24 ಡಿಸೆಂಬರ್ 2009

ದುರ್ಜನರೆಂದರೆ ಒಂದೇ ಜಾತಿಯ ಮೃಗಗಳಲ್ಲವೇ???

ನಾನು ಇಲ್ಲಿ ನಮ್ಮ ಸಮಾಜದಲ್ಲಿರುವ ಜಾತಿಯ ಬಗೆಯಾಗಲಿ ಅದರ ಪರಿಣಾಮದ ಬಗೆಯಾಗಲಿ ಮಾತನಾಡುತ್ತಿಲ್ಲ. ಇದೊಂದು ಸತ್ಯ ಮತ್ತು ನೈಜ ಘಟನೆ, ನಾನು ಓದಿದ ಪರಿಸರ ವಿಜ್ನಾನ ವಿಭಾಗದಲ್ಲಿ ಇಂದಿಗೂ ನಡೆಯುತ್ತಿರುವ ದಾರುಣ ಕಥೆ. ಸಮಾಜದ ಏಳಿಗೆಯ ಬಗ್ಗೆ ತಿಳುವಳಿಕೆ ನೀಡಬೇಕಿದ್ದ ವಿವಿಯಲ್ಲಿ, ನಡೆಯುತ್ತಿರುವ ಜಾತಿಯತೆ, ಶೋಷಣೆ, ಅಧಿಕಾರ ದುರ್ಬಲತೆ, ದುರ್ನಡತೆಯ ಬಗ್ಗೆ ಬರೆಯತೊಡಗಿದ್ದೇನೆ. ಇದೂ ಯಾರ ಮೇಲಿನ ವಿರುದ್ದವೂ ಅಲ್ಲ ಇರುವುದನ್ನು ನೇರ ಹೇಳಿ ಮುಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತಿದ್ದೇನೆ.ಯುನಿವರ್ಸಿಟಿಯಲ್ಲಿನ ಕೊಳಕು ವ್ಯವಸ್ಥೆ ಓದಿರುವ ಸರ್ವರಿಗೂ ತಿಳಿದಿರುತ್ತದೆ, ಅದರ ಆಳ ಅಗಲ ಮಾತ್ರ ತಿಳಿದಿರುವುದಿಲ್ಲ. ಅದರ ಸಂಪೂರ್ಣ ಚಿತ್ರಣ ನಿಮ್ಮ ಮುಂದಿಡುತ್ತೇನೆ. ನಿರ್ಧಾರ ನಿಮಗೆ ಬಿಟ್ಟದ್ದು. ಪರಿಸರ ವಿಜ್ನಾನವೆಂಬ ವಿಷಯ ಇತ್ತಿಚೆಗೆ ಬಾರಿ ಚರ್ಚೆಯಲ್ಲಿದೆ.ಅದು, ಜಾಗತಿಕ ತಾಪಮಾನದಿಂದ ಇರಬಹುದು, ಅರಣ್ಯನಾಶದಿಂದ ಇರಬಹುದು, ಕಳೆದು ಹೋದ ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಇರಬಹುದು, ಹೀಗೆ ಏನು ಹೇಳಿದರೂ ಪರಿಸರ ಸರ್ವನಾಶವೆನ್ನುವುದರಿಂದ ಬದಲಾವಣೆಯ ತನಕ ಬೊಬ್ಬೆ ಹೊಡೆಯುತ್ತಿದ್ದೇವೆ. ಆದರೇ ಅದನ್ನೇ ಐದಾರು ವರ್ಷ ಓದಿದವರು, ಅದರಲ್ಲೇ ಡಾಕ್ಟರೇಟ್ ತೆಗೆದುಕೊಂಡವರ ಬದುಕು ಹೇಗಿದೆ, ಓದಲು ಅವರು ಪಡುತ್ತಿರುವ ಪಾಡೇನು ಎಂಬುದು ಅಲ್ಪ ಜನರಿಗೂ ತಿಳಿದಿಲ್ಲ. ಪರಿಸರ ವಿಜ್ನಾನ ವಿಷಯವು ಕರ್ನಾಟಕದ ಎಲ್ಲ ವಿವಿ ಗಳಲ್ಲಿಯೂ ೧೯೯೨ರಿಂದ ನಡೆಯುತ್ತಿದೆ. ಪ್ರತಿ ವರ್ಷವೂ ಕನಿಷ್ಟ ೨೦ ವಿಧ್ಯಾರ್ಥಿಗಳು ಓದಿ ಹೊರಗೆ ಬರುತ್ತಿದ್ದಾರೆ. ೫೦-೧೦೦ ರ ತನಕ ಪಿ.ಎಚ್.ಡಿ ಪದವಿಗಳು ಹೊರಬಂದಿವೆ. ಆದರೇ ಉನ್ನತ ಉದ್ದೆಯಲ್ಲಿರುವವರ ಸಂಖ್ಯೆ ಒಂದೂ ಸಿಗುವುದಿಲ್ಲ. ಸರ್ಕಾರಿ ಕೆಲಸ ಸಿಗುವ ಅವಕಾಶವಿಲ್ಲದೇ, ಒದ್ದಾಡಿ ತಮ್ಮ ವಿಷಯದ ಬಗ್ಗೆ ಕೆಲಸ ಮಾಡದೇ ಬೇರೆ ಕ್ಷೇತ್ರಗಳಲ್ಲಿ ಮಾಡುತ್ತಿದ್ದಾರೆ. ಇವೆಲ್ಲದರ ನಡುವೆ ಬೆಂಗಳೂರು ವಿವಿ ಯಲ್ಲಿ ನಡೆಯುತ್ತಿರುವ ಅಸಹ್ಯಕರ ಸಂಗತಿಯನ್ನು ನಿಮ್ಮ ಮುಂದಿಡುತೇನೆ.
ವಿಭಾಗವನ್ನು ಪ್ರೊಫೆಸರ್ ಸೋಮಶೇಖರ್ ಕಳೆದ ಆರೇಳು ವರ್ಷಗಳಿಂದಲೂ ಆಳುತ್ತಾ ಬಂದಿದ್ದರು. ಇದರ ನಡುವೆ ಅವರ ವಿದ್ಯಾರ್ಥಿನಿಯಾದ ನಂದಿನಿಯನ್ನು ಅವರೇ ಆಯ್ಕೆ ಮಾಡಿ, ಪಿ.ಎಚ್.ಡಿ ಕೊಡಿಸಿ ತಂದು ಕುರಿಸಿದರು. ರೀಡರ್ ಆಗಲು ಅರ್ಹತೆ ಇಲ್ಲದವರನ್ನು ಆಯ್ಕೆ ಮಾಡಿರುವುದನ್ನು ಚರ್ಚಿಸಿ, ಅದೇ ವಿಭಾಗದ ವಿಶ್ವನಾಥ್ ಎಂಬವರು, ಕೋರ್ಟಿಗೆ ಹೋಗಿದ್ದರು. ಕೋರ್ಟ್ ಎಂದ ಮೇಲೆ ಅದು ಒಂದೆರಡು ವರ್ಷಕ್ಕೆ ಮುಗಿಯುವಂತೆ ಕಾಣಲಿಲ್ಲ ಅದು ಮುಂದುವರೆಸಲು ಆಗದೇ ಅವರು ಅದನ್ನು ಹಿಂದಕ್ಕೆ ಪಡೆಯುವಂತೆ ಮಾಡಲಾಯಿತು.ಅಲ್ಲಿಯೂ ಜಾತಿಯತೆ ನಡೆಯಿತೆಂಬುದನ್ನು ನೀವು ಒಪ್ಪಲೇಬೇಕು. ನಮ್ಮ ಇಂದಿನ ಸಮಾಜದಲ್ಲಿ ಕೊಲೆಗಾರನಾಗಿದ್ದರೂ, ನಮ್ಮ ಜಾತಿಯವೆನೆಂದೊಡನೆ ಅವನನ್ನು ಕ್ಷಮಿಸುವ, ಅಥವಾ ತಪ್ಪಿತಸ್ಥನಲ್ಲನೆನ್ನುವ ಮನಸ್ಥಿತಿ ಬಹಳಷ್ಟು ಮಂದಿಗಿದೆ.ಅದರಂತೆಯೇ ನಮ್ಮ ಜಾತಿಯಲ್ಲಿಯೇ ಒಡಕಿದ್ದರೇ ಬೇರೆಯವರು ನಮ್ಮ ಮೇಲೆ ಸವಾರಿ ಮಾಡುತ್ತಾರೆಂಬುದನ್ನು ಅರಿತ ಇಬ್ಬರೂ ರಾಜಿಯಾದರು. ಒಮ್ಮೆಗೆ ನಂದಿನಿಯವರ ಪ್ರೊಬೆಶನರಿ ಮುಗಿದ ತಕ್ಷಣ ಹಿಂದಿನಿಂದ ಆಳ್ವಿಕೆಯಲ್ಲಿದ್ದ ಸೋಮಶೇಖರ್ ವಿರುದ್ದ ಹೋಗಿ ಅವರ ಚೇರ್ ಪದವಿಯನ್ನು ಕಬಳಿಸಿದರು.ಅಲ್ಲಿಂದ ಶುರುವಾದ ಇವರ ಕಥೆಗಳು ರಣರಂಗವಾಗಿದ್ದು ಬಹಳ ಕಡಿಮೆ ಸಮಯದಲ್ಲಿ. ಅವರಿಗೆ ಅಷ್ಟು ವರ್ಷದಿಂದ ಇದ್ದ ಕುರ್ಚಿ ಹೋಯಿತಲ್ಲಾ ಎಂದು ಚಿಂತೆ. ಇವರಿಗೆ ನನ್ನ ಅಧಿಕಾರ ತೋರಿಸಬೇಕೆನ್ನುವ ಹಟ. ಸಣ್ಣ ಪುಟ್ಟ ವಿಷಯಗಳಿಗೆ ಕುಲ ಸಚಿವರ ಬಳಿಗೆ ಹೋಗುವುದು, ಕೋರ್ಟಿಗೆ ಹೋಗುವುದು, ಜಾತಿ ನಿಂದನೆ ಎನ್ನುವುದು, ಮಹಿಳೆಯ ಮೇಲೆ ದೌರ್ಜನ್ಯವೆನ್ನುವುದು, ಹೀಗೆ ಇವರಿಬ್ಬರೂ ಸೇರಿ ತಯಾರಿಸಿದ ಪಟ್ಟಿಗಳ ರಿಪೋರ್ಟ್ ಪುಟಗಳ ಸಂಖ್ಯೆ ೧೩೦. ನೂರ ಮೂವತ್ತು ಪುಟಗಳಿಗೆ ಒಂದು ಪಿ.ಎಚ್.ಡಿ ಪ್ರಬಂದ ಬರೆಯಬಹುದಿತ್ತು. ಈ ರಿಪೋರ್ಟ್ ತಯಾರಿಸಲು ಇವರ ಸಮಯ ಎಷ್ಟು ವ್ಯಯಿಸಿರಬಹುದು ನೀವೆ ಯೋಚಿಸಿ. ೫೦-೬೦ ಸಾವಿರ ರೂಪಾಯಿ ಸಂಬಳ ಪಡೆದು ಇವರು ಮಾಡುತ್ತಿರುವ ಕೆಲಸ ಇದು.ಇದನ್ನು ಬರೆಯಲು ಇವರು ತಮ್ಮ ಕೈಕೆಳಗಿರುವ ಪಿ.ಎಚ್.ಡಿ ವಿದ್ಯಾರ್ಥಿಗಳನ್ನು ಬಳಸಿಕೊಂಡಿದ್ದಾರೆ, ಹಲವು ದೂರುಗಳನ್ನು ಕೊಡಿಸಿದ್ದಾರೆ, ವಿದ್ಯಾರ್ಥಿಗಳ ಸಹಿ ಸಂಗ್ರಹ ಮಾಡಿದ್ದಾರೆ. ಹೆದರಿಸಿ ಬೆದರಿದ್ದಾರೆ.ಯಾವ ವಿದ್ಯಾರ್ಥಿಯು ತನ್ನ ವಿದ್ಯಾಬ್ಯಾಸ ಕೆಡಿಸಿಕೊಳ್ಳಲು ಬಯಸುವುದಿಲ್ಲ, ಅವರು ಹೇಳಿದಂತೆ ಪತ್ರ ಬರೆದಿದ್ದಾರೆ. ಅವರ ಜೊತೆ ಹೋಗಿ ಪೋಲಿಸ್ ಮುಂದೆ ನಿಂತಿದ್ದಾರೆ. ಕೆಲವು ವಿದ್ಯಾರ್ಥಿಗಳು ಇದನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.

ಮೊನ್ನೆ ಶನಿವಾರ ನನ್ನ ಪಿಎಚ್.ಡಿ ಕೆಲಸಕ್ಕೆಂದು ಅಲ್ಲಿನ ಲ್ಯಾಬ್ ಗೆ ಹೋದಾಗ ನಡೆದ ಕಥೆಯನ್ನು ಕೇಳಿ. ಎರಡನೇ ಬಾರಿಗೆ, ನಂದಿನಿ ಮುಖ್ಯಸ್ಥೆಯಾಗಿದ್ದಾರೆ, ಆದ್ದರಿಂದ ಅವರು ಸ್ಟಾಕ್ ಚೆಕಿಂಗ್ ಮಾಡಲು ಹೊರಟಿದ್ದಾರೆ, ಆ ಸಮಯಕ್ಕೆ ಸರಿಯಾಗಿ, ಸೋಮಶೇಖರ್ ವಿದ್ಯಾರ್ಥಿಗಳು ಅಸಭ್ಯವಾಗಿ ವರ್ತಿಸಿದ್ದಾರೆ. ಸೋಮಶೇಖರ್ ಅದನ್ನು ಕೇಳಲು ಬರುವ ಸಮಯಕ್ಕೆ ನಡೆದ ವಾಗ್ವಾದ ಹೀಗಿದೆ, ನಂದಿನಿ ನೀನು ಮಾಡುತ್ತಾ ಇರುವುದು ಸರಿಯಿಲ್ಲ, ಸ್ವಲ್ಪ ನೋಡಿ ನಡೆದುಕೊ. ಅದಕ್ಕೆ ಪ್ರತ್ಯುತ್ತರ, ನೀನು ಅರಚುಬೇಡ, ನನಗೂ ನಿನಗಿಂತ ಜೋರಾಗಿ ಕಿರುಚೋಕೆ ಬರುತ್ತದೆ. ಇವೆಲ್ಲಾ ಅವರು ಬಳಸಿರುವ ಪದಗಳು. ಅದು ವಿಭಾಗದ ಕಾರಿಡಾರ್ ನಲ್ಲಿ ನಿಂತು. ವಿದ್ಯಾರ್ಥಿಗಳ ಸಮ್ಮುಖದಲ್ಲಿ. ಇಲ್ಲಿ ನಿಮಗೆ ಒಂದು ಬಹುಮುಖ್ಯ ಸಂಗತಿ ಹೇಳಲೇ ಬೇಕಾಗುತ್ತದೆ, ಸಾಯಿನಾಥ್ ಎಂಬ ಮನುಷ್ಯ ನಂದಿನಿಯವರ ಪತಿದೇವರು, ನಮ್ಮಲ್ಲಿ ಹೆಂಡತಿ ಅಧಿಕಾರದಲ್ಲಿದ್ದರೆ ಗಂಡ ಮೂಗು ತೂರಿಸುವುದು ರಾಜಕೀಯದಲ್ಲಿ ಸಾಮಾನ್ಯ ಆದರೇ, ಒಂದು ವಿವಿ ಮಟ್ಟದಲ್ಲಿ ಇದು ನಡೆಯುತ್ತದೆಯೆಂದರೇ ನಮ್ಮ ವ್ಯವಸ್ಥೆಯ ಬಗ್ಗೆ ವಾಕರಿಕೆ ಬರುತ್ತದೆ. ಇವರು, ವಿಭಾಗಕ್ಕೆ ಬರುವುದು, ಅವರ ಹೆಂಡತಿಯ ರೂಮಿನಲ್ಲಿ ಗಂಟೆಗಟ್ಟಲೇ ಕೂರುವುದು, ಇದು ದಿನ ನಿತ್ಯದ ಚಟುವಟಿಕೆ. ಬರುವುದು ತಪ್ಪಲ್ಲ, ಆದರೇ ಸದಾ ಅಲ್ಲೇ ಕುಳಿತಿರುವುದು ಅವಶ್ಯಕತೆಯೇ? ಅದರಂತೆಯೇ, ನಾನು ನಿಮಗೆ ನಮ್ಮ ವಿಭಾಗದಲ್ಲಿದ್ದ ಕೆಲವು ಪ್ರೊಫೆಸರ್ ಎಂಬ ಮಹಾಶಯರ ಬಗ್ಗೆಯೂ ತಿಳಿಸಿಕೊಡಬೇಕಾಗುತ್ತದೆ. ಹುಡುಗಿಯರ ಮೈ ಮುಟ್ಟಿ, ಅವರ ಮೈ ಸವರಿ ಪಾಠ ಮಾಡುವ ಒಬ್ಬ ಪ್ರೋಫೆಸರ್ ಇದ್ದರು. ಹುಡುಗರನ್ನು ಆದಷ್ಟೂ ಗೇಲಿ ಮಾಡುತ್ತಿದ್ದ ಮಹಾಶಯರವರು. ಹುಡುಗರನ್ನು ಬೈಯ್ಯುವುದು, ಅವರನ್ನು ಉಗಿಯುವುದು, ಉತ್ತರ ಪತ್ರಿಕೆಯಲ್ಲಿ ತಪ್ಪಾಗಿ ಬರೆದಿದ್ದರೇ ಅದನ್ನು ಎಲ್ಲರ ಮುಂದೆ ಓದಿ ಹಂಗಿಸುವುದು, ಹೀಗೆ ಅವರ ತರಗತಿಯಲ್ಲಿ ಕುಳಿತುಕೊಳ್ಳುವುದಕ್ಕೆ ಬಹಳ ಮುಜುಗರಪಡಬೇಕಾಗಿತ್ತು. ಅದರಂತೆಯೇ ಪಿ.ಎಚ್.ಡಿ ವಿದ್ಯಾರ್ಥಿಗಳು ಇವರ ವಿದ್ಯಾರ್ಥಿಗಳು ಅವರ ವಿದ್ಯಾರ್ಥಿಗಳ ನಡುವೆ ಕೂಡ ಮಾತುಕತೆ ನಡೆಯದಂತೆ ಹೇಳಿದ್ದಾರೆ.ಸರ್ವರಿಗೂ ಶಿಕ್ಷಕರಾಗಬೇಕಿದ್ದ ಇವರುಗಳು, ಇರುವ ಹತ್ತು ವಿದ್ಯಾರ್ಥಿಗಳನ್ನು ಬೇರ್ಪಡಿಸಿ ಆಳುತ್ತಿರುವುದು ದುರದೃಷ್ಟಕರ. ಪತ್ರ ಬರೆಸುವುದು, ಅದನ್ನು ಪೋಸ್ಟ್ ಮಾಡಿಸುವುದು. ಇದು ಇದೊಂದೆ ಯುನಿವರ್ಸಿಟಿ ಕಥೆಯಲ್ಲ, ಕುವೆಂಪು, ಮೈಸೂರು ವಿವಿಯಲ್ಲಿಯೂ ಇದೆ.

ಇದಕ್ಕೆಲ್ಲಾ ನ್ಯಾಯ ಸಿಗುವುದು ಎಂದು? ಅಧಿಕಾರದ ಮೋಹದಲ್ಲಿ, ವಿದ್ಯಾರ್ಥಿಗಳನ್ನು ದುರುಪಯೋಗ ಪಡಿಸಿಕೊಂಡು, ಮಾತೆತ್ತಿದರೆ ನಿನ್ನ ಪಿ.ಎಚ್.ಡಿ ಮಣ್ಣು ಪಾಲಾಗುತ್ತದೆ, ನಿನ್ನ ಮಾರ್ಕ್ಸ್ ಹೋಗುತ್ತದೆ, ನಿನ್ನ ಡಿಗ್ರಿ ಹೋಗುತ್ತದೆ ಎಂದು ಹೆದರಿಸಿದಾಗ ವಿದ್ಯಾರ್ಥಿಗಳು ಹೆದರಿ ಅವರಿಗೆ ಬೇಕಾದ ಪತ್ರವನ್ನು ಬರೆಯುತ್ತಾರೆ, ದೂರನ್ನು ನೀಡುತ್ತಾರೆ, ಅದನ್ನು ಯಾರು ಗಂಬೀರವಾಗಿ ಸ್ವೀಕರಿಸುವ ಅವಶ್ಯಕತೆಯಿರುವುದಿಲ್ಲ.ಜಾತಿಯತೆಯ ಹೆಸರಿನಲ್ಲಿ ದೂರು ನೀಡಿಸುವುದು, ಜಾತಿ ನಿಂದನೆ ಮಾಡಿದ ಎಂದು ದೂರು ನೀಡುವುದು, ಹುಡುಗಿಯರಿಗೆ ಲೈಂಗಿಕ ಕಿರುಕುಳ ನೀಡುತಿದ್ದಾರೆಂದು ದೂರು ನೀಡುವುದು ಹೀಗೆ, ನ್ಯಾಯ ನೀಡಬೇಕಾದವರು ಅದನ್ನು ದುರುಪಯೋಗ ಪಡಿಸಿಕೊಂಡು, ನಿಜಕ್ಕೂ ಶೋಷಿತ ಹೆಣ್ಣು ಮಕ್ಕಳನ್ನು ಅನುಮಾನದಿಂದ ಕಾಣುವಂತಾಗಿದೆ. ತಮ್ಮ ಜಾತಿಯವರನ್ನೇ ಇಟ್ಟುಕೊಂಡು ಅಧಿಕಾರ ನಡೆಸುವುದು, ಸಂಶೋಧನೆಯ ಗಂಧವೇ ತಿಳಿಯದ ಮೂರ್ಖ ಶೀಖಾಮಣಿಗಳಿಗೂ ಪಿ.ಎಚ್.ಡಿ ಕೊಡಿಸುವುದು, ಇರುವ ಒಂದೊಂದು ಪ್ರಾಜೆಕ್ಟ್ ನಲ್ಲಿನ ಡಾಟಾ ಬಳಸಿಕೊಂಡೂ ೨೦-೩೦ ಪೇಪರ್ ಮಾಡುವುದು, ಐದಾರು ಡಾಕ್ಟರೇಟ್ ಕೊಡಿಸುವುದು, ಹಿಂದಿನ ವಿದ್ಯಾರ್ಥಿಯ ಪ್ರಬಂದವನ್ನೇ ಸ್ವಲ್ಪ ಅದುಲು ಬದಲು ಮಾಡಿ ಒಪ್ಪಿಸುವುದು. ಒಂದಾ ಎರಡಾ, ಇವಕ್ಕೆಲ್ಲಾ ಕೊನೆಯೊಂದಿದೆಯಾ? ಇದರ ಹಿಂದೆ ಅತಿ ಬುದ್ದಿವಂತರೆನಿಸಿಕೊಂಡ ಬಹಳಷ್ಟು ಜನರ ಕೈವಾಡವಿದೆ, ಸರ್ಕಾರವಿದೆ, ಲೋಕಾಯುಕ್ತರನ್ನೆ ದಡ್ಡರನ್ನಾಗಿಸಿ, ಒಬ್ಬರ ವಿರುದ್ದ ಒಬ್ಬರು ದೂರು ನೀಡಿದ್ದಾರೆಂದರೆ ಅವರ ಕೈಚಳಕ ನಿಮಗೆ ತಿಳಿಯುತ್ತದೆ. ಕಳ್ಳರ ಸಂತೆ ಸಿನೆಮಾದಂತೆ, ಇವರೆಲ್ಲರೂ ಒಂದೇ ಯಾರನ್ನು ಕೊಳೆತು ನಾರುತ್ತಿರುವ ಸಮಾಜದಿಂದ ಪಾರುಮಾಡಲಾಗುವುದಿಲ್ಲ. ನೀವು ಅವರ ವಿರುದ್ದ ಹೋದರೇ ಒಂದು ನೀವು ಹುಚ್ಚರು, ಕೆಲಸಕ್ಕೆ ಬಾರದವರು, ಅಥವಾ ನಕ್ಸಲರು ಎಂದಾರು. ಇಲ್ಲದಿದ್ದರೇ ಜಾತಿಯತೆಯಿಂದ ಬಂದಿದ್ದಾನೆ, ಎನ್ನುವರು. ಜಾತಿ ಧರ್ಮ, ಮಹಿಳಾ ಸಬಲೀಕರಣದ ಹೆಸರಿನಲ್ಲಿ ನಡೆಯುತ್ತಿರುವ ಅನಾಚಾರಗಳು ಒಂದೆರಡಲ್ಲ. ಜಗತ್ತು ಪ್ರಳಯ, ತಾಪಮಾನವೆಂದು ಬೊಬ್ಬೆ ಹೊಡೆಯುತ್ತಿರುವಾಗ ಇವರುಗಳು ಹೀಗೆ ಲಜ್ಜೆ ಗೆಟ್ಟು ಕುಣೀಯುತ್ತಿರುವುದನ್ನು ತಡೆಯುವುದು ಹೇಗೆ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕನಸು-ನನಸಿನ ಪಯಣದ ಹಾದಿಯಲಿ ಬದ್ಧತೆ, ಜವಬ್ದಾರಿ, ಸೋಲಿನ ಭೀತಿ!!!

  ೨೯.೦೮.೨೦೨೪ ನಾವು ನಮ್ಮ ಕನಸುಗಳನ್ನು, ಆಸೆಗಳನ್ನು, ಬಯಕೆಗಳನ್ನು ಬೇರೆಯವರೊಂದಿಗೆ ಏಕೆ ಹಂಚಿಕೊಳ್ಳಬೇಕು? ಇದರ ಕುರಿತು ಸ್ವಲ್ಪ ಚರ್ಚಿಸೋಣ. ಮುಕ್ತವಾಗಿ. ಪ್ರತಿಯೊ...