24 ಜನವರಿ 2018

ಅವಲೋಕಿಸೋಣ ಜೊತೆಗೂಡಿ ಪರಿಹಾರವನ್ನು ಕಂಡುಹಿಡಿಯೋಣ......


ಬಹಳ ವರ್ಷಗಳಿಂದ ನನ್ನೊಳಗೆ ಕೊರೆಯುತ್ತಿದ್ದ ಕೆಲವು ವಿಷಯಗಳ ಕುರಿತು ಈಗ ಬರೆಯುವ ಮನಸ್ಸಾಗಿದೆ. ಅದರಲ್ಲಿ ಮೊದ¯ನೆಯ ವಿಷಯ ಅರಕಲಗೂಡು ವಿಧಾನಸಭಾ ಕ್ಷೆತ್ರದ ರಾಜಕೀಯ ಮತ್ತು ಅಭಿವೃದ್ದಿ. ನಾನು ಇಲ್ಲಿ ಅರಕಲಗೂಡಿನ ವಿಷಯವನ್ನು ಹೇಳುತ್ತಿದ್ದರೂ ಅದು ಬೇರೆ ಕ್ಷೆತ್ರಕ್ಕೆ ಹಿಡಿದ ಕನ್ನಡಿಯಂತೆ ಕಾಣಬಹುದೆಂಬುದು ನನ್ನ ನಂಬಿಕೆ. ಏಕೆಂದರೆ ಬೇರೆ ತಾಲ್ಲೂಕುಗಳಲ್ಲಿ ನಾನು ಸುತ್ತಾಡುವಾಗ, ಚರ್ಚಿಸುವಾಗಲೂ ಈ ರೀತಿಯ ಮಾತುಗಳು ಬಂದಿವೆ. 

ನಾನು ಗಮನಿಸಿದಂತೆ ಬಹಳ ಕಡಿಮೆ ಕ್ಷೇತ್ರಗಳಲ್ಲಿ ಮಾತ್ರ ಚುನಾವಣೆಯನ್ನು ಅಬಿವೃದ್ದಿ ದೃಷ್ಠಿಯಿಂದ ನೋಡುತ್ತಾರೆ, ಹೆಚ್ಚಿನ ಭಾಗದಲ್ಲಿ ಜಾತಿ ಮತ್ತು ಹಣದಿಂದಲೇ ನೋಡುತ್ತಿದ್ದಾರೆಂಬುದು ನನ್ನ ಅನುಭವ. ಹಣ ಕೊಟ್ಟರೆ ಓಟ್ ಹಾಕುತ್ತಾರೆಂಬುದು ಅಭ್ಯರ್ಥಿಗಳ ಮನೋಭಾವ ಅದರಂತೆ ಜನರು ಕೂಡ ಜಾತಿಯನ್ನು ನೋಡಿ ಅಥವಾ ಹಣದ ಆಮೀಷಕ್ಕೆ ಬಲಿಯಾಗುತ್ತಿದ್ದಾರೆ. ಅದೇನೇ ಆದರೂ, ಯಾವೊಂದು ತಾಲ್ಲೂಕನ್ನು ವೈಜ್ಞಾನಿಕವಾಗಿ ಅಬಿವೃದ್ದಿ ಪಡಿಸುವ ಕಡೆಗೆ ಆಲೋಚಿಸುವವರು ಕಡಿಮೆಯಾಗಿದ್ದಾರೆ. ಅದಕ್ಕೆ ಮತ್ತೊಂದು ಕಾರಣ ಮತದಾರರೂ ಆಗಿರಬಹುದು. ಆದ್ದರಿಂದ ಈ ಬರವಣಿಗೆಯಲ್ಲಿ ನಮ್ಮ ಅರಕಲಗೂಡಿನ ವಿದ್ಯಾವಂತ ಯುವಕರು ತಮ್ಮ ಐದು ನಿಮಿಷವನ್ನು ಈ ಬರವಣಿಗೆಗೆ ಮೀಸಲಿಟ್ಟು ಆಲೋಚಿಸಬೇಕಾಗಿ ವಿನಂತಿ. ನಿಮಗೆ ನನ್ನ ಮಾತು ತಪ್ಪು ಎನಿಸಿದರೆ ಚರ್ಚಿಸೋಣ, ಸರಿ ಎನಿಸಿದರೂ ಚರ್ಚಿಸೋಣ. ಉತ್ತಮ ಸಮಾಜ ನಿರ್ಮಾಣ ನಮ್ಮೆಲ್ಲರ ಗುರಿಯಾಗಲಿ. 

ಕಳೆದ ಇಪ್ಪತ್ತು ವರ್ಷಗಳಿಂದ ನಾನು ನೋಡುತ್ತಾ ಬಂದಿದ್ದೇನೆ. ನಮ್ಮ ತಾಲ್ಲೂಕಿನಲ್ಲಿ ಹೇಳಿಕೊಳ್ಳುವಂತಹ ಅಥವಾ ತೋರಿಸುವಂತಹ ಬದಲಾವಣೆಯ ಬೆಳವಣಿಗೆಗೆಗಳು ಕಾಣಲಿಲ್ಲ. ಇದಕ್ಕೆ ಮೂಲ ಕಾರಣ, ಆಯ್ಕೆಯಾದ ಜನಪ್ರತಿನಿಧಿಗಳು. ಮೊದಲನೆಯದಾಗಿ, ಕಾಂಗ್ರೇಸ್ ಪಕ್ಷದ ಎ. ಮಂಜುರವರು ಕಳೆದ ಎರಡು ಬಾರಿ ಗೆದ್ದಿದ್ದಾರೆ, ಅವರ ವಿರುದ್ಧ ಸೋತಿದ್ದ ಜೆಡಿಎಸ್‍ನ ಎ.ಟಿ.ರಾಮಸ್ವಾಮಿಯವರು ಸೋತ ಮೇಲೆ ಸದ್ದಿಲ್ಲದೆ ಇದ್ದರು. ಈಗ ಚುನಾವಣೆ ಸಮಯದಲ್ಲಿ ಮತ್ತೊಮ್ಮೆ ಬಂದಿದ್ದಾರೆ. ಇವರನ್ನ ಬಿಟ್ಟರೆ ಅವರು, ಅವರನ್ನ ಬಿಟ್ಟರೆ ಇವರು ಎನ್ನುವಂತೆ ತಾಲ್ಲೂಕಿನಲ್ಲಿದೆ. ಅಂದರೆ, ಇವರಿಬ್ಬರನ್ನು ಬಿಟ್ಟರೆ ಅದೇ ಪಕ್ಷದಲ್ಲಿ ಬೇರೊಬ್ಬ ನಾಯಕರೇ ಇಲ್ಲ!

ಹಾಗಾಗಿಯೇ ಕೆಲಸ ಮಾಡಿದರೂ ಸರಿ ಮಾಡದೇ ಹೋದರೂ ಸರಿ ಗೆಲ್ಲುತ್ತೇವೆ ಎನ್ನುವ ಮಟ್ಟಕ್ಕೆ ಈ ನಾಯಕರುಗಳು ತಲುಪಿದ್ದಾರೆ. ಅನೇಕ ಅಭ್ಯರ್ಥಿಗಳಿಗೆ ತಮ್ಮ ಕ್ಷೇತ್ರದ ಕುರಿತು ಕನಸೆಂಬುದು ಇರುವುದಿಲ್ಲ. ಯಾರಾದರೂ ಅವರನ್ನು ನಾನು ನಿಮಗೆ ಏಕೆ ಓಟು ಹಾಕಬೇಕು ಎಂದರೆ. ಅವರ ಬಳಿಯಲ್ಲಿ ಉತ್ತರವಿರುವುದಿಲ್ಲ. ಅವರುಗಳು ಸರ್ವೇಸಾಮಾನ್ಯವಾಗಿ ಹೇಳುವ ಉತ್ತರಗಳಿವು,
ಒಳ್ಳೆಯ ಕೆಲಸಗಳನ್ನು ಮಾಡುತ್ತೇನೆ – ಒಳ್ಳೆಯ ಕೆಲಸಗಳೆಂದರೇ ಯಾವುದು?
ನಿಮ್ಮೂರಿನ ಸಮಸ್ಯೆಗಳನ್ನು ಬಗೆಹರಿಸುತ್ತೇನೆ - ನಮ್ಮೂರಿನ ಯಾವ ಸಮಸ್ಯೆಯನ್ನು ಬಗೆಹರಿಸುತ್ತೀರಿ?
ಆದ್ದರಿಂದ ಮೊದಲು ಕ್ಷೇತ್ರದ ಸಮಸ್ಯೆಗಳೇನು? ಯಾವ ಕ್ಷೇತ್ರದಲ್ಲಿ ಏನು ಕೊರತೆಯಿದೆ? ಯಾವ ಹೋಬಳಿಯಲ್ಲಿ ಏನು ಸಮಸ್ಯೆ? ಅಥವಾ ಯಾವ ವರ್ಗದವರಲ್ಲಿ ಯಾವ ಸಮಸ್ಯೆ?
ಉದಾಹರಣೆಗೆ: 
ವಿದ್ಯಾರ್ಥಿಗಳ ಸಮಸ್ಯೆ ಏನು? ಯಾವ ಹಂತದವರಿಗೆ ಯಾವ ಸಮಸ್ಯೆ - ಶಾಲಾ ಮಕ್ಕಳಿಗೆ, ಪಿಯುಸಿ, ಕಾಲೇಜು, ಸ್ನಾತಕ್ಕೊತ್ತರ
ನಿರುದ್ಯೋಗಿಗಳ ಸಮಸ್ಯೆಗಳೇನು?
ಹಿರಿಯ ನಾಗರೀಕರ ಸಮಸ್ಯೆಗಳೇನು?
ಮಹಿಳೆಯರ ಸಮಸ್ಯೆಗಳೇನು? ದೀನರ ದಲಿತರ ಸಮಸ್ಯೆಗಳೇನು? 
ರೈತರ ಸಮಸ್ಯೆಗಳೇನು? ಅದರಲ್ಲಿಯೂ ಹೊಗೆಸೊಪ್ಪು, ಆಲೂಗೆಡ್ಡೆ, ಅಥವಾ ಹಾರಂಗಿ ನಾಲಾ ವ್ಯಾಪ್ತಿ, ಹೇಮಾವತಿ ವ್ಯಾಪ್ತಿ, ಕಟ್ಟೇಪುರ ನಾಲಾ ವ್ಯಾಪ್ತಿ, ಕೆರೆ ಬಯಲಿನವರು, ಮಳೆ ನೀರನ್ನು ಅವಲಂಬಿಸಿರುವವರು
ಮಾರುಕಟ್ಟೆಯ ಕುರಿತಾದ ಸಮಸ್ಯೆಗಳೇನು?
ಆರೋಗ್ಯ
ಕುಡಿಯುವ ನೀರಿನ ಸಮಸ್ಯೆಗಳೇನು?
ರಸ್ತೆಗಳು

ಹೀಗೆ ಮೊದಲು ಸಮಸ್ಯೆಗಳನ್ನು ಪಟ್ಟಿ ಮಾಡಿ, ಆ ಸಮಸ್ಯೆ ಎಷ್ಟು ವರ್ಷದಿಂದ ಇದೆ, ಅದಕ್ಕೆ ಪರಿಹಾರ ಏಕೆ ಸಿಕ್ಕಿಲ್ಲವೆನ್ನುವುದನ್ನು ಅವಲೋಕಿಸಿ ಸೂಕ್ತ ಪರಿಹಾರವನ್ನ ಹುಡುಕಬೇಕು. 
ಉದಾಹರಣೆಗೆ: 
ಹಾರಂಗಿ ಅಥವಾ ಹೇಮಾವತಿ ನಾಲಾ ಬಯಲಿನ ರೈತರಿಗೆ, ಪ್ರತಿವರ್ಷವೂ ಹಾರಂಗಿ ಅಣೆಕಟ್ಟು ತುಂಬುತ್ತದೆ. ಅದರ ನೀರನ್ನು ನೇರವಾಗಿ ನದಿಗೆ ಬಿಟ್ಟು ಕೆ.ಆರ್‍ಎಸ್ ಗೆ ಕಳುಹಿಸುವ ಬದಲು ನಾಲೆಗಳಿಗೆ ಹರಿಸಿ, ನಾಲೆಯಿಂದ ಉಳಿದ ನೀರು ನದಿ ಸೇರುವಂತೆ ಮಾಡಬೇಕು. ಇದರಿಂದ ರೈತರಿಗೆ ಸಂಪೂರ್ಣವಾಗಿ ನೀರು ಸಿಗದೇಯಿದ್ದರೂ ಅಂತರ್ಜಲ ಹೆಚ್ಚಿಸಲು, ಕೆರೆ ಕಟ್ಟೆಗಳು ತುಂಬಿದರೆ, ದನ ಕರುಗಳಿಗೆ ಕುಡಿಯಲು ಅನುಕೂಲವಾಗುತ್ತದೆ. 

ಆದ್ದರಿಂದ ಈ ಲೇಖನವನ್ನು ಓದಿದ ಮೇಲೆ, ನಿಮ್ಮ ಅನುಭವಕ್ಕೆ ಬಂದಿರುವ ಅಥವಾ ಮನಸ್ಸಿಗೆ ತೋಚುವ ಐಡಿಯಾಗಳನ್ನು ದಯವಿಟ್ಟು ಹಂಚಿಕೊಳ್ಳಿ. ಮೊದಲು ಸಮಸ್ಯೆಗಳ ಪಟ್ಟಿ ಮಾಡೋಣ ನಂತರ ನಾವೆಲ್ಲರೂ ಜೊತೆಯಾಗಿ ಸೇರಿ ಪರಿಹಾರವನ್ನು ಕಂಡುಹಿಡಿಯೋಣ. ಒಂದಾಗಿದ್ದರೇ ಬಾಳು ಬದುಕು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕನಸು-ನನಸಿನ ಪಯಣದ ಹಾದಿಯಲಿ ಬದ್ಧತೆ, ಜವಬ್ದಾರಿ, ಸೋಲಿನ ಭೀತಿ!!!

  ೨೯.೦೮.೨೦೨೪ ನಾವು ನಮ್ಮ ಕನಸುಗಳನ್ನು, ಆಸೆಗಳನ್ನು, ಬಯಕೆಗಳನ್ನು ಬೇರೆಯವರೊಂದಿಗೆ ಏಕೆ ಹಂಚಿಕೊಳ್ಳಬೇಕು? ಇದರ ಕುರಿತು ಸ್ವಲ್ಪ ಚರ್ಚಿಸೋಣ. ಮುಕ್ತವಾಗಿ. ಪ್ರತಿಯೊ...