29 ಆಗಸ್ಟ್ 2024

ಕನಸು-ನನಸಿನ ಪಯಣದ ಹಾದಿಯಲಿ ಬದ್ಧತೆ, ಜವಬ್ದಾರಿ, ಸೋಲಿನ ಭೀತಿ!!!

 

೨೯.೦೮.೨೦೨೪



ನಾವು ನಮ್ಮ ಕನಸುಗಳನ್ನು, ಆಸೆಗಳನ್ನು, ಬಯಕೆಗಳನ್ನು ಬೇರೆಯವರೊಂದಿಗೆ ಏಕೆ ಹಂಚಿಕೊಳ್ಳಬೇಕು? ಇದರ ಕುರಿತು ಸ್ವಲ್ಪ ಚರ್ಚಿಸೋಣ. ಮುಕ್ತವಾಗಿ. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೆ ಆದ ಆಸೆ ಬಯಕೆ ಕನಸು ಇದ್ದೇ ಇರುತ್ತದೆ. ಅದು ಲೌಕಿಕ, ಅಲೌಕಿಕ, ಅಧಿಕಾರ, ವಸ್ತುಪ್ರಧಾನ, ಇತ್ಯಾದಿ ಅನ್ನುವ ವಿಂಗಡಣೆಗೆ ಹೋಗುವುದು ಬೇಡ. ಹಾಗೆಯೇ ಸ್ಥೂಲವಾಗಿ ಚರ್ಚಿಸೋಣ. ಆಸೆ ಕನಸುಗಳು ಎಂಬುದೆಲ್ಲಾ ಯಾವುದು, ಸರ್ವೇ ಸಾಮಾನ್ಯವಾಗಿ ನಮ್ಮ ಕಣ್ಮುಂದೆ ನೋಡುತ್ತಿರುವುದು ಅಥವಾ ನಾವೆಲ್ಲರೂ ಕಾಣುತ್ತಿರುವುದು. ಚೆನ್ನಾಗಿ ಓದಬೇಕು ಎನ್ನುವುದು ಒಂದು ವಯಸ್ಸಿನಲ್ಲಿ, ತದನಂತರ ಉತ್ತಮ ಕಾಲೇಜು, ಒಳ್ಳೆಯ ಕೆಲಸ, ಒಳ್ಳೆಯ ಸಂಗಾತಿ, ಒಂದು ಒಳ್ಳೆಯ ಕಾರು, ಸೈಟು, ಮನೆ, ಮಕ್ಕಳು, ಮಕ್ಕಳ ವಿದ್ಯಾಭ್ಯಾಸ, ಒಂದಿಷ್ಟು ಅಧಿಕಾರ, ಒಳ್ಳೆಯ ಸ್ನೇಹಿತರು, ಸಾಧ್ಯವಾದರೆ ಅಧಿಕಾರದಲ್ಲಿರುವವರು, ದುಡ್ಡಿರುವವರು, ದೊಡ್ಡ ದೊಡ್ಡ ಕಾಂಟ್ಯಾಕ್ಟ್‌ ಇರುವವರು, ಸಮಯಕ್ಕೆ ಆಗುವಂತವರು, ಸಮಾಜದಲ್ಲಿ ಹೆಸರು ಮಾಡುವುದು, ನಮ್ಮನ್ನು ನಾಲ್ಕು ಜನ ಗುರುತಿಸಬೇಕು, ಒಂದಿಷ್ಟು ಕ್ಲಬ್‌, ಸೊಸೈಟಿ ಅಲ್ಲಿ ಇಲ್ಲಿ ಸದಸ್ಯರಾಗಬೇಕು, ಒಳ್ಳೊಳ್ಳೆ ಜಾಗಗಳನ್ನು ನೋಡಬೇಕು, ದೇವಸ್ಥಾನಗಳಿಗೆ ಹೋದರೆ ನೇರ ಪೂಜೆ ಆಗಬೇಕು, ವಿದೇಶ ಪ್ರವಾಸ ಮಾಡಬೇಕು, ನನ್ನದೇ ಚಾಪು ಮೂಡಿಸಬೇಕು. ಇವೆಲ್ಲಾ ಆಸೆಗಳು. ಇದನ್ನು ನಾನು ಕನಸು ಎಂದು ಕರೆಯುವುದಿಲ್ಲ.

 

ಇನ್ನೊಂದು ಬದಿಯಿದೆ. ಆಸೆಗಳ ಸರದಿ. ಸ್ಕೂಲ್‌ ಕಾಲೇಜಿಗೆ ಚಕ್ಕರ್‌ ಹಾಕಬೇಕು, ಬೀದಿ ಬೀದಿ ಸುತ್ತಾಡಬೇಕು, ಕ್ರಿಕೇಟ್‌, ಸಿನೆಮಾ, ರೀಲ್ಸ್‌, ಹುಡುಗಿಯರ ಹಿಂದೆ ಹೋಗಬೇಕು, ಸಿಗರೇಟು, ಗಾಂಜಾ, ಹೆಂಡ, ಮಜಾ ಮಾಡಬೇಕು. ಓದಿ ಏನ್ ಬರುತ್ತೆ?‌ ದುಡಿಯೋದು ಇದ್ದೇ ಇರುತ್ತೆ, ಕಾಲೇಜು ಲೈಫ್‌ ಇನ್ನೊಂದು ಸಲ ಸಿಗುತ್ತ? ಎಲ್ಲರನ್ನೂ ರೇಗಿಸುವುದು, ಕೆಟ್ಟದ್ದಾಗಿಯಾದರೂ ಗುರುತಿಸಿಕೊಳ್ಳಬೇಕು. ಯಾರಿಗೂ ಮರ್ಯಾದೆ ಕೊಡದೆ, ಗೌರವ ನೀಡದೆ, ನಿರ್ಲಕ್ಷ್ಯ ಮತ್ತು ಉಢಾಫೆತನದಿಂದ ಬದುಕುವುದು. ಕಾಲೇಜು ಮುಗಿದ ಮೇಲೆ ಸರಿಯಾಗಿ ಕೆಲಸವಿಲ್ಲ, ಗುರಿಯಿಲ್ಲ ಧ್ಯೇಯವಿಲ್ಲ. ಸಾಲ ಮಾಡ್ಕೊಂಡು ಹೆಂಡ ಕುಡ್ಕೊಂಡು ಬಸ್‌ ಸ್ಟ್ಯಾಂಡ್‌ ಅಲ್ಲಿ ಅಥವಾ ಟೀ ಅಂಗಡಿ ಹತ್ತಿರು ಕುಳಿತುಕೊಂಡು ಪ್ರಪಂಚದ ರಾಜಕೀಯವೆಲ್ಲ ಮಾತಾಡುತ್ತ ಆಯಸ್ಸು ಮುಗಿಸೋದು. ಇವೆರಡು ತದ್ವಿರುದ್ಧ ಆದರೂ ಎರಡರಲ್ಲಿಯೂ ಕನಸೆಂಬುದಿಲ್ಲ. ಕೇವಲ ಆಸೆಗಳು ಮಾತ್ರ. ಈ ಕನಸು ಅಂದ್ರೆ ಏನು?

 

ಕನಸು ಅನ್ನೋದು ನಿರಂತರ, ಅದು ನಿಂತ ನೀರಲ್ಲ. ನಿಲ್ಲುವುದಿಲ್ಲ, ನಿಲ್ಲುವುದಕ್ಕೆ ಬಿಡುವುದಿಲ್ಲ. ಒಂದು ಗುರಿ ತಲುಪುವ ತನಕ, ತಲುಪಿದ ನಂತರವು. ತೃಪ್ತಿ ಎನ್ನುವುದಿರುವುದಿಲ್ಲ ಆದರೇ ದುರಾಸೆಯಲ್ಲ. ಇದನ್ನು ನಾನು ಚಾರಣಕ್ಕೆ ಹೋಲಿಕೆ ಮಾಡುತ್ತೇನೆ. ಮೊದಲಿಗೆ ಸಣ್ಣ ಪುಟ್ಟ ಬೆಟ್ಟ ಹತ್ತುವ ನಾವು, ಬರ ಬರುತ್ತ ದೊಡ್ಡದು, ಇನ್ನೂ ದೊಡ್ಡದು ಅಂತ ಅತಿ ಎತ್ತರದ ಶಿಖರವನ್ನು ಏರುವುದಕ್ಕೆ ಪ್ರಯತ್ನಿಸುತ್ತಿರತ್ತೇವೆ, ಇದು ಯಾರನ್ನೂ ಮೆಚ್ಚಿಸುವುದಕ್ಕಲ್ಲ. ನಮ್ಮ ಮನಸ್ಸಿಗೆ ಆತ್ಮಕ್ಕೆ ಆಹಾರ ನೀಡುವುದಕ್ಕೆ, ಅದನ್ನು ತೃಪ್ತಿಗೊಳಿಸುವುದಕ್ಕಾಗಿ ಅಷ್ಟೆ. ಒಂದು ಸಣ್ಣ ಹೋಟೆಲ್‌ ತೆಗೆದವನು ದೊಡ್ಡ ಚೈನ್‌ ಹೋಟೆಲ್‌ ಮಾಡಬೇಕೆಂದು ಕನಸು ಕಾಣುತ್ತಾನೆ, ಅದು ಆಸೆಯಲ್ಲ, ಕನಸು. ಅದಕ್ಕಾಗಿ ಅವನು ಎಲ್ಲವನ್ನೂ ತ್ಯಾಗ ಮಾಡಬೇಕಾಗುತ್ತದೆ. ಎಲ್ಲಾ ಕೆಲಸ, ಕರ್ತವ್ಯವನ್ನು ವಹಿಸಿಕೊಳ್ಳಬೇಕಾಗುತ್ತದೆ. ನಾನು ಸೀಕೋ ಸಂಸ್ಥೆಯನ್ನು ಉತ್ತಮವಾಗಿ ಕಟ್ಟಬೇಕೆಂದರೆ, ಅದಕ್ಕೆ ಬೇಕಿರುವ ಎಲ್ಲವನ್ನೂ ನೀಡಬೇಕು. ಬೇರೆ ಸಂಸ್ಥೆಯಲ್ಲಿ ಕೆಲಸ/ಉದ್ಯೋಗ ಮಾಡುವುದು ಸುಲಭ. ಏಕೆಂದರೆ ಅಲ್ಲಿ ನಿಮ್ಮ ಕನಸುಗಳಾಗಲಿ, ಯೋಜನೆಯಾಗಲಿ ಇರುವುದಿಲ್ಲ. ಅದೊಂದು ಯಾಂತ್ರಿಕತೆ, ಯಾರೋ ಹೇಳಿದ ಕೆಲಸವನ್ನು ನೀವು ಅದರಂತೆಯೇ ಮಾಡಿ ಮುಗಿಸುವುದು. ಒಬ್ಬ ಟೈಲರ್‌ ನಿಮ್ಮ ಅಳತೆಗೆ ತಕ್ಕಂತೆ, ನೀವು ಹೇಳಿದಂತೆ, ನೀವು ಬಯಸಿದಂತೆ ಅಂಗಿ ಹೊಲಿಯುವುದು ಸುಲಭ. ಆದರೇ, ಅವನ ಸ್ವಂತಿಕೆಯಿಂದ ಒಂದು ಅಂಗಿ ಹೊಲೆದು ಮಾರುವುದು ಕಷ್ಟಕರ, ಏಕೆಂದರೆ ಅವನು ಅವನ ಆಲೋಚನೆಯಂತೆ ಹೊಲಿದಿರುತ್ತಾನೆ, ಕೊಳ್ಳುವವನು ಬೇರೆಯ ರೀತಿಯಲ್ಲಿ ಯೋಚಿಸಿರುತ್ತಾನೆ ಅಥವಾ ಕೆಲವೊಮ್ಮೆ ಅದು ಬಹಳ ಇಷ್ಟವಾಗಿ ದೊಡ್ಡ ಮಟ್ಟದ ಬೇಡಿಕೆಯೂ ಬರಬಹುದು.

 

ನಮ್ಮ ಯೋಜನೆ ಚಟುವಟಿಕೆಗಳ ಮೂಲಕ ಪರಿಸರ ಶಿಕ್ಷಣ ನನ್ನ ದೊಡ್ಡ ಕನಸು, ಅದಿನ್ನು ಅಂಬೆಗಾಲಿಡುತ್ತಿದೆ, ಆದರೇ ನನಗೆ ನಂಬಿಕೆಯಿದೆ ಯಶಸ್ವಿಯಾಗುತ್ತೇವೆಂದು. ಏಕೆಂದರೆ ನಮ್ಮ ತಂಡವೇ ಹಾಗಿದೆ, ಆರ್.ಕೆ. ಸರ್‌, ಪ್ರೊ.ಎನ್.ಮೇಡಮ್‌, ಪ್ರೊ.ಉಮಾದೇವಿ ಮೇಡಮ್‌, ರಮೇಶ್‌ ಸರ್‌, ಮತ್ತು ಸ್ವಯಂಪ್ರೇರಿತರ ಬಳಗವೇ ಇದೆ. ಹೊಸ ಪರಿಕಲ್ಪನೆ ಒಪ್ಪುವುದು ಕಷ್ಟ, ಒಪ್ಪಿದ ಮೇಲೆ ಅಪ್ಪಿಕೊಳ್ಳುತ್ತಾರೆ. ಪ್ರೊ. ಎನ್.ಐ.ಮೇಡಮ್‌ ಒಂದು ಪ್ರಸಂಗ ಹೇಳಿದ್ದರು. ಒಮ್ಮೆ ಹೆಗ್ಗೋಡಿನಲ್ಲಿ ತರಬೇತಿ ಶಿಬಿರ ನಡೆದಾಗ ಕಾರಂತಜ್ಜ ಬಂದಿದ್ದರಂತೆ. ಅಲ್ಲಿ ಒಬ್ಬರೂ ನೀರು ಮಾರುವವನು ಎಂಬ ಶಿರ್ಷಿಕೆಯಲ್ಲಿ ನಾಟಕ ರಚಿಸಿದ್ದರಂತೆ. ಅದನ್ನು ನೋಡಿದ ಕಾರಂತಜ್ಜ ಹೇಳಿದರಂತೆ, “ಹೇ, ಏನಂತ ಬರೆದಿದ್ದೀಯಾ? ಯಾರಾದರೂ ನೀರನ್ನು ಮಾರುತ್ತಾರೆಯೇ?” “ಬೇರೆ ಬರೆದುಕೊಂಡು ಬಾ,” ಎಂದರಂತೆ. ಇದನ್ನು ಏಕೆ ಹೇಳುತ್ತಿದ್ದೇನೆಂದರೆ, ಹೊಸದಾಗಿ ಹೊಸ ಆಲೋಚನೆಗಳು ಬಂದಾಗ ಒಪ್ಪಿಕೊಳ್ಳುವುದಕ್ಕೆ ಕಷ್ಠವಾಗುತ್ತದೆ, ಕ್ರಮೇಣ ಅದೊಂದು ಟ್ರೆಂಡ್‌ ಆಗಿಬಿಡುತ್ತದೆ. ದಿಡೀರನೇ ಪ್ರಸಿದ್ಧಿ ಪಡೆಯುತ್ತದೆ. ಇದಕ್ಕೆ ಸಾಕಷ್ಟು ಉದಾಹರಣೆಗಳಿವೆ,


ಕೆಫೆ ಕಾಫೀ ಡೇ, ಎಸಿ ರೂಮಿನಲ್ಲಿ ಕುಳಿತು ಕಾಫೀ ಕುಡಿಯೋದ? ಅದು ನೂರು ಇನ್ನೂರು ಕೊಟ್ಟು ಎಂದರು, ಕ್ರಮೇಣ ಅದೊಂದು ದೊಡ್ಡ ಮೀಟಿಂಗ್‌ ಪಾಯಿಂಟ್‌ ಆಗಿ ಬೆಳೆಯಿತು. ಓಲಾ, ಊಬರ್‌, ಬಿಗ್‌ ಬಾಸ್ಕೆಟ್?‌ ತರಕಾರಿ ತರಿಸೋದಾ? ಅದರಲ್ಲಿ ಕತ್ತರಿಸಿರುವ ತರಕಾರಿ? ಸ್ವಿಗ್ಗಿ? ಝೋಮಾಟೋ? ಆನ್‌ಲೈನ್‌ ಬ್ಯಾಂಕಿಂಗ್‌? ಹತ್ತು ರೂಪಾಯಿ ಕೊತ್ತಂಬರಿಗೆ ಫೋನಿನಲ್ಲಿ ಪಾವತಿಸುತ್ತಿಲ್ಲವೇ? ಚಳುವಳಿಗಳನ್ನೇ ನೋಡಿ, ಗಾಂಧೀಜಿಯ ಹಿಂದ್‌ ಸ್ವರಾಜ್‌ ಪ್ರಾರಂಭದಲ್ಲಿ ಒಪ್ಪಲಿಲ್ಲ, ಆದರೇ ಸರ್ವೋದಯ ಹೇಗಾಯ್ತು? ಅಪ್ಪಿಕೋ ಚಳುವಳಿ? ಚಿಪ್ಕೋ ಚಳುವಳಿ? ನಲಿ ಕಲಿ ಕಾರ್ಯಕ್ರಮ? ಸಾಕ್ಷರತಾ ಆಂದೋಲನ? ಇದೆಲ್ಲವನ್ನೂ ಹೇಳಿದ್ದರ ಉದ್ದೇಶ ನಾವು ಮೊದಲು ಕನಸು ಕಾಣಬೇಕು, ಅದನ್ನು ಸಾಧಿಸುವ ಮಾರ್ಗ ನೋಡಬೇಕು. ಸಮಯ ನಿಗದಿಪಡಿಸಿಕೊಳ್ಳಬೇಕು, ಪ್ರತಿ ಮೈಲಿಗಳ್ಳಿಗೂ ಯೋಜನೆ ರೂಪಿಸಿಕೊಳ್ಳಬೇಕು. ಇದನ್ನೇ, ಇನ್ನೊಂದಿಷ್ಟು ವಿವರಣೆಯೊಂದಿಗೆ ಹೇಳುತ್ತೇನೆ. ನಾನು ಬಾನುಗೊಂದಿಯಲ್ಲಿದ್ದೇನೆ ಎಂದುಕೊಳ್ಳೋಣ, ಕೊಣನೂರು ನನಗೆ ೪ ಕೀಲೋಮೀಟರ್‌ ದೂರ, ಅಲ್ಲಿಗೆ ನಾನು ಯಾವುದೇ ತಯಾರಿ ಇಲ್ಲದೆ ನಡೆದು ಹೋಗಿ ಬರಬಹುದು, ಬಹುಶಃ ರಾಮನಾಥಪುರದ ತನಕವೂ ಕೂಡ ಸುಮಾರು ಹತ್ತು ಕಿಲೋಮೀಟರ್.‌ ಅದೇ ನಾನು ಹಾಸನಕ್ಕೆ ೬೦ ಕಿಲೋಮೀಟರ್‌, ಮೈಸೂರು ೯೦ ಕಿಲೋಮೀಟರ್‌ ಹೋಗಬೇಕಾದರೆ, ಬಸ್ಸಿನ ಸಮಯ, ಬಸ್ಸಿಗೆ ದುಡ್ಡು, ಸ್ವಲ್ಪ ಚೆನ್ನಾಗಿರುವ ಬಟ್ಟೆ ಒಂದು ಸ್ನಾನ, ಒಂದು ಬಾಟಲಿ ನೀರು, ಜೊತೆಗೆ ತಿಂಡಿ ಊಟದ ಬಗ್ಗೆಯೂ ಯೋಚಿಸಬೇಕು ಮತ್ತು ತಯಾರಾಗಬೇಕು. ಅದೇ ನಾನು ಬೆಂಗಳೂರಿಗೆ ಹೋಗುವುದಾದರೇ? ರಾತ್ರಿ ಉಳಿಯುವ/ತಂಗುವ ಬಗೆಗೂ ಯೋಚಿಸಬೇಕು. ಹೀಗೆ, ದೆಹಲಿಗೆ, ಹೈದರಾಬಾದಿಗೆ, ಚೆನ್ನೈಗೆ, ಪೂಣೆಗೆ, ಮುಂಬೈಗೆ, ದೂರದ ಊರಿಗೆ ಹೋಗುವಂತೆ ಯೋಜನೆ ರೂಪಿಸಿದಂತೆ ತಯಾರಿಯೂ ಹೆಚ್ಚಾಗುತ್ತದೆ. ನಮ್ಮ ಗುರಿ ದೊಡ್ಡದಾದಷ್ಟೂ ಪೂರ್ವತಯಾರಿ ಹೆಚ್ಚು ಮಾಡಬೇಕಾಗುತ್ತದೆ. ಗೋಲಿ ಆಟ ಆಡುವುದಕ್ಕೆ ಯಾವ ತಯಾರಿ ಬೇಕಿಲ್ಲ ವಿಶ್ವಕಪ್‌ ನಲ್ಲಿ ಆಡಬೇಕೆಂದರೆ, ಆ ಮಟ್ಟಕ್ಕೆ ತಯಾರಿ ಬೇಕಾಗುತ್ತದೆ.

 

ಇಲ್ಲಿಯ ತನಕ ಪೀಠಿಕೆಯೇ ಆಯಿತು, ಈಗ ವಿಷಯಕ್ಕೆ ಬರುತ್ತೇನೆ. ನಾವುಗಳು ನಮ್ಮ ಕನಸುಗಳನ್ನು ಬೇರೆಯವರೊಂದಿಗೆ ಅಷ್ಟಾಗಿ ಹಂಚಿಕೊಳ್ಳುವುದಿಲ್ಲ. ಏಕೆ? ಕಾರಣ ಗೊತ್ತಾ? ಮೊದಲನೆಯ ಕಾರಣ, ನನ್ನ ಮಾತನ್ನು ಕೇಳಿ ನಕ್ಕರೆ? ಹಿಯಾಳಿಸಿದರೆ? ಇದೊಂದು ಅಂಜಿಕೆ. ಮತ್ತೊಂದು, ಅಸೂಯೆ ಪಟ್ಟರೆ? ಇನ್ನೊಂದು, ಬಹಳ ಮುಖ್ಯದ್ದು, ನಾನು ಹೇಳಿ, ಅದನ್ನು ಸಾಧಿಸದೆ ಹೋದರೆ? ಆಗ, ಅವರು ಹಂಗಿಸಿದರೆ? ಇಲ್ಲಿ ಗಮನಿಸಬೇಕಾದ್ದ, ಪ್ರಮುಖ ಅಂಶಗಳಿವೆ, ನಮಗೆ ನಮ್ಮ ಬಗ್ಗೆ ನಮ್ಮ ಕಾರ್ಯಯೋಜನೆ ಬಗ್ಗೆ ಸಂಪೂರ್ಣ ನಂಬಿಕೆ/ವಿಶ್ವಾಸವಿಲ್ಲ. ಎರಡನೆಯದು, ಸೋಲಿನ ಭೀತಿ, ಸಾಕಷ್ಟು ಜನರಿಗೆ ಸೋಲುವುದಕ್ಕಿಂತ ಸೋಲುತ್ತೇನೆಂಬ ಭಯವೇ ಹೆಚ್ಚು. ಮೂರನೆಯದು, ನಮ್ಮ‌ ಮಾತಿನ ಮೇಲೆ ನಮಗೆ ಬದ್ಧತೆಯಿಲ್ಲದಿರುವುದು, ಜವಬ್ದಾರಿಯನ್ನು ವಹಿಸಿಕೊಳ್ಳುವುದಕ್ಕೆ ಹಿಂಜರಿಯುವುದು, ನಾವೆಲ್ಲಿ ಉತ್ತರದಾಯಿತ್ವ ಅಂದರೆ ಅಕೌಂಟೆಬಿಲಿಟಿಗೆ ಸಿಕ್ಕಿ ಹಾಕಿಕೊಳ್ಳುತ್ತೇವೆಂಬ ಆತಂಕ. ಸುಮ್ಮನೆ ಯಾಕೆ ರಿಸ್ಕ್?‌ ಕಂಫರ್ಟ್‌ ಝೋನ್‌ ನಲ್ಲಿದ್ದೀವಿ, ನಡೀತಾಯಿದೆ, ನಡೆಯಲಿ ಎಂಬ ಧೋರಣೆ.

 

ನಾನು ತಮ್ಮೊಂದಿಗೆ ನನ್ನ ದಿನಚರಿಯನ್ನು ಅಥವಾ ಯೋಜನೆಯನ್ನು ಮುಕ್ತವಾಗಿ ಹಂಚಿಕೊಳ್ಳುತ್ತೇನೆ. ಕಾರಣವಿಷ್ಟೆ, ನಾನು ಹೇಳಿದ ವಿಚಾರವನ್ನು ತಾವುಗಳು ಪದೇ ಪದೇ ಪ್ರಸ್ತಾಪಿಸುತ್ತೀರಿ. ನಾನು ಉತ್ತರದಾಯಿಯಾಗಿರುತ್ತೇನೆ. ನೀವು ಕೇಳಿದಾಗ ನಾನು ಮರೆತಿದ್ದರೂ ಅದು ನೆನಪಿಗೆ ಬಂದು ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇನೆ. ನಾನು ಮಾಡುತ್ತೇನೆ ಎಂದು ಮಾತು ನೀಡಿದ ಮೇಲೆ ಅದನ್ನು ನಾನು ಪಾಲಿಸಲೇಬೇಕು, ಏಕೆಂದರೆ, ಆ ಮಾತು ಕೇವಲ ಮಾತುಗಳಲ್ಲ ಅಥವಾ ಭರವಸೆಗಳಲ್ಲ. ಆ ಮಾತು, ನಾನಾಗಿರುತ್ತೇನೆ. ನಾನು ಎಂದರೆ, ನಾನಾಡುವ ಮಾತುಗಳು. ಗಾಂಧೀಜಿ ಹೇಳುವಂತೆ “ಅವರ ಬದುಕು ಅವರ ಸಂದೇಶ” ಹಾಗೆಯೇ “ಅವರ ಮಾತೇ ಅವರ ಬದುಕು”. ಈ ಹಿನ್ನೆಲೆಯಲ್ಲಿ ಬಹುತೇಕರು ಯಾವ ವಿಷಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದಿಲ್ಲ.

 

ಕೊನೆಹನಿ: ಮನುಷ್ಯ ಸದಾ ಅವಲಂಬಿತನಾಗಿಯೇ ಬದುಕುತ್ತಾನೆ. ಮುಂಜಾನೆ ಏಳುವುದಕ್ಕೆ ಗಡಿಯಾರ ಬಾರಿಸಬೇಕು, ಇಲ್ಲವೇ ಬೇರೆ ಯಾರಾದರೂ ಎಬ್ಬಿಸಬೇಕು. ಊಟ, ತಿಂಡಿ ತಿನ್ನುವುದಕ್ಕೂ ಬಲವಂತಪಡಿಸಬೇಕು ಕನಿಷ್ಠ ಕರೆಯಬೇಕು. ಮಕ್ಕಳಿಗೆ ಓದುವುದಕ್ಕೆ, ಬರೆಯುವುದಕ್ಕೆ, ಬೇರೆಯವರೊಂದಿಗೆ ಬೆರೆಯುವುದಕ್ಕೆ ಎಲ್ಲದ್ದಕೂ ಪುಶ್‌ ಮಾಡಬೇಕು. ಅಷ್ಟೆಲ್ಲಾ ಏಕೆ, ನಾವುಗಳು ತೋಟದಲ್ಲಿಯೋ, ಹೊಲ ಗದ್ದೆಯಲ್ಲಿಯೋ ಕೆಲಸ ಮಾಡಿಸುವಾಗ ನೋಡಿ, ನಾವುಗಳಿದ್ದರೆ ಕೆಲಸ ಮಾಡ್ತಾರೆ, ನಾವು ಸ್ವಲ್ಪ ಮರೆಯಾದರೂ ಕೆಲಸ ಅಲ್ಲೇ ನಿಂತಿರುತ್ತದೆ. ಶಾಲಾ ಕಾಲೇಜುಗಳಲ್ಲಿ ನೋಡಿ, ಮುಖ್ಯ ಶಿಕ್ಷಕರು/ಪ್ರಾಂಶುಪಾಲರು ಬಂದಿಲ್ಲವೆಂದರೆ ಮುಗಿದೇ ಹೋಯಿತು. ಇವರೆಲ್ಲರೂ ಎರಡು ಮೂರು ಡಿಗ್ರಿ ಮಾಡಿರುವವರು. ಆದರೂ ಅವರಿಂದ ಕೆಲಸ ತೆಗೆಸಿಕೊಳ್ಳಬೇಕೆಂದರೆ ಅವರ ಹಿಂದೆ ಬೀಳಲೇಬೇಕು. ನಾವೆಲ್ಲರೂ ಅಷ್ಟೆ, ಯಾವುದಕ್ಕಾದರೂ ಅಥವಾ ಯಾರಿಗಾದರೂ ಕಮಿಟ್‌ ಆಗಿದ್ದರೆ ಮಾತ್ರ ಗಂಬೀರವಾಗಿ ಕೆಲಸ ಮಾಡುತ್ತೇವೆ,ಇಲ್ಲದಿದ್ದರೆ, ನನ್ನನ್ನು ಯಾರೂ ಕೇಳುವವರಿಲ್ಲವೆಂದು ಸೋಮಾರಿಯಾಗುತ್ತೇನೆ. ಅದಕ್ಕಾಗಿಯೇ, ನಾನು ನಿಮ್ಮೆಲ್ಲರೊಂದಿಗೆ ನನ್ನ ದಿನಚರಿ, ಪ್ರವಾಸ, ಚಾರಣ, ಹವ್ಯಾಸಗಳನ್ನು ಹಂಚಿಕೊಳ್ಳುವುದು. ಏಕೆಂದರೆ, ನೀವು ನನ್ನನ್ನು ಪ್ರಶ್ನೆ ಮಾಡಿಯೇಮಾಡುತ್ತೀರಿ ಅದು ನನಗೆ ಬೇಕಿರುವುದು. ಒಂದಿಷ್ಟು ಸಮಯ ಕಳೆದ ಮೇಲೆ ಅದು ನಮಗೆ ನಿರಂತರವಾಗುತ್ತದೆ, ಯಾರು ಕೇಳದೆ ಇದ್ದರೂ ನಮ್ಮ ಬದ್ಧತೆಯನ್ನು ನಾವು ಕಾಪಾಡಿಕೊಳ್ಳುತ್ತೇವೆ. ಆರಂಭದ ಕೆಲವು ದಿನಗಳು ನಾವು ನಮ್ಮ ಜನರನ್ನು ಬೆಂಬಲಿಸಬೇಕು, ಒತ್ತಾಯಿಸಬೇಕು, ಬಿಟ್ಟು ಬಿಡದಂತೆ ಬಲವಂತ ಮಾಡಿ ಕೆಲಸ ಮಾಡಿಸಬೇಕು, ಅದಾದ ಮೇಲೆ ಅವರ ಅನುಭವಕ್ಕೆ ಬರುತ್ತದೆ. ನಾನು ಒಂದು ಸಮಯದಲ್ಲಿ ೮ ಗಂಟೆಗೆ ಏಳುತ್ತಿದ್ದೆ. ಕೆಲವು ದಿನಗಳು ಪ್ರಕೃತಿ ಚಿಕಿತ್ಸೆಗೆ ಹೋಗಿದ್ದಾಗ ಅಲ್ಲಿಯ ತರಬೇತಿ ಹಾಗೆಯೇ ಮುಂದುವರೆಯುತ್ತಿದೆ. ಸುಮಾರು ವರ್ಷಗಳಿಂದ ನಾನು ಏಳುವುದು ೪ ಗಂಟೆಯ ಒಳಗೆ. ಇತ್ತೀಚೆಗೆ ಇನ್ನೊಂದಿಷ್ಟೂ ಹೊಸ ಪ್ರಯತ್ನಗಳನ್ನು ಮಾಡುತ್ತಿದ್ದೇನೆ, ಹೆಚ್ಚೆಚ್ಚು ಶಿಸ್ತು ಮತ್ತು ಅರ್ಥಪೂರ್ಣ ಬದುಕಿನೆಡೆಗೆ. ನಾನು ಹೇಳಿದ ಮಾತನ್ನು ಪಾಲಿಸದೇ ಇದ್ದಾಗ, ತಿದ್ದಿ ತೀಡುವುದು ನಿಮ್ಮ ಕರ್ತವ್ಯ, ಕಡ್ಡಾಯವಾಗಿ ಮಾಡಬೇಕು, ಇದು ನಿಮ್ಮ ಬದ್ಧತೆಗೆ ಸವಾಲು.

 

ಮುಂದುವರೆಯುವುದು…

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕನಸು-ನನಸಿನ ಪಯಣದ ಹಾದಿಯಲಿ ಬದ್ಧತೆ, ಜವಬ್ದಾರಿ, ಸೋಲಿನ ಭೀತಿ!!!

  ೨೯.೦೮.೨೦೨೪ ನಾವು ನಮ್ಮ ಕನಸುಗಳನ್ನು, ಆಸೆಗಳನ್ನು, ಬಯಕೆಗಳನ್ನು ಬೇರೆಯವರೊಂದಿಗೆ ಏಕೆ ಹಂಚಿಕೊಳ್ಳಬೇಕು? ಇದರ ಕುರಿತು ಸ್ವಲ್ಪ ಚರ್ಚಿಸೋಣ. ಮುಕ್ತವಾಗಿ. ಪ್ರತಿಯೊ...