ಅದೇನೋ ಗೊತ್ತಿಲ್ಲ ಈ ಮೂರನಾಲ್ಕು ದಿನಗಳಿಂದ ಅತಿಯಾಗಿ ಬರೆಯುತ್ತಿದ್ದೇನೆ. ನಾನು ಒಮ್ಮೊಮ್ಮೆ ಹೀಗೆ ಒಂದೇ ಸಮನೇ ಬರೆಯುವುದು ಕೆಲವೊಮ್ಮೆ ನಿಲ್ಲಿಸಿಬಿಡುವುದು. ಅದೇಕೆ ನಾನು ಹೀಗೆ ಆಡುತ್ತೇನೆಂದರೇ ನನ್ನ ಬಳಿಯಲ್ಲಿ ಉತ್ತರವಿಲ್ಲ. ನನ್ನ ಗೆಳತಿಯೂ ಹೀಗೆ ಕೇಳುತ್ತಿರುತ್ತಾಳೆ. ನೀನು ಮೆಂಟಲ್? ಒಮ್ಮೊಮ್ಮೆ ಪ್ರೀತಿ ಉಕ್ಕಿ ಹರಿಯುತ್ತದೆ, ಮತ್ತೊಮ್ಮೆ ನಾನು ಬದುಕಿದ್ದೀನಿ ಎಂಬುದರ ಅರಿವೇ ಇಲ್ಲದಂತೆ ಮಾಯವಾಗುತ್ತೀಯಾ? ಯಾಕಿಷ್ಟು ಉಢಾಫೆತನ ನನ್ನ ಬಗ್ಗ? ಎನ್ನುತ್ತಾಳೆ. ನನಗೂ ತಿಳಿದಿರುವುದಿಲ್ಲ ಅದು, ಉಢಾಫೆತನವೊ? ಅಥವಾ ನಾನು ನಿಜವಾಗಿಯೂ ಬಿಡುವಿಲ್ಲದೇ ಹಾಗೆ ಮಾಡುತ್ತೇನಾ? ಅದೇನೆ ಇರಲಿ. ಅನುಭವಿಸುವವಳು ಅವಳು. ನಾನು ಮುಖ್ಯವಾಗಿ ಬರೆಯುವುದಕ್ಕೆ ಹೋದದ್ದು, ನನ್ನ ಬಾಲ್ಯದ ದಿನಗಳನ್ನು ಕುರಿತಾಗಿ. ನನಗೆ ನಮ್ಮ ಬಾಲ್ಯದ ದಿನಗಳ ಬಗ್ಗೆ ಬಹಳ ಪ್ರಿತಿಯಿದೆ. ಎಲ್ಲರಿಗೂ ಇರಬಹುದು, ಆದರೇ ನನ್ನ ಬರವಣಿಗೆಯನ್ನು ಓದಿದ ಮೇಲೆ ಹೌದೆನಿಸಬಹುದೆಂಬ ಭಾವನೆಯೊಂದಿಗೆ ಶುರು ಮಾಡುತ್ತಿದ್ದೇನೆ. ನಾನು ಮನೆಯಲ್ಲಿ ಒಬ್ಬನೇ ಮಗನಾಗಿ ಬೆಳೆದೆ. ಆ ದಿನಗಳಲ್ಲಿ ನನಗೊಬ್ಬ, ಅಣ್ಣನೋ, ತಮ್ಮನೋ ಇರಬೇಕಿತ್ತೆನಿಸುತ್ತಿತ್ತು. ಈಗ ಅಣ್ಣ ತಮ್ಮಂದಿರ ಜಗಳ, ವೈಮನಸ್ಯ ನೋಡಿದರೇ ನಾನು ಒಬ್ಬನೇ ಹುಟ್ಟಿದ್ದು ಒಳ್ಳೆಯದ್ದೇ ಆಯಿತೆನಿಸುತ್ತದೆ. ನಾನು ನನಗೆ ನೆನಪಿರುವ ಹಾಗೆ, ನನ್ನ ಶಿಶುವಿಹಾರದ ದಿನಗಳಿಂದಲೂ ನನ್ನ ಬಾಲ್ಯದ ದಿನಗಳು ಬಹುತೇಕ ನೆನಪಿದೆ. ನಾನು ಹುಟ್ಟಿನಿಂದಲೂ ಬಹಳ ಭಾವಜೀವಿ. ನಾನು ಮೊದಲೇ ಹೇಳಿದಂತೆ ಹೆಚ್ಚೆಂದರೇ ಒಂದತ್ತು ಜನರಿಗೆ ನೋವುಂಟು ಮಾಡಿರಬಹುದು, ಆದರೂ ಉದ್ದೇಶಪೂರ್ವಕವಾಗಿ ಮಾಡಿಲ್ಲ. ಪರಿಸ್ಥಿತಿಯ ಒತ್ತಡಕ್ಕೆ ಮಣಿದು ದ್ರೋಹ ಮಾಡಿರುವುದು ಒಂದಿಬ್ಬರಿಗೆ.
ಚಿಕ್ಕಂದಿನಲ್ಲಿ ನನಗೆ ಶಾಲೆಗಿಂತ ಶಿಶುವಿಹಾರವೆಂದರೇ ಬಹಳ ಇಷ್ಟವೆನಿಸುತ್ತಿತ್ತು. ಶಾಲೆಗೆ ಸೇರಿದರೂ, ಮಧ್ಯಾಹ್ನ ಊಟಕ್ಕೆ ಬಿಟ್ಟೊಡನೆಯೇ ಶಿಶುವಿಹಾರಕ್ಕೆ ಓಡೋಡಿ ಬರುತ್ತಿದ್ದೆ. ಶಿಶುವಿಹಾರ ನಮ್ಮ ಮನೆಯ ಎದುರಿನಲ್ಲಿಯೇ ಇದ್ದ ರಾಮಮಂದಿರದಲ್ಲಿತ್ತು. ಈಗ ಶಾಲೆಯ ಪಕ್ಕದಲ್ಲಿ ನಡೆಸುತ್ತಿದ್ದಾರೆ. ಆ ದಿನಗಳಲ್ಲಿ ಶಿಶುವಿಹಾರ ನಡೆಸುತ್ತಿದ್ದದ್ದು, ನಮ್ಮೂರಿನ ಸರೋಜ(ಕ್ಕ), ಅವರು ನಿಜಕ್ಕೂ ನಾನು ಕಂಡ ಅದ್ಬುತಾ ಶಿಕ್ಷಕಿಯರಲ್ಲೊಬ್ಬರೆಂದರೇ ತಪ್ಪಿಲ್ಲ. ಅವರು ಹೇಳಿ ಕೊಡುತ್ತಿದ್ದ, ಮಗ್ಗಿ, ಪಾಠ, ಹಾಡುಗಳು, ಅದನ್ನು ಅವರು ಅನುಭವಿಸಿ, ಕುಣಿದು ಕುಪ್ಪಳಿಸಿ ಹೇಳಿಕೊಡುತ್ತಿದ್ದ ರೀತಿ ಎಲ್ಲರನ್ನೂ ಹಿಡಿದು ನಿಲ್ಲಿಸುತ್ತಿತ್ತು. ನಾನು ಶಾಲೆಯಿಂದ ಊಟಕ್ಕೆ ಬಂದೊಡನೆ ಶಿಶುವಿಹಾರಕ್ಕೆ ಹೋಗಿ, ಅರ್ಧ ಗಂಟೆ ಕುಣಿದು, ಹಾಡು ಹೇಳಿ ನಂತರ ಊಟ ಮಾಡಿ ವಾಪಾಸ್ಸಾಗುತ್ತಿದ್ದೆ. ಅವರು ಇಂದಿಗೂ ನಾನು ಊರಿಗೆ ಹೋದರೇ ಅಕ್ಕರೆಯಿಂದ ಮಾತನಾಡಿಸುತ್ತಾರೆ. ನಮ್ಮಮ್ಮನನ್ನು ಆಗ್ಗಾಗ್ಗೆ ವಿಚಾರಿಸುತ್ತಿರುತ್ತಾರಂತೆ.
ಹಾಗೇಯೇ ಶಾಲೆಯಲ್ಲಿ ಓದುವಾಗ ಮೂರನೇಯ ತರಗತಿಯವರೆಗೆ ಯೋಗಿ ನಮ್ಮ ಜೊತೆಯಲ್ಲಿ ಓದುತ್ತಿದ್ದ. ಅದಾದ ನಂತರ ಅವನು ಮೈಸೂರಿಗೆ ಹೋದ. ಆ ಸಮಯದಲ್ಲಿ ಅವರ ಅಣ್ಣ ಫಾಲಾಕ್ಷ, ಕೊಪ್ಪದಲ್ಲಿ ಕಾನ್ವೆಂಟ್ ನಲ್ಲಿ ಓದುತ್ತಿದ್ದ. ನಮ್ಮದು ಸರ್ಕಾರಿ ಕನ್ನಡ ಶಾಲೆ, ಕೊಪ್ಪ ಕಾನ್ವೆಂಟ್ ಎಂದರೇ ನಮಗೆ ಆಕ಼್ಷಫರ್ಡ್ ಇದ್ದ ಹಾಗೆನಿಸಿತ್ತು. ಶಾಲೆಯ ಪಕ್ಕದಲ್ಲಿ ಶನಿದೇವರ ದೇವಸ್ಥಾನವಿದೆ. ಮಾರಯ್ಯ ಅಲ್ಲಿನ ಪೂಜಾರಿ. ಅವರ ತಮ್ಮನ ಮಗ ವರ ನಮ್ಮ ಕ್ಲಾಸಿನಲ್ಲಿ ಓದುತ್ತಿದ್ದ. ತಡೆ ಒಡೆಯುವುದು, ನಿಂಬೆ ಹಣ್ಣು ಮಂತ್ರಿಸುವುದು, ದೆವ್ವ ಭೂತ ಬಿಡಿಸುವುದೆಲ್ಲ ನಡೆಯುತ್ತಿತ್ತು. ನಮಗೆ ಆಗೆಲ್ಲ ತಿಂಗಳ ಕಿರುಪರೀಕ್ಷೆ ಇರಲಿಲ್ಲ. ಅವರಿಗೆ ಇಷ್ಟ ಬಂದಾಗ ಕೊಡುತ್ತಿದ್ದರು. ಯೊಗಿ ಬಹಳ ಚೆನ್ನಾಗಿ ಓದುತ್ತಿದ್ದ, ಅವನು ವರ, ಮಹೇಶ, ಪ್ರಕಾಶ, ಲಿಂಗರಾಜು ಈ ಹುಡುಗರಿಗೆ ತೋರಿಸದೇ ಇದ್ದರೇ ನಿಂಬೆಹಣ್ಣು ಮಂತ್ರಿಸಿ ನಿನಗೆ ಮಾತು ಬಾರದಂತೆ ಮಾಡುತ್ತೇನೆಂದು ಹೆದರಿಸುತ್ತಿದ್ದರು. ಬಹಳಷ್ಟು ಜನರು ಹೇಳುತ್ತಾರೆ, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂದು, ನಾನು ಅದನ್ನು ಒಪ್ಪುವುದಿಲ್ಲ. ನೀವು ಗಮನಿಸಿ ನೋಡಿ, ಜೀವನದಲ್ಲಿ ಅತಿ ಮುಂದುವರೆದವರೆಲ್ಲರೂ ಹುಟ್ಟಿನಿಂದ ದಡ್ಡರೂ, ನೊಂದಿರುವವರು. ಆ ನೋವಿನ ಫಲವೇ ಅವರನ್ನು ಎತ್ತರಕ್ಕೆ ಬೆಳೆಸುತ್ತದೆ. ಯೋಗಿ ಮೈಸೂರಿಗೆ ಹೋದ ಮೇಲೆ ಏನಾದನೆಂಬುದು, ಅವನು ಹತ್ತನೆಯ ತರಗತಿಯಲ್ಲಿ ಪಾಸಾದ ಮೇಲೆ ಗೊತ್ತಾಯಿತು. ಅದೇ ಸಮಯದಲ್ಲಿ, ವೇಣು, ವೀಣಾ, ವೇದಾ ಎಂಬ ಮೂವರು ಮೈಸೂರಿಗೆ ಹೋದರು, ಅವರೆಲ್ಲರೂ ಯೋಗಿ ಅವರ ನೆಂಟರು. ಮೈಸೂರಿಗೆ ಹೋಗಿ ಮಕ್ಕಳನ್ನು ಚೆನ್ನಾಗಿ ಓದಿಸಬೇಕೆಂಬ ಆಸೆಯಿಂದ ಮೈಸೂರು ಸೇರಿದ ಮೂರು ಕುಟುಂಬಗಳು. ವಿಚಿತ್ರವೆಂದರೇ, ಮೂರು ಕುಟುಂಬದಿಂದಲೂ ಅತಿಯೇನೂ ಓದಲಿಲ್ಲ.
ನಮ್ಮ ಓದು ಸರ್ವೇ ಸಾಮಾನ್ಯವಾಗಿ ನಡೆದಿತ್ತು. ನಮ್ಮ ಅಪ್ಪ ಎಪ್ಪತ್ತರ ದಶಕದಲ್ಲಿಯೇ, ಬಿಎ ಓದಿದ್ದರು. ಅವರು ಬಹಳ ಶಿಸ್ತಿನ ವ್ಯಕ್ತಿ. ನಮ್ಮ ಇಡೀ ಕುಟುಂಬದಲ್ಲಿಯೇ ಅವರಿಗೆ ಹೆಚ್ಚಿನ ಗೌರವವಿತ್ತು. ಅವರನ್ನು ನೋಡಿದರೇ ಬಹಳ ಜನ ಹೆದರುತ್ತಿದ್ದರು, ಅವರು ಒಮ್ಮೆ ಹೇಳಿದರೇ ಬದಲಾಯಿಸುವ ಪ್ರಮೇಯವೇ ಇರಲಿಲ್ಲ. ಇಂದಿಗೂ ಅದನ್ನು ಪಾಲಿಸುತ್ತ ಬಂದಿದ್ದಾರೆ. ಯಾವುದೇ ಕೆಟ್ಟ ಚಟಗಳಿರಲಿಲ್ಲ. ಚಿಕ್ಕಂದಿನಲ್ಲಿ ನನಗೆ ಅಲ್ಪ ಸ್ವಲ್ಪ ಓದುವುದನ್ನು ಹೇಳಿಕೊಡುತ್ತಿದ್ದರು. ನಾನು ಅದರಿಂದಾಗಿ, ಎಬಿಸಿಡಿಯನ್ನು, ಇಪ್ಪತ್ತರವರೆಗೆ ಮಗ್ಗಿಯನ್ನು, ಕಾಗುಣಿತವನ್ನು ನನ್ನ ಎರಡನೇಯ ಕ್ಲಾಸಿನಲ್ಲಿಯೇ ಕಲಿತಿದ್ದೆ. ಒಂದು ದಿನ ಇದ್ದಕ್ಕಿದ್ದ ಹಾಗೆ ವಾಸು ಮಾಸ್ಟರು ನನ್ನನ್ನು ಅವರು ಪಾಠ ಮಾಡುತ್ತಿದ್ದ, ಏಳನೆಯ ತರಗತಿಗೆ ಕರೆದರು. ನಾನು ಬಾಗಿಲ ಬಳಿಯಲ್ಲಿ ನಿಂತೆ, ಸಾ ಎಂದೆ. ಅವರೆಂದರೇ ಎಲ್ಲರೂ ಗಡ ಗಡ ಎನ್ನುತ್ತಿದ್ದರು. ಚೆನ್ನಾಗಿ ಪಾಠ ಮಾಡುತ್ತಿದ್ದರು ಕೂಡ. ನಾನು ಬಾಗಿಲ ಬಳಿಯಲ್ಲಿ ನಿಂತು ನೋಡಿದರೇ, ನಾಲ್ಕೈದು ಜನ ದಾಂಡಿಗರು ಮಂಡು ಊರಿಕೊಂಡು ಕಿವಿ ಹಿಡಿಯುತ್ತಿದ್ದರು. ಅಂಥಹ ಶಿಕ್ಷೆಯೇ ಇಲ್ಲ ಬಿಡಿ ಈಗ. ನನ್ನನ್ನು ಒಳಗೆ ಕರೆದು ಹದಿನಾಲ್ಕರ ಮಗ್ಗಿ ಹೇಳು ಎಂದರು, ನಾನು ಸ್ವಲ್ಪ ಭಯದಿಂದಲೇ ಶುರು ಮಾಡಿಕೊಂಡು ಹೇಳಿ ಮುಗಿಸಿದೆ.
ಎರಡನೆಯ ಕ್ಲಾಸಿನ ಹುಡುಗ, ಹದಿನಾಲ್ಕರ ಮಗ್ಗಿ ಹೇಳುವುದು ನಿಜಕ್ಕೂ ಹೆಮ್ಮೆಯ ವಿಷಯ. ಅದಾದ ಮೇಲೆ ಎಲ್ಲರಿಗೂ ಮೂಗು ಹಿಡಿದು ಕೆನ್ನೆಗೆ ಹೊಡೆಯಲು ಹೇಳಿದರು. ನನಗೆ ಹೊಡೆಯಲು ಭಯ. ಅವರುಗಳ ಮುಖವನ್ನು ನೋಡದೇ ಹೊಡೆದು ಓಡಿ ಬಂದು ನನ್ನ ಕ್ಲಾಸಿಗೆ ಸೇರಿಕೊಂಡೆ. ಆ ದಾಂಡಿಗರೆಲ್ಲರೂ ಏಳನೆಯ ತರಗತಿಯವರು, ಮೂರು ದಿನದ ಹಿಂದೆಯಷ್ಟೇ ಪಕ್ಕದ ಊರಾದ ಸೀಗೋಡಿನ ಹುಡುಗರ ಜೊತೆ ಜಗಳವಾಡಿ, ಅವರ ಕಣ್ಣಿಗೆ ಮೆಣಸಿನ ಪುಡಿ ಹಾಕಿ ಬಂದಿದ್ದರು. ನಾನು ಆಟೋಟಗಳಲ್ಲಿ ಮುಂದಿರಲಿಲ್ಲ. ಆದರೇ, ಓದುವುದರಲ್ಲಿ, ಇತರೇ ಚಟುವಟಿಕೆಗಳಾದ, ನಾಟಕ, ಹಾಡು ಹೇಳುವುದು, ಬರೆಯುವುದು, ಕಂಠಪಾಟ ಸ್ಪರ್ಧೆಗಳಲ್ಲಿ ಮುಂದಿರುತ್ತಿದ್ದೆ. ಒಂದರಿಂದ ಏಳನೇಯ ತರಗತಿಯವರೆಗೂ ವರ್ಷಕ್ಕೆ ಹತ್ತು ಬಹುಮಾನವನ್ನಾದರೂ ದೋಚುತ್ತಿದ್ದೆ. ನನಗಿಂದಿಗೂ ನೆನಪಿದೆ, ವಾಸು ಮಾಸ್ಟರು ಹೋದಮೇಲೆ, ನಾಗೇಶಯ್ಯ ಎಂಬುವರು ಬಂದಿದ್ದರು. ಅದ್ಬುತವಾಗಿ ಪಾಠ ಮಾಡುತ್ತಿದ್ದರು. ನಂತರ ಲೋಕೇಶ್ ಮಾಸ್ಟರು ಬಂದರು ವಯಸ್ಸಿನಲ್ಲಿ ಬಹಳ ಚಿಕ್ಕವರಿದ್ದರು, ಮದುವೆಯಾಗಿರಲಿಲ್ಲ. ಅವರು ಬಂದ ಹೊಸತರಲ್ಲಿ ನೀವೆಲ್ಲಾ ಏನಾಗುತ್ತೀರಾ? ಎಂದರು. ಅದು ನನಗೆ ನಿಜಕ್ಕೂ ತಮಾಷೆಯೆನಿಸುತ್ತದೆ. ಏನಾಗಬೇಕೆಂಬುದರ ಅಲ್ಪ ಕಲ್ಪನೆಯೂ ನಮಗಿಲ್ಲ. ನಾನು ಎಂಎಸ್ಸಿಯಲ್ಲಿದ್ದಾಗ ಕೂಡ ಈ ಮಾತಿಗೆ ನಾನು ನಕ್ಕಿದ್ದೆ. ನಾನು ಮೊದಲನೆಯ ದಿನ ಹೋಗಿ SP ಆಗುತ್ತೇನೆ ಎಂದೆ, ರಾತ್ರಿ ಇಡೀ ಯೋಚಿಸಿದೆ, ಪೋಲಿಸು ಕೆಲಸ ಸರಿ ಇಲ್ಲವೆನಿಸಿತು. ಮಾರನೇಯ ಬೆಳ್ಳಿಗೆ ಹೋಗಿ ಹೇಳಿದೆ, ಸಾ ನಾನು SP ಆಗುವುದಿಲ್ಲ JE ಆಗುತ್ತೇನೆಂದು. ಅವರು ನಕ್ಕು ಹೇಳಿದರು, ನೀವು ಏನೇನು ಹೇಳಿದ್ದಿರೋ ಅದನ್ನು ಇಲ್ಲಿ ಬರೆದಿಟ್ಟಿದ್ದೇನೆ, ಮುಂದೊಂದು ದಿನ ತೆಗೆದು ನೋಡಬಹುದು ಎಂದು.
ಲೋಕೇಶ್ ಮಾಸ್ಟರು ಬಂದು ನಮಗೆ ಬೆಳ್ಳಿಗ್ಗೆ ಎದ್ದು ಓಡಿದರೇ ಆರೋಗ್ಯವಂತರಾಗಿರುತ್ತಾರೆ, ಆದ್ದರಿಂದ ನೀವು ಓಡಬೇಕು ಎಂದರು. ಚಿಕ್ಕಂದಿನಲ್ಲಿ ಏನು ಹೇಳಿದರೂ ಮಾಡುತ್ತೇವೆ, ಬಹಳ ಹುಮ್ಮಸ್ಸಿನಿಂದ ಏಳುವುದನ್ನು ಅಭ್ಯಾಸ ಮಾಡಿದೆವು. ನಾಲ್ಕು ಗಂಟೆಗೆ ಏಳುವುದು, ಎಲ್ಲಾ ಹುಡುಗರನ್ನು ಎಬ್ಬಿಸುವುದು, ಎಲ್ಲರೂ ಒಟ್ಟಿಗೆ ಸೇರಿ, ಓಡುವುದು, ಬಂದಮೇಲೆ, ಕೋಕೊ ಆಡುವುದು, ಒಂಟಿ ಕಾಲಲ್ಲಿ ಜೂಟಾಟ ಆಡುವುದು ಆಮೇಲೆ ಮನೆಗೆ ಹೋಗುವುದು. ನಾನು ಬಹಳ ಕುಳ್ಳಗಿದ್ದೆ, ಓದುವುದರಲ್ಲಿ ಚುರುಕಿದ್ದೆ. ಆ ಸಮಯದಲ್ಲಿ ನನ್ನ ಕಿರಿಯರಾದ, ನಂದಿನಿ ಮತ್ತು ಶೀಲಾ ಎಂಬ ಎರಡು ಹುಡುಗಿಯರಿಗೆ ನನ್ನ ಮೇಲೆ ಏನೋ ಒಂದು ಬಗೆಯ ಅಭಿಮಾನವಿತ್ತು. ನನ್ನ ವಿಷಯಕ್ಕಾಗಿ ಅವರಿಬ್ಬರು ಜಗಳವಾಡಿ ಮುನಿಸಿಕೊಂಡಿದ್ದು ನನಗಿಂದಿಗೂ ನೆನಪಿದೆ. ಆ ವಯಸ್ಸಿನಲ್ಲಿ ಅದೇನು? ಪ್ರೀತಿಯಾ? ಆಕರ್ಷಣೆಯಾ? ನನಗಿಂದಿಗೂ ತಿಳಿದಿಲ್ಲ.
ನನ್ನ ಪ್ರೈಮರಿ ದಿನಗಳಲ್ಲಿ ರಂಗಪ್ಪ ಎನ್ನುವ ಒಬ್ಬ ಮಾಸ್ತರಿದ್ದರು. ಹಳೇ ಮಾಸ್ಟರೆಂದು ಹೆಸರುವಾಸಿಯಾಗಿದ್ದರು. ಅವರು ಮಧ್ಯಾಹ್ನ ಊಟವಾದಮೇಲೆ, ಮೂರು ಹಲಗೆಗಳನ್ನು ಜೋಡಿಸಲಿ ಹೇಳಿ ಒಂದು ಗಂಟೆಗಳ ಕಾಲ ಮಲಗುತ್ತಿದ್ದರು. ಅದನ್ನು ನೆನಪಿಸಿಕೊಂಡರೇ ಇಂದಿಗೂ ನಗು ಬರುತ್ತದೆ. ಏಳನೇಯ ಕ್ಲಾಸಿನ ಹುಡುಗರಿಗೆ ಹೇಳಿ, 10, 25, 50 ಪೈಸೆಗಳನ್ನು ವಸೂಲಿ ಮಾಡಿ ಬೀಡಿ ಸೇದುತ್ತಿದ್ದರು. ಆ ಸಮಯದಲ್ಲಿಯೇ ವಾಸು ಮಾಸ್ಟರು ಬಂದದ್ದು. ನಾವು ಶುರುವಿನಲ್ಲಿ ವಾಸು ಮಾಸ್ಟರನ್ನು ಹೊಸ ಮಾಸ್ಟರು, ಹಳೇ ಮಾಸ್ಟರು ಎನ್ನುತ್ತಿದ್ದೆವು. ಸ್ವಲ್ಪ ದಿನಗಳ ಮಟ್ಟಿಗೆ ಸುಂದರ್ ಮಾಸ್ಟರ್ ಎಂಬುವರು ಬಂದರು. ಅವರು ಬಹಳ ದಪ್ಪವಿದ್ದರು, ಆ ದಿನಗಳಲ್ಲಿ ನಮ್ಮೂರಿಗೆ ಬರುವುದೇ ದೊಡ್ಡ ಸಮಸ್ಯೆ, ಬಸ್ಸಿರಲಿಲ್ಲ, ಆಗಿನ ಸಂಬಳ ಪಾಪ ಬೈಕ್ ತೆಗೆದುಕೊಳ್ಳುವ ಸ್ಥಿತಿಗೆ ಸಾಕಾಗುತ್ತಿರಲಿಲ್ಲ. ಸೈಕಲ್ ಹಾಕಿಕೊಂಡು, ನಡೆದುಕೊಂಡು ಬರುತ್ತಿದ್ದರು. ಅದಾದ ನಂತರ ಬಂದದ್ದು, ನರಸಿಂಹ ಮಾಸ್ಟರು, ಅವರು ಹಳೆಯ ಲೂನಾದಲ್ಲಿ ಬರುತ್ತಿದ್ದರು. ಅವರ ಮಗ ಉಮೇಶ ಕೊಣನೂರಿಗೆ ಸೇರಿದ ಮೇಲೆ ನನ್ನ ಸ್ನೇಹಿತನಾದ. ಹಿಂದೆ ಶಾಲೆಗಳಲ್ಲಿ ರಾಷ್ಟ್ರಗೀತೆಯನ್ನು ಬಹಳ ಶಿಸ್ತುಬದ್ದವಾಗಿ ಹಾಡೀಸುತ್ತಿದ್ದರು, ಸರಿಯಾಗಿ ರಾಗ ಬಾರದಿದ್ದರೇ ಎರಡು ಮೂರು ಬಾರಿ ಹಾಡಬೇಕಿತ್ತು. ಅಂದು ಕೂಡ ಹಾಗೆಯೇ ಆಯಿತು, ನಾವು ಎತ್ತು ಉಚ್ಚೆ ಉಯ್ಯಿದ ಹಾಗೆ ಒಂದೇ ಸಮನೇ ಹಾಡಿಕೊಂಡು ಹೋದೆವು. ನಾಗೇಶಯ್ಯನವರು ರಾಗವಾಗಿ ಹೇಳಿ, ಜಯ ಜಯ ಜಯಜಯಹೇ ಎಂದರು. ಅದೇ ಸಮಯಕ್ಕೆ ನರಸಿಂಹಯ್ಯನವರು ತಮ್ಮ ಕೈಯಿಂದ ಪ್ಯಾಂಟನ್ನು ಕೆರೆದುಕೊಳ್ಳುತ್ತಾ ಜಯ ಜಯ ಜಯ ಜಯಹೇ ಅನ್ನಬೇಕೂ ಕನ್ರೋ ಪ್ಯಾಪ್ ಮುಂಡೇವಾ... ಎಂದರು. ಅವರು ಆ ದಿನದಂದು ಗೀಟೀರು ಬಾರಿಸಿಕೊಂಡು ಹೇಳಿದ್ದು, ಇಂದಿಗೂ ಉಳಿದಿದೆ, ನನ್ನೆಲ್ಲಾ ಪ್ರೈಮರಿ ಸ್ಕೂಲಿನ ಸ್ನೇಹಿತರು ನೆನಪಿಸಿಕೊಂಡು ನಗುತ್ತಾರೆ.
ಆ ಸಮಯದಲ್ಲಿ ನಮ್ಮೂರಿನಲ್ಲಿ ಟ್ಯೂಷನ್ ಮಾಡುವುದಕ್ಕೆ ಒಬರು ವೆಂಕಟೇಶ್ ಎಂಬುವರಿದ್ದರು. ಅವರು ಕೊಣನೂರಿನ ಕಾವೇರಿ ಹೈಸ್ಕೂಲಿನಲ್ಲಿ ಪಿಟಿ ಮಾಸ್ಟರಾಗಿದ್ದರು. ಒಳ್ಳೆಯ ಮನುಷ್ಯ, ಬಹಳ ಜಿಪುಣ. ಅವರು ಇಂದಿಗೂ ಬದಲಾಗಿಲ್ಲ. ಬಹಳ ಶಿಸ್ತಿನ ಮನುಷ್ಯರಾಗಿದ್ದರು. ನಮ್ಮೂರಿನವರು ಅವರನ್ನು ಕರೆದು ತಂದು, ಒಂದು ರೂಮನ್ನು ಮಾಡಿಸಿ, ಊರಿನ ಮಕ್ಕಳಿಗೆ ಪಾಠ ಮಾಡುವಂತೆ ಕೇಳಿದ್ದರು. ತಿಂಗಳಿಗೆ ಹತ್ತು ರೂಪಾಯಿಯಂತೆ ಅವರು ಪಾಠ ಮಾಡುತ್ತಿದ್ದರು. ನನಗೆ ನೆನಪಿರುವ ಪ್ರಕಾರ ಅಲ್ಲಿಗೆ ನಲ್ವತ್ತು ಮಕ್ಕಳು ಬರುತ್ತಿದ್ದರು, ರಾಮ ಮಂದಿರದಲ್ಲಿ ಪಾಠ ಮಾಡುತ್ತಿದ್ದರು. ನಲ್ವತ್ತು ಮಕ್ಕಳಲ್ಲಿ ಸರಿಯಾಗಿ ದುಡ್ಡು ಕೊಡುತ್ತಿದ್ದದ್ದು ಕೇವಲ ಹತ್ತು ಮಕ್ಕಳು ಮಾತ್ರ. ಅವರು ನಮಗೆಲ್ಲರಿಗೂ ಕಲಿಸಲು ಪಟ್ಟ ಪ್ರಯತ್ನ ಅಷ್ಟಿಸ್ಟಲ್ಲ.ಬೆಳ್ಳಿಗ್ಗೆ ಏಳು ಗಂಟೆಯಿಂದ ಒಂಬತ್ತರವರೆಗೆ ಪಾಠ ನಡೆಯುತ್ತಿತ್ತು. ಸಂಜೆ ಐದು ವರೆಯಿಂದ ಏಳುವರೆಯ ವರೆಗೆ. ಎಲ್ಲರೂ ಮುಖ ಕೈಕಾಲು ಮುಖ ತೊಳೆದು ಹಣೆಗೆ ವಿಭೂತಿ ಬಳಿದುಕೊಂಡು ಬರಬೇಕಿತ್ತು. ನಿಮಗೆಲ್ಲರಿಗೂ ಆಶ್ಚರ್ಯವಾಗಬಹುದು, ಮುಖ ತೊಳೆಯುವುದು ಒಂದು ವಿಷಯವಾ? ಎಂದು ನಮ್ಮಲ್ಲಿ ಅನೇಕಾ ಹುಡುಗರು, ಸರಿಯಾಗಿ ಮುಖವನ್ನೇ ತೊಳೆಯುತ್ತಿರಲಿಲ್ಲ, ಮುಖಕ್ಕೆ ನಾಲ್ಕು ಹನಿ ನೀರು ತಗಳಿಸಿಕೊಂಡು ಬಂದು ಬಿಡುತ್ತಿದ್ದರು. ಎಲ್ಲರ ಕಾಲುಗಳನ್ನು ನೋಡಿ ಕಾಲಿಗೆ ಎರಡು ಬಿಗಿದು ವಾಪಸ್ಸು ಕಳುಹಿಸುತ್ತಿದ್ದರು. ಸಮಯವನ್ನು ನೋಡಿ, ಇನ್ನು ಮೂರು ನಿಮಿಷದಲ್ಲಿ ವಾಪಸ್ಸು ಬರಬೇಕು ಎನ್ನುತ್ತಿದ್ದರು, ಓಡಿದವನು ಓಡುತ್ತಲೇ ಹೋಗಿ, ವಾಪಸ್ಸು ಓಡಿ ಬರುತ್ತಿದ್ದ. ಅವರು ನಮ್ಮೂರಿನಲ್ಲಿದ್ದ ಹುಡುಗರಿಗೆ ಇಡಿಸಿದ್ದ ಭಯ ಮೆಚ್ಚಲೇ ಬೇಕು. ಎಲ್ಲರೂ ಮಗ್ಗಿಯನ್ನು ಹೇಳಬೇಕು, ಪ್ರಾರ್ಥನೆ ಮಾಡಬೇಕು, ಕಾಗುಣಿತ ಹೇಳಬೇಕು, ಪಾಠವನ್ನು ಓದಬೇಕು, ಡಿಕ್ಟೇಷನ್ ತೆಗೆದುಕೊಳ್ಳಬೇಕು, ನಾನು ಇಂದಿಗೂ ಅವರು ಸಿಕ್ಕಾಗ ಹೇಳುತ್ತೇನೆ, ಆದರೇ ಈಗ ಅವರು ಸರ್ಕಾರಿ ಕೆಲಸದಲ್ಲಿದ್ದಾರೆ ನೆಮ್ಮದಿಯ ಬದುಕು ಆದರೇ ಆ ಮಟ್ಟಗಿನ ಶಿಸ್ತಿಲ್ಲ.
ಇದೆಲ್ಲವೂ ಶಾಲೆಯೊಳಗಿನ ಕಥೆಯಾದರೇ, ಶಾಲೆಯ ಹೊರಗಿನ ಕಥೆಯೇ ಬೇರೆ. ನನಗೆ ಜಮೀನೆಂದರೇ ಒಂದು ಬಗೆಯ ಆಸಕ್ತಿಯಿತ್ತು. ನಾನು ಮನೆಯಲ್ಲಿ ಕುಳಿತುಕೊಳ್ಳುವುದು ಓದುವುದು ಎಂದರೇ ಅಲರ್ಜಿ. ಮನೆಯಲ್ಲಿ ಹೋಂವರ್ಕ್ ಕೂಡ ಮಾಡುತ್ತಿರಲಿಲ್ಲ. ಬೆಳ್ಳಿಗ್ಗೆ ಶಾಲೆಗೆ ಹೋಗುವ ಸಮಯದಲ್ಲಿ ಅಮ್ಮನ ಎದುರು ಅಳುತ್ತಿರುತ್ತಿದ್ದೆ, ಅಮ್ಮ ಅಥವಾ ಅಕ್ಕ ನನ್ನ ಹೋಂವರ್ಕ್ ಮಾಡುತ್ತಿದ್ದರು. ಮುಂಜಾನೆ ಎದ್ದ ಕೂಡಲೇ ಅಮ್ಮ ಬಿಸಿ ಬಿಸಿ ಕಾಫಿ ಕೊಡುತ್ತಿದ್ದರು. ನಾನು ಐದನೇ ಕ್ಲಾಸಿನಿಂದಲೇ ಕಾಫಿ ಮಾಡುವುದನ್ನು ಕಲಿತೆ. ಆಗ ಸೀಮೆ ಎಣ್ಣೆ ಸ್ಟವ್ ಇರುತ್ತಿತ್ತು. ನಮ್ಮನೆಯಲ್ಲಿರುವ ಸ್ಟವ್ ನಮ್ಮಪ್ಪ ಓದುವ ಸಮಯದಲ್ಲಿ ತೆಗೆದುಕೊಂಡದ್ದು. ಕಾಫಿ ಕುಡಿದು ಗದ್ದೆಯ ತನಕ ಹೋಗಿ, ಅಲ್ಲಿಂದ ಕಟ್ಟೆಯ ಬಳಿಗೆ ಹೋಗಿ ಬರುತ್ತಿದ್ದೆ. ದಿನಕ್ಕೊಮ್ಮೆಯಾದರೂ ನಾನು ನದಿಯನ್ನು ನೋಡಲೇ ಬೇಕಿತ್ತು. ನಮ್ಮೂರಿನಲ್ಲಿ ನದಿಯ ಬಗ್ಗೆ ಅತಿಯಾದ ಒಲವು ಬೆಳೆಸಿಕೊಂಡದ್ದು ನಾನೊಬ್ಬನೇ ಎನಿಸುತ್ತದೆ. ನದಿ ದಂಡೆಗೆ ಹೋಗುವುದು, ಹೊಂಗೆಯ ತೋಪಿನಲ್ಲಿ ಸಮಯ ಕಳೆಯುವುದು, ನದಿಗೆ ಅಡವಾಗಿ ಕಟ್ಟಿರುವ ಕಟ್ಟೆಯ ಮೇಲೆ ಕುಳಿತುಕೊಳ್ಳುವುದು ಇದೆಲ್ಲವೂ ನನಗೆ ಎಲ್ಲಿಲ್ಲದ ಸಂತೋಷವನ್ನು ನೀಡುತ್ತಿತ್ತು. ನಮ್ಮಮ್ಮನಿಗೆ ತಿಳಿದ ದಿನ ಹರಿಕಥೆ ಮಾಡುತ್ತಿದ್ದರು. ಮಕ್ಕಳು ಆ ಕಡೆಯಲ್ಲ ಹೋಗಬಾರದು, ಸೋಕು ಆಗುತ್ತದೆ, ಅಲ್ಲಿ ಹೆಣ ಸುಡುತ್ತಾರೆಂಬುದು ಅವರ ನಂಬಿಕೆ. ನಮ್ಮ ಚಿಕ್ಕಪ್ಪನ ಮಕ್ಕಳು ಬಹಳ ಬುದ್ದಿವಂತರು, ಅವರ ಅಪ್ಪ ರೈತನಾಗಿದ್ದರಿಂದ ವ್ಯವಸಾಯದ ವಿಷಯವನ್ನು ಚೆನ್ನಾಗಿ ತಿಳಿದಿದ್ದರು. ಅವರು ಆ ದಿನಗಳಲ್ಲಿ ನನ್ನನ್ನು ಗೇಲಿ ಮಾಡುತ್ತಿದ್ದರು, ವಿಪರ್ಯಾಸವೆಂದರೇ ಅವರೆಲ್ಲ ಬೆಂಗಳೂರು ಸೇರಿದ್ದಾರೆ, ಊರಿನ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ. ನಾನು ನನ್ನೂರೆಂದರೇ ಪ್ರಾಣವೆನ್ನುತ್ತೇನೆ.
ನನ್ನ ಬಾಲ್ಯದ ದಿನಗಳಲ್ಲಿ ಹೆಚ್ಚು ಖುಷಿ ಕೊಟ್ಟಿದ್ದು ನನ್ನಜ್ಜಿಯ ಮನೆಯಲ್ಲಿ ಕಳೆದ ದಿನಗಳು. ನನ್ನ ತಾತನ ಜೊತೆಗೆ ಕಳೆದ ಕ್ಷಣಗಳು. ನನ್ನ ತಾತನ ಬಗ್ಗೆ ಮತ್ತೊಮ್ಮೆ ಬರೆಯುತ್ತೇನೆ. ನಾನು ಪ್ರತಿ ವಾರ ಅಥವಾ ಹದಿನೈದು ದಿನಕ್ಕೊಮ್ಮೆಯಾದರೂ ನನ್ನಜ್ಜಿಯ ಮನೆಗೆ ಹೋಗುತ್ತಿದ್ದೆ. ನಾನು ಚಿಕ್ಕವನಿದ್ದಾಗಲಿಂದಲೂ ಬಹಳ ಚುರುಕಿನವನೆಂದು ಎಲ್ಲರೂ ಹೇಳುತ್ತಾರೆ, ನನಗೆ ಅದರ ಬಗ್ಗೆ ನಂಬಿಕೆಯಿಲ್ಲ. ನಾನು ಗುಮ್ಮನಕೊಲ್ಲಿಗೆ ಶನಿವಾರ ಮಧ್ಯಾಹ್ನ ಹೋದರೇ, ಭಾನುವಾರ ಬೆಳ್ಳಿಗ್ಗೆ ವ್ಯಾನಿಗೆ ಹತ್ತಿ ಬರುತ್ತಿದ್ದೆ. ಶನಿವಾರವಿದ್ದ ಸಂತೋಷ ಸೋಮವಾರವಿರುತ್ತಿರಲಿಲ್ಲ. ಗುಮ್ಮನಕೊಲ್ಲಿಯಲ್ಲಿ ನನ್ನ ಜೊತೆಗೆಂದು ನವೀನ, ಸೂರಿ, ದೀನೇಶ್, ಕುಮಾರ ಹೀಗೆ ದೊಡ್ಡ ಹಿಂಡೇ ಇರುತ್ತಿತ್ತು. ಮೊದಲ ದಿನಗಳಲ್ಲಿ ಗೋಲಿ ಆಟ, ಬೇಲೆ ಆಡುವುದು, ಕಾಸಿನ ಆಟಗಳೇ ಹೆಚ್ಚಿದ್ದವು. ಹೈಸ್ಕೂಲಿಗೆ ಬಂದ ಮೇಲೆ ಕ್ರೀಕೇಟ್ ಆಟ ಶುರುವಾಯಿತು. ಆ ದಿನಗಳಲ್ಲಿ ನೂರು ಇನ್ನೂರರ ತನಕ ದುಡ್ಡಿನ ಆಟವಾಡುತ್ತಿದ್ದೆವು. ಜೇಬಲ್ಲಿ ಕಾಸಿಲ್ಲದಿದ್ದರೇ, ಸಿಗರೇಟು ಪ್ಯಾಕಿನಿಂದ ಮಾಡಿದ ಟಿಕ್ಕಿ ಆಟವಾಡುತ್ತಿದ್ದೆವು. ಬೇಸಿಗೆಯ ರಜೆ ಬಂದ ತಕ್ಷಣ ಕುಶಾಲನಗರ ತಲುಪುತ್ತಿದ್ದೆ. ನಮ್ಮಜ್ಜಿಯ ಮನೆಯ ಪಕ್ಕ ನಮ್ಮ ತಾತನ ತಮ್ಮಂದಿರ ಮನೆ, ಮೂರು ಮನೆಗಳಿಂದ ಸೇರಿ ಒಂದತ್ತಿಪ್ಪತ್ತು ಹುಡುಗರು ಸೇರುತ್ತಿದ್ದೆವು. ನಮ್ಮ ಮನೆಯವರು ನಾಲ್ಕು ಜನ, ರಮಿತಕ್ಕ, ಸುನಿತಾ, ಅನಿತಾಕ್ಕ, ರತನ್, ಮಹೇಶಣ್ಣ, ಕುಮಾರ, ಪ್ರದೀಪ, ನವೀನ, ಹೀಗೆ ಎಲ್ಲರೂ ಸೇರಿದರೇ ಅದೆಷ್ಟು ಆಟಗಳೋ ಲೆಕ್ಕಕ್ಕಿಲ್ಲ.
ನಮ್ಮ ತಾತನ ಮನೆಯಲ್ಲಿ, ಮಾವಿನ ಮರ, ಹಲಸಿನ ಮರ, ಸೀಬೆ ಮರಗಳಿದ್ದವು. ಪಕ್ಕದ ಅಜ್ಜಿಯ ಮನೆಯಲ್ಲಿ ಜ್ಯೂಸ್ ಹಣ್ಣಿನ ಗಿಡವಿತ್ತು, ಚಕೋತ, ಸಪೋಟವಿತ್ತು. ಮೈನ್ ರೋಡಿನಲ್ಲಿದ್ದ ಇನ್ನೊಬ್ಬ ಅಜ್ಜಿಯ ಮನೆಯಲ್ಲಿ, ಗೇರು ಹಣ್ಣು, ಸಪೋಟ, ಸೀಬೆ ಹಣ್ಣು, ದಾಳಿಂಬೆ, ಗೋಡಂಬಿ, ಕಿತ್ತಲೆ ಹಣ್ಣುಗಳು ಸಿಗುತ್ತಿದ್ದವು. ಎಲ್ಲರ ತೋಟಕ್ಕೆ ಲಗ್ಗೆ ಹಾಕುವುದು, ಹಣ್ಣು ತಿನ್ನುವುದು ಇದೇ ಆಗುತ್ತಿತ್ತು. ಅಲ್ಲಿಂದ ಹೋಗಿ ಲಿಫ್ಟ ಇರಿಗೇಷನ್ ನೀರು ಬರುತ್ತಿದ್ದ ತೊಟ್ಟಿಯಲ್ಲಿ ಸ್ನಾನ ಮಾಡುತ್ತಿದ್ದೆವು. ಅಲ್ಲಿಯೂ ಇಲ್ಲದಿದ್ದರೇ ಒಮ್ಮೊಮ್ಮೆ ಹೊಳೆಗೆ ಹೋಗಿ ಸ್ನಾನ ಮಾಡಿ ಬರುತ್ತಿದ್ದೆವು. ಹೊಳೆಗೆ ಹೋದ ದಿನ ಮನೆಯಲ್ಲಿ ಅಭಿಷೇಕ ನಡೆಯುತ್ತಿತ್ತು. ಆ ದಿನದ ಸೌಭಾಗ್ಯವೇ ಭಾಗ್ಯ ಮನೆಯಲ್ಲಿ ಹತ್ತು ಹಸುಗಳಿದ್ದವು. ಅಜ್ಜಿ ಹಾಲು ಕರೆಯುವ ಸಮಯಕ್ಕೆ ಹೋಗಿ ಹಸಿ ಹಾಲನ್ನು ಕರೆದ ತಕ್ಷಣ ಬಿಸಿಬಿಸಿಯಾಗಿರುವುದನ್ನೇ ಕುಡಿಯುತ್ತಿದ್ದೆ. ನಮ್ಮ ಮನೆಯಲ್ಲಿ ಹಸುವಿನ ಹಾಲು ಆಗಿದ್ದರಿಂದ ಪಕ್ಕದ ಮನೆಯಲ್ಲಿಗೆ ಹೋಗಿ ಎಮ್ಮೆಯ ಹಾಲನ್ನು ತಂದು ಕಾಫಿ ಕುಡಿಯುತ್ತಿದ್ದೆ. ಎಲ್ಲರೂ ನನ್ನನ್ನು ನೋಡಿ ಹೇಳುತ್ತಿದ್ದರು, ಈ ಧೀಮಾಕಿಗೆ ಏನು ಕಡಿಮೆ ಇಲ್ಲವೆಂದು. ಅದು ಇಂದಿಗೂ ಹೇಳುತ್ತಾರೆ. ನನಗೂ ಅನಿಸುತ್ತದೆ, ನನ್ನ ಧಿಮಾಕಿಗೇನು ಕಡಿಮೆ ಎಂದು.
ರಜೆ ಮುಗಿಸಿ ಬಾನುಗೊಂದಿಗೆ ಬಂದರೇ ಇಲ್ಲಿ ಬಹಳ ಬೇಸರವೆನಿಸುತ್ತಿತ್ತು. ನಮ್ಮೂರಿನ ಪರಿಸರ ಚೆನ್ನಾಗಿದೆ, ಹುಡುಗರು, ಜನರು ಸರಿ ಇಲ್ಲ. ಇದು ಹಿಂದಿನಿಂದಲೂ ನನ್ನ ಮನಸ್ಸಿಗೆ ಬಂದಿರುವ ತಿರ್ಮಾನ. ನಾನು ನನ್ನೂರಿನ ಜನರ ಜೊತೆ ಹೆಚ್ಚು ಬೆರೆತಿಲ್ಲ. ಅವರ ನಡುವಳಿಕೆಗಳು ನನಗೆ ಹಿಡಿಸುವುದಿಲ್ಲ. ಬಹಳ ಸಣ್ಣ ಬುದ್ದಿಯ ಜನರು. ತಲೆಯಲ್ಲಿ ನಾಲ್ಕು ಕಾಸಿನ ಬುದ್ದಿ ಇಲ್ಲದಿದ್ದರೂ, ನ್ಯಾಯವಾಗಿ ದುಡಿಯದಿದ್ದರೂ ನಾಯಕರಾಗಬೇಕೆನ್ನುವ ಆಸೆ. ಒಂದು ನೀತಿ ಇಲ್ಲ, ನಿಯತ್ತು ಇಲ್ಲ. ನಾವು ಹಿಂದಿನಿಂದ ಬಡತನದಲ್ಲಿ ಬೆಳೆದು ಮೇಲೆ ಬಂದಿರುವುದನ್ನು ಸಹಿಸಲಾರದ ಅದೆಷ್ಟೋ ಮಂದಿ ಇದ್ದಾರೆ. ಅದೇನೆ ಇರಲಿ, ನಾನು ನನ್ನೂರ ಪರಿಸರಕ್ಕೆ ಋಣಿಯಾಗಿದ್ದೇನೆ. ಊರಿಗೆ ಬಂದರೇ, ಇಲ್ಲಿ ಸಪ್ಪೆ ಸಪೆ ಎನಿಸುತ್ತಿತ್ತು. ನನಗೆ ಅಂತ ಒಳ್ಳೆಯ ಸ್ನೇಹಿತರಿರಲಿಲ್ಲ, ಚಿಕ್ಕಪ್ಪನ ಮಕ್ಕಳು ನಾನು ಮೇಲೆ ಬಿದ್ದು ಹೋದರೂ ಅವರು ನನ್ನನ್ನು ದಾಯಾದಿಗಳಂತೆಯೇ ನೋಡುತ್ತಿದ್ದರು. ಇದ್ದಿದ್ದರಲ್ಲಿ, ಪಾಂಡು, ಗೋಪಿ, ವರ, ರಮೇಶ ಹೀಗೆ ಒಂದತ್ತು ಹುಡುಗರು ನನ್ನ ಜೊತೆ ಮೊನ್ನೆ ಮೊನ್ನೆಯ ತನಕವಿದ್ದರು. ಈಗ ಅವರೆಲ್ಲರೂ ರಾಜಕೀಯಕ್ಕೆ ಧುಮುಕಿದ್ದಾರೆ, ಆದ್ದರಿಂದ ನಾನು ಅವರಿಂದ ದೂರಾಗಿದ್ದೇನೆ. ನನಗೆ ಯಾವುದೇ ಒಂದು ಪಕ್ಷಕ್ಕೆ ನನ್ನನ್ನು ಗುರುತುಪಡಿಸಿಕೊಳ್ಳುವುದು ಇಷ್ಟವಿಲ್ಲ. ಊರಲ್ಲಿ ನೇರಳೆ ಹಣ್ಣು ಇರುತ್ತಿತ್ತು, ಮುಂಜಾನೆ ಎದ್ದು ನೇರಳೆ ಹಣ್ಣನ್ನು ಕೀಳಲು ಹೋಗುತ್ತಿದ್ದೆ. ಜೇಬು ತುಂಬಾ ನೇರಳೆ ಹಣ್ಣು ತುಂಬಿಕೊಂಡು ನದಿದಂಡೆಗೆ ಹೋಗಿ ಕುಳಿತು ತಿಂದು ಬರುತ್ತಿದ್ದೆ.
ಏಳನೇಯ ತರಗತಿಯ ವೇಳೆಗೆ ನಾನು ಈಜುವುದನ್ನು ಕಲಿತಿದ್ದೆ, ಒಂದು ದಿನ ಕಟ್ಟೆಯ ಮೇಲೆ ಸ್ನಾನ ಮಾಡಿ ನಿಂತಿದ್ದೆ. ನಮ್ಮೂರಿನ ಸೂರಿ ಎಂಬುವನು ನನ್ನನ್ನು ಹಾಗೆಯೇ ತಲ್ಲಿಬಿಟ್ಟ, ನಲ್ವತ್ತು ಅಡಿಗೂ ಹೆಚ್ಚು ಆಳವಿದ್ದ ನೀರಿಗೆ ದಿಡೀರನೇ ಬಿದ್ದ ನಾನು, ಬಹಳ ಗಾಬರಿಯಾದೆ, ಹೆದರಿಕೊಂಡೆ, ಅದೇ ಕಡೇ ಅದಾದ ಮೇಲೆ ನೀರಿಗೆ ಇಳಿಯುವ ಸಾಹಸ್ಸವನ್ನೇ ಮಾಡಲಿಲ್ಲ. ನಂತರ ಎಲ್ಲಿಯೋ ಶಾಸ್ತ್ರ ಕೇಳಿದ್ದಾಗ, ನೀರಿನಲ್ಲಿ ಗಂಡಾಂತರವಿದೆ ಎಂದರು. ಇದು ಒಂದು ಕಾರಣ ಸೇರಿ, ನದಿ ದಂಡೆ ಊರಲ್ಲಿ ಹುಟ್ಟಿದ ನನಗೆ ನದಿ ದಂಡೆಯಲ್ಲಿ ಕೂರುವುದೇ ಖಾಯಂ ಆಯಿತು, ಇಂದಿಗೂ ಈಜುವುದಕ್ಕೆ ಬರುವುದಿಲ್ಲ. ನದಿ ದಂಡೆಯಲ್ಲಿದ್ದರೂ ಕೂಡ ನಮಗೆ ನೀರಿನ ಸಮಸ್ಯೆ ಜಾಸ್ತಿಯೇ ಇತ್ತು. ಮೋಟಾರು ಇಟ್ಟು ಪಂಪ್ ಮಾಡುವಷ್ಟು ಸ್ಥಿತಿವಂತರಾಗಿರಲಿಲ್ಲ. ಆ ದಿನದಲ್ಲಿದ್ದ ಮೋಟಾರುಗಳು ಪ್ಯಾಕಿಂಗ್ ಹಾಕುವಂತವುಗಳು, ಈ ವಿಷಯ ಪಟ್ಟಣದಲ್ಲಿ ಬೆಳೆದ ಅನೇಕರಿಗೆ ತಿಳಿದಿರುವುದಿಲ್ಲ. ಭಾವಿಗೆ ಅಥವಾ ಕಾಲುವೆಗೆ ಮೋಟಾರು ಇಡಿಸಿ ಅಲ್ಲಿಂದ ನೀರನ್ನು ಎತ್ತುತ್ತಿದ್ದೆವು. ಆ ಮೋಟಾರುಗಳು ದೈತ್ಯವಾಗಿರುತ್ತಿದ್ದವು. ಅವುಗಳನ್ನು ಸ್ಟಾರ್ಟ್ ಮಾಡುವ ಮುನ್ನಾ 20-30ಬಿಂದಿಗೆ ನೀರನ್ನು ತುಂಬಬೇಕಿತ್ತು. ನಿಜಕ್ಕೂ ಹೇಳುತ್ತೇನೆ, ಮೋಟಾರು ವಿಷಯಗಳಲ್ಲಿ ನಮ್ಮ ದೊಡ್ಡಪ್ಪ ಚಿಕ್ಕಪ್ಪಂದಿರಿಗೆ ಇದ್ದ ಜ್ನಾನವನ್ನು ನೋಡಿ ನಾನೇ ತಬ್ಬಿಬ್ಬಾದೆ. ಅವರುಗಳು ಓದಿಲ್ಲ, ಬರೆಯಲೂ ಬರುವುದಿಲ್ಲ, ಆದರೇ, ಆ ಮೇಷಿನ್ ಗಳ ಮೇಲೆ ಅವರಿಗಿದ್ದ ಜ್ನಾನ ಅಷ್ಟಿಷ್ಟಲ್ಲ. ಅವರ ಜಮೀನಿಗೂ, ನಮ್ಮೂರ ಕಟ್ಟೆಗೂ ಕಡಿಮೆ ಎಂದರೇ ಒಂದು ಕೀಮೀ ಆಗುತ್ತದೆ, ಅವರು ಅವರ ಜಮೀನಿನಲ್ಲಿ ನಿಂತು ಕಟ್ಟೆಯಮೇಲೆ ಹರಿಯುತ್ತಿರುವ ನೀರಿನ ಮಟ್ಟವನ್ನು ಹೇಳುತ್ತಾರೆ. ಅವರ, ಜ್ನಾನ ಸಂಪತ್ತನ್ನು ಮೆಚ್ಚಲೇಬೇಕು.
ನಾನು ಚಿಕ್ಕವನಿದ್ದಾಗ, ನಮ್ಮೂರಿನಲ್ಲಿ, ಪ್ರತಿ ವರ್ಷ ಎಲ್ಲಾ ಬೀದಿಗಳನ್ನು ಹರಾಜು ಹಾಕುತ್ತಿದ್ದರು. ಆ ರಸ್ತೆಯಲ್ಲಿ ಓಡಾಡುವ ದನಗಳ ಸಗಣಿಯು ಟೆಂಡರ್ ನಲ್ಲಿ ಗೆದ್ದವರಿಗೆ ಸೇರುತ್ತಿತ್ತು. ನಮ್ಮೂರಿನಲ್ಲಿ ಮುಖ್ಯವಾಗಿ, ನಮ್ಮ ಜಮೀನಿಗೆ ಹೋಗುವ ಮೂಡಲಗದ್ದೆ ಓಣಿ, ಕಟ್ಟೆಗೆ ಹೋಗುವ ರಸ್ತೆ, ಸಿದ್ದಾಪುರ ಗೇಟಿಗೆ ಹೋಗುವ ರಸ್ತೆ, ಮತ್ತು ಹೊಳೆಗೆ ಹೋಗುವ ಓಣಿ ಇದ್ದವು. ಹೊಳೆಗೆ ಹೋಗುವ ಓಣಿಯಲ್ಲಿ ಸಗಣಿ ಎತ್ತುವುದಂತು ಪೂರ್ವಜನ್ಮದ ಪಾಪವೇ ಸರಿ. ದಾರಿ ಉದ್ದಕ್ಕೂ ಮನುಷ್ಯರ ಸಗಣಿಯೂ ಇರುತ್ತಿತ್ತು. ಆಗೆಲ್ಲಾ ಮನೆಗಳಲ್ಲಿ, ಅಷ್ಟೇನೂ ಟಾಯ್ಲೆಟ್ ಗಳು ಇರಲಿಲ್ಲ, ಊರಿನ ಅರ್ಧ ಜನರು ಆ ಬೀದಿಯನ್ನು ಗಬ್ಬೆಬ್ಬಿಸುತ್ತಿದ್ದರು. ಈಗಲೂ ಊರಿನಲ್ಲಿ ಬಹುತೇಕ ಮನೆಗಳಿಗೆ ಟಾಯ್ಲೆಟ್ ಇಲ್ಲ, ಎಷ್ಟು ಹೇಳಿದರೂ ಊರಿನವರು ಅದರ ಬಗ್ಗೆ ಗಮನ ಹರಿಸುವುದಿಲ್ಲ. ಅಪ್ಪಿ ತಪ್ಪಿ ರಾತ್ರಿ ಹೊತ್ತು ಹೊಟ್ಟೆ ಕೆಟ್ಟರೇ ಊರಿನಿಂದ ಹೊರಕ್ಕೆ ಓಡಿ ಬರಬೇಕು, ಹೆಂಗಸರು, ಮಕ್ಕಳು, ಮಳೆಗಾಲದಲ್ಲಿ ಪರದಾಡಬೇಕು. ಬೇರೆಲ್ಲಾ ವಿಚಾರಗಳಿಗೆ ಹಣ ಖರ್ಚುಮಾಡುವ ಇವರು, ಅದ್ಯಾಕೋ ಇದರ ಬಗ್ಗೆ ಆಸಕ್ತಿ ತೋರಿಲ್ಲ. ಸರ್ಕಾರದಿಂದ ಬಂದ ಹಣವನ್ನು ನುಂಗಿ ನೀರು ಕುಡಿದಿದ್ದಾರೆ. ನಾನು ಊರಿಗಾಗಿ ಒಂದು ಸಾಮೂಹಿಕ ಶೌಚಾಲಯವನ್ನು ನಿರ್ಮಿಸುವ ಯೋಚನೆಯನ್ನು ಇಟ್ಟುಕೊಂಡಿದ್ದೇನೆ, ಆ ದೇವರ ಕೃಪೆಯಿದ್ದು, ನಮ್ಮೂರ ರಸ್ತೆಗಳ ಹಣೆಬರಹ ಚೆನ್ನಾಗಿದ್ದರೇ ಆದೀತು.
ವಿಷಯಕ್ಕೆ ಬರೋಣ, ನಮ್ಮಪ್ಪ ನಮ್ಮ ಜಮೀನಿಗೆ ಹೋಗುವ ರಸ್ತೆಯನ್ನು ವಹಿಸಿಕೊಂಡು ಬಂದರು, ನಾನು ಕುಕ್ಕೆಯನ್ನು ಹೊತ್ತಿಕೊಂಡು ಸಗಣಿ ಎತ್ತಬೇಕಾದ ಪರಿಸ್ಥಿತಿ ಬಂತು. ನನಗೆ ನಾಚಿಕೆಯಾಗುತ್ತಿತ್ತು, ಊರೊಳಗಿನಿಂದ ಕುಕ್ಕೆ ಹೊತ್ತುಕೊಂಡು ಹೋಗುವುದು, ನಮ್ಮಮ್ಮನಿಗೆ ಗೋಗರೆಯುತ್ತಿದ್ದೆ. ಅಮ್ಮ ಬೇಡವೆಂದು, ಆಗಿನ್ನೂ ಏಳನೆಯ ತರಗತಿ, ಹೈಸ್ಕೂಲಿಗೆ ಹೋಗುವಾಸೆ, ಆರನೇಯ ಕ್ಲಾಸಿನ ಹೆಣ್ಣು ಮಕ್ಕಳಿಗೆ ಲೈನ್ ಹಾಕುತ್ತಿದ್ದೆ. ಇದೆಲ್ಲದ್ದಕ್ಕೂ ಅಡ್ಡಿಯಾಗಿತ್ತು. ಆ ಸಮಯಕ್ಕೆ ನನಗೆ ಹೊಳೆದಿದ್ದು, ಬೇರಿಂಗ್ ಗಾಲಿಯನ್ನು ಉಪಯೋಗಿಸಿಕೊಂಡು, ಗಾಡಿ ಮಾಡೂವುದು. ನಾಲ್ಕು ಬೇರಿಂಗ್ ಗಾಲಿಯನ್ನು ತೆಗೆದುಕೊಂಡು, ಗಾಡಿ ಮಾಡಲು ಕುಳಿತೆ, ನಮ್ಮಪ್ಪ ಅದನ್ನು ಕಿತ್ತು ಅಟ್ಟದ ಮೇಲಕ್ಕೆ ಎಸೆದರು. ಸಗಣಿಯನ್ನು ಕೈಯಿಂದ ಎತ್ತುವುದು ಯಾರೆಂದು, ಅಂಗಡಿಯಿಂದ ಖಾಲಿಯಾದ ಎಣ್ಣೆ ಡಬ್ಬವನ್ನು ತಂದು ಅದರ ತಗಡನ್ನು ಕತ್ತರಿಸಿ, ಹದವಾಗಿ ಮಾಡಿಕೊಂಡೆ, ನಮ್ಮಪ್ಪ ನನಗೆ ಉಗಿದರು. ಸಗಣಿಯನ್ನು ಮುಟ್ಟುವುದಕ್ಕೆ ಹಿಂಜರಿಯುತ್ತೀಯಾ, ಅನ್ನ ಸಿಗದೇ ಹೋಗುತ್ತೀಯಾ ಉಷಾರು ಎಂದರು. ವಿಚಿತ್ರವೆಂದರೇ, ಇದಾದ ಮೂರು ವರ್ಷದ ನಂತರ ನಮ್ಮೂರಿನ ಬೇರೆ ಹುಡುಗರು ಅದೇ ಟಿನ್ ಅನ್ನು ಉಪಯೋಗಿಸಿಕೊಂಡು, ಬೇರಿಂಗ್ ಗಾಡಿಯಲ್ಲಿ ಸಗಣಿ ಎತ್ತುವುದನ್ನು ಕಂಡು ನಮ್ಮಪ್ಪ ಹೇಳಿದರು, ನೋಡು ಆ ಹುಡುಗರನ್ನು ಬುದ್ದಿವಂತರು, ಸ್ವಲ್ಪವೂ ಶ್ರಮವಿಲ್ಲದ ಹಾಗೆ ಮಾಡಿಕೊಂಡಿದ್ದಾರೆ ಅದು ಬುದ್ದಿವಂತಿಕೆ ಎಂದರೆ, ಅಂದರು. ಆಗಲೇ ತಿಳಿದಿದ್ದು, ಹಿತ್ತಲ ಗಿಡ ಮದ್ದಲ್ಲವೆಂದು. ನಾನು ಎಲ್ಲಿಂದಲೋ ಶುರು ಮಾಡಿ ಎಲ್ಲಿಗೋ ತಂದು ನಿಲ್ಲಿಸಿದ್ದೇನೆ, ಯಾವುದಾದರೇನು, ವಿಷಯ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂಬುದು ನನ್ನ ಆಸೆ, ಅದನ್ನು ಮಾಡಿಯಾಗಿದೆ. ಉಣಬಡಿಸುವುದು ನನ್ನ ಧರ್ಮ ನಾನು ಮಾಡಿದ್ದೇನೆ, ಇಷ್ಟವಿದ್ದರೇ ಉನ್ನಬಹುದು ಬೇಡವೆಂದರೇ ನಿಮ್ಮ ದಾರಿ ನಿಮಗೆ ನಮ್ಮ ದಾರಿ ನಮಗೆ.
Harishanna, love madta iddieno... yavathu nammahatra hellale illa...
ಪ್ರತ್ಯುತ್ತರಅಳಿಸಿKeep writing... sure its encourages others to write.
Rajanna nivu namage spoorthi...DhanyavadagaLu
ಪ್ರತ್ಯುತ್ತರಅಳಿಸಿ