08 ಜುಲೈ 2009

ಓದು ಎಂಬ ಮಹಾ ಮಾಂತ್ರಿಕನ ಬೆನ್ನು ಸವರುತ್ತಾ!!!


ಕೆಲವು ದಿನಗಳಿಂದ ಏನನ್ನು ಬರೆಯದೇ ಸುಮ್ಮನಿದ್ದೆ, ಅದಕ್ಕೆ ನನ್ನದೇ ಆದ ಕಾರಣಗಳು ಇವೆ. ಅವೆಲ್ಲಾ ಇಲ್ಲಿ ನಿಷ್ಪ್ರಯೋಜಕವಾಗುತ್ತದೆ. ಹೀಗೆ ಏನೂ ಬರೆಯದೇ ಇದ್ದ ನನ್ನನ್ನು ನನ್ನ ಆತ್ಮೀಯ ಮಿತ್ರರು ಕೇಳಿದರು, ಹರೀ ಏನು ಬರೆದಿಲ್ವಾ ಹೊಸದಾಗಿ ಎಂದು. ನನಗೆ ಸ್ವಲ್ಪ ದಿಗಿಲೆನಿಸಿತ್ತು ಕೂಡ. ಇವರು ನನ್ನನ್ನು ಕೇಳುತ್ತಿದ್ದಾರೋ ಅಥವಾ ಗೇಲಿ ಮಾಡುತ್ತಿದ್ದಾರೋ ಎಂದು. ನನ್ನ ಸ್ನೇಹಿತರ ಮೇಲೆ ಅನುಮಾನ ಪಡದಿದ್ದರೂ ನನ್ನ ಮೇಲೆ ಸ್ವಲ್ಪ ಮಟ್ಟಿಗೆ ಅನುಮಾನ ಬಂತು. ನಾನು ಬ್ಲಾಗ್ ಬರೆಯಲು ಶುರು ಮಾಡಿದ ದಿನಗಳಲ್ಲಿ ನನ್ನ ಸ್ನೇಹಿತರಿಗೆ ಅದರ ಲಿಂಕ್ ಕಳುಹಿಸಿ ಇದನ್ನು ಓದಿನೋಡಿ ಎಂದು ಗೊಳುಯ್ಯಿತ್ತಿದ್ದೆ, ಅದಕ್ಕೆಂದು ಹೀಗೆ ಚೇಡಿಸಿರಬಹುದೇ? ಅದೇನೆ ಇರಲಿ ಇತ್ತೀಚೆಗಂತೂ ನನ್ನ ಬ್ಲಾಗ್ ಓದಿ ಎಂದು ಯಾರಿಗೂ ಹೇಳಲು ಹೋಗುವುದಿಲ್ಲ. ಯಾಕೆಂದರೇ ಅಲ್ಲಿ ಬರೆಯುವುದೆಲ್ಲ ನನ್ನ ಮೂಗಿನ ನೇರಕ್ಕೆ ಮತ್ತು ನನ್ನ ಮನಸ್ಸಿನ ಇಷ್ಟಕ್ಕೆ, ಅದು ಓದಿದ ಮೇಲೆ ಅವರೊಂದಿಗೆ ವಾದ ಮಾಡುವುದಾಗಲೀ ನನ್ನ ಬರವಣಿಗೆಯನ್ನು ಸಮರ್ಥಿಸಿಕೊಳ್ಳುವುದಾಗಲಿ ಬರಲೇಬಾರದೆಂಬುದು ನನ್ನ ಆಶಯ. ನಿನ್ನ ತಲೆಹರಟೆ ಬಿಟ್ಟ ನೇರ ವಿಷಯಕ್ಕೆ ಬರುವುದೇ ಇಲ್ಲವಲ್ಲವೆನ್ನಬೇಡಿ. ಬ್ಲಾಗ್ ಬರೆಯದೇ ಉಳಿದಿದ್ದಕ್ಕೆ ಕಾರಣವನ್ನು ಕೊಡಲೇಬೇಕು. ನಾನು ಕುಡಿದು ಬಿದ್ದಿದ್ದರಿಂದ ಬರೆಯಲು ಸಮಯವಿರಲಿಲ್ಲವೆನ್ನಬೇಡಿ. ಕುಡಿತದ ವಿಷಯಬಂದರೇ, ಈಗಲೂ ಹೋಗಿಬಿಡೋಣವೆನಿಸುತ್ತದೆ, ನಿಮ್ಮ ಬೈಗುಳಗಳಿಗೆ ಬಲಿಯಾಗುವ ಆಸೆ ನನಗಿಲ್ಲ. ಹದಿನೈದು ದಿನಗಳಿಂದ ದೃಡನಿಶ್ಚಯಮಾಡಿ ಕೆಲವು ಪುಸ್ತಕಗಳನ್ನು ಓದುತಿದ್ದೆ, ಅವುಗಳಲ್ಲಿ ಮುಖ್ಯವಾದವೆಂದರೇ, ಕಾರಂತರ ಗೆದ್ದ ದೊಡ್ಡಸ್ತಿಕೆ, ನಾವು ಕಟ್ಟಿದ ಸ್ವರ್ಗ, ಅಪೂರ್ವ ಪಶ್ಚಿಮ, ಸ್ವಪ್ನದ ಹೊಳೆ. ಅನಂತಮೂರ್ತಿಯವರ ಅವಸ್ಥೆ ಮತ್ತು ಮಾತು ಸೋತ ಭಾರತ.


ಕಾರಂತರು ಮತ್ತು ಅನಂತಮೂರ್ತಿಯವರ ಈ ಬರವಣಿಗೆಗಳು ನನ್ನನ್ನು ಬರೆಯದಂತೆ ತಡೆದವೆಂದರೇ ತಪ್ಪಿಲ್ಲ. ಅವರು ಬಳಸಿರುವಂತಹ ಪದಪುಂಜಗಳು, ವಿಚಾರಧಾರೆ, ವಿಷಯಗಳು ನನ್ನ ಆಂತರ್ಯವನ್ನು ಕಲಕಿವೆ. ಅಂತಹದ್ದೇನಪ್ಪ ಬರೆದಿರೋದು ಮಹಾ ಎನ್ನಬೇಡಿ, ನನ್ನಂತಹ ಮುಟ್ಠಾಳನಿಗೆ ಹೀಗನಿಸಿರಬೇಕಿದ್ದರೇ ಇನ್ನು ನೀವು ಓದಿದರೇ ಏನಾಗಬಹುದೆಂಬುದು ನನ್ನ ಚಿಂತೆ. ಸಾಹಿತ್ಯ ಕ್ಷೇತ್ರಕ್ಕೆ ನಾನು ಪ್ರವಾಸಿಯಿದ್ದ ಹಾಗೆ ನನಗೆ ಅದರಲ್ಲಿನ ಏನೇನೂ ತಿಳಿಯದು ಕೆಲವು ಪುಸ್ತಕಗಳನ್ನು ಓದಿದ್ದು ಬಿಟ್ಟರೇ ಮತ್ತೇನು ತಿಳಿದಿಲ್ಲ. ಭಾಷೆ ಎಂಬುದು ಎಷ್ಟ ಶಕ್ತಿಯುತವಾದದ್ದೆಂಬುದಕ್ಕೆ ಇವರುಗಳ ಬರಹಗಳೇ ಸಾಕ್ಷಿ. ಬಳಸಿದ ಪದಗಳನ್ನೇ ಬಳಸಿ ಬಳಸಿ ಅದೇ ಮರ ಸುತ್ತಾಡಿ, ಚಂದ್ರನನ್ನು ಗೆಳತಿಗೆ ಹೋಲಿಸಿ, ನಿಸರ್ಗ ಬಾನು, ಭೂಮಿ, ನೀರು, ತೀರ ಇವುಗಳಲ್ಲಿಯೇ ನಮ್ಮನ್ನು ಸುತ್ತಾಡಿಸುವ ನಮ್ಮ ಹಲವಾರು ಲೇಖಕರು ಈ ಬಗೆಯ ಪ್ರಯತ್ನವನ್ನೇಕೆ ಬಳಸುವುದಿಲ್ಲವೆಂಬುದು ನನ್ನ ಆತಂಕ. ಕನ್ನಡ ಶಬ್ದಕೋಶದಲ್ಲಿ ಎಂತೆಂಥಹ ಪದಗಳಿವೆಂಬುದನ್ನು ಅರಿಯಬೇಕಾದರೇ, ಅವುಗಳನ್ನೇ ಒದಬೇಕು. ಕಥೆಯನ್ನು ಮನದಲ್ಲಿಟ್ಟು ಓದುವುದಾದರೇ, ನಮ್ಮ ವಾರಪತ್ರಿಕೆಗಳು ಸಾಕು. ಕಥೆಗಳಿಗೆಂದು ನಾನು ಯಾವ ಪುಸ್ತಕವನ್ನು ಓದುವುದಿಲ್ಲ.ನಮ್ಮ ಜೀವನವೇ ಕಾದಂಬರಿಯಾಗಿರುವಾಗ ಇನ್ನು ಬೇರೊಬ್ಬರು ಬರೆದ ಕಾಲ್ಪನಿಕ ಕಥೆಯಲ್ಲೇನೂ ಸ್ವಾರಸ್ಯವಿರುವುದಿಲ್ಲ.

ಏನೇನೋ ಹೇಳಿ ತಲೆಗೆ ಹುಳ ಬೀಟ್ಟೆ ಅಂದುಕೊಳ್ಳಬೇಡಿ.ನಾನು ಬರೆಯೋಕೆ ಹೋದದ್ದು ಒಂದು ಮುಖ್ಯವಾದ ವಿಷಯದ ಬಗ್ಗೆ ಅದರ ಹೆಸರು ಆಸಕ್ತಿ. ಇದೊಲ್ಲೆ ಕರ್ಮವೇ ನೀನು ಆಸಕ್ತಿ ಬಗ್ಗೆ ಹೇಳುವಾಗ ನಮಗೆ ನಿನ್ನ ಬ್ಲಾಗ್ ಓದೋ ಆಸಕ್ತಿನೇ ಕಡಿಮೆಯಾಯಿತಲ್ಲ ಎಂದರೇ ನಾನು ಬಹಳ ಖುಷಿಪಡ್ತೇನೆ.ಕಾರಣವಿಷ್ಟೆ, ಇದು ನಮ್ಮ ವೈಯಕ್ತಿಕ ಆಸಕ್ತಿ ಅಭಿಪ್ರಾಯಗಳಿಗೆ ಸಂಬಂಧಿಸಿದ್ದರೂ ಅದು ಪರೋಕ್ಷವಾಗಿ ಬೇರೆಯರೊಂದಿಗೆ ಬೆರೆತಿರುತ್ತದೆ. ಉದಾಹರಣೆಗೆ, ಸಿನೆಮಾದವರು, ಲೇಖಕರು, ರಾಜಕಾರಣಿಗಳು ಇವರೆಲ್ಲರೂ ಅಷ್ಟೇ ಅವರ ಪ್ರತಿಯೊಂದು ಚಟುವಟಿಕೆಗಳನ್ನು ಸಮಾಜ ಹದ್ದಿನ ಕಣ್ಣಿಟ್ಟು ನೋಡುತ್ತಿರುತ್ತದೆ. ಅವರಿಗೊಂದು ವೈಯಕ್ತಿಕ ಜೀವನವಿರುತ್ತದೆಂಬುದನ್ನು ನಾವು ನೆನಪಿಸಿಕೊಳ್ಳುವುದಿಲ್ಲ. ಅದನ್ನೇ ಹೊಂಚಿಹಾಕಿ ಸಮಯ ಸಾಧಿಸುವವರೆಂದರೇ ನಮ್ಮ ಪತ್ರಕರ್ತರು. ಪತ್ರಿಕೋದ್ಯಮ. ಸಣ್ಣ ಪುಟ್ಟ ಹೇಳಿಕೆಗಳನ್ನು ದೊಡ್ಡದು ಮಾಡಿ ಜನರನ್ನು ರೊಚ್ಚಿಗೆಬ್ಬಿಸಿ ರಂಗು ರಂಗಾಗಿಸುವಲ್ಲಿ ನಿಪುಣರೆಂದರೇ ಇವರಿಗೆ ಸಮನಾರು ಇಲ್ಲ.

ದಿನನಿತ್ಯ ನಮ್ಮ ಬಾಯಿಯಿಂದ ಸಾಮಾನ್ಯವಾಗಿ ಹೊರಬರುವ ವಿಷಯಗಳಲ್ಲಿ ಸರ್ವೇಸಾಮಾನ್ಯವಾದದ್ದೊಂದಿದೆ, ಅದು ಇವರಿಂದ ಸಮಾಜಕ್ಕೇನು ಉಪಯೋಗ ಹೇಳು? ಒಬ್ಬ ರಾಜಕಾರಣಿ ಟ್ರಾಫಿಕ್ ಗೆ ಅಡಚಣೆ ಮಾಡಿದರೇ ಸಾಕು, ಥೂ ಈ ರಾಜಕಾರಣಿಗಳು ನಮ್ಮ ಬಗ್ಗೆ ಸ್ವಲ್ಪನೂ ಯೋಚಿಸುವುದೇ ಇಲ್ಲ, ಅರ್ಧ ಗಂಟೆ ಎಷ್ಟು ಜನಕ್ಕೆ ತೊಂದರೆ ಕೊಡ್ತಾರಪ್ಪ ಎನ್ನುತ್ತೇವೆ. ಕೆಲವರು ಈ ಕ್ರಿಕೇಟ್ ನಿಂದ ಏನು ಲಾಭ ಅವರು ದೇಶಕ್ಕೆ ಮಾಡಿರೋದು ಏನು? ಇನ್ನು ಕೆಲವರು ಈ ಸಿನೆಮಾದವರಿಂದ ಏನು ಲಾಭ? ಮೊನ್ನೆ ಹೀಗೆ ಮಾತನಾಡುತ್ತಿರುವಾಗ ನನ್ನ ಸ್ನೇಹಿತ ಹೇಳ್ತಾ ಇದ್ದ ಮಗ ಸಿನೆಮಾದಲ್ಲಿ ಅವರು, ತಮ್ಮ ಸ್ವಂತ ತೀಟೇಗೆ ಅಂತಾ ನಾಯಕಿಯರನ್ನ ಹಾಕಿಕೊಂಡು ಮಜ ತಗೊತಾರೆ ನಾವ್ಯಾಕೆ ನೋಡ್ಬೇಕು? ಅಂತಾ. ಅದೂ ಒಂದು ರೀತಿ ಸರಿನೇ ಅನ್ನು ಅಂದೆ. ಆದರೇ ಈ ವಿಷಯ ಬಂದಾಗ ನನಗೆ ಕೋಪ ಬರೋದು ಈ ಸಿನೆಮಾದವರ ಮೇಲೆ ಬಿಟ್ಟರೇ ನಮ್ಮ ಪತ್ರಕರ್ತರ ಮೇಲೆ. ಅದೇನು ನಮ್ಮ ಮೇಲೆ ಸೇಡು ತೀರಿಸಿಕೊಳ್ಳೋಕೆ ಅಂತಾನೆ ಸಿನೆಮಾ ತೆಗಿತಾರೇನೋ ಅನ್ಸುತ್ತೆ ಕೆಲವೊಂದು ಸಿನೆಮಾ ನೋಡಿದಾಗ.ಇನ್ನು ಬೇಸರವಾಗಿ ದಿನಪತ್ರಿಕೆ ಬಿಚ್ಚಿದರೇ, ಅದರಲ್ಲಿ ಏನೇನೂ ಇರುವುದಿಲ್ಲ, ಇವೆಲ್ಲಾ ಕಾರಣಗಳಿಂದಾನೇ ಕುಡುಕರ ಸಂಖ್ಯೇ ಹೆಚ್ಚಾಗಿದ್ದು ಅನ್ಸುತ್ತೆ.
ನಾನು ಹೇಳೋಕೆ ಹೋದ ವಿಷಯವೆನೆಂದರೇ, ಯಾರಿಂದ ಸಮಾಜಕ್ಕೆ ಒಳ್ಳೆಯದು ಎಂಬುವುದನ್ನು ಕುರಿತು. ಒಂದು ಕ್ಷೇತ್ರವನ್ನೆ ಹೀಗೆ ಬೈಯ್ದು ಹಿಯಾಳಿಸುವುದರಿಂದ ಅದೇನು ಸಿಗುತ್ತದೆಂಬುದು ನನಗೂ ಅರ್ಥವಾಗಿಲ್ಲ. ನಾನು ಮೊನ್ನೆ ಓದಿದ ಮೇಲೆ ನಿಮ್ಮ ಜೊತೆ ಹಂಚಿಕೊಳ್ಳಬೇಕೆನಿಸಿದ ಎರಡು ವಿಷಯಗಳಿವು, ಮೊದಲನೆಯದು, ಕುವೆಂಪುರವರ ಬಗ್ಗೆ ತೇಜಸ್ವಿಯವರು ಬರೆದಿರುವುದು. ಒಮ್ಮೆ ಕಾಲೇಜು ಬಂದ್ ಮಾಡುವಾಗ ವಿದ್ಯಾರ್ಥಿಗಳು ಕುವೆಂಪು ಅವರ ಮನೆಗೆ ನುಗ್ಗಿ ದಾಂಧಳೆ ಮಾಡಿದ್ದು. ಮತ್ತೊಂದು ಅನಂತಮೂರ್ತಿಯವರ ಮನೆಗೆ ನುಗ್ಗಿ ದಾಂಧಳೆ ಮಾಡಿದ್ದು. ಇದು ಎಂತಹ ಅವಿವೇಕಿತನವೆನಿಸುತ್ತದೆ. ದಿನಕ್ಕೆರಡು ಮೂರು ಬಂದ್ ಗಳು, ಜಾತಗಳು, ಸಾರ್ವಜನಿಕರಲ್ಲಿ ಎಷ್ಟು ಅಹಿತಕರ ಸನ್ನಿವೇಶವನ್ನೇರ್ಪಡಿಸುತ್ತದೆಂಬುದರ ಅರಿವಿಲ್ಲದೇ ಸದಾ ಕೂಗಾಡೀ, ರೇಗಾಡಿದರೇನು ಬಂತು. ಸಂಪೂರ್ಣ ವ್ಯವಸ್ಥೆಯೇ ಹದಗೆಟ್ಟಿ ಕುಳೀತಿರುವಾಗ. ಕನ್ನಡ ಪದಗಳ ಗಂಧವೇ ತಿಳಿಯದ ಪುಡಾರಿಗಳು ಮಹಾನ್ ಲೇಖಕರೆನಿಸಿಕೊಂಡು, ಕನಡವೇ ಸತ್ಯ ಕನಡವೇ ನಿತ್ಯವೆಂದು ಬದುಕಿದವರ ಮೇಲೆ ಹಲ್ಲೆ ಮಾಡಲೆತ್ನಿಸಿದಾಗ ಈ ಸಮಾಜದ ಕ್ರೂರತೆ ಅರ್ಥವಾಗುತ್ತದೆ. ನಮ್ಮಿಂದ ಸಮಾಜಕ್ಕೆ ಆಗುತ್ತಿರುವ ಉಪಯೋಗವೇನೆಂಬುದರ ಬಗ್ಗೆ ಕಿಂಚಿತ್ತೂ ಯೋಚಿಸದ ನನ್ನ ಪ್ರಿಯ ಮಿತ್ರರೂ ಸದಾ ಸಮಾಜಕ್ಕೆ ಅವರಿವರಿಂದ ಆಗುತ್ತಿರುವ ಸಮಸ್ಯೆಗಳನ್ನು ಅಥವಾ ಆಗದೇ ಇರುವ ಅನುಕೂಲಗಳ ಬಗ್ಗೆ ಚಿಂತಿಸುವುದನ್ನು ನಿಲ್ಲಿಸುವುದೆಂದು?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕನಸು-ನನಸಿನ ಪಯಣದ ಹಾದಿಯಲಿ ಬದ್ಧತೆ, ಜವಬ್ದಾರಿ, ಸೋಲಿನ ಭೀತಿ!!!

  ೨೯.೦೮.೨೦೨೪ ನಾವು ನಮ್ಮ ಕನಸುಗಳನ್ನು, ಆಸೆಗಳನ್ನು, ಬಯಕೆಗಳನ್ನು ಬೇರೆಯವರೊಂದಿಗೆ ಏಕೆ ಹಂಚಿಕೊಳ್ಳಬೇಕು? ಇದರ ಕುರಿತು ಸ್ವಲ್ಪ ಚರ್ಚಿಸೋಣ. ಮುಕ್ತವಾಗಿ. ಪ್ರತಿಯೊ...