31 ಡಿಸೆಂಬರ್ 2015

ಬಯಸಿಯೋ ಬಯಸದೆಯೋ ಮುಳುಗುತ್ತಿದೆ 2015, ಎಲ್ಲವನ್ನೂ ಮೀರಿ ದಾಟಿಸಿದ ನಿನಗೆ ನಮನ

       ಈ ವರ್ಷದ ಕೊನೆಯ ಬರವಣಿಗೆ ಇದು ಎನ್ನುವುದು ನಿರ್ಧಾರವಾಗಿದೆ. ಈ ಬರವಣಿಗೆಯ ಅಂಶಗಳು ನಿಮ್ಮ ಗಮನಕ್ಕೆ ಬಂದಿರುತ್ತದೆ. ವರ್ಷದ ಕೊನೆಯಲ್ಲಿ ಒಂದು ಇಡೀ ವರ್ಷದಲ್ಲಾದ ಬೆಳವಣಿಗೆಗಳನ್ನು ಅವಲೋಕಿಸುವುದು ಮುಖ್ಯ ಉದ್ದೇಶವಾಗಿರುತ್ತದೆ. ಮುಳುಗುತ್ತಿರುವ 2015 ಎಂಬ ವರ್ಷ ಸ್ವಲ್ಪ ಸುಮಾರಾಗಿಯೇ ಪ್ರಾರಂಭವಾಯಿತು. 2014 ರ ಡಿಸೆಂಬರ್ 31ರ ರಾತ್ರಿ ನಂದಗೋಪಾಲರವರ ಮನೆಯಲ್ಲಿ ಸಣ್ಣದೊಂದು ಪಾರ್ಟಿ ಮಾಡಿ ಮಧ್ಯ ರಾತ್ರಿ ಮನೆಗೆ ಬಂದು ಮಲಗಿದೆ. ಮುಂಜಾನೆ ಎದ್ದು ಹೆಂಡತಿ ಮತ್ತು ಅವರ ಕುಟುಂಬದವರೊಂದಿಗೆ ಮೇಲುಕೋಟೆಗೆ ಹೋಗುವುದೆಂದು ತೀರ್ಮಾನಿಸಿದ್ದರೂ, ಕೊನೆಗೆ ಎಡಿಯೂರು ಬಳಿಯಲ್ಲಿರುವ ಹಟ್ಟಿಲಕ್ಕಮ್ಮ ದೇವಸ್ಥಾನಕ್ಕೆ ಹೋಗಿ ಬಂದೆವು. ಬರುವಾಗ ಯಾವುದೋ ಒಂದು ಮಿಲ್ಟ್ರಿ ಹೋಟೆಲ್ ಹುಡುಕಿಕೊಂಡು ಹೋಗಿ ಸ್ವಲ್ಪವೂ ಚೆನ್ನಾಗಿಲ್ಲದ ಊಟ ಮಾಡಿದೆವು. ಹೀಗೆ ಶುರುವಾದ 2015 ಅನೇಕ ಏರು ಪೇರನ್ನು ನನಗೆ ತೋರಿಸಿ ಮುಳುಗುತ್ತಿದೆ. ಈ ವರ್ಷದಲ್ಲಿ ನನಗೆ ಆಗಿರುವ ಕಷ್ಟಗಳೇ ಹೆಚ್ಚು ಎಂದರೂ ತಪ್ಪಿಲ್ಲ. 

ವೃತ್ತಿ ಜೀವನದಲ್ಲಿ ನಾನು ಸಿಡಿಡಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ. ತರಬೇತಿ ವಿಭಾಗದಲ್ಲಿ ನಾನಿದ್ದರೂ, ನಾನು ಯಾವುದೇ ತರಗತಿಯನ್ನೂ ತೆಗೆದುಕೊಳ್ಳಲಿಲ್ಲ. ಅದಕ್ಕೆ ಕಾರಣಗಳು ಹಲವಾರಿದ್ದರೂ ಇಲ್ಲಿ ಹೇಳುವ ಅಗತ್ಯವಿಲ್ಲ. ಸಂಸ್ಥೆಯ ಬಗ್ಗೆ ನಾನು ಮಾತನಾಡುವ ಹಕ್ಕು ಈಗ ಇಲ್ಲದೇ ಇದ್ದರೂ ಹಳೆಯ ನೌಕರ ಎನ್ನುವ ಸಲುಗೆಯಿಂದ ಎರಡು ಮಾತುಗಳನ್ನು ಹೇಳುತ್ತೇನೆ. ನಾನು ಅನೇಕಾ ಸಂಸ್ಥೆಗಳೊಂದಿಗೆ ಕಾರ್ಯನಿರ್ವಹಿಸಿದ್ದೇನೆ. ಕೆಲವನ್ನು ಬಿಟ್ಟರೇ ಬಹುತೇಕ ಎಲ್ಲವೂ ದುರಂತವೇ ಸರಿ. ಹಿರಿಯ ಅಧಿಕಾರಿಗಳಿಂದ ಹಿಡಿದು ಕೊನೆಯವರ ತನಕ ಅಸೂಯೆ, ಚಾಡಿತನ, ಬೆನ್ನಿಗೆ ಚೂರಿ, ಇಂತಹ ಸಂಸ್ಥೆಗಳು ದೇಶಕ್ಕೆ ಅಥವಾ ಸಮಾಜಕ್ಕೆ ಏನು ಕೊಡುಗೆ ಕೊಡಬಹುದು? ಅದೇನೆ ಇರಲಿ, ಇಲ್ಲಿ ನನ್ನ ಜೀವನಕ್ಕೆ ನೇರ ಸಂಭಂಧ ಇರುವ ವಿಷಯಗಳನ್ನು ಮಾತ್ರ ತಿಳಿಸುತ್ತೇನೆ. ಸಿಡಿಡಿ ಸಂಸ್ಥೆಯಲ್ಲಿ ಸುಮಾರು 9 ತಿಂಗಳು ಕೆಲಸ ಮಾಡಿದೆ. ಯಾವೊಂದು ದಿನವೂ ನನಗೆ ತೃಪ್ತಿ ಸಿಗಲಿಲ್ಲ ಅಥವಾ ಸಂತೋಷವಾಗಲಿಲ್ಲ. ಇದು ಬಹುಷಃ ನನ್ನ ಮನಸ್ಥಿತಿಯ ಕಾರಣವೋ ಏನೋ ನನಗೆ ತಿಳಿದಿಲ್ಲ. ಅಲ್ಲಿ ಯಾರನ್ನೂ ನಂಬಲಾಗುತ್ತಿರಲ್ಲಿಲ್ಲ. ಚಾಡಿ ಹೇಳುವುದು, ಅಸೂಯೆ ಪಡುವುದು, ನನ್ನ ಪರಿಸ್ಥಿತಿ ಹೇಗಿತ್ತೆಂದರೇ ಹೆಚ್ಚೂ ಕಡಿಮೆ ಹುಚ್ಚನಾಗಿದ್ದೆ. ನನಗೆ ಬಹಳ ನನ್ನ ಬಗ್ಗೆ ಇದ್ದ ದೊಡ್ಡ ತೊಡಕೆಂದರೇ ನನಗಿಂತ ಕಡಿಮೆ ತಿಳಿದಿರುವವರ ಜೊತೆಯಲ್ಲಿ ಕೆಲಸ ಮಾಡುವುದು. ನಾನು ಪಿಎಚ್‍ಡಿ ಮಾಡಿದ್ದೇನೆಂಬ ಅಹಂಕಾರವಿಲ್ಲದಿದ್ದರೂ ವಿಷಯವನ್ನು ಅರಿತಿದ್ದೇನೆಂಬ ಅರಿವು ಹೆಚ್ಚಾಗಿತ್ತು. ಮಾನಸಿಕವಾಗಿಯೂ ಹಿಂಸೆಯಾಗುತ್ತಿತ್ತು. ಮನೆಗೆ ಹತ್ತಿರವಿದ್ದ ಕಾರಣ ಸಹಿಸಿಕೊಂಡಿದ್ದೆ ಎನಿಸುತ್ತದೆ. 
ಮಾರ್ಚ್ ತಿಂಗಳಲ್ಲಿ ನನಗೂ ನನ್ನ ತಂದೆ ತಾಯಿ ಮತ್ತು ಹಲವು ನೆಂಟರಿಗೂ ಮನಸ್ತಾಪವುಂಟಾಯಿತು. ಎಲ್ಲರನ್ನು ದೂರವಿಟ್ಟೆ. ಯಾರೊಂದಿಗೂ ಮಾತುಕತೆ ನಡೆಸಲಿಲ್ಲ. ಊರಿಗೂ ಸ್ವಲ್ಪ ದಿನ ಹೋಗಿರಲಿಲ್ಲ. ಮನೆಯಲ್ಲಿ ಹೆಂಡತಿಯೊಂದಿಗೆ ನಿತ್ಯ ಕಾದಾಟವಿರುತ್ತಿತ್ತು. ಏಪ್ರಿಲ್ ತಿಂಗಳಲ್ಲಿ ಮನೆ ಬದಲಾಯಿಸುವ ಕ್ರಮ ತೆಗೆದುಕೊಂಡೆವು. ಬದಲಾಯಿಸಿ ಮತ್ತೆ ಅದೇ ಹಳೆಯ ಮನೆಗೆ ಬಂದೆವು. ಇವೆಲ್ಲವೂ ನಾನು ದಿಢೀರನೆ ಯೋಚಿಸದೆ ತೆಗೆದುಕೊಂಡ ನಿರ್ಧಾರಗಳು. ನನ್ನ ಮನಸ್ಥಿತಿಗೆ ಉದಾಹರಣೆಗಳು. ಮನೆ ಬದಲಾಯಿಸುವ ಕೆಲಸದಲ್ಲಿ ಸ್ವಲ್ಪ ಹಣವು ವ್ಯರ್ಥವಾಯಿತು. ಒಂದು ವಾರ ಪ್ಯಾಕ್ ಮಾಡಿದ್ದು ಮತ್ತೊಂದು ವಾರ ಅನ್‍ಪ್ಯಾಕ್ ಮಾಡಿದ್ದಾಯಿತು. ಮನಸ್ಸೋ ಇಚ್ಚೇ ಸುತ್ತಾಡಿದೆ. ದುಡ್ಡನ್ನು ಕಳೆದೆ, ಅತಿಯಾಗಿ ಕುಡಿದೆ. ಕುಡಿದು ಹಣ ಕಳೆದಮೇಲೆ ನೊಂದೆ. ಹೆಂಡತಿಯೊಂದಿಗೆ ಕೂಗಾಡಿದೆ, ಕಿರುಚಾಡಿದೆ, ಎಗರಾಡಿದೆ ಕೊನೆಗೆ ಕೈ ಕೂಡ ಮಾಡಿದೆ. ಇಂತಹ ಪರಿಸ್ಥಿತಿ ತಲುಪಿದೆ ಎಂಬುದು ನನ್ನ ನೋವಾದರೇ, ನನ್ನ ಮಗ ಹೀಗಾಗಿ ಹೋದನಲ್ಲ ಎಂಬುದು ನನ್ನ ಹೆತ್ತವರ ಅಳಲು. ಅವರು ಮೂರ್ನಾಲ್ಕು ದೇವರಿಗೆ ಹರಕೆ ಕಟ್ಟಿದರು. ಶಾಸ್ತ್ರ ಕೇಳಿದರು, ತಡೆ ಹೊಡೆಸಿದರು, ಆದರೂ ಏನೂ ಪ್ರಯೋಜನವಾಗಲಿಲ್ಲ. 
ಜುಲೈ ತಿಂಗಳ ಕೊನೆಯ ವಾರದಿಂದ ನನ್ನ ಪೂರ್ತಿ ನಸೀಬು ಬದಲಾಗತೊಡಗಿತ್ತು. ಲ್ಯಾಂಡ್‍ಮಾರ್ಕ್ ಕೋರ್ಸ್ ಮಾಡಿದಮೇಲೆ ಬದುಕಿನ ದಿಕ್ಸೂಚಿಯೇ ತಿರುಗಿತ್ತು. ನಾನು ಕೆಲಸ ಬಿಟ್ಟೆ, ಅದೇ ಸಮಯಕ್ಕೆ ನನ್ನ ಹೆಂಡತಿಯ ಆರೋಗ್ಯ ಹದಗೆಟ್ಟಿತು. ಕೈಯಲ್ಲಿ ಸಂಪಾದನೆಯಿಲ್ಲ? ಆಸ್ಪತ್ರೆಗೆ ಓಡಾಟ? ಏನು ಮಾಡುವುದು? ಒಂದು ತಿಂಗಳು ಪೂರ್ತಿ ಮನೆಯಲ್ಲಿಯೇ ಉಳಿಯಬೇಕಾಯಿತು. ಕೆಲಸ ಬಿಟ್ಟಿದ್ದು ಸರಿಯೋ ತಪ್ಪೋ? ಮುಂದೇನು ಹೀಗೆ ಅಳುಕುಂಟಾಯಿತು. ಆ ಸಮಯದಲ್ಲಿ ನನಗೆ ಕೆಲವು ಸ್ನೇಹಿತರ ಬಹಳ ಸಹಾಯ ಮಾಡಿದರು. ನೋವಿನಿಂದ ಹೊರ ಬರುವುದಕ್ಕೆ ಸಹಕಾರಿಯಾದರು. ನಿಧಾನಗತಿಯಲ್ಲಿ ಹೆಜ್ಜೆ ಹಾಕತೊಡಗಿದೆ. 
2015 ರಲ್ಲಿ ಅನುಭವಿಸಿದ ನೋವುಗಳು:
1. ಸಿಡಿಡಿ ಸಂಸ್ಥೆಯಲ್ಲಿ ಕಳೆದ ಕೆಟ್ಟ ದಿನಗಳು
2. ಅತಿಯಾಗಿ ಕುಡಿದು ದುಂದುವೆಚ್ಚ ಮಾಡಿದ್ದು
3. ಹೆಂಡತಿಯೊಂದಿಗೆ ಮಿತಿ ಮೀರಿ ವರ್ತಿಸಿದ್ದು
4. ಹೆತ್ತವರೊಂದಿಗೆ ಜಗಳ
5. ಹಣಕಾಸಿನ ಮೇಲೆ ಹಿಡಿತವಿಲ್ಲದ್ದು
2015ರಲ್ಲಿ ಅನುಭವಿಸಿದ ಸುಖಗಳು:
1. ಸೀಕೋ ಮುನ್ನೆಡೆಸುವ ನಿರ್ಧಾರ
2. ಲ್ಯಾಂಡ್ ಮಾರ್ಕ್ ಅನುಭವ ಅದರಲ್ಲಿಯೂ ಎಸ್.ಇ.ಎಲ್.ಪಿ ಪ್ರಯಾಣ
3. ಶಿಕ್ಷಣ ಇಲಾಖೆಯ ಜೊತೆಗೆ ರಾಜ್ಯ ಮಟ್ಟದ ತರಬೇತಿ ಸಾಹಿತ್ಯ ರಚನೆ ಮತ್ತು ತರಬೇತಿ
4. ಇಪ್ಪತ್ತು ಶಾಲೆಗಳಲ್ಲಿ ಕಾರ್ಯಕ್ರಮ
5. ನಾಲ್ಕು ಕಾಲೇಜುಗಳಲ್ಲಿ ಕಾರ್ಯಕ್ರಮ
6. ವಿಶ್ವ ಶೌಚಾಲಯ ದಿನಾಚರಣೆ
7. ಎಫ್.ಸಿ.ಆರ್.ಎ ಅರ್ಜಿ ಹಾಕಿದ್ದು ಮತ್ತು ಸಕರಾತ್ಮಕ ಬೆಳವಣಿಗೆ
8. 25ಎಸಿ ಅರ್ಜಿ ಹಾಕಿದ್ದು
9. ಸಿಇಇ ಜೊತೆಗೆ ಮಾತುಕತೆ
10. ಹನ್ನೆರಡಕ್ಕೂ ಹೆಚ್ಚು ಬಾರಿ ಸೀಕೋ ಚಟುವಟಿಕೆಗಳು ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದು
11. ಬಾನುಗೊಂದಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸುವ ತೀರ್ಮಾನ ಕೈಗೊಂಡಿದ್ದು
2015ರಲ್ಲಿ ಬಾಕಿ ಉಳಿದ ಅಥವಾ ಸಂಪೂರ್ಣಗೊಳಿಸದ ಕಾರ್ಯಗಳು:
1. ಸಿಇಇ ಗೆ ಯೋಜನೆಗೆ ಅರ್ಜಿ ಹಾಕದೇ ಇರುವುದು
2. ದೇವನಹಳ್ಳಿ ಶಾಲೆ ಕಾರ್ಯಕ್ರಮ ಮುಂದೂಡಿಕೆ
3. ಆರ್ಥಿಕ ಅಭಿವೃದ್ಧಿಯಾಗದೇ ಇರುವುದು
4. ಸಾಲ ತೀರಿಸದೇ ಇರುವುದು (ವೈಯಕ್ತಿಕ ಮತ್ತು ವಾಹನಗಳ)
5. ಸೀಕೋ ಹೊಸ ವಿನ್ಯಾಸದ ಮಾಹಿತಿ ಪುಸ್ತಕ, ವೆಬ್‍ಸೈಟ್ ವಿನ್ಯಾಸ, ವಿಸಿಟಿಂಗ್ ಕಾರ್ಡ್‍ಗಳು

2015 ನನ್ನ ಪಾಲಿಗೆ ಅರ್ಧ ವರ್ಷ ಕಷ್ಟ ಮತ್ತು ಅರ್ಧ ವರ್ಷ ಸುಖವೆನ್ನಬಹುದು. ಸುಖಕ್ಕಿಂತ ಕಷ್ಟವೇ ಹೆಚ್ಚೆಂದರೂ ತಪ್ಪಿಲ್ಲ.  ಆದರೂ ಎರಡನ್ನು ಸಮತೂಗಿಸಿಯೋ, ಅಥವಾ ಏರು ಪೇರು ಮಾಡಿಯೋ ದಿನ ಕಳೆದಿದ್ದೇನೆ. ಒಮ್ಮೊಮ್ಮೆ ಬಹಳ ನೋವಿದ್ದರೂ ನಕ್ಕಿದ್ದೇನೆ, ನಗಿಸಿದ್ದೇನೆ. ಚೆನ್ನಾಗಿದ್ದವನು ದಿಢೀರನೇ ರೇಗಿದ್ದೇನೆ, ಎಗರಾಡಿದ್ದೇನೆ. ಚಿಕ್ಕ ವಿಷಯವನ್ನು ದೊಡ್ಡದು ಮಾಡಿ ಜಗಳ ಕಾದಿದ್ದೇನೆ. ನನ್ನ ಉಢಾಫೆತನದ ಪರಮಾವಧಿ ತಲುಪಿ ಕೆಲವರನ್ನು ನಿರ್ಲಕ್ಷಿಸಿದ್ದೇನೆ. ಆರ್ಥಿಕವಾಗಿ ಬಹಳ ಜರ್ಜರಿತನಾಗಿದ್ದೇನೆ. ನಾನು ಹಣಕಾಸನ್ನು ನಿರ್ವಹಿಸಲು ಬರುವುದಿಲ್ಲವೆಂಬುದು ನನ್ನು ಹಳೆಯ ನಂಬಿಕೆ. ಹಾಗಾಗಿಯೇ, ಸಾಲ ಮಾಡುವುದು, ಮನಸ್ಸಿಗೆ ಬಂದಂತೆ ಖರ್ಚು ಮಾಡುವುದು. ಅದು ಆದ ಮೇಲೆ ಸಮಜಾಯಿಸಿ ಕೊಡುವುದು. ನನ್ನ ಕೈ ತೂತು ಎಂದು. ಅದಕ್ಕೆಲ್ಲವು ಕೊನೆ ಹಾಕುವ ದಿನ ಬಂದಿದೆ. ಈ ಎಲ್ಲದರ ಜೊತೆಗೆ, ನಾನು 2016ನ್ನು ಸ್ವಾಗತಿಸಲು ಕಾತುರನಾಗಿದ್ದೇನೆ. ನನ್ನ ಹಳೆಯ ತಪ್ಪುಗಳನ್ನು ನಿಮ್ಮ ಮಡಿಲಿಗೆ ಹಾಕಿಕೊಳ್ಳಿ ಹೊಸ ಬದುಕನ್ನು ಹರಸಿ. 

2 ಕಾಮೆಂಟ್‌ಗಳು:

ಕನಸು-ನನಸಿನ ಪಯಣದ ಹಾದಿಯಲಿ ಬದ್ಧತೆ, ಜವಬ್ದಾರಿ, ಸೋಲಿನ ಭೀತಿ!!!

  ೨೯.೦೮.೨೦೨೪ ನಾವು ನಮ್ಮ ಕನಸುಗಳನ್ನು, ಆಸೆಗಳನ್ನು, ಬಯಕೆಗಳನ್ನು ಬೇರೆಯವರೊಂದಿಗೆ ಏಕೆ ಹಂಚಿಕೊಳ್ಳಬೇಕು? ಇದರ ಕುರಿತು ಸ್ವಲ್ಪ ಚರ್ಚಿಸೋಣ. ಮುಕ್ತವಾಗಿ. ಪ್ರತಿಯೊ...