08 ಜೂನ್ 2021

ನಾವೇಕೆ ಹೀಗಿದ್ದೀವಿ? ನಾವು ಹೀಗೆ ಇರಬೇಕೆಂದು ನಿರ್ಧರಿಸಿದ್ದು ಯಾರು?




ಸ್ನೇಹಿತರಾದ ಗಿರೀಶ್ ತರಿಕೆರೆಯವರು ನನಗೆ ಕಳುಹಿಸಿದ್ದ, ದೀನಬಂಧು ಸಂಸ್ಥೆಯ ಪ್ರಜ್ಞಾರವರು ಬರೆದಿದ್ದ ಮಕ್ಕಳ ಶ್ಯಶವ ಮತ್ತು ನಾವು ಎಂಬ ಮೂರು ಪುಟಗಳ ಲೇಖನ ನನ್ನನ್ನು ಸ್ವಲ್ಪ ಕಾಡಿದೆ. ಲೇಖಕರು, ಖ್ಯಾತ ಮಕ್ಕಳ ಮನೋಶಾಸ್ತ್ರಜ್ಞ, ಡಾ. ಬ್ರೂಸ್ ಪೆರ್ರಿಯವರ ಪುಸ್ತಕದಲ್ಲಿ ಬರುವ ಎರಡು ಹುಡುಗರ ಕುರಿತು ಮಾತನಾಡಿದ್ದಾರೆ. ಮೆದುಳಿನ ಬೆಳವಣಿಗೆ ಸಾಮಾನ್ಯವಾಗಿ 2 ವರ್ಷದ ಒಳಗೆ ಮುಗಿದಿರುತ್ತದೆ ಎಂಬುದು ಅದರ ವಾದ. ಅಂದರೇ, ಎಳೆ ವಯಸ್ಸಿನಲ್ಲಿ ಮಕ್ಕಳಿಗೆ ನೀಡುವ ಪ್ರೀತಿ, ವಾತ್ಸಲ್ಯ, ಕೊರತೆ, ಸುಖ, ದುಃಖ ಎಲ್ಲವೂ, ಅವರು ಜೀವನ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ. 

ನಾನು ಅವರ ಲೇಖನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾ, ನನ್ನ ಅನಿಸಿಕೆಯನ್ನು ಬರೆಯುತ್ತಿದ್ದೇನೆ.


ಈ ನನ್ನ ಮಾತುಗಳು, ತಮ್ಮ ಅನುಭವಕ್ಕೂ ಬಂದಿರುತ್ತದೆ ಎಂಬುದು ನನ್ನ ದೃಢವಾದ ನಂಬಿಕೆ. ಸಾಧ್ಯವಾದಷ್ಟು ಸರಳವಾಗಿ ಮತ್ತು ಸಂಕ್ಷಿಪ್ತವಾಗಿ ಹೇಳಬಯಸುತ್ತೇನೆ.  


ಮೊದಲನೆಯದಾಗಿ, ನಾವುಗಳೆಲ್ಲರೂ ನಮಗೆ ತಿಳಿಯದೇ ನಮ್ಮನ್ನು ಒಂದು ಪಂಗಡಕ್ಕೆ ಸೇರಿಸಿಕೊಂಡಿರುತ್ತೇವೆ. ನಾನು ಧರ್ಯವಂತ, ನಾನು ಅಂಜುಬುರುಕ, ನಾನು, ದಡ್ಡ, ನಾನು ಬಹಳ ಆತ್ಮ ವಿಶ್ವಾಸಿ, ನಾನು ಕೋಪಿಷ್ಠ, ನಾನು ಶಾಂತ ಸ್ವಭಾವದವನು, ನಾನು ಎಲ್ಲರೊಂದಿಗೂ ಬೆರೆಯುತ್ತೇನೆ, ನಾನು ಯಾರೊಂದಿಗೂ ಬೆರೆಯುವುದಿಲ್ಲ, ಅಥವಾ ಸುಲಭವಾಗಿ ಬೆರೆಯುವುದಿಲ್ಲ, ನಾನು ಶಿಸ್ತಿನ ವ್ಯಕ್ತಿ, ನನಗೆ ಶಿಸ್ತು ಎಂದರೇ ಆಗುವುದಿಲ್ಲ, ನನಗೆ ನೇರ ಹೇಳುವುದಕ್ಕೆ ಬರುವುದಿಲ್ಲ, ನನಗೆ ಯಾರಿಗಾದರೂ ನೋ ಎನ್ನವುದಕ್ಕೆ ಆಗುವುದಿಲ್ಲ, ನಾನು ಎಲ್ಲವನ್ನೂ ನಂಬುತ್ತೇನೆ, ಬೇಗ ಮೋಸ ಹೋಗುತ್ತೇನೆ, ನಾನು ಹೀಗೆ, ನಾನು ಹಾಗೆ, ಏನೇನೋ ಅಥವಾ ಯಾವುದೋ ಒಂದು ವರ್ಗಕ್ಕೆ ನಮ್ಮನ್ನು ಸೇರಿಸಕೊಳ್ಳಲೇಬೇಕೆಂಬ ನಂಬಿಕಯಿದೆ. ಹೆಚ್ಚಿನ ಪಟ್ಟಿಯನ್ನು ತಾವುಗಳು ಬೆಳೆಸುತ್ತಾ ಹೋಗಿ.


ಈ ಮೇಲಿನ ಪಂಕ್ತಿಗೆ ಸೇರಿದ್ದು ಯಾವಾಗ? ಸೇರಿಸಿದ್ದು ಯಾರು?


ಅದರಂತೆಯೇ, ಕೆಲವು ಮಕ್ಕಳ ಬಗ್ಗೆ ಇರುವ ಗ್ರಹಿಕೆಯನ್ನು ನೋಡಿ. ನಮ್ಮ ಮಗು ಎಲ್ಲರ ಜೊತೆಯಲ್ಲಿಯೂ ಹೋಗುತ್ತೆ. ನಮ್ಮ ಮಗು ಯಾರ ಜೊತೆಗೂ ಹೋಗೋದಿಲ್ಲ. ಯಾರೊಂದಿಗೂ ಬೆರೆಯುವುದಿಲ್ಲ. ನಮ್ಮ ಮಗು ಹೀಗೆ, ನಮ್ಮ ಮಗು ಹಾಗೆ. ಈ ರೀತಿಯ ಪಟ್ಟಿಯನ್ನು ಮಾಡುತ್ತಾ ಹೋಗಿ.


ಅಯ್ಯೋ, ನನ್ನ ಹತ್ತಿರಕ್ಕೆ ಯಾವ ಮಕ್ಕಳು ಬರುವುದಿಲ್ಲ, ನಾನು ಮಕ್ಕಳನ್ನು ಮುದ್ದಾಡುವ ಆಸೆ, ಆದರೇ, ನನ್ನ ಕೈಯಿಗೆ ಬಂದ್ರೇ ಸಾಕು ಅಳೋಕೆ ಶುರು ಮಾಡ್ತಾವೆ. ನನ್ನ ಕೈ ಯಲ್ಲಿ ಎಂತಹ ಮಕ್ಕಳನ್ನು ಕೊಟ್ಟರೂ ಎರಡೇ ಕ್ಷಣದಲ್ಲಿ ಸುಧಾರಿಸುತ್ತೇನೆ. ಇದನ್ನು ಆಲೋಚಿಸಿ ನೋಡಿ. 


ಈ ಎಲ್ಲವನ್ನೂ ನಾವುಗಳು ಅಧ್ಯಯನ ಮಾಡಿದ್ದು? 


ನಾನು ಬುದ್ದಿವಂತ ಅಂತಾ ನನ್ನ ತಲೆಗೆ ತುಂಬಿದ್ದು ಯಾರು? ಯಾವಾಗ? ನಾನು ದಡ್ಡ ಅಂತಾ ತೀರ್ಮಾನಿಸಿದ್ದು ಯಾರು? ಯಾವಾಗ ಮತ್ತು ಏಕೆ? ಹಾಗೂ ಹೇಗೆ?


ಜೀವನದ ಯಾವ ಘಟ್ಟದಲ್ಲಿ ಇದೆಲ್ಲವೂ ಮೊಳಕೆ ಒಡೆದಿದ್ದು? ಅದು ಬೆಳೆದಿದ್ದು ಹೇಗೆ? ಹೆಮ್ಮರವಾಗಿದ್ದು ಹೇಗೆ? 


ಇಂದಿಗೂ ನಾವುಗಳೆಲ್ಲರೂ, ಆ ಸಂಕೊಲೆಯಿಂದ ಹೊರಬರಲಾರದೇ ಒದ್ದಾಡುತ್ತಿಲ್ಲವೇ? ಕೋಪಿಷ್ಠ ಅಥವಾ ಮುಂಗೋಪಿ ಎಂಬ ಬಿರುದನ್ನು ಪಡೆದವರು, ಶಾಂತವಾಗಿರಲು ಸಾಧ್ಯವೇ ಇಲ್ಲವೇ? ಅದರಿಂದ ಹೊರಬರಲು ಕಷ್ಠ ಪಡುತ್ತಿಲ್ಲವೇ? ಪ್ರಯತ್ನಿಸುತ್ತಿಲ್ಲವೇ? ಅಶಿಸ್ತಿನ ವ್ಯಕ್ತಿಗೆ ಆ ಜೀವನ ಬೇಸರವೆನಿಸುತ್ತಿಲ್ಲವೇ? ನಾನು ಎಲ್ಲರಂತಿಲ್ಲ, ಎಲ್ಲರಂತಿರಬೇಕು, ಎಂಬ ಬಯಕೆ ಮೂಡುತ್ತಿಲ್ಲವೇ? 


ಇದರ ಕುರಿತು ಒಮ್ಮೆ ಆಲೋಚಿಸಿ ನೋಡಿ. ಈಗ ಇರುವ ನೀವುಗಳು, ಈ ರೀತಿಯ ವ್ಯಕ್ತಿಯಾಗಿದ್ದು ಹೇಗೆಂಬುದನ್ನು. 


ಒಂದು ಸಾಲಿನಲ್ಲಿ ಹೇಳಿ ಮುಗಿಸುತ್ತೇನೆ, ಅದರ ಕುರಿತು ವಿವರವಾಗಿ ಮುಂದೊಮ್ಮೆ ಬರೆಯುತ್ತೇನೆ. ಈ ಮೇಲಿನ ಸಾಲುಗಳಿಗೆ ತಮಗೆ ಒಪ್ಪಿಗೆ ಇದ್ದರೆ ಮಾತ್ರ. 


ನಮ್ಮ ಬಾಲ್ಯದಲ್ಲಿ ಯಾರೋ ಮೂರು ಜನರು ನಮ್ಮನ್ನು ದಡ್ಡರೂ ಎಂದದ್ದು ಇದೆ. ಅದನ್ನೆ ನಂಬಿ ನಾವು ಹಾಗೆಯೇ ಬೆಳೆದಿದ್ದೇವೆ, ಬೆಳೆಸುತ್ತಾ ಸಾಗಿದ್ದೇವೆ. ಬಾಲ್ಯದಲ್ಲಿ ನಡೆದ ಯಾವುದೋ ಘಟನೆಗಳು, ಇಂದಿಗೂ ನಮಗೆ ಅರಿವಿಲ್ಲದೇ ನಮ್ಮನ್ನು ಸುತ್ತುವರೆದಿವೆ. 


ಇದರ ಕುರಿತು ಅಧ್ಯಯನ ನಡೆಸಿದ ಪ್ರಮುಖರಲ್ಲಿ, "werner Erhard" ಒಬ್ಬರು. ಒಮ್ಮೆ ಅವರನ್ನು ಓದಿಕೊಳ್ಳವ ಪ್ರುಯತ್ನ ಮಾಡಿ.



ಡಾ. ಹರೀಶ್ ಬಾನುಗೊಂದಿ


ಶ್ರೀ ಮುತ್ತಪ್ಪ ದೇವರ ಉತ್ಸವ: ದೈವ, ಆಚರಣೆ, ಭಕ್ತಿ ಮತ್ತು ಸಂಘಟನೆ!!!

  ಈ ಲೇಖನವನ್ನು ಕಳೆದ ವರ್ಷವೇ ಬರೆಯಬೇಕಿತ್ತು. ಕಾರಣಾಂತರಗಳಿಂದ ಬರೆದಿರಲಿಲ್ಲ ಅಥವಾ ಮತ್ತೊಮ್ಮೆ ವಿಶ್ಲೇಷಿಸಿ ಬರೆಯೋಣ ಎಂಬುದು ಇರಬಹುದು. ಮಾರ್ಚ್‌ ತಿಂಗಳ ಮೂವತ್ತು ಮತ್...