31 ಡಿಸೆಂಬರ್ 2015

ಬಯಸಿಯೋ ಬಯಸದೆಯೋ ಮುಳುಗುತ್ತಿದೆ 2015, ಎಲ್ಲವನ್ನೂ ಮೀರಿ ದಾಟಿಸಿದ ನಿನಗೆ ನಮನ

       ಈ ವರ್ಷದ ಕೊನೆಯ ಬರವಣಿಗೆ ಇದು ಎನ್ನುವುದು ನಿರ್ಧಾರವಾಗಿದೆ. ಈ ಬರವಣಿಗೆಯ ಅಂಶಗಳು ನಿಮ್ಮ ಗಮನಕ್ಕೆ ಬಂದಿರುತ್ತದೆ. ವರ್ಷದ ಕೊನೆಯಲ್ಲಿ ಒಂದು ಇಡೀ ವರ್ಷದಲ್ಲಾದ ಬೆಳವಣಿಗೆಗಳನ್ನು ಅವಲೋಕಿಸುವುದು ಮುಖ್ಯ ಉದ್ದೇಶವಾಗಿರುತ್ತದೆ. ಮುಳುಗುತ್ತಿರುವ 2015 ಎಂಬ ವರ್ಷ ಸ್ವಲ್ಪ ಸುಮಾರಾಗಿಯೇ ಪ್ರಾರಂಭವಾಯಿತು. 2014 ರ ಡಿಸೆಂಬರ್ 31ರ ರಾತ್ರಿ ನಂದಗೋಪಾಲರವರ ಮನೆಯಲ್ಲಿ ಸಣ್ಣದೊಂದು ಪಾರ್ಟಿ ಮಾಡಿ ಮಧ್ಯ ರಾತ್ರಿ ಮನೆಗೆ ಬಂದು ಮಲಗಿದೆ. ಮುಂಜಾನೆ ಎದ್ದು ಹೆಂಡತಿ ಮತ್ತು ಅವರ ಕುಟುಂಬದವರೊಂದಿಗೆ ಮೇಲುಕೋಟೆಗೆ ಹೋಗುವುದೆಂದು ತೀರ್ಮಾನಿಸಿದ್ದರೂ, ಕೊನೆಗೆ ಎಡಿಯೂರು ಬಳಿಯಲ್ಲಿರುವ ಹಟ್ಟಿಲಕ್ಕಮ್ಮ ದೇವಸ್ಥಾನಕ್ಕೆ ಹೋಗಿ ಬಂದೆವು. ಬರುವಾಗ ಯಾವುದೋ ಒಂದು ಮಿಲ್ಟ್ರಿ ಹೋಟೆಲ್ ಹುಡುಕಿಕೊಂಡು ಹೋಗಿ ಸ್ವಲ್ಪವೂ ಚೆನ್ನಾಗಿಲ್ಲದ ಊಟ ಮಾಡಿದೆವು. ಹೀಗೆ ಶುರುವಾದ 2015 ಅನೇಕ ಏರು ಪೇರನ್ನು ನನಗೆ ತೋರಿಸಿ ಮುಳುಗುತ್ತಿದೆ. ಈ ವರ್ಷದಲ್ಲಿ ನನಗೆ ಆಗಿರುವ ಕಷ್ಟಗಳೇ ಹೆಚ್ಚು ಎಂದರೂ ತಪ್ಪಿಲ್ಲ. 

ವೃತ್ತಿ ಜೀವನದಲ್ಲಿ ನಾನು ಸಿಡಿಡಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ. ತರಬೇತಿ ವಿಭಾಗದಲ್ಲಿ ನಾನಿದ್ದರೂ, ನಾನು ಯಾವುದೇ ತರಗತಿಯನ್ನೂ ತೆಗೆದುಕೊಳ್ಳಲಿಲ್ಲ. ಅದಕ್ಕೆ ಕಾರಣಗಳು ಹಲವಾರಿದ್ದರೂ ಇಲ್ಲಿ ಹೇಳುವ ಅಗತ್ಯವಿಲ್ಲ. ಸಂಸ್ಥೆಯ ಬಗ್ಗೆ ನಾನು ಮಾತನಾಡುವ ಹಕ್ಕು ಈಗ ಇಲ್ಲದೇ ಇದ್ದರೂ ಹಳೆಯ ನೌಕರ ಎನ್ನುವ ಸಲುಗೆಯಿಂದ ಎರಡು ಮಾತುಗಳನ್ನು ಹೇಳುತ್ತೇನೆ. ನಾನು ಅನೇಕಾ ಸಂಸ್ಥೆಗಳೊಂದಿಗೆ ಕಾರ್ಯನಿರ್ವಹಿಸಿದ್ದೇನೆ. ಕೆಲವನ್ನು ಬಿಟ್ಟರೇ ಬಹುತೇಕ ಎಲ್ಲವೂ ದುರಂತವೇ ಸರಿ. ಹಿರಿಯ ಅಧಿಕಾರಿಗಳಿಂದ ಹಿಡಿದು ಕೊನೆಯವರ ತನಕ ಅಸೂಯೆ, ಚಾಡಿತನ, ಬೆನ್ನಿಗೆ ಚೂರಿ, ಇಂತಹ ಸಂಸ್ಥೆಗಳು ದೇಶಕ್ಕೆ ಅಥವಾ ಸಮಾಜಕ್ಕೆ ಏನು ಕೊಡುಗೆ ಕೊಡಬಹುದು? ಅದೇನೆ ಇರಲಿ, ಇಲ್ಲಿ ನನ್ನ ಜೀವನಕ್ಕೆ ನೇರ ಸಂಭಂಧ ಇರುವ ವಿಷಯಗಳನ್ನು ಮಾತ್ರ ತಿಳಿಸುತ್ತೇನೆ. ಸಿಡಿಡಿ ಸಂಸ್ಥೆಯಲ್ಲಿ ಸುಮಾರು 9 ತಿಂಗಳು ಕೆಲಸ ಮಾಡಿದೆ. ಯಾವೊಂದು ದಿನವೂ ನನಗೆ ತೃಪ್ತಿ ಸಿಗಲಿಲ್ಲ ಅಥವಾ ಸಂತೋಷವಾಗಲಿಲ್ಲ. ಇದು ಬಹುಷಃ ನನ್ನ ಮನಸ್ಥಿತಿಯ ಕಾರಣವೋ ಏನೋ ನನಗೆ ತಿಳಿದಿಲ್ಲ. ಅಲ್ಲಿ ಯಾರನ್ನೂ ನಂಬಲಾಗುತ್ತಿರಲ್ಲಿಲ್ಲ. ಚಾಡಿ ಹೇಳುವುದು, ಅಸೂಯೆ ಪಡುವುದು, ನನ್ನ ಪರಿಸ್ಥಿತಿ ಹೇಗಿತ್ತೆಂದರೇ ಹೆಚ್ಚೂ ಕಡಿಮೆ ಹುಚ್ಚನಾಗಿದ್ದೆ. ನನಗೆ ಬಹಳ ನನ್ನ ಬಗ್ಗೆ ಇದ್ದ ದೊಡ್ಡ ತೊಡಕೆಂದರೇ ನನಗಿಂತ ಕಡಿಮೆ ತಿಳಿದಿರುವವರ ಜೊತೆಯಲ್ಲಿ ಕೆಲಸ ಮಾಡುವುದು. ನಾನು ಪಿಎಚ್‍ಡಿ ಮಾಡಿದ್ದೇನೆಂಬ ಅಹಂಕಾರವಿಲ್ಲದಿದ್ದರೂ ವಿಷಯವನ್ನು ಅರಿತಿದ್ದೇನೆಂಬ ಅರಿವು ಹೆಚ್ಚಾಗಿತ್ತು. ಮಾನಸಿಕವಾಗಿಯೂ ಹಿಂಸೆಯಾಗುತ್ತಿತ್ತು. ಮನೆಗೆ ಹತ್ತಿರವಿದ್ದ ಕಾರಣ ಸಹಿಸಿಕೊಂಡಿದ್ದೆ ಎನಿಸುತ್ತದೆ. 
ಮಾರ್ಚ್ ತಿಂಗಳಲ್ಲಿ ನನಗೂ ನನ್ನ ತಂದೆ ತಾಯಿ ಮತ್ತು ಹಲವು ನೆಂಟರಿಗೂ ಮನಸ್ತಾಪವುಂಟಾಯಿತು. ಎಲ್ಲರನ್ನು ದೂರವಿಟ್ಟೆ. ಯಾರೊಂದಿಗೂ ಮಾತುಕತೆ ನಡೆಸಲಿಲ್ಲ. ಊರಿಗೂ ಸ್ವಲ್ಪ ದಿನ ಹೋಗಿರಲಿಲ್ಲ. ಮನೆಯಲ್ಲಿ ಹೆಂಡತಿಯೊಂದಿಗೆ ನಿತ್ಯ ಕಾದಾಟವಿರುತ್ತಿತ್ತು. ಏಪ್ರಿಲ್ ತಿಂಗಳಲ್ಲಿ ಮನೆ ಬದಲಾಯಿಸುವ ಕ್ರಮ ತೆಗೆದುಕೊಂಡೆವು. ಬದಲಾಯಿಸಿ ಮತ್ತೆ ಅದೇ ಹಳೆಯ ಮನೆಗೆ ಬಂದೆವು. ಇವೆಲ್ಲವೂ ನಾನು ದಿಢೀರನೆ ಯೋಚಿಸದೆ ತೆಗೆದುಕೊಂಡ ನಿರ್ಧಾರಗಳು. ನನ್ನ ಮನಸ್ಥಿತಿಗೆ ಉದಾಹರಣೆಗಳು. ಮನೆ ಬದಲಾಯಿಸುವ ಕೆಲಸದಲ್ಲಿ ಸ್ವಲ್ಪ ಹಣವು ವ್ಯರ್ಥವಾಯಿತು. ಒಂದು ವಾರ ಪ್ಯಾಕ್ ಮಾಡಿದ್ದು ಮತ್ತೊಂದು ವಾರ ಅನ್‍ಪ್ಯಾಕ್ ಮಾಡಿದ್ದಾಯಿತು. ಮನಸ್ಸೋ ಇಚ್ಚೇ ಸುತ್ತಾಡಿದೆ. ದುಡ್ಡನ್ನು ಕಳೆದೆ, ಅತಿಯಾಗಿ ಕುಡಿದೆ. ಕುಡಿದು ಹಣ ಕಳೆದಮೇಲೆ ನೊಂದೆ. ಹೆಂಡತಿಯೊಂದಿಗೆ ಕೂಗಾಡಿದೆ, ಕಿರುಚಾಡಿದೆ, ಎಗರಾಡಿದೆ ಕೊನೆಗೆ ಕೈ ಕೂಡ ಮಾಡಿದೆ. ಇಂತಹ ಪರಿಸ್ಥಿತಿ ತಲುಪಿದೆ ಎಂಬುದು ನನ್ನ ನೋವಾದರೇ, ನನ್ನ ಮಗ ಹೀಗಾಗಿ ಹೋದನಲ್ಲ ಎಂಬುದು ನನ್ನ ಹೆತ್ತವರ ಅಳಲು. ಅವರು ಮೂರ್ನಾಲ್ಕು ದೇವರಿಗೆ ಹರಕೆ ಕಟ್ಟಿದರು. ಶಾಸ್ತ್ರ ಕೇಳಿದರು, ತಡೆ ಹೊಡೆಸಿದರು, ಆದರೂ ಏನೂ ಪ್ರಯೋಜನವಾಗಲಿಲ್ಲ. 
ಜುಲೈ ತಿಂಗಳ ಕೊನೆಯ ವಾರದಿಂದ ನನ್ನ ಪೂರ್ತಿ ನಸೀಬು ಬದಲಾಗತೊಡಗಿತ್ತು. ಲ್ಯಾಂಡ್‍ಮಾರ್ಕ್ ಕೋರ್ಸ್ ಮಾಡಿದಮೇಲೆ ಬದುಕಿನ ದಿಕ್ಸೂಚಿಯೇ ತಿರುಗಿತ್ತು. ನಾನು ಕೆಲಸ ಬಿಟ್ಟೆ, ಅದೇ ಸಮಯಕ್ಕೆ ನನ್ನ ಹೆಂಡತಿಯ ಆರೋಗ್ಯ ಹದಗೆಟ್ಟಿತು. ಕೈಯಲ್ಲಿ ಸಂಪಾದನೆಯಿಲ್ಲ? ಆಸ್ಪತ್ರೆಗೆ ಓಡಾಟ? ಏನು ಮಾಡುವುದು? ಒಂದು ತಿಂಗಳು ಪೂರ್ತಿ ಮನೆಯಲ್ಲಿಯೇ ಉಳಿಯಬೇಕಾಯಿತು. ಕೆಲಸ ಬಿಟ್ಟಿದ್ದು ಸರಿಯೋ ತಪ್ಪೋ? ಮುಂದೇನು ಹೀಗೆ ಅಳುಕುಂಟಾಯಿತು. ಆ ಸಮಯದಲ್ಲಿ ನನಗೆ ಕೆಲವು ಸ್ನೇಹಿತರ ಬಹಳ ಸಹಾಯ ಮಾಡಿದರು. ನೋವಿನಿಂದ ಹೊರ ಬರುವುದಕ್ಕೆ ಸಹಕಾರಿಯಾದರು. ನಿಧಾನಗತಿಯಲ್ಲಿ ಹೆಜ್ಜೆ ಹಾಕತೊಡಗಿದೆ. 
2015 ರಲ್ಲಿ ಅನುಭವಿಸಿದ ನೋವುಗಳು:
1. ಸಿಡಿಡಿ ಸಂಸ್ಥೆಯಲ್ಲಿ ಕಳೆದ ಕೆಟ್ಟ ದಿನಗಳು
2. ಅತಿಯಾಗಿ ಕುಡಿದು ದುಂದುವೆಚ್ಚ ಮಾಡಿದ್ದು
3. ಹೆಂಡತಿಯೊಂದಿಗೆ ಮಿತಿ ಮೀರಿ ವರ್ತಿಸಿದ್ದು
4. ಹೆತ್ತವರೊಂದಿಗೆ ಜಗಳ
5. ಹಣಕಾಸಿನ ಮೇಲೆ ಹಿಡಿತವಿಲ್ಲದ್ದು
2015ರಲ್ಲಿ ಅನುಭವಿಸಿದ ಸುಖಗಳು:
1. ಸೀಕೋ ಮುನ್ನೆಡೆಸುವ ನಿರ್ಧಾರ
2. ಲ್ಯಾಂಡ್ ಮಾರ್ಕ್ ಅನುಭವ ಅದರಲ್ಲಿಯೂ ಎಸ್.ಇ.ಎಲ್.ಪಿ ಪ್ರಯಾಣ
3. ಶಿಕ್ಷಣ ಇಲಾಖೆಯ ಜೊತೆಗೆ ರಾಜ್ಯ ಮಟ್ಟದ ತರಬೇತಿ ಸಾಹಿತ್ಯ ರಚನೆ ಮತ್ತು ತರಬೇತಿ
4. ಇಪ್ಪತ್ತು ಶಾಲೆಗಳಲ್ಲಿ ಕಾರ್ಯಕ್ರಮ
5. ನಾಲ್ಕು ಕಾಲೇಜುಗಳಲ್ಲಿ ಕಾರ್ಯಕ್ರಮ
6. ವಿಶ್ವ ಶೌಚಾಲಯ ದಿನಾಚರಣೆ
7. ಎಫ್.ಸಿ.ಆರ್.ಎ ಅರ್ಜಿ ಹಾಕಿದ್ದು ಮತ್ತು ಸಕರಾತ್ಮಕ ಬೆಳವಣಿಗೆ
8. 25ಎಸಿ ಅರ್ಜಿ ಹಾಕಿದ್ದು
9. ಸಿಇಇ ಜೊತೆಗೆ ಮಾತುಕತೆ
10. ಹನ್ನೆರಡಕ್ಕೂ ಹೆಚ್ಚು ಬಾರಿ ಸೀಕೋ ಚಟುವಟಿಕೆಗಳು ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದು
11. ಬಾನುಗೊಂದಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸುವ ತೀರ್ಮಾನ ಕೈಗೊಂಡಿದ್ದು
2015ರಲ್ಲಿ ಬಾಕಿ ಉಳಿದ ಅಥವಾ ಸಂಪೂರ್ಣಗೊಳಿಸದ ಕಾರ್ಯಗಳು:
1. ಸಿಇಇ ಗೆ ಯೋಜನೆಗೆ ಅರ್ಜಿ ಹಾಕದೇ ಇರುವುದು
2. ದೇವನಹಳ್ಳಿ ಶಾಲೆ ಕಾರ್ಯಕ್ರಮ ಮುಂದೂಡಿಕೆ
3. ಆರ್ಥಿಕ ಅಭಿವೃದ್ಧಿಯಾಗದೇ ಇರುವುದು
4. ಸಾಲ ತೀರಿಸದೇ ಇರುವುದು (ವೈಯಕ್ತಿಕ ಮತ್ತು ವಾಹನಗಳ)
5. ಸೀಕೋ ಹೊಸ ವಿನ್ಯಾಸದ ಮಾಹಿತಿ ಪುಸ್ತಕ, ವೆಬ್‍ಸೈಟ್ ವಿನ್ಯಾಸ, ವಿಸಿಟಿಂಗ್ ಕಾರ್ಡ್‍ಗಳು

2015 ನನ್ನ ಪಾಲಿಗೆ ಅರ್ಧ ವರ್ಷ ಕಷ್ಟ ಮತ್ತು ಅರ್ಧ ವರ್ಷ ಸುಖವೆನ್ನಬಹುದು. ಸುಖಕ್ಕಿಂತ ಕಷ್ಟವೇ ಹೆಚ್ಚೆಂದರೂ ತಪ್ಪಿಲ್ಲ.  ಆದರೂ ಎರಡನ್ನು ಸಮತೂಗಿಸಿಯೋ, ಅಥವಾ ಏರು ಪೇರು ಮಾಡಿಯೋ ದಿನ ಕಳೆದಿದ್ದೇನೆ. ಒಮ್ಮೊಮ್ಮೆ ಬಹಳ ನೋವಿದ್ದರೂ ನಕ್ಕಿದ್ದೇನೆ, ನಗಿಸಿದ್ದೇನೆ. ಚೆನ್ನಾಗಿದ್ದವನು ದಿಢೀರನೇ ರೇಗಿದ್ದೇನೆ, ಎಗರಾಡಿದ್ದೇನೆ. ಚಿಕ್ಕ ವಿಷಯವನ್ನು ದೊಡ್ಡದು ಮಾಡಿ ಜಗಳ ಕಾದಿದ್ದೇನೆ. ನನ್ನ ಉಢಾಫೆತನದ ಪರಮಾವಧಿ ತಲುಪಿ ಕೆಲವರನ್ನು ನಿರ್ಲಕ್ಷಿಸಿದ್ದೇನೆ. ಆರ್ಥಿಕವಾಗಿ ಬಹಳ ಜರ್ಜರಿತನಾಗಿದ್ದೇನೆ. ನಾನು ಹಣಕಾಸನ್ನು ನಿರ್ವಹಿಸಲು ಬರುವುದಿಲ್ಲವೆಂಬುದು ನನ್ನು ಹಳೆಯ ನಂಬಿಕೆ. ಹಾಗಾಗಿಯೇ, ಸಾಲ ಮಾಡುವುದು, ಮನಸ್ಸಿಗೆ ಬಂದಂತೆ ಖರ್ಚು ಮಾಡುವುದು. ಅದು ಆದ ಮೇಲೆ ಸಮಜಾಯಿಸಿ ಕೊಡುವುದು. ನನ್ನ ಕೈ ತೂತು ಎಂದು. ಅದಕ್ಕೆಲ್ಲವು ಕೊನೆ ಹಾಕುವ ದಿನ ಬಂದಿದೆ. ಈ ಎಲ್ಲದರ ಜೊತೆಗೆ, ನಾನು 2016ನ್ನು ಸ್ವಾಗತಿಸಲು ಕಾತುರನಾಗಿದ್ದೇನೆ. ನನ್ನ ಹಳೆಯ ತಪ್ಪುಗಳನ್ನು ನಿಮ್ಮ ಮಡಿಲಿಗೆ ಹಾಕಿಕೊಳ್ಳಿ ಹೊಸ ಬದುಕನ್ನು ಹರಸಿ. 

12 ಡಿಸೆಂಬರ್ 2015

ಕಂಡರಿಯದ ಬದುಕನ್ನು ಕರುಣಿಸಿದ ಲ್ಯಾಂಡ್ ಮಾರ್ಕ್ ಎಸ್.ಇ.ಎಲ್.ಪಿ. ಕೋರ್ಸ್


ಕಂಡರಿಯದ ಬದುಕನ್ನು ಕರುಣಿಸಿದ ಲ್ಯಾಂಡ್ ಮಾರ್ಕ್ ಎಸ್.ಇ.ಎಲ್.ಪಿ. ಕೋರ್ಸ್

ಅಂತೂ ಬಹಳ ದಿನಗಳ ನಂತರ ನಾಲ್ಕು ಸಾಲುಗಳನ್ನು ಬರೆಯಬೇಕೆಂದು ನಿರ್ಧರಿಸಿದ್ದೇನೆ. ಬರೆಯುವ ವಿಷಯವು ತಿಳಿದಿz ಮತ್ತು ಬರೆಯುವ ರೀತಿಯೂ ತಿಳಿದಿದೆ. ಕಡಿಮೆ ಸಾಲುಗಳಲ್ಲಿ ಹೇಳಬೇಕಿರುವುದನ್ನು ಹೇಳಿ ಮುಗಿಸುತ್ತೇನೆ. ನೀವು ಕಳೆದ ನಾಲ್ಕು ತಿಂಗಳಿಂದ ಎಂದರೇ ಜುಲೈ ತಿಂಗಳಿಂದ ನನ್ನ ಬಾಯಿಯಲ್ಲಿ ಆಗ್ಗಾಗ್ಗೆ ಕೇಳಿ ಬರುತ್ತಿರುವ ಒಂದು ಪದ ಲ್ಯಾಂಡ್ ಮಾರ್ಕ್ ಎಜುಕೇಷನ್ ಎಂಬುದನ್ನು ಗಮನಿಸಿದ್ದೀರಿ. ಕೆಲವರಿಗೆ ಈ ಪದವನ್ನು ಕೇಳಿ ಕೇಳಿ ಬೇಸರ ಬಂದಿರಬಹುದು. ಆದರೂ ನಾನು ನನ್ನ ಮಾತನ್ನು ನಿಲ್ಲಿಸಿಲ್ಲ ಮತ್ತು ನಿಲ್ಲಿಸಬೇಕೆಂದು ಕಾಣುವುದಿಲ್ಲ. ಅದಕ್ಕೆ ಕಾರಣವೂ ಇದೆ. ಅದರ ಕುರಿತು ಸ್ವಲ್ಪ ವಿಷಯವನ್ನು ನನ್ನ ಹಿಂದಿನ ಬರಹದಲ್ಲಿ ತಿಳಿಸಿದ್ದೆ. ಆ ಬರವಣಿಗೆಯ ಮುಂದುವರೆದ ಭಾಗ ಮತ್ತು ನನ್ನ ಜೀವನದ ಬೆಳವಣಿಗೆಯ ಭಾಗವೇ ಈ ಕೆಳಗಿನ ಸಾಲುಗಳು.

ಮುಂದಿನ ಬರವಣಿಗೆಗೆ ಹೋಗುವ ಮುನ್ನಾ ನಾನು ಲ್ಯಾಂಡ್ ಮಾರ್ಕ್ ಸಂಸ್ಥೆಯ ಬಗ್ಗೆ ಕೆಲವು ಮಾಹಿತಿಯನ್ನು ನೀಡುತ್ತೇನೆ. ಲ್ಯಾಂಡ್ ಮಾರ್ಕ್ ಎನ್ನುವುದು ಮಾನವನ ಬಗ್ಗೆ ಮಾನವನ ಗುಣಗಳ ಅಥವಾ ಜೀವನದ ಅಡವಳಿಕೆಯ ಜೊತೆಗೆ, ಮಾನವ ಮಾನವನಾಗಿ ಬದುಕುವ ಕುರಿತು ನೀಡುವ ತರಬೇತಿ. ಸಂಸ್ಥೆಯು ಸುಮಾರು ನಲ್ವತ್ತು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. 25ಕ್ಕೂ ಹೆಚ್ಚೂ ದೇಶಗಳಲ್ಲಿ 150 ಕ್ಕೂ ಹೆಚ್ಚೂ ನಗರಗಳಲ್ಲಿ ತರಬೇತಿಯನ್ನು ನೀಡುತ್ತಿದೆ. ಸುಮಾರು 20 ಲಕ್ಷಕ್ಕೂ ಹೆಚ್ಚೂ ಜನರು ಇದರಿಂದ ತರಬೇತಿಯನ್ನು ಪಡೆದಿರುತ್ತಾರೆ. ಇದೆಲ್ಲಾ ಸರಿ ದೇವರು, ಆದರೇ ಅಲ್ಲಿ ಏನು ಮಾಡುತ್ತಾರೆ? ಅದರಿಂದ ನಮಗೆ ಏನು ಅನುಕೂಲ?ನಿನಗೆ ಏನು ಲಾಭವಾಯ್ತು? ಅದರ ಬಗ್ಗೆ ಹೇಳಪ್ಪಾ ಎನ್ನುತ್ತಿದ್ದೀರಿ. ನಾನು ನನ್ನ ಜೀವನದ ಬದಲಾವಣೆಯ ಪರ್ವದ ಬಗ್ಗೆ ಹೇಳುತ್ತೀನಿ.

ನಾವು ಜೀವನದಲ್ಲಿ ನಮಗೆ ತಿಳಿದೋ ತಿಳಿಯದೆಯೋ ದುಃಖವನ್ನು ಅನುಭವಿಸುತ್ತಿರುತ್ತೇವೆ. ನಮಗೆ ಎಲ್ಲಾ ಸಾಮಥ್ರ್ಯವಿದ್ದು ಜೀವನದ ಯಶಸ್ಸಿಗೆ ಪರದಾಡುತ್ತಿರುತ್ತೇವೆ. ಯಾರೋ ನಮ್ಮನ್ನು ಬೆಳೆಸುತ್ತಾರೆ, ಯಾರೋ ನಮಗೆ ಸಹಾಯ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಕೆಲವರಿದ್ದರೆ, ಮತ್ತು ಕೆಲವರು ಯಾರೂ ನನಗೆ ಸಹಾಯ ಮಾಡುವುದಿಲ್ಲ ನನ್ನ ಬದುಕಿಗೆ ಯಾರೂ ಇಲ್ಲವೆಂದು ಕೊರಗುತ್ತಿರುತ್ತಾರೆ. ಹೀಗೆ ನಮ್ಮದೆ ಕಲ್ಪನೆಗಳ ಸರಪಣಿಗಳನ್ನು ಹೆಣೆದುಕೊಂಡು ಜೀವಿಸುತ್ತಿರುತ್ತೇವೆ. ನಾವು ನಮ್ಮ ಸಾಮಥ್ರ್ಯವೇ ಇಷ್ಟು ಎಂದು ನಿರ್ಧರಿಸಿ ಮುಂದೆ ಹೋಗುವುದಕ್ಕೂ ದೈರ್ಯ ಮಾಡುವುದಿಲ್ಲ. ನಾವು ಯಾಕೆ ಮುಂದುವರೆಯುತ್ತಿಲ್ಲವೆಂಬ ಅಂಶವನ್ನು ಗಮನಿಸುವುದಿಲ್ಲ. ಯಾವುದೋ ತಿಳಿಯದ ಭಯ ನಮ್ಮನ್ನು ಆವರಿಸಿರುತ್ತದೆ. ಸೋಲಿನ ಭಯ, ಸೋತ ಮೇಲೆ ಅನುಭವಿಸುವ ಅವಮಾನದ ಭಯ ನಮ್ಮನ್ನು ಮುನ್ನುಗ್ಗದ ಹಾಗೆ ಬಂಧಿಸಿರುತ್ತದೆ. ಭಯ ಸ್ವಾಭಾವಿಕ ಗುಣ. ಆದರೇ ಭಯವನ್ನು ಹಿಂದೆ ಇಟ್ಟುಕೊಂಡು ಆಟವಾಡಿ ಗೆಲ್ಲುವುದು ಮುಖ್ಯ. ಭಯವಿಲ್ಲವೆನ್ನುವವನು ಹುಂಬ, ಭಯವಿಲ್ಲವೆಂದು ರಸ್ತೆಯಲ್ಲಿ ಬರುವ ಲಾರಿಗೆ ಅಡ್ಡ ನಿಲ್ಲಲಾಗುವುದಿಲ್ಲ. ಲೆದರ್ ಬಾಲ್ ಬ್ಯಾಟಿಂಗ್ ಸಮಯದಲ್ಲಿ ಹೆಲ್ಮೆಟ್ ಇರದೆ ಆಡಲು ಸಾಧ್ಯವಿಲ್ಲ. ಭಯದ ಹಿನ್ನಲೆಯಲ್ಲಿ ಕೆಲಸ ಮಾಡುವವನು ಮಾತ್ರ ಗೆಲ್ಲುತ್ತಾನೆ. ಆ ಗೆಲುವಿನ ಕಲೆಯನ್ನು ಲ್ಯಾಂಡ್ ಮಾರ್ಕ್ ಕಲಿಸಿಕೊಡುತ್ತದೆ. ಭಯವಿದ್ದು ಗೆಲ್ಲುವುದು ಜೀವನದ ಯಶಸ್ಸಿಗೆ ಮುಖ್ಯ ಅದು ಲ್ಯಾಂಡ್ ಮಾರ್ಕ್‍ನಲ್ಲಿ ದೊರೆಯುತ್ತದೆ.


ಈ ಕಲೆಯನ್ನು ರೂಪಿಸುವಲ್ಲಿ ಲ್ಯಾಂಡ್ ಮಾರ್ಕ್ ಯಶಸ್ವಿಯಾಗಿದೆ.  ಜೀವನಕ್ಕೆ ಬೇಕಿರುವ ಸಾಧನಗಳನ್ನು ಅರ್ಥೈಸಿಕೊಳ್ಳಲು ಮೂರು ಹಂತಗಳಲ್ಲಿ ಸಹಾಯ ಮಾಡುತ್ತದೆ, ಮೂರು ಕಾರ್ಯಕ್ರಮಗಳು ಬೇರೆ ಬೇರೆ ರಿತಿಯಲ್ಲಿ ನಡೆಯುತ್ತವೆ. ಮೊದಲನೆಯದಾಗಿ, ಲ್ಯಾಂಡ್ ಮಾರ್ಕ್ ಫೋರಂ, ಇದು ಮೂರು ದಿನದ ಕಾರ್ಯಕ್ರಮವಾಗಿದ್ದು ಸಾಮಾನ್ಯವಾಗಿ ಶುಕ್ರವಾರ, ಶನಿವಾರ ಮತ್ತು ಭಾನುವಾರ, ಬೆಳ್ಳಿಗ್ಗೆ 9ರಿಂದ ರಾತ್ರಿ 10ರವರೆಗೆ ನಡೆಯುತ್ತದೆ. ಈ ತರಬೇತಿಯಲ್ಲಿ ನಾನು ಏನು? ಜೀವನ ಏನು? ನಾನು ಎಲ್ಲಿ ಮುಂದುವೆರಯುವುದಕ್ಕೆ ಆಗದೇ ಹೆಣಗಾಡುತ್ತಿದ್ದೇನೆ? ಯಾಕೆ ನಾನು ಒಂದೇ ರೀತಿಯ ಜೀವನವನ್ನು ನಡೆಸುತ್ತಿದ್ದೇನೆ? ಎಲ್ಲಿ ಸೋಲುತ್ತಿದ್ದೇನೆ? ಎಂಬುದನ್ನು ತಿಳಿಸಿಕೊಡುತ್ತದೆ. ಈ ಕಾರ್ಯಕ್ರಮದಲ್ಲಿ ಹತ್ತು ಪ್ರಮುಖ ಅಂಶಗಳನ್ನು ತಿಳಿಸಿಕೊಡಲಾಗುತ್ತದೆ. ನಾವು  ಕಳೆದ ಮೂವತ್ತು ವರ್ಷಗಳಿಂದ ನಮ್ಮದೇ ಭ್ರಮೆಯಲ್ಲಿ, ನಮ್ಮದೇ ರೀತಿಯಲ್ಲಿ ಬದುಕುತ್ತಿರುವುದರಿಂದ ಅಲ್ಲಿ ಹೇಳುವ ಹಲವಾರು ಅಂಶಗಳು ಬೇಗ ತಲೆಗೆ ಹೋಗುವುದಿಲ್ಲ ಮತ್ತು ಒಪ್ಪಿಕೊಳ್ಳಲು ಬಹಳ ಇರಿಸು ಮುರಿಸುಂಟುಮಾಡುತ್ತವೆ. ಆದರೂ, ಅಂಗನವಾಡಿಗೆ ಹೋದ ಮಗುವಿನಂತೆ ನಾವು ಕೇಳಲೇಬೇಕು. ನಾವು ಪ್ರೈಮರಿ ಸ್ಕೂಲಿನಲ್ಲಿ ನಮ್ಮ ಮಾಷ್ಟರುಗಳ ಮಾತನ್ನು ಕೇಳದಿದ್ದರೇ, ಅವರ ಹೊಡೆತಗಳನ್ನು ತಿನ್ನದಿದ್ದರೆ ಇಂದು ಸುಶಿಕ್ಷಿತರಾಗಿರುತ್ತಿರಲಿಲ್ಲ. ಹಾಗೇಯೇ, ಲ್ಯಾಂಡ್ ಮಾರ್ಕ್ ಫೋರಂನಲ್ಲಿ ಜೀವನವನ್ನು ಬದಲಾಯಿಸುವ ಆಸೆಯಿದ್ದರೆ ಮಾತ್ರ ಅವರ ಮಾತಿಗೆ ಬೆಲೆ ಕೊಟ್ಟು ಪಾಲಿಸಬೇಕು. ನಮ್ಮ ಜೀವನವನ್ನು ಅವರ ಕೈಗೆ ಕೊಡಬೇಕು ಮತ್ತು ನಿಮಗೆ ಏನು ಬೇಕು ಎಂಬುದನ್ನು ಹೇಳಿ ಪಡೆಯಬೇಕು. ನಮಗೆ ಟೈಲರ್ ಗೊತ್ತಿಲ್ಲದಿದ್ದರು ನಮ್ಮ ಬಟ್ಟೆಗಳನ್ನು ಕೊಟ್ಟು ಹೊಳಿಸಿಕೊಳ್ಳುವಂತೆ ಇಲ್ಲಿಯೂ ಜೀವನವನ್ನು ರೂಪಿಸಿಕೊಳ್ಳಬೇಕು. ಬೇಡವೆನಿಸಿದರೇ,  ಇರುವ ಜೀವನವನ್ನೇ ತಳ್ಳಬೇಕು ಮತ್ತು ಸವೆಸಬೇಕು. ಮೂರು ದಿನಗಳು ಕಲಿತಿರುವುದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತದೆ. ಅದಕ್ಕಾಗಿಯೇ, ಕಲಿತಿರುವುದನ್ನು ಅಳವಡಿಸಿಕೊಳ್ಳುವುದಕ್ಕೆ ಹತ್ತು ವಾರಗಳು ಸಂಜೆ ಮೂರು ಗಂಟೆಗಳ ತರಗತಿ ನಡೆಯುತ್ತವೆ. ಹೀಗೆ ನಡೆಯುವ ಸೆಮಿನಾರ್ ಗಳು ಉಚಿತವಾಗಿರುತ್ತವೆ. ಲ್ಯಾಂಡ್ ಮಾರ್ಕ್ ಫೋರಂನಲ್ಲಿ ತಿಳಿದು ಅಳವಡಿಸಲು ಸಾಧ್ಯವಾಗದ ಬಹುತೇಕ ಅಂಶಗಳನ್ನು ಇಲ್ಲಿ ಅಳವಡಿಸಿಕೊಳ್ಳಬಹುದು. ಸೆಮಿನಾರ್ ಸಿರಿಸ್ ನಮಗೆ ಬಹಳ ಕೊಡುಗೆಯನ್ನು ಕೊಡುತ್ತದೆ.

ಎರಡನೆಯದಾಗಿ, ಲ್ಯಾಂಡ್ ಮಾರ್ಕ್ ಅಡ್ವಾನ್ಸ್ ಕೋರ್ಸ್, ಇದು ಕೂಡ ಶುಕ್ರವಾರ, ಶನಿವಾರ ಮತ್ತು ಭಾನುವಾರ ನಡೆಯಲಿದ್ದು, ಬೆಳಿಗ್ಗೆ 10ರಿಂದ ರಾತ್ರಿ ಹನ್ನೆರಡರವರೆಗೂ ನಡೆಯುತ್ತದೆ. ಈ ತರಬೇತಿಯಲ್ಲಿ ನಾವು ನಮ್ಮ ಆತ್ಮೀಯರೊಂದಿಗೆ ಹೇಗೆ ವ್ಯವಹರಿಸುತ್ತಿದ್ದೇವೆ? ನಾವು ಎಲ್ಲಿ ಎಡವಿದ್ದೇವೆ? ಎಲ್ಲಿ ಎಡವುತಿದ್ದೇವೆಂಬುದನ್ನು ತಿಳಿಸಿಕೊಡಲಾಗುತ್ತದೆ. ನಿಮ್ಮ ಆತ್ಮೀಯರು ನಿಮ್ಮ ಬಗ್ಗೆ ಇಟ್ಟಿರುವ ಅಗಾಧ ಪ್ರೀತಿಯು ಇಲ್ಲಿ ನಿಮಗೆ ಅರ್ಥವಾಗುತ್ತದೆ. ನಾವು ಮಾನವ ಜೀವಿಯಾಗಿ ಒದ್ದಾಡುತ್ತಿರುವುದರ ಕಡೆಗೆ ಬೆಳಕು ಚೆಲ್ಲಲಾಗುತ್ತದೆ. ಈ ಸಮಯದಲ್ಲಿ ನಾವು ಒಂದು ಗುಂಪಾಗಿ ಹೇಗೆ ಬದುಕುತ್ತಿವಿ ಎನ್ನುವುದನ್ನು ತಿಳಿಸಿಕೊಡಲಾಗುತ್ತದೆ. ಒಂದು ಗುಂಪಿನ ನಾಯಕನಾಗುವುದನ್ನು ಇಲ್ಲಿ ಕಲಿಯಬಹುದು. 

ಲ್ಯಾಂಡ್ ಮಾರ್ಕ್ ಎಜುಕೇಷನ್‍ನಲ್ಲಿ ಬಹಳ ಮುಖ್ಯವಾದ ಹಂತ ಸೆಲ್ಫ್ ಎಕ್ಷ್ ಪ್ರೆಷನ್ ಮತ್ತು ಲೀಡರ್‍ಶಿಪ್ ಕಾರ್ಯಕ್ರಮ. ಈ ಕಾರ್ಯಕ್ರಮವು ತಿಂಗಳಿಗೊಂದು ಭಾನುವಾರದಂತೆ ಮೂರು ತಿಂಗಳು ನಡೆಯುತ್ತದೆ. ಅದರ ಜೊತೆಗೆ ವಾರಕ್ಕೊಮ್ಮೆ ಪ್ರತಿ ಶನಿವಾರ ಸಂಜೆ ತರಗತಿಗಳು ನಡೆಯುತ್ತವೆ. ನಾನು ಮೂರನೆ ಹಂತದ ಕೊನೆಯಲ್ಲಿದ್ದೇನೆ. ನಾನು ಈ ತರಬೇತಿಯಿಂದ ಆದ ಲಾಭವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯುತ್ತಿದ್ದೇನೆ. ಮುಂದಿನ ಪ್ಯಾರಾಗ್ರಾಫ್ ಗಳು ಅದರ ಬಗ್ಗೆಯೇ ಇರುತ್ತವೆ. ಈ ಓದು ನಿಮ್ಮನ್ನು ನಾನು ಲ್ಯಾಂಡ್ ಮಾರ್ಕ್ ಇಂದ ಪಡೆದ ಲಾಭಗಳ ಬಗ್ಗೆ ತಿಳಿಯುವಂತೆ ಮಾಡಿದರೇ ನಾನು ಧನ್ಯ.

ನಾನು ನನ್ನ ಸಂಸ್ಥೆ, ಸೆಂಟರ್ ಪಾರ್ ಎಜುಕೇಷನ್ ಎನ್ವಿರಾನ್‍ಮೆಂಟ್ ಆಂಡ್ ಕಮ್ಯುನಿಟಿ (ಸೀಕೋ) ವನ್ನು ಸ್ಥಾಪಿಸಿದ್ದು 2009ರ ಮೇ ತಿಂಗಳಲ್ಲಿ. ಕಳೆದ ಆರು ವರ್ಷಗಳಿಂದ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಯಾವುದೋ ಭಯ, ಆತಂಕ ನಾನು ದೊಡ್ಡ ಯೋಜನೆಗಳಿಗೆ ಯೋಚಿಸಿರಲಿಲ್ಲ. ನನಗೆ ಇದ್ದ ಅಲ್ಪ ಸ್ವಲ್ಪ ಸಮಯದಲ್ಲಿ ಅಲ್ಲಿ ಇಲ್ಲಿ ಕೆಲವು ಕಾರ್ಯಕ್ರಮಗಳನ್ನು ಬಿಟ್ಟರೆ ಬೇರಾವ ದೊಡ್ಡ ಯೋಜನೆಗಳು ನಡೆದಿರಲಿಲ್ಲ. ಇದಕ್ಕೆ ಹಲವಾರು ಕಾರಣಗಳಿರಬಹುದು ಅಥವಾ ನನ್ನ ತಾತ್ಸಾರವೇ ಇರಬಹುದು. ಸೋತರೆ ಎಂಬ ಭಯ ಒಂದೆಡೆಗಾದರೆ ನನ್ನ ಉಢಾಫೆತನವೂ ಮುಖ್ಯ ಕಾರಣವಾಗಿತ್ತು. ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಕಾರಣವಿತ್ತೆಂದರೆ ತಪ್ಪಿಲ್ಲ. ಅಂತೂ ನನ್ನ ಜೀವನ ನಾನು ಬಯಸಿದಷ್ಟು ಚೆನ್ನಾಗಿರಲಿಲ್ಲವೆಂಬುದು ಸತ್ಯ ಮತ್ತು ನಂಬುವ ಮಾತು. ನನ್ನ ಜೀವನದ ಬಹುತೇಕ ಎಲ್ಲಾ ಅಂಗಗಳು ಹಾದಿ ತಪ್ಪಿದ್ದವು ಎಂದರೂ ಸರಿಯೆ. 

ನನ್ನ ವೈಯಕ್ತಿಕ ಜೀವನದಲ್ಲಿ ಹೆಂಡತಿ ಜೊತೆಗೆ ದಿನಕ್ಕೊಮ್ಮೆ, ಒಮ್ಮೊಮ್ಮೆ ದಿನವಿಡೀ ಜಗಳ ಕಾಯುತ್ತಿದ್ದೆ. ಕಾರಣವಿಲ್ಲದೇ ಜಗಳವಾಡುವುದು ದಿನ ನಿತ್ಯದ ಚಟುವಟಿಕೆಯಾಗಿತ್ತು. ಮನೆಯ ಜಗಳದ ಮುಂದುವರೆದ ಭಾಗವಾಗಿ ಆಫೀಸಿನಲ್ಲಿ ಕೂಡ ಏನೋ ಒಂದು ಆಗುತ್ತಿತ್ತು. ಜಗಳವೆಂಬುದು ನನ್ನ ಬದುಕಿನ ಅವಿಭಾಜ್ಯ ಅಂಗವಾಗಿತ್ತು. ಸಿಕ್ಕ ಸಿಕ್ಕವರ ಜೊತೆ ಜಗಳ, ಯಾರದೋ ಕೋಪ ಇನ್ಯಾರದೋ ಮೇಲೆ. ಪ್ರಶ್ನೆ ಕೇಳಿದರೂ ರೇಗುವುದು. ಮಾತನಾಡಿಸಿದರೂ ರೇಗುವುದು. ನನಗೆ ನನ್ನ ಬಳಿಯಲ್ಲಿ ಇಲ್ಲದ ನೆಮ್ಮದಿಯನ್ನು ಕುಡಿತದಲ್ಲಿ ಹುಡುಕಲು ಪ್ರಯತ್ನಿಸಿದ್ದೆ. ಅದೆಷ್ಟರ ಮಟ್ಟಿಗೆ ನನ್ನ ಮನಸ್ಥಿತಿ ತಲುಪಿತ್ತು ಎಂದರೇ ಪ್ರಪಂಚವೇ ಬೇಡವೆನಿಸುವಷ್ಟು ಸಾಕಾಗಿತ್ತು. ಸತ್ತರು ಏನು ನಷ್ಟವಿಲ್ಲವೆಂದು ನನ್ನ ಮನಸ್ಸು ನಂಬಿತ್ತು. ಅದಕ್ಕೆ ಉಪ್ಪು ಹಾಕುವಂತೆ, ಮನೆಯಲ್ಲಿಯೂ ಕೂಡ ಅಪ್ಪ ಅಮ್ಮನ ಜೊತೆಗೆ ಮುನಿಸು ಹೆಚ್ಚಾಗಿತ್ತು. ಜೇಬಿನಲ್ಲಿ ಕಾಸಿಲ್ಲ, ಮನೆಯಲ್ಲಿ ನೆಮ್ಮದಿಯಿಲ್ಲ, ಮನಸ್ಸಿನಲ್ಲಿ ಶಾಂತಿಯಿಲ್ಲ. ಸಾಯುವುದಕ್ಕೆ ಇದಕ್ಕಿಂತ ಹೆಚ್ಚೆನೂ ಬೇಕಿರಲಿಲ್ಲ. ನರಕದಲ್ಲಿ ಬದುಕುವುದಕ್ಕಿಂತ ಸಾಯುವುದು ಮೇಲು ಎಂದು ಬಹಳ ಸಾರಿ ಎನಿಸುತ್ತದೆ. ನರಕದ ಕಲ್ಪನೆಯೇ ಗೊಂದಲಮಯ, ಒಬ್ಬೊಬ್ಬರಿಗೂ ಒಂದೊಂದು ಕಲ್ಪನೆ. ನನಗೆ ನರಕ ಎಂದರೇ ನೆಮ್ಮದಿ ಇಲ್ಲದೇ ಇರುವುದು. ನೆಮ್ಮದಿಯ ಬದುಕು ಎಲ್ಲದಕ್ಕೂ ಬುನಾದಿ. ಮನಸ್ಸಿಗೆ ನೆಮ್ಮದಿ ಬೇಕು ಅನ್ನುವುದಕ್ಕೆ ನಾವು ದುಡಿಯುವುದು. ಅದು ಇಲ್ಲವೆಂದರೇ? ಏಕೆ ಬದುಕಬೇಕು? ನನಗೆ ಕೆಲಸ ಇತ್ತು, ಸಂಬಳವೂ ಇತ್ತು, ಮನೆಯಿತ್ತು, ಸುಂದರವಾದ ಹೆಂಡತಿಯೂ ಇದ್ದಳು, ಉತ್ತಮ ಸ್ನೇಹಿತರಿದ್ದರು ಆದರೂ ನೆಮ್ಮದಿಯಿಲ್ಲ. ಯಾವುದೂ ಸರಿಯಿಲ್ಲ, ಎಲ್ಲವೂ ಸರಿಯಿಲ್ಲ. ಸ್ವಲ್ಪ ಸಾಲವಿತ್ತು ಆದರೇ ಸಾಲಗಾರರು ಮನೆ ಬಾಗಿಲಿಗೆ ಬಂದು ಹಿಂಸೆ ಕೊಡುತ್ತಿರಲಿಲ್ಲ.  ಆದರೂ ಹಿಂಸೆ ಎನಿಸುತ್ತಿತ್ತು. ಯಾವುದೋ ಕಿರಿಕಿರಿ. ನಾನು ಮಾಡುತ್ತಿರುವುದು ಬದುಕುತ್ತಿರುವುದು ಸರಿಯಿಲ್ಲ. ಸರಿ ಯಾವುದು ಎಂಬುದು ಗೊತ್ತಿಲ್ಲ, ಸಂಪೂರ್ಣ ಗೊಂದಲಮಯವಾಗಿತ್ತು. ಅಂತಹ ಸಮಯದಲ್ಲಿ ನನಗೆ ಸಹಾಯಕ್ಕೆ ಬಂದದ್ದು ನನ್ನ ಹಳೆಯ ಸ್ನೇಹಿತ ವಿಜಯ್ ಕೃಷ್ಣ. ಅವನೇ ನನ್ನನ್ನು ಲ್ಯಾಂಡ್ ಮಾರ್ಕ್ ಗೆ ಸೇರಿಸಿದ್ದು.

ನಾನು ಇಲ್ಲಿ ಹೇಳುವುದಕ್ಕೆ ಹೋಗಿರುವುದು ಮೂರನೆಯ ಹಂತದ ಲ್ಯಾಂಡ್ ಮಾರ್ಕ್‍ದ ಬಗ್ಗೆ. ಈಗ ಅಲ್ಲಿಗೆ ಬರುತ್ತೇನೆ. ಇದು ಶುರುವಾಗಿದ್ದು ಅಕ್ಟೋಬರ್ ತಿಂಗಳ ನಾಲ್ಕನೆಯ ತಾರೀಖಿನಂದು. ಆ ದಿನಕ್ಕೆ ನಾನು ಹಳೆಯ ಕಂಪನಿಯಲ್ಲಿ ಕೆಲಸ ಬಿಟ್ಟಿದ್ದೆ ಮತ್ತು ನನ್ನ ಸಂಸ್ಥೆಯನ್ನು ಮುನ್ನೆಡೆಸಬೇಕೆಂದು ನಿರ್ಧರಿಸಿದ್ದೆ. ಆದರೇ, ಮನೆ ನಡೆಸುವುದು, ಹಣಕಾಸು, ಸಂಸ್ಥೆ ನಡೆಸಲು ದುಡ್ಡು? ಆ ಸಮಯಕ್ಕೆ ನನ್ನ ಸಂಸಾರದಲ್ಲಿ ಅನಿರೀಕ್ಷಿತ ಕೆಟ್ಟ ಬೆಳವಣಿಗೆಗಳು ನಡೆದೆವು. ನಾನು ಮತ್ತಷ್ಟೂ ಕಂಗಾಳಾದೆ. ದಿಕ್ಕು ತೋಚದಾಯಿತು. ನೋವನ್ನು ಯಾರೊಂದಿಗೂ ಹೇಳಿಕೊಳ್ಳಲಾಗದ ಪರಿಸ್ಥಿತಿ ತಲುಪಿದೆ. ಒಂದೊಂದು ರೂಪಾಯಿಗೂ ಪರದಾಡುವಂತಿತ್ತು ಆ ದಿನ ಅಥವಾ ಆ ತಿಂಗಳು. ಅಂತಹ ಸಮಯದಲ್ಲಿ ನಾನು ರಿಸ್ಕ್ ತೆಗೆದುಕೊಳ್ಳುವುದೆಂದರೇ ನನ್ನ ಜೀವನವನ್ನೇ ಪಣ ಇಟ್ಟಂತೆ. ಅಂತಹ ಒಂದು ರಿಸ್ಕ್ ನನ್ನ ಜೀವನಕ್ಕೆ ಬೇಕಿತ್ತು. ಅದನ್ನ ತೆಗೆದುಕೊಂಡೆ, ತೆಗೆದುಕೊಳ್ಳಲು ಸಹಾಯ ಮಾಡಿದ್ದು ಈ ಲ್ಯಾಂಡ್ ಮಾರ್ಕ್.

ಎಸ್.ಇ.ಎಲ್.ಪಿ
ಶುರುವಿನ ದಿನ ಅದು ಅಕ್ಟೋಬರ್ 4ನೇ ತಾರೀಖು ಭಾನುವಾರ ಬೆಳ್ಳಿಗ್ಗೆ ಲ್ಯಾಂಡ್ ಮಾರ್ಕ್ ಆಫೀಸಿಗೆ ಹೋದೆ. ನನ್ನ ಮನಸ್ಸೆಲ್ಲಾ ಬೇರೆಲ್ಲೋ ಇತ್ತು. ಸತತ ಸೋಲಿನಿಂದ ಕಂಗೆಟ್ಟಿದ್ದ ನನಗೆ ಇದು ಮತ್ತೊಂದು ಸೋಲಾದರೇ? ಎಂಬ ಆತಂಕವಿತ್ತು. ಮುಂದಿನ ಮೂರು ತಿಂಗಳು ಏನು ಮಾಡುತ್ತೀನಿ ಇಲ್ಲಿ? ಕಮ್ಯುನಿಟಿ ಜೊತೆಗೆ ಪ್ರಾಜೆಕ್ಟ್ ಮಾಡಬೇಕಂತೆ? ಅದಂತೆ, ಇದಂತೆ ಹೀಗೆ ಕೆಲವು ಪ್ರಶ್ನೆಗಳು ಹರಿದಾಡುತ್ತಿದ್ದವು. ಮೊದಲು ಬಂದದ್ದು ಎಸ್.ಇ.ಎಲ್.ಪಿ ಲೀಡರ್ ಪ್ರಮೋದ್! ಬಹಳ ಮೃದು ಸ್ವಭಾವದ ನಿಧಾನಗತಿಯಲ್ಲಿ ಮಾತನಾಡುವ ಮನುಷ್ಯ. ಫೋರಂ ಸಮಯದಲ್ಲಿ ಮಹೇಶ್ ನಂಬಿಯಾರ್ ಎಂಬ ಲೀಡರ್ ಬಹಳ ಶಿಸ್ತು, ತುಂಬ ಗಂಬೀರದ ವ್ಯಕ್ತಿ, ಕೋಪಿಷ್ಟ. ಇಲ್ಲಿ ನೋಡಿದರೆ ಎಲ್ಲವೂ ಉಲ್ಟಾ! ನಮಗೆ ನಂಬಿಕೆ ಏನೆಂದರೇ, ನಮಗೆ ಪಾಠ ಮಾಡುವವರು ತುಂಬಾ ಸೀರಿಯಸ್ ಆಗಿ ಕೋಪದಿಂದ ಹೇಳಿದರೆ ಕೇಳಬಹುದು ಆಗ ಮಾತ್ರ ಅರ್ಥವಾಗುತ್ತದೆಯೆಂದು! ಇಲ್ಲಿ ನೋಡಿದರೇ ಹೀಗೆ ಅಯ್ಯೋ ಎನಿಸಿತು.
ಜೀವನದಲ್ಲಿ ನಡೆಯುವಂತೆಯೇ ಲ್ಯಾಂಡ್ ಮಾರ್ಕ್ ಕೂಡ ಇರುತ್ತದೆ. ಪ್ರೈಮರಿ ಸ್ಕೂಲಿನಲ್ಲಿ ಹೊಡೆದು ಬಡಿದು ಪಾಠ ಮಾಡುತ್ತಾರೆ, ಪಿಯುಸಿ ಬರುವ ವೇಳೆಗೆ ಬೈದರೇ ಸಾಕು ನಂತರ ಎಂಎಸ್ಸಿ ಸಮಯದಲ್ಲಿ ಬೈಯ್ಯುವುದು ಬೇಡ ನಾವೇ ತಿದ್ದು ಕೊಳ್ಳುತ್ತೇವೆ. ನಾನು ಈಗ ಇರುವುದು ಅಂತಹದ್ದೇ ಒಂದು ಸನ್ನಿವೇಶದಲ್ಲಿ ಎಂದು ಬೇಗ ಅರ್ಥೈಸಿಕೊಂಡೆ. ನಾವು ಫೋರಂನಲ್ಲಿ ಮತ್ತು ಅಡ್ವಾನ್ಸ್ ಕೋರ್ಸಿನಲ್ಲಿ ಕಲಿತಿದ್ದೆವು. ಅಲ್ಲಿ ನಮ್ಮ ಸಣ್ಣ ಪುಟ್ಟ ಸಮಸ್ಯೆಗಳನ್ನು ಎದುರಿಸುವ ಧೈರ್ಯ ಬಂದಿತ್ತು. ಈಗ ನಾವು ನಾಯಕರಾಗುವುದರ ಜೊತೆಗೆ ನಾಯಕರನ್ನು ಸೃಷ್ಟಿಸುವ ಕಾರ್ಯದಲ್ಲಿ ತೊಡಗಬೇಕು. ನಾನು ಅದೆಷ್ಟೇ ವಿವರಿಸಿದರೂ ನಿಮ್ಮ ಅನುಭವಕ್ಕೆ ಸಿಗುವುದಿಲ್ಲ. ನಾನು ಈ ಮೂರು ತಿಂಗಳಲ್ಲಿ ನನ್ನ ಜೀವನದಲ್ಲಿ ಆಗಿರುವ ಕೆಲವು ಬದಲಾವಣೆಗಳನ್ನು ಮಾತ್ರ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಇದನ್ನು ಪದೇ ಪದೇ ಯಾಕೆ ಹೇಳುತ್ತಿದ್ದೇನೆಂದರೇ, ಕೆವಲು ಮೂರು ತಿಂಗಳಲ್ಲಿ ಇಷ್ಟೊಂದು ಸಾಧ್ಯವಾದರೇ! ಇನ್ನು ಮುಂದಿನ ಇಪ್ಪತ್ತು ವರ್ಷಗಳು ಹೇಗಿರಬಹುದು? ಎಂಬುದು ನನ್ನ ಪ್ರಶ್ನೆ. ನನಗೆ ನನ್ನ ಜೀವನದ ಮುಂದಿನ ನಕ್ಷೆ ಕಾಣುತ್ತಿದೆ.

ಈ ಮೂರು ತಿಂಗಳಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಶಾಲೆಗಳಲ್ಲಿ ಕಾರ್ಯಕ್ರಮಗಳು ನಡೆದವು. ಸುಮಾರು ಹತ್ತಕ್ಕೂ ಹೆಚ್ಚು ಬಾರಿ ದಿನಪತ್ರಿಕೆಗಳಲ್ಲಿ ವಿಷಯ ಪ್ರಕಟವಾಯಿತು. ಕಳೆದ ಮೂರು ತಿಂಗಳಲ್ಲಿ ನನಗೆ ಆದ ಲಾಭ ಅಥವಾ ಜೀವನದಲ್ಲಾಗಿರುವ ಬದಲಾವಣೆಗಳು,
1.    ವೈಯಕ್ತಿಕ ಜೀವನದಲ್ಲಿ
2.    ವೃತ್ತಿ ಜೀವನದಲ್ಲಿ
3.    ಸ್ನೇಹಿತ ವರ್ಗದಲ್ಲಿ
4.    ಸಾಮಾಜಿಕ ಜೀವನದಲ್ಲಿ
5.    ಇತರೆ
ಮೊದಲನೆಯದಾಗಿ ವೈಯಕ್ತಿಕ ಜೀವನದಲ್ಲಿ, ಮನೆಯ ಗಂಡಸು ದುಡಿಯುತ್ತಿದ್ದವನು ದಿಢೀರನೇ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದರೆ, ಯಾರಾದರೂ ಸಹಿಸುತ್ತಾರೆಯೇ? ಮೊದಲೇ ಹೆಂಡಕುಡಕ ನಾನು, ಕುಡಿಯುವುದಕ್ಕೆ ಮಿತಿ ಇಲ್ಲದ ಹಾಗೆ ಕುಡಿಯುತ್ತೀನಿ, ಸಮಯದ ಪರಿವೇ ಇರುವುದಿಲ್ಲ, ಮುಂಜಾನೆಯಾದರೂ ಒಂದೇ, ಮಧ್ಯ ರಾತ್ರಿ ಯಾದರೂ ಒಂದೇ. ಅಂತಹ ವ್ಯಕ್ತಿ ಕೆಲಸ ಬಿಟ್ಟು ಮನೆಯಲ್ಲಿದ್ದು ಸ್ವಂತ ಕಂಪನಿ ಎಂದರೇ ನಂಬುವ ಮಾತೇ? ನನ್ನ ಮಗ ಪಿ.ಎಚ್.ಡಿ. ಮಾಡಿದ್ದಾನೆ, ಒಂದು ಯುನಿವರ್ಸಿಟಿಯಲ್ಲಿ ಪ್ರೋಫೆಸರ್ ಆಗುತ್ತಾನೆಂದು ನಂಬಿದ ತಂದೆಗೆ ನಾನು ಕೆಲಸಕ್ಕೆ ಹೋಗುವುದಿಲ್ಲ ನನ್ನ ಕನಸು ಸಂಸ್ಥೆ ಮಾಡುವುದು, ಅದರಿಂದ ಸಮಾಜಕ್ಕೆ ಸೇವೆ ಮಾಡುವುದು ಅದು ಇದು ಎಂದರೇ ಹೇಗಾಗಬೇಕು? ಮೊದಲಿಗೆ ನನ್ನ ಹೆಂಡತಿಗೂ ನನಗೂ ಬಹಳ ಜಗಳ, ಈಗಲೂ ಇದೆ. ಆದರೇ ವಿಷಯ ಬೇರೆ. ಕೆಲಸ ಬಿಟ್ಟು ದಿನ ಕುಡಿಯುವುದಕ್ಕಾ? ಆರು ವರ್ಷದಿಂದ ಏನೂ ಮಾಡದೇ ಇರುವುದು ಈಗ ಆಗುತ್ತಾ? ದುಡ್ಡು ಎಲ್ಲಿದೆ? ಏನು ಅದು ಇದು…. ಅದಾದ ಮೇಲೆ ನನ್ನ ತಂದೆಯ ರಾಮಾಯಣ ಶುರುವಾಯಿತು. ಕೆಲಸ ಬಿಟ್ಟು ಮನೆಯಲ್ಲಿ ಕುಳಿತುಕೊಳ್ಳಲಿ, ಬೇರೆಯವರ ಮನೆ ಹೆಣ್ಣು ಮಕ್ಕಳನ್ನು ಮದುವೆಯಾಗಿ ಅವರ ಕಣ್ಣಲ್ಲಿ ನೀರು ಹಾಕಿಸೋರು ಉದ್ದಾರ ಆಗ್ತಾರ? ಇದಕ್ಕೆ ಇವನು ಪಿ.ಎಚ್.ಡಿ. ಬೇರೆ ಮಾಡಬೇಕಿತ್ತಾ? ಇವನು ಹಾಳಾಗಿ ಹೋದ. ಬಂದು ಬಾನುಗೊಂದಿಗೆ ಸೇರಿ ನನ್ನ ಎದೆ ಮೇಲೆ ಕಲ್ಲು ಚಪ್ಪಡಿ ಹಾಕ್ತಾನೆ. ಇದು ನನ್ನನ್ನು ನಾನು ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಮತ್ತೊಮ್ಮೆ ಯೋಚಿಸುವಂತೆ ಮಾಡಿತು. ನಾನು ನಿಜಕ್ಕೂ ಚಿಂತೆಗೀಡಾದೆ. ಕೆಲಸಕ್ಕೂ ಅರ್ಜಿ ಹಾಕುವುದಕ್ಕೆ ಶುರುಮಾಡಬೇಕೆಂದೆ, ಆದರೂ, ಲ್ಯಾಂಡ್ ಮಾರ್ಕ್‍ನಲ್ಲಿ ಕಲಿತದ್ದು ಅದನ್ನಲ್ಲವಲ್ಲ. ದಿನ ಕಳೆಯುತ್ತಾ ಹೋದಂತೆ ನಾನು ಹಾಕುತ್ತಿರು ಹೆಜ್ಜೆ ದೃಢವಾಗತೊಡಗಿತು. ನನ್ನ ಹಂಡತಿಗೆ ಸ್ವಲ್ಪ ಧೈರ್ಯ ಬಂತು. ಯಾವ ಹೆಂಡತಿಗೂ ಗಂಡನ ಮೇಲೆ ಸಂಪೂರ್ಣ ವಿಶ್ವಾಸ ಬರುವುದಿಲ್ಲ ಬಿಡಿ. ಇದ್ದಿದ್ದರಲ್ಲಿ ನನ್ನ ಹೆಂಡತಿ ನನ್ನ ತಂದೆಯೂ ಸ್ವಲ್ಪ ನನ್ನ ಬಗ್ಗೆ ಆತ್ಮವಿಶ್ವಾಸ ಬೆಳೆಸಿಕೊಂಡಿದ್ದು ಸತ್ಯ. ಇದು ನನ್ನನ್ನು ಮುನ್ನುಗ್ಗಲು ಸಹಾಯ ಮಾಡುತ್ತಿರುವುದರಲ್ಲಿ ಅನುಮಾನವಿಲ್ಲ.

ಎರಡನೆಯದಾಗಿ ವೃತ್ತಿ ಜೀವನದಲ್ಲಿ, ನಾನು ಮೊದಲೆ ಹೇಳಿದ ಹಾಗೆ, ನನ್ನ ಸಂಸ್ಥೆ ಶುರವಾಗಿ ಆರು ವರ್ಷಗಳಾಗಿದ್ದರೂ ಅಂತಹ ದೊಡ್ಡ ಕಾರ್ಯಕ್ರಮಗಳು ನಡೆದಿರಲಿಲ್ಲ. ನನ್ನ ಹಳೆಯ ಸಹದ್ಯೋಗಿಗಳಿಬ್ಬರು ಯಾವುದೋ ಒಂದು ಪ್ರಾಜೆಕ್ಟ್ ಸಮಯದಲ್ಲಿ ಮೋಸ ಮಾಡಿದರೆಂಬ ಅಂಶ ಇಟ್ಟುಕೊಂಡು ನಾನು ಯಾರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ. ಯಾರನ್ನೋ ಯಾವತ್ತೋ ಸಹಾಯ ಕೇಳುತ್ತಿದ್ದೆ ನಂತರ ನಾನು ಮರೆತುಹೋಗುತ್ತಿದ್ದೆ ಅವರು ಮರೆತು ಹೋಗುತ್ತಿದ್ದರು. ಮತ್ತೊಂದು ದಿನ ನೆನಪಾಗಿ ಕೇಳಿದರೆ ಆಯ್ತು ಇಲ್ಲವೆಂದರೆ ಇಲ್ಲ. ನಾನು ಅವರನ್ನು ದೂರುತ್ತಿದ್ದೆ. ಅವನು ನನಗೆ ಸಹಾಯ ಮಾಡಲಿಲ್ಲವೆಂದು. ಹೀಗೆ ಇದ್ದ ನಾನು ಕಳೆದ ನಾಲ್ಕು ತಿಂಗಳಲ್ಲಿ ಎಲ್ಲರ ಸಹಾಯವನ್ನು ಬೇಡಿದ್ದೇನೆ ಮತ್ತು ಎಲ್ಲರೂ ನನಗೆ ಸಹಾಯ ಮಾಡಿದ್ದಾರೆ. ಹರೀಶ್ ಏನೇ ವಿಷಯವಿದ್ದರೂ ನನ್ನನ್ನು ಕರೆಯಬೇಕು ನಾನು ಬರುತ್ತೇನೆ ಎಂದು ಹಲವರು ಹೇಳಿದ್ದು ಅದೇ ರೀತಿ ಮಾಡುತ್ತಿದ್ದಾರೆ. ವೃತ್ತಿ ಜೀವನದ ಏಳಿಗೆಯ ವಿಷಯಕ್ಕೆ ಸಂಭಂಧಿಸಿದಂತೆ ಆಗಿರುವ ಲಾಭಗಳು ಕೆಳಗಿನಂತಿವೆ.
1.    ಶಿಕ್ಷಣ ಇಲಾಖೆಯ ಜೊತೆಗೂಡಿ ನೀರು ನೈರ್ಮಲ್ಯದ ಕುರಿತು ಶಿಕ್ಷಕರಿಗೆ ಮತ್ತು ಎಸ್.ಡಿ.ಎಂ.ಸಿ ಸದಸ್ಯರಿಗೆ ತರಬೇತಿ ನೀಡುವ ಸಾಹಿತ್ಯವನ್ನು ರಚಿಸಿದ್ದೇವೆ.
2.    ಅನೇಕ ಕಂಪನಿಗಳ ಜೊತೆ ಸೇರಿ ವಿಶ್ವ ಶೌಚಾಲಯ ದಿನ ಆಚರಿಸಿದೆವು, ರಾಮೋಹಳ್ಳಿ ಶಾಲೆಗೆ ಶೌಚಾಲಯ ಉಚಿತವಾಗಿ ಕೊಡಿಸುವಲ್ಲಿ ಪ್ರಯತ್ನಿಸಿದೆವು
3.    ಕೊಡಗಿನ ಶಿರಂಗಾಲ, ತೊರೆನೂರು, ಕೂಡುಮಂಗಳೂರು, ಕಾನ್‍ಬೈಲ್, 7ನೇ ಹೊಸಕೋಟೆ, ಬಸವನಹಳ್ಳಿ, ಮೂರ್ನಾಡು, ನಾಪೋಕ್ಲು, ಹಾಕತ್ತೂರು, ಮಾಲ್ದಾರೆ, ಬಡಂಗ ಬಾಣಂಗಾಲ ಶಾಲೆಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿದೆವು
4.    ಮೈಸೂರು ಜಿಲ್ಲೆಯ ಅತ್ತಿಗೋಡು ಶಾಲೆಯಲ್ಲಿ ಹಾಗೂ ಸಾಲಿಗ್ರಾಮ ಬಾಲಕಿಯರ ಮತ್ತು ಬಾಲಕರ ಕಾಲೇಜುಗಳಲ್ಲಿ ಕಾರ್ಯಕ್ರಮಗಳು ನಡೆದವು
5.    ತುಮಕೂರು ಜಿಲ್ಲೆಯ ಹುಳಿಯಾರು, ಕಂಕೆರೆ, ತಾವರೆಕೆರೆ ಶಾಲೆ ಹಾಗೂ ಕಾಲೇಜುಗಳಲ್ಲಿ ಕಾರ್ಯಕ್ರಮ ನಡೆಯಿತು
6.    ಹಾಸನ ಜಿಲ್ಲೆಯ ಕೊಣನೂರು ರಾಣಿ ಚೆನ್ನಮ್ಮ ಶಾಲೆ ಹಾಗೂ ತರಿಗಳಲೆ ಶಾಲೆಗಳಲ್ಲಿ ಕಾರ್ಯಕ್ರಮ ನಡೆಯಿತು
7.    ರಾಮನಗರ ಜಿಲ್ಲೆಯ ಶಾನುಭೋಗನಹಳ್ಳಿ ಶಾಲೆಯಲ್ಲಿ ಕಾರ್ಯಕ್ರಮ ನಡೆಯಿತು
8.    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಮೋಹಳ್ಳಿ ಶಾಲೆಯಲ್ಲಿ ಕಾರ್ಯಕ್ರಮ ನಡೆಯಿತು
9.    ಕೊಡಗು, ಹಾಸನ ಮತ್ತು ರಾಮನಗರ ಜಿಲ್ಲೆಯ ಕಾರ್ಯಕ್ರಮಗಳು 8 ದಿನನಿತ್ಯ ಪತ್ರಿಕೆಗಳಲ್ಲಿ ಪ್ರಸಾರವಾದವು



ಮೂರನೆಯದಾಗಿ ಸ್ನೇಹಿತ ವರ್ಗದಲ್ಲಿ, ನನ್ನ ಸ್ನೇಹಿತರು ಮುಂಚಿನಿಂದಲೂ ನನ್ನನ್ನು ಪ್ರೀತಿಸುತ್ತಿದ್ದರೂ ಇತ್ತೀಚಿನ ದಿನಗಳಲ್ಲಿ ಅದರ ತಿವ್ರತೆ ಹೆಚ್ಚಾಗಿದೆ. ನಾನು ಮೊದಲೇ ಹೇಳಿದ ಹಾಗೆ ನನ್ನ ಅನೇಕ ಕೆಲಸಗಳಿಗೆ ನನ್ನ ಸ್ನೇಹಿತರ ಸಹಾಯ ಮುಖ್ಯವಾದದ್ದು. ಮೊದಲನೆಯದಾಗಿ ನನ್ನ ಸ್ನೇಹಿತ ಮಂಜೇಶ್ ನನ್ನನ್ನು ಶಿಕ್ಷಣ ಇಲಾಖೆಯವರಿಗೆ ಪರಿಚಯಿಸಿ ನಾನು ನನ್ನ ಮನವಿಯನ್ನು ಅವರಿಗೆ ತಲುಪಿಸುವಂತೆ ಮಾಡಿದ. ಕೊಡಗಿನಲ್ಲಿ ಹನ್ನೆರಡು ಶಾಲೆಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ ಅವುಗಳೆಲ್ಲಾ ಪತ್ರಿಕೆಯಲ್ಲಿ ಪ್ರಕಟವಾಗುವಂತೆ ನೋಡಿಕೊಂಡ. ಸ್ನೇಹಿತ ಲೋಕೇಶ್ ಶಾಲೆಗಳಿಗೆ ಕರೆದುಕೊಂಡು ಹೋಗಿ ಕಾರ್ಯಕ್ರಮ ನಡೆಸಿದ. ಶಿವ ಕುಮಾರ್ ಒಂದು ಹೆಜ್ಜೆ ಮುಂದೆ ಹೋಗಿ ಕಾರ್ಯಕ್ರಮದ ಜೊತೆಗೆ ಕಾಲೇಜಿನ ಶೌಚಾಲಯವನ್ನು ತಾನೇ ತೊಳೆದು ಶೌಚಾಲಯ ದಿನವನ್ನು ಆಚರಿಸಿದ. ಸುನೀಲ್ ರಾಮೋಹಳ್ಳಿ ಶಾಲೆಗೆ ಶೌಚಾಲಯ ಕೊಡಿಸುವುದರ ಜೊತೆಗೆ ನನ್ನನ್ನು ಸಿ.ಇ.ಇ.ಗೆ ಪರಿಚಯಿಸಿದರು. ತಮ್ಮಯ್ಯ ಅವನ ಶಾಲೆಯ ಜೊತೆಗೆ ಹಲವಾರು ಶಾಲೆಗಳಿಗು ಕಾರ್ಯಕ್ರಮ ಮಾಡುವಂತೆ ಮಾಡಿದ. ಶಿವಣ್ಣ ರಾಣಿ ಚೆನ್ನಮ್ಮ ಶಾಲೆಯಲ್ಲಿ ಕಾರ್ಯಕ್ರಮ ಮಾಡಿಸಿ ದಿನ ಪತ್ರಿಕೆಯಲ್ಲಿ ಬರುವಂತೆ ಮಾಡಿದ. ತಿಪ್ಪೆಸ್ವಾಮಿ ತನ್ನ ಸ್ನೇಹಿತರ ಜೊತೆಯಲ್ಲಿ ಬಂದು ಸತ್ಯ ಸಾಯಿ ಅನಾಥಾಶ್ರಮದಲ್ಲಿ ಜಾನಪದ ಹಾಡುಗಳ ಮೂಲಕ ಕಾರ್ಯಕ್ರಮ ನಡೆಸಿದರು. ಭೀಮಪ್ಪ ಬಿಡುವು ಮಾಡಿಕೊಂಡು ಬಂದು ನಮ್ಮ ಜೊತೆ ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಲ್ಲಿ ಅಮೋಘವಾದ ಹಾಡುಗಳೊಂದಿಗೆ ಕಾರ್ಯಕ್ರಮ ನಡೆಸಿದರು. ಲ್ಯಾಂಡ್ ಮಾರ್ಕ್ ಸ್ನೇಹಿತ ಸುಹಾಸ್ ಜೊತೆ ಸೇರಿ ಉಪಯೋಗಿಸಿದ ಬಟ್ಟೆಗಳನ್ನು ನೀಡಿದೆವು. ನಂದಗೋಪಾಲ್ ಅವನ ಬಾಸ್ಸಿನ ಮಗನನ್ನು ನಮ್ಮ ಕಾರ್ಯಕ್ರಮಗಳಿಗೆ ಕರೆತಂದನು. ಸುದರ್ಶನ್ ಹಾಗೂ ರಾಕೇಶ್ ನಮ್ಮ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ನನ್ನ ಎಲ್ಲಾ ಪಿಯುಸಿ ಸ್ನೇಹಿತರು, ರೋಹಿತ್, ಲೋಕೆಶ್, ವಿನೇಶ್, ಶಂಕರ ಗಿಡಗಳನ್ನು ನೆಡುವುದಕ್ಕೆ ಸಹಾಯ ಮಾಡಿದರು. ಸಜನಿ ತನ್ನ ಶಾಲೆಯಲ್ಲಿ ಕಾರ್ಯಕ್ರಮ ನಡೆಸಿದರು. ಹೀಗೆ ಇನ್ನು ಹಲವರು ಹಲವಾರು ರೀತಿಯಲ್ಲಿ ಸಹಾಯ ನೀಡಲು ಮುಂದೆ ಬಂದಿದ್ದಾರೆ. ಕಿರಣ್, ದ್ವಾರಕೀಶ್, ಫಯಾಜ್ ಪಾಷಾ, ವಿಜಯ್, ಸುನೀಲ್ ಹಾಸನ, ಲೋಕೇಶ್, ಮನು, ಮುತ್ತು ಕುಮಾರ್,  ಕೇಶವಮೂರ್ತಿ, ಕುಮಾರ್, ಚಿದಾನಂದ, ನಲ್ಲತಂಬಿ, ಚೈತ್ರ, ಇನ್ನೂ ಹಲವರು.


ನಾಲ್ಕನೆಯದಾಗಿ ಸಾಮಾಜಿಕ ಜೀವನದಲ್ಲಿ ನನ್ನ ಯೋಚನೆ ಮತ್ತು ಯೋಜನೆಗಳನ್ನು ವ್ಯಕ್ತ ಪಡಿಸಿದಾಗ ಅನೇಕರು ನನಗೆ ಹೊಸ ಹೊಸ ಆಲೋಚನೆಗಳ ಜೊತೆಗೆ ಉತ್ತಮ ಸಲಹೆಗಳನ್ನು ನೀಡಿದರು. ಬ್ಯಾನರ್ಜಿ ಸರ್ ಮೊದಲಿಗರು. ಹಾರಂಗಿ ಮಹಾ ಮಂಡಳದ ಅಧ್ಯಕ್ಷರಾಗಿರುವ ಚೌಡೇಗೌಡರು ನನ್ನನ್ನು ಅಲ್ಲಿನ ಇಂಜಿನಿಯರ್ ಹಾಗೂ ಮಾನ್ಯ ಮಂತ್ರಿಗಳಾಗಿರುವ ಎ. ಮಂಜುರವರಿಗೂ ತಿಳಸಿದರು. ಡಾ.ಚೈತ್ರ, ಡಾ. ಸಿಬಿ ಕೆ. ಜೊಸೆಫ್, ಡಾ. ನಾಡ್ಕರ್ನಿ, ಡಾ. ಜೀವನ್ ಕುಮಾರ, ಡಾ. ಶ್ರೀಕಂಠಸ್ವಾಮಿ, ಯೋಗಾನಂದ, ಇಂದ್ರೇಶ್, ಲೋಕೇಶ್ ಶಿಕ್ಷಣ ಇಲಾಖೆ, ಸತೀಶ್, ಮರಿಸ್ವಾಮಿ, ಕ.ಎಸ್.ಟಿ.ಎ. ಶ್ರೀನಿವಾಸ್, ಡಾ.ರಮೇಶ್, ಡಾ. ರವಿಕುಮಾರ್, ಡಾ. ಬೇಲಾ ಝುಟ್ಷಿ, ವಿಜಯಕರ್ನಾಟಕ ಪತ್ರಿಕೆಯ ನಾಗರಾಜ ಶೆಟ್ಟಿ, ನಮ್ಮ ಆಡಿಟರ್ ಅನಂತ ಪದ್ಮನಾಭ, ಸ್ನೇಹಿತ ಸಂಜಯ್, ಸೌಮ್ಯ, ವಿನುತಾ, ಪವನ್, ಸುದರ್ಶನ್, ರಾಕೇಶ್, ಹಾಸನದ ಸುನಿಲ್, ಲೋಕೇಶ್, ಮನು ಡಿ, ಸಜನಿ,  ಹೀಗೆ ಹಲವಾರು ಜನರು ನನ್ನ ಮುಂದಿನ ಹೆಜ್ಜೆಗೆ ಸಾಥ್ ನೀಡಲು ಸಿದ್ದರಿದ್ದಾರೆ. ಪ್ರಪಂಚದಲ್ಲಿರುವ ಎಲ್ಲರೂ ಸಹಾಯ ಮಾಡಲು ಇಷ್ಟ ಪಡುತ್ತಾರೆ, ನಾವು ಅವರಿಗೆ ಅವಕಾಶ ಕೊಡುವುದನ್ನು ಕಲಿಯಬೇಕು. ನಾನು ಈ ಮೂರು ತಿಂಗಳಲ್ಲಿ ಸಹಾಯ ಬೇಡಿರುವುದಕ್ಕಿಂತ ಕೊಡಲು ಮುಂದೆ ಬಂದವರೇ ಹೆಚ್ಚು. ಉತ್ತಮ ಸಮಾಜವನ್ನು ಸೃಷ್ಟಿಸುವುದು ನಮ್ಮ ಕೈಗಳಲ್ಲಿದೆ. 

ಕೊನೆಯದಾಗಿ ಇತರೆ ಬೆಳವಣಿಗೆಗಳ ಬಗ್ಗೆ ಮಾತನಾಡುವಾಗ, ನನಗೆ ನನ್ನ ಬಗ್ಗೆ ಬಂದಿರುವ ಆತ್ಮ ವಿಶ್ವಾಸ ಮತ್ತು ನನ್ನಯ ಗುರಿಯ ಕಡೆಗಿರುವ ದೃಢಸಂಕಲ್ಪ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಲ್ಯಾಂಡ್ ಮಾರ್ಕ್‍ನ ಆನಂದ್ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ನನ್ನನ್ನು ತಿದ್ದಿ ಒಂದು ಹಂತಕ್ಕೆ ತಂದಿದ್ದಾರೆ. ಅವರ ಜೊತೆಯಲ್ಲಿ ಪ್ರಮೋದ್ ಬಹಳ ಸಂಯಮದಿಂದ ಮತ್ತು ಸಂಯುಕ್ತ ಕೂಡ ತಾಳ್ಮೆಯಿಂದ ನನಗೆ ಸಹಕರಿಸಿದ್ದಾರೆ. ಎಸ್.ಇ.ಎಲ್.ಪಿ. ಅದೆಷ್ಟು ಚೆನ್ನಾಗಿ ನಡೆಯುತ್ತದೆಯೆಂದರೆ ನೀವು ನಿಮ್ಮ ಮನೆಯಲ್ಲಿ ನಿಮ್ಮವರ ಜೊತೆಯಲ್ಲಿದ್ದಿರಿ ಎನ್ನುವ ಅನುಭವವನ್ನು ಕೊಡುತ್ತದೆ. ಇಲ್ಲಿಂದ ಹೊರಬಂದ ಮೇಲೆ ಈ ಪ್ರಪಂಚವೇ ನನ್ನದು ಎನ್ನುವ ಭಾವನೆಯನ್ನು ಆಚರಿಸುವಂತೆ ಮನಸ್ಸು ತಿಳಿಯಾಗಿರುತ್ತದೆ. ನಾನು ಗೆಲುವಿನ ಜೊತೆಗೆ ಸೋಲನ್ನು ಕೂಡ ಆನಂದಿಸುವುದನ್ನು ಕಲಿಸಿದ್ದಾರೆ. ಸದಾ ಗೆಲ್ಲಲೇ ಬೇಕೆಂಬ ನಿಯಮವಿಲ್ಲ. ಆದರೇ ಸದಾ ಆಚರಿಸಲೇಬೇಕೆಂಬ ನಿಯಮವಿದೆ.
ನನಗೆ ಅರಿವಿಲ್ಲದೇ ನನ್ನ ಜೀವನಕ್ಕೆ ಅತ್ಯುತ್ತಮ ತಿರುವನ್ನು ಕೊಟ್ಟ ಲ್ಯಾಂಡ್ ಮಾರ್ಕ್ ಎಸ್.ಇ.ಎಲ್.ಪಿ.ಗೆ ನನ್ನ ವಂದನೆಗಳು. ಹೆಚಿನ ಮಾಹಿತಿಗೆ ಲ್ಯಾಂಡ್ ಮಾರ್ಕ್ ವೆಬ್‍ಸೈಟ್ ನೋಡಿ.

ದಿನಾಂಕ: 07/12/2015 ಬೆಳ್ಳಿಗ್ಗೆ 11.55 ಮುಕ್ತಾಯ : 12/12/2015 ಮಧ್ಯಾಹ್ನ 4.58

ಕನಸು-ನನಸಿನ ಪಯಣದ ಹಾದಿಯಲಿ ಬದ್ಧತೆ, ಜವಬ್ದಾರಿ, ಸೋಲಿನ ಭೀತಿ!!!

  ೨೯.೦೮.೨೦೨೪ ನಾವು ನಮ್ಮ ಕನಸುಗಳನ್ನು, ಆಸೆಗಳನ್ನು, ಬಯಕೆಗಳನ್ನು ಬೇರೆಯವರೊಂದಿಗೆ ಏಕೆ ಹಂಚಿಕೊಳ್ಳಬೇಕು? ಇದರ ಕುರಿತು ಸ್ವಲ್ಪ ಚರ್ಚಿಸೋಣ. ಮುಕ್ತವಾಗಿ. ಪ್ರತಿಯೊ...