21 ಮೇ 2021

ವಿಶ್ವ ಜೀವ-ವೈವಿಧ್ಯ ದಿನ 2021 : ಜೀವ ಜಗತ್ತು -- ಅಗಣಿತ ಜೀವ ಭಂಡಾರ. ಲೇಖನ : ಟಿ.ಜಿ.ಪ್ರೇಮಕುಮಾರ್





 ಇಂದು (ಮೇ 22 ರಂದು) " ವಿಶ್ವ ಜೀವ – ವೈವಿಧ್ಯ ದಿನ". ( World Biodiversity Day) ಈ ದಿನವು ವಿಶ್ವ ಜೀವ-ವೈವಿಧ್ಯ ಸಂರಕ್ಷಣೆಯ  ಜಾಗತಿಕ ಜಾಗೃತಿ ದಿನವಾಗಿದೆ.*  ಜೀವ ವೈವಿಧ್ಯತೆಯ ಮಹತ್ವವನ್ನು ಅರ್ಥ ಮಾಡಿಸಲು ವಿಶ್ವಸಂಸ್ಥೆಯು ಈ ದಿನವನ್ನು ಮಡಿಪಾಗಿಟ್ಟಿದೆ. ಕೊರೊನಾ ವೈರಸ್ ಸೋಂಕು ಮಾನವನನ್ನು ಕಾಡುತ್ತಿರುವ ಈ ಸಂದರ್ಭದಲ್ಲಿ ಜೀವ ವೈವಿಧ್ಯ ಸಂರಕ್ಷಣೆಯು ಅತ್ಯಂತ  ಪ್ರಸ್ತುತ. 


    1993 ರಿಂದ ಪ್ರತಿ ವರ್ಷ ಮೇ 22 ರಂದು ವಿಶ್ವ ಜೀವ ವೈವಿಧ್ಯ ದಿನವನ್ನು ಆಚರಿಸಲಾಗುತ್ತಿದೆ. ಇದೀಗ ಕಳೆದ 28 ವರ್ಷಗಳಿಂದ ಈ ದಿನವನ್ನು ಆಚರಿಸಲಾಗುತ್ತಿದ್ದು, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ, ಜೀವವೈವಿಧ್ಯ ಸಂರಕ್ಷಣೆಯ ಕುರಿತು ಜನ ಜಾಗೃತಿ ಮೂಡಿಸಲು ಸಂಕಲ್ಪ ಮಾಡಲಾಗುತ್ತಿದೆ. 


   ಜೀವ ವೈವಿಧ್ಯವನ್ನು ಸಂರಕ್ಷಿಸುವುದು ಎಂದರೆ ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ಕಾಪಾಡುವುದು. ಅದಕ್ಕೆಂದೇ ನಾವು ನಮ್ಮ ಅರಣ್ಯ ಮತ್ತು ಸಮುದ್ರವನ್ನು ರಕ್ಷಿಸಬೇಕಿದೆ. ಯಾವುದೇ ಜೀವ ಸಂಕುಲ ಅಳಿವಿನಂಚಿಗೆ ಹೋಗುವುದನ್ನು ತಡೆಗಟ್ಟುವುದು ನಮ್ಮ ಗುರುತರ ಜವಾಬ್ದಾರಿಯಾಗಿದೆ. 


     ನಾವು ‘ಇನ್ನಾದರೂ ನಮ್ಮ ಜೀವ ವೈವಿಧ್ಯವನ್ನು ಅರ್ಥ ಮಾಡಿಕೊಂಡು ಅದನ್ನು ಉಳಿಸಲು ಪಣ ತೊಡದಿದ್ದಲ್ಲಿ ಮಾನವ ಜೀವಿ ಕೂಡ ಸರ್ವ ನಾಶವಾಗುವ ದಿನಗಳು ದೂರವಿಲ್ಲ’ ಎಂಬ ಎಚ್ಚರಿಕೆಯ ಗಂಟೆಯನ್ನು ವಿಶ್ವಸಂಸ್ಥೆ ನಮ್ಮನ್ನು ಎಚ್ಚರಿಸಿದೆ. 


ದಿನೇ ದಿನೇ ಹೆಚ್ಚುತ್ತಿರುವ ಮಹಾಮಾರಿ ಕೊರೋನಾ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ಈ ಮಾತು. ಈ ಭೂಮಿಯಲ್ಲಿ ಒಂದು ಸಣ್ಣ ಗಿಡಮೂಲಿಕೆಯಿಂದ ಹಿಡಿದು  ಸಣ್ಣ ಕ್ರಿಮಿಕೀಟಗಳು, ಸೂಕ್ಷ್ಮಾಣು ಜೀವಿಗಳು ಸೇರಿದಂತೆ ಕೋಟ್ಯಂತರ ಜೀವಿಗಳಿವೆ. ಇವುಗಳ ಜೀವನ ಒಂದಕ್ಕೊಂದು ಹೆಣೆದುಕೊಂಡಿವೆ. ಇವೆಲ್ಲಾ ಆಹಾರ ಸರಪಳಿಯ ಕೊಂಡಿಯಾಗಿವೆ. ಹುಲ್ಲಿನಿಂದ ಹಿಡಿದು ಮಾನವನವರೆಗೂ, ಕೀಟದಿಂದ ಹದ್ದಿನವರೆಗೂ ಆಹಾರ ಸರಪಳಿ ಹರಡಿಕೊಂಡಿದೆ. ಇವುಗಳಲ್ಲಿ ಒಂದು ಕೊಂಡಿ ಕಳಚಿ ನಾಶವಾದರೂ ಇಡೀ ಜೀವ ಸರಪಳಿಯೇ ನಾಶವಾಗುತ್ತದೆ.


  ‘ಜೀವಿ ವೈವಿಧ್ಯ’ ಎಂಬುದು ನಮ್ಮ ಮತ್ತು ಎಲ್ಲಾ ಜೀವಿಗಳು ಬದುಕುಳಿಯುವ ವೇದ್ಯವಾಗಿದೆ . ಜೀವಿ ವೈವಿಧ್ಯ ಜಾಸ್ತಿ ಇದ್ದ ತಾಣವೆಲ್ಲ ನಿಸರ್ಗದ ದೃಷ್ಠಿಯಿಂದ ಶ್ರೀಮಂತ ತಾಣಗಳು. ಅವು ಜೀವಸಂಪತ್ತಿನ ಖಜಾನೆಗಳು. ಅವು ಅಷ್ಟೇ ಸೂಕ್ಷ್ಮಾಣವಾದ ತಾಣಗಳೂ ಹೌದು.  ಅವುಗಳನ್ನು ಭವಿಷ್ಯದ ದೃಷ್ಠಿಯಿಂದ ಜೋಪಾನವಾಗಿ ಕಾಪಾಡಬೇಕು.   


     ಮನುಷ್ಯ ಪ್ರಾಣಿ ತನ್ನ  ಆಸೆಯಿಂದ ಭೂಮಿ ಮತ್ತು ಜೀವತಾಣಗಳ ಮೇಲೆ ಬಲಾಢ್ಯವಾಗಿ ದಾಳಿಯಿಟ್ಟ ಕಾರಣ ಪ್ರಪಂಚದ ಈ ಶ್ರೀಮಂತ ತಾಣಗಳು ಧ್ವಂಸ ಆಗುತ್ತಿವೆ. ಅವು ನಾಶವಾಗದಂತೆ ತಡೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. 


   ಪ್ರಕೃತಿ  ಎಂದರೆ ಪ್ರಶ್ನಾತೀತವಾದ ವಿಸ್ಮಯ.  ಸುತ್ತಲೂ ಹಚ್ಚ ಹಸಿರಿನ ಕಾಡು. ಗಿಡ ಬಳ್ಳಿಯ ಸೆರಗಿನಲ್ಲಿ ಚಿಲಿಪಿಲಿಗುಟ್ಟುವ ಹಕ್ಕಿಗಳು. ಗರ್ಜಿಸುವ ಹುಲಿ-ಸಿಂಹಗಳು, ಸೊಂಡಿಲಾಡಿಸುತ್ತಾ ಘೀಳಿಡುವ ಆನೆ ಒಂದೆಡೆಯಾದರೆ, ಕೋಗಿಲೆಗಳ ಇಂಪು, ನವಿಲುಗಳ ನರ್ತನ ಮತ್ತೊಂದೆಡೆ. ನದಿ-ತೆರೆ, ಝರಿಗಳ ಝುಳು ಝುಳು ನಿನಾದ. ಎಲ್ಲವೂ ರುದ್ರ ರಮಣೀಯವೇ. ವಿಸ್ಮಯಗಳ ತವರೂರು ಈ ಭೂಮಿಯಲ್ಲಿ ಅದೆಷ್ಟು ಜೀವಜಂತುಗಳಿವೆಯೋ, ಲೆಕ್ಕಕ್ಕೆ ಸಿಕ್ಕವು ಒಂದಷ್ಟಾದರೆ, ಲೆಕ್ಕದ ಪರಿಧಿಗೇ ಬಾರದವು ಮತ್ತೆಷ್ಟೋ. ಈ ಜಗತ್ತಿನ ಸೌಂದರ್ಯ ಅಡಗಿರುವುದೇ ಜೀವ ವೈವಿಧ್ಯಗಳಿಂದಾಗಿ.  ಆಹಾರ ಸರಪಳಿಯಲ್ಲಿ ಯಾವುದೇ ಕೊಂಡಿ ಕಳಚಿದರೂ ಈ ಭೂಮಿಗೆ ಅಪಾಯ ತಪ್ಪಿದ್ದಲ್ಲ. ಆಹಾರ ಸರಪಳಿಯ ಕೊಂಡಿ ಎಂದಿಗೂ ಮುರಿಯದಂತೆ, ಅಡಿಗಡಿಗೆ ಸಲಹೆ ಜತನ ಮಾಡುತ್ತಿರುವ ಸೃಷ್ಟಿಶಕ್ತಿಯೆದುರು ಮನುಷ್ಯ ತಲೆಬಾಗಬೇಕು. 


    ಈ ವಿಸ್ಮಯಗಳ ತವರೂರಾದ ಧರಿತ್ರಿಯಲ್ಲಿ ಅಗಣಿತವಾದ ಜೀವ-ಸಂಕುಲಗಳು ಜನ್ಮವೆತ್ತಿವೆ. ಇದೇ ನಮ್ಮ ಜೀವ-ವೈವಿಧ್ಯದ ತಾಣ. ಈ ಪ್ರಕೃತಿಯ ಸಂಪನ್ಮೂಲಗಳು, ಸಸ್ಯ, ಪ್ರಾಣಿ ಹಾಗೂ ಜೀವಿ ಸಂಕುಲಗಳ ಸೊಬಗನ್ನು ನೆನಪಿಸಿ, ಸಂರಕ್ಷಣೆಗೆ ಪಣತೊಡುವ ದಿನವೇ ಜೀವ ವೈವಿಧ್ಯ ದಿನವಾಗಿದೆ. 


   ಜೀವ ವೈವಿಧ್ಯವನ್ನು ಕಾಪಾಡುವ, ಉಳಿಸಿ, ಬೆಳೆಸುವ ಸಂಕಲ್ಪಕ್ಕೆ ನಾವು ಬದ್ಧರಾಗಬೇಕಿದೆ. ಜೀವ ವೈವಿಧ್ಯತೆಯ ವಿನಾಶವನ್ನು ಕಡಿಮೆ ಮಾಡಿ ಉತ್ತೇಜಿಸಲು ಕಳೆದ ದಶಕವನ್ನು ವಿಶ್ವಸಂಸ್ಥೆಯ ಜೀವ ವೈವಿಧ್ಯತೆ ದಶಕ ಎಂದು ವಿಶ್ವಸಂಸ್ಥೆ ಘೋಷಿಸಿತ್ತು.


 ಜೀವ ವೈವಿಧ್ಯತೆಯು ‘ಒಂದು ಪ್ರದೇಶದ ಜೀನ್‌ಗಳು, ಪ್ರಭೇದಗಳು ಮತ್ತು ಪರಿಸರ ವ್ಯವಸ್ಥೆಗಳ ಸಂಪೂರ್ಣತೆ’ಯನ್ನು ಉಲ್ಲೇಖಿಸುತ್ತದೆ. ಜೀವ ವೈವಿಧ್ಯತೆಯಲ್ಲಿ ಮೂರು ಹಂತಗಳಿವೆ.ಪ್ರಭೇದ ವೈವಿಧ್ಯತೆ, ಪರಿಸರ ವೈವಿಧ್ಯತೆ ಮತ್ತು ತಳಿ ವೈವಿಧ್ಯತೆ, ಹವಾಮಾನ ಬದಲಾವಣೆಯಿಂದಾಗುವ ಪರಿಣಾಮಗಳಾದ ಜೀವಿಗಳ ನಷ್ಟ, ಆವಾಸಸ್ಥಾನಗಳ ನಾಶ, ಆಕ್ರಮಣಶೀಲ ಜಾತಿಗಳು, ಅನುವಂಶಿಕ ಮಾಲಿನ್ಯ, ಶೋಷಣೆ ಮತ್ತು ಪರಿಣಾಮಗಳು ಸೇರಿದಂತೆ ಪರಿಸರ ಸಂರಕ್ಷಣೆಯಲ್ಲಿ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಜೀವವೈವಿಧ್ಯತೆ ಪದವನ್ನು ಬಳಸಲಾಗುತ್ತದೆ.



   ಪ್ರಕೃತಿಯಲ್ಲಿ ಸಮಸ್ಯೆಗೆ ಪರಿಹಾರ : ವಿಶ್ವ ಜೀವ ವೈವಿಧ್ಯ ದಿನದ ಈ ವರ್ಷದ ಉದ್ಘೋಷಣೆ(ಥೀಮ್)ಯು ‘ನಾವು ಪರಿಹಾರದ ಭಾಗವಾಗಿದ್ದೇವೆ’ ಎಂಬುದು. ಅಂದರೆ ಪ್ರಕೃತಿಯಲ್ಲಿ ನಮ್ಮ ಸಮಸ್ಯೆಗೆ ಪರಿಹಾರಗಳಿವೆ. ಜೀವಿಗಳ ಸಂರಕ್ಷಣೆ, ಮನುಷ್ಯನ ಆರೋಗ್ಯ, ಜಲ ಸುರಕ್ಷತೆ, ಹವಾಮಾನ ವೈಪರೀತ್ಯ, ಆಹಾರ ಸುರಕ್ಷತೆ, ವಿಪತ್ತು ನಿರ್ವಹಣೆ, ಆರ್ಥಿಕ ಬೆಳವಣಿಗೆ - ಹೀಗೆ ಏನೇ ಇದ್ದರೂ ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ನೈಜ ಪರಿಹಾರ ಪ್ರಕೃತಿಯಲ್ಲೇ ಇದೆ. 


    ಅಂದರೆ ಪ್ರಕೃತಿಯ ಜೀವ ವೈವಿಧ್ಯದ ಮೇಲೆ ಮನುಷ್ಯ ನಡೆಸುವ ಆಕ್ರಮಣ, ಅವನನ್ನೇ ನಾಶ ಮಾಡುತ್ತದೆ ಎಂಬುದನ್ನು ನಾವು ಮನಗಾಣಬಹುದಾಗಿದೆ. 


     ಈಗ ನಾವು ಎದುರಿಸುತ್ತಿರುವ ಕೋರೋನಾ ವೈರಸ್ ಸೋಂಕು ಕೂಡ ಇದರಲ್ಲಿ ಒಂದು ಭಾಗವಾಗಿದೆ. ಕರ್ಫ್ಯೂ/ಲಾಕ್‌ಡೌನ್‌ಗಳ ಮೂಲಕ ಕ್ಷೀಣಗೊಂಡ ಮಾಲಿನ್ಯ,   ಸ್ವಚ್ಛವಾದ ಪರಿಸರ, ನದಿಗಳು, ಜಲಸಂಪನ್ಮೂಲಗಳು – ಇವೆಲ್ಲ ಇದಕ್ಕೆ ನಿದರ್ಶನವಾಗಿವೆ.


 ಪ್ರಕೃತಿ ಕಲಿಸಿದ ಪಾಠ : 

ಪ್ರಕೃತಿಯನ್ನೇ ಧೂಳಿಪಟಗೈಯುತ್ತಾ ಮುನ್ನುಗ್ಗುತ್ತಿದ್ದ ಮಾನವನ ದುರಾಸೆಯ ನಾಗಾಲೋಟಕ್ಕೆ ಇದೀಗ ಮಹಾಮಾರಿ ಕೊರೊನಾ ಕಡಿವಾಣ ಹಾಕಿದೆ. ಇದು ಈ ಕೊರೊನಾ ವೈರಸ್ ಸೋಂಕು ಹರಡುವಿಕೆಯು ಮಾನವನಿಗೆ ಪರಿಸರ ಪಾಠ ಕಲಿಸಿದೆ. 


ಲಾಕ್‌ಡೌನ್ ಸಂದರ್ಭ ಪ್ರಕೃತಿಯ ಲಾಕ್ ಓಪನ್ ಆಗಿದ್ದು, ಈ ಸಂದರ್ಭ ವನ್ಯಜೀವಿಗಳು ಸ್ವಚ್ಛಂದ ವಿಹಾರ ನಡೆಸಿದರೆ ಪರಿಸರದಲ್ಲಿ ಮಾಲಿನ್ಯ ಕ್ಷೀಣಿಸಿತು.


   ಅಗಣಿತ ಜೀವ ಭಂಡಾರ : ಭೂಮಿಯ ಜೀವ ಜಗತ್ತು ಅಗಣಿತ ಜೀವ ಭಂಡಾರ.  ‘ ಭುವಿಯ ಭಂಡಾರ’ – ಇದು ಜೀವ- ವೈವಿಧ್ಯಗಳನ್ನು ಪರಿಚಯಿಸುವ ತಾಣ.  ಭಾರತ ದೇಶದಲ್ಲಿ ಜೀವಿ ವೈವಿಧ್ಯತೆಯು ಶ್ರೀಮಂತಿಕೆಯಿಂದ ಕೂಡಿದೆ. ದೇಶದ ಪಶ್ಚಿಮಘಟ್ಟ ಪ್ರದೇಶವು ಜೀವಿ ವೈವಿಧ್ಯತೆಯ ಸೂಕ್ಷ್ಮ ತಾಣಗಳು ಎನಿಸಿದೆ.


    ಜೀವ- ವೈವಿಧ್ಯ ನಾಶದಿಂದ ಪರಿಸರದ ಮೇಲೆ ಹಾಗೂ ಮಾನವನ ಜೀವನ ಹಾಗೂ ಪ್ರಾಣಿ-ವನ್ಯ ಜೀವನದ ಮೇಲೆ ಏನೆಲ್ಲಾ ದುಷ್ಪರಿಣಾಮಗಳಾಗುತ್ತವೆ ಎಂಬ ಬಗ್ಗೆ ನಾವು ತುರ್ತು ಗಮನಹರಿಸದಿದ್ದಲ್ಲಿ ಭವಿಷ್ಯದಲ್ಲಿ ಗಂಡಾಂತರ ಪರಿಸ್ಥಿತಿ ಎದುರಿಸಬೇಕಾಗುತ್ತದೆ.


       ನೆಲ,ಜಲ, ವಾಯು ಮಾಲಿನ್ಯದಿಂದ  ಭೂಮಿಯ ಮೇಲಿನ ಸಸ್ಯ ಮತ್ತು ಪ್ರಾಣಿ ವೈವಿಧ್ಯ, ಬೆಳೆ ವೈವಿಧ್ಯ, ವನ್ಯಜೀವಿಗಳು ಮತ್ತು ಜಲಚರಗಳ ವೈವಿಧ್ಯತೆ, ಔಷಧೀಯ ವೈವಿಧ್ಯತೆ ಹೀಗೆ ಅನೇಕ ಜೀವ ಸಂಪತ್ತುಗಳು ನಶಿಸಿಹೋಗುತ್ತಿವೆ.


    ನಿಸರ್ಗದಲ್ಲಿ ಜೀವಿ ಪರಿಸರ ವ್ಯವಸ್ಥೆಯ ಕೊಂಡಿಯಾದ ಜೇನ್ನೊಣಗಳು ನಿರ್ನಾಮವಾದರೆ ನಾವು ಆಹಾರಕ್ಕಾಗಿ ಪರದಾಡಬೇಕಾಗುತ್ತದೆ.  ಹೀಗೆ ಜೀವಿಗಳ ಸಂತತಿ ನಾಶವಾದರೆ ಬರಗಾಲ ಬೆನ್ನಟ್ಟಿ ಬರುತ್ತದೆ. ಆದ್ದರಿಂದ ನಿಸರ್ಗದಲ್ಲಿ ಪ್ರತಿಯೊಂದು ಸೂಕ್ಷö್ಮಜೀವಿಗಳ ಸಂತತಿಯ ಉಳಿವು ಅತಿಮುಖ್ಯವಾದುದು. 

 

  ಈ ದಿಸೆಯಲ್ಲಿ ನಾವು ಉತ್ತಮ  ಭವಿಷ್ಯತ್ತಿಗಾಗಿ ಈ  ನೆಲ -ಜಲ, ಅರಣ್ಯ, ವನ್ಯಜೀವಿಗಳು ಹಾಗೂ ಜೀವಿ ವೈವಿಧ್ಯ ಸಂರಕ್ಷಿಸುವ ಮೂಲಕ  ಭೂಮಿಯನ್ನು ಸಂರಕ್ಷಿಸಬೇಕಿದೆ. 


---------------------------------------------------

ಲೇಖನ ಮಾಹಿತಿ :  ಟಿ.ಜಿ.ಪ್ರೇಮಕುಮಾರ್,

  ಮುಖ್ಯ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ,

    ಕೂಡುಮಂಗಳೂರು, ಕೊಡಗು ಜಿಲ್ಲೆ

(ಮೊಬೈಲ್ : 94485 88352) & 

ಜಿಲ್ಲಾ ಸಂಯೋಜಕರು, ಪರಿಸರ ಜಾಗೃತಿ ಆಂದೋಲನ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲೆ

        (ಮೊ.ನಂ: 94485 88352)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...