12 ಸೆಪ್ಟೆಂಬರ್ 2015

ನನ್ನ ಜೀವನ ನಿಮ್ಮಿಂದ, ನಿಮ್ಮ ಜೀವನಕ್ಕೆ ಲ್ಯಾಂಡಮಾರ್ಕ್ ನೋಡಿ!!!

ನಾನು ಕಳೆದ ಬ್ಲಾಗ್ಗಿನಲ್ಲಿ ಹೇಳಿದ ಹಾಗೆ, ನಾನು ಇನ್ನು ಮುಂದೆ ನಿಮ್ಮನ್ನು ನನ್ನ ಬರವಣಿಗೆಯ ಮೂಲಕವೇ ಸೇರುವುದಕ್ಕೆ ಬಯಸುತ್ತೇನೆ. ಬರವಣಿಗೆಯ ಜೊತೆಗೆ, ಮಾತುಕತೆಯಲ್ಲಿಯೂ ಇರುತ್ತೇನೆ. ಇದೇನಪ್ಪ, ನಮ್ಮ ಫೋನಿಗೆ ಉತ್ತರ ಹೇಳುವುದಿಲ್ಲವೆಂಬ ಆತಂಕ ಬೇಡ. ನನ್ನದೊಂದು ಕೊಳಕು ಜೀವನ, ಕೊಳಕು ಮನಸ್ಸೆಂಬುದು ನಿಮಗೆ ಮೊದಲು ತಿಳಿದಿತ್ತು ಎನಿಸುತ್ತದೆ. ಆದರೇ, ನಿಜಕ್ಕೂ ನನ್ನ ಕೊಳಕುತನ ನನಗೆ ತಿಳಿದಿರಲಿಲ್ಲ. ಅದೂ ಬೆಳಕಿಗೆ, ಅಂದರೇ ನನ್ನ ಮನಸ್ಸಿಗೆ ಬಂದದ್ದು, ಕಳೆದ ತಿಂಗಳು ಅಂದರೇ, ಜುಲೈ ೨೦೧೫ರಲ್ಲಿ. ಇದೇನಪ್ಪಾ ಇವನು ಮೆಂಟಲ್ ಆಗಿಬಿಟ್ಟನಾ! ಆಶ್ಚರ್ಯ ಅಥವಾ ಪ್ರಶ್ನೆ? ಎರಡು ಒಂದೇ, ಅಥವಾ ನನ್ನ ಉತ್ತರವೂ ಒಂದೇ. ನೀವು ನನ್ನ ಕೆಳಗಿನ ಎಲ್ಲಾ ಸಾಲುಗಳನ್ನು ಸಂಪೂರ್ಣವಾಗಿ ಓದುವ ತನಕ ಯಾವುದೇ ತರ್ಕ ಅಥವಾ ತೀರ್ಮಾನಕ್ಕೆ ಬರಬೇಡಿ. ಓದಿದ ಮೇಲೂ ಯಾವುದೇ ತೀರ್ಮಾನಕ್ಕೂ ಬರಬೇಡಿ, ಅದು ನನ್ನಿಷ್ಟವೆಂದರೇ ನನಗೇನೂ ಇಲ್ಲ ಕಷ್ಟ. 

ನಾನು ಕೆಲಸ ಮಾಡುತ್ತಿದ್ದ, ಸಿಡಿಡಿ ಸಂಸ್ಥೆಯ ಜೊತೆಗೆ ಸ್ವಲ್ಪ ಅಪಸ್ವರವಿತ್ತು. ನಾನು ಇಲ್ಲಿಯ ತನಕ ಕೆಲಸ ಮಾಡಿದ ಎಲ್ಲಾ ಕಡೆಯಲ್ಲಿಯೂ ಇದು ಮಾಮೂಲಿಯಾಗಿತ್ತು. ಆದರೇ, ಸಿಡಿಡಿಯಲ್ಲಿ ಸ್ವಲ್ಪ ಹೆಚ್ಚಿಗೆಯೇ ಇತ್ತು. ಇದಕ್ಕೆ ಕಾರಣ ಅಲ್ಲಿ ಕೆಲಸ ಮಾಡುತ್ತಿದ್ದವರಿಗೆ ತಲೆಯಿಲ್ಲವೆಂಬುದು ನನ್ನ ವಾದ, ತಲೆ ಯಾವುದೆಂಬುದರ ಅರಿವಿಲ್ಲ ಇವನಿಗೆ ಎಂಬುದು ಅವರ ಪ್ರತಿವಾದ. ವಾದ ಪ್ರತಿವಾದಗಳಿಂದ ನನ್ನ ಮತ್ತು ಸಿಡಿಡಿಯ ಸಂಬಂಧ ಸಂಪೂರ್ಣ ಕುಲಗೆಟ್ಟಿತ್ತು. ಇದು ಇಂದಿನದಲ್ಲ, ನಾನು ಸಾಧಾರಣ ಹೈಸ್ಕೂಲಿಗೆ ಕಾಲಿಟ್ಟಾಗಲಿಂದ, ನನಗೆ ಯಾವ ಮಾಸ್ಟರುಗಳು ಅಷ್ಟಾಗಿ ಹಿಡಿಸಿಲ್ಲ. ಅವರೊಂದಿಗೆ ಜಗಳ, ಅವರನ್ನು ಕೆಣಕುವುದು, ರೇಗಿಸುವುದು, ಮನಸ್ಸಿಗೆ ಬಂದಂತೆ ಅನ್ನುವುದು. ಇದು ಮೊದಲಿಗೆ ಶುರುವಾಗಿದ್ದು ಹೈಸ್ಕೂಲಿನ ಮಾಸ್ಟರ ವಿರುದ್ದವಾದರೂ, ನಂತರ ಪಿಯುಸಿಯಲ್ಲಿನ ಪ್ರಭುದೇವ, ಯುವರಾಜ, ಸೋಮಶೇಖರ್, ಯುವರಾಜ ಕಾಲೇಜಿನ ಸುರೇಶ್, ಪದ್ಮಾಜಿ, ಬೆಂಗಳೂರು ವಿವಿಯ ನಂದಿನಿ, ಸುನೀತಾ, ಮತ್ತೆ ನಮ್ಮ ಗುರುಗಳಾದ ಶ್ರೀಕಂಠಸ್ವಾಮಿ, ಐಸೆಕ್ ನ ಲೆನಿನ್, ಐರಾಪ್ ನ ದಿನೇಶ್, ಅರ್ಘ್ಯ್ಂ ನ ವಿಜಯ್, ಡೆವಲಪ್ ಫೌಂಡೇಶನ್ನಿನ ಕುಮಾರ್, ಸಿಎಸ್ ಡಿಯ ಶ್ರೀನಿವಾಸ್, ಕ್ಲೀನ್ ಟೆಕ್ನಾಲಜೀಸ್ ನ ಮಹೇಶ್ವರಿ, ಸಿಡಿಡಿಯ ಸ್ಟಾಂಜೀನ್, ಹೀಗೆ ಎಲ್ಲರೊಡನೆಯೂ ನನ್ನ ಜಗಳಕ್ಕೆ ವಿಷಯ ಹೆಚ್ಚೂ ಕಡಿಮೆ ಒಂದೇ! ಇವರಿಗೆ ನಮ್ಮ ಸೆಕ್ಟರಿನ ಜ್ನಾನವಿಲ್ಲ, ಇವರು ಅನರ್ಹರು. ಇವರಿಗೆ ಮೌಲ್ಯಗಳಿಲ್ಲ, ಅಯೋಗ್ಯರು.
ಜೂನ್ ತಿಂಗಳಲ್ಲಿ, ನಾನು ಮೇಲೆ ತಿಳಿಸಿರುವ ಅರ್ಘ್ಯಂನ ವಿಜಯ್ ಗೆ ಸುಮ್ಮನೆ ಕರೆ ಮಾಡಿದೆ. ಅವರು ಸಿಂಗಾಪುರಕ್ಕೆ ಹೆಚ್ಚಿನ ವಿದ್ಯಾಬ್ಯಾಸಕ್ಕೆ ಹೋಗುತ್ತಿರುವುದರಿಂದ, ನನ್ನ ಎನ್.ಜಿ.ಓಗೆ ಏನಾದರೂ ಸಹಾಯವಾಗಬಹುದು, ಅರ್ಘ್ಯಂ ಕಡೆಯಿಂದ ಎಂಬುದು ನನ್ನ ನಿರೀಕ್ಷೆಯಾಗಿತ್ತು. ವಿಜಯ್ ಗೆ ಕರೆ ಮಾಡಿ ಮಾತನಾಡುವಾಗ, ನಡುವೆ ನನ್ನ ಎಲ್ಲಾ ವಿಷಯಗಳನ್ನು ಕೇಳಿದ. ನಾನು ಮುಚ್ಚು ಮರೆಯಿಲ್ಲದೇ ಎಲ್ಲವನ್ನೂ ಹೇಳಿದೆ. ನಡುವೆ ಅವನು ಲ್ಯಾಂಡ್ ಮಾರ್ಕ್ ಎಂಬುದೊಂದಿದೆ ನೋಡು ಎಂದ. ನಾನು ಮನೆಗೆ ಬಂದು ವೆಬ್.ಸೈಟ್ ನೋಡಿದೆ. ನಿಜಕ್ಕೂ ತಲ ಬುಡ ಅರ್ಥವಾಗಲಿಲ್ಲ. ಮತ್ತೆ ಅವನು ನನಗೆ ಕರೆ ಮಾಡಿದ. ನಾನು ಇಷ್ಟವಯಿತು, ಮುಂದೆ ಒಮ್ಮೆ ಮಾಡುತ್ತೇನೆಂದೆ. ಅವನು ನನ್ನನ್ನು ಲ್ಯಾಂಡ್ ಮಾರ್ಕ್ ನ ಪರಿಚಯದ ವಿಶೇಷ ಸಂಚಿಕೆಗೆ ಬರಲು ಆಹ್ವಾನಿಸಿದ. ನಾನು ನಾಲ್ಕಾರು ಸುಳ್ಳು ಹೇಳಿ ನುಣುಚಿಕೊಳ್ಳುವುದಕ್ಕೆ ಪ್ರಯತ್ನಿಸಿದೆ. ಮೊದಲಿಗೆ, ಮಳೆ ಬರುವಂತಿದೆ ಎಂದೆ. ನಂತರ, ಲೇಟ್ ಆಗುತ್ತದೆಯೆಂದೆ, ಮೀಟಿಂಗ್ ಇದೆಯೆಂದೆ. ಅವನು ಕಾಲ್ ಮಾಡುವುದು, ವಾಟ್ಸಪ್ ಸಂದೇಶಕ್ಕೆ ಉತ್ತರವನ್ನು ಕೊಡಬೇಕೋ ಬೇಡವೋ ಚಿಂತೆಗೀಡಾದೆ. 
ಬಹಳಷ್ಟು ಬಾರಿ ನಾವು ನಮ್ಮ ಸ್ನೇಹಿತರಿಗೆ ನೇರವಾಗಿ ಇಲ್ಲವೆನ್ನುವುದಕ್ಕೆ ಆಗುವುದಿಲ್ಲ. ಆ ಧೈರ್ಯವಿರುವುದಿಲ್ಲ, ಅದರಲ್ಲಿ ನಾನು ಮೊದಲನೆಯವನು. ನಾನು ನನ್ನ ಮನಸ್ಸಿನಲ್ಲಿರುವುದನ್ನು ನೇರ ಹೇಳುವುದಕ್ಕೆ ಹೆದರುವವನು. ನಾನು ಮನೆಯಲ್ಲಿ ನನ್ನ ಹೆಂಡತಿಗೆ ಈ ವಿಷಯ ತಿಳಿಸಿದೆ. ಅವಳೋ, ಮನಸ್ಸಿಗೆ ಬಂದಷ್ಟೂ ಮಂಗಳಾರತಿ ಮಾಡಿದಳು. ನಾನು ಬೇಸರಗೊಂಡು ಒಂದು ಕ್ವಾರ್ಟರ್ ಎಣ್ಣೆ ಹೊಡೆದೆ. ಅವಳು ಬೈಯ್ಯುವುದಕ್ಕೂ ಕಾರಣವಿತ್ತು. ನನ್ನ ಎನ್.ಜಿ.ಓಗೆ ಫಂಡ್ ರೈಸ್ ಮಾಡಿಕೊಡುತ್ತೇನೆಂದು ಐದು ಸಾವಿರದ ಕೆಂಪು ಮತ್ತು ಬಿಳಿ ನಾಮ ಹಾಕಿದ್ದರು. ನಿಮಗೆ ಏನೂ ಗೊತ್ತಿಲ್ಲಾ, ಸುಮ್ಮನೆ ದುಡ್ಡು ವ್ಯಯ ಮಾಡುವುದನ್ನು ಬಿಟ್ಟು ಎಂದು ಚೆನ್ನಾಗಿ ಜಡಾಯಿಸಿದಳು. ಅದು ಸತ್ಯವೇ, ಮದುವೆಯಾಗಿ ಒಂದೂವರೆ ವರ್ಷವಾಗಿದೆ, ಮದುವೆಯ ಆಲ್ಬಮ್ ತಂದಿಲ್ಲ, ಸ್ನೇಹಿತರ ಬಳಿ ಮಾಡಿದ ಸಾಲ ತೀರಿಸಿಲ್ಲ, ಆರು ವರ್ಷದಿಂದ ಎನ್.ಜಿ.ಓ ಅನ್ನುವುದೊಂದಿದೆ ಅದರಲ್ಲಿ ಯಾವೊಂದು ಸರಿಯಾದ ಕೆಲಸ ಮಾಡಿಲ್ಲ, ಅದೆಲ್ಲವೂ ಏಕೆ, ಕಾರಿನ ಹಿಂದಿನ ಲೈಟ್ ಒಡೆದು ಹೋಗಿ ಒಂಬತ್ತು ತಿಂಗಳಾಯಿತು ಅದನ್ನೂ ಹಾಕಿಸಿಲ್ಲ, ಕಾರು ಸರ್ವೀಸ್ ಮಾಡಿಸಿ ಮೂರು ತಿಂಗಳು ಕಳೆಯಿತು ಅದನ್ನು ಮಾಡಿಸಿಲ್ಲ, ಮನೆಯಲ್ಲಿ ನಲ್ಲಿ ರಿಪೇರಿಯಾಗಿ ನಾಲ್ಕು ತಿಂಗಳಾಯಿತು, ಮದುವೆಯ ಸಂದರ್ಭದಲ್ಲಿ ಪುರೋಹಿತ ಸರಿ ಇರಲಿಲ್ಲ, ಅಲಂಕಾರ ಮಾಡುವವನು ಸರಿಯಾಗಿ ಹೂವು ಹಾಕಿರಲಿಲ್ಲ, ಹನೀಮೂನಿಗೆ ಸರಿಯಾದ ಜಾಗಕ್ಕೆ ಕರೆದೊಯ್ಯಲಿಲ್ಲ, ಊಟಿಗೆ ಹೋದರೂ ಅಲ್ಲಿ ಬರೀ ಜಗಳ, ಊರಿಗೆ ಹೋದರೇ ಸ್ನೇಹಿತರ ಜೊತೆ ಸೇರಿ ಕುಡಿಯುವುದ್ ಊರೂರು ಅಲೆಯುವುದು, ಇಷ್ಟೊಂದು ಗುಣಗಳು ಮತ್ತು ಪಟ್ಟಿಗಳು ನನ್ನನ್ನ ಬಣ್ಣಿಸುವಾಗ ಯಾವ ಹೆಂಡತಿಯಾದರೂ ನನ್ನನ್ನು ಜವಬ್ದಾರಿ ಗಂಡಸು ಎನ್ನುವಳೇ!
ನಾನು ಇರಲಾರದೇ ಇರುವವನು ಇರುವೆ ಬಿಟ್ಟುಕೊಂಡ ಹಾಗೇ ಆಯಿತು. ವಿಜಯ್ ಮಾತ್ರ ನನ್ನ ಹಿಂದೆ ಬೀಳುವುದನ್ನು ನಿಲ್ಲಿಸಲಿಲ್ಲ. ನಾನೋ ಸುಮ್ಮನಿದ್ದರೇ ಆಗುತ್ತಿತ್ತು, ಸಾರಿ ಮುಂದಿನ ಸಲ ಗ್ಯಾರಂಟೀ ಎಂದೆ. ಅದಾದ, ಎರಡನೆಯ ದಿನಕ್ಕೆ, ಯಾರೋ ಮಹಾನುಭವ ನನ್ನ ಸ್ಕೂಟರಿಗೆ ಗುದ್ದಿದ, ನಾನು ಬಿದ್ದು ಉಷಾರು ತಪ್ಪಿದೆ. ವಿಜಯ್ ಮಾತ್ರ ಪದೇ ಪದೇ ಕಾಲ್ ಮಾಡುವುದನ್ನು ನಿಲ್ಲಿಸಲಿಲ್ಲ. ಅದರ ಜೊತೆಗೆ ರಿಜಿಸ್ಟ್ರೇಶನ್ ಮಾಡಿಸಬೇಕೆಂದು ಒತ್ತಾಯಿಸಿದ. ಅಯ್ಯೋ ಬರಗಾಲದಲ್ಲಿ ಅಧಿಕ ಮಾಸವೆನ್ನುವಂತಾಯಿತು. ಇದು ಯಾವ ಹಣೆ ಬರಹ ಗುರುವೇ! ನಾನು ಫೋನ್ ಸ್ವಿಚ್ ಆಫ್ ಮಾಡುವುದು, ಸೈಲೆಂಟ್ ಆಗಿ ಇಡುವುದು, ಎಸ್ ಎಂಎಸ್ ಗೆ ಉತ್ತರ ನೀಡದಿರುವುದು ಮಾಡಿದೆ. ಇದು ಮಾಮೂಲಿಯಾಗಿ ನಿಮಗೂ ಮಾಡಿದ್ದೇನೆ. ನಾನು ಸಮಸ್ಯೆ ಬಂದಾಗ ಅದರಿಂದ ಓಡಿ ಹೋಗುವುದನ್ನು ಬಹಳ ಚೆನ್ನಾಗಿ ಅಭ್ಯಸಿಸಿದೇನೆ, ಅದರಂತೆಯೇ ಇಲ್ಲಿಯೂ ಹಾಗೆಯೇ ಮಾಡಿದೆ. ಆದರೇ, ವಿಜಯ್ ನನ್ನನ್ನು ಸುಲಭಕ್ಕೆ ಬಿಡುವಂತೆ ಕಾಣಲಿಲ್ಲ. ಮತ್ತೆ ಮತ್ತೆ ಕರೆ ಮಾಡತೊಡಗಿದ, ನನಗೆ ನನ್ನ ಎನ್.ಜಿ.ಓ ಬಗ್ಗೆ ಆರ್ಘ್ಯಂ ನಲ್ಲಿ ಕೆಟ್ಟದ್ದಾಗಿ ಹೇಳಿದರೆಂಬ ಆತಂಕ. ಕೊನೆಗೆ ಒಂದು ಶನಿವಾರ ಅವರ ಮನೆಯಲ್ಲಿಯೇ ಇಂಟ್ರೂಡಕ್ಸನ್ ಇರುತ್ತದೆಯೆಂದ, ನಾನು ಓಕೆ ಎಂದೆ. ಅಂದು ಹೋಗುವುದಕ್ಕೆ ಹಿಂಜರಿದೆ, ಕಾರಣ ಹುಡುಕಿದೆ, ಮತ್ತೊಮ್ಮೆ ನಿರ್ಧರಿಸಿದೆ, ಇವನು ನನ್ನನ್ನು ಬಿಡುವುದಿಲ್ಲವೆಂದು.
ಶನಿವಾರ ನಾಲ್ಕು ಗಂಟೆಗೆ ಮನೆಯಿಂದ ಹೊರಟೆ, ನನ್ನ ಉದ್ದೇಶ ವಿಜಯ್ ಜೊತೆಗೆ ಮಾತನಾಡಿ, ಎನ್.ಜಿಓಗೆ ಫಂಡ್ ರೈಸ್ ಬಗ್ಗೆ ಸ್ವಲ್ಪ ಟಿಪ್ಸ್ ತೆಗೆದುಕೊಳ್ಳುವುದು. ಅದರಂತೆಯೇ, ಅವನ ಮನೆ ಹುಡುಕಿಕೊಂಡು ತಲುಪುವಾಗ ಐದು ಮೂವತ್ತಾಗಿತ್ತು. ಅವನ ಮನೆ ಇರುವುದು ಐಟಿಸಿ ಬಳಿಯಲ್ಲಿ, ಬಾಣಸವಾಡಿ. ಮನೆ ಒಳಕ್ಕೆ ಹೋದೆ, ನೋಡಿದರೆ ನಾನೊಬ್ಬನೇ! ಅವನು ಮೊದಲು ಹೇಳಿದ್ದು ಐದಾರು ಮಂದಿ ಇರುತ್ತಾರೆಂದು. ನನ್ನನ್ನು ಒಳಕ್ಕೆ ಕರೆದ ಮೇಲೆ, ಒಬ್ಬ ಬಹಳ ಎತ್ತರದ ವ್ಯಕ್ತಿ ಹೆಸರು ಮದನ್, ಪರಿಚಯಿಸಿದ. ನಾನು, ಪರಿಚಯವಿಲ್ಲದವರ ಜೊತೆ ಮಾತನಾಡುವುದು ಕಡಿಮೆ. ಅವರು, ನನ್ನನ್ನು ಬಹಳ ಆತ್ಮೀಯವಾಗಿ ಪರಿಚಯಿಸಿಕೊಂಡು, ಶುರು ಮಾಡಿದರು. ನನ್ನ ಜೀವನ, ಜೀವನಕ್ಕೆ ಬಹಳ ಮುಖ್ಯವಾದದ್ದು, ಅದರಲ್ಲಿನ ಸಮಸ್ಯೆ, ಹೀಗೆ...ನಾನು ನನ್ನ ವೃತ್ತಿ ಜೀವನ ಹಣಕಾಸಿನ ಸಮಸ್ಯೆಯ ಬಗ್ಗೆ ತೆಗೆದುಕೊಂಡೆ. ಅದನ್ನು ಅವರು ವಿವರಿಸಿದ ರೀತಿ ಮೆಚ್ಚುಗೆಯಾಯಿತು. ನಂತರ ನನ್ನನ್ನು ರಿಜಿಸ್ಟರ್ ಮಾಡಲು ಹೇಳಿದರು. ದುಡ್ಡು ಎಲ್ಲಿದೆ!? ದುಡ್ಡಿಲ್ಲ ಆದರೂ ದುಡ್ಡಿಲ್ಲವೆನ್ನಲು ನಾಚಿಕೆ. ಛೀ! ಎಂಥಹ ಬದುಕು ಅಲ್ಲವೇ? ದುಡ್ಡಿದೆ ಎಂದು ಸುಳ್ಳು ಹೇಳುವುದು, ನಾನು ನಿನಗೆ ಅದನ್ನು ಕೊಡಿಸುತ್ತೀನಿ, ಇದನ್ನು ಕೊಡಿಸುತ್ತೀನೆಂದು ಸುಳ್ಳು ಆಶ್ವಾಸನೆ ಕೊಡುವುದು. ದುಡ್ಡಿಲ್ಲವೆಂದರೇ ನೇರ ಹೇಳಬೇಕು, ಅದನ್ನು ಬಿಟ್ಟು ಸುಳ್ಳು ಯಾಕೆ ಹೇಳಬೇಕು. ನಾನು ಬಹಳಷ್ಟೂ ಬಾರಿ ಇಂಥಹದ್ದನ್ನು ಮಾಡಿದ್ದೇನೆ.
ಆ ರಾತ್ರಿ ಕೂಡ ಅದನ್ನೇ ಹೇಳತೊಡಗಿದೆ. ಮುಂದಿನ ತಿಂಗಳು ದುಡ್ಡು ಬರುತ್ತದೆ ಆಗ ಸೇರುತ್ತೇನೆ, ಅದು ಇದು ಎಂದು. ಅವರು ಅನೇಕ ಉದಾಹರಣೆ ನೀಡಿದರು. ನಾನು ಒಪ್ಪಲಿಲ್ಲ. ನಾಚಿಕೆಯಾಯಿತು. ನಂತರ, ಎರಡು ಮೂರು ದಿನಗಳಾಯಿತು. ನಾನು ವಿಜಯ್ ನನ್ನು ತುಂಬಾ ದೂರವಿಟ್ಟೆ. ಅದರ ನಡುವೆ ಪವನ್ ನನ್ನು ಕೇಳಿದೆ, ಅವನು ಅಂಥಹದ್ದು ಇಷ್ಟ ಆದರೇ ಹದಿಮೂರು ವರೆ ಸಾವಿರ ಕಡಿಮೆನಾ ಮಗಾ ಎಂದ. ನಾಲ್ಕೈದು ದಿನಗಳು ಕಳೆದ ನಂತರ ಒಂದು ದಿನ ಇದ್ದಕ್ಕಿದ್ದ ಹಾಗೆ, ವಿಜಯ್ ನನಗೆ ಮೆಸೆಜ್ ಮಾಡಿದ, ನಾನು ನಿಮ್ಮ ಆಫೀಸ್ ಹತ್ತಿರ ಬರುತ್ತೇನೆಂದು. ನನಗೆ ದಿಗಿಲಾಯಿತು. ನಾನು ಆಫೀಸ್ ಹತ್ತಿರ ಯಾರಾದರೂ ಬರುತ್ತಾರೆಂದರೇ ದಿಗಿಲು, ಮರ್ಯಾದೆ ಹೋಗುತ್ತದೆಯೆಂದು. ಅಯ್ಯೊ ಬೇಡ, ಬರುವುದು ಬೇಡ, ನಾನೇ ಕಾಲ್ ಮಾಡ್ತೀನಿ ಎಂದೆ. ಅದರಂತೆಯೇ, ಮುಂದಿನ ಐದು ನಿಮಿಷದಲ್ಲಿ ನಾನು ಕಾಲ್ ಮಾಡಿದೆ. ನಾನು ಬಿಜಿ ಬಿಜಿ ಎನ್ನುತ್ತಿದ್ದವನು, ಅವನು ಬರುತ್ತೇನೆಂದೊಡನೆ ಕರೆ ಮಾಡಿದೆ. ನನಗೆ ಅನಿಸುತ್ತು, ಅಯ್ಯೋ ಎಷ್ಟು ಕೀಳು ಮಟ್ಟದಲ್ಲಿದ್ದೀನಿ ನಾನು! ಅವನು ಹೇಳಿದ, ಪರವಾಗಿಲ್ಲ, ನೀನು ಕಳೆದ ವಾರ ರಿಸ್ಕ್ ತೆಗೆದುಕೊಂಡು ನಮ್ಮನೆ ತನಕ ಬಂದಿಲ್ವಾ? ನಾನು ಬರುವುದರಲ್ಲೇನು, ಬಂದು ನಿನ್ನನ್ನು ಮಾತನಾಡಿಸುತ್ತೇನೆಂದ. ಇದೆಂಥಹ ಪಜೀತಿ ಗುರೂ!
ಅಂತೂ, ಸುಮಾರು ಮೂರು ಘಂಟೆಯ ಹೊತ್ತಿಗೆ ಆಫೀಸಿಗೆ ಬಂದ. ಅವನಿಂದ ನಾನು ಕಲಿಯಬೇಕಿರುವುದು, ತಾಳ್ಮೆ ಮತ್ತು ಕೇಳುವ ಸಾಮರ್ಥ್ಯ. ಅವನು ಬಂದವನು ನಾನು ಹೇಳಿದ ಎಲ್ಲಾ ಸುಳ್ಳುಗಳನ್ನು ಕೇಳಿದ, ಯಾವುದನ್ನು ತಪ್ಪು ಎನ್ನಲಿಲ್ಲ. ಎಲ್ಲದಕ್ಕೂ ಉತ್ತರಿಸಿದ. ಸುಮಾರು ಐದುವರೆ ವರೆಗೂ ಎಂದರೇ ಎರಡು ವರೆ ಗಂಟೆಗಳ ಕಾಲ ಮಾತನಾಡಿದ್ದೇನೆ, ಎಲ್ಲವೂ ನನ್ನಯ ಬಗ್ಗೆ ನನ್ನ ಕೊಳಕು ಜೀವನದ ಬಗ್ಗೆ, ನಾರುತ್ತಿರುವ ಮನಸ್ಸಿನ ಬಗ್ಗೆ, ನನಗೆ ಅಸಹ್ಯ ಹುಟ್ಟಿಸಿದರೂ ಅವನು ತಾಳ್ಮೆಯಿಂದ ಕೇಳಿದ. ಆದರೇ, ನನಗೆ ಅನುಮಾನ ಬಂದಿದ್ದು, ಇವನಿಗೆ ಕಮಿಷನ್ ಸಿಗಬಹುದೇ? ಇಲ್ಲ, ಇಲ್ಲ, ಅವನಲ್ಲಿ ಕೋಟ್ಯಾಂತರ ರೂಪಾಯಿ ದುಡ್ಡಿದೆ, ಅವನಿಗ್ಯಾಕೆ ಈ ಕಮಿಷನ್ ಕೆಲಸ, ಅದರಲ್ಲಿಯೂ ಹದಿಮೂರು ಸಾವಿರಕ್ಕೆ ಇಪ್ಪತ್ತು ಪರ್ಸೆಂಟ್ ಎಂದರೂ ಮುರು ಸಾವಿರ ಅದೊಂದು ದುಡ್ಡೇ ಅವನಿಗೆ! ಇದ್ಯಾವ ಹುಚ್ಚು, ಕ್ರೈಸ್ತನಾಗಿ ಕನ್ವರ್ಟ್ ಮಾಡುವುದೇ? ಇಂಥಹ ನೂರೆಂಟು ಕೆಲಸಕ್ಕೆ ಬಾರದ ಪ್ರಶ್ನೆಗಳು, ಉತ್ತರ ಹುಡುಕುವ ಆತುರವಿಲ್ಲ, ಆದರೂ ಪ್ರಶ್ನೆಗಳು ಜನಿಸುತ್ತಿವೆ, ಹರಿಯುತ್ತಿವೆ, ಎಲ್ಲೆಯಿಲ್ಲದೆ. ಕಟ್ಟ ಕಡೆಯದಾಗಿ ನಾನು ಅವನಿಗೆ ಹೇಳಿದೆ, ನಾನು ನಿನಗೆ ಸುಳ್ಳು ಹೇಳಿದೆ, ನನ್ನ ಬಳಿಯಲ್ಲಿ ದುಡ್ಡಿಲ್ಲ. ನಾನು ಹಣಕಾಸಿನ ಸಮಸ್ಯೆ ಅನುಭವಿಸುತ್ತಿದ್ದೇನೆ, ಸಾಲವಿದೆ, ಕುಡಿತದ ದಾಸನಾಗಿದ್ದೇನೆ. ಅವನು ತಾಳ್ಮೆಯಿಂದ ಕೇಳಿ, ನಂತರ, ಚಿಂತಿಸಬೇಡ, ನಾನು ಹಣ ಕಟ್ಟುತ್ತೇನೆ, ನಿನಗೆ ಅನುಕೂಲವಾದಾಗ ಹಿಂದಿರುಗಿಸು ಎಂದ, ಅಯ್ಯೋ ಬೇಡ, ನಾನೇ ಮುಂದಿನ ತಿಂಗಳು ಜೋಡಿಸಿ ಸೇರುತ್ತೇನೆಂದೆ. ಅವನು ನನ್ನ ಹೆಸರು ವಿಳಾಸ ತೆಗೆದುಕೊಂಡು ಹೋದ. ನನ್ನನ್ನು ಆಗಸ್ಟ್ ತಿಂಗಳ ಕೋರ್ಸ್ ಗೆ ಸೇರಿಸಿದ. ಅದಾದ ಮೇಲೆ, ಒಂದು ಬುಧವಾರ, ಲ್ಯಾಂಡ್ ಮಾರ್ಕ್ ಪರಿಚಯದ ಸಂಜೆಯಿದೆ, ಬಾ, ಸತ್ಯ ಸಾಯಿ ಸದನದಲ್ಲಿ ಎಂದ. ನಾನು, ಹೇಗೂ ಸೇರಿದ್ದೀನಿ, ಇನ್ನೇನು, ಚಳಿಯಾದರೇನು ಮಳೆಯಾದರೇನು, ತಿರ್ಮಾನಿಸಿ ಹೋದೆ. ಉದ್ದಕ್ಕೂ ಜನರು, ಹೆಸರಿನ ಪಟ್ಟಿ ಹಾಕಿಕೊಂಡಿದ್ದಾರೆ, ವಿಜಯ್ ಸಿಕ್ಕಿದ ಮಾತನಾಡಿಸಿದೆ. ಏಳು ಗಂಟೆಗೆ ಒಬ್ಬರು ಬಂದರು, ಹೆಸರು ಮಹೇಶ್ ನಂಬಿಯಾರ್, ಎರಡು ಗಂಟೆಗಳು ಮಾತನಾಡಿದರು, ನನಗೆ ಅಲ್ಪ ಸ್ವಲ್ಪ ಅರ್ಥವಾಯಿತು, ಆದರೂ ನನ್ನ ತಲೆಯೊಳಗೆ ಏನೇನೋ ಲೆಕ್ಕಚಾರ, ನನಗೆ ಸರಿಯಾದ ಆದಾಯವಿಲ್ಲ, ಮನೆಯಲ್ಲಿ ಹೆಂಡತಿ ಜೊತೆಗೆ ಬೆಳ್ಳಗ್ಗೆ ಎದ್ದರೇ, ರಾತ್ರಿ ಮಲಗಿದರೆ ಜಗಳ, ಜಗಳ, ಯಾಕೆ ಜಗಳವಾಡುತ್ತಿದ್ದೀವೆಂಬುದು ಗೊತ್ತಿಲ್ಲ. ಸಣ್ಣ ಸಣ್ಣ ವಿಷಯಕ್ಕೆ ಅವಳು ರೇಗುವುದು, ನಾನು ಬೈಯ್ಯುವುದು, ಥೂ, ಛೀ, ಇದೆಂಥಹ ಬದುಕು ಎಂದು ಬೇಸರವಾಗುವುದು. ಮದುವೆ ಬೇಕಿತ್ತಾ ಎನ್ನುವ ಮಟ್ಟಕ್ಕೆ ಎನಿಸತೊಡಗಿತ್ತು. ಅಲ್ಲಿ ಏನೇನೋ ಹೇಳಿದೆ, ಎಲ್ಲವೂ ನಕರಾತ್ಮಕವಾಗಿಯೇ ಹೇಳಿದ್ದು.
ಅಲ್ಲಿಂದ ಬಂದ ಮೇಲೆ, ನಾನು ಅವನಿಗೆ ಹೇಳಿದೆ, ಹೇಗೂ ನೀನು ನನ್ನನ್ನು ಸೇರಿಸಿದ್ದೀಯಾ, ಆಗಸ್ಟ್ ಯಾಕೆ, ಈ ತಿಂಗಳು, ಅಂದರೇ, ಜುಲೈನಲ್ಲಿಯೇ ಮಾಡುತ್ತೇನೆಂದೆ. ಅವನು ಒಪ್ಪಿದ, ಅದರೊಂದಿಗೆ ಮತ್ತೊಂದು ಷರತ್ತು ವಿಧಿಸಿದ! ನೀನು ಜುಲೈನಲ್ಲಿಯೇ ಮಾಡು, ನಿನಗೆ ಅನುಕೂಲವಾದಾಗ ನನಗೆ ಹಣವನ್ನು ಹಿಂದಿರುಗಿಸು, ಆದರೇ, ಲ್ಯಾಂಡಮಾರ್ಕ್ ಫೋರಂ ಆದಮೇಲೆ ಮುಂದಿನ ಅಡ್ವಾನ್ಸ್ ಕೋರ್ಸ್ ಇದೆ, ಅದನ್ನು ನೀನು ಮಾಡಬೇಕೆಂಬುದು ನನ್ನ ಆಸೆ, ಅದಕ್ಕೆ ಹದಿನಾರು ಸಾವಿರ ರೂಪಾಯಿಯಾಗುತ್ತದೆ. ಇದು ಯಾವುದೋ ಮಾರ್ಕೆಂಟಿಂಗ್ ಜಾಲವೆನಿಸಿತು. ಅದರೊಂದಿಗೆ, ನಾನು ರಜೆ ಹಾಕುವುದಕ್ಕೆ ನಮ್ಮ ಟೀಂ ಲೀಡ್ ರೂಪ ಬಳಿಗೆ ಹೋದೆ, ಅವರು ಯಾಕೆಂದರು. ನಾನು, ಮೊದಲಿಗೆ ಯಾವುದೋ ಟ್ರೈನಿಂಗ್ ಎಂದೆ, ನಂತರ ಹೇಳಿದೆ. ಅವರು "ಅಯ್ಯೋ ನಿಮಗೇನಾಗಿದೆ, ಲ್ಯಾಂಡ್ ಮಾರ್ಕ್ ಮಾಡುವುದಕ್ಕೆ, ಅದು ನಿಮ್ಮಂಥವರಿಗಲ್ಲಾ", ವ್ಯಕ್ತಿ ವಿಕಸನ, ಸಮಸ್ಯೆ ಇರುವವರಿಗೆಂದರು. 
ನಿಮಗೆ ಲ್ಯಾಂಡ್ ಮಾರ್ಕ್ ಬಗ್ಗೆ ತಿಳಿದಿದೆಯೇ? ಎಂದೆ. ಅದಕ್ಕವರು, ಹೌದು, ಅದೊಂದು ಮಾಯಾಜಾಲ, ನಾನು ೨೦೦೭-೦೮ರಲ್ಲಿ ಹೋಗಿದ್ದೆ, ನನ್ನ ಸ್ನೇಹಿತರೊಬ್ಬರು ಸೇರಿಸಿದ್ದರು. ನಾನು ಅವರೊಂದಿಗೆ ಜಗಳವಾಡಿಕೊಂಡು ಬಂದೆ. ಅವರ ಮೆಥಡಾಲಜಿ ಸರಿಯಿಲ್ಲ, ಅದೊಂದು ವೇಸ್ಟ್, ನೀವು ಯಾಕೆ ಬಕ್ರಾ ಆದ್ರಿ ಎಂದರು. ನನಗೆ ದಿಗಿಲಾಗತೊಡಗಿತು, ನಾನು ಹೋಗಿ ಪವನ್ ಬಳಿ ಹೇಳಿದೆ. ಅವನು, ನನಗೆ ಸ್ವಲ್ಪ ಸಮಧಾನ ಮಾಡಿದ, ಮತ್ತು ನಾನು ಸಮಧಾನ ಮಾಡಿಕೊಂಡೆ, ಹಣ ಕೊಟ್ಟಿದ್ದಾನೆ, ಇದು ಮೊದಲನೆಯ ಮೋಸವಲ್ಲ, ಅನೇಕ ಬಾರಿ ಮೋಸ ಹೋಗಿದ್ದೇನೆ, ಇದು ಅದರಲ್ಲಿ ಒಂದು ಎಂದುಕೊಂಡಾರಯಿತೆಂದು ತೀರ್ಮಾನಿಸಿದೆ. ರೂಪ ಅವರ ಬಗ್ಗೆ ಏನನ್ನೂ ಬರೆಯುವುದಿಲ್ಲ, ಅವರಿಗೆ ಲ್ಯಾಂಡ್ ಮಾರ್ಕ್ ನಿಂದ ಯಾವುದೇ ತರಹದ ಉಪಯೋಗವಾಗಿಲ್ಲ ಮತ್ತು ಅವರಿಗೆ ಇಷ್ಟವಾಗಿಲ್ಲವೆನ್ನುವುದು ಸಾವಿರಕ್ಕೆ ಸಾವಿರ ಪಾಲು ಸತ್ಯ. ಅಂತೂ, ಆ ದಿನ ಬಂತು, ಲ್ಯಾಂಡ್ ಮಾರ್ಕ್ ಬಗ್ಗೆ ಏನೂ ತಿಳಿದಿಲ್ಲ. ಮೂರು ದಿನ, ಇರುವುದಕ್ಕೆ ಅಲ್ಲಿಯೇ ಸ್ಥಳ ಕೊಡುತ್ತಾರೋ, ಇಲ್ಲವೋ? ಮನೆಯಿಂದ ಹೊರಟೆ, ಅಂಜಿಕೆಯಿಂದಲೇ ಅಲ್ಲಿಗೆ ಹೋದೆ. ಮೊದಲ ದಿನ ಅಲ್ಲಿಂದ ಹೊರಟು ಬಿಡೋಣವೆನಿಸಿತ್ತು. ವಿಜಯ್ ಗೆ ಫೋನ್ ಮಾಡಿದೆ. ಅವನು ಹೇಳಿದ, ನೀನು ಏನೂ ಮಾಡಬೇಡ, ಸುಮ್ಮನೆ ಕುಳಿತುಕೋ, ಅವರು ಹೇಳುವ ಹೋಂ ವರ್ಕ್ ಮಾಡು, ಅಷ್ಟೇ ಸಾಕೆಂದ. ನಾನು ಅವನಿಗೆ ವಾದ ಮಾಡತೊಡಗಿದೆ. ಆದರೂ, ಒಂದು ಮನಸ್ಸಿಗೆ ಮನವರಿಕೆ ಮಾಡಿದ. ಹರೀಶ್ ಇದು ನಿನ್ನ ಈಗಿರುವ ಗುಣ, ಯಾವುದನ್ನೂ ನೀನು ಸಂಪೂರ್ಣಗೊಳಿಸುವುದಿಲ್ಲ, ನೀನು ಹಾಗೆಯೇ ನಿನ್ನ ಜೀವನವನ್ನು ಹಿಂದಿರುಗಿ ನೋಡು ಎಂದ.
ಹೌದು, ಅದು ಸತ್ಯವೆನಿಸತೊಡಗಿತ್ತು. ನಾನು ಏನೆಲ್ಲಾ ಯೋಜನೆಗಳನ್ನು ಎತ್ತಿಕೊಂಡಿದ್ದರೂ ಯಾವುದನ್ನೂ ಸಂಪೂರ್ಣಗೊಳಿಸುತ್ತಿಲ್ಲ. ಎಲ್ಲವೂ ಅರ್ಧಕ್ಕೆ ನಿಲ್ಲುತ್ತಿವೆ, ನಿಂತಿವೆ. ಒಮ್ಮೆ ನನ್ನ ಮನಸ್ಸಿನ ಮೆಮೋರಿ ಕಾರ್ಡ್ ತೆರೆದೆ. ನಾನು ರಂಗಾಯಣಕ್ಕೆ ಸೇರಲು ಹೋಗಿದ್ದೆ, ಎನ್ ಸಿಸಿ ಗೆ ಸೇರಿದ್ದೇ, ಕಡೆಯ ದಿನ ಕ್ಯಾಂಪ್ ಗೆ ಹೋಗುವ ಮುಂಜಾನೆ ನಿರ್ಧಾರ ಬದಲಾಯಿಸಿದೆ, ಮೆಡಿಕಲ್ ರೆಪ್ ಕೆಲಸಕ್ಕೆ ಹಿಂಜರಿದೆ, ಎಂಎಸ್ಸಿ ಸಮಯದಲ್ಲಿ ಆದರ್ಶ ಇನ್ಸ್ಟಿಟೂಟ್ ಗೆ ಸೇರಿದ್ದೆ, ಅದೆಲ್ಲವು ಯಾಕೆ ನಾನು ಪ್ರಿತಿಸುತ್ತಿದ್ದ ಹುಡುಗಿಗೆ ಪಿಯುಸಿ ಸಮಯದಲ್ಲಿ ಹೇಳುವುದಕ್ಕೆ ಹಿಜರಿದೆ, ವರ್ಷಗಟ್ಟಲೇ ಕಾಯ್ದಿದ್ದೆ, ೨೦೧೩ರಲ್ಲಿ ಇಕ್ರಿಸಾಟ್ ನಲ್ಲಿ ಕೆಲಸಕ್ಕೆ ಸೇರುವುದಕ್ಕೆ ರೈಲು ಹತ್ತಿ ಹಿಂದೂಪುರದ ತನಕ ಹೋಗಿ ವಾಪಾಸ್ಸಾಗಿದ್ದೆ, ಪ್ರೀತಿಸಿದ ಹುಡುಗಿಯ ಮದುವೆಯಾಗಲು ಮನೆಯವರಿಗೆ ವಿಷಯ ಮುಟ್ಟಿಸಲು ಹೆದರಿದ್ದೆ, ಇವೆಲ್ಲವೂ ಹೆದರಿಕೆಯ ಮತ್ತೊಂದು ರೂಪ ಅಥವಾ ಸೋಲಿನ ಭಯ. ದಿಡೀರನೆ ವಾಸ್ತವಕ್ಕೆ ಬಂದೆ, ಇಲ್ಲಾ ಇಲ್ಲಿಗೆ ಬಂದಿರುವುದು ಬದಲಾವಣೆಗೆ ಇಲ್ಲಿಂದಲೂ ಓಡಿದರೇ ಮತ್ತಿನ್ನೆಲ್ಲಿ. ಡೆವಲಪ್ ಫೌಂಡೇಶನ್ ಬಿಟ್ಟಿದ್ದು ಭಯದಿಂದ, ಅಲ್ಲಿಂದ ಓಡಿದೆ, ವರ್ಷಗಟ್ಟಲೇ ಫೋನ್ ಸ್ವಿಚ್ ಆಫ್ ಮಾಡಿದೆ, ಇರುವ ವಿಷಯವನ್ನು ಹೇಳಲು ಹೆದರಿದೆ, ಹಿಂಜರಿದೆ, ಮಾನ ಮರ್ಯಾದೆಯೆಂಬ ಸೋಗನ್ನು ಮುಖವಾಡವಾಗಿಸಿಕೊಂಡೆ, ಇದೆಲ್ಲವೂ ಮೋಸದ ಕೈಗುಣ. ಮತ್ತೆ ಲ್ಯಾಂಡ್ ಮಾರ್ಕ್ ಒಳಕ್ಕೆ ಹೋದೆ.
ಮೊದಲನೆಯ ದಿನ ಮುಗಿಯಿತು, ನನ್ನ ತಲೆಗೆ ಏನೂ ಹತ್ತಲಿಲ್ಲ, ಸ್ವಲ್ಪ ಹೋಂ ವರ್ಕ್ ನೀಡಿದರು. ಮನೆಗೆ ಬಂದೆ, ಮನೆಯಲ್ಲಿ ಹೆಂಡತಿ ಗರಂ, ಮನೆಗೆ ಬಂದಾಗ ಹನ್ನೆರೆಡು ದಾಟಿತ್ತು. ಮುಂಜಾನೆ ಎದ್ದು ಹೋಂವರ್ಕ್ ಮಾಡಿದೆ. ನಾನು, ಮೊದಲೇ ಹೇಳಿದಂತೆ ನನಗೆ ಹಿಡಿಸುವವರ ಜೊತೆಯಲ್ಲಿ ಬಿಟ್ಟು ಮಿಕ್ಕಿದವರ ಜೊತೆಯಲ್ಲಿ ಕುಳಿತುಕೊಳ್ಳುವುದು ಹಿಡಿಸುವುದಿಲ್ಲ. ಲ್ಯಾಂಡ್ ಮಾರ್ಕಿನಲ್ಲಿ, ಇಂಫೋಸಿಸ್ ನ ಸಂಜೋಯ್ ಮತ್ತು ಗುಪ್ತಾ ಎಂಬ ಇಬ್ಬರನ್ನು ಪರಿಚಯ ಮಾಡಿಕೊಂಡೆ. ಅವರನ್ನು ಬಿಟ್ಟರೇ ಇನ್ನೊಂದಿಬ್ಬರು ಪರಿಚಯವಾಗಿದ್ದಿರಬಹುದಷ್ಟೇ! ಹಿಂದಿನ ತಪ್ಪುಗಳು ನಮ್ಮನ್ನು ಭಯದಲ್ಲಿರುಸುತ್ತವೆ. ನಾನು ನನ್ನ ಹಿಂದಿನ ತಪ್ಪಿನಿಂದಾಗಿ, ಹುಡುಗಿಯರನ್ನು ಪರಿಚಯ ಮಾಡಿಕೊಳ್ಳುವುದಕ್ಕೂ ಹೆದರುತ್ತೇನೆ. ಅಂತೂ, ಭಾನುವಾರ ಸಂಜೆಯ ವೇಳೆಗೆ ನನಗೆ ಜೀವನ ಮತ್ತು ಲ್ಯಾಂಡ್ ಮಾರ್ಕ್ ಅದ್ಬುತವೆನಿಸಿದೆವು. ಸೋಮವಾರ ಬೆಳ್ಳಿಗ್ಗೆ ಎದ್ದು ಆಫೀಸಿಗೆ ಹೊರಡುವಾಗ ನನ್ನ ಮುಖವನ್ನು ನೋಡುತ್ತೇನೆ, ನನಗೆ ಆಶ್ಚರ್ಯ. ಅಂಥಹ ಒಂದು ಸೊಗಸು, ಸಂತೋಷ ನನ್ನ ಮುಖದಲ್ಲಿ ನಾನೆಂದೂ ಕಂಡಿರಲಿಲ್ಲ. ಇದೆಲ್ಲವೂ ಹೇಗೆ ಸಾಧ್ಯ, ಅದಕ್ಕೆ ಉತ್ತರ ಲ್ಯಾಂಡ್ ಮಾರ್ಕ್. ಆಫೀಸಿಗೆ ಹೋದೆ, ಎಲ್ಲರ ಜೊತೆಯಲ್ಲಿಯೂ ಬಹಳ ಖುಷಿಯಿಂದ ಮಾತನಾಡಿದೆ, ನನ್ನಲ್ಲಿದ್ದ, ಅಥವಾ ಹೇಳಬೇಕಿದ್ದನ್ನೂ ಶೀವಿದ್ಯಾ ಬಳಿಯಲ್ಲಿ ಹೇಳಿದೆ. ಸಿಡಿಡಿ ಬಿಡುವ ನೈಜತೆಯನ್ನೂ ಒಪ್ಪಿದೆ. ಇದಕ್ಕೆ ಬಹಳ ಮುಖ್ಯವಾದ ಕಾರಣ, ನಮ್ಮ ಲ್ಯಾಂಡ್ ಮಾರ್ಕ್ ಫೋರಂ ಲೀಡರ್ ಹೇಳಿದ್ದು.
ನಾನು ಸೀಕೋ ಎಂಬ ಸಂಸ್ಥೆ ಹುಟ್ಟು ಹಾಕಿ ಆರು ವರ್ಷಗಳು ಸಂದಿವೆ, ಆದರೇ, ಅಲ್ಲಿ ಏನೋಂದು ಸರಿಯಾಗಿ ಮಾಡಿಲ್ಲ. ಕಳೆದ ಒಂಬತ್ತು ವರ್ಷದಲ್ಲಿ, ಡ್ರೀಮ್ ಸ್ಕೂಲ್ ಫೌಂಡೇಶನ್, ಐಸೆಕ್, ಐರಾಪ್, ಆರ್ಘ್ಯಂ, ಡಿಎಫ಼್, ಸಿಎಸ್.ಡಿ, ಸಿಟಿ, ಸಿಡಿಡಿ, ಎಂಟು ಸಂಸ್ಥೆಗಳಿಗೆ ಇನ್ ಆಂಡ್ ಔಟ್! ಎಲ್ಲಿಯೂ ನೆಮ್ಮದಿಯಿಲ್ಲ, ಯಾವುದರಲ್ಲಿಯೂ ಖುಷಿಯಿಲ್ಲ. ಪ್ರೀತಿಸಿದವರನ್ನೂ ದೂರುವುದು, ತೂರಾಡುವುದು, ಜನರೊಟ್ಟಿಗೆ ಜಗಳವಾಡುವುದು, ಸ್ನೇಹಿತರಾದರೂ ಸರಿ, ಸ್ನೇಹಿತೆಯಾದರೂ ಸರಿ, ಅಪ್ಪ, ಅಮ್ಮ, ಯಾರೂ ಉಳಿದಿಲ್ಲ, ಎಲ್ಲರೊಂದಿಗೆ ಜಗಳ, ಅದರಿಂದ ಮತ್ತೆ ನೋವು, ನನಗೆ ನೋವು. ಇದೆಲ್ಲಿಯ ತನಕ, ನಾನು ಅಯೋಗ್ಯ ಅದು ನನಗೂ ಗೊತ್ತು ನನಗಿಂತ ಹೆಚ್ಚಾಗಿ ನಿಮಗೆ ಗೊತ್ತು. ನೀವು ನೇರವಾಗಿ ಹೇಳಿದ್ದೀರಾ, ಹೇಳದೇ ಮನಸ್ಸೊಳಗೆ ಲೆಕ್ಕಚಾರ ಹಾಕಿದ್ದೀರಾ ಕೂಡ. ಹರೀಶ ನಂಬಿಕೆಗೆ ಅನರ್ಹ, ಅಯೋಗ್ಯ, ಮುಠಾಳ, ಹಠಮಾರಿ, ಸಮಯೋಚಿತ, ಅವಕಾಶವಾದಿ, ಹೇಡಿ, ಪಲಾಯನವಾದಿ, ಇವೆಲ್ಲವೂ ನಾನಲ್ಲ, ನನ್ನೊಳಗಿರುವ ಗುಣಗಳು. ಅದು ಇಂದು ನಿನ್ನೆಯದಲ್ಲ, ಅದನ್ನು ನಿಲ್ಲಿಸುವುದು ಸುಲಭವಲ್ಲ. ಅದನ್ನು ನಿಲ್ಲಿಸಿ ಮುಂದುವರೆಯಬೇಕಲ್ಲವೇ? ಇದೇ ರೀತಿಯ ನೀತಿಯಿಲ್ಲದ ಜೀವನವಿದ್ದು ಏನು ಪ್ರಯೋಜನ? ಅದಕ್ಕೆ ಉತ್ತರ ಸಿಕ್ಕಿದ್ದು ಲ್ಯಾಂಡ್ ಮಾರ್ಕ್ ನಲ್ಲಿ. ಆದ್ದರಿಂದಲೇ, ನಾನು ನಿಮ್ಮ ಹಿಂದೆ, ಬಿದ್ದು ಲ್ಯಾಂಡ್ ಮಾರ್ಕ್ ಬಗ್ಗೆ ಹೇಳುತ್ತಿರುವುದು. ನೀವು ನನಗಿಂತ ಒಳ್ಳೆಯವರು, ನನ್ನಂಥಹ ಅಯೋಗ್ಯನೇ ಉತ್ತಮ ಬದುಕು ನಿರ್ಮಿಸಿಕೊಳ್ಳಬಹುದೆಂದರೇ, ನಿಮ್ಮಂಥಹ ಬುದ್ದಿವಂತರು ಅಸಾಮಾನ್ಯವಾಗಿ ಬದುಕಬಹುದಲ್ಲವೇ? ಜಗತ್ತನ್ನೇ ಗೆಲ್ಲುವ ಸಾಮರ್ಥ್ಯ ನಿಮ್ಮಲ್ಲಿದೆ, ಅದಕ್ಕೆ ಕೀ ಇಲ್ಲಿ ಸಿಗುತ್ತದೆ.
ನನ್ನ ಬದುಕು ಹೇಗೆ ನಶ್ವರವಾಗಿತ್ತೆಂಬುದನ್ನು ನಿಮಗೆ ತಿಳಿಸುತ್ತೇನೆ. ನಾನು ಚಿಕ್ಕವನಾಗಿದ್ದಾಗ ನನ್ನ ತಂದೆ ನನ್ನನ್ನು ನಮ್ಮೂರಿನ ಪಕ್ಕದಲ್ಲಿದ್ದ ಸರಗೂರಿನ ಬ್ರಾಹ್ಮಣರ ಹುಡುಗರಿಗೆ ಹೋಲಿಸಿ ಗೇಲಿ ಮಾಡುತ್ತಿದ್ದರು. ನೋಡು ಬ್ರಾಹ್ಮಣರ ಮಕ್ಕಳನ್ನು, ಹೇಗೆ ಓದುತ್ತವೆ, ಚೆಸ್ ಆಡುತ್ತವೆ, ಇವನು ಕ್ರಿಕೇಟ್ ಅಂತೇ, ತೆಂಗಿನ ಗೊದ್ದಮಟ್ಟೆ ಹಿಡಿದು ಹೋಗ್ತಾನೆ, ಗದ್ದೆ ಹಳ್ಳಕ್ಕೆ. ನೋಡು, ಆ ಶಿವಣ್ಣನ ಮಗನನ್ನು, ವಾಲಿಬಾಲ್ ಸ್ಕೋರ್ ಎಷ್ಟು ಚೆನ್ನಾಗಿ ಹಾಕ್ತಾನೆ, ಇವನು ಆ ದನ ಕಾಯೋ ಹುಡುಗರ ಜೊತೆ ಅಲೆಯೋಕೆ ಹೋಗ್ತಾನೆ. ಅಲ್ಲಿಂದ ಮುಂದುವರೆದು ನನ್ನನ್ನು ಎಂಟನೆಯ ಕ್ಲಾಸಿಗೆ ಇಂಗ್ಲೀಷ್ ಮೀಡಿಯಂ ಗೆ ಹಾಕಿದರು. ನಾನು ನಮ್ಮ ಅಪ್ಪನನ್ನು ದ್ವೇಷಿಸುವುದಕ್ಕೆ ಶುರು ಮಾಡಿದೆ. ಕೋಪವೋ, ಭಯವೋ, ಅಂತೂ ಅವರೊಂದಿಗೆ ಒಳ್ಳೆಯ ಸಂಬಂಧ ಬೆಳೆಯಲಿಲ್ಲ. ಅಮ್ಮನ ಮುಖಾಂತರ ಅರ್ಜಿ ಹಾಕುವುದು ಮಾಮೂಲಿಯಾಯಿತು. ಅವರಿಗೆ ನನ್ನ ಮೇಲೆ ಕೋಪ ಹೆಚ್ಚುತ್ತಾ ಹೋಯಿತು, ನನಗೆ ಅವರ ಮೇಲೆ ಹೇಳಲಾರದ ನಿರುತ್ಸಾಹ, ಜಿಗುಪ್ಸೆ ಬೆಳೆಯಿತು, ಬೆಳೆದು ಹೆಮ್ಮರವಾಯಿತು. ಇದಾವುದೂ ಅಂದು ನನಗೆ ತಿಳಿದಿರಲಿಲ್ಲ. 
ನಾನು ಟಿಸಿಹೆಚ್ ಮಾಡಬೇಕೆಂಬುದು ನನ್ನ ತಂದೆಯ ಆಸೆ, ನಾನು ಬಿಎಸ್ಸಿಗೆ ಸೇರಿದೆ, ಬಿಎಡ್ ಮಾಡು ಎಂದು ಒತ್ತಾಯ ನಾನು ಎಂಎಸ್ಸಿ ಸೇರಿದೆ, ನಾನು ದುಡಿಯುವುದಕ್ಕೆ ಸೇರಲೆಂಬುದು ನನ್ನ ತಂದೆಯ ಆಸೆ, ನಾನು ಪಿಎಚ್ ಡಿ ಆಯ್ಕೆ ಮಾಡಿಕೊಂಡೆ, ಸರ್ಕಾರಿ ಕೆಲಸಕ್ಕೆ ಸೇರು ಎಂದು ಬಲವಂತ, ನಾನು ನನ್ನದೇ ಎನ್.ಜಿಓ ಮಾಡಿದೆ, ಸರ್ಕಾರದ ಕಡೆಗೆ ಹೋಗುವ ಪ್ರಮೆಯವೇ ಇಲ್ಲ. ರಾಜಕೀಯದವರನ್ನು ಬಳಸಿಕೋ ಎಂದು ಅವರ ಬೇಡಿಕೆ, ನಾನು ರಾಜಕಾರಣಿಗಳನ್ನು ಬೈಯ್ಯುತ್ತಾ ಬಂದೆ. ಅವರು ಬಹಳ ಒಳ್ಳೆಯ ಬಟ್ಟೆ ಧರಿಸಬೇಕು, ಕ್ಲೀನ್ ಶೇವ್ ಮಾಡಬೇಕು, ನಾನು ಗಡ್ಡ ಬಿಡುವುದು, ಮನ ಬಂದಂತೆ ಬಟ್ಟೆ ಹಾಕುವುದು ಸರಳತೆಯೆಂಬ ಹೆಸರು ಕೊಟ್ಟೆ. ನಾನು ಯಾರ ಮಾತನ್ನು ಕೇಳುವುದಿಲ್ಲವೆಂದು ನಿರ್ಧರಿಸಿದೆ. ಯಾರು ನನ್ನನ್ನು ಪ್ರಶ್ನಿಸಲು ಬಂದರೇ ಅವರು ನನ್ನ ತಂದೆಯಂತೆಯೇ ಕಾಣತೊಡಗಿದರು. ನನ್ನ ಮೇಲೆ ದರ್ಪ ಮಾಡುತ್ತಿದ್ದಾರೆನಿಸುತ್ತಿತ್ತು. ನನ್ನ ಹೆಂಡತಿ, ಲೈಟ್ ಸ್ವಿಚ್ ಹಾಕಿ ಅಥವಾ ಆಫ್ ಮಾಡಿ ಎಂದಾಗಲೂ ಅಷ್ಟೇ, ನನ್ನ ಮೇಲೆ ದರ್ಪ ಇವಳಿಗೆ ಎಂದು ಮನ ಬಂದಂತೆ ಬಯ್ಯುತ್ತಿದ್ದೆ. 

ನಾನು ಕೆಲಸ ಮಾಡಿದ ಕಂಪನಿಗಳಲ್ಲಿಯೂ ಅಷ್ಟೇ, ನನ್ನ ಕೆಲಸದ ಬಗ್ಗೆ ಕೇಳಿದರೇ ಕೋಪ ಬರುತ್ತಿತ್ತು. ರೇಗುತ್ತಿದ್ದೆ, ಆದ್ದರಿಂದಲೇ ಎಲ್ಲರೊಡನೆಯೂ ಜಗಳ ಕಾಯ್ಯುತ್ತಿದ್ದೆ. ಎಲ್ಲರ ಬಗ್ಗೆಯೂ ಅಸಡ್ಡೆ, ಅದೆಷ್ಟೋ ಜನ ಸ್ನೇಹಿತರನ್ನೂ ಕಳೆದುಕೊಂಡಿದ್ದೇನೆ. ಈಗ ಅದೆಲ್ಲದರ ಅರ್ಥವಾಗಿದೆ. ನಿಮ್ಮಗಳನ್ನು ದುರುಪಯೋಗಪಡಿಸಿಕೊಂಡಿದ್ದಕ್ಕೆ ಕ್ಷಮೆ, ಇದು ಪ್ರಾಯಶ್ಚಿತಕ್ಕೆ ಬರೆಯುತ್ತಿರುವುದಲ್ಲ, ಅಥವಾ ಮಾಡಿದ ತಪ್ಪಿಗೆ ಪಶ್ಚತಾಪವೂ ಅಲ್ಲ. ಬದುಕು ಕೆಟ್ಟದ್ದಾಗಿ ಬದುಕುತ್ತಿರುವುದು ನನಗೆ ತಿಳಿದಿರಲಿಲ್ಲ. ಇದನ್ನೂ ತಿಳಿಸಿದ್ದು ಲ್ಯಾಂಡ್ ಮಾರ್ಕ್. ಅದರ ಜೊತೆಗೆ ನೀವುಗಳು ನೇರವಾಗಿ ಅಥವಾ ಪರೋಕ್ಷವಾಗಿ ನನ್ನ ಜೀವನಕ್ಕೆ ಸಾಕಷ್ಟೂ ಸಹಾಯ ಮಾಡಿದ್ದೀರಿ, ಅದನ್ನು ನಾನು ಈ ಮೂಲಕ ನೆನಪಿಸಿಕೊಳ್ಳುತ್ತಿದ್ದೇನೆ. ಇದರ ಜೊತೆಗೆ, ನಾನು ಆರು ವರ್ಷಗಳಿಂದ ಮಾಡಲಾಗದೇ ಇದ್ದ ಎನ್.ಜಿಓ ಕೆಲಸ ಬಹಳ ಸೊಗಸಾಗಿ ಮುಂದುವರೆದಿದೆ. ಶಿಕ್ಷಣ ಇಲಾಖೆ, ಕೃಷಿ, ನೀರಾವರಿ, ಕೈಗಾರಿಕೆ ಇಲಾಖೆಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿದ್ದೇನೆ. ನನ್ನೆಲ್ಲಾ ಹಳೆಯ ಗುರುಗಳನ್ನು ಭೇಟಿ ಮಾಡುತ್ತಿದ್ದೇನೆ. ಅವರೆಲ್ಲರಿಗೂ ವಂದನೆಗಳನ್ನು ಅರ್ಪಿಸಿದ್ದೇನೆ. ಆದ್ದರಿಂದ, ನೀವೂ ಒಮ್ಮೆ ಲ್ಯಾಂಡಮಾರ್ಕ್ ಗೆ ಭೇಟಿ ನೀಡಿ, ಇಷ್ಟವಾದರೇ ಸೇರಿ, ಇಲ್ಲದಿದ್ದರೇ ಬೇಡ. ಆದರೇ, ದೊಡ್ಡ ಕನಸಿಗೆ ದೊಡ್ಡ ಆಟಕ್ಕೆ ಕೋಚ್ ಬೇಕು, ಸಣ್ಣ ಆಟಗಳಿಗೆ ಮೈದಾನವೂ ಬೇಡ, ನೀವು ನಿರ್ಧರಿಸಿ ಯಾವ ಆಟವಾಡಬೇಕೆಂದು.

08 ಸೆಪ್ಟೆಂಬರ್ 2015

ಕಲಿಕೆಯಲ್ಲಿ ಎಲ್ಲರೂ ಶಿಷ್ಯರೇ ಎಂದೆಂದಿಗು ಶಿಷ್ಯರೇ! ನನಗೆ ನೀವೆಲ್ಲರೂ ಗುರುಗಳೇ, ಎಂದೆಂದಿಗೂ ಗುರುಗಳೇ.

ನಮಸ್ಕಾರ ಮೊದಲಿಗೆ ಶಿಕ್ಷಕರ ದಿನಾಚಾರಣೆಯ ಶುಭಾಶಯಗಳು ಮತ್ತು ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡು ಮಕ್ಕಳ ಭವಿಷ್ಯ ರೂಪಿಸುವುದಕ್ಕೆ ನಿಂತಿರುವ ಪ್ರಪಂಚದ ಎಲ್ಲಾ ಶಿಕ್ಷಕರಿಗೂ ನನ್ನ ಅನಂತ ವಂದನೆಗಳು. ಹರೀಶ ಬರೆಯುವುದನ್ನೆ ನಿಲ್ಲಿಸಿದ, ಅವನಲ್ಲಿದ್ದ ಸರಕು ಖಾಲಿಯಾಯಿತು, ಇದೆಲ್ಲಾ ಮೂರು ದಿನದ ಬದುಕು ಎಂದು ನೀವು ಭಾವಿಸಿ, ನಿರ್ಧರಿಸುವ ಮುನ್ನವೇ, ಬರವಣಿಗೆ ಮತ್ತೊಮ್ಮೆ ಉಸಿರು ತುಂಬವ ಪ್ರಯತ್ನ ಮಾಡಿದ್ದೇನೆ. ಇನ್ನು ಮುಂದೆ ನನ್ನೆಲ್ಲಾ ಹೆಜ್ಜೆಗಳು ಬರವಣಿಗೆಯ ಮೂಲಕ ನಿಮ್ಮನ್ನು ಸೇರಲು/ ಸೇರಿಸಲು ಬಯಸುತ್ತೇನೆ. ಇಲ್ಲಿಯವರೆಗೂ ಅವರಿವರ ಕಾಲೆಳೆದು ನಿಮ್ಮ ಮುಂದೆ ಬರುತ್ತಿದ್ದ ಅಕ್ಷರಗಳು ಇನ್ನು ಮುಂದೆ ತಟಸ್ಥವಾಗಿರುತ್ತವೆಂದು ತಿಳಿಸುತ್ತೇನೆ. ತಟಸ್ಥವೆಂದರೇ, ಯಾರನ್ನೂ ಹಿಯಾಳಿಸದೇ ನನ್ನ ವಿಚಾರಗಳನ್ನು ಪ್ರಸ್ತಾಪಿಸುತ್ತೇನೆಂದರ್ಥ.
ಮೊದಲ ಸಾಲುಗಳು ನಿಮ್ಮ ಕಿವಿಗೆ ಮುಟ್ಟಿದ ತಕ್ಷಣವೇ ನೀವು ಈ ಲೇಖನದ ವಿಷಯವೇನೆಂದು ನಿರ್ಧರಿಸಿದ್ದೀರೆಂಬುದು ಗೊತ್ತು, ಅದಲ್ಲದೇ ಲೇಖನದ ತಲೆಬರಹವೇ ತಿಳಿಸಿದೆ ಒಳಗಿರುವ ತಿರುಳು ಗುರುಗಳ ಬಗ್ಗೆಯೆಂದು. ಗುರುಗಳಲ್ಲಿ ಒಳ್ಳೆಯವರು, ಕೆಟ್ಟವರೆಂಬವರಿಲ್ಲ, ಗುರುಗಳೆಂದರೇ ಗುರುಗಳು. ಗುರುಗಳಿಗೆ ಸಾಟಿಯಾದವರು ಮತ್ತೊಬ್ಬರಿಲ್ಲ. ತಾಯಿ ಹೇಗೆ ತನ್ನ ಮಗುವೇ ನನ್ನ ಸರ್ವಸ್ವ ಎನ್ನುವಳೋ ಹಾಗೇಯೇ ಗುರುವೂ ಅಷ್ಟೇ ತನ್ನ ಶಿಷ್ಯರೇ ಶ್ರೇಷ್ಠ ಎನ್ನುವವರು. ಪೀಠಿಕೆ ಅತಿಯಾಯಿತು ವಿಷಯಕ್ಕೆ ಬರೋಣ. ನಾನು ಹುಟ್ಟಿದ್ದು ಕುಶಾಲನಗರದ ಆಸ್ಪತ್ರೆಯಲ್ಲಿ, ಎಲ್ಲಾ ದಾದಿಯರು ಊಟಕ್ಕೆ ಹೋಗಿದ್ದ ಸಮಯದಲ್ಲಿ ಮಧ್ಯಾಹ್ನ ೧೨.೫೫ಕ್ಕೆ ಆತುರಾತುರವಾಗಿ ಯಾರ ನೆರವಿಲ್ಲದೇ ಅಮ್ಮನ ಹೊಟ್ಟೆಯಿಂದ ಹೊರಬಂದನಂತೆ. ಅದಕ್ಕೆ ಇರಬೇಕು, ನಾನು ಯಾರ ಸಹಾಯವಿಲ್ಲದೇ ಬದುಕಬಲ್ಲೇ ಎಂಬ ಅಹಂ ನನ್ನ ಬೆನ್ನತ್ತಿತ್ತು, ಇತ್ತೀಚೆಗೆ ಅದು ಅಳಿಸಿಹೋಗುತ್ತಿದೆ, ನೀವಿಲ್ಲದೇ ನಾನಿಲ್ಲವೆಂಬ ಅರಿವಾಗಿದೆ.
ನಾನು ಹುಟ್ಟಿದ ನಾಲ್ಕು ವರ್ಷದ ನಂತರ ನನಗೆ ಶಿಕ್ಷಣ ಪರಿಚಯವಾಯಿತು, ಅಥವಾ ನನ್ನನ್ನು ಶಿಕ್ಷಣಕ್ಕೆ ಪರಿಚಯಿಸಲಾಯಿತು. ಇಲ್ಲಿ ಬರುವ ಎಲ್ಲಾ ಸಾಲುಗಳು ನನ್ನ ನೆನಪಿನ ಹೊತ್ತಿಗೆಯಿಂದು ಹೆಕ್ಕಿ ತೆಗೆದದ್ದು, ಇಲ್ಲಿ ಸರಿ ತಪ್ಪುಗಳಿಗೆ ಸ್ಥಳವಿಲ್ಲ. ಮನಸ್ಸಿಗೆ, ಅದರಲ್ಲಿಯೂ ನನ್ನ ಮನಸ್ಸಿಗೆ ಕಂಡದ್ದು ಮಾತ್ರ ಪ್ರಸ್ತುತ. ಇರುವ ಸಾಲುಗಳನ್ನು ಹಾಗೆಯೇ ಓದಿಕೊಳ್ಳಿ, ನಿಮ್ಮ ಸ್ವಂತ ಅಭಿಪ್ರಾಯಗಳನ್ನು ಸೇರಿಸಬೇಡಿ. 
ನನ್ನ ಮೊದಲ ಗುರು ಸರೋಜ ಟೀಚರ್ ಅಥವಾ ಸರೋಜಕ್ಕ.. ಇವರು ನಮ್ಮೂರು, ಬಾನುಗೊಂದಿಯಲ್ಲಿದ್ದ ಅಂಗನವಾಡಿಯ ಉಸ್ತುವಾರಿ ಟೀಚರ್. ಅವರಿಗಿದ್ದ ಶ್ರದ್ದೆ, ಮಕ್ಕಳ ಬಗೆಗಿನ ಕಾಳಜಿ, ಊರು, ಕಲೆ, ಸಂಸ್ಕೃತಿಯ ಕಡೆಗಿದ್ದ ಪ್ರೀತಿ ಅಗಾಧವಾದದ್ದು. ನಮ್ಮೂರಿನಲ್ಲಿ ರಾಜ್ಯ ಮಟ್ಟದ ಜಾನಪದ ಮೇಳ ನಡೆಸಿದ್ದರು, ಅದೂ ಎಂಬತ್ತರ ದಶಕದಲ್ಲಿಯೇ. ಅವರು ಹೇಳಿಕೊಡುತ್ತಿದ್ದ ರೀತಿಯೇ ಹಾಗಿರುತ್ತಿತ್ತು. ಕಥೆ, ಪದ್ಯ ಹೇಳುವಾಗ ತಲ್ಲೀನರಾಗುತ್ತಿದ್ದರು, ಮಕ್ಕಳೊಂದಿಗೆ ಮಕ್ಕಳಾಗುತ್ತಿದ್ದರು. ಅವರು ಅಂದು ಹೇಳಿಕೊಟ್ಟ, ಅಕ್ಷರ, ಕಾಗುಣಿತ, ಮಗ್ಗಿ, ಪದ್ಯಗಳು ನನ್ನನ್ನು ಬಹಳ ಆವರಿಸಿದವು. ನಾನು ಪ್ರಾಥಮಿಕ ಶಾಲೆಗೆ ಸೇರಿದ ನಂತರವು ಶಿಶುವಿಹಾರಕ್ಕೆ ಹೋಗಿ ಸಮಯ ಕಳೆಯುತ್ತಿದ್ದೆ. ಊಟದ ಸಮಯ ಒಂದರಿಂದ ಎರೆಡಿರುತ್ತಿತ್ತು, ಅಂಗನವಾಡಿ ಒಂದೂವರೆಗೆ ಬಿಡುತ್ತಿತ್ತು, ಅರ್ಧಗಂಟೆ ಅಲ್ಲಿಗೆ ಹೋಗಿ ಸಮಯ ಕಳೆಯುತ್ತಿದ್ದೆ. ಬಾಲ್ಯದಲ್ಲಿ ಪ್ರತಿ ಕ್ಷಣವನ್ನು ಆನಂದಿಸುವಂತೆ ಮಾಡಿದ ಸರೋಜ ಟೀಚರ್ ನನ್ನ ಜೀವನದಲ್ಲಿಯೇ ಮರೆಯದ ಮಾಣಿಕ್ಯವಾಗಿದ್ದಾರೆ.
ಅಲ್ಲಿಂದ ನಂತರ ದೂಡಿದ್ದು, ನಮ್ಮೂರಿನ ಪ್ರಾಥಮಿಕ ಶಾಲೆಗೆ, ನಾನು ಇದೇ  ಶಾಲೆಯಲ್ಲಿ ಒಂದರಿಂದ ಏಳನೆಯ ತರಗತಿಯವರೆಗೂ ಓದಿದೆ. ಈ ಏಳು ವರ್ಷದ ಸಮಯದಲ್ಲಿ ಬಹಳಷ್ಟು ಮಂದಿ ಶಿಕ್ಷಕರು ಬಂದರು. ಕೆಲವು ಶಿಕ್ಷಕರು ನಮ್ಮನ್ನು ಗೇಲಿ ಮಾಡಿದರು, ಹಲವು ಮಾಸ್ಟರನ್ನು ನಾವು ಗೇಲಿ ಮಾಡಿದೆವು. ಅದೇನೇ ಇದ್ದರೂ, ಆ ಸಮಯಕ್ಕೆ ಕೆಲವು ಶಿಕ್ಷಕರು ನಮ್ಮ ನೆಚ್ಚಿನ ಗುರುಗಳಾದರು. ಬಾನುಗೊಂದಿಯೆಂಬ ಸುಂದರ ಗ್ರಾಮ, ಕೊಣನೂರಿನಿಂದ ನಾಲ್ಕು ಕೀಮೀ ದೂರವಿದ್ದು, ಅಲ್ಲಿಗೆ ಯಾವ ಬಸ್ಸು ಸೌಕರ್ಯವೂ ಇರಲಿಲ್ಲ. ಎಲ್ಲರೂ ನಡೆದುಕೊಂಡು ಅಥವಾ ಬೈಸಿಕಲ್ಲಿನಲ್ಲಿ ಬರಬೇಕಿತ್ತು, ಸ್ಕೂಟರು, ಕಾರು ದೂರದ ಮಾತು ಅಲ್ಲಾ ದೂರದ ದೃಶ್ಯ. ಅದರಂತೆಯೇ ನಮ್ಮೂರಿನಿಂದ ಕೊಣನೂರಿಗೆ ಹೋಗುವವರೂ ಅಷ್ಟ, ನಟರಾಜ ಎಕ್ಸ್ಪ್ರೇಸ್  ನಲ್ಲಿಯೇ ಹೋಗುತ್ತಿದ್ದದ್ದು. ನಮ್ಮಪ್ಪ ಕೂಡ ಸೈಕಲ್ಲಿನಲ್ಲಿಯೇ ತಮ್ಮ ಕೆಲಸಕ್ಕೆ ಹೋಗುತ್ತಿದ್ದರು. ಸುಮಾರು, ಮೂವತ್ತು ವರ್ಷ ಸೈಕಲ್ ನಮ್ಮಪ್ಪನ ಜೀವನದ ಅವಿಭಾಜ್ಯವಾಗಿತ್ತು. ಅದನ್ನು ಮತ್ತೊಮ್ಮೆ ವಿವರಿಸುತ್ತೇನೆ.
ಪ್ರಾಥಮಿಕ ಶಾಲೆಯಲ್ಲಿ ನಡೆದ ಅಥವಾ ಇದ್ದ ಶಿಕ್ಷಕರಲ್ಲಿ, ರಂಗಸ್ವಾಮಿ ಎಂಬ ಮಾಸ್ಟರು ಒಬ್ಬರು. ಅವರನ್ನು ಹಳೇ ಮೇಷ್ಟ್ರೂ ಎನ್ನುತ್ತಿದ್ದರು. ಅದು ಯಾಕೆಂಬುದು ನನಗೆ ಇಂದಿಗೂ ಗೊತ್ತಿಲ್ಲ. ನಮಗೆ ಮತ್ತೊಬ್ಬರು ವಾಸು ಮಾಸ್ಟರಿದ್ದರು, ಅವರನ್ನು ಬಹಳ ಹುಡುಗರು ಹೊಸ ಮಾಸ್ಟರ್ ಎನ್ನುತ್ತಿದ್ದರು. ಆದ್ದರಿಂದಲೇ, ಒಬ್ಬರು ಹೊಸ ಮಾಸ್ಟರ್ ಮತ್ತೊಬ್ಬರು ಹಳೇ ಮಾಸ್ಟರ್ ಆಗಿದ್ದಿರಬೇಕು. ಇದ್ದವರೇ ಇಬ್ಬರು ಮಾಸ್ತರ್, ರಂಗಸ್ವಾಮಿ ಮಾಸ್ಟರಿಗೆ ಮಧ್ಯಾಹ್ನ ಊಟ ಆದ್ಮೇಲೆ ಮಲಗುವ ಅಭ್ಯಾಸ. ನಮ್ಮ ಹತ್ತಿರ ಐದು, ಹತ್ತು ಪೈಸೆ ಚಂದಾ ಎತ್ತಿ, ಆ ಕಾಲದಲ್ಲಿ ಬೆಂಚು ಇರಲಿಲ್ಲ, ಮಣೆಗಳಿದ್ದವು, ಆ ಮಣೆಗಳನ್ನು ಜೋಡಿಸಿ ಮಲಗಿಸುವುದು ಏಳನೇಯ ಕ್ಲಾಸಿನ ಹುಡುಗರ ಕೆಲಸ. ವಾಸು ಮಾಸ್ಟರ್ ಬಂದಿಲ್ಲದೇ ಇದ್ದರೇ ಆ ದಿನ ಹಬ್ಬವೋ ಹಬ್ಬ ಮತ್ತು ಮೂರು ಗಂಟೆಗೆ ಸ್ಕೂಲು ಬಾಗಿಲು ಬಂದ್.
ವಾಸು ಮಾಸ್ಟರ್ ಬಹಳ ಶಿಸ್ತಿನ ಮನುಷ್ಯ. ಅವರು ಬಂದರೇ ಬಹುತೇಕ ಮಕ್ಕಳ ಚಡ್ಡಿ ಒದ್ದೆಯಾಗುತ್ತಿತ್ತು. ನಮ್ಮಪ್ಪ ಮಾಸ್ಟರುಗಳು ಬಹಳ ರಾಜಕೀಯ ಮಾಡುತ್ತಾರೆಂದು ಮಾತನಾಡುತ್ತಿದ್ದದ್ದು ಆಗ್ಗಾಗೆ ಕಿವಿಗೆ ಬೀಳುತಿರುತ್ತಿತ್ತು ಆದರೇ ಅರ್ಥವಾಗುತ್ತಿರಲಿಲ್ಲ. ಈಗ ತಿರುಗಿ ನೋಡಿದರೆ ಅರ್ಥವಾಗುತ್ತದೆ ಆದರೇ ಕಾಲ ಮೀರಿದೆ. ವಾಸು ಮಾಸ್ಟರ್ ಗಣಿತ ಹೇಳಿಕೊಟ್ಟಿದ್ದು ಅದರಲ್ಲಿಯೂ ಮಗ್ಗಿ ಎರಡನೆಯ ಕ್ಲಾಸಿನಲ್ಲಿಯೇ ಇಪ್ಪತ್ತರ ತನಕ ಮಗ್ಗಿ ಕಲಿತಿದ್ದೆ. ನಾನು ಶಾಲೆಯಲ್ಲಿ ಏಟು ತಿಂದಿರುವುದು ಬಹಳ ಕಡಿಮೆ. ಬುದ್ದಿವಂತ ಅಂತಾ ಅಲ್ಲಾ, ನನ್ನ ಜೊತೆಯಿದ್ದವರೆಲ್ಲಾ ದಡ್ಡಶಿಖಾಮಣಿಗಳು. ಒಂದು ದಿನ ನಾನು ಒಂದನೆಯ ಅಥವಾ ಎರಡನೆಯ ಕ್ಲಾಸಿನಲ್ಲಿದ್ದಾಗ ವಾಸು ಮಾಸ್ಟರ್ ಕರೆಸಿದರು, ನನ್ನ ಕೈ ಕಾಲು ನಡುಕ, ಭಯದಿಂದ ಹೋದೆ. ಅವರು ಏಳನೆಯ ಕ್ಲಾಸಿನಲ್ಲಿದ್ದರು, ಸಾಲು ಸಾಲು ಹುಡುಗರು ದಢೂತಿಗಳು ಕಿವಿ ಹಿಡಿದು ಕಾಲು ಬಗ್ಗಿಸಿ ಕುಳಿತಂತೆ ನಿಂತಿದ್ದರು. ವಾಸು ಮಾಸ್ಟರ್ ನನ್ನನ್ನು ಕರೆದು, ಹೇ, ಬಾರೋ ಇಲ್ಲಿ ಎಂದರು ನನಗೋ ಪುಕ ಪುಕ! ಹರೀಶ ಹದಿನಾಲ್ಕರ ಮಗ್ಗಿ ಹೇಳೋ, ನಾನು ಒಂದೇ ಉಸಿರಿನಲ್ಲಿ ಹದಿನಾಲ್ಕೊಂದ್ಲ ಹದಿನಾಲ್ಕು....ಹದಿನಾಲ್ಕ್ ಹತ್ರ ನೂರ ನಲ್ವತ್ತು ಎಂದೆ. ಸುಮಾರು ಇಪ್ಪತ್ತೈದು ವರ್ಷದ ಹಿಂದಿನ ಘಟನೆ ನನಗೆ ಈಗ ಕಣ್ಣು ಮುಚ್ಚಿದರು ಹದಿನಾಲ್ಕರ ಮಗ್ಗಿ ತಲೆಯಲ್ಲಿ ಅಚ್ಚಾಗಿದೆ. ಹೇಳಿದ ನಂತರ ಹುಡುಗರು ಎದ್ದು ನಿಲ್ಲಿಸಿದರು. ನನ್ನನ್ನು ಮುಂದೆ ಕರೆದು, ಅವರ ಮೂಗು ಹಿಡಿದು ಕೆನ್ನೆಗೆ ಬಾರಿಸು ಎಂದರು. ಮಗ್ಗಿ ಹೇಳುವುದಕ್ಕಿಂತ ಕಷ್ಟದ ಕೆಲಸ ಅವರಿಗೆ ಹೊಡೆಯುವುದು. ದಡೂತಿಗಳಿಗೆ ಹೊಡೆಯುವಾಗ ಮಾಸ್ಟರಿರುತ್ತಾರೆ, ಮಾಸ್ಟರು ಹೋದ ಮೇಲೆ, ನನಗೆ ಬಾರಿಸಿದರೇ! ನಾನು ಹಾಗೇಯೇ ನಿಂತಿದ್ದೆ, ಮಾಸ್ಟರು ಗದರಿದರು, ಹೋಡಿತಿಯೋ ಇಲ್ಲಾ ನಾನು ಬಾರಿಸಲೋ? ಮಗ್ಗಿ ಹೇಳುವುದಕ್ಕಿಂತ ವೇಗವಾಗಿ ಎಲ್ಲರಿಗೂ ಹೊಡೆದು ಅಲ್ಲಿಂದ ಕಾಲ್ಕಿತ್ತೆ.
ವಾಸು ಮಾಸ್ಟರು ವರ್ಗವಾಗಿ ಹೋದ ಮೇಲೆ ಶಾಲೆಗೆ ಬಂದದ್ದು ನಾಗೇಶಯ್ಯ ಮತ್ತು ನರಸಿಂಹ ಮೂರ್ತಿ ಮಾಸ್ಟರುಗಳು. ನಾಗೇಶಯ್ಯ ಸಂಸ್ಕೃತ, ಹಿಂದಿ ಮಾಸ್ಟರು, ಅವರು ಕನ್ನಡ ಪದ್ಯಗಳನ್ನು ಹಾಡುವ ರೀತಿಗೆ ಇಡೀ ಬಾನುಗೊಂದಿಯೇ ತಲೆತೂಗಿತ್ತು. ಆ ರಾಗ, ತನ್ಮಯತೆ ಅಬ್ಬಾ! ಎಂಥಹ ತಾತ್ವಿಕ ಮನಸ್ಸೆಂದರೇ ಅವರು ಎಂಥಹ ಸನ್ನಿವೇಶದಲ್ಲಿಯೂ ಕೋಪ ತಾಳಿದವರಲ್ಲ. ಅವರ ಜೊತೆಗೆ ಸ್ವಲ್ಪ ದಿನಕ್ಕೆ ಕೃಷ್ಣಮೂರ್ತಿ ಎಂಬವರು ಬಂದಿದ್ದರು, ಅವರೋ, ಅವರ ಪಾಠಕ್ಕಿಂದ ಕೈಯಲ್ಲಿರುತ್ತಿದ್ದ ದೊನ್ನೆಯೇ ಮಾತನಾಡುತ್ತಿತ್ತು. ಅವರಿಂದ ನನಗೂ ಒಂದೆರೆಡು ಬಾರಿ ಕಜ್ಜಾಯ ಸಿಕ್ಕಿದೆ. ನಾಗೇಶಯ್ಯ ಮತ್ತು ಕೃಷ್ಣಮೂರ್ತಿ ಮಾಸ್ಟರುಗಳು ಹೇಳಿಕೊಟ್ಟ ಪದ್ಯ, ರವಿ ಮೂಡುವನು ರವಿ ಮೂಡುವನು, ಹಾರುತಿಹುದು ಏರುತಿಹುದು ನೋಡು ನಮ್ಮ ಬಾವುಟ ಅವಿಸ್ಮರಣೀಯ. ಅದರ ನಡುವೆಯಲ್ಲಿ ಸುಂದರ್ ಎಂಬ ಮಾಸ್ತರು ಬಂದರು ಹೋದರು. ಅವರು ರಂಗೋಲಿ ಪ್ರಿಯರು. ಸದಾ ರಂಗೋಲಿ ಬಿಡಿಸುವುದು, ಆದ್ದರಿಂದಲೇ ಏನೋ, ಅವರು ಹುಡುಗಿಯರಿಗೆ ಪ್ರಿಯರಾದರು.  ಆದರೂ, ನಮ್ಮಿಂದ ದೂರ ಉಳಿಯಲ್ಲಿ ಯಾಕೆಂದರೇ ನಮ್ಮನ್ನು ಆಟವಾಡಲು ಬಿಡುತ್ತಿದ್ದರು, ನಮಗೆ ಆಟವೇ ಪ್ರಪಂಚವೆನಿಸುತ್ತಿದ್ದ ವಯಸ್ಸು. 
ಆರನೇಯ ತರಗತಿ ಮತ್ತು ಏಳನೆಯ ತರಗತಿಯ ಸಮಯಕ್ಕೆ ಸುಶೀಲ ಟೀಚರ್ ಮತ್ತು ಲೋಕೇಶ್ ಮಾಸ್ಟರ್ ಬಂದರು. ಇವರು ಆಗ ತಾನೇ ಕೆಲಸಕ್ಕೆ ಸೇರಿದ್ದರಿಂದ ಹುಮ್ಮಸ್ಸು, ಛಲವಿತ್ತು. ನಮಗೆ ಬಹಳ ಆಶಾದಾಯಕವಾಗಿ ಕಂಡರು. ಓದಿನ ಮಹತ್ವ, ಓದುವ ಪರಿ, ಒಟ್ಟಾರೆ ಜೀವನದ ಗಂಬೀರತೆಯ ಕಡೆಗೆ ಏಳನೆಯ ತರಗತಿಯಲ್ಲಿಯೇ ತಿರುಗುವಂತೆ ಮಾಡಿದ್ದು ಇವರಿಬ್ಬರು.
ಆ ಗಂಬೀರತೆ ಬಹಳ ದಿನ ಉಳಿಯಲಿಲ್ಲ. ಯಾಕೆಂದರೇ, ಎಂಟನೆಯ ತರಗತಿಗೆ ಕೊಣನೂರಿಗೆ ಸೇರಿದೆವು. ನಮ್ಮೂರಿನಿಂದ ನಾಲ್ಕು ಕೀಮೀ ನಡೆದು, ದಾರಿ ಉದ್ದಕ್ಕೂ ಅವರಿವರನ್ನು ರೇಗಿಸಿ, ಸೈಕಲ್ ಚಕ್ರದ ಗಾಳಿ ಬಿಟ್ಟು ಬೇಕಿರುವುದಕ್ಕಿಂತ ಬೇಕಿಲ್ಲದಿರುವುದನ್ನು ಹೆಚ್ಚು ಮಾಡಿದೆವು. ನಾನು ಕನ್ನಡ ಮಾಧ್ಯಮದಿಂದ ಬಂದವನು. ನಮ್ಮಪ್ಪ ಇಂಗ್ಲೀಷ್ ಮಾಧ್ಯಮಕ್ಕೆ ಸೇರಿಸಿದರು. ನನಗೋ ತಲೆ ಬುಡು ಅರ್ಥವಾಗುತ್ತಿರಲಿಲ್ಲ. ಹೈಸ್ಕೂಲಿನಲ್ಲಿ ಒಳ್ಳೊಳ್ಳೆ ಶಿಕ್ಷಕರಿದ್ದರು, ನನಗೆ ನೆನಪಿದೆ, ಶಿವಣ್ಣ ಎಂಬ ಹೆಡ್ ಮಾಸ್ಟರ್ ವರ್ಗಾವಣೆಯಾದಗ ನಾನು ಎಂಟನೆಯ ತರಗತಿಯಲ್ಲಿ, ಕೊಣನೂರು ಬಂದ್ ಮಾಡಿದ್ದೇವು. ಒಬ್ಬ ಶಿಕ್ಷಕನ ವರ್ಗಾವಣೆ ರದ್ದತಿಗೆ ಬಂದ್ ಮಾಡಬೇಕೆಂದರೇ ನಿಮಗೆ ಅರ್ಥವಾಗಿರಬೇಕು ಅವರ ಕಾರ್ಯವೈಖರಿ.
ಕನ್ನಡ ಚಂದ್ರಶೇಖರಯ್ಯ ಅವರ ಜ್ನಾನಭಂಡಾರ ಪದವಿ ವಿದ್ಯಾರ್ಥಿಗಳಿಗೆ ಮಾಡುವಷ್ಟಿತ್ತು. ಇಂಗ್ಲೀಷ್ ವಿಜಯಲಕ್ಷ್ಮಿ ಅವರ ಇಂಗ್ಲೀಷ್ ಯಾವ ಪ್ರೋಫೆಸರಿಗೂ ಕಡಿಮೆಯಿರಲಿಲ್ಲ. ಚೆನ್ನಯ್ಯರ ಸಮಾಜ ವಿಜ್ನಾನ, ಚಂದ್ರೇಗೌಡರ ಜೀವಶಾಸ್ತ್ರ, ನಿಂಗೆಗೌಡ ಮತ್ತು ಪುರುಷೋತ್ತಮರ ಗಣಿತ, ಸುಬ್ಬರಾಯರ ಇಂಗ್ಲೀಷ್ ಅದರಲ್ಲಿಯೂ ಅವರು ಮಾಡಿದ ಭೀಷ್ಮ ಪಾಠ, ಅದರ ನಡುವೆ ಸಿಇಸಿ ಅವರ ಇಂಗ್ಲೀಷ್, ಜಯಣ್ಣ ಅವರ ಪೀಟೀ ಹಹಹ. ನಾಗಮಣಿ ಅದೆಷ್ಟು ಸರಳವಾಗಿ ಹಿಂದಿ ಪಾಠ ಮಾಡಿದರೆಂದರೇ, ಹಿಂದಿ ಸಿನೆಮಾ ನೋಡಿದರೂ ಇಂದು ಅರ್ಥವಾಗುವುದಿಲ್ಲ ಅಂದು ನಾನು ಕಲಿಯಲಿಲ್ಲ. ಇದೆಲ್ಲದರ ನಡುವೆ ನಮ್ಮ ಪೋಲಿತನ ಜನನ ತಾಳಿತು. ನಾನು ಶಾಲೆಗಿಂತ, ಬೈರೋಜಿ ಮಾಸ್ಟರ್ ಮತ್ತು ಅವರ ಮಗಳು ಹೆಸರು ಮರೆತಿದ್ದೇನೆ, ಅವರು ಇಂಗ್ಲೀಷ್ ಮಾಧ್ಯಮ ಕಷ್ಟವೆನ್ನುವುದನ್ನು ತೊಡೆದು ಹಾಕುವ ಮಟ್ಟಕ್ಕೆ ಪಾಠ ಮಾಡಿದರು. ಪಾಸು ನಪಾಸು ಎನ್ನುವ ಆಟದಲ್ಲಿ ಅದೃಷ್ಟವಂತನಂತೆ ನಾನು ೪೯.೫% ಅಂಕ ತೆಗೆದು ಪಾಸಾದೆ. ಕಡಿಮೆ ಅಂಕ, ಪಾಸಾಗಿದ್ದೇ ಹೆಚ್ಚು ನನಗೆ. ಅದೆಷ್ಟೂ ಫೇಲಾಗುತ್ತೀನೋ ಎನಿಸಿತ್ತು. 
ಹತ್ತನೆಯ ತರಗತಿ ಪಾಸಾಗಿದ್ದು ಖುಷಿಯಾದರೇ, ಮತ್ತೆ ಓದಬೇಕಲ್ಲಾ ಎನ್ನುವುದು ದುಃಖದ ಸಂಗತಿಯಾಗಿತ್ತು. ಅಲ್ಲಿ ಇಲ್ಲಿ ಎಂದು ಕೊನೆಗೆ ಪ್ರೀತಿಯ ಕನ್ನಡ ಭಾರತಿ (ಕೆಬಿ) ಕಾಲೇಜು, ಕುಶಾಲನಗರಕ್ಕೆ ಬಿದ್ದೆ. ಬಿದ್ದೆನೋ ದೂಡಿದರೋ ಎರಡು ವರ್ಷ ಓದುವ ಪಿಯುಸಿಯನ್ನು ಮೂರು ವರ್ಷ ಓದಿದೆ. ಅಲ್ಲಿದ್ದ ಎಲ್ಲಾ ಗುರುಗಳು ಅತ್ಯುತ್ತಮರು. ಮಕ್ಕಳಿಗೆ ಪಾಠ ಮಾಡುವುದಕ್ಕೆ ಹಾತೊರೆಯುತ್ತಿದ್ದರು. ಕನ್ನಡ ಸೋಮಶೇಖರ್ ಅವರ ಜ್ನಾನ ಕುಸುಮ ನಮ್ಮನ್ನು ಮೀರಿತ್ತು, ಇಂಗ್ಲೀಷ್ ಉಮಾಶಂಕರ್ ಬಹಳ ದೂರದಿಂದ ಬರುತ್ತಿದ್ದರು. ಯುವರಾಜ್ ಹೆಸರಿಗೆ ತಕ್ಕಂತೆ ಗಾಂಭೀರ್ಯದಿಂದ, ಪ್ರಭುದೇವ ರಸಾಯನವನ್ನು, ಪ್ರಸನ್ನ ಮೂರ್ತಿ ಗಣಿತವನ್ನು, ಹೇಮಲತಾ ಜೀವಶಾಸ್ತ್ರವನ್ನು ಭೋಧಿಸಿದರು. ಹಳ್ಳಿಯಿಂದ ಬಂದಿದ್ದ ನನಗೆ ಬಹಳ ಇರಿಸುಮುರುಸಾಗಿತ್ತು, ಓದುವುದು ಕಬ್ಬಿಣದ ಕಡಳೆಯಾಯಿತು. ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರೂ ಆಗಲೇ ಇಲ್ಲ. ಉಢಾಫೆತನ ನನ್ನನ್ನು ಆವರಿಸತೊಡಗಿತ್ತು, ದಿನ ಕಳೆದಂತೆ, ಅದು ವಿಕೋಪಕ್ಕೆ ಹೋಗಿತ್ತು. ನಮ್ಮ ಯಾವ ಗುಣಗಳು ರಾತ್ರೋ ರಾತ್ರಿ ಆದದ್ದಲ್ಲ, ಮುಂಜಾನೆ ಐದು ಗಂಟೆಗೆ ಏಳುವುದು ಇರಬಹುದು, ಎಂಟಾದರೂ ಏಳದೇ ಇರುವುದಿರಬಹುದು. ಇವೆಲ್ಲವೂ ದಿನ ದಿನ ಬೆಳೆಯುತ್ತಾ ಹೋದವುಗಳು. ಸೋಮಾರಿತನ ಹುಟ್ಟಿನಿಂದ ಬಂದದ್ದಲ್ಲ. ಅದಿರಲಿ, ಮುಂದಿನ ಮಾತಿಗೆ ಹೋಗೋಣ. 
ನನಗೆ ಓದುವುದರಲ್ಲಿ ಆಸಕ್ತಿ ಕುಂದತೊಡಗಿತು, ನಮ್ಮ ಉಪನ್ಯಾಸಕರು ಅವರ ಅಳೆತೆ ಮೀರಿ ನಮಗೆ ಪಾಠ ಹೇಳಿಕೊಡುತ್ತಿದ್ದರು, ಆದರೇ ನಾನು ಕಲಿಯಲು ಸಿದ್ದನಿರಲಿಲ್ಲ. ಎಷ್ಟು ಬಾರಿ ಕೇಳಿದರೂ ಹೇಳುವ ತಾಳ್ಮೆ ಅವರಿಗಿತ್ತು, ಕೇಳುವ ವಿನಯ ನನಗೆ ಬರಲಿಲ್ಲ. ಅಂತೂ ಪರೀಕ್ಷೆಯಲ್ಲಿ ನಪಾಸಾದೆ. ಫೇಲಾಗುವ ತನಕ ಫೇಲಿನ ಅಥವಾ ಸೋಲಿನ ಮುಖ ನಮಗೆ ತಿಳಿದಿರಲಿಲ್ಲ. ಫೇಲಾದ ದಿನದಿಂದಲೇ ಹೊಸ ಪ್ರಪಂಚ ಅರಿವಾಯಿತು. ಎಲ್ಲರೂ ನನಗೆ ರಾಜ ಮರ್ಯಾದೆ ನೀಡುವವರು, ಜೊತೆಯಲ್ಲಿ ನಿಂತು ಮಾತನಾಡುವ ಧೈರ್ಯವೂ ಇಲ್ಲ ಅವರಿಗೆ! ಆದ್ದರಿಂದ ನಾನು ಬಂದರೇ ಅವರೇ ದೂರ ಸರಿಯುತ್ತಿದ್ದರು. ಆಗ, ನನ್ನ ಮನಸ್ಸಿಗೆ ತೋಚಿದ್ದು ನಮ್ಮ ಗುರುಗಳ ಶ್ರಮ. ಅವರು ಪಾಠ ಮಾಡುವಾಗ ನಾನು ತೋರಿದ ನಿರ್ಲಕ್ಷ್ಯ ನನ್ನ ಜೀವನವನ್ನು ಆಹುತಿ ಮಾಡಿಸಿಕೊಳ್ಳುತ್ತಿತ್ತು. ಆ ಸಮಯಕ್ಕೆ ನನಗೆ ಗುರುವಾದವನು ಗ್ಯಾರೇಜ್ ಕೃಷ್ಣ, ನನಗೆ ಬುದ್ದಿ ಹೇಳಿ ಮತ್ತೇ ಓದುವಂತೆ ಒತ್ತಾಯಿಸಿದ ಮನವೊಳಿಸಿದ. ನಾನು ಆಗ ಹೋಗಿ ಬಿದ್ದದ್ದು ನಮ್ಮ ಗಣಿತ ಉಪನ್ಯಾಸಕ ಪ್ರಸನ್ನಮೂರ್ತಿಯವರ ಮಡಿಲಿಗೆ. ಪ್ರಸನ್ನ ಮೂರ್ತಿಯವರು ಅದೆಷ್ಟರ ಮಟ್ಟಿಗೆ ಪಾಠ ಹೇಳಿದರೆಂದರೇ ಹೃದಯದ ಮಾತುಗಳೆನಿಸಿದೆವು. ಕಷ್ಟದ ಗಣಿತ ಸುಲಭವಾಗತೊಡಗಿತು, ಮತ್ತೆ ಪಾಸಾದೆ. ಪಾಸಾದ ನಂತರ, ಸ್ವಲ್ಪ ದಿನಗಳ ಮಟ್ಟಿಗೆ ನಾನು ಪ್ರಸನ್ನ ಮೂರ್ತಿಯವರ ಸಲಹೆ ಪಡೆದೆ. ಯುವರಾಜ ಕಾಲೇಜು ಸೇರಿದೆ.
ಯುವರಾಜ ಕಾಲೇಜು ಸಾವಿರಾರು ವಿದ್ಯಾರ್ಥಿಗಳಿದ್ದ ಕಾಲೇಜು, ಆ ಸಾವಿರ ಹುಡುಗರ ನಡುವೆ ನಾನು ಅಲ್ಪ ಸ್ವಲ್ಪ ಪ್ರಸಿದ್ದಿಯಾದೆ. ಯುವರಾಜ ಕಾಲೇಜಿನ ರಘುನಾಥ ಸರ್ ಅವರ ಎಲ್ಲೆ ಮೀರಿ ಸಹಾಯ ಮಾಡಿದರು. ಧೈರ್ಯ ತುಂಬಿದರು, ನನ್ನ ಪಿಎಚ್ ಡಿ ಮುಗಿಯುವ ತನಕ ಕಾಪಾಡಿದರು. ಅದೇ ಸಮಯದಲ್ಲಿ ಹತ್ತಾರು ಉಪನ್ಯಾಸಕರು ಪಾಠ ಹೇಳಿದರು, ಧೈರ್ಯ ತುಂಬಿದರು, ಅವರಲ್ಲಿ ಬಹಳ ಮುಖ್ಯವಾದವರು, ಅಜಯ್ ಕುಮಾರ್ ಮತ್ತು ಭದ್ರೇಗೌಡರು. ನನಗೆ ಪರಿಸರ ವಿಜ್ನಾನದಲ್ಲಿ ಆಸಕ್ತಿಯಿದ್ದದ್ದು ಸತ್ಯ, ಆದರೇ ಆ ದಿನಗಳಲ್ಲಿ ಪರಿಸರ ವಿಜ್ನಾನ ನಿರಾಸಕ್ತಿ ಮತ್ತು ಅಪ್ರಯೋಜಕವೆಂದು ನನ್ನ ಅನೇಕ ಸ್ನೇಹಿತರು ಭಾವಿಸಿದ್ದರು ಕೀಳರಿಮೆಯನ್ನು ತುಂಬಿದ್ದರು. ಆಗ ನಾನು ನನ್ನ ವಿಷಯಗಳನ್ನು ಬದಲಾಯಿಸಬೇಕೆಂದು ನಿರ್ಧರಿಸಿದೆ. ನಾನು ಪಿಯುಸಿನಲ್ಲಿ ತೆಗೆದಿರುವ ಮೂರು ಮತ್ತೊಂದು ಮಾರ್ಕ್ ಗೆ ಅಲ್ಲಿ ಸೀಟು ಸಿಕ್ಕಿದ್ದೆ ಹೆಚ್ಚೆಂದರು, ಹಲವರು. ಆದರೂ, ನಾನು ನಮ್ಮ ಅಪ್ಪನನ್ನು ಕರೆದುಕೊಂಡು ಹೋಗಿ ಸಿಕ್ಕಸಿಕ್ಕಿದವರನ್ನೆಲ್ಲಾ ಮಾತನಾಡಿಸಿದೆ, ಬೇಡಿದೆ, ಬಹುಶಃ ಅದು ನನ್ನ ಮನಸ್ಸಿನಲ್ಲಿ ಶಾಶ್ವತವಾಯಿತು, ಯಾರನ್ನೂ ಕೇಳಬಾರದು, ಕೇಳಿದರೆ ಅವರು ಮಾಡಿಕೊಡುವುದಿಲ್ಲವೆಂದು. ಆ ಸಮಯಕ್ಕೆ ಸಹಾಯ ಮಾಡಿದವರುಗಳು, ಎಸ್ ಆರ್ ಸ್ಟುಡಿಯೂ ರಘು, ಮಹಾರಾಣಿ ಕಾಲೇಜು ತಮ್ಮಣ್ಣಗೌಡ, ವಿದ್ಯಾವರ್ಧಕ ಕಾಲೇಜಿನ ಮಹೇಶ್, ಮುಕ್ತ ವಿವಿಯ ವಿವೇಕಾನಂದ ಹೀಗೆ ಹತ್ತು ಹಲವರು. ಅಜಯ್ ಕುಮಾರರಿಗೆ ಭದ್ರೇಗೌಡರ ಮುಖಾಂತರ ವಿಷಯ ತಲುಪಿ ನನ್ನನ್ನು ಕರೆದರು. ಕರೆದು ಹೇಳಿದರು, ವಿಷಯ ಯಾವುದೆಂಬುದು ಮುಖ್ಯವಲ್ಲ, ನೀನು ಹೇಗೆ ಓದುತ್ತೀಯಾ ಎಂಬುದು ಮುಖ್ಯ. ಪರಿಸರ ವಿಜ್ನಾನ ಇಂದಿಗೆ ನಿನಗೆ ಕಳಪೆಯೆಂತೆ ಕಂಡರೂ, ಅದು ಜೀವನಕ್ಕೆ ಮತ್ತು ಪ್ರಪಂಚಕ್ಕೆ ಬಹಳ ಪ್ರಾಮುಖ್ಯವಿರುವ ವಿಷಯ, ತಲೆ ಕೆಡಿಸಿಕೊಳ್ಳದೇ ಓದಿ, ಎಂಎಸ್ಸಿ ಮಾಡು, ಸೂಟ್ ಕೇಸಿನಲ್ಲಿ ದುಡ್ಡು ಬರುತ್ತದೆ ಎಂದರು.
ನಾನು ಬಿಎಸ್ಸಿ ಸಾಕೆನಿಸುವಾಗ ಇವರು ಎಂಎಸ್ಸಿ ಎಂದದ್ದು ಹಿಡಿಸಲಿಲ್ಲ. ಆದರೂ ಓದಿಗೆ ತಲೆ ಹಚ್ಚಿದೆ. ನಮ್ಮ ತಂದೆಗೆ ನಾನು ಬಿಎಸ್ಸಿ ಮಾಡುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಅವರು ಜೀವನದಲ್ಲಿ, ನಿರುದ್ಯೋಗ ಕಷ್ಟ ಅನುಭವಿಸಿದ್ದರಿಂದ, ನಾನು ಪಿಯುಸಿಯಲ್ಲಿ ಒಳ್ಳೆ ಮಾರ್ಕ್ ತೆಗೆದು ಮಾಸ್ಟರಾಗಬೇಕೆಂದಿದ್ದರು. ನಾನು ತೆಗೆದಿರುವ ಅಂಕಕ್ಕೆ ಅರ್ಜಿಯನ್ನೇ ಕೊಡುವುದಿಲ್ಲ, ಇನ್ನೂ ಸೀಟು ಕೊಟ್ಟಾರೆ!? ನಂತರ ಬಿಎಸ್ಸಿ ಸಿಬಿಜ಼ೆಡ್ ಓದಿಯಾದರೂ ಬಿಎಡ್ ಮಾಡಲೆಂಬುದು ಮಗದೊಂದಾಸೆ, ನನಗೆ ಪಿಯುಸಿಯ ಜೀವಶಾಸ್ತ್ರ ಸಾಕೆನಿಸಿತ್ತು, ಏನಾದರೂ ಹೊಸತು ಬೇಕೆನಿಸಿತ್ತು. ಆ ಮೂರು ವರ್ಷ ನನ್ನ ಮನಸ್ಸಿಗೆ ಅದೆಷ್ಟು ಬೇಕೋ ಅಷ್ಟನ್ನು ಓದಿದೆ, ಕಥೆ, ಕಾದಂಬರಿ, ವಿವೇಕಾನಂದರ ಕೃತಿ ಶ್ರೇಣಿಗಳು, ನನ್ನ ಓದು ಯಾವ ಮಟ್ಟಕ್ಕೆ ಬಂತೆಂದರೆ, ನಮ್ಮಪ್ಪ ನಿರ್ಧರಿಸಿದರು, ಇವನ ಹಾದಿ ಮಠದೆಡೆಗೆಂದು. ಸನ್ಯಾಸತ್ವದ ಹೊಸ್ತಿಲಿಗೆ ಬಂದು ನಿಂತಿದ್ದೆ. ಓಳಕ್ಕೆ ಹೋಗಲಿಲ್ಲ, ಸನ್ಯಾಸತ್ವ ವಿರುದ್ದ ಗುಣವಾಗಿ ಬದಲಾದೆ, ಮುಂದೊಮ್ಮೆ ಅದು ದೊಡ್ಡ ಪ್ರಮಾದವೂ ಆಯಿತು, ಅದನ್ನು ಮುಂದೆ ವಿವರಿಸುತ್ತೇನೆ. ನಾನು ಕಾಲೇಜಿನಲ್ಲಿ ಪ್ರಸಿದ್ದಿಯಾದೆ ಎನ್ನುವುದನ್ನು ತಿಳಿಸಿದ್ದೆ. ಇದಕ್ಕೆ ಮೊದಲ ಕಾರಣ, ನಾನು ಕುಡುಕ ಎಂದು, ವಿಪರ್ಯಾಸವೆಂದರೇ, ನಾನು ಪಿಯುಸಿಯಲ್ಲಿ ಕುಡಿದು ಮಾಡಿದ ರಂಪ ರಾಮಾಯಣ ಬಿಎಸ್ಸಿಯಲ್ಲಿ ಜಾದೂ ಮಾಡಿತ್ತು, ಜಗಜಾಹಿರಾಗಿತ್ತು. ಬಿಎಸ್ಸಿಯಲ್ಲಿ ನಾನು ಹೆಚ್ಚು ಕುಡಿಯಲಿಲ್ಲ, ನಾನು ಬಹಳ ಶಿಸ್ತಿನ ಜೀವನವನ್ನೇ ಪಾಲಿಸಿದೆ. ಮುಂಜಾನೆ ಬೇಗ ಏಳುವುದು, ಜಿಮ್ ಹೋಗುವುದು, ಓದುವುದು, ಎಲ್ಲರೊಡನೆ ಬೆರೆಯುವುದು ಇದೆಲ್ಲವು ಇದ್ದವು. ನನಗೆ ಬಿಎಸ್ಸಿಯಲ್ಲಿ ರಘುನಾಥ್ ಮತ್ತು ಶ್ರೀಕಂಠಸ್ವಾಮಿಯವರು ಬಹಳ ಸಹಾಯ ಮಾಡಿದರು, ಮನೆಗೆ ಕರೆದು ಪಾಠ ಹೇಳಿಕೊಟ್ಟರು, ಅವರ ಪ್ರಿತಿಗೆ ನಾನು ಎಂದಿಗೂ ದಾಸ. ರಘುನಾಥ್ ರವರು ನನಗೆ ನೇತ್ರದಾನಕ್ಕೆ ನೋಂದಾಯಿಸಲು ನನ್ನನ್ನೇ ಆಯ್ದುಕೊಂಡರು, ಇದು ಕಾಲೇಜಿನ ಎಲ್ಲರು ನನಗೆ ಪರಿಚಯವಾಗಲು ಮತ್ತು ನಾನು ಸಾರ್ವಜನಿಕ ಸೇವೆ ಮಾಡಬಲ್ಲ ವ್ಯಕ್ತಿ ಎನಿಸಿತು. ಪ್ರಕಾಶ್ ಮತ್ತು ಪ್ರತಿಮಾ ನಮಗೆ ಮೊದಲ ವರ್ಷದ ಪರಿಸರ ವಿಜ್ನಾನ ಮಾಡಿದರು. ಪ್ರಕಾಶ್ ಆಗ ಪಿಎಚ್ ಡಿ ಮಾಡುತ್ತಿದ್ದರು, ಅವರನ್ನು ಅದೆಷ್ಟು ಗೋಳಾಡಿಸಿದೆವೆಂದರೇ ಈಗ ಅಯ್ಯೋ ಎನಿಸುತ್ತದೆ. ಪ್ರಕಾಶ್ ನಡೆದುಕೊಂಡು, ಕಷ್ಟಪಟ್ಟು ಗಂಗೋತ್ರಿಯಿಂದ ಬಂದರೂ, ನಾನು ಹಾಸ್ಟೆಲಿನಿಂದ ಹೋಗಿರುತ್ತಿರಲಿಲ್ಲ, ತಾತ್ಸಾರವಿತ್ತು. ನಂತರ ಸುರೇಶ್ ಬಂದರು, ಅವರು ಬಹಳ ಮುತುವರ್ಜಿಯಿಂದ ಬೋಧಿಸಿದರು.
ಭೂವಿಜ್ನಾನದಲ್ಲಿ ಸ್ವಲ್ಪ ರಾಜಕೀಯವಿತ್ತು, ನಾವು ಹೆಚ್ಚಿಗೆ ತಲೆ ಕೆಡಿಸಿಕೊಳ್ಳಲಿಲ್ಲ. ಅನಂತ ಬಹಳ ಅನುಭವಿಗಳು ಮತ್ತು ಅಷ್ಟೇ ಅದ್ಬುತವಾಗಿ ಪಾಠ ಮಾಡುತ್ತಿದ್ದರು. ಮಹದೇವಯ್ಯ ಬಹಳ ಒಳ್ಳೆಯ ವ್ಯಕ್ತಿ ಕುಡಿತಕ್ಕೆ ಬಲಿಯಾದರು. ರಸಾಯನ ಶಾಸ್ತ್ರದಲ್ಲಿ ಪದ್ಮಾಜಿಯವರ ಪಾಠ ಕೇಳುವುದೇ ಒಂದು ಆನಂದ. ನಾವು ಮೂರನೇ ವರ್ಷದಲ್ಲಿದ್ದಾಗ, ವಸ್ತು ಪ್ರದರ್ಶನ ಮಾಡಿದ್ದೆವು, ಆ ಸಮಯದಲ್ಲಿ ಸುರೇಶ್ ನಮ್ಮನ್ನು ಹುರಿದುಂಬಿಸಿ ಬಹಳ ಅಚ್ಚುಕಟ್ಟಾಗಿ ಮಾಡಿಸಿದರು. ಇಂಗ್ಲೀಷ್ ಬೋಧಕರು ಅದ್ಬುತವೆನಿಸುವಂತೆ ಪಾಠ ಮಾಡುತಿದ್ದರು, ಅದರಲ್ಲಿಯೂ ಒಥೆಲ್ಲೋ, ಕಾಂತಾಪುರ ಮನದಲ್ಲಿ ಹಸಿರಾಗಿದೆ. ಅವರಲ್ಲಿದ್ದ ತಾಳ್ಮೆ, ಸಮಯ ಪ್ರಜ್ನೆ, ವಿದ್ಯಾರ್ಥಿಗಳಿಗೋಸ್ಕರ ತುಡಿಯುವ ಮನಸ್ಸು ಅವಿಸ್ಮರಣೀಯ. ವಿದ್ಯಾರ್ಥಿಗಳು ಗುರುಗಳಿಗೆ ಹೊಡೆಯುವುದಕ್ಕೆ ಮನಸ್ಸು ಮಾಡುವ ಹೀನ ಮನಸ್ಸು ಹೇಗೆ ಬರುತ್ತದೆ ಎನಿಸುತ್ತದೆ. ತಮ್ಮದಲ್ಲದ ಮಕ್ಕಳಿಗೆ ಕೇವಲ ಕೆಲಸಕ್ಕಲ್ಲದೇ ದುಡಿಯುವ ಅಪ್ರತಿಮ ಮಾನವ ಜೀವಿಗಳು ಗುರುಗಳು.
ಯಾಕೋ ನಾನು ಜಾಸ್ತಿ ಬರೆಯುತಿದ್ದೀನಿ, ಮತ್ತು ಓದುವ ಆಸಕ್ತಿ ಕುಂದುವಂತಿದೆ. ಬರವಣಿಗೆ ತಾನಾಗಿಯೇ ಓದಿಸಿಕೊಳ್ಳುವಂತಿರಬೇಕು, ನಿರಾಸಕ್ತಿ ಸೃಷ್ಟಿಸುವಂತಿರಬಾರದು. ಕಳೆದು ಹತ್ತು ನಿಮಿಷಗಳನ್ನೇ ಬಲಿಕೊಟ್ಟಿದ್ದೀರಾ ಇನ್ನು ಮುಂದಿನ ಐದು ನಿಮಿಷ ತಾಳ್ಮೆಯಿಂದ ಓದುವುದಕ್ಕಾಗುವುದಿಲ್ಲವೇ? ಆಗುತ್ತದೆ. ಸರಿ ಮುಂದಿನ ವಿಷಯಕ್ಕೆ ಬರೋಣ, ಬಿಎಸ್ಸಿ ಬಹಳ ಘಟನೆಗಳಿವೆ ಅದರಲ್ಲಿ ಒಂದನ್ನು ಮಾತ್ರ ಹೇಳುತ್ತೇನೆ. ನಾನು ಮೊದಲೇ ಹೇಳಿದ ಹಾಗೆ ಬಿಎಸ್ಸಿಯಲ್ಲಿ ಜೀವನವನ್ನು ಬಹಳ ಗಂಬೀರವಾಗಿ ತೆಗೆದುಕೊಂಡಿದೆ. ಎಲ್ಲವನ್ನೂ ಕಲಿಯಲು ಬಯಸಿದ್ದೆ. ಮೊದಲಿಗೆ ನಾನು ರಸಾಯನ ಶಾಸ್ತ್ರ (ಕೆಮಿಸ್ಟ್ರೀ)ಯಲ್ಲಿ ಎಂಎಸ್ಸಿ ಮಾಡಬೇಕೆಂದು ಬಯಸಿದ್ದೆ. ಅದಕ್ಕಾಗಿ ಬಹಳ ಓದುತ್ತಿದ್ದೆ, ಪರೀಕ್ಷೆಯ ದಿನ ನೋಡುವಾಗ ಹೆಚ್ಚು ಮಾರ್ಕ್ ತೆಗೆಯುವುದಕ್ಕೆ ಕಷ್ಟ ಎಂದು, ಅರ್ಧ ಬರೆದು ಅಡ್ಡಗೆರೆ ಎಳೆದು ಬಂದೆ. ಪರಿಸರ ವಿಜ್ನಾನದ ಪರೀಕ್ಷೆಯ ದಿನ ನಾನು ಮತ್ತು ಸ್ನೇಹಿತ ಸುನೀಲ್ ಎದ್ದು ಹೋಗಲು ಸಿದ್ದವಾದೆವು, ಏನು ಬರೆಯದೇ, ಅವನು ಎದ್ದು ಹೊರಗೆ ಹೋದ ನಾನು ಕುಳಿತು ಬರೆಯುತ್ತಲೇ ಇದ್ದೆ. ನಂತರ ಹಿಂದಿರುಗಿದರೇ ಸುನೀಲ್ ಇಲ್ಲ! ನಾನು ಹೊರಕ್ಕೆ ಬಂದೆ. ಫಲಿತಾಂಶದ ದಿನ ನಾನು ಊರಿನಲ್ಲಿದ್ದೆ, ಗದ್ದೆ ಕೆಲಸ, ಅಮ್ಮ ಹೇಳಿದರು, ನಿನ್ನ ಫ್ರೆಂಡ್ ಫೋನ್ ಮಾಡಿದ್ದ, ರಿಸಲ್ಟ್ ಬಂದಿದೆಯಂತೆ. ನಾನು ಎರಡು ಅಥವಾ ಮೂರು ಢಮಾರ್ ಎಂದು ಫೋನ್ ಮಾಡಿದರೇ, ಎಲ್ಲವೂ ಪಾಸ್! ಎಲ್ಲರಿಗೂ ಅಚ್ಚರಿ ನಾನು ಸೇರಿದಂತೆ. ಮೂರು ವರ್ಷವೂ ಪ್ರಥಮ ದರ್ಜೆಯಲ್ಲಿ ಪಾಸಾದೆ.
ಜೀವನದಲ್ಲಿ ಒಂದು ಹಂತ ಮುಗಿದ ಮೇಲೆ ಮತ್ತೊಂದು, ಹಿಂದಿನ ಹಂತವೇ ಚೆನ್ನಾಗಿತ್ತು ಎನಿಸುತ್ತದೆ. ಅರ್ಥವಾಗಲಿಲ್ಲ ಅಲ್ವಾ? ಜೀವನ ಒಂದು ರೀತಿ ಕ್ಯಾಂಡೀ ಕ್ರಶ್ ತರಹ, ಮೊದಲು ಉತ್ಸಾಹವಿರುತ್ತದೆ, ಹಂತ ಮೇಲಕ್ಕೆ ಹೋದಂತೆ ಕಷ್ಟವೆನಿಸುತ್ತದೆ. ಒಮ್ಮೊಮ್ಮೆ ಹಿಂದಿನ ಹಂತದ ಆಟವನ್ನೇ ಆಡೋಣವೆನಿಸುತ್ತದೆ, ಅದಕ್ಕೆ ಬಹಳಷ್ಟು ಜನ ಭೂತಕಾಲವನ್ನು ಪ್ರೀತಿಸುವುದು. ಪಾಸಾದೆ, ಎಂಎಸ್ಸಿ ಒಂದೇ ದಾರಿ! ಇಲ್ಲವೆಂದರೇ ಕೆಲಸ. ಬೆಂಗಳೂರಿಗೆ ಬಂದೆ ಕೆಲಸ ಹುಡುಕುವ ಕಾಯಕ ಅಂಟುಬಿತ್ತು. ನೀವು ಈಗ ನೋಡುತ್ತಿರುವ ಬೆಂಗಳೂರು ಬೇರೆ, ೨೦೦೪ರ ಬೆಂಗಳೂರು ಬೇರೆ. ಆಗ ನನ್ನ ತಲೆಗೆ ಬಂದದ್ದು, ಮೆಡಿಕಲ್ ರೆಪ್, ರೇಪ್ ಅಲ್ಲಾ, ರೆಪ್ರೆಸೆಂಟೇಟಿವ್. ಅದೆಲ್ಲ ಉದ್ಯೋಗದ ಕುರಿತು ಬರೆಯುವಾಗ ಹೇಳುತ್ತೇನೆ. ಕೆಲವು ನಾಟಕೀಯ ಬೆಳವಣಿಗೆಯ ನಂತರ, ಬೆಂಗಳೂರು ವಿವಿಯಲ್ಲಿ ಪರಿಸರ ವಿಜ್ನಾನ ವಿಭಾಗದ ವಿದ್ಯಾರ್ಥಿಯಾದೆ. ವಿವಿಗೆ ಸೇರಿದ್ದೆಲ್ಲಾ ಉದ್ದುದ್ದುದ್ದುದ್ದ ಕಥೆಯಿದೆ, ಅದನ್ನು ಮುಂದೂಡಿರುತ್ತೇನೆ. ಮುಂದೂಡುವುದೇನು ಹೊಸತಲ್ಲ ನನಗೆ. ನಾನು ಮೊದಲೇ ಹೇಳಿದಂತೆ ಹಳ್ಳಿಯಿಂದ ಬಂದವನು, ಇಂಗ್ಲೀಷ್ ಬಾರದವನಾಗಿದ್ದೆ, ಈಗಲೂ ಬರುವುದಿಲ್ಲ, ಸ್ವಲ್ಪ ಸಂಭಾಳಿಸುವಂತಾಗಿದೆ. ನಾನು ಮೈಸೂರಿನಲ್ಲಿ ಎಂಎಸ್ಸಿ ಮಾಡಬೇಕಿತ್ತು, ಅಲ್ಲಿ ಮಾಡಲಿಲ್ಲವೆಂಬ ಕೊರಗು ಸ್ವಲ್ಪ ದಿವಸಕ್ಕಿತ್ತು. ಕೆಲವು ಗೊಂದಲಗಳ ನಡುವೆ ನನಗೆ ಮೈಸೂರಿನಲ್ಲಿ ಸೀಟು ಸಿಗಲಿಲ್ಲ. ನಾನು ಈಗ ಹಿಂದಿರುಗಿ ನೋಡಿದರೇ, ಬೆಂಗಳೂರಿಗೆ ಬಂದದ್ದು ನನ್ನ ಭವಿಷ್ಯದ ಭಾಗ್ಯವಾಯಿತು. ಸಿದ್ದರಾಮಯ್ಯರ ಭಾಗ್ಯ ನನಗೆ ಹತ್ತು ವರ್ಷದ ಹಿಂದೆಯೇ ಲಭಿಸಿತ್ತು.
ನನ್ನ ಬೆಳವಣಿಗೆಗೆ ಸಹಕಾರಿಯಾದದ್ದು, ನನ್ನ ಜೊತೆಯಲ್ಲಿದ್ದ ಎಲ್ಲಾ ಸ್ನೇಹಿತರು, ಉಪನ್ಯಾಸಕರು, ಸಂಶೋಧಕರು ಮತ್ತು ಆಡಳಿತ ಸಿಬ್ಬಂದಿವರ್ಗ. ಸೋಮಶೇಖರ್, ನಂದಿನಿ, ನಾಗರಾಜ್, ಪ್ರಕಾಶ್, ವೆಂಕಟೇಶಣ್ಣ, ಪರಮೇಶ್ ನಾಯ್ಕ್, ಸುನೀತಾ, ಶ್ರೀಧರ್ ಬಾಬು, ದೇವರಾಜು, ಮನಮೋಹನರಾಯರು, ಅಯ್ಯಂಗಾರರು, ಚೆಲುವಣ್ಣ, ಹೀಗೆ ಎಲ್ಲರ ಜೊತೆಗೆ ಹಾಸ್ಟೇಲ್ಲಿನ ನನ್ನ ಸೀನಿಯರ್ ದ್ವಾರಕೀಶ್, ಅಶೋಕ್, ಲಿಂಗರಾಜು, ಕಾಂತರಾಜು ಹೀಗೆ ಹತ್ತಾರು ಜನ ನನಗೆ ಎಲ್ಲಾ ರೀತಿಯ ಧೈರ್ಯ ತುಂಬಿದರು. ಇಂಗ್ಲೀಷ್ ಭಾಷೆ, ಬರವಣಿಗೆ, ಓದುವುದು, ವಿಚಾರ ವಿನೀಮಯ ಅದರಲ್ಲಿಯೂ ಸಮಾಜದ ಬಗ್ಗೆಯ ಕಾಳಜಿ ಹುಟ್ಟಿತು. ಮೂರನೆಯ ಸೆಮಿಸ್ಟರ್ ಬರುವ ಸಮಯಕ್ಕೆ ನಾವು ಪ್ರಾಜೆಕ್ಟ್ ಮಾಡಬೇಕಾಗಿ ಬಂತು. ಆಗ, ನಾಗರಭಾವಿಯಲ್ಲಿರುವ ಐಸೆಕ್ ಸಂಸ್ಥೆಯಿಂದ ಪರಿಸರ ಅರ್ಥಶಾಸ್ತ್ರ ಬೋಧಿಸಲು ವಿಜ್ನಾನಿಗಳು ಬರುತ್ತಿದ್ದರು. ನಮಗೆ ಯಾವಗಲೂ ಇರುವುದಕ್ಕಿಂತ ಇಲ್ಲದೇ ಇರುವುದರ ಬಗ್ಗೆಯೇ ಗೌರವ, ಪ್ರಿತಿ ಹೆಚ್ಚು, ಅದರಂತೆಯೇ, ನಾವು ಎರಡು ವರ್ಷ ಕೇಳಿದ ಉಪನ್ಯಾಸಕರ ಮಾತುಗಳು ಬೋರ್ ಆಗತೊಡಗಿದವು. ಐಸೆಕ್ ರವರ ಪಿಪಿಟಿ ನಮಗೆ ಹಿಡಿಸಿತು. ಅವರು ಪಾಠ ಮಾಡುವ ರೀತಿ, ಉದಾಹರಣೆಗಳು ಜೀವನಕ್ಕೆ ಸನಿಹವಾದವು. ನಾನು ನನ್ನ ಎಂಎಸ್ಸಿ ಪ್ರಾಜೆಕ್ಟ್ ಮಾಡುವುದು ಐಸೆಕ್ ಅಲ್ಲೆಂದು ನಿರ್ಧರಿಸಿದೆ. ನಾನು ಮೊದಲಿಗೆ ಹೋಗಿ ವೆಂಕಟಾಚಲ ಅವರಿಗೆ ನನ್ನ ಆಸೆಯನ್ನು ವ್ಯಕ್ತಪಡಿಸಿದೆ. ಕೊನೆಯ ಎರಡು ಕ್ಲಾಸುಗಳನ್ನು ಪ್ರೋ. ಕೆವಿ ರಾಜು ತೆಗೆದುಕೊಳ್ಳುತ್ತಾರೆ, ಅವರೊಂದಿಗೆ ಮಾತನಾಡಿ ಅವರು ನಮ್ಮ ವಿಭಾಗದ ಮುಖ್ಯಸ್ಥರು ಎಂದರು. ನಮ್ಮ ಸೀನಿಯರ್ ಕೆವಿ ರಾಜುರವರ ಬಗ್ಗೆ ಮಿಶ್ರ ಪ್ರತಿಕ್ರಿಯೆ ಕೊಟ್ಟಿದ್ದರು. ಅದೊಂದು  ಡಿಸೆಂಬರ್ ತಿಂಗಳ ಒಂದು ಶನಿವಾರ,  ನಾವು ಕ್ಲಾಸಿನಲ್ಲಿ ಕುಳಿತಿದ್ದಾಗ, ಆರು ಅಡಿಗೂ ಎತ್ತರದ ಒಂದು ವ್ಯಕ್ತಿಯ ಆಗಮನವಾಯಿತು. ಅವರ ಗಡಸು ದ್ವನಿ, ವಿಮಾನದಲ್ಲಿ ಮಾತನಾಡುವವರಂತೆಯೇ ಇತ್ತು. ಆ ಒಂದು ಗಂಟೆಯಲ್ಲಿ ನಮ್ಮ ತಲೆಗೆ ಬಿಟ್ಟ ಹುಳು ಇಂದು ಬೆಳೆದು ಅನಕೊಂಡವಾಗಿದೆ. ಅದು ನನ್ನ ಜೀವನದ ಎಚ್ಚರಿಕೆಯ ಗಂಟೆ ಮತ್ತು ಜೀವನಕ್ಕೆ ಹೊಸ ಆಯಾಮ ಕೊಟ್ಟ ಕ್ಷಣ.
ನಾನು ಕ್ಲಾಸ್ ಮುಗಿದ ಮೇಲೆ ಕೆವಿ ರಾಜುರವರ ಹಿಂದೆಯೇ ಹೋದೆ, ನನ್ನೊಂದಿಗೆ ಇನ್ನೂ ನಾಲ್ಕು ಜನ ಸ್ನೇಹಿತರು. ಪ್ರೋಫೇಸರ್ ಬಂದಿರುವುದು ಹಳೇಯ ಒಂದು ಕೈನೆಟಿಕ್ ನಲ್ಲಿ! ಅಚ್ಚರಿ, ಅಷ್ಟೇ ಸಂತಸ. ಯಾವುದೇ ವ್ಯಕ್ತಿ ಮನಸ್ಸಿಗೆ ಹತ್ತಿರವಾಗುವುದು ಅವರುಗಳ ಸರಳತೆಯಿಂದ ಆ ಸರಳತೆ ಅವರಲ್ಲಿತ್ತು. ಅಲ್ಲಿಂದ ನಂತರ ಐಸೆಕ್ ಗೆ ಹೋಗಿ ಮಾತನಾಡಿಕೊಂಡು ಬಂದೆವು. ಅವರ ಆದರ್ಶಗಳು, ಮಾತುಗಳು, ನಡೆತೆ ಬಹಳ ನಿಷ್ಠುರವೆನಿಸಿದರೂ, ವಿದ್ಯಾರ್ಥಿಗಳ ಬದುಕನ್ನು ಬದಲಾಯಿಸಬಳ್ಳ ಸಾಮರ್ಥ್ಯವಿದೆ. ಎಂಥಹ ಕತ್ತೆಯನ್ನು ಕುದುರೆ ಮಾಡಬಲ್ಲ ಶಕ್ತಿಯಿದೆ. ಅವರ ಮಾತುಗಳು ಎಂಥಹವರ ಅಹಂ ಅನ್ನು ಕೆಣಕಿದರೂ, ಬದಕಲ್ಲಿ ಬೆಳೆಯಬೇಕೆನ್ನುವವರಿಗೆ ಮೃಷ್ಟಾನ್ನವಾಗುತ್ತದೆ. ಇದೆಲ್ಲವೂ ಪಿಠೀಕೆಯಾದ ಮೇಲೆ ಸ್ವಲ್ಪ ನೇರ ವಿಷಯವನ್ನು ತಿಳಿಸುತ್ತೇನೆ. ಕೆವಿ ರಾಜು ಅವರು, ಎಲ್ಲರಿಗೂ ಹೇಳುವ ಮೊದಲ ಕೆಲಸ ಅಥವಾ ವಿಷಯ ನೀವು ಏನನ್ನೇ ಮಾಡಬೇಕಾದರೂ ನಿಮ್ಮ ಊರಿನಲ್ಲಿ ಮತ್ತು ನಿಮ್ಮ ಮನೆಯಲ್ಲಿ ಮಾಡಿ. ಉದಾಹರಣೆಗೆ, ನಾನು ಹವಮಾನ ವೈಪರೀತ್ಯ ಅಥವಾ ಕ್ಲೈಮೇಟ್ ಛೇಂಜ್ ಬಗ್ಗೆ ಪ್ರಪಂಚಕ್ಕೆ ತಿಳಿಸಬೇಕೆಂದರೇ ಮೊದಲು ನನ್ನಜ್ಜಿಗೆ ಅರ್ಥ ಮಾಡಿಸಬೇಕು. ಅಷ್ಟು ಸರಳವಾಗಿ ನಮ್ಮ ಮಾತುಕತೆ ಇರಬೇಕೆಂಬುದು ಅವರ ಅನಿಸಿಕೆ. 
ಅಯ್ಯೋ ನಾನು ನಾಲ್ಕು ದಿನಗಳಿಂದ ಇದನ್ನು ಬರೆಯುತ್ತಿದ್ದೇನೆ, ಆದರೇ ಇನ್ನೂ ಮುಗಿಸಲಾಗುತ್ತಿಲ್ಲ. ನನ್ನ ಜೀವನದಲ್ಲಿ ಸ್ವಲ್ಪ ಬದಲಾವಣೆ ಬಂದಿದೆ. ಆದರೂ ಈ ನನ್ನ ಸೋಮಾರಿತನ ಮಾತ್ರ ಬದಲಾಗುತ್ತಿಲ್ಲ. ಅಂತೂ ಐಸೆಕ್ ನಲ್ಲಿ ಪ್ರಾಜೆಕ್ಟ್ ಮಾಡಲು ಅನುಮತಿ ಸಿಕ್ಕಿತು, ಮಾಡಿ ಮುಗಿಸಿದೆವು. ಅದನ್ನು ಮತ್ತೊಂದು ಲೇಖನದಲ್ಲಿ ಪ್ರಸ್ತಾಪಿಸುತ್ತೇನೆ. ಅದೇ ಸಮಯದಲ್ಲಿ ನನಗೆ ಮತ್ತೊಂದು ಅವಕಾಶ ಸಿಕ್ಕಿತು, ಜಾಣ ಎಂಬದೊಂದು ಪತ್ರಿಕೆ. ಒಮ್ಮೆ ಮುಂಜಾನೆ, ಫಿಸಿಕ್ಸ್ ಕ್ಯಾಂಟೀನಿನಲ್ಲಿ ಕುಳಿತಿದ್ದಾಗ ಒಂದು ಪತ್ರಿಕೆ, ವಾರ ಪತ್ರಿಕೆ ಕಣ್ಣಿಗೆ ಬಿತ್ತು. ಅದರಲ್ಲಿ ಬರವಣಿಗೆಗಳು ಬೇಕೆಂದು ಕೇಳಿದ್ದರು, ನಾನು ಅವರಿಗೆ ಫೋನಾಯಿಸಿ, ಒಪ್ಪಿಗೆ ಪಡೆದೆ, ಸುಮಾರು ಆರು ತಿಂಗಳು ಬರೆದುಕೊಟ್ಟೆ. ಮುಂದಿನ ದಿನಗಳಲ್ಲಿ ಪತ್ರಿಕೆಯೇ ಮುಚ್ಚಿ  ಹೋಯಿತು.
ಎಂಎಸ್ಸಿ ಮುಗಿಯುವ ಮುನ್ನವೇ ಕೆಲಸ ಹುಡುಕಲು ಶುರು ಮಾಡಿದೆವು. ವಿದ್ಯಾರ್ಥಿಗಳಲ್ಲಿ ಭರವಸೆ ತುಂಬಬೇಕಿರುವುದು ಗುರುಗಳ ಮತ್ತು ಹಿರಿಯ ವಿದ್ಯಾರ್ಥಿಗಳ ಕರ್ತವ್ಯ. ಆದರೇ, ಪರಿಸರ ವಿಜ್ನಾನ ವಿಭಾಗದಲ್ಲಿ ನಕಾರಾತ್ಮಕವಾಗಿ ತಲೆ ತುಂಬಿದವರೇ ಹೆಚ್ಚು. ಆದ್ದರಿಂದ ಒಡನೆಯೇ ಯಾವುದೋ ಕೆಲಸ ಸಿಕ್ಕರೇ ಸಾಕು, ನಾನು ನಿರುದ್ಯೋಗಿಯಾಗಬಾರದೆಂದು ನಿರ್ಧರಿಸಿ, ಕೊನೆಗೆ ಫುಡ್ ವರ್ಲ್ಡ್ ನಲ್ಲಿಯಾದರೂ ಕೆಲಸ ಸಿಗಲೆಂದು ಬಯಸಿದೆನು. ಅಂತೂ ಕೊನೆಗೆ ಡ್ರೀಮ್ ಸ್ಕೂಲ್ ಫೌಂಡೇಶನ್ ಎಂಬದೊಂದು ಎನ್ ಜಿಓನಲ್ಲಿ ಕೆಲಸ ಸಿಕ್ಕಿತು.
ಇದು ಎಲ್ಲರ ಜೀವನದಲ್ಲಿಯೂ ಇದ್ದೇ ಇದೆ, ಆದರೇ ನನ್ನ ಜೀವದನದಲ್ಲಿ ನಾನು ಅತಿಯಾಗಿ ಮಾಡಿದ ತಪ್ಪು ಇದು. ಯಾವುದೇ ಸಂಸ್ಥೆಗೆ ಕೆಲಸಕ್ಕೆ ಸೇರಿದಾಗ ಅದರ ಬಗ್ಗೆ ನೆಗಟಿವ್ ಆಗಿ ಹೇಳುವವರೇ ಹೆಚ್ಚಿರುತ್ತಾರೆ. ನಾನು ಡಿಎಸ್ ಎಫ಼್ ಗೆ ಸೇರಿದಾಗಲೂ ಇಂಥಹದ್ದೇ ಆಯಿತು. ಅದರ ಜೊತೆಗೆ ಕೆಲಸದಲ್ಲಿ ಯಾವ ಬೆಳವಣಿಗೆಯೂ ಇಲ್ಲವೆನಿಸಿತು. ನಾನು ಮೂರ್ನಾಲ್ಕು ತಿಂಗಳು ಕೆಲಸ ಮಾಡಿದೆ. ಅಲ್ಲಿದ್ದ, ಮೈಥಿಲಿ ಮತ್ತು ಸಾಬೂ ಬಹಳ ಒಳ್ಳೆಯವರು, ಕ್ರೈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದವರು. ನಾನು ಐಸೆಕ್ ನಲ್ಲಿ ಆರು ತಿಂಗಳು ಕೆಲಸ ಅಂದರೇ ಪ್ರಾಜೆಕ್ಟ್ ಕೆಲಸ ಮಾಡಿದ್ದರಿಂದ, ಮುಂದಿನ ದಿನದ ಎಲ್ಲಾ ನನ್ನ ಬಾಸ್ ಗಳು ಕೆವಿ ರಾಜುವಂತಿರಬೇಕೆಂದು ನಿರೀಕ್ಷೆಮಾಡತೊಡಗಿದೆ. ನಾವೆಲ್ಲರೂ ಅಷ್ಟೇ, ಬೇರೆಯದರ ಜೊತೆಗೆ ಹೋಲಿಕೆ ಮಾಡುವುದು, ಇರುವುದನ್ನು ಅನುಭವಿಸದೇ, ಸ್ವೀಕರಿಸದೇ ನೊಂದುಕೊಳ್ಳುವುದು. ಕಡೆಗೆ ನಮ್ಮ ಅಪ್ಪ ಅಮ್ಮನನ್ನು ಬೇರೆಯವರ ಜೊತೆಗೆ ಹೋಲಿಕೆ ಮಾಡಿ, ನಮ್ಮ ತಂದೆ ತಾಯಿಯರು ನನ್ನ ಯೋಗ್ಯತೆಗೆ ತಕ್ಕವರಲ್ಲವೆಂದು ನಿರ್ಧರಿಸಿಬಿಡುತ್ತೇವೆ. ನಾನು ಹಾಗೆಯೇ ಮಾಡಿದೆ, ಆದ್ದರಿಂದ ಐಸೆಕ್ ಬಹಳ ಉತ್ತಮ ಸ್ಥಳವೆನಿಸಿತ್ತು. ದಿಡೀರನೇ, ಐಸೆಕ್ ಗೆ ಬಂದು ಯಾವುದಾದರೂ ಕೆಲಸವಿದೆಯೇ ಎಂದು ವಿಚಾರಿಸಿದೆ. ಆ ದಿನ ನೋಡಿದರೇ ಕೆಲಸಕ್ಕೆ ಸಂದರ್ಶನ ನಡೆಯುತ್ತಿತ್ತು. ನನ್ನ ಬಯೋಡಾಟ ನೀಡಿ, ಒಳಗೆ ಹೋಗಿ ಪರೀಕ್ಷೆ ಬರೆದೆ. ಮಧ್ಯಾಹ್ನವಾಗುವಾಗ ನಾನು ಆಯ್ಕೆಯಾಗಿರುವುದು ಖಚಿತವಾಗಿತ್ತು. ಏನು ಕೆಲಸ ಎಂತೂ ಯಾವುದೂ ಗೊತ್ತಿಲ್ಲ. ಫೀಲ್ಡ್ ಇನ್ವೆಸ್ಟಿಗೇಟರ್ ಕೆಲಸ. ಫೀಲ್ಡ್ ವರ್ಕ್ ನನಗೆ ಬಹಳ ಇಷ್ಟ, ಆದರೇ ಇದರಲ್ಲೇನೋ ನಾನು ದಾರಿ ತಪ್ಪುವಂತೆನಿಸಿತು. ನಾನು ನೇರ ಹೋಗಿ, ಮಧುಶ್ರೀ ಶೇಖರ್ ಬಳಿ ನನ್ನ ಅಳುವನ್ನು ತೋಡಿಕೊಂಡೆ. ನನಗೆ ಈ ಕೆಲಸ ಮಾಡುವುದಕ್ಕೆ ಇಷ್ಟವಿಲ್ಲ, ನನಗೆ ಸಂಶೋಧನೆ, ಬರವಣಿಗೆ ಇಷ್ಟವೆಂದೆ. ಅವರು, ಮಗೂ ಈಗ, ಈ ಕೆಲಸ ಮಾತ್ರವಿರುವುದು, ಆದ್ದರಿಂದ ನನ್ನ ಬಳಿಯಲ್ಲಿ ಒಂದು ಚಿಕ್ಕ ಪ್ರಾಜೆಕ್ಟ್ ಇದೆ ಅದನ್ನು ಒಂದು ಹದಿನೈದು ದಿನಗಳ ನಂತರ ಕೈಗೆತ್ತಿಕೊಳ್ಳುತ್ತೇನೆ, ಆಗ ಬಂದು ನನ್ನನ್ನು ಭೇಟಿ ಮಾಡು ಎಂದರು.
ನಾನು ಬಂದ ದಾರಿಗೆ ಸುಂಕವಿಲ್ಲವೆಂದು ನಡೆದೆ. ಆ ನಡುವೇ, ಉಮೇಶ, ಪುಟ್ಟಸ್ವಾಮಯ್ಯನವರ ಜೊತೆಗೆ ಕೆಲಸಕ್ಕೆ ಆಯ್ಕೆಯಾದ. ಇದು ಮನುಷ್ಯನ ಮತ್ತೊಂದು ದುರ್ಗುಣ. ಹೋಲಿಕೆ ಹೋಲಿಕೆ ಹೋಲಿಕೆ, ಕೀಳರಿಮೆ... ನಾನು ಉಮೇಶನನ್ನು ಹೋಲಿಕೆ ಮಾಡತೊಡಗಿದೆ, ಅಯ್ಯೋ ಅವನಿಗೆ ಕೆಲಸ ಸಿಕ್ಕಿತು?! ನಾನು ಕಳಪೆಯೇ? ಆದರ್ಶಕ್ಕೆ ಬಿದ್ದು, ನಾನು ಸಮಾಜ ಮುಖಿ ಪ್ರಾಜೆಕ್ಟ್ ಮಾಡಿದ್ದೆ, ಅವನು ವೈಜ್ನಾನಿಕ, ಕ್ಲೈಮೇಟ್ ಚೇಂಜ್ ಬಗ್ಗೆ ಅಧ್ಯಯನ ನಡೆಸಿದ್ದ. ಬಿಡು, ಏನೋ ಒಂದು ಆಗುತ್ತದೆ, ಇದು ನನ್ನ ಎಂದಿನ ಡೈಲಾಗ್. ಅದರಂತೆಯೇ, ಮತ್ತೆ ಡಿಎಸ್ ಎಫ್ ಗೆ ಹೋದೆ. ಒಮ್ಮೆ ಅಲ್ಲಿರಬಾರದೆಂದು ನಿರ್ಧರಿಸಿದರೇ ಅಲ್ಲಿರುವುದು ನಿಜಕ್ಕೂ ಕಷ್ಟದ ಕೆಲಸ. ನನಗೆ ಆಗಿದ್ದು ಅಷ್ಟೇ. ನಾನು ಅಲ್ಲಿ ನೆಮ್ಮದಿಯಿಂದ ಮನಸ್ಸಾರೆ ಕೆಲಸ ಮಾಡುವುದು ಬಹಳ ಕಷ್ಟವೆನಿಸಿತ್ತು. ಮತ್ತೆ ಐಸೆಕ್ ಹಿಂದೆ ಬಿದ್ದೆ, ಪದೇ ಪದೇ ಮಧುಶ್ರೀ ಅವರನ್ನು ಭೇಟಿಯಾದೆ. ಉಮೇಶ ನನಗೆ ಬಂದು ಮಾತನಾಡೋ ಎಂದು ಒತ್ತಾಯಿಸಿದ. ಉಮೇಶ ನನಗೆ ಗುರುವಂತೆ ಕಾಣತೊಡಗಿದ. 
ನನ್ನದೊಂದು ಕೆಟ್ಟ ಅಭ್ಯಾಸ ನಾನು ಬೇಗ ಯಾರೊಂದಿಗು ಹೊಂದಿಕೊಳ್ಳುವುದಿಲ್ಲ. ನಾನು ಐಸೆಕ್ ಸೇರಿದ ಶುರುವಿನಲ್ಲಿ, ನನಗೆ ಕಂಪ್ಯೂಟರ್ ಇರಲಿಲ್ಲ, ಕಂಪ್ಯೂಟರ್ ಲ್ಯಾಬಿಗೆ ಹೋಗಬೇಕು, ಲೈಬ್ರರಿಗೆ ಹೋಗಬೇಕು, ವಿಷಯ ಇಷ್ಟಪಡುವಂತಿದ್ದರೂ, ವಾತಾವರಣ ಅದರಲ್ಲಿಯೂ ಪಿಎಚ್ ಡಿ ಮಾಡುತ್ತಿದವರ ಮುಂದೆ ನನ್ನ ಕೀಳರಿಮೆ ಎದ್ದು ಕಾಣುತ್ತಿತ್ತು. ಅದೆಷ್ಟರ ಮಟ್ಟಿಗೆ ಎಂದರೇ, ಬಿಟ್ಟು ಹೋಗೋಣವೆನಿಸಿಬಿಟ್ಟಿತು. ಕೇವಲ ಒಂದೇ ತಿಂಗಳಲ್ಲಿ! ನನಗಿನ್ನೂ ನೆನಪಿದೆ, ಅದೊಂದು ದಿನ ಮಧುಶ್ರೀ ಮೇಡಮ್ ನನ್ನನ್ನು ಹುಡುಕಿ, ನಾನು ಮನೆಗೆ ಹೋಗಿರುವುದು ತಿಳಿದು ಗಾಬರಿಯಾಗಿದ್ದಾರೆ. ಅವರಿಗೆ ಕೆವಿ ರಾಜು ಅವರ ಭಯ ಎಲ್ಲಿ ಇವನು ಕೆಲಸ ಮಾಡದೇ ಮರ್ಯಾದೆ ಕಳೆದುಬಿಡುತ್ತಾನೆಂದು. ಮರು ದಿನ ಬಂದಾಗ ನನಗೆ ಒಂದು ಕೆಲಸ ಹಚ್ಚಿದರು, ಅದನ್ನು ಎಷ್ಟು ಅಚ್ಚು ಕಟ್ಟಾಗಿ ಮಾಡಿದೆನೆಂದರೇ ಖುದ್ದು ಕೆವಿರಾಜು ಮೆಚ್ಚುಗೆ ಪಡಿಸಿದರು. ಮಧುಶ್ರಿ ಅವರಿಗೆ ನನ್ನ ಮೇಲೆ ಅಪಾರ ನಂಬಿಕೆ ಮತ್ತು ವಿಶ್ವಾಸ ಬಂತು. ನನ್ನ ಸೋಮಾರಿತನದಿಂದ ಅವರಿಗೆ ಬೇಸರ ತರಿಸಿರುವುದು ಸತ್ಯಾವಾದರು ನನ್ನನ್ನು ತಮ್ಮ ಮಗನಂತೇ, ಬೇಟಾ ಬೇಟಾ ಎಂದು ಪ್ರೊತ್ಸಾಹಿಸಿದರು. ಪಿಎಚ್ ಡಿ ಮಾಡುವುದಕ್ಕೆ ಮೊದಲು ಹುರಿದುಂಬಿದವರು ಅವರೇ.
ಮಧುಶ್ರೀಯವರು ನನಗೆ ಬೇಕಿದ್ದ ಎಲ್ಲಾ ಸ್ವತಂತ್ರ್ಯವನ್ನೂ ನೀಡಿದರು. ಆ ಸಮಯದಲ್ಲಿ ನಾನು ಜೊತೆಯಲ್ಲಿ ಕೆಲಸ ಮಾಡಿದವರೆಲ್ಲರಿಂದಲೂ ಬಹಳಷ್ಟು ಕಲಿತೆ ಅವರಲ್ಲಿ ಪ್ರಮುಖರು, ಲೆನಿನ್, ಸುನಿಲ್ ನಾಟಿಯಾಲ್, ಬಿಬು ಪ್ರಸಾದ್, ನೈನನ್, ಗಾಯತ್ರಿದೇವಿ, ಮಾನಸಿ, ಲತಾ, ಪದ್ಮರವರು. ಇನ್ನೂ ಅನೇಕರಿದ್ದಾರೆ ಅವರೆಲ್ಲರ ಹೆಸರು ಸೇರಿಸುತ್ತಾ ಹೋದರೇ ಇದು ಇಂದಿಗೆ ಮುಗಿಯುದಿಲ್ಲ. ಆ ಸಮಯದಲ್ಲಿಯೇ ನಾನು ಪಿಎಚ್ ಡಿ ಮಾಡುವುದಕ್ಕೆ ನಿರ್ಧರಿಸಿದೆ, ಮೊದಲಿಗೆ ಆಸ್ಟ್ರೇಲಿಯಾದಲ್ಲಿ ಮಾಡುವುದೆಂಬ ಆಸೆಯಿತ್ತು. ಬಹಳಷ್ಟು ಅರ್ಜಿಯನ್ನು ಹಾಕಿದೆ. ಮತ್ತದು ದಿನ ದಿನಕ್ಕೇ ಮುಂದೂಡುತ್ತಲೇ ಬಂತು, ಆ ನಡುವೆ ಕೆಲವರ ಸಲಹೆಯಂತೆ ಇಲ್ಲಿಯೇ ಯಾವುದಾದರೊಂದು ವಿವಿಯಲ್ಲಿ ರಿಜಿಸ್ಟರ್ ಮಾಡಿಸು ನಂತರ ಸುಲಭವಾಗುತ್ತದೆ, ಇಲ್ಲವಾದರೇ ಇಂಗ್ಲೀಷ್ ಪರೀಕ್ಷೆಗಳಾದ, ಟೋಫೆಲ್, ಜಿಆರ್ ಐ, ಬೇಕೆಂದರು. ಅವರ ಸಲಹೆಯಂತೆ, ನಾನು ಮೈಸೂರು ವಿವಿಯನ್ನು ಆಯ್ದುಕೊಂಡೆ. ಅದರ ನಡುವೆ ಐಸೆಕ್ ನಲ್ಲಿಯೂ ಪ್ರಯತ್ನಪಟ್ಟೆ. ಐಸೆಕ್ ನಲ್ಲಿ ಮಾಡಿದರೇ, ಅದು ಡೆವೆಲಪ್ ಮೆಂಟ್ ವಿಷಯದ ಪಿಎಚ್ ಡಿ ಆದ್ದರಿಂದ ನೀನು ಪರಿಸರ ವಿಜ್ನಾನದಲ್ಲಿ ಮಾಡೆಂದರು.
ಆಗ ನಾನು ಬಂದದ್ದು ನಮ್ಮ ಗುರುಗಳಾದ ಶ್ರೀಕಂಠಸ್ವಾಮಿಯವರ ಬಳಿಗೆ. ಹಿಂದಿರುಗಿ ನೋಡಿದರೆ ನನ್ನ ಪೆದ್ದುತನ ಹಾರಾಡುತ್ತಿದೆ. ನಾನು ಪಿಎಚ್ ಡಿಗೆ ಸೇರುವುದಕ್ಕೆ, ಇಲ್ಲ ಸಲ್ಲದ ಬೇಕಿಲ್ಲದ ಎಲ್ಲಾ ಸಂಪರ್ಕಗಳನ್ನು ಉಪಯೋಗಿಸಿ ಅವರಿಂದ ರೆಕ್ಮಂಡೇಶನ್ ಮಾಡಿಸಿದೆ. ಅದು ನಮ್ಮ ತಾಲ್ಲೂಕು ಶಾಸಕ, ಎಂಎಲ್ ಸಿ ಮರಿತಿಬ್ಬೇಗೌಡ, ಶಾಸಕರಾದ ಶಂಕರಲಿಂಗೇಗೌಡರ ತನಕ...ಅಚ್ಚರಿ ಮತ್ತು ನಗು. ನಾನು ಪಿಎಚ್ ಡಿಗೆ ಸೇರಿದ್ದು, ೨೦೦೭ರಲ್ಲಿ. ಮುಂದಿನ ವರ್ಷ ಎಂದರೇ ೨೦೦೮ರ ಅಕ್ಟೋಬರ್ ತಿಂಗಳಲ್ಲಿ ಹೈದರಾಬಾದಿನ ಐರಾಪ್ ಸಂಸ್ಥೆಗೆ ಸೇರಿದೆ. ದಿನೇಶ್ ಕುಮಾರ ಜೊತೆ ಕೆಲಸ ಮಾಡುವಾಗ ಇಲ್ಲಿನ ತನಕ ಇದ್ದ ನನ್ನೆಲ್ಲಾ ಗುರುಗಳು ಬಾಸ್ ಗಳು ಕಳಪೆಯೆನಿಸತೊಡಗಿದರು. ಯಾರೂ ಕಳಪೆಯಿಲ್ಲ, ಅದು ನನ್ನ ಊಹೆ ಮತ್ತು ಭ್ರಮೆಯಷ್ಟೇ! ನಾನು ಶ್ರೀಕಂಠಸ್ವಾಮಿಯವರ ಜೊತೆ ಜಗಳ ಮಾಡಿಕೊಂಡು ನಿಮ್ಮ ಪಿಎಚ್ ಡಿ ಬೇಡವೆಂದೆ. ಪಾಪ ಅವರು ಅಂದು ನನ್ನ ಮೇಲೆ ಕೋಪ ತೀರಿಸಿಕೊಂಡಿದ್ದರೇ ಪಿಎಚ್ ಡಿ ನನ್ನ ಕನಸಾಗುತ್ತಿತ್ತು.
ದಿನೇಶ್ ಜೊತೆ ಕೆಲಸ ಮಾಡುವಾಗ ವಿಷಯದ ಕಡೆಗೆ ಪ್ರಪಂಚವೆಲ್ಲಾ ನೋಡುವ ದಿಕ್ಕನ್ನೇ ಬದಲಾಯಿಸುವ ಶಕ್ತಿ ಅವರ ಅನಾಲಿಸಿಸ್ ಗೆ ಇತ್ತು. ಬಹಳ ಶ್ರಮಜೀವಿ, ಅವರಿಂದ ಕಲಿತಿದ್ದು ಬಹಳವಿದೆ. ಅವರ ಜೊತೆಯಲ್ಲಿದ್ದ, ಸಿವಮೋಹನ, ನಿತಿನ್, ಬಿನು ಕುಮಾರ್, ಶ್ರೀನಿವಾಸ್, ನಿರಂಜನ್, ಮಾಧವಿ, ಶರೀಫ್ ಎಲ್ಲರೂ ಅಪ್ರತಿಮರು.
ನನಗೆ ೨೦೧೦ ರ ಸಮಯಕ್ಕೆ ಪಿಎಚ್ ಡಿಯ ಮೇಲೆ ಮತ್ತೆ ಪ್ರೀತಿ ಬಂತು. ಆದ್ದರಿಂದ, ಐರಾಪ್ ಬಿಡುವ ನಿರ್ಧಾರ ಮಾಡಿದೆ. ಶುರುವಿನಲ್ಲಿ ಶ್ರೀಕಂಠಸ್ವಾಮಿಗಳು ಕೋಪ ತೋರಿದರೂ, ನನ್ನ ಪೇಪರ್ ಗಳು, ಬರವಣಿಗೆಗಳು ಅವರ ಮೆಚ್ಚುಗೆ ಪಡೆದವು. ಅವರ ಬಾಯಿಯಿಂದಲೇ ಬಹಳಷ್ಟು ಬಾರಿ ಹೇಳಿದ್ದಾರೆ ಒಳ್ಳೆ ಕೆಲಸಗಾರ ಆದರೇ ದುರಹಂಕಾರಿಯೆಂದು. ಪಿಎಚ್ ಡಿ ಯಶಸ್ವಿಯಾಗುವುದಕ್ಕೆ, ಹಲವಾರು ಜನರ ಸಹಾಯ ಸಹಾಕಾರವಿದೆ, ಅದರಲ್ಲಿ, ನಂದ, ವಿಜಿ, ಮಾರುತಿ, ರೆಜಿನಾ, ಬೇಲಾ, ದುರ್ಗೇಶ್, ಪವಿತ್ರ ರೆಡ್ದಿ, ಕುಮಾರ್, ವಿಜಯ್, ಲೆನಿನ್, ವೆಂಕಟೇಶ್,  ಉಮೇಶ್, ಮಾನಸಿ, ಸವಿತಾ ಮುಖ್ಯವಾದವರು.

ಅಲ್ಪ ಹಣಕ್ಕೆ, ನಾನು ಆರ್ಘ್ಯಂನಲ್ಲಿ ಕೆಲಸ ಮಾಡಿದೆ. ಅಲ್ಲಿ ನಾಗ ಶ್ರೀನಿವಾಸ್, ಮೋಹನ್, ವಿಜಯ್, ಮನೋಹರ್ ಹೀಗೆ ಹತ್ತು ಹಲವರಿಂದ ಬಹಳಷ್ಟೂ ಕಲಿತೆ.

ಜೀವನಕ್ಕೆ ಮತ್ತೊಂದು ಆಯಾಮ ಕೊಟ್ಟಿದ್ದ್, ಡೆವಲಪ್ ಫೌಂಡೇಶನ್ ಕೆಲಸ. ಅಲ್ಲಿ ಕೆಲಸ ಮಾಡುವಾಗ ಅದೆಷ್ಟು ಬುದ್ದಿ ಜೀವಿಗಳು, ವೈಚಾರಿಗಳೊಡನೆಯ ಸಂಪರ್ಕ ನನ್ನನ್ನು ಮತ್ತೊಂದು ಹಂತಕ್ಕೆ ಕರೆದೊಯ್ಯಿತು. ಅಲ್ಲಿನ ಬಾಸ್ ಎಂಪಿ ಕುಮಾರ ಬಣ್ಣಿಸಲಾಗದ ವ್ಯಕ್ತಿತ್ವ, ಅವರು ಕೋಟ್ಯಾಂತರ ರೂಪಾಯಿಯ ವಹಿವಾಟು ನಡೆಸುವ ಕಂಪನಿಯ ಮುಖ್ಯಸ್ಥರಾಗಿದ್ದು ಅವರ ಸರಳತೆ ಮತ್ತು ಸಾಮಾಜಮುಖಿ ಕೆಲಸದಲ್ಲಿನ ಬದ್ದತೆ ನನ್ನನ್ನು ಆಕರ್ಷಿಸಿತು. ಅದೇ ಸಮಯದಲ್ಲಿ ನನತೆ ನಂಟು ಬೆಳೆದ ಮತ್ತು ನಾನು ಕಲಿತವರ ಹೆಸರನ್ನು ಪ್ರಸ್ತಾಪಿಸುವುದು ಅವಶ್ಯಕ, ವಿದ್ಯಾ, ಚೈತ್ರ, ಅಶ್ವಿನಿ, ನಾಡ್ಕರ್ನಿ, ಎನ್ ಎಸ್ ಎಸ್ ನಾರಾಯಣ, ನಲ್ಲತಂಬಿ, ಶೇಖರ್, ಬಾಲ, ವಿನಯಚಂದ್ರ, ಸಂದೀಪ್, ಚಂದ್ರ ಪ್ರಿಂಟರ್,  ದೇಶಪಾಂಡೆ, ಹೀಗೆಯೇ ಸಾವಿರಾರು ಜನರು ನನ್ನ ಸಂತೋಷಕ್ಕೆ ನೆಮ್ಮದಿಗೆ ದಾರಿ ಮಾಡಿಕೊಟ್ಟಿದ್ದೀರಿ. ನಿಮ್ಮ ಹೆಸರು ಇಲ್ಲಿ ಪ್ರಸ್ತಾಪವಾಗಿಲ್ಲವೆಂದರೇ ನನ್ನ ಹೃದಯದಲ್ಲಿಲ್ಲವೆಂದು ಅರ್ಥೈಸಿಕೊಳ್ಳಬೇಡಿ.

ನಾನು ನನ್ನ ಸಂಸ್ಥೆಯ ಹುಟ್ಟಿನ ಬಗ್ಗೆ ತಿಳಿಸಿಲ್ಲ, ಅದಕ್ಕೆ ಮುಖ್ಯ ಕಾರಣರಾದವರಲ್ಲಿ, ಅಭಿನಂದನ್, ನನ್ನ ತಂದೆ, ನನ್ನ ಭಾವ, ಬಿನು ಕುಮಾರ್, ಶರೀಫ್, ರೆಜಿನಾ, ಪದ್ಮನಾಭ, ಇಕೊ ಅಗ್ರಿ ಸಂಸ್ಥೆ, ಬೆಟ್ಟಪ್ಪ, ತ್ರೀಚೂರಿನ ದೀಷ್ಣ ಸಂಸ್ಥೆ, ಮತ್ತೂ ನನ್ನೆಲ್ಲಾ ಶತ್ರುಗಳು (ಇದ್ದರೇ) ಮತ್ತು ಮಿತ್ರರು. ಈ ಲೇಖನ ಬಹಳ ದಿನಗಳ ನಂತರ ಬರೆದಿರುವುದರಿಂದ ಸ್ವಲ್ಪ ವ್ಯಾಕರಣ ಮತ್ತು ಓಟದ ತಪ್ಪುಗಳಿರಬಹುದೆಂಬುದು ನನ್ನ ಅನಿಸಿಕೆ, ಅವುಗಳನ್ನು ತಿದ್ದುಕೊಂಡು ಓದಿಕೊಳ್ಳೆಬೇಕು. ನನ್ನ ಈ ದಿನದ ಬದುಕಿಗೆ ಸಹಕರಿಸಿರುವ ಎಲ್ಲರಿಗೂ ನಾನು ಚಿರ ಋಣಿ.

ಕನಸು-ನನಸಿನ ಪಯಣದ ಹಾದಿಯಲಿ ಬದ್ಧತೆ, ಜವಬ್ದಾರಿ, ಸೋಲಿನ ಭೀತಿ!!!

  ೨೯.೦೮.೨೦೨೪ ನಾವು ನಮ್ಮ ಕನಸುಗಳನ್ನು, ಆಸೆಗಳನ್ನು, ಬಯಕೆಗಳನ್ನು ಬೇರೆಯವರೊಂದಿಗೆ ಏಕೆ ಹಂಚಿಕೊಳ್ಳಬೇಕು? ಇದರ ಕುರಿತು ಸ್ವಲ್ಪ ಚರ್ಚಿಸೋಣ. ಮುಕ್ತವಾಗಿ. ಪ್ರತಿಯೊ...