ಅನ್ಯವಾರ್ತೆ: ಬಿಡುವ ಹಾದಿಯಲಿ
ಹರೀಶ್ ಬಾನುಗೊಂದಿ
ಈ ಲೇಖನವನ್ನು ಬರೆಯಬೇಕೆಂದು ಬಹಳ ದಿನಗಳಿಂದ ಯತ್ನಿಸುತ್ತಿದ್ದೆ.
ಬರೆಯುವ ಪ್ರಯತ್ನ ಮಾಡಿರಲಿಲ್ಲ. ಇದಕ್ಕೆ ಎರಡು ಕಾರಣಗಳಿವೆ, ಮೊದಲನೆಯದು ಒಂದ ಸಣ್ಣ ಕಥೆ, ಗಾಂಧೀಜಿಯವರನ್ನು
ಒಬ್ಬರು ತಾಯಿ ತನ್ನ ಮಗುವಿನೊಂದಿಗೆ ಬಂದು ಭೇಟಿಯಾಗುತ್ತಾರೆ. ಗಾಂಧೀಜಿ, ನನ್ನ ಮಗ ಅತಿಯಾಗಿ ಸಕ್ಕರೆ
ತಿನ್ನುತ್ತಾನೆ, ಇವನಿಗೆ ಬುದ್ಧಿ ಹೇಳಿ ಎಂದು ಕೇಳುತ್ತಾರೆ. ಆಗ, ಗಾಂಧೀಜಿ, ಒಂದು ವಾರದ ನಂತರ ಬನ್ನಿ
ಎಂದು ಹೇಳಿ ಕಳುಹಿಸುತ್ತಾರೆ. ಒಂದು ವಾರದ ನಂತರ ಆ ತಾಯಿ ಬಂದು ಕೇಳುವಾಗ ಮಗುವಿಗೆ ಸಕ್ಕರೆ ಅತಿಯಾಗಿ
ತಿನ್ನಬಾರದೆಂದು ತಿಳುವಳಿಕೆ ಹೇಳಿ ಕಳುಹಿಸುತ್ತಾರೆ. ಇದನ್ನು ಕಳೆದ ವಾರವೇ ಹೇಳಬಹುದಿತ್ತಲ್ಲವೆ ಎಂದು
ಆ ತಾಯಿ ಕೇಳಿದಾಗ, ಗಾಂಧೀಜಿ “ನನಗೂ ಸಕ್ಕರೆ ತಿನ್ನುವ ಚಟವಿತ್ತು, ನಾನೇ ತಿನ್ನುವಾಗ ಆ ಮಗುವಿಗೆ
ಏನು ಹೇಳಲಿ ಎನ್ನುತ್ತಾರೆ”.
ಈಗ ಮುಖ್ಯ ವಿಷಯಕ್ಕೆ ಬರೋಣ, ಈ ಅನ್ಯವಾರ್ತೆ ಎನ್ನುವ
ಶಬ್ಧ ಬಹಳ ದೊಡ್ಡದು. ಇದನ್ನು ಕುರಿತು ನನಗೆ ಅರಿವನ್ನು ಮೂಡಿಸಿದವರಿಗೆ ನಾನು ಎಂದೆಂದಿಗೂ ಋಣಿ. ಅವರ
ಹೆಸರು, ಇಲ್ಲಿ ಬೇಡ, ಇದು ಅವರಿಗು ಹಿಡಿಸುವುದಿಲ್ಲ. ಅನ್ಯವಾರ್ತೆ ಎಂದರೇನು? ನಮಗೆ ಸಂಬಂಧವಿಲ್ಲದ
ವಿಷಯ ಅಥವಾ ವ್ಯಕ್ತಿಗಳು. ನಾವು ಅನೇಕ ಬಾರಿ, ಚಿಂತಿಸುವುದು ಮತ್ತು ತೃಪ್ತಿಪಡಿಸಲು ಒದ್ದಾಡುವುದು,
ನಮ್ಮ ಆತ್ಮವನ್ನಲ್ಲ, ನಮ್ಮನ್ನು ನೋಡುವ ಕಣ್ಣುಗಳನ್ನು ಮತ್ತು ಕಿವಿಗಳನ್ನು. ಇದು ನಾನು ಕಳೆದ ಮೂವತ್ತೈದು
ವರ್ಷಗಳಿಂದ ಮಾಡುತ್ತ ಬಂದು ಈಗ ಅದನ್ನು ಕೈಚೆಲ್ಲುತ್ತಿದ್ದೇನೆ.
ನಮ್ಮನ್ನು ಕಂಡಾಗ ಅನೇಕರು ನೂರಾರು ರೀತಿಯಲ್ಲಿ ಅವರ
ಅಭಿಪ್ರಾಯ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾರೆ. ಅದೆಲ್ಲವೂ ಅವರ ಮೂಗಿನ ನೇರಕ್ಕೆ ಸರಿ. ನಮಗೆ ಅದರಿಂದ
ಕಿರಿಕಿರಿಯಾಗುತ್ತದೆ, ಕಿರಿಕಿರಯಾಗಬೇಕೆಂದು ಏನೂ ಇಲ್ಲ, ನಾವೇ ತುರಿಕೆಯನ್ನುಂಟು ಮಾಡಿಕೊಳ್ಳುತ್ತೇವೆ.
ಎಲ್ಲದ್ದಕ್ಕೂ ಮೂಗು ತೂರಿಸುವ ಬುದ್ಧಿ ಮನುಷ್ಯನಿಗೆ ಸಹಜ ಪ್ರಕ್ರಿಯೆಯಾಗಿದೆ. ನಾನು ಈ ಸೋಷಿಯಲ್
ಮೀಡಿಯಾ ಬಂದಾಗ ಪ್ರಪಂಚದ ಆಗೂ ಹೋಗುಗಳಿಗೆಲ್ಲಾ ಪ್ರತಿಕ್ರಿಯಿಸುತ್ತಿದ್ದೆ. ಅಮೇರಿಕಾ, ಆಫ್ರಿಕಾ,
ಯೂರೋಪ್ ಎಲ್ಲಿ ಏನು ನಡೆದರೂ ನನ್ನದೊಂದು ಕಾಮೆಂಟ್ ಇರಬೇಕು, ನನ್ನದೊಂದು ರಿಯಾಕ್ಷನ್ ಇರಬೇಕು.
ನನ್ನ ಮಾತು ಅಲ್ಲಿಗೆ ಬೇಕೇ ಬೇಡವೇ? ಎನ್ನುವುದನ್ನು ಕೂಡ ಆಲೋಚಿಸಿದೆ.
ನಾನು ಓಟ್ ಹಾಕಬೇಕು, ಹಾಕಿದೆ ಬಂದೆ. ಯಾರು ಯಾರಿಗೆ
ಯಾವ ಖಾತೆ ಕೊಡಬೇಕೆಂದು ನಾನು ಇಲ್ಲಿ ತಲೆಕೆಡಿಸಿಕೊಳ್ಳುವುದು. ಅದು ಹಾಗೆ ಆಗಬೇಕು, ಇದು ಹೀಗಾಗಬೇಕು.
ಪ್ರಪಂಚದ ಸಂಪೂರ್ಣ ಜವಬ್ದಾರಿ ನನ್ನಯ ಮೇಲೆಯೆ ಇದೆ ಎನ್ನುವಂತೆ ವರ್ತಿಸುತ್ತಿದ್ದೆ. ಇದರಿಂದ, ಉಪಯೋಗವಾಗಿದ್ದು
ಒಂದು ಮಾತ್ರ, ಅದು ನನ್ನ ಬಿಪಿ ಹೆಚ್ಚಾಗಿದ್ದು. ಬಸ್ ಸರಿಯಾದ ಸಮಯಕ್ಕೆ ಬಂದಿಲ್ಲ, ಹೋರಾಟ ಪ್ರತಿಭಟನೆ,
ಊರಿನಲ್ಲಿ ಪಟಾಕಿ ಹೊಡೆಯುತ್ತಾರೆ ಧಿಕ್ಕಾರ,, ಇನ್ಯಾರೋ ಡಿ.ಜೆ. ಹಾಕಿ ಕುಣಿತ ಬೈಯ್ಯುವುದು. ದೂರುವುದು.
ನನ್ನಯ ಸ್ನೇಹಿತರು ಲಂಚ ತೆಗೆದುಕೊಳ್ಳುತ್ತಾರೆ ಅದರ ಮೇಲೆ ಕೋಪ, ಅನವಶ್ಯಕವಾಗಿ ಹಬ್ಬ ಎಂದು ಖರ್ಚು
ಮಾಡುತ್ತಾರೆ ಬೇಸರ. ಇದೆಲ್ಲಾ ಬೇಕಾ? ಎನ್ನುವುದು.
ನನ್ನಯ ಬಗ್ಗೆ ಕಾಲ್ನಡಿಗೆಯಲ್ಲಿ ಹೋಗ್ತೀನಿ ಎಂದರೆ,
ಅವರು ಅಣಕಿಸುವುದು. ಅದಕ್ಕೂ ಕೋಪ, ಅಯ್ಯೋ ಇವರಿಗೆ ಜಾಗತಿಕ ತಾಪಮಾನದ ಬಗ್ಗೆ ಗೊತ್ತಿಲ್ಲ ಅಂತ ಮುನಿಸಿಕೊಳ್ಳುವುದು.
ದೇವಸ್ಥಾನದಲ್ಲಿ ಅರ್ಚನೆ ಚೀಟಿ ಕೊಂಡವರಿಗೆ ಒಂದು ನ್ಯಾಯ ಮತ್ತೊಬ್ಬರಿಗೆ ಮತ್ತೊಂದು ನ್ಯಾಯ ಅದಕ್ಕೂ
ಕೋಪ, ಬೇಸರ. ಬಸ್ಸಿನಲ್ಲಿ ಹಿರಿಯರಿಗೆ ಕಿರಿಯರು ಸೀಟು ಬಿಟ್ಟು ಕೊಡುವುದಿಲ್ಲ ಅಲ್ಲಿಗೂ ಕೋಪಾ.
ನನ್ನ ಹೆಂಡತಿ, ನನ್ನ ಮಗಳು, ನಮ್ಮ ಅಪ್ಪ, ನಮ್ಮ ಅಮ್ಮ
ನನ್ನ ಬಗ್ಗೆ ಹಾಗೆ ಹೇಳಿದರು ಹೀಗೆ ಹೇಳಿದರು ಎಲ್ಲವುದಕ್ಕೂ ಕೋಪ ಸಿಟ್ಟು ಸೇಡು. ನನ್ನ ಆತ್ಮೀಯ ಸ್ನೇಹಿತ
ದುಡ್ಡು ತೆಗೆದುಕೊಂಡು ಕೊಡಲಿಲ್ಲ, ಅದಕ್ಕೂ ಕೋಪ. ನಾನು ಅವನ ಸಮಯಕ್ಕೆ ನಿಂತಿದ್ದೆ, ನನ್ನ ಸಮಯಕ್ಕೆ
ಅವನು ನಿಂತಿಲ್ಲ ಬೇಸರ.
ಮುಗಿಯುವ ಮುನ್ನ:
ನಮ್ಮಯ ಬಗ್ಗೆ ನಕರಾತ್ಮಕವಾಗಿ ಮಾತನಾಡುವವರ ಬಗ್ಗೆ
ಎಂದಿಗೂ ಕನಿಕರವಿರಲಿ. ಪಾಪ, ಅವರು ನಮ್ಮಯ ಬಗ್ಗೆ ಆಲೋಚಿಸಲು ಅವರ ಅಮೂಲ್ಯ ಸಮಯವನ್ನು ನಮಗಾಗಿ ನೀಡುತ್ತಿದ್ದಾರೆ.
ನಮ್ಮಯ ಬಗ್ಗೆ ಅವರಿಗೆ ಏನೇನೂ ತಿಳಿದಿಲ್ಲ, ಅದು ಅವರ ಅಲ್ಪ ಜ್ಞಾನ. ಮೂರನೆಯದಾಗಿ ಇದರಿಂದ ಅವರ ಆತ್ಮಕ್ಕೆ
ಶಾಂತಿ ಸಿಗುವುದಾದರೆ ಸಿಗಲಿ.
ಕೊನೆಯ ಹನಿ: ಅವರು
ಇರುವುದು ಹಾಗೇಯೆ. ಅದು ಅವರ ಬದುಕು ಮತ್ತು ಸ್ವಾತಂತ್ರ್ಯ. ಅದನ್ನು ಬದಲಾಯಿಸಲು ನಾನ್ಯಾರು. ಅವರ
ಬಗ್ಗೆ ಯೋಚಿಸುತ್ತ ನಮ್ಮ ಸುಖ ನೆಮ್ಮದಿಯನ್ನು ಕಳೆದುಕೊಳ್ಳುತ್ತಿಲ್ಲವೆ? ನಾನು ಇತ್ತೀಚೆಗೆ ಯಾವುದಕ್ಕೂ
ಪ್ರತಿಕ್ರಿಯಿಸುವುದಿಲ್ಲ. ಬೇರೊಬ್ಬರ ಕುರಿತು ಮಾತನಾಡುವಾಗ ನನ್ನಯ ಸಮಯ ವ್ಯರ್ಥ ಅಲ್ಲವೇ? ಲೋಕ ಇರೋದೇ
ಹಾಗೆ ಅವರನ್ನ ತಿದ್ದೋಕೆ ಅಂತಾ ನಮ್ಮನ್ನ ದೇವರು ಕಳುಹಿಸಿಲ್ಲ. ನಮ್ದು ಮಾತ್ರ ನಾವು ನೋಡಿಕೊಳ್ಳಬೇಕು.
ಬೇರೆಯವರು ನಮ್ಮ ಬಗ್ಗೆ ಸಾವಿರ ಮಾತಾಡಲಿ, ನಮ್ಮ ಬಗ್ಗೆ ನೇರವಾಗಿ ದಂಡು ಕಟ್ಟಿಕೊಂಡು ಬಂದಾಗ ನೋಡೋಣ.
ಎಲ್ಲಿಯೋ ಕುಳಿತು ಮಾತನಾಡುವವರ ಬಗ್ಗೆ ನಮ್ಮಯ ಆಯಸ್ಸು ಕಡಿಮೆ ಮಾಡಿಕೊಳ್ಳಬೇಕಾ?
ನಮ್ಮ ದೇಹ ದೇಗುಲ, ಒಳಗೊಬ್ಬ ಪರಮಾತ್ಮನಿದ್ದಾನೆ.
ಅವನನ್ನು ತೃಪ್ತಿಪಡಿಸುವುದು ನಮ್ಮ ಕರ್ತವ್ಯ. ಅದನ್ನು ಮಾತ್ರ ಮಾಡಿದರೆ ಸಾಕು. ಯಾರು ಯಾರೊಂದಿಗೂ
ಹುಟ್ಟಿಲ್ಲ, ಯಾರೂ ಯಾರೊಂದಿಗೂ ಸಾಯುವುದಿಲ್ಲ. ಸಾಧ್ಯವಾದರೆ ಜೊತೆಗಿರೋಣ, ಇಲ್ಲವಾದಲ್ಲಿ ಸುಮ್ಮನೆ
ಇರೋಣ.
ಯಾರೋ ನಮ್ಮಯ ಬಗ್ಗೆ ನಾಲ್ಕು ಕೆಟ್ಟ ಮಾತುಗಳು ಹೇಳಿದಾಕ್ಷಣ
ನಮ್ಮಯ ತೂಕ ಕಡಿಮೆಯಾಗುವುದಿಲ್ಲ. ನಮ್ಮಯ ಆದರ್ಶಗಳಿಂದ ಮತ್ತೊಬ್ಬನ ಬದುಕಿನ ಶೈಲಿಯನ್ನು ಬದಲಾಯಿಸಲು
ಸಾಧ್ಯವಿಲ್ಲ. ತಲೆಗೆ ಇನ್ನೊಂದಿಷ್ಟು ಅರಿವನ್ನು ತುಂಬಿಸಿ, ಹೃದಯಕ್ಕೆ ಮತ್ತೊಂದಿಷ್ಟು ಮುದ ನೀಡುವ
ಕೆಲಸ ಮಾಡಿದರೆ ಸಾಕು.
ಆ ನಡುವೆಯಲ್ಲಿ ಹೊಟ್ಟೆಗೆ ತೃಪ್ತಿಯಾಗುವಷ್ಟು ಕಣ್ಣಿಗೆ
ತಂಪಾಗುವಷ್ಟು ನಿದ್ದೆ ದೊರಕಲಿ.