
ಪರಿಸರ ವಿಜ್ನಾನಿಯ ಗೊಂದಲಮಯ ಮನಸ್ಸಿನೊಳಗೆ ಪರಿಸರ ಸೇವೆಯ ದೊಬ್ಬರಾಟ!
ನನ್ನ ಹಿಂದಿನ ಬರವಣಿಗೆ ನನಗೆ ಅಷ್ಟು ಸಮಧಾನ ಕೊಡಲಿಲ್ಲವೆಂದು ಇದನ್ನು ಮುಂದುವರೆಸುತಿದ್ದೇನೆ. ದಯವಿಟ್ಟು ಇವನ ಕಥೆ ಇನ್ನು ಮುಗಿಯಲಿಲ್ಲವೇ ಎಂಬ ಕೊರಗನ್ನು ಕ್ಷಣಿಕ ಮಾತ್ರಕ್ಕೆ ಮುಂದೂಡಿ ಇದೊಂದನ್ನು ಓದಿ ನಿಮ್ಮ ಅನಿಸಿಕೆ ತಿಳಿಸಲೇಬೇಕು. ಮೊದಲನೆಯದಾಗಿ, ಪರಿಸರ ಸಂರಕ್ಷಣೆ ಅಥವಾ ಪರಿಸರ ಆಚರಣೆಯ ವಿಷಯ. ಪ್ರಪಂಚದ ಶೇ.೮೦ರಷ್ಟು ಸಂಪನ್ಮೂಲಗಳನ್ನು ಶೇ.೨೦ರಷ್ಟು ಮಂದಿ ಮಾತ್ರ ಬಳಸಲಾಗುತ್ತಿದ್ದು, ಶೇ.೨೦ ರಷ್ಟು ಸಂಪನ್ಮೂಲವನ್ನು ಇನ್ನುಳಿದ ೮೦ಶೇ. ಮಂದಿ ಉಪಯೊಗಿಸುತ್ತಿದ್ದಾರೆ. ಇದು ಜಾಗತೀಕ ಮಟ್ಟದಲ್ಲಿಯೂ ಹೌದು. ಸ್ಥಳಿಯಮಟ್ಟದಲ್ಲಿಯೂ ಹೌದು. ಉದಾಹರಣೆಗೆ. ಹಳ್ಳಿಗಳಲ್ಲಿ, ನಾಲ್ಕೈದು ಜನ ೨೦-೨೫ ಎಕರೆ ಜಮೀನು ಹೊಂದಿದ್ದು, ಇನ್ನುಳಿದ ಸಾವಿರಾರು ಜನ ಅರ್ಧ ಎಕರೆಯಿಂದ ಒಂದು ಎಕರೆಯ ಮಿತಿಯಲ್ಲಿರುತ್ತಾರೆ. ಇದು ನಮ್ಮ ಆಫೀಸುಗಳಲ್ಲಿಯೂ ಸರಿಯೇ! ನಾಲ್ಕು ಜನ ಮ್ಯಾನೇಜರ್ ಪಡೆಯುವ ಸಂಭಳ ನಲ್ವತ್ತು ಜನ ಡಿ-ದರ್ಜೆಯವರಿಗೆ ಸಮನಾಗಿರುತ್ತದೆ. ಈ ತಾರತಮ್ಯ ಎಲ್ಲಕಡೆಯೂ ಇದ್ದೇ ಇದೆ.ಇಂದಿನ ಪರಿಸರದ ಕಥೆಯೂ ಅಷ್ಟೇ, ಮೊದಲಿನಿಂದಲೂ ಶಕ್ತಿಯಿದ್ದವರು ಬಾಚಿ ನೀರುಕುಡಿದು ಈಗ ಎಲ್ಲರ ಮೇಲೂ ಅದರ ಹೊಣೆಗಾರಿಕೆಯೆಂದರೇ ಅದನ್ನು ನಾವು ಒಪ್ಪಲೇಬೇಕೆನ್ನುವುದು ಯಾವ ನ್ಯಾಯ! ಇದುವರೆಗೂ ಮರಮುಟ್ಟುಗಳಿಂದ ಅದ್ದೂರಿ ಮನೆಕಟ್ಟಿ ಮೆರೆದವರೂ ಇನ್ನು ಮುಂದೆ ಮನೆಕಟ್ಟುವವರು ಸರಳಮನೆಯಲ್ಲಿರಿ ಎನ್ನುವುದು, ಸೊಸೆಗೆ ಬುದ್ದಿ ಹೇಳಿ ಅತ್ತೆ ಅಗಸನ ಜೊತೆ ಮಲಗುತ್ತಿದ್ದಳಂತೆ. ಬುದ್ದಿ ಹೇಳುವ ತಲೆಗಳಿಗೆ ನಮ್ಮಲ್ಲಿ ಕೊರತೆ ಏನುವಿಲ್ಲವಲ್ಲ.ನಾಲ್ಕು ಮಂದಿಯ ಮುಂದೆ ನಾಲ್ಕು ಸಂಸ್ಕೃತ ಶ್ಲೋಕ, ಅಥವಾ ಇಂಗ್ಲೀಷ್ ನಲ್ಲಿ ಸ್ವಲ್ಪ ವೇಗವಾಗಿ ಮಾತನಾಡಿದರೇ ಮುಗಿದೇ ಹೋಯಿತಲ್ಲ. ಮುಂದೆ ನಿಂತಿರುವ ಕುರಿ ತಾನಾಗಿಯೇ ಶರಣಾಗುತ್ತದೆ. ಹಾಗೆ ಮಾಡಿಯೇ ತಾನೇ, ಹಟ್ಟಿ ಗೊಬ್ಬರ ಬದಿಗೊತ್ತಿ, ರಾಸಾಯನಿಕ ಗೊಬ್ಬರ ಮೆರೆಸಿ ಭೂಮಿಯನ್ನು ಹಿಂಡಿ ಅದರಲ್ಲಿದ್ದ ಸತ್ವವನ್ನೆಲ್ಲಾ ಮುಗಿಸಿದ್ದು. ದನಗಳಿಗೆ ಮೇವು ಇಲ್ಲದೇ ಹಾದಿ ಬೀದಿಯಲ್ಲಿ ಪ್ಲಾಸ್ಟಿಕ್, ಪೇಪರ್ ತಿನ್ನುವ ಮಟ್ಟಕ್ಕೆ ಬಂದದ್ದು. ಸಾರ್ವಜನಿಕ ಸ್ಥಳಗಳನ್ನೆಲ್ಲಾ ನುಂಗಿ ನೀರುಕುಡಿದ ಮೇಲೆ ಈಗ ರೈತರ ಬಳಿಗೆ ಹೋಗಿ, ತಾವು ಗಿಡ ಬೆಳೆಸಿದರೇ ಒಳ್ಳೆಯ ಆದಾಯವಿದೆ ಎಂದು ಅವನನ್ನು ಪ್ರೊತ್ಸಾಹಿಸಿದರು.ನಮ್ಮ ದೇಶದ ಆಡಳಿತ ಹೇಗಿದೆಯೆಂದರೇ, ನನ್ನ ಜಮೀನಿನಲ್ಲಿರುವ ಮರ ಕಡಿಯಲು ನಾನು ಹೋಗಿ ಅರಣ್ಯ ಇಲಾಖೆಯಿಂದ ಪರಿಮಿತಿಪಡೆಯಬೇಕು, ಅದಕ್ಕೆ ಅವನಿಗೆ ಲಂಚಕೊಡಬೇಕು.ಇಂಥಹ ವಾತವರಣವಿರುವಾಗ ರೈತನಿಗೇನು ತೆವಳಿದೆಯೇ ಮರ ಬೆಳೆದು ತನ್ನ ಮನೆಗೆ ಬೆಂಕಿ ಹಂಚಿಕೊಳ್ಳುವುದಕ್ಕೆ?
ಮೊದಲಿನಿಂದಲೂ ನಾನು ಹಳ್ಳಿಯಲ್ಲಿ ಕಂಡಂತೆ, ಬಡವರು, ಭೂಮಿಯಿಲ್ಲದವರು ತರಗು,ಪುರಳೆಗಳಿಂದ ಅಡುಗೆ ಮಾಡಿದ್ದಾರೆ ಹೊರತು ಮರ ಕಡಿದು ಅಡುಗೆ ಮಾಡಿದವರಿಲ್ಲ.ಹಾಗೆ ಮರ ಕಡಿದು ಹಾಕಿದವರೆಲ್ಲಾ ಉತ್ತಮವಾಗಿದ್ದವರಷ್ಟೆ. ಸಮಾನತೆಯೆಂಬುದು ನಮ್ಮ ಬಾಯಿ ಚಪಲಕ್ಕೆ ಹೇಳುವ ಮಾತಿದು. ನನ್ನೂರಿನಂತ ಚಿಕ್ಕ ಹಳ್ಳಿಯಲ್ಲಿಯೂ ಅಷ್ಟೇ, ಹಬ್ಬ ಹರಿದಿನಗಳಿಗೆ ಚಂದಾ ವಸೂಲಿ ಮಾಡುವಾಗ ಎಲ್ಲರೂ ಸಮನಾಗಿ ಹಣ ಕೊಡಬೇಕೆಂದು ಎತ್ತುತ್ತಾರೆ. ಅದೇ ಆಡಳಿತ, ಅಧಿಕಾರ ಬಂದಾಗ, ನೀರು, ಜಮೀನು ಹೀಗೆ ಏನೇ ವಿಷಯ ಬಂದಾಗಲೂ ಹೇ ನಿಮಗೇನಪ್ಪ ಸುಮ್ಮನಿರಿ,ಇರೋನಾಲ್ಕು ಗದ್ದೆ ಇಟ್ಟಿಕೊಂಡು ಹೇಳೋಕೆ ಬರಬೇಡಿ, ನಾವಿಲ್ಲವೇ ಒಂದು ತೀರ್ಮಾನ ಮಾಡುತ್ತೆವೆ, ಎನ್ನುತ್ತಾರೆ. ಅದೂ ಹಾಳು ಬಿದ್ದು ಹೋಗಲಿ, ನೀರು ಬಳಕೆದಾರರ ಸಂಘ ಅನ್ನೋದೊಂದು ಮಾಡಿಕೊಂಡೀರುತ್ತಾರೆ, ಸ್ಥಳೀಯ ರಾಜಕೀಯ ಪುಡಾರಿಗಳದ್ದೇ ರಾಜ್ಯಭಾರ. ನನ್ನಂಥ ಕಡಿಮೆ ಜಮೀನಿರುವವನು ಮಾತನಾಡುವ ಹಾಗೆಯೇ ಇಲ್ಲ. ಕಂದಾಯ, ದಂಡ, ಇಂಥವುಗಳು ಬಂದಾಗ ದಬಾಯಿಸುವುದು ನನ್ನಂತವನನ್ನು. ವಿಚಿತ್ರವೆಂದರೇ, ಕಡಿಮೆ ಜಮೀನಿರುವ ರೈತನಿಗೆ ಯಾವ ಮರ್ಯಾದೆಯೂ ಇಲ್ಲ, ಸರ್ಕಾರದ ಸವಲತ್ತುಗಳನ್ನು ವಿಚಾರಿಸಲೂ ಹೋದರೇ,ಅವೆಲ್ಲಾ ನಿಮಗೆ ಇಲ್ಲ ಬಿಡಿ. ಹನಿ ನೀರಾವರಿಗೆ ಯೋಗ್ಯನಲ್ಲ, ಹೊಸ ಬೋರ್ ತೆಗೆಸಲು ಅರ್ಹನಲ್ಲ. ಕಂದಾಯ ಕಟ್ಟಲು ಕಡ್ಡಾಯ. ರೈತನ ಬೆನ್ನೆಲುಬನ್ನು ಮುರಿದು ರೈತ ದೇಶದ ಬೆನ್ನೆಲುಬು ಎಂದು ಹೇಳುತ್ತಾರೆ. ನಾನು ಕತ್ತೆತ್ತಿ ಮೇಲೆ ನೋಡಲು ಆಗದು, ಬಗ್ಗಿಸಿ ದುಡಿಯಲೂ ಬಾರದು. ಯಾರೋ,ಎಂದೋ ಮಾಡಿದ ನೀತಿಗಳನ್ನೆ ಇನ್ನು ಪಾಲಿಸಬೇಕೆ? ಪರಿಸರ ಸಂರಕ್ಷಣೆಯ ಹೊಣೆಯನ್ನು ಬಡವರ ಮೇಲೆ ಹೇರುವುದು ಎಷ್ಟು ಸರಿ? ಎಲ್ಲರಿಗೂ ಒಂದೇ ನ್ಯಾಯ ನೀತಿ ಬೇಕೆನಿಸುವುದು ಸರಿ, ಆದರೇ, ಮಲಗುವಾಗ ಮಾತ್ರ ನೀನು ನನ್ನ ಅರ್ಧಾಂಗಿ ಮಿಕ್ಕಿದ್ದೆಲ್ಲಾ ನಿನಗೆ ತಿಳಿಯದು ಸುಮ್ಮನಿರು ಎನ್ನುವ ನಮ್ಮ ಅನೇಕ ಪುರುಷ ರತ್ನಗಳಂತೆ ನಮ್ಮ ಸರ್ಕಾರ. ಇದರಂತೇಯೇ, ಮಾಲಿನ್ಯ ನಿಯಂತ್ರನದ ವಿಷಯ ಬಂದಾಗಲೂ ಅಷ್ಟೇ, ಸಾಮನ್ಯ ಜನತೆ ಸಾರ್ವಜನಿಕ ವಾಹನಗಳನ್ನು ನಂಬಿ ಓಡಾಡಲು ಸಿದ್ದನಿರುವಿರುವಾಗ, ಪರಿಸರದ ಬಗ್ಗೆ ಬೊಬ್ಬೆ ಹೊಡೆಯುವ ವಿಜ್ನಾನಿಗಳು, ಮಹಾನ್ ಮೇಧಾವಿಗಳು, ಬಿತ್ತಿ ಚಿತ್ರಕ್ಕೆ ಮುಖ ತೋರಿಸುವ ನಮ್ಮ ಸಿನೆಮಾ ನಟ ನಟಿಯರೂ, ವರ್ಷಕ್ಕೆ ಒಂದು ದಿನವಾದರೂ ತಮ್ಮ ವಾಹನಗಳನ್ನು ಬಿಟ್ಟು ಸಾರ್ವಜನಿಕ ವಾಹನ ಉಪಯೋಗಿಸಬಾರದೇಕೆ ? ನಾನು ಇವುಗಳೆನ್ನೆಲ್ಲಾ ಕಮ್ಮ್ಯುನಿಸ್ಟ್ ಆಗಿ ಕೇಳುತ್ತಿಲ್ಲ. ಮೂರ್ಖರಾಗಿರುವ ನನ್ನಂತವರನ್ನು ಇನ್ನೂ ಮುಟ್ಠಾಳರಾಗಿಸುವುದೇಕೆನ್ನುವುದೇ ನನ್ನ ಪ್ರಶ್ನೆ ಆದರೂ ನನ್ನಂತಹ ಕುರಿಗಳು ಇದನ್ನು ಪ್ರಶ್ನಿಸುವ ಎದೆಗಾರಿಕೆಯನ್ನು ತಂದುಕೊಳ್ಳಲಿಲ್ಲ. ತೆರಿಗೆ ವಸೂಲಿ ಮಾಡುವ ಸರ್ಕಾರ ಮರಳಿ ರೈತನಿಗೆ ಕೊಟ್ಟಿರುವುದೇನು? ರೈತನನ್ನು ತಮ್ಮ ವೋಟ್ ಬ್ಯಾಂಕ್ ಗಾಗಿ ಉಳಿಸಿಕೊಂಡವರು, ಅವರನ್ನು ಹೆದರಿಸಿ ಉಳಿಸಿಕೊಂಡಿರುವ ಅಧಿಕಾರಿಶಾಯಿ, ಅದಕ್ಕೆ ಪ್ರೋತ್ಸಾಹ ಕೊಡುವ ನಮ್ಮ ವಿದ್ಯಾವಂತರು. ವಿದ್ಯಾವಂತರಂತ ನಯವಂಚಕರು ಬೇರಿಲ್ಲ. ಲಂಚಗೋರತನವನ್ನು ದಿನ ದಿನಕ್ಕೇ ಏರಿಸಿ, ಸಾಮಾನ್ಯರೂ ಲಂಚವೆಂಬುದು ನಮ್ಮ ಜೀವನದ ಒಂದು ಅಂಗವೆನ್ನುವಂತಾಗಿದೆ. ನಾನು ಕಂಡಂತೆ ವಾಸ ಸ್ಥಳ ದೃಢೀಕರಣ ಪತ್ರ ಬರೆಸಿಕೊಳ್ಳಲೂ ೧೦ರೂಪಾಯಿ ಲಂಚಕೊಡಬೇಕಾಗಿದೆಯೆಂದರೇ ಯೋಚಿಸಿ, ಅದಕ್ಕಿಂತ ಸೋಜಿಗವೆಂದರೇ, ನನ್ನೂರಿನ ಜನರೂ ಕೂಡ ತಪ್ಪು ಎನ್ನುವುದಿಲ್ಲ. ಲಂಚ ಕೊಟ್ಟಿಲ್ಲ ಅಂದರೇ ಧರ್ಮಕ್ಕೆ ಬರೆದುಕೊಟ್ಟಾನೇ? ಎನ್ನುತ್ತಾರೆ.
ಮೇಲೆ ಮೇಲೆ ಮಡಿವಂತಿಕೆಯ ಸೋಗನ್ನು ಹೊದ್ದಿಕೊಂಡು, ನಮ್ಮತನವನ್ನು ಬೇರೆಯವರಿಗೆ ಮಾರಿಕೊಂಡು ಬದುಕುತ್ತಿರುವ ನಮ್ಮ ವಿದ್ಯಾವಂತ ಬಳಗವಂತೂ ಮಾತೆತ್ತೆದರೇ ದೊಡ್ಡ ವ್ಯಕ್ತಿಗಳ ಶ್ಲೋಕಗಳನ್ನು ಉದುರಿಸುತ್ತಾರೆ ಹೊರತು ವಾಸ್ತವಕ್ಕೆ ಇಳಿಯುವುದಿಲ್ಲ. ಯಾವ ರಿಪೋರ್ಟ್ ಓದಲೀ, ಒಂದು ಸಂಸ್ಕೃತ ಶ್ಲೋಕ, ಇಲ್ಲವೇ ಮಹಾನ್ ವ್ಯಕ್ತಿಗಳು ಹೇಳಿದ್ದ ಮಾತುಗಳು. ಅಲ್ಲಿಗೆ ಮುಗಿದೇ ಹೋಯಿತು. ನೀರು,ಗಾಳಿ, ಪರಿಸರ ಮುಖ್ಯವೆಂಬುದು ನಮ್ಮುರಿನ ಅವಿದ್ಯಾವಂತ ಸಮೂಹಕ್ಕೂ ತಿಳಿದಿದೆ. ಅದನ್ನು ಹೇಳಲು ನಾವು, ಇಷ್ಟೇಲ್ಲಾ ವ್ಯಾಯಾಮ ಮಾಡಬೇಕೆ? ಅವರಿಗೆ ತಿಳಿಯದ ಹೊಸ ವಿಷಯಗಳನ್ನು ಅವರಿಗೆ ತಲುಪಿಸಬಾರದೇಕೆ? ಅವರ ಬದುಕನ್ನು ಸೊಗಸಾಗಿಕೊಳ್ಳುವ ಮಾರ್ಗಗಳನ್ನು ಅವರಿಗೆ ತಲುಪಿಸಬಾರದೇಕೆ? ಮರ ನೆಡಿ ಮಳೆ ಬರುತ್ತದೆಂದರೇ, ಹೋಗಯ್ಯಾ ಮಳೆ ಏನು ನನ್ನ ಒಬ್ಬನ ಮನೆ ನೇರಕ್ಕೇ ಬರುತ್ತಾ ಬಂದರೇ ಎಲ್ಲರಿಗೂ ಬಂದೀತು, ಇಲ್ಲದಿದ್ದರೇ ಯಾರಿಗೂ ಇಲ್ಲವೆನ್ನುತ್ತಾನೆ. ಬೊಕ್ಕಸದಲ್ಲಿನ ಹಣ ವ್ಯಯಿಸುವುದೇ ನಮ್ಮ ಕೆಲಸವೆಂದು ಮಾಡಹೊರಟರೇ ಏನಾದಿತು ಹೇಳಿ. ಸ್ವಲ್ಪ ದಿನಗಳ ಹಿಂದೆ ಶಿವಮೊಗ್ಗೆಯ ಒಂದು ಕಚೇರಿಗೆ ಹೋಗಿದ್ದೆ, ಮಾತನಾಡುತ್ತ ಅಲ್ಲಿದ್ದ ನಾಲ್ಕು ಖಾಲಿ ಕುರ್ಚಿ, ಮತ್ತು ಮೇಜುಗಳ ಬಗ್ಗೆ ವಿಚಾರಿಸಿದೆ. ಅವರೆಂದರು, ಯಾವುದೋ ಒಂದು ಗ್ರಾಂಟ್ ಬಂದಿತ್ತು ಉಪಯೋಗಿಸಬೇಕಿತ್ತು, ಇಲ್ಲದಿದ್ದಲಿ ಅದು ವ್ಯರ್ಥವಾಗುತ್ತಿತ್ತು ಅದಕ್ಕೆ ಇರಲಿ ಅಂತಾ ಇದನ್ನು ತೆಗೆದುಕೊಂಡಿದ್ದೇವೆ. ಇಂಥಹ ಘಟನೆಗಳು ಬಹಳ ಕಡೆ ಕಂಡಿದ್ದೇನೆ. ಸಂಶೋಧನೆಯ ನೆಪದಲ್ಲಿ, ಫ್ಯಾಮಿಲಿ ಟೂರ್ ಹೋಗಿ ಬಂದವರು, ದೇಶ ಸುತ್ತಾಡುವವರು, ಮನೆಗೆ ಕ್ಯಾಮೆರಾ, ಕಂಪ್ಯೂಟರ್ ತೆಗೆದುಕೊಂಡವರು ಎಲ್ಲರೂ ಸಿಗುತ್ತಾರೆ. ಆದರೇ, ಅವರು ಮಾಡಿದ ಸಂಶೊಧನೆಯನ್ನು ತನ್ನ ಸ್ಥಳೀಯ ಭಾಷೆಯಲ್ಲಿ ಬರೆದು ತನ್ನೂರಿನ ಜನರಿಗೆ ಕೊಟ್ಟವರು ಒಬ್ಬರೂ ಸಿಗುವುದಿಲ್ಲ. ತಾನು ಮಾಡುತ್ತಿರುವುದು ಮಹಾನ್ ಕೆಲಸವೆಂದು ತೋರಿಸಬೇಕು. ಅರ್ಥವಾಗದಂತೆ ಬರೆದಾಗ ಮಾತ್ರ ನಮ್ಮ ಜನ ಏನೂ ಬರಿತಾನೆ ರೀ ಅವನು, ಸಾಮಾನ್ಯ ಜನಕ್ಕೆ ಅರ್ಥನೇ ಆಗಲ್ಲ, ತುಂಬಾ ಸಂಯಮ ಬೇಕು ಅರ್ಥ ಮಾಡಿಕೊಳ್ಳೊಕೆ. ಮೂರ್ಖತನಕ್ಕೆ ಇದಕ್ಕಿಂತ ಉದಾಹರಣೆ ಬೇಕೆ? ಸಂಕ್ಷಿಪ್ತವಾಗಿ ಹೇಳುವುದಕ್ಕೆ ಬಾರದವನು ಬುದ್ದಿವಂತನೇ? ಊರಿನಲ್ಲಿ ಸರಿಯಾಗಿ ಹೇಳಲಿಲ್ಲವೆಂದರೇ, ಅಯ್ಯೊ ಮುಟ್ಠಾಳ ಅದೇನು ಬೊಗಳುತ್ತೀಯೋ ಅದನ್ನ ಅರ್ಥ ಆಗೋ ರೀತಿ ಒದರು ಎನ್ನುತ್ತಾರೆ.
ಜಾಗತೀಕ ವಿಷಯದ ಬಗ್ಗೆ ನಮ್ಮ ದಿಗ್ಗಜರು ಮಾತನಾಡುವಾಗ, ನನಗೆ ಜಪಾನಿನಲ್ಲಿ ಸಹಿ ಹಾಕಿದ ಕ್ಯೋಟೋ ಪ್ರೋಟೋಕಾಲ್ ಗೆ ಅಮೇರಿಕಾ ಸಹಿ ಹಾಕಲಿಲ್ಲ. ಎಲ್ಲ ದೇಶಗಳಿಗಿಂತ ಹೆಚ್ಚು ಪರಿಸರ ಮಾಲಿನ್ಯ ಮಾಡುತ್ತಿದ್ದರೂ ಅದರ ನಿಯಂತ್ರಣಕ್ಕೆ ಸಹಕರಿಸಲು ಸಹಿ ಹಾಕುವುದಿಲ್ಲವೆಂದರೇ, ಏನೇನೂ ಮಾಡದೇ, ಇದ್ದರೂ ಅದರ ಬಗ್ಗೆ ಕೂಗಾಡುವ ನಮ್ಮ ಜನತೆಯ ಬಗ್ಗೆ ಮೆಚ್ಚಲೇಬೇಕು.ಕ್ಯೂಟೋ ಪ್ರೋಟೋಕಾಲ್ ಪ್ರಕಾರ, ಯಾವುದೇ ಸಂಸ್ಥೆಗಳು ಮರಬೆಳೆಸಿ, ಇಂಗಾಲವನ್ನು ತಗ್ಗಿಸಲು ಸಹಕರಿಸಿದರೆ ಅವರಿಗೆ ಹಣಬರುತ್ತದೆ.ಅಂದರೇ, ಒಂದು ಮರದಿಂದ ಎಷ್ಟು ಇಂಗಾಲವನ್ನು ನಿಗ್ರಹಿಸಲು ಸಾಧ್ಯವಾಗುತ್ತದೆಂಬ ಲೆಕ್ಕಾಚಾರದ ಮೇಲೆ, ಹಣ ಕೊಡಲಾಗುತ್ತದೆ. ನಮ್ಮ ಬಯಲು ಸೀಮೆಯಲ್ಲಿ ದಟ್ಟನೆಯ ಮರಗಳನ್ನು ಬೆಳೆಸಿ ಇದರ ಉಪಯೋಗವನ್ನು ಪಡೆಯಬಹುದು. ಆದರೇ, ಇದನ್ನು ಕೇವಲ ಕಂಪನಿಗಳಿಗೆ ಮೀಸಲಾಗದೇ, ಎಲ್ಲ ರೈತಾಪಿ ವರ್ಗದವರಿಗೂ ಸಿಗುವಂತೆ ಮಾಡಲು ಪ್ರಯತ್ನಿಸುವುದಿಲ್ಲ. ವಾಸ್ತವಿಕವಾಗಿ ರೈತಾಪಿ ವರ್ಗ ಮುಂದುವರೆಯುವುದು ಯಾರೊಬ್ಬರಿಗೂ ಬೇಕಿಲ್ಲ. ಕಾಯಿಲೆ ವಾಸಿಯಾದರೇ ವೈದ್ಯನಿಗೇನೂ ಕೆಲಸ? ಸಾಮಾಜಿಕ ಸಮಸ್ಯೆಗಳು ಮಾಯವಾದರೇ ಸಮಾಜ ಕಾರ್ಯಕರ್ತರಿಗೆಲ್ಲಿಯ ಕೆಲಸ. ಅದಕ್ಕೆ ಅವುಗಳನ್ನು ಮತ್ತಷ್ಟು ಹೆಚ್ಚಿಸುತ್ತಾರೆ. ಪರಿಹಾರ ಹುಡುಕುವುದಕಿಂತ ಹೆಚ್ಚಿಸುವುದರಲ್ಲಿಯೇ ಅವರಿಗೆ ಆಸಕ್ತಿ. ನಾವು ಮಾತನಾಡುವ ಪರಿಸರ ಸ್ನೇಹಿ ವಸ್ತುಗಳು ಅಷ್ಟೇ, ತೊಂಬತ್ತರ ಕೊನೆಯವರೆಗೂ ನನ್ನ ಮನೆಯಲ್ಲಿಯೂ ಬಿದಿರು ಕುಕ್ಕೆಗಳು, ಮಣ್ಣಿನ ಮಡಿಕೆಗಳು, ಇದ್ದಲು ಒಲೆಗಳಿದ್ದವು. ಆದ್ದರಿಂದೂ, ಸಂಪೂರ್ಣ ಪ್ಲಾಸ್ಟಿಕ್ ಮಯವಾಗಿದೆ. ನೀವು, ಬರೀ ಪರಿಸರದ ಬಗ್ಗೆ ಚಿಂತಿಸುವುದಾದರೇ, ಅದರಿಂದ ಬದುಕುತ್ತಿದ್ದ ಒಂದು ವರ್ಗವೇ ನಾಶವಾಯಿತ್ತಲ್ಲ. ಮತ್ತೊಂದು ನೈಜ ಘಟನೆಯೊಂದನ್ನು ತಮಗೆ ಇಲ್ಲಿ ಪ್ರಸ್ತುತಪಡಿಸುವುದು ನನ್ನ ಕರ್ತವ್ಯವೆನಿಸುತ್ತದೆ. ಅರಕಲಗೂಡು ತಾಲೂಕು, ಮುತ್ತುಗದ ಎಲೆಗಳಿಗೆ ಒಂದು ಕಾಲದಲ್ಲಿ ಬಹಳ ಪ್ರಸಿದ್ದಿ ಪಡೆದಿತ್ತು. ಬೇಸಿಗೆಯ ಮೂರು ತಿಂಗಳುಗಳು, ಸಾವಿರಾರು ಕುಟುಂಬಗಳಿಗೆ ಉದ್ಯೋಗ ಒದಗಿಸುತ್ತಿತ್ತು. ಒಬ್ಬೊಬ್ಬನೂ ಹತ್ತು ವರ್ಷದ ಹಿಂದೆಯೇ, ದಿನಕ್ಕೇ ಮುನ್ನೂರು ರೂಗಳವರೆಗೆ ಸಂಪಾದಿಸುತ್ತಿದ್ದನೆಂದರೇ, ಅಲ್ಲಿದ್ದ ಮುತ್ತುಗದ ಮರಗಳೆಷ್ಟೆಂಬುದು ನಿಮಗೆ ತಿಳಿಯುತ್ತದೆ. ಇದರಿಂದ ಹಲವಾರು ಉಪಯೋಗಗಳಿದ್ದವು, ಒಂದು ಹಲವಾರು ಸಂಸಾರಗಳನ್ನು
ತೂಗುತ್ತಿದ್ದವು, ಪರಿಸರಸ್ನೇಹಿ ವಸ್ತುಗಳಾಗಿದ್ದವು, ಪರಿಸರದಲ್ಲಿನ ಇಂಗಾಲವನ್ನು ಇಂಗಿಸಲು ಸಹಾಯಮಾಡುತ್ತಿದ್ದವು, ಜೊತೆಗೆ ಔಷಧೀಯ ಗುಣಗಳಿದ್ದವು. ಇದನ್ನು ಬಹಿಷ್ಕಾರ ಹಾಕಿದ್ದು ನಮ್ಮ ಸಮಾಜವೋ ಅಥವಾ ಅವುಗಳೇ ನಮ್ಮಿಂದ ದೂರಾದವೋ? ಅದು ತಿಳಿಯದ ಮಾತು. ಯಾವುದೇ, ಒಂದು ವಿಷಯವನ್ನು ಕೇವಲ ಒಂದು ದೃಷ್ಟಿಯಿಂದ ನೋಡಿದರೇ ಏನು ಸಿಗಲಾರದೆಂಬುದನ್ನು ಮನವರಿಕೆ ಮಾಡಿಕೊಳ್ಳುವುದಕ್ಕೆ ಹೇಳಿದೆ.
ಒಂದು ವಸ್ತುವಿನಿಂದ ಹಲವಾರು ಬಗೆಯ ಅನುಕೂಲತೆಗಳನ್ನು ನಮ್ಮ ಹಿಂದಿನವರೂ ಬಳಕೆಗೆ ತಂದಿದ್ದರು, ಅದಕ್ಕೆ ಹೊಸ ಹೆಸರನ್ನು ಇಟ್ಟುಕೊಂಡು ಹುಡುಕಹೊರಟಿರುವವರು ನಾವುಗಳಷ್ಟೇ! ಸಮಗ್ರ ಅಭಿವೃದ್ದಿ, ಐಕ್ಯತೆ, ಇವೆಲ್ಲಾ ನಮ್ಮ ಪೂರ್ವಜರು ಎಂದೋ, ಜೀವನದಲ್ಲಿ ಅಳವಡಿಸಿಕೊಂಡಿದ್ದವುಗಳು. ಉದಾಹರಣೆಗೆ, ಮನೆ ಮದ್ದುವಿನ ವಿಷಯ, ನಾನು ತಿಳಿದಂತೆ ನನ್ನ ಮನೆಯಲ್ಲಿ, ನಾನು ಇಪ್ಪತ್ತು ವರ್ಷದವನಾಗುವ ತನಕವೂ, ತಲೆ ನೋವು, ಕೆಮ್ಮು, ಜ್ವರ, ಶೀತ, ನೆಗಡಿ ಇವುಗಳಿಗೆ, ಅಂಗಡಿಗೆ ಹೋಗಿ ಮದ್ದು ತಂದವರಲ್ಲವೇ ಅಲ್ಲ. ಅಡುಗೆಮನೆಯಲ್ಲಿನ ಸಾಮಗ್ರಿಗಳೇ ಔಷಧಿಗಳಾಗಿ ಪರಿವರ್ತಿಸುತಿದ್ದೇವು. ಅರಿಶಿನ, ಜೀರಿಗೆ, ಮೆಣಸು, ಶುಂಟಿ,ಇಂಗು, ಅಡುಗೆ ಸೋಡಾ,ನಿಂಬೆಕಾಯಿ, ಆದ್ದರಿಂದೂ ಇವೆಲ್ಲಾ ಮನೆಯಲ್ಲಿ ಇಲ್ಲವೇ? ಇದೆ. ಆದರೇ ಉಪಯೋಗಿಸುವ ಮನಸ್ಸಿಲ್ಲ. ಚೂರು ಸೋಡಾ ಮತ್ತು ನಿಂಬೆ ಹಣ್ಣು ಬೆರೆತರೆ ಸಾಕು, ಆದ್ದರಿಂದೂ ನಮ್ಮ ವಿದ್ಯಾವಂತ ಬಳಗಕ್ಕೆ ಇನೋ ತೆಗೆದುಕೊಂಡು ಅದಕ್ಕೆ ಐದು ರೂಪಾಯಿ ದಂಡ ತೆತ್ತರೇನೆ ಸಮಧಾನ. ನಾನು ಉಪೇಕ್ಷೆಗಾಗಿ ಈ ಮಾತನ್ನು ಹೇಳುತ್ತಿಲ್ಲ, ನನ್ನ ತಾತ ನನಗೆ ಹೇಳುತ್ತಿದ್ದ ಮಾತು, ಸರ್ವರೋಗಕ್ಕೂ ಸರಾಯಿ ಮದ್ದು ಅವರ ನಂಬಿಕೆಯಾಗಿತ್ತು. ನಾನು ಅದನ್ನು ಪ್ರಯತ್ನಿಸಿದ್ದೇನೆ, ಆದರೇ ಅಂತಾ ನಂಬಿಕೆ ನನಗೆ ಬಂದಿದೆಯೆನ್ನುವುದು ಸರಿಯಿಲ್ಲ. ಆದರೂ ಇಂದು ನಗರದ ಹಲವಾರು ಮಂದಿ ಮತ್ತೆ ಆಯುರ್ವೇದತ್ತ, ಗಿಡಮೂಲಿಕೆಯತ್ತಾ ಮನಸ್ಸು ಬದಲಾಯಿಸುತ್ತಿದ್ದಾರೆ. ಇದಕ್ಕೊಂದು ನೈಜ ಉದಹಾರಣೆ, ಹಿಮಾಲಯ ಕಂಪನಿಯ ವಸ್ತುಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಲ್ಲಿರುವುದು. ಇದಕ್ಕೇ ಸ್ವದೇಶಿಯೆನ್ನುವುದೊಂದೆ ಮುಖ್ಯ ಕಾರಣವಲ್ಲದೇ, ಗಿಡಮೂಲಿಕೆಯಿಂದ ಬಂದದ್ದು, ಹಾನಿಕರವಲ್ಲವೆಂಬುದು ಮತ್ತೊಂದು ಮುಖ್ಯವೆನಿಸುತ್ತದೆ. ಅದೇನೆ ಇರಲಿ, ಗಿಡಮೂಲಿಕೆಗಳು, ಅರಣ್ಯ ಸಂಪೂರ್ಣ ನಾಶವಾದ ಮೇಲಾದರೂ ನಾವುಗಳು ಅದರ ಬೇಡಿಕೆ ಹೆಚ್ಚಿಸುತ್ತಿರುವುದು ಹೆಮ್ಮೆಯ ಸಂಗತಿ.
ಇಲ್ಲಿ ಯಾರ ತಪ್ಪು ಯಾರು ಸರಿಯೆಂದು ಹೇಳುತ್ತಿಲ್ಲಾ, ಹಳ್ಳಿಗಳಲ್ಲಿಯೂ ಗದ್ದೆಯ ಬದುಗಳು ಬಹಳ ವಿಶಾಲವಾಗಿದ್ದು, ದನಗಳನ್ನು ಹಿಡಿದು ಅದರ ಮೇಲೆ ಮೇಯಿಸುತ್ತಿದ್ದೇವು, ಬದುಗಳಲ್ಲಿದ್ದ ಮರಗಳು ಮಾಯಾವಾದವು. ನೀವು ಹಳ್ಳಿಗಳಲ್ಲಿನ ಬದುಗಳನ್ನು ಕಂಡರೇ ನಡೆಯಲು ಭಯವಾಗುತ್ತದೆ. ಅಂಥಹ ದುರಾಸೆಗೆ ಬಂದಿದ್ದಾರೆ ನಮ್ಮ ರೈತರು. ವರ್ಷ ವರ್ಷಕ್ಕೆ, ಬದುಗಳ ಗಾತ್ರ ಚಿಕ್ಕದಾಗಿಸುತ್ತಾ ಬಂದಿದ್ದಾರೆ. ಕೆಲವರಂತೋ ಎಕರೆಯಷ್ಟೂ ಜಾಗವನ್ನು ಸಮಮಾಡಿದ್ದಾರೆ. ಅವರು ಹೆಚ್ಚಿಸಿರುವ ಜಾಗವನ್ನು ಲೆಕ್ಕಿಸಿ ನೋಡಿದರೇ, ಆ ಜಾಗದಲ್ಲಿ ವರ್ಷಕ್ಕೆ ೨-೩ಕೆ.ಜಿ. ಬತ್ತ ಸಿಗಬಹುದಷ್ಟೇ. ಅದು ಇದ್ದಿದ್ದರೇ ಆಗುತ್ತಿದ್ದ ಅನುಕೂಲತೆಗಳು ಅಷ್ಟಿಷ್ಟಲ್ಲ. ಆದರೂ ಆಸೆಗೆ, ಕನಸಿಗೆ ಕೊನೆಯುಂಟೆ. ಹಾಗೆ ಹೆಚ್ಚಿಸಿದ ಬತ್ತವೂ ಪೋಲಾಗುವ ರೀತಿ ಇನನ್ನೂ ಕುತುಹಲ. ಗದ್ದೆಯಲ್ಲಿ ಬಿದ್ದ ಬತ್ತದ ಹೆಂಕನ್ನು ಅವರು ಆಯುವುದಿಲ್ಲ, ಕೇಳಿದರೇ, ಅಯ್ಯೊ ಅಷ್ಟೂ ಕರುಬುತನ ಒಳ್ಳೆಯದಲ್ಲವೆಂಬ ಉದಾರಿತನದ ಮಾತನ್ನು ಉದುರಿಸುತ್ತಾರೆ. ಅದಕ್ಕೆ ತಮ್ಮ ಸೋಮಾರಿತನ ಕಾರಣವೆಂಬುದನ್ನು ಒಪ್ಪಲು ಸಿದ್ದವಿಲ್ಲ. ಪರಿಸರ ನಾಶಕ್ಕೆ ದುರಾಸೆಯೇ ಕಾರಣವೆಂಬುದು ಸಮಂಜಸವೆನಿಸಿದರೂ, ಆಡಳಿತ ಮಾಡುವ ಸರ್ಕಾರವೂ ಅಷ್ಟೇ ಕಾರಣ. ಬರೀ ಕಾನೂನಿಂದ, ಹೊಸ ಹೊಸ ಕಾಯಿದೆಗಳಿಂದಲೇ ರಾಜ್ಯವಾಳುವುದೆಂದು ನಂಬಿರುವುದೇ ಇದಕ್ಕೆಲ್ಲ ಬಹು ಮುಖ್ಯಕಾರಣ.ಎಲ್ಲಿಂದ ಎಲ್ಲಿಯ ತನಕ ನೋಡಿ, ಇದಕ್ಕೆ ಕಾಯಿದೆಯಿಲ್ಲ ಅದಕ್ಕೆ ಕಾನೂನಿಲ್ಲ, ಕಾನೂನು ಕಾಯಿದೆಗಳು ಮಾಡಿದರೇ ಬಂತೇ ಭಾಗ್ಯ? ಅದನ್ನು ಕಾರ್ಯರೂಪಕ್ಕೆ ತರುವವರು ಯಾರು? ರೈತರ ಮೇಲೆ ಅದನ್ನು ಹೇರಲು ಬಂದೀತೆ. ವೋಟ್ ಗಿಟ್ಟಿಸಬೇಕಲ್ಲ. ಇದನ್ನು ಕಂಡಿಸಿ ಬರೆಯಲು ಪತ್ರಕರ್ತರಿಗೆ ಬಂದೀತೆ, ಅವರ ಉದ್ಯೋಗೆ ಉಳಿಯಬೇಕಲ್ಲ.
ಎಲ್ಲರೂ ಅಷ್ಟೇ ತೋರಿಕೆಗೆ, ಪ್ರದರ್ಶನಕ್ಕೆ, ಮಾಡಬೇಕು, ಇಲ್ಲವೇ ಒತ್ತಾಯಕ್ಕೆ ಮಾಡಬೇಕು.ನಮ್ಮ ಮೇಲಿನ ಅಧಿಕಾರಿ ಹಿಡಿದು ಕೆಲಸ ಮಾಡುವ ತನಕ ನಾವು ಮಾಡುವವರಲ್ಲವೇ ಅಲ್ಲಾ. ಇದು ನಮ್ಮ ಜೀವನದ ಪ್ರಶ್ನೆ, ನಮ್ಮ ದೇಶದ ಪ್ರಶ್ನೆಯೆಂಬುದಿಲ್ಲ್ವವೇ ಇಲ್ಲ. ಯಾವ ಕಛೇರಿಗೆ ಹೋಗಿ ನೋಡಿದರೂ, ಒಳರಾಜಕೀಯ, ಸುಡುಗಾಡು ಜಾತಿ ಪ್ರೇಮ, ಪ್ರಾಂತೀಯ ಅಭಿಮಾನ. ನೀವು ಹಾಸನದವರಾ ಬನ್ನಿ ನಾನು ಹಾಸನದವನು, ನೀವು ಗೌಡರಾ? ನಾನು ಗೌಡ?ಇವೆಲ್ಲಾ ಹಾಳು ಬಿದ್ದು ಹೋಗಲಿ ಕೊನೆಗೆ ನೀವು ಪರಿಸರ ಪ್ರೇಮಿ ನಾ ನಾನು ಪರಿಸರ ಪ್ರೇಮಿ ಎನ್ನುವಷ್ಟಕ್ಕೆ ಬಂತು.ಬಿನ್ನಾಭಿಪ್ರಾಯಗಳು ಎಷ್ಟೇ ಇರಲಿ, ಕಾರ್ಯದಲ್ಲಿ ಐಕ್ಯತೆ ಇರಬೇಕೆಂಬ ಸಾಮಾನ್ಯ ಜ್ನಾನವಿಲ್ಲದೇ ಹೋಯಿತು. ಹೆಚ್ಚು ವಿದ್ಯಾವಂತರಾದಷ್ಟು ದುರ್ಬಲ ವರ್ಗದವರನ್ನು ಸುಳಿಯುತ್ತಾ ಹೊರಟರು.
ಇತ್ತೀಚಿನ ದಿನಗಳಲ್ಲಿ ಸಿಕ್ಕಿಬಿದ್ದ ಅಮಾಯಕ ವಸ್ತುವೇ ಈ ನಮ್ಮ ಪರಿಸರ, ಇಂದು ಸಣ್ಣ ಪುಟ್ಟ ಶಾಲೆಗಳಿಂದಿಡಿದೂ ರಾತ್ರಿ ಕುಡಿದು ಸೇದಿ ಗಬ್ಬೆಬ್ಬಿಸುವ ನನ್ನಂತವನೂ ಪರಿಸರ ಪ್ರೇಮದ ಬಗ್ಗೆ ಭಾಷಣ ಹೊಡೆಯುತ್ತಾನೆ. ಸರ್ವರಿಗೂ ಸಮಪಾಲು ಎಂದು ಹೊಮ್ಮಿದ ಘೋಷ, ಪರಿಸರ ನಾಶಕ್ಕೆ ಸರ್ವರೂ ಸಮಪಾಲು ಎನ್ನುತ್ತಿದೆ. ನಾವು ಮಾಡಿದ ತಪ್ಪಿಗೆ ನಮ್ಮ ಮೇಲೆ ಹೊರೆ ಹೊರಿಸಿದರೂ ಸರಿಯೇ, ಆದರೇ, ತಿಂಗಳಿಗೊಮ್ಮೆ ಒಂದು ಘಂಟೆಯಾದರೂ ದೀಪ ಆರಿಸಿ ಎಂದು ಹೇಳುವ ರೇಡಿಯೋ ಜಾಕಿ, ವಿಡಿಯೋ ಜಾಕಿಗಳನ್ನು ನೆನೆದಾಗ ನಗು ಬರುತ್ತದೆ. ನಮ್ಮೂರಿನಲ್ಲಿ ವಿದ್ಯುತ್ ಇರುವುದೇ ದಿನದಲ್ಲಿ ಆರು ಗಂಟೆಗಳು, ಇವರು ಹೇಳಿದ ಸಮಯಕ್ಕೆ ವಿದ್ಯುತ್ ಇರುವುದೇ ಇಲ್ಲವಾದ್ದರಿಂದ ನಾನು ದೀಪ ಆರಿಸುವುದೆಲ್ಲಿಗೆ? ಜಾಗತಿಕ ತಾಪಮಾನದ ಬಗ್ಗೆ ಹರಟೆ ಹೊಡೆಯುತ್ತಾರೆ. ನೆಟ್ಟಗೆ ಕನ್ನಡ ಉಚ್ಚಾರಣೆ ಮಾಡಲೂ ಬಾರದ ಇವರು ಕನ್ನಡ ಚಾನೆಲ್ ಗಳಲ್ಲಿ ಕೆಲಸ ಹೇಗೆ ದೊರಕಿಸಿಕೊಂಡರೆಂಬುದು ನನ್ನ ಆಶ್ಚರ್ಯ. ಅದಲ್ಲದೇ, ಅದು ಯಾವಾಗ ಹವಾಮಾನ ವೈಪರೀತ್ಯ ಕುರಿತು ಅಧ್ಯಯನ ಮಾಡಿದ್ದರೆಂಬುದು ನನಗೆ ಎಲ್ಲಿಲ್ಲದ ಆಶ್ಚರ್ಯ. ಮಳೆ ತಡವಾದರೂ, ಮಳೆ ಬಂದರೂ ಮಳೆ ಹೋದರೂ, ಹೆಚಾಗಿ ಬಂದರೂ, ಬಿಸಿಲೇರಿದರೂ, ಎಲ್ಲದ್ದಕ್ಕೂ ಹವಮಾನ ವೈಪರೀತ್ಯವೇ ಕಾರಣವೆಂದು ಬೊಬ್ಬೆ ಹೊಡೆದು ನಾಗರೀಕರನ್ನು ದಾರಿತಪ್ಪಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಅಂದರೇ, ವಾತಾವರಣ ಬದಲಾಗಿಲ್ಲವೇ? ನಮ್ಮ ಅಜ್ಜನ ಕಾಲದಿಂದಲೂ ಈ ಮಾತು ನನ್ನ ಕಿವಿಯಲ್ಲಿದೆ, ನಮ್ಮ ಕಾಲದಲ್ಲಿ ಹೀಗಿರಲಿಲ್ಲ. ಹೌದು ಇಪ್ಪತ್ತು, ನಲ್ವತ್ತು, ವರ್ಷಗಳ ಹಿಂದೆ ಹೀಗಿರಲಿಲ್ಲ. ಬದಲಾಗಿದೆ. ಅದು ಆಗಬಾರದೆಂಬುದು ನಿಮ್ಮ ನಿರೀಕ್ಷೆಯೇ? ವಿಜ್ನಾನ, ತಂತ್ರಜ್ನಾನ ಮುಂದುವರೆದಂತೆ ಎಲ್ಲವೂ ಬದಲಾಗುತ್ತದೆ. ರಸ್ತೆಗಳು ಸುಧಾರನೆಗೆ ಬಂದು, ವಾಹನಗಳು ಹೆಚ್ಚಾಗುವುದು ಹೊಗೆ ಉಗುಳುವುದು ಇವೆಲ್ಲವೂ ಹೆಚ್ಚಾಗುತ್ತದೆ. ಪರಿಸರ ಪ್ರೇಮದ ಬಗ್ಗೆ ಕೂಗಾಡುವವರು, ಕಾರನ್ನು ಬಿಟ್ಟು ನಾಳೆ ಬಿ.ಎಂ.ಟಿ.ಸಿಯಲ್ಲಾ ಓಡಾಡಲೂ ಸಿದ್ದರೇ? ವರ್ಷಕ್ಕೆ ಒಮ್ಮೆ ನಮ್ಮ ಅಧಿಕಾರಿ ಷಾಯಿ ವರ್ಗ, ತಮ್ಮ ವಾಹನಗಳಿಗೆ ರಜೆ ನೀಡಿದರೇ ಎಷ್ಟು ಮಾಲಿನ್ಯ ತಡೆಯಬಹುದು. ಗಂಬೀರವಾಗಿ ಗಮನಿಸಿ ನೋಡಿ, ಪರಿಸರದ ಬಗ್ಗೆ ಬೊಬ್ಬೆ ಹೊಡೆಯುವವರ ಮನೆಯಲ್ಲಿಯೇ ನಾಲ್ಕೈದು ಕಾರುಗಳು, ಅದೂ ಹೆಚ್ಚು ಇಂಧನ ಹೀರುವ ಕಾರುಗಳಿರುತ್ತವೆ. ನನ್ನ ಬಳಿಯಲ್ಲಿ ಕಾರಿಲ್ಲವೆಂಬ ಕೊರಗಿನಿಂದ ಈ ಮಾತನ್ನು ಹೇಳುತ್ತಿಲ್ಲ. ಅಥವಾ ಪರಿಸರದ ಮೇಲಿನ ಪ್ರೇಮದಿಂದಾಗಿ ಕಾರು ಕೊಂಡಿಲ್ಲವೆಂದು ಹೇಳುವುದಿಲ್ಲ.
ಸಮಸ್ಯೆಗೆ ಪರ್ಯಾಯ ಮಾರ್ಗವನ್ನು ಹುಡುಕಬೇಕೆ ಹೊರತು, ಜನ ಸಾಮಾನ್ಯರೆಲ್ಲ, ಸಾರ್ವಜನಿಕ ವಾಹನಗಳನ್ನು ಬಳಸಿ ಎಂದು ಹೇಳುವುದಕ್ಕೆ, ಬರೆಯುವುದಕ್ಕೆ, ಪತ್ರಕರ್ತರಿಗಾಗಲೀ, ರೇಡಿಯೋ, ವೀಡಿಯೋ ಜಾಕಿಗಳಿಗಾಗಲಿ, ಏನೂ ಹಕ್ಕಿಲ್ಲ. ಅವರೆಲ್ಲರೂ ತಮ್ಮ ವೈಯಕ್ತಿಕ ವಾಹನಗಳಲ್ಲಿ ಓಡಾಡುವವರೇ ಹೊರತು ಸಾರ್ವಜನಿಕ ವಾಹನಗಳಲ್ಲಿ ಅಲ್ಲಾ.
ಇನ್ನೂ ಮತ್ತೊಂದು ವಿಷಯವೆಂದರೇ ನೀರಿನ ಬಗ್ಗೆ, ಮುಂದಿನ ಯುದ್ದವೆಂಬುದಿದ್ದರೇ ಅದೂ ಆಗುವುದು ನೀರಿಗಾಗಿ. ಈ ಮಾತನ್ನು ಯಾರು ಹೇಳಿದರೋ ಪುಣ್ಯಾತ್ಮ, ನಮ್ಮ ಕಲಾಂ ಸರ್ ಚೆನ್ನಾಗಿ ನಿರೂಪಣೆಯನ್ನು ಮಾಡಿದ್ದಾರೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಏನು? ನೀರನ್ನು ಕೊಯ್ಯಲು ಮಾಡುವುದು. ಒಮ್ಮೆ ನೀವು ನಾವು ಎಲ್ಲರೂ ವೈಜ್ನಾನಿಕವಾಗಿ, ಮತ್ತು ವೈಕ್ತಿಗತವಾಗಿ ಯೋಚಿಸೋಣ. ಮಳೆಕೊಯ್ಯಲು ಮಾಡಲು ಹಲವಾರು ಮಾರ್ಗಗಳಿವೆ, ಸಂಗ್ರಹಿಸುವುದು, ಅಂತರ್ಜಲ ವೃದ್ದಿಯಾಗಿಸುವುದು. ಇವೆಲ್ಲವೂ ಸಾಮಾನ್ಯ ಜನರನ್ನು ಮರುಳುಗೊಳಿಸುವ ತಂತ್ರ. ಭೂಮಿಯ ಒಳಗೆ ನೀರು ಹರಿಯುತ್ತದೆಂಬುದನ್ನು ನೀವು ಒಪ್ಪಲೇಬೇಕು. ಅಂದರೇ, ನನ್ನ ಜಮೀನಿನಲ್ಲಿ ಬಿದ್ದ ನೀರು ಅಡಿಯಲ್ಲಿ ಹರಿಯುತ್ತಲೇ ಇರುತ್ತದೆ. ಅದು ನನ್ನ ಜಮೀನಿನಲ್ಲಿಯೇ ಉಳಿಯುವುದಿಲ್ಲ. ಇದನ್ನು ಅರಿಯದ ನಮ್ಮ ರೈತರಿಗೆ, ನೀವು ನಿಮ್ಮ ಭೂಮಿಯಲ್ಲಿ ಒಂದೊಂದು ಕಡೆಯಲ್ಲಿಯೂ ಮಳೆನೀರನ್ನು ಭೂಮಿಗೆ ಇಂಗಿಸಿರಿ ಎಂದು ಅವರಿಂದ ಹಣ ಸುರಿಸಿದ್ದು ಉಂಟೂ, ಸರ್ಕಾರದಿಂದ ಜಲಾನಯನ ಅಭಿವೃದ್ದಿಯ ಹೆಸರಿನಲ್ಲಿ ಹಣ ಹರಿದು ಹೋದದ್ದು ಇದೆ. ಅದು ಸರಿಯೋ ತಪ್ಪೋ ನಾನಿಲ್ಲ ಹೇಳುತ್ತಿಲ್ಲ. ಹಲವಾರು ಸಂಶೋಧನೆಗಳು ಇದು ಸರಿಯಿಲ್ಲವೆನ್ನುತ್ತಾರೆ ಕೆಲವರು ಇದು ಸರಿಯೆನ್ನುತ್ತಾರೆ. ಅದರ ಬಗ್ಗೆ ನಾನು ಯಾವುದೇ ಅಧ್ಯಯನ ನಡೆಸಿಲ್ಲವಾದ್ದರಿಂದ ಈ ಮಾತು ಬೇಡವೆನಿಸುತ್ತದೆ.