28.08.2024
ನಾನು
ಬಹಳಷ್ಟು ಬಾರಿ ಈ ವಿಚಾರವಾಗಿ ಚರ್ಚಿಸಿದ್ದೇನೆ ಮತ್ತು ಪದೇ ಪದೇ ಹೇಳುತ್ತಿರುತ್ತೇನೆ ಕೂಡ. ಒಂದು
ಊರಿನಲ್ಲಿ ನೂರು ಮನೆಗಳಿದ್ದು, ಎಲ್ಲರೂ ಶ್ರೀಮಂತರಾಗಿದ್ದು, ಆ ಊರಿನಲ್ಲಿ ಒಬ್ಬನೇ ಒಬ್ಬ ಕಳ್ಳನಿದ್ದರೆ
ಇಡೀ ಊರಿನ ಜನರಿಗೆ ನಿದ್ದೆ ಬರುವುದಿಲ್ಲ, ನೆಮ್ಮದಿ ಇರುವುದಿಲ್ಲ. ಹೌದಲ್ಲವೇ? ಹಾಗೆ ಗಮನಿಸುತ್ತಾ
ಹೋಗಿ, ಉದಾಹರಣೆಯೊಂದಿಗೆ ಹೇಳುತ್ತಿರುತ್ತೇನೆ. ನಿಮ್ಮ ಮನಸ್ಸಿಗೆ ಇನ್ನೊಂದಿಷ್ಟು ಉದಾಹರಣೆಗಳು ಸಿಗಬಹುದು.
ಒಂದು ಏರಿಯಾದಲ್ಲಿ ಚೈನ್ ಕಳ್ಳರು ಇದ್ದರೆ? ಮಹಿಳೆಯರು ಸುರಕ್ಷಿತವಾಗಿ ಓಡಾಡಲು ಸಾಧ್ಯವೇ? ಒಂದೂರಲ್ಲಿ
ಒಬ್ಬನೇ ಒಬ್ಬ ಅತ್ಯಾಚಾರಿ ಇದ್ದರೇ, ನೆಮ್ಮದಿಯಿಂದ ತಿರುಗಾಡಲು ಸಾಧ್ಯವೇ? ಮೇಷ್ಟ್ರು ಪಾಠ ಮಾಡುವಾಗ
ತರಗತಿಯಲ್ಲಿ ಒಬ್ಬನೇ ಒಬ್ಬ ತಲೆಹರಟೆ ವಿದ್ಯಾರ್ಥಿ ಇದ್ದರೇ, ನೆಮ್ಮದಿಯಿಂದ ಪಾಠ ಮಾಡುವುದಕ್ಕೆ ಸಾಧ್ಯವೇ?
ಪಾಠ ಕೇಳುವುದಕ್ಕೆ ಆಗುತ್ತದೆಯೇ? ಸಿನೆಮಾ ಥಿಯೇಟರಿನಲ್ಲಿ ಒಂದು ಪೊರ್ಕಿ ಗ್ಯಾಂಗ್ ಗಲಾಟೆ ಮಾಡುತ್ತಿದ್ದರೆ,
ಸಿನೆಮಾ ನೋಡಲು ಸಾಧ್ಯವೇ? ಇದನ್ನು ನನ್ನ ವೈಯಕ್ತಿಕ ಅನುಭವದಿಂದ ಹೇಳುತ್ತೇನೆ. ಈ ಲೇಖನ ಸ್ವಲ್ಪ ಉದ್ದವಾಗಬಹುದು
ಮತ್ತು ಅನೇಕ ಮಜಲುಗಳಿಗೆ ತಮ್ಮನ್ನು ಕೊಂಡೊಯ್ಯಬಹುದು, ಸಾವಧಾನದಿಂದ, ತಾಳ್ಮೆಯಿಂದ ಓದುತ್ತಾ, ಇದನ್ನು
ತಮ್ಮ ಜೀವನದ ಅನುಭವಕ್ಕೆ ತಾಳೆ ಮಾಡಿಕೊಳ್ಳಿ.
ಮೊದಲಿಗೆ,
ನನ್ನೂರು ಬಾನುಗೊಂದಿಯಲ್ಲಿ ೨೦೧೫-೧೬ರಲ್ಲಿ, ನಮ್ಮ ಶಾಲೆಯಲ್ಲಿ ಓದಿದ ಆಸಕ್ತ ಕೆಲವು ಹಿರಿಯ ವಿದ್ಯಾರ್ಥಿಗಳ
ತಂಡವನ್ನು ಮಾಡಿಕೊಂಡು ಅದ್ದೂರಿಯಾಗಿ ಗುರುವಂದನ ಕಾರ್ಯಕ್ರಮ ಮಾಡಿದೆವು. ಆ ಸಮಯಕ್ಕೆ ನಮ್ಮ ತಾಲ್ಲೂಕಿನಲ್ಲಿ
ಮೊದಲನೆಯ ಕಾರ್ಯಕ್ರಮ. ನನ್ನ ಜೊತೆಗೆ ಕೈ ಜೋಡಿಸಿದ ಹುಡುಗರು ವಯಸ್ಸಿನಲ್ಲಿ ಬಹಳ ಕಿರಿಯರು, ಆದರೂ
ಅವರ ಉತ್ಸಾಹ ಮತ್ತು ಕೊಡುಗೆಗೆ ನಾನು ಋಣಿಯಾಗಿದ್ದೇನೆ. ಇದೊಂದು ಆಸಕ್ತಿಕರ ವಿಷಯ, ಸಾಮಾಜಿಕ ಕ್ಷೇತ್ರಕ್ಕೆ
ಬಂದರೆ ಇದೆಲ್ಲ ಸರ್ವೇ ಸಾಮಾನ್ಯ. ನಾನು ನಮ್ಮೂರಿನಲ್ಲಿ ಹಿರಿಯರು ಮತ್ತು ಮೊದಲ ಅಕ್ಷರಸ್ಥರಾಗಿ ಎಕ್ಷಿಕ್ಯೂಟಿವ್
ಇಂಜಿನಿಯರ್ ಆಗಿದ್ದ ದಿ. ಚನ್ನೇಗೌಡರೊಂದಿಗೆ ಚರ್ಚಿಸಿ ಈ ರೀತಿಯ ಕಾರ್ಯಕ್ರಮ ಮಾಡಬೇಕೆಂದು ಬಯಸಿದ್ದೇನೆ.
ತಮ್ಮ ಸಹಕಾರ ಮತ್ತು ಮಾರ್ಗದರ್ಶನ ಬೇಕೆಂದೆ. ಅವರು ಮೈಸೂರಿನಲ್ಲಿ ನೆಲೆಸಿದ್ದರೂ ಅವರ ಮನಸ್ಸೆಲ್ಲ
ಬಾನುಗೊಂದಿಯೆಡೆಗೆ ತುಡಿಯುತ್ತಿತ್ತು. ಊರಿಗಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ, ಅದನ್ನು ಮತ್ತೊಮ್ಮೆ
ಬರೆಯುತ್ತೇನೆ. ಮದುವೆ, ಸೊಪ್ಪು ಹಾಕುವುದು, ನಾಮಕರಣ ಸೇರಿ ಯಾವುದೇ ಕಾರ್ಯಕ್ರಮ ನಡೆದರೂ ಬೀದಿಯಲ್ಲಿ
ಕೂತು ಊಟ ಮಾಡಬೇಕಿತ್ತು. ಆ ಧೂಳು, ಗಾಳಿ, ಮಳೆ ಬಂದರಂತೂ ಮುಗಿದೇ ಹೋಯಿತು. ಆ ಸಮಯದಲ್ಲಿ ನಮ್ಮೂರಿಗೆ
ಒಂದು ಸಮುದಾಯ ಭವನ ನಿರ್ಮಿಸಲು ಶತಾಯ ಗತಾಯ ಪ್ರಯತ್ನಿಸಿ ಯಶಸ್ವಿಯಾದರು.
ಈಗ,
ಗುರುವಂದನ ಕಾರ್ಯಕ್ರಮಕ್ಕೆ ಬರೋಣ. ಅದು ೨೦೧೫ ಡಿಸೆಂಬರ್ ೨೪ ಅಥವಾ ೨೬, ಶನಿವಾರವೆಂಬುದು ನೆನಪಿದೆ.
ಏಕೆಂದರೆ, ದಿ. ಜಯಕುಮಾರ್ ಸರ್ ರವರು ಶಾಲೆಗೆ ಬನ್ನಿ ಶನಿವಾರ ಕಾರ್ಯಕ್ರಮವನ್ನು ರೂಪಿಸಿದ್ದರು.
ಆ ಸಮಯದಲ್ಲಿ ಡಿ.ಎಸ್.ಇ.ಆರ್.ಟಿ. ಗೆ ನಾನು ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ನೀರುಉ ನೈರ್ಮಲ್ಯ ತರಬೇತಿ
ನೀಡಿದ್ದೆ. ಹಾಗೆಯೇ, ಬಾನುಗೊಂದಿಯಲ್ಲಿದ್ದಿದ್ದರಿಂದ, ಶಾಲೆಗೆ ಹೋದೆ. ನಾನು ಒಂದು ಕ್ಷಣ ಗಾಬರಿಯಾದೆ.
ಇದು, ನಾನು ಓದಿದ ಶಾಲೆಯೇ? ಇರುವುದೇ ಮೂರು ರೂಮುಗಳು. ಒಂದು ಆಫೀಸ್ ರೂಮ್ ಅಂತೆ, ಮತ್ತೊಂದು ಯಾವ
ಸಮಯದಲ್ಲಿ ಬೇಕಿದ್ದರು ಹೆಂಚು ಬೀಳಬಹುದೆಂದು ಮುಚ್ಚಿದ್ದರು, ಇನ್ನು ಉಳಿದಿರುವುದು ಎರಡೇ ರೂಮುಗಳು.
ಅಲ್ಲಿಯೇ ನಲಿಕಲಿ ಕೂಡ. ಮೂವರು ಮಾಸ್ಟರುಗಳು ಇದ್ದರು. ನನಗೆ ಅವರ ಮೇಲೆ ಇನ್ನಿಲ್ಲದ ಕೋಪ ಬಂತು. ಅವರ
ಟೇಬಲ್ ಆದರೂ ನೀಟಾಗಿ ಇಡಬೇಕಿತ್ತಲ್ಲವೇ? ಅವರಲ್ಲಿಯೇ ಶಿಸ್ತಿಲ್ಲದ ಮೇಲೆ, ಮಕ್ಕಳಿಂದ ನಿರೀಕ್ಷಸಲು
ಸಾಧ್ಯವೇ? ಆದರೂ, ಮಕ್ಕಳೊಂದಿಗೆ ಒಂದಿಷ್ಟು ಸಮಯ ಕಳೆದೆ, ಮಕ್ಕಳು ಖುಷಿಯಾದರು. ಈ ಶಾಲೆಯನ್ನು ಉಳಿಸಿಕೊಳ್ಳಬೇಕು,
ಈ ಮೇಷ್ಟ್ರುಗಳು ಐವತ್ತು ವರ್ಷ ಇತಿಹಾಸವಿರುವ ಶಾಲೆಗೆ ತಿಲಾಂಜಿಲಿ ಹೇಳುವುದಂತೂ ಸತ್ಯವೆನಿಸಿತು.
ಅದರಂತೆಯೇ, ಒಂದು ಕಾಲದಲ್ಲಿ ೧೫೦-೨೦೦ ಇದ್ದ ಸಂಖ್ಯೆ ಈ ಮೇಷ್ಟ್ರುಗಳ ಕೊಡುಗೆಯಿಂದ ೧೭ಕ್ಕೆ ಬಂದಿದೆ.
ಶಾಲೆ ಸುಧಾರಣೆ ಮಾಡಬೇಕೆಂದರೆ ಎಲ್ಲಾ ಹಳೆಯ ವಿದ್ಯಾರ್ಥಿಗಳನ್ನು ಸೇರಿಸುವುದು, ಅದೆ ನೆಪದಲ್ಲಿ ಗುರುವಂದನಾ
ಕಾರ್ಯಕ್ರಮ ಹಮ್ಮಿಕೊಳ್ಳುವುದು ಎಂದು ತೀರ್ಮಾನಿಸಿದೆ.
ಕಾರ್ಯಕ್ರಮದಲ್ಲಿ
ನನಗೆ ನೀಡಿದ ತೊಂದರೆಗಳ ಕುರಿತು ಈ ಹಿಂದೆ ಸಂಪೂರ್ಣವಾಗಿ ಬರೆದಿದ್ದೇನೆ. ಈಗ ಈ ಲೇಖನಕ್ಕೆ ಎಷ್ಟು
ಬೇಕು ಅಷ್ಟನ್ನು ಮಾತ್ರ ವಿವರಿಸುತ್ತೇನೆ. ಹೇಗೆಲ್ಲಾ ಕಾರ್ಯಕ್ರಮ ಮಾಡಬೇಕೆಂದು ಸಂಪೂರ್ಣ ರೂಪು ರೇಷೆಗಳನ್ನು
ನಾನೇ ನಿರ್ಧರಿಸಿದೆ. ಎಲ್ಲವನ್ನು ಟೈಪ್ ಮಾಡಿ ಪ್ರಿಂಟ್ ತೆಗೆದು ಇಟ್ಟುಕೊಂಡೆ. ವಾಟ್ಸಪ್ ಗ್ರೂಪ್
ಆಯ್ತು. ಪ್ರತಿ ಊರಿನಲ್ಲಿಯೂ ಒಂದು ಗ್ಯಾಂಗ್ ಇರುತ್ತದೆ, ಅದು ನಮ್ಮೂರಿಗೆ ಮಾತ್ರ ಸೀಮಿತವಲ್ಲ. ಒಂದು
ಕಾರ್ಯಕ್ರಮ ಮಾಡಲು ಹೊರಡುವುದು, ಚಂದಾ ಎತ್ತುವುದು, ಚಂದಾ ಎತ್ತುವುದಕ್ಕೆ ಆದ ಖರ್ಚನ್ನು ಚಂದಾ ಎತ್ತಿದ
ಒಟ್ಟೂ ದೇಣಿಗೆಯಲ್ಲಿಯೇ ತೋರಿಸುವುದು. ಉದಾಹರಣೆಗೆ: ಒಂದು ಟೂರ್ನಮೆಂಟ್ ನಡೆಸಬೇಕು, ಹಾಸನದಲ್ಲಿ
ಒಬ್ಬರನ್ನು ದೇಣಿಗೆ ಕೇಳಬೇಕು, ಅವರು ಐದು ಸಾವಿರ ಅಥವಾ ಹತ್ತು ಸಾವಿರ ಕೊಡಬಹುದು. ಹಾಸನಕ್ಕೆ ಎರಡು
ಬಾರಿ ಹೋಗಿ ಬರುವುದು. ಯಾರು? ಆಯೋಜಕರುಗಳು. ನಾಲ್ಕು ಜನರು ಎರಡು ಬೈಕ್ ಅಥವಾ ಮೂರು ಬೈಕ್. ಅದಕ್ಕೆ
ಪೆಟ್ರೋಲ್, ಇವರದ್ದು ಊಟ ತಿಂಡಿ, ಕಾಫೀ ಟೀ, ಜೊತೆಗೆ ರಾತ್ರಿ ಟೀ ಕೂಡ. ಇದೊಂದು ದಂಧೆ ಎಂದರೂ ತಪ್ಪಿಲ್ಲ.
ಗಣಪತಿ, ಅಣ್ಣಮ್ಮ, ಕನ್ನಡ ರಾಜ್ಯೋತ್ಸವ, ಇತ್ತೀಚೆಗೆ ಪುನೀತ್ ರಾಜ್ ಕುಮಾರ್ ಜನ್ಮ ದಿನವೂ ಸೇರಿದೆ.
ಆ
ಹಿನ್ನಲೆಯಲ್ಲಿ, ಮೊದಲ ಮೀಟಿಂಗ್ ನಲ್ಲಿ ಎಲ್ಲರಿಗೂ ಹೇಳಿದೆ. ದೇಣಿಗೆಯನ್ನು ಎಷ್ಟು ಬೇಕು ಅಷ್ಟು
ಮಾತ್ರವೇ ಸ್ವೀಕರಿಸುವುದು. ಎಲ್ಲಾ ಮೊತ್ತವೂ ಒಂದು ಕಡೆಗೆ ಬರಬೇಕು, ದೇಣಿಗೆ ಪಡೆಯಲು ಹೋಗುವವರು ಅವರ
ಸ್ವಂತ ಖರ್ಚಿನಲ್ಲಿ ಹೋಗಬೇಕು. ದೇಣಿಗೆಯ ಹಣ ಸಂಪೂರ್ಣವಾಗಿ ಆ ದಿನದ ಕಾರ್ಯಕ್ರಮಕ್ಕೆ ಮಾತ್ರ ಮೀಸಲು.
ಯಾವುದೇ ಮೀಟಿಂಗ್‌ಗೆ ಆಗಲಿ, ಓಡಾಡುವುದಕ್ಕಾಗಲೀ ಬಳಸುವಂತಿಲ್ಲ. ಅಲ್ಲೊಂದು ಗ್ಯಾಂಗ್ ಕೇಳಿತು “ಹರೀ,
ಮತ್ತೆ ದುಡ್ಡಿಲ್ದೆ ಓಡಾಡೋದು ಹೇಗೆ?”, “ಸ್ವಯಂಪ್ರೇರಿತರಾಗಿ ಕೆಲಸ ಮಾಡೋದು ಅಂದ್ರೆ, ಹಾಗೆನೇ, ಅದನ್ನೆ
ವಾಲಂಟರಿಸಮ್ ಅನ್ನೋದು ಎಂದೆ”, “ಪೆಟ್ರೋಲ್ ಗಾದರೂ ಕೊಟ್ರೆ ಓಡಾಡಬಹುದಪ್ಪ”, “ಇಲ್ಲಾ, ಹೇಳ್ತಾ ಇದ್ದೀನಲ್ಲ,
ಅದು ಮಾರ್ಚ್ ೧೯ ರ ದಿನದ ಖರ್ಚಿಗೆ ಮಾತ್ರವೇ ಬಳಕೆ” “ಇದನ್ನು ಒಪ್ಪಿಕೊಳ್ಳೋರು ಬನ್ನಿ, ನಾನು ಒಬ್ಬನೇ
ಬೇಕಿದ್ರೆ ಎಲ್ಲರ ಮನೆಗೂ ನನ್ನ ಸ್ವಂತ ಖರ್ಚಿನಲ್ಲಿಯೇ ಹೋಗ್ತೀನಿ” ಎಂದೆ. ಬಹುತೇಕ ದುಡ್ಡಿಗಾಗಿ
ಅಥವಾ ದೇಣಿಗೆ ದುಡ್ಡನ್ನು ಉಢಾಯಿಸಲು ತಯಾರಾಗಿದ್ದ ಅಷ್ಟೂ ಜನರ ತಂಡ ಒಮ್ಮೆಗೆ ದೂರ ಉಳಿಯಿತು. ನಿಷ್ಠಾವಂತ
೧೪ ಹುಡುಗರು ಸಂಪೂರ್ಣವಾಗಿ ತೊಡಗಿಸಿಕೊಂಡರು. ಆ ಸಮಯದಲ್ಲಿ ಊರಿನ ಮೂರ್ನಾಲ್ಕು ರಾಜಕೀಯ ಪುಡಾರಿಗಳು
ಹುಡುಗರನ್ನು ನನ್ನ ವಿರುದ್ಧ ಎತ್ತಿಕಟ್ಟಲು ಟೊಂಕ ಕಟ್ಟಿ ನಿಂತರು.
ಹರೀಶ
ರಾಜಕೀಯಕ್ಕೆ ಬರುವುದಕ್ಕೆ ಇದೆಲ್ಲ ಮಾಡ್ತಾ ಇರೋದು. ನಿಮ್ಮನ್ನ ಬಳಸಿಕೊಳ್ತಾ ಇದ್ದಾನೆ. ನೀವು ಹುಷಾರು.
ಅವನಿಗೆ ಸಪೋರ್ಟ್ ಮಾಡ್ಬೇಡಿ, ಅದು ಇದು ಅಂತ. ನಾನು ಆಹ್ವಾನ ಪತ್ರಿಕೆಯಲ್ಲಿ ರಾಜಕಾರಣಿಗಳಿಗೆ ಮತ್ತು
ರಾಜಕೀಯ ವ್ಯಕ್ತಿಗಳಿಗೆ ವೇದಿಕೆಯ ಮೇಲೆ ಬರಲು ಅವಕಾಶವಿಲ್ಲವೆಂದು ಮುದ್ರಿಸಿದ್ದೆ. ಇದು ಈ ಪುಡಾರಿಗಳ
ಬುಡಕ್ಕೆ ಬೆಂಕಿ ಬಿದ್ದಂತೆ ಆಗಿ, ಅಂಡು ಸುಟ್ಟ ಬೆಕ್ಕಿನಂತೆ, ಎಲ್ಲಾ ರೀತಿಯ ತೊಂದರೆ, ಏನೇನೋ ಕಾರಣಗಳನ್ನು
ಹೇಳಿ ಚಾಡಿ ಮಾತು ಹೇಳುತ್ತಾ ಹೋದರು. ಆದರೇ, ನಮ್ಮ ತಂಡ ವಿಚಲಿತಲಾಗಲಿಲ್ಲ. ಊರಿನವರಿಗೆ ನಾವು ಮಾಡುತ್ತಿರುವುದು
ಉತ್ತಮ ಕಾರ್ಯಕ್ರಮವೆಂಬುದು ಗೊತ್ತಿತ್ತು, ಆದರೂ ಪುಡಾರಿಗಳನ್ನು ಎದುರು ಹಾಕಿಕೊಳ್ಳುವ ಧೈರ್ಯ ಮತ್ತು
ಮನಸ್ಸು ಇರಲಿಲ್ಲ. ಇತ್ತೀಚಿನ ಬೆಳವಣಿಗೆಗಳನ್ನು ಮುಂದಿನ ಲೇಖನದಲ್ಲಿ ಹಂಚಿಕೊಳ್ಳುತ್ತೇನೆ. ಈ ವಿಷ
ಸರ್ಪಗಳೊಂದಿಗೆ ಒಳ್ಳೆಯ ಕೆಲಸ ಮಾಡುವುದು ಎಷ್ಟು ಕಷ್ಟ ಎಂಬುದನ್ನು. ಒಂದು ಪಕ್ಷದ ಪುಡಾರಿ ಹೇಳುವುದು, ಮಂತ್ರಿಗಳನ್ನು ಕರೆಸೋಣ,
ಅನುದಾನ ಬರುತ್ತದೆ ಶಾಲೆಗೆ ಎಂದು, ಮತ್ತೊಬ್ಬ ಬಂದು ಹೇಳುವುದು ಆದಿ ಚುಂಚನಗಿರಿ ಸ್ವಾಮೀಜಿ ಕರೆಸೋಣ,
ಅದರ ಖರ್ಚನ್ನು ನಾನೇ ಕೊಡ್ತೀನಿ ಎಂದು. ಒಟ್ಟಾರೆಯಾಗಿ, ಕಾರ್ಯಕ್ರಮ ಮುಂದೂಡಬೇಕು, ಅದು ಹಾಗೆಯೇ ನಿಂತು
ಹೋಗಬೇಕು. ಅಂತೂ ಅದ್ದೂರಿ ಕಾರ್ಯಕ್ರಮವಾಯಿತು. ಕೇವಲ ಒಂದು ಲಕ್ಷ ರೂಪಾಯಿ ದೇಣಿಗೆಯಲ್ಲಿ ಸುಮಾರು
ಎರಡು ಸಾವಿರ ಜನರಿಗೆ ಊಟದ ವ್ಯವಸ್ಥೆ, ನಮ್ಮ ಶಾಲೆಗೆ ಸೇವೆ ಸಲ್ಲಿಸಿದ್ದ ನಲ್ವತ್ತೈದು ಜನ ಶಿಕ್ಷಕರಿಗೆ
ಸನ್ಮಾನ, ಎಲ್ಲವೂ ಅಚ್ಚುಕಟ್ಟಾಗಿ ನಡೆಯಿತು. ಕಾರ್ಯಕ್ರಮದ ದಿನವೂ ಒಂದಿಷ್ಟು ಜನರಿಗೆ ಹೆಂಡ ಕುಡಿಸಿ
ಗಲಾಟೆ ಮಾಡಿಸಲು ಯತ್ನಿಸಿದರು. ಆದರೇ, ಅದು ಫಲ ಕೊಡಲಿಲ್ಲ. ಸಾರ್ವಜನಿಕರು ಕುಡುಕರಿಗೆ ಉಗಿದು ಕಳುಹಿಸಿದರು.
ಎಸ್.ಡಿ.ಎಂ.ಸಿ. ಅಧ್ಯಕ್ಷರಿಗೆ ಮತ್ತು ಮುಖ್ಯ ಶಿಕ್ಷಕರಿಗೆ ನನಗೆ ಸಪೋರ್ಟ್ ನೀಡಬಾರದೆಂದು ತಾಕೀತು
ಮಾಡಿದ್ದರು. ಒಳ್ಳೆಯ ಕೆಲಸಗಳಿಗೆ ವಿಘ್ನಗಳಿರುತ್ತವೆ, ಆದರೇ ಒಳ್ಳೆಯ ಮನಸ್ಸಿನಿಂದ ಮಾಡಿದಾಗ ಗೆಲ್ಲುತ್ತೇವೆ.
ಇಷ್ಟೆಲ್ಲ ಹೇಳುವುದಕ್ಕೆ ಕಾರಣವಿಷ್ಟೆ, ಮೂರ್ನಾಲ್ಕು ಜನ ದುಷ್ಠರು ಇಡೀ ಊರನ್ನೇ ಹೇಗೆ ಹಾಳು ಮಾಡುತ್ತಾರೆ
ಎನ್ನುವುದಕ್ಕೆ ಇದೊಂದು ನಿದರ್ಶನ. ಜನರ ನೆಮ್ಮದಿಯನ್ನು ಕೆಡಿಸುವುದೇ ಅವರ ಗುರಿಯಾಗಿರುತ್ತದೆ.
ಅದೇ
ರೀತಿ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತಮ್ಮಡಿಹಳ್ಳಿ ಬೆಟ್ಟದಲ್ಲಿ ಆರ್.ಕೆ. ಸರ್, ಪ್ರೊ.ಎನ್.ಐ.ಮೇಡಮ್
ಮತು ಪ್ರೊ.ಉಮಾದೇವಿ ಮೇಡಮ್ ಸ್ವಯಂಪ್ರೇರಿತರಾಗಿ ಸುಮಾರು ಎರಡು ಸಾವಿರದಷ್ಟು ಗಿಡಗಳನ್ನು ನೆಟ್ಟು
ಪೋಷಣೆ ಮಾಡುತ್ತಿದ್ದರು, ತದನಂತರ ನಾನು ಅವರೊಂದಿಗೆ ಸೇರಿಕೊಂಡೆ. ಅವರು ಎಪ್ಪತ್ತರ ಹರಯದಲ್ಲಿ ಕೂಡ
ಟ್ಯಾಂಕರ್ ನಲ್ಲಿ ನೀರು ತರಿಸಿ, ಸ್ವತಃ ಗಿಡಗಳಿಗೆ ನೀರು ಹಾಕಿ ಬೆಳೆಸುತ್ತಿದ್ದರು. ಆದರೇ, ಅಲ್ಲಿನ
ಕುರಿಗಾಹಿ ನಾವಿಲ್ಲದ ಸಮಯದಲ್ಲಿ ಎಲ್ಲಾ ಗಿಡಗಳನ್ನು ಕುರಿಗಳನ್ನು ಬಿಟ್ಟು ತಿನ್ನಿಸಿಬಿಡುತ್ತದ್ದ.
ಅವನಿಗೆ ನಮ್ಮ ಶ್ರಮ, ಉದ್ದೇಶ ಯಾವುದೂ ಬೇಕಿರಲಿಲ್ಲ. ಅವನ ಕುರಿ ದಪ್ಪಾಗಿ ಅದನ್ನು ಮಾರಿದರೆ ಸಾಕು,
ಅದೇ ಅವನ ಪ್ರಪಂಚ. ಎರಡು ವರ್ಷ ಬೇಸಿಗೆಯಲ್ಲಿ ಬೆಟ್ಟಕ್ಕೆ ಬೆಂಕಿ ಇಟ್ಟರು. ಗಿಡಗಳೆಲ್ಲಾ ಸುಟ್ಟು
ಕರಕಲಾದವು. ಊರಿಗೆ ಒಬ್ಬರು ಇಂತಹವರಿದ್ದರೆ ಮುಗಿದೇ ಹೋಯಿತು ಅಲ್ಲವೇ? ಭಯದಿಂದ ಬದುಕಬೇಕಾಗುತ್ತದೆ.
ಯಾವಾಗ ಕುರಿ ತಂದು ಮೇಯಿಸುತ್ತಾರೋ? ಯಾವಾಗ ಮರ ಕಡಿದು ಹಾಕುತ್ತಾರೋ? ಯಾವಾಗ ಬೆಂಕಿ ಇಡುತ್ತಾರೋ?
ಎಂದು.
ಅದೇ
ರೀತಿಯಲ್ಲಿ ಗಮನಿಸಿ ನೋಡಿ. ಊರಿಗೆ ಒಬ್ಬ ಅಥವಾ ಇಬ್ಬರು ಪುಡಾರಿಗಳಷ್ಟೆ ಇರುವುದು, ಆದರೇ ಇಡೀ ಊರಿನ
ಹಿಡಿತ ಅವರಲ್ಲಿರುತ್ತದೆ. ತಾಲ್ಲೂಕಿಗೆ ಇಬ್ಬರು ಅಥವಾ ಮೂವರು ಎಂ.ಎಲ್.ಎ. ಕ್ಯಾಂಡಿಡೇಟ್ಸ್ ಆದರೇ
ಇಡೀ ತಾಲ್ಲೂಕಿನ ಹಿಡಿತ ಅವರಲ್ಲಿ. ಒಮ್ಮೆ ಅಭ್ಯರ್ಥಿಯಾದರೇ, ಅದರಲ್ಲೂ ಗೆದ್ದರೇ ಮುಗಿದೇ ಹೋಯಿತು
ಅವನ ಬಾಯಿಗೆ ಅಕ್ಕಿ ಕಾಳು ಬೀಳುವ ತನಕ ಅವನೇ ಅಭ್ಯರ್ಥಿ, ಅವನಾದ ಮೇಲೆ ಮಗ ಅಥವಾ ಮಗಳು, ಅರ್ಧದಲ್ಲಿಯೇ
ಹೋದರೆ ಹೆಂಡತಿ. ಸರ್ಕಾರಿ ಇಲಾಖೆಯಲ್ಲಿ ನೋಡಿ ಯಾರೋ ಒಬ್ಬ ಲಂಚಕೋರ ಇರುತ್ತಾನೆ. ಎಲ್ಲರೂ ಫೈಲ್ ಮೂವ್
ಮಾಡಿದರೂ ಅವನು ಮಾಡುವುದಿಲ್ಲ, ಮೇಲಿನ ಅಧಿಕಾರಿಗಳು ಸಹಿ ಮಾಡಿದರೂ ಇವನು ಫಲಾನುಭವಿಗೆ ಸುಳಿಗೆ ಮಾಡದೆ
ಕೊಡುವುದಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಡಾಕ್ಟರ್ ದುಡ್ಡು ಬೇಡ ಅಂದರೂ ಕಾಂಪೌಂಡರ್ ಬಿಡುವುದಿಲ್ಲ,
ಪೋಲಿಸ್ ಸ್ಟೇಷನ್ ಇನ್ಸ್ಪೆಕ್ಟರ್ ಕಳುಹಿಸಿದರೂ ರೈಟರ್ ಕಳುಹಿಸುವುದಿಲ್ಲ, ಹೀಗೆ ನಿಮ್ಮ ಅನುಭವದ
ಪಟ್ಟಿ ಸೇರ್ಪಡೆಯಾಗಲಿ.
ಇನ್ನೊಂದು
ಗಂಭೀರ ವಿಷಯ ನೋಡಿ. ಕೆಲವೊಂದು ಶಾಲೆ, ಕಾಲೇಜುಗಳಲ್ಲಿ ಗಮನಿಸಿರುವುದು. ಯಾರೋ ಒಬ್ಬ ಸೋಮಾರಿ, ಉಢಾಫೆತನ
ಮತ್ತು ನಕರಾತ್ಮಕ ಗುಣವುಳ್ಳ ಪಾಠ ಹೇಳುವವನು ಇರುತ್ತಾನೆ. ಉದ್ದೇಶಪೂರ್ವಕವಾಗಿಯೇ ನಾನು ಅವರನ್ನು
ಮೇಷ್ಟ್ರು ಅಂತಾಗಲಿ ಬಹುವಚನವನ್ನಾಗಲೀ ಬಳಸುತ್ತಿಲ್ಲ. ವಿವರಣೆಯನ್ನು ನೀಡುತ್ತೇನೆ. ಶಾಲೆಯಲ್ಲಿ ಏನಾದರೂ
ಹೊಸ ಯೋಜನೆಗಳು, ಚಟುವಟಿಕೆಗಳು, ಕಾರ್ಯಕ್ರಮಗಳು ಬಂದರೇ ಸಾಕು ತನ್ನ ಸಹದ್ಯೋಗಿಗಳಿಗೆ ಕಿವಿ ಚುಚ್ಚುತ್ತಾನೆ.
“ಅಯ್ಯೋ ಬನ್ನಿ ಸಾರ್ ಮಾಡ್ಕೋತಾರೆ ಹೆಚ್.ಎಂ. ಇಲ್ವ, ಈ ಹೆಚ್.ಎಮ್. ಗೆ ಮಾಡೋಕೆ ಕೆಲಾಸ
ಇಲ್ಲ. ನಮ್ ಪ್ರಿನ್ಸಿಪಾಲ್ ಸುಮ್ಮನೆ ತಲೆಹರಟೆ ಕೆಲಸನೇ ಮಾಡೋದು. ಈ ಬಡ್ಡಿಮಕ್ಳು ನಮಗೆ ಬೆಲೆನೆ
ಕೋಡೋದಿಲ್ಲ, ಟೀಚರ್ ಅನ್ನೋ ರೆಸ್ಪೆಕ್ಟೆ ಇಲ್ಲ. ಇವರುಗಳಿಗೆ ಎಷ್ಟೇ ಮಾಡಿದ್ರೂ ಅಷ್ಟೆ”,
ಹೀಗೆ ಕೇವಲ ನೆಗಟಿವ್ ಮಾತುಗಳು.
ಹಾಗೆ
ನೋಡಿದರೆ, ರಾಜಕಾರಣಿಗಳು, ಕಳ್ಳರು, ಭ್ರಷ್ಟಾಚಾರಿಗಳ ಸಂಖ್ಯೆ ಬಹಳ ಅತ್ಯಲ್ಪ.
ಭಾರತದ
ಜನಸಂಖ್ಯೆ 142 ಕೋಟಿ,
ಲೋಕಸಭಾ
ಸದಸ್ಯರುಗಳು 543
ರಾಜ್ಯಸಭಾ
ಸದಸ್ಯರುಗಳು 245
ಒಟ್ಟು
ಶಾಸಕರುಗಳು 4123
ವಿಧಾನಪರಿಷತ್
ಸದಸ್ಯರುಗಳು 418
ಒಟ್ಟು
ಹಳ್ಳಿಗಳು 6,64,369 (ಅಂದಾಜು) ಪ್ರತಿ ಹಳ್ಳಿಗೆ ಹತ್ತು ಜನ ರಾಜಕೀಯ ಪುಢಾರಿಗಳು ಅಂತಾ ಲೆಕ್ಕ ಹಾಕಿದರೂ
ಒಟ್ಟು ಸುಮಾರು ೬೬ ಲಕ್ಷ ಜನ ಸಿಗಬಹುದು. ೧೪೦ ಕೋಟಿ ಜನಸಂಖ್ಯೆಯ ಮುಂದೆ ೬೬ ಲಕ್ಷ ದೊಡ್ಡ ಸಂಖ್ಯೆ
ಆಗಲು ಸಾಧ್ಯವೇ? ಆದರೇ ಅದನ್ನು ಸಾಧ್ಯ ಮಾಡಿದ್ದಾರೆ ರಾಜಕಾರಣಿಗಳು. ಅದರಂತೆಯೇ, ಕೇಂದ್ರ ಸರ್ಕಾರದ
ನೌಕರರ ಸಂಖ್ಯೆ ಸುಮಾರು ಮೂವತ್ತು ಲಕ್ಷ ಮತ್ತು ಒಟ್ಟಾರೆ ರಾಜ್ಯ ಸರ್ಕಾರದ ನೌಕರರು ಸುಮಾರು ೭೦ ಲಕ್ಷದ
ತನಕ ಇದ್ದಾರೆ. ಅಂದರೆ, ಸುಮಾರು ಒಂದು ಕೋಟಿ ನೌಕರರು, ಎಲ್ಲರೂ ಭ್ರಷ್ಟರಲ್ಲ. ೧೪೦ ಕೋಟಿ ಜನಸಂಖ್ಯೆಯ
ಮುಂದೆ ಒಂದು ಕೋಟಿ ನೌಕರರ ಸಂಖ್ಯೆ ದೊಡ್ಡದೇ? ಆದರೂ ಅವರು ಅದನ್ನು ಸಾಧಿಸಿದ್ದಾರೆ. ಜನ ಸಾಮಾನ್ಯ
ಅಧಿಕಾರಿಗಳಿಗೆ ಹೆದರುವುದು, ಅತಿಯಾದ ವಿನಯ ಮತ್ತು ಗೌರವ ನೀಡುವುದು ಇಂದಿಗೂ ನಿಂತಿಲ್ಲ.
ಈ
ಎಲ್ಲವನ್ನೂ ಅರಿತು, ಮಹಾತ್ಮ ಗಾಂಧಿಜಿ ಹೇಳುತ್ತಿದ್ದದ್ದು, ಪ್ರತಿಯೊಂದು ಯೋಜನೆಯಲ್ಲಿಯೂ, ಪ್ರತಿಯೊಂದು
ವಿಚಾರದಲ್ಲಿಯೂ ಸಮಾಜದ ಕಟ್ಟ ಕಡೆಯ ವ್ಯಕ್ತಿ ಭಾಗವಹಿಸಬೇಕೆಂದು. ಗಾಂಧೀಜಿ ಎಲ್ಲರನ್ನೂ ಒಳಗೊಂಡು ಸ್ವಾತಂತ್ರ್ಯ
ಚಳುವಳಿ ನಡೆಸಿದರು. ಕೇವಲ ವಿದ್ಯಾವಂತರು, ಬುದ್ದಿಜೀವಿಗಳು, ಶ್ರೀಮಂತರನ್ನು ಒಳಗೊಳ್ಳಲಿಲ್ಲ, ಸಾಮಾನ್ಯರಲ್ಲಿ
ಸಾಮಾನ್ಯರನ್ನು ಸೇರ್ಪಡೆಗೊಂಡು, ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು, ರೈತಾಪಿ, ಕೂಲಿ ಕಾರ್ಮಿಕ,
ದೀನ ದಲಿತ, ಎಲ್ಲರನ್ನೂ ಸೇರಿಸಿಕೊಂಡರು. ಅವರಿಗೆ ತಿಳಿದಿತ್ತು, ಒಬ್ಬರನ್ನು ಕೈಬಿಟ್ಟರೂ ಅವರು ನಿರಾಸಕ್ತಿ
ಹೊಂದುತ್ತಾರೆಂದು. ಹಾಗಾಗಿಯೇ ನಾವುಗಳು ನಮ್ಮ ಯೋಜನೆಗಳಲ್ಲಿ ಪ್ರತಿಯೊಬ್ಬರು ಸಂಪೂರ್ಣವಾಗಿ ಭಾಗವಹಿಸುವಂತೆ
ನೋಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ನಮ್ಮ ಯೋಜನೆಗಳಿಗೆ ಅವರುಗಳೇ ಮುಳುವಾಗುತ್ತಾರೆ. ನಿನ್ನೆಯ ದರ್ಶನ್
ವಿಚಾರವನ್ನು ನೋಡಿ. ಇಬ್ಬರು ರೌಡಿಗಳು ದರ್ಶನ್ ಗೆ ಸೇವೆ ಮಾಡಬೇಕು ಸಹಾಯ ಮಾಡಬೇಕೆಂದು ಪೈಪೋಟಿಗೆ
ಬಿದ್ದು, ಸೇವೆ ಮಾಡಲು ಹೋಗಿ, ಈಗ ದರ್ಶನ್ ಮೇಲೆ ಮತ್ತೂ ಮೂರು ಹೊಸ ಕೇಸ್ ಆಯಿತು. ಅದರ ಜೊತೆಗೆ
ಹಿಂಡಲಗ ಜೈಲು ಪಾಲಾದ. ಇಲ್ಲಿ ಹೇಗೋ ಆರಾಮಾಗಿದ್ದ, ಮನೆಯವರು ಬಂದು ಹೋಗುವುದಕ್ಕೆ ಅನುಕೂಲವಾಗಿತ್ತು,
ಉತ್ತಮ ವಾತಾವರಣ. ಬಳ್ಳಾರಿಯ ಬಿಸಿಲ ದೆಗೆಯಲ್ಲಿ ಬೇಯುವಂತಾಗಿದೆ.
ಕೊನೆಹನಿ:
ಒಳ್ಳೆಯವರ ಸಂಖ್ಯೆ ಅಧಿಕವಿದೆ, ಆದರೆ ಇರುವ ಅಲ್ಪ ಸಂಖ್ಯೆಯ ದೃಷ್ಟರು ಎಲ್ಲರ ಮನಪರಿವರ್ತನೆ ಮಾಡಿ
ಅವರೆಡೆಗೆ ಸೆಳೆಯುತ್ತಿದ್ದಾರೆ. ದಶಕಗಳು ಹಿಂದೆ ಲಂಚ ತೆಗೆದುಕೊಳ್ಳುವುದು ಪಾಪದ ಕೆಲಸ, ಅನ್ಯಾಯ ಮಾಡುವುದು
ಸಹಿಸಲಾಗದಷ್ಟು ಕೆಟ್ಟದ್ದು. ಈಗ ಲಂಚ ತೆಗೆದಕೊಳ್ಳುವುದು ಹೆಮ್ಮೆಯ ವಿಷಯ. ಓಟ್ ಹಾಕುವುದಕ್ಕೆ ವಿದ್ಯಾವಂತರು,
ಮಾಸ್ಟರುಗಳೇ ಸಾವಿರಾರು ರೂಪಾಯಿ ದುಡ್ಡು ಪಡೆಯುವ ಹಂತಕ್ಕೆ ಹೋಗಿದ್ದಾರೆ. ಲಜ್ಜೆಗೆಟ್ಟು ಬದುಕುವುದು
ಹೆಮ್ಮೆಯ ವಿಷಯ, ರಾಜಕಾರಣಿಗಳಿಗೆ ಬಕೆಟ್ ಹಿಡಿದು, ತೆಗೆದುಕೊಳ್ಳುವ ಸಂಬಳಕ್ಕೆ ನ್ಯಾಯ ಒದಗಿಸದ ಮಟ್ಟಕ್ಕೆ
ಅನೈತಿಕತೆ ತಾಂಡವವಾಡುತ್ತಿದೆ. ಇದನ್ನು ಬದಲಾಯಿಸಬೇಕು. ಮಕ್ಕಳಿಂದ ಬದಲಾಯಿಸಬೇಕು, ನಡುವಳಿಕೆಗಳು,
ದೃಷ್ಟಿಕೋನವನ್ನು ಬದಲಾಯಿಸಬೇಕು. ಪರಿಸರ ಕೇಂದ್ರಿತ ಆಲೋಚನೆಯನ್ನು ನಾವು ಬಿತ್ತಿದರೆ, ಅದು ಸಾಧ್ಯವಾಗುತ್ತದೆ.
ಮನುಷ್ಯ ಪರಿಸರದಲ್ಲಿ ಒಂದು ಜೀವಿ ಅಷ್ಟೆ, ಅದರಲ್ಲಿಯೂ ಇತ್ತೀಚೆಗೆ ಬಂದ ಎಳಸು ಜೀವಿ. ಮಹಾನ್ ಹಿರಿಯ
ಜೀವಿಗಳೆಲ್ಲ ಮೆರೆದು ಹೋಗಿದ್ದಾವೆ, ಇನ್ನು ನಾವ್ಯಾರು? ಪರಿಸರವನ್ನು ಪ್ರೀತಿಸಿ, ಗೌರವಿಸೋಣ.
ಮುಂದುವರೆಯುವುದು…
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ