21 ಸೆಪ್ಟೆಂಬರ್ 2009

ಬಹಳ ದಿನಗಳ ತರವಾತ!!!

ಬಹಳ ದಿನಗಳಿಂದ ಬರೆಯದೇ ಉಳಿದರಿಂದಲೋ ಏನೋ! ಬರೆಯಲು ಹೊರಟರೆ ಪದಗಳೆ ಹೊರಡುತ್ತಿಲ್ಲವೆನಿಸುತ್ತಿದೆ. ಬಹಳ ದಿನದ ಕಾರಣಗಳಿಂದಲ್ಲ, ನಿನ್ನ ತಲೆಯಲ್ಲಿ ಏನೂ ಉಳಿದಿಲ್ಲ ಅದಕ್ಕೇ ಏನೂ ಬರೆಯಲಾಗುತ್ತಿಲ್ಲವೆಂದರೇ ಅದು ನಿಮ್ಮ ಬುದ್ದಿವಂತಿಕೆ ಎನ್ನಲೇ ಬೇಕಾಗುತ್ತದೆ. ಅದೇನೆ, ಇರಲಿ, ಬಹಳ ದಿನದ ಬಳಿಕ, ಒಂದು ವರ್ಷದ ನಂತರ ಮರಳಿ ಬೆಂಗಳೂರು ಜೀವನಕ್ಕೆ ಮರಳಿದ್ದು ಒಂದೆಡೆಗೆ ಸಂತೋಷವೆನಿಸಿದರೂ, ಮತ್ತೊಂದೆಡೆಗೆ ಇದೆಂಥಹ ಬದುಕಯ್ಯ ಏನಿಸಿದೆ ನನಗೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ, ಸಂಚಾರದ ದುರ್ವ್ಯವಸ್ಥೆ, ಒಂದು ಬಡಾವಣೆಯಿಂದ ಮತ್ತೊಂದೆಡೆಗೆ ಹೋಗಲು ತೆಗೆದುಕೊಳ್ಳುವ ಶ್ರಮ, ಸಮಯ ನನ್ನನ್ನು ತಲ್ಲಣಗೊಳಿಸಿದೆ. ಇದೇನಪ್ಪ, ಹಳ್ಳಿ ಹೈದ ಪೇಟೆಗೆ ಬಂದ ರೀತಿಯಲ್ಲಿ ಹೇಳ್ತೀಯಾ ಅಂದುಕೊಂಡರೂ ಸರಿನೇ, ನನಗೆ ಅನಿಸಿದ್ದನ್ನು ನಾನು ಹೇಳಿ ನಿಮ್ಮ ತಲೆಗೆ ಹುಳು ಬಿಡುವುದಂತೂ ಸತ್ಯ. ಬೆಂಗಳೂರು ಅಂದರೇ, ಅಯ್ಯೋ ಟ್ರಾಫಿಕ್ ಗೋಳು, ಮಳೆ ಬಂದರೇ ನಡೆಯುವುದಕ್ಕೆ ಆಗುವುದಿಲ್ಲ, ಆಟೋದವರು ಕರೆದ ಕಡೆಗೆ ಬರುವುದಿಲ್ಲ, ಹಣ ಸುಳಿಗೆ ಮಾಡ್ತಾರೆ, ಬಸ್ ಗಳಲ್ಲಿ ಹತ್ತಿ ಇಳಿದರೇ ಮುಗಿದೇ ಹೋಯಿತು ನೂರು ರೂಪಾಯಿ ಹೇಗೆ ಖರ್ಚು ಆಯಿತೆಂಬುದೇ ತಿಳಿಯುವುದಿಲ್ಲ. ದುಡ್ಡು ಎನ್ನುವುದಕ್ಕೆ ಬೆಲೆ ಇಲ್ಲವೇ ಇಲ್ಲ. ಹೀಗೆ ಸಮಸ್ಯೆಗಳ ಪಟ್ಟಿಯನ್ನು ಮಾಡಿ ಕುಳಿತುಕೊಂಡರೇ ನಿದ್ದೆ ಬರುವುದಿಲ್ಲ, ಮನೆಯಂಗಳದಲ್ಲಿ ಸೊಳ್ಳೆ ಹಾವಳಿ, ಸೊಳ್ಳೆ ಹೋಗಲಿ ಅಂತಾ ಹೇಳಿ ಸೊಳ್ಳೆ ಬತ್ತಿ ಹಚ್ಚಿದರೇ ಅದರ ವಾಸನೆ ಕುಡಿದು ನಾನು ಸಣ್ಣ ಆಗಿದ್ದೇನೆ ಹೊರತು, ಆ ಸೊಳ್ಳೆಗಳಲ್ಲ. ಅವುಗಳು ನೆಮ್ಮದಿಯಾಗಿ ಅದರೊಂದಿಗೆ ಹೊಂದಿಕೊಳ್ಳುತ್ತಿವೆ. ಅವುಗಳಿಗೆ ಸೊಳ್ಳೆಬತ್ತಿಯೇ ಆರೋಗ್ಯಕರ ಔಷಧಿಯಾಗಿ ಪರಿಣಮಿಸಿದೆ.
ಅಭಿವೃದ್ದಿಯೆಂಬುದು ಬೇಡವೇ ಎನ್ನುವ ಪ್ರಶ್ನೆ ಬರುತ್ತದೆ, ಮೆಟ್ರೋ ರೈಲು ಬರುತ್ತದೆಂದು ರಸ್ತೆಯ ಬದಿಯಲ್ಲಿದ್ದ ಮರಗಳನ್ನೆಲ್ಲಾ ಕಡಿದು ಹಾಕಿದ್ದಾಗಿದೆ. ಮೆಟ್ರೋ ರೈಲು ಎಷ್ಟು ಸರಿ ತಪ್ಪು ಎಂಬುದು ಸಾರ್ವಜನಿಕರ ಮುಂದೆ ಬಂದೇ ಇಲ್ಲ. ನಮ್ಮ ಬೆಂಗಳೂರಿಗೆ ಬರುವ ರೈಲಿನ ಬಗ್ಗೆ ಎಲ್ಲರಲ್ಲಿಯೂ ಕುತೂಹಲವಿದೆ. ಆದರೇ, ಅದರಿಂದಾಗುವ ಅನುಕೂಲತೆ ಅನಾನೂಕೂಲತೆಯ ಬಗೆಗೆ ನಾವು ಹೆಚ್ಚಿನ ಗಮನ ನೀಡಿದಂತೆ ಕಾಣುತ್ತಿಲ್ಲ. ರೈಲ್ವೆ ಹೆಸರಿನಲ್ಲಿ ಕಡಿದ ಮರಗಳೆಷ್ಟು? ಆ ಮರಗಳಿಂದ ಪರಿಸರಕ್ಕೆ ಆಗುತ್ತಿದ ಅನುಕೂಲತೆಗಳೇನು? ಒಂದು ಮರದಿಂದ ವಾರ್ಷಿಕ ಇಷ್ಟಿಷ್ಟೂ ಇಂಗಾಲವನ್ನು ತಗ್ಗಿಸುತ್ತದೆಂಬುದು ನಮಗೆಲ್ಲರಿಗೂ ತಿಳಿದಿದೆ. ಸರ್ಕಾರ ಮೆಟ್ರೋ ಎಂಬ ಬಿಳಿ ಐರಾವತದ ಹೆಸರಿನಲ್ಲಿ, ಹಸುರಾಗಿದ್ದ ಬೆಂಗಳೂರನ್ನು ಬರಡಾಗಿಸಿರುವುದಂತೂ ಸತ್ಯ. ಆದರೂ, ಬೆಂಗಳೂರಿಗರ ತೃಪ್ತಿಯಿರುವುದು, ಸದ್ಯದ ಟ್ರಾಫಿಕ್ ಎಂಬ ರಕ್ಕಸಿಯಿಂದ ಮುಕ್ತಿ ದೊರೆತರೆ ಸಾಕೆಂದು. ಅಂತೂ ಬಹಳ ಸಂತೋಷದಿಂದ ಬೆಂಗಳೂರಿಗೆ ಮರಳಿ ಬಂದ ನನಗೆ ಆದ ಗೊಂದಲಗಳು ಒಂದೆರಡಲ್ಲ. ಇದು ನಾನಿದ್ದ ಬೆಂಗಳುರಾ! ನಾನಿದ್ದ ಎಂದು ಹೇಳಿದ್ದೇನೆ ಹೊರತು ನನ್ನ ಬೆಂಗಳೂರು ಎಂದಿಲ್ಲ. ಅದು ನನ್ನಿಂದ ಹೇಳುವುದು ಸಾಧ್ಯವಿಲ್ಲ. ಈ ಬೆಂಗಳೂರು ಬದಲಾಗುತ್ತಿರುವುದರ ಬಗ್ಗೆ ನಾನು ಕೇಳಿದ್ದೆ ಆದರೇ, ಈ ಬಾರಿ ಕಣ್ಣಾರೆ ನೋಡೀ ಆನಂದಿಸುವ ಸುಯೋಗ ಬಂದಿದೆ. ಇಲ್ಲಿನ ಜನಜೀವನ ಕುಸಿಯುತ್ತಿರುವ ಹಣದ ಮೌಲ್ಯ, ಮಾನವಿಕ ಮೌಲ್ಯಗಳು ನನ್ನನ್ನು ಹುಬ್ಬೆರಿಸುವಂತೆ ಮಾಡಿದೆ. ನೂರು ರೂಪಾಯಿ ಎಂಬುದಕ್ಕೆ ಬೆಲೆ ಎಂಬುದನ್ನು ಬೆಂಗಳೂರು ಮರೆತು ಬಹಳ ದಿನಗಳೇ ಕಳೆದಿವೆ. ಇದೊಂದು ಊರು ಇಲ್ಲಿ ನೆಮ್ಮದಿಯಾಗಿರಬಹುದೆಂಬುದು ಭ್ರಮೆಯೆನಿಸಿದೆ. ಬಸ್ಸಿನಲ್ಲಿ ಓಡಾಡಬೇಕೆಂದರೆ, ದಿನದ ಪಾಸ್ ಪಡೆಯಲೇ ಬೇಕು, ಇಲ್ಲದ್ದಿದ್ದರೇ ಒಂದು ದಿನಕ್ಕೆ ಅದೆಷ್ಟೂ ಹಣವ್ಯಯಿಸಬೇಕಾಗುತ್ತದೆಂಬುದು ನಿಮಗೆ ಅರಿವಾಗುವುದಿಲ್ಲ. ಒಂದೊಂದು ವಸ್ತುವಿನ ದರಗಳು ಶರವೇಗದಲ್ಲಿ ಗಗನ ಮುಟ್ಟಿವೆ. ಹೋಟೆಲ್ ನಲ್ಲಿ, ಊಟ ತಿಂಡಿಯ ದರಗಳಂತೂ ತಿಂದಿರುವುದನ್ನು ಕಕ್ಕಿಸಿಬಿಡುವಷ್ಟೂ ಭಯ ಹುಟ್ಟಿಸುತ್ತದೆ. ನರಕಯಾತನೆ ಎಂದರೇನೆಂಬುದನ್ನು ಅರಿಯದ ನಾನು, ಬೆಂಗಳೂರಿನ ಜೀವನವೆಂದರೇ ಇದೇ ಇರಬೇಕೆಂದು ತೀರ್ಮಾನಿಸಿದ್ದೇನೆ. ಈ ನನ್ನ ಮಾತುಗಳು ಕೆಲವರಿಗೆ ಬಾಲಿಷವೆನಿಸಬಹುದು, ಬೆಂಗಳೂರಿನಲ್ಲಿ ಎಂಬತ್ತು ಲಕ್ಷದಷ್ಟು ಜನ ಬದುಕುತಿಲ್ಲವೇ? ಕುಣಿಯಲಾರದವರಿಗೆ ನೆಲ ಡೊಂಕು ಎಂಬಂತೆ ಇವನು ಎಲ್ಲಿಗೆ ಹೋದರೂ ಒಂದಲ್ಲ ಒಂದು ಕೊರತೆಯನ್ನು ಹುಟ್ಟು ಹಾಕುತ್ತಾನೆ ಎಂದರೂ ಅಡ್ಡಿಯಿಲ್ಲ. ನನಗೆ ಅನಿಸಿದ್ದನ್ನು ನಾನು ಹೇಳಿದ್ದೇನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕನಸು-ನನಸಿನ ಪಯಣದ ಹಾದಿಯಲಿ ಬದ್ಧತೆ, ಜವಬ್ದಾರಿ, ಸೋಲಿನ ಭೀತಿ!!!

  ೨೯.೦೮.೨೦೨೪ ನಾವು ನಮ್ಮ ಕನಸುಗಳನ್ನು, ಆಸೆಗಳನ್ನು, ಬಯಕೆಗಳನ್ನು ಬೇರೆಯವರೊಂದಿಗೆ ಏಕೆ ಹಂಚಿಕೊಳ್ಳಬೇಕು? ಇದರ ಕುರಿತು ಸ್ವಲ್ಪ ಚರ್ಚಿಸೋಣ. ಮುಕ್ತವಾಗಿ. ಪ್ರತಿಯೊ...