28 ಅಕ್ಟೋಬರ್ 2021

ನನ್ನ ಚಾರಣದ ಹೊತ್ತಿಗೆಗೆ ಜೊತೆಯಾದ ಇನ್ನೊಂದು ಪುಟ: ಜಂಗ್ಲಿ ನಂಗ್ಲಿ ಆಯಾಮದ ಚಾರಣ -ಭಾಗ 01






ನಾನು ಬರೆಯುವುದು, ಬರೆದಿರುವುದು ನನ್ನ ಅನುಭವಗಳನ್ನು ಕುರಿತು, ಇದು ನನ್ನ ಅನುಭವವಷ್ಟೆ. ಇದನ್ನು ಮತ್ತೊಬ್ಬ ಓದುಗನ ಮನದಲ್ಲಿಟ್ಟು ಬರೆಯುವುದಿಲ್ಲ. ಹಾಗೆ ಬರೆಯ ಹೊರಟರೆ ಅವನ ಮೆಚ್ಚಿಸಲು ಹೋಗಿ ನನಗೆ ದ್ರೋಹ ಬಗೆದಂತಾಗುತ್ತದೆ. ನೇರವಾಗಿ ಸ್ವಲ್ಪ ಉದ್ದವಾದರೂ, ಓದಿಕೊಳ್ಳುವ ಆಸ್ಥೆಯಿದ್ದವರು ಓದಬಹುದು, ಓದಿಸಿಕೊಳ್ಳುವ ಯೋಗ್ಯತೆಯಿದ್ದರೆ ಅನುಭವವೇ ಓದಿಸಿಕೊಳ್ಳುತ್ತದೆ. ಆದರೂ ಒಂದು ವಿಷಯನ್ನು ಹೇಳುತ್ತೇನೆ. ಈ ಲೇಖನದಲಲಿ ನಾವು ತಿಂದಿರುವ ಊಟೋಪಾಚಾರ/ ಆಹಾರಗಳ ವಿವರವನ್ನು ನೀಡಿದ್ದೇನೆ. ಶುದ್ಧ ಶಾಖಾಹಾರಿಗಳಾಗಿದ್ದರೆ ಸ್ವಲ್ಪ ಇರಿಸುಮುರಿಸಾಗಬಹುದು. ನಮ್ಮ ಅನುಭವದ ಕಥನ ಮುಕ್ತವಾಗಿರಲಿ ಎಂಬ ಉದ್ಧೇಶದಿಂದ ಅದನ್ನು ಹಂಚಿಕೊಂಡಿದ್ದೇನೆ. ಅದಕ್ಕೆ ಹೆಚ್ಚಿನ ಮಹತ್ವ ನೀಡದೆ ಓದಿಕೊಳ್ಳಿ. ಪ್ರಮುಖ ಕಥೆಗಿಂತ ಮುಂಚಿತವಾಗಿ ಸಣ್ಣ ಪೀಠಿಕೆಯೊಂದಿರಲಿ.


ಪ್ರೋ. ಚಂದ್ರಶೇಖರ ನಂಗಲಿ ಎಂಬ ಹೆಸರು ಸಾಹಿತ್ಯ ಲೋಕಕ್ಕೆ ಚಿರಪರಿಚಿತ. ಅದರಲ್ಲಿಯೂ ಕುವೆಂಪು, ತೇಜಸ್ವಿ, ಅಲ್ಲಮ, ಪರಿಸರ, ಚಾರಣ, ವಿಮರ್ಶೆ ವಿಚಾರಕ್ಕೆ ಬರುವುದಾದರೇ ಕರುನಾಡಿನ ಎಲ್ಲಾ ಸಾಹಿತ್ಯಾಸಕ್ತರು ಖುಷಿಪಡುವ ಜೀವಿ. ಸೀಕೋ ಸಂಸ್ಥೆ ಕೋವಿಡ್-19ರ ಲಾಕ್ ಡೌನ್ ಸಮಯದಲ್ಲಿ ಕನ್ನಡ ಸಾಹಿತ್ಯದಲ್ಲಿ ಪರಿಸರ ಗ್ರಹಿಕೆ ಸರಣಿ ವೆಬಿನಾರ್ ಆಯೋಜಿಸಿತ್ತು. ಆಗ ನೇರ ಪರಿಚಯವಾಗಿದ್ದು ಪ್ರೊ. ಚಂದ್ರಶೇಖರ ನಂಗಲಿ. ಪತ್ರಕರ್ತ ಸ್ನೇಹಿತ ರಾಘವೇಂದ್ರ ತೊಗರ್ಸಿಯವರು ನಂಗಲಿಯವರ ಹೆಸರನ್ನು ಸೂಚಿಸಿದರು. ನಾನು ಅವರಿಗೆ ಹೇಳಿದ್ದೆ, ನಮ್ಮದು ಚಿಕ್ಕ ಸಂಸ್ಥೆ, ಸಣ್ಣ ಕಾರ್ಯಕ್ರಮ, ಅಂತಹ ದೊಡ್ಡ ವ್ಯಕ್ತಿಗಳು ಒಪ್ಪುತ್ತಾರಾ? ಅದೇ ಸಮಯಕ್ಕೆ ಸುರಾನ ಕಾಲೇಜಿನ ಡಾ. ಸತ್ಯನಾರಾಯಣರವರನ್ನು ವಿಚಾರಿಸಿದೆ. ಅವರಿಬ್ಬರ ಅನಿಸಿಕೆ ಒಂದೇ ಆಗಿತ್ತು. ನಂಗಲಿಯವರು ತೇಜಸ್ವಿ, ಕುವೆಂಪು, ಚಾರಣ ಸಾಹಿತ್ಯ ಕುರಿತಂತೆ ಆಳವಾಗಿ ಮತ್ತು ಅನುಭವದಿಂದ ಮಾತಾಡುವವರು ಹಾಗೂ ದೊಡ್ಡ ವೇದಿಕೆ, ಸಣ್ಣ ವೇದಿಕೆ ಎಂಬ ತಾರತಮ್ಯವಿರುವುದಿಲ್ಲ. ನಿಮ್ಮ ಗಂಬೀರತೆ ಅವರಿಗೆ ಅರಿವಾದರೆ ಸಾಕು, ಅದನ್ನು ನೀವು ಮಾಡಿ ಎಂದರು. ಅದರಂತೆಯೇ ವೆಬಿನಾರ್ ಆಹ್ವಾನ, ಕರೆಗಳು, ಸಿದ್ಧತೆ ಇತ್ಯಾದಿ ನಡೆಯಿತು. ಆ ಸಮಯದಲ್ಲಿ ನನಗೆ ಬಹಳ ಇಷ್ಟವಾದದ್ದು ಅವರ ವ್ಯಕ್ತಿತ್ವ. ಸರಳ ನಿರೂಪಣೆ, ನೇರವಾಗಿ ನಿಷ್ಠುರವಾಗಿ ಹಾಗೂ ಅಚ್ಚುಕಟ್ಟಾಗಿ ಎಲ್ಲವನ್ನೂ ಸೂಕ್ಷ್ಮವಾಗಿ ಗ್ರಹಿಸಿ, ಗಮನಿಸಿ ತಿಳಿಸುವುದು. 


ಈ ಮೇಲಿನ ಮಾತುಗಳನ್ನು ಸ್ವಲ್ಪ ವಿವರಣೆಯೊಂದಿಗೆ ತಿಳಿಸಬಯಸುತ್ತೇನೆ. ನಾಲ್ಕೈದು ಸ್ಲೈಡ್‍ಗಳು ಬೇಕು ಎಂದರು. ಸಾಹಿತ್ಯಕ್ಕೆ? ಎಂತಹ ಸ್ಲೈಡ್ ಎಂದುಕೊಂಡೆ. ಅದು ಸಾಹಿತ್ಯದ ವೆಬಿನಾರ್ ಎನ್ನುವುದಕ್ಕಿಂತ ಪರಿಸರ ವಿಜ್ಞಾನದ್ದು ಎನ್ನುವ ಮಟ್ಟಕ್ಕೆ ನಡೆಯಿತು. ಒಂದೊಂದು ಸ್ಲೈಡ್‍ಗಳಲ್ಲಿ ಅಕ್ಷರಗಳನ್ನೂ, ಚಿತ್ರಗಳ ಗಾತ್ರಗಳ ಸಮೇತ ಸಮವಾಗಿರುವಂತೆ ನೋಡಿಕೊಂಡು ತಿದ್ದಿಸಿದರು. ಸಮಯ ಪಾಲನೆ, ಶಿಸ್ತು ಒಂದು ಬಗೆಯಾದರೇ ಮತ್ತೊಂದು ಔಪಚಾರಿಕೆಯಿಂದ ದೂರವಿರುವುದು. ನನ್ನ ಪರಿಚಯ ಅಂತೆಲ್ಲಾ ಮಾಡೋಕೆ ಹೋಗ್ಬೇಡಿ ಸುಮ್ಮನೆ ಟೈಮ್ ವೇಸ್ಟ್ ಅಂದ್ರು. ನಮ್ಮ ಸಂಸ್ಥೆಯೂ ಕೂಡ ಔಪಚಾರಿಕತೆಗೆ ಹೆಚ್ಚು ಒತ್ತು ನೀಡುವುದಿಲ್ಲ. ಅಲ್ಲಿಂದ ಬೆಳೆದ ಮಾತುಕತೆ, ಅವರ ಪೋಸ್ಟ್‍ಗಳು, ಬರಹಗಳು, ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದೆ. ನಾನು ಒಬ್ಬ ಚಾರಣಿಗನಾಗಿ ಅವರ ಚಾರಣದ ಕುರಿತು ತಿಳಿದುಕೊಳ್ಳುವ ಆಸೆಯಿತ್ತು. ನಾನು ಒಮ್ಮೊಮ್ಮೆ 20-30 ಕಿಮೀ ಒಂದೇ ದಿನ ನಡೆಯುವಾಗ, ಅವರು ನನಗೆ ಹೇಳಿದ ಮಾತು ಹೀಗಿದೆ, ಹರೀಶ್ ನೀವು ಅಷ್ಟೆಲ್ಲಾ ಯಾಕೆ ನಡೀತೀರಿ? ಅಷ್ಟೆಲ್ಲಾ ನಡೀಬೇಡಿ. ಮೂರು ವೇಗಯಿದೆ, ಮೊಲದ ವೇಗ, ಆಮೆಯ ವೇಗ ಮತ್ತು ಬಸವಿನ ಹುಳು (ಶಂಖದ ಹುಳು/ ಸ್ನೈಲ್) ವೇಗ. ನನ್ನದು ಸ್ನೈಲ್ ವೇಗ ನಿಧಾನಗತಿ. ನಿಧಾನ ನಡೆಯುವಾಗ ನಿಮಗೆ ಸುತ್ತಮುತ್ತಲಿನ ಪರಿಸರ ಪರಿಚಯವಾಗುತ್ತೆ. ಇಲ್ಲಂದ್ರೆ ಏನ್ ನೋಡ್ತೀರಿ, ಏನ್ ಅಬ್ಸರ್ವ್ ಮಾಡೋಕೆ ಆಗುತ್ತೆ ಅಂದ್ರು. ನನಗೂ ಅದು ಸರಿಯೆನಿಸಿ, ವೇಗ ಕಡಿಮೆ ಮಾಡಿಕೊಂಡೆ. 


ಇದರ ಜೊತೆಗೆ ಅವರ ಚಾರಣದ ಕುರಿತು ಬಹಳ ಕೇಳಿದ್ದೆ. ಒಂದುವರೆ ವರ್ಷದಿಂದ ಅವರನ್ನು ಪೀಡಿಸುತ್ತಿದ್ದೆ. ಸರ್, ನೀವು ಕಾಡಿಗೆ ಚಾರಣ ಹೋಗ್ತಿರಲ್ಲ, ನಾನು ಬರ್ತೀನಿ. ಹರೀಶ್ ನಮ್ಮದು ಅರೇಂಜ್ ಟ್ರೆಕ್ ತರಹ ಇರಲ್ಲ. ನಮ್ದು ಬೇರೆ ರೀತಿ ಅದು ತುಂಬಾ ಜನಕ್ಕೆ ಹಿಡಿಸಲ್ಲ. ನಮ್ದೇ ಟೀಮ್ ಇದೆ, ನಾವು ಹೊಸಬರನ್ನ ಕರ್ಕೊಂಡ್ ಹೋಗಲ್ಲ ಅನ್ನೋರು. ಒಟ್ಟಾರೆಯಾಗಿ ನನ್ನ ಕರ್ಕೊಂಡ್ ಹೋಗೋಕೆ ಅವರಿಗೆ ಮನಸ್ಸಿರಲಿಲ್ಲ. ನಾನು ಬಿಡ್ಬೇಕಲ್ಲ. ಅವರು ಪ್ರತಿ ಚಾರಣದ ಪೋಸ್ಟ್ ಹಾಕಿದಾಗಲೂ ನಂದು ಅದೇ ಮನವಿ, ಸಾರ್ ಒಂದ್ ಸಲ ಕಕೊರ್ಂಂಡ್ ಹೋಗಿ ಸಾರ್, ಅನುಭವಕ್ಕೆ ಅಂತಾ ಆದ್ರೂ ಸಾರ್. ಇಲ್ಲಂದರೆ ಅಲ್ಲಿನ ಮಾಹಿತಿ ಕೊಡಿ ಸಾರ್, ನಾವೇ ಹೋಗಿ ಬರ್ತೀವಿ ಅಂದ್ರು. ಹಾಗೆಲ್ಲ ಹೊರಗಡೆಯವರು ಹೋಗೋಕೆ ಆಗಲ್ಲ. ನಾವು ಅಲ್ಲಿರೋ ಆದಿವಾಸಿಗಳನ್ನ ಕರ್ಕೊಂಡ್ ಹೋಗೊದು, ಹೊಸಬರನ್ನ ಅವರು ಹೇಗೆ ಕರ್ಕೊಂಡ್ ಹೋಗ್ತಾರೆ? ಅದೆಲ್ಲಾ ಆಗಲ್ಲ ಅಂದ್ರು. ನಾನು ಗೂಗಲ್ ನೋಡಿದೆ, ಕೆಲವರನ್ನ ಕೇಳಿದೆ. ಒಂದು ದಿನದ್ದು ಕೈಗಲ್ ಫಾಲ್ಸ್ ಬಗ್ಗೆ ಒಂದಿಷ್ಟು ಮಾಹಿತಿ ಸಿಕ್ತು, ಕೌಂಡಿನ್ಯ ವನ್ಯಜೀವಿ ಧಾಮದ ಬಗ್ಗೆ ಸಿಕ್ತು. ಆದ್ರೂ ಬೇರೆ ರಾಜ್ಯಕ್ಕೆ ಸೇರಿದ ಕಾಡು, ಹೋಗೋದು ಕಷ್ಟ ಅಂತ ಸುಮ್ಮನಾಗಿದ್ದೆ. ಇತ್ತೀಚೆಗೆ ಕರೆ ಮಾಡಿ ಕೇಳುವಾಗ ಒಪ್ಕೊಂಡ್ರು. ಅಕ್ಟೋಬರ್ ಎರಡನೆಯ ವಾರದಲ್ಲಿ ಮಾತಾಡುವಾಗ ಹರೀಶ್ ಈ ಸಲ ಹುಣ್ಣಿಮೆಗೆ ಹೋಗ್ತಾ ಇದ್ದೀನಿ ನಡುಮಂತ್ರಮ್ ಗೆ ನೀವು ಬರೋದಾದ್ರೆ ಬರಬಹುದು, ನಿಮಗೆ ಬಿಡುವು ಇರುತ್ತಾ? ಐದು ದಿನ ಆಗುತ್ತೆ ಅಂದ್ರು. ನಾನು ಹಿಂದೆ ಮುಂದೆ ಯೋಚನೆ ಮಾಡ್ಲೇಯಿಲ್ಲ. ಖಂಡಿತಾ ಸರ್ ಎಂದೆ. 


ಅಸಲಿ ಕಥೆ ಶುರುವಾಗೋದು ಇಲ್ಲಿಂದ. ನಾನು ಬರುತ್ತೇನೆ ಎಂದ ದಿನದಿಂದ ನಿರಂತರವಾಗಿ ಕರೆ ಮಾಡಿ ಎಲ್ಲಾ ಮಾಹಿತಿ, ತಯಾರಿಯ ವಿವರಗಳನ್ನು ಹಂಚಿಕೊಂಡರು. ಹರೀಶ್, ಈ ದಿನ ದಿನಸಿ ತಗೊಂಡ್ ಬಂದೆ, ನನ್ನ ತಮ್ಮ ಅಮರ್ ಅಲ್ಲೆ ಇದ್ದಾನೆ, ಅವನು ನಮ್ ಜೊತೆಗೆ ಸೇರ್ತಾನೆ, ನಮ್ ಗೈಡ್ ವೆಂಕಟೇಶ್ ಕಾಡಲ್ಲಿದ್ದಾನೆ, ಅವನನ್ನು ಕಾಂಟಾಕ್ಟ್ ಮಾಡಿದ್ದೀನಿ, ಇತ್ಯಾದಿ. ಅದರ ನಡುವೆ, ಹರೀಶ್ ನನ್ನ ಸ್ನೇಹಿತ ಬಾಲರಾಜ್ ಅಂತಾ ಮಾಗಡಿ ರೋಡ್ ಅಲ್ಲಿದ್ದಾನೆ, ಅವನು ನಮ್ ಜೊತೆಗೆ ಬರ್ತಾ ಇರ್ತಾನೆ, ಅವನು ನಿಮ್ ಜೊತೆಗೆ ಕರ್ಕೊಂಡ್ ಬರೋಕೆ ಆಗುತ್ತಾ ಅಂದ್ರು. ಖಂಡಿತಾ ಸರ್, ಅವರ ನಂಬರ್ ಕೊಡಿ ಎಂದೆ. ನೀವು ಕಾಲ್ ಮಾಡೋದು ಬೇಡ, ಅವನಿಗೆ ನಂಬರ್ ಕೊಟ್ಟಿದ್ದೀನಿ, ಅವನೇ ಕಾಲ್ ಮಾಡ್ತಾನೆ, ನಿಮಗೆ ಎಲ್ಲಿಗೆ ಅನುಕೂಲ ಆಗುತ್ತೆ ಅಲ್ಲಿಗೆ ಬರಲಿ, ನೀವು ಹೋಗಿ ಪಿಕ್ ಮಾಡೋದೇನು ಬೇಡ ಅಂದ್ರು. ನನಗೆ ಆಶ್ಚರ್ಯ ಆಯ್ತು. ನಾನು ಚಿಕ್ಕವನು, ಅವರು ದೊಡ್ಡವರು, ನಾನೇ ಹೋಗಿ ಪಿಕ್ ಮಾಡೋಕೆ ರೆಡಿ. ಸರ್, ಯಾಕೆ ಹೀಗೆ ಹೇಳ್ತಾ ಇದ್ದಾರೆ ಅಂತ. ಪೂರ್ತಿ ಚರ್ಚೆ, ಸಂಭಾಷಣೆಯ ನಂತರ ಅರ್ಥವಾಗಿದ್ದು, ಅವರಿಗೆ ಆಸಕ್ತಿ ಇದ್ರೆ ಅವರೇ ಕಾಲ್ ಮಾಡ್ಕೊಂಡು, ಕೇಳ್ಕೊಂಡ್ ಬರ್ಬೇಕು. ಒತ್ತಡ, ಬಲವಂತ, ಹೇರಿಕೆ ಇರಬಾರದು. ಎಂಥಹ ಮುಖ್ಯ ಮತ್ತು ಸೂಕ್ಷ್ಮ ವಿಚಾರ ಅಲ್ವಾ? ನಾವು ಏಕೆ ಬಲವಂತ ಮಾಡ್ಬೇಕು? ಸುಲಭವಾಗಿ ಅವರು ಇರೋ ಜಾಗಕ್ಕೆ ಹೋಗಿ ಯಾವುದೇ ಶ್ರಮವಿಲ್ಲದೆ ಹೋದ್ರೆ ಅದಕ್ಕೆ ಮೌಲ್ಯ ಇರಲ್ಲ. 


ಮಾತಿನ ಪ್ರಕಾರ, ನಾನು ಬೆಂಗಳೂರಿನಿಂದ ಮುಂಜಾನೆ 7 ಗಂಟೆಗೆ ಹೊರಟು, ಹೊಸಕೋಟೆಯಲ್ಲಿ ನಂಗಲಿಯವರನ್ನು ಪಿಕ್ ಮಾಡಿ, ಮಾಲೂರಿನಲ್ಲಿ ಅವರದ್ದು ನಟರಾಜ ಬೂದಾಳರ ಪುಸ್ತಕ ಕುರಿತು ಸಂವಾದ ಕಾರ್ಯಕ್ರಮವನ್ನು ಮುಗಿಸಿ ಹೊಟ್ಟೆಗೆ ಸ್ವಲ್ಪ ಹಾಕೊಂಡು ಹೊರಡೋದು. ಕೊನೆಯ ಅವಧಿಯಲ್ಲಿ ಕಾರ್ಯಕ್ರಮದಲ್ಲಿ ಸ್ವಲ್ಪ ಬದಲಾವಣೆಯಾಯ್ತು. ಸಂವಾದ ಕಾರ್ಯಕ್ರಮ ಕಾರಣಾಂತರಗಳಿಂದ ಮೂದೂಡಲ್ಪಟ್ಟಿತ್ತು. ಆದರೆ, ಮಾತಿನಂತೆ ನೇರವಾಗಿ ಹೋಗೋದು ಅಂತಾ ಆಯ್ತು. ನನಗೆ ಶನಿವಾರ ಸ್ವಲ್ಪ ಕೆಲಸವಿತ್ತು ಮತ್ತು ಭಾನುವಾರ ಕೆಲವೊಂದು ರಿಪೋರ್ಟ್ ಮಾಡೋದು ಇದ್ದಿದ್ದರಿಂದ ಮುಂಜಾನೆ 5 ಗಂಟೆಗೆ ಮೆಸೆಜ್ ಮಾಡಿದೆ. ಸರ್, 9.30-10 ಗಂಟೆ ಸಮಯಕ್ಕೆ ಹೊಸಕೋಟೆ ತಲುಪುತ್ತೇನೆ ಅಂತ. ನಾನು ತಲುಪುವಾಗ 10.30 ಆಯ್ತು. ಮೊದಲ ಬಾರಿಗೆ ಹೋಗ್ತಾ ಇದ್ದೀನಿ, ಹೇಳಿದ ಸಮಯಕ್ಕೆ ಹೋಗ್ತಾ ಇಲ್ವಲ್ಲ ಅನ್ನೋ ಆತಂಕ ಬೇರೆ ಇತ್ತು. ಈ ನಡುವೆ ಕರೆ ಮಾಡಿ, ಎಲ್ಲಿದ್ದೀರಿ, ತೊಂದರೆಯಿಲ್ಲ ಆರಾಮಾಗಿ ಬನ್ನಿ, ನಾನು ಹೊಸಕೋಟೆ ಟೋಲ್ ದಾಟಿದ ತಕ್ಚಣ ಸರ್ವೀಸ್ ರೋಡ್ ಇರುತ್ತೆ, ಪೋಲಿಸ್ ಸ್ಟೇಷನ್ ಇದೆ, ಅದರ ಪಕ್ಕದಲ್ಲಿಯೇ ಬಸ್ ಸ್ಟಾಪ್ ಇದೆ ಅಲ್ಲಿ ಕಾಯ್ತಾ ಇರ್ತೀನಿ, ಸರಿ ಸರ್, ನಾನು ಕೆ. ಆರ್. ಪುರಂ ದಾಟಿದ ಮೇಲೆ ಕಾಲ್ ಮಾಡ್ತೀನಿ. ಸುಮಾರು 9.45ಕ್ಕೆ ಕಾಲ್ ಬಂತು. ಹರೀಶ್ ಎಲ್ಲಿದ್ದೀರಿ, ನಾನು ನಿಮಗೆ ತಿಳಿಸಿದ ಜಾಗದಲ್ಲಿದ್ದೀನಿ. ಸರ್, ಇಷ್ಟು ಬೇಗ ಬಂದ್ಬಿಟ್ರಾ? ನಾನು ಇನ್ನೂ ಬೈಯಪ್ಪನಹಳ್ಳಿ ಹತ್ರ ಇದ್ದೀನಿ. ಪರ್ವಾಗಿಲ್ಲ ನೀವು ಆರಾಮಾಗಿ ಬನ್ನಿ, ನಾನು ಹೇಳಿದ್ದು ಗೊತ್ತಾಯ್ತಲ್ಲ? ಟೋಲ್ ಆದ ತಕ್ಷಣ ಸವೀರ್ಸ್ ರೋಡ್ ತಗೊಳ್ಳಿ. ಓಕೆ ಸರ್. ಅಯ್ಯೋ ಸುಮಾರು ಒಂದು ಗಂಟೆ ಕಾಲ ಕಾಯಿಸಬೇಕಲ್ಲ ಅನ್ನೋ ಗಿಲ್ಟ್ ನನಗೆ. ಟೋಲ್ ದಾಟಿ, ಅಲ್ಲಿಗೆ ತಲುಪಿದೆ. ಕಾರ್ ನಿಲ್ಲಿಸಿ ನೋಡಿದೆ. ಡಿಕ್ಕಿ ತೆಗೀರಿ. ಒಂದು, ಎರಡು, ಮೂರು ಬ್ಯಾಗ್‍ಗಳು ಡಿಕ್ಕಿ ತುಂಬಿಸಿದ್ರು. ಸಾರಿ ಸರ್, ತುಂಬಾ ಲೇಟ್ ಆಯ್ತು, ಕೆ.ಆರ್.ಪುರಂ ಬಿಟ್ಟ ಮೇಲೆ ಬರ್ಬೇಕಿತ್ತು ನೀವು, ಮುಂಚೆನೇ ಬಂದ್ರಿ ಅಂದೆ. ಪರ್ವಾಗಿಲ್ಲ ಬಿಡಿ. ನಡಿರಿ. 


ಸುಮಾರು 2500 ರೂಪಾಯಿಯಷ್ಟು ದಿನಸಿ ಸಾಮಾಗ್ರಿ ಕೊಂಡಾಗಿತ್ತು. ಸ್ವತಃ ಅವರೇ ಹೋಗಿ ಅವೆಲ್ಲವನ್ನು ತಂದಿದ್ದರು. ನಾನು ಒಂದು ಮುದ್ದೆ ಊಟ ಮಾಡ್ಕೊಂಡ್ ಬಂದೆ ನೀವ್ ಏನ್ ತಿಂದ್ರಿ? ಸರ್, ನಾನು ನಿನ್ನೆ ಊರಿಂದ ಬಂದೆ ರಾತಿ ಅನ್ನ ಇತ್ತು, ಹಬ್ಬದ್ದು ಮಟನ್, ಚಿಕನ್ ಇತ್ತು ಅದನ್ನ ಬಿಸಿ ಮಾಡ್ಕೊಂಡ್ ತಿಂದು ಬರೋಕೆ ತಡ ಆಯ್ತು ಅಂದೆ. ಇರಲಿ ಬಿಡಿ, ಅವೆಲ್ಲಾ ಮಾಮೂಲಿ, ಈಗ ನಡಿರಿ. ಹೀಗೆ ಹತ್ತು ಹಲವು ವಿಚಾರಗಳು, ಮಾತುಕತೆಗಳು, ಅನುಭವ ಇತ್ಯಾದಿ ಆಗಿ, ಬೇತುಮಂಗಲ ತಲುಪಿ, ಅಲ್ಲೊಂದು ತರಕಾರಿ ಅಂಗಡಿ. ಸರ್, ಇಲ್ಲೇ ಏಕೆ, ಸರ್, ಹೊಸಕೋಟೆಲೇ ತಗೊಳ್ಳೋದಲ್ವ? ನಾನು ಒಂದು ಕಡೆಗೆ ಅಂತ ಮಾಮೂಲಿಯಾಗಿರುತ್ತೆ, ಬದಲಾಯಿಸೋಕೆ ಹೋಗಲ್ಲ. ಸರಿ ಸರ್, ಇಷ್ಟೊಂದು ತರಕಾರಿ ನಾ? ಮೂರು ದಿನಕ್ಕೆ? ಬೇಕಾಗುತ್ತೆ, ನೋಡಿವ್ರಿ ಬನ್ನಿ. ಎಲ್ಲವನ್ನು ಪಟ್ಟಿ ಮಾಡ್ಕೊಂಡು ಬಂದಿದ್ದಾರೆ. ಅಂಗಡಿಯವನು ತನ್ನ ಅಂಗಡಿಲಿ ಸೀಮೆ ಬದನೆಕಾಯಿ ಚೆನ್ನಾಗಿಲ್ಲ ಅಂತಾ ಬೇರೆ ಅಂಗಡಿಯಿಂದ ತಂದುಕೊಟ್ಟ, 715 ರೂಪಾಯಿ ಆದ ಜಾಗದಲ್ಲಿ 15ರೂಪಾಯಿ ಬಿಟ್ಟ, ಉಚಿತವಾಗಿ ಕರಿಬೇವು, ಒಂದೆರಡು ನಿಂಬೆ ಹಣ್ಣು ನಮ್ಮ ಬ್ಯಾಗು ಅಲ್ಲಿಂದ ಕಾರಿನ ಡಿಕ್ಕಿಗೆ ಹೋದವು. ಇದು ನಂಗಲಿರವರು ಸಂಪಾದಿಸಿರುವ ಆತ್ಮೀಯತೆ. ಅವರ ತಮ್ಮನಿಗೆ ಕರೆ ಮಾಡಿ, ಅಮ್ರ, ತರಕಾರಿ ತಗೊಂಡ್ವಿ, ಬೇತುಮಂಗಲ ಬಿಟ್ವಿ, ಹರೀಶ್ ನನ್ ಜೊತೆಗೆ ಇದ್ದಾರೆ ಏನ್ ತರ್ಬೇಕು? ಆಕಡೆಯಿಂದ, ಇವತ್ತು ಕೆರೆಕೋಡಿ ಬಿತ್ತು ಅಂತಾ ಮೇಕೆ ಹೊಡೆದ್ರು, ನಂದು ಒಂದು ಭಾಗ/ಪಾಲು ಸಿಕ್ಕಿದೆ, ಮೀನು ಇದೆ ಅಂತಾ ತಗೊಂಡಿದ್ದೀನಿ, ನೀನು ಪೋರ್ಕ್ ತಗೊಂಡ್ ಬಾ. ಎಷ್ಟು ಬೇಕು? ಒಂದ? ಎರಡ? ಒಂದೆರಡು ಇರಲಿ. 


ವಿ.ಕೋಟೆ ತಲುಪಿದೆವು. ಎಪಿಎಂಸಿ ಯಾರ್ಡ್ ಎದುರು ಒಂದು ಎನ್.ಟಿ.ಆರ್. ಪ್ರತಿಮೆ ಸುಂದರವಾಗಿದೆ. ಅದರ ಎದುರುಗಡೆ ಗಲ್ಲಿಯಲ್ಲಿ ಒಂದು ಪೋರ್ಕ್ ಹೋಟೆಲ್, ನನಗೆ ಅದು ಹೋಟೆಲ್ ನಿಮಗದು ಗುಡಿಸಲು. ಅಲ್ಲೊಂದು ಅಜ್ಜಿ, ಅವರೇ ಅಲ್ಲಿನ ಮಾಲಿಕಿ. ಸರ್, ಕಾರಿನಿಂದ ಇಲಿದಾಕ್ಷಣ ನಮಸ್ಕಾರಮು ಸರ್, ಬಾಹುನ್ನಾರಾ? ನೇನು ಬಾಹುನ್ನೇನು, ನುವ್ವು ಬಾಹುನ್ನೇನಮ್ಮ? ಹೀಗೆ ಇದು ತೆಲುಗಿನಲ್ಲಿ ಸಂಭಾಷಣೆ ಮುಂದುವರೆಯಿತು. ಅಲ್ಲಿ ಪೋರ್ಕ್ ಬೋಟಿ ಫೇಮಸ್, ನಾನು ಇಲ್ಲಿಯವರೆಗೂ ತಿಂದಿಲ್ಲ, ಆ ದಿನವೂ ತಿನ್ನಲಿಲ್ಲ, ಸಾರಿ ಸಿಗಲಿಲ್ಲ. ನಾನು ಮಟನ್ ಕಟ್ ಮಾಡಿಸೋದ್ರಲ್ಲಿ ಸ್ವಲ್ಪ ಬುದ್ದಿವಂತ, ಆ ಬುದ್ದಿವಂತಿಕೆ ತೋರಿಸೋದಕ್ಕೆ ಅಂತಾ ಬೇಗ ಇಳಿದು ಹೋದೆ. ಅವರು ನಾನು ತೋರಿಸುವುದಕ್ಕಿಂತಲೂ ಒಳ್ಳೆಯ ಮಟನ್ ಕಟ್ ಮಾಡಿ ಕೊಟ್ಟರು. ನನಗೆ ಆಶ್ಚರ್ಯ! ನಂಗಲಿಯವರಿಗೆ ಆ ಅಂಗಡಿ ಪರಿಚಯಿಸಿದ್ದು ಅವರ ತಮ್ಮ ಅಮರ ನಾರಾಯಣ ನಂಗಲಿ. ಅವರಿಗೆ ಎಂದಾಕ್ಷಣ, ಅಜ್ಜಿ, ಚೆನ್ನಾಗಿರುವ ಮಟನ್ ಕೊಡುತ್ತಾರೆ. ಈ ಮಟನ್ ಅಲ್ಲಿ ಚೆನ್ನಾಗಿರೋದು ಅಂದ್ರೇ ಏನು? ಇದಕ್ಕೆ ಮುಂದಿನ ಪ್ಯಾರಾದಲ್ಲಿ ಉತ್ತರ ಕೊಡ್ತಿನಿ. ಇಬ್ಬರೂ ತಲಾ ಒಂದೊಂದು ಪ್ಲೇಟ್ ಪೋರ್ಕ್ ಫ್ರೈ ತಿಂದೆವು. ಎಷ್ಟು ಸರಳವಾಗಿ, ರುಚಿಯಾಗಿತ್ತು ಅನ್ನೋದನ್ನ ನೀವೇ ಹೋಗಿ ತಿನ್ನಬೇಕು. ಯಾವುದೇ ಅತಿಯಾದ ಮಸಾಲವಿಲ್ಲ, ಎಣ್ಣೆಯಿಲ್ಲ. ಸಿಂಪಲ್, ಟೇಸ್ಟಿ ಆಂಡ್ ಯಮ್ಮಿ. ಅಲ್ಲಿಂದ ಒಂದೂವರೆ ಕೆ.ಜಿ. ಪೋರ್ಕ್ ತಗೊಂಡ್ ಹೊರಟೋ. ಹರೀಶ್, ನಿಮ್ ಸ್ಟೈಲ್ ಅಲ್ಲೇ ಮಾಡಿ. ಸಾರ್, ನಂದು ಕೂರ್ಗ್ ಸ್ಟೈಲ್ ಪೆಪ್ಪರ್ ಡ್ರೈ, ಮೆಣಸಿನಕಾಯಿ ಮತ್ತು ಪೆಪ್ಪರ್ ಪೌಟರ್ ಬೇಕು. ಬನ್ನಿ ಮುಂದೆ ತಗೊಳ್ಳೊಣ.


ವಿ.ಕೋಟೆ. ಹಳೆ ಬಸ್ ಸ್ಟಾಂಡ್ ಹತ್ತಿರ ಬಂದ್ವಿ. ಸ್ವಲ್ಪ ಸೈಡ್ ಗೆ ಹಾಕಿ. ಯಾಕೆ ಸರ್, ಸ್ವಲ್ಪ ಸ್ವೀಟ್ ಮತ್ತೆ ಮಿಕ್ಷ್ಚರ್ ತಗೋತಿನಿ. ನಾವು ಚಾರಣಕ್ಕೆ ಹೋಗ್ತಾ ಇದ್ದೀವಾ? ನೆಂಟರ ಮನೆಗಾ? ಸರಿ ಸರ್ ಅಂದೆ. ಅಲ್ಲಿಯೇ ಅಂಗಡಿಗೆ ಹೋಗಿ ಪೆಪ್ಪರ್ ಪೌಡರ್ ಕೇಳಿದೆ. ವೈಟ್ ಪೆಪ್ಪರ್? ಬ್ಲಾಕ್ ಪೆಪ್ಪರ್? ಮೊದಲ ಬಾರಿಗೆ ನಾನು ಈ ಪದ ಕೇಳಿದ್ದು, ವೈಟ್ ಪೆಪ್ಪರ್. ಕುತೂಹಲದಿಂದ ವೈಟ್ ಪೆಪ್ಪರ್ ಪ್ಯಾಕೇಟ್ ತೋರಿಸಿ ಎಂದೆ. ಅದು ಧನಿಯಾ ಪುಡಿ. ಅದೇ ಅಂಗಡಿಯಲ್ಲಿ ಎರಡು ಪ್ಯಾಕೆಟ್ ಪೆಪ್ಪರ್ ಪೌಡರ್ ತಗೊಂಡೆ. ನಂಗಲಿಯವರು ಅರ್ಧ ಗಂಟೆಯಾದರೂ ಬರಲಿಲ್ಲ. ರಸ್ತೆ ಕಿರುದಾಗಿತ್ತು, ಸಾಕಷ್ಟು ದೊಡ್ಡ ಗಾಡಿಗಳು ಓಡಾಡೋ ಹೈವೇ. ಏನ್ ಸರ್ ಇಷ್ಟೊಂದು ಲೇಟ್? ಏನ್ ಗೊತ್ತಾ ಹರೀಶ್, ನಾನು ಯಾವಾಗಲೂ ಇದೇ ಅಂಗಡೀಲಿ ತಗೊಳ್ಳೋದು. ಅವನು, ಹಳೇ ಮಿಕ್ಷ್ಚರ್ ಬೇಡ, ಇರಿ ಸರ್, ಹೊಸದಾಗಿ ಹಾಕೊಡ್ತೀನಿ ಅಂತಾ ಈಗ ತಾನೇ ಮಾಡಿದ ಮಿಕ್ಷ್ಚರ್ ಕೊಟ್ಟ ಅಂದ್ರು. ಇರೋ ಹಳೇ ಸ್ಟಾಕ್ ಖಾಲಿ ಆಗಲೀ ಅಂತಾ ಕಾಯೋ ಜನರ ನಡುವೆ ಇವನು ಹೊಸದಾಗಿ ಮಾಡಿಕೊಟ್ಟ ಅಂದ್ರೇ ನಂಗಲಿಯವರ ಕಳೆದ ಮೂವತ್ತು ವರ್ಷಗಳಿಂದ ಈ ಹಳ್ಳಿಗಳಲ್ಲಿ ಸಂಪಾದಿಸಿರುವ ಸಂಬಂಧಗಳಿಗೆ ಸಾಕ್ಷಿ. ಸರ್, ಈಗ ದಾರಿ? ಹೀಗೆ ಅಂಬೇಡ್ಕರ್ ಪ್ರತಿಮೆ ಹತ್ರ ರೈಟ್ ತಗೊಳ್ಳಿ. ಎಡಕ್ಕೆ ಹೋದ್ರ ಪಲಮ್ನೇರ್, ತಮಿಳ್ನಾಡು, ಹಿಂದಕ್ಕೆ ಕೆ.ಜಿ.ಎಫ್. ಈಗ ನಾವಿರೋದು ಆಂಧ್ರ. ಓಕೆ ಸರ್. 


ಇಲ್ಲಿಂದ ಹನ್ನೆರಡು ಕಿಲೋಮೀಟರ್ ನಡುಮಂತ್ರಮ್, ಅಲ್ಲಿಗೆ ಐದು ರಸ್ತೆಗಳಿವೆ. ನಾನು ಅದಕ್ಕೆ ಐದು ಹೆಸರಿಟ್ಟಿದ್ದೀನಿ. ಧರ್ಮರಾಯ, ಭೀಮಸೇನ, ಮಧ್ಯಮ, ನಕುಲ, ಸಹದೇವ, ಈ ಐದು ರಸ್ತೆಗಳು ನಡುಮಂತ್ರಮ್ ತಲುಪುತ್ತೆ. ಈಗ ಯಾವ ಮಾರ್ಗ ಅನುಸರಿಸೋದು ಸರ್. ಮಧ್ಯಮ ಮಾರ್ಗ, ಮೂರನೆದು. ಸರಿ ಸರ್. ಎಡಕ್ಕೆ ಒಂದು ಕೆಇಬಿ ಆಫೀಸ್ ಪಕ್ಕದಲ್ಲಿ ಹೋದೆವು. ಕರ್ನಾಟಕದಲ್ಲಿ ಕೆಇಬಿ, ಆಂಧ್ರದಲ್ಲಿ ಏನ್ ಹೇಳ್ತಾರೋ ಏನೋ, ನಮಗ್ಯಾಕೆ ಬಿಡಿ. ಅಲ್ಲಿಂದ ಸುಮಾರು ಐದಾರು ಕಿಲೋಮೀಟರ್ ದೂರಕ್ಕೆ ಒಂದು ಊರು, ಅದೇ ನಡುಮಂತ್ರಮ್. ಕಾಡಿಗೂ ನಾಡಿಗೂ ನಡುವೆಯಿರುವ ಹಳ್ಳಿ. ಊರಿನ ನಡುವೆ, ಮನೆಗಳೊಂದಿಗೆ ಮನೆಯೊಂದರ ಮುಂದಕ್ಕೆ ಹೋಗಿ ನಿಂತೆವು. ಕಾಂಪೌಂಡ್ ದಾಟಿ ಒಳಕ್ಕೆ ಹೋದಾಕ್ಷಣ, ದಪ್ಪ ಮೀಸೆಯ, ರಾಜ ಗಾಂಭೀರ್ಯದ ಗಡಸು ಧನಿಯ ಒಬ್ಬ ವ್ಯಕ್ತಿಯ ಆಗಮನ. ನಮಸ್ಕಾರ ಬನ್ನಿ, ನಾನು ನಮ್ಮಣ್ಣನ ಸ್ನೇಹಿತರು ಅಂದ್ರೆ ನಮ್ಮ ವಯಸ್ಸ್ನೋರು ಅಂದುಕೊಂಡಿದ್ದೆ!? ಒಳಗೊಳಗೆ ಮೂರ್ನಾಲ್ಕು ಪ್ರಶ್ನೆ ನನಗೆ. ಇದು ಸ್ವಾಗತನಾ? ತಿರಸ್ಕಾರನಾ? ಒಪ್ಪಿಗೆನಾ? ಹೀಗೆ ಕುಶೋಲೋಪಾಚಾರ ನಡೆಯಿತು. ನಾವು ನೇರ ಬ್ಯಾಟಿಂಗ್ ಇಳಿಯೋ ಜನ, ಅದರೊಂದಿಗೆ ನಂಗಲಿ ಸರ್ ನಮ್ ಕೋಚ್. ಹರೀಶ್ ನಿಮ್ ಸ್ಟೈಲ್ ಅಲ್ಲಿ ಪೋರ್ಕ್ ಮಾಡಿ, ಏನ್ ಬೇಕೋ ತಗೊಳ್ಳಿ. ಅಮ್ರ ಅವರು ಅವರ ಪಾಡಿಗೆ ಮಾಡ್ಲಿ, ಆಜ್ಞೆಯಾಯ್ತು. 


ಯಥಾ ಪ್ರಕಾರ ಬೆಳ್ಳುಳ್ಳಿ, ಶುಂಠಿ, ಮುಖ್ಯವಾಗಿ ಪೆಪ್ಪರ್, ಧನಿಯಾ ಪುಡಿ, ಹೀಗೆ ಅಡುಗೆ ಅರಮನೆಯಲ್ಲಿ ಮಾತುಕತೆಯ ನಡುವೆ ಕಂಡುಕೊಂಡ ಒಂದಿಷ್ಟು ಸತ್ಯಾತೆಯನ್ನು ಮುಕ್ತವಾಗಿ ನಿಮ್ಮ ಮುಂದಿಡುತ್ತಿದ್ದೇನೆ. ಇದು ಮಧ್ಯಾಹ್ನ ಸುಮಾರು ಎರಡು ಗಂಟೆಯಿಂದ ರಾತ್ರಿ ಹನ್ನೊಂದು ಗಂಟೆಯವರೆಗೆ ನಡೆದ ಮಾತುಕತೆಗಳು, ಸಂಭಾಷಣೆಗಳು, ಚರ್ಚೆಗಳ ಉಪಸಂಹಾರವನ್ನ ಕೊಡ್ತೀನಿ. ಹರೀಶ್, ನೀವು ಹಂದಿ ಮಾಂಸ ಹೇಗೆ ಮಾಡ್ತೀರಿ? ಸರ್, ನಾನು ಧನಿಯಾ, ಹಸಿ ಮೆಣಸಿನಕಾಯಿ, ಕರಿಮೆಣಸು, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಉಪ್ಪು, ಸಿಕ್ಕಿದ್ರೆ ಕಾಚಂಪುಳಿ, ಇದಕ್ಕೆ ಮೀರಿ ಇನ್ನೇನು ಬೇಡ ಎಂದೆ. ಅದರಂತೆಯೆ, ಎಲ್ಲವೂ ಸಿದ್ಧವಾಯ್ತು. ಖಾರ ಹೆಚ್ಚಿರಬೇಕ? ನಮ್ಮಣ್ಣ ಹಸಿರು ಮೆಣಸಿನಕಾಯಿ ಇಷ್ಟಪಡಲ್ಲ. ಓಕೆ. ಸರ್. ಅಂತೂ ಇಂತೂ ಪೋಕ್ ರೆಡಿಯಾಯ್ತು. ಅವರು, ಪೋಕ್ ಮಾಡುವ ಮುಂಚೆ ಮ್ಯಾರಿನೇಟ್ (ಉಪ್ಪಿಗೆ ನೆನೆಹಾಕುವುದು) ಮಾಡುವುದು ವಾಡಿ. ಮ್ಯಾರಿನೇಟ್ ಎಂದರೆ, ಉಪ್ಪು, ಖಾರಪುಡಿ, ಮಸಲಾಪುಡಿ, ಮೊಸರು, ಇತ್ಯಾದಿ ಹಾಕಿ ಮಾಂಸಕ್ಕೆ ರುಚಿ ಹಿಡಿಯುವಂತೆ ನೆನೆಸಿ ಗಂಟೆಗಟ್ಟಲೆ ಇಡುವುದು. 


ಅಂತೂ ಆಯುಧ ತೆಗೆದುಕೊಂಡು ಹೊರಟೆ. ನಮಗೆ ಕೆಲಸವನ್ನೆ ಕೊಡದಂತೆ, ಅಮರ್ ಸಾಹೇಬ್ರು ಮತ್ತು ಅವರ ಶಿಷ್ಯ ನಾಗರಾಜ ಎಲ್ಲವನ್ನೂ (ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಧನಿಯಾ ಪುಡಿ ಹುರಿಯುವುದು, ಆಡಿಸುವುದು, ಇತ್ಯಾದಿ) ಮಾಡಿ ಮುಗಿಸಿದರು. ಆ ಮನೆಯ ಅಡುಗೆ ಮನೆಯ ಕುರಿತು ಹೇಳಬೇಕು. ಅಮರ್ ಅವರು, ಒಬ್ಬರೇ ತಿಂಗಳಲ್ಲಿ ಒಂದು ವಾರ ಇರುತ್ತಾರೆ, ಆದರೇ, ಯಾವ ಸಂಸಾರದ ಮನೆಗೂ ಕಡಿಮೆಯಿಲ್ಲದಂತೆ ಅಡುಗೆ ಮನೆಯನ್ನಿಟ್ಟಿದ್ದಾರೆ. ಆ ಕ್ಷಣದ ಪಾತ್ರೆಗಳನ್ನು ಆಗಲೇ ತೊಳೆಯುತ್ತಾರೆ. ಬಹುಶಃ, ಈ ಕಾಲದ ಸೊಸೆಯಂದಿರಿಗೆ ಒಂದು ತರಬೇತಿ ಶಾಲೆಯನ್ನಾರಂಭಿಸುವ ಅರ್ಹತೆ ಅವರಿಗಿದೆ.  ಮಾಂಸವನ್ನು ನಾಗರಾಜನೇ ತೊಳೆದ. ನನ್ನದೇನು? ಅಳತೆಗೋಲು ಮಾತ್ರ. ಇದೊಂದು ರೀತಿ ಪಿ.ಎಚ್.ಡಿ. ವಿದ್ಯಾರ್ಥಿಗಳು ತಮ್ಮ ಗೈಡ್ ಗಳಿಗೆ ಪ್ರಬಂಧ, ಪಿಪಿಟಿ ಮಾಡಿಕೊಟ್ಟಂತೆ. ಅಂತೂ ಕೂರ್ಗಿ ಸ್ಟೈಲ್ ಪೋರ್ಕ್ ರೆಡಿಯಾಯ್ತು. ಸ್ವಲ್ಪ ಖಾರ ಕಮ್ಮಿಯಾಗಿತ್ತು. ಆದರೂ ಎಲ್ಲರೂ ಪ್ರಶಂಸೆ ನೀಡಿದರು. ಅದರಲ್ಲಿಯೂ ನಂಗಲಿ ಸರ್ ಮಾತ್ರ, ನನ್ನ ಸ್ನೇಹಿತ ಹರೀಸ್ ಚೇಸಿಂದು (ಹರೀಶ್ ಮಾಡಿದ್ದು) ಎಂದು ಹೊಗಳಿ ಮುಜುಗರಕ್ಕೀಡು ಮಾಡಿದರು. ಅದರ ನಡುವೆ ನಮ್ಮ ಗೈಡ್ ವೆಂಕಟೇಶ್ ಎಲ್ಲಿದ್ದಾರೆ, ಎಷ್ಟೊತ್ತಿಗೆ ಬರುತ್ತಾರೆಂಬುದರ ಚರ್ಚೆಗಳು. ಅದರ ಕುರಿತು ಮುಂದಿನ ಅಧ್ಯಾಯದಲ್ಲಿ ಬರೆಯುವುದು ಲೇಸು. ಇಲ್ಲಿಂದ ತೆಗೆದುಕೊಂಡು ಹೋದ ದಿನಸಿ, ತರಕಾರಿಗಳನ್ನು ಅಚ್ಚುಕಟ್ಟಾಗಿ ಜೋಡಿಸಿದೆವು. 


ನಂಗಲಿ ಯವರ ಒಂದು ಪುಟ್ಟ ಮನೆಯಿದೆ, ಮನೆ ಎನ್ನುವುದಕ್ಕಿಂತ ಸುಂದರ ಪ್ರಪಂಚವಿದೆ. ಒಂದು ಖಾಲಿ ಸೈಟ್ ಇದೆ. ಅದರ ಬಗ್ಗೆ ನಾನು ಫೋಟೋ ಹಾಕುವೆ, ನೋಡಿದರೆ ನಿಮಗೆ ತಕ್ಕ ಮಟ್ಟಕ್ಕೆ ಅರ್ಥವಾಗಬಹುದು. ಇರಲಿ, ವಿವರಿಸುವ ಪ್ರಯತ್ನಿಸುವೆ. ಕೆರೆಯೊಂದಿದೆ ವಿಶಾಲವಾಗಿ, ಅದರ ತಟದಲ್ಲಿ ಇವರದೊಂದು ಖಾಲಿ ಸೈಟ್, ಅದರ ಎದುರಿಗೆ ಒಂದು ಚಿಕ್ಕ ಸೈಟಿನಲ್ಲಿ ಒಂದು ಪುಟ್ಟ ಮನೆ. ಅದಕ್ಕೊಂದು ಕಾಪೌಂಡ್, ಅಲ್ಲಿಗೆ ಗೇಟ್ ತೆಗೆದು ಒಳಗೆ ಬನ್ನಿ. ತರ ತರವಾದ ಗಿಡಗಳು, ಕೂರುವುದಕ್ಕೆ ಕಲ್ಲಿನ ಬೆಂಚುಗಳು, ಮನೆಯೊಳಗೆ ಇಣುಕಿಸಿ ನೋಡಿದರೆ, ಏನನ್ನು ನೋಡಬೇಕು? ಪುಸ್ತಕವನ್ನೋ? ಪ್ರಶಸ್ತಿ ಪತ್ರಗಳು, ಹಾರಗಳು, ಫೋಟೋಗಳು, ಒಂದು ಮಂಚ, ಒಂದು ಬೀರು. ಅದರೊಳಗೆ ಚಾರಣಕ್ಕೆ ಬೇಕಿರುವ ವಸ್ತುಗಳು. ಒಂದು ಸಂಸಾರ ನಡೆಸಬಹುದಾದ ದಿನಸಿ ವಸ್ತುಗಳು. ಮೂರ್ನಾಲ್ಕು ಖಾಲಿ ಬ್ಯಾಗುಗಳು, ಚೀಲಗಳು, ಟಾರ್ಪಲ್, ಖಾಲಿ ಬಾಟಲಿಗಳನ್ನು ತೆಗೆದುಕೊಂಡು ಅಮರ್ ನಂಗಲಿಯವರ ಮನೆಗೆ ಬಂದೆವು. 

ಇದೊಂದು ಕಲಿತು ನಲಿಯಲೇ ಬೇಕಾದ ಅನುಭವ. ನಾವುಗಳು ತಂದ ದಿನಸಿ ಸಾಮಾಗ್ರಿಗಳು, ತರಕಾರಿಗಳನ್ನು ಬ್ಯಾಗುಗಳಿಗೆ ಜೋಡಿಸುವುದು. ಅದೆಷ್ಟು ಅಚ್ಚುಕಟ್ಟಾಗಿ ಜೋಡಿಸಲ್ಪಟ್ಟಿತ್ತೆಂದರೆ ಹೇಳುವುದಕ್ಕೆ ಅಸಾಧ್ಯ, ನಾನು ಆ ಸಮಯದಲ್ಲೊಂದು ವಿಡಿಯೋ ಮಾಡಲೇಬೇಕಿತ್ತು. ತಪ್ಪಾಯಿತು ಕ್ಷಮೆಯಿರಲಿ. ಅಡಿಯಲ್ಲಿ ಗಟ್ಟಿ ಪದಾರ್ಥಗಳು ಸೇರಿದಂತೆ ಒಂದೇ ಒಂದೂ ಇಂಚೂ ಜಾಗವನ್ನು ಬಿಡದಂತೆ ಬ್ಯಾಗುಗಳನ್ನು ತುಂಬಲಾಯಿತು. ಅಕ್ಕಿಯನ್ನು ತೂಕ ಮಾಡಿಸಿ, ಒಂದು ಪ್ಲಾಸ್ಟಿಕ್ ಚೀಲಕ್ಕೆ ಒಂದು ಕೆ.ಜಿ.ಯುಂತೆ ಪ್ಯಾಕ್ ಮಾಡಿಸಲಾಗಿತ್ತು. ಒಂದು ಬ್ಯಾಗ್ ಅಕ್ಕಿ, ಮತ್ತೊಂದರಲ್ಲಿ ತರಕಾರಿ, ಮತ್ತೊಂದರಲ್ಲಿ ದಿನಸಿ (ಮಸಾಲೆ ಐಟೆಮ್), ಇನ್ನೊಂದು ಪಾತ್ರೆಯದ್ದು ಅದು ಗೈಡ್ ವೆಂಕಟೇಶ್ ಮನೆಯಲ್ಲಿತ್ತು. ಆ ಸಮಯಕ್ಕೆ ಅಮರ್ ಅವರ ಆತ್ಮೀಯರಾದ ನೀಲಕಂಠ ಸೇರ್ಪಡೆಯಾದರು. ಆ ನಡುವೆ ಒಬ್ಬ ಸ್ಥಳೀಯ ರೈತ ರೆಡ್ಡಿಯ ಮಾತುಗಳು ಅದ್ಭುತವಾದವು. ಮುಂದಿನ ಭಾಗದಲ್ಲಿ ಅಮರ್ ರವರ ಮನೆಯಲ್ಲಿ ಮಧ್ಯಾಹ್ನ ಎರಡರಿಂದರ ರಾತ್ರಿ ಹನ್ನೆರಡರ ತನಕ ನಡೆದ ಪ್ರಮುಖ ಚರ್ಚೆಗಳ ವಿವರಗಳನ್ನು ನೀಡುತ್ತೇನೆ, ಕೆಲವೊಂದು ಪುನಾರಾವರ್ತನೆಯಾಗಲೂಬಹುದು. 


ಮೊದಲಿಗೆ ಪೋರ್ಕ್ ತಿಂದು ಸುಧಾರಿಸಿಕೊಂಡೆವು. ಕೆಲವು ಗಂಟೆಗಳ ಕಾಲ ಕಳೆದು ನಾನಂತೂ ಮೇಕೆ ಮಾಂಸವನ್ನು ಆನಂದಿಸಿ ತಿಂದೆ. ಅನ್ನವನ್ನೂ ಉಂಡು ಮಲಗಲೆತ್ನಿಸಿದೆ. ಈ ನಡುವೆ ಎನ್.ಟಿ.ಆರ್. ಅವರ ಕುರಿತು ಹತ್ತಾರು ಹೊಸ ವಿಚಾರಗಳು ನನ್ನ ಮೆದುಳಿಗೆ ತಲುಪಿದೆವು. ಅವೆಲ್ಲವನ್ನೂ ಹೇಳಬಹುದು, ನೀವು ಕೇಳಲೂಬಹುದು, ಆದರೇ ನಾನು ಈಗ ವಿವರಿಸುವುದಿಲ್ಲ. ಮುಂದಿನ ಭಾಗಕ್ಕೆ ಮೀಸಲಿಡೋನ. 

ಸುಮಾರು ಹನ್ನೆರಡರ ಸಮಯಕ್ಕೆ ಮಲಗಿದೆವು. ಮುಂದಿನದ್ದು ಮುಂದಿನ ಸಂಚಿಕೆಗೆ ಇರಲಿ ಬಿಡಿ. ಆತುರವೇಕೆ? 


ಮುಂದುವರೆಯುವುದು......


ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...