01 ಆಗಸ್ಟ್ 2011

ನಿನ್ನ ಕಣ್ಣೀರ ಹಿಂದೆ ನನ್ನ ಕೈವಾಡ!!!


ಹುಚ್ಚುಮನಸ್ಸು ಒಮ್ಮೊಮ್ಮೆ ಮನಸಾರೆ ಅತ್ತರೂ ನಾಟಕೀಯವೆನಿಸುತ್ತದೆ ಪ್ರಪಂಚಕ್ಕೆ, ನಾ ಅಳುವುದು ದುಃಖಕ್ಕಲ್ಲ, ಕಣ್ಣೀರಿಟ್ಟು ಕರುಣೆ ಹುಟ್ಟಿಸುವುದಕ್ಕಲ್ಲ, ಅಳುವುದೊಂದು ನೆಮ್ಮದಿ ನನಗೆ. ಒಬ್ಬಳೇ ಕುಳಿತು ಅಳುವ ಮನಸ್ಸು ಅವಳದ್ದು, ಅದೇಕೇ ಅಳುತ್ತಾಳೆಂಬುದರ ಬಗೆ ಅವಳಿಗೆ ಅರಿವಿಲ್ಲ. ನನಗೂ ತಿಳಿಯುತ್ತಿಲ್ಲ. ಒಮ್ಮೊಮ್ಮೆ ಒಂಟಿತನಕ್ಕೆ ಅಳುತ್ತಾಳೆ, ಮತ್ತೊಮ್ಮೆ ನನ್ನೊಂದಿಗೆ ಜಗಳವಾಡಿ ಅಳುತ್ತಾಳೆ, ಮಗದೊಮ್ಮೆ ನಾ ಮಾಡಿದ ಮೋಸ ನೆನೆದೆ ಅಳುತ್ತಾಳೆ. ಅಳುವೊಂದು ಬಳುವಳಿ ಎಂದರೂ ತಪ್ಪಿಲ್ಲ. ನಾನು ಕೆಲವೊಮ್ಮೆ ಅಳುವಂತಾಗುತ್ತದೆ, ನಾನು ಅತ್ತರೆ ನನ್ನ ನೋಡಿ ಮತ್ತೂ ಅಳುತ್ತಾಳೆಂಬ ಅಳುಕು ನನ್ನನ್ನು ಮನಸಾರೆ ಅಳುವುದಕ್ಕೂ ಬಿಡುವುದಿಲ್ಲ. ಅಳುವುದರಲ್ಲಿ ನಾನೇಕೆ ಅಂಜಬೇಕಿನಿಸಿದರೂ ನಾನಿನ್ನ ಕಣ್ಣೀರು ಕಂಡ ದಿನ ನನ್ನ ಬದುಕೇ ಅಂತಿಮವೆನ್ನುತ್ತಾಳೆ. ನಾನು ಹಾಗೇಯೇ ಅವಳಿಗೆ ಭರವಸೆಯ ಮಹಾಪೂರವನ್ನೇ ಹರಿಸಿದ್ದೇ, ಆದರೇ ಅವೆಲ್ಲವೂ ಭರವಸೆಗಳಾಗಿಯೇ ಉಳಿದವು. ಅವಳ ಪ್ರತಿಯೊಂದು ಕಣ್ಣ ಹನಿಗಳಿಗೂ ನಾನೇ ಪಿತೃ. ಅವಳ ಸಣ್ಣ ಕಣ್ಣ ಹನಿಗಳು, ಕೆನ್ನೆಯ ಮೇಲಿರುವ ಹನಿಯ ಗುರುತುಗಳು ನನ್ನನ್ನು ನೋಡಿ ಗೇಲಿ ಮಾಡುತ್ತಿವೆ. ನಾನು ಅವುಗಳನ್ನು ಕಂಡಾಗ ಕಣ್ಣಿಗೆ ಕಾಣದವನಂತೆ ಮರೆಯಾಗುತ್ತೇನೆ. ಇವೆಲ್ಲವೂ ನನ್ನಿಂದಲೇ ಆದದ್ದಲ್ಲವೇ? ಇದು ಪ್ರಶ್ನಾತೀತ, ನಿನ್ನ ಕಣ್ಣ ಹನಿಗಳ ಹುಟ್ಟಿಗೆ ಕಾರಣ ನಾನು, ನಾನೇಕೆ ನೀ ಅಳುವಂತೆ ಮಾಡಿದೆ, ನೀ ಅತ್ತ ಮರು ಕ್ಷಣ ನನ್ನೊಳಗೂ ದುಗುಡ, ದುಮ್ಮಾನ ಹೆಚ್ಚಾಗುತ್ತದೆ. ನಿನಗೆ ಮೋಸ ಮಾಡಿಲ್ಲವೆಂದು ಯಾವ ಬಾಯಿಯಿಂದ ಹೇಳಲಿ, ಒಮ್ಮೆ ಹೇಳಿದ ಸುಳ್ಳು, ಒಮ್ಮೆ ಬಚ್ಚಿಟ್ಟ ಸತ್ಯ ಪದೇ ಪದೇ ಭುಗಿಯೆದ್ದು ನನ್ನನ್ನು ಹೀಗೆ ಕೊಲ್ಲಬೇಕೆ?

29 ಜುಲೈ 2011

ಹೇಡಿತನಕ್ಕೆ ಮುಖವಾಡ!!

ಕುಡಿತಕ್ಕೆ ಸಮನಾದದ್ದು ಬೇರೊಂದಿಲ್ಲ, ಇದು ನಾನು ನಂಬಿರುವ ಸತ್ಯ. ಅದೆಷ್ಟು ಬಾರಿ ಯೋಚಿಸಿದರೂ, ಚಿಂತಿಸಿದರೂ ಕೊರಗಿದರೂ ನೆಮ್ಮದಿಯ ಉಸಿರು ಬಿಡಿಸುವುದು ಒಂದಿಷ್ಟು ಕುಡಿದ ಮೇಲೆ. ಸರ್ವ ರೋಗಕ್ಕೂ ಸಾರಾಯಿ ಮದ್ದು, ನಾನು ಕುಡಿಯುವುದು ಮೋಜಿಗಲ್ಲ, ಮನರಂಜನೆಗಲ್ಲ, ಚಟವೂ ಅಲ್ಲಾ, ನನ್ನೊಳಗಿರುವ ಸೋಮಾರಿತನ, ನೋವು ದುಃಖಗಳನ್ನು ಮರೆಮಾಚಲು ಕುಡಿಯುತಿದ್ದೇನೆ. ಕುಡಿದು ನಾ ಅಳಬಲ್ಲೇ, ನೋಡಿದವರು ಕುಡಿದು ಅಳುತ್ತಿದ್ದಾನೆಂದು ಸುಮ್ಮನಾಗುತ್ತಾರೆ. ಕುಡಿದು ನನ್ನ ಮೈ ನಾನೇ ಪರಚಿಕೊಳ್ಳಬಲ್ಲೆ, ನನ್ನೊಳಗೇ ನಾನೇ ಅಳಬಲ್ಲೆ, ನಗಬಲ್ಲೆ, ತಮಾಷೆ, ನಗು, ನೋವು ದುಃಖ ದುಮ್ಮಾನ ಎಲ್ಲವೂ ಸೇರುತ್ತವೆ. ಆದರೂ ಯಾರು ಗಂಭೀರವಾಗಿ ಪರಿಗಣಿಸುವುದಿಲ್ಲ. ಕುಡಿದು ನಾನು ಯಾರೊಂದಿಗೂ ಜಗಳವಾಡುವುದಿಲ್ಲ, ಯಾರು ನನ್ನೊಂದಿಗೂ ಆಡುವುದಿಲ್ಲ, ಕುಡಿದಾಗ ನಾನು ಹೊಡೆದಾಡುವುದು ನನ್ನೊಂದಿಗೆ, ಕೇವಲ ನನ್ನೊಂದಿಗೆ. ನಾನು ಕುಡುಕನಾಗಿದ್ದು ನನ್ನಿಂದ, ನಾನು ಕುಡಿಯುತ್ತಿರುವುದು ನನ್ನಿಂದ, ಕುಡಿದು ಕೊರಗುವುದು ನನ್ನ ಮೇಲೆ. ಇದು ನನ್ನಯ ಮೇಲಿನ ಪ್ರೀತಿ, ಪ್ರೇಮ, ಅತಿಯಾದ ಅಬಿಮಾನ, ಇವೆಲ್ಲದರ ಮಿಶ್ರಣದಲ್ಲಿ ಮಿಂದೇಳುವುದೇ ನಾ ಕುಡಿದಾಗ, ನಾ ಕುಡಿಯುವುದೇ ಮಿಂದೇಳಲು.

ನನ್ನ ಕುಡಿತ, ನನ್ನ ದುಷ್ಟ ಬಾಳು, ನನ್ನ ಈ ಹೇಯ ಜೀವನ ಸ್ಥಿತಿ ಇವೆಲ್ಲವೂ ನಾನೇ ನನ್ನಿಂದ ಸೃಷ್ಟಿಸಿಕೊಂಡಿರುವುದು. ನಾನೊಬ್ಬ ಹೇಯ, ನಾನೊಬ್ಬ ಸೋಮಾರಿ, ನಾನೊಬ್ಬ ಕುಡುಕ, ನನ್ನಳೊಗೆ ಕಳ್ಳತನವಿಲ್ಲ, ದ್ರೋಹವೆಂಬುದಿಲ್ಲ, ಅದಿದ್ದರೇ ನಾ ಕುಡಿದು ನನ್ನೊಳಗೆ ನಾನು ಸಾಯುತ್ತಿರಲಿಲ್ಲ. ನಾನು ಕುಡಿಯುವುದಕ್ಕೆ ಕಾರಣವಿಲ್ಲ. ಕಾರಣವಿದ್ದು ಕುಡಿಯುವಷ್ಟು ಯೊಗ್ಯನಲ್ಲ. ನಾನೇಕೆ ಕುಡುಕನಾದೆ? ನೀ ನೇಕೆ ಕುಡೀಯುತ್ತೀಯಾ? ಕುಡಿತವನ್ನು ಬಿಡುವುದಕ್ಕೆ ನಾ ಸಹಾಯ ಮಾಡಲೇ ಎನ್ನುವ ಹತ್ತು ಹಲವು ಬುದ್ದಿವಂತರಿದ್ದಾರೆ, ಒಳ್ಳೆಯ ಸ್ನೇಹಿತರು ಅನುಮಾನವಿಲ್ಲ. ಆದರೇ ನಾನು ಒಳ್ಳೆಯವನಾಗಲಿಲ್ಲ. ಇದು ನನ್ನೊಳಗೆ ಇರುವ ದುಷ್ಟ ಮನಸ್ಥಿತಿ. ಕುಡುಕನ ಪರಿಸ್ಥಿತಿ ಯಾವ ನನ್ನ ಶತ್ರುವಿಗೂ ಬೇಡ. ಕುಡುಕನೆಂಬುವನು ನೆಪ ಮಾತ್ರಕ್ಕೆ ಮನುಷ್ಯ ಅವನ ಒಳಗೆ ಅತಿರೇಕಕ್ಕೇರಿದ ಹುಚ್ಚಾಸ್ಪತ್ರೆ ಇರುತ್ತದೆ. ಅದು ಸಾಮಾನ್ಯ ಹುಚ್ಚರ ಸಂತೆಯಲ್ಲ, ಅಲ್ಲಿರುವವರೆಲ್ಲರೂ ವಿಕೃತ ಮನಸ್ಸಿನವರೇ! ನಾನು ಕುಡಿದಾಗ ನನ್ನೊಳಗೆ ಆಗುವ ಬದಲಾವಣೆಯನ್ನೂ ನಾನು ನಡೆದುಕೊಳ್ಳುವುದನ್ನು ನೆನೆ ನೆನೆದು ಮತ್ತೆ ಕುಡಿಯುತ್ತೇನೆ.
ಕುಡಿಯುವವರಿಗೊಂದು ನೆಪ ಬೇಕು ಅಷ್ಟೇ, ಇಂಥಹ ಸಾವಿರಾರು ಬೊಗಳೆ ಮಾತುಗಳನ್ನು ನಾನು ಕಂಡಿದ್ದೇನೆ. ನಾನು ನಾನಾಗಿದ್ದರೇ ಚೆನ್ನಾಗಿರುತ್ತದೆ ಹೊರತು ಬೇರಯವರ ಪಾತ್ರ ಮಾಡಲು ಹೋದರೇ ಅದೆಂದಿಗೂ ಸಾದ್ಯವಿಲ್ಲ. ಇವೆಲ್ಲಾ ಮಾತುಗಳು ನನ್ನ ಸ್ವಂತದಲ್ಲ, ನನ್ನ ತಾತ ಹತ್ತು ವರ್ಷದ ಹಿಂದೆ ಹೇಳಿದ ಮಾತುಗಳು. ಅವುಗಳು ಇನ್ನು ಗುಯ್ಂ ಎನ್ನುತಿವೆ.

22 ಮಾರ್ಚ್ 2011

ಅನರ್ಥವೇ ಬದುಕು ಇನ್ನೂ ಈ ಬರಹಕ್ಕೆ ಅರ್ಥ ಬರಲು ಸಾದ್ಯವೇ?


ಬದುಕು ಜೀವನ ಬೇಸರಗೊಂಡು ಕಟ್ಟ ಕಡೆಯದಾಗಿ, ಹೆಂಡಕ್ಕೊ, ಸಿಗರೇಟಿಗೋ, ಅಥವಾ ಮತ್ತಾವುದೋ ಚಟಕ್ಕೆ ಬಲಿಯಾಗಿ, ಬದುಕಿನ ಕೊನೆಯ ದಿನಗಳು ಹತ್ತಿರ ಸಮೀಪಿಸುತ್ತಿದ್ದಾಗ, ಮನದಾಳದೊಳಗೆ ಯಾವುದೋ ತುಡಿತ, ಬಯಕೆ ಬುಗೆದ್ದು ಬರುತ್ತದೆ. ಅದೊಂದು ಮುಂಜಾವಿನಲ್ಲಿ ಕಾಣುವ ಕನಸಿನಂತೆ, ಯಾವುದು ತಿಳಿಯಾಗಿಲ್ಲ, ಅಲ್ಲೊಂದು, ಅಪಘಾತ, ರಕ್ತ, ಅಳು, ಆಕ್ರಂದನ, ನಗು, ಕುಹುಕತನ, ನನ್ನನ್ನೆ ನೋಡಿ ಹಂಗಿಸುತ್ತಿರುವ ಭಾವನೆ. ಭಾವನೆಯನ್ನು ಅರ್ಥೈಸಿಕೊಳ್ಳದ ಪರಿಸ್ಥಿತಿ ನನ್ನದು. ಯಾರನ್ನೋ ಹಳ್ಳಕ್ಕೆ ತಳ್ಳಿದ, ಯಾರನ್ನೊ ಕೊಲೆಗೈದ, ಅಪರಾಧ ಪ್ರಜ್ನೆ ನನ್ನನ್ನು ಕಾಡುತ್ತಿದೆ, ನೋಡು ನೋಡುತ್ತಲೇ ಯಾರೋ ನನ್ನನ್ನು ಪ್ರಪಾತಕ್ಕೆ, ತಳ್ಳುತ್ತಿದ್ದಾರೆ, ನಾನು ಸಂಪೂರ್ಣ ಮುಳುಗುತ್ತಿದ್ದೇನೆ, ಯಾರೂ ಅಳುತ್ತಿಲ್ಲ, ಯಾರ ಮೊಗದಲ್ಲಿಯೂ ಕರುಣೆಯಿಲ್ಲ, ಎಲ್ಲರ ಮೊಗದಲ್ಲಿ ಅದೇ ಭಾವನೇ, ಇವನಿಗೆ ಹೀಗೆ ಆಗಬೇಕಿತ್ತು ಅವನು ಮೆರೆದದ್ದು ಕಡಿಮೆಯೇ, ದೃಷ್ಟ, ಕಲ್ಲಲ್ಲಿ ಹೊಡೆದು ಸಾಯಿಸಿದರೂ ಕಡಿಮೆಯೇ, ಆದರೂ ಅವನು ತೋಡಿದ ಹಳ್ಳಕ್ಕೆ ಅವನೆ ಬಿದ್ದಿದ್ದಾನೆ. ಅವನೆಂದು ಮೇಲೇರಲಾರ, ಮೇಲೇಲುವುದಕ್ಕೆ ಶಕ್ತಿಯಿದ್ದರೇ ತಾನೇ, ಶಕ್ತಿ ಬರುವುದಕ್ಕೆ ಜೀವವಿದ್ದರೇ ತಾನೇ. ಹೀಗೆ ನನ್ನ ಸಾವನ್ನು ಹಂಗಿಸುವವರೆಲ್ಲರನ್ನೂ ನಾನು ದಿಟ್ಟಿಸುತ್ತಿದ್ದೇನೆ, ಅವರೆಲ್ಲರೂ ಇದ್ದಾರೆ.
ನಾನು ಶಾಲೆಗೆ ಹೋಗುವುದಿಲ್ಲವೆಂದು ಹಟ ಹಿಡಿದಾಗ, ನನ್ನನ್ನು ಸಮಜಾಯಿಸಿ ಇಲ್ಲದ ಸುಳ್ಳು ಹೇಳಿ ಶಾಲೆಗೆ ಕರೆದುಕೊಂಡು ಹೋದ, ಮಾಸ್ಟರುಗಳು. ಮುದ್ದಿನ ಮಾತಾಡಿ ಶಾಲೆಗೆ ತಳ್ಳಿದ ನಮ್ಮಮ್ಮ, ಹೋಗದಿದ್ದಲ್ಲಿ ಕೊಂದುಬಿಡುವೆ ಎಂದ ನಮ್ಮಪ್ಪ, ಕಚ್ಚಾಡಿದ ಸ್ನೇಹಿತರು, ಒಂದು ಬುತ್ತಿಯಲ್ಲಿ ಹಂಚಿ ತಿಂದ ಗೆಳೆಯರು, ಒಂದೇ ಲೋಟದಲ್ಲಿ ಕುಡಿದ ನನ್ನ ಆತ್ಮೀಯರು, ನಾನೇ ಸರ್ವಸ್ವವೆಂದಿದ್ದ ನನ್ನ ಜೀವದ ಗೆಳತಿ, ನನ್ನ ಮಾತಿಗೆ ಸದಾ ನಗುತಿದ್ದ ನನ್ನ ಗೆಳೆಯ ಗೆಳತಿಯರು, ನನ್ನ ಮೇಲೆ ದ್ವೇಷ ತಿರಿಸಲೆಂದೆ ಹುಟ್ಟಿದ್ದೇವೆಂದು ಅಲೆದಾಡುತಿದ್ದ ನನ್ನ ಶತ್ರುಗಳು, ಇವರೆಲ್ಲರೂ ನನ್ನ ಸಾವಿನ ದಿನ ನಿಂತು ನನ್ನನ್ನು ನೋಡಿ ಹುಸಿನಗುತಿದ್ದದ್ದು ಏಕೆ? ಬದುಕಿದ್ದಾಗಲೂ ಅರ್ಥವಾಗದ ಬದುಕು ನನ್ನದು, ಸತ್ತ ಮೇಲೂ ಅರ್ಥವಾಗುತ್ತಿಲ್ಲವಲ್ಲ, ನಾನೆಂಬುದೇ ದುಗುಡವೇ? ನಾನೆಂಬುದೇ ಅನರ್ಥವೇ, ಈ ಬದುಕು ಅನರ್ಥವೋ? ಈ ಜೀವನ ಅನರ್ಥವೋ? ಯಾವುದು ಅರ್ಥ, ಯಾವುದು ಅನರ್ಥ? ಕ್ಷಣ ಕ್ಷಣ ಭೂಲೋಕದಲ್ಲಿ ಅನುಭವಿಸಿದ ಕಷ್ಟ ಕಾರ್ಪಣ್ಯ ಸಾಲದೇ? ಹುಟ್ಟುವಾಗಲೇ ಅಳುತ್ತಾ ಹುಟ್ಟಿದ ನನಗೆ, ತಿನ್ನಿಸುವಾಗಲೂ ಹೊಡೆದು ಬಡಿದು ತಿನ್ನಿಸಿದರು, ಓದಲು ಹೋದಾಗಲೂ ಹೊಡೆತ ಬಡಿತಗಳು, ಸಹಪಾಠಿಗಳು ಹೊಡೆದಾಟಕ್ಕೆ ಮುನ್ನುಗ್ಗುತ್ತಿದ್ದರು, ನಾನು ಅವರಿಂದ ಏಟು ತಪ್ಪಿಸಿಕೊಳ್ಳುವುದಕ್ಕಾದರೂ ಅವರಿಗೆ ಹೊಡೆಯಬೇಕಿತ್ತು, ಅದು ಕೀಟಲೆಯೋ, ಪ್ರೀತಿಯೋ, ದ್ವೇಷವೋ ಅಂತೂ ಹೊಡೆದಾಡುವುದರಲ್ಲೊಂದು ಮಜ, ನಗು, ಬಿದ್ದವನನ್ನು ಎತ್ತುವುದಕ್ಕಿಂತ ಬಿದ್ದ ಎಂದು ನಗುವುದೇ ಹೆಚ್ಚು, ಬಾಲ್ಯದಲ್ಲಿ ಕಲಿತ ಆ ಗುಣ, ಸಾಯುವ ತನಕ ಮುಂದುವರೆಯಿತು. ನನ್ನ ಜೀವದ ಗೆಳೆತಿ ದೂರಾದಳೆಂದರೆ, ಅವಳು ಕೈಕೊಟ್ಟಳಾ? ಎಂದು ಹಂಗಿಸಿದರೇ ಹೊರತು ಸಮಧಾನ ಮಾಡಿ ನನ್ನೊಂದಿಗಿರಲಿಲ್ಲ.
ಇವೆಲ್ಲವೂ ಕೇವಲ ಹತ್ತು ಹದಿನಾರು ನನ್ನ ಬಳಗದವರ ಕಥೆಯಾದರೇ, ಇನ್ನೂ ಕೋಟ್ಯಾಂತರ ಮಂದಿ ಇರುವ ಸಮಾಜ ನನ್ನನ್ನು ನಡೆಸಿಕೊಂಡ ರೀತಿಯಂತೂ ಅತಿ ಘೋರವೆನಿಸುತ್ತದೆ. ನಾನು ಹುಟ್ಟಬೇಕೆಂದು ನಾನು ಬಯಸಿರಲಿಲ್ಲ, ಹುಟ್ಟಿದ್ದು ಯಾವುದೋ ಕಾರಣಕ್ಕೆ, ಜನಿಸಿದ ನಂತರ ನಾನು ಬಯಸಿದಂತೆ ಬದುಕಲು ಯಾರು ಬಿಟ್ಟಿಲ್ಲ, ಇಷ್ಟಪಟ್ಟಿದ್ದನ್ನು ಓದಿಲ್ಲ, ಇಷ್ಟಪಟ್ಟಂತೆ ಬದುಕಿಲ್ಲ, ಇಷ್ಟಬಂದತ್ತೆ ಏನೂ ಮಾಡಿಲ್ಲ, ಆದರೂ ನಾನು ಬದುಕಿದೆ, ಜೀವಿಸಿದೆ, ಯಾರಿಗೆ ಬದುಕಿದೆ, ಯಾವುದಕ್ಕಾಗಿ ಬದುಕಿದೆ, ಯಾವುದಕ್ಕೂ ಉತ್ತರವಿಲ್ಲ, ಪ್ರಶ್ನೆಗಳೇ ಬದುಕಾಗಿತ್ತು, ಸಾವಿನ ಹಿಂದೆಯೂ ಅಷ್ಟೇ ಉತ್ತರವಿಲ್ಲ, ಬರೀ ಪ್ರಶ್ನೆಗಳೇ. ಇವೆಲ್ಲವೂ ಏಕೆ ಹೀಗೆಂದು ಪ್ರಶ್ನಿಸುತ್ತಾ ಹೋದರೇ ಮತ್ತೆ ಮತ್ತೆ ಪ್ರಶ್ನೆಗಳ ಸರಮಾಲೆ ಸಿಗುವುದೇ ವಿನಾಃ ಉತ್ತರದ ಸುಳಿವಿಲ್ಲ. ಮೊದಲ ಬಾರಿಗೆ ಶಾಲೆಗೆ ಸೇರಿದ ದಿನದಿಂದಲೂ, ಜಾತಿಯ ಆಧಾರ ಮೇಲೆ, ಅಥವಾ ಅಪ್ಪ ಅಮ್ಮನ ಪ್ರತಿಷ್ಟೆಯನ್ನು ಮುಂದಿಟ್ಟುಕೊಂಡು ವಿಧ್ಯಾರ್ಥಿಗಳನ್ನು ನಡೆಸಿಕೊಂಡು ಭೇಧಭಾವ ಮೂಡಿಸುವ, ಓಡುವ ಕುದುರೆಯ ಬಾಲವನ್ನು ಹಿಡಿದು, ಕೇವಲ ಓದುವ ಮುಖಗಳನ್ನು ಮುಂದೆ ತಂದು ಒದಲು ಆಸಕ್ತಿಯಿಲ್ಲದ ನನ್ನಂಥ ದಡ್ಡ ಶಿಖಾಮಣಿಗಳನ್ನು ಉಗಿದು ಮನ ಬಂದಂತೆ ಬಡಿದು, ದಂಡಿಸಿದ ಮಹಾಮಣಿಯರು ನಗುತ್ತಾರೆ ನಾನು ಹಾಳಾಗಿ ಹಳ್ಳದಲ್ಲಿ ಮಲಗಿದ್ದಾಗ. ಒಂದೊಂದು ಹಂತದಲ್ಲಿಯೂ ಅಷ್ಟೇ, ಜಗತ್ತು ಆಚಾರ, ಅನಾಚಾರಗಳನ್ನು ತೋರಿಸಿ, ನಂತರ ಅನಾಚಾರದಿಂದ ಮಾತ್ರ ನೀನು ಬದುಕಲು ಸಾಧ್ಯ ನೀನು ಬದುಕಲೇ ಬೇಕೆಂದರೇ ಮತ್ತೊಬ್ಬನಿಗೆ ದ್ರೋಹ ಮಾಡಬೇಕು, ಅವನನ್ನು ಗೆಲ್ಲಬೇಕು, ಜೀವನವೆಂಬುದು ಒಂದು ಹೋರಾಟ, ರಾಜ ಮಹಾರಾಜರು ಯಾವ ತೆವಳಿಗಾಗಿ ಹೋರಾಡಿದರೋ ಗೊತ್ತಿಲ್ಲ, ಜಾತಿಗೆ, ಧರ್ಮಕ್ಕೆ, ಭಾಷೆಗೆ, ರಾಜ್ಯಕ್ಕೆ, ದೇಶಕ್ಕೆ, ಹೀಗೆ ಎಲ್ಲದಕ್ಕೂ ಹೋರಾಡಲೇಬೇಕು, ಅಣ್ಣತಮ್ಮಂದಿರು ದಾಯಾದಿಗಳಾಗಬೇಕು, ಒಂದು ಊರು ನುಚ್ಚಿ ನೂರಾಗಬೇಕು, ನೀನು ಪಕ್ಕದ ಮನೆಯವನ ಹಿತಕ್ಕೆ ತಲೆಗೆಡೆಸಿಕೊಳ್ಳಬಾರದು, ಅವನನ್ನು ತುಳಿಯಲು ಯತ್ನಿಸು, ಅವನ ಮನೆಗೆ ಬೆಂಕಿ ಬಿದ್ದಾಗ ಕೆಂಡದಿಂದ ಬೀಡಿ ಹಚ್ಚಿಕೋ, ಇವೆಲ್ಲವನ್ನು ಹೇಳಿಕೊಟ್ಟಿದ್ದು ನನ್ನ ಸಮಾಜ. ಕೆಲವು ಬಾರಿ ನೇರವಾಗಿ ಮತ್ತು ಕೆಲವು ಬಾರಿ ಹಿಂದುಗಡೆಯಿಂದ ಕಲಿಸಿದೆ. ಈಡಿ ಸಮುದಾಯ ಎದುರುಗಡೆ ಸಮಾಜವನ್ನು, ಸಮಾಜದ ಹಿತವನ್ನು ಬಯುಸುತ್ತಿರುವುದಾಗಿ, ಸಾಮಾನ್ಯ ಮನ್ನುಷ್ಯನಿಗೆ ಅರ್ಥವಾಗದ ಪದಗಳಾದ ನೈತಿಕತೆ, ಸಮಾಜ ಬದ್ದತೆ, ಮೌಲ್ಯಗಳು, ಎಂದೆಲ್ಲಾ ಬಿಂಬಿಸಿದರೂ ಇವೆಲ್ಲವೂ ವೇದಿಕೆಯ ಮೇಲೆ ಭಾಷಣ ಬಿಗಿಯುವುದಕ್ಕೆ ಯೋಗ್ಯ ಪದಗಳೇ ಹೊರತು, ಜೀವನ ಮಾಡುವುದಕ್ಕಲ್ಲವೆಂಬು ಕಟು ಸತ್ಯ.
ಯಾರು ಇಲ್ಲಿ ಯಾರಿಗೆ ಬದುಕುತ್ತಿದ್ದಾರೆ, ಗೊಂದಲದ ಬದುಕು, ಗೊಂದಲಮಯ ಮನಸ್ಥಿತಿ, ಎಲ್ಲವನ್ನು ತಿಳಿದಿರುವಂತೆ ಬೀಗುವವರೇ ಹೆಚ್ಚು, ಅರ್ಥವಾಗಲಿಲ್ಲವೆಂದರೇ ಅವನನ್ನು ಶತಮೂರ್ಖನೆಂದು, ದಡ್ಡನೆಂದು ಬಿಂಬಿಸಲಾಗುತ್ತದೆ. ಒಬ್ಬ ಮತ್ತೊಬ್ಬನಿಗೆ ನಡುಬೀದಿಯಲ್ಲಿ ಬೈಯ್ದರೇ ಅವನು ನಾಯಕನಾಗುತ್ತಾನೆ. ನೂರಾರು ಕೋಟಿ ನುಂಗಿದ ರಾಜಕಾರಣಿಗೆ ಅಭಿಮಾನಿಗಳು ಹುಟ್ಟುತ್ತಾರೆ, ಭ್ರಷ್ಟ ಅಧಿಕಾರಿಗಳಿಗೆ ಬೆಂಬಲಿಗರಿರುತ್ತಾರೆ, ಆಡಳಿತವಿದ್ದರೇ ಏನು ಬೇಕಾದರು ಮಾಡಬಹುದೆಂಬುದು ಅರಿವಾಗಿ ಎಲ್ಲರೂ ಅಧಿಕಾರ ಹಿಡಿಯುವ ರೇಸಿನಲ್ಲಿ ಓಡಾಡುತ್ತಾರೆ. ಲಂಚ ಕೊಟ್ಟು ಕೆಲಸ ಕೇಳುವ ಅಭ್ಯರ್ಥಿ ಲಂಚ ಹುಡುಕುವುದೇ ಜೀವನವಾಗಿಸಿಕೊಳ್ಳುತ್ತಾನೆ. ಹಣದ ಆಸೆಯಿಂದಾಗಿ, ವ್ಯವಸಾಯ ಬಿಟ್ಟು ವ್ಯಾಪಾರಕ್ಕಿಳಿಯುತ್ತಾನೆ, ತಲೆಮಾರುಗಳಿಂದ ಬಂದ ವೃತ್ತಿ ಜೀವನ ಬೇಸರವಾಗುತ್ತದೆ, ಸುಂದರವಾದ ಹಳ್ಳಿ ಏನೇನು ಇಲ್ಲದ ಮರುಗಾಡಾಗತೊಡಗುತ್ತದೆ. ಮರುಗಾಡಿನಲ್ಲಿಯೂ ಚಿತ್ರೀಕರಣ ನಡೆಯುತ್ತಿರುತ್ತದೆ. ಇವೆಲ್ಲವು ಬಂದು ಹೋಗುವ ನಡುವೆ ಎಚ್ಚರವಾಗುತ್ತದೆ, ಸ್ನಾನ ಮಾಡಿ ಆಫೀಸಿಗೆ ಲಗ್ಗೆಯಿಟ್ಟು ದುಡಿಯಬೇಕು ಅಷ್ಟೇ.

14 ಜನವರಿ 2011

ಹೀಗೊಮ್ಮೆ ಮಾಡ ಹೊರಟರೆ ಹೇಗೆ?

ಜೀವನದ ಬಗೆಗೆ ಮಾತನಾಡುತ್ತಿರುವಾಗ, ಒಮ್ಮೊಮ್ಮೆ ದಿಡೀರನೆ ಬಹಳ ಭಾವುಕರಾಗಿ ಮಾತನಾಡಲಾರಂಬಿಸುತ್ತೇವೆ. ಇದು ಕೇವಲ ಭಾವುಕತೆಯಲ್ಲ, ನಮ್ಮೊಳಗಿರುವ ನೋವು ಅಡಗಿರುತ್ತದೆ, ಸಮಾಜದ ವಿರುದ್ದ, ಅಥವಾ ಮತ್ತಾವುದೋ ವ್ಯವಸ್ಥೆಯಿಂದ ಬೇಸತ್ತ ನೋವು ಇಲ್ಲಿ ಸೇರಿರುತ್ತದೆ. ದಿನ ನಿತ್ಯ, ಕೇವಲ ಮೋಸ, ವಂಚನೆ, ದ್ರೋಹ, ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರ ಹೀಗೆ ಇಂಥವುಗಳನ್ನೇ ಕಂಡು ಕರಗಿಹೋಗಿರುವಾಗ ಇದ್ದಕ್ಕಿದ್ದ ಹಾಗೆ ಕೋಪ ಬರುವುದು ಸರಿಯೆ! ಒಂದು ಕಡೆ ವಿದ್ಯಾವಂತ ಸ್ನೇಹಿತರೆಲ್ಲರೂ ಸೇರಿ ಸಮಾಜದ ಬಗೆಗೆ ಚಿಂತಿಸುತ್ತಿರುವಾಗ, ನಡುವಲ್ಲಿಯೇ, ಯಾರೋ ಒಬ್ಬ ಸ್ನೇಹಿತ, ಲಂಚಕೊಟ್ಟೂ ಪೋಲಿಸ್ ಆದ, ಮತ್ತೊಬ್ಬ ಕೆ ಎ ಎಸ್ ಮಾಡಿದ, ಮತ್ತೊಬ್ಬ ಇಪ್ಪತ್ತು ಲಕ್ಷ ವರದಕ್ಷಿಣೆಗೆ ಸೋತ ಎಂದಾಗ, ನಮಗೆ ಎನಿಸುವುದಿಷ್ಟೇ ಊರ ಉಸಾಬರಿ ನಮಗೇಕೆ? ಯಾರಿಗೂ ಇಲ್ಲದ ಉತ್ಸಾಹ ಅಭಿಮಾನ ನಮಗೇಕೆ. ಭೂಮಿ ಹುಟ್ಟಿ ಸಾವಿರಾರು ವರ್ಷವಾಗಿದೆ, ಕೋಟ್ಯಾಂತರ ಜನ ಸತ್ತಿದ್ದಾರೆ, ಸಾಧಿಸಿದ್ದಾರೆ, ಯಾವುದೂ ಶಾಶ್ವತವಲ್ಲ, ನಾವೆಕೆ ಹೊಡೆದಾಡಬೇಕು, ಮನೆ ಮಂದಿಯಿಂದ ಶಾಪ ಹಾಕಿಸಿಕೊಳ್ಳಬೇಕು?

ರೇಡಿಯೋ ದಲ್ಲಿ, ಟಿವಿಗಳಲ್ಲಿ ನಿರೂಪಕರಾಗಿರುವವರು ಕನ್ನಡಿಗರು, ಕರುನಾಡಲ್ಲಿ ಹುಟ್ಟಿದವರು, ಕನ್ನಡದ ಹೆಸರಲ್ಲಿ ಅನ್ನ ತಿನ್ನುತ್ತಿರುವವರು ಆದರೇ ಅವರ ಆ ಪದಗಳ ಉಚ್ಚಾರಣೆ, ಕನ್ನಡದ ಬಗೆಗಿರುವ ಧೋರಣೆ ಮಾತ್ರ ಕಂಡನೀಯ. ಒಬ್ಬೊಬ್ಬ u2 ನಲ್ಲಿ ಮಾತನಾಡುವ ನಿರೂಪಕರನ್ನು ನೋಡಿ, ಅವರ ಭಾಷೆಯನ್ನು ಕೇಳಿ, ಎಫ್ ಎಂ ನಲ್ಲಿ ಮಾತನಾಡುವ ಮಹನೀಯರನ್ನು ಆಲಿಸಿನೋಡಿ, ಅವರು ಹಂಗಿಸಲು ಆಯ್ಕೆ ಮಾಡುವ ವಿಷಯಗಳು ನಾಡಿನ ಗಣ್ಯ ವ್ಯಕ್ತಿಗಳನ್ನ! ರಾಜ್ಯದ, ನಾಡಿನ, ಭಾಷೆಯ ಬಗೆಗೆ ಸ್ವಲ್ಪವೂ ಗಂಭೀರತೆಯಿಲ್ಲದೆ ತಾವು ಆಡಿದ್ದೆ ಆಟ ಅಥವಾ ಭಂಡತನವನ್ನೋ ಮೆರೆದುಕೊಳ್ಳುವುದೇ ಇಂಥವರ ಜಾಯಮಾನವೆಂದರೇ ನಾವೇಕೆ ಹೊಡೆದಾಡಬೇಕು? ಸಮಾಜ ಹಾಳಾದರೇ ಎಲ್ಲರಿಗೂ ಹಾಳೆಂದು ನಮ್ಮ ಮನ್ನಸೇಕೆ ಕೇಳುವುದಿಲ್ಲ. ದೇಶ ಉದ್ದಾರ ಮಾಡಲು ಸಾಧ್ಯವಿಲ್ಲ, ಆದರೇ ಕೊಳೆತು ನಾರುತ್ತಿರುವ ಸಮಾಜದಲ್ಲಿ ಬದುಕಲು ಅರ್ಹರಲ್ಲ, ಹುಟ್ಟಿದ್ದು ತಪ್ಪಾ, ಅಥವಾ ಭಾವುಕರಾಗಿ, ದೇಶದ, ನಾಡಿನ, ಭಾಷೆಯ ಬಗೆಗೆ ಒಲವನ್ನು ಬೆಳೆಸಿಕೊಂಡದ್ದು ತಪ್ಪಾ?
ಗಾಂಧೀಜಿ ದೇಶದ ಸ್ವಾತಂತ್ರ್ಯ ಶ್ರಮ ಪಟ್ಟ ಅರಿವು ನಮಗೆಂದಿಗೂ ಬರುವುದಿಲ್ಲ, ಆದರೇ ಫೇಸ್ ಬುಕ್ ನಲ್ಲಿ ನಮ್ಮ ದೇಶದ ನೋಟಿನಲ್ಲಿರುವ ರಾಷ್ಟ್ರಪಿತನಿಗೆ ಪೆನ್ಸಿಲ್, ಪೆನ್ನಿನಿಂದ ವಿಚಿತ್ರವಾಗಿ ಬರೆದು ಗಡ್ಡ ಮೀಸೆ ಬರೆದರೆ, ಪೂಜಾ ಗಾಂಧಿಯಂತವರು ಇಷ್ಟಪಟ್ಟಿರುತ್ತಾರೆ. ಚೀನಾ ದೇಶ ಒಂದು ಕಡೆ ಅವಕಾಶಕ್ಕೆ ಕಾಯುತ್ತಿದ್ದರೆ, ಪಾಕಿಸ್ತಾನ ದೇಶದೊಳಗೆ ನುಗ್ಗಿ ಹಾವಳಿ ನೀಡುತ್ತಿದ್ದರೂ ನಮ್ಮ ದೇಶದ ಬಗ್ಗೆ ನಮಗೆ ಗೌರವ ಬಂದಿಲ್ಲವೆಂದರೇ ನಮ್ಮ ವಿದ್ಯಾವಂತ ಜನರನ್ನು ಅಭಿನಂದಿಸಲೇಬೇಕು. ನಾವು ನಮ್ಮಗಳ ಕೆಲಸವನ್ನು ಮಾಡಿದರೇ ನಮ್ಮ ದೇಶ ಉನ್ನತಿ ಹೊಂದುತ್ತದೆಂಬುದರಲ್ಲಿ ಅನುಮಾನವಿಲ್ಲ, ಆದರೇ ಪ್ರತಿಯೊಂದು ಕ್ಷೇತ್ರದಲ್ಲಿಯೂ ಅಹಂ ನೊಂದಿಗೆ ತಮ್ಮದೇ ಸರಿಯೆಂದು ಮುಗಿಬಿದ್ದು, ಬೀದಿಗಿಳಿದು ಜಗಳವಾಡುತ್ತಿರುವಾಗ ಮಾಡುವುದೇನು? ಪತ್ರಿಕಾರಂಗದವರು ಸುದ್ದಿಗೆಂದು ಯಾವ ಮಟ್ಟಕ್ಕೆ ಬೇಕಿದ್ದರೂ ಇಳಿಯಲು ಸಿದ್ದ, ಇನ್ನೂ ರಾಜಕೀಯದ ವಿಷಯ ಬೇಡವೇ ಬೇಡ, ಪರಿಸರ, ನೀರು ನಿರ್ವಹಣೆಯ ವಿಷಯಕ್ಕೆ ಬಂದರೇ, ದೊಡ್ಡ ಯುದ್ದವೇ ನಡೆಯುತ್ತಿದೆ, ಒಬ್ಬರು ಮಳೆ ನೀರು ಕೊಯ್ಲು ಎಂದರೇ ಮತ್ತೊಬ್ಬ ಬೇಡವೇ ಬೇಡವೆನ್ನುತ್ತಾನೆ, ಒಂದು ತಂಡ ಪರಿಸರವೆಂದರೆ ಮತ್ತೊಂದು ತಂಡ ನೀರಾವರಿ ಎನ್ನುತ್ತಾರೆ.
ದೊಡ್ಡ ಅಣೆಕಟ್ಟು ಕಟ್ಟಿ, ಭೂಮಿಗೆ ರಸಗೊಬ್ಬರ ಸುರಿದು, ಭೂಮಿಯನ್ನು ಸಂಪೂರ್ಣ ನಾಶಮಾಡುವ ತನಕ ಸುಮ್ಮನಿರುವುದಿಲ್ಲ ನಮ್ಮ ರೈತಾಪಿ ಜನ. ಮೂರು ದಿನದ ಕೆಲಸ ಭತ್ತ ಬೆಳೆಯುವುದು ಮಿಕ್ಕಿದ ದಿನಗಳಲ್ಲಿ ಹಳ್ಳಿ ರಾಜಕೀಯ ಮಾಡಿಕೊಂಡಿರಬಹುದೆಂಬುದು ನಮ್ಮ ಜನರ ಆಶಯ. ಹೆಚ್ಚು ಹಣ ಸಂಪಾದಿಸಿದರೇ ಬದುಕಲು ಸಾಧ್ಯವೆಂಬುದನ್ನು ಪ್ರತಿಯೊಬ್ಬ ಭಾರತೀಯನೂ ಪಾಲಿಸತೊಡಗಿದ್ದಾನೆ. ದೇಶದ ಅಭಿವೃದ್ದಿಯಿರುವುದು ತನ್ನಲ್ಲಿರುವ ಪರಿಸರ ಮತ್ತು ನೈಸರ್ಗಿಕ ಸಂಪತ್ತಿನಿಂದವೆಂಬುದನ್ನು ನಮ್ಮವರೇಕೋ ತಿಳಿಯುತ್ತಿಲ್ಲ. ನಾನು ಇಷ್ಟೇಲ್ಲಾ ಬೊಗಳೆ ಹಾಕಿದಮೇಲೆ ವಿಷಯಕ್ಕೆ ಬರುತ್ತೇನೆ. ಒಂದು ಊರು ಅಥವಾ ಒಂದು ತಾಲ್ಲೂಕು, ಅಥವಾ ಒಂದು ಜಿಲ್ಲೆಯ ಅಭಿವೃದ್ದಿಯಾಗಬೇಕಾದರೇ ಏನು ಮಾಡಬೇಕು? ಅದಕ್ಕೆ ನನ್ನಲ್ಲಿ ಬಹಳ ದಿನಗಳ ಹಿಂದೆ ಹುಟ್ಟಿ ಈಗ ಒಂದು ರೂಪು ಪಡೆಯುತ್ತಿರುವ ಉತ್ತರೆವಿದೆ. ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.

ಹೀಗೊಮ್ಮೆ ಮಾಡ ಹೊರಟರೆ ಹೇಗೆ?
ನಮ್ಮ ಸಮಾಜದ ಬಹುತೇಕ ಮಂದಿ ಸದಾ ಸರ್ಕಾರವನ್ನು ವ್ಯವಸ್ಥೆಯನ್ನು ದೂರುತ್ತಾ ಅನ್ಯಮನಸ್ಕರಾಗಿ ಜೀವನ ಸಾಗಿಸುತ್ತಿದ್ದೇವೆ. ಆಗುವುದಕ್ಕೆಲ್ಲಾ ಶನೀಶ್ವರನೇ ಕಾರಣವೆಂಬುದು ಸಮಂಜಸವಲ್ಲ. ಆ ನಿಟ್ಟಿನಲ್ಲಿ ಒಮ್ಮೆ ವಿಭಿನ್ನವಾಗಿ ಆಲೋಚಿಸಿ ಅದನ್ನು ಕಾರ್ಯರೂಪಕ್ಕೆ ತಂದರೇ ಆಗುವ ಅನುಕೂಲತೆಗಳೇನು? ಅನುಕೂಲತೆವಿಲ್ಲವೆಂದರೂ ಅನಾನೂಕೂಲತೆಗಳಿಲ್ಲವೆಂಬುದು ನನ್ನ ಅನಿಸಿಕೆ. ನಾವು ಒಂದು ದಿನ ಹೀಗೆ ಆಲೋಚಿಸಬಾರದೇ? ನಾನೊಬ್ಬ ವ್ಯಕ್ತಿಗತವಾಗಿ ಯೋಚಿಸಿದರೇ, ನಾನು ದಿನದಲ್ಲಿ ಕಚೇರಿಯಲ್ಲಿ ಎಂಟುಗಂಟೆಗಳ ಕಾಲ ಕೆಲಸ ಮಾಡುತ್ತೇನೆ, ಮನೆಯಿಂದು ಹೋಗುವುದುಕ್ಕೆ ಬರುವುದಕ್ಕೆ ಹೆಚ್ಚಿನ ನಾಲ್ಕು ಗಂಟೆಗಳು ಬೇಕು, ನಿದ್ದೆಗೆಂದು ಎಂಟು ಗಂಟೆಗಳು ಕಳೆದರೂ, ಇನ್ನೂ ಮೂರರಿಂದ ನಾಲ್ಕು ಗಂಟೆಗಳು ನನ್ನಲ್ಲಿಯೇ ಉಳಿಯುತ್ತದೆ. ಆ ಸಮಯವನ್ನು ಏನು ಮಾಡಬಹುದು? ಅದರಲ್ಲಿ ಕೇವಲ ಒಂದು ಗಂಟೆಯನ್ನು ನಾನು ನನ್ನ ದೇಶ ಸೇವೆಗೆ ಸಲ್ಲಿಸಿದರೇ ಹೇಗೆ? ನಮಗೆ ತಿಳಿದಿರುವಂತೆ ಪ್ರತಿಯೊಬ್ಬನಲ್ಲಿಯೂ ಕಂಪ್ಯೂಟರ್ ಇದೆ, ಇಂಟರ್ನೆಟ್ ಇದೆ, ಮಹಿತಿ ಕಗೆಟಕುತ್ತಿದೆ. ಸಮಾಜದ ಅಭಿವೃದ್ದಿಗೆ ತನ್ನ ದಿನದ ಒಂದು ಗಂಟೆಯನ್ನು ಮನೆಯಿಂದಲೇ ಕೊಡಲು ಸಾಧ್ಯವಿಲ್ಲವೇ? ಮನೆಯಿಂದ ಕಚೇರಿಗೆ ಹೋಗುವಾಗ ಅಥವಾ ಬರುವಾಗ ನೀಡಲಾಗುವುದಿಲ್ಲವೇ? ಸಮಾಜದ ಏಳಿಗೆಗೆ ಮಾಡಬೇಕಿರುವುದೇನು?
ಸಮಾಜದ ಅಭಿವೃದ್ದಿಯಾಗಬೇಕೆಂದರೆ, ಸರ್ವತೋಮುಖ ಅಭಿವೃದ್ದಿ ಮುಖ್ಯವಾಗುತ್ತದೆ. ಎಲ್ಲಾ ಕ್ಷೇತ್ರಗಳು ಮುಖ್ಯವಾಗುತ್ತವೆ. ಉದಾಹರಣೆಗೆ, ಶಿಕ್ಷಣ, ಭಾಷೆ, ಸಂಸ್ಕೃತಿ, ಕಲೆ, ಕೃಷಿ, ಪರಿಸರ, ನೈಸರ್ಗಿಕ ಸಂಪನ್ಮೂಲಗಳ ಬಳಕೆ ಮತ್ತು ನಿರ್ವಹಣೆ, ನೀರು, ಅಂತರ್ಜಲ, ತಾಂತ್ರಿಕತೆ, ವಿಜ್ನಾನ, ನೈತಿಕತೆ, ಆರ್ಥಿಕತೆ, ಸುರಕ್ಷತೆ, ಆರೋಗ್ಯ, ಮಹಿಳಾ ಸಬಲೀಕರಣ, ನೈರ್ಮಲೀಕರಣ, ಕೈಗಾರಿಕೆಗಳು,

ಸರ್ಕಾರ ಈಗಾಗಲೇ ಎಲ್ಲಾ ರಂಗದಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದು, ಅದಕ್ಕಾಗಿಯೇ ಒಂದೊಂದು ಇಲಾಖೆಗಳು, ಅಧಿಕಾರಿ ವರ್ಗಗಳು ಇವೆ. ಆದರೇ ಇವರೆಲ್ಲರೂ ಸರ್ಕಾರದಿಂದ ಬರುವ ಹಣವನ್ನು ಅಭಿವೃದ್ದಿಗಾಗಿ ಸದುಪಯೋಗಪಡಿಸುತ್ತಿದ್ದಾರೆಯೇ? ಸರ್ಕಾರ ಮಾಡುವ ಎಲ್ಲಾ ಯೋಜನೆಗಳು ಜನಸಾಮಾನ್ಯರಿಗೆ ಸೇರುತ್ತಿವೆಯೇ?ಒಂದೊಂದು ಇಲಾಖೆಗಳು ಕೋಟ್ಯಾಂತರ ರೂಪಾಯಿಗಳಷ್ಟು ಹಣವನ್ನು ವ್ಯಯಿಸುತ್ತಿವೆ, ಆದರೇ ಅಭಿವೃದ್ದಿಯನ್ನು ಗಮನಿಸಿದರೇ ಮಾತ್ರ ಶೂನ್ಯ. ಬಂದ ಹಣವೆಲ್ಲಾ ಪೋಲಾದದ್ದು ಎಲ್ಲಿ? ಇಲ್ಲಿ ಯಾವುದೇ ತಾರತಮ್ಯ ಮಾಡದೇ ಒಂದೇ ಒಂದು ತಾಲ್ಲೂಕನ್ನು ತೆಗೆದುಕೊಂಡು ಅದನ್ನು ಮಾದರಿಯನ್ನಾಗಿಸಲು ಮಾಡಬೇಕಿರುವ ನಿಟ್ಟಿನಲ್ಲಿ ನಾವೇಕೆ ಚಿಂತಿಸಬಾರದು? ಚಿಂತಿಸಿದರೇ ಬರುವ ಲಾಭವೇನು? ಚಿಂತನೆಯಿಂದ ದೇಶದ ಉದ್ದಾರ ಸಾಧ್ಯವಿದೆ.

ನಮ್ಮಲ್ಲಿ ಪ್ರತಿಭೆಯಿರುವ ದೇಶದ ಅಭಿವೃದ್ದಿಯ ಬಗೆಗೆ ಕನಸುಗಳನ್ನು ಕಾಣುತ್ತಿರುವ ಕಂಡಿರುವ ಅನೇಕರಿದ್ದಾರೆ. ಅವರೆಲ್ಲರ ಕನಸುಗಳನ್ನು ಒಂದೆಡೆಗೆ ತಂದು ಸಾಕಾರಗೊಳಿಸುವ ಪ್ರಯತ್ನವೇ ಹೀಗೊಮ್ಮೆ ಮಾಡಿದರೆ ಹೇಗೆ? ಯಾರು ದೈಹಿಕವಾಗಿ ನಮ್ಮೊಂದಿಗೆ ಇರಬೇಕಾದದ್ದು ಇಲ್ಲ, ಇರುವಲ್ಲಿಯೇ ಕುಳಿತು, ಅವರು ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಂಡರೇ ಸಾಕು. ಒಂದೊಂದು ವಿಷಯಗಳಿಗೂ ಒಂದೊಂದು ಯೋಜನೆಗಳನ್ನು ರೂಪಿಸಿ, ಒಟ್ಟಾರೆ ಯೋಜನೆಗೆ ತೆಗಳುವ ವೆಚ್ಚವನ್ನು ಸಿದ್ದಪಡಿಸುವುದು ನಮ್ಮ ಗುರಿ. ಉದಾ:ಗೆ ವಿಜ್ನಾನ ಶಿಕ್ಷಣವನ್ನು ಮಕ್ಕಳಿಗೆ ತಲುಪಿಸುವ ಬಗೆ ಹೇಗೆ? ಒಬ್ಬೊಬ್ಬ ವಿದ್ಯಾರ್ಥಿ ಒಂದೊಂದು ವಿಷಯದಲ್ಲಿ, ಅಥವಾ ಒಂದೊಂದು ವಸ್ತುವಿನ ಬಗ್ಗೆ ಆಸಕ್ತಿ ಹೊಂದಿರುತ್ತಾನೆ. ಭೌತಶಾಸ್ತ್ರದ ಬಗ್ಗೆ ಆಸಕ್ತಿಯಿರುವ ವಿದ್ಯಾರ್ಥಿಗಳನ್ನು ಒಂದೆಡೆಗೆ ಕೂಡಿಸಿ, ಅದೇ ವಿಷಯದಲ್ಲಿ ಸಂಶೋಧನೆ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅವರಿಗೆ ಹೆಚ್ಚಿನ ಜ್ನಾನ ಒದಗಿಸಿಕೊಡಬಹುದು. ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಮಕ್ಕಳಿಗೆ ಇಂದಿನಿಂದಲೇ ಜಾಗೃತಿ ಮೂಡಿಸಿದರೇ ಮುಂದಿನ ಭಾರತ ಪ್ರಜ್ವಲಿಸುವುದು.

ರೈತರಿಗೆ, ಮಾದರಿ ರೈತರನ್ನು ಕರೆಸಿ ತರಬೇತಿ ನೀಡುವುದರಿಂದ ಅವರ ಅನುಭವಕ್ಕೆ ಬರುವುದು. ಅತಿ ಹೆಚ್ಚು ಹಾಳಾದ ಪರಿಸರವನ್ನು ಇಲ್ಲಿನ ರೈತರಿಗೆ ತೋರಿಸಿದರೇ ಅವರೇ ಎಚ್ಚೆತ್ತುಕೊಳ್ಳೂತ್ತಾರೆ. ರೈತ ಭೂಮಿಯನ್ನು ಪ್ರೀತಿಸುವಂತಾಗಬೇಕು. ಭೂಮಿ ಒಂದು ವಸ್ತುವೆಂಬುದನ್ನು ಮರೆತು ಅದು ನಮ್ಮೊಳಗಿರುವ ನಮ್ಮದೇ ಉಸಿರೆಂಬುದನ್ನು ಅರ್ಥೈಸಿಕೊಳ್ಳಬೇಕು.
ಗ್ರಾಮೀಣ ಪ್ರದೇಶದ ಜನರು ಪಟ್ಟಣಗಳಿಗೆ ವಲಸೆ ಹೋಗುವುದನ್ನು ತಡೆಯಬೇಕು. ನದಿ ಕೊಳ್ಳದ ಬಹುತೇಕ ಜನರು, ಮರಳು ತೆಗೆಯುವುದನ್ನು ನಿತ್ಯ ದುಡಿಮೆಯಾಗಿಸಿಕೊಂಡಿದ್ದಾರೆ, ಅದರಿಂದಾಗುವ ಪ್ರತಿಯೊಂದು ದುಷ್ಪರಿಣಾಮಗಳನ್ನು ಚಿತ್ರಗಳ ಮೂಲಕ ಅಥವಾ ಸಿನೆಮಾಗಳ ಮೂಲಕ ತಿಳಿಸಬೇಕು. ವಿದ್ಯಾವಂತ ಸಮಾಜ ಎಚ್ಚೆತ್ತಿಕೊಳ್ಳಬೇಕು, ನಾವು ದುಡಿಯುವುದು, ಕುಡಿಯುವುದು, ಕುಣಿಯುವುದೇ ಬದುಕೆಂಬ ಭ್ರಮೆಯಿಂದ ಹೊರಗೆ ಬರಬೇಕು. ಕೆಲವೊಂದು ಖಾಸಗಿ ಕಂಪನಿಗಳು ಅದೆಷ್ಟರ ಮಟ್ಟಿಗೆ ತಪ್ಪುಗಳನ್ನು ಮಾಡುತ್ತಿದ್ದಾರೆಂದರೇ, ಅರ್ಹ ಅಭ್ಯರ್ಥಿಗಳಿದ್ದರೂ ಅನರ್ಹರನ್ನೇ ತುಂಬಿಕೊಂಡು ದೊಂಬರಾಟ ನಡೆಸುತ್ತಿದ್ದಾರೆ. ಅನೈತಿಕತೆಯ ಪರಮಾವಧಿ ತಲುಪಿರುವ ಮಂದಿ ಸ್ವಲ್ಪ ಆಲೋಚಿಸಬೇಕಾಗಿದೆ.

10 ಜನವರಿ 2011

ಸಿಇಇಕೊ ಹುಟ್ಟಿನ ಹಿಂದೆ!!!

ನಾನು ಮತ್ತು ನನ್ನ ಅನೇಕಾ ಸ್ನೇಹಿತರು ಸಮಾಜದ ಬಗ್ಗೆ ನಮ್ಮ ವ್ಯವಸ್ಥೆಯ ಬಗ್ಗೆ ಆಗ್ಗಾಗ್ಗೆ ಮಾತನಾಡಿಕೊಳ್ಳುತ್ತಿದ್ದೆವು. ಉಗಿಯುತ್ತಿದ್ದೆವು, ಬೈಯ್ದುಕೊಳ್ಳುತ್ತಿದ್ದೆವು, ಕ್ರಮೇಣ ನಮ್ಮ ದೇಶದ ಬಗೆಗೆ ನಮಗಿರುವ ಅಭಿಮಾನ ಒಂದು ಕಡೆಗೆ, ನಿಸರ್ಗದೆಡೆಗಿರುವ ಒಲವು ಮತ್ತೊಂದು ಕಡೆಗೆ ಆದರೂ ಈ ರಾಜಕಾರಣಿಗಳು, ಸರ್ಕಾರಿ ಉದ್ಯೋಗಿಗಳು ಸಮಾಜದೆಡೆಗೆ ತೋರುವ ನಿರಾಸಕ್ತಿ ನಮಗೆ ಬಹಳಷ್ಟು ಬಾರಿ ನೋವುಂಟುಮಾಡಿದೆ. ನಮ್ಮ ವಿವಿಗಳಲ್ಲಿ ಲಕ್ಷಾಂತರ ರೂಪಾಯಿಗಳಷ್ಟು ಸಂಬಳ ಪಡೆದು, ಮೂರು ಕಾಸಿನ ಕೆಲಸವನ್ನು ಮಾಡದೆ, ಸದಾ ಜಾತಿ ರಾಜಕಾರಣ ಮಾಡುತ್ತ, ಸಹದ್ಯೋಗಿಗಳ ವಿರುದ್ದ ಕತ್ತಿ ಮಸೆಯುತ್ತಾ ಇರುವ ಹೊಟ್ಟೆಬಾಕರನ್ನು ಕಂಡು ಅಸಹ್ಯ ಹುಟ್ಟುವ ಸಮಯದಲ್ಲಿ ಮನಸ್ಸಿಗೆ ಮೂಡಿ ಬಂದದ್ದು ಇದಕ್ಕೆಲ್ಲ ಕಾರಣವೇನು? ಪರಿಹಾರವೇನು?
ಸದಾ ಸಮಸ್ಯೆಯನ್ನೇ ಉತ್ಪ್ರೇಕ್ಷೆಯಿಂದ ನೋಡುವ ಪತ್ರಕರ್ತ ಸಮಾಜ, ಸಣ್ಣ ಪುಟ್ಟ ಸಮಸ್ಯೆಗಳನ್ನು ದೊಡ್ಡದಾಗಿ ಬಿಂಬಿಸಿ ಕೆಲಸ ಮಾಡದೆ ದಿನಕ್ಕೆ ಆರು ಬಾರಿ ಟೀ ಕುಡಿದು ರಾಜಕೀಯ ಮಾತನಾಡುತ್ತ ಬರುವ ಸರ್ಕಾರಿ ನೌಕರರನ್ನು ಮರೆತು, ನಾವುಗಳೇ ಒಂದು ಸುಂದರ ಸಮಾಜ ಕಟ್ಟುವ ಕನಸ್ಸನ್ನು ಕಾಣುವುದರಲ್ಲಿ ತಪ್ಪೇನು? ಸುತ್ತಲೂ ಶತ್ರುಗಳಿರುವಾಗ ಎತ್ತ ಕಡೆಗೆ ಗುಂಡು ಹಾರಿಸಿದರೂ ಶತ್ರು ಸಾಯುತ್ತಾನೆ. ಹಾಗೇಯೇ, ನಮ್ಮ ದೇಶಕ್ಕೆ ಎಲ್ಲವೂ ಸಮಸ್ಯೆಯಂತೆಯೇ ಆಗಿ, ಸಮಸ್ಯೆಯ ಭಾರತವಾಗಿರುವಾಗ ಯಾವ ಸಮಸ್ಯೆ ಬಗೆಹರಿದರೂ ಸಂತಸದ ವಿಷಯ. ಈ ಶತಮಾನದ ಸಮಸ್ಯೆಗಳಲ್ಲಿ ಬಹುಮುಖ್ಯವಾದವುಗಳೆಂದರೆ ಪರಿಸರ ಜಾಗೃತಿ, ನೀರಿನ ಸಮಸ್ಯೆ, ಆರೋಗ್ಯ, ಶಿಕ್ಷಣ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ನಿಟ್ಟಿನಲ್ಲಿ ಶುರುವಾದದ್ದು, ಸೆಂಟರ್ ಫಾರ್ ಎನ್ವಿರಾನ್ ಮೆಂಟ್, ಆಂಡ್ ಕಮ್ಯುನಿಟಿ (ಸಿಇಇಕೊ), ಬಾನುಗೊಂದಿಯಲ್ಲಿ ಇದರ ಪ್ರಧಾನ ಕಛೇರಿಯಿದೆ. ಸಂಸ್ಥೆಯು ಸಾರ್ವಜನಿಕ ದತ್ತಿಯಾಗಿ ನೋಂದಾಯಿಸಲ್ಪಟ್ಟಿದೆ.
ಸಂಸ್ಥೆಯು ಸದ್ಯದಲ್ಲಿ ಜಲಸಂಪನ್ಮೂಲಗಳ ಅಭಿವೃದ್ದಿ ಮತ್ತು ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮನ್ನು ನಡೆಸುತ್ತಿದೆ. ಪ್ರಾರ್ಥಮಿಕವಾಗಿ ಅರಕಲಗೂಡು ತಾಲ್ಲೂಕಿನ ಶಾಲೆಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ನೀರು, ಪರಿಸರದ ಬಗ್ಗೆ ಹೆಚ್ಚಿನ ವಿಷಯವನ್ನು ತಿಳಿದುಕೊಂಡಿದ್ದರು ಅದು ಪರೀಕ್ಷೆಯ ಉದ್ದೇಶದಿಂದ ತಿಳಿದುಕೊಂಡಿದ್ದಾರೆ. ಅವರ ಆ ಜ್ನಾನವನ್ನು ಕಾರ್ಯರೂಪಕ್ಕೆ ತರುವುದು ನಮ್ಮೆಲ್ಲರ ಕರ್ತವ್ಯ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ, ಎಲ್ಲಾ ವಿದ್ಯಾರ್ಥಿಗಳು, ನೀರಿನ ಲಭ್ಯತೆಯ ಬಗ್ಗೆ ಅಂಕಿ ಅಂಶಗಳನ್ನು ನಮ್ಮ ಮುಂದಿಟ್ಟರು. ನೀರಿನ ಮಹತ್ವ, ಸಂರಕ್ಷಣೆಯ ವಿಧಾನಗಳು, ಕಲುಷಿತ ನೀರಿನಿಂದಾಗು ಪರಿಣಾಮಗಳು, ಶುದ್ದಿಕರಣ, ಮಳೆ ನೀರು ಕೊಯ್ಲು, ಅಂತರ್ಜಲ ಹೆಚ್ಚಿಸುವುದು, ಅಮೆಜಾನ್ ನದಿಯಿಂದ ಹಿಡಿದು ಪಕ್ಕದಲ್ಲಿಯೇ ಹರಿಯುವ ನದಿಗಳ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಂಡಿರುವುದು ನಮಗೆ ಹೆಮ್ಮೆಯ ವಿಷಯ. ಸರ್ಕಾರಿ ಶಾಲೆಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಬರುತ್ತಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ, ಶಿಕ್ಷಕರು ಎಡವಿದ್ದಾರೆ. ಜಲ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಿ, ಸಂರಕ್ಷಣೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರೆ, ಮುಂದಿನ ಪೀಳಿಗೆ ನೀರಿನ ಬಗ್ಗೆ ತಾತ್ಸಾರ ತೋರುವುದಿಲ್ಲವೆಂಬುದು ನನ್ನ ಅನಿಸಿಕೆ.

15 ಡಿಸೆಂಬರ್ 2010

ಹೊಲಸು ಸಂಗತಿಗೆ ಹೊಲಸು ಮಾಡಿಕೊಳ್ಳಲೇ ಬೇಕು!!

ಕಳೆದ ಒಂದೆರಡು ತಿಂಗಳಿನಿಂದ ಥೀಸೀಸ್ ಥೀಸೀಸ್ ಅಂತಾ ಎಲ್ಲರಿಗೂ ಹೇಳಿಕೊಂಡು, ಬರೆಯುವುದನ್ನು, ಹೆಚ್ಚು ಮಾತನಾಡುವುದನ್ನು ನಿಲ್ಲಿಸಿಬಿಟ್ಟಿದ್ದೆ. ಆದರೂ ಆಗೊಮ್ಮೆ ಈಗೊಮ್ಮೆ ಬಾಯಿ ಚಪಲಕ್ಕೆ ಮಾತನಾಡಿ ಥೂ ಈ ವ್ಯವಸ್ಥೆಯ ಬಗ್ಗೆ ಎಷ್ಟು ಮಾತನಾಡಿದರೂ ಉಪಯೋಗವಿಲ್ಲವೆಂದು ಬಾಯಿ ತೊಳೆದುಕೊಂಡು ಮಲಗುತ್ತಿದ್ದೆ. ಎಲ್ಲರ ಬಾಯಿಯಲ್ಲಿಯೂ ನಮ್ಮ ವ್ಯವಸ್ಥೆ ನಮ್ಮ ರಾಜಕಾರಣಿಗಳ ಬಗ್ಗೆ ಮಾತನಾಡುವುದನ್ನು ಬಿಟ್ಟರೇ ಮಿಕ್ಕಾವ ವಿಷಯಗಳು ಸಿಗಲೇ ಇಲ್ಲ. ಆದರೂ, ರಾಜಕಾರಣಿಗಳಿಗಿಂತ ನಾವೇನು ಕಮ್ಮಿಯಿಲ್ಲ ಬಿಡಿ. ಅವರಂತೂ ತೀರ್ಮಾನಿಸಿ ಬಿಟ್ಟಿದ್ದಾರೆ ನಾವಿರುವುದೇ ಹೀಗೆ ಎಂದು, ಆದರೇ ಮತದಾರ ಪ್ರಭು ಏನು ಮಾಡುತಿದ್ದಾನೆ. ಉಪೇಂದ್ರ ಸೂಪರ್ ಸಿನೆಮಾದಲ್ಲಿ ಹೇಳುವಂತೆ ನಾವು ಸತ್ತ ಪ್ರಜೆಗಳಾಗಿದ್ದೇವೆ ಎನಿಸುತ್ತದೆ. ಇದರ ವಿರುದ್ದ ದನಿಯೆತ್ತಲಾರದೇ? ಒಬ್ಬ ಮತದಾರನಾಗಿ, ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಏನು ಮಾಡಬಹುದೆಂಬುದು ನಮ್ಮೆಲ್ಲರ ಪ್ರಶ್ನೆ. ಆದರೇ, ಈ ಬುದ್ದಿಜೀವಿಗಳೆನಿಸಿಕೊಂಡವರು, ಧಾರ್ಮಿಕ ಗುರುವೆನಿಸಿಕೊಂಡು ಉಂಡು ಹೊಟ್ಟೆ ಬೆಳೆಸಿಕೊಂಡಿರುವ ಸ್ವಾಮೀಜಿಗಳು ಬೀದಿಗಿಳಿದು ರಂಪಾಟಮಾಡಿಬಿಟ್ಟರಲ್ಲ. ಅದು ನಮ್ಮ ವ್ಯವಸ್ಥೆಯ ಅಧೋಗತಿಗೆ ಹಿಡಿದ ಕನ್ನಡಿ. ಆರು ಕೊಟ್ಟರೆ ಅತ್ತೆಯ ಕಡೆಗೆ ಮೂರು ಕೊಟ್ಟರೆ ಮಾವನ ಕಡೆಗೆ ಎನ್ನುವ ಜಾತಿಯವರೆಂದರೂ ತಪ್ಪಿಲ್ಲ. ರಾಜ್ಯವನ್ನೇ ಲೂಟಿ ಮಾಡಿದರೂ ಸರಿಯೇ ನಮಗೆ ನಮ್ಮ ಮಠಕ್ಕೆ ಹಣಕೊಡುವವರು ಅಧಿಕಾರದಲ್ಲಿದ್ದರೇ ಸಾಕೆಂಬುದು ಇವರ ಅನಿಸಿಕೆ ಮತ್ತು ಕಡ್ಡಾಯವೆನಿಸಿದ ತಿರ್ಮಾನ.

ಅವಿದ್ಯಾವಂತ ಪ್ರಜೆಗಳು ಸುಮ್ಮನಿರಲಿ, ಕೆಲಸಕ್ಕೆ ಬಾರದ ನನ್ನಂಥವರು ಸುಮ್ಮನಿರಲಿ, ಆದರೇ ರಾಜ್ಯಕ್ಕೆ ನ್ಯಾಯ ಕೊಡುವ, ಕೊಡಿಸುವ, ನ್ಯಾಯಾಧೀಶರು, ವಕೀಲರು, ನ್ಯಾಯಮೂರ್ತಿಗಳು ಜನರಿಗೆ ಸೂಕ್ತ ಪರಿಹಾರ ಕೊಡಬಾರದೇ? ಸಂವಿಧಾನದಲ್ಲಿರುವ ಸಲಹೆಗಳನ್ನು ಜನರ ಮುಂದಿಡಬಾರದೇ? ಜನ ಹಿತಾಸಕ್ತಿ ಅರ್ಜಿಯನ್ನಾದರೂ ಹಾಕಬಾರದೇ? ಬೀದಿ ನಾಯಿಗಳ ಉಳಿವಿಗೆ ಹೋರಾಡುವ ಸಂಘಸಂಸ್ಥೆಗಳು, ಪ್ಲಾಸ್ಟಿಕ್ ಬಳಕೆಯ ವಿರುದ್ದ ಹೋರಾಡಲು ಬರುವ ಸಂಸ್ಥೆಗಳು, ಹಿಜಡಗಳ ನ್ಯಾಯಕ್ಕೆ, ಸಲಿಂಗ ಕಾಮಕ್ಕೆ ಒತ್ತುಕೊಡಲು ಬೀದಿಗಿಳಿಯುವ ನಾಯಕರುಗಳು, ಮದುವೆಗೆ ಮುನ್ನಾ ಲಿವಿಂಗ್ ಟುಗೆದರ್ ಬಗ್ಗೆ ಬೀದಿಗಿಳಿಯುವ ನಟೀ ಮಣಿಗಳು, ಕನ್ನಡ ಉಚ್ಚಾರಣೆ ಬಾರದೇ ಇದ್ದರೂ ಕನ್ನಡ ಸಂಘ ಕಟ್ಟಿ ಹೋರಾಡುವ ಸಂಘಗಳು, ಹತ್ತು ರೂಪಾಯಿ ಶುಲ್ಕ ಹೆಚ್ಚಿಸಿದಾಗ ಬಂದ್ ನಡೆಸುವ, ನಡೆಸಿ ಬಸ್ ಗೆ ಬೆಂಕಿ ಹಚ್ಚುವ ವಿದ್ಯಾರ್ಥಿ ಸಂಘಗಳು, ಭೈರಪ್ಪ ಕನ್ನಡಿಗರ ವಿರುದ್ದ ಮಾತನಾಡಿದಾಗ ಹೋರಾಡುವ ಸಂಘಸಂಸ್ಥೆಗಳು, ಉಪೇಂದ್ರನ ಸಿನೆಮಾ ರಿಲೀಸ್ ಆದಾಗ ದಿನ ಮುಂಚಿತವಾಗಿ ನಿಂತು ಟಿಕೇಟ್ ತೆಗೆಯಲು ಬಟ್ಟೆ ಹರಿದುಕೊಳ್ಳುವ ಯುವಶಕ್ತಿ, ಕುವೆಂಪು ಯಾರೆಂಬುದು ಗೊತ್ತಿಲ್ಲದೇ ಇದ್ದರೂ ಅವರ ಫೋಟೋ ಹಿಂದಿಟ್ಟುಕೊಂಡು ಆರ್ಕೇಷ್ಟ್ರಾ ನಡೆಸುವ ಯುವಕ ಮಂಡಳಿಗಳು, ಸಂಬಳ ಹೆಚ್ಚಿಸಲು ಬಂದ್ ಮಾಡುವ ಸರ್ಕಾರಿ ನೌಕರರು, ನಾವು ದೇಶದವರೇ ಅಲ್ಲಾ ಎಂದು ತೀರ್ಮಾನಿಸಿರುವ ಐಟಿ ಬಿಟಿಯವರ ಬಗ್ಗೆ ಮಾತನಾಡಬೇಕಾದ್ದದ್ದು ಇಲ್ಲ ಬಿಡಿ. ಅವರು ಮತ ಹಾಕುವುದು ಇಲ್ಲ ಕೇಳುವ ಗೋಜಿಗೂ ಹೋಗುವುದಿಲ್ಲ.

ಒಂದು ದೇಶ ಚೆನ್ನಾಗಿದ್ದರೇ ನಾವೆಲ್ಲರೂ ಚೆನ್ನಾಗಿರುತ್ತೇವೆಂಬ ಸಾಮಾನ್ಯ ಕಾಳಜಿ ನಮ್ಮಲ್ಲಿ ಇಲ್ಲದ್ದಾಯಿತು. ವಿಧಾನಸೌಧದಲ್ಲಿ, ಬಟ್ಟೆ ಹರಿದುಕೊಂಡು ಕೂಗಾಡುವವರನ್ನು, ಅಮ್ಮನ್ ಅವ್ವನ್ ಎಂದು ಬೈಯ್ದಾಡುವವರನ್ನು ಪದೇ ಪದೇ ತೋರಿಸುವ ಟಿವಿ ಚಾನೆಲ್ ಗಳು, ದೇಶ ಎತ್ತ ಹೋದರೇನು ಎಂದು ತಮ್ಮ ಪಾಡಿಗೆ ತಾವು ಕಂಗ್ಲೀಶ್ ಆಡುವ ಟಿವಿ, ರೇಡಿಯೋ ನಿರೂಪಕರು, ಆಗಿದ್ದನ್ನು ಚರ್ಚಿಸಲು ಪದೇ ಪದೇ ಅದೇ ಹಳೇ ಹಳಸಲು ಮೊಗದ ರಾಜಕಾರಣಿಗಳನ್ನು ತಂದು ಚರ್ಚೆ ಮಾಡುವ ಟಿವಿ ಚಾನೆಲ್ ಗಳು, ದಿನ ಪತ್ರಿಕೆಗಳು. ಒಂದು ಪ್ರಗತಿಪರ ವೇದಿಕೆ ಬಿಟ್ಟರೇ ಮಿಕ್ಕಾವ ಪತ್ರಕರ್ತರಾಗಲೀ, ಸಾಮಾನ್ಯ ಮನುಷ್ಯನಾಗಲೀ ಉಸಿರೆತ್ತಾಲಿಲ್ಲ. ಎಲ್ಲರೂ ನಮ್ಮ ರಾಜ್ಯವನ್ನು ಹಾಳು ಮಾಡುತ್ತಿರುವುದನ್ನು ಮನೋರಂಜನೆಯೆಂಬಂತೆ ಆನಂದಿಸಿದರು. ಯಡ್ಯೂರಪ್ಪ ಕದ್ದಿರುವುದು, ದೋಚಿರುವುದು ನಮ್ಮ ಹಣ, ನಮ್ಮ ಆಸ್ತಿಯೆಂಬುದು ಯಾರೊಬ್ಬನ ಬಾಯಿಯಲ್ಲಿಯೂ ಬರಲಿಲ್ಲ.

ಕುಮಾರಸ್ವಾಮಿ ಹೀರೋ ಎಂಬಂತೆ, ವರ್ತಿಸಿದ್ದರೂ, ನ್ಯಾಯಾಂಗ ಹೋರಾಟಕ್ಕೆ ಮುಂದುವರೆಯಲಿಲ್ಲ. ಜನರ ಮುಂದೆ, ಟಿವಿಗಳ ಮುಂದೆ ಆಧಾರಗಳು ಕೊಟ್ಟರೇ ನ್ಯಾಯಾಂಗ ವ್ಯವಸ್ಥೆಯೆಂಬುದಕ್ಕೆ ಅರ್ಥವಿಲ್ಲವೇ? ಅವರು ನಿಜವಾದ ನಾಯಕನೇ ಆಗಿದ್ದರೇ, ಕೊರ್ಟ್ ಗೆ ಅರ್ಜಿ ಹಾಕಿ ಇದರ ವಿರುದ್ದ ಹೋರಾಡಬಹುದಿತ್ತಲ್ಲವೆ? ಜನರು ಸರ್ಕಾರ ನಮ್ಮದು ಎಂದು ಭಾವಿಸಿಲ್ಲ, ಸರ್ಕಾರವೂ, ತಾನಿರುವುದು ಜನರಿಗೆಂದು ಭಾವಿಸುವುದಿಲ್ಲ. ಚುನಾವಣೆಯೆಂಬುದು ಒಂದು ಕ್ರಿಯೆಯಾಗಿದೆ. ಮಳೆಗಾಲ, ಚಳಿಗಾಲ, ಬೇಸಿಗೆಯಂತೆಯೇ, ಚುನಾವಣೆ ಬಿಸಿ ಬರುತ್ತದೆ, ಪುಂಡ ಪೋಕರಿಗಳು, ಕುಡಿದು ಹಣ ತೆಗೆದುಕೊಂಡು ತಮ್ಮನ್ನು ತಾವು ಮಾರಿಕೊಳ್ಳುತ್ತಾರೆ. ಸಭ್ಯ ಜನತೆ ಮತ ಹಾಕುವುದರಿಂದ ಹಿಂದುಳಿಯುತ್ತಾರೆ. ಮತ್ತೆ ಅದೇ ಹೊಲಸು ಮುಖಗಳು ಕುರ್ಚಿ ಎಸೆದು ಗುದ್ದಾಡುತ್ತವೆ. ದೇವ ಮಂದಿರದಂತಹ ವಿಧಾನಸೌಧದ ಹೆಬ್ಬಾಗಿಳಿಗೆ ಒದೆಯುತ್ತಾರೆ, ಜನರನ್ನು ಕುರಿಗಳಂತೆ ಬಲಿಕೊಡುತ್ತಾರೆ. ಇದು ಹೀಗೆ ಮುಂದುವರೆಯಲಿ. ಜೈ ಕರ್ನಾಟಕ ಮಾತೆ.

26 ಅಕ್ಟೋಬರ್ 2010

ನಶಿಸುತ್ತಿರುವ ಸಾಮಾಜಿಕ ಪ್ರಜ್ನೆ...!!!

ನಾನು ಮೊದಲೇ ಹೇಳಿದಂತೆ ರೈಲಿನಲ್ಲಿ ಮೈಸೂರಿಗೆ ಹೋಗಿ ಬರುವುದು ವಾಡಿಕೆಯಾಗಿದೆ. ಅದರಂತೆಯೇ ನಿನ್ನೆಯೂ ಹೋಗಿದ್ದೆ. ಇತ್ತೀಚೆಗೆ ಬಸ್ಸಿನ ದರ ಹೆಚ್ಚಾಗಿರುವುದರಿಂದ ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಿದೆ. ಮುಂಜಾನೆ ಐದು ಗಂಟೆಯ ರೈಲಿಗೂ ಬಹಳ ಜನರು ಬರುತ್ತಾರೆ. ಅದರಲ್ಲಿಯೂ ಕೆಂಗೇರಿ ರೈಲ್ವೇ ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆಯಾದ ಮೇಲಂತೂ ಪ್ರಯಾಣಿಕರ ಸಂಖ್ಯೆ ಅತಿಯಾಗಿ ಹೋಗಿದೆ. ನಾನು ಕಾವೇರಿ ಎಕ್ಷಪ್ರೆಸ್ ನಲ್ಲಿ ಹತ್ತಿ, ಮೇಲಿನ ಬರ್ತನಲ್ಲಿ ಮಲಗಿದೆ. ಕೇವಲ ಅರ್ಧ ಗಂಟೆಯಾಗಿರಬಹುದು. ಕೆಳಗಡೆ ಮಲಗಿದ್ದ ಒಬ್ಬ ಮಧ್ಯ ವಯಸ್ಸಿನ ಮಹಿಳೆ ಮತ್ತು ಗಂಡಸು ಅವರ ಕುಶೋಲೊಪರಿ ಶುರು ಮಾಡಿದರು. ನಾನಂತೂ ಮನೆ ಮಂದಿ ಪ್ರಯಾಣಿಸುವಾಗ ಮಾಡುವ ಕಿರಿಕಿರಿಯನ್ನು ಅನುಭವಿಸಿ ಬೇಸತ್ತಿದ್ದೇನೆ. ಮನೆಯಲ್ಲಿರುವಾಗೆಲ್ಲ ಟಿವಿ ರಿಮೋಟ್ ಹಿಡಿದು ಸಮಯ ವ್ಯರ್ಥ ಮಾಡುತ್ತಾರೆ. ಹೊರಗಡೆ ಬಸ್ಸಿಗೋ, ರೈಲಿಗೋ ಬಂದಾಗ ಮಾತ್ರ ಅಪರೂಪಕ್ಕೆ ಭೇಟಿಯಾದವರಂತೆ ಮಾತನಾಡುತ್ತಾರೆ. ನಿನ್ನೆ ಆದದ್ದೂ ಅದೇ. ಐದು ಮುಕ್ಕಾಲರ ಸಮಯಕ್ಕೆ ಹೆಂಗಸು ಕಾಫಿ ಬೇಕೆಂದು ಕೇಳಿ, ಸೈಡಿನ ಸೀಟಿಗೆ ಹೋಗಿ ಕುಳಿತರು. ಅವರು ಕಿಟಕಿ ತೆಗೆದದ್ದು, ಗಾಳಿ ಹೆಚ್ಚಾದ್ದರಿಂದ ಚಳಿಯಾಗತೊಡಗಿತ್ತು. ಅವರು ಮೈತುಂಬಾ ಸ್ವೆಟರ್, ಹಾಕಿ ತಲೆಗೆಲ್ಲಾ ಮಂಫ್ಲರ್ ಸುತ್ತಿಕೊಂಡಿದ್ದರಿಂದ ಬೆಳಗಿನ ತಂಗಾಳಿಯನ್ನು ಸೈವಿಯುತ್ತಿದ್ದರು, ನಾನು ಹಾಗೆಯೇ ಹೋಗಿದ್ದರಿಂದ ಸವೆಯುತ್ತಿದ್ದೆ. ಗಂಡನಿಗೆ ಏನಾಯಿತೋ ಏನೋ, ದಿಡೀರನೇ ಎದ್ದು ಬಾ ಇಲ್ಲಿಯೇ ಕುಳಿತುಕೊಳ್ಳೋಣವೆಂದು ಎದುರಿನ ಸೀಟಿಗೆ ಕರೆದನು. ಅದರಿಂದಾಗಿ, ನನ್ನ ಕೆಳಗಿನ ಸೀಟಿನ ಕಿಟಕಿ ತೆಗೆದರು. ನಾನು ಮೇಲಿರುವುದು ಅವರ ಗಮನಕ್ಕೆ ಬರಲಿಲ್ಲ, ಅವರ ಮಾತುಕತೆ ಆರಂಭವಾಯಿತು, ಅದು ರಾಷ್ಟ್ರ‍ೀಯ ಮಟ್ಟದಿಂದ ಹಿಡಿದು, ಅವರ ಮನೆಯ ಶಯನ ಗೃಹದವರೆಗೂ ಹೋಯಿತು.
ಜನರು ಎಲ್ಲಿ ಎಂಥಹ ವಿಷಯಗಳನ್ನು ಮಾತನಾಡಬೇಕೆಂಬುದನ್ನು ಅರಿಯುವುದಿಲ್ಲ. ಬಾಯಿಗೆ ಬಂದದ್ದನ್ನು ಇಚ್ಚಾಪೂರ್ವಕವಾಗಿ ಮಾತನಾಡುತ್ತಾರೆ. ಅದು ರಸಿಕತೆಯೇ ಆದರೂ ನನ್ನಂಥಹ ಪೋಲಿ ಹುಡುಗನಿಗೆ ಮುಂಜಾನೆಯ ಚಳಿಯೊಂದಿಗೆ ಇವರ ಮಾತುಗಳು ಏನನ್ನೋ ನೆನಪಿಸುತ್ತಿದ್ದೆವು. ಮದುವೆಯ ಅನಿವಾರ್ಯತೆ ಕಾಣಿಸುವುದು ಇಂಥಹ ಸಮಯದಲ್ಲಿಯೇ ಎನಿಸುತ್ತದೆ. ಅವರು ನಮ್ಮ ದೇಶದ ಬಗೆಗೆ, ಪಾಪ ಸರ್ಕಾರದ ಬಗೆಗೆ ಕೆಲವು ಅರ್ಥಪೂರ್ಣ ಬೈಗುಳಗಳನ್ನು ಹೇಳಿದರು. ಹಾಗೂ ಹೀಗೂ ಕಣ್ಮುಚ್ಚಿ ಮಲಗಿದೆ. ನನಗೆ ಸಂಜೆ ಪ್ಯಾಸೆಂಜರ್ ರೈಲಿಗೆ ಬರುವ ಮನಸ್ಸಿರಲಿಲ್ಲ. ಆದರೇ ವಿಧಿಯಿಲ್ಲದೇ ಪ್ಯಾಸೆಂಜರ್ ರೈಲಿನಲಿಯೇ ಬಂದು ಕುಳಿತೆ. ರೈಲಿನಲ್ಲಿಯೇ ಆಗಲೀ ಬಸ್ಸಿನಲ್ಲಿಯೇ ಆಗಲೀ ನಾನು ಕಂಡಂತೆ ಜನರು ಅದನ್ನು ಸಾರ್ವಜನಿಕ ವಸ್ತುವೆಂಬುದನ್ನು ಸರಿಯಾಗಿಯೇ ಅರ್ಥ ಮಾಡಿಕೊಂಡಿದ್ದಾರೆ. ಅವರೆಂದೂ ಅದರ ಜವಬ್ದಾರಿ ತೆಗೆದುಕೊಳ್ಳಲು ಬಯಸುವುದಿಲ್ಲ. ಅವರ ಮನೆಯಲ್ಲಿಯೂ ಅಷ್ಟೇ ಕೆಟ್ಟದ್ದಾಗಿ ನಡೆದುಕೊಳ್ಳುತ್ತಾರಾ ಇದು ತರ್ಕಕ್ಕೆ ನಿಲುಕದ್ದು. ನಾನು ಸೀಟು ಹುಡುಕಿಕೊಂಡು ಹೋಗುವಾಗ ಖಾಲಿಯಿದ್ದರೂ ಪಕ್ಕದಲ್ಲಿ ಅವರ ಬ್ಯಾಗುಗಳನ್ನು ಇಟ್ಟುಕೊಳ್ಳುವುದು, ಕಾಲನ್ನು ಎದುರಿನ ಸೀಟಿನ ಮೇಲೆ ಹಾಕಿ ಕುಳಿತುಕೊಳ್ಳುವುದು ಅವರ ಮುಖ ಭಾವವನ್ನು ನೋಡಿದರೇ ಸಾಕು ಅಯ್ಯೋ ಮುಂದಿನ ಮೂರು ಗಂಟೆ ಇವರ ಮುಖ ನೋಡಿ ಪಯಣ ಮಾಡುವುದು ಬೇಡವೆನಿಸುತ್ತದೆ. ಅವರು ನಿಮ್ಮನ್ನು ಸಹ ಪ್ರಯಾಣಿಕರೆಂದು ಭಾವಿಸುವುದಿಲ್ಲ, ವೈರತ್ವವನ್ನು ಸಾಧಿಸುವವರಂತೆ ಕಾಣುತ್ತಾರೆ. ಹಾಗೇ ಮುಂದುವರೆದು ಖಾಲಿ ಸೀಟಿನಲ್ಲಿ ಕುಳಿತೆ. ಎದುರು ಬದುರಿನಲ್ಲಿ ನಾಲ್ಕು ಜನರು ಕುಳಿತಿದ್ದೆವು. ಅಲ್ಲಿಗೆ ಒಂದು ದೊಡ್ಡ ತಂಡವೇ ಬಂದಿತು. ನಾಲ್ಕು ಜನ ಹೆಂಗಸರು, ನಾಲ್ಕು ಮಕ್ಕಳು, ಇಬ್ಬರು ಗಂಡಸರು ಬಂದರು. ಅಷ್ಟು ಜನ ಕುಳಿತುಕೊಳ್ಳಲು ಅಲ್ಲಿ ಜಾಗವಿಲ್ಲವೆಂಬುದು ಅವರಿಗೆ ಅರಿವಾದರೂ ಕೂಡ ಅಲ್ಲಿಯೇ ಕುಳಿತುಕೊಳ್ಳಲು ತಿರ್ಮಾನಿಸಿದರು. ಅದರಲ್ಲಿ ಮಕ್ಕಳು ಮತ್ತು ಒಬ್ಬಳು ಹೆಂಗಸು ಮೇಲೆ ಕುಳಿತುಕೊಳ್ಳಲು ನಿರ್ಧರಿಸಿದರು.
ಪ್ಯಾಸೆಂಜರ್ ರೈಲಿನಲ್ಲಿ ಮೇಲೆ ಕುಳಿತುಕೊಳ್ಳುವ ಅವಕಾಶವಿರುವುದಿಲ್ಲ. ಅಲ್ಲಿ ಕೇವಲ ಲಗ್ಗೇಜು ಇರಿಸುವ ವ್ಯವಸ್ತೆಯಿರುತ್ತದೆ. ಮೇಲೆ ಹೋಗುವಾಗ ಕೆಳಗೆ ಕುಳಿತಿರುವವರ ಬಗೆಗೆ ಸ್ವಲ್ಪವೂ ಯೋಚಿಸದೇ ಹತ್ತಿದರು. ಕಾಲಿನಲ್ಲಿದ್ದ ಚಪ್ಪಲಿಗಳನ್ನು ತೆಗೆಯದೇ ಹತ್ತಿದ್ದರಿಂದ ಬದಿಯಲ್ಲಿ ಕುಳಿತಿದ್ದವರ ತಲೆಯ ಮೇಲೆ, ಮಣ್ಣು ಬಿದ್ದಿತು. ಪಾಪ ಕುಳಿತ ತಪ್ಪಿಗೆ ಅನುಭವಿಸಿದರು. ಅವರು ಮೇಲೆ ಹೋದ ನಂತರ ಗಂಡಸರು ಬಾಗಿಲ ಬಳಿಯಲ್ಲಿ ನಿಂತು ಪ್ರಯಾಣಿಸುವುದಾಗಿ ಹೋದರು. ಹೋದ ನಂತರ ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳು ಬಂದರು. ಕುಳಿತುಕೊಳ್ಳಲು ಜಾಗವೇ ಇಲ್ಲದಿದ್ದರೂ ಅಲ್ಲಿಯೇ ತಳ ಹೂಡಿದರು. ಬಂದ ಕೆಲವೇ ಕ್ಷಣಕ್ಕೆ, ಊಟ ಮಾಡಲು ಶುರುಮಾಡಿದರು. ಊಟ ಮಾಡಿದ ಮೇಲೆ ಮಗು ಮಲಗುತ್ತೇನೆಂದಿತು, ಮಲಗಲು ಬದಿಯಲ್ಲಿಯೋ ತೊಡೆಯಮೇಲೆಯೋ ಮಲಗಿಸಿಕೊಳ್ಳಬಹುದಿತ್ತು. ಅದನ್ನು ಬಿಟ್ಟು ಮಗುವನ್ನು ಓಡಾಡುವ ಕಾರಿಡಾರಿನಲ್ಲಿ ಮಲಗಿಸಿದರು. ಅಯ್ಯೋ ಹೆತ್ತವರೇ! ಎನಿಸಿತು. ಪ್ಯಾಸೆಂಜರ್ ರೈಲಿನಲ್ಲಿ ಓಡಾಡುವವರು ಹೆಚ್ಚಿರುತ್ತಾರೆ, ಕಾಫಿ, ವಡೆ, ದೋಸೆ, ಚುರುಮುರಿ, ಸೀಬೆ ಕಾಯಿ, ಸಪೋಟ ಹೀಗೆ ಎಲ್ಲರೂ ಬರುವುದು, ಮಗುವನ್ನು ದಾಟುವುದು ಅನಾಗರಿಕತೆಯೆನಿಸಿತು. ಅದಕ್ಕೂ ಮುಂಚೆ, ಅವರು ಬಂದ ಸ್ವಲ್ಪ ಹೊತ್ತಿಗೆ, ಪಕ್ಕದವರನ್ನು ಈ ನಂಬರಿಗೆ ಫೋನ್ ಮಾಡಿ, ಮಂಜನಿಗೆ ಹೇಳಿ, ನಾವು ರೈಲು ಹತ್ತಿದ್ದೇವೆ ಎಂದರು. ಒಬ್ಬರೂ ನಿರಾಕರಿಸಿದರೂ ಮತ್ತೊಬ್ಬರು ಕರೆ ಮಾಡಿಕೊಟ್ಟರು, ಮೂರ್ನಾಲ್ಕು ನಿಮಿಷ ಮಾತನಾಡಿದ್ದಲ್ಲದೆ, ಬೇರೆ ಯಾರೆಲ್ಲ ಬರುತ್ತಿದ್ದಾರೆ, ಯಾವುದರಲ್ಲಿ ಬರುತ್ತಿದ್ದಾರೆಂಬುದನ್ನು ವಿಚಾರಿಸಿ ಇದೇ ನಂಬರಿಗೆ ಫೋನ್ ಮಾಡಿ ಎಂದರು. ನನಗೆ ಇದನ್ನು ಕಂಡು ನಗಬೇಕಾ? ತಿಳಿಯಲಿಲ್ಲ. ಅವರು ಕೇಳಿದ ರೀತಿ ಕೂಡ ಕೋರಿಕೆಯಂತಾಗಿರಲಿಲ್ಲ.
ಪಾಂಡವಪುರ ಬರುವಾಗ ಪಕ್ಕದಲ್ಲಿ ಜಾಗವಿದ್ದಿದ್ದರಿಂದ ಮೇಲೆ ಕುಳಿತಿದ್ದವರು ಕೆಳಗಿಳಿದರು. ಆ ಗಂಡಸು ಮೇಲೆ ಹತ್ತಿ ಮಲಗುವುದಾಗಿ ಹೋದನು. ನಾನು ಆ ಹೆಂಗಸಿಗೆ ನಿಮ್ಮ ಮಗಳನ್ನು ಮೇಲೆ ನಿಮ್ಮ ಗಂಡನ ಜೊತೆಯಲ್ಲಿ ಮಲಗಿಸಿ ಎಂದೆ. ಇಲ್ಲಾ ಅವರು ಮಲಗಿದ್ದಾರೆ ಎಂದಳು. ದಾರಿಯಲ್ಲಿ ಈ ರೀತಿ ಮಲಗಿಸುತ್ತೀರಲ್ಲಾ ಓಡಾಡುವವರು ದಾಟುವುದಿಲ್ಲವೆ? ಎಂದೆ. ಅದಕ್ಕೆ ಆ ಹೆಂಗಸಿಗೆ ಏನನ್ನಿಸಿತೋ? ಅಲ್ಲಿಂದ ಮಗುವನ್ನು ಕರೆದು, ಎರಡು ಸೀಟಿನ ನಡುವೆ ನೆಲದಲ್ಲಿ ಮಲಗಿಸಿತು. ಅಯ್ಯೋ ದೇವರೇ, ಎಂದುಕೊಂಡೆ. ಕಾಲು ಕೆಳಕ್ಕೆ ಬಿಟ್ಟರೇ ಮಗುವಿನ ದೇಹಕ್ಕೆ ತಾಕುವುದಿಲ್ಲವೇ? ಅದರ ಜೊತೆಗೆ ಪಕ್ಕದಲ್ಲಿ ಕುಳಿತ ಮಹಾಮಣಿಯರು ಕಡ್ಲೆಕಾಯಿ ತಿನ್ನಲು ಶುರುಮಾಡಿದರು. ತಿಂದ ಕಡ್ಲೆಕಾಯಿ ಸಿಪ್ಪೆಯನ್ನು ಮಗುವಿನ ಮೇಲೆ ಹಾಕುತ್ತಿದ್ದರು. ನಾನು ಮಗು ಕೆಳಗೆ ಮಲಗಿದೆ, ಸಿಪ್ಪೆಯನ್ನು ಅಲ್ಲಿಗೆ ಹಾಕಬೇಡಿ ಎಂದೆ. ಅದೆಲ್ಲಿಗೆ ಹಾಕಿದರೂ ಮಗುವಿನ ಮೇಲಂತೂ ಬೀಳಲಿಲ್ಲ. ಮಕ್ಕಳನ್ನು ಹೆತ್ತವರಿಗೆ ಅವರ ಬಗೆಗೆ ಕಾಳಜಿಯಿಲ್ಲವೆಂದರೇ ಅದೇಕೆ ಜೊತೆಯಲ್ಲಿ ಕರೆದೊಯ್ಯಬೇಕು? ಹೆಂಗಸು ಮಗಳನ್ನು ಮಾತನಾಡಿಸುವಾಗ ಮಾತ ಚಿನ್ನಿ, ಚಿನ್ನಿ ಎನ್ನುತ್ತಿದ್ದಳು. ಅದು ಬರೀ ಮಾತಿನಲ್ಲಿಯೇ ಹೊರತು ಪ್ರೀತಿಯಿರಲಿಲ್ಲ. ಇನ್ನೇನೂ ಬಿಡದಿ ಬಂತು ಎನ್ನುವಾಗ, ಬಾಗಿಲ ಬಳಿಯಲ್ಲಿ ನಿಂತಿದ್ದ ಇಬ್ಬರು ಗಂಡಸರು ಬಂದು ಕುಳಿತರು. ಕುಳಿತುಕೊಳ್ಳಲು ಜಾಗವಿಲ್ಲದಿದ್ದರೂ, ಅದರಲ್ಲಿಯೇ, ಹೆಂಗಸರನ್ನು ಒತ್ತಿಕೊಂಡು ಕುಳಿತುಕೊಂಡರು. ನಾನು ನನ್ನ ಶೂಗಳನ್ನು ತೆಗೆದು ಧರಿಸಲು, ಯತ್ನಿಸುವಾಗ, ಅವರು ಅಲುಗಾಡಲೇ ಇಲ್ಲ. ನಾನು ಕೇಳಿದಮೇಲೆಯೇ ಅವರು ತಮ್ಮ ಕಾಲುಗಳನ್ನು ಮತ್ತೊಂದು ದಿಕ್ಕಿಗೆ ಬದಲಿಸಿದ್ದು.
ಜನರಿಗೆ ಸಾಮಾನ್ಯ ಪ್ರಜ್ನೆಯೇ ಇರುವುದಿಲ್ಲವೇ? ಇವರು ಹಳ್ಳಿಯವರೂ ಅಲ್ಲಾ, ಬೆಂಗಳೂರಿನವರಂತೇಯೇ, ಜೀನ್ಸ್, ಟೀ-ಶರ್ಟ್ ಎಲ್ಲಾ ತೊಟ್ಟಿದ್ದಾರೆ. ಜೋರಾಗಿ ಹಾಡು ಬರುವ ಮೊಬೈಲ್ ಇದೆ. ಪಟ್ಟಣದವರಂತೆ ಇರಬೇಕೆಂದು ಬಯಸುವ ಇವರು ಹೋಯ್ತದೆ, ಬತ್ತದೆ, ಅನ್ನುವುದನ್ನು ಮರೆತು ಹೋಗುತ್ತದೆ, ಬರುತ್ತದೆ ಎಂದು ಕನ್ನಡ ಭಾಷೆಯನ್ನು ತಿದ್ದುಕೊಂಡಿದ್ದಾರೆ, ಆದರೇ ನಾಗರೀಕತೆಯ ವಿಷಯಕ್ಕೆ ಬಂದಾಗ ಮಾತ್ರ ಶೂನ್ಯ. ಇನ್ನೂ ಕೆಲವರು ಗದ್ದಲವೆಬ್ಬಿಸುವುದು ವೀರತನವೆಂದು ಭಾವಿಸಿದ್ದಾರೆ. ಬಸ್ಸಿನಲ್ಲಿ, ರೈಲಿನ್ನಲ್ಲಿ ಪ್ರಯಾಣಿಸುವಾಗ ಕಿರುಚುವುದು, ಯಾರಾದರೂ ಸುಮ್ಮನಿರಿ ಎಂದಾಗ ಅವರಿಗೆ ತಿರುಗಿ ಹೇಳಿ ಅವರನ್ನು ಅವಮಾನಿಸುವುದನ್ನೇ ವೀರ ಪೌರುಷವೆಂದು ಭಾವಿಸಿದ್ದಾರೆ. ಹಿರಿಯರಿಗೆ, ಮಹಿಳೆಯರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಮರ್ಯಾದೆ ನೀಡದೇ, ಹೆಂಗಸರಿದ್ದರೇ ಡಬ್ಬಲ್ ಮೀನಿಂಗ್ ಪದಗಳನ್ನು ಬಳಸಿ ರೇಗಿಸುವುದು, ಪಕ್ಕದಲ್ಲಿ ಕುಳಿತ ಅಪರಿಚಿತ ಹೆಂಗಸರ ಮೈಮುಟ್ಟುವುದು. ಇನ್ನೂ ಕೆಲವರು ರಸ್ತೆಯಲ್ಲಿ ನಡೆಯುವಾಗ ಡಿಕ್ಕಿ ಹೊಡೆದು ಹೋಗುವುದನ್ನು ರಸಿಕತೆಯೆಂದು ಭಾವಿಸಿದ್ದಾರೆ. ಅನಾಕರಿಕತೆ, ಅನೈತಿಕತೆ, ಅಸಂಸ್ಕೃತಿಯನ್ನು ಅರಿಯದ ಜನರು ಕೋಟಿ ಕೋಟಿ ಸಂಪಾದನೆ ಮಾಡಿದರೂ ಅವರಿಂದ ಸಮಾಜಕ್ಕೆ ಆಗುವ ಅನುಕೂಲತೆ ಅಷ್ಟಕ್ಕಷ್ಟೆ.

ಅನ್ಯವಾರ್ತೆ: ಬಿಡುವ ಹಾದಿಯಲಿ!!

ಅನ್ಯವಾರ್ತೆ: ಬಿಡುವ ಹಾದಿಯಲಿ ಹರೀಶ್‌ ಬಾನುಗೊಂದಿ ಈ ಲೇಖನವನ್ನು ಬರೆಯಬೇಕೆಂದು ಬಹಳ ದಿನಗಳಿಂದ ಯತ್ನಿಸುತ್ತಿದ್ದೆ. ಬರೆಯುವ ಪ್ರಯತ್ನ ಮಾಡಿರಲಿಲ್ಲ. ಇದಕ್ಕೆ ಎರಡು ...