ಶ್ರಾವಣ ಮಾಸಕ್ಕೆ ಸುಸ್ವಾಗತ....ಎಂದು ಬರೆದು ಫೇಸ್ ಬುಕ್ಕಿಗೆ ಹಾಕಲು ಹೋದೆ. ತಕ್ಷಣ ನನ್ನ ಬಾಲ್ಯದ ದಿನಗಳು ನೆನಪಾದವು. ಶ್ರಾವಣ ಆಚರಿಸುತ್ತಿದ್ದ ದಿನಗಳು. ನನಗೆ ನಗರದಲ್ಲಿ ಹೇಗೆ ಆಚರಿಸುತ್ತಾರೆಂಬುದರ ಅರಿವಿಲ್ಲ. ಆದರೇ, ನನ್ನೂರಿನಲ್ಲಿ ನನ್ನ ಬಾಲ್ಯದಲ್ಲಿ ಆಚರಿಸುತ್ತಿದ್ದ ಶ್ರಾವಣವಂತು ಬಹಳ ಚೆನ್ನಾಗಿ ನೆನಪಿದೆ. ಪ್ರತಿ ವರ್ಷವೂ ನಾಲ್ಕು ಶ್ರಾವಣ ಶನಿವಾರ ಮತ್ತು ನಾಲ್ಕು ಶ್ರಾವಣ ಸೋಮವಾರ ಬರುತ್ತದೆ. ನನ್ನೂರಿನ ಈ ಕಥೆಗಳು ಕೆಲವರಿಗೆ ಹೊಸದಾಗಿ ಕಾಣಿಸಬಹುದು. ಹಿಂದಿನ ದಿನಗಳಲ್ಲಿ ವಾರಕ್ಕೊಮ್ಮೆ ಮಾತ್ರ ಸ್ನಾನ ಮಾಡುತ್ತಿದ್ದೆವು. ನಮ್ಮ ಮನೆಯಲ್ಲಿ ನಮ್ಮಪ್ಪ ಸರ್ಕಾರಿ ಕೆಲಸದಲ್ಲಿದ್ದ ಕಾರಣ, ವಾರದಲ್ಲಿ ಎರಡು ದಿನ ರೂಢಿಯಾಗಿತ್ತು. ಶನಿವಾರ ನಮ್ಮ ಮನೆ ದೇವರ ವಾರವಾಗಿದ್ದು, ಬುಧವಾರ ಲಕ್ಷ್ಮೀ ದೇವಿಯ ವಾರವಾಗಿತ್ತು. ಗಂಡು ಮತ್ತು ಹೆಣ್ಣು ದೇವರಿಗೆ ಸಮಪಾಲು. ನಾವು ಮೊದಲಿದ್ದ ಮನೆ ಬಹಳ ಇಕ್ಕಟ್ಟಿನದ್ದು, ಚಿಕ್ಕ ಮನೆ. ಆ ದಿನಗಳಲ್ಲಿ, ಸೌದೆಗೆ ಬಹಳ ಕಷ್ಟವಿತ್ತು. ನನಗೆ ನೆನಪಿರುವ ಹಾಗೆ, ನಾನು ಅಮ್ಮ ಅದೆಷ್ಟೋ ದಿನ ಬೆರಣಿ ಎತ್ತಿದ್ದೀವಿ, ಊರಿನ ಪಕ್ಕದಲ್ಲಿಯೇ ಇದ್ದ ಗೋಮಾಳ, ಹೊಂಗೆ ತೋಪಿಗೆ ಹೋಗಿ, ಸಣ್ಣ ಸಣ್ಣ ಪುರುಳೆ (ಸೌದೆ ಕಡ್ಡಿ) ಗಳನ್ನು ಆಯ್ದು ತಂದಿದ್ದೇವೆ. ಅದನ್ನೆಲ್ಲಾ ನೆನಪು ಮಾಡಿಕೊಂಡರೇ ನಿಜಕ್ಕೂ ಕಣ್ಣು ತೇವವಾಗುತ್ತದೆ. ಒಲೆಗೆ ಬೆಂಕಿ ಹಾಕುವುದು ದೊಡ್ಡ ಕೆಲಸವಾಗುತ್ತಿತ್ತು, ಹೆಚ್ಚಿಗೆ ಸೀಮೆ ಎಣ್ಣೆ ಹಾಕುವಂತಿರಲಿಲ್ಲ, ಕೊಡುತ್ತಿದ್ದದ್ದು ಮೂರು ಲೀಟರ್, ಅದರಲ್ಲಿ ಅಡುಗೆಗೂ ಬೇಕಿತ್ತು.
ಬಹಳ ವಿಚಿತ್ರವೆನಿಸುತ್ತದೆ, ಸರ್ಕಾರದ ರೀತಿ ನೀತಿಗಳು. ನಮ್ಮಪ್ಪ ಸರ್ಕಾರಿ ಕೆಲಸದಲ್ಲಿದ್ದ ಕಾರಣ ನಮಗೆ ಹಸಿರು ಕಾರ್ಡ್ ಇರಲಿಲ್ಲ. ಈಗ ಬಿಪಿಎಲ್ ಅನ್ನುವುವು ಆ ದಿನಗಳಲ್ಲಿ ಹಸಿರು ಕಾರ್ಡ್, ಕೇಸರಿ ಕಾರ್ಡ್. ನಮ್ಮ ಮನೆಗೆ ಕೇಸರಿ ಕಾರ್ಡ್ ಕೊಟ್ಟಿದ್ದರು. ನಾವು ಮುಂದುವರೆದವರೆಂಬುದು ಅವರ ತಿರ್ಮಾನ. ನಮ್ಮ ಮನೆಯಲ್ಲಿ ಬಡತನ ಹಾಸು ಹೊಕ್ಕಿತ್ತು. ನಮ್ಮೂರಿನಲ್ಲಿ ಅದೆಷ್ಟೊ ಜನರಿಗೆ ಹತ್ತು ಇಪ್ಪತ್ತು ಎಕರೆ ಜಮೀನು ಇದ್ದರೂ, ಅವರೆಲ್ಲಾ ಹಸಿರು ಕಾರ್ಡ್ ಪಡೆದಿದ್ದರು. ಅವರಿಗೆ ಮೂರು ರೂಪಾಯಿಗೆ ಒಂದು ಲೀಟರ್ ಸೀಮೆ ಎಣ್ಣೆ, ನಮಗೆ ಏಳು ರೂಪಾಯಿ. ಮೊದಲ ಆದ್ಯತೆ ಹಸಿರು ಕಾರ್ಡಿದ್ದವರಿಗೆ, ನಮಗೆ ಕೊಡಲೇ ಬೇಕೆಂಬ ಕಡ್ಡಾಯವೂ ಇಲ್ಲ. ಒಂದೊಂದು ದಿನ ನಮ್ಮಮ್ಮ ಪಕ್ಕದ ಮನೆಯವರ ಕಾರ್ಡ್ ಗಳನ್ನೆಲ್ಲಾ ಕೊಡಿಸುತ್ತಿದ್ದರು. ನಾನು ಸೊಸೈಟಿಗೆ ಹೋದರೇ, ಅವನು ತರವಾರಿ ಕಾನೂನು ಮಾಡತೊಡಗಿದ. ಒಬ್ಬರಿಗೆ ಒಂದು ಕಾರ್ಡಿಗೆ ಮಾತ್ರ ಕೊಡುವುದು, ಕಾರ್ಡ್ ಇರುವ ಮನೆಯವರೇ ಬರಬೇಕು, ಹೀಗೆ ಏನೆಲ್ಲಾ ಕಾನೂನುಗಳು. ಸತ್ಯವಾಗಿಯೂ ಹೇಳುತ್ತೇನೆ, ಬಡವರು ಬದುಕಲು ಯೋಗ್ಯವಲ್ಲದ ಸಮಾಜ ಮತ್ತು ದೇಶ ಭಾರತ. ಬೇರೆ ದೇಶದಲ್ಲಿ ಹೇಗಿದೆಯೆಂಬುದು ಗೊತ್ತಿಲ್ಲ, ಆದರೇ ನಮ್ಮಲ್ಲಿ ಮಾತ್ರ ಬಹಳ ಕಷ್ಟ. ಅವರಿವರನ್ನು ಗೋಗರಿದುಕೊಂಡು, ಅವರನ್ನು ಕರೆದುಕೊಂಡು ಹೋಗಿ, ಸಾಲಿನಲ್ಲಿ ನಿಂತು ಅಂತೂ ಇಂತೂ ಸೀಮೆ ಎಣ್ಣೆ ತರುತ್ತಿದ್ದೆ. ಕೆಲವರ ಮನೆಗಳಲ್ಲಿ ಕರೆಂಟ್ ಇರಲಿಲ್ಲ, ಪಾಪ ಅವರು ದೀಪದಿಂದಲೇ ಜೀವನ ಸಾಗಿಸಬೇಕಿತ್ತು, ಸೀಮೆ ಎಣ್ಣೆ ಇಲ್ಲದೇ ಅದೆಷ್ಟೋ ಮನೆಯವರ ಮಕ್ಕಳು ಓದುತ್ತಿರಲಿಲ್ಲ, ನನ್ನ ಕೆಲವು ಸ್ನೇಹಿತರು ಬೇರೆಯವರ ಮನೆಗೆ ಹೋಗಿ ಹೋಂವರ್ಕ್ ಮಾಡುತ್ತಿದ್ದ ದಿನವೂ ಇದೆ. ವಿಷಯಕ್ಕೆ ಬರೋಣ.
ಆಗ ಕಷ್ಟಪಟ್ಟು ಕಣ್ಣೀರು ಸುರಿಸಿ ಒಲೆ ಉರಿಸುತ್ತಿದ್ದೆ. ನೀರು ಹಿಡಿಯುವ ಕಷ್ಟವನ್ನು ನಾನು ಹಿಂದಿನ ಬ್ಲಾಗಿನಲ್ಲಿ ಬರೆದಿದ್ದೆ, ಆದ್ದರಿಂದ ನೀರಿನ ಸಮಸ್ಯೆಯ ಬಗ್ಗೆ ಇಲ್ಲಿ ಮಾತನಾಡೋದು ಬೇಡ. ಕೆಲವು ಮನೆಯವರಿಗೆ ವಾರದಲ್ಲಿ ಒಮ್ಮೆಯೇ ಸ್ನಾನದ ಭಾಗ್ಯ. ನಮ್ಮೂರಿನಲ್ಲಿ ಮಡಕೆ ತೆಗೆಯುವುದು ಅಥವಾ ಸೂತಕ ತೆಗೆಯುವುದು ಅನ್ನೋ ಒಂದು ಸಂಪ್ರದಾಯವಿದೆ. ಇದು ಎಲ್ಲೆಡೆಯಲ್ಲಿಯೂ ಸಾಮಾನ್ಯವಾಗಿದೆ. ವರ್ಷದಲ್ಲಿ ಯುಗಾದಿಗೆ, ಶ್ರಾವಣಕ್ಕೆ ಮತ್ತು ಆಯುಧಪೂಜೆಗೆ ಸೂತಕ ತೆಗೆಯುವುದು ವಾಡಿಕೆ. ಕೆಲವೊಮ್ಮೆ ಹತ್ತಿರದ ಸಂಭಂಧಿಗಳು ಸತ್ತರೆ, ಹೆತ್ತರೆ ಸೂತಕ ತೆಗೆಯುವುದು ಉಂಟು. ಸೂತಕ ತೆಗೆಯುವ ಸಂಧರ್ಭದಲ್ಲಿ ಮನೆಯಲ್ಲಿರುವ ಎಲ್ಲಾ ಪಾತ್ರೆ ಪಗಡೆಗಳನ್ನು ತೊಳೆಯುತ್ತಿದ್ದರು. ಶ್ರಾವಣ ಶುರುವಾಗುವ ಮುನ್ನವೇ ನಮ್ಮಮ್ಮ ನಿರ್ಧರಿಸುತ್ತಿದ್ದರು, ಯಾವ ವಾರ ಮಾಡುವುದೆಂದು. ನಾಲ್ಕು ವಾರ ಶ್ರಾವಣವಿದ್ದರೂ, ಯಾವುದಾದರು ಒಂದು ದಿನ ಮಾತ್ರ ಮಾಡಬೇಕಿತ್ತು. ಅದಾದ ಮೇಲೆ ಮನೆಯಲ್ಲಿ ಧೂಳು ಹೊಡೆಯುವುದು, ತೊಳೆಯುವುದು, ಬಣ್ಣ ಬಳಿಯುವುದು ನಡೆಯುತ್ತಿತ್ತು. ನಮ್ಮ ಮನೆ ಚಿಕ್ಕದ್ದಾದ್ದರಿಂದ ಮನೆಯ ಅರ್ಧ ಪಾತ್ರೆಗಳು ಅಟ್ಟದ ಮೇಲಿರುತ್ತಿದ್ದವು. ನಮ್ಮಮ್ಮನಿಗೆ ಪಾತ್ರೆ ತೆಗೆದುಕೊಳ್ಳುವುದೆಂದರೇ ಎಲ್ಲಿಲ್ಲದ ಅಕ್ಕರೆ. ನಾನು ಬಹಳ ಮನೆಗಳಲ್ಲಿ ನೋಡಿದ್ದೇನೆ, ಹೆಂಗಸರು ಅದೆಷ್ಟು ಪಾತ್ರೆ ಕೊಳ್ಳುತ್ತಾರೆಂದರೇ ಅಚ್ಚರಿಯಾಗುತ್ತದೆ. ಆದರೇ, ಅದ್ಯಾವುದನ್ನು ದಿನ ನಿತ್ಯವೂ ಬಳಸುವುದಿಲ್ಲ. ನಮ್ಮ ಮನೆಯಲ್ಲಿಯೇ ಹೇಳುವುದಾದರೇ, ಕನಿಷ್ಟವೆಂದರೂ ಮೂವತ್ತು ತಟ್ಟೆಗಳು, ಬೇರೆ ಬೇರೆ ಗಾತ್ರದ ಲೋಟಗಳಿವೆ. ಆದರೇ, ನಾವು ಊಟ ಮಾಡಲು ಕೊಡುವ ತಟ್ಟೆ ಬಹಳ ಹಳೆಯವು, ಚಿಕ್ಕವು. ಕುಡಿಯುವ ಲೋಟಗಳು ಅಷ್ಟೇ, ಎಲ್ಲವೂ ಅಟ್ಟದ ಮೇಲೆ ಅಧಿಕಾರ ನಡೆಸುತ್ತಿವೆ. ವರ್ಷಕ್ಕೊಮ್ಮೆ ಕೆಳಕ್ಕೆ ಇಳಿಸುವುದು ಸ್ನಾನ ಮಾಡಿಸಿ ಮಲಗಿಸುವುದು.
ಆ ದಿನಗಳಲ್ಲಿ ಅಟ್ಟದ ಮೇಲೆ ಹತ್ತಿ ಎಲ್ಲವನ್ನೂ ಇಳಿಸುವುದು, ತೊಳೆಯುವುದು ಮತ್ತೆ ಅಲ್ಲಿಗೇ ಜೊಡಿಸುವುದು ನನ್ನ ಕೆಲಸ. ಸುಣ್ಣ ಬಳಿಯುವುದಕ್ಕೆ ನಿಲ್ಲುತ್ತಿದ್ದೆ, ಆದರೇ ಗೆರೆಗೆರೆ ಬಳಿಯುತ್ತೀಯಾ ಎಂದು ಅಮ್ಮನೇ ಬಳಿಯುತ್ತಿದ್ದರು. ಸುಣ್ಣ ಬಳಿಯುವಾಗ, ಏಣಿಯನ್ನು ಇಡಿದು ನಿಲ್ಲಬೇಕಿತ್ತು. ಮತ್ತೆ ಒಂದು ಕೈಯಲ್ಲಿ ಸುಣ್ಣದ ಡಬ್ಬವನ್ನು ಎತ್ತಿ ಕೊಡಬೇಕಿತ್ತು. ಅಮ್ಮಾ, ಏಣಿಯ ಮೇಲೆ ನಿಂತು, ಬಳಿಯುತ್ತಿದ್ದರು. ಸ್ವಲ್ಪ ಆಚೆ ಈಚೆ ಆದರೇ ಅಮ್ಮನಿಂದ ಸಹಸ್ರನಾಮವಾಗುತ್ತಿತ್ತು. ಅದೆಷ್ಟು ಕಷ್ಟಪಡುತ್ತಿದರು ನಮ್ಮಮ್ಮ ಎನಿಸುತ್ತದೆ. ಎಲ್ಲ ಪಾತ್ರೆಯನ್ನು ತೊಳೆದ ಮೇಲೆ, ಬಿಸಿಲಲ್ಲಿ ಒಣಗಿಸಿ, ಮಡಿ ಬಟ್ಟೆಯಿಂದ ಒರೆಸಿ, ಕುಕ್ಕೆಯಲ್ಲಿ ತುಂಬಿ ಮತ್ತೆ ಅಟ್ಟದ ಮೇಲೆ ಇರಿಸುತ್ತಿದ್ದರು. ನಮ್ಮದು ಇದ್ದದ್ದು ಅಡುಗೆ ಮನೆ, ನಡುಮನೆ ಮತ್ತು ಬಚ್ಚಲು ಮನೆ ಮಾತ್ರ. ನಡು ಮನೆ ಕ್ಲೀನು ಮಾಡುವಾಗ ನಮ್ಮ ಬಿಡಾರ ಅಡುಗೆ ಮನೆಗೆ, ಅಡುಗೆ ಮನೆ ಬಳಿಯುವಾಗ ನಡುಮನೆಗೆ, ಅದೆಷ್ಟೋ ದಿನಗಳು, ವಕ್ರ ವಕ್ರವಾಗಿ ಮಲಗಿ ದಿನ ಕಳೆದಿದ್ದೇವೆ. ನಮ್ಮಮ್ಮ ಮುಂಜಾನೆ ಆರರಿಂದ ರಾತ್ರಿ ಹನ್ನೊಂದರ ತನಕ ಕೆಲಸ ಮಾಡಿ ಸುಸ್ತಾಗಿ ಅಡುಗೆ ಮಾಡುವುದಕ್ಕೂ ತ್ರಾಸವಿಲ್ಲದೇ ಹಾಗೆ ಮಲಗುತ್ತಿದ್ದರು. ಆ ಸಮಯದಲ್ಲಿ ನಾನು ಸ್ವಲ್ಪ ಅನ್ನ ಮಾಡಿ ಅಥವಾ ನಮ್ಮಪ್ಪ ಸ್ವಲ್ಪ ಟೋಮಾಟೋ ಸಾರು ಮಾಡಿ ಉಂಡು ಮಲಗುತ್ತಿದ್ದೆವು. ಕೆಲವೊಮ್ಮೆ ಪಕ್ಕದ ಮನೆಯವರಿಂದ ಸಾರು ತರುತ್ತಿದ್ದೆವು. ನಮ್ಮಪ್ಪನಿಗೆ ಬೇರೆಯವರ ಮನೆ ಸಾರು ಹಿಡಿಸುತ್ತಿರಲಿಲ್ಲ. ನನಗೆ ಆನಂದ, ವಿಭಿನ್ನ ರುಚಿಯಾಗಿರುತ್ತಿತ್ತು. ಪಾಪ ಕೆಲವು ಮನೆಯವರು ಕಾಯಿ ಹಾಕುತ್ತಿರಲಿಲ್ಲ. ಆಗ ಅಮ್ಮ ಹೇಳುತ್ತಿದ್ದರು, ಅಲ್ಲಾ, ಮನೆಯಲ್ಲಿರುವ ಕಾಯಿ ಹಾಕೋಕು ಕಷ್ಟನಾ? ಇನ್ನು ದುಡ್ಡು ಕೊಟ್ಟು ತರೋ ಹಾಗಿದ್ದರೇ ಏನು ಮಾಡುತ್ತಿದ್ದರೋ? ಎಂದು.
ಶ್ರಾವಣದ ಸಮಯದಲ್ಲಿ ಹಾರಂಗಿ ನಾಲಾ ನೀರು, ಊರೊಳಗೆ ಬರುತ್ತಿದ್ದರಿಂದ ಅಂಥಹ ಸಮಸ್ಯೆ ಆಗುತ್ತಿರಲಿಲ್ಲ. ಆದರೂ ನಮ್ಮಮ್ಮ ಸ್ವಲ್ಪ ಮಡಿವಂತಿಕೆ, ಕ್ಲೀನ್ ಜಾಸ್ತಿಯಾದ್ದರಿಂದ, ಕಾವೇರಿ ನಾಲೆಗೆ ಹೋಗಬೇಕು, ಅಲ್ಲಿ ನೀರು ಜೋರಾಗಿ ಹರಿಯುತ್ತದೆ. ಈ ನಾಲೆಯಲ್ಲಿ, ಗಲೀಜು ಮಾಡುತ್ತಾರೆ. ಈ ನೀರಿನಲ್ಲಿ ಎಲ್ಲವನ್ನೂ ತೊಳೆದಿರುತ್ತಾರೆ ಎನ್ನುತ್ತಿದ್ದರು. ಆಗ ನನಗೆ ವಿಪರೀತ ಕೋಪ ಬರುತ್ತಿತ್ತು. ಮನೆಯಿಂದ ಹತ್ತು ಹೆಜ್ಜೆಯಲ್ಲಿ ಹರಿಯುತ್ತಿರುವ ನೀರನ್ನು ಬಿಟ್ಟು ಒಂದು ಮೈಲಿ ದೂರದಲ್ಲಿರುವ ಕಾಲುವೆಗೆ ಹೋಗುವುದು ಯಾವ ಮೂರ್ಖತನ ಎನಿಸುತಿತ್ತು. ನಾನು ಪಾತ್ರೆ ಹೊರುವುದು, ಬಟ್ಟೆ ತೊಳೆಯುವುದು ಮಾಮೂಲಿಯಾಗಿತ್ತು. ನಮ್ಮಮ್ಮ ಬಟ್ಟೆ ತೊಳೆಯುವಾಗ ನಾನು ಪಾತ್ರೆ ತೊಳೆಯಬೇಕಿತ್ತು. ನನ್ನ ಅವಮಾನ ನನ್ನ ಮುಜುಗರ ನಮ್ಮಮ್ಮನಿಗೆ ಅರ್ಥವೇ ಆಗಲಿಲ್ಲ. ಕಾಲುವೆಗೆ ಬಂದ ಹೆಂಗಸರೆಲ್ಲಾ ನನ್ನನ್ನು ನೋಡಿ ಪರವಾಗಿಲ್ಲ ಹರಿ ಚೆನ್ನಾಗೆ ತೊಳಿತ್ತೀಯಾ ಪಾತ್ರೆಯಾ ಎಂದು ನಗುತ್ತಿದ್ದರು. ಬಟ್ಟೆ ಹೊರುವುದಕ್ಕೆ ಅಡ್ಡಿ ಇರಲಿಲ್ಲ, ಯಾಕೆಂದರೆ ಅದನ್ನು ಬೇಸಿನ್ ನಲ್ಲಿ ತುಂಬಿ ಕೊಡುತ್ತಿದ್ದರು. ಪಾತ್ರೆ ಮಾತ್ರ, ಕುಕ್ಕೆಯಲ್ಲಿ ನೀರೆಲ್ಲ ಸುರಿದು ಅಂಗಿ ಒದ್ದೆಯಾಗಿರುತ್ತಿತ್ತು.
ನಮ್ಮೂರಿನಲ್ಲಿ ಶ್ರಾವಣದ ವಿಶೇಷವೆಂದರೇ, ಎಲ್ಲರನ್ನು ಊಟಕ್ಕೆ ಕರೆಯುವುದು. ಊರಿನ ಅರ್ಧ ಜನರನ್ನು ಊಟಕ್ಕೆ ಕರೆಯಬೇಕಿತ್ತು. ಕೆಲವು ಮನೆಗಳಿಗೆ ಎಲ್ಲರೂ ನಮ್ಮ ಮನೆಯಲ್ಲಿಯೇ ಊಟಕ್ಕೆ ಬನ್ನಿ ಎನ್ನಬೇಕಿತ್ತು. ಇನ್ನು ಕೆಲವು ಮನೆಗಳಿಗೆ ಮನೆಗೆ ಒಬ್ಬರಂತೆ ಹೇಳುತ್ತಿದ್ದೆವು. ಅದರಲ್ಲಿ ಒಂದು ಮಜವಿದೆ, ನಮ್ಮ ಮನೆಗೆ ಯಾರಾದರೂ ಊಟಕ್ಕೆ ಹೇಳಲು ಬರುವಾಗ, ಅಕ್ಕಾ ಅಡುಗೆ ಮಾಡಬೇಡಿ ಎನ್ನುತ್ತಿದ್ದರು. ನಮ್ಮಪ್ಪು ಕುಳಿತಲ್ಲಿ ಅಡುಗೆ ಮಾಡಿಲ್ಲ ಅಂದ್ರೇ? ಎನುತ್ತಿದ್ದರು. ಊಟಕ್ಕೆ ಹೇಳಲು ಬಂದ ಹುಡುಗ ತಬ್ಬಿಬಾಗುತ್ತಿದ್ದ. ಬೇರೆ ಮನೆಯವರು ಆಯ್ತಪ್ಪ ಎನ್ನುತ್ತಿದ್ದರು, ನಮ್ಮನೆಯಲ್ಲಿ ತಲಹರಟೆ ಪ್ರಶ್ನೆ. ಹಾಗೆ ಮನೆಗೆ ಒಬ್ಬರಿಗೆ ಹೇಳುವಾಗ, ಅಕ್ಕಾ, ಅಣ್ಣ ಅಲ್ಲೇ ಊಟ ಮಾಡುತ್ತೇ ಎನ್ನುತ್ತಿದ್ದರು. ಆ ಸಮಯದಲ್ಲಿ ನಮ್ಮಪ್ಪ ನಾನ್ಯಾವಾಗ ಹೇಳ್ದೆ ನಿಂಗೆ ಅಲ್ಲೇ ಊಟ ಮಾಡ್ತೀನಿ ಅಂತಾ? ಎನ್ನುತ್ತಿದ್ದರು. ಊಟಕ್ಕೆ ಹೇಳಲು ಬಂದ ಹುಡುಗರು, ಹಣೆ ಬರಹವೇ ಎಂದುಕೊಂಡು ಹೋಗುತ್ತಿದ್ದರು. ಒಂದು ದಿನ ಕಡಿಮೆಯೆಂದರೂ 20-30 ಮನೆಯವರು ಊಟಕ್ಕೆ ಹೇಳುತ್ತಿದ್ದರು. ಎಲ್ಲರ ಮನೆಗೂ ಹೋಗಲೇಬೇಕಿತ್ತು. ಊಟ ಮಾಡದೇ ಇದ್ದರೂ ಸ್ವಲ್ಪ ಪಾಯಸವನ್ನಾದರೂ ಕುಡಿಯಲೇ ಬೇಕಿತ್ತು. ಕೆಲವರ ಮನೆಯವರು ಕರೆಯುತ್ತಾರೆಂದು ಕಾಯ್ದು ಕಾಯ್ದು ನಿದ್ದೆ ಬರುತ್ತಿತ್ತು. ಹತ್ತು ಹನ್ನೊಂದು ಹನ್ನೆರಡಾಗುತ್ತಿತ್ತು. ಆ ದಿನಗಳಲ್ಲಿ ನಮ್ಮನೆಯಲ್ಲಿ ಟಿವಿ ಇರಲಿಲ್ಲ, ನಾನು ಒಂಬತ್ತು ಗಂಟೆಗೆ ತಾಚಿ ಮಾಡುತ್ತಿದ್ದೆ. ನಮ್ಮಲ್ಲಿ ಸ್ನೇಹಿತರ ಮನೆಗೆ ಹೋಗಲೇ ಬೇಕಿತ್ತು, ಹಾಗೆಯೇ ಅವರುಗಳು ಬರುತ್ತಿದ್ದರು.
ಶ್ರಾವಣದ ಶನಿವಾರ ಉಪವಾಸವಿರಬೇಕಿತ್ತು. ಮುಂಜಾನೆ ಎಂಟು ಗಂಟೆಯ ಒಳಗೆ ಸ್ನಾನ ಮಾಡಿ ಶಾಲೆಗೆ ಹೋಗುತ್ತಿದ್ದೆ. ಮನೆಗೆ ಬರುವ ವೇಳೆ ಮನೆಯೆಲ್ಲಾ ತೊಳೆದು, ಶುಚಿಯಾಗಿರುತ್ತಿತ್ತು. ಅದನ್ನು ನೆನೆದರೆ ಇಂದಿಗೂ ಮನಸ್ಸು ಉಲ್ಲಾಸವಾಗುತ್ತದೆ. ನನಗೆ ಮುಂಜಾನೆ ಎದ್ದು ಮನೆಯಲ್ಲಿ ಉರಿಯುತ್ತಿರುವ ದೀಪವನ್ನು ನೋಡುವುದೆಂದರೆ ಎಲ್ಲಿಲ್ಲದ ಆಸೆ. ಮನೆ ಶುಚಿಯಾಗಿದ್ದಾಗ ಮನಸ್ಸು ಹಸನಾಗಿರುತ್ತದೆ. ನಾನು ಒಳಕ್ಕೆ ಕಾಲಿಡುವಾಗ ಬಹಳ ಖುಷಿ ಎನಿಸುತ್ತಿತ್ತು. ಶ್ರಾವಣದ ಸಾರು ಮಾಡುತ್ತಾರೆ. ಹೊಸ್ತಿಲಿಗೆ ಕುಂಬಳಕಾಯಿ ಒಡೆದು, ಕುಂಬಳಕಾಯಿ, ಆಲೊಗೆಡ್ಡೆ, ಬೀನ್ಸ್ ಕಾಳು, ಸಂಪಂಗಿ ಸೊಪ್ಪು ಹಾಕಿ ಮಾಡಿದರೇ ಬರುವ ಗಮ ಗಮ ವಾಸನೆ ಮೈ ಕಂಪಿಸುವಂತೆ ಮಾಡುತ್ತಿತ್ತು. ಸಂಜೆಯ ವೇಳೆ ಎಡೆ ಇಟ್ಟು, ದಾಸಯ್ಯನನ್ನು ಕರೆದು ತೀರ್ಥ ಹಾಕಿದರೇ ಶ್ರಾವಣ ಆಚರಿಸಿದಂತೆ. ಇಡೀ ಊರಿಗೆಲ್ಲಾ ಒಬ್ಬನೇ ದಾಸಯ್ಯ ಇದ್ದ ಕಾರಣ, ಅವರಿಗೆ ಬಹಳ ಡಿಮಾಂಡು. ಆ ಬೇಡಿಕೆಯ ನಡುವೆ ನಮ್ಮ ಮನೆಗೆ ಬೇಗ ಬರಲೆಂದು ನಮ್ಮಮ್ಮ ಅವರಿಗೆ ಕಾಫಿ, ಟೀ ಕೊಟ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಇದು ತಮಾಷೆಗೆ ಮಾತ್ರ, ನಾನು ಹಾಗೆ ರೇಗಿಸುತ್ತಿದ್ದೆ. ನಮ್ಮಮ್ಮನನ್ನು ಕಂಡರೇ, ಬಹುತೇಕ ಇಡೀ ಬಾನುಗೊಂದಿಯೇ ಬಹಳ ಗೌರವದಿಂದ ಕಾಣುತ್ತದೆ. ಇದುವರೆಗೂ ನಮ್ಮಮ್ಮ ಒಬ್ಬರಿಗೆ ಬೈದದ್ದನ್ನು ನಾನು ಕಂಡಿಲ್ಲ. ಒಬ್ಬರ ಜೊತೆಗೆ ಜಗಳವಾಡಿಲ್ಲ. ಬಂದವರೆಲ್ಲರಿಗೂ, ಕುಡಿಯಲು ತಿನ್ನಲು ಕೊಡದ ದಿನಗಳಿರಲಿಲ್ಲ. ಇತ್ತೀಚೇಗೆ, ಬಹಳ ನೋವಿನಿಂದ ಜೀವನ ಮಾಡುತ್ತಾರೆ. ಕೆಲಸ ಮಾಡುವ ಆಸಕ್ತಿ ಕಡಿಮೆಯಾಗಿದೆ. ನಾನು ನಮ್ಮಮ್ಮನನ್ನು ಕಂಡಾಗಲೆಲ್ಲ, ನನ್ನ ಕಣ್ಣುಗಳು ತೇವವಾಗುತ್ತವೆ. ಅಷ್ಟೊಂದು ಲವಲವಿಕೆಯಿಂದ ಇದ್ದ ನಮ್ಮಮ್ಮು, ಈಗ ದಿನ ಪೂರ್ತಿ ಹಾಸಿಗೆ ಹಿಡಿದು, ಯಾವುದೋ ಲೋಕದಲ್ಲಿರುವಂತೆ ಚಿಂತಿಸುತ್ತಿರುತ್ತಾರೆ. ಈಗಲೂ ಕಣ್ಣು ಒದ್ದೆಯಾಗುತ್ತಿವೆ.
ಈ ಎಲ್ಲಾ ಆವರಣೆಗಳು ಈಗ ನನ್ನೂರಿನಿಂದ ಬಲು ದೂರಕ್ಕೆ ಹೋಗಿವೆ. ಸಂಪೂರ್ಣ ಚಿತ್ರಣವೇ ಬದಲಾಗಿದೆ. ಶ್ರಾವಣವೆಂದರೇ ಬರುವ ದಿನಗಳಲ್ಲಿ ಅದು ಒಂದು ಎನ್ನುವಂತಾಗಿದೆ. ಸೂತಕ ತೆಗೆಯುವುದು, ಊಟಕ್ಕೆ ಕರೆಯುವುದು ಮಾಯವಾಗಿದೆ. ವಾರಕ್ಕೊಮ್ಮೆ ಸ್ನಾನ ಮಾಡುತ್ತಿದ್ದ ನಾವುಗಳು ದಿನ ನಿತ್ಯ ಮಾಡಲಾಗಿದ್ದೇವೆ. ಆದರೂ ಶ್ರಾವಣವೆಂದಾಗ ನನ್ನೆಲ್ಲಾ ಬಾಲ್ಯ ನಗು ತರಿಸುತ್ತದೆ. ಸ್ನೇಹಿತರೆಲ್ಲರನ್ನು ಕರೆದು ಊಟ ಮಾಡಿಸುತ್ತಿದ್ದ ದಿನ, ನಾನು ಬಡವನೆಂಬ ಕೀಳರಿಮೆಯಲ್ಲಿಯೂ ನಗುತ್ತಿದ್ದ ದಿನಗಳು, ದೊಡ್ಡವರ ಮನೆಯರು ಊಟಕ್ಕೆ ಹೇಳಿದ ದಿನ, ಅವರು ಕರೆಯುವ ತನಕ ಕಾಯ್ದು ಊಟ ಮಾಡುತ್ತಿದ್ದ ದಿನಗಳು. ಐದು ನಿಮಿಷ ತಡವಾದರೂ ಸಹಿಸದ ನಾನು, ಹನ್ನೆರಡಾದರೂ ಹೋಗಿ ಉಂಡು ಬರುತ್ತಿದ್ದೆ. ಯಾರದ್ದೊ ಮನೆಯ ಮೂಲೆಯಲ್ಲಿ ಸದ್ದಿಲ್ಲದೇ ಊಟ ಮಾಡಿ ಬರುತ್ತಿದ್ದೆ. ಇಡೀ ಬಾಲ್ಯದ ಶ್ರಾವಣದಲ್ಲಿ ನೂರು ಮನೆಯಲ್ಲಿಯಾದರೂ ಊಟ ಮಾಡಿದ್ದೇನೆ, ಯಾರ ಮನೆಗೆ ಹೋದಾಗಲೂ ಹರಿ ಬಂದಾ ಬಾರಪ್ಪ, ಚೆನ್ನಾಗಿದ್ದೀಯಾ ಎಂದಿಲ್ಲ. ಒಳಕ್ಕೆ ಹೋಗುವುದು ಎಲ್ಲರು ಕುಳಿತಿರುವ ಪಂಕ್ತಿಯಲ್ಲಿ ಕುಳಿತುಕೊಳ್ಳುವುದು ಉಂಡು ಬರುವುದು. ಕೆಲವರ ಮನೆಯ ಹತ್ತಿರಕ್ಕೆ ಹೋದಾಗ, ಊಟ ನಡಿತಾ ಇದೇ ಇರ್ರೋ ಕುತ್ಕೊಳ್ಳಿವ್ರೀ, ಎನ್ನುತ್ತಿದ್ದರು. ಅರ್ಧ ಗಂಟೆ ಅವರ ಮನೆ ಮುಂದೆ ನಿಂತು ಉಂಡು ಬರುತ್ತಿದ್ದೆ. ಅಲ್ಪ ಮಟ್ಟದ ಹಣ ದುರಹಂಕಾರವನ್ನು ತುಂಬಿಸಿತು. ಇನ್ನೊಬ್ಬರ ಮನೆಗೆ ಹೋಗುವುದು ಅವಮಾನವೆನ್ನುವಂತಾಯಿತು. ಅಲ್ಲೊಂದು ಅಭಿಮಾನ ಅಕ್ಕರೆ, ಸಂಪ್ರದಾಯವಿತ್ತೆಂಬುದನ್ನೇ ಅಳಿಸಿಹಾಕಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ