26 ಜುಲೈ 2020

ಗಾಂಧಿ ಕಥನ: ಸಮಯೋಚಿತ ಬರವಣಿಗೆ



ಜೂನ್ ತಿಂಗಳ 9ನೇ ತಾರೀಖಿನಂದು ಅಂಚೆಯ ಮೂಲಕ ಒಂದು ಪುಸ್ತಕ ಬಂತು. ನಾನು ತೆರೆದು ನೋಡಿದೆ, ಡಿ.ಎಸ್. ನಾಗಭೂಷಣರವರು ಬರೆದಿರುವ ಗಾಂಧಿ ಕಥನವೆಂಬ ಶೀರ್ಷಿಕೆ. ಯಾರು ಕಳುಹಿಸಿದ್ದು? ಧಾರವಾಡದಿಂದ ಬಂದಿತ್ತು. ಅಲ್ಲಿಗೆ ಕರೆ ಮಾಡಿದರೆ ಅವರು ಸ್ವೀಕರಿಸಲಿಲ್ಲ. ನಾನು ಮುನ್ನುಡಿ ಮತ್ತು ಪರಿವಿಡಿಯನ್ನು ನೋಡಿದೆ, ಹತ್ತಾರು ಸಾಲುಗಳನ್ನು ಓದಿದಾಗ, ಪರವಾಗಿಲ್ಲ ಓದಿಸಿಕೊಳ್ಳುವ ಪುಸ್ತಕವೆಂದು ಫೇಸ್‍ಬುಕ್ಕಿನಲ್ಲಿ ಕೂಡ ಬರೆದೆ. ಸಂಜೆಯ ವೇಳೆಗೆ ಹಿರಿಯ ಸ್ನೇಹಿತರಾದ ನಲ್ಲತಂಬಿಯವರು ಕರೆ ಮಾಡಿ, ಆ ಪುಸ್ತಕವನ್ನು ನಾನೆ ಕಳ್ಸಿದ್ದು. ನನಗೆ ಕಡಿಮೆ ದರದಲ್ಲಿ ಕೊಡ್ತೀನಿ ಅಂದ್ರು, ನನಗೆ ಓದೋಕೆ ಸಮಯವಿಲ್ಲ, ಆದರೇ ಆಸಕ್ತಿಯಿರುವಂತಹ ಐದಾರು ಜನರಿಗೆ ಕಳ್ಸೋಕೆ ಹೇಳಿದ್ದೀನಿ, ನನ್ನ ಹೆಸರನ್ನು ನಮೂದಿಸುವುದಕ್ಕೆ ಹೇಳಿದ್ದೆ, ಎಂದರು. ಧನ್ಯವಾದಗಳು ಸರ್, ಆಸಕ್ತದಾಯಕವಾಗಿದೆ ಎಂದೆ. 

ಅದಾದ ನಂತರ ಪುಸ್ತಕವನ್ನೇ ಮರೆತಿದ್ದೆ. ಮೊನ್ನೆ ಇದ್ದಕ್ಕಿದ್ದ ಹಾಗೆಯೇ ಗಾಂಧೀಜಿಯ ಬೇರೊಂದು ಪುಸ್ತಕವನ್ನು ನೋಡುವಾಗ ಕೈಗೆತ್ತಿಕೊಂಡೆ. ನನಗೆ ಪುಸ್ತಕವನ್ನು ಓದುವುದಕ್ಕೆ ಶುರುಮಾಡಿದರೆ ಓದಿ ಮುಗಿಸಬೇಕು, ಅರ್ಧಕ್ಕೆ ನಿಲ್ಲಿಸುವುದು ಹಿಡಿಸುವುದಿಲ್ಲ. ಈ ಪುಸ್ತಕವೋ ಸುಮಾರು 700 ಪುಟಗಳಷ್ಟಿದೆ. ಆಗಿದ್ದಾಗಲೀ ಓದಿ ಮುಗಿಸೋಣವೆಂದು, ಕುಳಿತೆ. ಅದೆಷ್ಟು ಆಸಕ್ತಿದಾಯಕವಾಗಿದೆಯೆಂದರೇ ಮೂರೇ ದಿನಗಳಲ್ಲಿ ಓದಿ ಮುಗಿಸಿದೆ. ಕಾದಂಬರಿ ಓದುತ್ತಿರುವಂತೆ ಭಾಸವಾಗುವಷ್ಟು ಚೆನ್ನಾಗಿ ಮೂಡಿಬಂದಿದೆ. ಬಹುಶಃ ಕನ್ನಡದಲ್ಲಿ ಇಲ್ಲಿಯವೆರೆಗೆ ಬಂದಿದ್ದ ಗಾಂಧೀಜಿಯವರ ಕುರಿತಾದ ಪುಸ್ತಕದಲ್ಲಿ ಇದು ಅಗ್ರ ಸ್ಥಾನ ಪಡೆಯುವ ಎಲ್ಲಾ ಅರ್ಹತೆಗಳು ಇವೆ. 

ಅದಕ್ಕೆ ಮುಖ್ಯ ಕಾರಣ ಈ ಪುಸ್ತಕದಲ್ಲಿ ಗಾಂಧೀಜಿಯವರನ್ನು ಸಂಪೂರ್ಣವಾಗಿ ಚಿತ್ರಿಸಲು ಪ್ರಯತ್ನಿಸಿರುವುದು. ಪುಸ್ತಕವನ್ನು ಮೂರು ಅಧ್ಯಾಯಗಳಾಗಿ ವಿಂಗಡಿಸಿ ಸುಮಾರು 96 ಅಧ್ಯಾಗಳಾಗಿ ನಿರೂಪಿಸಲಾಗಿದೆ. ಬಾಲ್ಯದ ದಿನಗಳಿಂದ ಕೊನೆಯ ದಿನದ ತನಕ ಸಂಪೂರ್ಣ ಚಿತ್ರಣವನ್ನು ಪ್ರಾಮಾಣಿಕವಾಗಿ ಓದುಗರ ಮುಂದಿಟ್ಟಿರುವುದ ಸ್ವಾಗತಾರ್ಹ. ಇದು ಗಾಂಧೀಜಿಯನ್ನು ಪ್ರಥಮ ಬಾರಿಗೆ ಓದುವುದಾದರೇ, ಅವರ ಆತ್ಮ ಚರಿತ್ರೆಗಿಂತಲೂ (ಕನ್ನಡ ಅನುವಾದದ) ಸುಲಭವಾಗಿದೆ. ಓದುಗರಿಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರವೇ ಹೇಳಿರುವುದು ಮತ್ತು ಎಲ್ಲಿಯೂ ಬೇಸರವಾಗದಂತಿರುವ ಬರವಣಿಗೆ ಶೈಲಿ ಇಷ್ಟವಾಗುತ್ತದೆ. 

ಗಾಂಧೀಜಿಯವರ ಕುರಿತು ಇನ್ನು ಹಲವು ವಿಚಾರಗಳನ್ನು ಸುದೀರ್ಘವಾಗಿ ಬರೆಯಬಹುದಿತ್ತಾದರೂ (ಪ್ರಮುಖವಾಗಿ ಸೇವಾಗ್ರಾಮದಲ್ಲಿ ಅವರು ಶಿಕ್ಷಣದ ಕುರಿತು ನಡೆಸಿದ ಪ್ರಯೋಗಗಳು) ಓದುಗರನ್ನು ಮನಸ್ಸಿನಲ್ಲಿಟ್ಟುಕೊಂಡು ನೋಡುವುದಾದರೇ, ಎಲ್ಲಾ ವರ್ಗದವರು ಓದಬಹುದಾಗಿದೆ. ಗಾಂಧೀಜಿಯನ್ನು ಓದದೇ ಸುಖಾಸುಮ್ಮನೆ ದೂರುವ ಯುವಪೀಳಿಗೆಯೂ ಸೇರಿದಂತೆ ಅನೇಕರು ಒಮ್ಮೆಯಾದರೂ ಓದಲೇಬೇಕಾದ ಪುಸ್ತಕವೆಂದು ಹೇಳುತ್ತೇನೆ. ಗಾಂಧೀಜಿಯ ಕುರಿತು ಯಾವ ಬಿನ್ನಾಭಿಪ್ರಾಯಗಳಿವೆ ಆ ವಿಚಾರಗಳನ್ನೇ ಆಯ್ದು ಓದಬಹುದು. ಅದು ದೇಶದ ವಿಭಜನೆಯಿರಬಹುದು, ನೆಹರೂ ಪರದ ವಾದವಿರಬಹುದು, ಜಾತಿಯತೆಯ ಕುರಿತು ಇರಬಹುದು ಇತ್ಯಾದಿ. ಪ್ರತಿಯೊಂದಕ್ಕೂ ದಾಖಲೆಗಳನ್ನು ಒದಗಿಸಿರುವುದು, ಒಂದು ಪ್ರಾಮಾಣಿಕ ಸಂಶೋಧನ ಕೃತಿಯಾಗಿ ರೂಪುಗೊಂಡಿದೆ. 

ಕೊನೆಯದಾಗಿ ನಾಲ್ಕು ಮಾತುಗಳು: ಈ ಎರಡು ಶತಮಾನಗಳಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ತುತ್ತಾದ ವ್ಯಕ್ತಿಯೆಂದರೇ ಅದು ಮಹಾತ್ಮ ಗಾಂಧೀಜಿ ಮಾತ್ರ. ಹೊಗಳುವ ಅಭಿಮಾನಿಗಳೆಷ್ಟೋ ಅಷ್ಟೆ ದೊಡ್ಡ ಮಟ್ಟದ ವಿರೋಧಿಗಳನ್ನು ಬದುಕಿರುವಾಗಲೂ, ಹೋದ ಮೇಲೂ ಅವರು ಗಳಿಸಿದ್ದಾರೆ. ಒಬ್ಬ ವ್ಯಕ್ತಿ ಹೀಗೂ ಬದುಕಬಹುದೇ? ಹೀಗೂ ಆಲೋಚಿಸಬಹುದೇ? ಗಾಂಧೀಜಿಯ ಬದುಕನ್ನು ಗ್ರಹಿಸಲು ಬಹುಶಃ ಯಾರೊಬ್ಬರಿಂದಲೂ ಸಾಧ್ಯವಾಗಲಿಲ್ಲ ಮತ್ತು ಆಗುವುದೂ ಇಲ್ಲ. ಅವರ ಕಲ್ಪನೆಯ ಸ್ವಾತಂತ್ರ್ಯ, ಅವರ ಕಲ್ಪನೆಯ ರಾಷ್ಟ್ರೀಯತೆ, ಅವರ ಸರಳತೆಯ ಬದುಕು ಈ ವಿಚಾರಗಳನ್ನು ಅವರ ಕಾಲಮಾನದಲ್ಲಿಯೂ ಅರಿತವರಿಲ್ಲ, ಈಗಲೂ ಇಲ್ಲ ಮುಂದಕ್ಕೂ ಇಲ್ಲ. ರಾಜಕೀಯ ವಲಯದಲ್ಲಿ ಅವರ ಚಿಂತನೆಗಳನ್ನು ತಕ್ಕ ಮಟ್ಟಿಗೆ ಗ್ರಹಿಸಿದ್ದು ರಾಮಮನೋಹರ ಲೋಹಿಯಾ ಒಬ್ಬರೇ ಎಂದರೇ ಅತಿಶಯೋಕ್ತಿಯಲ್ಲ. ಗಾಂಧೀಜಿಯ ಬಗ್ಗೆ ನಾನೆಷ್ಟೆ ಬರೆದರೂ ತಾವುಗಳು ಒಂದಿಷ್ಟು ಪುಸ್ತಕಗಳನ್ನು ಓದಿಕೊಳ್ಳುವುದು ಉತ್ತಮ. ಕೇವಲ ಭಾಷಣದಿಂದ, ಗಾಳಿ ಮಾತುಳಿಂದ, ಭಾವೋದ್ರೇಕದಿಂದ ಅವರನ್ನು ದೂಷಿಸುವುದು ಸಮಂಜಸವಲ್ಲ. ಅವರನ್ನೇ ಅಲ್ಲಾ, ಯಾರನ್ನಾದರೂ ಅಷ್ಟೆ. 


ಈ ಪುಸ್ತಕವನ್ನು ನೀಡಿದ್ದಕ್ಕೆ, ನಲ್ಲತಂಬಿಯವರಿಗೆ ಧನ್ಯವಾದಗಳು. 

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...