ನಾವೆಲ್ಲರೂ ಗಮನಿಸುತ್ತಿರುವಂತೆ ನಮ್ಮ ಸಮಾಜದಲ್ಲಿ ಆಗುತ್ತಿರುವ ಅತಿವೇಗದ ಬದಲಾವಣೆ ದಿಗ್ಭ್ರಮೆ ಮೂಡಿಸುತ್ತಿದೆ. ಮಂದಗತಿಯ ಬೆಳವಣಿಗೆಯನ್ನು ಕಂಡು ಬೆಳೆದ ನಮ್ಮ ತಲೆಮಾರಿನವರಿಗಂತೂ ಈ ಬದಲಾವಣೆಗೆ ಹೊಂದುಕೊಳ್ಳಲು ಆಗದೆ, ತಿರಸ್ಕರಿಸಲೂ ಆಗದೆ ಒದ್ದಾಡುವಂತಾಗಿದೆ. ಹೇಳುತ್ತಾ ಹೋದರೆ ಪುಟಗಳಗಟ್ಟಲೇ ಬರೆಯಬಹುದಾದರೂ ಸಂಕ್ಷಿಪ್ತವಾಗಿ ಎಲ್ಲವನ್ನು ಒಂದೇ ಲೇಖನದಲ್ಲಿ ಹೇಳಿ ಮುಗಿಸುತ್ತೇನೆ. ಪ್ರತಿಯೊಂದನ್ನು ನಾಲ್ಕಾರು ಸಾಲುಗಲಲ್ಲಿ. ನಾನು ಕಂಡ ಹಬ್ಬ ಹರಿದಿನಗಳು, ಜಾತ್ರೆಗಳು ಉತ್ಸವಗಳನ್ನು ಕುರಿತು.
ಮೊದಲಿಗೆ, ಕರ್ನಾಟಕ ಸರ್ಕಾರವು ಕಳೆದ ಕೆಲವು
ವರ್ಷಗಳಿಂದ ಜಿಲ್ಲೋತ್ಸವವೆನ್ನುವ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಇದು ನನ್ನ ಪ್ರಕಾರದಲ್ಲಿ,
ದುಂದು ವೆಚ್ಚ ಮಾಡಲು ಒಂದು ಸುಗಮ ರಹದಾರಿಯಷ್ಟೆ. ಏಕೆಂದರೆ, ಈ ಜಿಲ್ಲೋತ್ಸವ ಕಾರ್ಯಕ್ರಮದಲ್ಲಿ ಮಾಡಿದ್ದೇನು?
ಸಿನೆಮಾ ತಾರೆಯರು ಮತ್ತು ಕಿರುತೆರೆ ನಟ ನಟಿಯರನ್ನು ಕರೆಸಿ, ಅವರಿಂದ ಒಂದಿಷ್ಟು ಡ್ಯಾನ್ಸ್, ಡೈಲಾಗ್
ಹೇಳಿಸಿ ಅವರೊಂದಿಗೆ ಜಿಲ್ಲಾ ರಾಜಕಾರಣಿಗಳು ಮತ್ತು ಅವರ ಹೆಂಡತಿ ಮಕ್ಕಳು ಸ್ಟೆಪ್ ಹಾಕಿದ್ದು ಅಷ್ಟೆ.
ಇದಕ್ಕಾಗಿ ಕೋಟ್ಯಾಂತರ ರೂಪಾಯಿಗಳನ್ನು ಸುರಿದಿದ್ದಾಯಿತು. ಜಿಲ್ಲೆಯ ಯಾವುದೇ ಪ್ರಮುಖ ಸ್ಥಳಗಳನ್ನು
ಅಭಿವೃದ್ದಿ ಮಾಡಿಸಲಾಯಿತೆ? ಒಂದಿಷ್ಟು ನಟ ನಟಿಯರಿಗೆ ಸಿನೆಮಾರಂಗದವರಿಗೆ ಲಾಭವಾಯಿತು.
ಎರಡನೆಯದಾಗಿ, ಯಾವುದೇ ಕಾರ್ಯಕ್ರಮಗಳಾದರೂ ಲೈಟಿಂಗ್ಸ್.
ಬೇಕಿದ್ದೋ ಬೇಕಿಲ್ಲದೆಯೋ ಯಾರೋ ಒಬ್ಬ ಗುತ್ತಿಗೆದಾರನಿಗೆ ಲಾಭ ಮಾಡಿಕೊಡುವುದಕ್ಕಾಗಿ ಎಲ್ಲಾ ಕಾರ್ಯಕ್ರಮಗಳಿಗೂ
ಇಡೀ ಊರಿಗೆ, ನಗರಕ್ಕೆ ಲೈಟಿಂಗ್ಸ್ ಹಾಕಿಸುವುದು. ಇದರಿಂದ ಯಾರಿಗೆ ಏನು ಲಾಭ? ವಿದ್ಯುತ್ ಕೊರೆತೆಯಿಂದ
ಬಳಲುತ್ತಿರುವಾಗ ದುಂದುವೆಚ್ಚ ಬೇಕೆ?
ಮೂರನೆಯದಾಗಿ, ಮೈಸೂರು ಚಾಮುಂಡೇಶ್ವರಿ ಆಷಾಢ
ಮಾಸದ ಶುಕ್ರವಾರದ ದರ್ಶನ. ನಾನು ಮೈಸೂರಿನಲ್ಲಿಯೇ ಓದಿದ್ದರಿಂದ ಇಪ್ಪತ್ತೈದು ವರ್ಷದ ಹಿಂದಿನ ಚಾಮುಂಡಿ
ಬೆಟ್ಟವನ್ನು ನೆನೆದರೆ ಅಚ್ಚರಿಯಾಗಬಹುದು. ಪ್ರತಿ ಭಾನುವಾರ ರಾಮಸ್ವಾಮಿ ಸರ್ಕಲ್ ನಲ್ಲಿದ್ದ ಮಹರಾಜ
ಹಾಸ್ಟೆಲ್ಲಿನಿಂದ ನಾನು ಮತ್ತು ಸ್ನೇಹಿತ ಕಾರಿಯಪ್ಪ ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲುಗಳ ಮೂಲಕ ಹತ್ತಿ
ಇಳಿಯುತ್ತಿದ್ದೇವು. ಆ ದಿನಗಳಲ್ಲಿ ಮುಂಜಾನೆ ಹೆಚ್ಚೆಂದರೆ ನೂರು ಜನರು ಇರುತ್ತಿದ್ದರು. ಇತರೆ ದಿನಗಳಲ್ಲಿ
ಹತ್ತಿಪ್ಪತ್ತು ಜನರು ಸಿಕ್ಕರೆ ಅದೇ ಹೆಚ್ಚಿನದು. ಬಹುತೇಕರು ಮುಂಜಾನೆಯ ವಾಕಿಂಗ್ ಅಥವಾ ರನ್ನಿಂಗ್
ಆಗಿಯೇ ಬರುತ್ತಿದ್ದರು. ನಾವು ಬೆಟ್ಟ ಹತ್ತಿ ದೇವಸ್ಥಾನದ ಒಳಗೆ ಹೋದರೆ ಖಾಲಿ ಖಾಲಿಯಾಗಿರುತ್ತಿತ್ತು.
ಯಾವ ಭಕ್ತರು ಅಷ್ಟು ಮುಂಜಾನೆಗೆ ಬರುತ್ತಿರಲಿಲ್ಲ. ಆಷಾಢದ ಶುಕ್ರವಾರವೆಂಬ ವಿಶೇಷವೇನು ಅಷ್ಟೊಂದು
ಸುದ್ದಿಯಲ್ಲಿರಲಿಲ್ಲ. ಕೆ.ಜಿ.ಕೊಪ್ಪಲಿನವರು ಮಾತ್ರ ಚಾಮುಂಡಿ ಹಬ್ಬವನ್ನು ಊರು ಹಬ್ಬದಂತೆ ಮಾಡುತ್ತಿದ್ದರು,
ಕೆಲವರು ಸ್ನೇಹಿತರು ಆ ಹಬ್ಬಕ್ಕೆ ನಮ್ಮನ್ನು ಕರೆಯುತ್ತಿದ್ದರು ಅಷ್ಟೆ.
ನಾಲ್ಕೆನೆಯದಾಗಿ, ಮೈಸೂರು ದಸರಾ. ಒಂದು ಸಾಂಸ್ಕೃತಿಕ
ಹಬ್ಬವೆಂಬುದನ್ನು ಅದೆಷ್ಟು ಹೆಸರು ಕೆಡಿಸಬಹುದೋ ಅಷ್ಟನ್ನೂ ಕೆಡಿಸಿದ್ದಾರೆ. ನವರಾತ್ರಿಯಲ್ಲಿ ಹೆಚ್ಚೆಂದರೆ
ಸಯ್ಯಾಜಿರಾವ್ ರಸ್ತೆಯಿಂದ ಬನ್ನಿಮಂಟಪದ ತನಕ ಲೈಟಿಂಗ್ ಇರುತ್ತಿತ್ತು. ಹೆಚ್ಚಿನ ಸಾಂಸ್ಕೃತಿಕ ಕಾರ್ಯಕ್ರಮಗಳು
ಅರಮನೆ ಆವರಣ ಮತ್ತು ಜಗನ್ಮೋಹನ ಅರಮನೆ, ಕಲಾಮಂದಿರದಲ್ಲಿ ನಡೆಯುತ್ತಿದ್ದವು. ವಿವಿಧ ಕಾಲೇಜುಗಳ, ಶಾಲೆಗಳು
ಮತ್ತು ಕೆ.ಎಸ್.ಆರ್.ಪಿ. ರವರ ಕಡೆಯಿಂದ ನಡೆಯುತ್ತಿದ್ದವು. ಇಡೀ ನವರಾತ್ರಿ ಸಮಯದಲ್ಲಿ ಮೈಸೂರು ಸ್ಥಳೀಯರೇ
ಎದ್ದು ಕಾಣುತ್ತಿದ್ದರು. ದಸರಾ ದಿನದಂದು ಮಾತ್ರ ಹೊರಗಿನವರು ಬರುತ್ತಿದ್ದರು ಎನ್ನುಬಹುದು. ಎಂದಿನಂತೆ
ಎರಡು ಅಥವಾ ಮೂರು ತಿಂಗಳು ವಸ್ತು ಪ್ರದರ್ಶನ ನಡೆಯುತ್ತಿತ್ತು. ಈಗ ಜನಸಾಗರವಾಗಿದೆ. ಅದರಲ್ಲಿಯೂ,
ಸಿನೆಮಾ ಹಾಡಿಗೆ ಕುಣಿದು ಕುಪ್ಪಲಿಸುವುದಕ್ಕಾಗಿ ಯುವದಸರಾವೆಂಬುದನ್ನು ಮಾಡಿ, ಮನರಂಜನೆಯೆಂದರೆ ಹಾಡಿಗೆ
ಸ್ಟೆಪ್ ಹಾಕುವುದು, ಅದನ್ನು ರೀಲ್ಸ್ ಮಾಡಿ ಲೈಕ್ ಪಡೆಯುವುದೆ ಆಗಿದೆ. ಇಲ್ಲಿಯೂ ಅಷ್ಟೆ ಸಿನೆಮಾ
ರಂಗದವರಿಗೆ ದುಡ್ಡು ಮಾಡಿಕೊಡಲು ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಾಗಿದೆ. ಸ್ಥಳೀಯ ನಾಟಕಗಳು,
ಗಾಯನ, ಜಾನಪದವೆಲ್ಲವನ್ನೂ ಸಂಪೂರ್ಣ ಕಡೆಗಣಿಸಿ ಲೈಟಿಂಗ್ಸ್ ಶೋ, ಲೇಸರ್ ಶೋ, ಡ್ರೋನ್ ಶೋ, ಇವುಗಳಿಂದ
ಹೊರಹೊಮ್ಮುವ ಕಿರಣಗಳಿಂದ ಮನುಷ್ಯನ ಆರೋಗ್ಯದ ಮೇಲುಂಟಾಗುವ ಪರಿಣಾಮಗಳ ಅರಿವಿಲ್ಲದಂತಾಗಿದೆ.
ಐದನೆಯದಾಗಿ, ವಿವಿಧ ಕ್ಷೇತ್ರಗಳು. ಸ್ಥಳೀಯವಾಗಿ
ಪ್ರತಿಯೊಂದು ಊರಿನಲ್ಲಿಯೂ ಅದರದ್ದೇ ಆದ ವಿಶೇಷ ದೇವಸ್ಥಾನಗಳು, ವಿಶೇಷ ಪೂಜೆಗಳಿರುತ್ತವೆ. ಅವುಗಳನ್ನು
ಅಲ್ಲಿನ ಸ್ಥಳೀಯರು ನಿರ್ವಹಿಸುತ್ತ ಬಂದಿರುತ್ತಾರೆ. ಅಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಆಚರಣೆಗಳು,
ಸಿದ್ಧತೆಗಳು ನಡೆಯುತ್ತಿರುತ್ತವೆ. ಅಲ್ಲಿ ಹೆಚ್ಚಿನದ್ದನ್ನು ನಿರೀಕ್ಷೆ ಮಾಡುವುದಕ್ಕಾಗುವುದಿಲ್ಲ.
ಕೆಲವು ಕ್ಷೇತ್ರಗಳು ಲಕ್ಷಾಂತರ ಸಂಖ್ಯೆಯಲ್ಲಿ ಬಂದರೂ ನಿರ್ವಹಣೆ ಮಾಡುವಷ್ಟು ಇರುತ್ತವೆ. ಉದಾಹರಣೆಗೆ:
ಧರ್ಮಸ್ಥಳ, ತಿರುಪತಿ, ಪ್ರಮುಖವು. ಆದರೇ, ಕಳೆದ ಕೆಲವು ವರ್ಷಗಳಿಂದ ಅಂಕೆ ಮೀರಿ ಜನರು ಭೇಟಿ ನೀಡಿ
ಅಲ್ಲಿನ ಪರಿಸರದ ಜೊತೆಗೆ, ಸ್ಥಳೀಯರಿಗೆ ಕಿರಿಕಿರಿ ಉಂಟು ಮಾಡುತ್ತಿರುವುದನ್ನು ನಾವೆಲ್ಲರೂ ಗಮನಿಸಿದ್ದೇವೆ.
ಕೇರಳದ ಕೊಟ್ಟಿಯೂರು, ಮಡಾಯಿಕಾವು, ಶಬರಿಮಲೈ, ಪ್ರಯಾಗ್ರಾಜ್ ಕುಂಭಮೇಳ, ಮಲೈ ಮಹದೇಶ್ವರ ಬೆಟ್ಟ,
ಆಷಾಢದಲ್ಲಿ ಚಾಮುಂಡೇಶ್ವರಿ ಬೆಟ್ಟ, ಚಿಕ್ಕಮಗಳೂರು ದೇವಿರಮ್ಮನ ಬೆಟ್ಟ ಹೀಗೆ ಪಟ್ಟಿ ಬೆಳೆಯುತ್ತಾ
ಹೋಗುತ್ತದೆ. ಒಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಿ, ಪ್ರತಿಯೊಂದು ಪರಿಸರಕ್ಕೆ ತನ್ನದೆಯಾದ ಸಾಮರ್ಥ್ಯವಿರುತ್ತದೆ.
ಕ್ಯಾರಿಯಿಂಗ್ ಕೆಪಾಸಿಟಿ ಎನ್ನುತ್ತೇವೆ. ಅದನ್ನು ಮೀರಿ ಅದಕ್ಕೆ ಭಾರ ಹಾಕಿದರೆ ಪ್ರಕೃತಿ ವಿಕೋಪವಾಗುತ್ತದೆ.
ಆರನೆಯದಾಗಿ, ಟೂರಿಸಂ ಮತ್ತು ಟ್ರೆಕ್ಕಿಂಗ್.
ಮನುಷ್ಯನಿಗೆ ಸಂಪಾದನೆ ಹೆಚ್ಚಾದಂತೆ ಖರ್ಚು ಮಾಡುವ ಹೊಸ ಹೊಸ ಯೋಜನೆಗಳನ್ನು ಅವನು ಹುಡುಕುತ್ತಾನೆ
ಇಲ್ಲವೇ ಸಮಾಜ ನಿರ್ಮಾಣ ಮಾಡಿಕೊಡುತ್ತದೆ. ಮೊದಲಿಗೆ ಈ ಹುಚ್ಚು ನಗರ ಪ್ರದೇಶದವರಿಗಿತ್ತು. ಈಗ ಹಳ್ಳಿ
ನಗರವೆಂಬ ಭೇಧಭಾವವಿಲ್ಲದೆ ಹರಡಿದೆ. ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಜಾಗದ ಹೊಸ ವಿಡಿಯೋ ಬಂದರೆ ಮುಗಿಯಿತು.
ಅಲ್ಲಿಗೆ ಹೋಗಿ ಬರಲೇಬೇಕು. ಟ್ರೆಕ್ಕಿಂಗ್ ನೆಪದಲ್ಲಿ ಸಿಕ್ಕ ಸಿಕ್ಕ ಕಾಡಿಗೆ ನುಗ್ಗುವುದು ಅಲ್ಲಿನ
ವಾತಾವರಣವನ್ನು ಹಾಳು ಮಾಡುವುದು, ಮೊಬೈಲಿನಲ್ಲಿ ಹಾಡು ಹಾಕಿಕೊಂಡು ಕಾಡಿನಲ್ಲಿ ಅಲೆದಾಡುವುದು, ಅಪಾಯದ
ಸ್ಥಳದಲ್ಲಿ ಫೋಟೋಗ್ರಫಿ ಮಾಡುವುದು. ಮೋಜು ಮಸ್ತಿ ಮಾಡುವುದು. ವಾರಾಂತ್ಯದಲ್ಲಿ ಮಡಿಕೇರಿ, ಚಿಕ್ಕಮಗಳೂರು,
ಮೈಸೂರು ರಸ್ತೆಗಳ ಕಡೆಗೆ ತಲೆ ಹಾಕುವಂತಿಲ್ಲ. ಆ ಮಟ್ಟಿಗೆ ವಾಹನ ದಟ್ಟಣೆಯಿರುತ್ತದೆ.
ಕೊನೆಯದಾಗಿ ಈ ರೀಲ್ಸ್ ಹುಚ್ಚಾಟಗಳು. ಲೈಕ್ಸ್
ಕಾಮೆಂಟ್ ಗಳಿಗಾಗಿ ಮತ್ತು ಕೆಲವು ದೃಶ್ಯಮಾಧ್ಯಮಗಳು ಹಾಗೂ ಟಿವಿ ಚಾನೆಲ್ ಗಳು ಇಂತಹವರನ್ನು ಸೆಲೆಬ್ರೆಟಿಗಳೆಂದು
ಸ್ವಯಂಘೋಷಿಸಿರುವುದರಿಂದ ಕನಿಷ್ಠ ಸಾಮಾನ್ಯ ಪ್ರಜ್ಞೆಯೂ ಇಲ್ಲದೆ, ಲೋಕದ ಮೇಲಿನ ಸರಳ ಸೂಕ್ಷ್ಮತೆಯೂ
ಇಲ್ಲದೆ ಮನಬಂದಂತೆ ರೀಲ್ಸ್ ಮಾಡುವುದು. ಇದು ಕೇವಲ ಯುವಕರಲಿತ್ತು. ಇತ್ತೀಚೆಗೆ ರಾಜಕಾರಣಿಗಳು, ಐಎಎಸ್,
ಐಪಿಎಸ್ ಅಂತಹ ಅಧಿಕಾರಿಗಳಿಗೂ ಈ ಗೀಳು ಹರಡಿದೆ.
ಇವೆಲ್ಲವೂ ಅತಿರೇಕವಲ್ಲದೆ ಮತ್ತೇನೂ ಅಲ್ಲ.
ಸಮಯವನ್ನು ಅದೆಷ್ಟು ಕೊಲ್ಲಬೇಕಿದೆಯೂ ಅಷ್ಟನ್ನು ಕೊಲ್ಲುತ್ತಿದ್ದಾರೆ. ಇದರ ಹಿಂದಿನ ಕುತೂಹಲ ಕಥೆಯನ್ನು
ಮುಂದಿನ ಲೇಖನದಲ್ಲಿ ತಿಳಿಸುತ್ತೇನೆ. ಇದರ ಹಿಂದಿನ ಕೈವಾಡ ಮತ್ತು ಉದ್ದೇಶವೆನ್ನೆಂದು ತಿಳಿಯೋಣ.
೧೨.೧೧.೨೦೨೬
