ಈ ಬರಣಿಗೆಯನ್ನು ನಾನು 2016ರ ರಲ್ಲಿ ನನ್ನೂರು ಬಾನುಗೊಂದಿಯ ಶಾಲಾಭಿವೃದ್ಧಿ ಮಾಡುತ್ತೇನೆಂದು ಹೊರಟು ಅನುಭವಿಸಿದ ಕಥನವನ್ನು ತಿಳಿಸಲು ಬಯಸಿ ಪ್ರಾರಂಭಿಸಿದೆ. ಆದರೆ, ಅದರ ನಡು ನಡುವೆ ಇದು ಕೇವಲ ನನ್ನೂರಿನ ಸಮಸ್ಯೆ ಮಾತ್ರವಲ್ಲ, ಬಹುತೇಕ ಎಲ್ಲಾ ಊರಿನ ಸಮಸ್ಯೆಯೆಂಬುದನ್ನು ಅರಿತು, ಬೇರೆ ಬೇರೆ ವಿಷಯಗಳನ್ನು ಪ್ರಸ್ತಾಪಿಸಿದ್ದೇನೆ. ಇಲ್ಲಿ ಯಾರೂ ಅನ್ಯತಾ ಭಾವಿಸಬಾರದು. ಏಕೆಂದರೇ, ಒಳ್ಳೆಯದು ಕೆಟ್ಟದ್ದು ಎನ್ನುವ ತಳಹದಿಯ ಮೇಲೆ ಈ ಬರವಣಿಗೆಯನ್ನು ಬರೆದಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಮಹಾನ್ ಚೇತನ, ವಿಶ್ವಮಾನವನಾಗಿರುತ್ತಾನೆ. ಅವನು ದೊಡ್ಡ ವ್ಯಕ್ತಿ ಎನ್ನುವುದನ್ನು ಅವನೇ ನಂಬುವುದಿಲ್ಲ. ಆದ್ದರಿಂದ, ಯಾರೊಬ್ಬರ ನಡುವಳಿಕೆಗಳು ಹುಟ್ಟಿನಿಂದ ಬಂದವಲ್ಲ, ಬೆಳೆಯುತಾ ಸುತ್ತಣ ಪರಿಸರದಿಂದ ಮಾರ್ಪಾಡಾದವುಗಳು, ನನ್ನ ವಿದ್ಯಾಬ್ಯಾಸದ ಜೊತೆಗೆ ಓದುವ ಮತ್ತು ಸುತ್ತಾಡುವ ಹಾಗೂ ವಿಚಾರಗಳನ್ನು ತಿಳಿದಿರುವ ಜನರೊಂದಿಗೆ ಬೆರೆಯದೇ ಇದ್ದಿದ್ದರೇ ಬಹುಶಃ ನಾನು ಕೂಡ ನನ್ನದೇ ಆದ ಪ್ರಪಂಚದಳೊಗೆ ಬದುಕುತ್ತಿದ್ದೆ ಮತ್ತು ಆಲೋಚಿಸುತ್ತಿದ್ದೆ ಎನಿಸುತ್ತದೆ. ಜಗತ್ತಿನಲ್ಲಿ ಯಾರೊಬ್ಬರೂ ಕೆಟ್ಟವರಿಲ್ಲವೆನ್ನುವುದನ್ನು ಮನಸ್ಸಿನಲ್ಲಿಟ್ಟುಕೊಂಡು ಓದಬೇಕಾಗಿ ವಿನಂತಿ.
ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶ್ರಮವಹಿಸಿದ ನನ್ನ ಕಿರಿಯ ಸ್ನೇಹಿತರಿಗೇ ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತೇನೆ, ಹಗಲು ರಾತ್ರಿ ಶ್ರಮವಹಿಸಿ ದುಡಿದಿದ್ದಾರೆ. ಒಂದೇ ಒಂದು ರೂಪಾಯಿ ನಿರೀಕ್ಷೆಯಿಲ್ಲದೆ ಕೆಲಸ ಮಾಡಿದ್ದಾರೆ. ಅದರ ಜೊತೆಗೆ ಕಾರ್ಯಕ್ರಮಕ್ಕೆ ದೇಣಿಗೆ ನೀಡಿದ ಮತ್ತು ಎಲ್ಲಾ ಕಾರ್ಯಗಳನ್ನು ನೆರವೇರಿಸಿ, ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಸರ್ವರ ಪಾದಾರವಿಂದಗಳಿಗೆ ನನ್ನ ನಮನಗಳು. ನಾನು ಏನೂ ಬೇಕಾದರೂ ಸಾಧಿಸಬಹುದು, ಅತಿ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಬಹುದು, ಆದರೇ ಈ ಕಾರ್ಯಕ್ರಮ ನನಗೆ ನೀಡಿರುವ ಆತ್ಮ ಸಂತೋಷ ಮತ್ತು ತೃಪ್ತಿಯನ್ನು ಬೇರಾವ ಯಶಸ್ಸು ನೀಡಲು ಸಾಧ್ಯವಿಲ್ಲ. ಆದ್ದರಿಂದ ನನ್ನೆಲ್ಲಾ ಬಾನುಗೊಂದಿಯ ಹಿರಿಯರಿಗೆ, ಕಿರಿಯರಿಗೆ, ಪುಟಾಣಿಗಳಿಗೆ, ತಾಯಂದಿಯರಿಗೆ, ತಂಗಿಯರಿಗೆ, ಅಕ್ಕಂದಿರಿಗೆ ನನ್ನ ದೀರ್ಘದಂಡ ನಮಸ್ಕಾರಗಳನ್ನು ಅರ್ಪಿಸಿದ್ದೇನೆ. ಕಾರ್ಯಕ್ರಮದ ವೇಳೆಯಲ್ಲಿ ಅಥವಾ ಅದಾದ ಮೇಲೆ ನನ್ನಿಂದ ಕೆಲವರಿಗೆ ಬೇಸರವಾಗಿದ್ದರೆ ಅಥವಾ ಈ ಬರವಣಿಗೆಯಿಂದ ಬೇಸರವಾದರೇ ಅದು ನನ್ನ ಅನಿಸಿಕೆಯೇ ಹೊರತು ಯಾರನ್ನು ನೋವಿಸುವುದಾಗಲೀ ನಿಂದಿಸುವುದಾಗಲೀ ನನ್ನ ಉದ್ದೇಶವಲ್ಲ ಮತ್ತು ಆ ವರ್ಗಕ್ಕೆ ಸೇರಿದವನು ನಾನಲ್ಲ.
ನನ್ನೂರಿನ ಅನೇಕರನ್ನು ಸೇರಿಸಿಕೊಂಡು, ಬಹಳಷ್ಟು ಜನರಿಗೆ ನನ್ನ ಬಗ್ಗೆ ಮತ್ತು ನನ್ನ ಅನುಭವಗಳ ಕುರಿತು ತಿಳಿದಿರುವುದಿಲ್ಲ. ನಾನು ಬದುಕನ್ನು ಬದುಕುತ್ತಾ, ಜೀವನವನ್ನು ಜೀವಿಸುತ್ತಾ, ಕಲಿಯುತ್ತಾ ಅಳವಡಿಸುತ್ತಾ ಬದುಕುತ್ತಿರುವವನು. ನಾನು ಫೇಮಸ್ ಆಗಬೇಕೆಂದು ಬರೆಯುವವನು ಅಲ್ಲಾ, ನನಗೆ ಹೆಸರು ಕೀರ್ತಿ ಬರಲೆಂದು ಕೆಲಸ ಮಾಡಿದವನು ಅಲ್ಲಾ. ನಾನು ಮಾಡಿದ್ದು ಮಾಡುತ್ತಿರುವುದೆಲ್ಲವೂ ನನ್ನ ಬದುಕಿಗೆ, ನನ್ನೊಳಗಿರುವ ನನಗೆ, ನಾನೇ ಆಗಿರುವ ನನ್ನಂತರಾಳಕ್ಕೆ ತೃಪ್ತಿ ನೀಡುವುದಕ್ಕೆ. ಒಂದಿಷ್ಟು ಪೀಠಿಕೆಯನ್ನು ನೀಡುತ್ತೇನೆ, ಏಕೆಂದರೆ ಹಲವರಿಗೆ ನಾನು ಏನು ಕೆಲಸ ಮಾಡುತ್ತೇನೆ, ಏನೆಲ್ಲಾ ಕೆಲಸ ಮಾಡಿದ್ದೇನೆಂಬುದರ ಸುಳಿವು ಸಿಗಲೆಂದು. ಇದಕ್ಕೆ ಇನ್ನೊಂದು ಕಾರಣ ನನ್ನ ಬಗ್ಗೆ ನಿಮ್ಮದೇ ಊಹೆಗಳು, ಆಲೋಚನೆಗಳು ಮೂಡದಿರಲಿ ಮತ್ತು ಅವುಗಳು ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡದಿರಲೆಂದು. ನಾನು ಯಾವ್ಯಾವುದೋ ಊರಿಗೆ ಭೇಟಿ ನೀಡಿದಾಗ, ನನ್ನೂರಿಗೂ ಏನಾದರೂ ಮಾಡಬೇಕೆಂಬ ಆಸೆಗಳು ಬರುತ್ತಿದ್ದವು. ಅದರ ಜೊತೆಗೆ ನನ್ನೂರು ಬಾನುಗೊಂದಿಯಲ್ಲಿರು ಸರ್ಕಾರಿ ಶಾಲಾಭಿವೃದ್ಧಿಯ ವಿಷಯಕ್ಕೆ ಬರೋಣ ಮತ್ತು ಸಮುದಾಯವನ್ನು ಸೇರಿಸಿಕೊಂಡು ಅಬಿವೃದ್ಧಿಯತ್ತ ಸಾಗುವ ಯೋಜನೆಯಲ್ಲಿ ನನಗಾದ, ಅನುಭವವನ್ನು ಹೇಳುತ್ತೇನೆ. ಇದೇ ಸತ್ಯವಾಗಿರುವುದೆಂದು ಹೇಳುತ್ತಿಲ್ಲ, ಇದು ನನ್ನ ಅನಿಸಿಕೆಗಳು ಅಥವಾ ನನ್ನ ಮೂಗಿನ ನೇರದ ಪ್ರಸ್ತಾಪವೂ ಇರಬಹುದು. ಇಲ್ಲಿನ ಬರವಣಿಗೆಯಲ್ಲಿ ಅನೇಕಾ ವಿಷಯಗಳು ಬಂದು ನೀವು ಸ್ವಲ್ಪ ಗೊಂದಲಕ್ಕೂ ಹೋಗಬಹುದು, ಹಾಗಾಗಿ ನಿಮಗೆ ಗೊಂದಲಗಳು ಬಂದರೆ ನೀವು ಈ ಬರವಣಿಗೆಯನ್ನು ಸರಿಯಾಗಿಯೇ ಓದುತ್ತಿದ್ದೀರೆಂದು ಅರಿತುಕೊಳ್ಳಿ.
ಮನುಷ್ಯ ಎಷ್ಟೇ ಕಲಿತರೂ, ಓದಿದರೂ, ಬೆಳೆದರೂ ಅವನ ಸಣ್ಣತನವು ಅವನಿಂದ ತಾನಾಗಿಯೇ ಹೋಗುವುದಿಲ್ಲ. ಏಕೆಂದರೆ, ಒಂದು ಮಗುವು ಜನಿಸಿದಾಗ ಅದು ವಿಶ್ವಮಾನವನಾಗಿ ಜನಿಸಿರುತ್ತದೆ. ಅದಕ್ಕೊಂದು ಜಾತಿಯಿರುವುದಿಲ್ಲ, ಧರ್ಮವಿರುವುದಿಲ್ಲ, ಭಾಷೆ ಇರುವುದಿಲ್ಲ, ರಾಜ್ಯವಿರುವುದಿಲ್ಲ, ದೇಶಗಳ ಗಡಿಯಿರುವುದಿಲ್ಲ, ಅಷ್ಟೆಲ್ಲಾ ಯಾಕೆ ಅದಕ್ಕೊಂದು ಹೆಸರೇ ಇರುವುದಿಲ್ಲ, ಲಿಂಗವೂ ಇರುವುದಿಲ್ಲ. ನಾವು ಅದು ಹುಟ್ಟಿದ ತಕ್ಷಣ ಗಂಡು ಅಥವಾ ಹೆಣ್ಣು ಎನ್ನುವ ಲಿಂಗವನ್ನು ಆಧರಿಸಿ ಒಂದು ವರ್ಗಕ್ಕೆ ಸೇರಿಸುತ್ತೇವೆ, ಅದಕ್ಕೊಂದು ಹೆಸರು ನೀಡಿ ನೀನು ಇವನು/ಇವಳು ಎನ್ನುತ್ತೇವೆ. ಬೆಳೆಯುತ್ತ ಬಂದಂತೆ ನೀನು ಒಳ್ಳೆಯವನು/ಕೆಟ್ಟವನು ಎಂದು ತುಂಬುತ್ತೇವೆ. ನೀನು ಚುರಕು, ನೀನು ದಡ್ಡ, ನಿನಗೆ ವಿದ್ಯೆ ಹತ್ತುವುದಿಲ್ಲ, ನೀನು ಉದ್ದಾರವಾಗುವುದಿಲ್ಲ, ನೀನು ಅದು, ನೀನು ಇದು, ಹೀಗೆ ಹೇಳಿ ಹೇಳಿ, ಮತ್ತು ಅದನ್ನೆ ಆ ಮಗುವು ಕೇಳಿ ಕೇಳಿ ಬೆಳೆಯುತ್ತಾ ಹೋದಂತೆ ಅದನ್ನೇ ಸತ್ಯವೆಂದು ನಂಬುತ್ತದೆ. ಜನಿಸಿದಾಗ ಇಡೀ ಜಗತ್ತನ್ನೆ ಹಿಡಿಯಬಹುದೆಂಬ ಮತ್ತು ಜಗತ್ತೇ ನನ್ನದು ಎನ್ನುವ ತನ್ನ ವಿಶಾಲ ಪ್ರಪಂಚವನ್ನು ಮತ್ತು ಆತ್ಮ ವಿಶ್ವಾಸವನ್ನು ಕುಗ್ಗಿಸಿಕೊಳ್ಳುತ್ತದೆ. ಅದರಲ್ಲಿಯೂ ಶಾಲೆಗೆ ಸೇರಿದ ಮೇಲೆ ಆ ಭಾವನೆ ಹೆಚ್ಚುತ್ತಾ ಹೋಗುವುದು ವಿಪರ್ಯಾಸವೇ ಸರಿ. ಅವರೊಡನೆ ಸೇರಬೇಡ, ಇವರೊಡನೆ ಸೇರಬೇಡ, ನೀನೇ ಚೆನ್ನಾಗಿ ಓದಬೇಕು ನೀನೇ ಮೊದಲು ಬರಬೇಕು, ಮೊದಲ ಸ್ಥಾನದಲ್ಲಿದ್ದರೇ ಮಾತ್ರ ಬೆಲೆ, ಬೇರೆಯವರ ಜೊತೆ ಅದರಲ್ಲಿಯೂ ಕಡಿಮೆ ಅಂಕ ತೆಗೆದವರ ಜೊತೆಗೆ ಸೇರಬೇಡ ಎಂದು ಆ ಮಗುವಿನ ತಲೆಗೆ ಪೋಷಕರು ಮತ್ತು ಶಿಕ್ಷಕರು ಪೈಪೋಟಿಗೆ ಬಿದ್ದಂತೆ ಏನೇನೋ ತುಂಬುತ್ತಾರೆ. ಎಲ್ಲವನ್ನೂ ಎಲ್ಲರನ್ನೂ ಪ್ರೀತಿಸಬೇಕೆಂದು ಬಯಸಿದ್ದ ಆ ಮಗು ಕಾಲಕ್ರಮೇಣ ಪೈಪೋಟಿಗೆ ಇಳಿಯುತ್ತದೆ. ನಾನು ನನ್ನ ಅಂಕಗಳು, ನನ್ನ ಓದು, ನನ್ನ ಕಲಿಕೆಯೆಂದು ಬೆಳೆದು ಮುಂದೊಂದು ದಿನ ತನ್ನ ತಂದೆ ತಾಯಿಯನ್ನು ಕೂಡ ನನ್ನವರು ಎಂದು ತಿಳಿಯದೇ ನಾನು ಎಂದರೇ ಕೇವಲ ನಾನೂ ಎಂದು ನಂಬಿ, ವೃದ್ಧಾಶ್ರಮಕ್ಕೆ ಬಿಡುತ್ತದೆ.
ಇಷ್ಟೊಂದು ಪೀಠಿಕೆ ಏಕೆನ್ನುವುದನ್ನು ಈಗ ವಿವರಿಸುತ್ತೇನೆ. ನಾನು ನನ್ನೂರು ಬಾನುಗೊಂದಿ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಮ್ಮಿಳನ ಕಾರ್ಯಕ್ರಮವನ್ನು 19ನೇ ತಾರೀಖು ಮಾರ್ಚಿ 2016ರಲ್ಲಿ ಆಯೋಜಿಸಿದ್ದೆ. ಆಯೋಜಿಸಿದ್ದೆ ಎಂದು ಏಕೆ ಹೇಳುತ್ತೇನೆಂದರೆ ಅದರ ಸಂಪೂರ್ಣ ರೂಪು ರೇಷೆಯನ್ನು ಸಿದ್ಧಪಡಿಸಿದ್ದು ನಾನು. ಕಾರ್ಯಕ್ರಮಕ್ಕೆ ಊರಿನ ಎಲ್ಲಾ ಹಳೆಯ ವಿದ್ಯಾರ್ಥಿಗಳು ಸಹಕರಿಸಿದರು, ಓಡಾಡಿದರು ಸಂತೋಷಪಟ್ಟರು. ಅವರೆಲ್ಲರಿಗೂ ನಾನು ಋಣಿಯಾಗಿದ್ದೇನೆ. ಅವರಿಲ್ಲದೇ ಇದ್ದಿದ್ದರೆ ಈ ಕಾರ್ಯಕ್ರಮವೇ ನಡೆಯುತ್ತಿರಲಿಲ್ಲ, ನಡೆದರೂ ಅಷ್ಟೊಂದು ಸುಂದರವಾಗಿರುತ್ತಿಲ್ಲ.
ಕಾರ್ಯಕ್ರಮ ಆಯೋಜಿಸಿದ ಮೂಲ ಉದ್ದೇಶವನ್ನು ತಿಳಿಸುತ್ತೇನೆ.
ಮೊದಲನೆಯದಾಗಿ, ನನ್ನೆಲ್ಲಾ ಬರಹಗಳನ್ನು ಗಮನಿಸಿದರೇ ನೀವು ಕಾಣುವುದು ಎರಡು ಪ್ರಮುಖ ವಿಷಯಗಳು. ಅದರಲ್ಲಿ ಮೊದಲನೆಯದು, ನನ್ನ ಈ ದಿನದ ಬೆಳವಣಿಗೆಗೆ ಕಾರಣವಾಗಿರುವ ನನ್ನ ಗುರುಗಳು. ಅದೆಷ್ಟು ಗೌರವ ಸಲ್ಲಿಸಿದರೂ ಕಡಿಮೆ, ಅವರುಗಳ ಆ ದಿನದ ಶ್ರಮವಿಲ್ಲದೇ ಇದ್ದಿದ್ದರೇ ನಾನು ಏನಾಗುತ್ತಿದ್ದೆ ಎನ್ನವುದನ್ನು ಊಹಿಸಿಕೊಳ್ಳುವುದ ಕಷ್ಟವಾಗುತ್ತದೆ. ಆದ್ದರಿಂದ ಅವರಿಗೆ ಗೌರವ ಸಲ್ಲಸಲೇಬೇಕೆಂಬುದು ನನ್ನ ಅನೇಕಾ ದಿನದ ಆಸೆಯಾಗಿತ್ತು. ಎಲ್ಲಾ ಗುರುಗಳಿಗೂ ನಾನು ನೇರವಾಗಿ ಗೌರವ ಸ್ಮರಣೆ ಮಾಡಿದ್ದೆ ಆದರೆ ಸಾರ್ವಜನಿಕವಾಗಿಯೂ ಮಾಡಬೇಕೆಂಬುದು ಕಾಡುತ್ತಿತ್ತು. ಅದರ ಜೊತಗೆ ನನ್ನ ಬಾಲ್ಯದ ದಿನಗಳು, ಶಾಲಾ ದಿನಗಳು, ಅದನ್ನು ಮೆಲುಕು ಹಾಕಬೇಕೆನಿಸುತ್ತಿತ್ತು, ಎಲ್ಲರೊಟ್ಟಿಗೆ ಮತ್ತೊಮ್ಮ ಸೇರಬೇಕೆನಿಸುತ್ತಿತ್ತು. ಏಕೆಂದರೆ, ನನ್ನ ಹೈಸ್ಕೂಲು, ಪಿಯುಸಿ ಎಲ್ಲಾ ಸ್ನೇಹಿತರೊಡನೆ ಸೇರಿ ಈ ರೀತಿಯ ಸಮ್ಮಿಳನಗಳು ನಡೆದಿದ್ದವು, ಆದರೆ ಪ್ರೈಮರಿ ಶಾಲೆಯ ಸ್ನೇಹಿತರೊಟ್ಟಿಗೆ ಸೇರಿರಲಿಲ್ಲ.
ಎರಡನೆಯದಾಗಿ, ಎಲ್ಲಾ ಊರಿನಲ್ಲಿ ಇರುವಂತೆಯೇ ನಮ್ಮೂರಿನಲ್ಲಿಯೂ ಬೇಕಿಲ್ಲದೆ ಇರುವ ವಿಷಯಕ್ಕೆಲ್ಲಾ ರಾಜಕೀಯ ಬೆರೆಸುತ್ತಾ ಒಗ್ಗಟ್ಟಾಗಿರಬೇಕಿದ್ದ ಊರು ರಾಜಕೀಯದ ಗೊಂದಲಗೂಡಾಗಿದೆ. ಅದನ್ನು ಮೀರಿ ಊರೆಲ್ಲಾ ಒಪ್ಪುವ, ಮೆಚ್ಚುವ ಒಂದು ಕಾರ್ಯಕ್ರಮ ಬೇಕಿತ್ತು.
ಮೂರನೆಯದಾಗಿ, ಊರಿಂದ ಹೊರಗೆ ಹೋಗಿ ದುಡಿಯುತ್ತಿರುವವರು ಊರಿನವರನ್ನು ಹಣ ಕೇಳದೆ ಅದರಲ್ಲಿಯೂ ಒಂದೇ ಒಂದು ರೂಪಾಯಿ ಕೂಡ ದುರುಪಯೋಗವಾಗದಂತೆ ಕಾರ್ಯಕ್ರಮ ನಡೆಸಿ ಪಾರದರ್ಶತೆಯಿಂದ ಇದು ಮಾದರಿ ಕಾರ್ಯಕ್ರಮವೆಂದು ತೋರಿಸುವ ಅವಶ್ಯಕತೆಯಿತ್ತು. ಒಂದು ಸಣ್ಣ ಕಬ್ಬಡ್ಡಿ ಅಥವಾ ಕ್ರಿಕೇಟ್ ಟೂರ್ನಮೆಂಟ್ ಮಾಡಿದರೂ ಸಾಕು ಅದರಲ್ಲಿಯೂ ಹಣ ಹೊಡೆದು ತಿಂದು ಕುಡಿಯುವುದು ಸರ್ವೇ ಸಾಮಾನ್ಯವಾಗಿದೆ.
ನಾಲ್ಕನೆಯದಾಗಿ, ನಾನು ಈ ಕಾರ್ಯಕ್ರಮವನ್ನು ನಡೆಸಿದ ಮೇಲೆ ಇದರಿಂದ ಬೇರೆ ಯುವ ಜನತೆ ಪ್ರೇರಣೆಗೊಂಡು ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಹೋಗುತ್ತಾರೆಂಬ ವಿಶ್ವಾಸವಿತ್ತು. ಯುವಕರ ತಲೆಗೆ ಈ ರೀತಿಯ ಆಲೋಚನೆಗಳು ಬಂದರೆ ಊರಿನ ಅಬಿವೃದ್ಧಿಯಾಗುವುದೆಂಬ ಹೆಬ್ಬಯಕೆ ನನ್ನದಾಗಿತ್ತು.
ಐದನೆಯದಾಗಿ, ಕಾರ್ಯಕ್ರಮಕ್ಕೆ ಬರುವ ಹಳೆ ವಿದ್ಯಾರ್ಥಿಗಳು ಹಾಳಾಗುತ್ತಿರುವ ಶಾಲೆಯತ್ತ ಗಮನ ನೀಡಿ ಉದ್ದಾರ ಮಾಡುತ್ತಾರೆಂಬ ಅತಿಯಾದ ವಿಶ್ವಾಸವೂ ತುಂಬಿತ್ತು. ಆದರೇ ಆಗಿದ್ದೇನು?
ಇಲ್ಲಿ ಯಾರ ಹೆಸರನ್ನು ಪ್ರಸ್ತಾಪಿಸುವುದಿಲ್ಲ. ಕಾರಣ ಅವರ ಮೇಲೆ ಭಯ ಅಂತಾ ಆಗಲಿ ಅಂಜಿಕೆಯಾಗಲಿ ಇಲ್ಲ, ಇದು ಎಲ್ಲ ಊರಿನಲ್ಲಿಯೂ ಇರುವಂತದ್ದೆ, ಆದ್ದರಿಂದ ಹೆಸರನ್ನು ಪ್ರಸ್ತಾಪಿಸದಿದ್ದರೂ ಕೆಲವರಿಗೆ ತಿಳಿಯುತ್ತದೆ ಮತ್ತು ನಿಮಗು ಇಂತಹ ಅನುಭವಗಳು ಆಗಿರುತ್ತವೆ ಎಂದು ಮುಂದುವರೆಸುತ್ತೇನೆ. ಇಲ್ಲಿನ ವಸ್ಥುಸ್ಥಿತಿ ಕೇವಲ ಒಂದು ಊರಿಗೆ ಸೀಮಿತವಾಗಿಲ್ಲ, ಬಹುತೇಕ ಎಲ್ಲಾ ಹಳ್ಳಿಗಳಲ್ಲಿಯೂ ಇದೆ. ಇದಕ್ಕೆ ಮೂಲ ಕಾರಣ, ನಾನು ಆಗ್ಗಾಗ್ಗೆ ಪ್ರಸ್ತಾಪಿಸುವ ಗುಣಮಟ್ಟದ ಶಿಕ್ಷಣ ಮತ್ತು ಬೌದ್ಧಿಕ ಸಾಮರ್ಥ್ಯ ಮುಖ್ಯವಾಗುತ್ತದೆ ಎಂದರೂ ತಪ್ಪಿಲ್ಲ. ಅಕ್ಷರ ಕಲಿತವರೆಲ್ಲಾ ವಿದ್ಯಾವಂತರು/ಗುಣವಂತರು / ಬುದ್ದಿವಂತರು ಎನ್ನುವುದು ಮೂರ್ಖತನವೆನ್ನುವುದು ನನ್ನ ನಂಬಿಕೆ. ಕೇವಲ ಹಣವಿದ್ದ ಮಾತ್ರಕ್ಕೆ ಸಿರಿವಂತನಾಗುವುದಿಲ್ಲ, ಅದರಂತೆಯೇ ಓದಿದ ತಕ್ಷಣ, ಪದವಿ ತೆಗೆದುಕೊಂಡ ತಕ್ಷಣ, ಹೆಚ್ಚು ಸಂಬಳ ಬರುವ ಕೆಲಸಕ್ಕೆ ಸೇರಿದ ತಕ್ಷಣ ಅವನು ವಿದ್ಯಾವಂತನಾಗುವುದಿಲ್ಲ ಅಥವಾ ಉತ್ತಮ ವ್ಯಕ್ತಿಯಾಗುವುದಿಲ್ಲ. ವಿದ್ಯಾವಂತ ಎನ್ನುವುದಕ್ಕೆ ಕೆಲವು ಮಾನಕಗಳು, ಮಾನದಂಡಗಳು ಇರಬೇಕು. ಒಬ್ಬ ಸುಶಿಕ್ಷಿತ ಎನಿಸಿಕೊಂಡವನಿಗು ಅಶಿಕ್ಷಿತನಿಗೂ ವ್ಯತ್ಯಾಸ ಗೊತ್ತಾಗುವಂತೆ ಬದುಕಬೇಕು, ನಡುವಳಿಕೆಯಲ್ಲಿ, ಮಾನವಿಯ ಮೌಲ್ಯಗಳಲ್ಲಿ ಅದು ಕಾಣಬೇಕು.
ನೇರ ವಿಷಯಕ್ಕೆ ಬರೋಣ. ಕಾರ್ಯಕ್ರಮವನ್ನು ಆಯೋಜಿಸುವ ಆಲೋಚನೆ ಬಂದಾಗ ನಾನು ಕೆಲವು ಸ್ನೇಹಿತರನ್ನು ಹಿರಿಯರನ್ನು ಮತ್ತು ಕಿರಿಯರನ್ನು ಮಾತನಾಡಿಸಿದೆ. ಎಲ್ಲರೂ ಸಂತೋಷಪಟ್ಟರು. ಆ ಸಮಯದಲ್ಲಿ ನಾನು ನನ್ನೂರು ಬಾನುಗೊಂದಿಯ ಅನೇಕ ವಿಷಯಗಳನ್ನು ಕೇಳಿ ನಿಬ್ಬೆರಗಾದೆ. ನನ್ನ ಮನೆ ಊರಿನಿಂದ ಹೊರಗಿದೆ, ಹಾಗಾಗಿ, ನಾನು ಬಾನುಗೊಂದಿಯಲ್ಲಿದ್ದರೆ, ನನ್ನ ಮನೆ, ನನ್ನ ತೋಟ, ಕಾವೇರಿ ನದಿ ದಂಡೆ, ನದಿಗೆ ಅಡ್ಡವಾಗಿರುವ ಕಟ್ಟೇಪುರ ಕಟ್ಟೆ, ಇದು ನನ್ನ ಪ್ರಪಂಚ. ಊರಿನ ಜನರೊಂದಿಗೆ ಅತಿಯಾದ ಸಂಪರ್ಕವಿರಲಿಲ್ಲ. ಸಿಕ್ಕಿದವರನ್ನು ಮಾತನಾಡಿಸುವುದು, ಕುಶಲೋಪರಿಗೆ ಮಾತ್ರ ಸೀಮಿತವಾಗಿತ್ತು. ಅದರ ಜೊತಗೆ, ಈ ಕಾರ್ಯಕ್ರಮದ ಮೂಲ ಉದ್ದೇಶ, ನಾನು ದೂರದಿಂದ ಊರಿನಲ್ಲಿರುವ ಹಿರಿಯ ವಿದ್ಯಾರ್ಥಿಗಳಿಗೆ ಸಪೋರ್ಟ್ ಮಾಡುವುದು ಮತ್ತು ಅವರೆಲ್ಲರೂ ಮುಂದಾಳತ್ವ ತೆಗೆದುಕೊಂಡು ಕಾರ್ಯಕ್ರಮ ನಡೆಸುಬೇಕೆಂಬುದಾಗಿತ್ತು. ನಾನು ಹುಡುಗರ ಹತ್ತಿರ ಮತ್ತು ಊರಿನ ಕೆಲವರ ಹತ್ತಿರ ಮಾತನಾಡುತ್ತಾ ಹೋದಂತೆ ವಿಷಯಗಳು ಹೊರಬಂದವು. ಅದರಲ್ಲಿ ಕೆಲವರ ಗುಂಪು, ಕ್ರಿಕೇಟ್ ಟೂರ್ನಿ ಇಡಿಸುವುದು, ಕಬ್ಬಡ್ಡಿ ಆಟ ನಡೆಸುವುದು, ಹಣ ವಸೂಲಿ ಮಾಡುವುದು ಅದರಲ್ಲಿ ರಾತ್ರಿ ಕುಡಿದು ಮಜಾ ಮಾಡುವುದು. ಇವರ್ಯಾರು ಅನಕ್ಷರಸ್ಥರಲ್ಲ, ಚೆನ್ನಾಗಿಯೇ ಓದಿರುವವರು, ಸುವiರಾಗಿ ದುಡಿಯುತ್ತಿರುವವರು, ಕಂಡವರ ಕಾಸಿನಲ್ಲಿ ಕುಡಿದು ಮಜಾ ಉಡಾಯಿಸುವ ಪದ್ದತಿಯನ್ನು ರೂಢಿಸಿಕೊಂಡಿದ್ದರು ಮತ್ತು ಅದರಲ್ಲಿ ಅವರ್ಯಾರಿಗೂ ಅಂಜಿಕೆಯಿಲ್ಲದೆ ಹೆಮ್ಮೆಯಿಂದ ಹೇಳಿಕೊಂಡು ಬೀಗುತ್ತಿದ್ದರು ಎಂದು ತಿಳಿಯಿತು. ಸಂಜೆಯಾದರೇ ಯಾರಾದರೂ ಬಕ್ರಾ ಸಿಕ್ಕರೇ ಸಾಕು ಅವನ ತಲೆಯ ಮೇಲೆ ಕಲ್ಲಿಡಲು ಕಾಯುವ ಮಟ್ಟಕ್ಕೆ ಬಂದಿದ್ದರು ಎಂದು ಕೇಳಿದಾಗ ಅಚ್ಚರಿಯಾಯಿತು.
ಇದರ ಜೊತೆಗೆ ಕೆಲವರು ಎಚ್ಚರ ನೀಡಿದರು. ಹಣಕಾಸಿನ ವ್ಯವಹಾರವನ್ನು ಯಾರಿಗೂ ನೀಡಬೇಡಿ, ನೀವೇ ಇಟ್ಟುಕೊಳ್ಳಿ. ಇಲ್ಲಾ ನಾನು ಇಟ್ಟುಕೊಂಡರೆ ಇವರೆಲ್ಲಾ ಬೆಳೆಯುವುದು ಯಾವಾಗ ವ್ಯವಹಾರ ಮಾಡುವುದು ಯಾವಾಗ ಅದಲ್ಲದೇ ನಾನು ಬಿಡುವಿಲ್ಲ, ನನ್ನದೇ ಕೆಲಸದ ಒತ್ತಡಗಳಿರುತ್ತವೆ. ಒಂದು ಸಲ ನೋಡೋಣ ಇದು ಶಾಲೆಯ ಕೆಲಸ ಇಲ್ಲಿ ಮೋಸ ಮಾಡುವುದಿಲ್ಲವೆನಿಸುತ್ತದೆ ಎಂದೆ. ಅದಕ್ಕೆ ಅವರು ಹೇಳಿದರು, ಅವರು ಗಣಪತಿ ಇಡುವುದಕ್ಕೆ ಸಂಗ್ರಹಿಸಿದ ಹಣವನ್ನೇ ಕುಡಿದು ಉಡಾಯಿಸುತ್ತಾರೆ, ದೇವರ ದುಡ್ಡೇ ಲೆಕ್ಕವಿಲ್ಲ ಇನ್ನೂ ಈ ದುಡ್ಡು ಉಳಿಯುತ್ತದೆಯೇ? ಎಂದು ಕೆಲವು ಉದಾಹರಣೆಗಳನ್ನು ತಿಳಿಸಿದರು. ಅದನ್ನು ಕೇಳಿದ ಮೇಲೆ ನನಗೂ ಸತ್ಯವೆನಿಸಿತು. ಆದ್ದರಿಂದ, ನಾವು ನಡೆಸಬೇಕಿದ್ದ ಮೀಟಿಂಗ್‍ಗೆ ನಾನು ಬಹಳ ಸಿದ್ದನಾಗಿ ಹೋಗಿದ್ದೆ. ಮತ್ತು ಬಹಳ ದೃಢವಾಗಿ ಹೇಳಿದೆ, ಹಣಕಾಸಿನ ಸಂಪೂರ್ಣ ಜವಬ್ದಾರಿ ನನ್ನದು ಮತ್ತು ಪ್ರತಿಯೊಂದು ಪೈಸೆಗೂ ನಾನು ಲೆಕ್ಕ ಕೊಡುತ್ತೇನೆ. ಈ ಕಾರ್ಯಕ್ರಮಕ್ಕೆ ಓಡಾಡುವ ಯಾವುದೇ ಖರ್ಚಿಗೂ ಸಾರ್ವಜನಿಕರ ಹಣವನ್ನು ಬಳಸುವಂತಿಲ್ಲ. ನಾನೂ ಕೂಡ ಬಳಸುವುದಿಲ್ಲ, ಉದಾಹರಣೆಗೆ, ಕಾರ್ಯಕ್ರಮದ ಹಣ ಸಂಗ್ರಹಕ್ಕಾಗಿ ಬೇರೆ ಊರಿಗೆ ಹೋಗುವುದಕ್ಕೆ, ಬಸ್ ಚಾರ್ಜ್‍ಗೆ, ಪೆಟ್ರೋಲ್, ಊಟ ತಿಂಡಿ ಇತರೆಗಾಗಿ ಬಳಸುವಂತಿಲ್ಲ. ಬಹಳ ಕಾರ್ಯಕ್ರಮಗಳಲ್ಲಿ ಚಂದಾ ಎತ್ತುವಾಗ ಇದು ಸರ್ವೇ ಸಾಮಾನ್ಯ. ದೇವಸ್ಥಾನ ಕಟ್ಟಿಸಲು, ಗಣಪತಿ ಇಡುವುದಕ್ಕೆ, ಯಾವುದೋ ಸ್ಪರ್ಧೆಗೆ, ಚಂದಾ ಎತ್ತಿದ ಹಣದಲ್ಲಿಯೇ ಇವರುಗಳ ಊಟ, ಖರ್ಚು ವೆಚ್ಚಗಳನ್ನು ತುಂಬಿಸಿಕೊಳ್ಳುತ್ತಾರೆ. ಹಾಗೆಯೇ ಗಮನಿಸಿ, ಬಾನುಗೊಂದಿಯಿಂದ ಬೆಂಗಳೂರಿಗೆ ಬಂದು 5 ಸಾವಿರ ಚಂದಾ ಎತ್ತುವುದಕ್ಕೆ ಮೂರು ನಾಲ್ಕು ಜನ ಬರುವುದು, ಒಬ್ಬರಿಗೆ ಬಸ್ ಚಾರ್ಜ್ 500ರೂಪಾಯಿ, ಊಟ ತಿಂಡಿ ಖರ್ಚು? ಅವರು ಎತ್ತುವ 5 ಸಾವಿರದಲ್ಲಿ ನಾಲ್ಕು ಸಾವಿರ ಇವರ ಓಡಾಟಕ್ಕೆ ಆಗಿರುತ್ತದೆ. ಆದ್ದರಿಂದ ಈ ಕಾರ್ಯಕ್ರಮದಲ್ಲಿ ಅಂತಹ ಅನವಶ್ಯಕ ಖರ್ಚುಗಳಿಗೆ ಅವಕಾಶ ನೀಡಲಿಲ್ಲ. ನಾನು ಯಾವಾಗ ಓಡಾಡುವುದಕ್ಕೆ ಹಣ ಉಪಯೋಗಿಸುವಂತಿಲ್ಲವೆಂದು ತಿಳಿಸಿದೆ, ಹಣದ ಮೇಲಿನ ಆಸೆಗಾಗಿ ಮೀಟಿಂಗ್‍ಗೆ ಬಂದ ಕೆಲವರು ಹಿಂದುಳಿದರು. ಒಂದಿಬ್ಬರು ಕೇಳಿದರು, ಸ್ವಂತ ಹಣ ಹಾಕಿಕೊಂಡು ಯಾರು ಓಡಾಡುತ್ತಾರೆಂದು. ನಾನು ಓಡಾಡುತ್ತೇನೆ, ನನ್ನ ಸ್ವಂತ ಖರ್ಚಿನಲ್ಲಿ, ಇಷ್ಟವಿರುವವರು ಬನ್ನಿ ಇಲ್ಲದೇ ಇದ್ದರೆ ಓಡಾಡಬೇಡಿ, ನಿಮಗೆ ಹೇಗೆ ಸಹಾಯ ಮಾಡಬಹುದೋ ಹಾಗೆ ಮಾಡಿ ಎಂದೆ. ನನ್ನ ಮಾತಿಗೆ ಅನೇಕ ಕಿರಿಯ ಸ್ನೇಹಿತರು ಹೌದೌದು ನಾವು ಓಡಾಡುತ್ತೇವೆಂದರು.
ನಾನು ಗಮನಿಸಿದ ಹಾಗೆ ಕನಿಷ್ಟ 15-20 ಹುಡುಗರು ಬಹಳ ಒಳ್ಳೆಯವರು. ಊರಿನ ಬಗ್ಗೆ ಬಹಳ ಕಾಳಜಿಯಿದೆ. ಬೇರೆಯವರ ದುಡ್ಡಿನಲ್ಲಿ ಮಜ ಮಾಡಬೇಕೆಂಬುದಿಲ್ಲ. ಶ್ರಮಜೀವಿಗಳು. ಅವರಿಗೆ ನಾನು ಹೇಳಿದ ಮಾತುಗಳು ಹಿಡಿಸಿದೆವು ಮತ್ತು ನನ್ನ ಮೇಲೂ ನಂಬಿಕೆ ಬಂತು. ಇವರೆಲ್ಲಾ ನನಗಿಂತ ಕನಿಷ್ಟ 5-10 ವರ್ಷ ಚಿಕ್ಕವರು. ಅವರ ಮೇಲೆ ಪ್ರೀತಿ ಮತ್ತು ವಿಶ್ವಾಸ ಒಟ್ಟಿಗೆ ಮೂಡಿತು. ಮೀಟಿಂಗ್ ಆದ ನಂತರದ ದಿನಗಳಲ್ಲಿ ನಾನು ಬೆಂಗಳೂರು, ಮೈಸೂರು, ಹಾಸನ ಎಂದು ಎಲ್ಲಾ ಕಡೆಗೂ ಸುತ್ತಾಡಿದೆ. ಕಿರಿಯ ಸ್ನೇಹಿತರು ಮೈಸೂರು, ಹಾಸನ, ಬೆಂಗಳೂರು ಮತ್ತು ಬೇರೆ ಬೇರೆ ಊರಿನಲ್ಲಿರುವ ಅನೇಕರಿಗೆ ಕರೆ ಮಾಡಿದರು, ಕೆಲವರು ಖುದ್ದಾಗಿ ತಾವೇ ಹೋಗಿ ಬಂದರು. ಇದೆಲ್ಲವೂ ನಡೆಯುವಾಗ ನನ್ನ ತಲೆಯಲ್ಲಿ ಓಡಿದ ಪ್ರಶ್ನೆಗಳೆಂದರೆ, ಯುವ ಶಕ್ತಿ ಉತ್ತಮ ಕೆಲಸಕ್ಕೆ ಸಿದ್ಧವಿರುತ್ತದೆ ಅದನ್ನು ಉಪಯೋಗಿಸಿಕೊಳ್ಳಬೇಕು ಮತ್ತು ಚೈತನ್ಯ ತುಂಬಬೇಕು. ನಮ್ಮಲ್ಲಿ ಪ್ರತಿಯೊಂದನ್ನು ಬಲವಂತದಿಂದ ಹೇಳಿಯೇ ಮಾಡಿಸಬೇಕು. ನಿಮಗೆ ತಮಾಷೆಯೆನಿಸಿದರೂ ಅದು ವಾಸ್ತವ. ಈ ಉದಾಹರಣೆಯನ್ನು ಗಮನಿಸಿ, ಮಗುವಿಗೆ ಊಟ ಮಾಡಿಸುವುದು ಬಲವಂತದಿಂದ, ನಿದ್ದೆ ಮಾಡಿಸುವುದು ಬಲವಂತದಿಂದ, ಶಾಲೆಗೆ ಕಳುಹಿಸುವುದು, ಓದಿಸುವುದು, ಬರೆಯುವದು, ಅಷ್ಟೆಲ್ಲಾ ಏಕೆ, ಕೆಲಸಕ್ಕೆ ಅರ್ಜಿ ಹಾಕಿಸುವುದು, ಕೊನೆಗೆ ಮದುವೆ ಆಗು ಅಂತ ಹೇಳುವುದು, ಹೇಳುವುದೇನು ಮದುವೆ ಮಾಡಿಸುವುದು ಬಲವಂತದಿಂದ. ಇದು ಅಲ್ಲಿಗೇ ನಿಲ್ಲುವುದಿಲ್ಲ, ಮದುವೆಯಾದ ಮೇಲೆ ಬೇಗ ಮಗು ಮಾಡಿಕೋ ಅಂತಾ ಒತ್ತಾಯ ಮಾಡಬೇಕು. ನೈಸರ್ಗಿಕ ಕ್ರಿಯೆಗಳನ್ನೇ ಬಲವಂತವಾಗಿ ಮಾಡಿಸಬೇಕಾದರೇ ಇನ್ನೂ ಈ ರೀತಿಯ ಸಮಾಜಮುಖಿ ಕಾರ್ಯಗಳನ್ನು ಹಾಗೇಯೇ ಮಾಡಿಸುವುದಕ್ಕೆ ಆಗುತ್ತದೆಯೇ? ನನ್ನ ಮೂಲ ಉದ್ದೇಶ ಮನುಷ್ಯ ಸ್ವಂತ ಆಸೆಯಿಂದ ಸ್ಪೂರ್ತಿಯಿಂದ ಕಲಿಯಬೇಕು, ಬಾಳಬೇಕು, ಬದುಕಬೇಕು. ಸದಾ ಯಾರಾದರು ನನಗೆ ಹೇಳಲಿ ಸ್ಪೂರ್ತಿ ಅಥವಾ ನಾಯಕತ್ವ ತೋರಿಸಲಿ ಎಂದು ಕಾಯಬಾರದು, ಹಾಗೆ ಆಲೋಚನಾ ಶಕ್ತಿಯನ್ನು ತುಂಬಬೇಕು. ಆದರೆ ಬಹುತೇಕರು, ಸದಾ ನಾಯಕನನ್ನು ಹುಡುಕುತ್ತಿರುತ್ತಾರೆ, ಯಾರಾದರೂ ಮುಂದಾಳತ್ವ ವಹಿಸಲಿ ಎಂದು ಕಾಯುತ್ತಿರುತ್ತಾರೆ. ಉತ್ತಮ ನಾಯಕ ಸಿಗದೇ ಇದ್ದಾಗ ಸಿಕ್ಕ ಯಾವನೋ ಅಯೋಗ್ಯ ರಾಜಕಾರಣಿಯನ್ನೇ ನಾಯಕನೆಂದು ನಂಬುತ್ತಾರೆ ಮತ್ತು ಆರಾಧಿಸುತ್ತಾರೆ ಆ ಬಲೆಯಿಂದ ಬರಲಾರದೇ ಅವನನ್ನೇ ನಂಬಿ ಕೊಳೆಯುತ್ತಾರೆ.
ಆದರಿಲ್ಲಿ, ನಾಯಕತ್ವವನ್ನು ಹುಟ್ಟಿಹಾಕುವುದು ಸುಲಭದ ಮಾತಾಗಿರಲಿಲ್ಲ. ಅವರೆಲ್ಲರೂ ದುಡಿಯುವುದಕ್ಕೆ ಸಿದ್ದರಿದ್ದರು, ಆದರೇ ನಾಯಕತ್ವವನ್ನು ವಹಿಸಲು ಹಿಂದೇಟು ಹಾಕುತ್ತಿದ್ದರು. ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದಕ್ಕೆ ಹಗಲು ರಾತ್ರಿ ದುಡಿದರು. ಕಾರ್ಯಕ್ರಮದ ಹಿಂದಿನ ರಾತ್ರಿ ಸುಮಾರು 2 ಗಂಟೆಯ ತನಕ ಕೆಲಸ ಮಾಡಿದರು. ಊಟಕ್ಕೆ ಬಾಳೆ ಎಲೆ, ತೋರಣ ಎಲ್ಲವನ್ನು ಸಿದ್ದಪಡಿಸಿದರು. ಶಾಲಾವರಣ ಸ್ವಚ್ಛಗೊಳಿಸಿದರು, ಊರು ಸುತ್ತಾ ಮನೆ ಮನೆಗೆ ಹೋಗಿ ಆಹ್ವಾನಿಸಿದರು. ಊರಲ್ಲಿ ಹಬ್ಬದ ವಾತಾವರಣ ಮೂಡಿಸಿದರು. ಎಲ್ಲವೂ ನಾವಂದುಕೊಂಡದ್ದಕ್ಕಿಂತ ಚೆನ್ನಾಗಿಯೇ ನಡೆಯಿತು. ಅಲ್ಲಿಯೂ ಒಂದೆರಡು ಕೆಟ್ಟ ಹುಳಗಳು ಕಾರ್ಯಕ್ರಮವನ್ನು ಹಾಳು ಮಾಡಲು ಯತ್ನಿಸಿದವು. ಆದರೆ, ಒಳ್ಳೆತನದ ಮುಂದೆ ಕೆಟ್ಟದ್ದು ಯಾವತ್ತೂ ನಿಲ್ಲುವುದಿಲ್ಲ ಮತ್ತು ಗೆಲ್ಲುವುದಿಲ್ಲ ಎನ್ನುವುದು ಸಾಬೀತಾಯಿತು. ಆ ಸಮಯದಲ್ಲಿ ನನಗೆ ಊರಿನ ಜನರ ಒಳ್ಳೆತನ ಮತ್ತು ಉದಾರತನ ಕಾಣತೊಡಗಿತು. ಅವರು ಸಮಧಾನ ಮಾಡುವ ರೀತಿ ಅವರ ಬಗ್ಗೆ ಹೆಮ್ಮೆ ಎನಿಸಿತು. ಬಿಡು ಹರೀ, ನಾಯಿ ಬೊಗಳಿದರೇ ದೇವಲೋಕ ಹಾಳಾಗುತ್ತಾ? ಒಳ್ಳೆಯ ಕೆಲಸ ಮಾಡುತ್ತಿದ್ದೀಯಾ, ಮುಂದುವರೆಸು ಎಂದು ಹುರಿದುಂಬಿಸಿದರು. ಅವುಗಳು ಯಾವತ್ತಿಗೂ ಹಾಗೇಯೇ ಎಂದರು. ಮುಂಜಾನೆಯಿಂದಲೇ ಹಬ್ಬದ ವಾತಾವರಣವಿದ್ದ ಊರು, ಸಂಜೆಯಾಗುತ್ತಲೇ ಮಿನಿ ದಸರಾದಂತೆ ಕಂಗೊಳಿಸಿತು. ಬೆಂಗಳೂರಿನಿಂದ ಅಲಂಕಾರದ ಹೂವುಗಳನ್ನು ತಂದು ಸಿಂಗರಿಸಿದರು. ಎಲ್ಲಾ ಕಡೆಯಂತೆಯೇ ನಮ್ಮೂರಿನಲ್ಲಿಯೂ ಒಂದಿಬ್ಬರು ಕುಡಿದು ಅವರವರೇ ಹೊಡೆದಾಡಿಕೊಂಡರು. ಅದೆಲ್ಲವು ಇರಲೇಬೇಕಲ್ಲವೇ?
ಸರಿ, ಕಾರ್ಯಕ್ರಮದ ವೀಕ್ಷಕ ವಿವರಣೆಯ ಅಗತ್ಯತೆ ಇಲ್ಲ. ಸಂಕ್ಷಿಪ್ತವಾಗಿ ಮುಗಿಸುತ್ತೇನೆ. ಸುಮಾರು 1500 ಕ್ಕೂ ಹೆಚ್ಚು ಜನರು ಸೇರಿದ್ದರು. ಶ್ರೀಯುತ ಚನ್ನೇಗೌಡರು, ನಿವೃತ್ತ ಎಕ್ಷಿಕ್ಯೂಟಿವ್ ಇಂಜಿನಿಯರ್, ನಮ್ಮೂರಿನ ಮೊದಲ ವಿದ್ಯಾವಂತ, ಸುಸಂಸ್ಕøತ ಮಹಾನ್ ಚೇತನ, ಅವರಿಗೆ ಸನ್ಮಾನ ಮಾಡಿದೆವು. ಶಾಲೆಯಲ್ಲಿ ಓದಿದ ಬಹುತೇಕ ಎಲ್ಲಾ ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಯಾವುದೇ ರಾಜಕೀಯ ವ್ಯಕ್ತಿಗಳಿಗೆ ವೇದಿಕೆಗೆ ಪ್ರವೇಶವಿಲ್ಲವೆಂದು ಆಹ್ವಾನಪತ್ರಿಕೆಯಲ್ಲಿಯೇ ಮುದ್ರಿಸಲಾಗಿತ್ತು. ಅದರಂತೆಯೇ ಊರಿನ ರಾಜಕೀಯ ವ್ಯಕ್ತಿಗಳು ಸೇರಿ ಯಾರನ್ನು ವೇದಿಕೆಯ ಮೇಲೆ ಕೂರುವುದಕ್ಕೆ ಅವಕಾಶ ಕಲ್ಪಿಸಿಕೊಡಲಿಲ್ಲ. ಎಲ್ಲರೂ ಇದನ್ನು ಪಕ್ಷಬೇಧ ಮರೆತು ಒಪ್ಪಿಕೊಂಡರು. ಊರಿನ ಎಲ್ಲಾ ಗಣ್ಯ ವ್ಯಕ್ತಿಗಳು ಮೊದಲ ಸಾಲಿನಲ್ಲಿ ಕುಳಿತು ಸಹಕರಿಸಿದರು. ಇಲ್ಲಿಯ ತನಕ ಸೇವೆ ಸಲ್ಲಿಸಿದ್ದ ಎಲ್ಲಾ ಶಿಕ್ಷಕರಿಗೂ ಸನ್ಮಾನಿಸಿದೆವು. ಬಿಇಓ ಸೇರಿದಂತೆ ಶಿಕ್ಷಣ ಇಲಾಖೆಯ ಪ್ರಮುಖರೆಲ್ಲರೂ ಕಾರ್ಯಕ್ರಮ ಮುಗಿಯುವ ತನಕ ಇದ್ದರು. ಊರಿನ ಸಮಸ್ತರಿಗೂ ಒಳ್ಳೆಯ ರುಚಿಕರವಾದ ಬೂಂದಿ ಪಾಯಸದ ಊಟ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮ ಮುಗಿದ ಮಾರನೆಯ ದಿನವೇ ಕಾರ್ಯಕ್ರಮದ ಹಣ ಸಂಗ್ರಹಣೆ, ದಾನಿಗಳ ಹೆಸರು, ಖರ್ಚು-ವೆಚ್ಚಗಳ ವರದಿಯನ್ನು ಮುದ್ರಿಸಿ ಬಿಲ್ ಸಮೇತ ಊರಿನ ಅಂಗಡಿಗಳ ಮುಂದೆ, ಬಸ್ ಸ್ಟಾಂಡ್ ಮುಂಬಾಗದಲ್ಲಿ ಹಾಗೂ ಶಾಲೆಯ ಮುಂಬಾಗದಲ್ಲಿ ಅಂಟಿಸಿದ್ದೇವು. ಅದರ ಜೊತೆಗೆ ದೇಣಿಗೆ ನೀಡಿದ ಪ್ರತಿಯೊಬ್ಬರಿಗೂ ನೇರವಾಗಿ ಮತ್ತು ಪೋಸ್ಟ್ ಮೂಲಕ ಖರ್ಚುವೆಚ್ಚದ ವರದಿಯನ್ನು ಮತ್ತು ಧನ್ಯವಾದಗಳನ್ನು ಅರ್ಪಿಸಿದೆವು. ಎಲ್ಲಾ ದಾನಿಗಳಿಗೂ ಪ್ರಶಸ್ತಿ ಪತ್ರ ನೀಡಿದೆವು. ಇದರೊಂದಿಗೆ ಕಾರ್ಯಕ್ರಮವು ಪಾರದರ್ಶಕತೆಯಿಂದ ಕೂಡಿತ್ತು ಎನ್ನುವುದನ್ನು ತಿಳಿಸಿದೆವು. ಕಾರ್ಯಕ್ರಮಕ್ಕೆ ಪ್ರಮುಖವಾಗಿ ಓಡಾಡಿದ 15 ಜನ ಹಿರಿಯ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದೆವು. ಇಷ್ಟೆಲ್ಲಾ ಕಾರ್ಯಕ್ರಮ ಆಯೋಜಿಸಿದ ನಾನು ಒಂದೇ ಒಂದು ನೆನಪಿನ ಕಾಣಿಕೆಯನ್ನಾಗಲೀ ಅಥವಾ ಪ್ರಶಸ್ತಿ ಪತ್ರವನ್ನಾಗಲಿ ಇಟ್ಟುಕೊಳ್ಳಲಿಲ್ಲ. ಆಶ್ಚರ್ಯವೆಂದರೇ ಒಬ್ಬನೇ ಒಬ್ಬ ಹುಡುಗ ಕೂಡ ಅಣ್ಣಾ ನೀವು ಯಾಕೆ ನೆನಪಿನ ಕಾಣಿಕೆ ತೆಗೆದುಕೊಳ್ಳಲಿಲ್ಲವೆಂದು ಕೇಳಲಿಲ್ಲ. ಉಳಿದಿದ್ದ ಕೆಲವು ನೆನಪಿನ ಕಾಣಿಕೆಗಳು, ಶಾಲು ಮತ್ತು ಹೂವಿನ ಹಾರವನ್ನು ಕೂಡ ಅಂಗಡಿಗೆ ಹಿಂದುರುಗಿಸಲು ಹೇಳಿದೆ. ಆದರೇ, ಹಿಂದುರುಗಿಸಿದ ಹಣ ನನ್ನ ಕೈ ಸೇರಲೇ ಇಲ್ಲ. ಅಡುಗೆಗೆ ತಂದಿದ್ದ ಸಾಮಾನುಗಳನ್ನು ವಾಪಸ್ಸು ನೀಡಿದೆವು. ಅದರ ನಡುವೆ, ದೂರದಿಂದ ಬಂದಿದ್ದ ಒಬ್ಬರು ಟೀಚರ್‍ಗೆ ಉಳಿದಿದ್ದ ಅಕ್ಕಿ ಮತ್ತು ಸ್ವಲ್ಪ ಸಾಮಾನನ್ನು ಯಾರೋ ಕೊಟ್ಟು ಕಳುಹಿಸಿದೆವು ಎಂದರು.
ಕಾರ್ಯಕ್ರಮದ ದಿನ ಬೈಕ್‍ನಲ್ಲಿ ಓಡಾಡುವುದಕ್ಕೆ ಪೆಟ್ರೋಲ್ ಖರ್ಚು ಕೊಡಿ ಎಂದು ಕೆಲವು ಹಿರಿಯ ವಿದ್ಯಾರ್ಥಿಗಳು ಕೇಳಿದರು, ನಾನು ಅಂತವರು ಸ್ವಲ್ಪ ದೂರದಲ್ಲಿಯೇ ಇರಿ ಎಂದೆ. ಆ ಗುಂಪಿನಲ್ಲಿ, ದಿನ ನಿತ್ಯ ಕುಡಿಯುವ ಅನೇಕರಿದ್ದರು, ಅದರಲ್ಲಿಯೂ ಕುಡಿಯುವುದಕ್ಕೆ ಐದಾರು ಮೈಲಿ ದೂರ ಹೋಗಿ ಬರುವವರಿದ್ದರು, ಅದಕ್ಕೆಲ್ಲಾ ಲೆಕ್ಕಿಸದ ಇವರುಗಳು ಊರಿನ ಶಾಲೆಯ ಕಾರ್ಯಕ್ರಮಕ್ಕೆ 10-20 ಕೀಮೀ ಓಡಾಡುವುದಕ್ಕೆ ಪೆಟ್ರೋಲ್ ಖರ್ಚು ಕೇಳಿದ್ದು ಸ್ವಲ್ಪ ಬೇಸರವೆನಿಸಿದರೂ ಅವರು ಇರುವುದೇ ಹಾಗೆನಿಸಿತು. ಜನರು ಬಹುತೇಕ ಎಲ್ಲಾ ಕಡೆಯಲ್ಲಿಯೂ ಹೀಗೆಯೇ ಆಗುತ್ತಿದ್ದಾರೆ ಅದರಲ್ಲಿಯೂ ಹಳ್ಳಿಗಳಲ್ಲಿ. ಎಲ್ಲಿಯಾದರೂ ನಾಲ್ಕು ಕಾಸು ಉಚಿತವಾಗಿ ಸಿಕ್ಕರೇ ಸಾಕೆನ್ನುತ್ತಿದ್ದಾರೆ. ಅದನ್ನು ಅವರು ಒಳ್ಳೆಯದಕ್ಕೆ ಉಪಯೋಗಿಸಿದರೆ ಅಡ್ಡಿಯಿಲ್ಲ, ಆದರೆ ಬಹುತೇಕರು ಕುಡಿಯುವುದಕ್ಕೆ ಇಲ್ಲಾ ಸಿಗರೇಟು, ಬೀಡಿ, ಹನ್ಸ್‍ಗಾಗಿ ವ್ಯರ್ಥ ಮಾಡುತ್ತಾರೆ. ಹೇಗೋ ಅಂತೂ ಕಾರ್ಯಕ್ರಮ ಅದ್ದೂರಿ ಯಶಸ್ವಿಯಾಗಿಯೇ ಮುಗಿಯಿತು.
ಕಾರ್ಯಕ್ರಮ ಮುಗಿದ ಮೇಲೆ ಶುರುವಾಗಿದ್ದು ನಿಜವಾದ ಆಟ. ಕಾರ್ಯಕ್ರಮ ಎಲ್ಲರೂ ಸೇರಿ ಮಾಡಿದ್ದು ಎನ್ನಬೇಕಿದ್ದ ಜನರು ಹರೀಶ ಮಾಡಿಸಿದ್ದು ಎನ್ನುವಂತಾಯಿತು. ನಮ್ಮ ಹುಡುಗರು ಓಡಾಡಿದರೂ ನಾಯಕತ್ವವನ್ನು ತೋರಿಸಿಕೊಳ್ಳಲೇ ಇಲ್ಲ. ಇದೆಲ್ಲವನ್ನು ನಾನು ಕಲಿಸಲಾಗುವುದಿಲ್ಲ. ಆದರೂ ಅನೇಕರಿಗೆ ಹೇಳಿದ್ದೆ, ಹೇಗೆ ನೀವುಗಳು ನಾಯಕರು ಎನ್ನುವುದನ್ನು ತೋರಿಸಬೇಕೆಂದು. ಆದರೇ, ಕಾರ್ಯಕ್ರಮದ ದಿನ ಅವರು ಕೆಲಸಗಳಲ್ಲಿ ತೊಡಗಿದ್ದರು, ಏನೂ ಕೆಲಸ ಮಾಡಿರದ ಕೆಲವರು ಮುಂದಕ್ಕೆ ಬಂದು ನಿಲ್ಲತೊಡಗಿದರು. ಅದು ನನ್ನನ್ನು ಬಹಳ ಕೆರಳಿಸಿತು. ನಾನು ನನ್ನ ತಾಳ್ಮೆ ಕಳೆದುಕೊಂಡು ಒಂದೆರಡು ಬಾರಿ ವೇದಿಕೆಯಲ್ಲಿಯೇ ರೇಗಿದೆ. ಯಾರೋ ಕಷ್ಟಪಡುವುದು ಮತ್ಯಾರೋ ಬಂದು ಓಡಾಡಿ ಹೆಸರು ಗಿಟ್ಟಿಸುವುದು ನನಗೆ ಹಿಡಿಸುವುದಿಲ್ಲ. ಶ್ರಮಿಕನಿಗೆ ಗೌರವ ಸಿಗಬೇಕು. ಕಾರ್ಯಕ್ರಮ ಮುಗಿದ ಮೇಲೆ ಶಾಲಾಭಿವೃದ್ದಿಗಾಗಿ ಶ್ರಮಿಸುವುದಾಗಿ ಮಾತುಕತೆಗಳು ಕೇಳಿಬಂದವು.
ಇಲ್ಲಿಂದ ಇರುವುದು ಕಥೆಯ ತಿರುವು. ಇಲ್ಲಿ ಹೇಳುವುದೆಲ್ಲವೂ ನನ್ನ ಸ್ವಂತ ಅನಿಸಿಕೆ ಅಬಿಪ್ರಾಯಗಳು ಅವೆಲ್ಲವೂ ಸತ್ಯವೆಂದು ಹೇಳಲಾಗುವುದಿಲ್ಲ. ಆದರೂ ಕೆಲವರ ಕಡೆಯಿಂದ ನನ್ನ ಕಿವಿಗೆ ಬಿದ್ದ ವಿಷಯಗಳಿವು.
ಮೊದಲನೆಯದಾಗಿ, ಕಾರ್ಯಕ್ರಮದ ಸಂಪೂರ್ಣ ಯಶಸ್ಸನ್ನು ನನಗೆ ಸಲ್ಲಿಸಿದರು ಜನರು. ನಾನು ವೇದಿಕೆಯಲ್ಲಿ ಎಲ್ಲರನ್ನು ಅಭಿನಂದಿಸಿದರೂ, ಅವರೇ ಕೆಲಸ ಮಾಡಿದ್ದರೂ ಜನರು ಮಾತ್ರ ಇದು ಹರೀಶನೇ ಮಾಡಿದ್ದು ಎಂದರು. ಇದನ್ನು ಕೆಲವರು ಒಪ್ಪುವುದಕ್ಕೆ ಸಿದ್ಧವಿರಲಿಲ್ಲ ಮತ್ತು ಅದನ್ನು ಸ್ವಂತಕ್ಕೆ ಬಳಸಲು ಕಾಯ್ದಿದ್ದ ಕೆಲವರು ಅವರ ತಲೆಗಳಿಗೆ ವಿಷ ತುಂಬಿದರು ಮತ್ತು ಇವರು ತುಂಬಿಸಿಕೊಂಡರು. ನೀವು ಕಷ್ಟ ಪಟ್ಟಿದ್ದು ಅವನಿಗೆ ಹೆಸರು ಬಂತು ಕೇವಲ ಕೆಲಸ ಮಾಡಿದ್ದು ಅಷ್ಟೆ, ಅದಕ್ಕೆ ಲಾಯಕ್ಕು. ಮುಗ್ದ ಹುಡುಗರಿಗೆ ಅದು ಹೌದು ಎನಿಸಿರಬೇಕು. ಅದಕ್ಕೆ ಸ್ವಲ್ಪ ಹಿಂದೆ ಉಳಿದರು.
ಎರಡನೆಯದಾಗಿ, ಕೆಲವು ರಾಜಕೀಯ ಮುಖಂಡರುಗಳು, ನನ್ನನ್ನು ವಿರೋಧ ಪಕ್ಷದವನೆಂದರು, ಎರಡು (ಜೆಡಿಸ್ ಮತ್ತು ಕಾಂಗ್ರೇಸ್) ಪಕ್ಷದವರೂ ಅದನ್ನೇ ನಿಜ ಎಂದು ಅವರ ಪಕ್ಷದ ಕೆಲವು ನಿಷ್ಠಾವಂತ ಕಾರ್ಯಕರ್ತರಿಗೆ ತುಂಬಿದರು. ಹಾಗಾಗಿ ಮೊದಲೇ ಭಾವನಾತ್ಮಕವಾಗಿ ರಾಜಕೀಯಕ್ಕೆ ದುಡಿಯುವ ಹುಡುಗರು ನನ್ನಿಂದ ದೂರ ಉಳಿದರು. ಅದರಲ್ಲಿ ಕೆಲವರು ಮಾತ್ರ ನನ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಏನಾದರೂ ಮಾಡಲೇಬೇಕೆಂದು ಪ್ರಯತ್ನಿಸಿದರು.
ಆ ಸಮಯದಲ್ಲಿ ನಾನು ಶಿಕ್ಷಕರಿಗೆ ಹುರಿದುಬ್ಬಿಸಲು ಏನೆಲ್ಲಾ ಹೇಳಿದೆ. ಆದರೇ, ಅವರುಗಳು ನಿಂತ ನೀರಾಗಿದ್ದರು. ಪೋಷಕರುಗಳು ಮೊದಲೇ ಅವಿದ್ಯಾವಂತರು, ಅವರು ಮಕ್ಕಳ ವಿದ್ಯಾಬ್ಯಾಸದ ಮಹತ್ವವನ್ನು ಅರಿಯಲಾಗದ ಪರಿಸ್ಥಿತಿಯಲ್ಲಿದ್ದರು. ಆದರೂ ಕೆಲವು ಪೋಷಕರು ಸಹಕರಿಸಲು ಮುಂದೆ ಬಂದರು. ಮಕ್ಕಳ ಕಲಿಕೆಗಾಗಿ, ಎಲ್.ಕೆ.ಜಿ ಮತ್ತು ಯು.ಕೆ.ಜಿಗೆ ಅನುಮತಿಯನ್ನು ಪಡೆದುಕೊಂಡು ಬಂದೆ. ಆದರೇ, ಬಂದಿರುವ ಮಾಹಿತಿಯನ್ನು ಶಿಕ್ಷಕರು ಪೋಷಕರಿಗೆ ತಿಳಿಸಲೇ ಇಲ್ಲ. ಮೂರ್ನಾಲ್ಕು ಮೀಟಿಂಗ್‍ಗೆ ಕರೆದೆ, ಕೆಲವೊಮ್ಮೆ ಪೋಷಕರು ಬರುತ್ತಿರಲಿಲ್ಲ, ಮತ್ತೊಮ್ಮೆ ಎಸ್‍ಡಿಎಂಸಿಯವರು ಬರುತ್ತಿರಲಿಲ್ಲ. ಶಿಕ್ಷಕರಂತೂ ಇದೆಲ್ಲವೂ ಯಾಕಾದರೂ ಬೇಕಪ್ಪ ಎನ್ನುವಂತಿರುತ್ತಿದ್ದರು. ಮನುಷ್ಯನಲ್ಲಿ ಸೂಕ್ಷ್ಮತೆಯಿದ್ದರೇ, ಭಾವುಕತೆಯಿದ್ದರೇ ಎಂತಹ ಕ್ರೂರಿಯನ್ನಾದರೂ ತಿದ್ದಬಹುದು, ಬದಲಾಯಿಸಬಹುದು. ಆದರೇ, ನಿರ್ಭಾವುಕನಾದರೆ ಏನನ್ನು ಮಾಡಲಾಗುವುದಿಲ್ಲ. ಮಾಡಬಹುದು, ಬದಲಾಯಿಸಬಹುದೆಂದರೂ ಅಷ್ಟು ಸುದೀರ್ಘ ಸಮಯ ಮತ್ತು ಆಯಸ್ಸು ನಮಗೆ ಇರಬೇಕಲ್ಲವೇ?
ಅದರ ಜೊತೆಗೆ ಹೋದರೆ ಹೋಗಲಿ ಸದ್ಯಾ, ಯಾರಾದರೂ ಒಬ್ಬರು ಅರೆಕಾಲಿಕ ಶಿಕ್ಷಕರನ್ನು ಕೋಡೋಣ, ಕನಿಷ್ಟ ಇಂಗ್ಲೀಷ್ ಆದರೂ ಕಲಿಸೋಣ ಎಂದುಕೊಂಡೆ. ದಿನಕ್ಕೆ ಒಂದು ಅಥವಾ ಎರಡು ಗಂಟೆ ಬಂದು, ಹೇಳಿಕೊಟ್ಟರೂ ಸಾಕೆಂದು, ಹುಡುಕಿದೆ. ಇದೆಲ್ಲವೂ ಮಾಡಲು ಪ್ರಯತ್ನಿಸುತ್ತಿರುವಾಗ, ಊರಿನ ಒಂದಿಬ್ಬರು ಬಿಟ್ಟರೆ ಬೇರಾರು ನನ್ನನ್ನು ಸೇರಿಕೊಳ್ಳಲಿಲ್ಲ. ಊರಿನ ಕೆಲವು ಹುಡುಗಿಯರು ಪಿಯುಸಿ, ಬಿಎ ಮತ್ತು ಡಿಎಡ್ ಮಾಡಿದವರು ಇದ್ದರು. ಅವರನ್ನು ಕೇಳಿದೆ, ಅವರುಗಳು ಕೆಲವರು ಇಂಗ್ಲೀಷ್ ಬರುವುದಿಲ್ಲವೆಂದರು, ಒಬ್ಬರು 1500ರೂಪಾಯಿ ತಿಂಗಳಿಗೆ ಕಡಿಮೆಯಾಯಿತು ಎಂದರು. ನಾನು ಅವರಿಗೆ ಹೇಳಿದೆ ನೀವು ದಿನಕ್ಕೆ ಒಂದು ಗಂಟೆಗಳ ಕಾಲ ಹೇಳಿಕೊಟ್ಟರೂ ಸಾಕು, ಕೇವಲ ಎಬಿಸಿಡಿ ಹೇಳಿಕೊಡಿ ಮತ್ತು ಸ್ವಲ್ಪ ಸ್ವಚ್ಛತೆ ಹಾಗೂ ಶಿಸ್ತನ್ನು ಕಲಿಸಿಕೊಡಿ ಸಾಕೆಂದೆ. ಮತ್ತು, ನೋಡಿ 1500ರೂಪಾಯಿ ಕೊಡುವುದು ನನ್ನ ಜೇಬಿನಿಂದ, ಮುಂದಿನ ವರ್ಷಗಳಲ್ಲಿ ಖಂಡಿತವಾಗಿಯೂ ಹೆಚ್ಚು ಕೊಡುತ್ತೇನೆಂದೆ. ಊರಿನ ಮಕ್ಕಳಿಗೆ ಹೇಳಿಕೊಡಿ, ಹೇಗೂ ನೀವುಗಳು ಬೇರೆ ಎಲ್ಲಿಯೂ ಕೆಲಸಕ್ಕೆ ಹೋಗುತ್ತಿಲ್ಲವೆಂದೆ, ಆದರೇ, ಅವರಿಗೆ ನನ್ನೂರು ನನ್ನ ಶಾಲೆಯೆಂಬುದು ಒಳಗಿನಿಂದ ಬರಲಿಲ್ಲ ಅಥವಾ ಊರ ಉಸಾಬರಿ ನಮಗ್ಯಾಕೆ ಎನ್ನಿಸಿರಲುಬಹುದು. ಗಮನಿಸಿದರೇ ಆ ಹುಡುಗಿಯರು ಕಳೆದ ಒಂದು ವರ್ಷದಿಂದ ಎಲ್ಲಿಯ ಕೆಲಸಕ್ಕೂ ಹೋಗಿಲ್ಲ.
ಆ ಸಮಯದಲ್ಲಿ ನಾನು ಅದೆಷ್ಟು ಹತಾಶೆಗೊಂಡೆನೆಂದರೆ, ಶಾಲಾಭಿವೃದ್ಧಿ ಮಾಡಿಸಲು, ಎಲ್ಲಾ ರಾಜಕೀಯ ಪಕ್ಷದ ಮುಖಂಡರನ್ನು ಕೇಳಿದೆ. ಹಿರಿಯ ವಿದ್ಯಾರ್ಥಿಗಳನ್ನು ಕೇಳಿದೆ, ಊರಿನ ಪೋಷಕರನ್ನು, ಬಿಇಓ ಸಮೇತ ಎಲ್ಲರ ಮನೆ ಬಾಗಿಲಿಗೂ ಹೋಗಿ ಬಂದೆ. ಹಾದಿಯಲ್ಲಿ ಯಾರು ಸಿಕ್ಕಿದರೂ ಶಾಲೆಯನ್ನು ರಿಪೇರಿ ಮಾಡಿಸೋಣ ಸ್ವಲ್ಪ ಕೈಜೋಡಿಸಿ ಎನ್ನುತ್ತಿದ್ದೆ. ನನ್ನ ಹೆಂಡತಿಯೇ ಕೆಲವು ಸಲ ಹೇಳಿದ್ದಾಳೆ, ರೀ ನಿಮಗೆ ಬೇರೆ ಏನು ಕೆಲಸ ಇಲ್ವಾ? ಎಲ್ಲರ ಹತ್ತಿರ ಶಾಲೆಯ ಬಗ್ಗೆಯೇ ಮಾತನಾಡುತ್ತೀರಿ. ಊರಿನ ಉಸಾಬರಿ ನಿಮಗ್ಯಾಕೆ, ಅವರ ಪೋಷಕರಿಗೆ ಇಲ್ಲ? ಎಂದಳು. ಆದರೂ, ಹಿರಿಯರಾದ ಚನ್ನೇಗೌಡರು ಮಂತ್ರಿಗಳನ್ನು ಭೇಟಿ ಮಾಡೋನವೆಂದರು ಸಿದ್ಧರಾಗಿದ್ದ ಸಮಯದಲ್ಲಿ ಸಚಿವರ ಕಛೇರಿಯಿಂದ ಬಿಇಓ ಆಫೀಸಿಗೆ ಕರೆ ಬಂತು, ಶಾಲೆ ರಿಪೇರಿ ಮಾಡಿಸುವುದಕ್ಕೆ ಬಾನುಗೊಂದಿ ಶಾಲೆಯನ್ನು ಸೇರಿಸಿಕೊಳ್ಳಿ ಎಂದರು. ತಾಲ್ಲೂಕು ಪಂಚಾಯಿತಿಯವರು 50ಸಾವಿರ ಮಂಜೂರು ಮಾಡಿಸುವುದಾಗಿ ಹೇಳಿದರು, ಜಿಲ್ಲಾ ಪಂಚಾಯಿತಿಯವರು ಸಹಾಯ ಮಾಡುವುದಾಗಿ ಹೇಳಿದರು. ಅದೆಲ್ಲದರ ಜೊತೆಗೆ ಗ್ರಾಮ ಪಂಚಾಯಿತಿಯವರು ಕೂಡ ಸಹಾಯ ಮಾಡುವುದಾಗಿ ಹೇಳಿದರು. ವಿಚಿತ್ರವೆಂದರೇ, ಇದೆಲ್ಲದರ ನಡುವೆ ಇದೇ ಊರಿಗೆ ಜಿಲ್ಲಾ ಪಂಚಾಯಿತಿಯಿಂದ ಕುಡಿಯುವ ನೀರಿಗಾಗಿ ಅನುದಾನ ಪಡೆದರು. ಒಳ್ಳೆಯದೇ ಅಲ್ಲವಾ ಎನಿಸಬಹುದು? ನಮ್ಮೂರಿಗೆ, ಈಗಾಗಲೇ ಮೂರು ಬೋರ್‍ವೆಲ್ ಒಂದು ಓವರ್‍ಹೆಡ್ ಟ್ಯಾಂಕ್, ಇತ್ತು. ನೀರಿಗೆ ಅಂತಹ ದೊಡ್ಡ ಸಮಸ್ಯೆಯೇ ಇರಲಿಲ್ಲ, ಮನೆ ಮನೆಗೆ ನಲ್ಲಿನೀರಿನ ವ್ಯವಸ್ಥೆಯಿತ್ತು. ಆದರೂ, ಮತ್ತೊಂದು ಸಪರೇಟ್ ಲೈನ್ ಹಾಕಿಸಿದರು, ಇನ್ನೊಂದು ಬೋರ್ ಕೊರೆಸಿದರು. ಯಾವೊಬ್ಬನೂ ಶಾಲೆಯ ಅನುದಾನದ ಬಗ್ಗೆ ಕೇಳಲೇ ಇಲ್ಲ. ಏಕೆಂದರೇ ಗುತ್ತಿಗೆ ಹಣ ಮುಖ್ಯವೆಂದು ಕೆಲವರು ನನಗೆ ತಿಳಿಸಿದರು, ಯಾವುದು ಸತ್ಯವೋ ಯಾವುದು ಸುಳ್ಳೋ !. ನಾನು ನಂತರದ ದಿನಗಳಲ್ಲಿ, ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಫೋನ್ ಮಾಡಿದರೆ, ಸರ್, ನಿಮ್ಮೂರಿನವರೇ ಹೇಳಿದ್ದು ನಮಗೆ ಕುಡಿಯುವ ನೀರಿಗೆ ಅನುದಾನ ಮಾಡಿಕೊಡಿಯೆಂದು, ಅದಕ್ಕಾಗಿಯೇ ನೀಡಿದ್ದೇವೆ, ಅದು ತಪ್ಪಾ? ಎಂದರು. ಅದಾದ ನಂತರ ಊರಿನ ನದಿದಂಡೆಗೆ ಸೋಪಾನ ಕಟ್ಟೆಗೆ ಅನುದಾನ ಪಡೆದುಕೊಂಡರು, ಊರಿನ ಛತ್ರಕ್ಕೆ ಅನುದಾನ ಪಡೆದುಕೊಂಡರು, ಶಾಲೆ ಮಾತ್ರ ಯಾರಿಗೂ ಅನಿವಾರ್ಯತೆ ಎನಿಸಲಿಲ್ಲ. ಬಹುಶಃ ಯಾರದೋ ಮಕ್ಕಳು ಓದುವ ಶಾಲೆ ಎನಿಸಿರಬೇಕು? ಅಥವಾ ಇವರೆಲ್ಲಾ ಓದಿ ವಿದ್ಯಾವಂತರಾದರೆ ಕೆಲಸ ಮಾಡಲು ಕೂಲಿ ಕಾರ್ಮಿಕರು ಸಿಗುವುದಿಲ್ಲವೆನಿಸಿರಬೇಕು.
ಇದರ ಜೊತೆಗೆ ಇನ್ನೊಂದು ಆಲೋಚನೆಯೂ ಬಂತು. ಹೇಗೂ 10-15 ಸಾವಿರ ಹಣ ಉಳಿದಿತ್ತು, ಅದಕ್ಕೆ ಇನ್ನೂ ಸ್ವಲ್ಪ ಸೇರಿಸಿಕೊಂಡು ಶಾಲೆಯ ಒಂದು ಕೊಠಡಿಯ ಮೇಲ್ಛಾವಣಿಯನ್ನಾದರು ಸರಿ ಮಾಡಿಸೋಣ ಅಂದುಕೊಂಡೆ. ಅದರ ಜೊತೆಗೆ ಮತ್ತೊಂದು ಯೋಚನೆಯೂ ಬಂತು, ಈಗಾಗಲೇ ಶಾಲೆಯ ಪರಿಸ್ಥಿತಿ ಹದಗೆಟ್ಟಿದೆ. ಇದು ಹದಗೆಡಲು ಕಾರಣವಾದವರು ಏನು ಮತ್ತು ಯಾರ್ಯಾರು? ಮೊದಲಿಗೆ ಶಿಕ್ಷಕರು ಮತ್ತು ಎರಡನೆಯದು ಎಸ್.ಡಿ.ಎಂ.ಸಿ ಮತ್ತು ಮೂರನೆಯದು ಪೋಷಕರು. ಯಾವುದೇ ಶಾಲೆ ರಾತ್ರೋ ರಾತ್ರಿ ಅಧೋಗತಿಗೆ ಕುಸಿಯುವುದಿಲ್ಲ. ಕಟ್ಟಡ ಹಾಳಾಗುವ ತನಕ ಹಾಳಾಗುವ ತನಕವೇನು? ಹಾಳಾದ ಮೇಲೂ ಯಾರಿಗೂ ಇವರು ಈ ವಿಷಯವನ್ನು ತಿಳಿಸುವ ಅಥವಾ ರಿಪೇರಿ ಮಾಡಿಸುವ ಕ್ರಮಕ್ಕೆ ಮುಂದಾಗಲಿಲ್ಲ. ಇವರೆಲ್ಲರೂ ಇದು ಈ ಮಟ್ಟಕ್ಕೆ ಹಾಳಾಗುವುದನ್ನು ನೋಡುತ್ತಲೇ ಇದ್ದರೂ ಏನನ್ನು ಮಾಡಲಿಲ್ಲವೇಕೆ? ಇವರಿಗೆ ಇದು ನಮ್ಮ ಶಾಲೆ ಎನ್ನುವ ಅಭಿಮಾನವೂ ಬರಲಿಲ್ಲ ಅದು ನಮ್ಮ ಹೆಮ್ಮೆಯ ಶಾಲೆ ಎನ್ನುವ ಆಲೋಚನೆಯಂತೂ ಆ ಕಡೆಗೆ ತಲೆ ಹಾಕಿಯೂ ಮಲಗಲಿಲ್ಲವೆನಿಸುತ್ತದೆ.
ಈಗ ಸರ್ಕಾರವೇ ಮಾಡಿಸಲಿ ಅಥವಾ ಖಾಸಗಿಯವರೇ ಮಾಡಿಸಲಿ ಅಥವಾ ನಾವುಗಳೇ ಮಾಡಿಸಿದರೂ ಇವರು ಇದನ್ನು ಗಂಬೀರವಾಗಿ ಉಳಿಸಿಕೊಳ್ಳುವುದಿಲ್ಲ. ಆದ್ದರಿಂದ ಹಣಕಾಸಿನ ನೆರವನ್ನು ನಾನು ಹೊರಗಿನಿಂದ ತರುತ್ತೇನೆ, ಆದರೇ, ಊರಿನ ಪೋಷಕರು, ಶಿಕ್ಷಕರು ಮತ್ತು ಎಸ್‍ಡಿಎಂಸಿಯವರು ಕನಿಷ್ಠ ಒಂದು ದಿನಕ್ಕಾದರೂ ನಿಂತು ಶಾಲೆಯ ಕೆಲಸದಲ್ಲಿ ಭಾಗವಹಿಸಲಿ, ಒಂದು ದಿನವಾಗುವುದಿಲ್ಲವೆಂದರೆ ಕನಿಷ್ಠ ಎರಡು ಗಂಟೆಗಳು ಕಾಲ ನಿಲ್ಲಲಿ. ಬಿಇಓ ಸಲಹೆಯಂತೆ ಊರಿನ ಯಾವುದಾದರೂ ತೆಂಗಿನ ಮರಗಳನ್ನು ಮತ್ತು ಅಡಿಕೆ ಮರಗಳನ್ನು ನೋಡಿ ತಂದು ಕವಕೋಲು, ರೀಪೀಸ್ ಹಾಕಿಸಿ, ಹೋಗಿರುವ ಹೆಂಚುಗಳನ್ನು ಬದಲಾಯಿಸಿದರೆ ಸಾಕೆನಿಸಿತು. ಇದು ಶಾಸ್ವತ ಪರಿಹಾರವಲ್ಲ, ಆದರೆ ತಾತ್ಕಾಲಿಕವಾಗಿ ಒಂದು ನೆಮ್ಮದಿಯ ಸೂರನ್ನು ಕೂಡಿಸಬಹುದು. ಯಾವ ಪೋಷಕನಾದರೂ ಸೋರುವ ಶಾಲೆಗೆ ಕಳುಹಿಸುತ್ತಾನೆ?
ಈ ವಿಷಯವನ್ನು ಚರ್ಚಿಸಲು, ಸ್ವತಃ ಬಿಇಓ ಬಂದರೂ ಪೋಷಕರು ಬರಲಿಲ್ಲ, ಎಸ್‍ಡಿಎಂಸಿ ಮೂರ್ನಾಲ್ಕು ಜನರಿದ್ದರು. ಇಲ್ಲಿ ಸಂಪೂರ್ಣವಾಗಿ ಪೋಷಕರನ್ನು ದೂಷಿಸುವುದಿಲ್ಲ ಅದರ ಜೊತೆಗೆ ಶಿಕ್ಷಕರನ್ನು ದೂಷಿಸುವುದಿಲ್ಲ. ಏಕೆಂದರೆ ಯಾವುದೇ ಶಾಲೆಯ ಉದ್ದಾರಕ್ಕೆ ಎಲ್ಲರೂ ಸಹಕರಿಸಬೇಕು. ಎಲ್ಲರ ನಡುವೆ ಸಾಮರಸ್ಯವಿರಬೇಕು. ನಾನು ನನ್ನ ಪಾಡಿಗೆ ಶಾಲೆಗೆ ಬರುತ್ತೇನೆ ಹೋಗುತ್ತೇನೆ ಎನ್ನವ ದಾಟಿ, ಅಥವಾ ಮಾಸ್ಟರಿಗೆ ಸಂಬಳ ಕೊಡುತ್ತಾರೆ ಅವರು ಮಾಡಲಿ ಎನ್ನು ದೋರಣೆ ಸರಿಯಾಗುವುದಿಲ್ಲ. ಪೋಷಕರು ಶಾಲೆಗೆ ಬರುವುದಿಲ್ಲ, ಇನ್ನೂ ಶಿಕ್ಷಕರೋ ಊರಿನ ಯಾರನ್ನೂ ಮಾತನಾಡಿಸುವುದಿಲ್ಲ. ಇದ್ದರೆ ಈ ಊರು ಹೋದರೆ ಮುಂದಿನ ಊರು ಎನ್ನುವುದು ಅವರ ಅಭಿಪ್ರಾಯ. ಹಾಗಾಗಿ ಆ ದಿನ ಜನರು ಬರಲಿಲ್ಲ, ಇವರು ಅವರಿಗೆ ಬೈಯ್ಯುವುದು, ಅವರು ಇವರನ್ನ ದೂರುವುದು ಆಯಿತು. ಮತ್ತೊಂದು ವಿಷಯವೇನೆಂದರೆ ಇವರ್ಯಾರು ನೇರವಾಗಿ ದೂಷಿಸುವುದಿಲ್ಲ, ಒಬ್ಬರ ಹಿಂದೆ ಒಬ್ಬರು ಬೈಯ್ದಾಡುತ್ತಾರೆ, ಎದುರು ಸಿಕ್ಕರೆ ಮಾಸ್ಟರೇ ಎನ್ನುವ ಪ್ರೀತಿ ನೋಡಬೇಕು. ನನಗೆ ಇದೆಲ್ಲವೂ ಹೊಸ ಪ್ರಪಂಚ. ನಾನು ನೇರ ಮಾತುಗಾರ, ಬೈಯ್ಯುವಾಗಲೂ ಅಷ್ಟೇ ಹೊಗಳುವಾಗಲೂ ಅಷ್ಟೇ. ಹಳ್ಳಿಯಲ್ಲಿ ನಡೆಯುವ ರಾಜಕೀಯ, ದ್ವೇಷ, ಅಸೂಯೆ, ನಗರಗಳಲ್ಲಿ ನಡೆಯುವುದಿಲ್ಲವೆನ್ನುವುದು ನನಗೆ ಅರಿವಾಗತೊಡಗಿತು. ಯಾರನ್ನಾ ನಂಬುವುದು, ಯಾರನ್ನಾ ಬಿಡುವುದು? ನಾನು ಭೇಟಿಯಾಗಿದ್ದಾಗ ಎಲ್ಲವನ್ನೂ ಮಾಡಿಬಿಡೋಣ ಎನ್ನುವ ಮಾಸ್ಟರುಗಳು ನಾನು ಹಿಂದಿರುಗಿದ ಮರುಕ್ಷಣವೇ ಮರೆತುಬಿಡೋರು. ತಮಾಷೆಯೆಂದರೇ ಒಮ್ಮೆ ಮೀಟಿಂಗ್‍ಗೆ ಬಂದಿದ್ದ ಒಬ್ಬರು ಪೋಷಕ ಮಹಾಶಯರು ಇದನ್ನು ಗುತ್ತಿಗೆ ಕೊಡಿ ನಾನೇ ಮಾಡುತ್ತೇನೆಂದರು. ಅದಕ್ಕೆ ನಾನು ಹೇಳಿದೆ, ಅಯ್ಯೋ ಭಗವಂತ ಅಷ್ಟು ದುಡ್ಡಿದ್ದಿದ್ದರೆ ನಿಮ್ಮನ್ನೆಲ್ಲಾ ಏಕೆ ಮೀಟಿಂಗ್ ಕರೆಯಬೇಕಿತ್ತು, ಮತ್ತು ಯಾರಿಗೋ ಕೊಟ್ಟು ಕೆಲಸ ಮಾಡಿಸುವುದು ಯಾರೋ ಅಡಿಗೆ ಮಾಡಿದ್ದನ್ನು ಹೋಗಿ ಉಂಡು ಬಂದಂತೆ ನಾವಾಗಿಯೇ ಮಾಡಿದಾಗ ಅದರ ಕಷ್ಟ ಸುಖಗಳು ಅರ್ಥವಾಗುವುದು. ಅವನು ಆ ದಿನವೇ ಹೇಳಿದ, ಇಂಥಹದ್ದೆಲ್ಲಾ ಆಗುವುದಿಲ್ಲವೆಂದು.
ಇದರೆ ಜೊತೆಗೆ ಬಹಳ ಬೇಸರದ ಸಂಗತಿಯೇನೆಂದರೆ, ವಿದ್ಯಾರ್ಥಿಗಳಿಗಾಗಿ ಸಸ್ಯಗಳನ್ನು ಬೆಳೆಸುವುದಕ್ಕೆ ಔಷಧಿ ಗಿಡಗಳು, ಹೂವಿನ ಗಿಡಗಳು, ಸೊಪ್ಪು ಮತ್ತು ತರಕಾರಿ ಬೀಜಗಳನ್ನು ತಂದುಕೊಟ್ಟೆ. ಮಕ್ಕಳು ಬೆಳೆಯುವುದಕ್ಕೆ ಆಸಕ್ತಿ ತೋರಿಸಿದರೂ ಮಾಸ್ಟರುಗಳು ನೀರು ಹಾಕುವುದಕ್ಕೂ ಬಿಡಲಿಲ್ಲವೆಂದು ವಿದ್ಯಾರ್ಥಿಗಳು ತಿಳಿಸಿದರು.
ಇದೆಲ್ಲದರ ನಡುವೆ ಬೇಸತ್ತು ಹೋಗಿದ್ದ ನಾನು, ಕೊನೆಗೆ ಕೆಲವರನ್ನು ಸಂಪರ್ಕಿಸಿ ಶಾಲೆಯ ದುರಸ್ತಿ ಕಾರ್ಯವನ್ನು ಶುರು ಮಾಡೋಣ, ಆದರೆ ಪೋಷಕರೆಲ್ಲರೂ ಬರಲೇಬೇಕು, ನೀವು ಕೆಲಸ ಮಾಡದಿದ್ದರೂ ಪರವಾಗಿಲ್ಲವೆಂದೆ. ಆ ದಿನ, ಕೆಲವರು ಒಪ್ಪಿದರು. ನಾನು ಆಚಾರಿಯನ್ನು ಕರೆದು 500ರೂಪಾಯಿ ಅಡ್ವಾನ್ಸ್ ಕೊಟ್ಟೆ. ಮೈಸೂರಿನಲ್ಲಿರುವ ಮಂಜುನಾಥ್ (ಜಿಲ್ಲಾ ಪಂಚಾಯತ್ ಇಂಜಿನಿಯರ್) ಅವರು ಕವಕೋಲು ಕೊಡಿಸುವುದಾಗಿ ಒಪ್ಪಿದರು, ಮಡಿಕೇರಿಯಲ್ಲಿ ಪೋಲಿಸ್ ಇನ್ಸ್ಪೆಕ್ಟರ್ ಆಗಿರುವ ಪ್ರದೀಪ್‍ರವರು ಅಡಿಕೆ ಮರಗಳನ್ನು ಕೊಡುವುದಾಗಿಯೂ ತಿಳಿಸಿದ್ದರು. ಇದಕ್ಕೆಲ್ಲಾ ಊರಿನ ಅಂಗಡಿ ಯೋಗೇಶ್‍ರವರು ಬಹಳ ಮುತುವರ್ಜಿ ವಹಿಸಿ ಮಾಡಿಸಲು ಪ್ರಯತ್ನಿಸಿದರು. ಹೆಂಚು ಇಳಿಸುವ ದಿನವನ್ನು ನಿಗದಿಪಡಿಸಲಾಯಿತು. ಆ ದಿನ ಮೂರು ಜನರು ಮಾತ್ರ ಬಂದರು ಎಂದು ಯೋಗೇಶಣ್ಣ ನನಗೆ ತಿಳಿಸಿದರು. ಅದೆಷ್ಟು ಬೇಸರವಾಯಿತೆಂದರೆ, ನಮ್ಮಪ್ಪ ಮುಂಚಿತವಾಗಿಯೇ ಹೇಳಿದ್ದರು, ನೀನು ಹಳ್ಳಿಗಳಲ್ಲಿ ಕೆಲಸ ಮಾಡುವುದು ಸುಲಭದ ಕೆಲಸವಲ್ಲ. ಜನರು ಒಳ್ಳೆಯ ಕೆಲಸಗಳನ್ನು ಒಪ್ಪುವುದಿಲ್ಲ. ಎಲ್ಲದರಲ್ಲಿಯೂ ರಾಜಕೀಯ ಬೆರೆಸುತ್ತಾರೆ, ಅದೇ ಸಂತೋಷ ಅವರಿಗೆಂದು. ಈಗ ಅದು ನಿಜವೆನಿಸತೊಡಗಿತು. ಏನೂ ಮಾಡಲಾಗದ ಪರಿಸ್ಥಿತಿಯಲ್ಲಿದ್ದೆ.
ನನಗೆ ಎಲ್ಲರನ್ನೂ ಕಾಡಿಯೋ ಬೇಡಿಯೋ 2-3ಲಕ್ಷ ಸಂಗ್ರಹಣೆ ಮಾಡಿ ಕೊಠಡಿ ರಿಪೇರಿ ಮಾಡಿಸುವುದು ಅಂತಹ ಕಷ್ಟವಾಗುತ್ತಿರಲಿಲ್ಲ. ಆದರೇ, ಅದನ್ನು ಮಾಡುತ್ತಿರುವುದು ಯಾರಿಗೇ? ಪೋಷಕರಿಗೆ, ಶಾಲಾ ಶಿಕ್ಷಕರಿಗೆ ಅವರಿಗೆ ಅದರ ಕಾಳಜಿಯಿಲ್ಲದೇ ಹೋದರೆ ಇದು ಮತ್ತೊಂದು ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮವಾಗುತ್ತಿತ್ತು. ಆದ್ದರಿಂದ ನಾನು ಅಂಥಹ ಅರ್ಥವಿಲ್ಲದ ಉಪಯೋಗವಿಲ್ಲದ ಮತ್ತೊಂದು ವ್ಯರ್ಥ ಕಾರ್ಯಕ್ರಮ ಮಾಡಲು ಸಿದ್ದವಿರಲಿಲ್ಲ. ಇಲ್ಲಿ ನಿಮ್ಮ ಗಮನಕ್ಕೆ ತರಬೇಕಾದ ವಿಷಯವನ್ನು ಹೇಳುತ್ತೇನೆ. ಸರ್ಕಾರವು ಅನ್ನಭಾಗ್ಯವೆಂಬುದು ಮಹಾನ್ ಸಾಧನೆಯೆಂಬಂತೆ ಬಿಂಬಿಸುತ್ತದೆ, ಹಸಿದವರಿಗೆ ಅನ್ನ ನೀಡುವುದು ಉತ್ತಮ ಕಾರ್ಯ ಅದನ್ನು ಶ್ಲಾಘಿಸುತ್ತೇನೆ. ನನಗೆ ಹಸಿವಿನ ನೋವು ತಿಳಿದಿದೆ. ತುತ್ತು ಅನ್ನಕ್ಕೆ, ನೀರಿಗೆ ಪರದಾಡಿದ ದಿನಗಳಿವೆ. ಆದರೆ, ಉಚಿತವಾಗಿ ನೀಡುವಾಗ ಅದನ್ನು ದುರುಪಯೋಗಪಡಿಸಿಕೊಳ್ಳುವ ಮತ್ತು ಸರ್ಕಾರದ ಮಹತ್ವದ ಯೋಜನೆಗಳ ಹಿನ್ನಲೆಯನ್ನು ಅರ್ಥೈಸಿಕೊಳ್ಳದ ಜನಗಳ ಬಗ್ಗೆ ಕೆಟ್ಟ ಕೋಪವಿದೆ. ನಾನು ಗಮನಿಸಿದ ಹಾಗೆ, ಅನ್ನ ಭಾಗ್ಯದ ಅಕ್ಕಿಯನ್ನು ಪಡಿತರ ಅಂಗಡಿಯಿಂದ ಒಂದು ರೂಪಾಯಿಗೆ ತಂದು ಅದನ್ನು 13 ರೂಪಾಯಿಗೆ ಮಾರುತ್ತಿದ್ದಾರೆ. ಮಾರುವುದು ಅನ್ನವಿಲ್ಲದ ಜನರಿಗಲ್ಲಾ ಬಸೀರ್ ಎಂಬ ಅಕ್ಕಿ ವ್ಯಾಪಾರಿಗೆ. ಅದನ್ನು ಅವನು ತೆಗೆದುಕೊಂಡು ಹೋಗಿ ಮಿಲ್‍ನಲ್ಲಿ ಬೇರೆ ಪ್ಯಾಕ್ ಮಾಡಿಸಿ ಹೆಚ್ಚಿನ ಹಣಕ್ಕೆ ಮಾರುತ್ತಾನೆ. ಇದು ನಮ್ಮ ತೆರಿಗೆ ಹಣ ಜನರನ್ನು ಸೋಮಾರಿ ಮಾಡುತ್ತಿದ್ದಾರೆಂದು ಕೆಲವರು ಬೊಬ್ಬೆ ಹೊಡೆಯುತ್ತಾರೆ, ಆದರೇ ಅಂಥಹ ಜನರೆದುರೇ ಈ ರೀತಿ ದುರುಪಯೋಗವಾಗುತ್ತಿದ್ದರೂ ಜನ ಮೌನವಹಿಸುತ್ತಿದ್ದಾರೆ.
ಸರ್ಕಾರದ ಎಲ್ಲಾ ವಸ್ತುಗಳು, ಯೋಜನೆಗಳು ನಮ್ಮ ತೆರಿಗೆ ಹಣದಿಂದ ಬಂದಿರುವುದು ಎನ್ನುವುದನ್ನು ಜನರಿಗೆ ತಿಳಿಸುವುದೇ ಕಷ್ಟವಾಗಿದೆ. ಒಂದು ಕೆಜಿ ಉಪ್ಪು ಕೊಂಡರೂ ಅದಕ್ಕೆ ತೆರಿಗೆ ಪಾವತಿಸುತ್ತೇವೆ, ತೆರಿಗೆ ಎಂದರೇ ಕೇವಲ ಆದಾಯ ತೆರಿಗೆ ಮಾತ್ರವಲ್ಲವೆಂಬುದು ಬಹಳ ಜನಕ್ಕೆ ತಿಳಿದಿಲ್ಲ. ಸರ್ಕಾರ ಹಾಕಲಿ ಅಥವಾ ಸರ್ಕಾರದ ಯೋಜನೆಯಲ್ವಾ ಇರಲಿ ಬಿಡು ಎನ್ನುವುದು, ಬಸ್‍ನಲ್ಲಿ ಪ್ರಯಾಣಿಸುವಾಗ ಹತ್ತು ರೂಪಾಯಿ ಟಿಕೇಟ್ ಬದಲು 8ರೂಪಾಯಿ ಕೊಟ್ಟು ಟಿಕೇಟ್ ಇಲ್ಲದೆ ಪ್ರಯಾಣಿಸಿದ ಹಾಗೆ, ಅದು ಸರ್ಕಾರಕ್ಕೆ ವಂಚಿಸಿ ಕಂಟಕ್ಟರ್‍ನ ಸಾಹುಕಾರ ಮಾಡಿದಂತೆಯೇ ಸರಿ. ಕಂಟ್ರಾಕ್ಟರ್‍ಗಳಿಗೆ, ರಾಜಕಾರಿಣಿಗಳಿಗೆ ಎಲ್ಲರಿಗೂ ಅಷ್ಟೆ ಉಚಿತವಾಗಿ ಸರ್ಕಾರದಿಂದ ಬರುವ ಅನುದಾನಗಳಲ್ಲಿ ಸ್ವಲ್ಪ ಕಡಿಮೆ ಕೊಟ್ಟರೂ ಸರಿ, ಯಾರದೋ ಮನೆಯ ಶೌಚಾಲಯದ ಮುಂದೆ ಫೋಟೋ ತೆಗೆಸಿಕೊಂಡು ಒಂದೇ ಶೌಚಾಲಯಕ್ಕೆ ನಾಲ್ಕೈದು ಜನರಿಗೆ ಅನುದಾನ ಕೊಡಿಸಿರುವ ನಿದರ್ಶನಗಳಿವೆ. ಇರಲಿ ಅದರ ಬಗ್ಗೆ ಮತ್ತೊಮ್ಮೆ ಮಾತನಾಡುತ್ತೇನೆ.
ಈ ಮೇಲಿನ ಸಾಲುಗಳನ್ನು ಓದಿದ ಮೇಲೆ ನಿಮಗೆ ಕಾಡುತ್ತಿರುವ ಪ್ರಶ್ನೆ, ಶಾಲೆಯ ರಿಪೇರಿ ಕೆಲಸವಾಯ್ತಾ? ಇಲ್ವಾ? ಇಲ್ಲ ಆಗಲಿಲ್ಲ. ಬೇರೆಯವರ ಹಣ ನನ್ನಲ್ಲಿರುವ ತನಕ ನನಗೆ ನೆಮ್ಮದಿಯಿರಲಿಲ್ಲ. ಎಲ್ಲವನ್ನೂ ಪಾರದರ್ಶಕವಾಗಿ ಮಾಡಿದ್ದ ನಾನು, ಕೇವಲ ಹತ್ತು ಹದಿನೈದು ಸಾವಿರ ರೂಪಾಯಿಗಳಿಗೆ ಛೇ ಹಣಕ್ಕಾಗಿ ಸಿದ್ದಾಂತಗಳನ್ನು ಬಿಡುವ ಮನುಷ್ಯ ಅಲ್ಲವೇ ಅಲ್ಲ. ಆದ್ದರಿಂದ, ಉಳಿದಿದ್ದ ಹಣದ ಜೊತೆಗೆ ಇನ್ನೂ ಹೆಚ್ಚು ಹಣವನ್ನು ನಾನೇ ಸೇರಿಸಿಕೊಂಡು ಶಾಲೆಯ ಮಕ್ಕಳಿಗೆ ಶಾಲೆಯ ಫೋಟೋ ಲೋಗೋ ಇರುವಂತಹ ಉತ್ತಮ ಗುಣಮಟ್ಟದ ಬ್ಯಾಗ್, ಪೆನ್, ರಬ್ಬರ್, ಶಾರ್ಪನರ್, ಪೆನ್ಸಿಲ್‍ಗಳು, ಜಿಯೋಮೆಟ್ರಿ ಬಾಕ್ಸ್, ಟೈ, ಬೆಲ್ಟ್, ನೋಟ್ಸ್‍ಗಳು ಎಲ್ಲವನ್ನು ಕೊಡಿಸಿದೆ. ನಲ್ವತ್ತೊಂದು ಮಕ್ಕಳಿಗೆ ಎಷ್ಟು ಹಣ ಖರ್ಚಾಗಿರಬಹುದೆಂದಬುದನ್ನು ನೀವೇ ಲೆಕ್ಕಹಾಕಿ. ವಿಚಿತ್ರವೆಂದರೆ ಅದನ್ನು ಪಡೆಯುವ ದಿನವೂ ಕೂಡ ಎಸ್‍ಡಿಎಂಸಿಯವರಾಗಲೀ, ಪೋಷಕರಾಗಲಿ ಬರಲಿಲ್ಲ. ಕೇವಲ ಎಸ್‍ಡಿಎಂಸಿ ಅಧ್ಯಕ್ಷರಿದ್ದರು. ಇಷ್ಟನ್ನು ಕೊಡಿಸಿದ ಅದನ್ನು ಮಕ್ಕಳು ದಿನ ನಿತ್ಯ ಧರಿಸಿ ಶಿಸ್ತಿನಲ್ಲಿ ಬರಲೆಂಬುದು ನನ್ನಾಸೆಯಾಗಿತ್ತು. ಆದರೇ, ಕೆಲವು ದಿನಗಳ ನಂತರ ಮತ್ತೊಮ್ಮೆ ಭೇಟಿ ನೀಡಿದಾಗ ಕೆಲವು ವಿದ್ಯಾರ್ಥಿಗಳು ಟೈ ಹಾಕಿಲ್ಲ, ಕೆಲವರು ಬೆಲ್ಟ್ ಹಾಕಿಲ್ಲ ಮತ್ತು ಕೆಲವರು ಯೂನಿಫಾರ್ಮ್ ಕೂಡ ಹಾಕಿರಲಿಲ್ಲ. ಅದನ್ನು ಕೇಳಬೇಕೆಂಬ ಪ್ರಜ್ಞೆ ಕೂಡ ಶಿಕ್ಷಕರಿಗಿರಲಿಲ್ಲ ಮತ್ತು ಪೋಷಕರಿಗೂ ಇರಲಿಲ್ಲ.
ಇಷ್ಟೆಲ್ಲಾ ಆಗುವಾಗ ಯಾವೊಬ್ಬನೂ ಬಂದು ಏನು ಬೇಕೆಂದು ಕೇಳಲಿಲ್ಲ, ನಾನು ಫೇಸ್‍ಬುಕ್ ಮತ್ತು ವಾಟ್ಸಾಪ್‍ನಲ್ಲಿ ಹಾಕುತ್ತಿದ್ದೆ. ಆದರೆ, ನಾನು ಶಾಲೆಯನ್ನು ಅಭಿವೃದ್ಧಿಯನ್ನು ಮಾಡಲಾಗದೇ ಉಳಿದಿದ್ದ ಹಣಕ್ಕೆ ನನ್ನ ಹಣವನ್ನು ಸೇರಿಸಿ ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿಯನ್ನು ಕೊಡಿಸಿದೆ ಎಂದಾಕ್ಷಣ ವಾಟ್ಸಾಪ್‍ನಲ್ಲಿ ಬೊಬ್ಬೆಯಿಡತೊಡಗಿದರು. ವಿಚಿತ್ರವೆಂದರೆ, ಕಾರ್ಯಕ್ರಮಕ್ಕೆ ಹಣ ಕೇಳಿದಾಗ ಹಣವನ್ನೇ ಕೊಡದೆ ತಪ್ಪಿಸಿಕೊಂಡು ಓಡಾಡಿದವರೆಲ್ಲಾ ಕೇಳಿದರು. ಅದಾದ ಮೇಲೆ ನನಗೆ ಅನಿಸಿದ್ದು ನಾನು ಸರ್ಕಾರಿ ಶಾಲೆಯನ್ನು ಉದ್ದಾರ ಮಾಡಲೇ ಬೇಕೆಂದರೇ ಸಾವಿರಾರು ಶಾಲೆಗಳಿವೆ, ಶಿಕ್ಷಕರು ಮತ್ತು ಪೋಷಕರು ನೆರವನ್ನು ಬಯಸುತ್ತಿರುವ ಶಾಲೆಗೆ ಮಾಡಬಹುದು. ಉಂಡವರಿಗೆ ಅಥವಾ ಹಸಿವಿನ ಬೆಲೆ ತಿಳಿಯದವನಿಗೆ ಅನ್ನ ಹಾಕಿ ಬರುವುದೇನೂ ಇಲ್ಲ. ನನ್ನಂಥಹ ಅನೇಕಾ ಜನರು ಸಮಾಜಕ್ಕೆ ಏನಾದರೂ ಮಾಡಬೇಕೆಂಬ ಭಾವನಾತ್ಮಕ ನೆಲೆಯಲ್ಲಿ ಸಹಾಯ ಮಾಡಲು ಹೋಗುತ್ತಾರೆ ಆದರೆ ಜನರು ಅದನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ ಅಥವಾ ಅದನ್ನು ನಿರ್ಲಕ್ಷ್ಯದಿಂದ ಕಾಣುತ್ತಾರೆ.
ಮತ್ತೊಂದು ವಿಷಯವೆಂದರೆ, ನನ್ನೂರಿನ ಕೆಲವು ಕಿರಿಯರು ನನ್ನ ಮೇಲಿನ ಅಸಮಧಾನಕ್ಕಾಗಿ ಶಾಲೆಯ ಅಬಿವೃದ್ದಿಗೆ ಕೈಜೋಡಿಸಲಿಲ್ಲವೆಂದರು. ಅದು ಬಹಳ ತಡವಾಗಿ ತಿಳಿಯಿತು. ಅಸಮಧಾನವೆಂದರೆ, ನಾನು ಅವರೆಲ್ಲರನ್ನು ಗಣನೆಗೆ ತೆಗೆದುಕೊಳ್ಳದೆ ಮಕ್ಕಳಿಗೆ ಲೇಖನ ಸಾಮಗ್ರಿ ನೀಡಿದೆಯೆಂದು. ನಾನು ಅವರುಗಳು ಮುಂದೆ ಬರಲಿಲ್ಲವಲ್ಲ, ನಾಯಕತ್ವ ವಹಿಸಿಕೊಳ್ಳಲಿಲ್ಲವಲ್ಲ ಎಂದು ಬೇಸರಗೊಂಡಿದ್ದೆ. ಅವರಿಗೆಲ್ಲಾ ನಾನು ಹೇಳಿದ ಮತ್ತು ಹೇಳುವ ಮಾತೆಂದರೆ, ನಿಮಗೆ ನನ್ನ ಮೇಲೆ ಕೋಪವಿದ್ದರೆ, ಅಸಮಧಾನವಿದ್ದರೆ ನನ್ನ ಮೇಲಿನ ಪೈಪೋಟಿಗೆ ನೀವು ಶಾಲೆಯನ್ನು ಇನ್ನೂ ಹೆಚ್ಚು ಅಬಿವೃದ್ದಿ ಮಾಡುವ ಪಣ ತೊಡಬೇಕು. ಅದನ್ನು ಬಿಟ್ಟು ಕೈಜೊಡಿಸದೆ ಹಾಳಾಗಲಿಯೆನ್ನುವ ಮನೋಭಾವ ಬೆಳೆಸಿಕೊಳ್ಳುವವರನ್ನು ನಾನೆಂದೂ ಅಕ್ಷರಸ್ಥರೆನ್ನುವುದಿಲ್ಲ. ಇಷ್ಟೆಲ್ಲಾ ಆದಮೇಲೆ, ಕೆಲವು ಕೆಟ್ಟ ಸಂಗತಿಗಳನ್ನು ಹೇಳುತ್ತೇನೆ, ಕೇವಲ ಒಳ್ಳೆಯದನ್ನೇ ಬರೆದರೆ ನೀವುಗಳು ನಿಮ್ಮೂರಿನಲ್ಲಿ ಇಂಥಹ ಯೋಜನೆಗಳನ್ನು ಹಾಕಿಕೊಳ್ಳುವಾಗ ಎಡುವುದು ಸಾಧ್ಯವಿದೆ.
ನಾವು ಆಯೋಜಿಸಲು ಹೊರಟಿದ್ದು, ಹಿರಿಯ ವಿದ್ಯಾರ್ಥಿಗಳ ಸಮ್ಮಿಳನ ಮತ್ತು ಗುರುಗಳಿಗೆ ನಮನ, ಇದಕ್ಕಾಗಿ ನಾವು ದೇಣಿಗೆ ಕೇಳಿದ್ದು ಆ ಶಾಲೆಯಲ್ಲಿ ಓದಿ, ಸ್ಥಿತಿವಂತರಾಗಿದ್ದವರನ್ನು ಮಾತ್ರ. ಅವರ ಪ್ರತಿಕ್ರಿಯೆಗಳನ್ನು ಕೇಳಿ,
• ಇದಕ್ಕೆ ಸರ್ಕಾರದ ಹಣವಿರುತ್ತದೆ ನಾವ್ಯಾಕೆ ಕೊಡಬೇಕು – ಇದು ನಮ್ಮೆಲ್ಲರ ಸಮ್ಮಿಳನ ಮತ್ತು 60 ವರ್ಷದಲ್ಲಿ ಮೊದಲ ಬಾರಿಗೆ ನಡೆಯುತ್ತಿದೆ ಎನ್ನುವ ಸಾಮಾನ್ಯ ಪ್ರಜ್ಞೆಯಿರಲಿಲ್ಲ
• ನಾವು ಆ ಶಾಲೆಯಲ್ಲಿ ಓದಿಲ್ಲವೆನ್ಸುತ್ತೆ – 1954 ರಿಂದ ಇಲ್ಲಿಯವರೆಗೆ ಸೇರ್ಪಡೆಯಾಗಿರುವ ಎಲ್ಲರ ಪಟ್ಟಿ ನನ್ನ ಬಳಿಯಿತ್ತು, ಅವರಿಗೆ ಅವರ ಬಾಲ್ಯ ನೆನಪಿಲ್ಲವೋ? ಅಥವಾ ಹಣ ನೀಡಬೇಕೆಂಬ ನಾಟಕವೋ?
• ನಾಳೆ ಕೊಡುತ್ತೇನೆ, ನಾಳಿದ್ದು – ಆ ನಾಳೆ ಬರಲೇ ಇಲ್ಲ
• ಕೆಲವರು ಕಾರ್ಯಕ್ರಮದ ದಿನ ಮೈಕ್ ಹಿಡಿಯಲು ಮುಂದೆ ಬಂದರು, ಹಣ ಕೇಳಿದಾಗ ನಾವು ಇಲ್ಲಿ ಓದಿರಲಿಲ್ಲವೆಂದರು – ಊರಿನ ಕಾರ್ಯಕ್ರಮಕ್ಕೆ 500-1000ರೂಪಾಯಿ ಕೊಡಬಹುದಿತ್ತು, ಮತ್ತು ಇವರೆಲ್ಲರೂ ಎಂಎ, ಎಂಎಸ್ಸಿ ಮಾಡಿ ಉದ್ಯೋಗದಲ್ಲಿದ್ದವರು, ದೊಡ್ಡ ಪ್ರಸಿದ್ಧವೆನಿಸಿಕೊಂಡ ಡಾಕ್ಟರುಗಳು, ಇಂಜಿನಿಯರುಗಳು ಕೂಡ ಹಿಂದೇಟಾಗಿದ್ದರು
• ಒಂದಿಷ್ಟು ಜನರು ಹಣ ಕೊಡಬೇಕಾಗುತ್ತದೆಯೆಂದೇ ಕಾರ್ಯಕ್ರಮಕ್ಕೆ ಬರಲಿಲ್ಲವೆಂದರೆ ಒಪ್ಪುತ್ತೀರಾ?
ನನಗೆ ನಕರಾತ್ಮಕವಾಗಿ ಹೇಳಿದವರನ್ನು ತಿಳಿಸುತ್ತೇನೆ,
• ಹರೀಶ್ ನಿಮಗೆ ಗೊತ್ತಿಲ್ಲ ಇದೆಲ್ಲಾ ಸುಲಭದ ಕೆಲಸವಲ್ಲ, ನೀವು ಕಾಲೇಜಿನಲ್ಲಿ ಓದುವುದು, ಸಂಶೋಧನೆ ಅಂತಾ ಮಾಡೋದಕ್ಕೂ ಈ ಜನರನ್ನು ಬದಲಾಯಿಸಿ ಕಾರ್ಯಕ್ರಮ ನಡೆಸುವುದಕ್ಕೂ ಬಹಳ ವ್ಯತ್ಯಾಸವಿದೆ
• ಎಲ್ಲಾ ಊರಿನಲ್ಲಿಯೂ ಮೂರ್ನಾಲ್ಕು ಜನರು ಮುಖಂಡರಿರುತ್ತಾರೆ (ಪ್ರತಿಯೊಂದು ಪಕ್ಷಕ್ಕೂ), ಅವರ ಹಿಂಬಾಲಕರನ್ನು ನೋಡಬೇಕು, ಯಾವಾ ಮುಖ್ಯಮಂತ್ರಿಯನ್ನು, ಪ್ರಧಾನ ಮಂತ್ರಿಯನ್ನು ಅವರು ಅಷ್ಟು ನಂಬುವುದಿಲ್ಲ, ಆ ಸ್ಥಳೀಯರು ಹೇಳಿದರೇ ಮುಗಿಯಿತು ಅವರು ಒಂದು ರೀತಿಯ ನಡೆದಾಡುವ ದೇವರುಗಳು
ಇಷ್ಟೆಲ್ಲಾ ಆದಮೇಲೆ ಉಪಸಂಹಾರವನ್ನು ಕೊಡುತ್ತೇನೆ. ಬಹಳಷ್ಟು ಜನರು ಅಕ್ಷರ ಕಲಿತು, ಡಿಗ್ರೀ ಮಾಡಿ ಕೆಲಸ ತೆಗೆದುಕೊಂಡು, ಒಂದು ಸೈಟು ಮನೆ ಕಾರು ಕೊಂಡರೆ ಸಿರಿವಂತರು ಬುದ್ದಿವಂತರೆಂದು ನಂಬಿದ್ದಾರೆ. ನಮ್ಮ ಶಿಕ್ಷಣ ವ್ಯವಸ್ಥೆ ಮಗುವನ್ನು ಓದಬೇಕು, ಕಲಿಯಬೇಕು ಕೆಲಸ ತೆಗೆದುಕೊಂಡು ಸಂಪಾದನೆ ಮಾಡಬೇಕೆಂದು ಬೋಧಿಸುತ್ತೇ ವಿನಾಃ, ಸ್ವಾಭಿಮಾನ, ಮೌಲ್ಯ, ಕಂಡವರ ಹಣ ಹೇಸಿಗೆ, ಸಮಾಜಮುಖಿಯಾಗಬೇಕು, ಸದಾ ಸಹಾಯಕ್ಕೆ ಸಿದ್ದನಿರಬೇಕು, ನನ್ನೂರು, ನನ್ನ ಶಾಲೆ, ನನ್ನ ದೇಶವೆಂಬ ಅಭಿಮಾನವನ್ನು ಬೆಳೆಸಲೇ ಇಲ್ಲ. ಹಾಗಾಗಿ ಆ ಮಗುವು ಸ್ವಾರ್ಥದ ಪರಮಾವಧಿಯನ್ನು ತಲುಪುತ್ತದೆ. ಲಂಚಗುಳಿತನ ಅವರಿಗೆ ಹೆಮ್ಮೆಯ ವಿಷಯ. ಯಾರದೋ ಹಣದಲ್ಲಿ ಮಜ ಮಾಡುವುದು ಪ್ರತಿಷ್ಟೆ. ಅಷ್ಟೆಲ್ಲಾ ಏಕೆ, ಒಬ್ಬ ಹೆಣ್ಣು ಮಗಳ ಜೊತೆ ಹೇಗೆ ನಡೆದುಕೊಳ್ಳಬೇಕು ಅಥವಾ ಅವಳನ್ನು ಹೇಗೆ ಕಾಣಬೇಕು, ಗೌರವಿಸಬೇಕೆಂಬುದನ್ನು ನಾವು ಶಾಲೆಯಲ್ಲಿ ಕಲಿಸಿ ಬೆಳೆಸುವುದಿಲ್ಲ. ಕೇವಲ ಬೋಧನೆಯಲ್ಲಿರುತ್ತದೆ. ಒಬ್ಬ ಹೆಣ್ಣು ಮಗಳು ಸ್ವಲ್ಪ ಚುರುಕಾಗಿ ಓಡಾಡಿದರೆ ಅವಳನ್ನು ಬೇರೆಯ ರೀತಿ ಕಾಣುವ ದುಷ್ಟ ಮನಸ್ಥಿತಿಯನ್ನು ಕೊಡುತ್ತಿದೆ. ಪೋಷಕರು ಕೂಡ ಹೊಣೆಗಾರರು, ಅದರ ಜೊತೆಗೆ ಸುತ್ತಣ ಸಮಾಜವೂ ಕೂಡ. ನಾನು ಚಿಕ್ಕವನಿದ್ದಾಗ ಊರಿನ ಯಾವ ಮಗುವು ತಪ್ಪು ಮಾಡಿದರೂ ಯಾರಾದರೂ ಒಬ್ಬರು ಬಂದು ಗದರಿಸಿ ತಿದ್ದು ತಿದ್ದರು. ಆ ಸಮಯದಲ್ಲಿ ಪೋಷಕರೇ ಹೇಳುತ್ತಿದ್ದರು, ಕೊಡು ಒಂದೆರಡನ್ನು ಎಷ್ಟು ಹೇಳಿದರು ಬುದ್ದಿ ಕಲಿಯುವುದಿಲ್ಲವೆಂದು. ಈಗ, ಹೊರಗಿನವರಿರಲಿ ಮನೆಯವರು ಹೊಡೆದರೆ ಸಾಕು ದೊಡ್ಡ ರಾದಾಂತವಾಗುತ್ತದೆ, ಟಿವಿಯವರು ಬಂದು ಬಿಡುತ್ತಾರೆ. ಇನ್ನು ಮಕ್ಕಳು ಭಯ ಭಕ್ತಿಯಿಂದ ಕಲಿಯುವುದೆಲ್ಲಿ?
ಅದರ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಕೋಟ್ಯಾಂತರ ಜನರು ಅವರ ಜೀವನವನ್ನೇ ಕಟ್ಟಿಕೊಳ್ಳಲಾಗದೇ ಒದ್ದಾಡುತ್ತಿದ್ದಾರೆ. ಅವರಿಗೆ ಆ ದಿನದ ಜೀವನವನ್ನು ಸಾಗಿಸುವದೇ ಹರಸಾಹಸ. ಸಾಂಪ್ರದಾಯಿಕವಾಗಿ ಬಂದಿದ್ದ ಆತ್ಮಸ್ಥೈರ್ಯ ವಿಶ್ವಾಸವೆಲ್ಲಾ ಯಾವುದೋ ಒಂದು ಕಡೆಯಲ್ಲಿ ಕಳೆದುಹೋಗುತ್ತಿದೆ. ಓದಿರುವ ವಿದ್ಯಾವಂತ ಸಮುದಾಯ ಸೂಕ್ತ ಕೌಶಲ್ಯಗಳಿಲ್ಲದೇ ಮೌಲ್ಯಗಳ ಬೆಲೆ ಅರಿಯದೇ ಸಂಕುಚಿತವಾಗುತ್ತಿದ್ದಾರೆ. ಇದ್ಯಾವುದು ತಪ್ಪಲ್ಲ. ಏಕೆಂದರೆ ನಾವು ಶಾಲೆಗಳಲ್ಲಿ ಏನನ್ನು ಕಲಿಸಬೇಕಿತ್ತೋ ಅದನ್ನು ಮಾಡಲಿಲ್ಲ, ಅದರ ಜೊತೆಗೆ ಅವರುಗಳು ಬೌದ್ಧಿಕವಾಗಿ ಬೆಳೆಯಲು ಅವಶ್ಯಕವಿದ್ದ ಓದನ್ನು ಅಥವಾ ಓದುವ (ಪುಸ್ತಕಗಳು, ಕಾದಂಬರಿಗಳು, ಇತರೆ ಓದನ್ನು) ಹವ್ಯಾಸವನ್ನು ಬೆಳೆಸಿಕೊಳ್ಳಲಿಲ್ಲ. ಲೇಖನ ಉದ್ದವಾಗುತ್ತಿದೆ, ಆದರೂ ಬಹುಮುಖ್ಯ ಘಟ್ಟವಿದಾಗಿರುವುದರಿಂದ ಈ ವಿಚಾರಗಳ ಕಿರುಪರಿಚಯ ಮಾಡಿಸಿರುತ್ತೇನೆ.
ಮನುಷ್ಯ ತಾನಂದು ಕೊಂಡಿರುವುದಕ್ಕಿಂತ ದೊಡ್ಡ ವ್ಯಕ್ತಿಯೆನ್ನುವುದನ್ನು ಮೊದಲು ಅರಿಯಬೇಕು. ಇಡೀ ಜಗತ್ತಿಗೆ ಹಂಚುವಷ್ಟು ಪ್ರೀತಿ ಅವನ ಹೃದಯಾಂತರಾಳದಲ್ಲಿದೆ, ಅದನ್ನು ಅವನು ಹುಡುಕಿಕೊಳ್ಳಬೇಕು ಮತ್ತು ಪಸರಿಸಬೇಕು. ಸ್ವಾರ್ಥತೆಯಿಂದ, ಜಾತಿ, ಧರ್ಮ, ಅಂಧಕಾರ, ಅಂದಾಭಿಮಾನ, ಅಹಂ, ಅಹಂಕಾರ, ಸಣ್ಣತನ, ಇವೆಲ್ಲವನ್ನೂ ಮೀರುವ ಶಕ್ತಿ ಅವನಿಗಿದೆ ಅದನ್ನು ಅರಿಯಬೇಕು, ಅನುಸರಿಸಬೇಕು. ಇದೆಲ್ಲವೂ ಆಗುವುದು ಎರಡರಿಂದ ಮಾತ್ರ, ಮೊದಲನೆಯದಾಗಿ ಉತ್ತಮ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ನಾನು ಗಮನಿಸಿದ ಹಾಗೆ, ಪಠ್ಯ ಪುಸ್ತಕಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ಬಿಟ್ಟರೆ ಬೇರೆ ರೀತಿಯ ಪುಸ್ತಕಗಳನ್ನು ಬಹುತೇಕರು ಓದುವುದಿಲ್ಲ. ಎರಡನೆಯದಾಗಿ, ಜಗತ್ತನ್ನು ಸುತ್ತಬೇಕು ಅಲ್ಲಿನ ಜನರೊಂದಿಗೆ ಬೆರೆಯಬೇಕು. ಬೇರೆಯವರ ಜೀವನವನ್ನು ತಿಳಿಯುವ ಕುತೂಹಲ ಮತ್ತು ಆಸಕ್ತಿಯಿರಬೇಕು. ಜೀವನದ ಬಗ್ಗೆ ಅಸಡ್ಡಿಯಿರಬಾರದು.
ನಾನು ಸದಾ ಹೇಳುತ್ತಿರುತ್ತೇನೆ. ಮನುಷ್ಯ ಆಲೋಚನೆಗಳಲ್ಲಿ ಮಗ್ನನಾಗಿರಬೇಕು, ಕಲಿಯುತ್ತಿರಬೇಕು, ಬೆಳೆಯುತ್ತಿರಬೇಕು, ಬೆರೆಯುತ್ತಿರಬೇಕು. ಬೌದ್ಧಿಕ ವಿಕಸನ ಬಹಳ ಮುಖ್ಯ. ಇಲ್ಲವಾದಲ್ಲಿ ತಾನೇ ದೊಡ್ಡವನೆಂಬ ಅಹಂ ಅಥವಾ ನಾನೇನೂ ಅಲ್ಲವೆನ್ನುವ ಸಂಕುಚಿತದೊಂದಿಗೆ ಕೊಳೆತುಹೋಗುತ್ತಾನೆ. ಇದರ ಬಗ್ಗೆ ಮುಂದಿನ ಬರವಣಿಗೆಯಲ್ಲಿ ವಿಸ್ತರಿಸುತ್ತೇನೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ