ಹೊಸ ವರ್ಷದ ಮೂರನೆಯ ದಿನ ಕುಳಿತು ಹಿಂದಿನ ವರ್ಷದ ದಿನಗಳ ಮೆಲುಕು ಹಾಕುತ್ತಿದ್ದೇನೆ. ಇದನ್ನು ಕಳೆದ ವಾರವೇ ಮಾಡಿದ್ದೆ ಮತ್ತು ಧನ್ಯವಾದಗಳನ್ನು ಸಲ್ಲಿಸಿದ್ದೆ. ಆದರೆ ಬರವಣಿಗೆಯ ಮೂಲಕ ಇದ್ದರೆ ಮತ್ತೆ ಓದಿದಾಗ ಆನಂದವೇ ಬೇರೆ. ನನ್ನೆಲ್ಲಾ ಬರವಣಿಗೆಗಳು ನನ್ನ ಓದುಗರಿಗೆಂದು ನಾನು ಬರೆದರೂ, ಅದನ್ನು ಹೆಚ್ಚೆಚ್ಚೂ ಓದಿ ಸಂತಸಗೊಂಡಿರುವವನು ಮಾತ್ರ ನಾನೆ. ಅದಕ್ಕೆ ಕಾರಣವೂ ಇದೆ, ಯಾಕೆಂದರೇ ನಮ್ಮ ಬದುಕನ್ನು ನಾವು ಪ್ರೀತಿಸುವಷ್ಟು ಬೇರೆಯವರನ್ನು ಪ್ರೀತಿಸುವುದಿಲ್ಲ. ಕಳೆದು ಹೋದ ಪುಟಗಳ ತಿರುಚಿ ನೋಡಿದಾಗ 2016 ಉತ್ತಮವಾಗಿ ಆರಂಭವಾದರೂ ಕೊನೆಯಲ್ಲಿ ಸ್ವಲ್ಪ ಬೇಸರವಾಗಿಯೇ ಮುಕ್ತಾಯವಾಯಿತು. ಸಿಹಿ ಕಹಿ ನೋವು ನಲಿವು ಬೆರೆತ ವರ್ಷವೆಂದರೂ ಸರಿಯೇ. ನನ್ನ ವೃತ್ತಿ ಜೀವನದಲ್ಲಿ ನೋಡಿದರೆ ಹಿಂದಿನ ವರ್ಷಗಳಿಗಿಂತ ಹೆಚ್ಚು ಯಶಸ್ಸು, ಹೆಸರು ಬಂತು. ಆದರೇ ಹಣಕಾಸಿನಲ್ಲಿ ಅತಿ ಏನು ಮೇಲಕ್ಕೆ ಹೋಗಲಿಲ್ಲವೆಂಬುದು ಸತ್ಯ. ಆದರೆ ಬೇರೆ ಕಡೆ ಕೆಲಸ ಮಾಡಿ ಇಷ್ಟವಿಲ್ಲದೆ ಅಥವಾ ಸಂಪೂರ್ಣ ಸ್ವಾತಂತ್ರ್ಯವಿಲ್ಲದೆ ಒದ್ದಾಡುವುದಕ್ಕಿಂತ, ನನಗೆ ಇಷ್ಟವೆನಿಸಿದ ಕೆಲಸ ಮಾಡಿದ ತೃಪ್ತಿಯಿದೆ, ನನಗಾಗಿ ನಾನು ಸಮಯ ಕಳೆದ ನೆಮ್ಮದಿಯಿದೆ, ಸುತ್ತಾಡಿದ ರೊಮಾಂಚನವಿದೆ. ಈ ಪರಿವರ್ತನೆಗೆ ಕಾರಣ, ನನ್ನ ಲ್ಯಾಂಡ್‍ಮಾರ್ಕ್ ಶಿಕ್ಷಣ. ಸಂಸಾರ, ಮನೆ, ಅಪ್ಪ ಅಮ್ಮ ಎಂದು ಬಂದರೆ ಸ್ವಲ್ಪ ಸಮಧಾನ, ಸ್ವಲ್ಪ ಬೇಸರವೂ ಆಗಿದೆ ನನ್ನಿಂದ ಅವರಿಗೆ. ಅದರ ಜೊತೆಗೆ, ನನ್ನ ಆತ್ಮೀಯ ಗೆಳೆಯರಿಗೂ ಸ್ವಲ್ಪ ಹೆಚ್ಚಿನ ನೋವನ್ನುಂಟು ಮಾಡಿದ್ದೇನೆ. ಅವರ ನೋವಿಗೆ, ಕಷ್ಟಕ್ಕೆ ಆಗದೇ ಹೋಗಿರುವುದು ನೋವಿನ ಸಂಗತಿ, ಕ್ಷಮೆ ಇರಲಿ. ಅದೇಲ್ಲವನ್ನು ತಿಂಗಳ ಪ್ರಕಾರವಾಗಿ ನಿಮ್ಮ ಮುಂದಿಡುತ್ತೇನೆ. ಕಲಿಕೆಯಲ್ಲಿ, ಮುಂದುವರಿಕೆಯಲ್ಲಿ ಇದೆಲ್ಲವೂ ಸಹಜ. ಮುಂದುವೆರೆಯುತ್ತಿದ್ದೇನೆ, ನಿಂತ ನೀರಾಗಿಲ್ಲವೆಂಬುದೇ ನಿರಾಳ.
ಜನೆವರಿ ಶುರುವಾಗಿದ್ದು, ಇಂಡಿಯನ್ ಆಯಿಲ್ ಕಂಪನಿಯವರು ನೀಡಿದ ಒಂದು ಸಣ್ಣ ಕಾರ್ಯಕ್ರಮದಿಂದ. ಅದಕ್ಕೆ ನೆರವಾಗಿದ್ದು ಸುನಿಲ್ ಕೆಜಿ. ಇದರ ಅಂಗವಾಗಿ ಸುನಿಲ್, ಸಾಯಿಬಣ್ಣ ಮತ್ತು ಬಿನೋಯ್ ಕುಮಾರ್ ಬೆಂಗಳೂರಿನಿಂದ ಸೈಕಲಿನಲ್ಲಿ ಹೊರಟು ಶ್ರವಣಬೆಳಗೊಳ ಮಾರ್ಗವಾಗಿ ಅರಕಲಗೂಡು, ಬಾನುಗೊಂದಿ ತಲುಪಿದರು. ಅಲ್ಲಿಂದ ಸೋಮವಾರಪೇಟೆ, ಕುಶಾಲನಗರ, ಮೈಸೂರು ಮರಳಿ ಬೆಂಗಳೂರಿಗೆ ತಲುಪಿದರು. ಈ ಕಾರ್ಯಕ್ರಮದಡಿಯಲ್ಲಿ, ಹಾಸನ, ಮೈಸೂರು, ಕೊಡಗು ಜಿಲ್ಲೆಯ 42 ಶಾಲೆಗಳು, ಹತ್ತಾರು ಸ್ತ್ರೀ ಶಕ್ತಿ ಸಂಘಗಳು, ರೈತ ಸಂಘಗಳು, ಯುವಕರನ್ನು ತಲುಪಿ, ಇಂಧನ ಉಳಿತಾಯ ಮತ್ತು ಗ್ಯಾಸ್ ಬಳಕೆಯ ಅರಿವು ಮೂಡಿಸಿದೆವು. ಈ ಸಮಯದಲ್ಲಿ, ಲ್ಯಾಂಡ್ ಮಾರ್ಕಿನ ಉಮಾ ಸತೀಶ್, ಲೋಕೆಶ್ ಹೆಚ್.ಆರ್, ಗೊಬ್ಬಳ್ಳಿ ಮಂಜೇಗೌಡ, ಮಂಜೇಶ್ ಎಂವಿ, ನಾಗೇಶ್ ಮಾಸ್ಟರ್, ಸಂತೋಷ್ ಸಿಡಿ, ಅಶೋಕ್ ಪೋಲಿಸ್, ಲೋಕೇಶ್ ಜಿ.ಆರ್. ಮತ್ತು ಎಲ್ಲಾ ಶಾಲೆಯ ಶಿಕ್ಷಕರ ಸಹಾಯ ಪ್ರಶಂಸನೀಯ. ಈ ಕಾರ್ಯಕ್ರಮವು ಅನೇಕ ಪತ್ರಿಕೆಗಳಲ್ಲಿಯೂ ಬಂದಿತು, ಅದಕ್ಕೆ ಕಾರಣರಾದ ಪ್ರಜಾವಾಣಿಯ ಗಂಗೇಶ್, ಉದಯವಾಣಿಯ ಲಿಂಗರಾಜು, ಕೊಡಗು ಜಿಲ್ಲೆಯ ನಾಗರಾಜ ಶೆಟ್ಟಿಗೆ ಧನ್ಯವಾದಗಳು. ಅದರ ಜೊತೆಗೆ ಲ್ಯಾಂಡ್‍ಮಾರ್ಕಿನ ಎಸ್.ಇ.ಎಲ್.ಪಿ. ಪ್ರೊಗ್ರಾಮ್ ಯಶಸ್ವಿಯಾಗಿ ಮುಕ್ತಾಯವಾಯಿತು. ಎಫ್.ಸಿ.ಆರ್.ಎ. ಮತ್ತು 35 ಎಸಿ ಗೆ ಅರ್ಜಿ ಹಾಕಿದೆವು.
ಫೆಬ್ರುವರಿಯಲ್ಲಿ, ಕೊಡಗಿನ ಅಭ್ಯತ್‍ಮಂಗಲ ಶಾಲೆಗೆ ಭೇಟಿ ನೀಡಿ ಮಕ್ಕಳು ಮತ್ತು ಪೋಷಕರ ಜೊತೆಗೆ ಸಂವಾದ ಕಾರ್ಯಕ್ರಮ ನಡೆಸಿದೆನು. ಅದರ ಜೊತೆಯಲ್ಲಿಯೇ ಬಾನುಗೊಂದಿ ಶಾಲೆಯ 61 ವರ್ಷದ ಹಿರಿಯ ವಿದ್ಯಾರ್ಥಿಗಳ ಸಮ್ಮಿಳನ ಕಾರ್ಯಕ್ರಮ ಆಯೋಜಿಸಲು ಹಲವಾರು ಹಿರಿಯ ವಿದ್ಯಾರ್ಥಿಗಳನ್ನು ಭೇಟಿ ಮಾಡುವ ಅವಕಾಶ ದೊರೆಯಿತು. ಅದರಲ್ಲಿಯೂ ಹಿರಿಯರಾದ ಚನ್ನೇಗೌಡರ ಜೊತೆಗೆ ಕಳೆದ ಕ್ಷಣಗಳು ಅವಿಸ್ಮರಣೀಯ.
ಮಾರ್ಚಿ ತಿಂಗಳು ನನ್ನ ಜೀವನದ ಪ್ರಮುಖ ಘಟ್ಟದಲ್ಲಿ ಒಂದು ಎಂದರು ತಪ್ಪಾಗದು. ನನ್ನೂರು ಬಾನುಗೊಂದಿಯ ಶಾಲೆಯಲ್ಲಿ 61 ವರ್ಷದ ಎಲ್ಲಾ ಸಾಲಿನ ವಿದ್ಯಾರ್ಥಿಗಳನ್ನು ಮತ್ತು ಇಪ್ಪತ್ತಕ್ಕೂ ಹೆಚ್ಚು ಶಿಕ್ಷಕರನ್ನು ಸನ್ಮಾನಿಸಿದ್ದು ಅದರಲ್ಲಿಯೂ ಅದು ನನ್ನ ಮುಂದಾಳತ್ವದಲ್ಲಿ ನಡೆದದ್ದು ನಾನು ಎಂದೆಂದಿಗೂ ಮರೆಯದ ದಿನ. ಆ ಸಮಯದಲ್ಲಿ ನನಗೆ ನೆರವು ನೀಡಿದ ನನ್ನೂರಿನ ಅನೇಕ ಹಿರಿಯ ವಿದ್ಯಾರ್ಥಿಗಳಿಗೆ ನಾನು ಚಿರಋಣಿಯಾಗಿದ್ದೇನೆ. ಮೂರ್ನಾಲ್ಕು ಜನರು ಕಾರ್ಯಕ್ರಮವನ್ನು ಹಾಳು ಮಾಡುವುದಕ್ಕೆ ಪ್ರಯತ್ನಿಸಿದರು ಅವರ ಬಗ್ಗೆ ಇಲ್ಲಿ ಬರೆದು ನಾನು ಅವರ ಮಟ್ಟಕ್ಕೆ ಇಳಿಯಲು ತಯಾರಿಲ್ಲ. ಒಂದು ಸಣ್ಣ ಹಳ್ಳಿಯಲ್ಲಿ 15-20 ಹಿರಿಯ ವಿದ್ಯಾರ್ಥಿಗಳು ಸೇರಿ, 1500-2000 ಜನರಿಗೆ ಊಟೋಪಾಚಾರ, ಅದ್ದೂರಿ ವೇದಿಕೆ, ಎಲ್ಲಾ ಹಿರಿಯ ಗುರುಗಳಿಗೆ ಸನ್ಮಾನ, ಮಕ್ಕಳಿಂದ ಅದ್ದೂರಿ ಮನರಂಜನೆ ವ್ಯವಸ್ಥೆ, ಯಾವುದೇ ರಾಜಕಾರಣಿಯ ಪ್ರವೇಶವಿಲ್ಲವೆಂದು ಪತ್ರಿಕೆಯಲ್ಲಿಯೇ ಮುದ್ರಿಸುವುದು ಅಸಾಮಾನ್ಯ ಸಂಗತಿ, ಯಾರು ಒಪ್ಪಿದರೂ ಬಿಟ್ಟರೂ ಅದೊಂದು ತಂಡದ, ಒಳ್ಳೆತನಕ್ಕೆ ಸಿಕ್ಕ ಗೆಲುವು. ಅದೇ ಕಾರ್ಯಕ್ರಮಕ್ಕೆ ನನ್ನ ಆತ್ಮೀಯ ಗೆಳೆಯರು ಮಕ್ಕಳಿಗೆ ಟಿ-ಷರ್ಟ್ ಉಡುಗರೆಯಾಗಿ ನೀಡಿದರು. ನಮ್ಮ ತಂಡದ ಸದಸ್ಯರಾದ ಭೀಮಪ್ಪ ಮತ್ತು ಅವರ ಸ್ನೇಹಿತರು ಜಾನಪದ ಹಾಡುಗಳೊಂದಿಗೆ ಮನರಂಜಿಸಿದರು. ನನ್ನ ಸ್ನೇಹಿತ ಕಿರಣ್ ಕುಮಾರ್ ಹಾಗೂ ಮಂಜೇಶ್ ನೆರವು ನೀಡಿದರು. ಇದು ನನಗೆ ಹಳ್ಳಿಯ ಬಗ್ಗೆ ಇದ್ದ ನಂಬಿಕೆಯ ಕಡೆಗೆ ದೊಡ್ಡ ಅನುಭವವೆನ್ನಬಹುದು! ಒಂದು ಹಳ್ಳಿಯಲ್ಲಿ ಸಣ್ಣ ಕೆಲಸಗಳಿಗೆ, ಉತ್ತಮ ಕಾರ್ಯಗಳಿಗೆ ಅದೆಷ್ಟರ ಮಟ್ಟಿಗೆ ಹಗೆ ಸಾಧಿಸುತ್ತಾರೆಂಬುದನ್ನು ಕಲಿಸಿತು. ಅದರ ಜೊತೆಗೆ ಯುವಕರು ಒಗ್ಗಟ್ಟಾಗಿ ನಿಂತರೆ ಯಾವುದನ್ನು ಸಾಧಿಸಬಹುದೆಂದು ತಿಳಿಸಿತು. ಈ ಸಮಯದಲ್ಲಿ ನನಗೆ ಸಹಕರಿಸಿದ ಕೆಲವರ ಹೆಸರನ್ನು ಇಲ್ಲಿ ನೆನಪಿಸಿಕೊಳ್ಳುವುದು ಉತ್ತಮ, ಚನ್ನೇಗೌಡರು, ಡಾ. ರಾಜಶೇಖರ್, ಪ್ರದೀಪ್ ಬಿ.ಆರ್., ಡಾ. ನಂಜೇಶ್, ಲಿಂಗರಾಜು, ಸುಪ್ರಿತ್, ದಶರಥ, ಬಿ.ಡಿ. ಮಂಜುನಾಥ್, ಧರ್ಮೇಗೌಡ, ಪ್ರಕಾಶ್, ಸಚಿನ್, ಅಕ್ಷಯ್, ಸಾಗರ್, ಚೇತನ್, ಅಭಿಷೇಕ್, ರಂಗನಾಥ್, ಯೋಗೇಶ್, ನಮ್ಮ ಗುರುಗಳಾದ ಲೋಕೇಶ್ ಮಾಸ್ಟರ್, ಅಲೋಕ್, ಮನು, ಮಧು, ದರ್ಶನ್, ಮಂಜುನಾಥ್, ರಂಜಿತ್, ಪ್ರಮೋದ್, ಇನ್ನು ಹಲವಾರು ಗೆಳೆಯರ ಹೆಸರಿದೆ....ದುರಂತವೆಂದರೆ ಕಾರ್ಯಕ್ರಮದ ನಂತರ ನಮ್ಮೂರ ಶಾಲೆಯನ್ನು ಉತ್ತಮ ದರ್ಜೆಗೆ ತೆಗೆದುಕೊಂಡು ಹೋಗಲು ಎಷ್ಟೇ ಪ್ರಯತ್ನಿಸಿದರು ಸಹಕಾರ ಸಿಗಲಿಲ್ಲ. ಕಾರ್ಯಕ್ರಮದ ಮುಂಚೆ ಹೇಗಿತ್ತೋ ಅದಕ್ಕಿಂತ ಹಾಳಾಗಿದೆ, ಮಕ್ಕಳು ಚುರುಕುತನವಿದ್ದರೂ ಶಿಕ್ಷಕರ ಬೇಜವಾಬ್ದಾರಿತನ, ಕಿಡಿಗೇಡಿಗಳ ಸಣ್ಣತನ ಊರಿಗೊಂದು ಹೆಮ್ಮೆಯ ಶಾಲೆಯನ್ನು ಮುಂಚುವಂತೆ ಮಾಡಿದೆ.
ಅದೇ ಸಮಯದಲ್ಲಿ ಸ್ನೇಹ ಟ್ರಸ್ಟ್, ಸಹಾಯದಿಂದ ನಮ್ಮ ಕಾವೇರಿ: ಜೀವ ನದಿಗಾಗಿ ನಾವು ನೀವು ಎಂಬ ಜಲ ದಿನದ ಅಂಗವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಅಂಗವಾಗಿ, ನಮ್ಮ ತಂಡದ ಸದಸ್ಯರಾದ ಸುನಿಲ್ ಕೆಜಿ, ಸಾಯಿಬಣ್ಣ, ಸುನಿಲ್ ಬಿ, ಬೆಂಗಳೂರಿನಿಂದ ಶ್ರವಣಬೆಳಗೊಳದ ಬೆಕ್ಕ ಗ್ರಾಮದಲ್ಲಿ ಕಾರ್ಯಕ್ರಮ ನಡೆಸಿ, ದೊಡ್ಡಮಗ್ಗೆ ಮೂಲಕ ಬಾನುಗೊಂದಿಗೆ ತಲುಪಿದರು. ಅಲ್ಲಿಂದ ಸುಂಟಿಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯಕ್ರಮ ಮುಗಿಸಿ, ಮಡಿಕೇರಿಯ ರೋಟರಿ ಸಂಸ್ಥೆಯಲ್ಲಿ ಕಾರ್ಯಕ್ರಮ ನಡೆಸಿ ನಂತರ ತಲಕಾವೇರಿ ತಲುಪಿದರು. ಅಲ್ಲಿ ಜಲ ದಿನಾಚರಣೆ ಮಾಡಿ, ಅಲ್ಲಿಂದ ಭಾಗಮಂಡಲ ಗ್ರಾ.ಪ. ಚೇರಂಬಾಣೆ ಗ್ರಾ.ಪ., ಕಾಲೇಜುಗಳಲ್ಲಿ ಕಾರ್ಯಕ್ರಮ ನಡೆಸಿದರು. ಮಡಿಕೇರಿಯಿಂದ ಸಿದ್ದಾಪುರ ರೋಟರಿ ನಂತರ ಕುಶಾಲನಗರದ ಪಾಲಿಟೆಕ್ನಿಕ್, ಹೆಬ್ಬಾಲೆ ಗ್ರಾ.ಪ. ಹುಣಸೂರು ಪ್ರಥಮ ದರ್ಜೆ ಕಾಲೇಜು, ಮೈಸೂರು ಕುಕ್ಕರಹಳ್ಳಿ ಕೆರೆ, ಕೆ.ಆರ್.ಎಸ್., ಶ್ರೀರಂಗಪಟ್ಟಣ, ಮಹದೇವಪುರ, ಮಂಡ್ಯ, ಮದ್ದೂರು, ರಾಮನಗರ, ಬಿಡದಿ ಅಲ್ಲಿಂದ ಕಾವೇರಿ ಭವನವನ್ನು ತಲುಪಿದರು. ಈ ಸಮಯದಲ್ಲಿ ಸಹಕರಿಸಿದ ಸುಂಟಿಕೊಪ್ಪ ಶಾಲೆಯ ಪ್ರೇಮ್ ಕುಮಾರ್, ರೋಟರಿ ಸಂಸ್ಥೆ ಕೊಡಗು, ಸ್ನೇಹ ಟ್ರಸ್ಟ್‍ನ ಎಲ್ಲ ಸಿಬ್ಬಂದಿ, ಯುನಿಸೆಫ್‍ನ ರಾಮಕೃಷ್ಣ, ಎಲ್ಲರಿಗೂ ಧನ್ಯವಾದಗಳು. ಇದು ಸುಮಾರು ದಿನಪತ್ರಿಕೆಗಳಲ್ಲಿಯೂ ಬಂದಿತು.
ಏಪ್ರಿಲ್ ತಿಂಗಳಿನಲ್ಲಿ ಎಫ್.ಆರ್.ಎಲ್.ಹೆಚ್.ಟಿ. ಸಂಸ್ಥೆಯೊಂದಿಗೆ ಸಂಶೋಧನಾ ಯೋಜನೆಗೆ ಒಪ್ಪಂದವಾಯಿತು. ಕರ್ನಾಟಕ ರಾಜ್ಯದ 11 ಜಿಲ್ಲೆಗಳ 19 ಗ್ರಾಮಾರಣ್ಯ ಸಮಿತಿಯಲ್ಲಿ ಈ ಸಂಶೋಧನೆ ನಡೆಯಲಿದ್ದು, ನಾವು ಅದರ ಕ್ಷೇತ್ರ ಭೇಟಿ ಮತ್ತು ಮಾಹಿತಿ ಹಾಗೂ ತರಬೇತಿ ನೀಡುವುದು ಒಪ್ಪಂದ. ಅದರಲ್ಲಿ ಇಲ್ಲಿಯವರೆಗೆ ನಾನು ಕೇವಲ ಶಿವಮೊಗ್ಗೆ (ಆಗುಂಬೆ), ರಾಯಚೂರು, ಬೀದರ್ (ಹುಮನಾಬಾದ್), ಹೊನ್ನಾವರ (ಕುಮಟಾ), ಬಳ್ಳಾರಿ (ಕೂಡ್ಲಿಗಿ)ಗೆ ಮಾತ್ರ ಭೇಟಿ ನೀಡಿದ್ದೇನೆ. ಇನ್ನೂ ಉಳಿದ ಜಿಲ್ಲೆಗಳಿಗೆ ಈ ವರ್ಷ ಭೇಟಿ ನೀಡಬೇಕು. ನನ್ನ ಸೋಮಾರಿತನದಿಂದಾಗಿ ಉಳಿದ ಕಾರ್ಯವನ್ನು ಮಾಡಿಲ್ಲ. ಇದೇ ತಿಂಗಳಿನಲ್ಲಿ, 21ನೇ ತಾರೀಖು ವಿಶ್ವ ಭೂ ದಿನವನ್ನು ಆಚರಿಸಿದೆವು. ಇದರ ಅಂಗವಾಗಿ ಸುನಿಲ್ ಹಾಗೂ ಸಾಯಿಬಣ್ಣ, ಸೈಕಲ್ಲಿನಲ್ಲಿ ಬೆಂಗಳೂರಿನಿಂದ ಹೊರಟು ಎಲ್ಲಾ ಜಿಲ್ಲಾ ಕೇಂದ್ರಗಳಿಗೂ ಭೇಟಿ ನೀಡಿ ಕಾರ್ಯಕ್ರಮದ ಜೊತೆಗೆ ಸಸಿಗಳನ್ನು ನೆಟ್ಟು ಬಂದರು. ಈ ಕಾರ್ಯಕ್ರಮವು ನಮ್ಮ ಕರುನಾಡು: ಹಸಿರು ಭೂಮಿಗಾಗಿ ನಾವು ನೀವು ಎಂಬ ಶೀರ್ಷಿಕೆಯಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಕರ್ನಾಟಕ ಅರಣ್ಯ ಇಲಾಖೆ, ಕರ್ನಾಟಕ ರಾಜ್ಯ ತಾಂತ್ರಿಕ ವಿಜ್ಞಾನ ಇಲಾಖೆ, ಹಲವಾರು ಸರ್ಕಾರೇತರ ಸಂಘ ಸಂಸ್ಥೆಗಳು ಸಹಕರಿಸಿದವು. ಲೋಹಿತ್, ಕರ್ನಾಟಕ ರಾಜ್ಯ ತಾಂತ್ರಿಕ ವಿಜ್ಞಾನ ಇಲಾಖೆ ಅವರಿಗೆ ಧನ್ಯವಾದಗಳು.
ಮೇ ತಿಂಗಳಿನಲ್ಲಿ ಎಫ್.ಆರ್.ಎಲ್.ಹೆಚ್.ಟಿ. ಕ್ಷೇತ್ರ ಭೇಟಿಗಾಗಿ ಬಳ್ಳಾರಿ ಮತ್ತು ಶಿವಮೊಗ್ಗೆಗೆ ಹೋಗಿದ್ದೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಆಯೋಜಿಸಿದ್ದ ಮೂರು ದಿನಗಳ ಕಾರ್ಯಗಾರದಲ್ಲಿ ನೀರು ಮತ್ತು ನೈರ್ಮಲ್ಯ ಕುರಿತು ವಿಶೇಷ ಭಾಷಣ ನೀಡಿದ್ದು, ಹಲವಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಜೊತೆಗೆ ಚರ್ಚೆ ಅಮೋಘವಾಗಿತ್ತು.
ಜೂನ್ ತಿಂಗಳಿನಲ್ಲಿ, ವಿಶ್ವ ಪರಿಸರ ದಿನದ ಅಂಗವಾಗಿ ಐದು ಶಾಲೆಗಳಲ್ಲಿ ಕೈತೋಟ ನಿರ್ಮಾಣ ಮತ್ತು ಔಷಧಿ ಗಿಡಗಳನ್ನು ನೆಡಲಾಯಿತು. ಬೆಂಗಳೂರಿನ ಮತ್ತಹಳ್ಳಿ ಶಾಲೆಯಲ್ಲಿ 152 ಗಿಡಗಳನ್ನು ನೆಟ್ಟು ಅದ್ದೂರಿ ಕಾರ್ಯಕ್ರಮ ನಡೆಸಿದೆವು. ಕಾರ್ಯಕ್ರಮಕ್ಕೆ ಎಸ್.ಟಿ.ಐ. ಸಾನೋó ಇಂಡಿಯಾ ಲಿ. ಕಂಪನಿ ಆರ್ಥಿಕ ಸಹಾಯ ನೀಡಿತು. ಸಂಸ್ಥೆಯ ಅನಿಲ್ ಕುಲಕರ್ಣಿ, ಕಾಶಿ ಗೌಡ, ಬಾಲು ಅವರಿಗೆ ಧನ್ಯವಾದಗಳು, ಅದರ ಜೊತೆಗೆ ಶಾಲೆಯ ಉಪಧ್ಯಾಯಿನಿ ವಸಂತಮ್ಮ ಅವರಿಗೂ ಧನ್ಯವಾದಗಳು. ಆ ಸಮಯದಲ್ಲಿ ಸಹಕರಿಸಿದ ನಮ್ಮ ಸಂಸ್ಥೆಯ, ಉಮೇಶ್, ಪ್ರವೀಣ್, ರಾಘವೇಂದ್ರ, ಅಕ್ಷಯ್, ಹಾಲೇಶ್, ಭೀಮಪ್ಪ ಅವರಿಗು ಧನ್ಯವಾದಗಳು. ಅದೇ ರೀತಿಯ ಕಾರ್ಯಕ್ರಮಗಳನ್ನು ಬಾನುಗೊಂದಿ, ರಂಗನಾಥಪುರ, ತರಿಗಳಲೆ ಹಾಗೂ ಕೂಡಿಗೆ ಶಾಲೆಗಳಲ್ಲಿಯೂ ನಡೆಸಲಾಯಿತು. ಬಿ.ಇ.ಒ. ನಾಗೇಶ್, ಇ.ಸಿ.ಒ, ಕೂಡಿಗೆ ದಯೆಟ್‍ನ ಮಂಜೇಶ್‍ರವರಿಗೆ ಧನ್ಯವಾದಗಳು. ಎಲ್ಲಾ ಕಾರ್ಯಕ್ರಮದ ಮಾಹಿತಿಗಳು ದಿನಪತ್ರಿಕೆಯಲ್ಲಿ ಬರಲು ಸಹಕರಿಸಿದ ಗಂಗೇಶ್, ಲಿಂಗರಾಜು ಹಾಗೂ ನಾಗರಾಜಶೆಟ್ಟಿಯವರಿಗೆ ಧನ್ಯವಾದಗಳು. ರಂಗನಾಥಪುರದ ಯದುಕುಮಾರ್ ಮತ್ತು ಸ್ನೇಹಿತರು ಎಲ್ಲಾ ಗಿಡಗಳನ್ನು ಬೆಳೆಸುತ್ತಿರುವುದಕ್ಕೆ ನಾನು ಋಣಿ.
ಜುಲೈ ತಿಂಗಳಿನಲ್ಲಿ ಆಗುಂಬೆಗೆ ನಮ್ಮ ತಂಡದ ಸದಸ್ಯರಾದ ರಮೇಶ್ ಹಾಗೂ ಕುಮಾರ್ ನಾಯಕ್ ಜೊತಗೆ ಹೋಗಿದ್ದೆ. ಅದಾದ ನಂತರ ರಾಯಚೂರು ಹಾಗೂ ಮಂತ್ರಾಲಯಕ್ಕೂ ಹೋಗಿ ಬಂದೆ. ಅದಾದ ನಂತರ, ಹೈದರಾಬಾದಿನಲ್ಲಿ ನಡೆದ ಜಾಗತಿಕ ತಾಪಮಾನದ ಕುರಿತ ಅಂತರಾಷ್ಟ್ರೀಯ ಸಮ್ಮೇಳನಕ್ಕೆ ಹೋಗಿ ಬಂದೆ. ಆ ಸಮಯದಲ್ಲಿ ನನ್ನನ್ನು ಸ್ವೀಕರಿಸಿ ಆತ್ಮೀಯವಾಗಿ ಹರಸಿದ ನನ್ನ ಹಳೆಯ ಬಾಸ್ ಡಾ. ದಿನೇಶ್ ಕುಮಾರ್‍ರವರಿಗೆ ಧನ್ಯವಾದಗಳು. ಅವರೊಡನೆ ನಡೆದ ಕೆಲವು ಗಂಟೆಗಳ ಮಾತುಕತೆ ಸಾಕಷ್ಟು ಆತ್ಮ ವಿಶ್ವಾಸವನ್ನು ತುಂಬಿತು.
ಆಗಸ್ಟ್ ತಿಂಗಳಿನಲ್ಲಿ ಎಸ್.ಟಿ.ಐ. ಸಾನೋó ಇಂಡಿಯಾ ಲಿ. ಕಂಪನಿ ಆರ್ಥಿಕ ನೆರವಿನಿಂದ ಮಾಗಡಿ ರಸ್ತೆಯ ಕಡಬಗೆರೆ ಮತ್ತು ಕಡಬಗೆರೆ ಕ್ರಾಸ್ ಶಾಲೆಗಳಿಗೆ ಕುಡಿಯುವ ನೀರಿನ ಶುದ್ಧೀಕರಣ ಘಟಕ, ಜಾರಾ ಬಂಡೆ ಮತ್ತು ಉಯ್ಯಾಲೆ ಹಾಕಿಸಿಕೊಡಲಾಯಿತು. ಈ ಸಮಯದಲ್ಲಿ ಸಹಕರಿಸಿದ ರೋಹಿತ್ ಎಡಿ, ರಮೇಶ್, ಹಾಲೇಶ್, ಭವ್ಯ ಅವರಿಗೆ ಋಣಿ. ಅದೇ ತಿಂಗಳಿನಲ್ಲಿ ಹೊನ್ನಾವರ, ಯಾಣಾ, ಮುರುಡೇಶ್ವರ, ಗೋಕರ್ಣ, ಕೊಲ್ಲೂರು ಸುತ್ತಾಡಿದೆ. ಕುಮಟಾದ ಆರ್.ಎಫ್.ಒ. ಕಿರಣ್‍ರವರದ್ದು ಮರೆಯಲಾಗದ ವ್ಯಕ್ತಿತ್ವ.
ಸೆಪ್ಟೆಂಬರ್ ತಿಂಗಳಲ್ಲಿ ರಾಯಚೂರು ಜಿಲ್ಲೆಯಲ್ಲಿ ರೈತರ ಕುರಿತು ಮತ್ತು ನೀರಿನ ಲಭ್ಯತೆಯ ಕುರಿತು ಅಧ್ಯಯನ ನಡೆಸಿದೆ. ಆ ಸಮಯದಲ್ಲಿ ಸಹಕರಿಸಿದ ರೋಹಿತ್ ಎಡಿ, ಸಂಕೇತ್, ಕಾರ್ಯಪ್ಪ, ಬೆಟ್ಟಪ್ಟರವರಿಗೆ ಧನ್ಯವಾದಗಳು. ಹೆಂಡತಿ ಜೊತೆಗೂಡಿ, ಸಿಗಂಧೂರು ಹಾಗೂ ಕೊಲ್ಲೂರಿಗೆ ಹೋಗಿ ಬಂದೆ. ಇದು ಕೇವಲ ಇಪ್ಪತ್ತು ದಿನಗಳ ಅಂತರದಲ್ಲಿ ಕೊಲ್ಲೂರಿಗೆ ಎರಡು ಬಾರಿ ಹೋಗಿ ಬಂದಂತಾಯಿತು.
ಅಕ್ಟೋಬರ್ ತಿಂಗಳಿನಲ್ಲಿ, ನನ್ನ ಹಲವಾರು ವರ್ಷದ ಕನಸಿನ ತಾಣವಾಗಿದ್ದ ಅಂಡಮಾನಿಗೆ ಒಂದು ವಾರ ಪ್ರವಾಸ ಮಾಡಿ ಬಂದೆ. ಅದೊಂದು ಅದ್ಬುತ ಅನುಭವ, ಧರೆಯ ಮೇಲಿರುವ ಸ್ವರ್ಗವೇ ಹ್ಯಾವ್ಲಾಕ್ ದ್ವೀಪ, ದೇವರನ್ನು ಬೇಡುತ್ತೇನೆ ಮತ್ತೊಮ್ಮೆ ಹೋಗುವಂತೆ ಅವಕಾಶ ನೀಡು, ಸಾಧ್ಯವಾದರೆ ಒಬ್ಬನೇ ಒಂದು ವಾರ ಸುಮ್ಮನೆ ಸಾಗರವನ್ನು ನೋಡುತ್ತಾ ಕುಳಿತು ಬರುವ ಅವಕಾಶ ನೀಡೆಂದು.
ನವೆಂಬರ್ ತಿಂಗಳಿನಲ್ಲಿ ನಾನು ಮಹರಾಷ್ಟ್ರದಲ್ಲಿ ಕಳೆದ 15 ದಿನಗಳು ಮತ್ತು ಅನುಭವ ಅವಿಸ್ಮರಣೀಯ. ಭಾಷೆ ತಿಳಿಯದೆ, ಗುರುತು ಪರಿಚಯವಿಲ್ಲದೆ ರಾಜ್ಯದ ಆರು ಜಿಲ್ಲೆಗಳು, 30 ಹಳ್ಳಿಗಳು, 180 ಮನೆಗಳು, ವಿಭಿನ್ನ ಅನುಭವ, ಆಚರಣೆ, ಸಂಸ್ಕøತಿ, ಊಟೋಪಾಚಾರಗಳು ಅದ್ಬುತವೆನಿಸಿದವು. ಆ ಸಮಯದಲ್ಲಿ ಸಹಕರಿಸಿದ ಗೆಳೆಯ ನವೀನ್ ಕುಮಾರ್, ಶ್ರೀಧರ್, ವಾರ್ಧಾದಲ್ಲಿ ಪ್ರೋ. ಸಿಬಿ ಕೆ ಜೋಸೆಫ್, ಮಹೊದಯ್, ವಿನೇಶ್ ಗೋಕಡೆ, ಯಶ್ವಂತ್, ಗಡಿಚರೋಲಿಯಲ್ಲಿ ಶ್ರೀ ಹೇಮಟ್, ಸಾಲೆಕಸದಲ್ಲಿ ಬಾಜಿರಾವ್, ಅನಿಲ್ ಗಾಯಕ್‍ವಾಡ್, ಗೋಂದಿಯಾ ಸುಶೀಲ್, ಜಾಲ್ನಾ ಸಂಜಯ್, ಬೀಡ್‍ನಲ್ಲಿ ದಾದಾ ಮುಂಡೆ, ಸಂತೋಷ್ ವಾಗ್ಮಾರೆ, ಲಾತುರ್‍ನಲ್ಲಿ ಪ್ರದೀಪ್ ಗೋಡ್ಸೆ, ನಾಂದೀದ್‍ನ ಬಾಲಾಜಿ ಚಿರೋಡೆ ಅದಕ್ಕೆಲದಕ್ಕಿಂತ ಅಧ್ಯಯನಕ್ಕೆ ಸಹಾಯ ನೀಡಿದ ಐರಾಪ್‍ನ ಡಾ ದಿನೇಶ್ ಕುಮಾರ್‍ರವರಿಗೆ ಧನ್ಯವಾದಗಳು.
ಅಲ್ಲಿಂದ ಬಂದ ತಕ್ಷಣವೇ ವಿಶ್ವ ಶೌಚಾಲಯ ದಿನವನ್ನು ನನ್ನ ಸ್ನೇಹಿತ ಮಂಜೇಶ್ ಎಂ.ವಿ. ಮುಖ್ಯೋಪಾಧ್ಯಾಯರಾಗಿರುವ ಕೊಡಗಿನ ಕಾನ್‍ಬೈಲ್ ಶಾಲೆಯಲ್ಲಿ ಹಮ್ಮಿಕೊಂಡಿದ್ದೇವು. ಆ ಸಮಯದಲ್ಲಿ ಸಹಕರಿಸಿದ ಮಂಜೇಶ್ ಮತ್ತು ಅವರ ಸಹದ್ಯೋಗಿಗಳು, ಕಿರಣ್ ಕುಮಾರ್, ಶಂಕರ್, ಸುದೇಶ್, ರಾಘವೇಂದ್ರ, ಆಂಟೋನಿಯವರಿಗೆ ಧನ್ಯವಾದಗಳು.
ಡಿಸೆಂಬರಿನಲ್ಲಿ ಮಳವಳ್ಳಿ ತಾಲ್ಲೂಕಿನ ಸುಜ್ಜಲೂರು ಎಂಬ ಹಳ್ಳಿಯಲ್ಲಿ ಅದ್ಬುತವಾಗಿ ಇಂಗ್ಲೀಷ್ ಶಾಲೆ ನಡೆಸುತ್ತಿರುವ ಡಾ. ಕಲಾವತಿ ಮೇಡಂ ಅವರ ಆಹ್ವಾನದ ಮೇರೆಗೆ ವಿಶೇಷ ಅತಿಥಿಯಾಗಿ ತೆರಳಿದ್ದೆ. ಅದೊಂದು ಮರೆಯಲಾಗದ ಅನುಭವ. ಸಂಪೂರ್ಣ ಹಳ್ಳಿಯಲ್ಲಿ ಮಕ್ಕಳು ಜಾಗತಿಕ ತಾಪಮಾನದ ಕುರಿತು ಅಷ್ಟೊಂದು ಮಾಹಿತಿ, ಅದರಲ್ಲಿಯೂ ಇಂಗ್ಲೀಷಿನಲ್ಲಿ ನಿರೂಪನೆ, ವಿವರಣೆ, ಆ ಶಿಕ್ಷಕಿಯರ ಶ್ರಮ ಅಬ್ಬಾ ಎನಿಸಿತು. ನನ್ನನ್ನು ಆಹ್ವಾನಿಸಿ ಅವಕಾಶ ಕಲ್ಪಿಸಿಕೊಟ್ಟಿದ್ದಾಕ್ಕಾಗಿ ಡಾ. ಕಲಾವತಿಯವರಿಗೆ ಧನ್ಯವಾದಗಳು, ಹಾಗೂ ಶಾಲೆಯ ಉನ್ನತಿಗಾಗಿ ಶ್ರಮಿಸುತ್ತಿರುವ ಪ್ರಾಂಶುಪಾಲರಾದ ಶೃತಿಯವರಿಗೆ ಅಭಿನಂದನೆಗಳು.
ವರ್ಷದ ಏರು ಪೇರುಗಳು ಏನೇ ಇದ್ದರೂ 2016ಕ್ಕೆ ಅರ್ಥಪೂರ್ಣವಾಗಿ ವಿದಾಯ ಹೇಳಬೇಕೆಂದು ಬಯಸಿದೆವು. ಇದರ ಪರಿಣಾಮವಾಗಿ, ಡಿಸೆಂಬರ್ 25ರಂದು ಜೊತೆಯಲ್ಲಿ ಪಿಯುಸಿ ಓದಿದ ಎಲ್ಲಾ ಹಳೆಯ ಸ್ನೇಹಿತರು ಕುಶಾಲನಗರದಲ್ಲಿ ಸೇರಿ, ಬೈಚನಹಳ್ಳಿಯಲ್ಲಿರುವ ಅಂಗನವಾಡಿಗೆ ಬಣ್ಣ ಬಳಿದೆವು. ಇದು ನಾವು ಮಾನಸಿಕವಾಗಿ ಹಾಗೂ ಚಿಂತನೆಯಲ್ಲಿ ಬೆಳೆಯುತ್ತಿದ್ದೇವೆಂದು ನಮ್ಮ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತಿದೆ. ನನ್ನ ಅನೇಕ ಸ್ನೇಹಿತರು ಯಾವುದೇ ಫಲಾಫೇಕ್ಷೆಯಿಲ್ಲದೆ ಸಮಾಜ ಸೇವೆಗೆ ಧುಮುಕುತ್ತಿರುವುದು, ವೈಯಕ್ತಿಕ, ಸ್ವಾರ್ಥದಿಂದ ಮುಳುಗಿರುವ ಸಮಾಜದಲ್ಲಿಯೂ ಉತ್ತಮ ಬೆಳಕನ್ನು ಹರಡುತ್ತಿದೆ.
ಸದರಿ ವರ್ಷ 2016ರರಲ್ಲಿ ಅನೇಕರ ಮೇಲೆ ಕೋಪವಿದ್ದರೂ, ಅವರು ನನಗೆ ಮಾಡಿರುವ ನೋವು ಮಾಸದಿದ್ದರೂ, ನಾನು ನನ್ನೂರು ಬಾನುಗೊಂದಿ ಕಾರ್ಯಕ್ರಮ ಆಯೋಜಿಸುವಾಗ ನೀಡಿದ ತೊಂದರೆಗಳು, ಬಾನುಗೊಂದಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಲು ಹೊರಟಾಗ ತಪ್ಪಿಸಿದ ಅಯೋಗ್ಯರಿಗೂ ಮತ್ತು ಅದರ ದುರಸ್ತಿ ಕಾರ್ಯಕ್ಕೆ ಸಹಕರಿಸದ ಕೆಲವರಿಗು, ಮತ್ತು ಕರ್ನಾಟಕ ರಾಜ್ಯ ಪರಿಸರ ವಿಜ್ಞಾನ ಪದವೀಧರರ ಸಂಘವನ್ನು ಕಟ್ಟಲು ಮುಂದಾದಾಗ ಸಹಕರಿಸದೆ ಸೇಡು ತೀರಿಸಿಕೊಂಡ ಹಲವರಿಗು ಬೈಯಬೇಕೆನಿಸಿದರೂ ನಾನು ಬೈಯ್ಯುವುದಿಲ್ಲ. ಅವರು ಮಾಡಿರುವ ಅನಾಚಾರ, ಅವರ ದುರ್ನಡತೆ ಅವರನ್ನು ಬಲಿ ತೆಗೆದುಕೊಳ್ಳುವುದೆನ್ನವು ವಿಶ್ವಾಸ ನನಗಿದೆ. ಅದರ ಜೊತೆಗೆ ಉತ್ತಮ ಕೆಲಸಕ್ಕೆ ಬೆನ್ನು ತಟ್ಟುವ ಕೋಟ್ಯಾಂತರ ಜನರು ಜಗತ್ತಿನಲ್ಲಿದ್ದಾರೆಂಬ ನಂಬಿಕೆ ನನಗಿದೆ. ಕಳೆದ ವರ್ಷ ನನ್ನ ಸೋಮಾರಿತನದಿಂದಾಗಿ ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡದೆ ಇರುವುದು ಬೇಸರದ ಸಂಗತಿ. ಈ ವರ್ಷ ಅನೇಕಾ ಒಳ್ಳೆಯ ಹಾಗೂ ಬೇಸರದ ಸಂಗತಿಗಳನ್ನು ತಂದಿದೆ. ಸಂತಸದಲ್ಲಿ ಹಿಗ್ಗದೆ, ದುಃಖದಲ್ಲಿ ಕುಗ್ಗದೆ ನಡೆದಿರುವುದು ಉತ್ತಮವೆನಿಸುತ್ತದೆ. ಅದೇ ರೀತಿ ಲ್ಯಾಂಡ್‍ಮಾರ್ಕ್ ಶಿಕ್ಷಣ ನನ್ನ ಯಶಸ್ಸಿಗೆ ಕಾರಣವೆಂಬುದನ್ನು ಹೇಳುತ್ತೇನೆ. ಪ್ರಮುಖವಾಗಿ ವಿಜಯ್ ಕೃಷ್ಣ, ಪ್ರಮೋದ್ ಕಾಂಚನ್, ಸಂಯುಕ್ತಾ, ರಾಘವೇಂದ್ರ, ಸಂತೋಷ್, ಉಮಾ ಸತೀಶ್, ಸುಳುಗೋಡು ಕೃಷ್ಣ, ಸುಧಾ ಭಟ್, ಡಾ. ಸುಧಾ, ಕಾರ್ತಿಕ್, ಚಿದಾನಂದ, ಅಶೋಕ್ ಗಾರ್ಲಾ, ಸುರೇಶ್,
ಈ ಬರವಣಿಗೆಯು ನನ್ನ ಉಳಿದ ಬರವಣಿಗೆಯಂತಲ್ಲವೆಂಬುದನ್ನು ಹೇಳುತ್ತೇನೆ. ಈ ಬರವಣಿಗೆಯನ್ನು 2016ನೇ ವರ್ಷದಲ್ಲಿ ನನ್ನ ಬದಕಿಗೆ ಸಹಕರಿಸಿದವರಿಗೆ ಹಾಗೂ ನಾನು ಮನ ನೋಯಿಸಿದವರಿಗೆಂದು ಬರೆದಿರುತ್ತೇನೆ. ಈ ವರ್ಷದಲ್ಲಿ ಅತಿ ಹೆಚ್ಚು ಮನ ನೊಂದಿರುವ ನಿನಗೆ ನನ್ನ ಕ್ಷಮೆಯಿರಲಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ