದ್ದು ಆಶ್ಚರ್ಯ ಮತ್ತು ಅದೃಷ್ಟವೆಂದು ಕಂಡವು. ನನಗೂ ಅದು ಇರಬಹುದೆನಿಸಿತು. ಆದರೇ ಇದು ಎರಡನೇ ವರ್ಷ ಮತ್ತು ಮೂರನೇ ವರ್ಷ ಪುನರಾವರ್ತಿಯಾದಾಗ ಅದೃಷ್ಟವೊಂದೆ ಈ ಮಟ್ಟಕ್ಕೆ ಬರಲು ಸಾಧ್ಯವಿಲ್ಲವೆಂಬುದು ನನ್ನ ಜೊತೆಗ್ ಕೆಲವು ಸ್ನೇಹಿತರಿಗೂ ತಿಳಿಯಿತು.

ನಾನು ಅವರು ಎಣಿಸಿದಂತೆ ಸಂಜೆ ಕುಡಿಯುತಿದ್ದದ್ದು ನಿಜವೇ ಸರಿ, ಆದರೇ ಅವರೆಲ್ಲ ಮಲಗಿ ಕನಸಿನಲ್ಲಿರುವಾಗ ನಡುರಾತ್ರಿಯಲ್ಲಿ, ಕೆಲವೊಮ್ಮೆ ರಾತ್ರಿಯಿಡಿ ಓದುತ್ತಿದ್ದದ್ದು ಯಾರಿಗು ತಿಳಿದಿಲ್ಲ. ನನ್ನ ರೂಂ ಮೇಟ್ ಒಮ್ಮೊಮ್ಮೆ ಹೇಳುತಿದ್ದ, ಮಗಾ ನೀನು ಹಗಲು ಧರ್ಮ, ಕಥೆ ಕಾದಂಬರಿ ಓದುತ್ತಿಯಾ ರಾತ್ರಿ ಇವೆಲ್ಲಾ ಓದುತ್ತೀಯಾ ಹುಚ್ಚು ಹಿಡಿದು ಆಸ್ಪತ್ರೆ ಪಾಲಾದರೆ ನಿಮ್ಮನೆಗೆ ಏನು ಹೇಳುವುದು? ನಾನು ನಕ್ಕು ಹೇಳ್ತಾ ಇದ್ದೆ, ಈಗ ನಾನು ಹುಚ್ಚ ಅಲ್ಲ ಅಂತಾನಾ ನಿನ್ನ ಮಾತು? ಮಿತ್ರರೇ, ನಾನು ನನ್ನ ಕಾಲೇಜು ಜೀವನದಲ್ಲಿ ನಿದ್ದೆಗೆಟ್ಟ ಹಲವಾರು ರಾತ್ರಿಗಳನ್ನು ಕಳೆದಿದ್ದೇನೆ. ಅದೆಂದೂ ನಾನು ಮಾಡುತ್ತಿರುವುದನ್ನು ಓದುತ್ತಿರುವುದನ್ನು ಹೇಳಲಿಲ್ಲ, ನನಗೆ ನನ್ನ ಜೀವನದ ಬಗ್ಗೆ ಇದ್ದಷ್ಟೂ ಕಾಳಜಿ ಬೆರೆಯವರ ಮೇಲೆ ಇರಲಿಲ್ಲ. ನಾನು ಸರಿಯಾಗದೆ, ಲೋಕವನ್ನು ಉದ್ದಾರ ಮಾಡುವುದು ಸಾಧ್ಯವಿಲ್ಲವೆಂಬುದು ನನ್ನ ನಂಬಿಕೆಯಿತ್ತು. ನಾನು Self motivation ನಲ್ಲಿ ನಂಬಿಕೆಯಿಟ್ಟು ಬದುಕುತ್ತಿರುವವನು. ಬೇರೆಯವರ ಜೀವನ ರೂಪಿಸುತ್ತೆನೆಂದು ಹೊರಡುವ ಯಾರನ್ನು ನಾನು ನಂಬುವುದಿಲ್ಲ. ನನ್ನ ಜೊತೆ ಮೂರು ವರ್ಷವಿದ್ದು ನನ್ನು ನೋಡುತಿದ್ದ ನನ್ನ ಸ್ನೇಹಿತ ಮೂರು ವರ್ಷದಲ್ಲಿ ಮೂರು subject ಪಾಸ್ ಮಾಡಿಕೊಳ್ಳಲಿಲ್ಲ. ಇದು ಅದೃಷ್ಟವೋ!

ಅಲ್ಲಿಂದ ಬಂದು ಬೆಂಗಳೂರು ವಿ.ವಿ.ಯಲ್ಲಿ ಸೇರಿದೆ, ಹಳ್ಳಿಯಿಂದ ಬಂದ ನನ್ನ ಮಾತುಗಳು ಪೇಟೆ ಹುಡುಗಿಯರೇ ಹೆಚ್ಚಿದ್ದ ಕ್ಲಾಸಿಗೆ ಮುಜುಗರ ತಂದಿಟ್ಟಿತು. ಭಾಷೆಯಿದ್ದರೆ ದೇಶವನ್ನೆ ಆಳಬಹುದೆಂಬುದು ಅವರ ಅಭಿಪ್ರಾಯವಾಗಿತ್ತು. ಯಾರೊಬ್ಬರೂ ಕನ್ನಡದಲ್ಲಿ ಮಾತನಾಡಲೂ ಹಿಂಜರಿಯುತಿದ್ದರು. ನನ್ನೊಡನೆ ಕನ್ನಡದಲ್ಲೆ ಮಾತಾಡಬೇಕೆಂದು ತೀರ್ಮಾನಿಸಿ ಕಡೆಗೆ ಒಪ್ಪಿದರು. ನಾನು ಹೆಚ್ಚು ಸಮಯ ಕ್ಲಾಸಿನಲ್ಲಿ ಕಳೆಯದೇ, ನಮ್ಮ ವಿಷಯಕ್ಕೆ ಸಂಭಂಧಪಡದ ಪುಸ್ತಕಗಳನ್ನು ಓದುತಿದ್ದದ್ದು ಅವರಿಗೆ ಇರಿಸುಮುರಿಸು ಮಾಡಿತ್ತು. ನಾನು ಸುಮ್ಮನೆ ಕಾಲಹರಣ ಮಾಡುವುದಕ್ಕೆಂದು ಸೇರಿದ್ದೇನೆಂದು ನನ್ನೆದುರೇ ಕೆಲವರು ಹೇಳಿದ್ದರು. ವಿಪರ್ಯಾಸವೆಂದರೆ, ಅಂದು ಹೇಳಿದ್ದ ಮಹಮಣಿಯರು ಇಂದು ನಮ್ಮ ಕ್ಷೇತ್ರದಲ್ಲಿಲ್ಲದೇ ಬೇರೆ ರಂಗದಲ್ಲಿದ್ದಾರೆ. ನಾನು ಮೊದಲ ಸೆಮಿಸ್ಟರ್ ನಲ್ಲಿ ಪಾಸಾದಾಗಳು ಅಷ್ಟೇ, ಇವನು ಬಕೆಟ್ ಹಿಡಿದು ಎಲ್ಲರಿಗೂ ಗಿಲೀಟ್ ಮಾಡಿ ಮಾರ್ಕ್ಸ್ ತೆಗೆದಿದ್ದಾನೆಂದು ಹೇಳಿದ್ದರು. ಅದು ನಾಲ್ಕು ಸೆಮಿಸ್ಟರ್ ನಲ್ಲಿ ಮುಂದುವರೆದು, ಕೊನೆಗೆ ನಮ್ಮ ಉಪನ್ಯಾಸಕ ವರ್ಗದವರನ್ನು ಹೀನಾಮಾನವಾಗಿ ಬೈಯ್ಯುವಾಗ ಇವರೆಲ್ಲ ನನ್ನನ್ನು ಕಂಡು, ಇವನು ಹುಚ್ಚನೇ ಸರಿ ಅವರು ಇವನನ್ನ ಫೇಲ್ ಮಾಡಿದರೇ ಏನು ಮಾಡ್ತಾನೆ ಅಂತ ಕೇಳಿದ್ದರು. ಅವರಿಗಿದ್ದ ಆ ಭಯ ನನಗಿರಲಿಲ್ಲ, ಆದ್ದರಿಂದಲೇ ವಿಭಾಗದಲ್ಲಿದ್ದ ಹಲವಾರು ಕೊರತೆಗಳ ಬಗ್ಗೆ, ಕೊಳೆತ ವ್ಯವಸ್ಥೆಯ ಬಗ್ಗೆ ದ್ವನಿಯೆತ್ತ ತೊಡಗಿದೆ. ನಮ್ಮ ಸಮಾಜ ವ್ಯವಸ್ಥೆಯೇ ಹಾಗಿರುವಾಗ ನನಗೆ ಅಲ್ಲಿ ಅಷ್ಟು ಸಹಕಾರ ಸಿಗಲಿಲ್ಲ. ಒಂದು ನನ್ನ ವಿರುದ್ದ ಉಪನ್ಯಾಸಕರಿಗೆ ಚಾಡಿ ಹೇಳಿ ಮೆಚ್ಚುಗೆ ಪಡೆದವರಿದ್ದರು, ಇನ್ನೊಂದು ನಾನೆಲ್ಲಿ ಪ್ರಖ್ಯಾತಿಯಾಗಿ ಅವರಿಗೆಲ್ಲಿ ತೊಂದರೆಯಾಯಿತೆಂಬ ಮಾನಸಿಕ ವೇದನೆಯವರಿದ್ದರು. ಅಂತೂ ಹನ್ನೆರಡು ವರ್ಷದ ಇತಿಹಾಸದಲ್ಲಿ ಮೊದಲ ಬಾರಿಗೆ ಕೊಳೆತ ವ್ಯವಸ್ಥೆಯ ವಿರುದ್ದ ದ್ವನಿಯೆತ್ತಿದವನಾಗಿದ್ದೆ. ಅದರ ಫಲಿತಾಂಸವಾಗಿ ನಮಗೆ ಅಂದು ಹಲವಾರು ಉಪಯೊಗಗಳು ಸಿಕ್ಕವು. ಆದರೆ, ಅದು ನನ್ನೊಬ್ಬನಿಂದ ಶುರುವಾಗಿ ನನ್ನೊಂದಿಗೆ ಕೊನೆಯಾದದ್ದು ವಿಪರ್ಯಾಸ.

ನಾನು ಕಥೆ ಕಾದಂಬರಿ ಓದುತ್ತ ಕಾಲ ಕಳೆಯುತ್ತಿದ್ದೆ ಎಂದೂ ಹೇಳಿದ ನನ್ನ ಮಾಹಾನ್ ಗೆಳೆಯರೂ ನಾನು ಹಾಸ್ಟೇಲ್ ನಲ್ಲಿ ಕಳೆಯುತಿದ್ದ ಜೀವನವನ್ನು ಕಾಣಲೇ ಇಲ್ಲ. ತಿಳಿಯುವ ಗೋಜಿಗೂ ಹೋಗಲಿಲ್ಲ. ಬಿಡುವಿನ ವೇಳೆಯಲ್ಲಿ ಕೆಲಸಕ್ಕೆ ಹೋದದ್ದು, ರೂಪಾಯಿ ಉಳಿಸಲು ಕೀಲೋ ಮೀಟರ್ ನಡೆದದ್ದು ಇವೆಲ್ಲಾ ಅವರ ನೆನಪಿಗೆ ತಾಕುವುದೇ ಇಲ್ಲ. ನಂತರ ಪಿ.ಎಚ್.ಡಿ ಎಂದೂ ಮೈಸೂರು ವಿ.ವಿ.ಗೆ ಕಾಲಿಟ್ಟಾಗಲೂ ಅಷ್ಟೇ ರಾಜಕೀಯದಿಂದ ಸೀಟು ಸಿಕ್ಕಿದೆಯೆಂದು ಮೂಗು ಮುರಿದವರಿದ್ದರು. ಇಂದು ಲಂಕ ಪ್ರವಾಸ ಒಂದು ರೂಪಾಯಿ ಖರ್ಚಿಲ್ಲದೆ ಹೋಗುತ್ತಿರುವಾಗಲೂ ಇದು ಅದೃಷ್ಟ ರಾಜಕಾರಣದ ಹೆಸರು ಹೇಳಿರುವ ನಿಮಗೆ ನನ್ನ ಹಲವು ಪ್ರಶ್ನೆಗಳಿವೆ.

ಒಂದು ಕಾಲದಲ್ಲಿ ಓದು ಎಂಬುದು ಶತ್ರುವಿನ ಕೆಲಸವೆಂದು ಭಾವಿಸಿದ್ದ ನಾನು, ಇಂದು ಓದದೆ ಇದ್ದರೇ ನೀನು ಬದುಕುವುದಿಲ್ಲ ನಿನ್ನ ಬದುಕು ನಿಂತಿರುವುದು ನಿನ್ನ ಓದಿನ ಮೇಲೆ ಎಂಬ ತೀರ್ಮಾನಕ್ಕೆ ಬಂದಿದ್ದೆನೆ. ಇಂತಹ ಬದಲಾವಣೆಯನ್ನು ಒಪ್ಪಿಕೊಳ್ಳಲು ಹಲವು ಮಂದಿ ಸಿದ್ದರಿಲ್ಲ. ಈ ಭೂಮಿಯೂ ಕೂಡ ಬದಲಾಗುತ್ತಿರುತ್ತದೆ, ಅದನ್ನು ಅರಿಯದೇ ನಾವು ಎಷ್ಟೊಂದು ಬದಲಾದ, ಮುಂಚೆ ಹೀಗಿರಲಿಲ್ಲ, ಹಾಗಿರಲಿಲ್ಲವೆಂದು ಮೂಗು ಮುರಿಯುತ್ತೇವೆ. ಮಾನಸಿಕವಾಗಿ ಬದಲಾಗದೆ ಕೇವಲ ದೈಹಿಕವಾಗಿ ಬದಲಾದರೇ ಅದನ್ನು ಬದಲಾವಣೆಯೆಂದು ಹೇಗೆ ಕರೆಯುತ್ತಿರಿ? ಹುಟ್ಟಿನಿಂದ ಸಾಯುವ ತನಕವೂ ತಾನು ಬದಲಾಗದೇ ಹೀಗೆ ಇರುತ್ತೇನೆಂಬುವವರನ್ನು ತಾವು ಮಹಾನ್ ಎಂದು ಕರೆಯಬಹುದು ಆದರೆ ನನಗೆ ಅವನು ಮನುಷ್ಯನಂತೇ ಕೂಡ ಕಾಣುವುದಿಲ್ಲ. ಮನುಷ್ಯನೆಂದೊಡನೆ ಎಲ್ಲಾ ನ್ಯೂನ್ಯತೆಗಳು ಇರುತ್ತವೆ ಮತ್ತು ದಿನ ದಿನಕ್ಕೆ ಬದಲಾವಣೆ ಅನಿವಾರ್ಯವಾಗುತ್ತದೆ. ಮಾನವ ಪರಿಸರದಲ್ಲಾದ ಬದಲಾವಣೆಗೆ ಹೊಂದಿಕೊಳ್ಳಲು ಕನಿಷ್ಠ ಒಂದು ಮಿಲ್ಲಿಯನ್ ವರ್ಷ ಹಿಡಿಯುತ್ತದೆ ಅದೇ ಪರಿಸರಕ್ಕೆ ಇತರೆ ಜೀವಿಗಳು ಹೊಂದಿಕೊಳ್ಳಲು ಕೇವಲ ಒಂದು ವರ್ಷ ಸಾಕಾಗುತ್ತದೆ. ಒಂದನ್ನೆ ನಂಬಿ ಅದಕ್ಕೆ ಗಂಟುಹಾಕಿಕೊಂಡು ಜೀವನ ನಡೆಸುವುದು ನನಿಂದಾಗುವುದಿಲ್ಲ. ಇದನ್ನು ನನ್ನ ಹುಚ್ಚಾಟವೆಂದು ನೀವು ತೀರ್ಮಾನಿಸಿದರೆ ಅದು ನಿಮ್ಮ ವಿವೇಚನೆಗೆ ಬಿಟ್ಟದ್ದು. ನಾನು ಈ ಬಗೆಯ ಹಲವಾರು ಪ್ರಯೋಗಗಳನ್ನು ನನ್ನ ಮೇಲೆ ನಡೆಸುತ್ತಾ ಜೀವನ ನಡೆಸುತ್ತಿದ್ದೇನೆ.

ಒಂದು ಕಾಲದಲ್ಲಿ ಆರ್.ಎಸ್.ಎಸ್.ನೊಂದಿಗೆ ಸೇರಿ ಚಡ್ಡಿ ಹಾಕಿಕೊಂಡು ದಿನ ಬೆಳ್ಳಿಗ್ಗೆ ಪಥ ಚಲನೆ ನಡೆಸುತಿದ್ದೆವು. ಭಾರತವೆನ್ನಕೂಡದು ಹಿಂದೂಸ್ಥಾನ್ ಎನ್ನಬೇಕೆಂದು, ಮೇರಾ ಭಾರತ್ ಮಹಾನ್ ಘೋಷಣೆ ಕೂಗುತ್ತಿರುತ್ತಿದ್ದೆ. ದಿನ ಸಂಜೆ ದೇವಸ್ಥಾನದ ಅಂಗಳದಲ್ಲಿ ಕುಳಿತು ಕಾಲ ಕಳೆಯುತ್ತಿದ್ದವನು, ಕಾಲ ಕಳೆದಂತೆ ಅದನ್ನು ದಾಟಿ ಬಂದು ದೇವಸ್ಥಾನವೆಂದರೇ ಅಲರ್ಜಿಯೆಂಬ ಮಟ್ಟಕ್ಕೆ ಬಂದು ನಿಂತೆ. ಇದನ್ನು ನನ್ನ ಕೆಲವು ಮಿತ್ರರು, ಹೆಚ್ಚು ಓದಿದರ ಪರಿಣಾಮವೆಂದರು. ಇದಕ್ಕೆ ಒಂದು ಸೂಕ್ತ ಉದಾಹರಣೆ ನಿಮಗಿಲ್ಲಿ ಅವಶ್ಯಕತೆಯಿದೆ, ನಮ್ಮೂರಿನ ಪಕ್ಕದಲ್ಲಿ ರಾಮನಾಥಪುರವೆಂಬ ಊರಿದೆ. ಅಲ್ಲಿನ ಸುಬ್ರಹ್ಮಣ್ಯ ದೇವಸ್ಥಾನ ಬಹಳ ಪ್ರಸಿದ್ದಿ ಕೂಡ. ಪ್ರತಿ ವರ್ಷಕ್ಕೊಮ್ಮೆ, ಅಲ್ಲಿ ಷಸ್ಠಿಯಂದು ಜಾತ್ರೆ ಕೂಡ ನಡೆಯುತ್ತದೆ. ಇತ್ತೀಚೆಗೆ ಉದ್ಭವ ದೇವರುಗಳಿಗೆ ಬರವಿಲ್ಲ. ನಾನು ಚಿಕ್ಕಂದಿನಲ್ಲಿದ್ದಾಗ ಆ ಸುತ್ತಮುತ್ತಲಿನ ಪ್ರದೇಶಕ್ಕೆಲ್ಲ ಇದೊಂದೆ ಸುಬ್ರಹ್ಮಣ್ಯ ದೇವಸ್ಥಾನವಿತ್ತು. ಭಕ್ತರ ಸಂಖ್ಯೆ ಹೆಚ್ಚಾದ್ದರಿಂದ, ಕೂಡಿಗೆ, ಕುಶಾಲನಗರ ಹೀಗೆ ಹಲವಾರು ಕಡೆ ಉದ್ಬವ ಮೂರ್ತಿಗಳ ಉದಯವಾಗಿದೆ. ಅಂದು ಆ ದೇವಸ್ಥಾನಕ್ಕೆ ಅಮ್ಮನ ಜೊತೆ ಹೋಗಿದ್ದೆ, ಅಮ್ಮನಿಗೆ ಪೂಜೆ ಪುರಸ್ಕಾರಗಳಲ್ಲಿ ಬಹಳ ಶ್ರದ್ದೆ, ಇಂದಿಗೂ ಕಡಿಮೆಯೆಂದರೂ ವಾರಕ್ಕೆ ಮೂರು ದಿನ ಒಪ್ಪತ್ತು ಮಾಡುತ್ತಾಳೆ. ಮಗನಿಗೆ ಒಳ್ಳೆ ಬುದ್ದಿ ಕೊಡುವೆಂಬುದೇ ಅವಳ ಎಂದಿನ ಬೇಡಿಕೆ. ಆ ದೇವರು ಅವಳಿಂದ ದಿನನಿತ್ಯ ಅರ್ಜಿ ಸ್ವೀಕರಿಸುತಿದ್ದಾನೆಯೇ ಹೊರತು ಅದನ್ನು ಕಾರ್ಯರೂಪಕ್ಕೆ ತರುತ್ತಿಲ್ಲ, ತರಲು ನಾನು ಸಹಕರಿಸುತ್ತಲೂ ಇಲ್ಲ. ಆ ದಿನ ಅಲ್ಲಿ ಪೂಜ ಸಾಮಗ್ರಿಗಳನ್ನು ಹಿಡಿದು ಒಳನಡೆದೆ, ೫ ರೂಪಾಯಿ ಕೇಳಿದ ಪೂಜಾರಿ, ನನ್ನ ಬಳಿ ಚಿಲ್ಲರೆಯಿಲ್ಲ ಎಂದು ೫೦ ರೂಪಾಯಿ ಕೊಡಲು ಹೋದರೆ ದಯವಿಟ್ಟು ಚಿಲ್ಲರೆ ಕೊಟ್ಟು ಸಹಕರಿಸಿ ಎಂದು ನೇತಾಕಿದ್ದ ಬೋರ್ಡ್ ಕಣ್ಣಿಗೆ ಕಂಡಿತು. ಹೊರ ಬಂದು ಚಿಲ್ಲರೆ ಪಡೆದು ಬರುವ ತನಕ ಅವನು ನನ್ನ ತೆಂಗಿನ ಕಾಯಿ ಕಡೆಗೆ ಮುಖ ಹಾಕಿರಲಿಲ್ಲ. ಅಂದು ಅವನ ಜನ್ಮ ಜಾಲಾಡಬೇಕೆನಿಸಿದರೂ ಅಮ್ಮ ಇದ್ದುದ್ದರಿಂದ ಹೊರ ಬಂದೆ. ಇದಾದ ನಂತರ ನನ್ನ ಮನಸಲ್ಲಿ ನಮ್ಮ ದೇವಸ್ಥಾನ, ದೇವರು , ಆಚರಣೆ ಇವೆಲ್ಲಾ ಬೇರೆ ಬೇರೆ ರೂಪದಲ್ಲಿ ಕಂಡು ನನ್ನನ್ನು ದೇವಸ್ಥಾನದಿಂದ ಬಲು ದೂರಕ್ಕೆ ಕರೆದೊಯ್ದವು. ಇಂಥಹ ಬದಲಾವಣೆ ನಡೆದದ್ದು ಒಂದೆರಡು ದಿನಗಳಲ್ಲಿ ಅಲ್ಲ, ಅದಕ್ಕೆ ವರುಶಗಳು ಕಳೆದಿವೆ. ಇದನ್ನು ಒಪ್ಪಿಕೊಳ್ಳಲು ಸ್ವತಃ ನನ್ನ ತಂದೆ ತಾಯಿಗಳೇ ಸಿದ್ದರಿಲ್ಲ.

ಈ ಬಗೆಯ ಚಿಂತನೆಗಳಿಂದ, ವಾಸ್ತವಿಕತೆಯ ನಿಟ್ಟಿನಿಂದ ನೋಡಿ ನಾನು ಬದಲಾಗುತ್ತ ಬರುತ್ತಿರುವುದನ್ನು ಹಲವು ಬಗೆಗಳಿಂದ ನೋಡಿ ವರ್ಣಿಸುತ್ತಾರೆ. ಆದರೇ, ನನಗೆ ನನಗನಿಸಿದ ಮಾರ್ಗದಲ್ಲಿ ನಡೆಯುವುದೇ ಸರಿಯೆಂದು ಕಾಣುವುದರಿಂದ ಅವರ ಮಾತಿಗೆ ಸೊಪ್ಪು ಹಾಕಲು ಹೋಗಿಲ್ಲ. ನನ್ನ ಇಂದಿನ ಈ ಬದಲಾವಣೆಯನ್ನು ನೀವು ಅದೃಷ್ಟವೆನ್ನುವಿರೋ! ಆಶ್ಚರ್ಯವೆನ್ನುವಿರೋ ಅದು ನಿಮಗೆ ಬಿಟ್ಟದ್ದು!

17 August 2017

ಸ್ಮಾರ್ಟ್ ಕ್ಲಾಸ್ ಎಂಬ ಮಾಯೆಗೆ ಆಹುತಿಯಾಗಲೆತ್ನಿಸುತಿಹ ಶಿಕ್ಷಕ ಸಮೂಹ!!!


ಕಲಿಕೆಯನ್ನು ಸುಲಭ ಮಾಡುವುದಕ್ಕಾಗಿ ಸ್ಮಾರ್ಟ್ ಕ್ಲಾಸ್‍ಗಳ ಹಿಂದೆ ಕೆಲವು ಶಾಲೆಗಳು ಬಿದ್ದಿವೆ. ಕಲಿಕೆಯನ್ನು ಸುಲಭ ಮಾಡಲು ಹೋಗಿ, ಶಿಕ್ಷಕರನ್ನು/ಮಕ್ಕಳನ್ನು ಸೋಮಾರಿ ಮಾಡಬಾರದೆಂಬುದು ನನ್ನ ಕಾಳಜಿ. ಅದರ ಜೊತೆಗೆ ಶಿಕ್ಷಕ ಹಾಗೂ ಮಕ್ಕಳ ಸೃಜನಶೀಲತೆ, ಕ್ರಿಯಾತ್ಮಕ ಚಿಂತನೆಗಳು ಮಣ್ಣಾಗಬಾರದೆಂಬುದನ್ನು ಹಿನ್ನಲೆಯನ್ನಾಗಿಟ್ಟುಕೊಂಡು ಈ ಬರಹವನ್ನು ನಿಮ್ಮ ಮುಂದಿಡುತ್ತಿದ್ದೇನೆ, ತಂತ್ರಜ್ಞಾನದಿಂದ ಕೆಲಸಗಳು ಸುಲಭವಾಗಬೇಕು ಹಾಗೆಂದು ಸೋಮಾರಿಗಳಾಗುವಂತೆ ಮಾಡಬಾರದು. ಏಕೆಂದರೆ, ನಾನು ಗಮನಿಸಿರುವ ಹಾಗೆ ಅಥವಾ ಅನೇಕಾ ತತ್ವಜ್ಞಾನಿಗಳು ಹೇಳಿರುವಂತೆ, ಮನುಷ್ಯ ಔಪಚಾರಿಕ ಶಿಕ್ಷಣದಲ್ಲಿ ಕಲಿತು ತನ್ನನ್ನು ತಾನು ಕುಬ್ಜನಾಗಿಸಿಕೊಳ್ಳುತ್ತಾನೆ ಮತ್ತು ತಾನೇ ನಿರ್ಮಿಸಿದ ಪೆಟ್ಟಿಗೆಯೊಳಗೆ ಬಂಧಿಯಾಗುತ್ತಿದ್ದಾನೆ. ಶಾಲೆಗಳಲ್ಲಿ ಕಲಿತ ಹತ್ತು ಹದಿನೈದು ವರ್ಷದ ಶಿಕ್ಷಣದ ಬಲೆಯಿಂದ ಹೊರಕ್ಕೆ ಬರಲಾಗದೇ ತನ್ನ ಇಡೀ ಆಯಸ್ಸನ್ನು ಕಳೆಯುತ್ತಾನೆ. ತಾನು ಕಲಿತಿದ್ದು ಸರಿಯೋ ತಪ್ಪೋ, ಉಪಯುಕ್ತವೋ ಇಲ್ಲವೋ ಎನ್ನುವ ಗೊಂದಲದಲ್ಲಿಯೇ ಜೀವನ ಸವೆಸುತ್ತಾನೆ. 


ಸ್ಮಾರ್ಟ್ ಕ್ಲಾಸ್ ಅಥವಾ ಕಂಪ್ಯೂಟರ್ ಬಳಸಿ ಕಲಿಸುವುದರ ಕಡೆಗೆ ಸರ್ಕಾರಿ ಮತ್ತು ಖಾಸಗಿ ಎರಡೂ ಶಾಲೆಯ ಶಿಕ್ಷಕರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಅದರ ಕುರಿತು ಸ್ವಲ್ಪ ಬರೆಯೋಣವೆನಿಸಿ ಈ ಬರವಣಿಗೆಯನ್ನು ಬರೆಯುತ್ತಿದ್ದೇನೆ. ಈ ಸ್ಮಾರ್ಟ್ ಕ್ಲಾಸ್‍ಗಳ ಸಾಧಕ ಬಾಧಕಗಳ ಚರ್ಚೆಯನ್ನು ವಿವಿಧ ರೂಪದಲ್ಲಿ ನಿಮ್ಮ ಪ್ರಸ್ತಾಪಿಸುತ್ತಿದ್ದೇನೆ.

ಮೊದಲನೆಯದಾಗಿ, ಶಿಕ್ಷಕರ ಸೃಜನಶೀಲತೆ: ಶಿಕ್ಷಕ ಎಂದರೆ ಸೃಜನಶೀಲತೆಗೆ ಇನ್ನೊಂದು ಹೆಸರು ಎಂದು ನಂಬಿರುವವನು ನಾನು. ಹಾಗೆಯೇ, ನಾನು ಬಹಳ ಗೌರವಿಸುವ ಒಂದು ವೃತ್ತಿ ಎಂದರೇ ಅದು ಶಿಕ್ಷಕನ ವೃತ್ತಿ. ಶಿಕ್ಷಕ ಅಥವಾ ಗುರು ಎಂದರೆ ಕೇವಲ ನಾಲ್ಕು ಅಕ್ಷರ ಕಲಿಸುವುವವನು ಮಾತ್ರವಲ್ಲ. ಅವನೊಬ್ಬ ದೇವರ ರೀತಿ, ನಿರಂತರ ಕಾಯುವ ಕಾಯಕ ಅವನದ್ದು. ಗುರುವೆನ್ನುವವನು ಮಗುವಿಗೆ ನಡೆದಾಡುವ ದೇವರಂತೆಯೇ ಕಾಣುತ್ತಾನೆಂದರೆ ತಪ್ಪಲ್ಲ. ಅದರಲ್ಲಿಯೂ ಎಳೆ ವಯಸ್ಸಿನಲ್ಲಿ ಮಗುವು ಅತಿ ಹೆಚ್ಚು ನಂಬಿದ ಮತ್ತು ವಿಶ್ವಾಸವಿಟ್ಟ ವ್ಯಕ್ತಿ ಅವನ ನೆಚ್ಚಿನ ಗುರು. ಯಾವುದೇ ಸಂಬಂಧಗಳು ಬೆಳೆಯುವುದು ಸಂವಹನದಿಂದ. ಅದರಲ್ಲಿಯೂ, ಗುರು ಮತ್ತು ಶಿಷ್ಯನ ಸಂಬಂಧ ಬೆಳೆಯುವುದು ಮಮತೆಯ ಮಾತುಕತೆಯಿಂದ ಆರೈಕೆ ಪೋಷಣೆಯಿಂದ. ನಾನು ಗಮನಿಸಿರುವ ಹಾಗೆ, ಯಾವೊಬ್ಬ ಶಿಕ್ಷಕ ಶಾಲೆಗೆ ತಲುಪಿತ್ತಿರುವ ಸಮಯದಲ್ಲಿ ಯಾವುದೋ ಮೂಲೆಯಲ್ಲಿದ್ದ ಶಾಲೆಯ ಮಗು ಓಡೋಡಿ ಬರುತ್ತದೆ, ಖುಷಿಯಿಂದ ನಮಸ್ತೆ ಹೇಳುವುದಕ್ಕೆ. ಆ ಮಗು ಬರುವುದು ಭಯದಿಂದ ಅಲ್ಲ ಗುರುವಿನ ಮೇಲಿನ ಪ್ರೀತಿಯಿಂದ, ಅಕ್ಕರೆಯಿಂದ. ತನ್ನ ತಂದೆ ಮನೆಗೆ ಬಂದಾಗಲೂ ಅಷ್ಟು ಅಕ್ಕರೆಯಿಂದ ಹೋಗುತ್ತದೆಯೇ? ಎನ್ನುವುದು ನನ್ನ ಅನುಮಾನ. ಆದ್ದರಿಂದ ಸ್ಮಾರ್ಟ್ ಕ್ಲಾಸ್ ಮಕ್ಕಳೊಡನೆ ಭಾವನೆ ಸಂವಹನಕ್ಕೆ ಮಾರಕವಾಗಬಹುದೇ? ಇದು ನನ್ನ ಆತಂಕವೂ ಹೌದು.

ಎರಡನೆಯದಾಗಿ, ಹೆಚ್ಚು ಗೌರವಿಸುವ ಶಿಕ್ಷಕ ವೃತ್ತಿ ಸ್ಮಾರ್ಟ್ ಕ್ಲಾಸ್ ಹೆಸರಿನಲ್ಲಿ, ಒಂದು ಕಂಪ್ಯೂಟರ್ ಆಪರೇಟರ್ ವೃತ್ತಿ ಆಗಿಬಿಡುತ್ತದೆಯೇ? ಇದು ನನ್ನನ್ನು ಕಾಡುತ್ತಿರುವ ಮತ್ತೊಂದು ಸಂಶಯ. ಏಕೆಂದರೆ, ಸ್ಮಾರ್ಟ್ ಕ್ಲಾಸ್‍ನ ವಿಷಯಗಳನ್ನು ಮತ್ತು ಅದರ ಮಾದರಿಯನ್ನು ಸಿದ್ದಪಡಿಸುವುದು ಯಾವುದೋ ಕಂಪನಿಯಲ್ಲಿ ಕುಳಿತಿರುವ ಯಾರೋ ಒಬ್ಬ ಸಿಬ್ಬಂದಿ. ಅದನ್ನು ತಂದು ನಿಮ್ಮೆಡೆಗೆ ಕೊಡುವುದು ಮತ್ತೊಬ್ಬ ಸಿಬ್ಬಂದಿ, ಅದರ ತರಬೇತಿ ನೀಡುವವನು ಮಗದೊಬ್ಬ. ಅದೆಲ್ಲವೂ ಆದಮೇಲೆ, ನಿಮ್ಮ ಕೆಲಸ ಕಂಪ್ಯೂಟರ್ ಆನ್ ಮಾಡುವುದು, ಪ್ರೋಜೆಕ್ಟರ್ ಆನ್ ಮಾಡುವುದು, ನಂತರ ಆಫ್ ಮಾಡುವುದು. ಇದು ಹೀಗೆ ಮುಂದುವರೆದರೆ, ಮುಂದೊಂದು ದಿನ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ಒಂದು ಶಾಲೆಗೆ ಒಬ್ಬರು ಕಂಪ್ಯೂಟರ್ ಆಪರೇಟರ್ ಸಾಕು ಅವರ ಜೊತೆಗೆ ಒಬ್ಬರೋ ಅಥವಾ ಇಬ್ಬರೋ ಶಿಕ್ಷಕರನ್ನು ಕೊಡೋಣ, ಯಾಕೆಂದರೆ ಬೋಧಿಸುವುದೇನು ಇಲ್ಲವಲ್ಲ, ಕೇವಲ ಕಂಪ್ಯೂಟರ್ ಆನ್ ಮತ್ತು ಆಫ್ ಮಾಡುವುದಲ್ಲವೇ ಎಂದರೇ, ನೀವು ಏನು ಮಾಡುತ್ತೀರಿ? ಗುರುವಿನ ಪದವಿಯಿಂದ ದೊಪ್ಪನೆ ಬೀಳುವುದು ಒಬ್ಬ ಸಾಧಾರಣ ಕಂಪ್ಯೂಟರ್ ಆಪರೇಟರ್ ಪದವಿಗೆ? ಅದರ ಜೊತೆಗೆ ಶಿಕ್ಷಣ ಇಲಾಖೆ ಅಥವಾ ಸರ್ಕಾರ ನೀವುಗಳು ಕಂಪ್ಯೂಟರ್ ಬಳಸಿ ಬೊಧಿಸುತ್ತಿರುವಾಗ ನಿಮಗೆ ಶೈಕ್ಷಣಿಕ ಅಬಿವೃದ್ಧಿಗೆ ಸಂಬಂಧಿಸಿದಂತೆ ಯಾವುದೇ ತರಬೇತಿಯ ಅವಶ್ಯಕತೆಯಿರುವುದಿಲ್ಲ ಹಾಗಾಗಿ ಇನ್ನು ಮುಂದೆ ತರಬೇತಿಯನ್ನು ನಿಲ್ಲಿಸಿದರೆ? ನೀವು ಎಲ್ಲಿಂದ ಕಲಿಯುತ್ತೀರಿ? ಅಯ್ಯೋ ಬಿಡಿ ಆ ತರಬೇತಿ ಅನಿವಾರ್ಯತೆ ಏನು ಇರಲಿಲ್ಲವೆನ್ನಬಹುದು. ಆದರೇ, ನಿಮಗೆ ತಿಳಿದೋ ತಿಳಿಯದೆಯೋ ಪ್ರತಿಯೊಂದು ತರಬೇತಿಯಿಂದ ನೀವು ಮುಂದುವರೆಯುತ್ತಾ ಬಂದಿದ್ದೀರಿ. ಇದು ಹೀಗೆ ಮುಂದುವರೆದು, ಕಾಲಾಂತರದಲ್ಲಿ ಶಿಕ್ಷಕರ ಅವಶ್ಯಕತೆಗಿಂತ ಕಂಪ್ಯೂಟರಿನ ಅನಿವಾರ್ಯತೆ ಹೆಚ್ಚಾಗಿ ಡಿಎಡ್, ಬಿಎಡ್ ಕೋರ್ಸ್‍ಗಳು ನಿಂತು ಕೇವಲ ಬಿಟೆಕ್ ಅಥವಾ ಬಿಎಸ್ಸಿ ಕಂಪ್ಯೂಟರ್ ಮಾಡಿರುವವರು ಸಾಕು, ಅವರನ್ನೇ ನೇಮಿಸೋನವೆಂದರೇ? ಶಿಕ್ಷಣ ವ್ಯವಸ್ಥೆ ಎಲ್ಲಿಗೆ ತಲುಪಬಹುದು? ಆಲೋಚಿಸಿ, ಸಾಧ್ಯವಾದರೆ ಅವಲೋಕಿಸಿ. . .

ಈ ಚರ್ಚೆಯ ನಡುವೆ ನಿಮಗೊಂದು ಪ್ರಶ್ನೆ ಉದ್ಭವವಾಗಿರಬಹುದು, ನಾವು ಗಮನಿಸಿರುವ ಹಾಗೆ ಅಥವಾ ಸೀಕೋ ಸಂಸ್ಥೆಯಿಂದ ಕೇಳಿರುವ ಹಾಗೆ ವಿಡಿಯೋ ಮೂಲಕ ಅಥವಾ ಫೋಟೋ ಮೂಲಕ ಆಕರ್ಷಿಕವಾಗಿ ಬೋಧನೆ ಮಾಡಬಹುದು, ಅದು ಮಕ್ಕಳಿಗೆ ಬೇಗ ಮುಟ್ಟುತ್ತದೆ ಎಂದಿದ್ದೀರಿ, ಈಗ ನೀವೇ ಉಲ್ಟಾ ಹೊಡೆಯಬಹುದೇ ಎಂದು. ಹೌದು, ವಿಡೀಯೋ ಮತ್ತು ಫೋಟೋಗಳಿಗೆ ಸಾವಿರ ಸಾಲುಗಳಲ್ಲಿ ಹೇಳದೇ ಇರುವುದನ್ನು ಹೇಳಿಕೊಡುವ ತಾಕತ್ತಿದೆ. ಅದರಲ್ಲಿ ಎರಡು ಅನುಮಾನವಿಲ್ಲ. ಬೇಗ ಮನ ಮುಟ್ಟತ್ತದೆ, ಬೇಗ ಕಲಿಯುತ್ತವೆ. ಆದರೆ, ಯಾರೋ ಮಾಡಿದ ವಿಡಿಯೋ, ಯಾರೋ ಸಿದ್ಧಪಡಿಸಿದ ಚಿತ್ರಗಳ ಮೇಲೆ ಶಿಕ್ಷಕ ಅವಲಂಬಿತನಾದರೇ, ಅವನ ಸೃಜನಶೀಲತೆ ಎಲ್ಲಿ ಮರೆಯಾಯಿತು? ಇದನ್ನು ಸ್ವಲ್ಪ ವಿವರಣೆ ನೀಡಿ ಹೇಳುತ್ತೇನೆ, ಕೆಲವು ಶಿಕ್ಷಕರು ತಾವೇ ಸ್ವತಃ ಅಂತರ್ಜಾಲದಲ್ಲಿ ಹುಡುಕಿ, ತೆಗೆದು ತಂದು ತೋರಿಸುತ್ತಾರೆ ಅಥವಾ ಇನ್ನೂ ಕೆಲವರು ತಾವೇ ಸ್ವತಃ ಒಂದು ವಿಡಿಯೋ ಮಾಡಿ ತೋರಿಸುತ್ತಾರೆ. ಅದರಲ್ಲಿ ಅವರ ಶ್ರಮವಿದೆ, ಏನು ಬೇಕೆನ್ನುವದು ತಿಳಿದಿದೆÉ. ಆದರೆ ಬೇರೆಯವರು ಮಾಡಿ ನಿಮಗೆ ನೀಡಿರುವುದನ್ನು ತೋರಿಸುವಾಗ ನಿಮಗೆ ಬೇಕು, ಬೇಡವೆನ್ನುವ ಹಕ್ಕೂ ಕೂಡವಿರುವುದಿಲ್ಲ. ಅವರು ಮಾಡಿರುವುದು ಸರಿಯೆಂದೇ ತೋರಿಸಬೇಕು, ಅದನ್ನೇ ಬೋಧಿಸಬೇಕು. ನೀವಾಗಿಯೇ ಬೋಧಿಸುವಾಗ ಅನೇಕಾ ಮಾರ್ಗಗಳು ನಿಮಗೆ ಇರುತ್ತವೆ. ಆದರೆ, ಸ್ಮಾರ್ಟ್ ಕ್ಲಾಸ್‍ನಲ್ಲಿ? ವ್ಯತ್ಯಾಸಗಳು ಕಾಣುತ್ತಿವೆಯೇ? ನನ್ನ ವಾದ ನಿಮಗೆ ತಲುಪುತ್ತಿದೆಯೇ?

ಇಷ್ಟಾದಮೇಲೂ, ನಿಮಗೆ ಕಂಪ್ಯೂಟರ್ ಮೂಲಕವೇ ಬೋಧಿಸಬೇಕೆನಿಸಿದರೆ, ಅದೇ ಸರಿ ಎನಿಸಿದರೆ, ತಾವುಗಳೆ ಸಿದ್ಧಪಡಿಸಿ ಅಥವಾ ಈ ದಿನಗಳಲ್ಲಿ ಬಹುತೇಕ ಎಲ್ಲರ ಬಳಿಯಲ್ಲಿಯೂ ಸ್ಮಾರ್ಟ್ ಫೋನಗಳಿವೆ, ಕಡಿಮೆ ದರದಲ್ಲಿ ಇಂಟರ್‍ನೆಟ್ ಇದೆ, ಅದರಲ್ಲಿ ಹುಡುಕಿ ನೀವೆ ಸಿದ್ಧಪಡಿಸಿ ನಿಮ್ಮ ಲ್ಯಾಪ್‍ಟಾಪಿನಲ್ಲಿಯೋ ಅಥವಾ ಕಂಪ್ಯೂಟರ್‍ನಲ್ಲಿಯೋ ತೋರಿಸಿ. ಆಗ ನಿಮ್ಮ ಬಗ್ಗೆ ನಿಮಗೂ ಹೆಮ್ಮೆ ಎನಿಸುತ್ತದೆ, ಹಾಗೇಯೇ ನಿಮ್ಮ ವಿದ್ಯಾರ್ಥಿಗಳಿಗೂ ನಿಮ್ಮಯ ಕಡೆಗೆ ವಿಶೇಷ ಗೌರವ ಬರುತ್ತದೆ. ನಮ್ಮ ಮಾಸ್ಟರು, ನಮಗೋಸ್ಕರ ಕಷ್ಟ ಪಟ್ಟು ಏನೆಲ್ಲಾ ಮಾಡುತ್ತಾರೆ ಗೊತ್ತಾ ಎಂದು ಬೇರೆಯವರಿಗೂ ಹೇಳುತ್ತಾರೆ. ಅದಿಲ್ಲದೇ ಇದ್ದರೆ, ನೀವು ಕಂಪ್ಯೂಟರ್ ಆಪರೇಟ್ ಮಾಡುವುದನ್ನು ನೋಡು ನೋಡುತ್ತಾ ಅವರು ಅದನ್ನು ಕಲಿಯುತ್ತಾರೆ. ಕೆಲವು ದಿನಗಳು ಕಳೆದ ನಂತರ, ಅವರೇ ಹೇಳುತ್ತಾರೆ ಸ್ಮಾರ್ಟ್ ಕ್ಲಾಸಿನ ಕೀ ತೆಗೆದುಕೊಂಡು ಬಾ, ಮಾಸ್ಟರು ಬರೋದು ಏನು ಬೇಡ, ನನಗೆ ಗೊತ್ತು ನಾನೇ ಆನ್ ಮಾಡುತ್ತೇನೆ, ಅದೇನು ಮಹಾಕಾರ್ಯವಲ್ಲವೆನ್ನುತ್ತಾರೆ. ಅಥವಾ ನಿಮ್ಮ ಶಾಲೆಯ ಕೆಲವು ಶಿಕ್ಷಕರು ಪ್ರೊಜೆಕ್ಟರ್ ಆನ್ ಮಾಡಿ ನೋಡುತ್ತಾ ಇರಿ ಎಂದು ಹೇಳಿ ಸಾಫ್ಟ್ ರೂಮಿನಲ್ಲಿರಬಹುದು. ಅತಿ ಹೇಳುವುದು ಬೇಡ ಸದ್ಯಕ್ಕೆ ಇಷ್ಟಿರಲಿ.

ಶಿಕ್ಷಕರ ವಿಷಯದ ನಂತರ, ಮಕ್ಕಳ ವಿಷಯಕ್ಕೆ ಬರೋಣ, ವಿಡಿಯೋ ನೋಡಿ ಪರಿಕಲ್ಪನೆಯ ಬಗ್ಗೆ ಒಂದು ವಿವರಣೆ ಸಿಗಬಹುದು, ಆದರೆ ಅವರು ನೋಡುವ ಸಮಯದಲ್ಲಿ ಬರೆಯುತ್ತಾರಾ? ನೋಟ್ಸ್ ಮಾಡಿಕೊಳ್ಳುತ್ತಾರಾ? ಸಾಧ್ಯವೇ ಇಲ್ಲಾ ಯಾಕೆಂದರೇ, ಯಾವೊಂದು ವಿಡಿಯೋ ನೋಡುವಾಗ ಮಕ್ಕಳು ನೋಟ್ಸ್ ಮಾಡಿಕೊಳ್ಳುವುದು ಕಷ್ಟವೆನಿಸುತ್ತದೆ, ನಮ್ಮ ಬಹುತೇಕ ಮಕ್ಕಳು ಟಿವಿ/ವಿಡಿಯೋ ನೋಡಿರುವುದು ಕೇವಲ ಮನೋರಂಜನೆಗೆ ಮಾತ್ರ, ಹಾಗಾಗಿ ಅವರು ಅದನ್ನು ನೋಡಿ ಆನಂದಿಸುತ್ತಾರೆ ಹೊರತು ಆ ಸಮಯದಲ್ಲಿ ಕಲಿಕೆ ಎನಿಸುವುದಿಲ್ಲ. ಈ ಹಾದಿಯಿಂದ ಮಕ್ಕಳ ಕ್ರಿಯಾತ್ಮಕ ಚಿಂತನೆಗಳಿಗೆ ಪೆಟ್ಟಾಗುತ್ತದೆ. ಅದರಲ್ಲಿಯೂ ಸರ್ಕಾರಿ ಶಾಲಾ ಮಕ್ಕಳು ಮನೆಯಲ್ಲಿ ಹೇಗೆ ಓದಿಕೊಳ್ಳಬೇಕು? ನೋಟ್ಸ್ ಹೇಗೆ? ಅವನ ಪ್ರಪಂಚ ಪರದೆಯೊಳಕ್ಕೆ ಸೀಮಿತವಾಗುತ್ತದೆ.

ಮಕ್ಕಳು ವಿಡಿಯೋ ನೋಡಿ ಆನಂದಿಸುವುದು ತಪ್ಪಲ್ಲ, ಆದರೆ ಅದರ ಜೊತೆಗೆ ಅವರೇ ವಿಡಿಯೋ ಮಾಡುವಂತೆ ಅಥವಾ ಪ್ರಾಯೋಗಿಕವಾಗಿಯೇ ಕಲಿಯುವಂತೆ ಮಾಡುವುದು ಒಳ್ಳೆಯದು. ನಾವು ನಿಜವಾಗಿಯೂ ಮಕ್ಕಳಿಗೆ ಕಲಿಸಲೇ ಬೇಕೆಂದರೆ ಅದಕ್ಕೆ ಉತ್ತಮವಾದ ಅಥವಾ ಕನಿಷ್ಠ ಬಂಡವಾಳ ಹೂಡಿಕೆಯಲ್ಲಿ ಪ್ರಯೋಗಾಲಯ ಹೊಂದುವುದು ಉತ್ತಮ. ಕಂಪ್ಯೂಟರ್ ಶಿಕ್ಷಣವೂ ಸೇರಿದಂತೆ. ಯಾವುದೋ ಒಂದು ವಿಷಯವನ್ನು ನೀವು ಬೋಧಿಸುವಾಗ ವಿಡಿಯೋ ಉಪಯೋಗಿಸುವ ಸ್ಥಳದಲ್ಲಿ ಖುದ್ದಾಗಿ ತಾವೂ ಮಕ್ಕಳೊಡನೆ ಸೇರಿ ಅದರ ಮಾದರಿಯನ್ನು ಸಿದ್ಧಪಡಿಸುವಂತಾದರೇ? ಹೌದು, ಇದೆಲ್ಲಾ ಅತಿಯೆನಿಸಬಹುದು ಅಥವಾ ವಿಭಿನ್ನಾವೆನ್ನಿಸಬಹುದು ಅಥವಾ ನಿಮಗೆ ರೇಜಿಗೆ ಬಂದು ಅಯ್ಯೋ ಬಿಡಿ ಸಾರ್, ಯಾರೋ ಬಂದು ಸ್ಮಾರ್ಟ್ ಕ್ಲಾಸ್ ಹಾಕಿ ಕೊಡುತ್ತಾರೆ, ನಮಗೆ ಸುಲಭ ಆಗುತ್ತೆ, ಮಕ್ಕಳಿಗೂ ಸುಲಭ ಎನ್ನುತ್ತಿದ್ದರೆ, ನನ್ನ ಈ ಎಲ್ಲಾ ಮಾತುಗಳು ನಿಜವಾಗಿಯೂ ನಿಮಗೆ ಎನ್ನುವುದು ದೃಢ.

ಪ್ರಾಯೋಗಿಕವಾಗಿ ಕಲಿಯುವುದರ ಅನುಕೂಲವನ್ನು ಈ ಉದಾಹರಣೆ ಸರಿಯಾಗಿ ವಿವರಿಸಬಹುದು. ಒಂದು ಮಗುವು, ಹತ್ತನೆಯ ವಯಸ್ಸಿನಲ್ಲಿ ಒಮ್ಮೆ ಸೈಕಲ್ ಬ್ಯಾಲೆನ್ಸ್ ಕಲಿತರೆ ಅಥವಾ ಈಜುವುದನ್ನು ಕಲಿತರೆ ಅದು ಎಷ್ಟೇ ವರ್ಷದ ನಂತರವಾದರೂ ಸರಾಗವಾಗಿ ಸೈಕಲ್ ಚಲಿಸಬಲ್ಲದು. ಅರವತ್ತು ದಾಟಿದರೂ ಈಜಬಹುದು. ನಮ್ಮನ್ನೇ ನೋಡಿ, ಕಡೆಯ ಬಾರಿ ನಾವು ಸೈಕಲ್ ಓಡಿಸಿದ್ದು ಯಾವಾಗ? ಬಹುಶಃ ಇಪ್ಪತ್ತು ವರ್ಷಗಳ ಹಿಂದೆ, ನಮ್ಮ ಹೈಸ್ಕೂಲ್ ದಿನಗಳು, ಹೆಚ್ಚೆಂದರೆ ಪಿಯುಸಿ ಟ್ಯೂಷನ್ ದಿನಗಳು, ಆದರೂ ನಮಗೆ ಬ್ಯಾಲೆನ್ಸ್ ಮರೆತಿಲ್ಲ. ಅದೇ ರೀತಿಯಲ್ಲಿ, ಒಂದು ಮಗುವಿನಿಂದ ಯಾವುದಾದರು ಒಂದು ಮಾದರಿ(ವರ್ಕಿಂಗ್ ಮಾಡೆಲ್) ಸಿದ್ಧಪಡಿಸಿ ನೋಡಿ, ಆ ಮಗು ಅದರ ಕೌಶಲ್ಯವನ್ನು ಜೀವನ ಪರ್ಯಂತ ಮರೆಯುವುದಿಲ್ಲ. ಈ ಉದ್ದೇಶದಿಂದಲೇ, ನಾವು ಚಟುವಟಿಕೆಯ ಮೂಲಕ ಪರಿಸರ ಸಂರಕ್ಷಣೆಯನ್ನು ಮಾಡಿಸುತ್ತೀವಿ, ಮತ್ತು ಅದರ ಮೂಲಕವೇ ಪರಿಸರ ಶಿಕ್ಷಣವನ್ನು ಅಳವಡಿಸಿಕೊಳ್ಳುವಂತೆ ಬೋಧಿಸುತ್ತೇವೆ. ಸಂರಕ್ಷಣೆಯ ಬಗ್ಗೆ ಅತ್ಯುನ್ನತ ವಿಡಿಯೋಗಳನ್ನು ತೋರಿಸಬಹುದಿತ್ತು. ಅದರಿಂದ ಸಂರಕ್ಷಣೆ ಸಾಧ್ಯವೇ? ಸಾಲುಮರದ ತಿಮ್ಮಕ್ಕನ ಜೊತೆ ನಿಂತು ಫೋಟೋ ತೆಗೆಸಿಕೊಂಡವರೆಲ್ಲಾ ಕನಿಷ್ಠ ಒಂದೊಂದು ಗಿಡ ನೆಟ್ಟು ಬೆಳೆಸಿದ್ದರೂ ಈ ದಿನಕ್ಕೆ ಅದೆಷ್ಟೋ ಮರಗಳಿರುತ್ತಿದ್ದವು. ಆದರೇ ಹಾಗೆ ಮಾಡುವುದು ಬೇಕಿಲ್ಲ ಜನರಿಗೆ. ಯಾರೋ ಬೆಳೆಸಿದ ಮರದಡಿಯಲ್ಲಿ ಗಾಡಿ ನಿಲ್ಲಿಸಿದರೆ ಸಾಕು. ಹಾಗೆಯೇ ಯಾರೋ ಸಿದ್ಧಪಡಿಸಿದ ಪಾಠದ ತೊರಿಸುವುದರಲ್ಲಿ ದೊಡ್ಡಸ್ತಿಕೆ ಎನಿಸುವುದಿಲ್ಲ ನನಗೆ.

ವಿಷಯಾಂತರವಾಗುವುದು ಬೇಡ, ನಿಮಗೆ ಸ್ಮಾರ್ಟ್ ಕ್ಲಾಸ್ ಬೇಕಿರುವ ಉದ್ದೇಶ ಸ್ಪಷ್ಟವಾಗಬೇಕು. ಅದು ನಿಮ್ಮ ಕೆಲಸವನ್ನು ಸುಲಭ ಮಾಡಿಸುವುದಕ್ಕೆ ಬೇಕಾ? ಅಥವಾ ಪರಿಣಾಮಕಾರಿಯಾಗಿ ತಿಳಿಸುವುದಕ್ಕಾ? ಬೇರೆಯವರಿಂದ ತಯಾರಿಸಿದ ಮಾದರಿಗಳು ಎರಡಕ್ಕೂ ಅನ್ವಯವಾಗುದು ಸಾಧ್ಯವಿಲ್ಲ. ನಿಮ್ಮ ಕೆಲಸ ಕಡಿಮೆಯಾದರೇ ಸಾಕೆನ್ನುವುದು ಮೂಲ ಉದ್ದೇಶವಾಗಿರಬೇಕು. ಇದು ನಿಮ್ಮ ಉದ್ದೇಶವೂ ಇರಬಹುದು ಮತ್ತು ಊಹೆಯೂ ಇರಬಹುದು. ಆದ್ದರಿಂದ, ಸ್ಮಾರ್ಟ್ ಕ್ಲಾಸ್ ಅಳವಡಿಸಿಕೊಂಡಿರುವ ಶಾಲೆಗಳ ಶಿಕ್ಷಕರನ್ನು ಮತ್ತು ವಿದ್ಯಾರ್ಥಿಗಳನ್ನೊಮ್ಮೆ ಭೇಟಿ ನೀಡಿ, ಅವರ ಅಬಿಪ್ರಾಯ ಸಂಗ್ರಹಿಸಿ. ಅದರ ಸಾಧಕ ಬಾಧಕಗಳನ್ನು ಮುಕ್ತವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಿ. ಪಕ್ಕದ ಜಮೀನಿನವನು ಆಲೂಗೆಡ್ಡೆ ಹಾಕಿದ್ದಾನೆ ತಡಿ ನಾನೂ ಹಾಕುತ್ತೇನೆ ಎನ್ನುವ ಮನೋಭಾವ ಬದಲಾಗಬೇಕು, ಒಂದೊಂದು ಜಮೀನು ವಿಭಿನ್ನಾ. ಅದೇ ರೀತಿ ಒಂದೊಂದು ಶಾಲೆಯೂ ಮತ್ತು ಶಾಲೆಯ ವಿದ್ಯಾರ್ಥಿಗಳು ವಿಭಿನ್ನಾ. ಯಾರೋ ಹಾಕಿಸಿದ್ದಾರೆ, ನಾವು ಹಾಕಿಸೋಣ, ಉಚಿತವಾಗಿ ಸಿಗುತ್ತದೆ ಎನ್ನುವುದನ್ನು ವಿಮರ್ಶಿಸಿಕೊಳ್ಳಿ. ಉಚಿತವಾಗಿ ಸಿಗುವುದನ್ನೆಲ್ಲಾ ಸ್ವೀಕರಿಸುವುದು ಒಳ್ಳೆಯದಲ್ಲ. ಇದಕ್ಕೊಂದು ಉದಾಹರಣೆ ಕೊಡುತ್ತೇನೆ ಕೇಳಿ.

ಒಮ್ಮೆಯೂ ಚಪ್ಪಲಿಯನ್ನು ಕಂಡಿರದ ಒಂದು ಹಳ್ಳಿಗೆ ಒಬ್ಬ ಚಪ್ಪಲಿ ವ್ಯಾಪಾರಿ ಬಂದ. ಎಲ್ಲರೂ ಬಂದು ನೋಡಿದರು, ಕೆಲವರು ಹಾಕಿ ಸ್ವಲ್ಪ ದೂರ ಓಡಾಡಿದರು, ಚೆನ್ನಾಗಿದೆ ಎಂದರು. ಸಂತೋಷವನ್ನು ಪಟ್ಟರು. ಆದರೇ, ಬೆಲೆ ಐದು ರೂಪಾಯಿ ಎಂದಾಗ ಬೇಡವೆಂದು ದೂರ ಸರಿದರು. ಯಾರೊಬ್ಬರೂ ಒಂದೇ ಒಂದು ಜೊತೆ ಚಪ್ಪಲಿ ತೆಗೆದುಕೊಳ್ಳಲಿಲ್ಲ. ಬೇಸರಗೊಂಡ ವ್ಯಾಪಾರಿ ವಾಪಸ್ಸು ಅವನ ಕಂಪನಿಗೆ ಹೋಗಿ ತನ್ನ ಸೋಲನ್ನು ಒಪ್ಪಿಕೊಂಡ. ಕಂಪನಿಯು ಆಲೋಚಿಸಿ ಅದೇ ಹಳ್ಳಿಗೆ ಬೇರೆಯವನನ್ನು ನೇಮಿಸಿತು. ಹೊಸ ವ್ಯಾಪಾರಿ ಬಂದವನೆ ಇಡೀ ಊರಿನ ಎಲ್ಲರನ್ನು ಕರೆದು ಚಪ್ಪಲಿಗಳನ್ನು ಉಚಿತವಾಗಿ ನೀಡಿದ. ಎಲ್ಲರೂ ತೆಗೆದುಕೊಂಡು ಹೋದರು, ಅನುಭವಿಸಿದರು, ಆನಂದಿಸಿದರು. ಎರಡು ಮೂರು ತಿಂಗಳಾಯಿತು, ಚಪ್ಪಲಿಯಿಲ್ಲದೆ ಓಡಾಡುವುದು ಅಸಾಧ್ಯ ಎನ್ನುವಷ್ಟು ಅವರು ಚಪ್ಪಲಿಗಳಿಗೆ ಹೊಂದಿಕೊಂಡರು. ಹೊಸ ಚಪ್ಪಲಿಗಳು ಹಳೆಯದದಾವು, ಸವೆದು ಹೋದವು, ಕೆಲವು ಕಿತ್ತು ಹೋದವು. ಚಪ್ಪಲಿಗಳಿಗೆ ಹೊಂದಿಕೊಂಡಿದ್ದ ಜನರು, ಚಪ್ಪಲಿಯಿಲ್ಲದೆ ನಡೆಯುವುದೇ ಸಾಧ್ಯವಿಲ್ಲವೆಂದು ಅರಿತರು. ಎಲ್ಲರೂ ಒಟ್ಟಾಗಿ ಉಚಿತ ಚಪ್ಪಲಿ ನೀಡಿದ ವ್ಯಾಪಾರಿಯನ್ನು ಹುಡಕತೊಡಗಿದರು. ಕಡೆಗೂ ವ್ಯಾಪಾರಿ ಸಿಕ್ಕಿದಾಗ, ಚಪ್ಪಲಿಗಳು ಸವೆದುಹೋಗಿವೆ, ಬೇರೆ ಚಪ್ಪಲಿಗಳು ಬೇಕು ಎಂದರು. ಅದಕ್ಕೆ ವ್ಯಾಪಾರಿಯು, ಒಂದು ಜೊತೆಗೆ 30ರೂಪಾಯಿ ಆಗುತ್ತದೆ ಎಂದ. ಹಳ್ಳಿಯವರೆಲ್ಲಾ ಸುಸ್ತಾಗಿ ಹೋದರು. ಚಪ್ಪಲಿಗಳಿಲ್ಲದೆ ನಡೆದಾಡುವುದು ದುಸ್ತರವಾಗಿತ್ತು. ವಿಧಿಯಿಲ್ಲದೆ, ಚಪ್ಪಲಿಗಳನ್ನು ಕೊಂಡುಕೊಂಡರು. ಈ ಉದಾಹರಣೆ ಇಲ್ಲಿಗೆ ಏಕೆ? ಅನೇಕರು ಸ್ಮಾಟ್ ಕ್ಲಾಸ್‍ಗಳನ್ನು ಮಾರುವುದಕ್ಕೆ ಬರುತ್ತಾರೆ, ಅವರಲ್ಲಿ ಬಹುತೇಕರು ಇದೇ ವರ್ಗಕ್ಕೆ ಸೇರಿದವರು.

ಅದರಲ್ಲಿಯೂ ಸರ್ಕಾರಿ ಶಾಲೆಗಳಿಗೆ ಬರುವವರು, ಏನನ್ನೂ ಬೇಕಿದ್ದರು ಮಾರಬಹುದು ಅಥವಾ ಏನು ಕೊಟ್ಟರೂ ತೆಗೆದುಕೊಳ್ಳುತ್ತಾರೆಂಬ ಧೋರಣೆಯಿಂದಲೇ ಬರುತ್ತಿದ್ದಾರೆ. ಅವರ ದೃಷ್ಟಿಯಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರು ದಡ್ಡರು ಅಥವಾ ಸುಲಭವಾಗಿ ವಂಚಿಸಬಹುದೆಂಬುದು ದೃಢವಾಗಿರುವಂತೆ ಕಾಣುತ್ತವೆ. ಇದರ ಕುರಿತ ಚರ್ಚೆಯನ್ನು ಇನ್ನೂ ಆಳಕ್ಕೆ ಇಳಿಸೋಣ. ಇದು ಸ್ಮಾರ್ಟ್ ಕ್ಲಾಸ್‍ಗೆ ಮಾತ್ರ ಅನ್ವಯವಲ್ಲ. ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣದ ವಿಷಯವನ್ನು ಒಮ್ಮೆ ನೋಡೋಣ. ಐಸಿಟಿ ಯೋಜನೆಯಡಿಯಲ್ಲಿ ಕಂಪ್ಯೂಟರ್ ತೆಗೆದುಕೊಂಡ ಎಷ್ಟು ಶಾಲೆಗಳಲ್ಲಿ, ಕಂಪ್ಯೂಟರ್‍ಗಳು ಚಾಲ್ತಿಯಲ್ಲಿವೆ? ಈ ಯೋಜನೆಯಡಿಯಲ್ಲಿ, ಕಂಪ್ಯೂಟರ್, ಬ್ಯಾಟರಿ/ಯುಪಿಎಸ್, ಪ್ರಿಂಟರ್ ಎಲ್ಲವನ್ನೂ ನೀಡಿತ್ತು. ಕನಿಷ್ಟ ಒಂದು ಶಾಲೆಯಲ್ಲಿ ಒಬ್ಬರಾದರೂ ಶಿಕ್ಷಕರು ಕಂಪ್ಯೂಟರ್ ಜ್ಞಾನವಿದ್ದವರು ಇದ್ದರು, ಅವರು ಅದನ್ನು ನಿಭಾಯಿಸಬಹುದಿತ್ತು. ಅದಿಲ್ಲದೇ ಇದ್ದರೆ, ಎಸ್‍ಡಿಎಂಸಿ ಮೂಲಕ ಅಥವಾ ದಾನಿಗಳ ಸಹಾಯದಿಂದ ಸ್ಥಳಿಯ ಒಬ್ಬ ಕಂಪ್ಯೂಟರ್ ಆಪರೇಟರ್ ಅನ್ನು ನೇಮಿಸಕೊಳ್ಳಬಹುದಿತ್ತು. ಕನಿಷ್ಟ ಯುಪಿಸ್‍ಗಳಿಗೆ 20ರೂಪಾಯಿಗಳ ಡಿಸ್ಟಿಲ್ ನೀರು ಹಾಕಿ ಅದೇ ಯುಪಿಸ್‍ಗಳನ್ನು ಶಾಲೆಯ ಬಳಕೆಗೆಗಾದರೂ ಬಳಸಬಹುದಿತ್ತು. ಅದ್ಯಾವುದನ್ನು ಮಾಡಲು ಶಿಕ್ಷಕರು ಮುಂದೆ ಬರಲಿಲ್ಲ, ನೋಡ ನೋಡುತ್ತಿದ್ದಂತೆಯೇ ಲಕ್ಷಾಂತರ ರೂಪಾಯಿಗಳ ಕಂಪ್ಯೂಟರ್‍ಗಳು ನಿರುಪಯುಕ್ತವಾದವು. ಇಂದಿಗೂ ಕಂಪ್ಯೂಟರ್‍ಗಳು ಮತ್ತು ಅದನ್ನು ಇರಿಸಿರುವ ಕೊಠಡಿ ಯಾವುದಕ್ಕೂ ಉಪಯೋಗವಿಲ್ಲದೇ ಉಳಿದಿವೆ. ಇದಕ್ಕೇ ಜವಬ್ದಾರರಾರು?

ಮುಂದೊಂದು ದಿನ ಈ ಸ್ಮಾರ್ಟ್ ಕ್ಲಾಸ್‍ಗಳು ಅದೇ ಹಾದಿಯನ್ನು ಹಿಡಿಯುವುದಿಲ್ಲವೆನ್ನುವುದಕ್ಕೆ ಏನು ಸಾಕ್ಷಿ? ಸಿಲಬಸ್ ಬದಲಾಯಿತು ಎಂದಿಟ್ಟುಕೊಳ್ಳೋಣ ಅಥವಾ ನಿಮ್ಮ ಹೆಚ್‍ಎಂ ವರ್ಗಾವಣೆಯಾದರು ಎಂದುಕೊಳ್ಳೋಣ, ಅಷ್ಟು ದೂರಕ್ಕೆ ಬೇಡ ನಿಮಗೆ ಸ್ಮಾರ್ಟ್ ಕ್ಲಾಸ್ ನೀಡಲು ಬರುವ ಕಂಪನಿಯ ಪ್ರಬಂಧಕ ಬದಲಾದರೇ ಸಾಕು. ಚಪ್ಪಲಿ ವ್ಯಾಪಾರಿಯನ್ನು ಹುಡುಕುವಂತೆ ಹುಡುಕಬೇಕಾದೀತು. ಇದು ಶಾಲಾ ಮಟ್ಟದಲ್ಲಿ ಅನುಮತಿ ನೀಡಿದ್ದರೆ, ಇಲಾಖೆಯೂ ಮುಂದೆ ಬರುವುದಿಲ್ಲ. ಬಂದರೂ ಇರೋ ತಲೆನೋವಿನ ಜೊತೆಗೆ ಇದನ್ನು ಸೇರಿಸಿಕೊಳ್ಳಲು ಸಿದ್ಧರಿರುವುದಿಲ್ಲ. ಇದಕ್ಕೆ ಅನುಗುಣವಾಗುವ ನನ್ನ ಒಂದು ಅನುಭವವನ್ನು ಹೇಳುತ್ತೇನೆ. ನಾನು ನನ್ನ ಮನೆಗೆ ಕುಶಾಲನಗರದ ಒಂದು ಅಂಗಡಿಯವನ ಕಡೆಯಿಂದ ಸೋಲಾರ್ ಹಾಕಿಸಿದ್ದೆ. ಕೆಲವು ತಿಂಗಳ ನಂತರ ನಮ್ಮ ಮನೆಗೆ ಸೋಲಾರ್ ಹಾಕಲು ಬಂದಿದ್ದ ಹುಡುಗ ಆ ಅಂಗಡಿಯ ಕೆಲಸ ಬಿಟ್ಟಿದ್ದ, ಅವನು ಬಿಟ್ಟ ಮೇಲೆ ನಮ್ಮ ಮನೆಯ ಸೋಲಾರ್ ರಿಪೇರಿಗೆ ಅಥವಾ ಮೆಂಟೆನೆನ್ಸ್‍ಗೆ ಎಷ್ಟು ಪರದಾಡಿದೆ ಎಂದರೇ ಯಾಕಪ್ಪ ಬೇಕಿತ್ತು ಎನಿಸಿಬಿಡ್ತು. ಅವರು ಕೊಟ್ಟಿದ್ದ ಆಶ್ವಾಸನೆಗಳೆಲ್ಲಾ ಮರೆಯಾದವು. ಒಂದು ಬಲ್ಬಿಗೆ 600-700 ಪಾವತಿಸುವ ಮಟ್ಟಕ್ಕೂ ಹೋಗಬೇಕಾಯಿತು.

ಇದಕ್ಕೆ ಇನ್ನೊಂದು ಉದಾಹರಣೆ ನೀಡುತ್ತೇನೆ, ನಮ್ಮ ಸಂಸ್ಥೆಯ ವತಿಯಿಂದ ಕಳೆದ ವರ್ಷ 2016ರ ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರಿನ ಹೊರವಲಯದ ಕಡಬಗೆರೆ ಪ್ರೈಮರಿ ಮತ್ತು ಹೈಸ್ಕೂಲಿಗೆ ಶುದ್ಧ ನೀರಿನ ವ್ಯವಸ್ಥೆ ಮಾಡಿದ್ದೆವು. ಘಟಕ ಹಾಕಿದ್ದ ಕಂಪನಿಯವರು ಅದರ ನಿರ್ವಹಣೆ ಮಾಡುವುದಾಗಿಯೂ ಹಣ ಪಡೆದರು, ಕೆಲವು ತಿಂಗಳ ನಂತರ ಪ್ರಶಾಂತ್ ಎನ್ನುವ ಹುಡುಗ ಕೆಲಸ ಬಿಟ್ಟ, ಅದಾದ ನಂತರ ಅವರ ಕಛೇರಿ ಕೂಡ ಬೇರೆ ಕಡೆಗೆ ಸ್ಥಳಾಂತರಿಸಿದರು. ನಾವು ಅವರನ್ನು ನಂಬಿ, ವಾಟರ್ ಫಿಲ್ಟರ್ ಹಾಕಿಸಿ ಸರ್ಕಾರಿ ಶಾಲೆಯ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ನಂಬಿದಕ್ಕೆ ಅವರ ಹಿಂದೆ ಸುತ್ತಾಡಿ ಅವರನ್ನು ಹಿಡಿಯುವುದೇ ಒಂದು ಬೃಹತ್ ಯೋಜನೆಯಾಯಿತು. ಈ ರೀತಿಯ ಹಲವಾರು ಅನುಭವಗಳು ನನ್ನ ನೆನಪಿನ ಹೊತ್ತಿಗೆಯಲ್ಲಿಯೇ ಇವೆ.

ಈಗ ಮುಂದಿನ ವಿಷಯವಾದ ಹಣಕಾಸಿನ ವೆಚ್ಚಕ್ಕೆ ಬರೋಣ. ಎಲ್ಲಾ ಯೋಜನೆಯಲ್ಲಿಯೂ ಬಹಳ ಮುಖ್ಯವಾದ್ದು ಹಣಕಾಸು. ನಮ್ಮಲ್ಲಿ ಹಣಕಾಸು ವ್ಯವಹಾರ ಎಂದರೇ ಸಾಕು, ಇದೇನು ವ್ಯಾಪಾರನಾ? ಎನ್ನುತ್ತಾರೆ. ನಮ್ಮ ಈ ನಿರ್ಲಕ್ಷ್ಯದಿಂದಲೇ ಈ ದಿನ ಸರ್ಕಾರದ ಬೊಕ್ಕಸದಿಂದ ಅಂಕೆಯಿಲ್ಲದೆ ಪೋಲಾಗುತ್ತಿರುವುದು. ನನ್ನ ದೃಷ್ಠಿಯಲ್ಲಿ ಪ್ರತಿಯೊಂದು ಯೋಜನೆಯು ಆರ್ಥಿಕ ಲಾಭವನ್ನು ನೋಡಿಕೊಂಡು ಸಿದ್ಧಪಡಿಸಬೇಕು. ಎಷ್ಟು ಮೊತ್ತದಲ್ಲಿ ಏನನ್ನು ಸಾಧಿಸುತ್ತೇವೆ? ಅದಕ್ಕಿಂತ ಕಡಿಮೆ ಮೊತ್ತದಲ್ಲಿ ಮತ್ತು ಅದೇ ಗುಣಮಟ್ಟವನ್ನು ಕಾಪಾಡುವುದಕ್ಕೆ ಆಗುವುದೇ? ಕಡಿಮೆ ದುಡ್ಡು ಎಂದಾಕ್ಷಣ ಮನಸ್ಸಿಗೆ ಬರುವುದು ಕಳಪೆ ಗುಣಮಟ್ಟ, ಸರ್ಕಾರಿ ಶಾಲೆ ಉಚಿತ ಶಿಕ್ಷಣ ಎಂದಾಕ್ಷಣ ಕಡಿಮೆ ಗುಣಮಟ್ಟ ಎನ್ನುವ ಚಾಲಿಯಿದೆ. ಕಡಿಮೆ ಖರ್ಚು ಸರ್ಕಾರಿ ಆಸ್ಪತ್ರೆ ಎಂದರೆ ಸಾಕು ಕಳಪೆ ಆರೋಗ್ಯ ಎನ್ನುತ್ತಾರೆ. ಹೆಚ್ಚು ಹಣ ಖರ್ಚು ಮಾಡಿದರೆ ಹೆಚ್ಚು ವಿದ್ಯಾಬ್ಯಾಸ ಸಿಗುತ್ತದೆ, ಹೆಚ್ಚು ದುಡ್ಡು ಕೊಟ್ಟರೆ ಹೆಚ್ಚು ಆರೋಗ್ಯವೆನ್ನುವುದು ಸುಳ್ಳು ಎನ್ನುವ ಅರಿವು ಬರಬೇಕು. ಕಡಿಮೆ ಹಣಕಾಸಿನಲ್ಲಿಯೂ ಗುಣಮಟ್ಟವನ್ನು ಕಾಪಾಡಬಹುದು, ಸೋರಿಕೆಯನ್ನು ತಡೆಯಬೇಕಷ್ಟೆ. ನಾನು ಬಹಳ ದಿನದ ನಂತರ ಬರೆಯುತ್ತಿರುವುದರಿಂದಲೋ ಏನೋ, ವಿಷಯಾಂತರವಾಗುತ್ತಿದೆ, ಇಲ್ಲದಿದ್ದರೂ ನಾನು ಸುತ್ತಿ ಬಳಸಿ ವಿಷಯ ಹೇಳುವುದು ಹೆಚ್ಚು. ಮಠ ಸಿನೆಮಾ ರೀತಿ ಉಪಕಥೆಗಳು ಜಾಸ್ತಿ, ಅದರಿಂದಲೇ ಸಿನೆಮಾ ಚೆನ್ನಾಗಿದ್ದರೂ ಓಡಲಿಲ್ಲ.

ಈಗ ನೇರ ಹಣಕಾಸಿನ ವಿಷಯಕ್ಕೆ ಬರೋಣ: ಒಂದೊಮ್ಮೆ ಒಂದು ಶಾಲೆಗೆ 80-90 ಸಾವಿರ ಖರ್ಚು ಮಾಡಿ ಸ್ಮಾರ್ಟ್ ಕ್ಲಾಸ್ ಹಾಕಿಸಿದರೆ, ಅದರಿಂದ ಆಗುವ ಲಾಭಗಳೇನು? ಎಷ್ಟು % ಫಲಿತಾಂಶ ಹೆಚ್ಚಾಗಬಹುದು? ಬಹುತೇಕ ಶಾಲೆಗಳ ದೃಷ್ಠಿ ನೇರವಾಗಿ ಪರಿಕ್ಷೆಯ ಮತ್ತು ಫಲಿತಾಂಶದ ಕಡೆಗೆ ಇರುತ್ತದೆ. ಇದು ತಪ್ಪಲ್ಲ, ಇಲಾಖೆ ಕೇಳುವುದು ಅದನ್ನೆ. ಆದ್ದರಿಂದ, ಕಂಪನಿಯವರು ನಿಮಗೆ ಭರವಸೆ ಕೊಡುತ್ತಾರಾ? ಸ್ಮಾರ್ಟ್ ಕ್ಲಾಸಿನಿಂದ ಕಲಿತರೆ, ಕನಿಷ್ಠ ಇಷ್ಟು % ಫಲಿತಾಂಶ ಹೆಚ್ಚಳವಾಗುತ್ತದೆ ಎಂದು? ಅಥವಾ ನಿಮಗೆ ಆ ಭರವಸೆ ಇದ್ಯಾ? ನಿಮಗೆ ಆ ಭರವಸೆಯಿದ್ದರೆ ನಾನು ನಿಮ್ಮನ್ನು ಬೆಂಬಲಿಸುತ್ತೇನೆ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುತ್ತೇನೆ. ಕೆಲವು ಶಿಕ್ಷಕರು ಟ್ಯೂಷನ್ ಮಾಡುತ್ತಾರೆ, ಅವರು ನಿಮಗೆ ಭರವಸೆ ಕೊಡುತ್ತಾರೆ ನಮ್ಮಲ್ಲಿ ಟ್ಯೂಷನ್‍ಗೆ ಬಂದರೆ ಕನಿಷ್ಟ ಇಷ್ಟು % ಬಂದೇ ಬರುತ್ತದೆ ಎಂದು. ಅದಕ್ಕಾಗಿಯೇ ಅಲ್ಲಿಗೆ ಪೋಷಕರು ಟ್ಯೂಷನ್‍ಗಾಗಿ ತಮ್ಮ ಮಕ್ಕಳನ್ನು ಕಳುಹಿಸುವುದು. ಮತ್ತು ಅದನ್ನು ಬಹುತೇಕ ಅವರು ಸಾಧಿಸಿ ತೋರಿಸುತ್ತಾರೆ, ಇಲ್ಲದಿದ್ದರೇ ಆ ಟುಟೋರಿಯಲ್ ಮುಚ್ಚಬೇಕಾಗುತ್ತದೆ. ಅಥವಾ ಅವರನ್ನು ಹೀಗೆ ಕೇಳೋಣ, 90 ಸಾವಿರ ರೂಪಾಯಿಗಳಿಗೆ ಒಪ್ಪಿಗೆಯಿದೆ, ನಮ್ಮ ಶಾಲೆಯಲ್ಲಿ ಕಳೆದ ವರ್ಷ ಇಷ್ಟು % ಫಲಿತಾಂಶವಿತ್ತು, ಅದಕ್ಕಿಂತ ಹೆಚ್ಚಾದರೆ ಅದು ನಿಮ್ಮಿಂದಲೇ ಎನ್ನುವುದನ್ನು ಒಪ್ಪುತ್ತೇವೆ. ಫಲಿತಾಂಶ ಬಂದ ನಂತರ ನಾವು ನಿಮಗೆ ಬಡ್ಡಿ ಸಮೇತ ಕೊಡುತ್ತೇವೆಂದು? ಆಲೋಚಿಸಿ ನೋಡಿ. ಹಾಕಿದ ಹಣಕ್ಕೆ ತಕ್ಕ ಲಾಭ ಹಾಕಬೇಕಲ್ಲವೇ? ಬೆಂಗಳೂರಿನಲ್ಲಿ ಪಿಝಾ ಹಟ್ ಕಂಪನಿಯವರು, ಅವರು ಹೇಳಿದ ಸಮಯಕ್ಕಿಂತ ತಡವಾಗಿ ನಿಮಗೆ ಪಿಝಾ ಡಿಲಿವರಿ ನೀಡಿದರೆ ಅದರ ಹಣವನ್ನು ಪಡೆಯುವುದಿಲ್ಲ. ಏಕೆಂದರೆ ಅವರ ವಸ್ತುವಿನ ಬಗ್ಗೆ ಅವರಿಗೆ ನಂಬಿಕೆಯಿದೆ. ಅದೇ ರೀತಿ ಸ್ಮಾರ್ಟ್ ಕ್ಲಾಸ್ ನೀಡುವ ಕಂಪನಿಯವರಿಗೂ ಇರಬೇಕಲ್ಲವೇ?

ನಾನು ಮೇಲಿನದ್ದೆಲ್ಲಾ ಹೇಳಿದ ಮೇಲೆ, ಪ್ರಮುಖವಾದ ಒಂದಿಷ್ಟು ವಿಷಯಗಳನ್ನು ಸರ್ಕಾರಿ ಶಾಲೆಗಳನ್ನು ಗಮನದಲ್ಲಿರಿಸಿಕೊಂಡು ಹೇಳುತ್ತೇನೆ. ನೀವುಗಳು ಖಾಸಗಿ ಶಾಲೆಗಳೊಂದಿಗೆ ಒಮ್ಮೆ ಹೋಲಿಕೆ ಮಾಡಿ ನೋಡಿ, ಏಕೆಂದರೆ ಶಾಲೆಯ ದಾಖಲಾತಿ ಇದೇ ರೀತಿ ಕುಸಿಯುತ್ತಾ ಬಂದರೆ ಸರ್ಕಾರಿ ಶಾಲೆಗಳು ಮುಚ್ಚುವುದು ಖಚಿತ. ನಾನೂ ಸೇರಿದಂತೆ ಶಿಕ್ಷಣಕ್ಕೆ ಸಂಬಂಧಿಸಿದ ಹಲವರು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಅದು ಯಾವುದೆಂದರೇ, ಒಂದು ಮಗುವಿನ ಕಲಿಕೆಗೆ ಸರ್ಕಾರಿ ಶಾಲೆಯಲ್ಲಿ ಆಗುತ್ತಿರುವ ಖರ್ಚೆಷ್ಟು ಮತ್ತು ಖಾಸಗಿ ಶಾಲೆಯಲ್ಲಿ ಆಗುತ್ತಿರುವ ಖರ್ಚೆಷ್ಟು? ನಿಮಗೆ ಅಚ್ಚರಿಯಾಗಬಹುದು, ಸರ್ಕಾರಿ ಶಾಲೆಗಳ ಖರ್ಚು, ಖಾಸಗಿಯವರದಕ್ಕಿಂತ ದುಪ್ಪಟ್ಟಾಗುತ್ತಿದೆ. ನಾನು ಸುಳ್ಳು ಹೇಳುತ್ತಿಲ್ಲಾ ನೀವೇ ನಿಮ್ಮ ಶಾಲೆಯ ಅಂಕಿ ಅಂಶಗಳನ್ನು ಬರೆದುಕೊಂಡು ಲೆಕ್ಕ ಹಾಕಿ. ಕಟ್ಟಡ ಖರ್ಚು (50ರಿಂದ60ಲಕ್ಷಗಳು), ವೇತನ (35ಸಾವಿರ*7ಜನರು=2ಲಕ್ಷದ ನಲ್ವತ್ತೈದು ಸಾವಿರ ರೂಪಾಯಿಗಳು, ಒಂದು ತಿಂಗಳಿಗೆ, ವಿದ್ಯಾರ್ಥಿಗಳ ಸಂಖ್ಯೆ 50-60, ಇದನ್ನೇ ಖಾಸಗಿ ಶಾಲೆಯಲ್ಲಿ ಶಿಕ್ಷಕರ ವೇತನ-10ಸಾವಿರ ಗರಿಷ್ಠ, ವಿದ್ಯಾರ್ಥಿಗಳ ಸಂಖ್ಯೆ 500-600 ಕನಿಷ್ಠ), ಶಿಕ್ಷಕರ ತರಬೇತಿ ಖರ್ಚು? ವಿವಿಧ ಕಾರ್ಯಕ್ರಮಗಳ ಖರ್ಚು? ಮುಂದೊಂದು ದಿನ ಸರ್ಕಾರ ಖಾಸಗಿ ಶಾಲೆಗಳು ಮಾತ್ರ ನಡೆಯಲಿ, ಖಾಸಗಿ ಶಾಲೆಯಲ್ಲಿ ಓದುವ ಬಡವರ ಮಕ್ಕಳಿಗೆ ಉಚಿತ ಶಿಕ್ಷಣದ ರೂಪದಲ್ಲಿ, ಅವರ ಖರ್ಚನ್ನು ಭರಿಸೋಣ ಎಂದರೆ? ಈಗಾಗಲೇ ಮಕ್ಕಳ ಶಿಕ್ಷಣ ಕಾಯ್ದೆ ಯೋಜನೆಯಡಿಯಲ್ಲಿ ಖಾಸಗಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಖರ್ಚನ್ನು ಸರ್ಕಾರವೇ ಭರಿಸುತ್ತಿದೆ. ಹಾಗಾಗಿ ಸರ್ಕಾರಿ ಶಾಲೆಗಳು ಕೇವಲ ಸಂಬಳ ತೆಗೆದುಕೊಂಡು ಎಷ್ಟು ಬೇಕೋ ಅಷ್ಟು ಪಾಠ ಮಾಡಿ ಹೋಗುವ ಕಾಲ ಮುಗಿಯುತ್ತಿದೆ. ಅದಕ್ಕೆ ನಿದರ್ಶನವೆನ್ನುವಂತೆ, ಖಾಸಗಿ ವಿಶ್ವವಿದ್ಯಾಲಯಗಳು ಹೆಚ್ಚುತ್ತಿರುವುದು ಮತ್ತು ಸರ್ಕಾರಿ ವಿಶ್ವವಿದ್ಯಾಲಯಗಳ ಗುಣಮಟ್ಟ ಕುಸಿಯುತ್ತಿರುವುದು, ಅದರ ಜೊತೆಗೆ ಬಹುತೇಕ ಪ್ರಾಥಮಿಕ ಶಾಲೆಗಳು ಅಳಿವಿನಲ್ಲಿರುವುದು ಮತ್ತು ಇಂದೋ ನಾಳೆಯೋ ಬಾಗಿಲು ಹಾಕಬಹುದು ಎನ್ನುವುದು ಗೊತ್ತಿರುವ ವಿಷಯ.

ಮಕ್ಕಳ ದಾಖಲಾತಿಯ ಕುರಿತು ಚರ್ಚಿಸೋಣ. ಉದಾಹರಣೆಗೆ ಪೋಷಕರು ಖಾಸಗಿ ಶಾಲೆಗಳತ್ತ ಏಕೆ ಮುಖ ಮಾಡಿದ್ದಾರೆ? ಎಲ್ಲಾ ಖಾಸಗಿ ಶಾಲೆಗಳಲ್ಲಿಯೂ ಸ್ಮಾರ್ಟ್ ಕ್ಲಾಸ್ ಇಲ್ಲ. ಅದರ ಜೊತೆಗೆ ಶುಲ್ಕವೂ ಹೆಚ್ಚು ಆದರೂ ಅವರೆಲ್ಲರೂ ಏಕೆ, ಖಾಸಗಿ ಶಾಲೆಯೇ ಉತ್ತಮ ಎನ್ನುತ್ತಿದ್ದಾರೆ ಅಥವಾ ಬೇಕೆನ್ನುತ್ತಿದ್ದಾರೆ? ಅದನ್ನು ಗಂಬೀರವಾಗಿ ಅವಲೋಕಿಸಬೇಕಿದೆ. ಅದನ್ನು ನೀವು ಮಾಡಿಕೊಳ್ಳಿ, ನನ್ನ ವೈಯಕ್ತಿಕವಾಗಿ ಒಂದು ಶಾಲೆ ಹೇಗಿರಬೇಕೆನ್ನುವುದರ ಬಗ್ಗೆ ನನ್ನ ಅನಿಸಿಕೆಯನ್ನು ತಿಳಿಸುತ್ತೇನೆ. ಇದನ್ನು ಮಕ್ಕಳೊಂದಿಗೆ ಚರ್ಚಿಸುವುದು ಉತ್ತಮ. ಮುಖ್ಯವಾಗಿ ನಾನು ಈಗ ಹೇಳುವ ವಿಷಯಗಳನ್ನು,

1. ಭೌತಿಕ ಪರಿಸರ: ಯಾವುದೇ ಶಾಲೆಗೆ ಹೆಜ್ಜೆ ಇಟ್ಟಾಗ ಮೈ ರೋಮಾಂಚನವೆನಿಸಬೇಕು. ಅದೊಂದು ಪವಿತ್ರ ಸ್ಥಳವೆನಿಸಬೇಕು. ಮುಂದಿನ ಪೀಳಿಗೆಯ ನಾಯಕರನ್ನು ಸೃಷ್ಟಿಸುತ್ತಿದ್ದೇವೆ ಎನ್ನುವುದು ಕಾಣಬೇಕು. ನೀವು ಗಮನಿಸಿರಬಹುದು, ಕೆಲವೊಂದು ಹೋಟೆಲ್‍ಗಳು ಅಥವಾ ದೇವಸ್ಥಾನಗಳು ಹೆಜ್ಜೆ ಇಟ್ಟಾಕ್ಷಣ ಅದ್ಬುತವೆನಿಸುತ್ತವೆ. ಕೊಡಗಿನ ಮಡಿಕೇರಿಯಲ್ಲಿರುವ ರಾಜಾ ಸೀಟ್‍ಗೆ ಹೆಜ್ಜೆ ಇಟ್ಟ ತಕ್ಷಣ ಅಲ್ಲಿನ ಆವರಣ, ಉದ್ಯಾನವನ, ಸ್ವಚ್ಛತೆ ನಮ್ಮನ್ನು ಬೇರೆ ಲೋಕಕ್ಕೆ ಕರೆದೊಯ್ಯುತ್ತದೆ. ನೀವು ಇರುವುದು ಮಡಿಕೇರಿಯಲ್ಲಿಯೇ, ನೀವು ನೋಡಿರುವ ನಗರ ನೀವು ಸುತ್ತಾಡಿರುವ ನಗರ ಆದರೆ ರಾಜಾಸೀಟು? ಬೇರೆ ಎನಿಸುತ್ತದೆ. ಊರು ಹೇಗೋ ಇರಬಹುದು, ಆದರೆ ಶಾಲೆಯ ಆವರಣ, ಒಳಕ್ಕೆ ಬಂದಾಗ ಅಥವಾ ಬರುವುದಕ್ಕೆ ಮಗುವಿಗೆ ಆನಂದವಾಗಬೇಕು, ಅವರ ಪೋಷಕರಿಗೆ ಉಲ್ಲಾಸವಿರಬೇಕು ಅಂಥವ ಪರಿಸರವನ್ನು ನಿರ್ಮಿಸಬೇಕು. ಇದಕ್ಕೇನು ಹಣದ ಅವಶ್ಯಕತೆ ಇದ್ಯಾ? ಮೂರು ದಿವಸಗಳು ಪೋಷಕರು, ಹಿರಿಯ ವಿದ್ಯಾರ್ಥಿಗಳು, ಗ್ರಾಮಸ್ಥರು ನಿಂತರೆ ಸಾಕು. ಅದನ್ನು ಶಿಕ್ಷಕರು ಮಾಡಿಸಬೇಕು. ಊರಿನವರಿಗೆ ಶಾಲೆಗೆ ಏನು ಬೇಕೆನ್ನುವುದು ತಿಳಿದಿರುವುದಿಲ್ಲ, ಅದನ್ನು ತಿಳಿಸಬೇಕು, ತಿಳಿಸಿದರೆ ಬರುವುದಿಲ್ಲವೆನ್ನುವುದಿಲ್ಲ.

2. ಕಲಿಕೆಯ ಪರಿಸರ: ಸದಾ ಕೊಠಡಿಯಲ್ಲಿಯೇ ಪಾಠ ಮಾಡುವುದು ಶಿಕ್ಷಕರಿಗೂ ಬೇಸರವಾಗಬಹುದು ಮತ್ತು ಮಕ್ಕಳಿಗೂ ಕೂಡ. ಅವರಿಗಾಗಿ ಒಂದು ರೌಂಡ್ ಟೇಬಲ್ (ದುಂಡು ಮೇಜಿನ ವ್ಯವಸ್ಥೆ), ಪರಿಸರ ಸ್ನೇಹಿ ಮತ್ತು ಕಲಾತ್ಮಕ ಸೀಟಿನ ವ್ಯವಸ್ಥೆಯಿರಬೇಕು. ಉದಾಹರಣೆಗೆ ಕುಶಾಲನಗರದ ನಿಸರ್ಗಧಾಮದಲ್ಲಿರುವಂತೆ ಒಂದು ತರಗತಿಯವರು ಒಮ್ಮೆಗೆ 15-20 ವಿದ್ಯಾರ್ಥಿಗಳು ಕುಳಿತು (ವೃತ್ತಾಕಾರದಿಂದ) ಚರ್ಚಿಸುವುದು, ಕಲಿಯುವುದು. ಉತ್ತಮ ಆಮ್ಲಜನಕ ನೀಡುವ ಮತ್ತು ಔಷಧಿ ಗುಣಗಳಿರುವ ಮರಗಳನ್ನು ಬೆಳೆಸಿ, ಅದರ ನೆರಳಲ್ಲಿ ಬೆಂಚಿನ ವ್ಯವಸ್ಥೆ ಮಾಡಿದರು ಆಗಬಹುದು.

3. ಆರೋಗ್ಯಕರ ಪರಿಸರ: ಇದು ಏನು ಎಂಬುದು ಎಲ್ಲಾ ಮಕ್ಕಳಿಗೂ ತಿಳಿದಿದೆ. ಶುದ್ಧ ಕುಡಿಯುವ ನೀರು. ಶುದ್ದೀಕರಣ ಘಟಕವೇ ಇರಬೇಕೆಂಬ ನಿಯಮವಿಲ್ಲ, ಆದರೆ, ನೀರಿನ ತೊಟ್ಟಿಯ ಶುಚಿತ್ವ, ಸಾಧ್ಯವಾದಷ್ಟು ಮಡಕೆಯಲ್ಲಿ, ಹಿತ್ತಾಳೆ/ತಾಮ್ರದ ಪಾತ್ರೆಗಳಲ್ಲಿ ಕುಡಿಯುವ ನೀರನ್ನು ಇಡುವ ವ್ಯವಸ್ಥೆ. ಕುಡಿಯುವ ನೀರಿನ ತೊಟ್ಟಿ, ಪಾತ್ರೆ ತೊಳೆಯುವುದು ಕಷ್ಟದ ಕೆಲಸವೇ? ಅದರ ಜೊತೆಗೆ ತಾವೇ ಬೆಳೆದು ತಿನ್ನುವ ತರಕಾರಿ. ಸರ್ಕಾರ ಬಿಸಿಯೂಟದಲ್ಲಿ ತರಕಾರಿ ಕೊಡಬಹುದು, ಆದರೆ ಪೌಷ್ಠಿಕಾಂಶ? ಬೆಳೆಯುತ್ತಿರುವ ಮಕ್ಕಳಿಗೆ ಅಗತ್ಯಗೆ ಮೀರಿದ ಪೌಷ್ಠಿಕಾಂಶದ ಅವಶ್ಯಕತೆಯಿರುತ್ತದೆ. ಅದರ ಜೊತೆಗೆ ನಮ್ಮ ಅನ್ನವನ್ನು ನಾವೇ ಬೆಳೆದೆವು ಎನ್ನುವ ಹೆಮ್ಮೆಯ ಜೊತೆಗೆ  ಸ್ವಾಭಿಮಾನವೂ ಬೆಳೆಯುತ್ತದೆ. ಶಾಲಾವರಣದಲ್ಲಿ ನೈರ್ಮಲ್ಯ, ಶೌಚಾಲಯಗಳನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಬಹಳ ಮುಖ್ಯ. ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ಸ್ವಚ್ಛಗೊಳಿಸುವ ವ್ಯವಸ್ಥೆಯಿರಬೇಕು. ಹೊರಗಿನಿಂದ ಬಂದವರಿಗೂ ಉಪಯೋಗಿಸಿದರೆ ವಾವ್ ಎನ್ನಿಸಬೇಕು. ಇವೆಲ್ಲವೂ ಖರ್ಚಿಲ್ಲದೇ ನಿರ್ವಹಿಸುವ ಯೋಜನೆಗಳು. ಮಾಡುವ ಸಂಕಲ್ಪವಿರಬೇಕು.

4. ಕಣ್ತುಂಬಿಕೊಳ್ಳುವ ಪರಿಸರ: ಶಾಲೆಯ ಆವರಣದಲ್ಲಿ ಉತ್ತಮವಾದ ಹೂವಿನ ಗಿಡಗಳು, ಔóóಷಧಿ ಉದ್ಯಾನವನವಿರಬೇಕು. ಏಕೆಂದರೆ, ಔಷಧಿ ವನದಲ್ಲಿ ಓಡಾಡಿದರೆ, ಆರೋಗ್ಯ ವೃದ್ಧಿಸುತ್ತದೆ. ಅನೇಕ ಔಷಧಿ ಸಸ್ಯಗಳೊಂದಿಗೆ ಬೆರೆತರೆ ಸಾಕು. ದಿನ ನಿತ್ಯಕ್ಕೆ ಬಳಕೆಯಾವುವಂತೆ ಔಷಧಿ ಗಿಡಗಳನ್ನು ಬೆಳೆಸುವುದು ಉತ್ತಮ. ಊಟದ ಜೊತೆಗೆ ಪಲ್ಯಕ್ಕಾಗಿಯೋ ಅಥವಾ ಚಟ್ನಿಗಾಗಿಯೋ ಬಳಸಬಹುದು. ಉದಾಹರಣೆಗೆ: ಒಂದಲಗ, ದೊಡ್ಡಪತ್ರೆ, ಪುದೀನಾ, ಮಿಂಟ್ ಪುದೀನಾ, ತುಳಸಿ, ಬಸಲೆ, ತೊಂಡೆಕಾಯಿ, ಇದೆಲ್ಲವೂ ಮಕ್ಕಳಿಗೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ತಲೆನೋವು, ಜ್ವರ, ಅಲರ್ಜಿ, ಸಣ್ಣಪುಟ್ಟ ಗಾಯಗಳನ್ನು ವಾಸಿಮಾಡಲು ಸಹಾಯವಾಗುತ್ತವೆ. ಶಿಕ್ಷಣವೆಷ್ಟು ಮುಖ್ಯವೋ ಅದೇ ರೀತಿ ದೇಶದ ಅಭಿವೃದ್ಧಿಗೆ ಆರೋಗ್ಯವೂ ಬಹಳ ಮುಖ್ಯ. ಆದ್ದರಿಂದ ಶಾಲಾ ಆವರಣ ಆರೋಗ್ಯವನ್ನು ವೃದ್ಧಿಸುವಂತಿರಬೇಕು. ಸಣ್ಣ ಪುಟ್ಟ ಖಾಯಿಲೆಗಳಿಗೆ ಶಾಲೆಯಲ್ಲಿನ ಗಿಡಮೂಲಿಕೆಗಳಿಂದ ಗುಣಪಡಿಸಬೇಕು. ಅದರ ಜ್ಞಾನವೂ ಮಕ್ಕಳಲ್ಲಿ ಬೆಳೆಯುವಂತೆ ಎಚ್ಚರವಹಿಸಬೇಕು.

5. ಶಾಲಾ ಕೊಠಡಿಗಳು: ಆಕರ್ಷಿತವಾಗಿರಬೇಕು. ಅನೇಕ ಮಾಹಿತಿಗಳು ಚಿತ್ರಪಟಗಳ ಮೂಲಕ ಸಿಗುತ್ತವೆ. ಪೋಸ್ಟರ್‍ಗಳನ್ನು ಪ್ರತಿ ತರಗತಿಯಲ್ಲಿಯೂ ಹಾಕಿದ್ದರೆ, ಬಹಳ ಮುಖ್ಯವಾಗಿ ಬೇಕಿರುವಂತಹುಗಳು. ಪ್ರಪಂಚ ಭೂಪಟ, ಭಾರತ ಭೂಪಟ, ಪಿರಿಯಾಡಿಕ್ ಟೇಬಲ್, ಸಸ್ಯಗಳು, ಪ್ರಾಣಿಗಳ ವಿವರಣೆ (ವರ್ಗ, ವೈಜ್ಞಾನಿಕ ಹೆಸರುಗಳು), ಮೂಲಭೂತ ಹಕ್ಕುಗಳು, ವ್ಯಾಕರಣ, ವಿಜ್ಞಾನಿಗಳು ಮತ್ತು ಅವರ ಮಾಹಿತಿ (ಕೇವಲ ಫೋಟೋ ಹಾಕುವುದಲ್ಲ). ಇವುಗಳು ಒಳಾಂಗಣವನ್ನು ಸುಂದರಗೊಳಿಸುತ್ತವೆ ಮತ್ತು ಮಕ್ಕಳಿಗೂ ಮಾಹಿತಿ ದೊರೆಯುತ್ತದೆ.

6. ಗ್ರಂಥಾಲಯ: ಕಲಿಕೆಗೆ ಅನುಕೂಲವಾಗುವಂತಹ ಪುಸ್ತಕಗಳು, ಅದನ್ನು ತರಗತಿ ಸಮಯದ ಮುಂಚಿತವಾಗಿ ಮತ್ತು ನಂತರ, ಸಾಧ್ಯವಾದಷ್ಟು 8ನೇ ಮತ್ತು 9ನೇ ತರಗತಿಯ ವಿದ್ಯಾರ್ಥಿಗಳನ್ನು ಓದಲು ಪ್ರೋತ್ಸಾಹಿಸುವುದು. ಸಣ್ಣ ಕಥೆ ಪುಸ್ತಕಗಳು, ವಿಜ್ಞಾನದ ಸಂಗತಿಗಳು, ಮನೆ ಮದ್ದು, ಆತ್ಮ ಸ್ಥೈರ್ಯ ತುಂಬುವ ಅಥವಾ ಸಾಮಾನ್ಯ ಜ್ಞಾನ ಹೆಚ್ಚಿಸುವ ಪುಸ್ತಕಗಳು, ಎರಡು ಅಥವಾ ಮೂರು ದಿನ ಪತ್ರಿಕೆಗಳು. ಓದುವುದು ಎಂದರೆ ಕೇವಲ ಪಠ್ಯವನ್ನು ಮಾತ್ರವೆಂಬ ಕಲ್ಪನೆಯಿಂದ ಹೊರಕ್ಕೆ ಬರಬೇಕು. ಹೊರಜಗತ್ತು ಕುಳಿತಿಂದಲೇ ಪರಿಚಯವಾಗಬೇಕು. ಓದು ಮಕ್ಕಳನ್ನು ಸಮಾಜಮುಖಿಯಾಗಿಸಬೇಕು. ತಾನು ಮಾತ್ರ ಓದಿ, ತಾನು ಅಂಕ ಗಳಿಸಿ ಪಾಸಾಗಿ, ಕೆಲಸ ತೆಗೆದುಕೊಂಡರೆ ಸಾಕೆನ್ನುವ ಸ್ವಾರ್ಥದಿಂದ ಹೊರಬಂದು, ನಾನು ನನ್ನ ಸಮಾಜ, ನಾವೆಲ್ಲರೂ ಒಂದಾಗಿ ಸಾಗೋಣವೆನ್ನುವುದನ್ನು ತುಂಬಬೇಕು.

7. ಪ್ರಯೋಗಾಲಯ: ಕಂಪ್ಯೂಟರ್ ಮೂಲಕ ಕಲಿತರೆ ಕಲಿಕೆಯ ವೇಗ ಹೆಚ್ಚುತ್ತದೆ. ಹೆಚ್ಚಿಸಿ ಏನು ಮಾಡುತ್ತೀರಿ? ಟಿವಿಯಲ್ಲಿ ಒಗ್ಗರಣೆ ಡಬ್ಬಿ ನೋಡಿ ಏನು ಮಾಡುತ್ತೀರಿ? ಅದನ್ನು ಮತ್ತೊಮ್ಮೆ ಬರೆಯುತ್ತೀರಿ? ಸ್ಮಾರ್ಟ್ ಕ್ಲಾಸಲ್ಲಿ ಕುಳಿತು, ಕಲಿತು ಏನು ಮಾಡುತ್ತೀರಿ? ಅದನ್ನ ಪರಿಕ್ಷೆಯಲ್ಲಿ ಬರೆಯುತ್ತೀರಿ? ಮೊದಲು ಅದನ್ನೇ ತಾನೇ ಮಾಡುತ್ತಿದ್ದದ್ದು? ಮಾಸ್ಟರು ಪಾಠ ಮಾಡಿದ್ದನ್ನು ಕೇಳಿ ಅದನ್ನು ಕಲಿತು/ಓದಿಯೋ/ನೆನಪಿಟ್ಟುಕೊಂಡೋ ಪರೀಕ್ಷೆಯಲ್ಲಿ ಬರೆದು ಪಾಸಾಗುತ್ತಿದ್ದಿರಿ ಅಲ್ವಾ? ವ್ಯತ್ಯಾಸವೇನು? ಸ್ಮಾರ್ಟ್ ಕ್ಲಾಸಿನಿಂದಾದ ಬದಲಾವಣೆ ಏನು? ಮೈಸೂರು ಪಾಕ್ ತೋರಿಸಿ ಅದರ ಸಿಹಿಯನ್ನು ವಿವರಿಸಿದಂತೆ ಇದೂ ಕೂಡ. ಅದು ಹೇಗಿದೆ ಅನ್ನೋದು ಕಣ್ಣಿಗೆ ಗೊತ್ತಾದರೆ ಸಾಕೇ? ಅದರ ರುಚಿ ನಾಲಗೆಗೆ ಗೊತ್ತಾಗೋದು ಬೇಡವೇ? ಆದ್ದರಿಂದ ಪ್ರಾಯೋಗಿಕವಾಗಿ ಅಭ್ಯಸಿಸುವುದು ಮುಖ್ಯ. ಅದಕ್ಕಾಗಿ, ದುಬಾರಿ ಪ್ರಯೋಗಾಲಯ ಬೇಡ, ಒಂದು ಚಿಕ್ಕದಾದ ಪ್ರಯೋಗಾಲಯ, ಅಲ್ಲಿ ನೀವು ತರಗತಿಯಲ್ಲಿ ಕಲಿಯುವ ಪಾಠವನ್ನು ಪ್ರಾಯೋಗಿಕವಾಗಿ ಮಾಡುವಂತಾಗಬೇಕು. ಅದನ್ನು ನೀವು ಅನುಭವಿಸಬೇಕು. ಉದಾಹರಣೆಗೆ, ಲವಣಗಳನ್ನು ಬೆಂಕಿಗೆ ಹಿಡಿದಾಗ ಬೇರೆ ಬೇರೆ ಬಣ್ಣದ ಕಿಡಿಗಳು/ಬೆಂಕಿ ಕಾಣುತ್ತದೆ. ಅದನ್ನು ನಾನು ಹೇಳಿದರೆ ಗೊತ್ತಾಗುವುದಿಲ್ಲ, ನೀವು ಸ್ವಲ್ಪ ಉಪ್ಪನ್ನು (ಸೋಡಿಯಂ ಕ್ಲೋರೈಡ್) ಬೆಂಕಿಗೆ ಹಿಡಿದು ನೋಡಿ ಅಥವಾ ಕೆಲವೊಮ್ಮೆ ಕೋಳಿ ತಿನ್ನುವವರು ಅದರ ಲಿವರ್ ಅನ್ನು ಸುಟ್ಟು ತಿನ್ನುತ್ತಾರೆ, ಸುಡುವ ಸಮಯದಲ್ಲಿ ಗಮನಿಸಿ, ಬೇರೆ ಬೇರೆ ಬಣ್ಣದ ಕಿಡಿಗಳು ಹೊತ್ತುತ್ತವೆ. ಅದನ್ನು ನೀವಾಗಿಯೇ ಪ್ರಾಯೋಗಿಕವಾಗಿ ಮಾಡಿದಾಗ ನಿಮಗೆ ಅದರ ಹಿನ್ನಲೆ ಮತ್ತು ಕಾರಣಗಳು ಸಿಗುತ್ತವೆ. ನಿಮಗೂ ಕುತೂಹಲ ಉಂಟಾಗಿ ಜಗತ್ತಿನ ವಿಸ್ಮಯಗಳಿಗೆ ಕಣ್ತೆರೆಯುತ್ತೀರಿ. ಅದು ವಿಜ್ಞಾನಿಯಾಗುವ ಮೊದಲ ಹೆಜ್ಜೆ.

ನೀವು ಕಲಿಯುವ ಶಾಲೆ, ನೀವು ವಿಜ್ಞಾನಿಗಳಾಗುವ ಒಂದು ಪ್ರಯೋಗಾಲಯವಿರಬೇಕು. ಉಪಯೋಗಿಸಿದ ವಸ್ತುಗಳನ್ನು ಬಳಸಿ, ಹಳೆ ಮೊಬೈಲ್ ಫೋನ್, ಯಾವುದೋ ಆಯಸ್ಕಾಂತ, ಪೆನ್ಸಿಲ್ ಲೆಡ್, ಫ್ಯಾನ್ ಮೋಟಾರ್ ಯಾವುದು ಸಿಗುತ್ತದೆ ಅದನ್ನೆಲ್ಲಾ ಬಳಸಿಕೊಂಡು ಏನಾದರು ತಯಾರಿಸಬಹುದಾ ಯೊಚಿಸಬೇಕು. ಸದಾ ಸಂಶೋಧನಾ ಮನೋವೃತ್ತಿ ಬೆಳೆಸಿಕೊಳ್ಳುವಂತಿರಬೇಕು. ಶಿಕ್ಷಕರು ನಿಮ್ಮ ಸೃಜನಶೀಲತೆಯನ್ನು ಗುರುತಿಸಿ ಬೆಳೆಸಬೇಕು. ಕೇವಲ ಶಾಲೆಗೆ ಬರುವುದು ಪಾಠ ಕೇಳಿಸಿಕೊಳ್ಳುವುದು ನಂತರ ಪರೀಕ್ಷೆಯಲ್ಲಿ ಅದನ್ನು ಬರೆಯುವುದು ಮರೆಯುವುದು ಅನ್ನೋದು ಶಿಕ್ಷಣ ಹೇಗೆ ಆಗುವುದಕ್ಕೆ ಸಾಧ್ಯ?

8. ಕಂಪ್ಯೂಟರ್ ಶಿಕ್ಷಣ: ಕಂಪ್ಯೂಟರ್ ಈ ಜಗತ್ತಿನ ಈ ದಿನದ ಬಹಳ ಮುಖ್ಯ ಮೂಲಭೂತ ಅವಶ್ಯಕ ವಸ್ತುವಾಗಿದೆ. ಅದಿಲ್ಲದೆ ಜೀವನವೇ ಅಸಾಧ್ಯವೆನಿಸುವಷ್ಟು ಅದರ ಮೇಲೆ ನಾವು ಅವಲಂಬಿತರಾಗಿದ್ದೇವೆ. ಈ ಸಮಯದಲ್ಲಿ ನಾವು ಕಂಪ್ಯೂಟರ್ ಬಳಸಿ ಪಾಠ ಮಾಡುವುದಕ್ಕಿಂತ ಮಕ್ಕಳಿಗೆ ಕಂಪ್ಯೂಟರ್ ಉಪಯೋಗಿಸುವಂತೆ ತಯಾರಿ ಮಾಡುವುದು ಉತ್ತಮ. ಹಸಿದವನಿಗೆ ಅನ್ನ ನೀಡುವುದು ಒಳ್ಳೆಯದು ಆದರೆ ಅನ್ನ ಸಂಪಾದನೆಯನ್ನು ಹೇಳಿಕೊಡುವುದು ಶಾಸ್ವತ. ಆದ್ದರಿಂದ ಶಾಲೆಯಲ್ಲಿ ಬಹುತೇಕ ಶಿಕ್ಷಕರಿಗೆ ಕಂಪ್ಯೂಟರ್ ಜ್ಞಾನವಿದೆ, ಅದರ ವಿವರಣೆ, ತಾಂತ್ರಿಕತೆ ಗೊತ್ತಿಲ್ಲದೆ ಇದ್ದರೂ ಪರವಾಗಿಲ್ಲ. ತಾಂತ್ರಿಕತೆಯಾಗಲೀ, ಸಿದ್ಧಾಂತವನ್ನಾಗಲಿ ತಿಳಿದಿರಲೇಬೇಕೆಂಬ ನಿಯಮವಿಲ್ಲ. ಏಕೆಂದರೆ, ನಮ್ಮಲ್ಲಿ ಅನೇಕರು ಮೊಬೈಲ್, ಟಿವಿ, ಫ್ಯಾನ್ ತೆಗೆದುಕೊಂಡು ಬಂದಿದ್ದೇವೆ, ಅದರ ಜೊತೆಗೆ ಒಂದು ಯೂಸರ್ ಮಾನ್ಯುಲ್ ಕೊಟ್ಟಿರುತ್ತಾರೆ, ಅಲ್ಲಿ ಏನೆನೋ ಬರೆದಿರುತ್ತಾರೆ. ಆದರೆ, ಅದನ್ನು ಒಮ್ಮೆಯೂ ಓದುವುದಿಲ್ಲ ಹಾಗಿದ್ದೂ ನಮಗೆ ಎಲ್ಲವೂ ತಾನೇ ತಾನಾಗಿ ತಿಳಿದಿರುತ್ತದೆ. ಏಕೆಂದರೆ, ಅದು ನಾವು ಅಭ್ಯಾಸ ಮಾಡುತ್ತಾ ಮಾಡುತ್ತಾ ಬರುವುದರಿವಂದ. ಓದುವುದಕ್ಕೆ ಬರದೇ ಇರುವವರು ಕೂಡ ಮೊಬೈಲ್ ಬಳಸುತ್ತಾರೆ ಅಲ್ವಾ? ಹೇಗೆ? ಅಳವಡಿಕೆಯಿಂದ.

ಕಂಪ್ಯೂಟರ್ ಬಗ್ಗೆ ತಿಳಿದುಕೊಳ್ಳುವುದರ ಜೊತೆಗೆ ಅದನ್ನು ಬಳಸುವುದು, ಅದನ್ನು ಬಳಸಿ ಶಾಲೆಗೆ ಬೇಕಿರುವ ಅಥವಾ ವಿದ್ಯಾರ್ಥಿಗಳಿಗೆ ಬೇಕಿರುವ ಪ್ರಾಜೆಕ್ಟ್ ವರ್ಕ್ ಮಾಡುವಂತೆ ಮಾಡಬೇಕು. ಒಂದು ಶಾಲೆಯಲ್ಲಿ ಕೇವಲ ಕಲಿಯುತ್ತಾ ಸಮಯ ಕಳೆದರೆ ಅದನ್ನು ಅನುಕರಣೆ ಅಥವಾ ಅಳವಡಿಸಿಕೊಳ್ಳುವುದು ಯಾವಾಗ? ಕಲಿಕೆ ಮತ್ತು ಅಳವಡಿಸಿಕೊಳ್ಳುವುದು ಜೊತೆಯಲ್ಲಿಯೇ ಸಾಗಬೇಕು. ಇಲ್ಲವಾದ್ದಲ್ಲಿ ಚೈತನ್ಯ ತುಂಬುವ ಭಾಷಣ ಕೇಳಿದಂತೆಯೇ ಆಗುತ್ತದೆ. ಉತ್ತಮ ಭಾಷಣಕಾರರ ಭಾಷಣವನ್ನು ಕೇಳುತ್ತೇವೆ, ಚಪ್ಪಾಳೆ ತಟುತ್ತೇವೆ. ಕೆಲವು ಸಮಯದ ತನಕ ಖುಷಿ, ಹುಮ್ಮಸ್ಸು ಇರುತ್ತದೆ, ಮನೆಗೆ ಹೋಗಿ ಊಟ ಮಾಡಿ ಮಲಗಿದ ಮೇಲೆ ಎಲ್ಲವೂ ಮರೆಯಾಗುತ್ತದೆ. ನಾಳೆ ಬೆಳ್ಳಿಗ್ಗೆ ಅದೇ ಹಳೆ ಚಾಲಿ ಮುಂದುವರೆಯುತ್ತದೆ. ವಿಡೀಯೋ ಬಗ್ಗೆ ಹೇಳಿದೆ ಅಲ್ವಾ? ಯಾರೋ ಮಾಡಿದ ವಿಡಿಯೋ ತೋರಿಸುವ ಬದಲು, ಒಂದು ಚಿಕ್ಕ ಮೊಬೈಲ್ ಅಥವಾ ಕ್ಯಾಮೇರಾವನ್ನು ವಿದ್ಯಾರ್ಥಿಗಳಿಗಾಗಿ ತಂದು ಅದರಿಂದ ವಿದ್ಯಾರ್ಥಿಗಳೇ ಶಾಲೆಯ ಚಟುವಟಿಕೆಗಳ ಕುರಿತು ವಿಡಿಯೋ ಮಾಡಲಿ, ಭಾಷಣಗಳು, ಕಲಿಕೆ ಇತ್ಯಾದಿಗಳನ್ನು ರೆಕಾರ್ಡ್ ಮಾಡಿ ಬೇರೆ ಶಾಲಾ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಿ. ಕಲಿತ ಹಾಗೂ ಆಗುತ್ತದೆ, ಅಳವಡಿಕೆಯೂ ಆಗುತ್ತದೆ.

ಈ ಮೇಲಿನ ಅಂಶಗಳನ್ನೊಳಗೊಂಡಿರುವುದೇ ನನ್ನ ಕನಸಿನ ಮಾದರಿ ಶಾಲೆ. ಏಕೆಂದರೆ ಶಿಕ್ಷಣವೆಂಬುದು ಕೇವಲ ಕಲಿಕೆಯಲ್ಲ, ಕಲಿಯುತ್ತಾ ಅಳವಡಿಸಿಕೊಳ್ಳುವುದು, ಅಳವಡಿಸಿಕೊಳ್ಳುತ್ತಾ ಬೆಳೆಯುವುದು, ಬೆಳೆಯುತ್ತಾ ನಲಿಯುವುದು ನಲಿಯುತ್ತಾ ಬದುಕುವುದು. ಪ್ರಮುಖ ಅಂಶಗಳನ್ನು ಹಂಚಿಕೊಂಡಿದ್ದೇನೆ, ನಿಮಗೆ ಈ ವಿಚಾರಗಳ ಕುರಿತು ತಕರಾರಿದ್ದರೇ ಅಥವಾ ಅಸಮಧಾನವಿದ್ದರೆ ನನ್ನನ್ನು ನೇರವಾಗಿ ಸಂಪರ್ಕಿಸಬಹುದು. ಚರ್ಚಿಸೋಣ, ನಮ್ಮೆಲ್ಲರ ಗುರಿಯೊಂದೆ. ಉತ್ತಮ ಸಮಾಜ ನಿರ್ಮಾಣ. ಮಾರ್ಗ ಬೇರೆ ಬೇರೆಯಿದೆ.

04 June 2017

ವಿಶ್ವ ಪರಿಸರ ದಿನದ ದೊಂಬರಾಟ!!!

ನಾನು ಬೇಕೆಂದೆ ಪರಿಸರ ದಿನದ ದೊಂಬರಾಟವೆಂದು ಶಿರ್ಷಿಕೆಯನ್ನು ನೀಡಿದ್ದೇನೆ. ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸುತ್ತೇವೆ. ಸರ್ಕಾರಿ, ಖಾಸಗಿ, ಅಂತಾ ಬೇಧ ಭಾವವಿಲ್ಲದೆ ಎಲ್ಲರೂ ಆಚರಿಸುತ್ತಾರೆ. ಆಚರಿಸುವಾಗ ನಿಮಗೆ ಕಣ್ಣಿಗೆ ಕಾಣುವ ದೃಶ್ಯಗಳು ಎರಡೋ ಮೂರೋ. ಮೊದಲನೆಯದಾಗಿ, ಒಂದಿಷ್ಟು ಗಿಡಗಳನ್ನು ನೆಡುವುದು. ಎರಡನೆಯದಾಗಿ, ಒಂದು ಜಾಗೃತಿ ಅಭಿಯಾನ, ಮೂರನೆಯದು ಒಂದು ಜಾಥಾ, ಒಂದಿಷ್ಟು ಸ್ಲೋಗನ್‍ಗಳು. ಮತ್ತೆ ಪತ್ರಿಕೆಯಲ್ಲಿ ಸುದ್ಧಿ. ಇದನ್ನು ಬಿಟ್ಟು ಬೇರೇನೂ ಕಾಣುತ್ತಿಲ್ಲ ನನಗೆ. ಅದಕ್ಕೂ ಮೀರಿದರೆ ಒಂದು ಸಮ್ಮೇಳನ ನಡೆಸಬಹುದು. ಇದರಲ್ಲಿ ತಪ್ಪೇನು? ಮಾಡಬೇಕಲ್ಲವೇ? ಪರಿಸರ ನಾಶವಾಗಿದೆ, ಅದನ್ನು ಉಳಿಸೋದು ಬೇಡವೇ?

ಪರಿಸರ ದಿನವನ್ನು ಆಚರಿಸುತ್ತಿರುವ ಮತ್ತು ಸಸಿಗಳನ್ನು ನೆಡುತ್ತಿರುವ ಎಲ್ಲರಿಗೂ ನನ್ನ ನೇರ ಪ್ರಶ್ನೆಗಳು. ಪ್ರತಿ ವರ್ಷವೂ ನೀವು, ಸರ್ಕಾರ ಸೇರಿ ಸಸಿಗಳನ್ನು ನೆಡುತ್ತಾ ಬಂದಿದ್ದೀರಿ, ಅವುಗಳೆಲ್ಲಾ ಏನಾದವು? ಜೂನ್ 5ರಂದು 1 ಲಕ್ಷ, 5 ಲಕ್ಷ, ಹತ್ತು ಲಕ್ಷ ಎಂದೆಲ್ಲಾ ಹೇಳುತ್ತಿದ್ದೀರಲ್ಲಾ, ಅವುಗಳು ಬೆಳೆದು ಮರವಾಗಬೇಕಿತ್ತು. ಯಾಕೆ ಆಗಲಿಲ್ಲ? ಗಿಡ ನೆಡುವಾಗಲೇ ನಿಮಗೆ ಗೊತ್ತು, ಎಲ್ಲವೂ ಬೆಳೆಯುವುದಿಲ್ಲವೆಂದು, ಯಾಕೆಂದರೆ, ಸಸಿ ನೆಟ್ಟ ಮೇಲೆ, ಅದರ ಪೋಷಣೆ ನೀವು ಮಾಡುವುದಿಲ್ಲ. ನೀರು, ಗೊಬ್ಬರ ಹಾಕುವುದಿಲ್ಲ. ಇದು ಪರಿಸರ ದಿನವನ್ನು ಆಚರಿಸಲು ನೆಡುವ ಗಿಡಗಳು ಅಷ್ಟೆ. 

ಎರಡನೆಯ ಪ್ರಶ್ನೆ, ನಿಮ್ಮಗಳ ಪ್ರಕಾರ ಪರಿಸರವೆಂದರೇನು? ಪರಿಸರವೆಂದರೆ, ಕೇವಲ ಮರಗಳು ಮಾತ್ರವೇ? ಗಿಡ ನೆಡುವುದು ಮಾತ್ರವೇ ಪರಿಸರ ಸಂರಕ್ಷಣೆಯೇ? ಪರಿಸರ, ಪ್ರಕೃತಿ, ನಿಸರ್ಗ ಅದನ್ನು ಇಷ್ಟು ಸರಳಿಕರಿಸಿದರೆ ಹೇಗೆ? ಪರಿಸರ ದಿನದಂದು ಗಿಡ ನೆಡುವುದು ಬಿಟ್ಟು ಬೇರೇನೂ ಯೋಚಿಸುವುದಿಲ್ಲ. ವಿಚಿತ್ರವೆಂದರೆ, ನಮ್ಮ ಸರ್ಕಾರ, ಅದಕ್ಕೆಂದೆ ಇರುವ ಇಲಾಖೆಗಳು (ಪರಿಸರ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ), ವಿಶ್ವ ವಿದ್ಯಾಲಯಗಳು, ಎನ್‍ಜಿಓಗಳು ಸಹಾ ಇದನ್ನೇ ಮಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ ನಡೆಯುತಿರುವ ಸೀಡ್ ಬಾಲ್, ಅಂದರೆ ಬೀಜದ ಉಂಡೆಗಳನ್ನು ಮಾಡಿ ಕಾಡಿಗೆ ಎಸೆಯುವುದು. ಇದು ಬಹಳ ಬಾಲಿಷವೆನಿಸುತ್ತದೆ ನನಗೆ. ಒಂದು ಪರಿಸರಕ್ಕೆ ಹೊಂದಿಕೊಳ್ಳುವ ಪ್ರಬೇಧ ಯಾವುದು, ಯಾವ ಮಣ್ಣಿಗೆ ಅದು ಬೇಕು, ಬೇಡ, ಎನ್ನುವ ಅಂದಾಜಿಲ್ಲದೆ, ನೀವು ನಿಮ್ಮ ಸೀಡ್ ಬಾಲ್ ಎಸೆದು ಬಂದರೆ ಏನಾಗಬೇಕು. ಪ್ರತಿಯೊಂದು ಪರಿಸರಕ್ಕೂ, ತನ್ನದೇ ಆದ ಸಾಮಥ್ರ್ಯವಿರುತ್ತದೆ (ಕೆಪಾಸಿಟಿ). ಪ್ರತಿಯೊಂದು ಜಾತಿಯ ಮರ ಗಿಡಗಳು ತನ್ನದೇ ಆದ ವಾತಾವರಣದಲ್ಲಿ ಬೆಳೆಯುತ್ತವೆ. ನೀವು ದಿಡೀರನೇ ಹೋಗಿ ಅಲ್ಲಿ ಲಕ್ಷಾಂತರ ಬೇರೆ ಜಾತಿಯ ಬೀಜಗಳನ್ನು ಎಸೆದರೆ ಅಲ್ಲಿನ ಪರಿಸರ ಏನಾಗಬಹುದು? ಹೀಗೆ ಕೋಟ್ಯಾಂತರ ಸಸಿಗಳನ್ನು ನೆಡುತ್ತಾ ಹೋಗಿ ಅವೆಲ್ಲವೂ ಬೆಳೆದು ಬಿಟ್ಟರೆ ನಾವು ಯಾವ ಕಾಲಕ್ಕೆ ಹೋಗಬಹುದು?

ಪರಿಸರವೆಂದರೆ, ಕೇವಲ ಮರಗಳು ಮಾತ್ರವಲ್ಲ, ಅಲ್ಲಿರುವ ಸಣ್ಣ ಹುಳ್ಳು ಕೂಡ ಪರಿಸರದ ಪಾಲುದಾರ. ಒಂದು ಎರೆಹುಳು, ಒಂದು ಚಿಟ್ಟೆ, ಒಂದು ಕೀಟ, ಒಂದು ಕಪ್ಪೆ, ಹಾವು, ಹಲ್ಲಿ, ಹಕ್ಕಿ, ಹದ್ದು ಹೀಗೆ ಕಣ್ಣಿಗೆ ಕಾಣುವ, ಕಾಣದ ಎಲ್ಲವೂ ಪರಿಸರದಲ್ಲಿವೆ. ನಾವು ಕೇವಲ ಮರವನ್ನು ಬೆಳೆಸುತ್ತಾ ಹೋದರೆ ಮುಂದೊಂದು ದಿನ ಪರಿಸರಕ್ಕೆ ಮಾರಕವಾಗಬಹುದು. ಪರಿಸರ ತನ್ನಿಂದ ತಾನು ಬೆಳೆಯುವ, ಬೆಳೆಸುವ ಸಾಮಥ್ರ್ಯವನ್ನು ಹೊಂದಿರುತ್ತದೆ. ಅದರ ಸಂಕೀರ್ಣಗಳು ನಮಗೆ ತಿಳಿದಿರುವುದಿಲ್ಲ. ನಮ್ಮ ಮೂಗಿನ ನೇರಕ್ಕೆ ನಮಗೆ ತಿಳಿದಿರುವುದನ್ನೇ ಅಥವಾ ಕಣ್ಣಿಗೆ ಕಾಣುವುದನ್ನೆ ಸತ್ಯವೆಂದು ನಂಬಿ, ಮನಸ್ಸಿಗೆ ತೋಚಿದ ಹಾಗೆ ಮಾಡುವುದು ಸರಿಯಿಲ್ಲ. ಪರಿಸರ ದಿನದಂದು ಸಮಗ್ರವಾಗಿ ಆಲೋಚಿಸುವುದನ್ನು ಕಲಿಯಬೇಕು ಮತ್ತು ಅನುಸರಿಸಬೇಕಿದೆ. ಪರಿಸರವೆಂದರೆ, ಎಲ್ಲವೂ ಸೇರುತ್ತದೆ, ನೀರು, ನೆಲ, ಗಾಳಿ, ಸರ್ವ ಜೀವಿಗಳು ಕೂಡ. ವಿಚಿತ್ರವೆಂದರೆ, ನಾವುಗಳು ಎಲ್ಲವನ್ನು ಬಿಡಿ ಬಿಡಯಾಗಿ ನೋಡುತ್ತಾ, ಅವುಗಳನ್ನು ವಿಂಗಡಿಸಿದ್ದೇವೆ. 

ಇತ್ತೀಚಿನ ದಿನಗಳಲ್ಲಿ ಬಹಳ ಚಾಲ್ತಿಯಲ್ಲಿರುವ ಮತ್ತೊಂದು ವಿಷಯ, ಜಾಗತಿಕ ತಾಪಮಾನ. ಹೌದು, ತಾಪಮಾನ ಏರಿದೆ, ಒಪ್ಪಿಕೊಳ್ಳೋಣ. ಉಷ್ಣಾಂಶ ಜಾಸ್ತಿಯಾಗಿದೆ, ಮಳೆ ಕಡಿಮೆಯಾಗಿದೆ, ಕೆಲವು ಕಡೆ ಜಾಸ್ತಿಯಾಗಿದೆ. ಒಟ್ಟಾರೆ ಏರು ಪೇರಾಗಿದೆ. ಇದಕ್ಕೆ ಕಾರಣವೇನು? ಕೇವಲ ಕಾಡು ನಾಶ ಮಾತ್ರವೇ? ಅಥವಾ ಮರಗಳನ್ನು ಬೆಳೆಸಿದ ತಕ್ಷಣ ಸರಿಹೋಗುವುದೆ? ನಮ್ಮ ಜೀವನ ಶೈಲಿ ಬದಲಾಗುತ್ತಿದೆ ಮತ್ತು ಬದಲಾಗಿದೆ. ಮಾಲಿನ್ಯ ಮಿತಿ ಮೀರಿದೆ. ಮನುಷ್ಯನ ದುರಾಸೆಗೆ, ಕೆರೆಗಳು, ಭಾವಿಗಳು, ನದಿಗಳು ಕೊಳಚೆ ಗುಂಡಿಗಳಾಗಿವೆ. ಮನೆಯೊಳಗೆ ಸೆಖೆಯಿಂದ ಇರಲಾರದೆ ಒದ್ದಾಡಿದರೆ, ಹೊರಗೆ ಬಂದರೆ ಬಿಸಿಲಿನ ದಗೆ, ಧೂಳು ಸಾಕಪ್ಪ ಎನಿಸಿಬಿಡುತ್ತೆ. ಮನೆಗೊಂದು ಕಾರು, ಎರಡೋ ಮೂರೋ ಬೈಕುಗಳು ಸಾಮಾನ್ಯವಾಗತೊಡಗಿವೆ. ಮಳೆ ನೀರು ಬಿದ್ದರೂ ಕಾಂಕ್ರೀಟ್ ನಿಂದಾಗಿ ಭೂಮಿ ಒಳಕ್ಕೆ ಹೋಗದ ರೀತಿ ಮಾಡಿದ್ದೇವೆ. ಸಮಸ್ಯೆಗಳನ್ನು ಪಟ್ಟಿ ಮಾಡುತ್ತಾ ಹೋದರೆ ಕನಿಷ್ಟ ಐದಾದರೂ ಪಿಎಚ್‍ಡಿ ಮಾಡಬಹುದು. 

ಜಾಗೃತಿಯ ವಿಷಯಕ್ಕೆ ಬರೋಣ. ಜಾಗೃತಿ, ಅರಿವು, ತರಬೇತಿ ಯಾರಿಗೆ ಬೇಕೂ ಸ್ವಾಮಿ? ಯಾರು ದಡ್ಡರೂ ಹೇಳಿ? ಎಲ್ಲರಿಗೂ ತಿಳಿದಿದೆ, ಪರಿಸರದ ಮಹತ್ವ. ಆದರೂ ಬೇಜವಬ್ದಾರಿತನ, ಎಲ್ಲರನ್ನೂ ಆವರಿಸಿದೆ. ಉಢಾಫೆತನವೆಂದರೂ ತಪ್ಪಿಲ್ಲ. ಎಸಿ ರೂಮಿನಲ್ಲಿ ಕುಳಿತು ಬಡವರ ಬಗ್ಗೆ ಚರ್ಚಿಸೋದು, ಪಿಜ್ಜಾ ತಿನ್ನುತ್ತಾ ಕೃಷಿಯ ಬಗ್ಗೆ ಮಾತನಾಡೋದು, ಇವಲ್ಲಾ ಹಳೆಯ ಉದಾಹರಣೆಗಳು. ಪರಿಸರ ಸಂರಕ್ಷಣೆ ಎಲ್ಲರಿಗೂ ತಲುಪುವ ಸಲುವಾಗಿ ಪರಿಸರ ಶಿಕ್ಷಣವನ್ನು ಜಾರಿಗೆ ತಂದಿದೆ. ಮೂರನೆಯ ತರಗತಿ ಮಗು ಕೂಡ ಪರಿಸರ ಸಂರಕ್ಷಣೆಯ ಕುರಿತು ಉದ್ದುದ್ದ ಬಾಷಣ ಮಾಡುತ್ತದೆ, ಪ್ರಬಂಧ ಬರೆಯುತ್ತದೆ. ಆದರೆ, ಜೀವನದಲ್ಲಿ ಅಳವಡಿಕೆಯಿಲ್ಲ. ಪರಿಸರ ಸಂರಕ್ಷಣೆಯ ಕಾರ್ಯಕ್ರಮ ನಡೆದ ಮೇಲೆ, ಆವರಣವನ್ನೂ ಶುಚಿಗೊಳಿಸುವುದಿಲ್ಲ. ಪರಿಸರ ದಿನಾಚರಣೆಗೆ ಎಷ್ಟೊಂದು ಬ್ಯಾನರ್‍ಗಳು, ಪತ್ರಿಕೆಗಳು, ನೀರಿನ ಬಾಟಲಿಗಳು ವೆಚ್ಚವಾಗುವುದಿಲ್ಲ ಹೇಳಿ. 

ಪರಿಸರ ಸಂರಕ್ಷಣೆ ಜೀವನದ ಮಾರ್ಗವಾಗಿರಬೇಕು. ಒಂದು ದಿನ, ಸಾರ್ವಜನಿಕ ವಾಹನದಲ್ಲಿ ಹೋಗೋಣವೆಂದು ನಿರ್ಧರಿಸಿದರೆ ಸಾಕು. ನೀರಿನ ಬಾಟಲಿಯನ್ನು ತಮ್ಮೊಂದಿಗೆ ಕೊಂಡೊಯ್ಯಿರಿ. ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ ಅಥವಾ ಕಡಿಮೆ ಮಾಡಿ. ಅವಶ್ಯಕತೆಯಿಲ್ಲದೆ ಇರುವಾಗ ನೀರು, ಬೆಳಕು, ಗಾಳಿಯನ್ನು ಉಪಯೋಗಿಸಬೇಡಿ. ಪೇಪರ್ ಬಳಕೆ ಕಡಿಮೆ ಮಾಡಿ. ದಿನ ಪತ್ರಿಕೆ ಒಂದು ದಿನ ಮುದ್ರಿಸುವುದನ್ನು ನಿಲ್ಲಿಸಿ, ಆನ್‍ಲೈನ್‍ಗೆ ಹೋಗಿ. ಪರಿಸರ ಕಾಳಜಿ ತೋರಿಕೆಯಲ್ಲರಿಬಾರದು, ಅಳವಡಿಕೆಯಲ್ಲಿರಬೇಕು. ನಮ್ಮ ಮುಂದಿನ ಪೀಳಿಗೆ ನಮ್ಮನ್ನು ಅನುವರಿಸುವಂತಿರಬೇಕು, ಆಡಿಕೊಳ್ಳುವಂತಾಗಬಾರದು. ಪರಿಸರ ದಿನ ದೊಂಬರಾಟವಾಗದೇ ಸಂರಕ್ಷಣೆಯ ಮಾರ್ಗವಾಗಲಿ. 

15 May 2017

ಹರಟೆ ಹೊಡೆಯುವುದಕ್ಕೆ ವಿಷಯವೇಕೆ?

ನಮ್ಮನ್ನೂ ಕೆಲವೊಮ್ಮೆ ಬಹಳ ಕಾಡುವ ಪ್ರಶ್ನೆ, ಜೀವನವೆಂದರೇನು? ಜೀವನದ ಉದ್ದೇಶವೇನು? ಯಾಕೆ ಬದುಕುತ್ತಾ ಇದ್ದೀವಿ? ಹೇಗೆ ಬದುಕಬೇಕು? ನಾನು ಬದುಕುತ್ತಿರುವುದು ಸರಿಯಾ? ಅವರು ಬದುಕುವುದು ಸರಿಯಾ? ಅಥವಾ ಇವರದ್ದೂ ಸರಿನಾ? ಒಮ್ಮೊಮ್ಮೆ ನಮ್ಮ ಜೀವನ ನಮಗೆ, ಅವರ ಜೀವನ ಅವರಿಗೆ ಎನಿಸಿದರೂ, ಮನಸ್ಸು ಅದನ್ನು ಅಲ್ಲಿಗೆ ಬಿಡುವುದಿಲ್ಲ. ಬೇರೆಯವರ ಜೊತೆಗೆ ಹೋಲಿಕೆ ಮಾಡುತ್ತಲೇ ಇರುತ್ತದೆ. ಹೋಲಿಕೆ ಮಾಡಿದಾಗ ಎರಡು ಅಂಶ ಬೆಳಕಿಗೆ ಬರುತ್ತದೆ. ಮೊದಲನೆಯದು, ನನ್ನದೇನು ಜೀವನ, ಅವರದ್ದೂ ಜೀವನವೆಂದರೆ, ಹಾಗೆ ಇರಬೇಕು ಅಂತಾ. ಎರಡನೆಯದು, ಥೂ ಜೀವನ ಇಷ್ಟೇನಾ? ಕೇವಲ ಕಾರು, ಬೈಕು, ಮನೆ, ಸೈಟು, ದುಡ್ಡು, ಕುಡಿತ, ಮೋಜು ಮಸ್ತಿ? ಜೀವನದಲ್ಲಿ ಮೌಲ್ಯ ಮುಖ್ಯ, ಆ ತರ ಬದುಕೋದಾ, ಛೇ ಛೇ ಅನಿಸುತ್ತೆ. ಇದೆರಡು ದ್ವಂಧ್ವದೊಳಗೆ ನನ್ನಂತ ಜೀವಿಗಳು ಒದ್ದಾಡಿದರೆ, ಅನೇಕರಿಗೆ ಇದೊಂದು ವಿಷಯವೇ ಅಲ್ಲಾ? ಅಥವಾ ಈ ಪ್ರಶ್ನೆ ಏಳುವುದೇ ಇಲ್ಲಾ, ಎದ್ದರೂ ಅದು ಮಬ್ಬು ಬೆಳಕಿನ ಬಾರುಗಳಲ್ಲಿ ಮಾತ್ರ. 

ಅದೇನೆ ಇರಲಿ ಈಗ ಬರಯುವುದಕ್ಕೆ ಹೋಗಿದ್ದು, ಇತ್ತೀಚಿನ ನನ್ನ ಜೀವನದ ಆಗು ಹೋಗುಗಳ ಕುರಿತು. ಮೊನ್ನೆಯಿಂದ ಖುಷ್ವಂತ್ ಸಿಂಗ್‍ರವರ ಡೆತ್ @ಮೈ ಡೋರ್‍ಸ್ಟೆಪ್ ಪುಸ್ತಕ ಓದುತ್ತಿದ್ದೇನೆ. ಅಲ್ಲಿನ ನವಿರಾದ ಹಾಸ್ಯ ನನ್ನನ್ನು ಅನೇಕ ಚಿಂತನೆಗಳಿಗೆ ಹಚ್ಚಿದೆ. ನಾನು ಬಹಳ ಹಾಸ್ಯವನ್ನು ಇಷ್ಟಪಡುವ ವ್ಯಕ್ತಿಯಾಗಿದ್ದವನು. ಆಗಿದ್ದವನೂ ಎಂದರೇ? ಈಗ ಏನಾಗಿದ್ದೀಯಾ? ನನಗೆ ಅರಿವಿಲ್ಲದೆ ನನ್ನ ಜೀವನ ಕ್ರಮ, ನನ್ನ ಚಿಂತನೆಗಳು, ಆಲೋಚನೆಗಳು, ನನ್ನನ್ನು ಹಾಸ್ಯದಿಂದ, ನಗುವಿನಿಂದ ತುಂಬಾ ದೂರ ತಲ್ಲಿವೆ. ಆದರ್ಶಗಳು, ಭೌದ್ಧಿಕ ತತ್ವಗಳು, ಅದು ಇದು, ಮಣ್ಣು ಮಸಿಯೆಂದು ನಿಜವಾದ ನಗುವನ್ನು ಸವಿಯಲಾಗದ ಸ್ಥಿತಿಗೆ ತಲುಪಿದ್ದೇನೆ. ಎಲ್ಲದರಲ್ಲಿಯೂ ಕೊಂಕು ಹುಡುಕುವಂತೆ, ಆಕಾಶವೇ ಕಳಚಿದಂತೆ ವರ್ತಿಸಿದ್ದೇನೆ. ಇದು ಹೇಗೆ ಸಾಧ್ಯವೆನ್ನುವಷ್ಟೂ. ಉದಾಹರಣೆಗೆ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಪೋಸ್ಟ್‍ಗಳು ಎಲ್ಲರನ್ನು ಮೆಚ್ಚಿಸಲು, ಒಳ್ಳೆಯವನಂತೆ ಬರೆದಿದ್ದೇನೆ. ಮಾತು ತೆಗೆದರೆ, ಜೀವನದ ಆದರ್ಶ, ಉದ್ದೇಶಗಳು, ಸಹಾಯ ಮನೋಧರ್ಮ, ಸೇವೆ, ಬದಲಾವಣೆ, ಇವುಗಳನ್ನು ಬಿಟ್ಟರೆ, ಅಲ್ಲೊಂದು, ನಗು, ಖುಷಿ, ಸಂತೋಷ ಇಲ್ಲವೇ ಇಲ್ಲ. 

ಮುನ್ನುಡಿ ಅತಿಯಾಯಿತು. ನನ್ನದು ಯಾವಾಗಲೂ ಇದೇ ಸಮಸ್ಯೆ. ವಿಷಯಕ್ಕಿಂತ ಮುನ್ನುಡಿ ಹೆಚ್ಚು. ಅದನ್ನೇ ಬೆಳೆಸುತ್ತಾ ಹೋಗಿದ್ದೇನೆ. ವಾರಾಂತ್ಯದಲ್ಲಿ ನನ್ನ ಪಿಯುಸಿ ಗೆಳೆಯ ಶಂಕರ ಮಗಳ ನಾಮಕರಣಕ್ಕೆಂದು ಕುಶಾಲನಗರಕ್ಕೆ ಹೋಗಿದ್ದೆ. ಇದಕ್ಕೂ ಮುನ್ನಾ 2007ರಲ್ಲಿ ಒಮ್ಮೆ ನಾವೆಲ್ಲಾ ಸೇರಿದ್ದವು, ಸೇರಿದ್ದೆವು ಎಂದರೇ, ಅದಾದ ನಂತರವೂ ಅನೇಕ ಬಾರಿ ಸೇರಿದ್ದೇವೆ. ಆದರೇ, ಈ ಹತ್ತು ವರ್ಷಗಳಲ್ಲಿ ನಮ್ಮೆಲ್ಲರ ಆಲೋಚನೆಗಳು, ಜೀವನ ಶೈಲಿ, ಜೀವನದ ಪಾಠ ಅಥವಾ ಜೀವನದ ಬಗ್ಗೆ ಇರುವ ವಿವರಣೆಗಳು ಅದೆಷ್ಟು ಬದಲಾಗಿದ್ದಾವೆಂದು ಅಚ್ಚರಿಯಾಯಿತು. ಇಲ್ಲಿ ಯಾರನ್ನೂ ದೂರುತ್ತಿಲ್ಲ, ಯಾರ ಹೆಸರನ್ನು ಬಳಸುತ್ತಿಲ್ಲ ಮತ್ತೂ ಬಳಸುವುದೂ ಇಲ್ಲ. ಕೇವಲ 35 ವರ್ಷಗಳನ್ನು ದಾಟುವ ವೇಳೆಗೆ ಜೀವನದ ಸಾರವೇ ಆರಿಹೋಗಿದೆ, ಉತ್ಸಾಹವೇ ನಲುಗಿದೆ ಎನಿಸಿತು. ಇದು ನನ್ನ ವೈಯಕ್ತಿಕ ಅಭಿಪ್ರಾಯ. 

ಮನಸ್ಸು ನಿರಂತರ ಲವಲವಿಕೆಯಿಂದ ಇರಬೇಕಾಗುತ್ತದೆ. ಹೊರಗಿನ ಜಗತ್ತಿಗೂ, ಮನಸ್ಸಿಗೂ ಹೆಚ್ಚು ಸಂಬಂಧವಿರಬಾರದೆಂಬುದು ನನ್ನ ಅನಿಸಿಕೆ. ಅಂದರೇ, ಜಗತ್ತಿನಲ್ಲಿ ಏನು ನಡೆದರೂ ನಾವು ತಲೆ ಕೆಡಿಸಿಕೊಳ್ಳುವುದು ಬೇಡವೆಂಬುದೋ? ತಲೆ ಕೆಡಿಸಿಕೊಳ್ಳುವುದೆಂದರೇನು? ಕೆಡಿಸಿದರು ಎಂದರೇನು? ಕೆಟ್ಟಿದೆ ಎಂದರೆ ಉಪಯೋಗಿಸುವ ಮಾದರಿಯಲಿಲ್ಲ. ಉಪಯೋಗಿಸಲು ಅರ್ಹವಲ್ಲ, ಯೋಗ್ಯವಲ್ಲ. ಕಾರು ಕೆಟ್ಟಿದೆ, ಉಪಯೋಗಿಸುವುಕ್ಕೆ ಆಗುವುದಿಲ್ಲ. ಹೌದಾದರೇ, ನಾವು ಹೊರಗಿನ ವಿಷಯಗಳಿಗೆ ತಲೆ ಕೆಡಿಸಿಕೊಂಡರೆ, ನಿಮ್ಮ ತಲೆಯನ್ನು, ಅಥವಾ ಒಳಗಿರುವ ಮೆದುಳನ್ನು ಅಥವಾ ಅಲ್ಲಿಯೇ ಇರುವ ಬುದ್ದಿಯನ್ನು ನಾವು ಉಪಯೋಗಿಸಲು ಬರುವುದಿಲ್ಲ. ಆದರೆ, ಇಡೀ ಜಗತ್ತಿನಲ್ಲಿ ಆಗುತ್ತಿರುವ ಎಲ್ಲಾ ವಿದ್ಯಮಾನಗಳು ನಮ್ಮ ತಲೆಯೊಳಗೆ ನಡೆಯುತ್ತಿವೆ ಎನ್ನುವ ಭ್ರಮೆಯಲ್ಲಿ ಮುಳುಗಿದ್ದೇವೆ. ಮುಳುಗಿರುವುದರಿಂದ ತಲೆಯೊಳಗಿರುವ ಬುದ್ದಿ ನೀರು ಕುಡಿದು ನಿಗರಿಹೋಗಿದೆ, ನಿಗರಿಹೋಗಿದೆ ಎಂದರೆ ಸತ್ತು ಹೋಗಿದೆ. ಮಾನಸಿಕವಾಗಿ ಮನುಷ್ಯ ಸತ್ತ ಮೇಲೆ ಅವನ ದೇಹ ಮಾತ್ರ ಇರುತ್ತದೆ. 

ಜಗತ್ತಿನಲ್ಲಿ ಅನೇಕರು ದೈಹಿಕವಾಗಿ ಬದುಕಿದ್ದಾರೆ ಹೊರತು ಮಾನಸಿಕವಾಗಿ ಅಲ್ಲವೇ ಅಲ್ಲ. ಮಾನಸಿಕವಾಗಿ ಸತ್ತು ಅಥವಾ ಕೋಮಾ ಸ್ಥಿತಿಗೆ ತಲುಪಿದ್ದಾರೆ. ನಮ್ಮ ಮೊನ್ನೆಯ ಕೂಟದಲ್ಲಿ ನಡೆದದ್ದು ಅದೇ. ಸೇರಿದ್ದವರು ಆರೆಂಟು ಜನರು, ಯಾಕೆ ಸೇರಿದ್ದೀವಿ? ಏನು ಮಾತನಾಡಿದ್ದೇವೆ? ಏನು ನಡೆಯುತ್ತಿದೆ ಎಂಬುದರ ಅರಿವೇ ಇರಲಿಲ್ಲ. ಅರಿವಿಲ್ಲವೆಂದರೇ, ಕುಡಿದು ಟೈಟಾಗಿ ಅಂತಾಗಲಿ ಅಥವಾ ಗಾಂಜಾ, ಡ್ರಗ್ ಹಾಕಿದ್ದೀವಿ ಎಂದಲ್ಲ. ಒಂದು ಕಾರ್ಯಕ್ರಮಕ್ಕೆ ಬಂದರೂ ಮತ್ತಾವುದೋ ತಲೆಯೊಳಗೆ ಕೊರೆಯುತ್ತಿರುವುದು. ಇಲ್ಲಿದ್ದೂ ಇಲ್ಲದ ಹಾಗೆ ಇರುವುದು. 

ಹೌದು, ಅದರಲ್ಲಿ ತಪ್ಪೇನು, ಭಾನುವಾರ ಆದಮೇಲೆ ನಾಳೆ ಸೋಮವಾರ ಆಫೀಸಿಗೆ ಹೋಗಬೇಕು. ಮನೆಯಲ್ಲಿ ಹೆಂಡತಿಯೊಬ್ಬಳೇ ಇದ್ದಾಳೆ. ಮಕ್ಕಳ ಶಾಲೆ ಆರಂಭವಾಗುವ ದಿನಗಳು ಬಂದಿವೆ. ನಾಳಿದ್ದು ಚೀಟಿ ಕಟ್ಟಬೇಕು. ಕಾರ್ ಸರ್ವಿಸ್ ಆಗಿಲ್ಲ. ಮಳೆ ಬಿದ್ದಿದೆ. ವಾಪಸ್ ಬೆಂಗಳೂರು ತಲುಪಬೇಕು, ಲೇಟಾದರೆ? ನಾಮಕರಣಕ್ಕೂ ಬರಬೇಕಿತ್ತಾ? ಬಂದಿದ್ದು ಆಯ್ತು. ಈಗ ಏನು ಮಾಡುವುದು? ಎರಟು ಸೌಟು ಮಾಂಸಕ್ಕೆ ಅಷ್ಟು ದೂರದಿಂದ ಬರಬೇಕಿತ್ತಾ? ಇಲ್ಲಾ ಇಲ್ಲಾ ಸ್ನೇಹ ಮುಖ್ಯ. ಒಬ್ಬರು ಕರೆದಿದ್ದಾರೆ ಎಂದರೆ ಅದಕ್ಕೆ ಮರ್ಯಾದೆ ಕೊಟ್ಟು ಬರಬೇಕು. ಅಲ್ಲಿಂದ ಬಂದಿದ್ದೇವೆ, ನಮಗೆ ಇನ್ನೂ ಚೆನ್ನಾಗಿ ವ್ಯವಸ್ಥೆ ಮಾಡಬೇಕಿತ್ತು. ಏನ್, ಗುರೂ ಇನ್ನೂ ಎಷ್ಟು ವರ್ಷ ಬೇರೆಯವರು ವ್ಯವಸ್ಥೆ ಮಾಡಲಿ ಅಂತಾ ಕೇಳೋದು? ಒಂದು ಬಸ್ ಚಾರ್ಜ್‍ಗೆ, ಒಂದು ಕಾಫೀ ಟೀ ಗೆ ನೀನು ಬಿಲ್ ಕೊಡು ನೀನು ಕೊಡು ಎನ್ನುವದಾ? ಇಪ್ಪತ್ತು ವರ್ಷದ ಗೆಳೆತನ, ಹತ್ತಾರ ವರ್ಷದಿಂದ ದುಡಿತಾ ಇದ್ದೀವಿ, ಒಂದು ದಿನ ನಾಲ್ಕು ಜನಕ್ಕೆ ಒಂದು ಹೋಟೆಲ್, ಒಂದು ಬಾಟಲಿ ವಿಸ್ಕಿ, ಒಂದೆರಡು ಪ್ಲೇಟ್ ಚಿಕನ್, ಮಟನ್, ಒಂದು ಪ್ಯಾಕ್ ಸಿಗರೇಟು, ಇಷ್ಟೂ ಕೋಡೋಕೆ ಆಗಲ್ವಾ? ದುಡ್ಡಿಲ್ಲವಾ? ಇದೆ, ಆದರೆ ಸುಮ್ಮನೆ ಯಾಕೆ ಖರ್ಚು ಮಾಡಬೇಕು. ಇಲ್ಲ ದುಡ್ಡು ಇಲ್ಲ, ದುಡಿಮೆ ಕಮ್ಮಿ. ತುಂಬಾ ಕಮಿಟ್‍ಮೆಂಟ್ಸ್. ಬರೋ ಸಂಬಳ ಯಾವುದಕ್ಕೂ ಸಾಲುತ್ತಿಲ್ಲ. ಎಷ್ಟು ದುಡಿದರೂ ನಿಲ್ಲುತ್ತಿಲ್ಲ. ನಿಲ್ಲುತ್ತಿಲ್ಲವೋ ಅಥವಾ ಸಾಲುತ್ತಿಲ್ಲವೋ ತಿಳಿಯುತ್ತಿಲ್ಲ. 

ಎಲ್ಲವೂ ಎಳೆ ಎಳೆಯಾಗಿ ಬಿಚ್ಚಿಕೊಳ್ಳುತ್ತಿವೆ. ಕಾಲೇಜು ದಿನಗಳು. ಅಪ್ಪನಿಂದ 50 ರೂಪಾಯಿ ಕಡಿಮೆ ಬಂದರೆ, ಗೊಣಗುತ್ತಿದ್ದ ದಿನಗಳು, ಮುಖ ತಿರುಗಿಸಿಕೊಂಡು ಬೈಯುತ್ತಿದ್ದೆ. ಕಡಿಮೆ ದುಡ್ಡು ಕೊಟ್ಟರೆ ಓದುವುದು ಹೇಗೆ? ಮಾರ್ಕ್ ತೆಗೆಯುವುದು ಹೇಗೆ? ಹಣಕ್ಕೂ ಅಂಕಕ್ಕೂ ಏನು ಸಂಬಂಧ? ಬಂದ ಕಡಿಮೆ ಸಂಬಳದಲ್ಲಿ ಯಾವುದೇ ದುಶ್ಚಟವಿಲ್ಲದೆ ಹೊರಗಡೆ ಒಂದು ಟೀಯನ್ನು ಕುಡಿಯದೆ ಬೆಳೆಸಿದ ಅಪ್ಪನೆಲ್ಲಿ. ಕಂಠಪೂರ್ತಿ ಕುಡಿದು ಬಿದ್ದ ಮಗನೆಲ್ಲಿ? ಯಾರಿಗೂ ಕೈಚಾಚದ ಅಪ್ಪನೆಲ್ಲಿ, ಹೆಂಡಕ್ಕೆ, ಸಿಗರೇಟಿಗೆ, ಮೋಜಿಗೆ ಬೇರೆಯವರ ಮುಂದೆ ಸ್ವಂತಿಕೆ ಬಿಟ್ಟು ಗೋಗರೆಯುವ ಮಗನೆಲ್ಲಿ. ಮಾತು ಹಾದಿ ತಪ್ಪಿತು, ನಾನು ದಾರಿ ತಪ್ಪಿದ್ದೆ. ತಪ್ಪಿದ್ದೆ! ಈಗ? ನೀವು ಹೇಳಬೇಕು.

ಲವಲವಿಕೆಯಿಂದ ದುರಂತದೆಡೆಗೆ ಸಾಗುತ್ತಿದ್ದ ಬರವಣಿಗೆಯನ್ನು ಸರಿ ಮಾಡುತ್ತಿದ್ದೆನೆ. ಈ ಬರವಣಿಗೆಯನ್ನು ಬರೆಯುತ್ತಿರುವ ಉದ್ದೇಶವೊಂದೆ. ನಾವು ಮಾತನಾಡುತ್ತಿರುವ ನಡುವೆ ಗೆಳೆಯ ವಿಜಿ ಹೇಳಿದ, ನೀನು ಬರೆಯುವುದನ್ನು ಯಾಕೆ ನಿಲ್ಲಿಸಿದೆ, ಅದನ್ನು ಮುಂದುವರೆಸೆಂದು. ಅವನೇನೂ ನನ್ನ ಬರವಣಿಗೆಯನ್ನು ಓದುವುದಿಲ್ಲ ಬಿಡಿ. ಆದರೂ, ಆ ಮಾತು ನನಗೆ ಹಿಡಿಸಿತು. ಮನಸ್ಸಿಗೆ ಶಕ್ತಿ ತುಂಬುವ ವಿಷಯಗಳಲ್ಲಿ ಸಾಹಿತ್ಯ ಮತ್ತು ಸಂಗೀತ ಬಹಳ ಮುಖ್ಯ. ಓದುವುದು, ಬರೆಯುವುದು ಮತ್ತು ಉತ್ತಮ ಸಂಗೀತ ಕೇಳುವುದು ನಿಮ್ಮನ್ನು ನಿರಂತರವಾಗಿ ಜೀವಂತವಾಗಿಸುತ್ತವೆ. ಓದುವುದರಿಂದ ನಿಮ್ಮ ಬೌದ್ಧಿಕ ಮಟ್ಟ ಹೆಚ್ಚುತ್ತದೆ, ಸಂಗೀತ ಮನಸ್ಸನ್ನು ನೆಮ್ಮದಿಯತ್ತ ತಳ್ಳುತ್ತದೆ. ನಮ್ಮೊಳಗೆ ಖುಷಿಯಿಲ್ಲದೆ ಇರುವಾಗ ಹೊರಗಡೆಯಿಂದ ಅದನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ. ಜನರು ಯಾಕೆ ಕುಡಿಯುತ್ತಾರೆ, ಯಾಕೆ ಸೇದುತ್ತಾರೆ ಮತ್ತು ಯಾಕೆ ಗಾಸಿಪ್ ಮಾಡುತ್ತಾರೆ. ನನ್ನ ಪ್ರಕಾರ ಗಾಸಿಪ್ ಕೂಡ ಒಂದು ಚಟ. ಕೆಲವರಿಗೆ ಬೇರೆಯವರ ಬಗ್ಗೆ ಮಾತನಾಡದೆ ಇದ್ದರೆ ನೆಮ್ಮದಿಯಿರುವುದಿಲ್ಲ. ನಮ್ಮ ಅನೇಕಾ ಹಳ್ಳಿಗರು ಇದಕ್ಕೆ ದಾಸರಾಗಿದ್ದಾರೆ. ವ್ಯಸನಿಗಳು. ಕೆಲವರಿಗೆ ಕೆಟ್ಟದ್ದು ಮಾಡುವುದು, ಮನೆ ಹಾಳು ಮಾಡುವುದು ಚಟ, ಅವರು ಅದಕ್ಕೆ ವ್ಯಸನಿಗಳಾಗಿರುತ್ತಾರೆ. ಅವರ ಇತಿಹಾಸವೆಲ್ಲ ಅದೊಂದೆ ಕಾರ್ಯವಾಗಿರುತ್ತದೆ ಅಥವಾ ಆ ಕಾರ್ಯವೇ ಇತಿಹಾಸವಾಗಿರುತ್ತದೆ.

ನನ್ನ ಬರವನಿಗೆಯೂ ಅಷ್ಟೇ, ಇದನ್ನು ಯಾರಾದರೂ ಓದಲಿ ಎಂದು ಬರೆಯುವುದಿಲ್ಲ. ನಾನು ಬರೆಯುವುದು ನನ್ನ ಆತ್ಮ ತೃಪ್ತಿಗಾಗಿ. ಬರವಣಿಗೆ ನನ್ನನ್ನು ಜೀವಂತವಾಗಿಸುತ್ತದೆ. ಬರೆದು ಎಷ್ಟೋ ವರ್ಷದ ನಂತರ ತಿರುಗಿ ಓದಿದರೆ, ನಗು ಬರುತ್ತದೆ, ಅಳು ಬರುತ್ತದೆ, ಬೇಸರವೂ ಆಗುತ್ತದೆ. ಒಮ್ಮೊಮ್ಮೆ ಥೂ ಅಸಹ್ಯವೆನಿಸುತ್ತದೆ. ಆದರೂ ಅದೆಲ್ಲವೂ ನಡೆದದ್ದು, ಅದನ್ನು ಅಳಿಸಲಾಗದು. ಬರೆಯದೇ ಇದ್ದರೆ ಅವೆಲ್ಲವೂ ಮಾಸಿ ಹೋಗಿರುತ್ತದೆ. ನಮ್ಮ ಬಗ್ಗೆ ನಾವು ಆದಷ್ಟು ಬೆತ್ತಲಾಗಿರಬೇಕು. ನಾವು ನಮ್ಮನ್ನು ನಗ್ನವಾಗಿರಿಸಿದರೆ, ನಮ್ಮ ಬೆನ್ನು ನೋಡಿ ಅಯ್ಯೋ ಬೆತ್ತಲು ಎನ್ನುವವರು ಕಮ್ಮಿಯಾಗುತ್ತಾರೆ. ಲೇಖನ ಎಲ್ಲಿಂದ ಎಲ್ಲಿಗೋ ಹೋಗುತ್ತಿದೆ ಎಂದು ಗಾಬರಿಯಾಗಬೇಡಿ ಮತ್ತು ಓದುವುದನ್ನು ನಿಲ್ಲಿಸಬೇಡಿ. ಇಲ್ಲಿ ಯಾವ ವಿಷಯ ಬಂದರು ಅದು ನಿಮಗೆ ಹೊಸತೆಂಬುದು ನನಗೆ ಗೊತ್ತು. ಮತ್ತೆ ನೀವು ನಿಮ್ಮ ಆಲೋಚನಾ ಕ್ರಮವನ್ನು ಈ ಓದು ಮುಗಿಯುವವರೆಗೂ ಕೈಬಿಡಿ. ಉದಾಹರಣೆಗೆ ನಾವು ಯಾವುದೇ ಬರಹವನ್ನೂ ಓದುವಾಗ, ಓದುವ ಒಂದು ನಿರ್ದಿಷ್ಠ ಕ್ರಮವನ್ನು ಅನುಸರಿಸುತ್ತಾ ಬಂದಿದ್ದೇವೆ. ಅದು ಇರಲೇ ಬೇಕೆಂಬ ನಿಯಮವಿಲ್ಲ, ಇದ್ದರೂ ಅದನ್ನು ಅನುಸರಿಸಲೇಬೇಕೆಂಬ ಕಡ್ಡಾಯವಿಲ್ಲ. 

ಓದುವ ಕ್ರಮ ಯಾವುದು, ಅದಕ್ಕೊಂದು ಮೊದಲಿರಬೇಕು. ಉದ್ದೇಶವಿರಬೇಕು, ಕಂಟಿನ್ಯೂಟಿ ಇರಬೇಕು, ವಾಸ್ತವಕ್ಕೆ ಹತ್ತಿರ ಇರಬೇಕು, ವಿಷಯಕ್ಕೆ ಬದ್ದವಾಗಿರಬೇಕು, ಅದಕ್ಕೊಂದು ಅರ್ಥಪೂರ್ಣ ಕೊನೆಯಿರಬೇಕು. ಇದೆಲ್ಲವೂ ಯಾಕಿರಬೇಕು? ನಿಮ್ಮ ಮನಸ್ಸಿನ ಖುಷಿಗಾಗಿ. ಕಥೆಯಲ್ಲಿ ನಾಯಕನೇ ಗೆಲ್ಲಬೇಕು, ನಾಯಕಿ ಸುಂದರಿಯಾಗಿರಲೇ ಬೇಕು. ಒಳ್ಳೆಯವರಿಗೆ ಕಷ್ಟ ಬಂದು ಕೊನೆಗೆ ಒಳ್ಳೆಯದೇ ಗೆಲ್ಲಬೇಕು. ನಮ್ಮ ಸುತ್ತ ಮುತ್ತಲಿನ ಪರಿಸರ ಹಾಗಿಲ್ಲ, ಬದಲಾವಣೆಯಾಗಿದೆ, ಆಗುತ್ತಲೇ ಇದೆ. ಕೆಟ್ಟದ್ದು ಗೆಲ್ಲಬೇಕೆಂಬ ಹಟ ನನಗಿಲ್ಲ. ನಾನು ಪ್ರಯಾಣದ ಗುರಿಗಿಂತ ಪ್ರಯಾಣದ ದಾರಿಯನ್ನು ಪ್ರೀತಿಸುವವನು. ಇರಲಿ, ನಮ್ಮ ಪಿಯುಸಿ ಗೆಳೆಯರ ಕೂಟದ ವಿಷಯಕ್ಕೆ ಬರೋಣ. ನಾವು ಪಿಯುಸಿ ಓದಿದ್ದು 1998-2000 ರ ಸಾಲಿನಲ್ಲಿ, ಅದಾದ ನಂತರ ಆರೇಳು ವರ್ಷ ಪರಿಚಯವೇ ಇಲ್ಲದವರ ಹಾಗೆ ಬದುಕಿದ್ದೆವು. ಬದುಕುವ ಪ್ರಮೇಯವೊಂದಿತ್ತು, ಓದು, ಕೆಲಸ, ಸಂಪಾದನೆ ಹೀಗೆ. ಎಲ್ಲರೂ ಓದು ಮುಗಿಸಿ, ಕೆಲವರು ಮದುವೆಯೂ ಆಗಿ ಅಥವಾ ಆಗುವ ಸಮಯಕ್ಕೆ ಅರ್ಧಕ್ಕೆ ಅರ್ಧ ಜನರು ಜೊತೆಯಾದವು. ಶುರುವಿನ ದಿನಗಳಲ್ಲಿ ಉತ್ಸಾಹ ಉಕ್ಕಿ ಹರಿಯುತ್ತಿತ್ತು. ಆಗ್ಗಾಗ್ಗೆ ಸಿಗುವುದು, ಸೇರುವುದು, ಮಾತುಕತೆ, ಚರ್ಚೆ, ಹಳೆಯ ನೆನಪುಗಳ ಮೆಲುಕು ಹೀಗೆ ಸಾಗುತ್ತಿದ್ದ ದಿನಗಳು ಮಾಸುತ್ತ ಬಂದವು. ರಾತ್ರಿ ಹನ್ನೆರಡು ಒಂದು ಗಂಟೆಯ ವರೆಗೂ ನಡೆಯುತ್ತಿದ್ದ ವಾಟ್ಸಪ್ ಚರ್ಚೆಗಳು, ಕಿತ್ತಾಟ, ತುಂಟತನ ಕ್ರಮೇಣ ನಿಂತೆ ಹೋದವು. ಏಳು ಗಂಟೆಗೆ ಸೇರೋಣವೆಂದರೆ ಐದು ಗಂಟೆಗೆ ಬರುತ್ತಿದ್ದವರು ಈಗ ಹತ್ತು ಹನ್ನೊಂದಾದರೂ ಬರುವುದಿಲ್ಲ. ಇನ್ನೂ ಸ್ವಲ್ಪ ಸಮಯ ಇರೋಣವೆನ್ನುವ ಮಂದಿ ಈಗ ಬೇಗ ಹೋಗೋಣ ಲೇಟ್ ಆಗುತ್ತಿದೆ ಎಂದು ಹೊರಟೆವು. ಈ ಬದಲಾವಣೆಯಾಗಿದ್ದು ಏಕೆ? ಹೇಗೆ? ಇದರ ಸಾಧಕ ಬಾಧಕಗಳೇನು? ಇದು ಕೇವಲ ನಮ್ಮ ಅಂದರೇ ಪಿಯುಸಿ ಗೆಳೆಯೊರೊಟ್ಟಿಗೆ ಮಾತ್ರವೇ? ಬೇರೆ ಕಡೆ ಹೀಗಿಲ್ಲವೇ? ಎಲ್ಲಾ ಕಡೆಯಲ್ಲಿಯೂ ಹೀಗೆಯೇ ಇದೆ, ಜೀವನದ ಆಸಕ್ತಿ ಕುಂದುತಿದೆ. ಉತ್ಸಾಹ ಬತ್ತಿ ಹೋಗಿದೆ. ಯಾವುದನ್ನು ಆಸ್ವಾದಿಸಲು ಮನಸ್ಸು ಬರುತ್ತಿಲ್ಲ. ಸ್ವಲ್ಪ ದುಡ್ಡು ಮಾಡಬೇಕು ಎನಿಸುತ್ತಿದೆ ಆದರೇ ಅದೂ ಕೈಗೂಡುತ್ತಿಲ್ಲ. ದುಡ್ಡು ಮಾಡಬೇಕೋ? ಉಳಿಸಬೇಕೋ? ಗೊತ್ತಿಲ್ಲ.

ಜೀವನವೇ ಹೀಗೆ, ಮೊದಲ ಸ್ವಲ್ಪ ದಿನವಿದ್ದ ಉತ್ಸಾಹ ಸಾಯುತ್ತ ಬರುತ್ತದೆ. ಜೀವನದ ಉಲ್ಲಾಸಕ್ಕೆ ಉತ್ಸಾಹಕ್ಕೆ ನಿರಂತರ ನೀರು ಗೊಬ್ಬರ ಹಾಕುತ್ತಿರಬೇಕು. ಅನೇಕಾ ಕನಸುಗಳು ಕನಸುಗಳಾಗಿಯೇ ಉಳಿಯುವುದು ನಾವು ಅವುಗಳನ್ನು ಮರೆಯುವುದಕ್ಕೆ. ಕನಸುಗಳ ಜೊತೆಯಲ್ಲಿರಬೇಕು, ಆ ಕನಸುಗಳು ನಮ್ಮನ್ನು ಎಚ್ಚರಿಸುತ್ತಿರಬೇಕು. ಕನಸುಗಳು ಎಚ್ಚರಿಸುವಂತ ಕನಸುಗಳಾಗಿರಬೇಕು. ಗೊರಕೆ ಹೊಡೆದು ಮಲಗಿಸುವಂತವಾಗಬಾರದು. ಗೆಳೆತನವೂ ಅಷ್ಟೆ ಬೆಳೆಸಿ, ಪೋಷಿಸಿ, ಪ್ರೋತ್ಸಾಹಿಸುವಂತಿರಬೇಕು. ಕಾಟಾಚಾರದ ಗೆಳೆತನ ಸೂಳೆಗಾರಿಕೆಗಿಂತ ಕೀಳೆಂಬುದು ನನ್ನ ಅನಿಸಿಕೆ. ಒಬ್ಬರಿಗೊಬ್ಬರು ಸಹಾಯ ಮಾಡಲೇಬೇಕೆಂಬ ನಿಯಮವಿಲ್ಲ ಆದರೇ ದುರುಪಯೋಗಪಡಿಸಿಕೊಳ್ಳಬಾರದೆಂಬ ನೈತಿಕತೆ ಇರಬೇಕು. ಅಪರೂಪಕ್ಕೊಮ್ಮೆ ಸಿಗುತ್ತೇನೆ, ಇವರಿಂದ ನನಗೇನು? ಎನ್ನುವ ಅಹಂ ಇರಬಾರದು. ನಂಬಿಕೆಯಿಲ್ಲದ ಗೆಳೆತನ ಹಾದರಕ್ಕೂ ಸಮವಿಲ್ಲ. ಅದು ಗೆಳೆತನವೇ ಅಲ್ಲವೆಂಬುದು ನನ್ನ ದೃಢ ನಿರ್ಧಾರ. ಹೂವಿನೊಂದಿಗೆ ನಾರು ಸೇರುವಂತೆಯೇ ಗೆಳೆತನ, ಯಾರೋ ಒಬ್ಬ ಗೆಳೆಯನ ಹೆಸರಿಂದ ನಮಗೆ ಹೆಸರು ಬರುತ್ತದೆ. ನಾವು ಯಾರ ಸ್ನೇಹಿತರು ಅಥವಾ ನಮ್ಮ ಸ್ನೇಹಿತರು ಯಾರು ಎನ್ನುವುದರ ಮೇಲೆ ಕೂಡ ಸಮಾಜ ನಮ್ಮನ್ನು ಅಳೆಯುತ್ತದೆ. ನಮಗೆ ಸಾವಿರ ಸ್ನೇಹಿತರಿರಬಹುದು, ಸಮಯಕ್ಕೆ ಬರುವ ಆಗುವ ಗೆಳೆಯರು ಕೆಲವೇ ಕೆಲವರು. ಸಂಸಾರ, ಕೆಲಸ, ಸಂಪಾದನೆ ಅದೂ ಇದು ಎಂದು ಸಬೂಬು ಹೇಳಿ ಆ ಗೆಳೆಯರ ಸಂಖ್ಯೆಯನ್ನು ಕಡಿಮೆಗೊಳಿಸಿಕೊಳ್ಳುತ್ತೇವೆ. 

ಕೆಲವೊಮ್ಮೆ ಇಂತಹ ಸಣ್ಣ ವಿಷಯಗಳನ್ನೆಲ್ಲಾ ಬರೆಯಬೇಕೇ? ಎನಿಸುವುದುಂಟು. ಬರೆಯುವುದಿರಲಿ ಇದನ್ನೆಲ್ಲಾ ಚರ್ಚಿಸಬೇಕಾ ಎನಿಸಿದರು ತಪ್ಪಿಲ್ಲ. ಜೀವನವೇ ಹಾಗೆ ಯಾವುದನ್ನು ಚಿಂತಿಸಬೇಕು? ಯಾವುದಕ್ಕೆ ಮನ್ನಣೆ ಕೊಡಬೇಕು? ಯಾವುದನ್ನು ಕಡೆಗಣಿಸಬೇಕು? ಯಾರೊಂದಿಗಿರಬೇಕು? ಬೇಡ? ಹೀಗೆ ಪ್ರಶ್ನೆಗಳೊಂದಿಗೆ ಸೆಣೆಸಾಡುತಿರುತ್ತದೆ. ಅರ್ಥವಿಲ್ಲದ ವಿಷಯಕ್ಕೆ, ತಲೆ ಕೆಡಿಸಿಕೊಳ್ಳುವ ಮನಸ್ಸು ಬಹಳ ಗಂಬೀರ ವಿಷಯವನ್ನು ತಾತ್ಸಾರವಾಗಿ ಕಾಣುತ್ತದೆ. ಯಾವುದೋ ದೇಶದ ಯಾವುದೋ ಮೂಲೆಯಲ್ಲಿರುವ ಬಡತನದ ಬಗ್ಗೆ ಅಯ್ಯೋ ಎನ್ನುವ ಬಾಯಿ, ಹಾದಿಯಲ್ಲಿ ಅಥವಾ ಪ್ರಯಾಣಿಸುವ ರೈಲಿನಲ್ಲಿ ತೆವುಳುತ್ತ ಬರುವ ಬಿಕ್ಷುಕನಿಗೆ ಬೈಯ್ಯುತ್ತದೆ. ಎಂದೋ ನಾನು ಮಾಡಿರುವ ಸಹಾಯವನ್ನು ಸದಾ ನೆನೆಯಬೇಕೆನಿಸುತ್ತದೆ. ಬೇರೆಯವರು ನನಗೆ ಮಾಡಿದ ಸಹಾಯವನ್ನು ಮರೆತು, ಅದೇನು ಮಹಾ ಸಹಾಯವೆನ್ನುತ್ತದೆ. ಬಂದ ಹಾದಿ ಮರೆತುಹೋಗಿರುತ್ತದೆ. ಕಷ್ಟದ ದಿನಗಳಾಗಿರಲಿ, ಸುಖದ ದಿನಗಳಾಗಿರಲಿ. ಎಲ್ಲವೂ ಒಂದೆ. ಯಾವುದೂ ಶಾಶ್ವತವಲ್ಲವೆಂದು ತಿಳಿದಿದ್ದರೂ, ಎಲ್ಲವೂ ಶಾಶ್ವತವೆಂಬಂತೆ ಯುದ್ದಕ್ಕಿಳಿಯುತ್ತದೆ. 

ಈ ವಾದ, ವಿವಾದ, ಘರ್ಷಣೆ, ಗಲಾಟೆ ಎಲ್ಲವೂ ಯಾವುದಕ್ಕೆ? ಏನನ್ನು ಪಡೆಯುವುದಕ್ಕೆ? ಏನನ್ನು ಕೊಂಡು ಹೋಗುವುದಕ್ಕೆ? ವಿದ್ಯಾವಂತ, ಅವಿದ್ಯಾವಂತ, ಹಳ್ಳಿಗ, ನಗರದವ, ಬಡವ, ಬಲ್ಲಿಗ ಎಲ್ಲರಿಗು ಅರಿತಿರುವ ಸತ್ಯವೊಂದಿದೆ. ಅದನ್ನು ಎಲ್ಲರೂ ನಂಬುತ್ತಾರೆ, ನಂಬಿ ಬದುಕನ್ನು ಸವೆಸುತ್ತಾರೆ. ಅದೆಂದರೆ, ನಾವು ಇರುವುದು ನಾಲ್ಕು ದಿವಸ ಮಾತ್ರ. ನಮ್ಮ ಸೇವೆ ಮುಗಿದ ಮೇಲೆ ಎಲ್ಲವನ್ನೂ ಬಿಟ್ಟು ಹೋಗಲೆಬೇಕು. ಹೋಗುವ ಮುನ್ನಾ ಯಾಕೀ ಕಿತ್ತಾಟ, ಚೀರಾಟ? ಹೊಡೆದಾಟ? ಬಡಿದಾಟ? ಇದು ವೈರಾಗ್ಯದ ಮಾತಲ್ಲ. ಅನಿವಾರ್ಯದ ಮಾತು. ಈ ದೇಶದ ಪ್ರಜೆ ಬೇರೆ ದೇಶದ ಬಗ್ಗೆ ಕಿಡಿ ಕಾರುತ್ತಾನೆ. ಅಲ್ಲಿಯವ ಇಲ್ಲಿನ ಬಗ್ಗೆ. ಒಂದು ಜಾತಿಯವ ಮತ್ತೊಂದು ಜಾತಿಯವನ ಮೇಲೆ ಎರಗಿ ಬೀಳುತ್ತಾನೆ, ಅವನ ಜಾತಿಯವ ಇವನ ಮೇಲೆ. ಭಾಷೆಯೂ ಅಷ್ಟೆ, ಧರ್ಮವೂ ಅಷ್ಟೆ. ಮನಸ್ಸು ಎರಡೇ ಎರಡು ನಿಮಿಷದ ಶಾಂತಿಗೆ, ನೆಮ್ಮದಿ ಹಾತೊರೆಯುತ್ತದೆ. ಕುಡಿದಾದರೂ ಸರಿ, ಸೇದಿಯಾದರೂ ಸರಿ, ನನಗೆ ನೆಮ್ಮದಿ ಕೊಡಿಸು ಎಂದು ಗೋಗರೆಯುತ್ತದೆ. 

ಮಾತು ಎಲ್ಲಿಂದ ಎಲ್ಲೆಲ್ಲಿಗೋ ಹೋಗಿ ಬಂತು. ಇರಲಿ, ಮನಸ್ಸು ಅಷ್ಟೆ ಗೊಂದಲದ ಗೂಡಾಗಿದೆ. ತಲೆಯೊಳಗೆ ನೂರೆಂಟು ಹುಳುಗಳಿವೆ. ಆ ಹುಳುಗಳು ಹೇಗೆ ಬಂದೋ, ಎಲ್ಲಿಂದ ಬಂದೊ? ಯಾಕೆ ಬಂದೋ? ಒಂದೂ ಗೊತ್ತಿಲ್ಲ. ಅವುಗಳು ಹುಳುವಾ? ನೊಣವಾ? ರೆಕ್ಕೆ ಇರುವುದಾ? ಗೊತ್ತಿಲ್ಲ. ನಮಗೆ ಗೊತ್ತಿರುವ ಪದವೊಂದೆ ಗೊತ್ತಿಲ್ಲ. ಯಾಕೋ ಬೇಜಾರು, ಗೊತ್ತಿಲ್ಲ. ಸುಸ್ತಾಗುತ್ತಿದೆ ಗೊತ್ತಿಲ್ಲ ಯಾಕೊ? ಮನಸ್ಸಿಗೆ ಬೇಕಿದ್ದ ನಿರಾಳತೆ ಸಿಗುತ್ತಿಲ್ಲ. ಪ್ರಶ್ನೆಗಳಿವೆ ಉತ್ತರವಿಲ್ಲ, ಉತ್ತರ ಹುಡುಕುವ ಸಂಯಮವಿಲ್ಲ. ಆ ಉತ್ತರಗಳು ನಮಗೆ ನೆಮ್ಮದಿ ಕೊಟ್ಟರೆ ಉತ್ತರವೆನಿಸುತ್ತವೆ, ಇಲ್ಲದೇ ಹೋದರೆ ಅವುಗಳು ಉತ್ತರವೇ ಎನಿಸುವುದಿಲ್ಲ. ಮನುಷ್ಯನಿಗೆ ಮನಸ್ಸಿಗೆ ನೆಮ್ಮದಿ ಅನಿಸೋದಿಲ್ಲವೆಂದರೆ ಮುಗಿಯಿತು ಅದನ್ನು ಒಪ್ಪವುದೇ ಇಲ್ಲ, ಮನಸ್ಸಿಗೆ ಮುದವಾಗಿದ್ದರೆ ಮಾತ್ರ ಅದನ್ನು ಒಪ್ಪವುದು. ಈಗ ನಿಮ್ಮ ಮನಸ್ಸಿಗೂ ಅಷ್ಟೆ ಈ ಮಾತುಗಳು ಇಷ್ಟವಾಗುವುದಿಲ್ಲ. ಏಕೆಂದರೆ ನಿಮಗೆ ಇದು ಮುದ ನೀಡುವುದಿಲ್ಲ. ಯಾವುದೋ ನ್ಯೂನ್ಯತೆಗಳನ್ನು ನಿಮ್ಮ ಮನಸ್ಸು ಹುಡುಕತೊಡಗುತ್ತದೆ. ಅದೇನೆ ಇರಲಿ ಈ ಮಾತುಗಳನ್ನು ಇಲ್ಲಿಗೆ ನಿಲ್ಲಿಸುತ್ತೇನೆ. ಮುಂದಿನ ಬರವಣಿಗೆ ಸೋಲಿನ ಸರಮಾಳೆಯನ್ನು ಓದಲು ರೆಡಿ ಇರಿ.
ನಿಮ್ಮವ, ಹರೀಶ್ ಬಾನುಗೊಂದಿ, 15/05/2017