ನಾನು ಹಾಗೆ ನಾನು ಹೀಗೆ, ಇದು ನನ್ನದು ಅದು ನಿನ್ನದು, ಎಂದು ದಿನ ಬೆಳಗಾದರೇ ಬೊಬ್ಬೆ ಹೊಡೆಯುವ ನನ್ನಂಥವರ ದರ್ಪ ಇಳಿಸುವ ಮಾರ್ಗವೆಂದರೇ, ಅದು ನಮ್ಮ ಆಡಳಿತ ವರ್ಗದರೊಂದಿಗೆ ಒಂದು ತಿಂಗಳು ಬದುಕಿ ಬಾ ಎಂದು ತಳ್ಳುವುದು. ಇದೇನಪ್ಪಾ, ಏನೇನೋ ಹೇಳಿ ತಲೆಗೆ ಹುಳು ಬಿಡೋಕೆ ನೋಡ್ತಾ ಇದ್ದಾನೆ ಎನಿಸಿದರೇ, ದಯವಿಟ್ಟು ಮುಂದಕ್ಕೆ ಓದೋಕೆ ಹೋಗಬೇಡಿ. ಹೇಗೂ ಬಿಡುವಾಗಿದ್ದಿನಿ, ಅದೇನು ಹೇಳ್ತಾ ಇದ್ದಾನೆ ನೋಡೆ ಬಿಡೋಣ ಎನಿಸಿದರೇ, ದಯವಿಟ್ಟು ನಿಮ್ಮ ಆರು ನಿಮಿಷಗಳನ್ನ ನನ್ನ ಬರವಣಿಗೆಗೆ ಮೀಸಲಿಡಿ. ನಾನು ಇದ್ದಕ್ಕಿದ್ದ ಹಾಗೆ ಬರೆಯೋಕೆ ಹೊರಟಿರುವ ವಿಷಯ, ನಮ್ಮ ಅಧಿಕಾರಿ ವರ್ಗ ಸಾಮಾನ್ಯ ಜನತೆಯ ಮೇಲೆ ಸವಾರಿ ಮಾಡುವುದರ ಬಗ್ಗೆ. ಇದೇನೂ ಹೊಸತಲ್ಲ, ನಾವು ದಿನ ನಿತ್ಯ ನೋಡುತ್ತಲೇ ಬಂದಿರುವಂತಹದ್ದು, ಆದರೇ, ಅವರ ದರ್ಪ, ದೌರ್ಜನ್ಯ, ನಿರ್ಲಕ್ಷತನ, ಸಾರ್ವಜನಿಕರೆಡೆಗಿನ ಕೋಪ ತಾಪಗಳ ಕುರಿತು ಕೆಲವೊಂದು ವಿಷಯಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ಒಂದು ಸಣ್ಣ ಪುಟ್ಟ ವಾಸ ಸ್ಥಳ ದೃಢಿಕರಣ ಪತ್ರ, ಓದಿದ ಶಾಲೆಯಲ್ಲಿ ವ್ಯಾಸಾಂಗ ಪತ್ರ, ಪಡಿತರ ಚೀಟಿ, ಪಾಸ್ ಪೋರ್ಟ್, ಪಾನ್ ಕಾರ್ಡ್, ಮತದಾರ ಗುರುತಿನ ಚೀಟಿ, ಅಷ್ಟೆಲ್ಲಾ ಯಾಕೆ, ನಮ್ಮ ದುಡ್ಡನ್ನು ಇಡಲು ಬ್ಯಾಂಕ್ ಖಾತೆ ತೆರೆಯುದಕ್ಕೆ ದಿನ ನಿತ್ಯ ಎಷ್ಟು ಜನ ಪರದಾಡುತ್ತಿಲ್ಲ. ಎರಡರಿಂದ ಮೂರು ನಿಮಿಷವೂ ಹಿಡಿಯದ ಒಂದು ವ್ಯಾಸಾಂಗ ಪತ್ರವನ್ನು, ಅಥವಾ ವಾಸ ಸ್ಥಳ ಪತ್ರವನ್ನು ಬರೆದು ಕೊಡಲು ಮೂರು ಮೂರು ದಿನಗಳು ಅಲೆಯಬೇಕಾಗಿರುವುದು ಸೋಜಿಗವೇ ಸರಿ.
ನಾನು ಮೊನ್ನೆ ನಾನು ಓದಿದ ಶಾಲೆಯಲ್ಲಿ ಹೋಗಿ, ವ್ಯಾಸಾಂಗ ಪತ್ರ ಬೇಕು ಎಂದು ಕೇಳಿದರೇ, ಇಂದು ಆಗುವುದಿಲ್ಲ ನಾಳೆ ಬನ್ನಿ ಎಂದು ಹೇಳಿದ. ಸ್ವಾಮಿ ದಿನ ಕೆಲಸ ಬಿಟ್ಟು ಬರಲಾಗದು, ದಯವಿಟ್ಟು ಬರೆದುಕೊಡಿ ಎಂದೆ, ಇಲ್ಲ ರೀ ಸುಮ್ಮನೇ ತಲೆ ತಿನ್ನಬೇಡಿ, ದಯವಿಟ್ಟು ಒಂದೆರಡು ದಿನ ಬಿಟ್ಟೂ ಬನ್ನಿ, ಯಾವುದೋ ಮೀಟಿಂಗ್ ಗೆ ಅಂತಾ ರೆಡಿ ಮಾಡ್ತಾ ಇದ್ದಿನಿ ಎಂದ. ಗುರುವೇ, ಈಗ ಹೇಳಿದ್ರಿ ನಾಳೆ ಬನ್ನಿ ಅಂತಾ ಆಗಲೇ ಮೂರು ದಿನ ಬಿಟ್ಟು ಅಂತೀರಾ!! ಎಂದೆ. ನನ್ನ ಸ್ನೇಹಿತ ನೀನು ಮತ್ತೊಮ್ಮೆ ಕೇಳಿದರೇ ಮುಂದಿನ ವರ್ಷ ಬಾ ಎಂದಾನು, ಎಂದ. ಅದು ಸರಿಯೇ ಎಂದು ಅಲ್ಲೇ ಪಕ್ಕದಲ್ಲಿದ್ದ ಕುರ್ಚಿಯನ್ನು ಎಳೆದು ಕುಳಿತೆ. ಬಂದವರಿಗೆಲ್ಲಾ ಅವನು ಅದೇ ಕಥೆಯನ್ನು ಹೇಳತೊಡಗಿದ. ನನ್ನ ಸ್ನೇಹಿತ ಬೇಸತ್ತು, ಹತ್ತು ರೂಪಾಯಿ ಕೊಟ್ಟರೇ ಈಗಲೇ ಬರೆದು ಕೊಟ್ಟಾನು ಎಂದ. ನಾನು ಅಯ್ಯೋ ಕರ್ಮವೇ ನಾನು ಓದಿದ್ದು ಸತ್ಯ, ಅದನ್ನು ಬರೆದು ಕೊಡಲು ಲಂಚವೇ? ಎಂದೆ. ಅಣ್ಣ ನಿನ್ನ ಬಡಾಯಿಗಳನ್ನು ಬಿಡು, ನೀನು ಹತ್ತು ರೂಪಾಯಿ ಮುಖ ನೋಡಿದರೇ, ನಿನ್ನ ಒಂದು ದಿನದ ಸಂಬಳವೆಷ್ಟು? ನೀನು ಬಂದು ಹೋಗಲು ಖರ್ಚೆಷ್ಟು? ಎಂದ. ಅದನ್ನು ಯೋಚಿಸಿ, ಅದು ಸರಿಯೆನಿಸಿತು. ಆದರೇ, ನಾನು ಲಂಚ ಕೊಡುವುದೇ, ಎಂದು ಸುಮ್ಮನೆ ಕುಳಿತಿದ್ದೆ, ದುಡ್ಡಿನ ಬಗ್ಗೆ ವ್ಯಾಮೋಹವಿಲ್ಲದಿದ್ದರೂ, ವಿದ್ಯಾವಂತನಾಗಿ ಲಂಚ ಕೊಡುವುದೇ? ಎನಿಸಿತು. ಲಂಚ ತೆಗೆದುಕೊಳ್ಳುವವನು ವಿದ್ಯಾವಂತನೇ ತಾನೆ ಎನಿಸಿ ಸುಮ್ಮನಾದೆ. ಅದೇ ಸಮಯಕ್ಕೆ ನನ್ನ ಸ್ನೇಹಿತನೊಬ್ಬ ಆಗಮಿಸಿದ, ಓ ಏನ್ ಸರ್ ನೀವು ಇಲ್ಲಿ ಎಂದ. ಗುಮಾಸ್ತನನ್ನು ಏಕವಚನದಲ್ಲಿ ಬಲು ಆತ್ಮೀಯವಾಗಿ ಮಾತನಾಡಿಸಿದ. ನಾನು ಇದ್ದ ವಿಷಯವನ್ನು ಹೇಳಿದೆ. "ಇವರದ್ದು ಬರೆದುಕೊಡು ಮೊದಲು ನೀನು, ನಿಮ್ಮ ಪ್ರಿನ್ಸಿಪಾಲರು ಸ್ಕೂಲು ಉದ್ದಾರ ಮಾಡೊದನ್ನ ನಾನು ಕಂಡಿಲ್ಲವೇ" ಎಂದ. ಅವನು ನನಗೆ, ಹಿಂದಿನ ಮಾಹಿತಯನ್ನು ಹುಡುಕಬೇಕು, ಅದು ಇದು ಎಂದು ಬೆದರಿಸಿದ್ದ, ನಾನು, "ಅಣ್ಣ ಅದನ್ನ ಕೊಟ್ಟರೇ ನಾನೇ ಹುಡುಕಿಕೊಡ್ತಿನಿ", ಎಂದೆ. ಸರಿ ಎಂದು ತೆಗೆದು ನನ್ನ ಮುಂದಿಟ್ಟ, ಹೆಚ್ಚೆಂದರೇ, ಐದು ನಿಮಿಷವೂ ಇರಲಾರದು ನನ್ನ ಮಾಹಿತಿಯನ್ನು ತೋರಿಸಿದೆ, ಅವನು ಬರೆಯಲು ಹಿಡಿಯುವ ಸಮಯವನ್ನು ಗುರುತಿಸಿದೆ, ಬರಿಯ ಎರಡು ವರೆ ನಿಮಿಷದಲ್ಲಿ ಬರೆದು ಮುಗಿಸಿದ, ಒಟ್ಟು ಐದು ನಿಮಿಷದಲ್ಲಿ ಸಹಿಯೂ ಆಯಿತು. ಇಷ್ಟು ಕೆಲಸಕ್ಕೆ, ಮೂರು ದಿನ ನಾಲ್ಕು ದಿನ ಎಂದನಲ್ಲ, ಎಂದೆ. ನನ್ನ ಸ್ನೇಹಿತ, ಲಂಚ ಕೊಡದಿದ್ದರೇ, ಅಥವ ಗುರುತಿನವರ ಬೆಂಬಲವಿಲ್ಲದಿದ್ದರೇ, ಸರ್ಕಾರಿ ಕಛೇರಿಯಲ್ಲಿ ಏನು ನಡೆಯದು ಎಂದ. ನಾನು ನಮ್ಮಪ್ಪನ ಬಳಿಗೆ ಬಂದು ಏನು ಕಾಲ ಆಯಿತು ನೋಡಿ ಒಂದು ವ್ಯಾಸಾಂಗ ಪತ್ರ ಬರೆಯುವುದಕ್ಕೆ ಇಷ್ಟು ಸತಾಯಿಸಿದ ಎಂದೆ. ಅವರು "ನೀನೆಂಥವನು? ಮೊದಲೇ, ಪ್ರಿನ್ಸಿಪಾಲರ ಹತ್ತಿರ ಹೋಗಿ ಕೇಳಬೇಕಿತ್ತು, ಗುಮಾಸ್ತ ನಿನ್ನನ್ನು ಕೆಲಸವಿಲ್ಲದೇ ಅಲೆದಾಡುವವನು ಎಂದು ತಿಳಿದಿರಬೇಕು, ಅದಕ್ಕೆ ನಾಳೆ ನಾಡಿದ್ದು ಎಂದವನೆ", ಎಂದರು. ಅದು ಸರಿಯೇ ಬಿಡಿ, ನನ್ನ ವೇಷ ಭೂಷಣಗಳು ಅದಕ್ಕೆ ಪೂರಕವಾಗಿದ್ದವು ಎಂದೆ.
ಮಾರನೆಯ ದಿನ, ಪಂಚಾಯಿತಿಗೆ ಹೊರಟೆ, ಅಲ್ಲಿ ಹೋದರೇ, ಯಾರು ಏನು ಎಂದು ಕೇಳಿದ, ಇಂಥವರ ಮಗ ಎಂದು ಹೇಳಿದೆ. ಸರಿ, ಎಂದವನು, ಬರೆದುಕೊಟ್ಟ. ಜೊತೆಯಲ್ಲಿದ್ದ ನನ್ನ ಸ್ನೇಹಿತ, ಹತ್ತು ರೂಪಾಯಿ ಕೋಡೋ ಮಾರಾಯ, ಜಿಪುಣ ನೀನು ಎಂದ. ಯಾಕೋ ಕೊಡಬೇಕು ಎಂದರೇ, ಮತ್ತೆ ಪುಣ್ಯಕ್ಕೆ ಬರೆದುಕೊಡ್ತಾನ ಅವನು, ಬೇರೆ ಕೆಲಸ ಇರೋದಿಲ್ವಾ ಅವನಿಗೆ. ಅವನಿಗೇನೂ ಲಕ್ಷಾಂತರ ರೂಪಾಯಿ ಸಂಬಳವೇ ಎನ್ನತೊಡಗಿದ. ಇದು ಲಂಚವೋ? ಅಥವಾ ಜನರೇ ಅಳವಡಿಸಿಕೊಂಡಿರುವ ಮಾರ್ಗವೋ ಅಂತೂ ಅವನಿಗೆ ಟೀ, ಸಿಗರೇಟು ಸೇವನೆ ಮಾಡಿಸಿ ಕೈತೊಳೆದುಕೊಂಡೆ. ತಾಲೂಕು ಕಛೇರಿಗೆ ಹೋಗಿ, ತಹಸಿಲ್ದಾರರ ಸಹಿ ಬೇಕು ಎಂದರೇ, ನಾಳೆ ಬನ್ನಿ ಎಂದ, ನೋಡಿ ಸ್ವಾಮಿ ಎಂದರೇ, ಮುವತ್ತು ರೂಪಾಯಿ ಕೊಡಿ ಎಂದ, ಅಯ್ಯೋ ಕರ್ಮವೇ, ಕೊಡದೇ ಇದ್ದರೇ ನಾಳೆ ಬರಬೇಕು, ಕೊಟ್ಟರೇ, ಲಂಚವನ್ನು ಪ್ರೋತ್ಸಾಹಿಸಿದಂತೆ, ಅಷ್ಟರಲ್ಲಿಯೇ, ಅಪ್ಪ ಅಲ್ಲಿಗೆ ಬಂದರು. ಸರಿ ಅವನಿಗೆ ಯಾಕೆ ಕೊಡ್ತಿಯಾ ಕೊಡದೇ ಇದ್ದರೂ ಸಹಿ ಮಾಡಿಸಿ ಇಲ್ಲೇ ಇಟ್ಟಿರ್ತಾನೆ, ಸಂಜೆ ತೆಗೆದುಕೊಂಡರೇ ಆಯಿತು ಎಂದರು. ಸರಿಯೆಂದು ಹೊರಟೆ.
ಲಂಚವೆನ್ನುವು ಜೀವನದ ಮಾರ್ಗವೇ ಆಗಿದೆ, ಇನ್ನು ಕೆಲವು ಕಛೇರಿಗಳಲ್ಲಿ, ಬಂದವರನ್ನು ಮಾತನಾಡಿಸುವ ಸೌಜನ್ಯವೂ ಇರುವುದಿಲ್ಲ. ಕೆಲವು ನಿವೃತ್ತಿಯಾದ ಸರ್ಕಾರಿ ನೌಕರರ ಜೀವನವನ್ನು ನೋಡಿ, ನಿವೃತ್ತಿಯಾದ ಮಾರನೆಯ ದಿನದಿಂದ ಅವರನ್ನು ಮಾತನಾಡಿಸುವ ನಾಯಿಯೂ ಇರುವುದಿಲ್ಲ, ಅವರ ಜೀವನವೆಲ್ಲವನ್ನು, ಒಂದು ಹಣ ಮಾಡುವುದರಲ್ಲಿ, ಇಲ್ಲವೇ, ಜನರನ್ನು ನಿಂದಿಸುವುದರಲ್ಲಿ, ಸಾರ್ವಜನಿಕರ ಜೊತೆಯಲ್ಲಿ ಸದಾ ಕಾದಾಡುವುದರಲ್ಲಿಯೇ ಜೀವನ ಕಳೆದಿರುತ್ತಾರೆ. ಒಳ್ಳೆಯ ಸ್ನೇಹಿತರಿರುವುದಿಲ್ಲ, ಸಹದ್ಯೋಗಿಗಳು ಇವರಂತೆಯೇ ಇರುವುದರಿಂದ ಹಾಸ್ಯವೆಂಬುದಾಗಲೀ, ರಸವೆಂಬುದಾಗಲೀ ಇರುವುದೇ ಇಲ್ಲ. ಯಾಂತ್ರಿಕತೆಯಿಂದ ಮನಸ್ಸೆಂಬುದನ್ನೇ ಮರೆತಿರುತ್ತಾರೆ. ಇವುಗಳಿಗೆ ಸೇರುವ ಅನೇಕರೆಂದರೇ, ಪೋಲಿಸರು, ಡಾಕ್ಟರುಗಳು, ಸರ್ಕಾರಿ ಇಂಜಿನಿಯರುಗಳು, ಗುಮಾಸ್ತರುಗಳು. ದುಡಿಮೆಯಲ್ಲವನ್ನು ಕೂಡಿಡಬೇಕು, ಸಿಕ್ಕಿದಷ್ಟನ್ನು ದೋಚಿಬಿಡಬೇಕೆನ್ನುವುದೇ ಇವರುಗಳ ಮುಖ್ಯ ಉದ್ದೇಶವಿರುತ್ತದೆ. ಸಾಮಾನ್ಯವಾಗಿ, ಸರ್ಕಾರಿ ನೌಕರರು ಒಂದೆಡೆ ಸೇರಿದ್ದಲ್ಲಿ, ಹತ್ತು ನಿಮಿಷ ನಿಂತು ಮಾತನ್ನು ಆಲಿಸಿದರೇ, ಅವರ ಮಾತುಕತೆಗಳು, ಒಂದು ತಮ್ಮ ಸಂಬಳ ಬಡ್ತಿಯೆಡೆಗೆ ಇರುತ್ತದೆ, ಇಲ್ಲವೇ ಇಲ್ಲಸಲ್ಲದ ರಾಜಕೀಯದ ಬಗ್ಗೆಗಿರುತ್ತದೆ. ಅವರ ಕೆಲಸಗಳನ್ನು ಕುರಿತು ಮಾತನಾಡುವ, ಚರ್ಚಿಸುವ ನೌಕರರನ್ನು ಕಾಣುವುದು ತೀರ ಅಪರೂಪವೇ ಸರಿ.
ಇವರನ್ನು ಬಿಟ್ಟರೇ ಮುಂದಿನ ಪಂಕ್ತಿಯಲ್ಲಿ ದೇಶವನ್ನಾಳುವುವರೆಂದರೇ, ನಮ್ಮ ಪತ್ರಕರ್ತರು. ತಲೆ ಬುಡವಿಲ್ಲದೇ ಹರಟುವ ಒಂದು ವರ್ಗವೇ ಇದು ಎಂದರೂ ತಪ್ಪಿಲ್ಲ. ಇತ್ತೀಚೆಗಂತೂ, ಲೆಕ್ಕವಿಲ್ಲದಷ್ಟೂ ಚಾನೆಲ್ ಇರುವುದರಿಂದ, ಸಣ್ಣ ಪುಟ್ಟ ದಿಪ್ಲೋಮಾ ಮಾಡಿದವರು, ತಮ್ಮ ಬೈಕಿನ ಮುಂದಕ್ಕೆ ಪ್ರೆಸ್ ಎಂಬುದನ್ನು ಒತ್ತಿಸಿಕೊಂಡು ಹೊರಡುತ್ತಾರೆ. ಅವರು ನಮ್ಮ ನಾಯಕರನ್ನು ಕೇಳುವ ಪ್ರಶ್ನೆಗಳನ್ನು ಕೇಳಿದರೇ ಅಬ್ಬಾ ಎನಿಸುತ್ತದೆ. ಕೆಲವರಂತೂ, ಮೈಕ್ ಎನ್ನುವುದನ್ನು ನಾಯಕರ ಕೈಯ್ಯಿಗೆ ಕೊಟ್ಟು ಅವರು ಹೇಳುವುದನ್ನೆಲ್ಲವನ್ನು, ಪ್ರಸಾರದ ಜೊತೆಗೆ ಪ್ರಚಾರ ಮಾಡುತ್ತಾರೆ. ಮೊನ್ನೆ ಮರು ಚುನಾವಣೆಯ ಸಮಯದಲ್ಲಿ, ಬಹುತೇಕ ಅಭ್ಯರ್ಥಿಗಳ ಸಂಪೂರ್ಣ ಪ್ರಚಾರವನ್ನು ಟಿವಿ ಚಾನೆಲ್ ಗಳೇ ಪ್ರಸಾರ ಮಾಡಿದವು. ಯಾರೊಡನೆಯೋ ಮಾತನಾಡುತ್ತಿದ್ದಾಗ, ಹೇಳುತ್ತಿದ್ದರು, ಮೊಟ್ಟ ಮೊದಲು, ರಾಜರುಗಳು ದೇಶವನ್ನು ಹಾಳು ಮಾಡಿದರು, ಆಮೇಲೆ ಪುರೋಹಿತಶಾಹಿಗಳು ಅದನ್ನು ಮುಂದುವರೆಸಿದರು, ತದನಂತರ ಬ್ರಿಟಿಷರು ಬಂದರು, ಆದಾದ ಮೇಲೆ ರಾಜಕಾರಣಿಗಳ ಸರದಿ ಮುಗಿಯಿತು, ಈಗಿರುವುದು ನಮ್ಮ ಪತ್ರಕರ್ತರ ಸರದಿಯೆಂದು. ಅದು ನನಗೂ ಹೌದೆನಿಸಿತು.ತಲೆ ಬುಡ ತಿಳಿಯದ ಮಹಾಶಯರೂ ಕೂಡ ಅತೀ ವಿಸ್ಮಯ ವಿಷಯಗಳಾದ ಪರಿಸರ, ಎಕಾಲಜಿ, ಜಾಗತಿಕ ತಾಪಮಾನದ ಬಗ್ಗೆ ಗಂಟೆ ಗಂಟಲೆ ಎಪಿಸೋಡ್ ಗಳನ್ನು ನಿರ್ಮಾಣಮಾಡುತ್ತಾರೆಂದರೆ ಮೆಚ್ಚಲೇಬೇಕು. ಹಳ್ಳಿಗಳ್ಳಲ್ಲಿ, ಒಂದು ದಾರಿ ದೀಪ ಹೋದರೆ ಅದನ್ನು ಹಾಕಿಸಲು ತಿಂಗಳುಗಳೇ ಕಳೆಯುತ್ತವೆ. ಒಂದು ನಲ್ಲಿ ರಿಪೇರಿ ಮಾಡಿಸಲು, ಅಥವಾ ಸುಟ್ಟು ಹೋದ ಮೋಟರನ್ನು ರಿಪೇರಿ ಮಾಡಿಸಲು ಎಷ್ಟು ದಿನಗಳಾಗುತ್ತವೆಂಬುದರ ಅರ್ಥವೇ ಸಿಗುವುದಿಲ್ಲ. ಸರಿಯಾದ ಸಮಯಕ್ಕೆ ನಮ್ಮೂರಿಗೆ ಬಸ್ ಬಂದ ದಿನದ ನೆನಪೇ ಇಲ್ಲ. ನೀರಾವರಿಗೆಂದು ಹಾರಂಗಿ ನಾಲೆಯಿಂದ ನೀರು ಬಿಡುವ ದಿನ ಯಾವುದೆಂಬುದನ್ನು, ಅಲ್ಲಿನ ಸ್ಥಳಿಯ ದಿನ ಪತ್ರಿಕೆಗಳಲ್ಲಿ ಬರುವುದೇ ಇಲ್ಲ, ನದಿಗೆ ನೀರು ಬಿಡುವುದರ ಬಗ್ಗೆ ಸುದ್ದಿ ಹೊರಡುವುದೇ ಇಲ್ಲ, ಹೊರಟರೂ ಅದು ಆಕಾಶವಾಣಿಯಲ್ಲಿ ಬರುವುದರಿಂದ ನಮ್ಮೂರಿನಲ್ಲಿ ರೆಡಿಯೋ ಎಂಬುದು ಮೂಲೆಗುಂಪಾಗಿ ದಶಕವೇ ಕಳೆದಿದೆ.
ಆದರೂ, ನನಗೆ ಅಥವ ನನ್ನಂಥ ಬಹಳ ಜನಸಾಮಾನ್ಯರಿಗೆ ಅನಿಸುವ ಪ್ರಶ್ನೆಗಳೆಂದರೇ, ನಮ್ಮ ದೇಶ ಬದಲಾಗುವುದಿಲ್ಲವೇ? ಅಥವ ಇದಕ್ಕಿಂತಲೂ ಹೀನಾಯ ಸ್ಥಿತಿಗೆ ಹೋಗುವುದೇ? ಇದಕ್ಕೆಲ್ಲಾ ಪರಿಹಾರವಿಲ್ಲವೇ? ಇದೆಲ್ಲವೂ ನಿರಂತರವೇ? ಬದುಕಿನಲ್ಲಿ ಏರಿಳಿತವೆಂಬುದು ಸಾಮಾನ್ಯವಾದರೂ, ನಮ್ಮ ಬದುಕು ಸದಾ ಇಳಿತದಲ್ಲಿಯೇ ಹೊರತು, ಏರಿಕೆ ಕಂಡಿಲ್ಲವಲ್ಲ. ಇನ್ನೂ ಪ್ರಪಾತಕ್ಕೆ ಇಳಿದರೇ, ನನ್ನ ಮುಕ್ಕಾಲು ಆಯುಷ್ಯ ಮುಗಿಯಿತಲ್ಲ, ಏರುವುದೆಂದರೂ ಅದು ಆಗುವುದೆಂದು? ಅದು ಆಗಲೂ ಬಂದಿತೇ? ಇದು ಒಬ್ಬನ ವೈಯಕ್ತಿಕ ಬದುಕಿನ ಕಥೆಯಲ್ಲ, ಎಲ್ಲರ ಸರ್ವ ಸಾರ್ವಜನಿಕರೆನಿಸಿಕೊಂಡವರ, ಭವ್ಯಭಾರತದ ಬದುಕೆ ಹೀಗೆಂದರೇ, ಎಂಥವನಿಗೂ ಭಯ ಹುಟ್ಟುವುದು ಸಾಮನ್ಯ ಸಂಗತಿಯಲ್ಲವೇ? ಭರವಸೆಯ ಮಿಂಚು ಆಗೊಮ್ಮೆ ಈಗೊಮ್ಮೆ ಬಂದು ಹೋದರೂ, ಮಿಂಚೆಂದೂ ಶಾಶ್ವತ ಬೆಳಕಲ್ಲ, ದೇಶದ ಪ್ರಗತಿಗೆ, ಬೇಕಿರುವು ಬೆಳಕಿನ ಹಾದಿಯೇ ಹೊರತು, ಹೀಗೆ ಬಂದು ಹಾಗೆ ಹೋಗುವ ಮಿಂಚೂ ಅಲ್ಲ, ಸಣ್ಣ ಪುಟ್ಟ ದೀಪಗಳೂ ಅಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ