20 ಜನವರಿ 2020

ಗಾಂಧಿಯನ್ನು ನಾನೇಕೇ ಓದುತ್ತೇನೆ? ನಾನೇಕೆ ಮೆಚ್ಚುತ್ತೇನೆ,


ಗಾಂಧಿಯನ್ನು ನಾನೇಕೇ ಓದುತ್ತೇನೆ? ನಾನೇಕೆ ಮೆಚ್ಚುತ್ತೇನೆ, ಎನ್ನುವುದರ ಕುರಿತು ಬಹಳ ಹಿಂದೆಯೇ ಬರೆಯುತ್ತೇನೆಂದು ನಿಮಗೆ ತಿಳಿಸಿದ್ದೆ. ಆದರೇ, ನನ್ನ ಸೋಮಾರಿತನ ಅದಾಗದಂತೆ ತಡೆಯುವಲ್ಲಿ ಯಶಸ್ವಿಯಾಗಿದೆ. ಆದರೂ, ಹಟಕ್ಕೆ ಬಿದ್ದವನಂತೆ ನನ್ನ ಮನಸ್ಸಿನೊಳಗಿರುವ ದುಗುಡವನ್ನು ಹೊರಹಾಕಲು ಬಯಸಿದ್ದೇನೆ. ಗಾಂಧೀಜಿ ಬಗ್ಗೆ ಮಾತನಾಡುವಾಗ ದುಗುಡವೇಕೆ? ಇದು ನಿಮಗೆ ಕಾಡುವ ಪ್ರಶ್ನೆಯೇ ಸರಿ.
ಇತ್ತೀಚಿನ ಎಂದು ಹೇಳಿದರೂ, ಗಾಂಧಿ ಬದುಕಿದ್ದಾಗಿನಿಂದ, ಅವರು ಸತ್ತು ಎಪ್ಪತ್ತು ವರ್ಷವಾದರೂ ಅವರನ್ನು ದ್ವೇಷಿಸುವ, ಹಂಗಿಸುವ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಅವರ ಹೆಸರಲ್ಲಿ ಬೇಳೆ ಬೇಯಿಸಿಕೊಂಡವರೂ ಕಡಿಮೆಯಿಲ್ಲ. ಆದರೇ, ಈ ದೂಷಿಸುವ ಗುಂಪಿಗೆ, ಗಾಂಧಿಯ ಬಗ್ಗೆ ಏನೇನೂ ತಿಳಿಯದೇ ಇರುವುದು, ಅಂಧಕಾರದಲ್ಲಿ ದೂಷಿಸುವುದು ನನ್ನನ್ನು ಕಾಡುತ್ತಿರುವ ವಿಷಯ. ನಮ್ಮಲ್ಲಿ ಅಂಧಕಾರ ಎಷ್ಟರ ಮಟ್ಟಿಗೆ ಹೋಗುತ್ತದೆಯೆಂದರೇ, ಒಬ್ಬನನ್ನು ನಂಬಿದರೇ, ವಿಶ್ವಾಸವಿಟ್ಟರೇ ಅವನನ್ನು ದೇವಮಾನವವೇನು? ದೇವರನ್ನೇ ಮಾಡಿ ಸ್ವರ್ಗ ಕಟ್ಟಿಕೊಡುತ್ತೇವೆ. ದ್ವೇಷವೆಂದರೇ ಇಲ್ಲಸಲ್ಲದ್ದು ಸೃಷ್ಠಿಸಿ ಅವನನ್ನು ಕಳನಾಯಕನನ್ನಾಗಿಸುತ್ತೇವೆ. ಇವೆರಡರಲ್ಲೂ ನಾವು ನಿಸ್ಸೀಮರು. ಅದನ್ನು ಗಾಂಧಿಜಿಯ ವಿಷಯದಲ್ಲಿ ಚಾಚು ತಪ್ಪದೇ ಮಾಡುತ್ತ ಬಂದಿದೆ, ಒಂದು ಗುಂಪು.
ಇರಲಿ, ಈಗ ಮುಖ್ಯ ವಿಷಯಕ್ಕೆ ಬರೋಣ, ನಾನು ನಿಮ್ಮನ್ನು ನನ್ನೊಂದಿಗೆ ಗಾಂಧಿಯನ್ನು ನೋಡಲು ಕರೆದೊಯ್ಯುತ್ತಿದ್ದೇನೆ. ನೀವೊಬ್ಬ ಸಾಮಾನ್ಯ ಮನುಷ್ಯನಾಗಿ, ಗಾಂಧೀಜಿಯೂ ನಮ್ಮಂತೆಯೇ ನಡೆದಾಡುವ ವ್ಯಕ್ತಿಯಾಗಿ ನೋಡುತ್ತಾ ಸಾಗೋಣ. ಗಾಂಧಿಯನ್ನು ನೀವು ಏನಾಗಿ ನೋಡಿದ್ದೀರಿ, ಅದನ್ನೆಲ್ಲ ಬದಿಗಿಟ್ಟು, ನನ್ನೊಂದಿಗಿರಿ.
ಗಾಂಧೀಜಿಯನ್ನು ವಿವಿಧ ಹಂತದಲ್ಲಿ ವಿವಿಧ ರೀತಿಯಲ್ಲಿ ನೋಡಬಹುದು. ನಮ್ಮಂತೆ ನಿಮ್ಮಂತೆಯೇ ಎಂದರೂ ಸರಿ. ಆದರೇ, ಅವರು ಸಾಗಿದ ಹಾದಿಯಲ್ಲಿ, ಸ್ಥಿರತೆಯಿತ್ತು ಎನ್ನುವುದನ್ನು ಬಿಟ್ಟು. ಮೊದಲನೆಯದಾಗಿ, ಬಾಲ್ಯದಲ್ಲಿ, ನಾವೆಲ್ಲರೂ ಅದೆಷ್ಟು ಸುಳ್ಳು ಹೇಳಿರಬಹುದು, ಅದೆಷ್ಟು ಕದ್ದಿರಬಹುದು, ತಿನ್ನುವ ವಸ್ತುವಿನಿಂದ ಹಿಡಿದು ದುಡ್ಡಿನ ತನಕ (ಅದು ನಮ್ಮ ಮನೆಯಲ್ಲಿದ್ದಿದ್ದರೇ!?). ಸತ್ಯ ಹರಿಶ್ಚಂದ್ರ ನಾಟಕ, ಸಿನೆಮಾ ಅದೆಷ್ಟು ಬಾರಿ ನೋಡಿಲ್ಲ. ನನಗೆ ನೆನಪಿರುವಂತೆ, ಕೊಣನೂರಿನ ನಟರಾಜ ಥಿಯೆಟರಿನಲ್ಲಿ ಆ ಸಿನೆಮಾ ನೋಡಲು ಸುತ್ತ ಮುತ್ತಲಿನ ಸಾವಿರಾರು ಜನರು ಎತ್ತಿನ ಗಾಡಿಯಲ್ಲಿ ಬಂದದ್ದು ಸಿನೆಮಾ ನೋಡುವಾಗ ಅತ್ತಿದ್ದು ನೆನಪಿದೆ. ಅವರ್ಯಾರು, ನಾನು ಇನ್ನು ಮುಂದೆ ಸತ್ಯವಂತನಾಗಿಯೇ ಇರುತ್ತೇನೆಂದು ನಿರ್ಧರಿಸಿದರೆಂಬ ಮಾಹಿತಿಯಿಲ್ಲ.
ಎರಡನೆಯದಾಗಿ, ತಮ್ಮ ಯೌವ್ವನದಲ್ಲಿ. ಪ್ರತಿಯೊಬ್ಬರಿಗೂ (ಮನುಷ್ಯರಾಗಿದ್ದರೇ) ಯೌವ್ವದನದಲ್ಲಿ ಪ್ರಕೃತಿದತ್ತವಾದ ಸಹಜ ಆಸೆ, ಕಾಮಾನೆಗಳು ಬಂದೇ ಬರುತ್ತವೆ. ಸೊಗಲಾಡಿತನಕ್ಕೆ ವಾದ ಮಾಡಬಹುದು. ಅವರ ಮನಸ್ಸಿನೊಳಗೇನಿದೆ, ಎಂಬುದು ಆತನಿಗೆ ಮಾತ್ರ ತಿಳಿದಿರುತ್ತದೆ. ಅದನ್ನು ಅಷ್ಟು ಮುಕ್ತವಾಗಿ ಚರ್ಚಿಸಿ ಬರೆದುಕೊಳ್ಳುವುದು ಸಾಮಾನ್ಯ ಸಂಗತಿಯಲ್ಲ. ಅದನ್ನು, ಝರಿಯುವವರು ಜರಿಯಬಹುದು, ಅದು ಅವರ ವಿವೇಚನಾ ಮಟ್ಟಕ್ಕೆ ಸಲ್ಲಿದ್ದು.
ಮೂರನೆಯದಾಗಿ, ವೃತಿಪರತೆ ಬಂದಾಗ, ಅವರಿಗಿದ್ದ ಭಯ, ಆತಂಕವನ್ನು ಮುಕ್ತವಾಗಿ ಹೇಳುತ್ತಾ ಬರುವುದು. ನಾವು ಮೊದಲಲ್ಲಿ ಕೆಲಸಕ್ಕೆ ಸೇರಿದಾಗ ಆದ ನೋವುಗಳು, ಬೇಸರಗಳು, ಭಯ, ಆತಂಕ ಇದನ್ನು ಪ್ರತಿಯೊಬ್ಬನು (ಸಾಮಾನ್ಯ ಅಂಕ ತೆಗೆದು ಪಾಸಾಗುವವರು, ನನ್ನಂತವರು) ಅನುಭವಿಸಿರುತ್ತಾನೆ, ರ್ಯಾಂಕ್ ತೆಗೆದವನಿಗೆ ಆ ಸಮಸ್ಯೆ ಕಾಡಿರುವುದಿಲ್ಲವೆನಿಸುತ್ತದೆ.
ನಾಲ್ಕನೆಯದಾಗಿ, ವಿದೇಶದಲ್ಲಿ ನಡೆಸಿದ ಅನೇಕಾನೇಕ ಪ್ರಯೋಗಗಳು. ಗಾಂಧೀಜಿ ಯಾವತ್ತಿಗೂ ಬೇರೆಯವರ ಮೇಲೆ ಅಧ್ಯಯನ ಕೈಗೊಳ್ಳಲಿಲ್ಲ. ತನ್ನನ್ನೇ ತಾನು ಪ್ರಯೋಗಕ್ಕೆ ತಲ್ಲಿದರು. ವಿದೇಶಿ ನೆಲದಲ್ಲಿ ತಾನೊಬ್ಬ ಸಸ್ಯಹಾರಿಯಾಗಿಯೇ ಉಳಿದದ್ದು ಅದಕ್ಕೊಂದು ನಿದರ್ಶನ.
ಐದನೆಯದಾಗಿ, ಆಫ್ರಿಕಾದಲ್ಲಿ ನಡೆದ ಘಟನೆಗಳು. ಆ ಕೊರೆಯುವ ಚಳಿಯಲ್ಲಿ, ತನಗಾದ ಅವಮಾನವನ್ನು ಅಲ್ಲಿಯೇ ಮರೆತು ತಾನು ತನ್ನ ಕೆಲಸ ಮುಗಿಸಿ ಮರಳಬಹುದಿತ್ತು. ಇದು ತನಗಾದ ಅನ್ಯಾಯವಲ್ಲವೆಂದು ಹೋರಾಟಕ್ಕೆ ಶಾಂತಿ ಅಹಿಂಸೆಯ ಅಸ್ತ್ರಹಿಡಿದು ಸಾಧಿಸಿದ್ದು! ಯಾವನೋ ಹಾದಿಯಲ್ಲಿ ಹೋಗುತ್ತಿದ್ದವನು ಗಾಡಿಗೆ ಅಡ್ಡ ಬಂದರೇ ಜಗಳಕ್ಕಿಳಿಯುವ ನಾವು, ಈಡೀ ಜೀವನವೆಲ್ಲಾ ಶಾಂತಿ, ಅಹಿಂಸೆಗೆ ಒತ್ತು ಕೊಟ್ಟು ಬದುಕಿದ ಗಾಂಧೀಜಿಯ ಬಗ್ಗೆ ಮಾತನಾಡುವುದೇ? ಅರ್ಧ ಗಂಟೆ ಮನೆಯಲ್ಲಿ ತಿಂಡಿ ನೀಡಲು ತಡವಾದರೇ ಸಹಿಸದ ನಾವು, ತಿಂಗಳುಘಟ್ಟಲೇ ಉಪವಾಸ ಮಾಡಿದ ಮಹಾತ್ಮನನ್ನು ಜರಿಯುವುದೇ?
ಆರನೆಯದಾಗಿ, ಸ್ವಲ್ಪ ಚಳಿಯಾದರೇ ಮೂರು ಕಂಬಳಿ ಬೇಕು, ಸೆಕೆಯಾದರೇ ಫ್ಯಾನ್ ಎಸಿ ಬೇಕೆಂದು ಪರದಾಡುವ ನಾವುಗಳು ವರ್ಷಾನುಗಟ್ಟಲೇ ಪೂರ್ತಿಬಟ್ಟೆಯೇ ಇಲ್ಲದೇ, ಆ ಬಟ್ಟೆಯನ್ನು ಸಮಾಜಕ್ಕಾಜಿ ತ್ಯಜಿಸಿದ ವ್ಯಕ್ತಿತ್ವದ ಕುರಿತು ಭಾಷಣ ಬಿಗಿಯುವುದು ಮೆಚ್ಚಲೇಬೇಕಾದ ಸಂಗತಿ.
ಏಳನೆಯದಾಗಿ, ಗಾಂಧೀಜಿಯವರ ಕನಸಿನ ಪ್ರಪಂಚ/ಜಗತ್ತು ಹೇಗಿತ್ತು? ಅದನ್ನೊಮ್ಮೆ ತಾವುಗಳೇ ಓದಬೇಕೆಂದು ಮನವಿ. ಇಡೀ ವಿಶ್ವದಲ್ಲಿ ಯಾವುದೇ ದೇಶಕ್ಕೆ ಸೈನ್ಯೆ ಬೇಡ, ಅದಕ್ಕಾಕುವ ಹಣವನ್ನು ಬಡವರ ಏಳಿಗೆಗೆ ಹಾಕೋಣ. ಇಡೀ, ವಿಶ್ವವೇ ಒಂದು ಕುಟುಂಬ ಎನ್ನುವುದನ್ನ ಸಾಧಿಸಿ ತೋರಿಸೋಣವೆಂಬುದಿತ್ತು. ದ್ವೇಷವೇ ಜೀವನವೆಂದು ನಂಬಿರುವ ಹಲವರಿಗೆ ಯುದ್ಧದ ಮದವಿರಬೇಕಲ್ಲವೇ? ಪ್ರತಿಯೊಂದು ಹಳ್ಳಿ ಹೇಗಿರಬೇಕೆಂಬ ಕಲ್ಪನೆಯೇ ಅದ್ಬುತಾ. ಅವರ ಪ್ರಕಾರದಲ್ಲಿ, ಸಮುದ್ರದಲ್ಲಿ ಬೀಳುವ ಮಳೆ ಹನಿಯಂತಿರಬೇಕು, ಎಲ್ಲಾ ಹನಿಗಳು ಬಿದ್ದರೂ ಒಂದಕ್ಕೊಂದು ತೊಂದರೆ ಕೊಡದಂತೆ, ಅದರ ಶಕ್ತಿಯನ್ನು ಉಳಿಸಿಕೊಳ್ಳಬೇಕು.
ಎಂಟನೆಯದಾಗಿ, ಗಾಂಧೀಜಿ ಮುಟ್ಟದ ವಸ್ತುವಿಲ್ಲ. ಅವರನ ನಡುವಳಿಕಗೆ ಅವರು ವಾರ್ಧಾದಲ್ಲಿ ಕಳೆದ ದಿನಗಳು. ಸ್ವಾತಂತ್ರ್ಯ ಸಂಗ್ರಾಮದ ನಡುವೆ ಅವರು ನಡೆಸಿದ ಶಿಕ್ಷಣದ ಕುರಿತು ಅಂತರಾಷ್ಟ್ರೀಯ ಸಮ್ಮೇಳನ ಉದಾಹರಣೆ. ಸ್ವರಾಜ್ ಎಂದರೇನು? ಗ್ರಾಮ್ ಸ್ವರಾಜ್ ಬರೆದ ವರ್ಷಕ್ಕೂ ಕೊನೆಯ ತನಕವೂ ಬದಲಾಗುತ್ತಾ, ಮಾರ್ಪಾಡಾಗುತ್ತಾ ಬರುತ್ತದೆ. ಕೇವಲ ನಲ್ವತ್ತೈವತ್ತು ಪುಟಗಳಲ್ಲಿ ಎಲ್ಲವನ್ನೂ ಹೇಳುವ ತಾಕತ್ತಿದೆ.
ಒಂಬತ್ತನೆಯದಾಗಿ, ದೇಶ ವಿಭಜನೆ ಕುರಿತು. ತನ್ನೆದುರು ನೋವು, ಅಹಿಂಸೆಯಾಗಬಾರದೆಂಬ ಒಂದೇ ಕಾರಣಕ್ಕೆ ಜೊತೆಗೆ ನಾನು ಹೇಳುವುದಾದರೇ, ಯಾರೂ ಅಶಕ್ತನಿರುತ್ತಾನೋ ಅವನನ್ನು ನಾವು ಉಳಿಸಲು ಪ್ರಯತ್ನಿಸುತ್ತೇವೆ. ಬಲಿಷ್ಠನಾದವನು ಅವನನ್ನು ಕೊಲ್ಲಬಹುದು, ನೋಯಿಸಬಹುದೆಂಬ ಆತಂಕದಿಂದ. ಅದನ್ನೇ ಗಾಂಧೀಜೀ ಮಾಡಿದರೆಂಬುದು ನನ್ನ ವಾದ.
ಹತ್ತನೆಯದಾಗಿ, ನೆಹರು ಪರ ನಿಂತದ್ದು, ಇದಕ್ಕೆ ಕಾರಂತಜ್ಜ ಬರೆದಿರುವ ಮೂಜನ್ಮ ಓದಿ. ಅವರು ಒಬ್ಬ ಮನುಷ್ಯರಾಗಿರುವುದರಿಂದ, ಒಂದು ರೀತಿಯ ಪ್ರೇಮ, ಮೋಹ ನೆಹರು ಕಡೆಗೆ ಎಳೆದಿರುವುದು ಸುಳ್ಳಲ್ಲ, ಅಥವಾ ನೆಹರು ಅವರನ್ನು ಸೆಳೆದಿರುವುದು ಸುಳ್ಳುಲ್ಲ ಎಂಬುದು ನನ್ನ ನಂಬಿಕೆ.

ಇನ್ನೂ ಬರೆಯುವುದಿದೆ, ಸದ್ಯಕ್ಕಿಷ್ಟು ಸಾಕಲ್ಲವೇ!
ಕೊನೆಯ ಹನಿ: ದಯವಿಟ್ಟು ಓದಿ, ಯಾವುದೋ ಭಾಷಣ ಕೇಳಿ, ಸುಳ್ಳು ಸುದ್ಧಿ ಹಬ್ಬಿಸಬೇಡಿ.

12 ಜನವರಿ 2020

ಪಕ್ಕೆಲುಬು: ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ!!!


ಈ ಕುರಿತು ಪ್ರತಿಕ್ರಿಯೆ ನೀಡಬೇಕೆ ಬೇಡವೇ ಎಂದು ಬಹಳ ದಿನಗಳಿಂದ ಯೋಚಿಸಿದ ನಂತರ ನನ್ನ ಅಭಿಪ್ರಾಯವನ್ನು ತಿಳಿಸುತ್ತಿದ್ದೇನೆ. ಇದನ್ನು ಬೇರೆ ಬೇರೆ ಆಯಾಮಗಳಿಂದ ನೋಡಲು ಇಚ್ಛಿಸುತ್ತೇನೆ. ಮೊದಲನೆಯದಾಗಿ, ವಿದ್ಯಾರ್ಥಿ ಕಲಿಕೆಯಲ್ಲಿ ಹಿಂದಿದ್ದ, ಅವನ ಅರಿವಿನ ಮಟ್ಟವನ್ನು ವಿಡಿಯೋ ಮೂಲಕ ತಿಳಿಸಿರುವುದು, ಚಿತ್ರಿಸಿ ಪ್ರಸಾರ ಮಾಡಿರುವುದು. ಎರಡನೆಯದಾಗಿ, ಅದೇ ವಿಷಯಕ್ಕೆ ಶಿಕ್ಷಣ ಇಲಾಖೆಯ ಮಂತ್ರಿಗಳು ಸೇರಿದಂತೆ ಅಪರಾಧವಾಗಿ ಪರಿಗಣಿಸಿ ಅಮಾನತ್ತಿನ ಶಿಕ್ಷೆಯನ್ನು ನೀಡಿರುವುದು. ಮೂರನೆಯದು ನೈತಿಕತೆ, ನ್ಯಾಯ ನೀತಿಯ ಕುರಿತು.

ಮೊದ¯ನೆಯದಾಗಿ, ಶಾಲಾ ಸಮಯದಲ್ಲಿ ಮೊಬೈಲ್ ಬಳಸಿರುವುದು ಅಪರಾಧವೆಂಬಂತಹ ಸುದ್ದಿ ಹರಿದಾಡುತ್ತಿರುವುದು. ಸನ್ಮಾನ್ಯ ಮಂತ್ರಿಗಳಲ್ಲಿ ನನ್ನ ಮನವಿ, ತಾವು ಯಾವ ಶತಮಾನದಲ್ಲಿದ್ದೀರಿ? ಮೊಬೈಲ್ ಐದು ನಿಮಿಷ ಕೂಡ ಬಿಟ್ಟಿರದ ಪರಿಸ್ಥಿತಿಯಲ್ಲಿ ನಾವಿರುವುದು ಸತ್ಯ ಮತ್ತು ವಾಸ್ತವ. ನಿಮಗೆ ಒಂದು ಸವಾಲು. ತಾವುಗಳು ಒಂದು ದಿನ ತಮ್ಮ ಮೊಬೈಲ್ ಆಫ್ ಮಾಡಿ ಇರಲು ಸಾಧ್ಯವೇ? ಅದು ಅಸಾಧ್ಯದ ಮಾತು. ಇದರಲ್ಲಿಯೇ, ಮತ್ತೊಂದು ಅಂಶವಿದೆ, ಶಾಲಾಭಿವೃದ್ಧಿ ಬಗ್ಗೆ, ಉತ್ತಮ ಸಂದೇಶಗಳು, ವಿಡೀಯೋಗಳು ಬಂದಾಗ ನೀವು ನಾವೆಲ್ಲರೂ ಆನಂದಿಸಿರುವುದು ಸತ್ಯ. ಒಳ್ಳೆಯ ಅಂಶಗಳು ಬಂದಾಗ ಶಾಲಾ ಆವರಣದಲ್ಲಿ ಮೊಬೈಲ್ ಬಳಸುವುದು ತಪ್ಪೆನಿಸದ ನಾವು, ತಪ್ಪನ್ನು ತೋರಿಸಿದಾಗ ಶಿಕ್ಷೆ ಕೊಡುವುದೇ?
ತಮ್ಮ ಭೇಟಿಯ ಸಮಯದಲ್ಲಿ, ಅದೆಷ್ಟು ವಿಡಿಯೋಗಳು, ಫೋಟೋಗಳು ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡಿಲ್ಲ ಸಚಿವರೇ? ಅದು ಕರ್ತವ್ಯ ಲೋಪವೆನಿಸಲಿಲ್ಲವೇ? ನಿಮ್ಮ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳು ಬಂದಾಗಲೂ ಅವರ ಫೋಟೋ, ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಬರುವುದಿಲ್ಲವೇ? ಅದು ಕರ್ತವ್ಯದ ಸಮಯದಲ್ಲಿ ತೆಗೆದಿದ್ದು ಎನಿಸುವುದಿಲ್ಲವೇ?

ತಾವುಗಳು ಮಗುವಿನ ಕುರಿತು, ಬಹಳ ಕಾಳಜಿ ತೋರಿಸಿರುವುದು ಹೆಮ್ಮೆಯ ವಿಷಯ. ನಾನು, ಒಬ್ಬ ಪೋಷಕನಾಗಿ ನನ್ನ ಮಗುವಿನ ಕಲಿಕೆಗೆ ಬೇಕಿರುವ ಶಿಕ್ಷೆಯನ್ನು, ಅವಮಾನವೆಂದು ತಿಳಿಯುವುದಿಲ್ಲ. ನಾವು ವಿದ್ಯಾರ್ಥಿಗಳಾಗಿದ್ದಾಗ ಹೊಡೆತ, ಬಡಿತ, ಬೈಗುಳಗಳು ಅವಮಾನವೆನಿಸುತ್ತಿರಲಿಲ್ಲ. ಈಗೇಕೇ ಸಚಿವರೇ ಅದು ಅವಮಾನವಾಗುತ್ತಿದೆ? ನಾವು, ಕಿವಿ ಹಿಡಿದು ಬೈಸಿಗೆ ಹೊಡೆಯುತ್ತಿದ್ದೆವು, ಮಂಡಿಯೂರಿ ಕಿವಿ ಹಿಡಿಯುತ್ತಿದ್ದೇವು, ಅದ್ಯಾವುದು ನಮಗೆ ಅವಮಾನವೆನಿಸಲಿಲ್ಲ, ಓದಿದೆವು, ಕಲಿತೆವು ಬೆಳೆದೆವು. ತಮ್ಮಂತಹ ರಾಜಕಾರಣಿಗಳು ಇಂತಹ ಕ್ಷುಲಕ ಕಾರಣದಲ್ಲಿಯೂ ರಾಜಕೀಯ ಮಾಡುವುದನ್ನು ಬಿಡಬೇಕು. ಅಲ್ಲಿಯೂ ಮೈಲೇಜ್ ತೆಗೆದುಕೊಳ್ಳುವುದನ್ನು ಬಿಡಬೇಕು.

ಇಷ್ಟೆಲ್ಲಾ ಮಾತನಾಡುವ ತಾವು, ಒಂದು ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನಕ್ಕೆ ಹೋಗುವ ಶಿಕ್ಷಕರಿಗೆ ಒಒಡಿ ತಡೆಹಿಡಿದಿದ್ದು ತಮ್ಮ ಮನಸ್ಥಿತಿಯನ್ನು ತೋರಿಸುತ್ತಿದೆ. ಬಿಟ್ಟಿ ಪ್ರಚಾರಕ್ಕಾಗಿ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಮಾಡವುದನ್ನು ನಿಲ್ಲಿಸಿ.
ಮೂರನೆಯದಾಗಿ, ಸಮಾಜವೇ ಮೊಬೈಲ್ ದಾಸ್ಯದಲ್ಲಿ ಮುಳುಗಿದೆ. ಒಂದು ಅಪಘಾತ ನಡೆಯುತ್ತಿದ್ದರೂ, ಅತ್ಯಚಾರ ನಡೆಯುತ್ತಿದ್ದರೂ, ಕೊಲೆಯಾಗುತ್ತಿದ್ದರೂ ವಿಡಿಯೋ ಮಾಡುವ ಭರದಲ್ಲಿ ನಮ್ಮ ಸಮಾಜವಿದೆ. ಇದು ಅನೈತಿಕತೆಯ ಪರಮಾವಾಧಿಯಲ್ಲಿ ಮುಳುಗುತ್ತಿರುವುದಕ್ಕೆ ಸಾಕ್ಷ್ಯ.

ಮಿಕ್ಕಿದ್ದು ಓದುಗರ ವಿಮರ್ಶೆಗೆ ಬಿಟ್ಟಿದ್ದು.

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...