15 ಜುಲೈ 2009

ನನ್ನೊಳಗೆ ಅವಿತು ಹೋಗುವ ಮುನ್ನ ನಿಮ್ಮ ಮಡಿಲಿಗೆ!!!!-3


ದೊಡ್ಡೆಗೌಡರ ತಂದೆಗೆ ಮೂವರು ಮಡದಿಯರು, ರಸಿಕತೆಯಿಂದ ಮದುವೆಯಾಗದಿದ್ದರೂ, ಅದೇಕೋ ಮದುವೆಯಾಗಿದ್ದರು. ಮದುವೆಯಾದ ಮೇಲೆ ಅದಕೊಂದು ಅರ್ಥಕೊಡುವುದಕ್ಕಾಗಿಯೇ ಮೊದಲನೆಯ ಹೆಂಡತಿಗೆ ಒಂಬತ್ತು ಹೆಣ್ಣು ಮಕ್ಕಳು, ಎರಡನೆಯವರಿಗೆ ೪ ಗಂಡುಮಕ್ಕಳು, ೩ ಹೆಣ್ಣುಮಕ್ಕಳು, ಮತ್ತು ಮೂರನೆ ಮುದ್ದಿನ ಹೆಂಡತಿಗೆ ೫ ಜನ ಗಂಡುಮಕ್ಕಳು ಜನಿಸಿದ್ದವು. ಮೂರನೆ ಹೆಂಡತಿಯ ಮೊದಲ ಮಗನೇ ದೊಡ್ಡೇಗೌಡ. ಒಟ್ಟೂ ಇಪ್ಪತ್ತೊಂದು ಮಕ್ಕಳ ತಂದೆ ಎನಿಸಿಕೊಂಡ, ಚೆಲುವೇಗೌಡ ಹೇಳಿಕೊಳ್ಳುವಷ್ಟೂ ಆಗರ್ಭನೇನೂ ಅಲ್ಲ. ಒಟ್ಟು ೫೦ಎಕರೆಯಷ್ಟೂ ಜಮೀನಿದ್ದರೂ, ಅದರ ಬಗ್ಗೆ ಅವರೆಂದು ತಲೆ ಹಾಕಲಿಲ್ಲ. ಊರು ಸುತ್ತುವುದು, ದನಗಳ ಸಂತೆ, ಜಾತ್ರೆ, ಇವುಗಳಲ್ಲಿಯೇ ಅವರ ಜೀವನ ಮುಗಿದಿತ್ತು. ಮನೆಯಲ್ಲಿ ಅದು ಬಡತನವೋ ಅಥವಾ ಜೀವನವೇ ಅದೋ ಎಂಬುದರ ಗೋಜಿಗೆ ಹೋಗಲಿಲ್ಲ. ಹೆಣ್ಣು ಮಕ್ಕಳೆಲ್ಲಾ ಬಹುಬೇಗ ಮದುವೆಯಾದರು, ಗಂಡು ಮಕ್ಕಳು ಭೂತಾಯಿಯನ್ನು ನಂಬಿ ಗೇಯ್ಯಲು ನಿಂತರು. ದೊಡ್ಡೇಗೌಡರಿಗೆ ಚಿಕ್ಕಂದಿನಿಂದಲೂ ಸಂಸಾರ ತಾಪತ್ರಯಗಳ ಬಗ್ಗೆ ಅಷ್ಟು ಆಸಕ್ತಿಯಿರಲಿಲ್ಲ. ಅವರಿಗೆ ಅಪ್ಪನಂತೆಯೇ ಊರು ಸುತ್ತಾಡುವುದು ಮೈಗೂಡಿದಂತಿತ್ತು. ಚಿಕ್ಕವರಿರುವಾಗ,ಕೋಳಿ ಕೂಗುವ ಮುನ್ನ ಮನೆ ಬಿಟ್ಟರೇ, ಮರಳಿ ಮನೆ ಸೇರುತಿದ್ದದ್ದು, ಸೂರ್ಯ ಮುಳುಗಿದ ಮೇಲೆ. ಭಯವೆಂಬುದು ಅವರ ಜನ್ಮಕ್ಕೆ ಒಗ್ಗಿರಲಿಲ್ಲ.

ಊರಿನ ಸುತ್ತಾ ಮುತ್ತಾ ಇಂದಿನಂತಿರಲಿಲ್ಲ, ಇಡೀ ಊರಿನಲ್ಲಿದ್ದದ್ದು, ೧೨ ಮನೆಗಳು ಮಾತ್ರ. ಆದರೂ ಜನಸಂಖ್ಯೆ ಮೂನ್ನೂರರಷ್ಟಿತ್ತು. ಒಂದೊಂದು ಮನೆಯಲ್ಲಿಯೂ, ಸರಾಸರಿ ಮೂವತ್ತು ಜನರಿದ್ದರು. ಊರೆಂಬುದು ಕಾಡಿನಿಂದ ಹೊರತಾಗಿರಲಿಲ್ಲ. ಊರು ಕಾಡು ಒಂದೆ ಎನ್ನುವುದಕ್ಕಿಂತ ಕಾಡಿನೊಳಗೆ ಮನೆಗಳಿದ್ದವು. ಮನೆಯ ಹಿಂದಿನ ಹಿತ್ತಲಿನಲ್ಲಿ ರಾತ್ರಿಯಲ್ಲಿ ಕಾಡು ಹಂದಿಗಳು ನುಗ್ಗುತ್ತಿದ್ದವು. ಕಾಡಿನಲ್ಲಿ, ಅನೇಕ ಕಾಡುಮೃಗಗಳಿರುತ್ತಿದ್ದವು. ಅಂದೂ ಇವುಗಳನ್ನು ಪ್ರಾಣಿಗಳು ಎನ್ನುತ್ತಿದ್ದರೂ, ಕಾಲ ಬದಲಾದಂತೆ ಮೃಗಗಳೆಂದು ಕರೆಯಲಾದವು. ಪ್ರಾಣಿಸಂಗ್ರಹಾಲಯವೆನ್ನುವ ಪದ ಕೊಡುವ ಮುದವನ್ನು ಮೃಗಾಲಯವೆನ್ನುವ ಪದ ಕೊಡಲಾರದು. ಕರಡಿ, ಚಿರತೆ, ಜಿಂಕೆ, ಆನೆ, ಹೀಗೆ ಹತ್ತು ಹಲವು ಪ್ರಾಣಿಗಳು ಆ ಕಾಡಿನಲ್ಲಿದ್ದವು. ಬೇಟೆಯೆಂದರೇ, ಮಲೆನಾಡಿನಂತೆ ಕೋವಿ ಹಿಡಿದು ಹೋಗುತ್ತಿರಲಿಲ್ಲ. ಬಲೆ ಹಾಕಿ, ಮೊಲ, ಜಿಂಕೆ, ಸಾರಗ ಹಿಡಿಯುವುದು, ಭರ್ಜಿ, ಈಟಿಯಿಂದ ಕೊಲ್ಲುವುದು. ಜೇನು ಬಸಿಯುವುದು ಸಾಮಾನ್ಯದವುಗಳು. ಅಷ್ಟೆಲ್ಲಾ ಪ್ರಾಣಿಗಳಿದ್ದು, ಅವುಗಳ ಹಾವಳಿ ತಿಳಿದಿದ್ದರೂ ಆ ಊರಿನಲ್ಲಿ ಒಂದೇ ಒಂದು ಕೆಟ್ಟ ಸಂಗತಿಗಳು ನಡೆಯುತ್ತಿರಲಿಲ್ಲ. ಅದಕ್ಕೆ ದೊಡ್ಡೇಗೌಡರ ಉತ್ತರವೇ ಬೇರೆ, ಆ ದಿನಗಳಲ್ಲಿ ಕಾಡು ಪ್ರಾಣಿಗಳಿಗೆ ಸಿಕ್ಕಿ ಸತ್ತವರ ಸುದ್ದಿಗಳು ಬಹಳ ಕಡಿಮೆಯಿರುತ್ತಿದ್ದವು, ಯಾಕೆಂದರೇ, ಅಂದು ಇಂದಿನಂತೆ ಅವುಗಳಿಗೆ ಮನುಷ್ಯನನ್ನು ತಿನ್ನಲೇಬೇಕೆಂಬ ದುರ್ದು ಇರಲಿಲ್ಲ. ಅಲ್ಲಿಯೇ ಸಾಕಷ್ಟು ಆಹಾರ ಸಿಗುತ್ತಿತ್ತು. ಇಲ್ಲದಿದ್ದರೇ, ಕಾಡಿನಲ್ಲಿ ಶತಮಾನಗಳಿಂದಲೂ ಮನುಷ್ಯರು ಬದುಕಲೂ ಬಂದೀತೆ? ನಾಗರಹೊಳೆ, ಬಂಡಿಪುರದಲ್ಲಿ ಇಂದಿಗೂ ಕಾಡು ಜನರು ಇದ್ದಾರೆಂದು ಹೇಳುತ್ತಾರೆ. ನಮ್ಮ ಹಾಸನ ಜಿಲ್ಲಾ ಗಡಿಯಲ್ಲಿನಲ್ಲಿದ್ದ ಮಲೆಕುಡಿ ಜನಾಂಗ ಈಗ ನಶಿಸಿಹೋಗಿದೆ. ಪ್ರಾಣಿ ಮತ್ತು ಮನುಷ್ಯರಿಬ್ಬರೂ ಸಮಾನರೆಂಬುದನ್ನು ಅವುಗಳು ಅರಿತಿದ್ದವು. ಇಲ್ಲದಿದ್ದರೇ, ದೇವರ ವಾಹನಗಳಾಗಿ ಪ್ರಾಣಿಗಳು ಬರುತ್ತಿದ್ದವೆ? ಚಾಮುಂಡೇಶ್ವರಿಯ ವಾಹನವಾಗಿ ಹುಲಿಯೇ ಬರಬೇಕೆಂದರೇ? ಇವೆಲ್ಲಾ ಆ ದೈವ ನಿಯಮ.

ಹೀಗೆ ಗೌಡರ ಮನಸ್ಸು ವಿಕಾಸನಗೊಳ್ಳುವುದಕ್ಕೆ ಪರಿಸರದೊಂದಿಗಿನ ಅವರ ನಿಕಟ ಸಂಬಂಧವೇ ಕಾರಣವೆಂದರೂ, ಗೌಡರು ಮಾತ್ರ ನಾನು ಏನನ್ನೋ ಹುಡುಕುತ್ತಾ ಹೋದೆ ಅದು ಸಿಗಲೇ ಇಲ್ಲವೆನ್ನುತ್ತಾರೆ. ಅವರು ಮುಂಜಾನೆ ಮುಸುಕಿನಲ್ಲೇ ಎದ್ದು ಹೊರಡುತಿದ್ದರು. ಹಳ್ಳಿ ಮುಸುಕಿಗೆ ಎದ್ದು, ಗಂಡಸರು ದನಗಳನ್ನು ಹಟ್ಟಿಯಿಂದ ಹೊರಕ್ಕೆ ಕಟ್ಟಿಹಾಕಿ, ಎತ್ತುಗಳನ್ನು ಉಳುವುದಕ್ಕೆಂದು ಹೊಲಗಳಿಗೆ ಹೋಗುತ್ತಿದ್ದರು. ಮನೆಯಲ್ಲಿನ ಹೆಂಗಸರು ಎದ್ದು ಕೊಟ್ಟಿಗೆಗಳಿಗೆ ಹೋಗಿ ಹಾಲು ಕರೆದು ಬಂದು, ಕೊಟ್ಟಿಗೆ ಶುಚಿಮಾಡಿದ ನಂತರ ಮನೆ ಮುಂದಿನ ಬೀದಿಯನ್ನು ಗುಡಿಸಿ ಮನೆಯಿಂದ ಸ್ವಲ್ಪ ದೂರದಲ್ಲಿದ್ದ ತಿಪ್ಪೆಗೆ ಹಾಕಿ ಬರುತ್ತಿದ್ದರು. ಆಗ, ಹಾಲು ಮಾರುವುದಾಗಲೀ, ಕೊಳ್ಳುವುದಾಗಲೀ ಇರಲೇ ಇಲ್ಲ. ಎಷ್ಟು ಕರೆಯುವ ಹಸು ಎಮ್ಮೆಗಳು ಇದ್ದರೂ ಅವುಗಳು ಮನೆಯಲ್ಲಿರುವು ಮಕ್ಕಳ ಬಾಣಂತದಲ್ಲಿಯೇ ಮುಗಿಯುತ್ತಿದ್ದವು.

ದೊಡ್ಡೆಗೌಡರೂ, ಹುಡುಗನಾಗಿದ್ದಾಗ, ಮುಸುಕಿಗೆ ಎದ್ದು, ನಿನ್ನೆ ರಾತ್ರಿ ಬಿಟ್ಟಿದ್ದ ಬಲೆಯಲ್ಲಿ ಮೀನು ಹೆಚ್ಚಾಗಿ ಬಿದ್ದಿದ್ದರೇ, ಅವುಗಳನ್ನು ಅಲ್ಲೇ ಹತ್ತಿರದ ಅವರ ಮೆಣಸಿನ ಹೊಲದಲ್ಲಿ ಹಾಕಿ ಒಂದೆರಡನ್ನು ತನ್ನೊಂದಿಗೆ ತೆಗೆದುಕೊಂಡು ಅವಗಳ ಸಿಪ್ಪೆ ಎರೆದು ಕಾಡಿನೊಳಗಿನಿಂದ ಬೆಟ್ಟ ಹತ್ತುತ್ತಿದ್ದರು.ಅಲ್ಲಿ ಬೆಂಕಿ ಹಚ್ಚಿ ಮೀನುಗಳನ್ನು ಸುಟ್ಟು ತಿಂದು ಬಲೆ ಬೀಸಿದ ಜಾಗದಲ್ಲಿ, ಮೊಲ ಸಿಕ್ಕರೇ ಹಿಡಿದು ತಿಂದು, ಕಾಡು ಇಲಿಗಳನ್ನು ಹಿಡಿಯಲು ನೋಡುತಿದ್ದರು. ಕೆಲವೊಮ್ಮೆ ಕಡ್ಡಿ ಜೇನು, ಸಿಗುತ್ತಿತ್ತು. ಹೆಜ್ಜೇನು ಕಸಿಯಲು ಪ್ರಯತ್ನಿಸಿದ್ದರೂ, ಅದು ಅವರಿಂದ ಆಗುವುದಿಲ್ಲವೆಂದು ಸುಮ್ಮನಿರುತ್ತಿದ್ದರು. ಆದರೇ, ಅವರಿಗೆ ಸುಮಾರು, ೯ ವರ್ಷದವರಿರುವಾಗಲೇ ಆಗಿನ್ನು ಕಂಬಳಿಯ ನದಿಗೆ ಕಟ್ಟೆ ಕಟ್ಟಿರಲಿಲ್ಲ. ನದಿಯಲ್ಲಿ ದೊಡ್ಡ ಬಾಳೆ ಮೀನು ಸುಮಾರು ೬ಕೆ.ಜಿ. ಬರುತಿತ್ತು ಅಂಥಹದ್ದನ್ನು ಒಂದು ಸಣ್ಣ ಬಲೆಯಿಂದ ಹಿಡಿದು ತಂದಿದ್ದರು. ಅದನ್ನು ನೋಡಿದ ಊರಿನ ಜನ ಅವರನ್ನು ಅನುಮಾನದಿಂದ ಗೌರವ ಕೌತುಕಗಳಿಂದ ಕಾಣತೊಡಗಿದರು. ಇಂಥಹ ನೂರಾರು ಸಾವಿರಾರು ಕಥಗಳು ದೊಡ್ಡೆಗೌಡರ ಬಾಲ್ಯದಲ್ಲಿ ನಡೆದಿವೆ. ಹತ್ತರ ವಯಸ್ಸಿನಲ್ಲಿಯೇ ಅವರು ಮುನ್ನೂರು ಅಡಿ ಎತ್ತರದ ಮರಗಳನ್ನು ಏರುತ್ತಿದ್ದರು. ಜೇನು ಕಸಿಯುವುದು ಅವರಿಗೆ ಕಲೆಯಾಗಿ ಬೆಳೆದಿತ್ತು. ಒಂದೇ ಒಂದು ಜೇನ್ನೊಣವೂ ಕಚ್ಚಿಲ್ಲ.ಆಷಾಡದಲ್ಲಿ ನದಿ ತುಂಬಿ ಹರಿಯುತ್ತಿದ್ದರೂ ಲೆಕ್ಕಿಸದೇ ಈ ದಡದಿಂದ ಆ ದಡಕ್ಕೇ ಈಜುತಿದ್ದರು. ಅವರ ಲೆಕ್ಕಾಚಾರಗಳು ಕೈಕೊಟ್ಟ ಸನ್ನಿವೇಶಗಳು ಬಹಳ ಕಡಿಮೆಯಾಗಿತ್ತು. ನಿಸರ್ಗದ ವಿಚಾರದಲ್ಲಿ, ನದಿಯಲ್ಲಿನ ಮೀನುಗಳ ವಿಷಯದಲ್ಲಿ, ಕಾಡಿನ ಮರಗಿಡಗಳ, ಪ್ರಾಣಿಗಳ ವಿಷಯದಲ್ಲಿ ಅದೊಂದು ಭಂಡಾರವಾಗಿಯೇ ಬೆಳೆಯಿತು.

ಅವರು ಬೆಟ್ಟದ ಮೇಲಿದ್ದ ಬಸವಣ್ಣನನ್ನು ವಹಿಸಿಕೊಂಡಿರುವುದರಿಂದ ಇದು ಸಾಧ್ಯವೆಂಬುದು ಹಲವರ ಅಭಿಪ್ರಾಯ. ಅವರು ಹಗಲಿರುಳೆನ್ನದೇ ಕಾಡಿನಲ್ಲಿ ಅಲೆದಾಡಿದ್ದರಿಂದ ಅಲ್ಲಿನ ಭೂತವೋ, ಕಾಳಿಯೋ ಅವರ ಮೈಯಲ್ಲಿ ಆಡುತ್ತದೆಂದು ಚಿಕ್ಕಂದಿನಲ್ಲಿ, ಅವರನ್ನು ಹತ್ತಿರದ ಊರುಗಳ ಮಂತ್ರವಾದಿಗಳಿಗೆ ಕರೆದೊಯ್ದಿದ್ದರು. ತಡೆ ಹೊಡೆಸುವುದು ನವಗ್ರಹ ಶಾಂತಿ ಮಾಡಿಸುವುದು ನಡೆಯಿತು. ಮನೆದೇವರಿಗೆ ಹೋಗಿ ಮುಡಿಕೊಟ್ಟು ಬಂದರು. ಕಟ್ಟ ಕಡೆಗೆ ಇವರ ಬಗ್ಗೆ ಆಸೆಯನ್ನು ತೊರೆದರು. ಇರುವ ಇಪ್ಪತೊಂದು ಮಕ್ಕಳಲ್ಲಿ ಇವರನ್ನೇ ಪೂರ್ಣಮಟ್ಟದಲ್ಲಿ ಕಾಣಲೂ ಬಂದೀತೆ? ದೊಡ್ಡೇಗೌಡರು ತಮ್ಮ ಹದಿಮೂರನೇ ವಯಸ್ಸಿನಲ್ಲಿಯೇ ಮನೆ ತೊರೆದು ಹೊರಟರು. ಎಲ್ಲಿ ಹೋದರು ಎಲ್ಲಿ ಇದ್ದರೆಂಬುದರ ಸುಳಿವೇ ಇರಲಿಲ್ಲ. ಅವರು ಮರಳಿ ಬಂದದ್ದು ಅವರ ಇಪ್ಪತ್ತೆರಡೇನೇ ವಯಸ್ಸಿನಲ್ಲಿ. ಅಂದರೇ ಒಂಬತ್ತು ವರ್ಷಗಳು ಅವರು ಅನೇಕಾ ಊರುಗಳನ್ನು ಸುತ್ತಾಡಿ ಬಂದಿದ್ದರು. ಆ ಸಮಯಕ್ಕೆ ಸರಿಯಾಗಿ ಅವರ ನೆಚ್ಚಿನ ತಾಣಗಳಾದ ಅವರೂರಿನ ನದಿ, ಬೆಟ್ಟ, ಕಾಡು ಪರಿಸರ ಎಲ್ಲವೂ ಬದಲಾಗತೊಡಗಿತ್ತು. ಮನೆಯಲ್ಲಿನ ಎಲ್ಲ ಅಣ್ಣ ತಮ್ಮಂದಿರೂ ಮದುವೆಯಾಗಿ ಅಪ್ಪ ತೀರಿದ ನಂತರ ಬೇರೆ ಬೇರೆಯಾಗಿ ಸಂಸಾರ ನಡೆಸುತಿದ್ದರು. ಕಂಬಳ ನದಿಗೆ ಕಟ್ಟೆ ಕಟ್ಟಿ ಮುಂದಿನ ಹಲವಾರು ಊರುಗಳಿಗೆ ನೀರೊದಗಿಸುವ ಯೋಜನೆ ನಡೆಯುತ್ತಿತ್ತು. ಮೊದಲು ಹರಿಯುತ್ತಿದ್ದ ನದಿಯನ್ನು ಕೆಲಸದ ಸಲುವಾಗಿ ಬೇರೊಂದು ಮಾರ್ಗ ಬದಲಾಯಿಸಿದ್ದರು. ಮನುಷ್ಯನ ದುರಾಸೆಯ ಚಿತ್ರಗಳು ಅಂದಿನಿಂದಲೇ ಅವರ ಕಣ್ಣಲ್ಲಿ ಕಾಣತೊಡಗಿದವು. ನೆಪ ಬರಿಯ ನದಿಯನ್ನು ಬದಲಾಯಿಸುವುದಾದರೂ ಅಲ್ಲಿನ ಮರಗಳನ್ನು ಕಡಿದು ಸಾಗಿಸುವುದು ಮೊದಲಾಯಿತು. ಬೆಲೆ ಬಾಳುವ ಮರಗಳೆಲ್ಲಾ ಹೋಗುವುದಲ್ಲದೇ, ಕೆಲಸಗಾರರಾಗಿ ಬಂದಿದ್ದ ಜನರು ರಾತ್ರಿಯಾಯಿತೆಂದರೇ ಕಾಡಿಗೆ ನುಗ್ಗಿ ಬೇಟೆಯೆಂಬ ಹೆಸರಲ್ಲಿ ಅಲ್ಲಿದ್ದ ಪ್ರಾಣಿಗಳನ್ನೆಲ್ಲಾ ಹೊಡೆದು ತಿಂದರು.

ಊರಿನಲ್ಲಿರಲು ಗೌಡರ ಮನಸ್ಸು ಯಾಕೋ ಒಗ್ಗುತ್ತಿರಲಿಲ್ಲ. ಅವರಿಗೆ ಏನೋ ಒಂದು ಕೊರತೆಯಿದೆ ಎನಿಸುತಿತ್ತು. ಇಡೀ ದೇಶವೇ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿತ್ತು. ಆದರೇ ಕಂಬಳಿ ಮಾತ್ರ ನಿದ್ದೆಯಿಂದ ಏಳಲೇ ಇಲ್ಲ. ಈ ಊರಿನ ಜನರು ಅಣೆಕಟ್ಟೆಯಿಂದ ಎಲ್ಲೆಲ್ಲಿ ಸಾಧ್ಯವೋ ಆ ಜಾಗವನ್ನೆಲ್ಲಾ ಸಮ ಮಾಡೀ ವ್ಯವಸಾಯಕ್ಕೆ ಅಣಿಮಾಡತೊಡಗಿದರು. ದೇಶಕ್ಕೇ ಸ್ವಾತಂತ್ರ್ಯ ಬಂತಂತೆ ಎಂದು ಒಮ್ಮೇ ಹೇಳಿದ್ದನ್ನು ಬಿಟ್ಟರೇ ಸ್ವಾತಂತ್ರ್ಯದ ಬಗ್ಗೆ ಇತ್ತೀಚಿನ ತನಕ ಊರಿನವರಿಗೆ ತಿಳಿದಿರಲಿಲ್ಲ. ಈಗಲೂ ಅಷ್ಟೇ ಸ್ವಾತಂತ್ರ್ಯ ದಿನವೆಂದರೇ, ಮಕ್ಕಳು ಸಾಲಾಗಿ ಊರು ಸುತ್ತಾ ಮೆರವಣಿಗೆ ಬರುತ್ತಾರೆ ಚಾಕೊಲೇಟ್ ಕೊಡುತ್ತಾರೆ. ಅದಕ್ಕಾಗಿ ಆಟವಾಡಿಸುತ್ತಾರೆ. ಮಕ್ಕಳಿಗೆ ಬಹುಮಾನವಾಗಿ ಶಾಲೆಗಳಲ್ಲಿ ಒಂದು ಲೋಟ, ಪ್ಲೇಟು, ಬಟ್ಟಲು ಇವುಗಳನ್ನು ಕೊಡುತ್ತಾರೆ. ಒಮ್ಮೆ ದೊಡ್ಡೇಗೌಡರು, ಮೇಷ್ಟ್ರೇ ಮಕ್ಕಳು ಗೆದ್ದದ್ದಕ್ಕೆ ಈ ಪಾತ್ರೆ ಪಗಡೆ ಕೊಡುತ್ತೀರಲ್ಲ ಯಾಕೆ ನಾಳೆಯಿಂದ ಅಡುಗೆ ಮಾಡಿಕೊಂಡಿರಿ ಶಾಲೆಗೆ ಬರಬೇಡಿ ಅಂತಲೋ ಎಂದರು. ಅದಕ್ಕೆ ಮೇಷ್ಟ್ರು ಇಲ್ಲ ಯೆಜಮಾನ್ರೇ ಮಕ್ಕಳಿಗೆ ಪೆನ್ನು, ಪೆನ್ಸಿಲ್ ಕೊಟ್ಟರೇ ಎರಡೇ ದಿನಕ್ಕೆ ಮುರಿದು ಹಾಳುಮಾಡುತ್ತಾರೆ, ಎಂದರು.ಗೌಡರು ಮೇಷ್ಟ್ರ ಜಾಣ್ಮೆಗೆ ತಲೆತೂಗಲೇ ಬೇಕಾಯಿತು. ಆ ಊರಿನಲ್ಲಿ ಸ್ವಾತಂತ್ರ್ಯದ ಬಗ್ಗೆಯಾಗಲೀ ದೇಶದ ಬಗ್ಗೆಯಾಗಲೀ, ಅಥವಾ ಇಂದಿನ ರಾಜಕಾರಣಿಗಳ ಬಗ್ಗೆಯಾಗಲೀ ಅಂಥಹ ಕುತೂಹಲ ಕೆರಳಿಸುವಂತದ್ದು ಏನು ಇಲ್ಲ. ಊರಿನ ಕೆಲವು ಮಂದಿ ಪುಡಾರಿಗಳಾಗಿ ಎರಡು ಮೂರು ಪಕ್ಷದ ಬಿತ್ತಿ ಚಿತ್ರಗಳನ್ನು ಹಾಕುತ್ತಾರೆ. ಚುನಾವಣ ಸಮಯದಲ್ಲಿ ಅವರ ಜೇಬಿಗೆ ದುಡ್ಡು ಬಿಟ್ಟುಕೊಂಡು ಜನರಿಗೆ ಮೂರು ದಿನ ಬಾಡೂಟ ಮಾಡಿಸಿ, ಲೋಕಲ್ ಸರಾಯಿ ಕುಡಿಸಿದರೇ ಮುಗಿಯಿತು. ಯಾರು ಗೆದ್ದರೂ ಸೋತರು ಅವರಿಗೆ ಚಿಂತೆಯಿಲ್ಲ.

ನಾನು ಕುಳಿತಿರುವಲ್ಲಿಗೆ, ಊರಿನ ಮಧ್ಯ ವಯಸ್ಸನ್ನು ದಾಟಿದ ಒಬ್ಬರು ಬಂದು ಅಯ್ಯಾ ಎಂದರು. ನಾನು ಅವರ ಮುಖವನ್ನೊಮ್ಮೆ ನೋಡಿದೆ, ನಿನ್ನೆ ಬೆಳ್ಳಿಗ್ಗೆ ಅಂಗಡಿಗೆ ಸಿಗೆರೇಟು ಕೊಳ್ಳಲು ಹೋದಾಗ ನೋಡಿದ ಮುಖವೆನಿಸಿತು. ತಾತ ಅವರ ಮುಖವನ್ನು ನೋಡಿ, ಏನೋ ಸುಬ್ಬನ ಸವಾರಿ ನಮ್ಮನೆ ತನಕ? ಎಂದರು. "ಅಯ್ಯಾ ನಮ್ಮನೆ ಬಿಳಿ ಹಸ ನಿಲ್ಲುತಾನೆ ಇಲ್ಲ, ಆಸ್ಪತ್ರೆಗೆ ಹೊಡ್ಕೊಂಡು ಹೋಗಿದ್ದೆ ಮೂರು ದಪಾ," ಅಂದರು? ನನಗೆ ಸ್ವಲ್ಪ ದಿಗಿಲಾಯಿತು, ಇವರು ಆಡುತ್ತಿರುವ ಭಾಷೆ ಯಾವುದು? ಆಸ್ಪತ್ರೆಗೆ ಹೊಡೆದುಕೊಂಡು ಹೋದ ಹಸು ನಿಲ್ಲುತ್ತಿಲ್ಲ ಅಂದರೇ!?. ನನ್ನ ಮುಖದಲ್ಲಿ ಮೂಡಿದ ಬದಲಾವಣೆಯನ್ನು ಗಮನಿಸಿ, ಇರು ಮಗಾ ಹೇಳ್ತಿನಿ ಅಂದರು. "ಸರಿ ಏನ್ ಮಾಡ್ಬೇಕೋ ಸುಬ್ಬಾ? ನಾಳೆ ಹೊತ್ತು ಮೂಡೋ ಹೊತ್ತಿಗೆ ಬಂದು ಹೋಗು" ಎಂದರು. ಅವನು, "ಅಯ್ಯಾ ಒಸಿ ನೆಸೆ", ಎಂದು ಹಳ್ಳು ಕಿರಿದ. ನೆಸೆ ಡಬ್ಬಿಯನ್ನು ಕುಟ್ಟಿ, ಬೆರಳಿನಿಂದ ತೆಗೆದು ಮೂಗಿನ ಒಳಕ್ಕೆ ಎರಡು ಬೆರಳನ್ನು ತೂರಿಸುವಂತೆ ಮಾಡಿದ. ಕ್ಷಣಾರ್ಧದಲ್ಲಿ, ದಬ ದಬನೇ ಸೀನತೊಡಗಿದ. ಬೀದಿಯಲ್ಲಿ ಆಡುತ್ತಿದ್ದ ಮಗು ಬೆಚ್ಚಿ ಬಿದ್ದಿತೇನೋ ಎಂದು ಮಗುವನ್ನು ನೋಡಿದೆ. ಯಾರೇ ಕೂಗಾಡಲೀ,ಊರೇ ಹೋರಾಡಲೀ ಎನ್ನುವಂತೆ ಅದರ ಪಾಡಿಗೆ ಅದು ಆಡುತ್ತಿತ್ತು. ನೆಸೆ ಸಿಕ್ಕಿದ ಮೇಲೆ, ಮಾತಿಗೆ ಸಿದ್ದನಾಗುವವನಂತೆ ಜಗ್ಗಲಿಯ ಮೇಲೆ ಆಸೀನನಾದ. ಅಯ್ಯಾ ಕುಳ್ಳಣ್ಣನ ಮಗ ಲಕ್ಸ್ಮಂಗೆ ಹೆಣ್ಣಿನ ಕಡೇರೋ ಬಂದಿದ್ರು, ಎಂದ. ಅದು ಒಂದು ಬಗೆಯ ಅಪಹಾಸ್ಯವೋ, ಅಥವಾ ಆಶ್ಚರ್ಯವೋ ತಿಳಿಯಲಿಲ್ಲ. ಬರಲೀ ಬಿಡೋ ಹುಡುಗ ಮದ್ವೆ ಆಗ್ಬಾರ್ದ?ಎಂದರು. ನೀವು ಸರಿ, ಆಗಲೀ ಬಿಡಿ, ಊರಿಗೆ ಮೂರು ಊಟ ಸಿಗ್ತದೆ, ಎಂದ. ಅವನು ನಮ್ಮ ನಾಗಣ್ಣನ ವಾರಿಗೆಯವನು, ನಾಗಣ್ಣನ ಹುಡುಗ ಹತ್ತನೇ ಕ್ಲಾಸು ಕಣಯ್ಯ, ಎಂದ. ನನಗೆ ಹೊಳೆಯಿತು, ಹುಡುಗನಿಗೆ ವಯಸ್ಸಾಗಿದೆ, ಹುಡುಗನೆನಿಸಿಕೊಳ್ಳುವ ವಯಸ್ಸು ದಾಟಿದೆ!. ಊರಿನ ಚರಂಡಿ ಕಾಮಗಾರಿಯಲ್ಲಿ ನಡೆದಿರುವ ಬಾರಿ ಹಗರಣದ ಬಗ್ಗೆ ಹೇಳಿ, ಅದೊಂದು ವಿರೋಧ ಪಕ್ಷದವರ ಕೈವಾಡದಿಂದಲೇ ಮಾಡಿರುವಂತಿದೆ. "ಚರಂಡಿ ಕೆಲಸಕ್ಕೆ ಹತ್ತು ಸಾವಿರ ಬಿಲ್ ಮಾಡವರೇ, ಆಗಿರೋದು ಬರೀ ಎರಡು ಸಾವರ ಅಷ್ಟೆಯಾ!" ಅಂದ. "ಹೋದ ಸತಿ, ನೋಡಿದ್ರ ಸ್ಕೂಲಿಗೆ ಕಾಪೌಂಡ್ ಕಟ್ಟ್ಸಕೆ ಅಂತಾ ೩೦ಸಾವರ ತಗೊಂಡ್ರು ಈ ವರ್ಸ ಬಿದ್ದೇ ಹೋಗಯ್ತೆ, ಎಲ್ಲನೂ ಹಿಂಗೆ ಇವರ್ದು, ಇವರು ಮಾತ್ರ ತಿಂದು ತೇಗಬೇಕು, ಬೇರೆಯವರು ತಿನ್ನೊಗಿಲ್ಲ, ನಮ್ಮ ವಠಾರದವಕ್ಕೆ ಅವೆಲ್ಲಾ ಅರ್ಥ ಆಗಕಿಲ್ಲ, ಅವರ ಮನೆ ತವೆ ಹೋಗಿ, ನಿಂತ್ಕತವೆ". ನನಗೆ ತಲಬುಡ ಅರ್ಥ ಆಗಲಿಲ್ಲ. ಗೌಡರು ನಿನಗೆ ಬೇಕಾ, ಆ ಗುತ್ತಿಗೆ ಕೆಲಸ? ಮಾಡಿಸ್ತೀಯಾ? ಎಂದದ್ದಕ್ಕೆ ನನ್ ಕೈಯ್ಯಲ್ಲಿ ಆಗುತ್ತಾ ಎಂದ. ಸರಿ ನಡಿ ಊರ ಉಸಾಬರಿ ಯಾಕೆ ನಿಂಗೆ ಎಂದರು.

ನಾಲ್ಕ ಗಂಟೆ ಸಮಯಕ್ಕೆ, ಗೌಡರು ನನ್ನನ್ನು ಕರೆದುಕೊಂಡು, ಹೊರಟರು. ಬಾ ಇಲ್ಲೇ ಬರೋಣ ಅಂತಾ. ನದಿ ದಂಡೆಯಿಂದ ಹೊರಟು, ಅವರ ಬಾಲ್ಯದಿಂದ ಇಲ್ಲಿನ ತನಕ ಆದ ಬದಲಾವಣೆಗಳನ್ನು ಸೂಕ್ಷ್ಮವಾಗಿ ಹೇಳಿದರು.ನಾನು ಕುತೂಹಲಕ್ಕಾಗಿ ಸುಬ್ಬಣ್ಣ ಹೇಳಿದ್ದನ್ನು ಕೇಳಿದೆ. ಊರಿನಲ್ಲಿ, ಬಹುಸಂಖ್ಯೆಯಲ್ಲಿ, ಒಕ್ಕಲಿಗರೇ ಇದ್ದರೂ, ಅವರಲ್ಲಿ ಎರಡು ಪಂಗಡಗಳಿವೆ, ಈ ಒಳಜಗಳ, ಆ ಎರಡು ಪಂಗಡಗಳ ನಡುವೆ. ಅನ್ಯೋನ್ಯತೆ ಎಣಿಸಿದರೂ, ಈ ಶೀತಲ ಸಮರವನ್ನು ಊರಿನ ಪ್ರಮುಖರು, ಉಪಯೋಗಿಸಿಕೊಂಡು ಅದನ್ನು ಆರದಂತೆ, ಬಳಸಿಕೊಳ್ಳುತ್ತಾರೆ. ಸ್ವಲ್ಪ ದೂರದ ನಂತರ, ಅಲ್ಲೇ ನಿಲ್ಲುವಂತೆ ಹೋಗಿ, ಒಂದು ಹಂಬನ್ನು ಕಿತ್ತು ತಂದರು, ಜೊತೆಗೆ ಒಂದೆರಡು ಗಿಡಗಳನ್ನು ತಂದರು. ನಾನು ಅದನ್ನು ನೋಡಿ, ಓ, ಈ ಹಂಬು ಔಷಧೀಗಾ ಎಂದೆ? ಗೌಡರು, ನಿನಗೆ ಗೊತ್ತಾ ಎಂದರು. ನನ್ನ ಓದಿನ ಬಗ್ಗೆ ಸ್ವಲ್ಪ ಹೇಳಿದೆ, ಈ ಗಿಡಗಳು ಅದರ ಮದ್ದು ಅದು ಇದು ಅಂತಾ ನನ್ನ ಬುದ್ದಿವಂತಿಕೆ ತೋರಿಸತೊಡಗಿದೆ. ಗೌಡರಿಗೆ ನನ್ನ ಮೇಲೆ ಇದ್ದಕ್ಕಿದ್ದ ಹಾಗೆ ಒಂದು ಬಗೆಯ ಹೆಮ್ಮೆ ಬಂದಂತನಿಸಿತು. ನಾನು ಹೇಳಿದೆ, ತಾತ, ನಿಜ ಹೇಳಬೇಕೆಂದರೆ, ಇವೆಲ್ಲಾ ಕಾಲೇಜಿನಲ್ಲಿ ಕಲಿಯಲೇ ಬೇಕು ಎನಿಸೋದಿಲ್ಲ ಎಂದೆ. ನೀನು ಹೇಳೋದು ಒಂದು ಲೆಕ್ಕದಲ್ಲಿ ಸರಿನೇ, ಎಂದರು. ಮನುಷ್ಯ ಪ್ರಕೃತಿಯ ವಿರುದ್ದ ನಡೆದರೆ ಅದು ಸಾಹಸ ಅಂದುಕೊಳ್ಳುತ್ತಾನೆ. ನದಿ ಹರಿಯೋದರ ವಿರುದ್ದ ಈಜುವುದು, ದೊಡ್ದ ಬಂಡೆಗಳನ್ನ ಏರುವುದು, ಹೀಗೆ ಅವೆಲ್ಲವೂ ಚೆಂದವೇ ಸರಿ. ಆದರೇ ನಿಸರ್ಗದ ನಿಯಮದ ವಿರುದ್ದ ಹೋಗುವುದು ಎಷ್ಟು ಸರಿ? ನನಗೆ ಅರ್ಥವಾಗಲಿಲ್ಲವೆಂಬುದು ಅವರಿಗೆ ತಿಳಿಯಿತು. ಈಗ, ಈ ಗಿಡದಿಂದ ಉಪಯೋಗವೇನು? ಗೊತ್ತಾ? ಇಲ್ಲವೆಂದು ತಲೆಯಾಡಿಸಿದೆ.

ಆಗಲೇ ಸುಬ್ಬಣ್ಣ ಬಂದಿದ್ದನಲ್ಲ, ಅವನ ಹಸುವಿಗೆ, ಸೂಜಿ ಚುಚ್ಚಿಸಿದರೂ ಕೂಡ, ಗರ್ಭ ನಿಲ್ಲುತ್ತಿಲ್ಲವಂತೆ. ಇವರುಗಳು ಎಲ್ಲವನ್ನು ಯಾಂತ್ರಿಕತೆಯಿಂದ ನೋಡುತ್ತಾರೆ. ಇಲ್ಲ, ಆರ್ಥಿಕತೆಯಿಂದ ನೋಡುತ್ತಾರೆ. ಪ್ರಾಣಿಗಳು ನಮ್ಮಂತೆಯೇ ಬದುಕುವ ಜೀವಿಗಳೆಂದು ತಿಳಿಯುವುದಿಲ್ಲ ಇವರಿಗೆ. ಅವುಗಳಿಗೂ, ದೈಹಿಕ ಆಸೆ ಇರುತ್ತದೆನಿಸುವುದಿಲ್ಲವಾ? ಈ ಪ್ರಶ್ನೆಗಳು ನನ್ನ ವಯಸ್ಸಿನ ಮಿತಿಗೆ ಮೀರಿದ್ದು ಎಣಿಸಿ ಅಲ್ಲಿಗೆ ತಡೆದರು. ನಾನು ಅವರನ್ನು ಮುಂದುವರೆಸಿ ಎನ್ನಲಿಲ್ಲ. ಆದರೂ, ಅವರ ಭಾವುಕತೆ ನನ್ನನ್ನು ತಲ್ಲಣಗೊಳಿಸಿತ್ತು. ಆಧುಣಿಕರಣದಿಂದಾಗಿ ನಾವು ಪ್ರಾಣಿಗಳ ನೈಸರ್ಗಿಕವಾದ ಬಹುಮುಖ್ಯವಾದ ಬೇಡಿಕೆಯನ್ನು ನಾಶಗೊಳಿಸಿದ್ದೇವೆ. ನಾನು ಚಿಕ್ಕವನಿದ್ದಾಗ, ಆದ್ರಾ ಮಳೆಯಲ್ಲಿ ಬೀದಿನಾಯಿಗಳು ಮೈಮರೆತು ಅಂಟಿಕೊಂಡಿರುವುದನ್ನು ಕಂಡು ಥೂ, ಚೀ ಎಂದು ಮುಖ ತಿರುಗಿಸಿಕೊಂಡು ಹೋಗುತಿದ್ದೆ. ಆದರೇ, ಅವೆಲ್ಲವೂ, ಮನುಷ್ಯನಂತೆಯೇ, ದೈಹಿಕ ಕಾಮನೆಗಳು ಎಣಿಸಿರಲಿಲ್ಲ. ತಾತನ ಮನಸ್ಸಿನಲ್ಲಿರುವ ವಿಚಾರಗಳು, ನನ್ನ ಬುದ್ದಿವಂತಿಕೆಯಿಂದ ಅರಿಯಲು ಸಾಧ್ಯವೇ ಇಲ್ಲವೆಂದು ತೀರ್ಮಾನಿಸಿದೆ.

ದೇಶ ಸುತ್ತಿನೋಡು, ಕೋಶ ಓದಿ ನೋಡು, ಅಂತಾ ಗಾದೆ ಇದೆಯಲ್ಲ. ಹಾಗೆ ಅದು ಒಂದರಿಂದ ಏನೂ ಬರಲ್ಲ, ಓದಲೂ ಬೇಕು, ನೋಡಲೂ ಬೇಕು. ಮೊದಲರ್ಧದಲ್ಲಿ ಗೌಡರು ಊರೂರು ಸುತ್ತಾಡಿದರು. ನಂತರ ಮನೆಯಲ್ಲಿ ಅವರ ಮಕ್ಕಳು, ಮೊಮ್ಮಕ್ಕಲು ಓದುವ ಎಲ್ಲ ತರಹದ ಪುಸ್ತಕಗಳನ್ನು ಓದಿದರು. ಈ ಮುದಕನಿಗೆ ನೋಡು ಈ ವಯಸ್ಸಿನಲ್ಲಿ ಓದುವ ಚಪಲ ಎಂದು ಜನ ರೇಗಿಸಿದರು. ಅವರಿಗೆ ಹತ್ತು ಭಾಷೆ ತಿಳಿಯುತ್ತಿತ್ತು. ಕನ್ನಡ, ಹಿಂದಿ, ಮಲಯಾಲಂ, ತೆಲುಗು, ತಮಿಳು, ತುಳು, ಕೊಡವ, ಅರೆ-ಭಾಷೆ ಕನ್ನಡ, ಹವ್ಯಕ ಕನ್ನಡ, ಇಂಗ್ಲೀಷ್ ಬರುತ್ತಿದ್ದವು. ಅವರು ಕೊಡಗಿನ ಕಾಫಿ ತೋಟದಲ್ಲಿ ಹತ್ತಾರು ವರ್ಷವಿದ್ದರು. ಇಂದಿಗೂ ವಿರಾಜಪೇಟೆ, ಗೋಣಿಕೊಪ್ಪಲಿನಲ್ಲಿ ಕೆಲವು ಎಸ್ಟೇಟ್ ಮಾಲಿಕರು ಇವರನ್ನು ನೆನೆಯುತ್ತಾರೆ. ಕೇರಳದ ಕಣ್ಣೂರಿನ ಟೀ ತೋಟದಲ್ಲಿ ಕೆಲಸಮಾಡಿದ್ದಾರೆ. ತೀರ್ಥಹಳ್ಳಿಯಲ್ಲಿದ್ದಾಗ ಹವ್ಯಕ ತಿಳಿದಿತ್ತು. ಹೀಗೆ ಅವರಿಗೆ ಭಾಷೆ ಬರುತ್ತಿದ್ದರಿಂದ ಅವರು ದಕ್ಷಿಣ ಭಾರತವನ್ನೂ ಸಂಪೂರ್ಣ ಅಲೆದಾಡಿದ್ದಾರೆ. ಅಲ್ಲಿನ ಜನರನ್ನು ಬಹಳ ಹತ್ತಿರದಿಂದ ನೋಡಿದ್ದಾರೆ. ಅಲ್ಲಿನ ಜನರ ಜೀವನದಲ್ಲಿ ಆದ ಬದಲಾವಣೆಗಳನ್ನು ನೇರವಾಗಿ ಕೆಲವೂಮ್ಮೆ ವಾರ್ತೆಗಳಿಂದ, ದಿನಪತ್ರಿಕೆಗಳಿಂದ ನೋಡಿದ್ದಾರೆ. ಅವರು, ಪಶ್ಚಿಮ ಘಟ್ಟಗಳು ಕರಗಿ ಬರಡಾದದ್ದನ್ನು ಕಂಡಿದ್ದಾರೆ. ಅವರ ವರ್ಣನೆ ನಮ್ಮ ವಿಜ್ನಾನಕ್ಕೆ ನಿಲುಕುವಂತಿಲ್ಲ ಎನಿಸಿತು. ಪೂರ್ವ ಘಟ್ಟಗಳು ಮತ್ತು ಪಶ್ಚಿಮ ಘಟ್ಟಗಳಲ್ಲಿನ ವಿಶೇಷತೆಗಳನ್ನು ಬಣ್ಣಿಸುತ್ತಾರೆ. ವನ್ಯಮೃಗಗಳನ್ನು ಹತ್ತಿರದಿಂದ ನೋಡಿದ್ದಾರೆ. ಕಾಡು ಜನರ ಜೊತೆ ಓಡಾಡಿದ್ದಾರೆ. ಚಾರ್ಮಾಡಿ, ಶಿರಡಿ, ತಡಿಯೆಂಡ್ ಮೋಲ್, ಪುಷ್ಪಗಿರಿ, ಬ್ರಹ್ಮಗಿರಿ, ವಯನಾಡ್, ಮದುಮಲೈ, ನಾಗರಹೊಳೆ, ಬಂಡಿಪುರ, ಬಿಳಿಗಿರಿ, ಮಹದೇಶ್ವರ ಬೆಟ್ಟ, ಸತ್ತಿ, ಎಲ್ಲವನ್ನು ಬರೀ ಗಾಲಲ್ಲಿ ನಡೆದು ಬಂದಿದ್ದಾರೆ. ಇದೊಂದು ಪವಾಡವೇ ಸರಿಯೆಂದು ನಮಗನಿಸಿದ್ದರೂ ಅವರಿಗೆ ಅದರಲ್ಲಿ ಹೆಚ್ಚಿನದೇನೂ ಅನಿಸುವುದಿಲ್ಲ. ಅವರು ಓದಿರುವುದು ಅಷ್ಟೇ, ಮಾರ್ಕ್ಸ್, ಡಾರ್ವಿನ್,ಲೆನಿನ್,ಟಾಗೋರ್,ಟಾಲ್ಸ್ ಟಾಯ್, ಜಿಡ್ಡೂ ಕೃಷ್ಣಮೂರ್ತಿ, ಹೀಗೆ ಎಲ್ಲರನ್ನೂ ಓದಿದ್ದಾರೆ ಅವರ ಬಗ್ಗೆ ಅವರಲ್ಲಿರುವ ವಿಶ್ಲೇಶಣೆಗಳು ನನಗೆ ಬಹಳ ಮೆಚ್ಚುಗೆಯಾದವು.

"ತಾತ ನಿಮಗೆ ಬರವಣಿಗೆ ಬರುತ್ತದೆ, ನೀವು ನಿಮ್ಮ ವಿಚಾರಗಳನ್ನೆಲ್ಲಾ ಯಾಕೆ ಬರೆಯಬಾರದಿತ್ತು? ನಿಮ್ಮ ಅನುಭವಗಳು ಈ ಮಾಹಿತಿ ಎಷ್ಟು ಅನುಕೂಲ ಆಗುತ್ತೆ ನಮ್ಮ ಜನಕ್ಕೆ" ಎಂದೆ. ಯಾವ ಜನರ ಬಗ್ಗೆ ಹೇಳ್ತಾಯಿದ್ದೀಯಾ ನೀನು? ನಮ್ಮ ಜನ ಅನ್ನಿಸಿಕೊಳ್ಳೋ ಇವರು ಹುಟ್ಟು ಸೋಮಾರಿಗಳು, ನಾನು ಬರೆದರೂ ಅದನ್ನ ಓದುವುದಿಲ್ಲ, ಏನು ಬರೆದವರೆ ಅಂತಾ ಹಾಗೆ ಹೇಳು ಅದನ್ನೇಲ್ಲಾ ಓದೋಕೆ ಸಮಯ ಇಲ್ಲ ಅಂತಾರೆ. ನೀನು ಹೇಳಿದ್ದಕ್ಕೆ, ಹೇಳ್ತಿನಿ ಕೇಳು. ನೀನು ಗಿಡಗಳ ಬಗ್ಗೆ, ಔಷಧಿಗಳ ಬಗ್ಗೆ ತಿಳ್ಕೊಳ್ಳೋಕೆ ಅಂತಾ ಊರೂರು ಅಲೆದಿದ್ದಿಯಾ, ನಮ್ಮೂರಿನಲ್ಲಿರುವ ಒಬ್ಬನೇ ಒಬ್ಬ ಇದರ ಬಗ್ಗೆ ತಿಳ್ಕೊಬೇಕು ಅಂತಾ ನನ್ನ ಹತ್ತಿರ ಕೇಳಿಲ್ಲ.ಈ ಸುಬ್ಬಣ್ಣನೇ ನೋಡು, ಇಲ್ಲದೇ ಇರೋ ರಾಜಕೀಯ ಮಾತಾಡಿ ಹೋದ, ಆ ಔಷಧಿ ಗಿಡ ನನಗೂ ತೋರಿಸಿ ಅಂತಾ ಕೇಳಲಿಲ್ಲ. ಎಲ್ಲರಿಗೂ ಸಿದ್ದವಾಗಿರೋ ಊಟ ಬೇಕು, ಇದು ಇವತ್ತಿನ ಪರಿಸ್ಥಿತಿ. ಆ ದಿನಗಳಲ್ಲಿ ನಾನು ಕಾಡು ಮೇಡು ಅಲೆದು ಬಂದೆ. ನನಗೆ ಅದರಿಂದ ಏನು ಲಾಭ ಬರುತ್ತೆ ಅಂತಾ ಅಲ್ಲ ಅಲ್ಲಿ ನನಗೆ ಸಂತೋಷ ಇತ್ತು. ಸಂತೋಷ ಅಂದರೇ, ಏನು? ಅದು ಆಸ್ತಿ ಮಾಡಿ, ಹೆಸರು ಮಾಡಿ ಬರೋದಾ? ಅದು ಆತ್ಮ ಸಂತೃಪ್ತಿ. ಅದು ನಿನ್ನೊಳಗೆ ಇರುತ್ತೆ, ಇನ್ನೊಬ್ಬರ ಹಿಂದೆ ಹರಸಿ ಹೋಗೋದಲ್ಲ. ತಿಳುವಳಿಕೆ ಅನ್ನೋದನ್ನ ಹೆಚ್ಚಿಸಿಕೊಳ್ಳಬೇಕು ಅದು ಇನ್ನೊಬ್ಬರಿಗೆ ಅನುಕೂಲ ಆಗಲಿ ಅಂತಾ ಅಲ್ಲ, ನಿನ್ನ ಮನಸ್ಸಿಗೆ ನೆಮ್ಮದಿ ಸಿಗಲಿ ಅಂತಾ. ನಾನು ನನ್ನ ಇಳಿವಯಸ್ಸಿನಲ್ಲಿ ಓದುವಾಗ ಸ್ವತಃ ನನ್ನ ಮಕ್ಕಳೇ ಕೇಳಿದರು, ನೀವು ಈ ವಯಸ್ಸಲ್ಲಿ ಅದೆಂತ ಪುಸ್ತಕನೆಲ್ಲಾ ಓದುತ್ತಾ ಕೂರೋದಾ? ಅವರಿಗೇನು ಗೊತ್ತು ಪುಸ್ತಕ ಓದುವುದರಲ್ಲೇನಿದೆ ಅಂತಾ.ಓದದೇ ಕೂಡ ಬದುಕಬಹುದು, ಬರೆಯದೇ ಕೂಡ ಬದುಕಬಹುದು. ಜನ ಸ್ವಂತಿಕೆಯಿಂದ ಬದುಕೋದನ್ನ, ಬದುಕುವ ಶೈಲಿಯನ್ನ ಕಲಿಬೇಕು. ಅವರನ್ನ ಇವರನ್ನ ನೋಡೀ ಅನುಕರಣೆ ಮಾಡೊದಲ್ಲ. ಬರವಣಿಗೇನೂ ಅಷ್ಟೇ, ಈ ಬರವಣಿಗೆ ಅಂತಾ ಬರೀತಿರಲ್ಲ ಅವರೆಲ್ಲಾ ಜನರ ಮೇಲೆ ಸವಾರಿ ಮಾಡುವ ಮಹಾ ದೊರೆಗಳೆ! ನೈಜತೆ ಎಲ್ಲಿ ಇರುತ್ತೇ ಹೇಳು? ಮನೆ ಒಳಗೆ ಕುಳಿತು, ನೀನು ಮಲೆಕುಡಿ ಜನಾಂಗದವರ ಬಗ್ಗೆ ಬರೆಯೋಕೆ ಆಗುತ್ತಾ, ಆ ಜನರ ಜೀವನದ ಬಗ್ಗೆ ಬರೆಯೋಕೆ ಆಗುತ್ತಾ? ಬರವಣಿಗೆ ಅಂದರೇ ಕಲ್ಪನೆ ಅನ್ನುತ್ತಾರೆ ಜನ, ಅದರಲ್ಲಿ ನನಗೆ ನಂಬಿಕೆಯಿಲ್ಲ. ಬರವಣಿಗೆ ಅಂದರೇ, ಅದು ಆ ದಿನದ ಆ ಸಮಾಜದ ಆಗೂ ಹೋಗುಗಳಿಗೆ ಕನ್ನಡಿ ಹಿಡಿದಂತಿರಬೇಕು.ನಮ್ಮ ಬರವಣಿಗೆಗಳು ಮುಂದಿನ ಪೀಳಿಗೆಗೆ ಮಾಹಿತಿ ನೀಡುವಂತಿರಬೇಕು. ನೀನು ಎಲ್ಲರಂತೇಯೇ ಬರೆದು ಕೂಡಬೇಡ. ದೇಶ ನೋಡು, ಪುಸ್ತಕ ಓದು, ಎಂದರು.ಇಲ್ಲ ತಾತ ನಾನು ಬರೆಯೋದಿಲ್ಲ ಅಷ್ಟು ಹೆಚ್ಚು ಓದುವುದು ಇಲ್ಲ. ನಾನು ಹುಟ್ಟು ಸೋಮಾರಿ ಎಂದೆ. "ಪರ್ವಾಗಿಲ್ಲ ಸತ್ಯ ಹೇಳ್ತಿಯಾ" ಅಂದರು. ಮನೆಯಿಂದ ಪೋನ್ ಮಾಡಿ ಅಪ್ಪ ಉಗಿದಿದ್ದರಿಂದ ಅಲ್ಲಿಂದ ಬೆಳ್ಳಿಗ್ಗೆ ಹಾಲಿನ ವ್ಯಾನ್ ಹತ್ತಿ ಹೊರಟೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕನಸು-ನನಸಿನ ಪಯಣದ ಹಾದಿಯಲಿ ಬದ್ಧತೆ, ಜವಬ್ದಾರಿ, ಸೋಲಿನ ಭೀತಿ!!!

  ೨೯.೦೮.೨೦೨೪ ನಾವು ನಮ್ಮ ಕನಸುಗಳನ್ನು, ಆಸೆಗಳನ್ನು, ಬಯಕೆಗಳನ್ನು ಬೇರೆಯವರೊಂದಿಗೆ ಏಕೆ ಹಂಚಿಕೊಳ್ಳಬೇಕು? ಇದರ ಕುರಿತು ಸ್ವಲ್ಪ ಚರ್ಚಿಸೋಣ. ಮುಕ್ತವಾಗಿ. ಪ್ರತಿಯೊ...