ಬದುಕು ಒಮ್ಮೊಮ್ಮೆ ಒಂದೊಂದು ಬಗೆಯಾಗಿ ಹರಿದು ಹಂಚಿಹೋಗುವುದನ್ನು ನೋಡುತ್ತಿದ್ದರೆ ಬದುಕಿನ ಅರ್ಥವೇನು? ಸಾರ್ಥಕತೆಯ ಅರ್ಥವೇನು?ಇವೆಲ್ಲವೂ ಆಗುವುದರ ಹಿಂದಿನ ರಹಸ್ಯವೇನು ಹೀಗೆ ಹತ್ತು ಹಲವಾರು ಒಮ್ಮೊಮ್ಮೆ ಸಾವಿರಾರು ಪ್ರಶ್ನೆಗಳು ತಾನೇ ತಾನಾಗಿ ಉದ್ಬವಿಸುತ್ತವೆ. ಪ್ರಶ್ನೆಗಳೇ ಜೀವನವಾಗಿ ನಡೆಯುವಾಗ ನಮಗೆ ಜೀವನವೆಂಬುದು ನಿಜಕ್ಕೂ ಅಸಹನೀಯವೆನಿಸುತ್ತದೆ. ಓದುವಾಗ ಪರೀಕ್ಷೆಯ ಕಾಟಕ್ಕೆ ಕೊರಗುತ್ತಿದ್ದ ನಾವು ಓದಿದ ಮೇಲೆ ಕೆಲಸ ಹುಡುಕಲು ಪರದಾಡುತ್ತ ನಮ್ಮನ್ನು ನಾವೆ ಕೊಲೆಗೈಯ್ಯುತ್ತಾ ಹೋಗುತ್ತೇವೆ.ಕೆಲಸ ಸಿಕ್ಕಿದ ಮೇಲೆ ನಮ್ಮ ಮತ್ತು ನಮ್ಮ ಜೊತೆಯವರೊಂದಿಗೆ ಇಲ್ಲಸಲ್ಲದ ವಿಷಯಕ್ಕೆ ಮನಸು ಬೇಸರಗೊಳ್ಳುತ್ತದೆ. ನಮ್ಮ ಮೇಲಧಿಕಾರಿಯೆಂಬ ಮನುಷ್ಯ ನಮ್ಮ ಸ್ವಾತಂತ್ರ್ಯವನ್ನೆಲ್ಲಾ ಕಸಿದುಕೊಂಡವನಂತೆ ನಮ್ಮ ಮೇಲೆ ಸದಾ ಸವಾರಿ ಮಾಡುವವನಂತೆ ಕಾಣುತ್ತಾನೆ. ಮನುಷ್ಯ ತಾನೊಂದು ಬಗೆದರೆ ದೇವವೊಂದು ಬಗೆಯುತ್ತಾನೆಂಬುದು ಬಹಳಷ್ಟು ಬಾರಿ ಸತ್ಯವೆನಿಸುತ್ತದೆ. ನಾವು ಬಯಸುವುದೇನೆಂಬುದೆ ನಮ್ಮ ಮುಂದಿರುವ ಸವಾಲು!!! ನಿಜಕ್ಕೂ ನಮಗೆ ಇರುವ ಅಗತ್ಯತೆ ಏನೆಂಬುದು ನಮಗೆ ಅದೆಷ್ಟೋ ಬಾರಿ ತಿಳಿದಿರುವುದಿಲ್ಲ. ಇರುವುದರಲ್ಲಿ ಸಂತೋಷಪಡುವುದಿಲ್ಲವೆನ್ನುವುದಕ್ಕಿಂತ ನಮಗೆ ಬೇಕಿರುವುದನ್ನು ತಿಳಿಯುವ ಸಾಮರ್ಥ್ಯ ನಮಗಿರುವುದಿಲ್ಲ. ಕಾರಣಗಳು ಹಲವಿರಬಹುದು, ನನಗೆ ತಿಳಿದಂತೆ ಜೀವನಕ್ಕೆ ಬೇಕಿರುವ ಅವಶ್ಯಕತೆಗಳು ಮತ್ತು ಅನಿವಾರ್ಯತೆಗಳ ನಡುವೆ ಇರುವ ತೆಳ್ಳನೆಯ ವ್ಯತ್ಯಾಸವನ್ನು ಅರಿತಿರುವುದಿಲ್ಲ. ನಮಗೊಂದು ಕೆಲಸದ ಅನಿವಾರ್ಯತೆ ಇರುತ್ತದೆ, ಅದರೆ ನಮಗೆ ನಮ್ಮ ಆಸಕ್ತಿಯುಳ್ಳ ವಿಷಯದಲ್ಲಿ ನಮಗೆ ಕೆಲಸ ಬೇಕಿರುವ ಅವಶ್ಯಕತೆಯಿರುತ್ತದೆ. ಆದರೆ ನಮಗೆ ಆಸಕ್ತಿಯಿರುವ ವಿಷಯದಲ್ಲಿ ನಾವು ಕಾಯ್ದು ಉದ್ದಾರವಾಗುವ ತಾಳ್ಮೆ ಸಹನೆ ನಮಗಿರುವುದಿಲ್ಲ ಅಥವಾ ನಮ್ಮ ಸಮಾಜ ನಮ್ಮ ಸುತ್ತ ಮುತ್ತಲಿನ ಪರಿಸರ ಅದಕ್ಕೆ ಅನಿವು ಮಾಡಿಕೊಡುವುದಿಲ್ಲ. ಉದಾಹರಣೆಗೆ ಬಹಳಷ್ಟೂ ಮಕ್ಕಳು ಚಿಕ್ಕವರಿರುವಾಗ ನಾಟಕ, ಅಭಿನಯದಲ್ಲಿ ಆಸಕ್ತಿಯಾಗಿರುತ್ತಾರೆ ಅತ್ತುತ್ತಮ ಗಾಯಕರಾಗುವ ಎಲ್ಲ ಲಕ್ಷಣಗಳು ಇರುತ್ತವೆ, ಆದರೆ ಪೋಷಕರ ಮುಂಜಾಗೃತೆಯಿಂದಾಗಿ, ಅಥವಾ ಅವರ ಕಹಿ ಅನುಭವದಿಂದಾಗಿ ಅವರನ್ನು ದೂರವಿಡುತ್ತದೆ. ಒಬ್ಬ ಸಾಮಾನ್ಯ ಮಧ್ಯಮ ವರ್ಗದ ಮನೆಯ ಮಗನಾಗಿ ಅವನಿಗೆ ಅವನದೆ ಹಲವಾರು ಜವಬ್ದಾರಿಗಳಿದ್ದು ಅವನ ಆಸೆ ಕನಸುಗಳನ್ನು ಬಲಿ ಕೊಡಬೇಕಾಗುವುದು.
ಇಂಥಹ ಸನ್ನಿವೇಶಗಳು ಹೆಣ್ಣು ಗಂಡುಗಳಿಬ್ಬರಿಗೂ ಅನ್ವಯಿಸುತ್ತದೆ. ಇಲ್ಲಿ ಭೇಧ ಭಾವವಿರುವುದಿಲ್ಲ.ಒಳ್ಳೆಯ ಗಾಯಕರು, ಡ್ಯಾನ್ಸ್ ಮಾಡುತ್ತಿದ್ದ, ಕ್ರಿಕೇಟ್, ಫುಟ್ ಬಾಲ್, ಅಥವಾ ಪ್ರಥಮ ರ‍್ಯಾಂಕ್ ಬಂದ ಬಹಳಷ್ಟು ನನ್ನ ಸ್ನೇಹಿತರು ತಮಗೆ ಹೊಂದದ ಅಥವಾ ಆಸಕ್ತಿಯಿಲ್ಲದ ಉದ್ಯೋಗದಲ್ಲಿ ಸೋಮಾರಿಗಳಾಗುವಂತೆ ಮಾಡಿಬಿಟ್ಟಿದೆ. ಹೈಸ್ಕೂಲಿನ ಜೀವನದಲ್ಲಿದ್ದ ಬಹಳಷ್ಟು ಬುದ್ದಿವಂತರೆನಿಸಿಕೊಂಡ ಸ್ನೇಹಿತರು ಸರ್ಕಾರಿ ಉದ್ಯೋಗದಲ್ಲಿದ್ದರೂ ಅವರಲ್ಲಿ ಸಮಾಜದ ಬಗ್ಗೆ ಬಹಳಷ್ಟು ಕಾಳಜಿಯಿದ್ದರೂ ಅವರ ಕೈಗಳನ್ನು ಕಟ್ಟಿ ಹಾಕಿ, ಸಾಕಪ್ಪ ಈ ಉದ್ಯೋಗ ಈ ಸಮಾಜ ಈ ಜನತೆ ಎನ್ನುವಂತೆ ಮಾಡುವ ಈ ಜೀವನದ ಅರ್ಥವೇನು? ಪ್ರತಿಯೊಬ್ಬ ಯುವಕನು ತನ್ನ ಸಮಾಜ ತನ್ನ ದೇಶದ ಏಳಿಗೆಗಾಗಿ ಏನಾದರೊಂದು ಮಾಡಬೇಕು ನನ್ನ ಜನತೆಯನ್ನು ನನ್ನ ಪ್ರಾಣಕಿಂತ ಪ್ರೀತಿಸಿ ಅದರ ಉನ್ನತಿಯ ಬಗ್ಗೆ ಹಲವಾರು ಕನಸುಗಳನ್ನು ಕಾಣುತ್ತಾನೆ. ಯಾವೊಬ್ಬ ಯುವಕನೂ ಕೇವಲ ತನ್ನ ಏಳಿಗೆಯಾದರೆ ಸಾಕೆಂದು ಬಯಸುವುದಿಲ್ಲ, ಹಾಗೆ ಬಯಸಿದ್ದೇ ಆದ್ದಲ್ಲಿ ಅವನು ಯುವಕನೇ ಅಲ್ಲ ಅವನೊಬ್ಬ ವಯಸ್ಸಾದ ತನ್ನ ಜೀವನ ಮುಗಿಯುತ್ತಿದೆಯೆಂದು ನಿರ್ಧರಿಸಿ ತನ್ನ ಸ್ಥಿರತೆಗಾಗಿ ಪ್ರಯತ್ನಿಸುವ ಮಧ್ಯಮ ವಯಸ್ಕ.ತನ್ನಯ ಬಗ್ಗೆ ತನಗೆ ನಂಬಿಕೆ ಇಲ್ಲದವನು ಮಾತ್ರ ತನ್ನ ವೈಯಕ್ತಿಕ ಏಳಿಗೆಗೆ ಪ್ರಯತ್ನಿಸುತ್ತಾನೆ ಅಥವಾ ಅದರ ಬಗ್ಗೆ ಶ್ರಮಿಸುತ್ತಾನೆ.ತನ್ನತನದಲ್ಲಿ ತನ್ನ ಆದರ್ಶಗಳಲ್ಲಿ ನಂಬಿಕೆ ಉಳ್ಳವನು ತಾನು ಬೆಳೆದು ತನ್ನವರನ್ನು ತನ್ನ ಸಮಾಜ, ತನ್ನ ದೇಶವನ್ನು ಮೇಲೆತ್ತಲು ಅಥವಾ ತನ್ನ ಕೈಮೀರಿ ಅದಕ್ಕೆ ಋಣ ತೀರಿಸಲು ಚಿಂತಿಸುತ್ತಾನೆ. ಕೇವಲ ಚಿಂತಿಸಿದರೇ ಬಂದ ಫಲವೇನು? ಅದನ್ನು ಕಾರ್ಯರೂಪಕ್ಕೆ ತರುವ ಮಾರ್ಗವೇನು? ಕಾರ್ಯರೂಪಕ್ಕೆ ತರಲು ನಿಜಕ್ಕೂ ಸಾಧ್ಯವಿದೆಯಾ? ಇದ್ದರೇ ಅದರ ಮಾರ್ಗವೇನು? ಪ್ರತಿಯೊಬ್ಬ ಭಾರತೀಯನು ತನ್ನ ಅಂತರಾಳಕ್ಕೆ ಒಪ್ಪುವ ಕೆಲಸ ಮಾಡಿದರೇ ಮಾತ್ರ ಅದರ ಕನಸು ನನಸಾಗಲು ಸಾಧ್ಯ. ಪಿ.ಎಚ್.ಡಿ ಮಾಡುವ ವಯಸ್ಸಿಗೆ ಇಲ್ಲಸಲ್ಲದ ರಾಜಕೀಯ ನಮ್ಮನ್ನು ಸುತ್ತಿರುತ್ತದೆ. ಐದಾರು ವರ್ಷಗಳು ಯುನಿವರ್ಸಿಟಿಗಳಲ್ಲಿ ಕುಳಿತು ಗೈಡ್ ಗಳ ಗುಲಾಮಗಿರಿ ಮಾಡಿದವನು ಹೊರಬಂದೊಡನೆ ತನಗೆ ಆದ ಅನ್ಯಾಯಕ್ಕೆ ನ್ಯಾಯ ದೊರಕಿಸುವಲ್ಲಿ, ತನ್ನ ಶಿಷ್ಯ ವೃಂದವನ್ನು ಗುಲಾಮರನ್ನಾಗಿಸಿಕೊಳ್ಳುತ್ತಾನೆ. ಅವನೊಂದಿಗೆ ಅವನ ಆದರ್ಶಗಳು ನೆಲ ಕಚ್ಚುತ್ತವೆ.ಇದರಂತೆಯೇ ಎಲ್ಲ ಸರ್ಕಾರಿ ಇಲಾಖೆಗಳಲ್ಲಿಯೂ ನೀವು ನಮ್ಮ ಮಹರಾಜರನ್ನು ಕಾಣಬಹುದು. ಅದಕ್ಕೊಂದು ನಿದರ್ಶನವೆಂದರೆ, ನಮ್ಮ ಮಾಲಿನ್ಯ ನಿಯಂತ್ರಣ ಇಲಾಖೆ, ವಿಜ್ನಾನದ ಗಂಧವೇ ಇಲ್ಲದವರನ್ನೂ ನೀವು ಅಲ್ಲಿ ವೈಜ್ನಾನಿಕ ಅಧಿಕಾರಿಗಳಾಗಿ ಕಾಣಬಹುದು, ಒಮ್ಮೆ ಅವರಲ್ಲಿಗೆ ಹೋಗಿ ಮಾಲಿನ್ಯದ ಬಗ್ಗೆ ಕುರಿತು ಕೇಳಿ ನೋಡಿ, ಅದೊಂದು ವಿಷಯ ಬಿಟ್ಟು ಇಲಾಖೆಯಲ್ಲಿರುವ ಎಲ್ಲಾ ರಾಜಕೀಯವನ್ನು, ಜಾತಿಯತೆಯನ್ನು ನಿಮ್ಮ ಕಿವಿಗೆ ಊದುತ್ತಾರೆ. ಸಾಮಾನ್ಯ ಜ್ನಾನವೂ ಇರುವುದಿಲ್ಲ. ಇನ್ನೂ ಕೆಲವು ಅಧಿಕಾರಿಗಳಂತೂ ಅವರಲ್ಲಿಗೆ ಮಾಹಿತಿ ಕೇಳಿ ಹೋದರೆ ಹಾವು ಕಡಿದಂತೆ ಆಡುತ್ತಾರೆ. ಅವರ ಬಳಿಗೆ ಹೋಗಿ ನೀವು ನಮ್ಮ ಜನತೆಯ ಸೇವೆಗೆ ಇರುವವರು ನಮಗೆ ಬೇಕಿರುವ ಮಾಹಿತಿ ನೀಡಿ ಸೇವೆ ನೀಡಬೇಕೆಂದರೆ, ನಿಮ್ಮ ತಿಥಿಯ ದಿನಾಂಕ ನಿಗದಿಪಡಿಸಿಬಿಟ್ಟಾರು ಜೋಕೆ. ಎಲ್ಲರೂ ಹೀಗಿರುತ್ತಾರೆನ್ನುವುದಿಲ್ಲ, ಆದರೆ ಬಹಳಷ್ಟೂ ಮಂದಿ ಹೀಗೆಯೇ ಇರುತ್ತಾರೆ,ನಾನು ನನಗೆ ಅತಿ ಮೆಚ್ಚುಗೆಯಾದ ಒಬ್ಬ ವ್ಯಕ್ತಿಯ ಬಗ್ಗೆ ಹೇಳಲೇಬೇಕು, ಅವರು ನೀರಾವರಿ ಇಲಾಖೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ದ್ವಿತೀಯ ದರ್ಜೆಯ ಗುಮಾಸ್ತೆಯಾಗಿದ್ದಾರೆ, ಅವರ ಬಳಿಯಲ್ಲಿ ಅರ್ಧ ಗಂಟೆಯಷ್ಟು ಕುಳಿತರೆ ನಿಮ್ಮ ಕಾಲೆಜಿನಲ್ಲಿ ತಿಳಿಸದ ಅದೆಷ್ಟೋ ನಿರಾವರಿಗೆ, ಡ್ಯಾಂ ಗಳಿಗೆ ಸಂಬಂದಪಟ್ಟ ವಿಷಯಗಳನ್ನು ನಿಮಗೆ ಹೇಳಿಕೊಡುತ್ತಾರೆ.ಯಾವ ಇಂಜಿನಿಯರುಗಳಿಗೂ ಕಡಿಮೆಯೆನಿಸುವುದಿಲ್ಲ. ಆದರೇ ಮೊದಲು ಹೇಳಿದ ಅಧಿಕಾರಿಗಳಿಗೆ, ನಮ್ಮಂತೆಯೇ ಒಲ್ಲದ ಮನಸ್ಸಿನಿಂದ ಕೆಲಸ ಮಾಡುವ ಕರ್ಮ ಬಂದಿರುವುದೆನ್ನುವುದು ನನ್ನ ಅನಿಸಿಕೆ.ಆದರೇ ಇವರ ಅಚ್ಚು ಮೆಚ್ಚಿನ ವಿಷಯವೆಂದರೇ, ರಾಜಕೀಯ, ಜಾತಿಯತೇ, ಮತೀಯತ, ಪ್ರಾಂತೀಯತೆ, ಸಂಬಳ ಹೆಚ್ಚಳ ಕೊರತೆ,ಅದರಲ್ಲಿನ ಲೋಪ ದೋಷಗಳು.
ನಾನು ಕಂಡಂತೆ ಎಲ್ಲರೂ ರಾಜಕೀಯದ ಬಗ್ಗೆ ಮಾತನಾಡುತ್ತಾರೆ, ಈಗ ಇರುವ ಮಹನೀಯರನ್ನೇ ತಡೆಯಲಾಗುತ್ತಿಲ್ಲ ಇನ್ನೂ ಇವರನ್ನೂ ಅವರೊಂದಿಗೆ ಸೇರಿಸಿದರೆ ನಮ್ಮ ಬದುಕಿನ ಗತಿ ಏನು?ಜಾತಿಯತೆಯ ಬಗ್ಗೆ ಎಂದರೇ ಪ್ರತಿಯೊಂದು ಜಾತಿಗೂ ನಾಲ್ಕು ಜನರು ಮಠಾಧೀಶರಿದ್ದಾರೆ, ಅವರು ಇರುವ ಜಾತಿಯನ್ನು ಮತ್ತೆ ಒಳ ಪಂಗಡಗಳಾಗಿ ಹಂಚಿ ಹರಿದಿದ್ದಾರೆ ಇನ್ನು ಇವರನ್ನೂ ಸೇರಿಸಿದರೆ ನಮ್ಮ ಗೋಳನ್ನು ಕೇಳಲು ಭೂಮಿಯ ಮೇಲೆ ಜನರೇ ಇಲ್ಲದಂತೆ ಮಾಡಿ ಬಿಡುತ್ತಾರೆ.ಇಂಥವುಗಳನ್ನು ತಗ್ಗಿಸುವ ಮಾರ್ಗವದರೂ ಯಾವುದು??
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ