29 ಮಾರ್ಚ್ 2010

ಯಮನ ಮನೆಯ ಮುಂದೆ ಕಳೆದ ಮುಟ್ಠಾಳರ ಮೂರು ರಾತ್ರಿಗಳು!!!!!

ನನ್ನ ಬಾಳಿನಲ್ಲಿ ನಡೆವ ಎಲ್ಲ ಸಂಗತಿಗಳು ತಮಗಳಿಗೆ ಸಂಬಂದಿಸದಿದ್ದರೂ ನಾವೆಲ್ಲರೂ ಒಂದೇ ಕುಲದವರೆನ್ನುವ ಕಾರಣದಿಂದಲಾದರೂ ತಾವು ನನ್ನ ಬರವಣಿಗೆಯನ್ನು ಓದುವ ಕರ್ಮವನ್ನು ಮಾಡಲೇಬೇಕಾದದ್ದು ನಿಮ್ಮ ಹಣೆಗೆ ಬರೆದಿದೆ. ಇಂಥಹದೊಂದು ಸನ್ನಿವೇಶ ನನ್ನ ಬಾಳಲ್ಲಿ ಬರುವುದೆಂದು ನನ್ನ ಕನಸಿನಲ್ಲಿಯೂ ಎಣಿಸಿರಲಿಲ್ಲ, ಮಧ್ಯ ರಾತ್ರಿ ಅದೂ ಹನ್ನೆರಡುವರೆಯ ಸಮಯಕ್ಕೆ ನನ್ನ ಗತ ಇತಿಹಾಸವನ್ನೋ ಅಥವಾ ನನ್ನ ಉಢಾಫೆತನವನ್ನೋ ಕುರಿತು ಬರೆಯುವ ಮಟ್ಟಕ್ಕೆ ನನ್ನ ಜೀವನ ತಲುಪಿದೆ. ಯಮನ ಮನೆಯ ಬಾಗಿಲನ್ನು ತಟ್ಟಿ ಬಂದ ಒಂದು ಸನ್ನಿವೇಶವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಕಳೆದ ವಾರದ ಕೊನೆಯಲ್ಲಿ, ಚಾರಣ ಮಾಡಬೇಕೆಂದು ನಿರ್ಧರಿಸಿ, ಮೂವರು, ಹೊರಟೆವು. ಒಂಬತ್ತು ಗುಡ್ಡಕ್ಕೆ ಹೊರಡುವ ಚಾರಣ ಎಂಥಹ ಚಾರಣಿಗರ ಗುಂಡೆದೆಯನ್ನು ಪರೀಕ್ಷಿಸುವಂತಹದ್ದು. ಚಾರಣ, ಕೊಡಚಾದ್ರಿ ಅಥವಾ ಸಣ್ಣ ಪುಟ್ಟ ಬೆಟ್ಟವನ್ನು ಹತ್ತಿ ಇಳಿಯುವಂತವರಿಗಲ್ಲವೇ ಅಲ್ಲ, ಎನ್.ಸಿ.ಸಿ ಅಥವಾ ಅರಣ್ಯ ಇಲಾಖೆಯವರೊಂದಿಗೆ ಗುರುತಿರುವ ಅಥವಾ ವಾಹನ ಓಡಾಡುವ ದಾರಿಯಲ್ಲಿ ಚಾರಣ ಮಾಡಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಸ್ವಯಂಘೋಷಿತ ಚಾರಣಿಗರಿಗೂ ಅಲ್ಲ. ನಿಜವಾದ, ಪರಿಸರದ ಬಗೆಗೆ, ಆಸಕ್ತಿಯಿರುವವರು ಅನುಭವಿಸಲೇ ಬೇಕಾದ ಚಾರಣಕ್ಕೆ ಹೊರಟು ಕಂಗೆಟ್ಟು ಹೋದ ನಮ್ಮಗಳ ಬಗೆಗೆ ಒಂದು ಬಗೆಯ ಹೆಮ್ಮೆ, ಅದರ ಜೊತೆಗೆ ನಮ್ಮ  ಉಢಾಫೆತನ ಬಗ್ಗೆ ಕೋಪವು ಇದೆ. 
ಶುಕ್ರವಾರ ರಾತ್ರಿ, ಗಂಟೆ ಸುಮಾರಿಗೆ ಮನೆ ಬಿಟ್ಟು ಹೊರಟೆವು.ನಾವು ಬಯಸಿದಂತೆ ರಿಂಗ್ ರೋಡ್ ನಿಂದ ತುಮಕೂರು ರಸ್ತೆಗೆ ಒಂದು ಸುಮೋ ಸಿಕ್ಕಿತು. ಅಲ್ಲಿದ್ದ ಡ್ರೈವರ್ ನೊಡನೆ ಸರಸ ಸಲ್ಲಾಪವಾಡಿ ತುಮಕೂರು ರಸ್ತೆ ತಲುಪಿದೆವು. ಅವನು ಕುಡಿದು ಹಾಗೆ ವಾಹನ ಚಾಲನೆ ಮಾಡಿದನೋ?ಅಥವಾ ನಿದ್ದೆಯ ಮಂಕಿನಲ್ಲಿ ಇದ್ದನೋ ನನಗೆ ತಿಳಿದಿಲ್ಲ. ಕೆಲವು ಡ್ರೈವರ್ ಗಳು ನಮಗೆ ವಾಕರಿಕೆ ತರಿಸುವ ಮಟ್ಟಕ್ಕೆ ಮಾತನಾಡುತ್ತಾರೆ. ಅವರು ಅದನ್ನು ಹೇಗೆ ಭಾವಿಸಿರುತ್ತಾರೆಂಬುದೇ ಅರ್ಥವಾಗುವುದಿಲ್ಲ.ಅವನು ಅವರ ಕಂಪನಿಯಲ್ಲಿ ಕೆಲಸ ಮಾಡುವ ಹುಡುಗಿಯರ ರಾತ್ರಿ ಜೀವನದ ಬಗ್ಗೆ ಅದೆಷ್ಟು ಹಗುರವಾಗಿ ಮಾತನಾಡಿದನೆಂದರೆ ಕುಳಿತ ಮೂವರಿಗೂ ಮುಜುಗರವಾಗತೊಡಗಿತು. ಹಾಸನದ ಬಸ್ ಹತ್ತಿ ಸ್ವಲ್ಪ ಹೊತ್ತು ಕಣ್ಣು ಮುಚ್ಚೋಣವೆಂದರೇ, ಅದೊಂದು ರಸ್ತೆಯೇ ಎಂಬ ಅನುಮಾನವಾಗತೊಡಗಿತು. ನಮ್ಮ ರಾಜ್ಯದ ರಸ್ತೆಗಳು ಎಂದಿಗೂ ಎಂದೆಂದಿಗೂ ಬದಲಾಗುವುದೆ ಇಲ್ಲವೆನಿಸುತ್ತದೆ. ಹಾಸನ ತಲುಪಿ, ಸ್ವಲ್ಪ ಟೀ ಕುಡಿದು ಸಕಲೇಶಪುರಕ್ಕೆ ಹೊರಟೆವು. ಅಲ್ಲಿ ನಮಗೆ ಬೇಕಿದ್ದ, ಅಗತ್ಯ ವಸ್ತುಗಳನ್ನು ತೆಗೆದುಕೊಂಡೆವು. ಕೋಳಿ ಇಲ್ಲದೇ ಬದುಕಲಾರದ ಜೀವವೊಂದು ನಮ್ಮ ತಂಡದಲ್ಲಿದೆ. ಆದ್ದರಿಂದ ಅವನಿಗೆ ಕೋಳಿ ಮತ್ತೊಬ್ಬನಿಗೆ ಹೆಂಡ ಮಗದೊಬ್ಬನಿಗೆ ಸಿಗರೇಟು ಹೀಗೆ ನಾವು ನಮ್ಮ ಹೊಟ್ಟೆ ತುಂಬಾ ತಿಂಡಿ ತಿಂದು ಹೊರಡುವಾಗ ಗಂಟೆ ಆಗಿತ್ತು. ಅಲ್ಲಿಂದ ಗುಂಡ್ಯಕ್ಕೆ 45ಕೀ.ಮೀ ಗಳು ಅದರಿಂದ ಮುಂದೆ 3 ಕೀಮೀ ಬಲಕ್ಕೆ ಕಾಡಿನೊಳಕ್ಕೆ ಹೋಗಬೇಕು. ಒಬ್ಬ ಸಮಸ್ಯೆಯಲ್ಲಿದ್ದಾಗ ಅಥವಾ ಅವಶ್ಯಕತೆ ಬಿದ್ದಾಗ ನಮ್ಮವರು ಅವನನ್ನು ಸುಳಿಗೆ ಮಾಡುತ್ತಾರೆ. ನಮ್ಮ ಕಂಡಕ್ಟರ್, ಆಟೋದವರು, ಪೋಲಿಸರು ಇದರಲ್ಲಿ ಅಗ್ರಗಣ್ಯರು.ನಾವು ಮೂರು ಕಿ.ಮೀ.ಮುಂದಕ್ಕೆ ನಿಲ್ಲಿಸಿಕೊಡಿ ಎಂದದಕ್ಕೆ ನಮ್ಮಿಂದ ನಲ್ವತ್ತು ರೂಪಾಯಿಗಳನ್ನು ಹೆಚ್ಚಿಗೆ ಪಡೆದರುಇದು ಮೊದಲ ಸಲವೇನಲ್ಲ, ಜನಸೇವೆಯನ್ನು ಬಿಟ್ಟಿ ಮಾಡುವುದು ಬೇಡ ಆದರೇ ಅದೊಂದು ಧಂಧೆಯಾಗಿರುವುದು ನೋವುಂಟು ಮಾಡುತ್ತದೆ.

ಬಸ್ಸಿನಿಂದ ಇಳಿದ ತಕ್ಷಣ, ಅಲ್ಲಿದ್ದವರನ್ನು ಒಂಬತ್ತುಗುಡ್ಡಕ್ಕೆ ಇರುವ ಮಾರ್ಗವನ್ನು ಕೇಳಿದೆವು. ಅವರ ತೋರಿದ ದಾರಿಯಲ್ಲಿ ಮುನ್ನೆಡೆದೆವು. ಮೊದಲಲ್ಲಿಯೇ, ಆನೆಗಳು ನದಿಯ ಬಳಿಯಲ್ಲಿರುವ ಶಂಕೆಯನ್ನು ತಿಳಿಸಿದರು. ನಮ್ಮ ಚಾರಣ ಪ್ರಾರಂಭಿಸಿದ ಕೆಲವೇ ಕ್ಷಣದಲ್ಲಿ ನಮಗೆ ನಾವು ಅನುಭವಿಸಬೇಕಾದ ಬಗೆಗೆ ಆತಂಕ ಮೂಡತೊಡಗಿತು. ದಾರಿಯುದ್ದಕ್ಕೂ ಇದ್ದ ಆನೆಯ ಲದ್ದಿಗಳು ಇಂದು ನಿನ್ನೆ ಅದೇ ದಾರಿಯಲ್ಲಿ ನಡೆದಿರುವ ಅನಾಹುತಗಳೆಡೆಗೆ ನಮ್ಮನ್ನು ತಿರುಗಿಸಿತು. ದಾರಿ ಉದ್ದಕ್ಕೂ ಮರಗಳ ದಿಮ್ಮೆಯನ್ನು ಬೀಳಿಸಿ ಹೋಗಿರುವ ಆನೆಗಳು ಸಂತೋಷದಿಂದ ಹೋಗಿರುವಂತೆ ಕಾಣುತ್ತಿರಲಿಲ್ಲ,. ಊರಿನವರು ಬೆನ್ನೆಟ್ಟಿ ಓಡಿಸಿರಬಹುದು ಅಥವಾ ಗಾಬರಿಯಿಂದ ಓಡಾಡಿರಬಹುದು. ನಡೆಯುತ್ತ ನಡೆಯುತ್ತಾ ನಾವು ಕಬ್ಬಿನನಾಳೆ ಕಾಯ್ದಿಟ್ಟ ಅರಣ್ಯಕ್ಕೆ ಬಂದೆವು, ಅದರೊಳಗೆ ನಡೆಯುವಾಗ ಕುಳಿತುಕೊಳ್ಳುವ ಬಯಕೆ ಮೂಡಿದರೂ ಯಾವ ಪ್ರಾಣಿ ಎಂದು ಹೇಗೆ ನಮ್ಮ ಮೇಲೆ ಧಾಳಿ ಮಾಡಬಹುದುದೆಂಬುದರ ಕುರಿತು ನಮ್ಮ ಮನಸ್ಸು ಆಲೋಚಿಸತೊಡಗಿತು. ಆದರೂ ಒಂದು ಸ್ಥಳದಲ್ಲಿ ಕುಳಿತು,ದಣಿವರಸಿಕೊಂಡು ಹೊರಟೆವು. ಹಾಗೆ ಮುಂದೆ ನಡೆಯುತ್ತ ನಡೆಯುತ್ತಾ ದಾರಿಯಲ್ಲಿ ಒಂದು ಸಣ್ಣ ತೊರೆಯನ್ನು ದಾಟಿದೆವು, ಸಣ್ಣಗೆ ಹರಿಯುತಿದ್ದ ತೊರೆಯನ್ನು ಕಂಡು ನನಗೆ ಎಲ್ಲಿಲ್ಲದ ಆಶ್ಚರ್ಯವಾಗತೊಡಗಿತು.ಅಲ್ಲಿಂದ ಮೀನುಗಳು, ಅಲಂಕಾರಿತ ಮೀನುಗಳು ಮತ್ತು ಅವುಗಳ ಗಾತ್ರ ಒಮ್ಮೆಗೆ ಎಂಥವನನ್ನು ಎಲ್ಲಿದ್ದಿಯಾ ಎಂದು ಕೇಳುತ್ತದೆ. ನಾನೆಂದೂ ಕಾಣದ ಮೀನುಗಳು ಮತ್ತು ಅವುಗಳ ಗಾತ್ರ, ನದಿ ಅಥವಾ ಅಲ್ಲಿನ ಪರಿಸರ ಸ್ವಲ್ಪವೂ ಅಲುಗಾಡದೇ ತನ್ನತನವನ್ನು ಉಳಿಸಿಕೊಂಡಿದೆ ಎನ್ನುವುದಕ್ಕೆ ಸಾಕ್ಷಿ. ಅದನ್ನು ನೋಡು ನೋಡುತ್ತಾ ನಮ್ಮ ಪರಿಸರ ವಿಜ್ನಾನಿಗಳ ಕಡೆಗೆ ಒಮ್ಮೆ ಅಸಹ್ಯಕರವೆನಿಸಿತು. ಇಂದಿಗೂ ನಾವು ರಸ್ತೆಯ ಬದಿಯಲ್ಲಿಯೇ ನೋಡಿ ಅಲ್ಲಿರುವುದನ್ನು ಅಧ್ಯಯನ ಮಾಡುವುದನ್ನು ಬಿಟ್ಟು ಇಂಥಹ ದಟ್ಟ ಅರಣ್ಯದೊಳಗೆ ನುಗ್ಗಿದರೇ ನಿಜಕೂ ಏನೆಲ್ಲಾ ಅದ್ಬುತಗಳನ್ನು ಕಾಣಬಹುದು, ಅಲ್ಲಿರುವ ಒಂದೊಂದು ಜೇಡರ ಹುಳುಗಳು ನಿಮ್ಮನ್ನು ಆಕರ್ಷಿಸುತ್ತವೆ, ನೀವೆಂದೂ ಕಾಣದ ಕೇಳಿರದ ಹಕ್ಕಿಯ ಹಾಡುಗಳು ಮೊಳಗುತ್ತವೆ. ಹೊರಜಗತ್ತು ಬಿಸಿಲ ದಗೆಯಲ್ಲಿ ಉರಿಯುತ್ತಿದ್ದರೂ ಅದರೊಳಗೆ ರಾತ್ರಿಯಂತಹ ಕತ್ತಲು ಆವರಿಸಿರುತ್ತದೆ. ಸೂರ್ಯನ ಬೆಳಕು ಬೀಳುವುದು ಬಹಳ ಅಪರೂಪವೆಂದರೂ ಸರಿ. ನೆಲದಲ್ಲಿ ಬಿದ್ದಿರುವ ತರಗಳು ಎಲೆಗಳನ್ನು ಕಂಡರೇ ಗೊತ್ತಾಗುತ್ತದೆ ಯಾವ ನರ ಮಾನವರು ಇಲ್ಲಿ ಅಲೆದಾಡುವುದಿಲ್ಲವೆಂದು. ಕನಿಷ್ಟವೆಂದರೂ ಎರಡು ಇಂಚಷ್ಟು ಎಲೆಗಳು ಹಾಸಿ ಬಿದ್ದಿರುತ್ತವೆ. ಅದರೊಳಗೆ ಹಾವು ಹಲ್ಲಿಗಳು ಹಾವುರಾಣಿಗಳ ಸಂಖ್ಯೆ ಅದ್ಬುತವಾಗಿವೆ. ಅಪ್ಪಿ ತಪ್ಪಿ ನೆಲ ಒದ್ದೆಯಾಗಿದ್ದರೇ ಜಿಗಣೆಗಳಿಗೆ ಬರವಿಲ್ಲ. ಇಷ್ಟು ವರ್ಷ ಕಾಡಿನಲ್ಲಿ ಅಲೆದಾಡುತ್ತಿದ್ದರೂ ಎಂದೂ ನನ್ನ ರಕ್ತ ಕುಡಿಯದ ಜಿಗಣೆ ಕಾಡಿನಲ್ಲಿ ಕುಡಿದು ಬಿಟ್ಟಿತು. ನಮಗೆ ಒಳಗೆ ಹೋದ ಮೇಲೆ ನಾವು ಹಿಡಿದಿರುವ ನಕ್ಷೆಗೂ ನಮ್ಮ ಜಿ.ಪಿ.ಎಸ್ ಗೂ ಸ್ವಲ್ಪ ಏರು ಪೇರಾಗದೊಡಗಿತು. ಅದನ್ನು ಕುರಿತು ಚರ್ಚಿಸಿ ಊಟ ಮಾಡಿ ಹೊರಟೆವು. ನಡೆದು ಹೋಗುತ್ತಿರುವಾಗ ಸಮಯ ಐದಾಯಿತು. ಇಲ್ಲೇ ಮಲಗಿ ನಾಳೆ ಬೆಳ್ಳಿಗೆ ಮುಂದುವರೆಯುವುದೆಂದು ತೀರ್ಮಾನಿಸಿದೆವು. ರಾತ್ರಿ ಆದಮೇಲೆ ನಮಗೆ ತಿಳಿದಿದ್ದು ನಾವು ಮಲಗಿದ್ದು ಯಮನ ಮನೆಯ ಬಾಗಿಲಲ್ಲಿ, ಯಮ ಯಾವ ಹೊತ್ತಿನಲ್ಲಿ ಬೇಕಿದ್ದರೂ ನಮ್ಮನ್ನು ಒಳಕ್ಕೆ ಎಳೆದು ಬಂಧಿಸಬಿಡಬಹುದಿತ್ತು
ನಮ್ಮ ಲಗೇಜುಗಳನ್ನು ಕೆಳಗಿರಿಸಿ ರಾತ್ರಿಯಿಡಿಗೆ ಬೇಕಾಗಿರುವಷ್ಟು ಸೌದೆ ಗುಡ್ಡೆ ಹಾಕಿದೆವು. ನದಿಯ ದಂಡೆಯಲ್ಲಿ ಉದ್ದಕ್ಕೂ ಮರಗಳು ಉರುಳಿದ್ದವು. ತರಗಳು ಬಿದ್ದು ಒಣಗಿದ್ದರಿಂದ ಒಂದು ಬೆಂಕಿ ಕಡ್ಡಿ ನಮ್ಮನ್ನು ಸಮೇತ ಬೂದಿಯಾಗಿಸಬಿಡುತ್ತಿತ್ತು. ಸೌದೆಯನ್ನು ಗುಡ್ಡೆ ಹಾಕಿದ ಮೇಲೆ ಸ್ನಾನ ಮಾಡುವುದೆಂದು ತೀರ್ಮಾನಿಸಿದೆವು, ನಮಗೆ ಅಲ್ಲಿನ ನೀರಿಗೆ ಇಳಿಯಲು ಅವಕಾಶವಾಗಲಿಲ್ಲ, ದೂರದಿಂದೆಲ್ಲೋ ಆನೆ ಘೀಳಿಡುವುದು ಕೇಳುತ್ತಿತ್ತು, ಮತ್ತ್ಯಾವುದೋ ಪ್ರಾಣಿ ಹತ್ತಿರವೇ ನಮ್ಮೆಡೆಗೆ ಬರುವ ಸದ್ದು ಕೇಳಿಸುತ್ತಿತ್ತು, ಸುತ್ತಾ ದಿಕ್ಕಿಗೂ ನೋಡುವುದು ಗಾಬರಿ ಆಶ್ಚರ್ಯ ಭಯ ಹೀಗೆ ನಮಗೆ ಸಂತೊಷವೆನ್ನುವ ಒಂದು ಭಾವನೆಯನ್ನು ಬಿಟ್ಟು ಮಿಕ್ಕೆಲ್ಲಾ ಭಾವನೆಗಳು ಸರಾಗವಾಗಿ ಬರುತ್ತಿದ್ದೇವು. ಮಾತನಾಡುತ್ತ ಅಡುಗೆಯನ್ನು ಮಾಡಿ ಮುಗಿಸಿದೆವು. ಊಟ ಮಾಡಿದರೂ ನಮ್ಮ ಗಡಿಯಾರ ಮಾತ್ರ ಹಿಂದಕ್ಕೆ ಓಡುತ್ತಿತ್ತು, ಸಮಯ ಓಡುವುದಿರಲಿ ನಡೆಯುವುದಕ್ಕೂ ಹಿಂಜರಿಯತೊಡಗಿತ್ತು, ಪ್ರತಿ ಐದತ್ತು ನಿಮಿಷಕ್ಕೊಮ್ಮೆ ನಾನು ಗಡಿಯಾರವನ್ನು ನೋಡತೊಡಗಿದೆ. ಆಗಿದ್ದಾಗಲೀ ಮಲಗಿ ಬಿಡೋಣವೆಂದು ಹೇಳಿದ ನಾನು ರಾತ್ರಿಯಿಡಿ ಒಂದೇ ಒಂದು ಕ್ಷಣಕ್ಕೂ ಕಣ್ಣು ಮುಚ್ಚಲಿಲ್ಲ, ನನ್ನ ಜೀವನದಲ್ಲಿ ನಾನು ಭಯವೆಂಬುದರ ಪರ್ಯಾಯ ಪದ ಹುಡುಕಿದ್ದರೇ ಅಥವಾ ಅನುಭವಿಸಿದ್ದರೇ ಅದು ರಾತ್ರಿ ಮಾತ್ರ.

ಸುತ್ತನ ಕಗ್ಗತ್ತಲುನೂರಾರು ಅಡಿ ಬೆಳೆದು ನಿಂತಿರುವ ಮರಗಳು, ಹಾವುಗಳು, ಪ್ರಾಣಿಗಳು ಅಡ್ಡಾಡಿರುವ ಹೆಜ್ಜೆ ಗುರುತುಗಳು. ನೀರು ಕುಡಿಯಲು ಒಂದಲ್ಲ ಒಂದು ಪ್ರಾಣಿ ಇಲ್ಲಿಗೆ ಬರಲೇ ಬೇಕು. ನಮ್ಮ ಬೆಂಕಿಗೆ ಭಯ ಬಿದ್ದು ಈಗ ಹೋದರೂ, ನಾಳೆ ಬೆಳ್ಳಿಗ್ಗೆ ಹಗಲಲ್ಲಿ ಹೊಂಚುಹಾಕಿ ನಮ್ಮ ಮೇಲೆ ಎರಗುವ ಸಾಧ್ಯತೆಗಳು ಇವೆಇರುವ ಮೂರು ಮಂದಿ  ದೂರದ ನಾಡಿನಿಂದ ಅವರ ಸಾಮ್ರಾಜ್ಯಕ್ಕೆ ಹೋಗಿ ಅವರನ್ನು ಎದುರಿಸುವುದು!!! ಊಟ ಮುಗಿಸಿ ಮಲಗಿ ಸ್ವಲ್ಪ ಸಮಯವಾಗಿರಬಹುದು, ಅದೆಲ್ಲಿಂದಲೋ ಶಬ್ದ ಬರುತ್ತಿದೆ, ನಾವು ಮೂವರು ಎಚ್ಚರವಾದೆವು, ಗಮನವಿಟ್ಟು ಆಲಿಸತೊಡಗಿದೆವು, ನಂತರ ನೀರಿನಲ್ಲಿ ಸ್ವಲ್ಪ ಶಬ್ದ. ಗಾಢ ನಿಶಬ್ಧ. ನಿಶಬ್ದತೆ ನಮ್ಮನ್ನು ಕೊಲ್ಲುವಷ್ಟು ಮತ್ತೊಂದು ಕೊಲ್ಲುವುದಿಲ್ಲ, ಒಂಟಿತನ ಅಥವಾ ನಿಶಬ್ದತೆಯನ್ನು ಬಯಸುವ ಯಾವೊಬ್ಬನಿಗೂ ನಾನು ಹೇಳುವುದು ಒಂದು ರಾತ್ರಿ ಒಂದೇ ರಾತ್ರಿ ಅಲ್ಲಿ ಕಳೆದು ಬನ್ನಿ, ಪದವನ್ನು ನಿಮ್ಮ ಜೀವನದಿಂದಲೇ ತೆಗೆದುಹಾಕುತ್ತಿರಿ. ಕಣ್ಣು ಮುಚ್ಚಿದರೂ ನಿದ್ದೆ ಬರುವುದಿಲ್ಲ, ಕುಳಿತರೂ ನೀರು ಹರಿಯುವ ಶಬ್ದವೂ ನಮಗೆ ಭಯ ಮೂಡಿಸುತ್ತದೆ. ಬೆಳಕಿಗೆ ಇರುವ ಧೈರ್ಯ, ಸಕರಾತ್ಮಕತೆ ಕತ್ತಲಿಗೆ ಬರುವುದಿಲ್ಲ, ಕತ್ತಲೆಂಬುದೊಂದು ಶತ್ರು ಅದು ನಿಮ್ಮೊಳಗಿರುವ ಅಧೈರ್ಯವನ್ನು ಮಾತ್ರ ಹೊರಕ್ಕೆ ತರುತ್ತದೆ
ಅದರ ಮಧ್ಯೆದಲ್ಲಿ ನಮ್ಮ ತಂಡದ ಅಧಿನಾಯಕ ಬೇರೆ, ಹುಚ್ಚು ಕಲ್ಪನೆಯನ್ನು ಮಾಡುತ್ತಿದ್ದ. ಮೇಲಿಂದ ಒಂದು ಶವ ಬೀಳಲಿ, ಅದರ ತಲೆ ಒಡೆದು ಚೂರಾಗಿ ಅದರ ಮೆದುಳು ಹೊರಕ್ಕೆ ಚೆಲ್ಲಿದರೇ? ನಾಗವಳ್ಳಿ ಬಂದು ನೃತ್ಯ ಮಾಡಿದರೇ? ಅವಳ ಆತ್ಮ ನಮ್ಮೊಳಗೆ ಸೇರಿದರೇ ಹೀಗೆ ಅವನ ಹುಚ್ಚಾಟಕ್ಕೆ ಕೊನೆ ಮೊದಲಿರಲಿಲ್ಲ. ರಾತ್ರಿ ನಾನು ಸರಿಯಾಗಿ ತಿನ್ನದೆ ಮಲಗಿದ್ದೆ. ಅದರಿಂದ ಬೆಳ್ಳಿಗ್ಗೆ ಸ್ವಲ್ಪ ಸುಸ್ತಾಗತೊಡಗಿತ್ತು.ನಿದ್ದೆ ಇಲ್ಲದೇ ಕಳೆದ ರಾತ್ರಿಯಿಂದಾಗಿ ನನ್ನ ಆರೋಗ್ಯ ಕೈ ಕೊಡುತ್ತದೆಂದು ಭಾವಿಸಿದ್ದೆ. ಆದರೂ ಏನೂ ಆಗದೇ ಬೆಳ್ಳಿಗ್ಗೆ ಎದ್ದವರು ನಮ್ಮ ಪಯಣವನ್ನು ಮುಂದುವರೆಸಿದೆವು
ಎರಡು ಗಂಟೆಗಳು ನಡೆದು ಒಂದು ಸ್ಥಳದಲ್ಲಿ ಟೀ ಕುಡಿದು ಮುನ್ನೆಡೆದೆವು. ಅದು ಯಾವ ದುರ್ವಿಧಿ ಅಡಗಿತ್ತೊ ಏನೋ? ನಾವು ಮೇಲೆ ನದಿ ದಂಡೆಯಲ್ಲಿಯೆ ನಡೆದು ಬರುವಾಗ ನೀರು ಶುಭ್ರವಾಗಿ ನಮ್ಮನ್ನು ಆಕರ್ಷಿಸಿದ್ದರಿಂದ ಸ್ನಾನ ಮಾಡಲು ನಿರ್ಧರಿಸಿದೆವು. ಅಲ್ಲಿಯೆ ಸುಮಾರು ೩ಗಂಟೆಯಷ್ಟು ಕಾಲ ಕಳೆದೆವು.ಊಟ ಮಾಡಿ ಹೊರಟ ಮೇಲೆ ನಮಗೆ ಅರಿವಾಗಿದ್ದು ನಾವು ಇನ್ನು ಮುಂದಕ್ಕೆ ಬೆಟ್ಟವನ್ನು ಅತಿವೇಗದಿಂದ ಏರಬೇಕು ಮತ್ತು ಬೆಟ್ಟ ಬಹಳ ಕಡಿದಾಗಿದೆ.ಹೊಟ್ಟೆ ತುಂಬಾ ತಿಂದಿದ್ದರಿಂದ, ನಾವು ಏರಲು ಆಗದಷ್ಟು ಸೋಮಾರಿಗಳಾಗಿದ್ದೇವು. ನಮಗೆ ನಾವು ಅದೆಷ್ಟೂ ದೂರ ನಡೆಯಬೇಕೆಂಬುದರ ಅರಿವು ಇರಲಿಲ್ಲ. ಏರುತ್ತಿರುವಾಗ ಒಂದು ಜಲಪಾತ ಸಿಗುತ್ತದೆ, ಅದನ್ನು ಏರಿ ಮುಂದುವರೆಯಬೇಕು. ಹಾಗೆಯೇ ನಡೆದು ನಡೆದು ಬರುವಾಗ ಇನ್ನೇನು ಮುಗಿದು ಹೋಯಿತೆಂದು ಇನ್ನು ಮುಗಿಯುತ್ತಲೇ ಇರಲಿಲ್ಲ, ಹನುಮಂತನ ಬಾಲದಂತೆ ನಡೆದು ನಡೆದು ಸುಸ್ತಾದೆವು. ಒಂದು ಸ್ಥಳದಲ್ಲಿ ಕುಳಿತು ನಮ್ಮ ಟೋಪೋ ಶೀಟ್ ನೋಡಿದ ಮೇಲೆ ನಮಗೆ ದಿಗ್ಭಮೆಯಾಯಿತು. ನಾವು ಬಂದಿರುವುದು ಅರ್ಧದಷ್ಟು ಮಾತ್ರ. ಇನ್ನು ನಡೆಯಬೇಕು, ಅದು ಅಲ್ಲದೇ ನಾವಿದ್ದ ತಾಣ ನಮಗೆ ನೆಮ್ಮದಿಯಿಂದ ಮಲಗಲು ಬಿಡುವಂತೆ ಕಾಣಲಿಲ್ಲ. ಇದೆಂಥಹ ಹುಚ್ಚಾಟವೆನಿಸಿತು, ಬದುಕಿನ ಜೊತೆಗೆ, ಜೀವದ ಜೊತೆಗೆ ನಾವು ಆಟವಾಡಲು ಹೊರಟಿರುವುದು, ಹಿಂದಕ್ಕೆ ಬರುವುದಕ್ಕೂ ಆಗುವುದಿಲ್ಲ ಮುನ್ನೆಡೆಯುವದಕ್ಕೆ ತ್ರಾಣವಿಲ್ಲ. ಅಯ್ಯೋ ಭಗವಂತನೇ ಸತ್ತರೇ ನಮ್ಮ ಶವವನ್ನು ಪತ್ತೆ ಹಚ್ಚುತಾರೆಂಬ ಭರವಸೆ ನಮಗಿರಲಿಲ್ಲ. ಬೇಗ ಬೇಗ ನಡೆದು ಸಾಗಬೇಕೆಂದು ನಿರ್ಧರಿಸಿ ಮುಂದುವರೆದೆವು. ಎಷ್ಟು ನಡೆದರೂ ದಾರಿ ಸಾಗುತ್ತಲೇ ಇಲ್ಲ, ಆಚೆ ಈಚೇ ಎಲ್ಲಿಯ್ಯೂ ಹೋಗಲಾಗುದಿಲ್ಲ ಮರದ ಎಲೆಗಳು ಉದುರಿ ಒಣಗಿ ನಿಂತಿವೆ, ಕಾಡೊಳಗೆ ಉದ್ದಕ್ಕೂ ದೊಡ್ಡ ದೊಡ್ಡ ಕಲ್ಲು ಬಂಡೇಗಳು, ಹಾವುಗಳು, ಅದರಲ್ಲಿಯೂ ಹೆಬ್ಬಾವು ಇರಲೇ ಬೇಕಾದ ಸ್ಥಳ, ಮೈ ಎಲ್ಲಾ ಬೆವರು, ಒಂದೆಡೆಗೆ ಭಯ ಮತ್ತೊಂದೆಡೆಗೆ ಆತಂಕ ಹೀಗೆ ಹತ್ತು ಹಲವು ಭಾವನೆಗಳು ನಮ್ಮ ಧೈರ್ಯವನ್ನು ಅಡಗಿಸತೊಡಗಿದೆವು. ಕಟ್ಟ ಕಡೆಗೆ ನಾವು ನಡೆಯುತ್ತಿದ್ದ ತೊರೆಯು ಬತ್ತಿ ಹೋಗತೊಡಗಿತ್ತು. ಇರುವ ನಮ್ಮ ನೀರಿನ ಬಾಟಲಿಗೆ ನೀರು ತುಂಬಿಸಿಕೊಂಡು ಹೊರಟೆವು, ಅದೆಂಥಹ ಕಾಡು ಅಬ್ಬಾ ಕನಿಷ್ಟ ೭೫ ಕೋನದಲ್ಲಿ ಹತ್ತಬೇಕು, ಜಾರುತ್ತದೆ, ಎಲೆಗಳು, ಮಣ್ಣು ನಮ್ಮನ್ನು ಅದೆಷ್ಟೋ ಬಾರಿ ಕೆಳಕ್ಕೆ ಜಾರಿಸಿ ಬಿಟ್ಟೆವು. ಪದೇ ಪದೆ ಜಾರುವುದು ಮರ ಗಿಡಗಳನ್ನು ಹಿಡಿದು ಮತ್ತೆ ಮತ್ತೆ ಹತ್ತುವುದು, ಹೀಗೆ ಮಾಡಿ ಮಾಡಿ ಸುಸ್ತಾಗಿ ಹೋದೆವು. ನೀರಿಲ್ಲದೇ ಸೊರಗತೊಡಗಿದೆವು.ಅಂತೂ ಇಂತೂ ಮೇಲಕ್ಕೆ ಏರಿದಾಗ ಹುಲ್ಲುಗಾವಲು ಸ್ವಲ್ಪ ಸಿಕ್ಕಿತು, ಅಲ್ಲಿಯೇ ಮಲಗಿ ಬೆಳ್ಳಿಗ್ಗೆ ಎದ್ದು ಹೋಗುವುದೆಂದು ಮಲಗಿದೆವು, ಅಂತೂ ಇಂತೂ ಕಾಲುಗಳು ನಮ್ಮ ಮಾತನ್ನು ಕೇಳುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ ಮೇಲೆ, ಅಲ್ಲೆ ಬಲಕ್ಕೆ ತಿರುಗಿ ನೋಡುವಾಗ ಎತ್ತರದ ಪ್ರದೇಶದಲ್ಲಿ ಸ್ವಲ್ಪ ಹುಲ್ಲುಗಾವಲು ಕಂಡಿತು. ಅದು ದಟ್ಟ ಕಾಡು ಮುಗಿದು ಹುಲ್ಲುಗಾವಲು ಪ್ರಾರಂಭವೆಂದು ಸೂಚಿಸುವ ಸಂಕೇತ. ಆದರೂ ಹುಲ್ಲುಗಾವಲಿನಲ್ಲಿ ತಂಗುವುದು ಅಷ್ಟೂ ಕ್ಷೇಮಕರವಾಗಿರಲಿಲ್ಲ, ಇದು ಸಂಪೂರ್ಣ ಹುಲ್ಲುಗಾವಲಾಗದೇ ಪಕ್ಕದಲ್ಲಿಯೇ ದಟ್ಟ ಅರಣ್ಯವಿದ್ದುದರಿಂದ ಪ್ರಾಣಿಗಳು ನುಗ್ಗುವ ಭೀತಿಯಿತ್ತು. ನಾವು ಸತ್ತ ಮೇಲೆ ಉಳಿಯುವುದೇನು ಎನ್ನುವಂತಿದ್ದರಿಂದ, ಇಲ್ಲೇ ಮಲಗುವುದೆಂದು ತೀರ್ಮಾನಿಸಿದೆವು. ಮಲಗಲು ನೋಡುವಾಗ ನನೆತ್ತರಕ್ಕೆ ಬೆಳೆದ ಹುಲ್ಲುಗಳು ಮೈ ಕೈಗಳನ್ನು ಕೋಯ್ಯತೊಡಗಿದ್ದವು. ಮಲಗಲು ಕೆಳಗೆ ನೋಡಿದರೇ ದಪ್ಪ ದಪ್ಪನೆಯ ಕಲ್ಲುಗಳು ಇದ್ದವು. ಇದೆಂಥಹ ಗೋಳೆಂದು ನೆನೆಯುವಾಗ ಇದರಲ್ಲಿಯೇ ಮಲಗಿ ನಿದ್ರಿಸುವುದೆಂದು ಮಲಗಿದೆವು. ತಿನ್ನಲ್ಲು ಬೇಯಿಸುವುದಕ್ಕೆ ಸಾಧ್ಯವಾಗಲಿಲ್ಲ. ಹುಲ್ಲು ಬಹಳ ಒಣಗಿದ್ದರಿಂದ ಒಂದು ಬೆಂಕಿ ಕಡ್ಡಿ ಸೋಕಿದರೂ ಇಡೀ ಅರಣ್ಯವೇ ಆಹುತಿಯಾಗುತ್ತಿತ್ತು. ಇದೆಂಥಹ ವಿಪರ್ಯಾಸ, ಬೆಂಕಿ ಹೆಚ್ಚಿ ಪ್ರಾಣಿಗಳಿಂದ ತಪ್ಪಿಸಿಕೊಳ್ಳಲೂ ಆಗದ ಸ್ಥಿತಿಗೆ ಬಂದು ತಲುಪಿದೆವು. ಪ್ರಾಣಿಗಳು ಬಂದಿದ್ದರೂ ಓಡಿ ತಪ್ಪಿಸಿಕೊಳ್ಳುವುದಿರಲಿ, ನಿಂತು ಎದುರಿಸುವ ಚೈತನ್ಯವೂ ಇರಲಿಲ್ಲ. ಇವೆಲ್ಲದರ ನಡುವೆ ಪದೇ ಪದೇ ದೇವರನ್ನು ನೆನೆದು ಅವನ ಹೆಗಲಿಗೆ ಭಾರ ಹಾಕತೊಡಗಿದೆವು. ನನಗೆ ಬಹಳ ಬಾರಿ ಎನಿಸುವುದು ಇದೇ, ಕಷ್ಟದಲ್ಲಿ ದೇವರು ನೆನಪಾಗುವಷ್ಟು ಸುಖದಲ್ಲಿ ನೆನಪಾಗುವುದಿಲ್ಲ. ಅಸಹ್ಯವೆನಿಸುತ್ತದೆ, ಮಾನವನ ಸಂಕುಚಿತ ಬುದ್ದಿಯನ್ನು ನೆನೆದರೆ.

ಮಲಗಿ ಸ್ವಲ್ಪ ಹೊತ್ತಿಗೆ ನಿದ್ದೆ ಹತ್ತಿತು, ಮೈ ಕೈಗಳಿಗೆ ಅಲ್ಲಿದ್ದ ಉಣ್ಣೆ, ಹುಳು ಹುಪ್ಪಡಿಗಳು ಮುತ್ತಿಕ್ಕತೊಡಗಿದವು, ಕಣ್ಣು ನನಗೆ ಸಂಬಂದವೇ ಇಲ್ಲದಂತೆ ಮಲಗಲೆತ್ನಿಸಿತು. ನಾನು ಮೈ ಎಲ್ಲಾ ಪರಚಾಡತೊಡಗಿದೆ. ನನ್ನಿಬ್ಬರೂ ಗೆಳೆಯರ ನಿದ್ದೆಗೆ ಸ್ವಲ್ಪವೂ ದಕ್ಕೆಯಾಗಲಿಲ್ಲ.ಆದರೂ ಸುಮಾರು ೩ಗಂಟೆಯ ವೇಳೆಗೆ ಹಿಂದೆಂದೂ ಕೇಳದಂಥವ ವಿಕಾರ ಶಬ್ದ ಕೇಳತೊಡಗಿತು. ನಾನು ಆಲಿಸಿದ ನಂತರ ವಿಜಿಗೆ ನಂತರ ನಂದನಿಗೆ ಹೇಳಿದೆ. ಶಬ್ದ ಮಾಡುವಂತಿರಲಿಲ್ಲ, ದೂರದಲ್ಲಿ ಅದೂ ನಡು ರಾತ್ರಿಯಲ್ಲಿ ಕೂಗಲು ಹಕ್ಕಿಗೆ ಏನು ಬಂತಪ್ಪ ಎಂದು ಬೈಯ್ದು ಮಲಗಲೆತ್ನಿಸಿದೆವು. ಕೆಲವೇ ಕ್ಷಣಗಳಲ್ಲಿ ನಮ್ಮ ಸುತ್ತಾ ಯಾರೋ ಓಡಾಡಿದ ಶಬ್ದ, ಅಯ್ಯೋ ದೇವರೇ ಒಮ್ಮೆಗೆ ಸತ್ತರೂ ಬೇಸರವಾಗುವುದಿಲ್ಲ ಏಕಾಂಗಿತನ, ನಿಶಬ್ದತೆ, ಕಗ್ಗತ್ತಲು ಪ್ರಾಣ ಹಿಂಡುತ್ತದೆ. ನಾನು ನನ್ನೊಳಗೆ ಇಲ್ಲಸಲ್ಲದ ಕಲ್ಪನಾ ಲೋಕವನ್ನು ಸೃಷ್ಟಿಸತೊಡಗಿದೆ. ಸಾವೆಂಬುದು ನಿಜಕ್ಕೂ ಅದ್ಬುತ ಅನುಭವ, ಜೀವನದಲ್ಲಿ ಯಾವುದನ್ನು ಬೇಕಾದರೂ ಮತ್ತೆ ಮತ್ತೆ ಅನುಭವಿಸಬಹುದು.ನಿರೀಕ್ಷೆಯೆಂಬುದು ಹೃದಯದ ಮೇಲಿನ ಗಾಯದಂತೆ, ಸದಾ ನೋವನ್ನು ನೀಡುತ್ತಿರುತ್ತದೆ. ಸಾವು ಎನ್ನುವುದು ಮನುಷ್ಯನ ಅತಿಯಾದ ಆಸೆಯ ಬಯಕೆಯನ್ನು ತೀರಿಸುವ ಒಂದು ಮಾರ್ಗ. ಯಾವ ಸುಖವನ್ನು ಅಥವಾ ದುಃಖವನ್ನೂ ನಾವು ಪದೇ ಪದೇ ಅನುಭವಿಸಬಹುದು, ಆದರೇ ಜೀವನದಲ್ಲಿ ಒಂದೇ ಒಂದು ಬಾರಿ ಅನುಭವಿಸುವ ವಸ್ತುವೆಂದರೇ ಅದೇ ನಮ್ಮ ಸಾವು.ಅಂತಹ ಸಾವನ್ನು ಸಂತೋಷದಿಂದ ಬಯಸಿ ಪಡೆದರೇ ಇರುವ ಆನಂದ ಮತ್ತೊಂದಿಲ್ಲ.ಅಂತಹ ಒಂದು ಸಿದ್ದತೆಯನ್ನು ನಾನು ಈಗ ಮಾಡುತ್ತಿದ್ದೇನೆ. ಯಾವ ಹಂಗೂ ಇಲ್ಲದೇ ನನ್ನ ಸಾವನ್ನು ನಾನು ಕಾಣಬೇಕೆಂದು, ನಿರ್ಧರಿಸಿದ್ದೇನೆ.ನನ್ನ ನಿರ್ಧಾರ ನನ್ನ ಜೀವನದ ಮೇಲಿನ ಜಿಗುಪ್ಸೆಯಿಂದಾಗಲೀ, ಅಥವಾ ನೋವಿನಿಂದಾಗಲಿ, ಮತ್ತೊಂದರಿಂದಾಗಲೀ ಅಲ್ಲವೇ ಅಲ್ಲ.ಇದು ನನ್ನ ಆತ್ಮಹತ್ಯೆಯೂ ಅಲ್ಲ, ಆತ್ಮ ಸಾಯುವುದಿಲ್ಲ, ಸಾವನ್ನು ಒಮ್ಮೆ ಪರೀಕ್ಷಿಸಬೇಕೆಂಬ ಒಂದು ಸಣ್ಣ ಬಯಕೆ. ನಿರ್ಧಾರಕ್ಕೆ ಬರುವುದಕ್ಕೆ ಬಹಳಷ್ಟು ಕಾರಣಗಳಿರಬಹುದು, ಆದರೇ ನನ್ನ ಸಾಯುವ ಬಯಕೆಗೆ, ಯಾವ ವ್ಯಕ್ತಿಯಾಗಲಿ,ಅಥವಾ ಸನ್ನಿವೇಶವಾಗಲಿ, ಕಾರಣವಲ್ಲ.ಹೀಗೆ ನನ್ನ ಮನಸ್ಸು ಸಾವಿನ ಬಗೆಗೆ ಚಿಂತಿಸುತ್ತಿರುವಾಗಲೇ ಕಣ್ಣೂ ಮುಚ್ಚಿದೆ.

ಕಣ್ಣು ಬಿಟ್ಟಾಗ ಗಂಟೆ ಏಳಾಗಿತ್ತು. ದೂರ ದೂರಕ್ಕೆ ಬರೀ ಬೆಟ್ಟಗಳ ಸಾಲು, ಮಂಜಿನಿಂದ ಆವರಿಸಿದೆ.ಮೋಡ ಮರೆಯಾಗುವ ಮುನ್ನ ಹೋಗೋಣವೆನ್ನುವುದು ನನ್ನ ಬಯಕೆ, ನನ್ನ ಮಿತ್ರರು ಅನುಭವಿಸೋಣ ಆನಂದಿಸೋಣ, ಫೋಟೋ ತೆಗೆಯೋಣವೆಂದು ತಡ ಮಾಡಿದರು.ಅಂತೂ ಇಂತೂ ಇಲ್ಲಿಂದ ಹೊರಡುವಾಗ ಎಂಟು ದಾಟಿತ್ತು.ಹೊರಟ ಕೆಲವೇ ಕ್ಷಣದಲ್ಲಿ ನಮಗೆ ಸೂರ್ಯನ ಮುಖ ಬಯಲಾಗತೊಡಗಿತ್ತು, ಅದೆಂಥಹ ಬಿಸಿಲು ಅದು ಬಿಸಿಲಲ್ಲ ಧಗೆ, ಧರೆಯನ್ನು ಸುಡಲು ಹೊರಟವನಂತೆ ಕಾಣತೊಡಗಿದ. ಮೋದಲೇ ನೀರಿಲ್ಲದೇ ಸಾಯುತ್ತಿದ್ದ ನಮಗೆ ಸೂರ್ಯ ಮಹಾ ವೈರಿಯಾಗತೊಡಗಿದ..ನೋಡ ನೋಡುತ್ತಲೇ ಸೂರ್ಯನ ಝಳ ಏರತೊಡಗಿತು. ಎಲ್ಲಿಂದ ಎಲ್ಲಿ ತನಕವೂ ಗುಡ್ಡಗಳೇ, ಮೇಲೇರಿ ಹುಲುಗಾವಲಿಗೆ ಬಂದೆವು. ಮರದ ನೆರಳಿಲ್ಲ, ಸಿಕ್ಕ ಮರದಡಿ ನುಗ್ಗಿದರೇ ಗಾಳಿ ಎಂಬುದು ರಜೆ ಹಾಕಿದೆ, ಸ್ವಲ್ಪವೂ ಗಾಳಿ ಆಡುತ್ತಿಲ್ಲ. ಸಮಯ ಕೆಟ್ಟಾಗ ಎಲ್ಲವೂ ಮುಳ್ಳಾಗುತ್ತದೆಂಬುದಕ್ಕೆ ದಿನವೇ ಸಾಕ್ಷಿ. ನೀರಿಲ್ಲ, ಸುಡುವ ಬಿಸಿಲು, ಗಾಳಿ ಇಲ್ಲ, ತಣ್ಣನೆಯ ಗಾಳಿ ಇರಲಿ, ಬರಿ ಗಾಳಿಯೂ ಇಲ್ಲದ ಒಂದು ಕಾಡು ನಮಗೆ ಆಶ್ಚರ್ಯವಾಯಿತು. ಬೇಕೆಂದು ಯಾರೋ ನಮ್ಮ ಮೇಲೆ ಸೇಡು ತೀರಿಸಿಕೊಳ್ಳುವಂತೆ ಭಾವಿಸತೊಡಗಿದೆ.ಮೇಲೆ ಏರುತ್ತಲೇ ಇದ್ದೇವೆ, ನಮ್ಮ ಪಯಣಕ್ಕೆ ಕೊನೆಯೆಂಬ ಪದವೇ ಇಲ್ಲವೆನಿಸತೊಡಗಿತು. ಬದುಕು ಪಯಣ ಆದರೇ ನಮ್ಮ ಬದುಕಿನ ಕೊನೆಯ ದಿನಗಳು ಇಂಥಹ ಒಂದು ಪಯಣದಲ್ಲಿ ಕೊನೆಗೊಳ್ಳುತ್ತಿದೆ ಎನಿಸತೊಡಗಿತು.ಅದೆಷ್ಟೂ ಬಾರಿ ಕುಳಿತೆವೆಂಬುದರ ನೆನಪಿಲ್ಲ, ಕುಳಿತಲ್ಲಿ ಬೀಳುವಂತಾಗತೊಡಗಿತು.ಮರದಡಿಯಲ್ಲಿ ಕುಳಿತು ನೆಡೆದು ನೆಡೆದು ಮುನ್ನುಗ್ಗಿದೆವು. ಕಟ್ಟ ಕಡೆಯದಾಗಿ ನೋಡುವಾಗ ಏರಬೇಕಾದ ಬೆಟ್ಟವನ್ನು ನೋಡಿ ಒಮ್ಮೆಗೆ ಗಾಬರಿಯಾಗತೊಡಗಿತು. ನಾವಿದ್ದ ಪರಿಸ್ಥಿತಿಯಲ್ಲಿಲ್ಲದಿದ್ದರೇ ಅದನ್ನು ಏರುತ್ತಿರಲ್ಲಿಲ್ಲವೇನೋ?ಕನಿಷ್ಟ ೮೫ಡಿಗ್ರಿ ಕೋನದಲ್ಲಿ ಏರಬೇಕಿತ್ತು.ಅದನ್ನು ಏರಿದ ವೇಗ ನಮಗೆ ಆಶ್ಚರ್ಯವುಂಟಾಗಿಸಿತು.ನಾವು ಕನಸಿನಲ್ಲಿಯೂ ಎನಿಸಲಾರದ ವೇಗದಲ್ಲಿ ಅದನ್ನು ಏರಿದ್ದೇವು. ಕೆಳಗೆ ಅಪ್ಪಿ ತಪ್ಪಿದರೂ ನಮ್ಮ ಶವವನ್ನು ತೆಗೆಯಲಾಗುತ್ತಿರಲಿಲ್ಲ.ಅಂಥಹ ಆಳ ಪ್ರಪಾತವಿತ್ತು. ಒಬ್ಬರಿಗೊಬ್ಬರೂ ಹೋಗೋಣವೆಂದರೂ ನಮಗೆ ನಾವಿದ್ದ ಪರಿಸ್ಥಿತಿಗೆ ಪೂರಕವಾಗಿರಲಿಲ್ಲ ನಮ್ಮ ಮನಸ್ಸು.ಗುಡ್ಡದ ಮೇಲೆರಿದ ಕೂಡಲೇ ನನಗೆ ಜೀಪು ಓಡಾಡುವ ದಾರಿ ಕಂಡಿತು, ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ, ಕೂಗಾಡತೊಡಗಿದೆ. ಅಲ್ಲಿಂದ ಮುನ್ನೆಡೆಯುವಾಗ ಗುಡ್ಡ ಇಳಿದು ಹತ್ತಬೇಕು ಕನಿಷ್ಟ ಒಂಬತ್ತು ಗುಡ್ಡಗಳನ್ನು ಏರಬೇಕು ಇಳಿಯಬೇಕು. ಇಳಿಯುವಾಗ ನನ್ನ ಕಾಲುಗಳಿಗೆ ಬ್ರೇಕ್ ಹಾಕಲಾರದಷ್ಟು ನಿತ್ರಾಣವಾಗಿದ್ದವು. ಮರ ಕಂಡರೇ ಕುಳಿತು ಬಿಡಬೇಕೆನ್ನುವಷ್ಟು ಒಂದು ಹನಿ ನೀರಾದರೂ ಸಿಗಬಾರದೇ ಎಂದು ಮನದಲ್ಲಿ ಜಪಿಸುತ್ತಾ ನಡೆಯತೊಡಗಿದೆವು. ನಾವು ಮಾಡಿದ ತಪ್ಪುಗಳನ್ನು ನೆನೆದು, ಒಂದು ನಿಂಬೆಹಣ್ಣೂ, ಒಂದು ಕಿತ್ತಲೆ ಇದ್ದಿದ್ದರೇ, ಒಂದು ಜಾಮ್, ಒಂದಿಷ್ಟು ಜೇನಿದಿದ್ದರೇ ಹೀಗೆ ನಮ್ಮ ಬಳಿ ಇಲ್ಲದ ಎಲ್ಲವನ್ನು ನೆನೆದು, ಮುಂದಿನ ಸಲಕ್ಕೆ ಬರುವಾಗ ಎಲ್ಲವನ್ನು ತರಬೇಕೆಂದು ನಮಗೆ ಬರುತ್ತೇನೆಂದು ಬರದೇ ಇದ್ದವರು ನೆನೆದು ಉಗಿದು ಒಮ್ಮೊಮ್ಮೆ ಅವರು ಬಂದಿದ್ದರೇ ಹೆಚ್ಚು ಅನಾಹುತವೆಂದು ಭಾವಿಸಿ ನಡೆದೆವು. ಮರುಕ್ಷಣವೇ ಅಬ್ಬಾ ದೇವರು ನಮ್ಮನ್ನು ಬದುಕಿಸಿದರೇ ಮತ್ತೆಂದೂ ಚಾರಣದ ಸುದ್ದಿಯೇ ಬೇಡವೆನ್ನತೊಡಗಿದೆವು, ಇದ್ದಕ್ಕಿದ್ದ ಹಾಗೆಯೇ ಬಾರಿ ಬದುಕಿದರಲ್ಲವೇ ಮುಂದಿನ ಚಾರಣವೆಂದು ಕೊರಗತೊಡಗಿದೆವು.
ಹಾಗೆ ನಡೆದೆ ನೆನೆದು ಕೊರಗಿ ಬೈಯ್ದು ಹೀಗೆ ಅದೇನೇನೂ ಜಪಿಸಿ ಶಪಿಸಿದರೂ ನಮ್ಮ ದಾರಿ ಮುಂದಕ್ಕೆ ಹೋಗುತ್ತಲೇ ಇರಲಿಲ್ಲ.ನಾವು ಗುಡ್ಡದ ತುದಿಗೆ ಬಂದ ಮೇಲೆ, ನಾವು ಕನಿಷ್ಟ ಒಂಬತ್ತು ಗುಡ್ಡಗಳನ್ನು ಹತ್ತಿ ಇಳಿಯಬೇಕಿತ್ತು. ಇವುಗಳನ್ನು ಹತ್ತಿ ಇಳಿಯುವ ವೇಳೆಗೆ ನಮ್ಮ ಕಾಲುಗಳು ನಮ್ಮ ಮಾತನ್ನು ಕೇಳಲು ನಿರಾಕರಿಸಿದವು. ನಿಲ್ಲಲ್ಲೂ ಆಗುತ್ತಿರಲಿಲ್ಲ ಮೇಲಿನ ಸೂರ್ಯ ನಮ್ಮ ಮೇಲೆ ಕಿಡಿ ಕಾಡತೊಡಗಿದ, ಅಲ್ಲೆಲ್ಲಿಯೂ ಒಂದೇ ಒಂದು ಮರವಿರಲಿಲ್ಲ, ಇದೆಂಥಹ ಬದುಕು, ಇದೆಂಥಹ ನಿಸರ್ಗದ ಒಗಟು, ಎರಡು ದಿನ ಸೂರ್ಯನ ಬೆಳಕೇ ಬೀಳದಷ್ಟು ದಟ್ಟರಣ್ಯ ಇಂದು ನೋಡಿದರೇ ಮರವೇ ಇಲ್ಲದ ಬರಿ ಬೋಳು ಗುಡ್ಡೆಗಳು.ಬದುಕಲ್ಲಿಯೂ ಅಷ್ಟೇ ಎಲ್ಲವೂ ಅತಿರೇಕಗಳೆ, ಒಟ್ಟೊಟ್ಟಿಗೆ ಸುಖಗಳು ಒಟ್ಟೊಟ್ಟಿಗೆ ದುಃಖಗಳು. ನನ್ನ ಮನಸ್ಸು ಏನೇನೋ ಯೋಚಿಸತೊಡಗಿತು.ಸಾವಿನ ಬಗೆಗೆ ಬದುಕಿನ ವಿಪರ್ಯಾಸಗಳ ಕಡೆಗ ನನ್ನ ಮನಸ್ಸು ಬಹಳ ಕಾಡತೊಡಗಿತು. ಬದುಕು ಎಲ್ಲವೂ ಸರಿ ಇದ್ದರೇ ಮಾತ್ರ ಬದುಕ ಬಯಸುತ್ತದೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಅದು ಬದುಕಲು ಬಯಸುವುದಿಲ್ಲ. ಬದುಕಿನೆಡೆಗೆ ಜಿಗುಪ್ಸೆ ಬರುವುದು ಕೊರತೆಗಳಿಂದ, ಬದುಕಿಗೆ ಬೇಕಿರುವುದೇನೆಂಬುದು ಅಲ್ಲಿ ಬಹುಮುಖ್ಯವಾಗುತ್ತದೆ.ಬಯದ್ದೆಲ್ಲಾ ಸಿಗಬೇಕೆಂದು ಎಲ್ಲರೂ ಬಯಸುವುದಿಲ್ಲ, ಬಹುಮುಖ್ಯವಾದುದ್ದಾದರೂ ಸಿಗಲೆಂದು ಆಶಿಸುತ್ತಾರೆ.ನಮಗೂ ಅಷ್ಟೇ ಆ ಕ್ಷಣಕ್ಕೆ ನೀರು ಎಂಬುದು ಮಾತ್ರ ನಮ್ಮ ಬೇಡಿಕೆ, ಅವಶ್ಯಕತೆ ಅನಿವಾರ್ಯಕೆ ಆಗಿತ್ತು. ಆ ನಿಮಿಷಕ್ಕೆ ನಮಗೆ ಇಡೀ ಜಗತ್ತು, ನಾವು ನಮ್ಮ ಓದು ನಮ್ಮ ಬದುಕು ಇವೆಲ್ಲವೂ ಮರೆತುಹೋಗಿತ್ತು, ಜೀವ ಉಳಿಸಲು ಬೇಕಿರುವುದು ನೀರು, ಅಂಥಹ ನೀರನ್ನು ಕರುಣಿಸಿ ಎಂದು ಅಂಗಲಾಚುವ ಮನಸ್ಸಿತ್ತು. ನಮ್ಮ ಸ್ವಾಭಿಮಾನ, ಅಹಂ ಯಾವುದು ನಮಗೆ ನೆನಪಿರಲಿಲ್ಲ. ಸಮಸ್ಯೆಯೊಂದು ಮನದಲ್ಲಿದ್ದಾಗ ನಮಗೆ ಸಮಸ್ಯೆಗೆ ಬೇಕಿರುವು ಪರಿಹಾರ ಬಿಟ್ಟರೆ ಮಿಕ್ಕಾವುದು ಬರುವುದಿಲ್ಲ.
ನಡೆದು, ನಡೆದು ದನಿದು, ಅಲ್ಲಲ್ಲಿ ಕುಳಿತು, ಮತ್ತೊಮ್ಮೆ ಕುರುಚಲು ಕಾಡನ್ನು ನುಸಿದು, ಮುನ್ನೆಡೆದೆವು. ನಾವಿದ್ದ ಪರಿಸ್ಥಿತಿಯಲ್ಲಿ ಯಾವ ಒಂದು ಸಣ್ಣ ಪ್ರಾಣಿ ಬಂದರೂ ನೆಮ್ಮದಿಯಾಗಿ ಅದರ ತುತ್ತಾಗುತ್ತಿದ್ದೆವು. ಹಾಗೆ ಮುನ್ನೆಡೆದ ಮೇಲೆ, ಒಂದು ಕಾಫಿ ಎಸ್ಟೆಟ್ ಸಿಕ್ಕಿತು, ಅಲ್ಲಿಯೇ ದನಗಳು ಮೇಯುತ್ತಿದ್ದವು, ಆ ತೋಟದಲ್ಲಿದ್ದ ಬಾಳೆ ಮರವನ್ನು ನೋಡಿ ನಾನು ಇಲ್ಲಿ ನಿಜಕ್ಕೂ ನೀರು ಇರಲೇ ಬೇಕು ನೀರಿಲ್ಲದೇ ಇವುಗಳು ಇಷ್ಟೊಂದು ಸೊಂಪಾಗಿ ಬೆಳೆಯಲು ಸಾಧ್ಯವೇ ಇಲ್ಲವೆಂದು ಚರ್ಚಿಸಿದೆವು. ಆದರೂ ಅಲ್ಲಿ ಆಚೆ ಈಚೆ ಅಡ್ಡಾಡಿ ಸಮಯ ವ್ಯರ್ಥ ಮಾಡುವುದಕ್ಕೂ ಮತ್ತು ನಮ್ಮ ಶಕ್ತಿ ವ್ಯಯಕ್ಕೂ ನಾವು ಸಿದ್ದರಿರಲಿಲ್ಲ. ಮುಂದಕ್ಕೆ ಒಂದೆರಡು ಕಿ.ಮೀ ನಡೆದಿರಬಹುದು, ಒಂದೆರಡು ಮರಗಳು ಕಂಡವು, ಮೂವರು ಓಡಿ ಹೋಗಿ ದೊಪ್ಪನ್ನೆ ಮರದಡಿ ಬಿದ್ದೆವು.ಬಿದ್ದ ಕೆಲವು ಕ್ಷಣಗಳ ಬಳಿಕ ನಾವಿದ್ದ ಪರಿಸ್ಥಿತಿಯನ್ನು ನೆನೆದರೆ ಇಂದಿಗೂ ಬೆಚ್ಚಿ ಬೀಳುತ್ತೇವೆ. ನಮ್ಮ ದೇಹದ ಮೇಲೆ ನಮಗೆ ಹಿಡಿತವಿರಲಿಲ್ಲ, ಒಂದೇ ಒಂದು ಭಾಗವೂ ಚಲಿಸುತ್ತಿರಲಿಲ್ಲ, ಚಲಿಸುವುದಿರಲಿ ನಮ್ಮೊಂದಿಗೆ ಸ್ಪಂದಿಸುತ್ತಲೂ ಇರಲಿಲ್ಲ, ನಾವು ಮೂವರ ಧ್ವನಿ ನಮಗೆ ಕೇಳರಾದಷ್ಟೂ ಸುಸ್ತಾಗಿ ಹೋಗಿದ್ದೆವು. ಸುಮಾರು ಒಂದು ಗಂಟೆ ಮಲಗಿದ ನಂತರ ೫.೩೦ ರ ಸಮಯಕ್ಕೆ ವಿಜಿ ನಮ್ಮನ್ನು ನೀರು ಹುಡುಕಲು ಆ ಎಸ್ಟೇಟ್ ಗೆ ಹೋಗೋಣವೆಂದು ಒತ್ತಾಯಿಸತೊಡಗಿದ. ಕೆಲವೊಮ್ಮೆ ಮನಸ್ತಾಪಗಳು, ಮನಸ್ಸಿನ ಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ ಎಂಬುದಕ್ಕೆ ಆ ದಿನದ ಆ ಸನ್ನಿವೇಶ ಸೂಕ್ತ ಉದಾಹರಣೆ. ಸಣ್ಣ ಮಾತಿಗೂ ಕೋಪ ಬರುತ್ತಿತ್ತು, ರೇಗಾಡತೊಡಗಿದೆವು. ಸಮಧಾನ ಮಾಡಿಕೊಂಡು ಮತ್ತೆ ಯೋಚಿಸತೊಡಗಿದೆವು.
ಹೀಗೆ ಅದು ಇದು ಎಂದು ಯಾವುದಕ್ಕೂ ತೀರ್ಮಾನಕ್ಕೆ ಬರಲಾರದಿದ್ದಾಗ, ಒಮ್ಮೆಗೆ ನಮಗೆ ಎನಿಸಿದ್ದು, ಇದೇ ಜೀಪು ಓಡಾಡುವ ರಸ್ತೆಯಲ್ಲಿ ಮಲಗುವುದು, ಯಾರದರೂ ನಮ್ಮನ್ನು ಕಂಡರೆ ಕಾಪಾಡಲಿ, ಸತ್ತಲ್ಲಿ ನಮ್ಮ ಹೆಣವಾದರೂ ಸಿಗಲಿ ಎಂದು ನಿರ್ಧರಿಸಿದೆವು.ಇದಾದ ಕೆಲವು ನಿಮಿಷಕ್ಕೆ ನೆನಪಾದದ್ದು, ನಮ್ಮ ಮೊಬೈಲ್ ಫೋನ್ ಗಳು, ತೆಗೆದು ಆಚೀಚೆ ಓಡಾಡುವಾಗ ಜಗತ್ತೆ ನಿಮ್ಮ ಕೈಯಲ್ಲಿ ಎಂದಿತು ನಮ್ಮ ರಿಲಾಯನ್ಸ್ ಮೊಬೈಲ್ ಗಳು. ಮೊದಲು ಪೋಲಿಸ್ ಕಂಟ್ರೋಲ್ ರೂಮ್ ಗೆ ಕರೆ ಮಾಡಲು ನೋಡಿದೆವು. ಅಲ್ಲಿಗೆ ಸಿಗದೆ ಇದ್ದಾಗ ನಂದನ ಮನೆಗೆ ಫೋನ್ ಮಾಡಿ ನಾವಿದ್ದ ಪರಿಸ್ಥಿತಿಯನ್ನು ತಿಳಿಸಿದೆವು. ಅಲ್ಲಿಂದ ಅದು ಕ್ಷಣಾರ್ಧದಲ್ಲಿ, ಎಲ್ಲ ಕಂಟ್ರೋಲ್ ರೂಮ್ ಗಳಿಗೆ, ಅರಣ್ಯ ಇಲಾಖೆಗೆ, ಸ್ಥಳಿಯ ಸುದ್ದಿ ಮಾಧ್ಯಮದವರಿಗೆ ಮತ್ತೂ ಟಿವಿ ೯ ಗೂ ತಲುಪಿತು. ಈ ನಡುವೆ ನಮ್ಮ ಸ್ನೇಹಿತ ಪರಮೇಶನಿಗೂ ಒಂದು ಜೀಪ್ ತರಲು ಕರೆ ಮಾಡಿದೆವು. ಅವನು ಸಕಲೇಶಪುರದಿಂದ ಹೊರಟು ಬರತೊಡಗಿದ. ಇವೆಲ್ಲವೂ ಅದೆಷ್ಟೂ ಬೇಗ ನಡೆದೆವೆಂದರೇ ನಮಗೆ ಆಶ್ಚರ್ಯವಾಗತೊಡಗಿತು.ಅಲ್ಲಿ ನಾವು ಕಳೆದದ್ದು ೫ಗಂಟೇಗಳು ನಮಗೆ ನಾವು ನೀರಿಲ್ಲದೆ ಬಳಲುತಿದ್ದೇವೆಂಬುದೇ ಮರೆತು ಹೋಯಿತು. ನಾವು ಬಹಳ ಬೇಗನೆ ಚೇತರಿಸಿಕೊಂಡಿದ್ದೇವು. ಅರಣ್ಯ ಇಲಾಖೆಯವರು ಬರುವಾಗ ಸುಮಾರು ಹತ್ತು ಗಂಟೆಯಾಗಿತ್ತು. ಅವರ ಹಿರಿಯ ಅಧಿಕಾರಿಗಳು ಕಳುಹಿಸಿದ್ದ ಮೂರು ಬಾಟಲಿ ನೀರಲ್ಲಿ ಎರಡನ್ನು ಅವರೇ ಕುಡಿದು ಇನ್ನು ಉಳಿದು ಒಂದು ಬಾಟಲಿಯನ್ನು ನಮಗೆ ಕುಡಿಯಲು ಕೊಟ್ಟರು. ಅಲ್ಲಿಂದ ಹೊರಡುವ ಸಮಯಕ್ಕೆ ಪರಮೇಶ್ ಜೀಪಿನಿಂದ ಬಂದನು. ಅವನು ತಂದಿದ್ದ ನೀರು ಹಣ್ಣು ನಮ್ಮನ್ನು ಸ್ವಲ್ಪ ಸಮಧಾನಪಡಿಸಿತು.ಅಲ್ಲಿದ್ದ ನಾಲ್ಕೈದು ಗಂಟೆಗಳು ಟಿ.ವಿ. ಪೇಪರ್ ನವರಿಗೆ ನಾವು ಉತ್ತರ ಹೇಳುವಷ್ಟರಲ್ಲಿ ಸಾಕಾಗಿ ಹೋಯಿತು. ಸುದ್ದಿಯನ್ನು ಹೇಗೆ ತಿರುಚಿ ಬರೆಯುತ್ತಾರೆಂಬುದನ್ನು ಮಾರನೇಯ ಬೆಳ್ಳಿಗ್ಗೆ ಪೇಪರ್ ನೋಡಿದಾಗಲೇ ತಿಳಿದದ್ದು. ಒಂದು ಪೇಪರ್ ನಲ್ಲಿ, ಒಂಬತ್ತು ಗುಡ್ಡ ತೊಂಬತ್ತು ಗುಡ್ಡವಾಗಿತ್ತು, ಇನ್ನೊಂದರಲ್ಲಿ ಸಂಜೆ ಐದು ಗಂಟೆಗೆ ಸಿಕ್ಕಿದ್ದೆವು, ನಾವು ಬಿ.ಎಂ.ರಸ್ತೆಗೆ ಬಂದು ಕರೆ ಮಾಡಿದ್ದೆವು, ಸಾಮಾನ್ಯ ಪ್ರಜ್ನೆ ಬೇಡವೆ? ರಾಷ್ಟ್ರೀಯ ಹೆದ್ದಾರಿಯಿಂದ ಅರಣ್ಯ ಇಲಾಖೆ ಸಹಾಯ ಬೇಡುವವರು ಚಾರಣಿಗರೇ?

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...