24 ಡಿಸೆಂಬರ್ 2009

ಮತ್ತೆ ಮತ್ತದೇಕೋ ಸುತ್ತುವ ಹಂಬಲ !!!!!!!!!!

ಇದೇನು ಕಥೆನಪ್ಪಾ ಈ ನನ್ಮಗ ಬರೆದಿರೋದನ್ನೆ ಓದೋಕೆ ಆಗಿಲ್ಲಾ ಓದಿ ಉಗಿಯೋಕೂ ಸಮಯ ಸಿಕ್ತಿಲ್ಲ, ಆದರೂ ಬರೆದು ಬರೆದು ಓದಿ ಓದಿ ಅಂತಾ ಜೀವ ತಿನ್ನೋಕೆ ಬರ್ತಾನೆ ಎಂದುಕೊಳ್ಳಬೇಡಿ.ಇದು ಮತ್ತೊಮ್ಮೆ ಚಾರಣದ ಬಲಿಗೆ ಸಿಕ್ಕಿ ನಲಿದು ನಲುಕಿದ ಕಥೆ. ಹಿಮಾಲಯದಂತಹ ಪರ್ವತಗಳನ್ನೇರಿ ಬರುವ ಕಾಲದಲ್ಲಿ ನಮ್ಮೂರಿನ ಅಕ್ಕ ಪಕ್ಕದ ಊರಿನ ಬೆಟ್ಟ ಗುಡ್ಡ ಹತ್ತಿ ಬಂದು ಅಯ್ಯೋ ಎನ್ನುವ ಮಟ್ಟಕ್ಕೆ ಬರೆಯುತೇನೆಂದು ದೂರಬೇಡಿ.ನೀವು ಯಾವ ದೇಶದ ಯಾವ ಮೂಲೆಗೆ ಹೋಗಿ ಬಂದರೂ ನಿಮ್ಮ ಮನಸ್ಥಿತಿಯಂತೂ ಬದಲಾಗುವುದಿಲ್ಲ. ಯೂರೋಪ್ ದೇಶಕ್ಕೆ ನಮ್ಮೂರಿನ ಕಂಡಕ್ಟರ್ ಹೋದರೇ ಅಥವಾ ಡ್ರೈವರ್ ಹೋದರೇ ಅಲ್ಲಿನ ಬಸ್ಸುಗಳು ಮತ್ತು ಅಲ್ಲಿನ ಡ್ರೈವರ್ ಗಳನ್ನು ಮಾತನಾಡಿಸಲು ಇಚ್ಚಿಸುತ್ತಾರೆ ವಿನಾಃ ಅಲ್ಲಿನ ದೇಶದ ಇನ್ನುಳಿದವರನ್ನಲ್ಲಾ!ಹಾಗೆಯೇ ನನ್ನಂಥಹ ಸೋಮಾರಿಗಳು ಯಾವ ಬೆಟ್ಟ ಏರಿದರೂ ಊರಿಗೆ ಮರಳಿ ಬಂದ ಮೇಲೆ ಒಂಬತ್ತು ಗಂಟೆಗೆ ಏಳುವುದು ತಪ್ಪುವುದಿಲ್ಲ. ನನ್ನ ಸೋಮಾರಿತನ ಕಡಿಮೆಯಾಗುವುದಿಲ್ಲ.ಕಳೆದ ವಾರ ಹಾಗೆಯೇ ಮನಸ್ಸಿಗೆ ಬೇಸರವಾಗಿದ್ದರಿಂದ ಎಲ್ಲಾದರೂ ಹೋಗಿಬರಬೇಕೆಂದು ನಿರ್ಧರಿಸಿದೆ, ನೆಂಟರ ಮನೆಗಳಿಗೆ ಹೋಗುವ ಖಾಯಿಲೆ ನನಗೆ ಇಲ್ಲದಿರುವುದರಿಂದ ನನ್ನ ಸ್ನೇಹಿತ ನವೀನನ ಊರಿಗೆ ಹೋಗಿ ಬರಲು ನಿರ್ಧರಿಸಿದೆ, ಅವನಿಗೆ ಫೋನ್ ಮಾಡಿ ಶನಿವಾರ ನಿಮ್ಮೂರಿಗೆ ಪಯಣವೆಂದೆ ಅದಕ್ಕೆ ಅವನು ಒಪ್ಪಿದ. ನಾನು, ವಿಜಿ, ಕಿರಣ ಮತ್ತು ನವಿನ ಎರಡು ಬೈಕ್ ಗಳಲ್ಲಿ ಹೋಗುವುದು ಎಂದು ತೀರ್ಮಾನಿಸಿ ಹೊರಟೆವು. ಒಬ್ಬನೇ ಹೋಗಿ ಇದ್ದು ಬರೋಣವೆಂದರೇ ಮೂರು ಜನ ಸೇರಿದೆವು. ನಾಲ್ಕು ಜನರು ನಾಲ್ಕು ದಿಕ್ಕಿನಂತೆ ಅರ್ಥವಿಲ್ಲದ ಚರ್ಚೆ ಮಾಡಿಕೊಂಡು, ಒಬ್ಬ ಕೋಳಿ ಬೇಕು, ಒಬ್ಬ ಹಂದಿ ಮಾಂಸ ಬೇಕು, ಒಬ್ಬ ಹೆಂಡ ಬೇಕು, ಒಬ್ಬನಿಗೆ ಸಿಗರೇಟು ಮತ್ತೊಬ್ಬನಿಗೆ ಅದು ಇದು ಅಂತಾ ಇಲ್ಲಿಂದ ಹೊರಡುವಾಗಲೇ ಮಧ್ಯಾಹ್ನ ಮೂರಾಯಿತು.

ಮನೆಯಿಂದ ಬ್ಯಾಗು ಕ್ಯಾಮೆರಾ ರಗ್ಗು ಬಟ್ಟೆ ಬರಿ ಅಂತಾ ಹಾಕಿಕೊಂಡು ಹೊರಟೆವು. ಇಲ್ಲಿಂದಾ ಯಲಹಂಕ ದಾಟಿ, ದೊಡ್ಡ ಬಳ್ಳಾಪುರ ಬಳಸಿಕೊಂಡು, ಚಿಕ್ಕಬಳ್ಳಾಪುರ ದಾರಿಯಲ್ಲಿ ಹೊರಟರೆ, ಹತ್ತು ಕಿಲೋಮೀಟರ್ ಕಳೆದ ಮೇಲೆ ಎಡಕ್ಕೆ ತಿರುಗಿಸಿಕೊಂಡು ನಾಲ್ಕು ಕೀಮಿ ಹೋದ ನಂತರ ಕಾಣುವುದೇ ದೊಡ್ಡರಾಯಪ್ಪನ ಹಳ್ಳಿ.ಊರು ನಮ್ಮೂರ ಹಳ್ಳಿಗಳಂತೆಯೇ ಇದ್ದರೂ ಊರಿಗಿಂತ ಊರಿನ ಹಿಂದಿರುವ ಗುಡ್ಡಗಳು ಸುಂದರವಾಗಿವೆ.ಅವುಗಳು ನಿಮ್ಮ ಕಣ್ಣುಗಳನ್ನು ಆಕರ್ಷಿಸುತ್ತವೆ ಎಂದರೇ ತಪ್ಪಾಗದು.ಊರಿನ ಹಿಂದೆ ಸಣ್ಣ ಪುಟ್ಟ ನಾಲ್ಕಾರು ಗುಡ್ಡಗಳಿವೆ, ಅಲ್ಲಿರುವ ಗುಡ್ಡಗಳು, ಹಸಿರಿದಿದ್ದರೇ ನಮ್ಮೂರಿನ ಕಡೆ ಇರುವ ಬೆಟ್ಟಗಳಂತೇಯೇ ಕಾಣುತಿದ್ದವು.ಊರಿಗೆ ಪ್ರವೇಶಿಸುತ್ತಿದಂತೆ ವಯಸ್ಸಾದ ಮುದುಕು ಮುದುಕಿಯರು ದನ, ಕುರಿ, ಮೇಕೆಗಳ ಹಿಂಡಿನೊಂದಿಗೆ ಬರುತ್ತಿರುವುದು ಸಾಮಾನ್ಯವಾಗಿತ್ತು.ವಯಸ್ಸಾದವರು ಹಳ್ಳಿಗಳಲ್ಲಿ ಅಡ್ಡಾಡುವುದರ ಸಂಕೇತ ಹಳ್ಳಿಯಲ್ಲಿನ ವಲಸೆ ಸಂಖ್ಯೆ ಏರಿದೆ ಎಂದು ಅಥವಾ ಶ್ರಮಜೀವಿಗಳೆಂದು. ನಮ್ಮೂರಿಗೆ ಬಂದರೇ ಬರುವ ಮುನ್ನವೇ ಸಾಲು ಸಾಲಾಗಿ ನನ್ನಂತಹ ಕೆಲಸಕ್ಕೆ ಬಾರದ ಸೋಮಾರಿಗಳು ಕೈನಲ್ಲಿ ಮೋಬೈಲ್ ಹಿಡಿದು ರಿಂಗ್ ಟೋನ್ ಕೇಳುತ್ತಾ ಕುಳಿತಿರುತ್ತಾರೆ, ಇಲ್ಲವೆಂದರೇ ದೇವೇಗೌಡ, ಯಡ್ಯೂರಪ್ಪ ಅಂತಾ ರಾಜಕೀಯದ ಗುಂಗಿನಲ್ಲಿರುತ್ತಾರೆ.ಅದೂ ಇಲ್ಲದಿದ್ದರೇ ಜಾತಿ ರಾಜಕಾರಣದಲ್ಲಿರುತ್ತಾರೆ.ಈ ಊರಿನಲ್ಲಿ ಅಂತಹ ಸನ್ನಿವೇಶಗಳು ಕಾಣಲಿಲ್ಲ. ಕಾರಣ ಕುಳಿತು ಹರಟೆ ಹೊಡೆಯುವಷ್ಟು ಪ್ರಕೃತಿ ಅವರಿಗೆ ಸಂಪೂರ್ಣ ಬೆಂಬಲ ನೀಡಿಲ್ಲ.ಸಾವಿರ ಅಡಿ ಆಳದಲ್ಲಿ ಬೋರ್ ಕೊರೆದರೆ ಅವರಿಗೆ ನೀರು ಸಿಗುವ ನಂಬಿಕೆ ಇರುವುದಿಲ್ಲ, ಅದಲ್ಲದೇ ಎಲ್ಲರಿಗೂ ಬೋರ್ ಕೊರೆದು ವ್ಯವಸಾಯ ಮಾಡುವುದು ಎಲ್ಲರಿಗೂ ಸಾಧ್ಯವಾಗುವ ಕೆಲಸವಲ್ಲ, ಬಹಳಷ್ಟು ರೈತರು ಮಳೆರಾಯನನ್ನು ನಂಬಿ ಬದುಕುತ್ತಿರುವುದರಿಂದ ಸಮಯ ಪ್ರಜ್ನೆ, ಸಮಯಕ್ಕೆ ತಕ್ಕ ತೀರ್ಮಾನಗಳು ಬಹುಮುಖ್ಯವಾಗುತ್ತವೆ.ಅವರು ನಮ್ಮ ನೀರಾವರಿ ಜಮೀನಿನ ರೈತರಂತೆ ಟೀ ಅಂಗಡಿ ಮುಂದೆ ಕುಳಿತು ಕಾಲಹರಣ ಮಾಡುವ ಸಾಹಸ ಮಾಡಲಾಗುವುದಿಲ್ಲ. ಅವರ ಮನೆಗೆ ಬಂದೊಡನೆ ನಮ್ಮ ಪರಿಚಯವಾಯಿತು, ಅವರ ಪರಿಚಯ ನಮಗಾಯಿತು. ನಾವು ಮಾಡಹೊರಟಿರುವ ಕಾರ್ಯಪ್ರಲಾಪವನ್ನು ಅಜ್ಜಿಯ ಮುಂದಿಟ್ಟೊಡನೆ, ಅವರು, ಬೆಟ್ಟದ ಮೇಲೆ ಕರಡಿ ಬಂದಿದೆಯಂತೆ, ಒಬ್ಬ ದನ ಕಾಯುವ ಹುಡುಗನಿಗೆ ಪರಚಿ ಗಾಯ ಮಾಡಿದೆಯಂತೆ!! ಜೋಪಾನವೆಂದರು!! ನಾವೇ ನಾಲ್ಕು ಜನ ನಾಡು ಮೃಗಗಳಿರುವಾಗ ಕರಡಿ ಏನು ಮಾಡಲಾದೀತು ಎಂದು ಹಾಸ್ಯ ಮಾಡಿ ಹೊರಟವು. ಇದ್ದ ನಾಲ್ಕು ಜನರಲ್ಲಿ, ಸಂಪೂರ್ಣ ನಾಸ್ತಿಕತೆ, ಅಪೂರ್ಣ ನಾಸ್ಕಿಕತೆ, ಆಸ್ತಿಕತೆ ,ಸಂಪೂರ್ಣ ಆಸ್ತಿಕತೆ ಎಲ್ಲವೂ ಇದ್ದವು. ಬೆಟ್ಟದ ಮೇಲಿರುವ ದೇವರ ಗುಡಿ ಯಾವುದು, ಯಾವ ಉತ್ಸವ ನಡೆಯುತ್ತದೆ, ಅಲ್ಲಿ ಮಾಂಸ ಮಾಡಬಹುದೇ, ಹಂದಿಮಾಂಸ ಮಾಡುವುದು ಸರಿಯೇ? ಅಲ್ಲೇ ಮಾಡುವುದೇ, ಅಲ್ಲಿಂದ ಸ್ವಲ್ಪ ದೂರದಲ್ಲಿ ಮಾಡುವುದೇ?? ಹೀಗೆ ಹತ್ತು ಹಲವು ಬಾರಿ ಚರ್ಚೆಗಳಾಗಿ, ಅಲ್ಲಿಗೆ ಹೋದ ಮೇಲೆ ಅಲ್ಲಿನ ವಾತಾವರಣಕ್ಕೆ ಅನುಗುಣವಾಗಿ ಮಾಡುವುದೆಂದು ಹೊರಟೆವು.

ಕರಡಿಯ ಬಗ್ಗೆ ನಾವು ಅಜ್ಜಿಯ ಎದುರು ಸ್ವಲ್ಪ ಹಗುರವಾಗಿ ಮಾತನಾಡಿ ಬಂದಿದ್ದರೂ ನಮ್ಮೊಳಗೆ ಕರಡಿಯನ್ನು ಅಟ್ಟಿ ಓಡಿಸುವಷ್ಟು ಧೈರ್ಯವಿದೆ ಎಂದಾಗಲಿ, ಅದು ಬರಲಿ ನೋಡೆ ಬಿಡುವ ಎನ್ನುವ ಮನಸ್ಥೈರ್ಯವಾಗಲಿ ಇರಲಿಲ್ಲ. ಕರಡಿಯ ಬಗ್ಗೆ ಬಹಳಷ್ಟು ಚರ್ಚೆಯಾಗತೊಡಗಿತು, ಕಾಡು ಪ್ರಾಣಿಗಳಲ್ಲಿ, ಬಹಳ ಕುಚೇಷ್ಟೆ ಪ್ರಾಣಿ ಎಂದರೇ ಕರಡಿ, ಅದು ಮನುಷ್ಯನನ್ನು ತಿನ್ನುವುದಿಲ್ಲ ಆದರೆ ನಮ್ಮ ಉಮೇಶ್ ರೆಡಿಯಂತೆ, ಒಂದು ಬಗೆಯ ಮೋಜು ಪಡೆಯುತ್ತದೆ, ಮನುಷ್ಯನ ದೇಹದ ಮೇಲೆ ಆಟವಾಡಿ ಕಿರುಕುಳು ಕೊಟ್ಟು ಸಾಯಿಸಲು ಬಯಸುತ್ತದೆ. ಪ್ರೀತಿಯಿಂದ ಮಾಡುತ್ತದೋ ಅಥವಾ ಮೋಜಿನಿಂದಲೋ ಅಥವಾ ಇನ್ನೆನು ಇರುತ್ತದೆಯೋ ಅದರ ಅಂತರಾಳ ಅದಕ್ಕೆ ಗೊತ್ತು. ನಾನು ಆಗ್ಗಾಗ್ಗೆ ಕರಡಿಯನ್ನು ನಮ್ಮ ಕನ್ನಡದ ಕೆಲವು ನಟರಿಗೆ ಮತ್ತು ನಿರ್ದೇಶಕರಿಗೆ ಹೋಲಿಸುತ್ತೇನೆ. ಅವರು ತೆಗೆಯುವ ಸಾಕಷ್ಟು ಸಿನೆಮಾಗಳು ಹಾಗೆಯೇ, ಅದನ್ನು ನಮ್ಮ ಮೇಲೆ ಅಥವಾ ಕನ್ನಡದ ಮೇಲೆ ಸೇಡು ತೀರಿಸಲು ತೆಗೆಯುತ್ತಾರೋ ಅಥವಾ ಪ್ರೀತಿಯಿಂದಲೋ ತಿಳಿಯುವುದಿಲ್ಲ.ಕುಳಿತು ನೋಡುತ್ತಿದ್ದರೆ ಸಹಿಸಲಾರದ ಅಸಹನೆ ಮೂಡುತ್ತದೆ.ಅಂತೂ ನವೀನ ನಮ್ಮನ್ನು ನವೀನ ದಾರಿಯಲ್ಲಿ ಕರೆದೊಯ್ಯುವ ಸಾಹಸ ಮಾಡಿ ದಾರಿ ತಪ್ಪಿಸಿ, ಸಂಜೆ ಐದು ಮೂವತ್ತಕ್ಕೆ ಮನೆ ಬಿಟ್ಟವರು ರಾತ್ರಿ ಎಂಟು ಗಂಟೆಯ ತನಕ ದಾರಿ ಹುಡುಕುವುದರಲ್ಲಿಯೇ ಕಳೆದೆವು. ನಾನು ಒಮ್ಮೊಮ್ಮೆ ಬಹಳ ನಿರಾಸಕ್ತಿಯಿಂದ ವರ್ತಿಸುತ್ತೇನೆ, ಅದಕ್ಕೆ ಇದೊಂದು ನಿದರ್ಶನ. ಅವನು ಬೆಟ್ಟಕ್ಕೆ ಹೋಗುತ್ತಿದ್ದೇವೆ ರಾತ್ರಿ ಅಲ್ಲಿ ಇರಬೇಕೆಂದು ಹೇಳಿದರು, ನಮ್ಮ ಕೈಯಲ್ಲಿ ಒಂದೇ ಒಂದು ಟಾರ್ಚ್ ಇರಲಿಲ್ಲ, ಪೆಟ್ರೋಲ್, ಅಥವಾ ಡೀಸೇಲ್ ಇರಲಿಲ್ಲ, ಮೂಲಭೂತವಾಗಿ ಬೇಕಿದ್ದ ಔಷಧಿಗಳು ಇರಲಿಲ್ಲ, ಕೊನೆ ಪಕ್ಷ ಒಂದು ಬಾಟಲಿ ನೀರು ಇರಲಿಲ್ಲ. ನನ್ನ ದಡ್ಡತನದಿಂದಾಗಿ ಎಲ್ಲರೂ ವ್ಯಥೆ ಪಡುವಂತಾಯಿತು. ಕೊನೆಗೆ ನಡೆಯಲಾಗದೇ, ನಡೆದ ದಣಿವನ್ನು ತಣಿಸಲು ನೀರಿಲ್ಲದೇ ಕೊರಗುವಂತಾಯಿತು. ಅಷ್ಟು ಸುತ್ತಿಬಳಸಿ ಕೊನೆಗೆ ಬೆಟ್ಟಕ್ಕೆ ಹತ್ತುವ ದಾರಿ ಸಿಕ್ಕಿತು. ಆ ಊರಿಗೆ ನಾನು ಹೊಸಬ, ನವೀನನಿಗೆ ಅಲ್ಲಿನ ಬಗ್ಗೆ ತಿಳಿದಿದ್ದರೂ ಅವನು ಅಪರೂಪಕ್ಕೊಮ್ಮೆ ಹೋಗುವುದರಿಂದ ಸದ್ಯದಲ್ಲಾದ ದಾರಿ ಬದಲಾವಣೆಗಳು ಅವನನ್ನು ದಾರಿ ತಪ್ಪುವಂತೆ ಮಾಡಿದೆವು. ಮೊದಲೇ ನಮ್ಮ ಕಿರಣನಿಗೆ ದೇವಸ್ಥಾನದಲ್ಲಿ ಹಂದಿಮಾಂಸ ಬೇಯಿಸುವುದು ಇಷ್ಟವಿರಲಿಲ್ಲ, ನನಗೋ ಹೊಟ್ಟೆ ಹಸಿದು ಸುಸ್ತಾಗಿದ್ದೆ, ಇನ್ನೂ ವಿಜಿಯಂತೂ ಅನ್ನ ಕಂಡು ಶತಮಾನವಾದವನಂತೆ ಹಂಬಲಿಸುತ್ತಿದ್ದ. ಬಹುಸಂಖ್ಯಾಂತರ ಮುಂದೆ ನವೀನನ ಉತ್ಸಾಹ ಉಡುಗಿ ಹೋಯಿತು. ನೀರು ಸಿಕ್ಕಿದ್ದಲ್ಲಿ ಅಡುಗೆ ಮಾಡಿ, ಊಟ ಮಾಡಿದ ನಂತರ ಹೋಗುವುದೆಂದು ತೀರ್ಮಾನಿಸಿದೆವು.ಸ್ವಲ್ಪ ದೂರ ನಡೆದ ಮೇಲೆ, ಸ್ವಲ್ಪ ಮಟ್ಟದಲ್ಲಿ ಹರಿಯುವ ನೀರು ಕಂಡಿತು. ಅಲ್ಲಿಯೇ ಎಂದು ತೀರ್ಮಾನವೂ ಆಯಿತು.ನವೀನ ನಮಗೆ ಇನ್ನೂ ಸ್ವಲ್ಪ ದೂರ ನಡೆದರೇ ಅಲ್ಲಿ ಸುಂದರವಾದ ಹೊಂಡವಿದೆ ಅಲ್ಲಿಯೇ ಹೋಗಿ ಅಡುಗೆ ಮಾಡೋಣವೆಂದು ತಿಳಿಸಿದ. ನವೀನ ಎನ್ನುವ ವ್ಯಕ್ತಿಯ ಮೇಲೆ ನಂಬಿಕೆ ಕಳೆದುಕೊಂಡಿದ್ದ ಮೂವರು ಬಕಾಸುರರಿಗೆ ಅವನ ಮಾತಿನಲ್ಲಿ ನಂಬಿಕೆ ಬರಲಿಲ್ಲ.ನೀರು ಸರಿಯಿಲ್ಲವೆಂದರೂ ಕೇಳದೇ ಅಯ್ಯೊ ಇದೆಲ್ಲಾ ನೈಸರ್ಗಿಕ ನೀರು, ಇಲ್ಲಿ ಸರ್ವವೂ ಶುಭ್ರವಾಗಿರುತ್ತದೆ, ಯಾವುದೇ ಕಲ್ಮಶವಿರುವುದಿಲ್ಲವೆಂದು ವಾದಿಸಿ, ನೀರನ್ನು ಮೊಗೆದು, ಅದನ್ನು ಸೋಸಿ ತುಂಬಿಸಿಕೊಂಡು ಅಡುಗೆ ಮಾಡೋಣವೆಂದು ನೆನೆದೆವು. ಕಡೆಗೂ ಅಲ್ಲಿಯೇ ಅಡುಗೆ ಮಾಡುವುದೆಂದು, ಮಾಡಿದ ನಂತರ ಹೊರಡುವುದೆಂದು ಮೇಲಕ್ಕೆ ಹೋಗಿ ಮಲಗುವುದೆಂದು ತೀರ್ಮಾನವಾಯಿತು.ಅಡುಗೆ ಮಾಡಲು ಶುರುಮಾಡುವ ಮುನ್ನವೇ ಕಿರಣ ಮಲಗುವ ಯೋಜನೆಯ ಬಗ್ಗೆ ಚರ್ಚಿಸತೊಡಗಿದ. ಇಲ್ಲೇ ಮಲಗೋಣ ಊಟವಾದ ಮೇಲೆ ಅಲ್ಲಿಗೆ ಹೋಗುವುದು ಬೇಡ, ಹಂದಿ ತಿಂದು ದೇವಸ್ಥಾನಕ್ಕೆ ಹೋಗುವುದು ಸರಿಯಿಲ್ಲ, ಅದು ಇದು ಎಂದು ಕಥೆ ಹೇಳತೊಡಗಿದ.

ಸದಾ ಶಿಸ್ತಿನ ಸಿಪಾಯಿಯಾಗಿರುವ ಕಿರಣ, ಅಡುಗೆ ಮಾಡುವಾಗ ನಡೆಸಿದ ತಂತ್ರಗಳಂತೂ ನಮ್ಮ ಸಹನೆಯನ್ನು ಪರೀಕ್ಷಿಸುತ್ತಿರುವಂತೆ ಎನಿಸುತ್ತಿತ್ತು. ಈರುಳ್ಳಿಯನ್ನು ಸಮನಾಗಿ ಹೆಚ್ಚಿ ಹಾಕುವ ತನಕ ಬಿಡಲಿಲ್ಲ, ಮೆಣಸಿನ ಕಾಯಿಯನ್ನು ಉದ್ದುದ್ದ ಕತ್ತರಿಸಿ, ಅದನ್ನು ನಾಲ್ಕು ಸಮನಾದ ಭಾಗವಾಗಿ ಕತ್ತರಿಸಿ,ಟೋಮೋಟೋ ಅನ್ನು ಆದಷ್ಟೂ ಕ್ರಮವಾಗಿ ಉತ್ತರಿಸಿ ಹಾಕತೊಡಗಿದ. ಅದೆಲ್ಲವೂ ಸರಿ ಬೇಗ ಪಾತ್ರೆಗೆ ಹಾಕಿ ಒಮ್ಮೆ ಬೇಯಿಸಿ ತಿಂದರೇ ಸಾಕೆನ್ನುವ ನನ್ನ ಬಯಕೆಯಂತೂ ಆದಷ್ಟೂ ನಿಧಾನವಾಗತೊಡಗಿತು. ಕೊನೆಗೊಮ್ಮೆ ಎಣ್ಣೆ ಹಾಕಿ ಒಗ್ಗರಣೆ ಹಾಕೋಣವೆಂದರೂ ಕೇಳದೆ, ಇಲ್ಲ ಮೊದಲು ಈರುಳ್ಳಿ, ಮೆಣಸಿನಕಾಯಿ ಎಣ್ಣೆಯಲ್ಲಿ ಬೇಯಲಿ, ನೀರಿಲ್ಲದೇ ಮಾಂಸ ಉಪ್ಪು ಹಿಡಿದರೇ ಮಾತ್ರ ರುಚಿ, ಅದು ಇದೂ ಎಂದು ನಮ್ಮನ್ನು ಮತ್ತೆ ಮತ್ತೆ ಪರೀಕ್ಷಿಸಿದ. ಅಯ್ಯೊ ನಿನಗೆ ಇಷ್ಟ ಬಂದಂತೆ ಮಾಡಿ ನಮ್ಮ ಜೀವ ಉಳಿಸಿಕೊಡು ಎಂದು ಗೊಗರೆದ ಮೇಲೆ, ಅಡುಗೆ ಕಾರ್ಯದಿಂದ ನಮ್ಮನ್ನು ಮುಕ್ತಿಗೊಳಿಸಿದ. ಅಂತೂ ಇಂತೂ ಹೊಟ್ಟೆ ಭರ್ತಿ ಆಗುವಷ್ಟು ಹಂದಿ ಮಾಂಸ, ಕೋಳಿ ಮಾಂಸ ಹೆಂಡ ಸಿಗರೇಟ್ ಸೇರಿದ ಮೇಲೆ ಇನ್ನೂ ಬೆಟ್ಟದ ಮೇಲಾದರೇನು, ಕೇಳಗಾದರೇನು ವ್ಯತ್ಯಾಸ ಸರಿ ಇಲ್ಲೇ ಮಲಗುವುದೆಂದು ನಿರ್ಧರಿಸಿ ಕಾಲು ನೀಡಿದೆವು. ಅನುಭವಸ್ಥ ನವಿನನ ಮಾತು ಉಪಯೋಗಕ್ಕೆ ಬರಲಿಲ್ಲ.ಮುಂಜಾನೆ ಸಮಯದಲ್ಲಿ ತಡೆಯಲಾರದಷ್ಟು ಚಳಿಯಾಗುವುದು, ತಣ್ಣನೆ ಗಾಳಿ ಬೀಸುವುದು, ನಮ್ಮನ್ನು ತತ್ತರಿಸುವಂತೆ ಮಾಡುವುದೆಂಬ ಅವನ ಮಾತುಗಳು ನಮ್ಮನ್ನು ಬ್ಲಾಕ್ ಮೆಲ್ ಮಾಡುತ್ತಿರುವಂತೆ ಕಾಣಿಸಿತು. ಅದೇನೆ ಆಗಲಿ ಕಂಬಳಿಯಿದೆ, ರಗ್ಗುಗಳಿವೆ, ಜರ್ಕಿನ್ ಗಳಿವೆ, ಶ್ವೆಟರ್ ಗಳಿವೆ ನೋಡೆ ಬಿಡೋಣವೆಂದು, ನೈಸರ್ಗಿಕ ಚಳಿಗೆ ಸವಾಲೆಸೆದು ಮಲಗಿದೆವು. ಮಲಗಿದೆವು ಎನ್ನುವ ಪದ ಇಲ್ಲಿ ಅನರ್ಥವಾಗುತ್ತದೆ.ಕಣ್ಣು ಮುಚ್ಚಿ ಅರೆಗಳಿಗೆಯೂ ಆಗಿರಲಿಲ್ಲ, ಗಾಳಿ ಬೀಸತೊಡಗಿತು, ಅದೊಂದು ಗಾಳಿಯಲ್ಲ, ಶೀತಲ ಮಾರುತ, ಅದರ ಬಿರುಸಿಗೆ ನಮ್ಮ ಪಾತ್ರೆಗಳು, ನಮ್ಮ ಬಾಟಲಿಗಳು ಎತ್ತೆಲ್ಲಾ ಓಡಾಡತೊಡಗಿದವು, ನಾವು ಹಾಕಿದ ಬೆಂಕಿ ಉರಿ ನಿಲ್ಲಲ್ಲಿಲ್ಲ. ಅದನ್ನು ಉರಿಸಲು ಪಟ್ಟ ಪಾಡು ಅಷ್ಟಿಷ್ಟಲ್ಲ. ನಾನು ನೆಮ್ಮದಿಯಾಗಿ ಕಿರಣನ ರಗ್ಗನ್ನು ಕಿತ್ತುಕೊಂಡು ಕಾಲು ಚಾಚಿದೆ.ಕಿರಣ ಚಳಿ ತಡೆಯಲಾರದೇ ಅಲ್ಲಿ ಸುತ್ತ ಮುತ್ತಲಿಂದ ಸೌದೆಯನ್ನು ತಂದು, ಇದ್ದ ಸೀಮೆ ಎಣ್ಣೆಯನ್ನು ಸುರಿದು, ಸುತ್ತ ಮರೆ ಮಾಡಿ ಬೆಂಕಿಯ ಶಾಖ ಪಡೆಯಲು ಪ್ರಯತ್ನಿಸುತ್ತಲೇ ಇದ್ದ, ಅದೆಷ್ಟು ಹೊತ್ತು ಹಾಗೆ ಮಾಡಿದನೋ ತಿಳಿಯದು, ಬೆಳ್ಳಿಗ್ಗೆ ಎದ್ದು ಅವನ ಕಣ್ಣುಗಳನ್ನು ಕಂಡಾಗಲೇ ಅರ್ಥವಾದದ್ದು ಅವನು ರಾತ್ರಿಯಿಡಿ ಮಾಡಿದ ನಿದ್ದೆಯ ಸೊಬಗು.ಕಣ್ಣು ಕೆಂಪಾಗಿ, ಅರಳಿದ್ದವು. ಎಷ್ಟು ಹೊತ್ತಿಗೆ ಮಲಗಿದರೂ ಮುಂಜಾನೆ ಐದು ಗಂಟೆಗೆ ಏಳುವ ಚಾಳಿ ಅವನಿಗಿದೆ. ಎದ್ದವನು ಸುಮ್ಮನೆ ಇರುವ ಜಾಯಮಾನದವನೂ ಅಲ್ಲ, ಜೊತೆಗಿದ್ದವರ ಮೇಲೆ ಅವನು ಸೇಡು ತೀರಿಸಿಕೊಳ್ಳುವ ಸುಸಮಯವೇ ಮುಂಜಾನೆ. ನಮಗೆ ಮುಂಜಾನೆಯ ನಿದ್ದೆಯೇ ಬದುಕು ಅವನಿಗೆ ಅದನ್ನು ಸರ್ವನಾಶ ಮಾಡುವುದೇ ನಿತ್ಯ ಕ್ರಿಯೆ. ಬೆಳಿಗ್ಗೆ ಅವನು ಮತ್ತು ನವಿನ ಇಬ್ಬರೂ ಎದ್ದು, ಕೈಯಲ್ಲಿದ್ದ ಕ್ಯಾಮೆರಾ ಹಿಡಿದು ಬಗೆ ಬಗೆಯ ಭಂಗಿಯ ಫೋಟೋ ತೆಗೆಯುವದರಲ್ಲಿ ತಲ್ಲೀನರಾಗಿದ್ದರು. ನನಗೆ ಅವರ ಮಾತುಗಳು ಎಲ್ಲಿಂದಲೊ ಬರುತ್ತಿರುವಂತೆ ಕೇಳುತ್ತಿದ್ದವು. ಅಂತೂ ನನ್ನನ್ನು ಕೂಡ ಎಬ್ಬಿಸಿದರು. ಮಗಾ ಒಂದು ಸಲ ನೋಡು ಹೇಗಿದೆ ನೋಡೂ, ಮೋಡ ನೋಡು, ಸೀನರಿ ನೋಡು ಅದು ಇದು ಎಂದು ಕಥೆ ಹೇಳತೊಡಗಿದರು. ನಾನು ಕಂಬಳಿಯ ಒಳಗಿಂದಲೇ ಕ್ಯಾಮೆರಾದಲ್ಲಿ ಫೋಟೋ ತೆಗೆದಿರಿ, ನಂತರ ನೋಡುತ್ತೇನೆ ಎಂದೆ.ನಂತರ ಬಹಳ ಕಷ್ಟ ಪಟ್ಟು ಎದ್ದು ನೋಡಿದೆ, ಕಣ್ಣು ಬಿಟ್ಟ ಒಂದೆರಡು ನಿಮಿಷ ಏನು ಕಾಣದಿದ್ದರೂ ನಂತರ ನೋಡಿದೆ. ಅದೊಂದು ಬರಿ ಗುಡ್ಡವಲ್ಲ, ಮೋಡವೇ ಕೈಗೆಟಗಿದಂತೆ ಭಾವಿಸುವಂತಹ ಸುಂದರ ಲೋಕ. ಅದೆಂಥಹ ಸುಂದರ ತಂಗಾಳಿ, ಅದೆಂಥಹ ಸೊಬಗು, ಅಬ್ಬಬ್ಬಾ ನಿಜಕ್ಕೂ ನಾವು ಬೆಟ್ಟದ ಮೇಲೆ ಹೋಗಿ ಮಲಗಬೇಕಿತ್ತು ಎನಿಸಿತು. ಸುತ್ತಣ ಗುಡ್ಡಗಳು ಸೂರ್ಯನ ಕಿರಣಗಳಿಂದ ಮಿಂಚುತ್ತಿದ್ದವು. ಬೆಟ್ಟದ ತಳಭಾಗದಲ್ಲಿದ್ದ ಕೆರೆಯ ಸೊಬಗಂತೂ ಹೇಳಲು ಸಾಲದು, ಅದೊಂದು ಅದ್ಬುತ ಅನುಭವ, ಅಲ್ಲಿಂದ ಕೆಳಗಿಳಿಯಲು ಮನಸ್ಸು ಬರುತ್ತಿರಲಿಲ್ಲ, ಆದರೇ ಹೊಟ್ಟೆಯದೇ ಬೇರೆಯ ಯೋಚನೆ. ಅದು ನಮ್ಮ ಕಣ್ಣಿನ ಮಾತಿಗೆ ಸ್ಪಂದಿಸಲು ಸಿದ್ದವಿರಲಿಲ್ಲ. ನಂತರ ಅಲ್ಲಿಂದ ಸ್ವಲ್ಪ ಮೇಲೆ ಹತ್ತಿ ಹೋದೆವು, ಅಲ್ಲಿಯೆ ಒಂದು ಆಲದ ಮರವಿದೆ, ಬಂಡೆಯ ಮೇಲಿನ ಆಲದ ಮರದಡಿಯಲ್ಲಿ ಸುಂದರ ಹೊಂಡ, ಮರದ ನೆರಳು ಆ ನೀರಿನಲ್ಲಿ ಕಾಣುತ್ತಿರುವುದನ್ನು ಕಂಡರೇ ಅದೆಂಥಹ ಸೊಗಸು ನೋಡಿಯೇ ಅನುಭವಿಅಸಬೇಕು. ಸ್ವಲ್ಪ ಹೊತ್ತು ಅಲ್ಲೆಲ್ಲಾ ಅಡ್ಡಾಡಿ ಕೆಳಗೆ ಇಳಿಯಲು ನಿರ್ಧರಿಸಿದೆವು. ಇಳಿಯುವ ದಾರಿಯುದ್ದಕ್ಕೂ ಆ ಬಂಡೆಯನ್ನು ಒಡೆಯಲು, ಪ್ರಯತ್ನಿಸಿದ ಕುರುಹುಗಳಿದ್ದವು.

ಕೆಳಗಿಳಿದ ಮೇಲೆ ಅಜ್ಜಿಯೊಂದಿಗಿನ ಮಾತುಕತೆಯಿಂದ ತಿಳಿದ ವಿಷಯೆಂದರೇ ಆ ಬೆಟ್ಟದಲ್ಲಿ ದಶಕಗಳ ಹಿಂದೆಲ್ಲಾ ದನಗಳ ಜಾತ್ರೆ, ಉತ್ಸವಗಳು, ಬಹಳಷ್ಟು ನಡೆಯುತ್ತಿದ್ದವು. ಕಾಲ ಕ್ರಮೇಣ ಅವೆಲ್ಲಾ ಕರಗಿದವು. ಅಲ್ಲಿ ದೊರೆಯುತ್ತಿದ್ದ ಔಷದಿ ಸಸ್ಯಗಳು ಮರೆಯಾದವು. ಕಲ್ಲು ಒಡೆಯುವುದು, ಸಾಮಾನ್ಯವಾಯಿತು. ಇದು ಎಲ್ಲ ಊರಿನ ದುರಂತ ಇದ್ದದ್ದನ್ನು ಕಳೆದುಕೊಂಡು ಹೀಗೆತ್ತೆಂಬ ಕನಸಿನ ಗೋಪುರವನ್ನು ಬಣ್ಣಿಸುವುದು ನಮ್ಮ ಅಜ್ಜಿಯರ ಗುಣ, ಹಾಗಿದಿದ್ದರೆ ಅದೆಷ್ಟು ಚೆನ್ನಾಗಿರುತ್ತಿದೆಂಬುದು ನಮ್ಮ ಅನಿಸಿಕೆ, ನಾವು ನಮ್ಮತನವನ್ನು ನಿಜಕ್ಕೂ ಉಳಿಸಲು ಪ್ರಯತ್ನಿಸಿದ್ದೇವಾ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕನಸು-ನನಸಿನ ಪಯಣದ ಹಾದಿಯಲಿ ಬದ್ಧತೆ, ಜವಬ್ದಾರಿ, ಸೋಲಿನ ಭೀತಿ!!!

  ೨೯.೦೮.೨೦೨೪ ನಾವು ನಮ್ಮ ಕನಸುಗಳನ್ನು, ಆಸೆಗಳನ್ನು, ಬಯಕೆಗಳನ್ನು ಬೇರೆಯವರೊಂದಿಗೆ ಏಕೆ ಹಂಚಿಕೊಳ್ಳಬೇಕು? ಇದರ ಕುರಿತು ಸ್ವಲ್ಪ ಚರ್ಚಿಸೋಣ. ಮುಕ್ತವಾಗಿ. ಪ್ರತಿಯೊ...