ಇಲ್ಲಿ ಬರೆಯುವ ಬರವಣಿಗೆ ಎಲ್ಲರೂ ಓದಬೇಕಿಲ್ಲ, ಆದರೇ ನನ್ನ ಜೊತೆಯಲ್ಲಿ ಮೂರು ವರ್ಷ ಕಳೆದ ಪಿಯುಸಿ ಸ್ನೇಹಿತರು ಓದಲೇ ಬೇಕಿದೆ. ಪಿಯುಸಿ ಎಂಬ ಬದುಕಿಗೆ ಕಾಲಿಟ್ಟ ಗಳಿಗೆಯಲ್ಲಿ, ಯೌವ್ವನದ ಕಟ್ಟೆ ಒಡೆದು ಲೋಕವೆಲ್ಲ ಹಸಿರಾಗಿ ಕಾಣುತಿದ್ದ ಆ ದಿನಗಳಲ್ಲಿ ನಮ್ಮ ಮೀಸೆ ಗಡ್ಡಗಳು ಚಿಗುರಾಗಿದ್ದ ಕ್ಷಣಗಳಲ್ಲಿ, ಮನಸ್ಸಿನ ಮಿಡಿತಗಳು ಹುಚ್ಚೆದ್ದು ಕುಣಿಯುತ್ತಿದ್ದ ದಿನಗಳಲ್ಲಿ ಜೊತೆಗಿದ್ದ ನೀವೆಲ್ಲರೂ ಓದಲೇ ಬೇಕು. ಇದು ನನ್ನೊಬ್ಬನ ಭಾವನೆಯಲ್ಲ, ಎಲ್ಲರಿಗೂ ಇದು ಆಗಿಯೇ ಆಗಿದೆ. ಅಂಥಹ ಕ್ಷಣಗಳವು. ಆ ಕ್ಷಣಗಳಲ್ಲಿ ಅದನ್ನೆಲ್ಲಾ ಅರ್ಥ ಮಾಡಿಕೊಳ್ಳುವ ಗೋಜಿಗೆ ಹೋಗಲಿಲ್ಲ, ಅರ್ಥಮಾಡಿಕೊಳ್ಳುವ ಪ್ರಯತ್ನವೂ ಇರಲಿಲ್ಲ. ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದರೇ ಅರ್ಥ ಸಿಗುತ್ತಿರಲಿಲ್ಲ. ಈಗ ಹನ್ನೆರಡು ವರ್ಷವಾದ ಮೇಲೆ, ಒಬ್ಬನೇ ಕುಳಿತು ಯೋಚಿಸಿದರೇ ತಲೆ ತಿರುಗುತ್ತದೆ, ಒಬ್ಬನೇ ನಗುತ್ತೇನೆ, ಹಚ್ಚಿದ ಸಿಗರೇಟು ಮುಗಿಯುವುದು ತಿಳಿಯುವುದಿಲ್ಲ. ಆ ದಿನಗಳಲ್ಲಿ ಮೂರು ಎರಡು ಕಾಲು ರೂಪಾಯಿ ಸಿಗರೇಟು ಅದಕ್ಕೂ ಪರದಾಡುವ ದಿನಗಳು. ಒಂದೇ ಸಿಗರೇಟನ್ನು ಮೂರ‍್ನಾಲ್ಕು ಜನ ಸೇದುವ ಕ್ಷಣಗಳವು. ಸ್ವಲ್ಪ ಜಾಸ್ತಿ ಸೇದಿದರೂ ಜಗಳ, ಜಗಳವೆಂದರೇ ಹೊಡೆದಾಟವಿಲ್ಲ ಮಾತಿನಲ್ಲಿ ಉರಿಸುವ ಮಧುರ ನಿಮಿಷಗಳು. ಆದರೂ ಬೇಸರವಿಲ್ಲ.
ಆಗ ಎದೆ ಸೀಳಿದರೆ ಎಬಿಸಿಡಿ ಇಲ್ಲದವರು ಇಂದು ಏನೇನೋ ಆಗಿದ್ದಾರೆ. ಹುಡುಗಿಯರನ್ನು ನೋಡುವ ಆಸೆ ಇತ್ತು. ನೋಡುವ ಧೈರ್ಯವಿಲ್ಲ. ಇಷ್ಟ ಪಟ್ಟರೂ ಅವಳಿಗೆ ತಿಳಿಸುವ ಧೈರ್ಯವಿರಲಿಲ್ಲ. ಹುಡುಗಿಯರ ಕಂಡರೆ ಅಸಡ್ಡೆ ಅದೇಕೆ? ಹುಡುಗಿಯ ಜೊತೆ ಮಾತನಾಡುವ ಹುಡುಗರ ಕಂಡರೆ ರೇಗಿಸುವುದು. ನನಗಿಂದಿಗೂ ನೆನಪಿದೆ, ಎಲ್ಲರ ಹೆಸರುಗಳು ಎಲ್ಲರೊಂದಿಗೂ ಒಂದಲ್ಲ ಒಂದು ಬಗೆಯ ಸಲುಗೆ ನನಗಿತ್ತು ಎನಿಸುತ್ತದೆ. ಹುಡುಗಿಯರಿಂದ ಮಾತ್ರ ಬಲು ದೂರವಿದ್ದೆ. ಮೊದಲನೆಯ ಬೆಂಚಿನಲ್ಲಿ ಮೊದಲ ಸ್ವಲ್ಪ ದಿನಗಳಿದ್ದೆ, ಆದ್ದರಿಂದ ಮೊದಲ ಎರಡು ಸಾಲಿನ ಹುಡುಗರು ಪರಿಚಯವಾದರು. ಕಿರಣ ಕುಮಾರ್ ಗುಮ್ಮನಕೊಲ್ಲಿಯಿಂದ ಬರುತ್ತಿದ್ದ, ಬಹಳ ಒಳ್ಳೆಯ ಹುಡುಗ, ಚಿಕ್ಕಪ್ಪನ ಮನೆಯಲ್ಲಿದ್ದರಿಂದ ಅವನ ಸಂಕಟ ಹೇಳತೀರದು, ಅಭಿನಂದನ ಕಿರಣ ಮೂಕಾಂಬಿಕ ಶಾಲೆಯಲ್ಲಿ ಜೊತೆಯಲ್ಲಿಯೇ ಓದಿದವರು ಆದ್ದರಿಂದ ಅವರಿಬ್ಬರ ಸ್ನೇಹವೂ ಗಾಢವಾಗಿತ್ತು, ನಮ್ಮ ಏರಿಯಾದಲ್ಲಿ ಕ್ರಿಕೇಟ್ ಆಡುವುದಕ್ಕೆ ಸ್ನೇಹಿತರಾದೆವು. ಮಂಜೇಶ ಓದುವುದರಲ್ಲಿ ಬಹಳ ಮುಂದಿದ್ದ, ಅವನ ಬರವಣಿಗೆ ಅದ್ಬುತವಾಗಿತ್ತು, ನಮ್ಮ ಕ್ಲಾಸಿಗೆ ಮೊದಲ ವಿದ್ಯಾರ್ಥಿ ಮತ್ತೂ ಅಷ್ಟೇ ಹಾಸ್ಯ ಪ್ರವೃತ್ತಿ ಅವನಲ್ಲಿತ್ತು. ಆ ದಿನಗಳಲ್ಲಿದ್ದ ಪ್ರಬುದ್ದತೆ ಇಂದಿಗೂ ಉಳಿಸಿಕೊಂಡು ಬಂದಿದ್ದಾನೆ, ಆ ದಿನಗಳಲ್ಲಿ ನಮ್ಮ ಕ್ಲಾಸಿನ ಎಲ್ಲಾ ಹುಡುಗಿಯರ ಜೊತೆ ಮಾತನಾಡುತ್ತಿದ್ದ ಏಕೈಕ ಹುಡುಗ ಅವನೊಬ್ಬನೇ! ಎರಡನೆಯ ಸಾಲಿನಲ್ಲಿ ಲತೇಂದ್ರ ಕುಳಿತುಕೊಳ್ಳುತ್ತಿದ್ದ, ಅವನು ಬೆಟದಪುರದ ಆಚೆಗಿನ ಹೊಸೂರಿನ ಬಳಿಯ ಹೊಸಕೊಪ್ಪಲಿನವನು, ಕನ್ನಡ ಮಾಧ್ಯಮದಿಂದ ಬಂದಿದ್ದರಿಂದ ಸ್ವಲ್ಪ ಹಿಂದುಳಿದಿದ್ದ ಎನ್ನುವುದನ್ನು ಬಿಟ್ಟರೇ ಬುದ್ದಿವಂತ ಪ್ರಜೆ. ಅವನು ಬೆಳೆದು ಬಂದ ವಾತವಾರಣವೋ ಏನೋ ಅವನು ನಮಗೆ ಹೊಂದಿಕೊಳ್ಳುವುದರಲ್ಲಿ ಸಮಯ ತೆಗೆದುಕೊಂಡ.ಜಗ ಕೂಡಿಗೆಯಿಂದ ಬರುತ್ತಿದ್ದ. ವಿನೇಶ್ ಪಕ್ಕಾ ಪಟ್ಟಣದ ಹುಡುಗ, ಅವನು ಟಕ್ ಇನ್ ಮಾಡದೇ ಬಂದ ದಿನವನ್ನೇ ನೋಡಿಲ್ಲ. ರವಿ ಕೂಡಿಗೆಯಿಂದ ಬರುತ್ತಿದ್ದ ಆ ದಿನಗಳಲ್ಲಿ ಬಹಳ ಒಳ್ಳೆಯ ಮತ್ತು ಬಹಳ ಶಾಂತ ಸ್ವಭಾವದ ಹುಡುಗ, ಅವನು ಪ್ರೇಮ ಪಾಶನದಲ್ಲಿ ಬಿದ್ದು ನಾನು ಸ್ವಲ್ಪ ದಿನ ಅವನ ಜೊತೆ ವ್ಯಾನ್ ಸ್ಟಾಂಡ್ ಸುತ್ತಿದ್ದೇನೆ. ಪ್ರದೀಪ ದೊಡ್ಡ ಕಮ್ಮರಹಳ್ಳಿಯಿಂದ ಬರುತ್ತಿದ್ದ, ನಮ್ಮ ಕ್ಲಾಸಿಗೆ ಹತ್ತನೆಯ ತರಗತಿಯಲ್ಲಿ ಅತಿ ಹೆಚ್ಚು ಮಾರ್ಕ್ಸ್ ತೆಗೆದಿದ್ದ. ದುರಾದೃಷ್ಟವೆಂದರೇ ಅವನು ಎರಡನೇ ವರ್ಷಕ್ಕೆ ಬರಲೇ ಇಲ್ಲ. ವಿಜಿ ಮೊದಲ ದಿನಗಳಲ್ಲಿ ಎರಡನೆಯ ಬೆಂಚಿನಲ್ಲಿ ಕೂರುತ್ತಿದ್ದ, ನಂತರ ಹಿಂದಿನ ಸಾಲಿಗೆ ಬಂದ. ಅವನು ಮೊದಲ ವರ್ಷ ಬೆನಗಾಲ್ ಇಂದ ಬರುತ್ತಿದ್ದ, ನಂತರದ ವರ್ಷ ಅವರ ಚಿಕ್ಕಪ್ಪನ ಮನಯಲ್ಲಿ ಉಳಿದ.ಅಂದಿನ ದಿನದಲ್ಲಿದ್ದ ಒಳ್ಳೆಯತನ ಇನ್ನೂ ಜೀವಂತವಾಗಿದೆ. ಮೂರನೇಯ ಬೆಂಚಿನಲ್ಲಿ ರೊಹಿತ್ ಎಬಿ ವಿಕ್ರಮ್ ಚರಣ್ ಸಂಜಯ್ ಕೂರುತಿದ್ದರು. ನಾಲ್ಕನೇಯ ಬೆಂಚಿನಲ್ಲಿ ಮೋಹನ್ ಮಂದಣ್ಣ, ರೋಹಿತ್ ಎಡಿ ಬಾಲಸುಬ್ರಹ್ಮಣ್ಯ, ಗುರುಪ್ರಸಾದ್, ಶ್ರೀನಿವಾಸ ಕೂರುತಿದ್ದರು. ನಾಲ್ಕನೆಯ ಬೆಂಚಿನಲ್ಲಿ ನಾನು ಶಂಕರ, ಲೋಕೇಶ ಕೂರುತಿದ್ದವು. ಸತೀಶ ಮತ್ತು ಹರ್ಷವರ್ಧನ ಮೊದಲ ಮೂರು ತಿಂಗಳಿದ್ದು ನಂತರ ಡಿಪ್ಲೋಮಾಗೆ ಹೋದರು.ಮಂಜುನಾಥ, ತುಳಸಿ ಸರ್ಕಾರಿ ಕಾಲೇಜಿಗೆ ಹೋದರು. ಅಕ್ಬರ್ ಆಲಿ, ಗುರುಪ್ರಸಾದ್ ಎರಡನೆಯ ವರ್ಷಕ್ಕೆ ಬಿಟ್ಟು ಹೋದರು.
ರೋಹಿತ್ ಎಬಿ ಮೊದಲನೇಯ ವರ್ಷದಲ್ಲಿ ಪ್ರಾಯೋಗಿಕ ಪರಿಕ್ಷೆಯನ್ನು ಬರೆಯಲೇ ಇಲ್ಲ ಆದರೂ ಪಾಸಾಗಿದ್ದ. ಸಂಜಯ ಆ ದಿನಗಳಲ್ಲಿ ಉಪೇಂದ್ರನ ಫ್ಯಾನ್ ಆಗಿದ್ದ. ಅವನ ಡೈಲಾಗ್ ಅನ್ನು ಉರು ಹೊಡೆದು ಹೇಳುತ್ತಿದ್ದ. ಚರಣ ನಮ್ಮ ಇಡೀ ಕಾಲೇಜಿನಲ್ಲಿಯೇ ಅತಿ ಸುಂದರವಾದ ಹುಡುಗ. ಅವನಿಗೂ ಒಂದು ಲವ್ ಇತ್ತು. ಶ್ರೀನಿವಾಸ ನಮ್ಮ ಕ್ಲಾಸಿನಲ್ಲಿದ್ದ ಎಲ್ಲಾ ಹುಡುಗರಿಗಿಂತಲೂ ಅತೀ ಶ್ರೀಮಂತ ಹುಡುಗ. ಆ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಆರ್ಥಿಕ ಸಮಸ್ಯೆ ಇದ್ದೇ ಇತ್ತು ಎನ್ನುವುದು ನನ್ನ ಅಭಿಪ್ರಾಯ. ಕೆಲವರು ಸ್ವಲ್ಪ ಉತ್ತಮ ಮಟ್ಟದಲ್ಲಿದ್ದಿರಬಹುದು. ನನ್ನ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ. ಗುರು ಬಹಳ ಶ್ರಮಜೀವಿ ಮತ್ತೂ ಬಹಳ ಒಳ್ಳೆಯ ಹುಡುಗ. ಬಾಲ ಸುಬ್ರಹ್ಮಣ್ಯ ಸೋಮವಾರ ಪೇಟೆಯಿಂದ ಬರುತ್ತಿದ್ದ, ಅವನು ಬಹಳ ದೈವ ಭಕ್ತ ಮತ್ತು ಮುಗ್ದಜೀವಿ. ಕ್ಲಾಸಿನ ಒಳ್ಳಕ್ಕೆ ಬರುವ ಮುನ್ನ ಬಾಗಿಲಿಗೆ ಕೈಮುಗಿದು ಬರುತ್ತಿದ್ದ. ಅಕ್ಬರ್ ಆಲಿ ಬಹಳ ಶ್ರಮ ಜೀವಿಯಾಗಿದ್ದ.
ನನ್ನ ಅನಿಸಿಕೆ ಪ್ರಕಾರ ಪಿಯುಸಿಯಲ್ಲಿದ್ದವರು ಯಾರೂ ದಡ್ಡರಲ್ಲ. ಆದರೇ ಕನ್ನಡಭಾರತಿ ಕಾಲೇಜು ಅವರನ್ನು ಬಹಳ ದಡ್ಡರೆನ್ನುವಂತೆ ಮಾಡಿತು. ಸುಲಭದ ವಿಷಯವನ್ನೂ ಕೂಡ ಕಷ್ಟವೆಂದು ಬಿಂಬಿಸಿತು. ಎಲ್ಲರನ್ನೂ ನಾನು ಬಹಳ ಸೂಕ್ಷತೆಯಿಂದ ಗಮನಿಸಿದ್ದೇನೆ, ಎಲ್ಲರ ಜೊತೆಯಲ್ಲಿಯೂ ವೈಯಕ್ತಿಕವಾಗಿ ಸಾಕಷ್ಟೂ ಸಮಯ ಕಳೆದಿದ್ದೇನೆ. ಎಲ್ಲರಲ್ಲಿಯೂ ಏನಾದರೊಂದು ಸಾಧಿಸಬೇಕೆಂಬ ಹಂಬಲವಿತ್ತು, ಕಲಿಯಬೇಕೆಂಬ ಹಸಿವಿತ್ತು. ನಾನು ಬಹಳ ಸತ್ಯ ಹೇಳುತ್ತೇನೆ, ನನ್ನನ್ನು ಬಿಟ್ಟರೇ ನಮ್ಮ ತರಗತಿಯಲ್ಲಿ ನಾನು ತಿಳಿದಂತೆ ಎಲ್ಲರೂ ವಿದ್ಯಭ್ಯಾಸದ ವಿಷಯದಲ್ಲಿ ಬಹಳ ಗಂಬೀರವಾಗಿದ್ದರು. ನನಗೇಕೋ ಗೊತ್ತಿಲ್ಲ ಆ ದಿನಗಳಲ್ಲಿ ವಿದ್ಯೆಯ ಬಗ್ಗೆ ತೀವ್ರ ಅಸಡ್ಡೆ ಮೂಡಿತ್ತು. ನನ್ನನ್ನು ಬಿಟ್ಟರೇ ಎಬಿ ರೋಹಿತನಿಗೂ ಆಸಕ್ತಿ ಕಡಿಮೆ ಇದ್ದಂತೆ ಕಾಣುತ್ತದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಶಂಕರ ಪಡುತಿದ್ದ ಕಷ್ಟವನ್ನು ನೆನೆಪುಮಾಡಿಕೊಂಡರೆ ಅವನ ಬಗ್ಗೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ. ನಾನು ಬಹಳಷ್ಟೂ ಬಾರಿ ಕುಳಿತು ಯೋಚಿಸಿದ್ದೇನೆ.ಪಿಯುಸಿಯಲ್ಲಿರುವ ವಿಷಯಗಳನ್ನು ಸುಮ್ಮನೇ ಓದಿದ್ದೇನೆ, ಅದೆಲ್ಲವೂ ಇಂದು ಬಹಳ ಸುಲಭದ ವಿಷಯಗಳು ಎನಿಸುತ್ತವೆ, ನಾನು ಮತ್ತು ನನ್ನ ಎಂಎಸ್ಸಿ ಸ್ನೇಹಿತ ನವೀನನ ಜೊತೆ ಚರ್ಚಿಸುತ್ತಿದ್ದೆ, ವಿಜ್ನಾನವನ್ನು ಸುಲಭದಲ್ಲಿ ಅರ್ಥೈಸುವುದು ಹೇಗೆ ಎಂದು? ನಾನು ಅವನು ಸೇರಿ ಕೆಲವು ದಿನಗಳು ಪ್ರೇರಣಾ ಸಂಸ್ಥೆಯವರು ಬಡ ಮಕ್ಕಳಿಗೆ ಆಯೋಜಿಸಿದ್ದ ಒಂದು ಕಾರ್ಯಕ್ರಮದಲ್ಲಿ ಪ್ರಯತ್ನಿಸಿದೆವು, ವಿದ್ಯಾರ್ಥಿಗಳು ನಿಜಕ್ಕೂ ಬಹಳ ಸಂತೋಷಪಟ್ಟರು.
ಆದರೇ, ನಮಗೆ ಪಾಠ ಮಾಡುತ್ತಿದ್ದವರಲ್ಲಿ ಸ್ವಲ್ಪ ಸಮಸ್ಯೆ ಇತ್ತು ಅದರ ವಿಷಯವನ್ನು ಮತ್ತೊಮ್ಮೆ ಹೇಳುತ್ತೇನೆ. ಈ ಬರವಣಿಗೆ ನನ್ನ ಸ್ನೇಹಿತರ ಬಗ್ಗೆ ಬರೆಯುವುದಕ್ಕೆಂದು ಪ್ರಾರಂಬಿಸಿದ್ದೇನೆ, ಅದರಂತೆಯೇ ಮುಂದುವರೆಯುವುದು ಉತ್ತಮ. ಇದಿಷ್ಟೂ ಹುಡುಗರ ವಿಷಯವಾದರೇ, ಇನ್ನೂ ಹುಡುಗಿಯರ ಬಗ್ಗೆ ಬರೆಯುವುದಕ್ಕೆ ನಾನು ಹುಡುಗಿಯರ ಜೊತೆಗೆ ಹೆಚ್ಚೇನೂ ಮಾತನಾಡಿಲ್ಲ. ಮಾತನಾಡಿಲ್ಲ ಎನ್ನುವುದಕ್ಕಿಂತ ಅವರೇ ಮಾತನಾಡಿಸಿಲ್ಲವೆಂದರೂ ತಪ್ಪಿಲ್ಲ. ಲಿನ್ಸಿ ಜಾರ್ಜ್ ಎಂಬ ಹುಡುಗಿ ಅದೆಷ್ಟು ಶಿಸ್ತಿನ ಹುಡುಗಿಯೆಂದರೇ ಅವಳು ಬರುವುದು ಹೋಗುವುದು ಗೊತ್ತಾಗುತ್ತಲೇ ಇರಲಿಲ್ಲ. ಅವಳ ಬರವಣಿಗೆಯಂತು ಪುಸ್ತಕದಲ್ಲಿ ಅಚ್ಚು ಇಳಿಸಿದಂತೆ ಇರುತಿತ್ತು. ಅವಳ ಜೊತೆಗೆ ಗೀತಾ ಪೂವಮ್ಮ ಕೊಪ್ಪದಿಂದ ಬರುತ್ತಿದ್ದರು, ಅವರ ಜೊತೆಯಲ್ಲಿಯೇ ಅಶ್ವಿನಿ ಕೂರುತ್ತಿದ್ದಳು. ಅಶ್ವಿನಿ ಹೆಚ್ಚು ಅಂಕಗಳನ್ನು ತೆಗೆದಿದ್ದವರಲ್ಲಿ ಒಬ್ಬಳಾಗಿದ್ದಳು. ಮೊದಲನೆಯ ಬೆಂಚಿನಲ್ಲಿ ಕುಳಿತಿದ್ದ ಹುಡುಗಿಯರ ಧ್ವನಿ ಕೇಳಿದ ನೆನಪಿಲ್ಲ. ಒಂದು ದಿನ ಕನ್ನಡ ಮಾಸ್ಟರು ಪಾಠ ಮಾಡುತ್ತಾ, ಇವತ್ತೇನೂ ಪೂವಮ್ಮ ಅವರ ಮುಖ ಊದಿದೆ? ಏನು ವಿಷಯವೆಂದರು. ನಾನು ಸುಮ್ಮನೆ ಕೂರುವುದಕ್ಕೆ ಆಗದೇ, ಮುಖ ಊದುವುದಕ್ಕೇ ಅವಳ ಮುಖ ಏನು ಪಿಲ್ಸ್ ಬರಿ ಗೋಧಿ ಹಿಟ್ಟೇ? ಎಂದೆ. ಆ ಹುಡುಗಿ ಗೋಳೋ ಎಂದು ಅಳುವುದಕ್ಕೆ ಶುರು ಮಾಡಿದಳು. ನಾನು ಅಂದೇ ಕೊನೆ, ಹುಡುಗಿಯರ ಬಗ್ಗೆ ಕಾಮೆಂಟ್ ಮಾಡುವುದನ್ನು ಬಿಟ್ಟೆ.
ಎರಡನೆಯ ಬೆಂಚಿನಲ್ಲಿ, ಸ್ಮಿತಾ ಮತ್ತು ಸೋನಿ ಅಕ್ಕ ತಂಗಿಯರಂತೆ ಬರುತ್ತಿದ್ದರು ಒಳ್ಳೆಯ ಸ್ನೇಹಿತರೂ ಎನಿಸುತ್ತದೆ. ನನಗೆ ನೆನಪು ಇರುವ ಪ್ರಕಾರ ಸ್ಮಿತಾಳ ಜುಟ್ಟನ್ನು ನಮ್ಮ ಲೋಕಿ ಆಗ್ಗಾಗೆ ನೋಡಿ ರೇಗಿಸುತ್ತಿದ್ದ. ಸೋನಿ ನಾನು ಕಂಡ ಆ ದಿನಗಳ ಅದ್ಬುತಾ ಚೆಲುವಾದ ಹುಡುಗಿ, ಅವಳ ಮುಖದಲ್ಲಿ ಒಂದು ದಿವ್ಯ ಭಾವವಿರುತಿತ್ತು, ಕಣ್ಣುಗಳಲ್ಲಿ ಒಳ್ಳೆಯ ತೆಜಸ್ಸು ಇತ್ತು. ಅವರ ಜೊತೆಯಲ್ಲಿದ್ದವಳು ಚೊಂದಮ್ಮ, ಚೊಂದಮ್ಮ ಬಾಯ್ ಕಟ್ ಮಾಡಿಸಿಕೊಂಡು ಬರುತ್ತಿದ್ದರಿಂದ ಅವಳ ಮುಖದ ಸೌಂದರ್ಯ ನಮಗೆ ತಿಳಿದಿರಲಿಲ್ಲ, ಅದೇ ಚೋಂದಮ್ಮ ಯುವರಾಜ ಕಾಲೇಜಿನ ಕನಸಿನ ರಾಣಿಯಾಗಿದ್ದಳು ಎಂಬುದು ನಿಜಕ್ಕೂ ಹೆಮ್ಮೆಯ ವಿಷಯ. ರಾಘವಿ ಮತ್ತು ಸೀಮಾ ಅಖ್ತರ್ ಅಕ್ಕ ತಂಗಿಯರಂತೆ ಇರುತ್ತಿದ್ದರು. ನಾನು ನನ್ನ ಎರಡೂ ವರ್ಷದಲ್ಲಿ ಇವರಿಬ್ಬರನ್ನು ಮಾತನಾಡಿಸಿದ ನೆನಪಿಲ್ಲ. ನಂತರದ್ದು ಬಿಂಧ್ಯಾ ಮತ್ತು ಸೌಮ್ಯ ಇವರಿಬ್ಬರದ್ದು ಅದ್ಬುತಾ ಸ್ನೇಹ ಇಂದಿಗೂ ಹಾಗೇಯೇ ಇದ್ದಾರೆ. ನನಗೆ ನಗು ಬರುವ ಒಂದು ವಿಷಯವನ್ನು ಇಲ್ಲಿ ಹೇಳಬೇಕು, ನಾವು ಕೊನೆಯ ಬೆಂಚಿನವರು ಇವರಿಬ್ಬರನ್ನು ಸಾಕಷ್ಟು ರೇಗಿಸುತ್ತಿದ್ದೆವು, ಅವರು ಏನು ಹೇಳಿದರೂ ಅದಕ್ಕೊಂದು ಕೊಂಕು ಹೇಳುತ್ತಿದ್ದೆವು. ಪಾಪ ಅವರಿಗೆ ಆ ಮಟ್ಟಕ್ಕೆ ನೋವಾಗಿದೆ ಎಂಬುದು ನನಗೆ ತಿಳಿದಿರಲಿಲ್ಲ. ಅವರು, ಅವರ ಸ್ನೇಹಿತನಾದ ಸಮಿಉಲ್ಲಾ ಎಂಬುವನಿಗೆ ಹೇಳಿದ್ದಾರೆ, ಹರೀಶ್ ಎನ್ನುವ ವ್ಯಕ್ತಿ ಬಹಳ ರೇಗಿಸುತ್ತಾನೆ ಸ್ವಲ್ಪ ವಿಚಾರಿಸು ಎಂದು. ಸತ್ಯ ಹೇಳಬೇಕೆಂದರೇ ಆ ದಿನಗಳಲ್ಲಿ, ಮುಸ್ಲಿಂ ರನ್ನು ಕಂಡರೇ ಬಹಳ ಕೋಪವಿತ್ತು. ನಾನು ಶಂಕರ, ಲೋಕೇಶ ಶಂಕರನ ಅಡ್ಡವಾಗಿದ್ದ ಶೆಟ್ಟಿ ಅಂಗಡಿಯ ಬಳಿಯಲ್ಲಿ ಸಿಗರೇಟು ಸೇದುತ್ತಾ ನಿಂತಿದ್ದೆವು. ಅವನು ಶಂಕರನ್ನು ಕೇಳಿದ, ಹರೀಶ ಅಂತಾ ಬರುತ್ತಾನಂತೆ ಯಾರು ಏನು ಎಂದು. ಅಷ್ಟೊತ್ತಿಗೆ ನನ್ನ ವಿಷಯ ಸಮಿಉಲ್ಲಾಗೆ ತಿಳಿದಿತ್ತು, ಆದರೇ ನನ್ನ ಹೆಸರು ತಿಳಿದಿರಲಿಲ್ಲ. ಶಂಕರ ನನ್ನನ್ನು ತೋರಿಸಿ ಹೇಳಿದ ನೋಡು ಅವನೇ ಹರೀಶ, ಗುಮ್ಮನಕೊಲ್ಲಿಯಿಂದ ಬರುವವನು. ಅದೇನು ಮಾಡುತ್ತೀಯೋ ಮಾಡು ಎಂದು. ನನಗಂತೂ ನಗು ಬಂತು. ನಾನು ಸಮಿ ಉಲ್ಲಾನನ್ನು ಕೇಳಿದೆ ಏನು ವಿಷಯವೆಂದು ಅವನು ಎಲ್ಲವನ್ನು ಹೇಳಿದ.
ಚೈತ್ರ ಎನ್ನುವ ಹುಡುಗಿಯೊಬ್ಬಳು ಬರುತ್ತಿದ್ದಳು, ಅವಳು ನನಗೆ ತಿಳಿದಿರುವ ಪ್ರಕಾರ ಬಹಳ ಒಳ್ಳೆಯ ಹುಡುಗಿ, ಆದರೇ ನಮ ಮಟ್ಟಗಿನ ಕನ್ನಡ ಮಾಸ್ಟರು ಪಾಠ ಅವಳಿಗೆ ಬೇಸರವಾಗಿತ್ತು. ಅವಳು ಅವರ ಅಮ್ಮನಿಗೆ ದೂರು ಹೇಳಿದ್ದಳು, ಕನ್ನಡ ಮಾಸ್ಟರು ಡಬ್ಬಲ್ ಮೀನಿಂಗ್ ನಲ್ಲಿ ಹೇಳುತ್ತಾರೆಂದು. ನಂತರ ಇದ್ದ ಮೂರ‍್ನಾಲ್ಕು ಜನ ನನ್ನ ಪ್ರಕಾರ ಬಹಳ ಶ್ರಮ ಜೀವಿಗಳು, ಒಂದೇ ಒಂದು ಮಾತನ್ನು ಆಡುತ್ತಿರಲಿಲ್ಲ. ತೆಜಸ್ವಿನಿ, ರಶ್ಮಿ ಮತ್ತು ನಸೀಮಾ ಬಹಳ ಒಳ್ಳೆಯ ಹುಡುಗಿಯರು. ಜಬೀನಾಳಿಗೆ ಓದುವ ಆಸಕ್ತಿ ಇದ್ದಂತೆ ಕಾಣುತ್ತಿರಲಿಲ್ಲ. ರೇಖಾ ಮತ್ತು ವಿನುತಾ ಚೆನ್ನಾಗಿ ಓದುತ್ತಿದ್ದರು ನನ್ನ ತಿಳುವಳಿಕೆ ಪ್ರಕಾರ ಸ್ವಲ್ಪವೂ ಅಹಂಕಾರವಿಲ್ಲದವರೆನ್ನಬಹುದು. ಮಮತಾ ಎಂಕೆಯನ್ನು ನಾನು ಎಂದಿಗೂ ಮಾತನಾಡಿಸಿಲ್ಲ, ಅವಳು ಚೆನ್ನಾಗಿ ಓದುತ್ತಾಳೆಂದು ಕೇಳಿದ್ದೆ. ಇನ್ನೂ ಕೊನೆಯ ಸಾಲಿನವರು ಹೆಚ್ಚು ಕಡಿಮೆ ನಮ್ಮ ರಕ್ತದವರೇ ಎನ್ನಬಹುದು, ಮಮತಾ ಟಿಎನ್ ಮತ್ತು ಪಂಕಜ ಒಂದು ಗುಂಪಾದರೇ, ಸಜನಿ ಮತ್ತು ಕಾವ್ಯ ಮತ್ತೊಂದು ಗುಂಪು. ರಂಜನಾ ಎಂಬ ಹುಡುಗಿ ಯಾವುದಕ್ಕೂ ಸೇರದೇ ತನ್ನದೇ ಪ್ರಪಂಚದಲ್ಲಿರುತ್ತಿದ್ದಳು. ಅಲ್ಲಿ ಇಲ್ಲಿ ಒಬ್ಬ ಇಬ್ಬರ ಹೆಸರು ತಪ್ಪಿರಬಹುದು. ಇಲ್ಲಿ ಬರೆದಿರುವುದ್ದೆಲ್ಲವೂ ನನ್ನ ವೈಯಕ್ತಿಕ ಅಭಿಪ್ರಾಯ ಯಾರ ಮೇಲಿನ ದ್ವೇಷವೂ ಇಲ್ಲ ಯಾರ ಮೇಲೂ ಅತಿಯಾದ ಪ್ರೀತಿಯಿಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ