ಇಲ್ಲಿ ಬರೆದಿರುವುದರಲ್ಲಿ ಹೆಚ್ಚಿನವು ಕಲ್ಪನೆಯಿಂದ ಬಂದದ್ದು, ಇಲ್ಲಿ ಹೇಳಿರುವುದೆಲ್ಲಾ ಸತ್ಯವೆಂದು ದಯವಿಟ್ಟು ಪರಿಗಣಿಸಬೇಡಿ, ನನ್ನೊಳಗಿರುವ ಗೊಂದಲಮಯ ವಿಚಾರಗಳನ್ನು ಹತ್ತಿಕ್ಕಲು ಬರೆದಿದ್ದೇನೇ ಹೊರತು, ನನ್ನನ್ನು ಸಮರ್ಥಿಸಿಕೊಳ್ಳುವುದಕ್ಕಾಗಲೀ, ಇತರರನ್ನು ದೂರುವುದಕ್ಕಾಗಲೀ ಬರೆದಿರುವುದಲ್ಲ, ನಾನು ಏನೆಂಬುದು ಸಂಪೂರ್ಣವಾಗಿ ನನಗೆ ತಿಳಿಯದಿರುವುದರಿಂದ ನನ್ನ ಬಗ್ಗೆ ನಾನು ಹುಡುಕುತ್ತಿರುವ ನನ್ನತನದ ಬಗ್ಗೆ ಅಥವಾ ಸದಾ ಬೀಗುವ ನಾನು ಎಂಬುದರ ಬಗ್ಗೆ ಸ್ವಲ್ಪ ತರ್ಕಿಸಿದ್ದೇನೆ. ಈ ಪ್ರಶ್ನೆಗಳು ಕೆಲವೊಮ್ಮೆ ನಿಮ್ಮನ್ನು ಕಾಡಿದ್ದಿರಬಹುದು, ಅಥವಾ ತಮಗೆ ಉತ್ತರ ಸಿಕ್ಕಿದ್ದರೂ ಇರಬಹುದು, ಅಥವಾ ಆ ಗೋಜಿಗೆ ಹೋಗದೇ ಸಂತೋಷವಾಗಿದ್ದರೂ ಇರಬಹುದು. ಅದು ನನಗೆ ಬಹುಮುಖ್ಯವೆನಿಸುವುದಿಲ್ಲ. ಹೀಗೆ ಓದಿ ಹಾಗೆ ಮರೆತರೇ, ಅಥವಾ ಈ ಅಂಕಣವನ್ನು ಪೂರ್ಣವಾಗಿ ಓದುವ ತನಕ ತಮಗೆ ಸಂಯಮವಿದ್ದರೇ ಅಷ್ಟೇ ಸಾಕು. ಓದಿದ ಮೇಲೆ ನನ್ನ ಮೇಲೆ ಅನುಮಾನ ಬಂದರೂ ಅದನ್ನು ನನ್ನ ಬಳಿಯಲ್ಲಿ ಕೇಳದಿದ್ದರೇ ಸಂತೋಷ. ನೀವು ನನಗೆ ಸಂತೋಷವಾಗುವಂತೆ ನಡೆದುಕೊಳ್ಳುತೀರಾ ಎಂಬ ನಂಬಿಕೆ ನನಗಿದೆ.
ನಾನೆಂದರೇ ಏನೆಂಬುದು ನನಗೆ ಒಂದಿಷ್ಟೂ ತಿಳಿದಿಲ್ಲ, ತಿಳಿಯುವ ಸಾಹಸವಂತೂ ಮಾಡಿದ್ದೇನೆ, ಮಾಡಿ ಸೋತಿದ್ದೇನೆಂದರೇ ತಪ್ಪಾಗುವುದು, ಗೆದ್ದಿದ್ದೇನೆಂದರೆ ಮಹಪರಾಧವಾಗುವುದು. ನಾನು ಎಂಬುದು ನನಗೆ ಸಂಬಂಧಪಟ್ಟ ವಿಷಯವಾದರೂ ನಾನು ನನಗೆ ನಾನಾಗಿಯೇ ಕಂಡುಕೊಂಡಿದ್ದೇನೆ. ಒಬ್ಬ ಮಗನಾಗಿ, ಒಮ್ಮೊಮ್ಮೆ ಕೇವಲ ಅಮ್ಮನ ಮಗನಾಗಿ ಅಪ್ಪನ ಪರಮ ವೈರಿಯಾಗಿ, ಕೆಲವೊಮ್ಮೆ ಅಪ್ಪನ ಪ್ರೀತಿಯ ಮಗನಾಗಿ ಅಮ್ಮನ ದಾರಿ ತಪ್ಪಿದ ಮಗನಾಗಿ ಕಾಣಿಸಿದ್ದೇನೆ. ತಂಗಿಗೆ ಆದರ್ಶ ಅಣ್ಣನಾಗಿ ಕಂಡರೂ ಒಮ್ಮೊಮ್ಮೆ ಅವಳಿಗೆ ಜನ್ಮಜನ್ಮಾಂತರದ ಶತ್ರುವೆನಿಸಿದ್ದೇನೆ. ಅಕ್ಕನಿಗೆ ನಾನೇ ಅವಳ ಪ್ರಿಯಮಿತ್ರನೆಂದು ನಡೆದು ಕೊಂಡದ್ದು ಇದೆ, ಅವಳಿಂದ ಥೂ ದೂರ ಹೋಗು ನನ್ನೊಂದಿಗೆ ಮಾತನಾಡಬೇಡವೆನ್ನುವಂತೆ ಉಗಿಸಿಕೊಂಡದ್ದು ಇದೆ.ಅವನು ನನ್ನ ತಮ್ಮನೇ ಅಲ್ಲವೆನ್ನುವಷ್ಟರ ಮಟ್ಟಿಗೆ ವೈರತ್ವವನ್ನು ಸಾಧಿಸಿದ್ದು ಇದೆ. ಚಿಕ್ಕಂದಿನಿಂದ ಮುದ್ದು ಮಾಡಿ ನನ್ನ ತುಂಟ ಮಾತುಗಳನ್ನು ಸವಿಯುತಿದ್ದ ಅಜ್ಜ ಅಜ್ಜಿಯರು ನನ್ನ ಮೊಮ್ಮಗ ಹಾಳಾಗಿ ಹೋದ ಎನ್ನುವಂತೆ ಬಾಳಿದ್ದೇನೆ. ಜೊತೆಯಲ್ಲಿ ಓದಿದ ನನ್ನ ಹಲವಾರು ಮಿತ್ರರಿಗೆ ಕೆಲವೊಮ್ಮೆ ಆತ್ಮೀಯ ಗೆಳೆಯನಾದರೂ ಹಲವಾರು ಬಾರಿ ಮುನಿಸಿ ದೂರಾಗಿ ಹೋಗುವವರೆಗೂ, ಬೇರೆಯವರ ಬಳಿಯಲ್ಲಿ ನನ್ನ ಬಗ್ಗೆ ಚಾಡಿ ಹೇಳಿ ನನ್ನನ್ನು ಹುಟ್ಟು ನೀಚನೆನಿಸುವ ತನಕವೂ ನನ್ನ ದೂರ್ತ ಮನಸನ್ನು ತೋರಿಸಿದ್ದೇನೆ. ನನ್ನ ಗೆಳತಿಯನ್ನು ಗಾಢವಾಗಿ ಪ್ರೀತಿಸಿ ನಿನಗಾಗಿಯೇ ನಾನು ಹುಟ್ಟಿರುವುದು ಬದುಕಿರುವುದೆಂದು ಆಣೆ ಭಾಷೆಮಾಡಿದ್ದರೂ, ಅವಳೊಡನೆ ಜಗಳವಾಡಿ ಅವಳು ಕಣ್ಣೀರಿಟ್ಟಾಗ ಅವಳ ಕಾಲಿಗೆ ಬಿದ್ದು ಕ್ಷಮೆ ಕೇಳುವ ಮಟ್ಟಕ್ಕೂ ಹೋಗಿದ್ದೇನೆ.ಅವಳು ನನ್ನನ್ನು ಬಿಟ್ಟು ಏಕಾಂಗಿಯಾದಾಗ ನನಗೆ ಬದುಕೆಂಬುದು ಇಲ್ಲವೇ ಇಲ್ಲವೆನ್ನುವಂತೆ ಕೊರಗಿದ್ದೇನೆ, ನನ್ನೊಳಗೆ ಅತ್ತಿದ್ದೇನೆ. ನೀನು ನಂಬಿಸಿ ನನ್ನನ್ನು ಕಾರಣವನ್ನು ಹೇಳದೇ ಹೋದದ್ದಕ್ಕೆ ಮರುಗಿದ್ದೇನೆ. ದೂರಿದ್ದೇನೆ, ದೂಷಿಸಿದ್ದೇನೆ. ನಿನ್ನನ್ನು ದೇವತೆಯಂತೆ ಬಿಂಬಿಸಿ ಕವನ ಬರೆದ ಕೈಗಳು ನೀನೊಬ್ಬ ನಡತೆಗೆಟ್ಟವಳು ಎನ್ನುವ ತನಕ ಹೋಗಿವೆ, ನನ್ನ ಭಾವನೆಗಳಿಗೆ ಅರ್ಥ ಬಂದದ್ದು ನಿನ್ನಿಂದ ಎಂದು ಭಾವಿಸಿದ್ದ ಅಂತರಾಳ, ನೀನು ನನ್ನ ಭಾವನೆಗಳೊಂದಿಗೆ ಆಡಿ ಹೋದವಳೆಂದು ನಿಟ್ಟುಸಿರು ಬಿಟ್ಟಿದೆ.
ನಾನು ಎಂದರೇ, ಏನು? ಯಾರು? ಚಿಕ್ಕವನಿದ್ದಾಗ ಕಾಲುವೆಯಲ್ಲಿ ಸ್ನಾನ ಮಾಡಲೂ ಹೋಗಿ, ಹೆದರಿಕೊಂಡು ಜ್ವರ ಬಂದು ಅಮ್ಮ ನನ್ನನ್ನು ಶನಿದೇವರ ದೇವಸ್ಥಾನಕ್ಕೆ ತಾಯಿತಿ ಕಟ್ಟಿಸಲು ಕರೆದೊಯ್ದಾಗ, ಶನಿದೇವರು ಪೂಜಾರಿಯ ಮೈಮೇಲೆ ಬಂದಿದೆ ಎಂದಾಗ ನನ್ನ ಜೀವವೇ ಹೋದಂತಾಗಿ ಭಯದಿಂದ ನಡುಗಿ ನಿಂತು ದೇವರನ್ನು ಬೇಡುತ್ತಿದ್ದನಲ್ಲ ಅವನೇನಾ ನಾನು? ನನಗೆ ಶನಿಕಾಟವಿದೆಯೆಂದು ಅಮ್ಮನ ನಂಬಿಕೆಯೊಂದಿಕೆ ನನ್ನ ನಂಬಿಕೆಯನ್ನು ಬೆಳಸಿ ಮುಂಜಾನೆ ಐದಕ್ಕೆ ಎದ್ದು ಅಮ್ಮನ ಜೊತೆ ತಣ್ಣೀರು ಸ್ನಾನ ಮಾಡಿ ಅರಳಿ ಮರ ಸುತ್ತಿ ಬರುತ್ತಿದವನಾ? ಅಥವಾ ಈ ದೇವರು, ದಿಂಡಿರು ಎಂದು ಮರ ಸುತ್ತುವುದು, ಮೈಮೇಲೆ ಬರುವುದೆಲ್ಲಾ ಜನರನ್ನು ಮೋಸಗೊಳಿಸಲು ಮಾಡುತ್ತಿರುವ ಧಂಧೆ ಎಂದು ಅವರನ್ನು ನೇರ ದೂರಿ ಬಂದೆನಲ್ಲ ಅವನೇನಾ ನಾನು? ಪ್ರತಿ ವರ್ಷವೂ ಏಪ್ರಿಲ್ ತಿಂಗಳಂದು, ಮುಂಜಾನೆಗೆ ಎದ್ದು ಬೇಲೂರಿಗೆ ಹೋಗಿ ಅಲ್ಲಿನ ಕೆರೆಯಲ್ಲಿ ಮುಳುಗೆದ್ದು ಪೂಜೆ ಮಾಡಿಸಿಕೊಂಡು ಬರುತ್ತಿದ್ದವನು, ಈಗ ಬೇಲೂರಿಗೆ ಹೋದರೂ ಪೂಜೆ ಮಾಡಿಸದೇ ಅಲ್ಲಿನ ಚಿತ್ತಾರಗಳ, ಕೆತ್ತನೆಗಳ ಬಗ್ಗೆ ಫೋಟೋ ತೆಗೆದು ಬರುವಂತೆ ಆಯಿತಲ್ಲಾ ನನ್ನ ಮನಸ್ಸು, ಅವನೇನಾ? ಅಮ್ಮ, ಬೆಳಿಗ್ಗೆ ಎಬ್ಬಿಸುವಾಗ, ಕಡ್ಡಾಯವಾಗಿ ಬಲದೇ ಮಗ್ಗಿಲಿಗೆ ತಿರುಗಿ ಎದ್ದು ದೇವರ ಫೋಟೋ ನೋಡಿ ಕೈಮುಗಿದು ದೇವರನ್ನು ಮನಸಾರೇ ಬೇಡಿ ದಿನ ಆರಂಭಿಸುತ್ತಿದ್ದವನು ನಾನಾ? ಅಥವಾ ಇರುವ ಕೋಣೆಯಲ್ಲಿ ಒಂದೇ ಒಂದು ದೇವರ ಫೋಟೋ ಇರುವುದಿರಲಿ, ದೇವರೆಂಬುವದರ ಬಗ್ಗೆ ನಿರಾಸಕ್ತಿ ಹೊಂದಿದವನು ನಾನಾ? ಪರೀಕ್ಷೆ ಎಂಬುದು ಸಮೀಪಿಸುವಾಗ ಅಯ್ಯೋ ದೇವರೇ ಈ ಪರಿಕ್ಷೆಯಿಂದ ನನ್ನನ್ನು ಪಾರುಮಾಡು ಎಂದು ಬೇಡಿದವನು ನಾನಾ? ಪರೀಕ್ಷೆ ಬರೆದು ಮುಗಿದ ಮೇಲೆ ಅಯ್ಯೋ ದೇವರೇ ನನ್ನನ್ನು ಪಾಸು ಮಾಡು ಎಂದು ಬೇಡಿದವನು ನಾನಾ? ನಾನು ಹಗಲಿರುಳು ಓದಿ ಬಂದದ್ದಕ್ಕೆ ಈ ಮಟ್ಟಕ್ಕೆ ಬಂದೆ ಎಂದು ಬೀಗಿದವನು ನಾನಾ?
ತಾತಾ ನನ್ನೆದುರು ಕುಳಿತು ಸರಾಯಿಯ್ ಕುಡಿಯುತಿದ್ದಾಗ, ನಮ್ಮೂರಿನ ಹಲವರು ಕುಡಿದು ಬೀದಿಯಲ್ಲಿ ಜಗಳವಾಡುತಿದ್ದಾಗ ಅಪಹಾಸ್ಯದಿಂದ ಅವರನ್ನು ರೇಗಿಸಿ, ಕುಡಿದು ಸಾಯ್ತಾ ಇದ್ದಿರಲ್ಲೋ ಮುಠ್ಠಾಳರ ಅದರಲ್ಲೇನಿರುತ್ತೋ? ಎನ್ನುತ್ತಿದ್ದವನು, ಕುಡಿದು, ಕುಣಿದು ಕುಪ್ಪಳಿಸಿದಾಗ ನನ್ನೊಳಗಿನ ಆತ್ಮ ಜಾಗೃತಗೊಂಡು ಮಂಕೆ ನೀನು ಮಾಡುತ್ತಿರುವುದೇನೆಂದು ಎಚ್ಚರಿಸಿದಾಗ ಅದರಿಂದ ದೂರ ಹೋದೆನಲ್ಲ ಅವನಾ? ನಮ್ಮೂರಿನ ಹರಿಜನ ಕೇರಿಯ ಕೆಲವು ಹೆಂಗಸರು ಕುಡಿದು ಬೈಯ್ಗುಳ ಸುರಿಮಳೆಗಯ್ಯುವಾಗ ಥೂ ಇದೆಂತಾ ಹೆಂಗಸು ಎನ್ನುತ್ತಿದ್ದನಲ್ಲ ಅವನೇನಾ ನಾನು? ಅಥವಾ ಕಾಲೆಜಿಗೆ ಸೇರಿದಾಗ ನನ್ನ ಜೊತೆಗಾರರು(ಹುಡುಗಿಯರು) ಕುಡಿದಾಗ ಮಹಿಳೆಯೆಂದರೇ ಹೀಗಿರಬೇಕು, ಅವರಿಗೆ ಬೇಕಾದುದನ್ನು ಅವರು ಪಡೆದು ಅನುಭವಿಸಬೇಕೆಂದು ಬಯಸಿತ್ತಲ್ಲ ಮನಸ್ಸು ಅದು ನಾನಾ? ಅಯ್ಯೋ ನನ್ನನ್ನು ಇಂಟರ್ನಲ್ ನಲ್ಲಿ ನನ್ನ ಮಾರ್ಕ್ಸ್ ಕಡಿಮೆಯಾಗುತ್ತದೆಂದು ಉಪನ್ಯಾಸಕರ ಕಣ್ಣಿಗೆ ಬೀಳದೇ ಮರೆಯಾಗಿ ಓಡಾಡುತ್ತಿದ್ದವನು, ಪ್ರಪಂಚದ ವಿಷಯ ನನಗೇಕೆ, ಅದರಲ್ಲಿ ನನಗೆ ಆಸಕ್ತಿ ಇಲ್ಲ ನನ್ನ ಕೆಲಸ ಓದಿ ಪಾಸಾಗುವುದಷ್ಟೇ ಎಂದು ಸಾಗಿಸಿದ ದಿನಗಳಿವೆ. ಮರುದಿನವೇ, ಉಪನ್ಯಾಸಕ ವಿರುದ್ದ ತಿರುಗಿಬಿದ್ದು, ಹೋದರೇ ಹೋಯಿತು ಈ ಮಾರ್ಕ್ಸು ಈ ಡಿಗ್ರೀ ಯಾರಿಗೆ ಬೇಕು ಎಂದು ಕುಲಪತಿಗಳಿಗೆ ದೂರು ನೀಡಲು ಹೋದದ್ದು ಇದೆ. ಓದಿ ಉದ್ದಾರವಾಗುವುದು ಅಷ್ಟರಲ್ಲಿಯೇ ಇದೆ, ಓದದೇ ಬದುಕಿದವರಿಲ್ಲವೇ? ಈ ಪುಸ್ತಕಗಳು ಯಾರೋ ಅವರ ತೀಟೆ ತೀರಿಸಿಕೊಳ್ಳಲು ಬರೆದಿದ್ದಾರೆ ಇದಕ್ಕೆಲ್ಲಾ ಕೊನೆ ಹೇಳಬೇಕೆಂದು ಎಸೆದು ಇನ್ನು ಮುಂದೆ ಕಾಲೆಜಿಗೆ ಗುಡ್ ಬೈ ಎಂದು ಕೆಲಸಕ್ಕೆ ಹೋದವನು, ಮರಳಿ ಬಂದು ಕಾಲೇಜು ಸೇರಿ ಹೆಚ್ಚು ಓದಬೇಕು, ಓದು ಎಂಬುದಿರುವುದು ನನ್ನ ಸ್ವಂತ ಬುದ್ದಿಯನ್ನು ವಿಕಸನಗೊಳ್ಳಲಿರುವುದೇ ಹೊರತು, ಪರರ ಜೊತೆಗೆ ನನ್ನನ್ನು ಹೋಲಿಸಿನೋಡುವುದಕ್ಕಲ್ಲವೆಂದವನು ನಾನಾ?
ಜಾತಿಯೆಂಬುದೇ, ಬಹುಮುಖ್ಯ ಅದೊಂದು ಜೀವನದ ಮಹತ್ತರ ಬೇಡಿಕೆಗಳಲ್ಲಿ, ಒಂದು ನಮ್ಮ ಸನಾತನಿಯವಾದದ್ದು, ಅದನ್ನು ಕಡೆಗನಿಸಬಾರದ್ದು, ಅದನ್ನು ಪಾಲಿಸಬೇಕೆಂದು, ನಮ್ಮ ಗುರುತು ಎಂಬುದೊಂದಿದ್ದರೇ, ಅದು ನಮ್ಮ ಜಾತಿಯಿಂದಲೇ ಎಂಬ ಪುಂಡರ ಭೋಧನೆಗೆ ಸಿಲುಕಿ ನನ್ನನ್ನು ನಾನು ಜಾತಿಯ ಕುರುಡು ಆರಾಧಕನಂತೆ ನಟಿಸಿದ್ದು ನಾನಾ? ಅದು ಅತಿರೇಕಕ್ಕೆ ಹೋಗಿ, ಒಕ್ಕಲಿಗರ ಸಂಘಕ್ಕೆ ಸದಸ್ಯತ್ವ ಪಡೆಯಲು ಹೋದದ್ದು ನಾನಾ? ಅಥವಾ ಈ ಜಾತಿ, ಈ ಧರ್ಮ ಇವೆಲ್ಲಾ ನಮ್ಮ ಸಮಾಜಕ್ಕೆ ಅಂಟಿರುವ ಕ್ಯಾನ್ಸರ್ ಹುಣ್ಣುಗಳು ಇವುಗಳನ್ನು ಬುಡಸಮೇತ ಕೀಳದ ಹೊರತು ಆರೋಗ್ಯಕರ ಸಮಾಜ ಕಲ್ಪಿಸಲಾರದೆಂದು, ಜಾತಿಯ ಬಗ್ಗೆ ಧರ್ಮದ ಬಗ್ಗೆ ಮಾತನಾಡುವವರನ್ನು ದೂರವಿಟ್ಟು ಒಬ್ಬನೇ ಹೊರಟವನು ನಾನಾ? ಇದಕ್ಕೊಂದು ಉದಾಹರಣೆಯಾಗಿ ನನ್ನ ಕಾಲೇಜಿನಲ್ಲಿ ನಡೆದುದ್ದನ್ನು ಹೇಳುತ್ತೇನೆ. ನಾನು ಜ್ನಾನ ಭಾರತಿಯಲ್ಲಿದ್ದಾಗ, ಇಂದಿಗೂ ಅದರ ಪರಿಸ್ಥಿತಿ ಬದಲಾಗಿಲ್ಲ, ಅದು ಬದಲಾಗುವುದು ಇಲ್ಲ. ಎರಡು ಬಣದವರು ವಿದ್ಯಾರ್ಥಿಗಳ ಮನಸ್ಸಲ್ಲಿ ಜಾತಿ ಬೀಜ ಬಿತ್ತಿ ಉಪಯೋಗಿಸುತ್ತಿದ್ದರು. ನನ್ನನ್ನು ಬಳಸಿಕೊಂಡರೆಂದರೇ ತಪ್ಪಿಲ್ಲ, ಆ ದಿನಗಳಲ್ಲಿ, ನಾನು ಅವರ ಮಾತನ್ನು ತಪ್ಪಿದರೇ ನನ್ನ ಡಿಗ್ರೀ ಹೋಗುವುದೆಂದು ಹೆದರಿಸಿದ್ದರು, ಅದು ನೇರ ಬೆದರಿಕೆಯಲ್ಲ! ಒಂದು ಬಗೆಯ ಭಾವನಾತ್ಮಕ ಬೆದರಿಕೆಗಳು,ಇನ್ನೊಂದೆಡೆ ನಮ್ಮನ್ನು ಬ್ಲಾಕ್ ಮೇಲ್ ಮಾಡುವಂತವುಗಳು. ನಮ್ಮ ಜಾತಿಯವನಾಗಿ ಹೀಗೆ ಆಡ್ತೀಯಾ ಅಂತಾ! ನಾನು ಜಾತಿ ಕಟ್ಟಿಕೊಂಡೂ ಏನಾಗ್ಬೇಕು ಸರ್ ನಮಗೆ ಎಂದರೇ, ಅಯ್ಯೋ ನಿನ್ನ ಏನ್ ಮಾತಾಡ್ತೀಯಾ ನೀನು, ಎಂದು ದೇಶದ ರಾಜಕಾರಣವನ್ನೆ ನಮ್ಮ ಕಿವಿಗೆ ತುಂಬಲು ನೋಡಿದರು. ಇನ್ನೊಂದು ಬಣದವರು ನೀವು ಜಾತಿಯತೆ ಮಾಡ್ತಿರಾ, ಜಾತಿ ಅಂತಾ ಹೋದರೇ, ನಿನ್ನ ಓದು ಏನಾಗುತ್ತೇ ಗೊತ್ತಾ ಎಂದು, ಅವರು ಹೇಳಿದ್ದನ್ನು ಕಾಗದದಲ್ಲಿ ಬರೆದುಕೊಡಿ, ಅವರ ವಿರುದ್ದ ಒಂದು ಲಿಖಿತ ದೂರು ಕೊಡಿ, ಅವರನ್ನು ನಾಳೆಯಿಂದಲೇ ಕುರ್ಚಿಯಿಂದ ಇಳಿಸೋಣವೆಂದು ಪೀಡಿಸತೊಡಗಿದರು. ನನಗಂತೂ ದಿನ ಕಳೆಯುವುದು ಆಗುತ್ತಿರಲಿಲ್ಲ, ಯಾರು ಸಿಕ್ಕರು , ಕಾಗದ ಬರೆದು ಕೊಡು, ದೂರು ಕೊಡು ಎಂದು ನನ್ನನ್ನು, ನನ್ನ ಸ್ನೇಹಿತರಿಗೂ ತಿಳಿಸು ಎಂದು ಕಾಡುವುದೇ ಆಯಿತು. ಯಾರೊಬ್ಬರೂ ಓದಿನ ಬಗೆಗೆ, ಸಮಾಜದ, ಪರಿಸರದ ಕಡೆ ಪಕ್ಷ ನಮ್ಮ ವಿದ್ಯಾರ್ಥಿಗಳ ಬಗೆಗೂ ಮಾತನಾಡುತ್ತಿರಲಿಲ್ಲ. ಕಟ್ಟ ಕಡೆಗೆ, ನನಗೇ ಬೇಸರ ಬಂದು, ಇದು ಹೀಗೆ ಮುಂದುವರೆದರೇ, ನಾನು ಕುಲಪತಿಗಳ ಬಳಿಗೆ ಹೋಗುತ್ತೇನೆ, ನನ್ನ ಈ ಕೊಳಕು ಡೀಗ್ರೀ ನೂ ಬೇಡ, ಇವರ ಸಹವಾಸನೂ ಬೇಡ, ಎಂದು ಹೇಳಿದ ವಿಷಯ ಇಬ್ಬರಿಗೂ ತಿಳಿದು, ಇಬ್ಬರೂ ನನ್ನ ಶತ್ರುಗಳಾದರು. ಈಗಲೂ ನಾನು ಓದಿದ ಆ ವಿಭಾಗಕ್ಕೆ ಹೋಗಲು ಹಿಂಜರಿಕೆ, ಮತ್ತು ಅಸಹ್ಯವಾಗುತ್ತದೆ. ಇಡೀ ವ್ಯವಸ್ಥೆಯೇ ಹೀಗಿರುವಾಗ ನಾನೊಬ್ಬ ದೂರಿದರೇ ಏನು ಲಾಭವಾದೀತು. ನಾನು ಈ ಪರಿಸ್ಥಿಯಲ್ಲಿದ್ದಾಗ ಅದನ್ನು ಬಳಸಿಕೊಂಡು ನನ್ನ ಬಗ್ಗೆ ಅಪಪ್ರಚಾರ ಮಾಡಿದ ನನ್ನ ಸ್ನೇಹಿತರ ಮಾರ್ಕ್ಸ್ ಕಾರ್ಡುಗಳಲ್ಲಿ ಮಾರ್ಕ್ಸ್ ನನಗಿಂತ ಬಹುಪಾಲು ಹೆಚ್ಚು ಪಡೆದರು. ನಾನು ಆ ಅಂಕಪಟ್ಟಿಗಳಿಂದ ಏನೂ ಲಾಭ ಪಡೆದಿಲ್ಲವೆನ್ನುವುದು ಸೋಜಿಗದ ಸಂಗತಿ.
ಇದೊಂದು ಗೊಂದಲವೋ? ದ್ವಂದ್ವವೋ ತಿಳಿದಿಲ್ಲ. ಒಮ್ಮೊಮ್ಮೆ ಗೊಂದಲವೆನಿಸಿದರೂ ಮತ್ತೊಮ್ಮೆ ಇದು ಗೊಂದಲವಲ್ಲ, ದ್ವಂದ್ವವೆನಿಸುತ್ತದೆ. ಕೇವಲ ಎರಡು ದಿಕ್ಕುಗಳಿದ್ದಾಗ, ದ್ವಂದ್ವವೆನಿಸುವುದು ಸಹಜ. ಆದರೇ, ಕತ್ತಲೆಯ ಕೋಣೆಯಲ್ಲಿ ಒಬ್ಬನೇ ಉಳಿದಾಗ, ಎಲ್ಲ ದಿಕ್ಕುಗಳು ಒಂದೇ ತೆರನಾಗಿ ಕಾಣುತ್ತದೆ. ಅಸಲಿಗೆ ಅಲ್ಲಿ, ದಿಕ್ಕುಗಳೆಂಬುದೇ ಇರುವುದಿಲ್ಲ, ಎತ್ತ ನೋಡಿದರೂ ಒಂದೇ ತೆರನಾಗಿ ಕಾಣುತ್ತದೆ, ಏನೂ ತೋಚದ, ಎಲ್ಲೋ ಕಳೆದು ಹೋದ ಭಾವನೆ ಮೂಡುತ್ತದೆ. ಬದುಕೆಂಬುದು ಕೊನೆಯ ಘಟ್ಟದಲ್ಲಿದೆ ಎನಿಸುವುದು ಒಂದು ಬಗೆಯಾದರೇ, ಜೀವನ ಮುಗಿದು ಹೋಯಿತೆಂದು, ಅಥವಾ ಜೀವನದಲ್ಲಿ ನಾನು ಮುಳುಗಿ ಹೋದೆ ಎಂಬ ಕೊರಗು ಉಂಟಾಗುತ್ತದೆ. ಇದು ಸರಿ ಅದು ತಪ್ಪು ಎಂದು ಚಿಂತಿಸುಲು ಯತ್ನಿಸುವ ಮನಸ್ಸು ಒಮ್ಮೆ ಮೂಡಿದರೂ, ಮತ್ತೊಮ್ಮೆ, ಜೀವನ ಬಂದ ಹಾಗೆ ಸ್ವೀಕರಿಸುವುದನ್ನು ಬಿಟ್ಟು ಅದನ್ನು ನಮಗೆ ಬೇಕಾದಂತೆ ಬದಲಾಯಿಸಿಕೊಳ್ಳುವ ಶಕ್ತಿಯನ್ನು ಕೊಟ್ಟವಾರಾರು ಎನ್ನುವ ಪ್ರಶ್ನೆ ಮೂಡುತ್ತದೆ. ಜೀವನ ನನ್ನದು ನನ್ನ ಆಸೆಗೆ ನನ್ನ ಮನಸ್ಸಿಗೆ ತಕ್ಕಂತೆ ಯೋಚಿಸಿ ಅದನ್ನು ರೂಪಿಸಿಕೊಳ್ಳುವ ಹಕ್ಕು ನನಗಿಲ್ಲವೇ, ನನ್ನ ಬದುಕಿನ ಮೇಲೆ, ನನ್ನ ದೇಹದ ಮೇಲೆ ನನ್ನ ಹಕ್ಕು ಸಾಧಿಸುವುದನ್ನು ತಡೆಯಲು ಅನ್ಯರಿಗೆ ಹಕ್ಕನ್ನು ಕೊಟ್ಟವರಾರು? ನನ್ನಿಷ್ಟಕ್ಕೆ ತಕ್ಕಂತೆ, ಬಟ್ಟೆ ತೊಡುವುದು, ಗಡ್ಡ ಬಿಡುವುದು, ತಲೆ ಕೂದಲು ಬಾಚುವುದಕ್ಕೂ ಬಿಡುವುದಿಲ್ಲವಲ್ಲ, ನಾನು ಹೀಗೆ ಇರುತ್ತೇನೆ, ಯಾರ ಮಾತನ್ನು ಕೇಳುವುದಿಲ್ಲ. ಕೇಳುವ ಅನಿವಾರ್ಯತೆ ನನಗಿಲ್ಲವೆಂದರೂ, ಅದರಂತೆ ಹಲವು ತಿಂಗಳುಗಳು ಬದುಕಿದರೂ, ಮತ್ತದೆ ಏಕಾತನತೆ ಕಾಡುತ್ತದೆ, ಮರಳಿ ಮಣ್ಣಿಗೆಯೆಂಬಂತೆ, ಅದೇ ಹಳೆಯ ಶೈಲಿಗೆ ಹೋಗೋಣವೆನಿಸುತ್ತದೆ. ನನ್ನ ಮೇಲೆ ಹಿಡಿತ ಸಾಧಿಸಲೂ ಯಾರಾದರೂ ಹವಣಿಸಿದರೇ, ಪ್ರಯತ್ನಿಸಿದರೇ, ಅವರಿಗೆ ಸಿಗದಂತೆ, ನನ್ನನ್ನು, ನನ್ನತನವನ್ನು ಉಳಿಸಿಕೊಳ್ಳಲು ಹೋರಾಡತೊಡುಗುತ್ತದೆ. ಇದು ನಾನು, ನಾನು ಎಂದು ಬೊಬ್ಬೆ ಹೊಡೆಯುತ್ತದೆ. ಮರುಗಳಿಗೆಯಲ್ಲಿಯೇ, ಅದು ಬದಲಾಗಿ, ಜೀವನವೆಂಬುದು ಶಾಶ್ವತವಾ? ಈ ಹೋರಾಟ ಈ ಜಂಜಾಟವೆಲ್ಲಾ ಅನವಶ್ಯಕತೆಯೆನಿಸುತ್ತದೆ.
ಬಾಳೆಂಬ ಪಯಣದಲ್ಲಿ, ನಾನೊಬ್ಬ ಸಹ ಪಯಣಿಗನಾಗಿ ಪಯಣಿಸುತ್ತಿದ್ದೇನೆ, ಇದು ಮುಗಿದ ನಂತರ ನಾನು ಇಳಿದು ಹೋಗಲೇ ಬೇಕು, ನಾನು ಈಗ ಕುಳಿತಿರುವ ಸ್ಥಳ ನಿನ್ನೆ ಮತ್ತಾರೋ ಕುಳಿತದ್ದು, ನಾಳೆ ಇನ್ಯಾರಿಗೋ ಅದನ್ನು ಬಿಟ್ಟು ಹೋಗುತ್ತೇನೆ. ಅದಕ್ಕಾಗಿ ಈ ಹೋರಾಟ, ಈ ನೂಕಾಟವೇಕೆ? ಎನಿಸುತ್ತದೆ.ಆದರೂ, ಒಮ್ಮೊಮ್ಮೆ, ಈ ಜೀವನವೆಂಬುದರಲ್ಲಿ, ನಾನು ಇಲ್ಲೇ ಉಳಿದು ಹೋಗುವವನಂತೆ, ಸಾಧಿಸಿ ತೋರಬೇಕೆಂದು, ದುಡಿಮೆಗೆ, ಸಾಮಾಜಿಕ ಕಾಳಜಿಗೆ ಮುಳುಗುತ್ತೇನೆ. ನಾನು ಈ ಸಮಾಜದಿಂದ ಪಡೆದು ಮೇಲಕ್ಕೆ ಬಂದಿದ್ದೇನೆ ಅದನ್ನು ಬಡ್ಡಿ ಸಮೇತ ಹಿಂದಿರುಗಿಸಬೇಕು ನನಗೆ ಯಾರ ಹಂಗು ಬೇಡ, ಇಲ್ಲಿಂದ ನಾನು ಏನನ್ನು ಹೊತ್ತು ಹೋಗುವುದಿಲ್ಲ, ನನ್ನಿಂದ ಸಾಧ್ಯವಾದಷ್ಟನ್ನು ಇಲ್ಲಿಗೆ ನೀಡಿ ಹೋಗಬೇಕು. ಬದುಕನ್ನು ಅರ್ಥಪೂರ್ಣವಾಗಿಸಬೇಕೆಂದು ಬಯಸುತ್ತೇನೆ. ಅರ್ಥವೆಂದರೇನು? ಈ ಅರ್ಥ ನನ್ನಿಂದ ನಾನು ಮಾಡಿದ್ದು. ಅಥವಾ ನನ್ನ ಪೂರ್ವಜರು ಮಾಡಿದ್ದಿರಬೇಕು. ಅದು ಅವರ ಜೀವನಕ್ಕೆಂದು ಮಾಡಿದ್ದೇ ಹೊರತು ನಾನು ಅದನ್ನು ಪಾಲಿಸಲೇಬೇಕೆಂಬ ನಿಯಮವೇನು? ಜೀವನವೆಂಬುದು ಸ್ವಂತಿಕೆಯ, ಆಸಕ್ತಿಯ ವಿಷಯ. ಒಂದು ರೈಲಿನಲ್ಲಿ ಪಯಣಿಸುವಾಗ, ಒಬ್ಬ ಮೇಲಿನ ಹಾಸಿಗೆಯಲ್ಲಿ ಮಲಗಲು ಬಯಸುತ್ತಾನೆ, ಮತ್ತೊಬ್ಬ ಕಿಟಕಿಯ ಬದಿಯಲ್ಲಿ ಕೂರಲು ಬಯಸುತ್ತಾನೆ, ಫುಟ್ ಬೋರ್ಡ್ ಸಿಕ್ಕರೂ ಸಾಕೆಂದು ಬಯಸುವವರೂ, ಸೀಟು ಸಿಕ್ಕರೂ ಬಿಟ್ಟು ಫುಟ್ ಬೋರ್ಡ್ ಬಳಿ ನಿಲ್ಲಲು ಬಯಸುವವರು, ನಿಂತೆ ಪಯಣಿಸಲು ಹೊರಡುವವರು ಹೀಗೆ ಅವರಿಚ್ಚೆಯಂತೆ ಅವರಿಗೆ ದೊರಕಿದಂತೆ ರೂಪಿಸಿಕೊಳ್ಳುತ್ತಾರೆ. ಅಲ್ಲಿ ಕೆಲವರು ಇದು ನನ್ನದು ಎಂದು ವಾದಿಸುತ್ತಾ, ಜಗಳವಾಡುತ್ತ ಕಳೆಯುತ್ತಾರೆ. ಹಾಗಿರುವಾಗ ನಾನೇಕೆ, ಯಾರೋ ಎಂದೋ ಬರೆದು ಹೋದ ಜೀವನ ಪದ್ದತಿಯನ್ನು ಅನುಕರಿಸಬೇಕೆನಿಸುತ್ತದೆ. ನಾನು ನಿನ್ನೆಯ ಬಗ್ಗೆ ಅಥವಾ ಕಳೆದು ಹೋದ ದಿನಗಳ ಬಗ್ಗೆ, ನನ್ನ ಬದುಕಿನಲ್ಲಿ ಬಂದು ಹೋದ ಪಾತ್ರಗಳ ಬಗ್ಗೆ ಚಿಂತಿಸುವುದನ್ನು ಮರೆತಿದ್ದೇನೆ. ಬಿಡದೇ ಕಾಡುವ ನೆನಪುಗಳು ಬಹಳ ಕಡಿಮೆಯೆಂದರೂ ತಪ್ಪಿಲ್ಲ.
ನಾನು ಇಂದಿನ ಈ ದಿನದ ಬಗ್ಗೆ ಇದನ್ನು ಸದುಪಯೋಗಿಸಿಕೊಳ್ಳುವುದರ ಬಗ್ಗೆ ಹೆಚ್ಚಿನ ಗಮನವಹಿಸುತ್ತೇನೆ. ಇಳಿದು ಹೋದ ನನ್ನ ಸಹ ಪಯಣಿಗನನ್ನು ಕಾಯುವುದನ್ನು ನಿಲ್ಲಿಸಿದ್ದೇನೆ. ಅವನ ಪಾತ್ರ ಮುಗಿಯುತು. ನಾನಾಗೆ ಅವನನ್ನು ಇಳಿಸಲಿಲ್ಲ. ಅವನಿಗೆ ಬೇಸರ ಬಂದು ಹೋದಳೋ ಅಥವಾ ನನ್ನ ಸಂಗಡ ಸಿಗದ ಆಂತರಿಕ ಸಂತೋಷವನ್ನು ಬೇರೆಡೆ ಹುಡುಕಿ ಹೋದಳೋ ಹೋದರೇ ಹೋಗಲಿ, ಹೋದದ್ದು ಆಯಿತು ಮತ್ತೆ ಅವಳು ನನ್ನ ಬಾಳಲ್ಲಿ ಬರಲಿ ಎಂಬ ಬಯಕೆ ಎನಗಿಲ್ಲ. ಬಂದರೂ ಅವಳಿಗೆ ಕೊಟ್ಟ ಸ್ಥಾನವನ್ನು ಮತ್ತೆ ಕೊಡುತ್ತೇನೆಂದು ಭರವಸೆ ಕೊಡಲಾರೆ. ನಾನು ನಿನಗಿಂತ ಬಹಳ ದೂರಕ್ಕೆ ಸಾಗಿದ್ದೇನೆ. ನೀನು ಬಯಸುವ ಆ ಮಧುರ ದಿನಗಳು ನನಗಿಲ್ಲ. ಹಾಗೆಂದು ಈಗ ನಡೆಯುತ್ತಿರುವ ದಿನಗಳು ಅಪ್ರಿಯವೆನಿಸುವುದಿಲ್ಲ. ನನ್ನ ಜೊತೆಯಲ್ಲಿ ಇನ್ನೂ ಹಲವಾರು ಸಹಪಯಣಿಗರು ಇದ್ದಾರೆ ಅವರಿಗೆ, ಅವರಿಂದ ನನಗೆ ಸಿಗುತ್ತಿರುವ ಸಂತೋಷ ಸಾಕು. ನೀನು ಬಿಟ್ಟು ಹೋದಾಗ ನನ್ನ ಬಾಳಿಗೆ ಆಗಮಿಸಿದ, ಅಥವಾ ನೀನು ಕುಳಿತಿದ್ದ ಸ್ಥಳದಲ್ಲಿ ಈಗ ಕುಳಿತಿರುವವರನ್ನು ನಾನು ಎದ್ದೇಳಿ ಎನ್ನಲಾರೆ. ನಿನಗೆ ನಿನ್ನ ಜೀವನದ ಆಯ್ಕೆಗಳು ಮುಖ್ಯವಾಗುವಂತೆ ನನಗೂ ಮುಖ್ಯವಾಗುತ್ತವೆ. ಪ್ರೀತಿ ಪ್ರೇಮ, ಸ್ನೇಹ ಸಂಭಂಧಗಳು ಶಾಶ್ವತವೆಂದೂ ಸಾವಿರ ಸಾವಿರ ಹೇಳಬಹುದು, ನನಗೆ ಎರಡು ಕಡೆಯಿಂದ ಒಂದೇ ಮಟ್ಟದಲ್ಲಿ ತಲ್ಲೀನತೆಯಿದ್ದರೇ ಮಾತ್ರ ಅಲ್ಲಿ ಒಂದು ಗಮ್ಯತೆ ಮೂಡುತ್ತದೆ. ನಾನು ಮಾತನಾಡುವ ಮಾತಿಗೆ ಬೆಲೆ ಬರುವುದು ಕೇಳುಗರಿದ್ದರೇ ಮಾತ್ರ, ಕೇಳುಗರು ನಿದ್ದೆ ಹೋದರೂ ನಾನು ಮಾತನಾಡುತ್ತಿದ್ದರೇ, ಅದು ಕೇವಲ ರಾಜಕಾರಣಿಗಳ ಬುಡುಬುಡುಕೆ ಮಾತುಗಳಾಗುತ್ತವೆ.
ಆದರೂ ನನಗೆ ಅರಿಯದಂತೆ ನನ್ನೊಳಗೆ ಬಂದು ನನ್ನನ್ನು ಹೊಸ ಜಗತ್ತಿಗೆ ಕರೆದೊಯ್ದವಳೆಂದರೇ ನಿಸರ್ಗ. ಅವಳ ಮೋಹಕ್ಕೆ ಸಿಳುಕಿದೆನೆಂದರೇ, ಅವಳು ಉಬ್ಬಿ ಹೋದಾಳು! ಇಲ್ಲವೆಂದರೇ, ನನಗೆ ನಾನೇ ಮೋಸ ಮಾಡಿಕೊಂಡಂತಾಗುತ್ತದೆ. ಜೀವನದಲ್ಲಿ ಅವನಿಲ್ಲದಿದ್ದರೇ, ಅವಳಿಲ್ಲದಿದ್ದರೇ ಎಂದು ಎಲ್ಲರೂ ಹೇಳುವಂತೆ, ಹುಟ್ಟಿನಿಂದಲೇ ಬೆಳೆದು ಬಂದ ನಿಸರ್ಗದೆಡೆಗಿನ ಮೋಹ ನನ್ನನ್ನು ಬದಲಾಯಿಸಿತೆಂದರೂ ತಪ್ಪಲ್ಲ. ಪ್ರತಿ ಬಾರಿಯೂ ನಾನು ನನ್ನಯ ಬಗ್ಗೆ ಬರೆಯುತ್ತಲೇ ಇದ್ದೇನೆ, ಆದರೇ ಒಮ್ಮೆಯೂ ನಿನ್ನಯ ಬಗ್ಗೆ ಬರೆದಿರಲಿಲ್ಲ, ನನ್ನ ಬರವಣಿಗೆಗಗಳಲ್ಲಿ ಆಗೊಮ್ಮೆ ಈಗೊಮ್ಮೆ ಬಂದ ಹೋದರೂ, ಸಂಪೂರ್ಣವಾಗಿ ಬರೆದಿರಲಿಲ್ಲ, ಮೊದಲ ಬಾರಿಗೆಂಬಂತೆ ನಿನ್ನಯ ಬಗ್ಗೆಯೇ ಬರೆಯುತ್ತೇನೆ. ನಾನು ಬರೆಯುತ್ತೇನೆ, ಎನ್ನುವುದಕ್ಕಿಂತ ನೀನು ಬರೆಸಿಕೊಳ್ಳುತ್ತಿದ್ದೀಯಾ ಎಂದರೇ ತಪ್ಪಲ್ಲ. ನನ್ನ ಬರವಣಿಗೆಗಳು ಮೊದಲು ಶುರುವಾದದ್ದು ನಿನ್ನಯ ಬಗೆಗಿನ ನನ್ನ ಪ್ರೇಮವನ್ನು ಪ್ರಕಟಿಸುವುದಕ್ಕೆಂಬುದು ನಿನಗೆ ತಿಳಿದಿದೆ. ಆದರೇ, ನಂತರ ನಾನು ನಿನಗೆ ಬೇಡವೆನಿಸಿದರೂ ಬೇಡದ ಹತ್ತು ಹಲವು ವಿಷಯಗಳನ್ನು ಅರೆಬೆಂದ ಮಡಿಕೆಯಂತೆ ಅರ್ಧ ಬರೆದು ನಿಲ್ಲಿಸಿದೆ. ನೀನು ಯಾರು? ನಿನಗೊಂದು ಹೆಸರಿಡಲೇ, ನಾ ಇಟ್ಟ ಹೆಸರು ನಿನಗೆ ಮೆಚ್ಚುಗೆಯಾದಿತೇ? ನನಗೆ ಅದು ತಿಳಿಯುವುದಿಲ್ಲ.
ನಾನು ನಿನ್ನ ಸಂಪೂರ್ಣ ಗುಣಗಾನ ಮಾಡಲಾರೆ, ನೀನು ನನ್ನ ಬದುಕಲ್ಲಿ ಬಂದು, ನನ್ನಲ್ಲಾದ ಬದಲಾವಣೆಯ ಒಂದು ಮುಖವನ್ನು ತೋರಿಸುವ ಪ್ರಯತ್ನ ಮಾಡುತ್ತೇನೆ. ತಪ್ಪಿದ್ದರೇ, ಮುನಿಸಿ ನನ್ನಿಂದ ದೂರಾಗಬೇಡ. ಖುಷಿಯಾದರೇ, ಅಪ್ಪಿ ಮುದ್ದಾಡಲೂ ಬೇಡ ಸಂತೋಷ ತಡೆಯಾರದೇ ಎದೆ ಒಡೆದು ಸತ್ತರೂ ಸತ್ತೆ ನಾನು. ನೀನು ನನ್ನ ಬಾಳಿಗೆ ಬಂದಾಗ ನನ್ನ ಬಾಳು ಬರುಡಾಗಿತ್ತು. ಆದ್ದರಿಂದಲೇ, ನನಗೆ ನೀನು ಮೆಚ್ಚುಗೆಯಾದದ್ದು. ದಿನ ನಿತ್ಯ ಕುಡಿದು ಬದುಕಿ, ಹತ್ತಾರು ಸಿಗರೇಟು ಸೇದಿ ಕೆಮ್ಮಿ ಸಾಯುತ್ತಿದ್ದವನನ್ನು ಸಿಗರೇಟಿನಿಂದು ದೂರ ಮಾಡಿ ಸಾಧಿಸಿದ ಶಕ್ತಿ ನಿನ್ನದು. ಕುಡಿತವೆಂಬುದು ನನ್ನ ಮನೆಯ ದೇವರೆಂದು ನಂಬಿ ಅದರಂತೆ ದಿನ ಸಂಜೆ ಆರು ಗಂಟೆಯಾಗುವುದನ್ನೇ ಕಾಯುತ್ತಿದ್ದವನೂ ಕೂಡ ಕುಡಿತದಿಂದ ದೂರಾಗುವಂತೆ ಮಾಡಿದ್ದು ನಿನ್ನ ಮಹಿಮೆಯೇ ಸರಿ. ಜೀವನ ಪರ್ಯಂತ ಅದನ್ನು ಬಿಡದಿದ್ದರೂ ಪ್ರಾಮಾಣಿಕವಾಗಿ ಕೆಲವು ತಿಂಗಳುಗಳ ಮಟ್ಟಿಗೆ ನಾನು ಬಿಟ್ಟದ್ದು ಸತ್ಯ.
ಮೂಗಿನ ಮೇಲೆ ಕೋಪ ತರಿಸಿಕೊಂಡು ರೇಗುತಿದ್ದವನನ್ನು ನಿನ್ನನ್ನು ಕಂಡಾಗ ನಿನ್ನೊಡನೆ ಮಾತನಾಡುವಾಗ ಅದೆಷ್ಟೂ ತಲ್ಲೀನನಾಗುತ್ತೇನೆಂದರೇ ನನಗೆ ಅಚ್ಚರಿ.ಆದರೂ ನಿನ್ನಿಂದ ನಾನು ದೂರಾಗಿ ಉಳಿದಿದ್ದು ಮತ್ತೊಮ್ಮೆ ಬಂದಾಗ ನನ್ನಲ್ಲಿ ಏನೇನೂ ಬದಲಾವಣೆ ಆಗದಿದ್ದರೂ ನಿನ್ನಲ್ಲಾದ ಬದಲಾವಣೆಗೆ ನಾನು ತತ್ತರಿಸಿ ಹೋಗಿದ್ದೆ. ನೀನು ನನಗೆ ಕೊಟ್ಟ ವಿವರಣೆ ಸರಿಯಿತ್ತಾದರೂ, ಅದರಿಂದ ನನಗೆ ಸಮಾಧಾನಕ್ಕಿಂತ ಆದ ನೋವೇ ಹೆಚ್ಚು. ನಮ್ಮ ಜೀವನವೆಂಬುದು ಒಂದು ಗಡಿಯಾರವೆಂದುಕೊಂಡರೇ, ನಾನೆಂಬುದು ದೊಡ್ಡ ಮುಳ್ಳು (ಗಂಟೆ), ನಮ್ಮ ಜೀವನದಲ್ಲಿ ಬರುವ ಜನರು ಅಲ್ಲಿರುವ ನಿಮಿಷದ, ಅಥವಾ ಸೆಕೆಂಡು ಮುಳ್ಳುಗಳಂತೆ. ನಮ್ಮ ಜೀವನದ ಗಂಟೆ ಬದಲಾಗುವುದಕ್ಕೆ ಒಂದು ಗಂಟೆ ಹಿಡಿದರೇ ಅವರ ಜೀವನ ನಮಗಿಂತ ೬೦ ರಷ್ಟೂ ಹೆಚ್ಚು ಬದಲಾಗಿರುತ್ತದೆ, ಕೆಲವರದ್ದು ೩೬೦ ಬಾರಿಯಷ್ಟು ಮುಂದಕ್ಕೆ ಹೋಗಿರುತ್ತದೆ. ಅದಕ್ಕಾಗಿಯೇ, ನಮ್ಮ ಜೀವನದಲ್ಲಿ ಹೈಸ್ಕೂಲ್ ಸಮಯದಲ್ಲಿ ಬಂದು ಹೋದ, ಅಥವಾ ಕಳೆದು ಹೋದ ಗೆಳತಿಯನ್ನು ಹಲವಾರು ವರ್ಷ ಕಳೆದ ಮೇಲೂ ಅದೇ ದೃಷ್ಟಿಯಂತೆ ನೋಡಲು ಬಯಸುತ್ತದೆ ನಮ್ಮ ಮನಸ್ಸು, ಆದರೇ ಅವರ ಮಕ್ಕಳು ಈ ವೇಳೆಗೆ ಹೈಸ್ಕೂಲ್ ಓದುತ್ತಿರುತ್ತಾರೆ. ನಮ್ಮ ಹಳೆಯ ನೆನಪುಗಳು ಅವರ ಸ್ಮೃತಿಪಟಲದಲ್ಲಿ ಮಂಕಾಗಿರುತ್ತವೆ, ಕೆಲವೊಮ್ಮೆ ಅಳಿಸಿಹೋಗಿದ್ದರೂ ಆಶ್ಚರ್ಯವಿಲ್ಲ.
ನಾನು ನಮ್ಮೂರಿನ ಕಟ್ಟೆಯ ಮೇಲೆ ನನ್ನ ಶಾಲೆಯ ದಿನಗಳಲ್ಲಿ ಕುಳಿತು ನೋಡುತ್ತಿದ್ದ ನದಿಗೂ ಇಂದೂ ಕುಳಿತು ನೋಡುವ ನದಿಗೂ ಸಾಕಷ್ಟು ವ್ಯತ್ಯಾಸವಾಗಿದೆ. ನನ್ನ ಮನಸ್ಸು ಇನ್ನೂ ನನ್ನ ಐದನೇ ತರಗತಿಯಲ್ಲಿ ಕುಣಿದು, ಮರಳಲ್ಲಿ ಮಲಗಿ ಮೈಗೆಲ್ಲಾ ಮರಳನ್ನು ಮೆತ್ತಿಸಿಕೊಂಡು ಮತ್ತೆ ನದಿ ನೀರಿಗೆ ಬೀಳಲು ಬಯಸುತ್ತದೆ. ಆದರೇ ನದಿ ಅದಕ್ಕೆ ಅವಕಾಶಕೊಡುವುದಿಲ್ಲ. ನನ್ನ ಆ ವಯಸ್ಸಿನ ಅಂದರೇ ಇಂದಿನ ಐದನೇ ವಯಸ್ಸಿನ ಹುಡುಗರು ನನ್ನ ಸ್ಥಾನವನ್ನು ವಹಿಸಿದ್ದಾರೆ. ಇದು ನಮ್ಮದು ನೀನು ವಯಸ್ಸಾದವನು ನಮ್ಮಿಂದ ದೂರವಿರು ಎಂದು ದೂಡುತ್ತಾರೆ.ನಾನು ಅವರ ಆಟಗಳನ್ನು ನೋಡುತ್ತಾ ಅಲ್ಲೇ ಮರಳಿನ ದಿಂಡಿನ ಮೇಲೆ ಕುಳಿತರೇ, ನಾನು ಅವರ ಮನೆಯವರಿಗೆ ಹೋಗಿ ಚಾಡಿ ಹೇಳುತ್ತೇನೆಂದು ಅನುಮಾನಿಸಿ ನೋಡುತ್ತಾರೆ. ಇವೆಲ್ಲವೂ ಗೊಂದಲಮಯವೇ ಸರಿ. ನಾನು ನಿನ್ನನ್ನು ಬಯಸಿ ಮರಳಿ ಮರಳಿ ನಿನ್ನಲ್ಲಿಗೆ ಬರಲು ಇಚ್ಚಿಸುತ್ತೇನೆ ಆದರೇ ನೀನು ನನ್ನುನ್ನು ದೂಡಲು ಪ್ರಯತ್ನಿಸುತ್ತೀಯಾ? ನಿಸರ್ಗವೆಂದರೇ ಇದೇನಾ?
ನೀನು ನನಗೆ ಬೇಕಿರುವುದೆಲ್ಲವನ್ನು ಕೊಟ್ಟೆ, ನೀನು ಕೊಟ್ಟೆ ಎನ್ನುವುದಕ್ಕಿಂದ ನಾನು ಬಳಸಿಕೊಂಡೆ, ಬಳಸಿಕೊಳ್ಳುವುದಕ್ಕಿಂತ ಬಸಿದುಕೊಂಡೆ. ನನ್ನ ಈ ಎಲ್ಲ ಬದಲಾವಣೆಗಳನ್ನು ಅಥವಾ ಜೀವನದ ಎಲ್ಲ ಆಗೂ ಹೋಗುಗಳನ್ನು ಬದಲಾವಣೆ, ಪರಿವರ್ತನೆ, ಎಂದು ವಿಭಿನ್ನಾ ಹೆಸರುಗಳನ್ನು ಕೊಟ್ಟವರಿದ್ದಾರೆ. ನನಗೆ ಅವೆಲ್ಲಾ ಅಷ್ಟು ಸಮಂಜಸವೆನಿಸುವುದಿಲ್ಲ. ಜೀವನದ ಪ್ರತಿಯೊಂದು ಹಂತದಲ್ಲಿಯೂ ಅದಕ್ಕೆ ತಕ್ಕಂತೆ ಆಟವಾಡುತ್ತೇವೆ, ಅದನ್ನು ಬೆಳವಣಿಗೆಯೆನ್ನಲು ಹೇಗೆ ಸಾಧ್ಯವೆನ್ನುವುದು ನನ್ನ ಪ್ರಶ್ನೆ. ಚಿಕ್ಕವನಿದ್ದಾಗ ಆಡುತ್ತಿದ್ದ ಆಟಗಳಲ್ಲಿ, ಮರಕೋತಿ, ಕಬ್ಬಡ್ಡಿ, ಮರಳಲ್ಲಿ ಮನೆ ಕಟ್ಟುವುದು, ಇವೆಲ್ಲಾ ಇಂದು ನಾನು ಆಡಲೂ ಹೋದರೇ ನನಗಿಂತ ಇಪ್ಪತ್ತು ವರ್ಷ ಚಿಕ್ಕ ಮಕ್ಕಳ ಜೊತೆಯಲ್ಲಿ ನಾನು ಸೋತು ಮುಖ ಊದಿಸಿಕೊಂಡು ಬರಬೇಕಾದೀತು. ಅದರಂತೆಯೇ, ನಾನು ನನಗಿಂತ ಬಹಳ ಚಿಕ್ಕವಯಸ್ಸಿನ ಕಿರಿಯವರನ್ನು ಇಪ್ಪತ್ತರ ಮಗ್ಗಿ ಹೇಳು ಎಂದು ಪೀಡಿಸಿ ನಿನಗೆ ಅಷ್ಟೂ ತಿಳಿಯುವುದಿಲ್ಲವೇ ಎಂದರೇ ಮುಟ್ಠಾಳತನದ ಪರಮಾವಧಿ ಎನಿಸುವುದು. ಅವರವರ ಪಾತ್ರಗಳನ್ನು ಅವರವರು ಆ ಸನ್ನಿವೇಶಕ್ಕೆ ತಕ್ಕಂತೆ ಆಡಿ ಹೋಗಬೇಕು, ಯಾರನ್ನೋ ಅನುಕರಣೆ ಮಾಡಲೂ ಹೋಗಿ ಹಾಗೆ ಆಗದಿದ್ದಾಗ ನೊಂದು ಸಾಯುವುದು ಅಷ್ಟು ಹಿತವಲ್ಲ.. ನಿಮ್ಮ ಜೀವನ ನಿಮ್ಮ ಅನಿಸಿಕೆ ನಿಮಗೆ ಬಿಟ್ಟದ್ದು ಇದು ನನ್ನೊಳಗೆ ಕೊರೆಯುತ್ತಿದ್ದ ಕೆಲವು ಹುಳುಗಳು...ಇದನ್ನು ಕುರಿತು ಮತ್ತೇ ಚರ್ಚೆ ಮಾಡಲು ಬರಬೇಡಿ....
Oh My My.....
ಪ್ರತ್ಯುತ್ತರಅಳಿಸಿwhat shall I say about this blog?? I have no words. but I definitely see that it arouses a question in all who read this...
An extraordinary flow of thoughts!!!! well blended with some humour.....
And Well.... what an assessment you have made about yourself? Its tremendous!!!
Its evident from your writings that u are a gregarious person. and for sure...this is not just another blog, but a flow of thoughts and feelings which brings out the best in you and your life....
Fun, frolic, laughter, carelessness, pain, helplessness,love, life and much more....I also know you could speak volumes.
One more thing..... I love the window seat when I am travelling....LoL.... I would wanna keep going till I reach the horizon...
:-)
Keep writing Hari..
All the very best for your future endeavours.
Regards
ReGiNa
Thank you so much Regina, hogalike noo! baigula noo! gottilla aadru nim anisike tilisiddakke thnx..patience itkondu odiddakke mattondu thnx :)
ಪ್ರತ್ಯುತ್ತರಅಳಿಸಿ