08 ಜೂನ್ 2009


ಮರಳಿ ಮಣ್ಣಿಗೆಯೆಂದರೂ ಸರಿಯೇ? ನಿಸರ್ಗದ ಸೆಳೆತಕ್ಕೆಂದರೂ ಸರಿಯೇ....!


ಪರಿಸರ ದಿನವೆಂಬುದು ಪರವಾಗಿಲ್ಲ, ಮಹತ್ತರ ಹಬ್ಬದಂತೆಯೇ ಬೀಗುತ್ತಿದೆ. ಅಥವಾ ನಾವೇ ಅದನ್ನು ಬೀಗುವಂತೆ ಮಾಡಿದ್ದೆವೆ. ಬೆಳಗಿನಿಂದಲೂ ಪರಿಸರದ ಬಗ್ಗೆ ಎಫ್.ಎಂ ನಲ್ಲಂತೂ ಕೇಳುವುದೇ ಬೇಡ ಅದರ ಆರ್ಭಟವನ್ನು. ಪರಿಸರ ಸ್ನೇಹಿ ಪದಾರ್ಥಗಳು, ಪರಿಸರ ಸಂರಕ್ಷಣೆ, ಗಿಡಗಳನ್ನು ನೆಡುವುದು, ಹಸಿರು ವೃದ್ದಿಸುವುದು, ಗಿಡಮೂಲಿಕೆಗಳನ್ನು ಉಪಯೋಗಿಸುವುದು, ಮಳೆ ನೀರನ್ನು ಶೇಕರಿಸುವುದು, ಸಾವಯವ ಗೊಬ್ಬರ, ಸಾವಯವ ಕೃಷಿ, ನೈಸರ್ಗಿಕ ಕೃಷಿ, ಪ್ಲಾಸ್ಟಿಕ್ ತ್ಯಜಿಸುವುದು, ವಸ್ತುಗಳ ಪುನರ್ ಉಪಯೋಗ, ನೀರಿನ ಮಿತಬಳಕೆ, ತಂತ್ರಜ್ನಾನ ಹೀಗೆ ಬಿಡುವಿಲ್ಲದೇ ಒದುರಿದ್ದೇ ಒದರಿದ್ದು.ಆದರೇ, ಪ್ರತಿಯೊಂದನ್ನು ನಾನು ಕೇಳುವಾಗ ನನಗೆ ನನ್ನ ಬಾಲ್ಯದ ದಿನಗಳು ನನ್ನ ಹಳ್ಳಿಯ ಜೀವನವೇ ನೆನಪಾಗುತ್ತಿತ್ತು. ಇವರು ಮಾತನಾಡುತ್ತಿರುವುದೆಲ್ಲವೂ ಮತ್ತೆ ಹಿಂದಕ್ಕೆ ಹೆಜ್ಜೆ ಇಡಲು ಸಿದ್ದರಾಗಿ ಎನ್ನುವಂತಿದೆ. ಪರಿಸರ ಸ್ನೇಹಿ, ಹಸಿರು, ಉಸಿರು ಎನ್ನುವಾಗ, ನನ್ನೂರಿನಲ್ಲಿದ್ದ ಹಸಿರು ನನಗೆ ನೆನಪಾಗುತ್ತದೆ. ನನ್ನ ಅಜ್ಜಿಯ ಮುಂದೆ ಕುಳಿತು ಕೇಳಿದರೇ, ಅವಳು ಇಲ್ಲಿ ನಮ್ಮ ಮನೆಯಿರುವ ಸ್ಥಳ ಭರ್ಜರಿ ಕಾಡಾಗಿತ್ತು ಎನ್ನುತ್ತಾಳೆ. ಅವಳು ಅದನ್ನು ಹೇಳುವಾಗ ನೀವು ಹುಸಿ ನಕ್ಕರೂ ತಪ್ಪಿಲ್ಲ. ಯಾಕೆಂದರೇ ನನ್ನ ಮನೆಯ ಸುತ್ತಾ ಮುತ್ತಾ ನಾಲ್ಕಾರು ಹುಣಸೆ ಮರಗಳನ್ನು ಬಿಟ್ಟರೇ ದೂರ ಒಂದು ಮೈಲಿನವರೆಗೂ ಬಯಲಾಗಿದೆ. ಈಗ ಮತ್ತೆ ಅದೇ ಸ್ಥಳಕ್ಕೇ ಮರಗಿಡಗಳನ್ನು ನೆಟ್ಟು ಹಸಿರು ತರೆಬೇಕೆಂದರೇ, ಅದು ಸಾಧ್ಯವಾದೀತೆ? ಗಿಡ ನೆಡಬೇಕೆಂಬುದು ಮೆಚ್ಚಲೇ ಬೇಕಾದ ವಿಷಯ ಅದರಲ್ಲಿ ಮತ್ತೊಂದು ಮಾತಿಲ್ಲ. ನೆಡುವುದೆಲ್ಲಿ? ಸಾರ್ವಜನಿಕ ಸ್ಥಳಗಳಲ್ಲಿ ನೆಡಲಿ ಎಂದರೇ, ಮುಗಿದೇ ಹೋಯಿತು, ಹುಚ್ಚಿ ಮದುವೆಯಲ್ಲಿ ಉಂಡೋನೆ ಜಾಣ ಅನ್ನೋ ತರಹ ಆಗುತ್ತೆ. ಬೆಟ್ಟದ ಮೇಲೆ ಬಿಟ್ಟಿ ಅಂದರೇ ನನ್ನದು ಒಂದು ಪಾರ್ಸಲ್ ಅನ್ನುವ ಜನರೇ ಹೆಚ್ಚಿದ್ದಾರೆ. ಇನ್ನೂ ನಮ್ಮ ರೈತರ ಬಳಿಗೆ ಹೋದರೆಂದರೇ ಮುಗಿದೇ ಹೋಯಿತು, ಗಿಡ ನೆಟ್ಟು ಏನು ಮಾಡೋದು, ಅದರ ಬೇರು ಗದ್ದೆಗೆ ಬಂದರೇ, ಬೆಳೆ ಬರುವುದಿಲ್ಲವೆನ್ನುತ್ತಾರೆ. ಆದರೂ ನಮ್ಮ ಕೆಲವು ಶಿಕ್ಷಕರು, ಆಗ್ಗಾಗ್ಗೆ ಕೆಲವು ಸಸಿಗಳನ್ನು ಅಲ್ಲಿ ಇಲ್ಲಿ ನೆಡುತ್ತಾರೆ, ಆದರೆ, ಅವುಗಳಿಗೆ ನೀರು ಹಾಕುವವರು ಗತಿಯಿಲ್ಲದೆ ಶಿಶುಹತ್ಯೆಯೆಂತಾಗುತ್ತದೆ.


ಕೆಲವು ಇಲಾಖೆಗಳಲ್ಲಿ, ಅಷ್ಟೇ ಯಾಕೆ ಇತ್ತೀಚೆಗಂತೂ ಗ್ರಾಮ ಪಂಚಾಯಿತಿಗಳಿಗೂ ಸಾಮಾಜಿಕ ಅರಣ್ಯಕರಣವೆಂಬುದನ್ನು ತಂದಿದ್ದಾರೆ. ನುಂಗಲು ನೀರು ಸದಾ ದೊರೆತಂತಾಯಿತು. ನಾನು ಮೊನ್ನೆ ಊರಿಗೆ ಬಂದಾಗ ಏನಪ್ಪಾ ಸಮಾಚಾರವೆಂದು ನನ್ನ ಸ್ನೇಹಿತನೊಬ್ಬನನ್ನು ಮಾತನಾಡಿಸಿದೆ. ಅವನ ತಾಯಿ ಗ್ರಾಮ ಪಂಚಾಯಿತಿ ಸದಸ್ಯೆ, ಅವರೆಂದು ಬಾಯಿ ತುಂಬಾ ಮಾತನಾಡಿದ್ದು ಕಂಡಿಲ್ಲ, ಇನ್ನು ಅಧಿಕಾರವೇನು ಮಾಡಿಯಾರು? ಅದಕ್ಕಾಗಿ ಅವರ ಪುತ್ರರತ್ನ ಅಧಿಕಾರ ನಡೆಸುತ್ತಿದ್ದಾನೆ. ಇದು ಅಂಥವಾ ವಿಶೇಷ ಸಂಗತಿಯೇನಲ್ಲ ಬಿಡಿ. ಬಲಗೈಯ್ಯಿನಲ್ಲಿ ತಿಂದರೇನು ಎಡಗೈಯ್ಯಿಯಲ್ಲಿ ತಿಂದರೇನು ಹೊಟ್ಟೆ ತುಂಬಬೇಕಷ್ಟೆ, ಅಲ್ಲವೇ. ಹೆಣ್ಣು, ಅಲ್ಪಸಂಖ್ಯಾತರು, ದುರ್ಬಲವರ್ಗದವರು,ಅವ್ಯವಸ್ಥಿತ ವರ್ಗದವರು, ಹಿಂದುಳಿದ ಜಾತಿಯವರು ಇವರೆಲ್ಲರನ್ನು ಮೇಲಕ್ಕೆ ತರಬೇಕೆಂದು ಮಹಾನ್ ಚೇತನಗಳು ಮೇಲಕ್ಕೆ ಹೋದವು. ಆದರೇ ಮೇಲಕ್ಕೆ ಬರಲು ಮನಸ್ಸಿಲ್ಲದೇ ನನ್ನಂತ ಅವಿವೇಕಿಗಳು ಅಲ್ಲೇ ಉಳಿದವು. ಹಾಗೇ, ನೋಡಿ, ಹೆಸರಿಗೆ ಹೆಂಗಸು ಅಧಿಕಾರದಲ್ಲಿರುತ್ತಾಳೆ, ಅಧಿಕಾರ ನಡೆಸುವುದೆಲ್ಲವೂ ಗಂಡನೇ. ನಮ್ಮೂರಲ್ಲಿ ನಾನು ಕಂಡಂತೆ, ಜವರೇಗೌಡರ ಹೆಂಡತಿ ಎನ್ನುತ್ತಾರೆ ಹೊರತು ಇನ್ನೂ ಅವರನ್ನು ಗ್ರಾಮ ಪಂಚಾಯಿತಿ ಸದಸ್ಯೆ ಎನ್ನುವುದನ್ನು ಒಪ್ಪಿಲ್ಲ. ಅದೂ ಹಾಳು ಬೀಳಲಿ ಎಂದರೇ, ಇದುವರೆಗೂ ಗ್ರಾಮ ಪಂಚಾಯಿತಿಯಿಂದ ನಮಗೆ ಬರುವ ಯೋಜನೆಗಳ ಬಗ್ಗೆ ಸಾಮಾನ್ಯ ಜನತೆಗೆ ತಿಳಿದಿಲ್ಲ. ಅವರಿಗೆ ಬೇಡದಿದ್ದರೂ ಆಯ್ಕೆಯಾದ ಸದಸ್ಯೆರಿಗೆ ತಿಳಿದಿಲ್ಲ. ಇದರ ಕುರಿತು ಸಂಕ್ಷಿಪ್ತವಾಗಿ ಹೇಳುತ್ತೇನೆ ಕೇಳಿ. ನಾನು ಕಾಲೇಜಿಗೆ ಬಂದ ಶುರುವಿನಲ್ಲಿ, ನಮ್ಮೂರಿನಲ್ಲಿ ಚುನಾವಣೆ ನಡೆದಿತ್ತು, ಆ ಬಾರಿ ಇದ್ದ ಮೂರು ಸೀಟುಗಳಲ್ಲಿ, ಎರಡು ಮೀಸಲಾಗಿದ್ದು, ಒಂದು ಸಾಮಾನ್ಯ ವರ್ಗಕ್ಕೆ ಸೇರಿತ್ತು. ಮಡಿವಾಳ ಜನಾಂಗದವರೊಬ್ಬರು ಆಯ್ಕೆಯಾಗಿದ್ದರು, ಆಯ್ಕೆ ಎನ್ನುವುದಕ್ಕಿಂತ ತಂದು ಕುರಿಸಿದ್ದರು. ಅದು ಹೇಗೆ ಈ ಸರ್ಕಾರ ಮೀಸಲಾತಿ ಕೋಡುತ್ತದೆಂಬುದು ನನಗೆ ಅರ್ಥವಾಗಿಲ್ಲ. ಮಡಿವಾಳ ಜನಾಂಗದವರು ಇದ್ದದ್ದು ಮೂರು ಮನೆಗಳು, ಅದರಲ್ಲಿ ಎರಡೂ ಪಾರ್ಟಿಗಳು ಒಬ್ಬೊಬ್ಬರ ಮನೆಯವರನ್ನು ಅಂಕಣಕ್ಕೆ ಇಳಿಸಿದರು. ಅಣ್ಣತಮ್ಮಂದಿರಾದ ಎರಡು ಮನೆಯವರನ್ನು ಚುನಾವಣೆಯ ನೆಪದಲ್ಲಿ ವೈರಿಗಳಾದರು. ಇಂದಿಗೂ ಅವೆರಡು ಮನೆಯವರು ಮಾತನಾಡುತ್ತಿಲ್ಲ. ಇನ್ನೊಂದು ವರ್ಗಕ್ಕೆ ಹೋದ ಸೀಟೂ ಅದೇ ತೆರನದ್ದು. ಅವರಲ್ಲಿಯೂ ಕೇವಲ ಏಳೆಂಟು ಮನೆಗಳಿದ್ದು ಅವರನ್ನು ಒಡೆದು ಆಳಿದರು. ಇದನ್ನು ನೆನೆದರೆ, ನನಗೆ ಈ ಚುನಾವಣೆಯೆಂಬುದು ನೆಮ್ಮದಿಯಾಗಿದ್ದವರನ್ನು ಗಬ್ಬೆಬ್ಬಿಸಲು ಬರುವ ಒಂದು ಸೈರಾನು ಎನಿಸುತ್ತದೆ. ಹೀಗೆ ಒಮ್ಮೆ ಬಂದು ಹೋದರು ಕಿವಿಯಲ್ಲಿ ಅದರ ಕೂಗು ಇದ್ದೇ ಇರುತ್ತದೆ.


ಗೆದ್ದ ಮಹಿಳೆ ಮತ್ತು ಗಂಡಸು ಇಬ್ಬರೂ ಕಾರ್ಮಿಕವರ್ಗದವರಾಗಿದ್ದರು. ಅವರು ನಮ್ಮ ಮನೆಯ ತೋಟಕ್ಕೆ ಕೆಲಸಕ್ಕೆ ಬರುತ್ತಿದ್ದರು. ನಾನು ಆ ವೇಳೆಗೆ, ಪಟ್ಟಣಗಳಲ್ಲಿ, ಚುನಾಯಿತ ಅಭ್ಯರ್ಥಿಗಳ ದರ್ಪಗಳನ್ನು ನೋಡಿದ್ದರಿಂದ ಅವರನ್ನು ಕೇಳುತ್ತಿದ್ದೆ. ಅಣ್ಣ ನೀವು ಈಗ ರಾಜಕಾರಣಿಗಳು ನೀವು ಇನ್ನೂ ಕೆಲಸಕ್ಕೆ ಬರಬೇಕಾ? ಅಕ್ಕಾ ನೀವು ಅಲ್ಲಿ ಪಂಚಾಯಿತಿಗೆ ಹೋದಾಗ ಭಾಷಣ ಮಾಡುತ್ತೀರಾ ಎಂದು. ಆಗ ಈಗಿನಷ್ಟು ಕೆಟ್ಟಬುದ್ದಿ ಇಲ್ಲದೇ ಇದ್ದದ್ದರಿಂದ ಈ ಹೆಂಗಸಿಗೆ ಏನು ಗೊತ್ತಿಲ್ಲ ಇವರೆನ್ನೆಲ್ಲಾ ಹೇಗೆ ಗೆಲ್ಲಿಸಿದರೋ ಎನ್ನುತ್ತಿದ್ದೆ. ಈಗ ಅಲ್ಪಸ್ವಲ್ಪ ಅರ್ಥವಾಗುತ್ತಿದೆ. ಹೆಂಗಸಾಗಲೀ ಗಂಡಸಾಗಲೀ ಅಲ್ಲಿ ಗೆದ್ದದ್ದು ಹಿಂದಿನಿಂದಲೂ ಆಳುತ್ತಿರುವ ಒಂದು ವರ್ಗವಷ್ಟೆ. ನಾಮಾಕಾವಸ್ಥೆಗೆ ಇವರನ್ನು ನಿಲ್ಲಿಸಿ ಗೆಲ್ಲಿಸಿದರೂ ಅದರಿಂದ ಇವರ ಅಧಿಕಾರ ಸ್ಥಾಪನೆಯಾಗಲಿಲ್ಲ. ಅದರ ಬದಲು ವಂಚಕರ ಹಾವಳಿ ಮುಂದುವರೆಯಿತು. ಇದು ಎಲ್ಲ ವರ್ಗದಲ್ಲಿಯೂ ಇದೆ, ಸುಮ್ಮನೆ ಒಬ್ಬನನ್ನು ನಿಲ್ಲಿಸಿ ಗೆಲ್ಲಿಸಿ ಅವನಿಂದ ಕೆಲಸ ಮಾಡಿಸಿಕೊಳ್ಳೂವುದು. ಬಡವನಾದವನು ಬಡವನಾಗೇ ಇರಬೇಕು, ತುಳಿಯುವವನು ತುಳೀಯುತ್ತಲೇ ಇರಬೇಕು. ತಿರುಗಿ ಬೀಳುವ ಮನಸ್ಸು ತುಳಿಸಿಕೊಳ್ಳುವ ದಡ್ಡಶಿಖಾಮನಿಗಳಿಗೆ ಬರಲೇ ಇಲ್ಲ. ಅಯ್ಯೊ ನಿಮ್ಮ ಕೈಯಲ್ಲಿ ಅಧಿಕಾರವಿದೆಯೆಂದರೇ, ಅವೆಲ್ಲಾ ನಮಗೇಕೆ, ನಮ್ಮ ಚುನಾವಣೆಗೆ ನಿಲ್ಲಿಸಿ ಹಣ ಸುರಿದು ಗೆಲ್ಲಿಸಿದವರು ಅವರು ನಮ್ಮ ಮುಖನೋಡಿ ಯಾರು ವೋಟು ಹಾಕುತ್ತಿದ್ದರೆಂದು ನನಗೆ ಮರುಪ್ರಶ್ನೆ ಹಾಕಿದರು. ಇದು ಸರಿಯೇ ಅಲ್ಲವೇ, ನಾನು ನನ್ನನ್ನೇ ಬಹಳ ಸಲ ಪ್ರಶ್ನಿಸಿ, ಈಗ ಅದೆಲ್ಲಾವೂ ಸಾಮಾನ್ಯವೆನಿಸಿ ಸುಮ್ಮನಾಗಿಬಿಟ್ಟಿದ್ದೆನೆ. ಅದೂ ಸರಿನೇ ಅಲ್ವಾ ನಾವು ವೋಟ್ ಹಾಕೋ ಎಷ್ಟೋ ಜನ ನಮಗೆ ಗೊತ್ತೇ ಇರಲ್ಲ, ಅವರ ಬಗ್ಗೆ ನಮ್ಮ ಪತ್ರಕರ್ತರೂ ಬರೆಯುವುದು ಅಷ್ಟಕಷ್ಟೆ, ಅದು ಬರೆದರೂ ಓದುವವರೂ ಬೇಕಲ್ಲ.


ನಾನು ಪಿ.ಯು.ಸಿ.ಗೆ ಬಂದಾಗ, ಆ ವಯಸ್ಸಿನಲ್ಲೇ ಅನಿಸುತ್ತೆ, ನಾವು ಬಹಳ ನೇರ ನಡೆ ನುಡಿಗಳನ್ನು ಎಂದು ಮುಂಚಿಡದೇ ವ್ಯಕ್ತಪಡಿಸೋದು. ಒಮ್ಮೆ ಬಸ್ಸಿನಲ್ಲಿ ಕಂಡಕ್ಟರ್ ಟಿಕೆಟ್ ಕೊಡದೇ ಇದ್ದು, ಒಬ್ಬ ಹೆಂಗಸು ಚೆಕಿಂಗ್ ನವರು ಬಂದಾಗ ನಾನು ದುಡ್ಡು ಕೊಟ್ಟರೂ ಇವನೇ ಕೊಡಲಿಲ್ಲವೆಂದಳು. ಆ ಹೆಂಗಸಿನ ರೂಪ ವೇಷ ನೋಡಿದ ಯಾರೂ ತಾನೇ, ಇವಳ ಬಳಿಯಲ್ಲಿ ದುಡ್ಡಿಲ್ಲವೆನ್ನುತ್ತಿದ್ದರಲ್ಲದೇ ಟಿಕೇಟ್ ತೆಗೆದುಕೊಂಡೇಯಿಲ್ಲವೆಂಬುದನ್ನು ನಂಬುತ್ತಿದ್ದರು. ವೇಷ ಭೂಷಣಗಳೇ ತಾನೇ, ನಮ್ಮ ಸಮಾಜದ ಅಂಗ. ಒಳ್ಳೆಯ ಬಟ್ಟೆ ಹಾಕಿ ಮೆರೆಯುವವರೆಲ್ಲಾ ಸತ್ಯವಂತರು, ನೀತಿವಂತರು. ಸಾಧಾರಣ ಬಟ್ಟೆ ತೊಡುವವರೆಲ್ಲರೂ ಮೋಸಗಾರರು. ನಾನು ಆ ಹೆಂಗಸು ದುಡ್ಡು ಕೊಟ್ಟರೂ ಕಂಡಕ್ಟರ್ ಟಿಕೆಟ್ ಕೊಟ್ಟಿಲ್ಲವೆಂದರೇ ನನ್ನನ್ನು ತಿನ್ನುವ ಹಾಗೇ ಇಡೀ ಬಸ್ ಪ್ರಯಾಣಿಕರೇ ನೋಡಿದರು. ನನ್ನ ಸ್ನೇಹಿತರಂತೂ ನನ್ನನ್ನೆ ದಬಾಯಿಸತೊಡಗಿದರು. ನಿನಗ್ಯಾಕೆ ಬೇಕೋ ಊರ ಉಸಾಬಾರಿ, ನಾಳೆ ದಿನ ಕಂಡಕ್ಟರ್ ನಿಮ್ಮೂರಿನ ಬಳಿ ಬಸ್ ನಿಲ್ಲಿಸದೇ ಹೋದಾಗ ಗೊತ್ತಾಗುತ್ತದೆ ಎಂದರು. ಅದೂ ಸರಿಯೇ, ನನ್ನೂರಿನ ಬಳಿಯಲ್ಲಿ ಯಾವುದೇ, ವೇಗದೂತ ಬಸ್ ಗಳು ನಿಲ್ಲಿಸುತ್ತಿರಲಿಲ್ಲ, ನಾನು ಕೊಣನೂರಿಗೆ ಹೋಗಿ ಅಲ್ಲಿಂದ ನಾಲ್ಕು ಕಿಲೋಮೀಟರು ದೂರ ನಡೆದು ಬರಬೇಕಿತ್ತು. ಒಮ್ಮೊಮ್ಮೆ ಪರಿಚಯಸ್ಥ ಕಂಡಕ್ಟರ್ ಗಳು ನಿಲ್ಲಿಸಿ ಸಹಾಯ ಮಾಡುತ್ತಿದ್ದರು. ನಡೆಯುವುದೆಂದರೇ, ನಿಮ್ಮೂರಿನ ಟ್ರಾಫಿಕ್ ರಸ್ತೆಗಳಂತೇನೂ ಇರಲಿಲ್ಲ, ನದಿ ದಂಡೆಯ ಮೇಲೆ ಒಂದು ಸಣ್ಣದಾರಿಯಿತ್ತು, ಅದು ಆ ಕಾಲಕ್ಕೆ ಕೆಟ್ಟ ಸ್ಥಳವಾಗಿತ್ತು. ಆದರೇ, ನಾನೆಂದು ಆ ರಸ್ತೆಯಲ್ಲಿ ನಡೆಯುವುದನ್ನು ದ್ವೇಷಿಸಲಿಲ್ಲ, ಅದಕ್ಕೆ ಎರಡು ಮುಖ್ಯಕಾರಣಗಳು, ಒಂದು ನನ್ನಂತೆಯೇ ನಾನು ಆಡಿಕೊಂಡು ಬರಬಹುದು,ಅಲ್ಲಿ ಓಡಾಡುವ ಜನರೇ ಇರುತ್ತಿರಲಿಲ್ಲ. ಮುಖ್ಯ ರಸ್ತೆಯಲ್ಲಿ ನಡೆದು ಬಂದರೇ ಮುಗಿದೇ ಹೋಯಿತು ಹತ್ತಾರು ಜನರು ಹತ್ತಾರು ಜನರೂ ಹಲವಾರು ಪ್ರಶ್ನೆಗಳನ್ನು ಕೇಳುತ್ತಿದ್ದರು. ಮನೆಯಲ್ಲಿನ ಅಪ್ಪ ಅಮ್ಮನಿಂದ ಹಿಡಿದು ನಮ್ಮ ಕಾಲೇಜಿನ ವಿಷಯದವರೆಗೂ ವಿಚಾರಿಸುತ್ತಿದ್ದರು. ಇನ್ನೊಂದು ವಿಷಯವೆಂದರೇ ನದಿದಂಡೆಯಲ್ಲಿ ಸಂಜೆ ಹೊತ್ತಿನಲ್ಲಿ ನಡೆಯುವ ಸೊಗಸೇ ಬೇರೆ ಅದನ್ನು ನಾನು ವಿವರಿಸಿದರೂ ಅನುಭವಕ್ಕೆ ಬರುವುದಿಲ್ಲ ಅದನ್ನು ಅನುಭವಿಸಿಯೇ ತೀರಬೇಕು.


ಹೀಗೆ ಶುರುವಾದ ಸಮಾಜದ ಬಗ್ಗೆ ಅನುಚಿತ ಗೊಂದಲ ಇಂದಿಗೂ ಮುಂದುವರೆದಿದೆ. ಸುಮ್ಮನೆ ಇರಲಾರದೇ ಏನಾದರೂ ಮಾಡಿ ನಮ್ಮ ಸಮಾಜದಲ್ಲಿನ ತೊಡುಕುಗಳನ್ನು ತೊಡೆದುಹಾಕಬೇಕೆಂದು ಹೊರಟು, ಅನ್ಯರ ಚಿಂತೆ ನಿನಗೇಕೆ ನಿನ್ನದೇ ಬೆಟ್ಟದಂತಿರುವಾಗ! ಎನಿಸಿಕೊಂಡು ಬರುತ್ತೇನೆ. ಇದು, ನನ್ನ ಕಾಲೇಜಿನ ಸಮಯದಲ್ಲಿ, ಭಾಗವಹಿಸಿದ್ದ, ಕೆಲವು ಕಾಲೇಜು ಬಂದ್ ಗಳಲ್ಲಿರಬಹುದು, ಜ್ನಾನಭಾರತಿಯಲ್ಲಿರುವಾಗ ಪ್ರೋಫೆಸರ್ ಗಳ ವಿರುದ್ದ, ಹಾಸ್ಟೆಲ್ ವಾರ್ಡನ್ ವಿರುದ್ದ, ಕೆಲಸ ಮಾಡುವ ಜಾಗದಲ್ಲಿ ನಮ್ಮ ಹಿರಿಯ ಅಧಿಕಾರಿಗಳೊಡನೆಯಿರಬಹುದು, ಹೀಗೆ ಕಂಡಕಂಡಲ್ಲಿ, ನುಗ್ಗಿ ನಿಮ್ಮ ಬದುಕು ನೀವು ನೋಡಿ ಸ್ವಾಮಿ ಎನಿಸಿಕೊಂಡಂತವು ಸಾವಿರಾರು ಸಿಕ್ಕವು.ಇವುಗಳನ್ನೆಲ್ಲಾ ಮಾಡಿ ನಾನು ದೊಡ್ಡ ಬುದ್ದಿವಂತ ತೋರಿಸಲೂ ಹೋಗಿಲ್ಲ. ಸುಮ್ಮನೆ ನನ್ನ ಪಾಡಿಗಿದ್ದರೂ ನನ್ನನ್ನು ಅದರ ಸುಳಿಗೆ ಸಿಕ್ಕಿಸಿದವರನ್ನು ನನ್ನ ಆತ್ಮೀಯ ಮಿತ್ರರೆನ್ನಬಹುದು. ಸಾವಿರಾರು ರೂಪಾಯಿಗಳು ನನ್ನಂಥಹ ಅವಿವೇಕಿಯ ಜೇಬಿನಿಂದ ಖಾಲಿಯಾಗಿದೆ. ಅದಕ್ಕಾಗಿಯೇ ನಾವು ಏನೇ ಮಾಡಲೂ ಸಾಧ್ಯವಾದರೇ, ನಮ್ಮ ಕೈಲಾದದ್ದು ಮಾಡಬೇಕು ಇಲ್ಲವೇ ಸುಮ್ಮನೆ ತೆಪ್ಪಗಿರಬೇಕೆಂದು ಕಲಿತಿದ್ದೇನೆ. ಅದಕ್ಕಾಗಿಯೇ, ನಾನು ಯಾರಾದರೂ ಸಭೆ ಸಮಾರಂಭವೆಂದರೇ ಇರಿಸುಮುರಿಸಾಗುತ್ತದೆ. ಆದರೂ ಕೆಲವೊಮ್ಮೆ ಈ ನಗರವಾಸಿಗಳ ಸಹವಾಸವೇ ಬೇಡ ನನ್ನ ಪಾಡಿಗೆ ನಾನು ಒಂದು ಊರಿನಲ್ಲಿ ಒಂದಿಷ್ಟೂ ಮನೆ ಮಠ ಅಂತಾ ಮಾಡಿಕೊಂಡು ಇರಬೇಕೆನಿಸಿ ಅವರ ಮುಂದೆ ಹೇಳಿದರೆ ಹೋಹೋ ಮರಳಿ ಮಣ್ಣಿಗೆ ಎನ್ನುತ್ತಾರೆ, ಇಲ್ಲವೇ ತೇಜಸ್ವಿ ಅವರ ರೀತಿ ಆಗಬೇಕಾ? ಇಲ್ಲಂದರೇ ಇನ್ನೂ ಒಂದು ಹೆಜ್ಜೆ ಮುಂದುವರೆದು ಇಷ್ಟೆಲ್ಲಾ ಮಾಡಿದ್ದು ವ್ಯರ್ಥ ಎನಿಸುವುದಿಲ್ಲವೇ ಎನ್ನುತ್ತಾರೆ ಇಷ್ಟೆಲ್ಲಾ ಎಂದರೇ ಏನು ಎಂದು ತಿಳಿಯದೇ ಮರಳಿ ಮಣ್ಣಿಗೇಯೋ! ನಿಸರ್ಗದ ಸೆಳೆತಕ್ಕೊ ಮತ್ಯಾವುದಕ್ಕೋ ಗೊತ್ತಿಲ್ಲವೆಂದು ಮರಳಿ ನನ್ನ ನಿತ್ಯದ ಕಾರ್ಯಚಟುವಟಿಕೆಗೆ ತಿರುಗುತ್ತೇನೆ.

04 ಜೂನ್ 2009


ಪರಿಸರ ವಿಜ್ನಾನಿಯ ಗೊಂದಲಮಯ ಮನಸ್ಸಿನೊಳಗೆ ಪರಿಸರ ಸೇವೆಯ ದೊಬ್ಬರಾಟ!
ನನ್ನ ಹಿಂದಿನ ಬರವಣಿಗೆ ನನಗೆ ಅಷ್ಟು ಸಮಧಾನ ಕೊಡಲಿಲ್ಲವೆಂದು ಇದನ್ನು ಮುಂದುವರೆಸುತಿದ್ದೇನೆ. ದಯವಿಟ್ಟು ಇವನ ಕಥೆ ಇನ್ನು ಮುಗಿಯಲಿಲ್ಲವೇ ಎಂಬ ಕೊರಗನ್ನು ಕ್ಷಣಿಕ ಮಾತ್ರಕ್ಕೆ ಮುಂದೂಡಿ ಇದೊಂದನ್ನು ಓದಿ ನಿಮ್ಮ ಅನಿಸಿಕೆ ತಿಳಿಸಲೇಬೇಕು. ಮೊದಲನೆಯದಾಗಿ, ಪರಿಸರ ಸಂರಕ್ಷಣೆ ಅಥವಾ ಪರಿಸರ ಆಚರಣೆಯ ವಿಷಯ. ಪ್ರಪಂಚದ ಶೇ.೮೦ರಷ್ಟು ಸಂಪನ್ಮೂಲಗಳನ್ನು ಶೇ.೨೦ರಷ್ಟು ಮಂದಿ ಮಾತ್ರ ಬಳಸಲಾಗುತ್ತಿದ್ದು, ಶೇ.೨೦ ರಷ್ಟು ಸಂಪನ್ಮೂಲವನ್ನು ಇನ್ನುಳಿದ ೮೦ಶೇ. ಮಂದಿ ಉಪಯೊಗಿಸುತ್ತಿದ್ದಾರೆ. ಇದು ಜಾಗತೀಕ ಮಟ್ಟದಲ್ಲಿಯೂ ಹೌದು. ಸ್ಥಳಿಯಮಟ್ಟದಲ್ಲಿಯೂ ಹೌದು. ಉದಾಹರಣೆಗೆ. ಹಳ್ಳಿಗಳಲ್ಲಿ, ನಾಲ್ಕೈದು ಜನ ೨೦-೨೫ ಎಕರೆ ಜಮೀನು ಹೊಂದಿದ್ದು, ಇನ್ನುಳಿದ ಸಾವಿರಾರು ಜನ ಅರ್ಧ ಎಕರೆಯಿಂದ ಒಂದು ಎಕರೆಯ ಮಿತಿಯಲ್ಲಿರುತ್ತಾರೆ. ಇದು ನಮ್ಮ ಆಫೀಸುಗಳಲ್ಲಿಯೂ ಸರಿಯೇ! ನಾಲ್ಕು ಜನ ಮ್ಯಾನೇಜರ್ ಪಡೆಯುವ ಸಂಭಳ ನಲ್ವತ್ತು ಜನ ಡಿ-ದರ್ಜೆಯವರಿಗೆ ಸಮನಾಗಿರುತ್ತದೆ. ಈ ತಾರತಮ್ಯ ಎಲ್ಲಕಡೆಯೂ ಇದ್ದೇ ಇದೆ.ಇಂದಿನ ಪರಿಸರದ ಕಥೆಯೂ ಅಷ್ಟೇ, ಮೊದಲಿನಿಂದಲೂ ಶಕ್ತಿಯಿದ್ದವರು ಬಾಚಿ ನೀರುಕುಡಿದು ಈಗ ಎಲ್ಲರ ಮೇಲೂ ಅದರ ಹೊಣೆಗಾರಿಕೆಯೆಂದರೇ ಅದನ್ನು ನಾವು ಒಪ್ಪಲೇಬೇಕೆನ್ನುವುದು ಯಾವ ನ್ಯಾಯ! ಇದುವರೆಗೂ ಮರಮುಟ್ಟುಗಳಿಂದ ಅದ್ದೂರಿ ಮನೆಕಟ್ಟಿ ಮೆರೆದವರೂ ಇನ್ನು ಮುಂದೆ ಮನೆಕಟ್ಟುವವರು ಸರಳಮನೆಯಲ್ಲಿರಿ ಎನ್ನುವುದು, ಸೊಸೆಗೆ ಬುದ್ದಿ ಹೇಳಿ ಅತ್ತೆ ಅಗಸನ ಜೊತೆ ಮಲಗುತ್ತಿದ್ದಳಂತೆ. ಬುದ್ದಿ ಹೇಳುವ ತಲೆಗಳಿಗೆ ನಮ್ಮಲ್ಲಿ ಕೊರತೆ ಏನುವಿಲ್ಲವಲ್ಲ.ನಾಲ್ಕು ಮಂದಿಯ ಮುಂದೆ ನಾಲ್ಕು ಸಂಸ್ಕೃತ ಶ್ಲೋಕ, ಅಥವಾ ಇಂಗ್ಲೀಷ್ ನಲ್ಲಿ ಸ್ವಲ್ಪ ವೇಗವಾಗಿ ಮಾತನಾಡಿದರೇ ಮುಗಿದೇ ಹೋಯಿತಲ್ಲ. ಮುಂದೆ ನಿಂತಿರುವ ಕುರಿ ತಾನಾಗಿಯೇ ಶರಣಾಗುತ್ತದೆ. ಹಾಗೆ ಮಾಡಿಯೇ ತಾನೇ, ಹಟ್ಟಿ ಗೊಬ್ಬರ ಬದಿಗೊತ್ತಿ, ರಾಸಾಯನಿಕ ಗೊಬ್ಬರ ಮೆರೆಸಿ ಭೂಮಿಯನ್ನು ಹಿಂಡಿ ಅದರಲ್ಲಿದ್ದ ಸತ್ವವನ್ನೆಲ್ಲಾ ಮುಗಿಸಿದ್ದು. ದನಗಳಿಗೆ ಮೇವು ಇಲ್ಲದೇ ಹಾದಿ ಬೀದಿಯಲ್ಲಿ ಪ್ಲಾಸ್ಟಿಕ್, ಪೇಪರ್ ತಿನ್ನುವ ಮಟ್ಟಕ್ಕೆ ಬಂದದ್ದು. ಸಾರ್ವಜನಿಕ ಸ್ಥಳಗಳನ್ನೆಲ್ಲಾ ನುಂಗಿ ನೀರುಕುಡಿದ ಮೇಲೆ ಈಗ ರೈತರ ಬಳಿಗೆ ಹೋಗಿ, ತಾವು ಗಿಡ ಬೆಳೆಸಿದರೇ ಒಳ್ಳೆಯ ಆದಾಯವಿದೆ ಎಂದು ಅವನನ್ನು ಪ್ರೊತ್ಸಾಹಿಸಿದರು.ನಮ್ಮ ದೇಶದ ಆಡಳಿತ ಹೇಗಿದೆಯೆಂದರೇ, ನನ್ನ ಜಮೀನಿನಲ್ಲಿರುವ ಮರ ಕಡಿಯಲು ನಾನು ಹೋಗಿ ಅರಣ್ಯ ಇಲಾಖೆಯಿಂದ ಪರಿಮಿತಿಪಡೆಯಬೇಕು, ಅದಕ್ಕೆ ಅವನಿಗೆ ಲಂಚಕೊಡಬೇಕು.ಇಂಥಹ ವಾತವರಣವಿರುವಾಗ ರೈತನಿಗೇನು ತೆವಳಿದೆಯೇ ಮರ ಬೆಳೆದು ತನ್ನ ಮನೆಗೆ ಬೆಂಕಿ ಹಂಚಿಕೊಳ್ಳುವುದಕ್ಕೆ?

ಮೊದಲಿನಿಂದಲೂ ನಾನು ಹಳ್ಳಿಯಲ್ಲಿ ಕಂಡಂತೆ, ಬಡವರು, ಭೂಮಿಯಿಲ್ಲದವರು ತರಗು,ಪುರಳೆಗಳಿಂದ ಅಡುಗೆ ಮಾಡಿದ್ದಾರೆ ಹೊರತು ಮರ ಕಡಿದು ಅಡುಗೆ ಮಾಡಿದವರಿಲ್ಲ.ಹಾಗೆ ಮರ ಕಡಿದು ಹಾಕಿದವರೆಲ್ಲಾ ಉತ್ತಮವಾಗಿದ್ದವರಷ್ಟೆ. ಸಮಾನತೆಯೆಂಬುದು ನಮ್ಮ ಬಾಯಿ ಚಪಲಕ್ಕೆ ಹೇಳುವ ಮಾತಿದು. ನನ್ನೂರಿನಂತ ಚಿಕ್ಕ ಹಳ್ಳಿಯಲ್ಲಿಯೂ ಅಷ್ಟೇ, ಹಬ್ಬ ಹರಿದಿನಗಳಿಗೆ ಚಂದಾ ವಸೂಲಿ ಮಾಡುವಾಗ ಎಲ್ಲರೂ ಸಮನಾಗಿ ಹಣ ಕೊಡಬೇಕೆಂದು ಎತ್ತುತ್ತಾರೆ. ಅದೇ ಆಡಳಿತ, ಅಧಿಕಾರ ಬಂದಾಗ, ನೀರು, ಜಮೀನು ಹೀಗೆ ಏನೇ ವಿಷಯ ಬಂದಾಗಲೂ ಹೇ ನಿಮಗೇನಪ್ಪ ಸುಮ್ಮನಿರಿ,ಇರೋನಾಲ್ಕು ಗದ್ದೆ ಇಟ್ಟಿಕೊಂಡು ಹೇಳೋಕೆ ಬರಬೇಡಿ, ನಾವಿಲ್ಲವೇ ಒಂದು ತೀರ್ಮಾನ ಮಾಡುತ್ತೆವೆ, ಎನ್ನುತ್ತಾರೆ. ಅದೂ ಹಾಳು ಬಿದ್ದು ಹೋಗಲಿ, ನೀರು ಬಳಕೆದಾರರ ಸಂಘ ಅನ್ನೋದೊಂದು ಮಾಡಿಕೊಂಡೀರುತ್ತಾರೆ, ಸ್ಥಳೀಯ ರಾಜಕೀಯ ಪುಡಾರಿಗಳದ್ದೇ ರಾಜ್ಯಭಾರ. ನನ್ನಂಥ ಕಡಿಮೆ ಜಮೀನಿರುವವನು ಮಾತನಾಡುವ ಹಾಗೆಯೇ ಇಲ್ಲ. ಕಂದಾಯ, ದಂಡ, ಇಂಥವುಗಳು ಬಂದಾಗ ದಬಾಯಿಸುವುದು ನನ್ನಂತವನನ್ನು. ವಿಚಿತ್ರವೆಂದರೇ, ಕಡಿಮೆ ಜಮೀನಿರುವ ರೈತನಿಗೆ ಯಾವ ಮರ್ಯಾದೆಯೂ ಇಲ್ಲ, ಸರ್ಕಾರದ ಸವಲತ್ತುಗಳನ್ನು ವಿಚಾರಿಸಲೂ ಹೋದರೇ,ಅವೆಲ್ಲಾ ನಿಮಗೆ ಇಲ್ಲ ಬಿಡಿ. ಹನಿ ನೀರಾವರಿಗೆ ಯೋಗ್ಯನಲ್ಲ, ಹೊಸ ಬೋರ್ ತೆಗೆಸಲು ಅರ್ಹನಲ್ಲ. ಕಂದಾಯ ಕಟ್ಟಲು ಕಡ್ಡಾಯ. ರೈತನ ಬೆನ್ನೆಲುಬನ್ನು ಮುರಿದು ರೈತ ದೇಶದ ಬೆನ್ನೆಲುಬು ಎಂದು ಹೇಳುತ್ತಾರೆ. ನಾನು ಕತ್ತೆತ್ತಿ ಮೇಲೆ ನೋಡಲು ಆಗದು, ಬಗ್ಗಿಸಿ ದುಡಿಯಲೂ ಬಾರದು. ಯಾರೋ,ಎಂದೋ ಮಾಡಿದ ನೀತಿಗಳನ್ನೆ ಇನ್ನು ಪಾಲಿಸಬೇಕೆ? ಪರಿಸರ ಸಂರಕ್ಷಣೆಯ ಹೊಣೆಯನ್ನು ಬಡವರ ಮೇಲೆ ಹೇರುವುದು ಎಷ್ಟು ಸರಿ? ಎಲ್ಲರಿಗೂ ಒಂದೇ ನ್ಯಾಯ ನೀತಿ ಬೇಕೆನಿಸುವುದು ಸರಿ, ಆದರೇ, ಮಲಗುವಾಗ ಮಾತ್ರ ನೀನು ನನ್ನ ಅರ್ಧಾಂಗಿ ಮಿಕ್ಕಿದ್ದೆಲ್ಲಾ ನಿನಗೆ ತಿಳಿಯದು ಸುಮ್ಮನಿರು ಎನ್ನುವ ನಮ್ಮ ಅನೇಕ ಪುರುಷ ರತ್ನಗಳಂತೆ ನಮ್ಮ ಸರ್ಕಾರ. ಇದರಂತೇಯೇ, ಮಾಲಿನ್ಯ ನಿಯಂತ್ರನದ ವಿಷಯ ಬಂದಾಗಲೂ ಅಷ್ಟೇ, ಸಾಮನ್ಯ ಜನತೆ ಸಾರ್ವಜನಿಕ ವಾಹನಗಳನ್ನು ನಂಬಿ ಓಡಾಡಲು ಸಿದ್ದನಿರುವಿರುವಾಗ, ಪರಿಸರದ ಬಗ್ಗೆ ಬೊಬ್ಬೆ ಹೊಡೆಯುವ ವಿಜ್ನಾನಿಗಳು, ಮಹಾನ್ ಮೇಧಾವಿಗಳು, ಬಿತ್ತಿ ಚಿತ್ರಕ್ಕೆ ಮುಖ ತೋರಿಸುವ ನಮ್ಮ ಸಿನೆಮಾ ನಟ ನಟಿಯರೂ, ವರ್ಷಕ್ಕೆ ಒಂದು ದಿನವಾದರೂ ತಮ್ಮ ವಾಹನಗಳನ್ನು ಬಿಟ್ಟು ಸಾರ್ವಜನಿಕ ವಾಹನ ಉಪಯೋಗಿಸಬಾರದೇಕೆ ? ನಾನು ಇವುಗಳೆನ್ನೆಲ್ಲಾ ಕಮ್ಮ್ಯುನಿಸ್ಟ್ ಆಗಿ ಕೇಳುತ್ತಿಲ್ಲ. ಮೂರ್ಖರಾಗಿರುವ ನನ್ನಂತವರನ್ನು ಇನ್ನೂ ಮುಟ್ಠಾಳರಾಗಿಸುವುದೇಕೆನ್ನುವುದೇ ನನ್ನ ಪ್ರಶ್ನೆ ಆದರೂ ನನ್ನಂತಹ ಕುರಿಗಳು ಇದನ್ನು ಪ್ರಶ್ನಿಸುವ ಎದೆಗಾರಿಕೆಯನ್ನು ತಂದುಕೊಳ್ಳಲಿಲ್ಲ. ತೆರಿಗೆ ವಸೂಲಿ ಮಾಡುವ ಸರ್ಕಾರ ಮರಳಿ ರೈತನಿಗೆ ಕೊಟ್ಟಿರುವುದೇನು? ರೈತನನ್ನು ತಮ್ಮ ವೋಟ್ ಬ್ಯಾಂಕ್ ಗಾಗಿ ಉಳಿಸಿಕೊಂಡವರು, ಅವರನ್ನು ಹೆದರಿಸಿ ಉಳಿಸಿಕೊಂಡಿರುವ ಅಧಿಕಾರಿಶಾಯಿ, ಅದಕ್ಕೆ ಪ್ರೋತ್ಸಾಹ ಕೊಡುವ ನಮ್ಮ ವಿದ್ಯಾವಂತರು. ವಿದ್ಯಾವಂತರಂತ ನಯವಂಚಕರು ಬೇರಿಲ್ಲ. ಲಂಚಗೋರತನವನ್ನು ದಿನ ದಿನಕ್ಕೇ ಏರಿಸಿ, ಸಾಮಾನ್ಯರೂ ಲಂಚವೆಂಬುದು ನಮ್ಮ ಜೀವನದ ಒಂದು ಅಂಗವೆನ್ನುವಂತಾಗಿದೆ. ನಾನು ಕಂಡಂತೆ ವಾಸ ಸ್ಥಳ ದೃಢೀಕರಣ ಪತ್ರ ಬರೆಸಿಕೊಳ್ಳಲೂ ೧೦ರೂಪಾಯಿ ಲಂಚಕೊಡಬೇಕಾಗಿದೆಯೆಂದರೇ ಯೋಚಿಸಿ, ಅದಕ್ಕಿಂತ ಸೋಜಿಗವೆಂದರೇ, ನನ್ನೂರಿನ ಜನರೂ ಕೂಡ ತಪ್ಪು ಎನ್ನುವುದಿಲ್ಲ. ಲಂಚ ಕೊಟ್ಟಿಲ್ಲ ಅಂದರೇ ಧರ್ಮಕ್ಕೆ ಬರೆದುಕೊಟ್ಟಾನೇ? ಎನ್ನುತ್ತಾರೆ.


ಮೇಲೆ ಮೇಲೆ ಮಡಿವಂತಿಕೆಯ ಸೋಗನ್ನು ಹೊದ್ದಿಕೊಂಡು, ನಮ್ಮತನವನ್ನು ಬೇರೆಯವರಿಗೆ ಮಾರಿಕೊಂಡು ಬದುಕುತ್ತಿರುವ ನಮ್ಮ ವಿದ್ಯಾವಂತ ಬಳಗವಂತೂ ಮಾತೆತ್ತೆದರೇ ದೊಡ್ಡ ವ್ಯಕ್ತಿಗಳ ಶ್ಲೋಕಗಳನ್ನು ಉದುರಿಸುತ್ತಾರೆ ಹೊರತು ವಾಸ್ತವಕ್ಕೆ ಇಳಿಯುವುದಿಲ್ಲ. ಯಾವ ರಿಪೋರ್ಟ್ ಓದಲೀ, ಒಂದು ಸಂಸ್ಕೃತ ಶ್ಲೋಕ, ಇಲ್ಲವೇ ಮಹಾನ್ ವ್ಯಕ್ತಿಗಳು ಹೇಳಿದ್ದ ಮಾತುಗಳು. ಅಲ್ಲಿಗೆ ಮುಗಿದೇ ಹೋಯಿತು. ನೀರು,ಗಾಳಿ, ಪರಿಸರ ಮುಖ್ಯವೆಂಬುದು ನಮ್ಮುರಿನ ಅವಿದ್ಯಾವಂತ ಸಮೂಹಕ್ಕೂ ತಿಳಿದಿದೆ. ಅದನ್ನು ಹೇಳಲು ನಾವು, ಇಷ್ಟೇಲ್ಲಾ ವ್ಯಾಯಾಮ ಮಾಡಬೇಕೆ? ಅವರಿಗೆ ತಿಳಿಯದ ಹೊಸ ವಿಷಯಗಳನ್ನು ಅವರಿಗೆ ತಲುಪಿಸಬಾರದೇಕೆ? ಅವರ ಬದುಕನ್ನು ಸೊಗಸಾಗಿಕೊಳ್ಳುವ ಮಾರ್ಗಗಳನ್ನು ಅವರಿಗೆ ತಲುಪಿಸಬಾರದೇಕೆ? ಮರ ನೆಡಿ ಮಳೆ ಬರುತ್ತದೆಂದರೇ, ಹೋಗಯ್ಯಾ ಮಳೆ ಏನು ನನ್ನ ಒಬ್ಬನ ಮನೆ ನೇರಕ್ಕೇ ಬರುತ್ತಾ ಬಂದರೇ ಎಲ್ಲರಿಗೂ ಬಂದೀತು, ಇಲ್ಲದಿದ್ದರೇ ಯಾರಿಗೂ ಇಲ್ಲವೆನ್ನುತ್ತಾನೆ. ಬೊಕ್ಕಸದಲ್ಲಿನ ಹಣ ವ್ಯಯಿಸುವುದೇ ನಮ್ಮ ಕೆಲಸವೆಂದು ಮಾಡಹೊರಟರೇ ಏನಾದಿತು ಹೇಳಿ. ಸ್ವಲ್ಪ ದಿನಗಳ ಹಿಂದೆ ಶಿವಮೊಗ್ಗೆಯ ಒಂದು ಕಚೇರಿಗೆ ಹೋಗಿದ್ದೆ, ಮಾತನಾಡುತ್ತ ಅಲ್ಲಿದ್ದ ನಾಲ್ಕು ಖಾಲಿ ಕುರ್ಚಿ, ಮತ್ತು ಮೇಜುಗಳ ಬಗ್ಗೆ ವಿಚಾರಿಸಿದೆ. ಅವರೆಂದರು, ಯಾವುದೋ ಒಂದು ಗ್ರಾಂಟ್ ಬಂದಿತ್ತು ಉಪಯೋಗಿಸಬೇಕಿತ್ತು, ಇಲ್ಲದಿದ್ದಲಿ ಅದು ವ್ಯರ್ಥವಾಗುತ್ತಿತ್ತು ಅದಕ್ಕೆ ಇರಲಿ ಅಂತಾ ಇದನ್ನು ತೆಗೆದುಕೊಂಡಿದ್ದೇವೆ. ಇಂಥಹ ಘಟನೆಗಳು ಬಹಳ ಕಡೆ ಕಂಡಿದ್ದೇನೆ. ಸಂಶೋಧನೆಯ ನೆಪದಲ್ಲಿ, ಫ್ಯಾಮಿಲಿ ಟೂರ್ ಹೋಗಿ ಬಂದವರು, ದೇಶ ಸುತ್ತಾಡುವವರು, ಮನೆಗೆ ಕ್ಯಾಮೆರಾ, ಕಂಪ್ಯೂಟರ್ ತೆಗೆದುಕೊಂಡವರು ಎಲ್ಲರೂ ಸಿಗುತ್ತಾರೆ. ಆದರೇ, ಅವರು ಮಾಡಿದ ಸಂಶೊಧನೆಯನ್ನು ತನ್ನ ಸ್ಥಳೀಯ ಭಾಷೆಯಲ್ಲಿ ಬರೆದು ತನ್ನೂರಿನ ಜನರಿಗೆ ಕೊಟ್ಟವರು ಒಬ್ಬರೂ ಸಿಗುವುದಿಲ್ಲ. ತಾನು ಮಾಡುತ್ತಿರುವುದು ಮಹಾನ್ ಕೆಲಸವೆಂದು ತೋರಿಸಬೇಕು. ಅರ್ಥವಾಗದಂತೆ ಬರೆದಾಗ ಮಾತ್ರ ನಮ್ಮ ಜನ ಏನೂ ಬರಿತಾನೆ ರೀ ಅವನು, ಸಾಮಾನ್ಯ ಜನಕ್ಕೆ ಅರ್ಥನೇ ಆಗಲ್ಲ, ತುಂಬಾ ಸಂಯಮ ಬೇಕು ಅರ್ಥ ಮಾಡಿಕೊಳ್ಳೊಕೆ. ಮೂರ್ಖತನಕ್ಕೆ ಇದಕ್ಕಿಂತ ಉದಾಹರಣೆ ಬೇಕೆ? ಸಂಕ್ಷಿಪ್ತವಾಗಿ ಹೇಳುವುದಕ್ಕೆ ಬಾರದವನು ಬುದ್ದಿವಂತನೇ? ಊರಿನಲ್ಲಿ ಸರಿಯಾಗಿ ಹೇಳಲಿಲ್ಲವೆಂದರೇ, ಅಯ್ಯೊ ಮುಟ್ಠಾಳ ಅದೇನು ಬೊಗಳುತ್ತೀಯೋ ಅದನ್ನ ಅರ್ಥ ಆಗೋ ರೀತಿ ಒದರು ಎನ್ನುತ್ತಾರೆ.


ಜಾಗತೀಕ ವಿಷಯದ ಬಗ್ಗೆ ನಮ್ಮ ದಿಗ್ಗಜರು ಮಾತನಾಡುವಾಗ, ನನಗೆ ಜಪಾನಿನಲ್ಲಿ ಸಹಿ ಹಾಕಿದ ಕ್ಯೋಟೋ ಪ್ರೋಟೋಕಾಲ್ ಗೆ ಅಮೇರಿಕಾ ಸಹಿ ಹಾಕಲಿಲ್ಲ. ಎಲ್ಲ ದೇಶಗಳಿಗಿಂತ ಹೆಚ್ಚು ಪರಿಸರ ಮಾಲಿನ್ಯ ಮಾಡುತ್ತಿದ್ದರೂ ಅದರ ನಿಯಂತ್ರಣಕ್ಕೆ ಸಹಕರಿಸಲು ಸಹಿ ಹಾಕುವುದಿಲ್ಲವೆಂದರೇ, ಏನೇನೂ ಮಾಡದೇ, ಇದ್ದರೂ ಅದರ ಬಗ್ಗೆ ಕೂಗಾಡುವ ನಮ್ಮ ಜನತೆಯ ಬಗ್ಗೆ ಮೆಚ್ಚಲೇಬೇಕು.ಕ್ಯೂಟೋ ಪ್ರೋಟೋಕಾಲ್ ಪ್ರಕಾರ, ಯಾವುದೇ ಸಂಸ್ಥೆಗಳು ಮರಬೆಳೆಸಿ, ಇಂಗಾಲವನ್ನು ತಗ್ಗಿಸಲು ಸಹಕರಿಸಿದರೆ ಅವರಿಗೆ ಹಣಬರುತ್ತದೆ.ಅಂದರೇ, ಒಂದು ಮರದಿಂದ ಎಷ್ಟು ಇಂಗಾಲವನ್ನು ನಿಗ್ರಹಿಸಲು ಸಾಧ್ಯವಾಗುತ್ತದೆಂಬ ಲೆಕ್ಕಾಚಾರದ ಮೇಲೆ, ಹಣ ಕೊಡಲಾಗುತ್ತದೆ. ನಮ್ಮ ಬಯಲು ಸೀಮೆಯಲ್ಲಿ ದಟ್ಟನೆಯ ಮರಗಳನ್ನು ಬೆಳೆಸಿ ಇದರ ಉಪಯೋಗವನ್ನು ಪಡೆಯಬಹುದು. ಆದರೇ, ಇದನ್ನು ಕೇವಲ ಕಂಪನಿಗಳಿಗೆ ಮೀಸಲಾಗದೇ, ಎಲ್ಲ ರೈತಾಪಿ ವರ್ಗದವರಿಗೂ ಸಿಗುವಂತೆ ಮಾಡಲು ಪ್ರಯತ್ನಿಸುವುದಿಲ್ಲ. ವಾಸ್ತವಿಕವಾಗಿ ರೈತಾಪಿ ವರ್ಗ ಮುಂದುವರೆಯುವುದು ಯಾರೊಬ್ಬರಿಗೂ ಬೇಕಿಲ್ಲ. ಕಾಯಿಲೆ ವಾಸಿಯಾದರೇ ವೈದ್ಯನಿಗೇನೂ ಕೆಲಸ? ಸಾಮಾಜಿಕ ಸಮಸ್ಯೆಗಳು ಮಾಯವಾದರೇ ಸಮಾಜ ಕಾರ್ಯಕರ್ತರಿಗೆಲ್ಲಿಯ ಕೆಲಸ. ಅದಕ್ಕೆ ಅವುಗಳನ್ನು ಮತ್ತಷ್ಟು ಹೆಚ್ಚಿಸುತ್ತಾರೆ. ಪರಿಹಾರ ಹುಡುಕುವುದಕಿಂತ ಹೆಚ್ಚಿಸುವುದರಲ್ಲಿಯೇ ಅವರಿಗೆ ಆಸಕ್ತಿ. ನಾವು ಮಾತನಾಡುವ ಪರಿಸರ ಸ್ನೇಹಿ ವಸ್ತುಗಳು ಅಷ್ಟೇ, ತೊಂಬತ್ತರ ಕೊನೆಯವರೆಗೂ ನನ್ನ ಮನೆಯಲ್ಲಿಯೂ ಬಿದಿರು ಕುಕ್ಕೆಗಳು, ಮಣ್ಣಿನ ಮಡಿಕೆಗಳು, ಇದ್ದಲು ಒಲೆಗಳಿದ್ದವು. ಆದ್ದರಿಂದೂ, ಸಂಪೂರ್ಣ ಪ್ಲಾಸ್ಟಿಕ್ ಮಯವಾಗಿದೆ. ನೀವು, ಬರೀ ಪರಿಸರದ ಬಗ್ಗೆ ಚಿಂತಿಸುವುದಾದರೇ, ಅದರಿಂದ ಬದುಕುತ್ತಿದ್ದ ಒಂದು ವರ್ಗವೇ ನಾಶವಾಯಿತ್ತಲ್ಲ. ಮತ್ತೊಂದು ನೈಜ ಘಟನೆಯೊಂದನ್ನು ತಮಗೆ ಇಲ್ಲಿ ಪ್ರಸ್ತುತಪಡಿಸುವುದು ನನ್ನ ಕರ್ತವ್ಯವೆನಿಸುತ್ತದೆ. ಅರಕಲಗೂಡು ತಾಲೂಕು, ಮುತ್ತುಗದ ಎಲೆಗಳಿಗೆ ಒಂದು ಕಾಲದಲ್ಲಿ ಬಹಳ ಪ್ರಸಿದ್ದಿ ಪಡೆದಿತ್ತು. ಬೇಸಿಗೆಯ ಮೂರು ತಿಂಗಳುಗಳು, ಸಾವಿರಾರು ಕುಟುಂಬಗಳಿಗೆ ಉದ್ಯೋಗ ಒದಗಿಸುತ್ತಿತ್ತು. ಒಬ್ಬೊಬ್ಬನೂ ಹತ್ತು ವರ್ಷದ ಹಿಂದೆಯೇ, ದಿನಕ್ಕೇ ಮುನ್ನೂರು ರೂಗಳವರೆಗೆ ಸಂಪಾದಿಸುತ್ತಿದ್ದನೆಂದರೇ, ಅಲ್ಲಿದ್ದ ಮುತ್ತುಗದ ಮರಗಳೆಷ್ಟೆಂಬುದು ನಿಮಗೆ ತಿಳಿಯುತ್ತದೆ. ಇದರಿಂದ ಹಲವಾರು ಉಪಯೋಗಗಳಿದ್ದವು, ಒಂದು ಹಲವಾರು ಸಂಸಾರಗಳನ್ನು ತೂಗುತ್ತಿದ್ದವು, ಪರಿಸರಸ್ನೇಹಿ ವಸ್ತುಗಳಾಗಿದ್ದವು, ಪರಿಸರದಲ್ಲಿನ ಇಂಗಾಲವನ್ನು ಇಂಗಿಸಲು ಸಹಾಯಮಾಡುತ್ತಿದ್ದವು, ಜೊತೆಗೆ ಔಷಧೀಯ ಗುಣಗಳಿದ್ದವು. ಇದನ್ನು ಬಹಿಷ್ಕಾರ ಹಾಕಿದ್ದು ನಮ್ಮ ಸಮಾಜವೋ ಅಥವಾ ಅವುಗಳೇ ನಮ್ಮಿಂದ ದೂರಾದವೋ? ಅದು ತಿಳಿಯದ ಮಾತು. ಯಾವುದೇ, ಒಂದು ವಿಷಯವನ್ನು ಕೇವಲ ಒಂದು ದೃಷ್ಟಿಯಿಂದ ನೋಡಿದರೇ ಏನು ಸಿಗಲಾರದೆಂಬುದನ್ನು ಮನವರಿಕೆ ಮಾಡಿಕೊಳ್ಳುವುದಕ್ಕೆ ಹೇಳಿದೆ.

ಒಂದು ವಸ್ತುವಿನಿಂದ ಹಲವಾರು ಬಗೆಯ ಅನುಕೂಲತೆಗಳನ್ನು ನಮ್ಮ ಹಿಂದಿನವರೂ ಬಳಕೆಗೆ ತಂದಿದ್ದರು, ಅದಕ್ಕೆ ಹೊಸ ಹೆಸರನ್ನು ಇಟ್ಟುಕೊಂಡು ಹುಡುಕಹೊರಟಿರುವವರು ನಾವುಗಳಷ್ಟೇ! ಸಮಗ್ರ ಅಭಿವೃದ್ದಿ, ಐಕ್ಯತೆ, ಇವೆಲ್ಲಾ ನಮ್ಮ ಪೂರ್ವಜರು ಎಂದೋ, ಜೀವನದಲ್ಲಿ ಅಳವಡಿಸಿಕೊಂಡಿದ್ದವುಗಳು. ಉದಾಹರಣೆಗೆ, ಮನೆ ಮದ್ದುವಿನ ವಿಷಯ, ನಾನು ತಿಳಿದಂತೆ ನನ್ನ ಮನೆಯಲ್ಲಿ, ನಾನು ಇಪ್ಪತ್ತು ವರ್ಷದವನಾಗುವ ತನಕವೂ, ತಲೆ ನೋವು, ಕೆಮ್ಮು, ಜ್ವರ, ಶೀತ, ನೆಗಡಿ ಇವುಗಳಿಗೆ, ಅಂಗಡಿಗೆ ಹೋಗಿ ಮದ್ದು ತಂದವರಲ್ಲವೇ ಅಲ್ಲ. ಅಡುಗೆಮನೆಯಲ್ಲಿನ ಸಾಮಗ್ರಿಗಳೇ ಔಷಧಿಗಳಾಗಿ ಪರಿವರ್ತಿಸುತಿದ್ದೇವು. ಅರಿಶಿನ, ಜೀರಿಗೆ, ಮೆಣಸು, ಶುಂಟಿ,ಇಂಗು, ಅಡುಗೆ ಸೋಡಾ,ನಿಂಬೆಕಾಯಿ, ಆದ್ದರಿಂದೂ ಇವೆಲ್ಲಾ ಮನೆಯಲ್ಲಿ ಇಲ್ಲವೇ? ಇದೆ. ಆದರೇ ಉಪಯೋಗಿಸುವ ಮನಸ್ಸಿಲ್ಲ. ಚೂರು ಸೋಡಾ ಮತ್ತು ನಿಂಬೆ ಹಣ್ಣು ಬೆರೆತರೆ ಸಾಕು, ಆದ್ದರಿಂದೂ ನಮ್ಮ ವಿದ್ಯಾವಂತ ಬಳಗಕ್ಕೆ ಇನೋ ತೆಗೆದುಕೊಂಡು ಅದಕ್ಕೆ ಐದು ರೂಪಾಯಿ ದಂಡ ತೆತ್ತರೇನೆ ಸಮಧಾನ. ನಾನು ಉಪೇಕ್ಷೆಗಾಗಿ ಈ ಮಾತನ್ನು ಹೇಳುತ್ತಿಲ್ಲ, ನನ್ನ ತಾತ ನನಗೆ ಹೇಳುತ್ತಿದ್ದ ಮಾತು, ಸರ್ವರೋಗಕ್ಕೂ ಸರಾಯಿ ಮದ್ದು ಅವರ ನಂಬಿಕೆಯಾಗಿತ್ತು. ನಾನು ಅದನ್ನು ಪ್ರಯತ್ನಿಸಿದ್ದೇನೆ, ಆದರೇ ಅಂತಾ ನಂಬಿಕೆ ನನಗೆ ಬಂದಿದೆಯೆನ್ನುವುದು ಸರಿಯಿಲ್ಲ. ಆದರೂ ಇಂದು ನಗರದ ಹಲವಾರು ಮಂದಿ ಮತ್ತೆ ಆಯುರ್ವೇದತ್ತ, ಗಿಡಮೂಲಿಕೆಯತ್ತಾ ಮನಸ್ಸು ಬದಲಾಯಿಸುತ್ತಿದ್ದಾರೆ. ಇದಕ್ಕೊಂದು ನೈಜ ಉದಹಾರಣೆ, ಹಿಮಾಲಯ ಕಂಪನಿಯ ವಸ್ತುಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಲ್ಲಿರುವುದು. ಇದಕ್ಕೇ ಸ್ವದೇಶಿಯೆನ್ನುವುದೊಂದೆ ಮುಖ್ಯ ಕಾರಣವಲ್ಲದೇ, ಗಿಡಮೂಲಿಕೆಯಿಂದ ಬಂದದ್ದು, ಹಾನಿಕರವಲ್ಲವೆಂಬುದು ಮತ್ತೊಂದು ಮುಖ್ಯವೆನಿಸುತ್ತದೆ. ಅದೇನೆ ಇರಲಿ, ಗಿಡಮೂಲಿಕೆಗಳು, ಅರಣ್ಯ ಸಂಪೂರ್ಣ ನಾಶವಾದ ಮೇಲಾದರೂ ನಾವುಗಳು ಅದರ ಬೇಡಿಕೆ ಹೆಚ್ಚಿಸುತ್ತಿರುವುದು ಹೆಮ್ಮೆಯ ಸಂಗತಿ.

ಇಲ್ಲಿ ಯಾರ ತಪ್ಪು ಯಾರು ಸರಿಯೆಂದು ಹೇಳುತ್ತಿಲ್ಲಾ, ಹಳ್ಳಿಗಳಲ್ಲಿಯೂ ಗದ್ದೆಯ ಬದುಗಳು ಬಹಳ ವಿಶಾಲವಾಗಿದ್ದು, ದನಗಳನ್ನು ಹಿಡಿದು ಅದರ ಮೇಲೆ ಮೇಯಿಸುತ್ತಿದ್ದೇವು, ಬದುಗಳಲ್ಲಿದ್ದ ಮರಗಳು ಮಾಯಾವಾದವು. ನೀವು ಹಳ್ಳಿಗಳಲ್ಲಿನ ಬದುಗಳನ್ನು ಕಂಡರೇ ನಡೆಯಲು ಭಯವಾಗುತ್ತದೆ. ಅಂಥಹ ದುರಾಸೆಗೆ ಬಂದಿದ್ದಾರೆ ನಮ್ಮ ರೈತರು. ವರ್ಷ ವರ್ಷಕ್ಕೆ, ಬದುಗಳ ಗಾತ್ರ ಚಿಕ್ಕದಾಗಿಸುತ್ತಾ ಬಂದಿದ್ದಾರೆ. ಕೆಲವರಂತೋ ಎಕರೆಯಷ್ಟೂ ಜಾಗವನ್ನು ಸಮಮಾಡಿದ್ದಾರೆ. ಅವರು ಹೆಚ್ಚಿಸಿರುವ ಜಾಗವನ್ನು ಲೆಕ್ಕಿಸಿ ನೋಡಿದರೇ, ಆ ಜಾಗದಲ್ಲಿ ವರ್ಷಕ್ಕೆ ೨-೩ಕೆ.ಜಿ. ಬತ್ತ ಸಿಗಬಹುದಷ್ಟೇ. ಅದು ಇದ್ದಿದ್ದರೇ ಆಗುತ್ತಿದ್ದ ಅನುಕೂಲತೆಗಳು ಅಷ್ಟಿಷ್ಟಲ್ಲ. ಆದರೂ ಆಸೆಗೆ, ಕನಸಿಗೆ ಕೊನೆಯುಂಟೆ. ಹಾಗೆ ಹೆಚ್ಚಿಸಿದ ಬತ್ತವೂ ಪೋಲಾಗುವ ರೀತಿ ಇನನ್ನೂ ಕುತುಹಲ. ಗದ್ದೆಯಲ್ಲಿ ಬಿದ್ದ ಬತ್ತದ ಹೆಂಕನ್ನು ಅವರು ಆಯುವುದಿಲ್ಲ, ಕೇಳಿದರೇ, ಅಯ್ಯೊ ಅಷ್ಟೂ ಕರುಬುತನ ಒಳ್ಳೆಯದಲ್ಲವೆಂಬ ಉದಾರಿತನದ ಮಾತನ್ನು ಉದುರಿಸುತ್ತಾರೆ. ಅದಕ್ಕೆ ತಮ್ಮ ಸೋಮಾರಿತನ ಕಾರಣವೆಂಬುದನ್ನು ಒಪ್ಪಲು ಸಿದ್ದವಿಲ್ಲ. ಪರಿಸರ ನಾಶಕ್ಕೆ ದುರಾಸೆಯೇ ಕಾರಣವೆಂಬುದು ಸಮಂಜಸವೆನಿಸಿದರೂ, ಆಡಳಿತ ಮಾಡುವ ಸರ್ಕಾರವೂ ಅಷ್ಟೇ ಕಾರಣ. ಬರೀ ಕಾನೂನಿಂದ, ಹೊಸ ಹೊಸ ಕಾಯಿದೆಗಳಿಂದಲೇ ರಾಜ್ಯವಾಳುವುದೆಂದು ನಂಬಿರುವುದೇ ಇದಕ್ಕೆಲ್ಲ ಬಹು ಮುಖ್ಯಕಾರಣ.ಎಲ್ಲಿಂದ ಎಲ್ಲಿಯ ತನಕ ನೋಡಿ, ಇದಕ್ಕೆ ಕಾಯಿದೆಯಿಲ್ಲ ಅದಕ್ಕೆ ಕಾನೂನಿಲ್ಲ, ಕಾನೂನು ಕಾಯಿದೆಗಳು ಮಾಡಿದರೇ ಬಂತೇ ಭಾಗ್ಯ? ಅದನ್ನು ಕಾರ್ಯರೂಪಕ್ಕೆ ತರುವವರು ಯಾರು? ರೈತರ ಮೇಲೆ ಅದನ್ನು ಹೇರಲು ಬಂದೀತೆ. ವೋಟ್ ಗಿಟ್ಟಿಸಬೇಕಲ್ಲ. ಇದನ್ನು ಕಂಡಿಸಿ ಬರೆಯಲು ಪತ್ರಕರ್ತರಿಗೆ ಬಂದೀತೆ, ಅವರ ಉದ್ಯೋಗೆ ಉಳಿಯಬೇಕಲ್ಲ.


ಎಲ್ಲರೂ ಅಷ್ಟೇ ತೋರಿಕೆಗೆ, ಪ್ರದರ್ಶನಕ್ಕೆ, ಮಾಡಬೇಕು, ಇಲ್ಲವೇ ಒತ್ತಾಯಕ್ಕೆ ಮಾಡಬೇಕು.ನಮ್ಮ ಮೇಲಿನ ಅಧಿಕಾರಿ ಹಿಡಿದು ಕೆಲಸ ಮಾಡುವ ತನಕ ನಾವು ಮಾಡುವವರಲ್ಲವೇ ಅಲ್ಲಾ. ಇದು ನಮ್ಮ ಜೀವನದ ಪ್ರಶ್ನೆ, ನಮ್ಮ ದೇಶದ ಪ್ರಶ್ನೆಯೆಂಬುದಿಲ್ಲ್ವವೇ ಇಲ್ಲ. ಯಾವ ಕಛೇರಿಗೆ ಹೋಗಿ ನೋಡಿದರೂ, ಒಳರಾಜಕೀಯ, ಸುಡುಗಾಡು ಜಾತಿ ಪ್ರೇಮ, ಪ್ರಾಂತೀಯ ಅಭಿಮಾನ. ನೀವು ಹಾಸನದವರಾ ಬನ್ನಿ ನಾನು ಹಾಸನದವನು, ನೀವು ಗೌಡರಾ? ನಾನು ಗೌಡ?ಇವೆಲ್ಲಾ ಹಾಳು ಬಿದ್ದು ಹೋಗಲಿ ಕೊನೆಗೆ ನೀವು ಪರಿಸರ ಪ್ರೇಮಿ ನಾ ನಾನು ಪರಿಸರ ಪ್ರೇಮಿ ಎನ್ನುವಷ್ಟಕ್ಕೆ ಬಂತು.ಬಿನ್ನಾಭಿಪ್ರಾಯಗಳು ಎಷ್ಟೇ ಇರಲಿ, ಕಾರ್ಯದಲ್ಲಿ ಐಕ್ಯತೆ ಇರಬೇಕೆಂಬ ಸಾಮಾನ್ಯ ಜ್ನಾನವಿಲ್ಲದೇ ಹೋಯಿತು. ಹೆಚ್ಚು ವಿದ್ಯಾವಂತರಾದಷ್ಟು ದುರ್ಬಲ ವರ್ಗದವರನ್ನು ಸುಳಿಯುತ್ತಾ ಹೊರಟರು.


ಇತ್ತೀಚಿನ ದಿನಗಳಲ್ಲಿ ಸಿಕ್ಕಿಬಿದ್ದ ಅಮಾಯಕ ವಸ್ತುವೇ ಈ ನಮ್ಮ ಪರಿಸರ, ಇಂದು ಸಣ್ಣ ಪುಟ್ಟ ಶಾಲೆಗಳಿಂದಿಡಿದೂ ರಾತ್ರಿ ಕುಡಿದು ಸೇದಿ ಗಬ್ಬೆಬ್ಬಿಸುವ ನನ್ನಂತವನೂ ಪರಿಸರ ಪ್ರೇಮದ ಬಗ್ಗೆ ಭಾಷಣ ಹೊಡೆಯುತ್ತಾನೆ. ಸರ್ವರಿಗೂ ಸಮಪಾಲು ಎಂದು ಹೊಮ್ಮಿದ ಘೋಷ, ಪರಿಸರ ನಾಶಕ್ಕೆ ಸರ್ವರೂ ಸಮಪಾಲು ಎನ್ನುತ್ತಿದೆ. ನಾವು ಮಾಡಿದ ತಪ್ಪಿಗೆ ನಮ್ಮ ಮೇಲೆ ಹೊರೆ ಹೊರಿಸಿದರೂ ಸರಿಯೇ, ಆದರೇ, ತಿಂಗಳಿಗೊಮ್ಮೆ ಒಂದು ಘಂಟೆಯಾದರೂ ದೀಪ ಆರಿಸಿ ಎಂದು ಹೇಳುವ ರೇಡಿಯೋ ಜಾಕಿ, ವಿಡಿಯೋ ಜಾಕಿಗಳನ್ನು ನೆನೆದಾಗ ನಗು ಬರುತ್ತದೆ. ನಮ್ಮೂರಿನಲ್ಲಿ ವಿದ್ಯುತ್ ಇರುವುದೇ ದಿನದಲ್ಲಿ ಆರು ಗಂಟೆಗಳು, ಇವರು ಹೇಳಿದ ಸಮಯಕ್ಕೆ ವಿದ್ಯುತ್ ಇರುವುದೇ ಇಲ್ಲವಾದ್ದರಿಂದ ನಾನು ದೀಪ ಆರಿಸುವುದೆಲ್ಲಿಗೆ? ಜಾಗತಿಕ ತಾಪಮಾನದ ಬಗ್ಗೆ ಹರಟೆ ಹೊಡೆಯುತ್ತಾರೆ. ನೆಟ್ಟಗೆ ಕನ್ನಡ ಉಚ್ಚಾರಣೆ ಮಾಡಲೂ ಬಾರದ ಇವರು ಕನ್ನಡ ಚಾನೆಲ್ ಗಳಲ್ಲಿ ಕೆಲಸ ಹೇಗೆ ದೊರಕಿಸಿಕೊಂಡರೆಂಬುದು ನನ್ನ ಆಶ್ಚರ್ಯ. ಅದಲ್ಲದೇ, ಅದು ಯಾವಾಗ ಹವಾಮಾನ ವೈಪರೀತ್ಯ ಕುರಿತು ಅಧ್ಯಯನ ಮಾಡಿದ್ದರೆಂಬುದು ನನಗೆ ಎಲ್ಲಿಲ್ಲದ ಆಶ್ಚರ್ಯ. ಮಳೆ ತಡವಾದರೂ, ಮಳೆ ಬಂದರೂ ಮಳೆ ಹೋದರೂ, ಹೆಚಾಗಿ ಬಂದರೂ, ಬಿಸಿಲೇರಿದರೂ, ಎಲ್ಲದ್ದಕ್ಕೂ ಹವಮಾನ ವೈಪರೀತ್ಯವೇ ಕಾರಣವೆಂದು ಬೊಬ್ಬೆ ಹೊಡೆದು ನಾಗರೀಕರನ್ನು ದಾರಿತಪ್ಪಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಅಂದರೇ, ವಾತಾವರಣ ಬದಲಾಗಿಲ್ಲವೇ? ನಮ್ಮ ಅಜ್ಜನ ಕಾಲದಿಂದಲೂ ಈ ಮಾತು ನನ್ನ ಕಿವಿಯಲ್ಲಿದೆ, ನಮ್ಮ ಕಾಲದಲ್ಲಿ ಹೀಗಿರಲಿಲ್ಲ. ಹೌದು ಇಪ್ಪತ್ತು, ನಲ್ವತ್ತು, ವರ್ಷಗಳ ಹಿಂದೆ ಹೀಗಿರಲಿಲ್ಲ. ಬದಲಾಗಿದೆ. ಅದು ಆಗಬಾರದೆಂಬುದು ನಿಮ್ಮ ನಿರೀಕ್ಷೆಯೇ? ವಿಜ್ನಾನ, ತಂತ್ರಜ್ನಾನ ಮುಂದುವರೆದಂತೆ ಎಲ್ಲವೂ ಬದಲಾಗುತ್ತದೆ. ರಸ್ತೆಗಳು ಸುಧಾರನೆಗೆ ಬಂದು, ವಾಹನಗಳು ಹೆಚ್ಚಾಗುವುದು ಹೊಗೆ ಉಗುಳುವುದು ಇವೆಲ್ಲವೂ ಹೆಚ್ಚಾಗುತ್ತದೆ. ಪರಿಸರ ಪ್ರೇಮದ ಬಗ್ಗೆ ಕೂಗಾಡುವವರು, ಕಾರನ್ನು ಬಿಟ್ಟು ನಾಳೆ ಬಿ.ಎಂ.ಟಿ.ಸಿಯಲ್ಲಾ ಓಡಾಡಲೂ ಸಿದ್ದರೇ? ವರ್ಷಕ್ಕೆ ಒಮ್ಮೆ ನಮ್ಮ ಅಧಿಕಾರಿ ಷಾಯಿ ವರ್ಗ, ತಮ್ಮ ವಾಹನಗಳಿಗೆ ರಜೆ ನೀಡಿದರೇ ಎಷ್ಟು ಮಾಲಿನ್ಯ ತಡೆಯಬಹುದು. ಗಂಬೀರವಾಗಿ ಗಮನಿಸಿ ನೋಡಿ, ಪರಿಸರದ ಬಗ್ಗೆ ಬೊಬ್ಬೆ ಹೊಡೆಯುವವರ ಮನೆಯಲ್ಲಿಯೇ ನಾಲ್ಕೈದು ಕಾರುಗಳು, ಅದೂ ಹೆಚ್ಚು ಇಂಧನ ಹೀರುವ ಕಾರುಗಳಿರುತ್ತವೆ. ನನ್ನ ಬಳಿಯಲ್ಲಿ ಕಾರಿಲ್ಲವೆಂಬ ಕೊರಗಿನಿಂದ ಈ ಮಾತನ್ನು ಹೇಳುತ್ತಿಲ್ಲ. ಅಥವಾ ಪರಿಸರದ ಮೇಲಿನ ಪ್ರೇಮದಿಂದಾಗಿ ಕಾರು ಕೊಂಡಿಲ್ಲವೆಂದು ಹೇಳುವುದಿಲ್ಲ.


ಸಮಸ್ಯೆಗೆ ಪರ್ಯಾಯ ಮಾರ್ಗವನ್ನು ಹುಡುಕಬೇಕೆ ಹೊರತು, ಜನ ಸಾಮಾನ್ಯರೆಲ್ಲ, ಸಾರ್ವಜನಿಕ ವಾಹನಗಳನ್ನು ಬಳಸಿ ಎಂದು ಹೇಳುವುದಕ್ಕೆ, ಬರೆಯುವುದಕ್ಕೆ, ಪತ್ರಕರ್ತರಿಗಾಗಲೀ, ರೇಡಿಯೋ, ವೀಡಿಯೋ ಜಾಕಿಗಳಿಗಾಗಲಿ, ಏನೂ ಹಕ್ಕಿಲ್ಲ. ಅವರೆಲ್ಲರೂ ತಮ್ಮ ವೈಯಕ್ತಿಕ ವಾಹನಗಳಲ್ಲಿ ಓಡಾಡುವವರೇ ಹೊರತು ಸಾರ್ವಜನಿಕ ವಾಹನಗಳಲ್ಲಿ ಅಲ್ಲಾ.


ಇನ್ನೂ ಮತ್ತೊಂದು ವಿಷಯವೆಂದರೇ ನೀರಿನ ಬಗ್ಗೆ, ಮುಂದಿನ ಯುದ್ದವೆಂಬುದಿದ್ದರೇ ಅದೂ ಆಗುವುದು ನೀರಿಗಾಗಿ. ಈ ಮಾತನ್ನು ಯಾರು ಹೇಳಿದರೋ ಪುಣ್ಯಾತ್ಮ, ನಮ್ಮ ಕಲಾಂ ಸರ್ ಚೆನ್ನಾಗಿ ನಿರೂಪಣೆಯನ್ನು ಮಾಡಿದ್ದಾರೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಏನು? ನೀರನ್ನು ಕೊಯ್ಯಲು ಮಾಡುವುದು. ಒಮ್ಮೆ ನೀವು ನಾವು ಎಲ್ಲರೂ ವೈಜ್ನಾನಿಕವಾಗಿ, ಮತ್ತು ವೈಕ್ತಿಗತವಾಗಿ ಯೋಚಿಸೋಣ. ಮಳೆಕೊಯ್ಯಲು ಮಾಡಲು ಹಲವಾರು ಮಾರ್ಗಗಳಿವೆ, ಸಂಗ್ರಹಿಸುವುದು, ಅಂತರ್ಜಲ ವೃದ್ದಿಯಾಗಿಸುವುದು. ಇವೆಲ್ಲವೂ ಸಾಮಾನ್ಯ ಜನರನ್ನು ಮರುಳುಗೊಳಿಸುವ ತಂತ್ರ. ಭೂಮಿಯ ಒಳಗೆ ನೀರು ಹರಿಯುತ್ತದೆಂಬುದನ್ನು ನೀವು ಒಪ್ಪಲೇಬೇಕು. ಅಂದರೇ, ನನ್ನ ಜಮೀನಿನಲ್ಲಿ ಬಿದ್ದ ನೀರು ಅಡಿಯಲ್ಲಿ ಹರಿಯುತ್ತಲೇ ಇರುತ್ತದೆ. ಅದು ನನ್ನ ಜಮೀನಿನಲ್ಲಿಯೇ ಉಳಿಯುವುದಿಲ್ಲ. ಇದನ್ನು ಅರಿಯದ ನಮ್ಮ ರೈತರಿಗೆ, ನೀವು ನಿಮ್ಮ ಭೂಮಿಯಲ್ಲಿ ಒಂದೊಂದು ಕಡೆಯಲ್ಲಿಯೂ ಮಳೆನೀರನ್ನು ಭೂಮಿಗೆ ಇಂಗಿಸಿರಿ ಎಂದು ಅವರಿಂದ ಹಣ ಸುರಿಸಿದ್ದು ಉಂಟೂ, ಸರ್ಕಾರದಿಂದ ಜಲಾನಯನ ಅಭಿವೃದ್ದಿಯ ಹೆಸರಿನಲ್ಲಿ ಹಣ ಹರಿದು ಹೋದದ್ದು ಇದೆ. ಅದು ಸರಿಯೋ ತಪ್ಪೋ ನಾನಿಲ್ಲ ಹೇಳುತ್ತಿಲ್ಲ. ಹಲವಾರು ಸಂಶೋಧನೆಗಳು ಇದು ಸರಿಯಿಲ್ಲವೆನ್ನುತ್ತಾರೆ ಕೆಲವರು ಇದು ಸರಿಯೆನ್ನುತ್ತಾರೆ. ಅದರ ಬಗ್ಗೆ ನಾನು ಯಾವುದೇ ಅಧ್ಯಯನ ನಡೆಸಿಲ್ಲವಾದ್ದರಿಂದ ಈ ಮಾತು ಬೇಡವೆನಿಸುತ್ತದೆ.


02 ಜೂನ್ 2009


ತೋರಿಕೆಯ ಬದುಕಿಗೆ ಬುನಾದಿಯಾದ ಪರಿಸರ ಪ್ರೇಮವೆಂಬ ಸೋಗು!



ಬಹಳ ದಿನಗಳಿಂದಲೂ ಭಾವನೆಗಳು, ಸಂಭಂಧಗಳು, ಪ್ರೀತಿ, ಪ್ರೇಮ, ಮೋಸ ಅದು ಇದು ಅಂತಾ ಅದೇ ಗುಂಗಿನಲ್ಲಿ ನನ್ನ ಬರಹವನ್ನು ನಿಮ್ಮನ್ನು ಸುತ್ತಾಡಿಸಿ ಬೇಸರ ಮಾಡಿಸಿದ್ದಕ್ಕಾಗಿ ಇಂದು ಬೇರೆಯ ವಿಷಯದ ಬಗ್ಗೆ ಬರೆಯುವುದಕ್ಕೆ ಕುಳಿತಿದ್ದೇನೆ. ಬೇರೆ ವಿಷಯ ಎಂದ ತಕ್ಷಣ ಗಾಬರಿಪಡುವಂತದ್ದೇನು ಇಲ್ಲ. ಶೀರ್ಷಿಕೆಯಲ್ಲಿಯೇ ಹೇಳಿರುವುದರಿಂದ ನಾನು ಹೇಳಹೊರಟಿರುವುದು ಪರಿಸರಪ್ರೇಮದ ಬಗ್ಗೆ ಎನ್ನುವುದು ನಿಮಗೆ ಮನವರಿಕೆಯಾಗಿದೆ. ಎಲ್ಲಿ ಹೋದರೂ ಈ ಪ್ರೀತಿಯೆಂಬ ಪದ ನನ್ನು ಬಿಡುವುದಿಲ್ಲವೆನಿಸುತ್ತದೆ. ಅದೇನೇ ಇರಲಿ, ಇಲ್ಲಸಲ್ಲದ ವಿಷಯದಲ್ಲಿ ನಿಮ್ಮನ್ನು ಮುಳುಗಿಸುವುದು ಬೇಡ. ನಾನು ಚಿಕ್ಕವನಿದ್ದಾಗ, ಸುಮಾರು ೧೫-೨೦ ವರ್ಷಗಳ ಹಿಂದೆ ನಿಮಗೂ ತಿಳಿದ ಹಾಗೆ ಪರಿಸರದ ಬಗ್ಗೆ, ಮಾಲಿನ್ಯದ ಬಗ್ಗೆ ಬರೆಯುವವರ, ಓದುವವರ ಅಥವಾ ಚರ್ಚಿಸುವವರ ಸಂಖ್ಯೆ ಬಹಳ ಕಡಿಮೆ ಇತ್ತು. ಆದ್ದರಿಂದೂ, ಅದರ ಸಂಖ್ಯೆ ಗಣನೀಯವಾಗಿ ಮೇಲೆರಿದ್ದಲ್ಲದೆ, ಎಲ್ಲಿ ಕಂಡರೂ ಪರಿಸರ ಸ್ನೇಹಿ ಎಂಬ ಪದ ರಾರಾಜಿಸುತ್ತದೆ. ಕೆಲವೊಮ್ಮೆ ನನ್ನನ್ನು ಪ್ರಶ್ನಿಸಿದವರಿದ್ದಾರೆ, ಪರಿಸರ ವಿಜ್ನಾನಿಯಾಗಿ ನೀನು ಸಿಗರೇಟ್ ಸೇದುವುದು ಸರಿನಾ? ಎಂದು. ಇದಕ್ಕೆ ಉತ್ತರ ಕೊಡುವುದಕ್ಕೆ ಹೋದರೆ ಅದು ಸಮರ್ಥನೆಯೆನಿಸುವುದರಿಂದ ನಾನು ನನ್ನ ಸಿಗರೇಟಿನ ಬಗ್ಗೆ ಪ್ರಸ್ತಾಪಿಸುವುದಿಲ್ಲ. ಅದಕ್ಕೂ ಹೆಚ್ಚಾಗಿ ನಾನು ಪರಿಸರ ವಿಜ್ನಾನಿಯಲ್ಲವೆನ್ನುವುದನ್ನು ಹೇಳುವುದಕ್ಕೆ ಇಷ್ಟಪಡುತ್ತೇನೆ. ಪರಿಸರ ವಿಜ್ನಾನ ಓದಿದವ್ರೆಲ್ಲರೂ ಪರಿಸರ ವಿಜ್ನಾನಿಗಳಾಗುತ್ತಾರೆಂಬುದು ನಿಮ್ಮ ನಮ್ಮ ಭ್ರಮೆಯಷ್ಟೆ. ಆ ಪದಕ್ಕೆ ಮಸಿ ಬಲಿಯುವುದಕ್ಕೆಂದು ಹುಟ್ಟಿದವರು ನನ್ನಂಥವರು. ಆದರೂ ಬಿಡಿ, ನಾಲ್ಕು ಜನರು ತಲೆದೂಗುವಂತೆ ಮಾತನಾಡಿದರೇ ಸಾಕು ಎಂಥಹ ಬಿರುದನ್ನು ಕೊಡಲು ನಮ್ಮ ಜನ ಸಿದ್ದರಿರುತ್ತಾರೆ. ಅದು ಎಷ್ಟು ಆರೋಗ್ಯಕರವೆಂಬುದನ್ನು ಚಿಂತಿಸುವುದಿಲ್ಲ. ಅಬ್ಬಾ ಏನು ಹೇಳಿದ್ದಾನೆ ಅಲ್ವಾ? ಈ ಉದ್ವೇಗ ಭರಿತ ನಮ್ಮ ಹಲವಾರು ಪತ್ರಕರ್ತರಲ್ಲೂ ಕಾಣಬಹುದು. ಅಂತರ್ಜಾಲದ ಮುಂದೆ ಅರ್ಧ ತಾಸು ಕಳೆದು ಅರ್ಧಂಭರ್ಧ ಓದಿ, ತಿಳಿದು ತೀಡಿ ಬರೆದು ಹೆಸರು ಗಿಟ್ಟಿಸಿದವರೂ ಇದ್ದಾರೆ. ಪರಿಸರದ ಬಗ್ಗೆ, ವಿಜ್ನಾನದ ಬಗ್ಗೆ ಸೇಡು ತೀರಿಸಲೂ ಬರೆಯುತಾರೇನೋ ಎಂಬಂತೆ ಬರೆದವರೂ ಇದ್ದಾರೆ. ಪರಿಸರವೆಂಬುದು ಕೇವಲ ವೈಜ್ನಾನಿಕ ವಸ್ತುವಲ್ಲ. ಅದೊಂದು ನಮ್ಮ ಜೀವನದ ಮಾರ್ಗ, ಮಾರ್ಗವೆನ್ನುವುದಕ್ಕಿಂತ ಅದೇ ಜೀವನ. ಮಾತುಮಾತಿಗೂ ಪರಿಸರವೆಂಬುದು ಬರುತ್ತಲೇ ಇರುತ್ತದೆ.ಈ ಪರಿಸರ ಸರಿಯಿಲ್ಲ, ಅಲ್ಲಿನ ಪರಿಸರ ಕೊಳಕು, ಅದು ಇದು ಎಂದು. ಅಂದರೇ, ಪರಿಸರವೆನ್ನುವುದು ಒಂದು ವಸ್ತುವಿಗೆ ಮೀಸಲಿಟ್ಟದ್ದಲ್ಲ.ಆದರೇ, ಇಂದು, ಪರಿಸರದಿನವೆಂದು ಒಂದನ್ನು ಆಚರಿಸಿ, ಅದನ್ನು ಸಂಭ್ರಮಕ್ಕೆ ತಂದಿದ್ದೇವೆ. ಅದರ ಅವಶ್ಯಕತೆಯ ಬಗ್ಗೆ ಮಾತನಾಡುವುದಿಲ್ಲ. ನನಗೆ ಆಚರಣೆಯೆಂದರೇ, ಎಲ್ಲಿಲ್ಲದ ಆಸಕ್ತಿ, ಮತ್ತು ಕುತೂಹಲ. ನಾನು ಎಂದಿನಿಂದಲೂ ಊರುಗಳಲ್ಲಿ, ಜಾತ್ರೆ, ಸಂತೆ ಹಬ್ಬ, ನಾಟಕಗಳನ್ನು ಆನಂದಿಸುತ್ತಾ ಬೆಳೆದವನು.ಆದರೇ, ಪರಿಸರವೆನ್ನುವುದು ವೈಜ್ನಾನಿಕ ವಸ್ತುವಲ್ಲವೆಂದ ಮೇಲೆ ನಮ್ಮ ವಿಜ್ನಾನಿಗಳು ಅದನ್ನು ಆಡುಭಾಷೆಯಲ್ಲಿ ಬರೆಯಲು ಎಷ್ಟು ಸಮರ್ಥರು ಎಂಬುದಕ್ಕೆ ಕನ್ನಡದಲ್ಲಿರುವ ಪರಿಸರ ಅಥವಾ ಯಾವುದೇ ವೈಜ್ನಾನಿಕ ಪುಸ್ತಕಗಳೆನ್ನು ಓದಿದರೇ ತಿಳಿಯುತ್ತದೆ. ಅದರಂತೆಯೇ, ದೈನಿಕಗಳಲ್ಲಿ ಬರುವ ವಿಜ್ನಾನದ ವಿಷಗಳನ್ನು ಗಮನಿಸಿ ನೋಡಿ. ಒಂದು ಅಲ್ಲಿ ಅಂತರ್ಜಾಲದಿಂದ ಕದ್ದು ಬರೆದವು, ಇಲ್ಲ ಅರ್ಥವೇ ಆಗದ ವಿಷಯಗಳು.

ಇಂಥಹ ಸನ್ನಿವೇಶದಲ್ಲಿ, ನನ್ನ ಈ ಬರವಣಿಗೆಗಳಿಗೆ ಒಂದು ಪ್ರೋತ್ಸಾಹ ಕೊಟ್ಟವುಗಳೆಂದರೇ, ತೇಜಸ್ವಿ ಮತ್ತು ಕಾರಂತರ ಬರವಣಿಗೆಗಳು. ಪರಿಸರವೆಂಬುದು ನಮ್ಮಿಂದ ಬೇರೆಯಲ್ಲ. ಅದು ನಮ್ಮೊಳಗೆ, ನಮ್ಮೊಂದಿಗೆ ಇರುವುದೆನ್ನುವುದನ್ನು ಅವರ ಬರವಣಿಗೆಗಳಿಂದ ಕಲಿತಿದ್ದೇನೆ. ಅಂತೆಯೇ, ನನ್ನ ವೈಜ್ನಾನಿಕ ಸಂಶೊಧನೆಗಳ ಫಲದಿಂದಾಗಿ ಆದಷ್ಟೂ ಸರಳತೆಯಿಂದ ಇದನ್ನು ಓದುಗರ ಮುಂದೆ ಮಂಡಿಸಲು ಪ್ರಯತ್ನಿಸುತ್ತೇನೆ.ನನ್ನ ಬರವಣಿಗೆ ಯಾವುದೇ ಕಾರಣಕ್ಕೂ ಓದಿಗರಿಗೆ ಇದೊಂದು ಪಠ್ಯವೆನಿಸದೇ, ಇದೊಂದು ಸಾಮಾಜಿಕ ಕಥೆ ಅಥವಾ ಇನ್ನೊಂದು ಕಾದಂಬರಿಯ ರೂಪವೆನಿಸಲೆಂದು ಬಯಸುತ್ತೇನೆ. ನನಗೆ ಏನೇ ಬಯಕೆ ಮೂಡಿದರೂ ಅದನ್ನು ಅನುಭವಿಸಬೇಕಾದವರು ನೀವುಗಳು. ಪರಿಸರವೆಂದರೇ, ಬರೀ ಮರ, ಗಿಡ, ಹಚ್ಚ ಹಸಿರು, ವನರಾಶಿ ಎಂಬ ನಮ್ಮ ಊಹೆಗಳು ಬದಿಗೆ ಸರಿದು ಅದೊಂದು ಬದುಕಿನ ಮುಖವಷ್ಟೆ ಅದು ನಮ್ಮಿಂದ ಬೇರೆಯಾದುದಲ್ಲ. ಅದು ನಮ್ಮೊಳಗೆ ಇರುವ ಆತ್ಮದಂತೆ ಅಥವಾ ನಮ್ಮ ಜೀವನ ನಡೆಸಲು ಅನುವಾಗುವ ಒಂದು ಮಾರ್ಗವೆನಿಸಿದರೆ ಈ ಬರವಣಿಗೆ ಸಾರ್ಥಕ.



ಆದರೂ ಇತ್ತೀಚಿನ ದಿನಗಳಲ್ಲಿ, ಪರಿಸರ ಮಾಲಿನ್ಯ, ಕಲುಷಿತ, ಅರಣ್ಯಗಳ ನಾಶ ಇವೆಲ್ಲವೂ ಹೆಚ್ಚಾಗಿರುವುದು ಸಹಜ. ಇದನ್ನು ಪ್ರಶ್ನಿಸುತ್ತಾ ಹೋದರೇ, ನಗರೀಕರಣ ಬೇಡವೇ? ಇನ್ನು ಕಾಡಿನಲ್ಲಿ ಎಲೆ ಸುತ್ತಿಕೊಂಡು ಬದುಕಲಾದೀತೆ ಎನ್ನುವವರು ಸಿಗುತ್ತಾರೆ. ಅದೂ ಸಹಜವೇ. ಆದರೇ, ನನಗೆ ಇಂದಿಗೂ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗುತ್ತಿಲ್ಲ. ಇದುವರೆಗೂ ಪಟ್ಟಣವಾಸಿಗಳು, ವಾಹನಗಳನ್ನು ಬಳಸುತ್ತಿದ್ದರೂ, ಈಗ, ಹಳ್ಳಿಗಾಡಿನಲ್ಲಿಯೂ, ಟಿವಿ, ಫ್ರಿಡ್ಜ್ ಇರುವದನ್ನು ಬಹಳ ಮಂದಿ ಈಗ ಬಿಡಪ್ಪ, ಭಿಕ್ಷುಕನೂ ಮೊಬೈಲ್ ಹಿಡಿದಿರುತ್ತಾನೆ. ಇದೆಂತಹ ವರಸೆ? ಅವನಿಗೆ ಅದನ್ನು ಪಡೆಯುವ ಹಕ್ಕಿಲ್ಲವೇ? ಅದೇ ರೀತಿ, ಪರಿಸರಪ್ರೇಮದ ಸೋಗು ಎಷ್ಟು ಅತಿರೇಕಕ್ಕೆ ಹೋಗಿದೆಯೆಂದರೇ, ಹಾದಿಯಲ್ಲಿ ಬೀದಿಯಲ್ಲಿಯಲ್ಲೂ, ಪರಿಸರ ಸ್ನೇಹಿ ಬ್ಯಾಗ್ ಗಳನ್ನು ಪರಿಚಯಸತೊಡಗಿದ್ದಾರೆ. ಒಮ್ಮೆ ಆಲೋಚಿಸಿ ನೋಡಿ, ಒಬ್ಬ ಬಡವನ ಮೇಲೆ, ನಿಮ್ಮ ಪರಿಸರ ಸ್ನೇಹಿ, ಬ್ಯಾಗ್ ಗಳ ಬೆಲೆಯೆಷ್ಟು ಅವನು ಸದ್ಯದಲ್ಲಿ ಬಳಸುತ್ತಿರುವ ಬ್ಯಾಗ್ ನ ಬೆಲೆಯೆಷ್ಟು. ಕನಿಷ್ಠ ಇಪ್ಪತ್ತು ಪಟ್ಟು ಹೆಚ್ಚಿರುತ್ತದೆ. ಆಟೋದವನ ಬಳೆಯಲ್ಲಿ, ೨ ರೂಗಳಿಗೆ ಜಗಳವಾಡುವ ನಾವು, ೨ರೂಪಾಯಿ ಇದ್ದರೇ ೪ ಕಿ.ಮೀ, ದೂರ ಬಸ್ಸಿನಲ್ಲಿ ಹೋಗುವ ಅಥವಾ ೨ ರೂಗಳನ್ನು ಖರ್ಚುಮಾಡದೇ ನಡೆದ್ಉ ಹೋಗುವವನ ಮೇಲೆ ಹೇರುವುದು ಎಷ್ಟು ಸರಿ? ಇಂಥಹ ನನ್ನ ಮಾತುಗಳು ನಿಮಗೆ ವಿಚಿತ್ರವೆನಿಸುತ್ತವೆ. ಆದರೇ ನಾವು ಎಲ್ಲರನ್ನೂ ಪರಿಗಣಿಸಬೇಕಾಗುತ್ತದೆ. ಬರೀ ಒಂದೇ ದೃಷ್ಟಿಯಿಂದ ನೋಡುತ್ತಾ ಕುಳಿತರೇ ಅದು ಪ್ರಜಾಪ್ರಭುತ್ವವೆನಿಸುವುದಿಲ್ಲ.

ಪರಿಸರ ದಿನ ಬಂತೆಂತರೆ, ನಾಲ್ಕು ಗಿಡಗಳನ್ನು ನೆಡುವುದು ನಂತರ ಅವುಗಳನ್ನು ಮರೆತು ಕೂಡುವುದು ಇದಷ್ಟಕ್ಕೆ ಸೀಮಿತವಾದುದ್ದಲ್ಲ. ಅದೊಂದು ಜೀವನದ ಅಂಗ.ಅದೊಂದು ನಿರಂತರ ನಡಿಗೆ. ಅದರ ಬಗ್ಗೆ ಜಾಗೃತೆ ಮೂಡಿಸುವುದೆಂದರೇ, ನಾಲ್ಕು ಪತ್ರಿಕೆಗಳಲ್ಲಿ ಪ್ರಕಟಿಸಿ ಮೆರೆಯುವುದಕ್ಕೇ ಸೀಮಿತವಾಗಬಾರದು. ತಲತಲಾಂತರಗಳಿಂದ ಅರಣ್ಯದೊಂದಿಗೆ ಬದುಕಿ ಬಂದ ನಮ್ಮ ಪೂರ್ವಿಕರನ್ನು ಗಮನಿಸಿ ನೋಡಿದಾಗ ತಿಳಿಯುತ್ತದೆ. ಅರಣ್ಯದೊಂದಿಗೆ ನಂಟುತನವಿಟ್ಟು ಬದುಕುತಿದ್ದ ಜನರನ್ನು ಅಲ್ಲಿಂದ ಹೊರದಬ್ಬಿ, ಅಲ್ಲಿಗೆ ಮತ್ತೆ ಅಧ್ಯಯನ ನಡೆಸುವ ಸಲುವಾಗಿ ಅದಕ್ಕೊಂದು ಹೊಸ ಹೆಸರು ಇಕಾಲಜಿ ಎನಿಸಿ ಮೊದಲಿನಿಂದ ಕಲಿಯಲು ಹೊರಟದ್ದು ನಮ್ಮ ಬುದ್ದಿವಂತಿಕೆಯ ಅರಿವನ್ನು ತಿಳಿಸುತ್ತದೆ. ಪರಿಸರ ವಿಜ್ನಾನಿಗಳೆಂದು ಮೆರೆಯುತ್ತಿರುವ ನಮ್ಮ ಸಹದ್ಯೋಗಿಗಳಿಗೆ ನನ್ನ ಮಾತುಗಳು ಸ್ವಲ್ಪ ಇರಿಸು ಮುರಿಸು ಮಾಡಬಹುದು. ಆದರೇ, ನಮ್ಮ ಪೂರಿವಕರಿಗಿಂದ ಪರಿಸರ ಕಾಲಜಿ ನಮ್ಮಲಿಲ್ಲವೆನ್ನುವುದನ್ನು ಒಪ್ಪಿಕೊಳ್ಳಲೇಬೇಕು. ಇದಕ್ಕೊಂದು ಸರಳ ಉದಾಹರಣೆ, ಮನೆ ಮದ್ದು, ಅಥವಾ ಅಜ್ಜಿ ಮದ್ದು ಇಲ್ಲವೇ ಸಾಂಪ್ರದಾಯಿಕ ಔಷಧಿ, ಹೀಗೆಂದರೇನು? ಹತ್ತು ವರ್ಷಗಳ ಹಿಂದೆ ಹಳ್ಳಿಗಳಲ್ಲಿ, ಅನಾಸಿನ್, ವಿಕ್ಸ್ ಅಷ್ಟು ಪ್ರಾಬಲ್ಯವಿರಲಿಲ್ಲ. ಆದಿನಗಳಲ್ಲಿ, ಇದ್ದದ್ದು, ಮೆಣಸಿನ ಕಷಾಯ, ಜೀರಿಗೆ ಕಷಾಯ, ತುಳುಸಿ, ನರ್ವೀಸಾ, ಹೀಗೆ ಹತ್ತು ಹಲವು ಮೂಲಿಕೆಗಳ ಔಷಧಿಗಳು ಸಿದ್ದವಿರುತ್ತಿದ್ದವು. ಆದರಿಂದ, ಅದರ ಬದಲಿಗೆ ಎಲ್ಲವೂ ರಾಸಾಯನಿಕ ಔಷಧಿಗಳು ನುಗ್ಗಿ ಧಾಂಧಳೆ ನಡೆಸಿವೆ. ನೀವು ಯಾವುದೇ ಸಸ್ಯಶಾಸ್ತ್ರ, ಪರಿಸರ ವಿಜ್ನಾನ ವಿಭಾಗಕ್ಕೆ ಹೋಗಿ ನೋಡಿ, ಕನಿಷ್ಟ ವರ್ಷಕ್ಕೆ ೧೦-೧೫ ವಿಧ್ಯಾರ್ಥಿಗಳು ಈ ನಮ್ಮ ಸಂಪ್ರದಾಯಿಕ ಔಷದಿಗಳ ಬಗ್ಗೆ ಅಧ್ಯಯನ ನಡೆಸುತ್ತಿರುತ್ತಾರೆ. ಕಳೆದು ಹೋದದ್ದನ್ನು ಮತ್ತೆ ಹುಡುಕುವುದಷ್ಟೆ. ಯಾವ ಗಿಡ ಎಲ್ಲಿಗೆ ಒಗ್ಗಿತೆಂಬ ಸಾಮನ್ಯ ಜ್ನಾನವೂ ಇಲ್ಲದೇ ಇರುವವರೂ ಪರಿಸರ ದಿನಕ್ಕಾಗಿ ಸಾವಿರ ಸಾವಿರ ಗಿಡಗಳನ್ನು ನೆಡುತ್ತಾರೆ. ನಿಲಗಿರಿ, ಸಿಲ್ವರ್, ಅಕೇಷಿಯಾ, ಹೀಗೆ ಹೊರಗಡೆಯಿಂದ ಬಂದ ತಳಿಗಳು ನಮ್ಮ ಸ್ಥಳಿಯ ತಳಿಗಳನ್ನು ನುಂಗಿರುವುದರ ಬಗ್ಗೆ ಉಸಿರೆತ್ತುವುದಿಲ್ಲ.

ಇಂದು ಎಲ್ಲೆಡೆಯೆಲ್ಲಿಯೂ ಕೇಳಿಬರುತ್ತಿರುವ ಮತ್ತೊಂದು ವಿಷಯವೇ, ಹವಮಾನ ವೈಪರೀತ್ಯ? ಇದು ಎಷ್ಟು ಸತ್ಯ ಎಷ್ಟು ಸುಳ್ಳು ಎನ್ನುವುದು ಜಾಗತಿಕ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದರೂ, ಎಲ್ಲದ್ದಕ್ಕೂ ಶನೀಶ್ವರನೇ ಎನ್ನುವ ಹಾಗೆ, ಎಲ್ಲದ್ದನೂ ಜಾಗತಿಕ ತಾಪಮಾನ ಏರಿಕೆಗೆ ಸಂಭಂಧಕಲ್ಪಿಸಿಕೊಳ್ಳುತ್ತಿದ್ದೇವೆ. ಇದರ ಕುರಿತಂತೆ, ಜಾಗತಿಕ ಮಟ್ಟದ್ದಲ್ಲಿ, ಅದರ ರೂಪುರೇಷೆಗಳು ಕಂಡರೂ, ಸ್ಥಳಿಯ ಮಟ್ಟದಲ್ಲಿ ಅದೂ ತೀರ್ಮಾನವಾಗಿಲ್ಲ, ಇದಕ್ಕೆ ಮುಖ್ಯ ಕಾರಣವೆಂದರೇ ಅದನ್ನು ತಿಳಿಯಲು ಬೇಕಾದ ಸಂಗತಿಗಳು ಸಾರ್ವಜನಿಕರಿಗೆ ದೊರೆಯುವುದಿಲ್ಲ. ಕಳೆದ ನೂರು ವರ್ಷಗಳ ಮಳೆ, ಉಷ್ಣಾಂಶ, ತಾಪಮಾನ ಇತ್ಯಾದಿಗಳು, ಹವಮಾನ ಇಲಾಖೆಯಲ್ಲಿದ್ದರೂ ಅದನ್ನು ಪಡೆಯಬೇಕೆಂದರೆ ಅದು ಬಹಳ ದುಬಾರಿಯಾಗಿರುವುದರಿಂದ, ಎಲ್ಲರೂ ತಮ್ಮ ಊಹೆಗೆ ನಿಲುಕಿದಂತೆ, ಆನೆಯ ಗಾತ್ರವನ್ನು ಬಣ್ಣಿಸಿದ್ದಾರೆ. ನಮ್ಮ ಆಳುವ ದೊರೆಗಳು, ಪರಿಸರವೆಂದರೇ, ಬರಿ ಮರಗಿಡಗಳೆಂದು ನಂಬಿರುವುದರಿಂದ ಅವರು ಅದರಿಂದ ಇನ್ನು ಹೊರಬಂದಿಲ್ಲ. ಮುಂದುವರೆದ ದೇಶಗಳಲ್ಲಿ, ಪರಿಸರದಿಂದಾಗುವ ಪ್ರತಿಯೊಂದು ಉಪಯೋಗಗಳನ್ನು, ಆಮ್ಲಜನಕ, ಇಂಗಾಲವನ್ನು ಹೀರುವುದು, ಹೀಗೆ ಎಲ್ಲವನ್ನು ಗಣನೆಗೆ ತೆಗೆದು ಕೊಂಡಿದ್ದರು ನಮ್ಮಲ್ಲಿ ಅವಕ್ಕೆಲ್ಲಾ ಬೆಲೆಯಿಲ್ಲ.

ಪರಿಸರವೆಂದರೇ, ಕಡಿಮೆ ಬಣ್ಣದ ಬಟ್ಟೆ, ಬ್ಯಾಗ್, ಗಿಡನೆಡುವುದು, ಇಲ್ಲಿಗೆ ನಿಂತಿವೆಯೆ ಹೊರತು. ಆಧುನಿಕವಾಗಿ, ವೈಜ್ನಾನಿಕವಾಗಿ ಮುಂದುವರೆದಿಲ್ಲ. ವಿಜ್ನಾನವೆಂಬುದು ಸಾಮಾನ್ಯ ಜನತೆಗೆ ತಲುಪಿಲ್ಲ. ನೈಸರ್ಗಿಕ ಕೃಷಿ, ಸಾವಯವ ಕೃಷಿ, ನೀರಿನ ಮಿತಬಳಕೆ, ಇಂತವುಗಳು ಇನ್ನು ಅವರಿಂದ ಬಲು ದೂರ ಉಳಿದಿವೆ. ಅವರಿಗೆ ಅದರ ಮೌಲ್ಯಗಳನ್ನು ಅರ್ಥಹಿಸಬೇಕೆ ಹೊರತು, ನೀವು ಇದನ್ನು ಬಿಟ್ಟು ಅದನ್ನು ಮಾಡಿ ಎಂದರೇ ಹೇಗೆ ಮಾಡಿಯಾನು? ನಿಮ್ಮನ್ನು ಹೇಗೆ ನಂಬಿಯಾನು? ಮಳೆ ನೀರು ಕೊಯ್ಯಲು ಹಣ ವ್ಯಯಿಸು ಎಂದರೇ, ಅವನೇಕೆ ಮಾಡಿಯಾನು ಅದರಿಂದ ಅವನಿಗಿರುವ ಲಾಭವನ್ನು ತೋರಿಸಬೇಕಲ್ಲವೇ?

01 ಜೂನ್ 2009




ನಾನು ನನ್ನದೆಂಬುದರಲ್ಲಿ ಕಳೆದು ಹೋಗುತ್ತಿರುವ ನಮ್ಮ ಸುದಿನ


ನಾನು ಎಂದಿನಿಂದಲೋ ಹೇಳುತ್ತಾ ಬಂದಿದ್ದೇನೆ, ನನ್ನದು ಹುಚ್ಚು ಮನಸ್ಸು ಎಂದು. ನನ್ನದು ಮಾತ್ರವಲ್ಲ ಎಲ್ಲರದ್ದೂ ಹುಚ್ಚು ಮನಸ್ಸು ಎನಿಸುತ್ತದೆ. ಇದು ಎಂಥಹ ಅತಿರೇಕಕ್ಕೆ ಹೋಗುತ್ತದೆಂದರೇ ಒಮ್ಮೊಮ್ಮೆ ನಮ್ಮ ಬಗ್ಗೆ ನಮಗೆ ಅಸಹ್ಯ ಹುಟ್ಟಿ ಇನ್ನು ಬದುಕಿ ಮಾಡಬೇಕಿರುವುದೇನು ಎನಿಸುವುದುಂಟು. ಬಹಳ ಸಾರಿ ನಾನು ಯೋಚಿಸಿದಂತೆ ನಮ್ಮ ಜೀವನದಲ್ಲಿ ನಡೆಯುವ ಎಲ್ಲ ಕೆಡುಕುಗಳಿಗೂ ನಾವು ನೇರ ಕಾರಣಿಗಳಲ್ಲ. ಯಾರಿಂದಲೋ ಆದ ನೋವು, ಸಂಕಟ, ಮೋಸ ಹೆಚ್ಚಿರುತ್ತದೆ. ಅದು ಯಾವುದೇ ರೂಪದಲ್ಲಿಯಾಸರೂ ಸರಿ, ಯಾರಿಂದಲಾದರೂ ಸರಿಯೇ. ಬಹಳ ಮಂದಿ ಹೇಳುವಂತೆ ಹೆಚ್ಚಿನ ಜೀವನ ಬರೀ ಹೆಣ್ಣಿಂದಲೇ ಹಾಳಾಗುತ್ತದೇ ಎಂದರೇ ಮಹಿಳಾಮಂಡಳಿಯವರು ನಾಳೆ ನಮ್ಮ ಮನೆ ಮುಂದೆ ಧರಣಿ ಕೂರಬಹುದು.
ಪ್ರೀತಿಯೆಂಬುದು ಅಥವಾ ಪ್ರೇಮ ಅನ್ನೋದು ಏನು? ಅಷ್ಟಕ್ಕೋ ನಾವು ಪ್ರತಿ ಮಾತಿಗೂ ಒಂದು ವರ್ಗವನ್ನೊ ಒಂದು ಗುಂಪನ್ನೋ ಒಂದು ಸಮೂಹವನ್ನೂ ದೂಷಿಸುತ್ತಾ ಬಂದಿರುವುದಾದರೂ ಯಾಕೆ? ನಮ್ಮ ಅಪ್ಪನ ಮಾತಿನಲ್ಲೇ ಹೇಳುವುದಾದರೇ ಈ ಬಾನುಗೊಂದಿ ಕ್ರಿಕೇಟ್ ಅಂತಾ ಓಡಾಡ್ತಾ ಇದ್ದಾರಲ್ಲ ಈ ಬಡ್ಡೀ ಮಕ್ಕಳು ಇವರು ಅಪ್ಪನ ಹೆಸರು ಉಳಿಸಲ್ಲ ಊರ ಮಾನನೂ ಉಳಿಸಲ್ಲ. ಇದು ಇಂದಿಗೆ ಸರಿ ಸುಮಾರು ಹದಿಮೂರು ವರ್ಷದ ಕೆಳಗೆ ಹೇಳಿದ್ದು. ಅವರು ಹೇಳಿದಂತೆ ನಮ್ಮ ಇಡೀ ಟೀಮ್ ಏನೂ ಕಳಪೆಯಾಗಿರಲಿಲ್ಲ, ಅಪ್ಪನ ಮಾತೇ ಸರ್ವಸ್ವವೆಂದು ಬಗೆದು ಅಪ್ಪನ ಮಾತಿಗೆ ತಲೆಬಾಗಿ ನಾಲ್ಕಾರು ವರ್ಷಗಳು ಪ್ರೀತಿ ಪ್ರೇಮ ಅಂತ ಅಲೆದಾಡಿದ ಸ್ನೇಹಿತರೂ ಅವರ ಗೆಳತಿಯರನ್ನು ಮರೆತು ವರದಕ್ಷಿಣೆಗೆಂದು ತಮ್ಮನ್ನು ತಾವು ಮಾರಿಕೊಂಡಿದ್ದಾರೆ. ಆದರೂ ನಮ್ಮಪ್ಪನಂತವರು ತಮ್ಮ ಮಕ್ಕಳ ಯೋಗ್ಯತೆಯನ್ನು ಕಂಡವರ ಮುಂದೆ ಹಾರಾಜು ಹಾಕುವುದನ್ನು ನಿಲ್ಲಿಸಿಲ್ಲ.
ಮೇಲಿನದು ಒಂದು ಸರಳ ಉದಾಹರಣೆಯಷ್ಟೇ! ಅದರಂತೆಯೇ ಒಂದು ವರ್ಗದವರನ್ನೊ ಒಂದು ಊರವರನ್ನೊ, ಒಂದು ರಾಜ್ಯದವರನ್ನೊ ಸಾಮೂಹಿಕವಾಗಿ ಪರಿಗಣಿಸುವುದು ಅಷ್ಟೂ ಸಮಂಜಸವೆನಿಸುವುದಿಲ್ಲ. ಕೇರಳದವರೆಲ್ಲಾ ಹೀಗೆಯೇ, ಅವರೆಂದು ನಂಬಿಕೆಗೆ ಯೋಗ್ಯರಲ್ಲ, ತಮಿಳಿಗರೆಲ್ಲಾ ಹಾಗೇಯೇ ಅವರೆಂದು ಬದಲಾಗುವುದಿಲ್ಲ. ಹೆಂಗಸರೆಲ್ಲಾ ಹೀಗೆಯೇ, ಗಂಡಸರೆಲ್ಲಾ ಹೀಗೆಯೇ! ಹುಡುಗಿಯರ ಬಾಯಿಂದ ಬರುವ ಸಹಜ ಮಾತೊಂದೆಂದರೇ ಈ ಹುಡುಗರೆಲ್ಲಾ ಇಷ್ಟೇ ಎಲ್ಲಿಗೆ ಹೋದರೂ ಅಲ್ಲಿಗೆ ಬರುತ್ತಾರೆ. ಅಲ್ಲಿಗೆಯೆಂದರೇ ಎಲ್ಲಿಗೆ ಎಂದು ಹೇಳುವುದಿಲ್ಲ, ಹೇಳುವ ಸಂಯಮವೂ ಇರುವುದಿಲ್ಲ. ಹುಡುಗರನ್ನು ಕೇಳಿನೋಡಿ, ಈ ಹುಡುಗಿಯರೆಲ್ಲರೂ ಅಷ್ಟೇ ಅವರೆಂದೂ ನಂಬಿಕೆಗೆ ಯೋಗ್ಯರಲ್ಲ, ಮೋಸವೇ ಹುಡುಗಿಯರ ಇನ್ನೊಂದು ಮುಖ. ಇದೇನಪ್ಪ ಹೀಗೆಲ್ಲಾ ಹೇಳ್ತಾರಲ್ಲ ಅಂತಾ ನಾನು ಸಂಶೊಧನೆ ಮಾಡಲಾಗುವುದಿಲ್ಲ. ಮಾಡಲು ಹೋದರೇ ಉತ್ತರ ಸಿಕ್ಕಿತೆಂಬ ನಂಬಿಕೆ ನನಗಿಲ್ಲ. ನನಗೆ ತೋಚಿದಂತೆ ಮೈ ಪರಚಿ ಮೈಯೆಲ್ಲಾ ಹುಣ್ಣು ಮಾಡಿಕೊಂಡವರೇ ಬಹಳ ಜನ. ಇವೆಲ್ಲಾ ನನಗೆ ಬೇಕಿತ್ತಾ ಎನ್ನುವವರೆ ಸಾಕಷ್ಟು ಮಂದಿ. ಯಾಕೆ ಹೀಗಾಯಿತೆಂದು ಕುಳಿತು ಚಿಂತನೆ ಮಾಡುವವರು ಕಡಿಮೆ ಜನ ಇದ್ದರೂ ಚಿಂತೆ ಮಾಡುವವರು ಸಾಕಷ್ಟು ಮಂದಿ ಸಿಗುತ್ತಾರೆ. ನಾನು ಪಿಯುನಲ್ಲಿ ಆರ್ಟ್ಸ್ ಓದಿದಿದ್ದರೇ, ವಿಜ್ನಾನ ಓದಿದ್ದರೇ, ನಾನು ಅದನ್ನು ಮಾಡಿದಿದ್ದರೇ ಹೀಗೆ ಕಳೆದ ಮೂವತ್ತು ವರ್ಷದ ಹಿಂದಿನ ತಪ್ಪನ್ನು ತಮ್ಮ ಅರವತ್ತರ ಅಂಚಿನಲ್ಲಿ ನೆನೆದು ಕೊರಗುವರ ಸಂಖ್ಯೆ ಕಡಿಮೆಯಿಲ್ಲ. ಇದರಿಂದ ಏನೂ ಸಿಗುವುದಿಲ್ಲವೆಂಬುದು ಅವರಿಗೂ ಅರಿವಾಗಿರುತ್ತದೆ, ಇದರಿಂದ ಏನೂ ಬರಲಾರದು. ಆದರು ನಾವು ಚಿಂತಿಸುವುದನ್ನು ಬಿಡುವುದಿಲ್ಲ ಇರುವ ವಾಸ್ತವಿಕತೆಗೆ ಬರುವುದೇಯಿಲ್ಲ. ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದು ಸರಿಯೇ ತಪ್ಪೇ, ಎಲ್ಲದಕ್ಕೂ ಯಾವುದೋ ಒಂದು ಉದಾಹರಣೆಯನ್ನು ಕೊಟ್ಟು ಬಣ್ಣಿಸುತ್ತಾ ನಾನು ನೋಡಿದ್ದಿನಿ, ನನ್ನ ಜಗತ್ತೇ ಸರಿ ನಾನು ನಡೆದದ್ದೇ ಸರಿ ಎಂಬ ನಮ್ಮೊಳಗೆ ಅಡಗಿರುವ ಅಹಂ ತೊಳಗುವುದೆಂದು?
ಮಾತೆತ್ತಿದರೇ, ಸ್ವಾಭಿಮಾನವೆಂದು ಬೀಗುವ ಬಹಳ ಮಂದಿಯನ್ನು ಕಂಡಿದ್ದೇನೆ. ಸ್ವಾಭಿಮಾನವೆಂದರೇನು? ಅದನ್ನು ಎಲ್ಲಿ ತೋರಿಸುವುದು, ಎಂಬ ಸಾಮಾನ್ಯಜ್ನಾನವೂ ಇಲ್ಲದ್ದೇ, ಎಲ್ಲೆಂದರಲ್ಲಿ ಪದವನ್ನು ಬಳಸಿ ಅದಕ್ಕೆ ಮಸಿ ಬಳೆದಿದ್ದಾರೆ. ಮೊನ್ನೆ ಹೀಗೆ ಮಾತಾಡುತ್ತಿರುವಾಗ ಸ್ನೇಹಿತ ಹೇಳುತ್ತಿದ್ದ, ಈ ಹೆಂಗಸರಿಗೆ ಸ್ವಾಭಿಮಾನ ಅನ್ನೊದೇ ಇಲ್ಲ ಕಣೋ, ಎಲ್ಲರ ಹತ್ತಿರಾನೂ ಕೈಚಾಚೋದಾ? ಯಾರೇ ಸಿಕ್ಕರೂ ಸರಿಯೇ, ತುಂಬಾ ಸಮಸ್ಯೆ ದುಡ್ಡೇ ಇಲ್ಲ, ಸಾಯೋನ ಅನ್ಸುತ್ತೇ ಅಂತಾ ಕಾವೇರಿ ಹರಿಸಿಬಿಡ್ತಾರೆ. ಇದೇ ಕಥೇನಾ ಹೇಳಿ ಹೇಳಿ ಐದಾರು ಜನರ ಹತ್ತಿರ ನಲ್ವತ್ತು ಸಾವಿರ ಕಿತ್ತವಳೆ ಕಣೋ ಅವಳು, ಎಂದ. ನಿನ್ನದೇನು ಸಮಸ್ಯೆ ಮಾರಾಯಾ? ಎಂದರೇ, ಅಲ್ಲಾ ಮಗಾ ಹಾಗೇ ಯೋಚನೆ ಮಾಡು, ನಾನು ನೀನು ಕೇಳಿದರೇ ಹೀಗೆ ದುಡ್ಡೂ ಕೊಡ್ತಾರಾ ಈ ಗಂಡಸರು ಎಂದಾ. ನನಗೆ ನನ್ನ ಗಂಡಸುತನದ ಮೇಲೆ ಅನುಮಾನ ಬಂತು. ಲೋ ನಾವು ಗಂಡಸರಲ್ವೇನೋ ಎಂದೆ. ನಾವು ಗಂಡಸರೇ ಆದರೇ ನಿನಗೆ ನೀನೇ ಪ್ರಶ್ನೆ ಹಾಕಿ ಕೇಳಿಕೋ. ಒಂದು ದಿನದಲ್ಲಿ ನೂರು ಜನ ಕೆಲಸ ಮಾಡೋ ಹೆಂಗಸರ ಹತ್ತಿರ ದುಡ್ಡು ಕೇಳು, ಒಬ್ಬಳೇ ಒಬ್ಬಳೂ ಕೊಡಲ್ಲ, ಅದೇ, ಗಂಡಸನ್ನ ಬಂದು ಒಂದು ಹೆಂಗಸು ಕೇಳಲಿ ಅವನು ರಕ್ತ ಮಾರಿಯಾದರೂ ಕೊಟ್ಟೆ ಕೊಡ್ತಾನೆಯೆಂದ. ಇದು ಒಳ್ಳೆ ಸಂಕಟಕ್ಕೆ ಸಿಕ್ಕಿದನಲ್ಲ ಎಣಿಸಿ, ನಮಗ್ಯಾಕೆ ಬಿಡಪ್ಪ ಎಂದೇ, ಆದರೂ ನಾವು ಕುಡಿದು ಅದರ ಅಮಲು ಇಳಿಯುವ ತನಕ ಈ ವಿಷಯ ಅವನ ಬಾಯಲ್ಲಿ ಇತ್ತು. ಆದರೇ, ಆಮೇಲೆ ಅದು ನನ್ನ ತಲೆಯೊಳಕ್ಕೆ ಸೇರಿಕೊಂಡು ನನ್ನ ತಲೆಗೆ ನಿದ್ದೆಗೆಡುವಂತೆ ಮಾಡಿ, ಇದನ್ನು ಬರೆಯಲು ಒತ್ತಾಯಿಸಿತು.
ಕೆಲವೊಂದು ವಿಷಯಗಳಲ್ಲಿ, ನಾವು ಸ್ವಲ್ಪ ಧಾರಾಳ ಮನಸ್ಸಿನಿಂದ ಯೋಚಿಸಬೇಕಾಗುತ್ತದೆ. ಬರೆಯುವ ಮುಟ್ಠಾಳ ನಾನು, ಏನೇ ಬರೆದರೂ, ಓದುವ ಮಹಾಶಯರು ನೀವುಗಳು ಅದನ್ನು ಒಪ್ಪಲೇಬೇಕೆಂದೇನೂ ಇಲ್ಲ. ಅದು ವೈಯಕ್ತಿಕ ವಿಚಾರವಂತಿಕೆಗೆ ಸಂಭಂಧಪಟ್ಟದ್ದು. ಒಂದು ಹುಡುಗಿ ಹುಡುಗರನ್ನ ನಂಬುವುದಿಲ್ಲವೆಂದ ತಕ್ಷಣ ಹುಡುಗ ಕೆರಳಿ, ಹೋ ಹೋ, ಅಂದರೇ ಇವಳೇನೂ ಗಂಡಸಿಲ್ಲದೇ ಭೂಮಿಗೆ ಬಂದಳಾ? ಅವಳ ಅಣ್ಣ, ತಮ್ಮ, ತಂದೆ ಗಂಡಸರಲ್ಲವಾ ಎನ್ನುತ್ತಾನೆ. ನಾಳೆ ಮದುವೆಯಾಗುವುದು ಗಂಡಸನ್ನಲ್ಲದೇ ಹೆಂಗಸನ್ನು ಆಗಲೂ ಆದೀತೇಯೆಂಬ ಪ್ರಶ್ನೆಯನ್ನು ಹಾಕುತ್ತಾನೆ. ಅವಳು ಅದಕ್ಕೆ ಉತ್ತರಕೊಡಲು ಸಿದ್ದಲಿರಬೇಕಲ್ಲ, ಹೋಗು ನಾಯಿ ಬೊಗಲಿದರೇ ದೇವಲೋಕಕ್ಕೇನಾದೀತು ಎಂದು ಹೊರಡಬಹುದು. ಹೌದು ಅವನು ಕೇಳಿದ ಪ್ರಶ್ನೆಯೂ ಸರಿಯೆನಿಸುವುದಿಲ್ಲವೇ? ಏನು ಆಟ ಆಡ್ತಾಯಿದ್ದಿಯಾ? ನೀನು ಗಂಡಸು ತಾನೆ ಎಲ್ಲಿ ಬಿಟ್ಟಿ ಹೋಗುತ್ತೇ ನಿನ್ನ ಬುದ್ದಿ ಎನ್ನಬೇಡಿ. ಅವಳು ಮಾತನಾಡಿದ್ದು, ಒಬ್ಬ ಗಂಡಸಿನ ಬಗ್ಗೆಯೇ ಹೊರತು ಅಣ್ಣನ ಬಗ್ಗೆಯಾಗಲೀ, ಅಪ್ಪನ ಬಗ್ಗೆಯಾಗಲೀ ಅಲ್ಲ. ಅಪ್ಪನ ಸ್ಥಾನದಲ್ಲಿ, ಅಣ್ಣನ ಸ್ಥಾನದಲ್ಲಿ ಗಂಡಸೆಂದೂ ತಪ್ಪಾಗಿ ನಡೆದುಕೊಂಡಿಲ್ಲ. ಗಂಡನ ಸ್ಥಾನದಲ್ಲಿಯೂ ಅಷ್ಟೇ, ಅವನ ಸ್ಥಾನಕ್ಕೆ ಮರ್ಯದೆ ಒದಗಿಸಿಕೊಟ್ಟಿದ್ದಾನೆ. ಜೀವನದಲ್ಲಿ ತಾಯಿ ಎಷ್ಟು ಮುಖ್ಯವಾದವಳೋ ಅಷ್ಯ್ಟೇ ಪ್ರಾಮುಖ್ಯತೆ ತಂದೆಯ ಸ್ಥಾನಕ್ಕೂ ಇದೆ. ಅವನು ಕೋಪಿಷ್ಟನಿರಬಹುದು, ಜಂಬವಂತನೆನಿಸಬಹುದು, ಸರ್ವಾಧಿಕಾರಿಯೆನಿಸಬಹುದು, ಕೆಲವೂಮ್ಮೆ ದುರಹಂಕಾರಿ, ಕಟುಕನೆನಿಸಲೂ ಬಹುದು. ಆದರೇ ಅವೆಲ್ಲವೂ ಪ್ರೀತಿಯ ಬಹುಮುಖ್ಯ ಅಂಗಗಳು. ಅವನಲ್ಲಿ ಜವಬ್ದಾರಿಯೆಂಬುದರ ಭಯವಿದೆ, ನಾಳೆ ನನ್ನ ಮಕ್ಕಳು ಏನಾದರೆಂಬ ಅಳುಕಿದೆ. ಜವಬ್ದಾರಿ ಹೆಚ್ಚಾದಾಗ, ಭಯ ಹೆಚ್ಚಾಗುತ್ತದೆ, ಭಯದೊಂದಿಗೆ ಅನುಮಾನ, ಅಭದ್ರತೆ ಉಂಟಾಗುತ್ತದೆ. ಎಲ್ಲಿ ಮಕ್ಕಳನ್ನು ಕಳೆದುಕೊಂಡಾನೆಂಬ ಭಯ ಅವನನ್ನು ಆವರಿಸಿರುತ್ತದೆ. ತಾಯಿಗಿಂತ ಹೆಚ್ಚು ಮರುಕಪಡುವ ಜೀವವೇ ತಂದೆ ಆದರೇ ಗಂಡಸಿಗೆ ಅದನ್ನು ತೋರಿಸುವ ಮಾರ್ಗ ಗೊತ್ತಿಲ್ಲ. ಹೆಣ್ಣು ಅತ್ತು ಅವಳೊಳಗಡಗಿರುವುದನ್ನು ಹೊರದಬ್ಬಬಹುದು. ಆದರೇ ಗಂಡಸು? ಅವನಿಗೆ ಇಂಥಹ ಹಲವಾರೂ ಭಾವನೆಗಳನ್ನು ಅದುಮಿಕೊಳ್ಳುವ ಅನಿವಾರ್ಯತೆಯನ್ನು ನಮ್ಮ ಸಮಾಜ ಹುಟ್ಟಿನಿಂದಲೇ ತುಂಬಿಬಿಡುತ್ತದೆ. ಈ ಮಾತನ್ನು ಹೇಳುವಾಗ ಜವಬ್ದಾರಿಯೆಂಬುದು ಬರೀ ಗಂಡಸರಿಗೇನೇನಾ? ಹೆಂಗಸರಿಗೆ ಅದು ಇರುವುದಿಲ್ಲವಾ ಹೀಗೆ ಅನುಚಿತ ಪ್ರಶ್ನೆಗಳು ಹುಟ್ಟಿ ನಮ್ಮನ್ನು ನರಕಕ್ಕೆ ತಲ್ಲುತ್ತವೆ.
ಅದರಂತೆಯೇ, ಹೆಣ್ಣಿನ ಬಗ್ಗೆ ಮಾತನಾಡುವಾಗಲೂ ಸಹ ಇಂತಹ ನೂರಾರು ಪ್ರಶ್ನೆಗಳು ಬರುತ್ತವೆ. ನನ್ನ ಕೆಲವು ಸ್ನೇಹಿತರಂತೂ ಕೆಲವೊಮ್ಮೆ ಅದೆಷ್ಟೂ ಹಗುರವಾಗಿ ಮಾತನಾಡುತಾರೆಂದರೇ, ಎಟಿಎಂ ಗೆ ಹೋಗುವ ಹುಡುಗಿಯರನ್ನು ಕಂಡರೇ,ಇದೇ ಮೊದಲನೇ ಬಾರಿ ನಾನು ಒಬ್ಬ ಹುಡುಗಿ ಎಟಿಎಂ ಗೆ ಹೊಗುತ್ತಾ ಇರೊದನ್ನ ಕಂಡದ್ದು ಅಂತಾ ಒಬ್ಬ ಹೇಳಿದ, ಅದಕ್ಕೆ ಮತ್ತೊಬ್ಬ ಅವಳು ಹೋಗಿದ್ದು ಬ್ಯಾಲೆನ್ಸ್ ನೋಡಲಿಕ್ಕೆ ಎಂದ. ನಾನು ನಕ್ಕಿ ನಂತರ ಕೇಳಿದರೆ, ಹುಡುಗಿಯರೆಂದು ತಮ್ಮ ಬಾಯ್ ಫ್ರೆಂಡ್ಸ್ ಇರುವ ತನಕ ತಮ್ಮ ಖಾತೆಯಲ್ಲಿ ನೂರು ರೂ ಕೂಡ ಹೊರಕ್ಕೆ ತೆಗೆಯುವುದಿಲ್ಲ ಎಂದರು. ಅದೇನೇ ಇರಲಿ ಅವೆಲ್ಲಾ ವ್ಯಕ್ತಿಗತ ಅಭಿಪ್ರಾಯಗಳು ಅದನ್ನೆಲ್ಲಾ ಸಾರ್ವಜನಿಕವಾಗಿ ಖಂಡಿಸುವುದು ಸುತರಾಂ ತಪ್ಪು. ಇಲ್ಲಿ ನಾವು ಗಮನಿಸಲೇಬೇಕಾದ ಕೆಲವು ಅಂಶಗಳೆಂದರೇ, ಇವು ಹಗುರದ ಮಾತೆನಿಸಬಹುದು, ಆದರೂ ನನಗೆ ಗಟ್ಟಿಮಾತುಗಳೆನಿಸುತ್ತವೆ. ಎಲ್ಲರೂ ಮಾತೆತ್ತಿದರೇ ಉಪಯೋಗಿಸುವ ಸ್ವಾಭಿಮಾನ, ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂತು. ಅದು ನನ್ನತನಕ್ಕೆ ಪೆಟ್ಟು ತಂತು, ಅದು ಇದು ಅಂತಾ. ಈ ಸ್ವಾಬಿಮಾನ ಅನ್ನೋದು ಹೇಗಿರುತ್ತೆ ಅಂತ ನಾನು ಬಹಳ ಸಲ ಯೋಚಿಸಿದ್ದುಂಟೂ. ಅಪ್ಪನ ಕೈಯಲ್ಲಿ ಹಣ ಪಡೆದು ಶೋಕಿ ಮಾಡಿ ಹುಡುಗಿಯ ಹಿಂದೆ ಅಲೆದಾಡಿದವನು, ಅಪ್ಪನ ದುಂಡಿನಿಂದ ಮೆರೆಯುವ ಹುಡುಗಿಯರೂ ಕೂಡ ಸ್ವಾಭಿಮಾನದ ಬಗ್ಗೆ ಮಾತನಾಡುತ್ತಾರೆ. ಅಪ್ಪನ ದುಡ್ಡು ನಮಗಲ್ಲದೇ ಬೇರಾರಿಗೆ ಎಂದರೇ ನನ್ನಲ್ಲಿ ಉತ್ತರವಿಲ್ಲ. ಅಪ್ಪನ ದುಡ್ಡು ಅಪ್ಪನ ನಿಧನದ ನಂತರ ಮಕ್ಕಳಿಗೆಂದೂ, ಅಪ್ಪನ ಸ್ವಂತಕ್ಕೆ ದುಡಿದ ಹಣವನ್ನು ಇಚ್ಚೆಗೆ ತಕ್ಕಂತೆ ಮಾಡಬಹುದೆಂದು ಕಾನೂನೇ ಇರುವಾಗ ನಮಗೆ ಚೆನ್ನಾಗಿ ತಿಳಿಯುತ್ತದೆ. ಅಪ್ಪನ ದುಡ್ಡೂ ನಮ್ಮದಲ್ಲ. ತನ್ನ ಕೈಯಿಂದ ನಾಲ್ಕೂ ಕಾಸು ಸಂಪಾದಿಸದೇ ಇದ್ದರೂ, ಸ್ವಾಭಿಮಾನಿಗಳೆಂದು ಬೀಗುವವರಿಗೇನು ಕಡಿಮೆಯಿಲ್ಲ. ದುಡಿಯುವವರಿಗೆ ಮಾತ್ರವೇ ಸ್ವಾಭಿಮಾನವಿರಬೇಕೇ? ಹಾಗೆನೂ ಇಲ್ಲ ಆದರೇ, ಸ್ವಾಭಿಮಾನಕ್ಕಿಂತ ದೊಡ್ಡದು ಸ್ವಾವಲಂಬಿ ಬದುಕು. ಇನ್ನೊಬ್ಬರ ಹಣದಲ್ಲಿ ಮೆರೆದು ಕುಣಿದಾಡಿ ಸ್ವಾಭಿಮಾನ ಆತ್ಮ ಪ್ರತಿಷ್ಠೆ ಅನ್ನುವವರ ಮೇಲೆ ನನಗೆ ಎಷ್ಟೂ ಗೌರವವಿಲ್ಲ.
ಮನುಷ್ಯ ತಾನು ಕಳಿತಿರುವುದೆಲ್ಲವೂ ಅತಿರೇಕಕ್ಕೆ ಹೋಗುವಂತದ್ದೇ, ಏನು ಮಾಡಿದರೂ ಸರಿ ಅದು ಅತಿಯಾಗುವವರೆಗೂ ಅವನಿಗೆ ಸಮಧಾನವಿಲ್ಲ. ಎಲ್ಲ ನಮ್ಮ ಕನ್ನಡ ಸಿನೆಮಾಗಳ ರೀತಿ. ಇಲ್ಲ ನಮ್ಮ ಕನ್ನಡ ನ್ಯೂಸ್ ಚಾನೆಲ್ ಗಳ ರೀತಿ. ಎಲ್ಲವನ್ನೂ ಅತಿರಂಜಕವಾಗಿಸುತ್ತಾರೆ.ಎನೋ ಹೇಳೋಕೆ ಶುರು ಮಾಡಿ ಮತ್ತೇನನ್ನೋ ಹೇಳುತಿದ್ದಾನೆ ಎನ್ನಬೇಡಿ. ಇದು ಅವಶ್ಯಕತೆಯ ವಿಷಯ. ಹೆಣ್ಣು ಗಂಡಿನ ಅಥವಾ ಒಂದು ಗುಂಪಿನ ಬಗ್ಗೆ ಹೇಳುವಾಗ ಎಲ್ಲವೂ ವೈಪರಿತ್ಯಕ್ಕೆ ಹೋಗಿರುವುದೇ ಕಾರಣ. ಹೆಣ್ಣನ್ನು ಶೋಷಿಸಿದ ಸಮಾಜ ಹಲವಾರು ಶತಮಾನಗಳು ಅವರ ಕೈಕೆಳಗೆ ಅದುಮಿಟ್ಟಿತ್ತು. ಆದರೇ ಇಂದಿನ ಜಾಗತಿಕ ಯುಗದಲ್ಲಿ ಅದು ಸ್ವಲ್ಪ ಸಡಿಲುಗೊಂಡಿದೆ. ಅವಳು ನಾನು ನಿನ್ನಷ್ಟೆ ಸಮ ಎಂದು ನಿಂತಿದ್ದಾಳೆ. ಅದನ್ನು ಸಹಿಸಲು ನಮ್ಮ ಸಮಾಜ ಸಿದ್ದವಿಲ್ಲ. ಇದು ಎಲ್ಲಿಯವರೆಗೆಂದರೇ, ಗಂಡು ಅನಾದಿ ಕಾಲದಿಂದಲೂ ಹೆಣ್ಣನ್ನು ಒಂದು ವಸ್ತುವೆಂದು ತಿಳಿಯುತ್ತಾ ಅವಳ ಹೊರಗಿನ ಆಕರ್ಷಣೆ ಬೆಲೆಕೊಡುತ್ತಾ ಬಂದನೆನಿಸುತ್ತದೆ. ಅದಕ್ಕಾಗಿಯೇ, ಹಿಂದಿನ ಎಲ್ಲ ಕಥ ಕಾದಂಬರಿಗಳಲ್ಲಿಯೂ ಅವಳ ಸೌಂದರ್ಯ ವರ್ಣನೆ ಇರುತ್ತಿತ್ತೆ ವಿನಾಃ ಮತ್ತೆನೂ ಇರುತ್ತಿರಲಿಲ್ಲ. ಅವಳ ಮನಸ್ಸನ್ನು ಅರಿತು ಬಣ್ಣಿಸಿದವು ಕೆಲವೇ ಕೆಲವು. ಇದಕ್ಕೆಲ್ಲಾ ಆಗಿನ ಕಾಲದ ಅವರ ಸದಭಿರುಚಿಗಳು ಅಥವಾ ಅವರ ಜೀವನ ವ್ಯವಸ್ಥೆ ಹಾಗಿದ್ದಿದ್ದು ಒಂದು ಮುಖ್ಯ ಅಂಶ. ಆದರೇ, ಅದನ್ನೆ ನಾವು ಇಲ್ಲಿಯ ತನಕವೂ ಮುಂದುವರೆಸುತ್ತಾ ಅದೇ ಜಪ ಮಾಡುತ್ತಾ ಎಷ್ಟು ದಿನ ಮುಂದುವರೆಯಲೂ ಆದೀತು. ಶೋಷಿತ ವರ್ಗ, ಶೋಷಿಕ ವರ್ಗಗಳ ಕಥೆಯೂ ಇದಕ್ಕೆ ಹೊರತಲ್ಲ.
ಇದ್ದ ಹಾಗೇಯೇ ಇರಬೇಕು ಬದಲಾವಣೆ ಆಗಕೂಡದೆಂದು ಕುಳಿತರೇ ಅಲ್ಲೆನೂ ಆಗದು, ಕಾಲಮಾನಕ್ಕೆ ತಕ್ಕಂತೆ ಜೀವನವನ್ನು ರೂಪಿಸುತ್ತಾ ಹೋಗಬೇಕಾಗುತ್ತದೆ. ಕುಂಟ, ಕುರುಡ, ಹುಟ್ಟು ಸೋಮಾರಿಯಾದವನನ್ನೇ ನಂಬಿ ಅವನೇ ನನ್ನ ದೇವರೆಂದು ಪೂಜಿಸೆಂದು ಹೇಳಿದರೇ ಹೇಗೆ ಕೇಳುವುದು. ತನ್ನ ಆಕಾಕ್ಷೆ ಆಸೆಗಳಿಗೆ ಬೆಲೆಕೊಡದ ಗಂಡನ ಜೊತೆಯಲ್ಲಿ, ದೇಹವನ್ನು ಮಾತ್ರ ಹಂಚಿಕೊಂಡು ಬದುಕುವುದಾದರೇ ಅವಳಿಗೆ ಹೆಂಡತಿಯೆಂಬ ನಾಮಕರಣವೇಕೆ? ಲೈಂಗಿಕ ಕಾರ್ಯಕರ್ತೆಯರಿಗೂ ಅವಳಿಗೂ ವ್ಯತ್ಯಾಸವೇನೂ ಬಂತು? ಅನ್ನ ಬಟ್ಟೆ ಬರಿ ಚಿನ್ನಾ ಇಷ್ಟನ್ನು ಕೊಟ್ಟ ಮಾತ್ರಕ್ಕೆ ಗಂಡನೆನಿಸಿಕೊಳ್ಳುವುದಿಲ್ಲ. ಅದರಂತೆಯೇ, ಹೆಂಡತಿಯ ವಿಚಾರದಲ್ಲಿಯೂ ಅಷ್ಟೇ ಗಂಡ ಹೆಂಡಿರ ವಿಷಯದಲ್ಲಿಯೂ ಎಲ್ಲಿಲ್ಲದ ಸ್ವಾಭಿಮಾನ ತಂದು ಅವನನ್ನು ಮಾತು ಮಾತಿಗೂ ನಿಂದಿಸಿ ಅವನಲ್ಲಿ ಹುಟ್ಟು ಊನವಿದೆ ಎನಿಸಬಾರದು.
ಇವೆಲ್ಲವೂ ವೈಯಕ್ತಿಕ ಅಭಿಪ್ರಾಯ ಅನಿಸಿಕೆಗಳಿಗೆ ಸಂಭಂಧಪಟ್ಟವು. ಅವಗಳನ್ನು ನಿಮ್ಮ ಗೊಡ್ಡು ಪುರಾಣಗಳಿಗೆ ಹೋಲಿಸಿ ನೋಡುವುದನ್ನು ನಿಲ್ಲಿಸಿ. ರಾಮನಂತೆ ಕೃಷ್ಣನಂತೆ ಎನ್ನುವುದು ನಿಲ್ಲಲಿ. ಅದು ಅಂದಿನ ಕಾಲ ಇದು ಇಂದಿನ ಕಾಲ. ನಿಮ್ಮ ಭಾವನೆಗಳಿಗೆ, ನಿಮ್ಮ ಮನಸ್ಸುಗಳಿಗೆ, ಆತ್ಮ ತೃಪ್ತಿಗಾಗಿ ಬದುಕುವುದನ್ನು ಕಲಿಯಬೇಕಿದೆ. ಅದನ್ನು ಬಿಟ್ಟು ಸದಾ ಬೇರೆಯವರನ್ನು ಬೈಯ್ಯುತ್ತಾ ಅಥವಾ ಹೊಂದದ ಪರಿಸರದಲ್ಲಿ ಕೊರಗುತ್ತಾ ಕಾಲ ಕಳೆಯುವುದೇಕೆ. ಜೀವನವನ್ನು ಸರಳ ಮತ್ತು ಸುಂದರವಾಗಿರಿಸಿಕೊಳ್ಳುವುದು ಮುಖ್ಯ. ಇವೆಲ್ಲವೂ ನಮ್ಮ ಕೈಯ್ಯಲ್ಲಿಯೇ ಇದೆ. ಕುಳಿತು ಚಿಂತನೆ ಮಾಡಿ ಕಾರ್ಯರೂಪಕ್ಕೆ ತರಬೇಕು. ಮಾನಸಿಕ ಸುಖ ಎಲ್ಲದಕ್ಕಿಂತಲೂ ಮುಖ್ಯ.

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...