ಸುತ್ತಾಡುವುದು ಹುಟ್ಟಿನಿಂದಲೇ ನಮಗೆ ಬಂದಿರುವುದೋ ಅಥವಾ ಕಳೆದ ಜನುಮದಿಂದಲೂ ನಮ್ಮೊಂದಿಗಿರುಬಹುದೇ? ಬಹುಷಃ ನಮ್ಮ ಪೂರ್ವಜರ ಅನೇಕ ಗುಣಗಳು ನಮ್ಮಲ್ಲೇ ನಾಟಿರುತ್ತವೆ. ಇಂಥಹುದರಲ್ಲಿ, ಸುತ್ತಾಡುವುದು ಒಂದು. ಜನರು ಪ್ರಪಂಚ ಸುತ್ತುವುದರಿಂದ ಜ್ನಾನ ಬರುತ್ತದೆಂದು ಅದೆಷ್ಟೇ ವಾದಿಸಿದರೂ ಕೇವಲ ಸುತ್ತುವುದರಿಂದ ಅಥವಾ ಒಂದು ಊರಿಗೆ ಹೋದ ತಕ್ಷಣ ಆ ಊರಿನ ಅಲ್ಲಿನ ಜನತೆಯ ಬಗೆಗೆ ತಿಳಿದಿದ್ದೇವೆಂಬುದನ್ನು ಒಪ್ಪಲೂ ಸಾಧ್ಯವಿಲ್ಲ. ಅದೆಷ್ಟೋ ವರ್ಷ ಜೊತೆಗಿದ್ದು, ಜೊತೆಯಲ್ಲಿ ಹುಟ್ಟಿ ಬೆಳೆದ ಅಣ್ಣ ತಮ್ಮಂದಿರನ್ನು, ಅಕ್ಕ ತಂಗಿಯರನ್ನು, ಅಪ್ಪ ಅಮ್ಮಂದಿರನ್ನೇ ಏಕೆ, ಸ್ವತಃ ಹೆಂಡತಿಯನ್ನೇ ಅರಿಯಲಾಗದ ನಾವು ಒಂದೆರಡು ದಿನ ಸುತ್ತಾಡಿದ ಮಟ್ಟಿಗೆ ಬೇರೊಂದು ಊರಿನ ಬಗೆಗೆ ಇಷ್ಟುದ್ದ ಬರೆದು ಅಲ್ಲಿನ ಜನ ಹೀಗೆ, ಅಲ್ಲಿನ ಅದು ಹೀಗೆ ಇದು ಹೀಗೆ ಎನ್ನುವುದು ನನಗೇನೋ ಸಮಂಜಸವೆನಿಸುವುದಿಲ್ಲ. ಅದೇನೆ ಇರಲಿ, ನಾನಿಲ್ಲಿ ನಿಮಗೆ ಹೇಳ ಹೊರಟಿರುವುದು, ಸುತ್ತಾಟವೆಂಬುದು ಕೇವಲ ನಮ್ಮ ಒಂದು ಚಟ, ಮತ್ತು ಕೆಲವರಿಗದು, ಲೋಪ. ಯಾವುದೋ ಸುತ್ತಾಡುವ ಕೆಲಸಕ್ಕೆ ಸೇರಿ ನಾನು ದೇಶ ವಿದೇಶ ಸುತ್ತುತ್ತಿದ್ದೇನೆ, ನನಗೆ ಸುತ್ತಾಡುವುದೆಂದರೆ ಬಲು ಇಷ್ಟದ ಕೆಲಸ ಎನ್ನುವವರು ಬಹಳಷ್ಟು ಮಂದಿ ಸಿಗುತ್ತಾರೆ. ವಾಸ್ತವಕ್ಕೆ ನೋಡಿದರೇ, ಅವರಿಗೆ ಆ ಕೆಲಸ ಸಿಗದೇ ಹೋಗಿದ್ದರೆ? ಸುತ್ತಾಡುತ್ತಿರಲಿಲ್ಲವೇ? ಅದು ಇರಬಹುದು, ಇದು ಸಮಯದ ಕೈ ಗೊಂಬೆ ಎನ್ನುವುದನ್ನು ಬಿಟ್ಟು ಬೇರೇನೂ ಅಲ್ಲ. ಆದರೇ, ನಾನು ಹೇಳ ಹೊರಟಿರುವುದು, ಹುಟ್ಟಿನಿಂದಲೇ, ಅಥವಾ ಬಹಳ ಚಿಕ್ಕಂದಿನಿಂದಲೇ ಸುತ್ತಾಡುವುದನ್ನು ಬೆಳೆಸಿಕೊಂಡು ಬಂದ ನನ್ನಂಥಹ ಹುಟ್ಟು ಸೋಮಾರಿಗಳ ಬಗೆಗೆ. ಸುತ್ತಾಡುವುದು ಸೋಮಾರಿತನವೇ? ನನ್ನ ಪ್ರಕಾರ ಹೌದು ಅದು ಕಟುಸತ್ಯ, ನೀವು ನಂಬಿದರೂ ಸರಿ ಬಿಟ್ಟರೂ ಸರಿ.ನಾನು ನನ್ನ ಪ್ರೈಮರಿ ಸ್ಕೂಲಿನಲ್ಲಿದ್ದಾಗ, ಪ್ರತಿ ಶನಿವಾರ ಸಿಕ್ಕರೇ ಅಜ್ಜಿ ಮನೆಗೆ, ಅಲ್ಲಿಂದ ಸೈಕಲ್ ಹತ್ತಿ, ಹಾರಂಗಿ, ನಿಸರ್ಗ ಧಾಮ, ಕೊಪ್ಪ, ಹೀಗೆ ಎಲ್ಲೆಂದರಲ್ಲಿ ಸುತ್ತಾಡುತ್ತಿದೆ. ನಂತರ ಹೈಸ್ಕೂಲಿಗೆ ಬಂದಾಗ, ಸೈಕಲ್ ಹಿಡಿದು, ದೂರ ದೂರದ ಊರಿಗೆ ಹೋಗಿ ಬಿಡುತ್ತಿದೆ. ವರ್ಷಕ್ಕೊಮ್ಮೆ ದುಡ್ಡು ಜೋಡಿಸಿ ಕೊಂಡು, ಬೆಲೂರು, ಧರ್ಮಸ್ಥಳ, ಸುಬ್ರಹ್ಮಣ್ಯಗಳಿಗೆ ಒಬ್ಬನೇ ಹೋಗಿ ಬರುತ್ತಿದ್ದೆ. ಅದರ ನಡುವೆ ನೆಂಟರ ಮನೆಗಳ ನೆಪದಲ್ಲಿ ಹುಡುಕಿ ಹುಡುಕಿ ಹೋಗುತ್ತಿದೆ.
ಇ ಎಲ್ಲಾ ನನ್ನ ಪ್ರವಾಸಗಳಲ್ಲಿಯೂ ನನಗೆ ಅಕ್ಕರೆ ಇದ್ದದ್ದು ನೆಂಟರ ಮೇಲಲ್ಲ? ಮನೆಯಲ್ಲಿದ್ದರೆ ಬೋರಾಗುತ್ತದೆ, ಅಪ್ಪ ಬೈಯ್ಯುತ್ತಾರೆ, ಇಲ್ಲವೆ ಏನಾದರು ಕೆಲಸ ಹೇಳುತ್ತಾರೆ, ಎಂಬುದರಿಂದ ಹೋಗುತ್ತಿದೆ. ನೆಂಟರ ಮನೆಗೆ ಊಟದ ಸಮಯ ಬಿಟ್ಟರೇ ಮಿಕ್ಕ ಸಮಯ ಮತ್ತೆ ಸುತ್ತಾಡೂವುದರಲ್ಲಿಯೇ ಕಳೆಯುತ್ತಿತ್ತು. ಈಗಲೂ ಅಷ್ಟೇ ನಾನು ಮತ್ತು ನನ್ನ ಸ್ನೇಹಿತರು ತಿಂಗಳಿಗೊಮ್ಮೆಯಾದರೂ ಒಂದು ಚಾರಣ, ಅಥವಾ ಒಂದು ಲಾಂಗ್ ರೈಡ್ ಹೋಗಲೇ ಬೇಕೆಂದು ಹೊರಡುತ್ತೇವೆ. ನಾವು ಅಲ್ಲಿ ನೋಡಿ ಅದರ ಬಗ್ಗೆ ಬರೆದು ಅಥವಾ ಅನುಭವಿಸುವುದು ಅಷ್ಟಕ್ಕಷ್ಟೇ. ಸುಮ್ಮನೆ ಮನೆಯಲ್ಲಿ ಕುಳಿತಿರಲಾಗದೇ ಅಲ್ಲಿಗೆ ಹೋಗಿ ಬರಲು, ಹೋಗುವ ಮುನ್ನ ಸಮಯ ಹರಣ ಮಾಡುವುದು ಹೋಗಿ ಬಂದಮೇಲೆ, ಮತ್ತೆ ಸಮಯ ಹರಣ ಮಾಡುವುದು. ಹೋಗುವು ಮುನ್ನ ತಯಾರಿ ಕುರಿತು ಮಾತುಕತೆ, ಹೋಗಿ ಬಂದ ಮೇಲೆ, ಅದರ ಕುರಿತು ಚರ್ಚೆ, ಒಟ್ಟಾರೆಸಮಯ ಕೊಲ್ಲುವುದನ್ನು ಬಿಟ್ಟರೆ ಮಿಕ್ಕಾವುದು ನನ್ನಲ್ಲಿ ಕಂಡಿಲ್ಲ. ಅಂದರೇ ಪ್ರವಾಸ ಹೋಗುವುದು ತಪ್ಪಾ? ತಪ್ಪಿಲ್ಲವೇ ಇಲ್ಲ ಆದರೇ ಅದಕ್ಕೊಂದು ಉದ್ದೇಶವಿರಬೇಕು. ಸುಮ್ಮನೆ ಸಮಯ ವ್ಯರ್ಥ ಮಾಡುವುದೆ ಉದ್ದೇಶವಾಗಿರಬಾರದು, ಅಥವಾ ಕೇವಲ ಅಲ್ಲಿ ಹೋಗಿ ಮೋಜು ಮಾಡಿ ಬರುವುದೇ ನಮ್ಮಯ ಕೆಲಸವಾದರೇ ಅದು ಪ್ರವಾಸವೂ ಅಲ್ಲ ಅದರಿಂದ ನಾಗರೀಕ ಸಮಾಜಕ್ಕೆ ಒಳಿತು ಇಲ್ಲ. ನಾವು ಹೋಗಿ ನೋಡಿ ಬಂದಿರುವುದನ್ನು, ದಾಖಲಿಸಿಕೊಂಡು ಸಮಾಜಕ್ಕೆ ಕೊಟ್ಟರೆ ಮತ್ತೆ ನಾಲ್ವರಿಗೆ ಅದರ ಬಗೆಗೆ ಮಾಹಿತಿ ಸಿಕ್ಕಿ ಉಪಯೋಗವಾಗ ಬಹುದು, ಆದರೆ ಇತ್ತೀಚಿನ ದಿನಗಳಲ್ಲಿ ಅನಾಹುತವೇ ಹೆಚ್ಚಾಗುತ್ತಿವೆ. ಚಾರಣದ ಹೆಸರಿನಲ್ಲಿ ಹೋದವರು, ಕುಡಿದು ಸೇದಿ, ಅಲ್ಲಿದ್ದ ಪರಿಸರವನ್ನು ಸರ್ವನಾಶದತ್ತ ತಲ್ಲಿದರೇ, ಇನ್ನೂ ಪ್ರವಾಸಿ ತಾಣಗಳು, ಶಯನಗೃಹಗಳಾಗಿವೆ. ಕೆಲವೊಂದು ಸ್ಥಳಗಳಲ್ಲಿ, ದಾರಿಯಲ್ಲಿಯೇ ನಿರೋಧ್ ಗಳು ಬಿದ್ದಿರುತ್ತವೆ, ಕುಡಿದು ಒಡೆದ ಗಾಜಿನ ಚೂರುಗಳು, ಸಿಗರೇಟ್ ಪ್ಯಾಕ್ ಗಳು, ಪ್ರವಾಸಿ ತಾಣ ಎನ್ನಲೂ ಹಿಂಜರಿಕೆಯಾಗುವಷ್ಟು ಹಾಳು ಮಾಡಿರುತ್ತಾರೆ.
ನಾನು ಬಹಳಷ್ಟು ಬಾರಿ, ಇದಕ್ಕೆಲ್ಲಾ ಪರಿಹಾರ ಬೇಡವೇ ಎಂದು ಆಲೋಚಿಸಿದ್ದೇನೆ, ಉತ್ತರ ಸಿಗುವುದೆಲ್ಲಿ? ನಾವು ಬದುಕುತ್ತಿರುವ ಈ ಕೊಳಕು ವ್ಯವಸ್ಥೆಯನ್ನು ಸರಿ ದಾರಿಗೆ ತರುವ ಮಾರ್ಗ ಒಂದು ಇದೆಯಾ?ಇದ್ದರೇ ಅದು ಯಾವುದು?ನಮ್ಮಂಥಹ ಹುಚ್ಚು ಮನಸ್ಸಿನ ಮೂರ್ಖರು ಸುತ್ತಾಡಿ ಅಲ್ಲಿರುವ ಲೋಪ ದೋಷಗಳನ್ನು ನಮ್ಮೊಳಗೆ ನಮ್ಮದೇ ಆದ ಸೀಮಿತ ವರ್ಗದಲ್ಲಿ ಚರ್ಚಿಸಿ ಕೆಲವೊಮ್ಮೆ ಕೊರಗಿ ನಂತರ ಬದಲಾಯಿಸಲಾಗುವುದಿಲ್ಲವೆಂದು ಅಥವ ಅದರ ಬಗೆಗೆ ಚರ್ಚಿಸಿ ನಮ್ಮ ಸಮಯ ಹರಣ ಮಾಡಿಕೊಳ್ಳುವುದು ಬೇಡವೆಂದು ಕುಳಿತುಬಿಡುತ್ತೇವೆ. ಪ್ರತಿಯೊಂದು ಚಳುವಳಿಯ ಹಿಂದೆ ಹೋರಾಟದ ಹಿಂದೆ ಇಂಥಹ ಬೇಸತ್ತ, ಬಳಲಿದ ನೂರಾರು ಮನಸ್ಸುಗಳು ಕೆಲಸ ಮಾಡಿರುತ್ತವೆ. ಅಂದರೆ ನಾಳೆ ನಾವೂ ಕೂಡ ಅದೇ ರೀತಿ ಚಳುವಳಿ ಮಾಡುತ್ತೇವೆ! ನನಗೆ ಇದರಲ್ಲಿ ಅಲ್ಪ ಸ್ವಲ್ಪವೂ ನಂಬಿಕೆ ಇಲ್ಲ. ನಾವೆಂದು ಚಳುವಳಿ ಮಾಡುವುದಿಲ್ಲ, ಮಾಡುವುದಕ್ಕೆ ವಿಷಯಗಳೇ ಇಲ್ಲ, ನಾವು ಯಾರ ವಿರುದ್ದ ಹೋರಾಡಬೇಕೆಂಬುದೇ ದೊಡ್ಡ ಸಮಸ್ಯೆ. ಅದೇನೆ ಇರಲಿ, ಈಗ ಮಾತು ಬದಲಾಯಿಸುವುದು ಬೇಡ, ನಾನು ಪರ್ಯಟಣೆಯ ಬಗೆಗೆ ಮಾತನಾಡುತ್ತಿದ್ದೆನೆ. ಅದರ ಬಗ್ಗೆ ಕೆಲವು ಆಶ್ಚರ್ಯಕರ ಸಂಗತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕು. ನಾನು, ಬಹಳಷ್ಟು ಬಾರಿ ಬಸ್ಸಿನಲ್ಲಿ, ಬೈಕಿನಲ್ಲಿ, ಮತ್ತು ಚಾರಣದ ಹೆಸರಿನಲ್ಲಿ ಕಾಲ್ನಡಿಗೆಯಲ್ಲಿ ಸುತ್ತಾಡಿದ್ದೇನೆ. ಕೆಲಸದ ನಿಮಿತ್ತ ಹಲವಾರು ಊರುಗಳಿಗೆ ಹೋದಾಗ ನಡೆದ ಮತ್ತು ನಡೆಯುತ್ತಿರುವ ವಿಷಯಗಳು ಬಹಳಷ್ಟು ಬಾರಿ ಬೇಸರ ತರಿಸುತ್ತವೆ. ಇದಕ್ಕೆ, ಸೂಕ್ತ ಉದಾಹರಣೆ, ದಕ್ಷಿಣ ಕನ್ನಡ ಜಿಲ್ಲೆಗೆ ಒಮ್ಮೆ ಬೈಕಿನಲ್ಲಿ ನಾವು ಹೋಗಿ ಬಂದದ್ದು. ಸುಬ್ರಹ್ಮಣ್ಯ, ಧರ್ಮಸ್ಥಳ, ಸುತ್ತಾಡಿ ಬರಲೆಂದು ಬೈಕಿನಲ್ಲಿ ಹೋದಾಗ ಅಲ್ಲೇ ಇರುವ ಕೆಲವು ಜಲಪಾತಗಳನ್ನು ನೋಡಿ ಬರುವಂತೆ ನಿರ್ಧರಿಸಿದೆವು. ಅಲ್ಲಿರುವ ಸ್ಥಳಿಯರಿಗೆ ಆ ಸ್ಥಳಗಳ ಬಗ್ಗೆ ಮಾಹಿತಿಯೇ ಇರಲಿಲ್ಲ. ಆದರೇ ನಾವು ಮಾತನಾಡಿಸಿದ ಪ್ರತಿಯೊಬ್ಬನೂ ಬೆಂಗಳೂರಿನ ಬಗ್ಗೆ ಬಹಳಷ್ಟು ತಿಳಿದುಕೊಂಡಿದಾರೆಂಬುದು ನಿಜಕ್ಕೂ ವಿಷಾದ. ಜನಕ್ಕೆ ಪಟ್ಟಣದೆಡೆಗೆ ಹೆಚ್ಚುತ್ತಿರುವ ಮೋಹ ಹೇಳತೀರದು. ಅಲ್ಲಿರುವ ವಿಷಯಗಳ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ. ವಸ್ತು ಪ್ರಧಾನ ಜೀವನದತ್ತ ಹೆಚ್ಚು ಒಲವು ತೋರುತಿದ್ದಾರೆ. ಅವರು ಒಳ್ಳೆಯ ಮೊಬೈಲ್ ಬಳಸುವುದು, ಡಿವಿಡಿ, ಐಪೋಡ್ ಬೇಡವೆಂದು ನಾನು ಹೇಳುವುದಿಲ್ಲ. ಆದರೆ, ಕನಿಷ್ಟ ಊರಿನಿಂದ ಹತ್ತಾರು ಮೈಲಿಗಳಲ್ಲಿರುವ ವಿಸ್ಮಯ ಸ್ಥಳಗಳ ಬಗೆಗೆ ತಿಳಿದಿರುವುದಿಲ್ಲ ಇದು ನಿಜಕ್ಕೂ ಶೋಚನಿಯ. ಇದಕ್ಕೆ ಕಾರಣ ಕೇವಲ ಉಢಾಫೆತನ ಮಾತ್ರವಲ್ಲ ಅಲ್ಲಿನ ಜನರ ಪೈಕಿ ಹೆಚ್ಚು ಜನರು ಕೇರಳದಿಂದ ಬಂದವರು. ನಮ್ಮಲ್ಲಿ ಅದೆಷ್ಟೇ ವರ್ಷ ಒಂದು ಸ್ಥಳದಲ್ಲಿ ಬೆಳೆದರೂ ಜೀವಿಸಿದರೂ ಕೂಡ ನಮ್ಮ ತಾತನೋ ಮುತ್ತಾತನ ಊರನ್ನು ನೆನೆದು ಹೆಮ್ಮೆ ಪಡುವುದೇ ಹೆಚ್ಚು. ಇರುವ ಭೂಮಿಯನ್ನು ಪ್ರೀತಿಸುವುದನ್ನು ಕಲಿಯಲೇ ಇಲ್ಲ. ಕರ್ನಾಟಕದಲ್ಲಿ ೩೦-೪೦ ವರ್ಷ ಬದುಕಿದ್ದರೂ, ಕನ್ನಡ ಮಾತನಾಡಲು ಹಿಂಜರಿಯುತ್ತಾರೆ. ಎಂಥಹ ವಿಪರ್ಯಾಸವೆನಿಸುತ್ತದೆ. ದಕ್ಷಿಣ ಕನ್ನಡ ಜಿಲ್ಲೆ, ನಾವು ತಿಳಿದಂತೆ ಶಿಕ್ಷಣದಲ್ಲಿ ಮುಂದುವರೆದಿದೆ ಎನ್ನುವುದನ್ನು ಬಿಟ್ಟರೆ, ಅತಿ ಹೆಚ್ಚು ಸಮಸ್ಯೆಗಳು ಕಾಣುವುದು ಇಲ್ಲೆ. ಮೊದಲನೆಯದು ಭಾಷೆಯ ತಾರತಮ್ಯ, ಕನ್ನಡ,, ತುಳು, ಕೊಂಕಣಿ, ಮಲಯಾಳಂ, ಹೀಗೆ ನಾಲ್ಕಾರು ಭಾಷೆಗಳು ಸೇರಿ ಕನ್ನಡದ ಸೊಬಗು ಸಿಗುವುದೇ ಇಲ್ಲ. ಎರಡನೆಯದಾಗಿ, ಧರ್ಮ, ಕ್ರೈಸ್ತ, ಮುಸ್ಲಿಂ, ಹಿಂದು ಧರ್ಮಗಳ ಪೈಪೋಟಿ ಎಷ್ಟಿದೆಯೆಂದರೇ ಪ್ರತಿಯೊಂದು ಊರನಲ್ಲಿಯೂ ಅವರವರ ಧರ್ಮದ ಭಾವುಟಗಳು, ಬ್ಯಾನರ್ ಗಳು, ಪೋಸ್ಟರಗಳು, ರಾರಾಜಿಸುತ್ತಿರುತ್ತವೆ. ಅದು ಅಲ್ಲದೇ ಯಾವ ಕ್ಷಣದಲ್ಲಿ ಬೇಕಾದರು ಧರ್ಮೀಯ ಗಲಭೆಗಳು ಆಗಬಹುದು. ಮೂರನೆಯದಾಗಿ, ಜನರು ನೈಸರ್ಗಿಕ ಸಂಪತ್ತನ್ನು ನುಂಗಿ ನೀರು ಕುಡಿದು ಆಗಿದೆ. ಶುಂಠಿ ಬೆಳೆದು ಭೂಮಿ ನಾಶವಾಗಿದೆ, ರಬ್ಬರ್ ಬೆಳೆಯುತ್ತಾ ಜನರು ಸೋಮಾರಿಗಳಾಗಿದ್ದಾರೆ. ಭತ್ತ ಬೆಳೆಯುವುದನ್ನೇ ಮರೆತು ಕೊಂಡು ತಿನ್ನುತ್ತಿದ್ದಾರೆ. ಇದಕ್ಕೆಲ್ಲಾ ಪರಿಹಾರವೇನು? ಸಮಾಜ ಎತ್ತ ಸಾಗುತ್ತಿದೆ, ನಿಸರ್ಗದ ಗತಿ ಏನು? ಉತ್ತರ ಸಿಗದ ಪ್ರಶ್ನೆಗಳ ಮಹಾಪೂರ ನಮ್ಮೊಂದಿಗಿದೆ.
ಚಾರ್ಮಾಡಿ ಘಾಟಿನಲ್ಲಿ ಬರುವಾಗ ನಿಮಗೆ ಕಣ್ಣಿಗೆ ಬೇಕಾದಷ್ಟು, ಝರಿಗಳು ಸಿಗುತ್ತವೆ, ಕೆಲವೊಂದು ಜಲಪಾತಗಳು ಕಾಣಸಿಗುತ್ತವೆ. ಅವೆಲ್ಲವೂ ರಸ್ತೆಯ ಬದಿಯಲ್ಲಿಯೇ ಇರುವುದರಿಂದ ಅಲ್ಲಿ ಆಟ ಆಡುವುದು ಸರ್ವೇ ಸಾಮಾನ್ಯ ಆದರೇ ಜನರು ತಾವು ಧರಿಸಿರುವ ಉಡುಪುಗಳ ಬಗೆಗೆ ಸ್ವಲ್ಪ ಎಚ್ಚರ ವಹಿಸಬೇಕಾಗುತ್ತದೆ. ಹುಡುಗಿಯರ ಮನ ಬಂದಂತೆ ಪ್ರಚೋದನಕಾರಿ ಉಡುಪುಗಳೊಂದಿಗೆ ರಸ್ತೆಯಲ್ಲಿ ಕುಣಿದು ಕುಪ್ಪಳಿಸುವುದು ಅಷ್ಟು ಸಮಂಜಸವೆನಿಸುವುದಿಲ್ಲ. ಹಾಗೆಯೇ ಮುಂದುವರೆದರೆ, ದಾರಿ ಉದ್ದಕ್ಕೂ ಕುಡಿಯುವುದು, ಮಾಂಸ ಬೇಯಿಸುತ್ತಾ ಇರುವುದು ಕಾಣುತ್ತದೆ. ಈ ಪ್ರದೇಶವು ಅರಣ್ಯ ಇಲಾಖೆಗೆ ಸೇರಿದ್ದು, ಕಾಯ್ದಿಟ್ಟ ಅರಣ್ಯವಾದರೂ ಒಬ್ಬನೇ ಒಬ್ಬ ಅರಣ್ಯ ಇಲಾಖೆ ಸಿಬ್ಬಂದಿ ನಿಮ್ಮ ಕಣ್ಣಿಗೆ ಕಾಣುವುದಿಲ್ಲ. ನಮ್ಮ ಜನರೂ ಕುಡಿದು, ಕುಣಿದು ಮೋಜು ಮಾಡುವುದು, ಅಲ್ಲಿಯೇ ಬೇಯಿಸುವುದು, ಪರಿಸರದಲ್ಲಿ ಎಲ್ಲ ತ್ಯಾಜ್ಯಗಳು ಹಾಕಿ ಗಲೀಜು ಮಾಡುವುದು ಅಸಹ್ಯಕರವೆನಿಸುತ್ತದೆ. ಅವರು ಕುಡಿದರೂ, ಮೋಜು ಮಾಡಿದರೂ ಅಲ್ಲಿನ ಪರಿಸರಕ್ಕೆ ಧಕ್ಕೆ ತರದೇ, ಗಲೀಜು ಮಾಡದೇ, ಪರಿಸರ ಸಂರಕ್ಷಣೆ ಬಗೆಗೆ ಸ್ವಲ್ಪ ಕಾಳಜಿ ವಹಿಸಿದರೇ ಹೆಮ್ಮೆ ಪಡಬಹುದಿತ್ತು. ಕುಡಿದು ದಾರಿಯಲ್ಲಿ ಬಾಟಲಿ ಒಡೆಯುವುದು, ಕೂಗಾಡುವುದು, ಇವೆಲ್ಲವನ್ನು ನೋಡಿದರೆ ನಾಗರೀಕತೆಯ ಬಗೆಗೆ ಜನರಲ್ಲಿರುವ ವಿಶ್ವಾಸ ಅಧಿಕವೆನಿಸುತ್ತದೆ. ಇದೆಲ್ಲವೂ ನಡೆಯುತ್ತಿದ್ದದ್ದು, ಸ್ವಾತಂತ್ರ್ಯ ದಿನಾಚರಣೆಯ ದಿನ. ಅಲ್ಲಿ ಬಂದಿದ್ದ ಪ್ರತಿಯೊಬ್ಬರೂ, ಕಾರಿನಲ್ಲಿ, ಜೀಪಿನಲ್ಲಿ ಅಥವಾ ಬೈಕುಗಳಲ್ಲಿ, ಇಸ್ಟೆಲ್ಲಾ ಇರುವ ವಿದ್ಯಾವಂತ ಮಂದಿ ಏಕೆ ಹೀಗೆ ನಡೆದುಕೊಳ್ಳುತ್ತಾರೆ? ಕೊನೆಯಿಲ್ಲದ ಪ್ರಶ್ನೆ.
ಇದರಂತೆಯೇ, ಕಳೆದ ತಿಂಗಳು, ಬಿಸಿಲೆ ಘಾಟಿನಲ್ಲಿ ಹೋಗುತ್ತಿರುವಾಗ, ರಸ್ತೆಯ ಬದಿಯಲ್ಲಿ ಸಾಲು ಸಾಲು ನಿರೋಧ್ ಗಳು ಬಿದ್ದಿದ್ದವು. ನಾನು ನನ್ನ ಸ್ನೇಹಿತರು ನೋಡಿ ಅಚ್ಚರಿ ಆಯಿತು. ಅಲ್ಲಿ ಬಿದ್ದದ್ದು ಕನಿಷ್ಟ ಎಂದರೂ ೧೦-೧೨ ನಿರೋಧ್ ಗಳು, ಅಂದರೆ ಗುಂಪು ವ್ಯಕ್ತಿಗಳು ಹೋಗಿ ರಸ್ತೆ ಬದಿಯಲ್ಲಿ ಅನಾಗರಿಕತೆಯ ಪ್ರದರ್ಶನ ಮಾಡಿದ್ದಾರೆ. ಮಾಡಿ ಹೋದ ಮಹನೀಯರು ಕನಿಷ್ಟ ಪಕ್ಷ ಕಾಡಿನೊಳಕ್ಕೆ ಹಾಕಿದರೂ ಅಥವಾ ತೆಗೆದುಕೊಂಡು ಹೋದರೂ ಅಲ್ಪ ಸ್ವಲ್ಪ ಸುಧಾರಿಸಿಕೊಳ್ಳಬಹುದು. ಈ ರೀತಿಯ ವರ್ತನೆಯಿಂದಾಗಿ, ಮುಂದೆ ಹೋಗುವ ಜನರಿಗೆ, ಆ ಕಡೆಗೆ ಹೋಗುವುದೇ ಬೇಡವೆನಿಸುತ್ತದೆ ಇಲ್ಲದಿದ್ದರೆ ನಾವು ಈ ರೀತಿ ಯಾಕೆ ಮಾಡಬಾರೆದೆನಿಸುತ್ತದೆ. ಕಾಡಿನಲ್ಲಿ, ಕುಡಿಯುವವರ ಸೇದುವವರ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಇದು ಬಹು ಮುಖ್ಯ ಕಾರಣ. ಇತ್ತೀಚೆಗೆ ಬೆಳಕಿಗೆ ಬರುತ್ತಿರುವ ಅನೇಕ ಪ್ರವಾಸಿ ತಾಣಗಳ ಪರಿಸ್ತಿತಿ ಇಂಥಹದ್ದೇ ಆಗಿದ್ದೆ. ಅದಕ್ಕು ಸೂಕ್ತ ಉದಾಹರೆಣೆಗಳು, ಕೊಡಗಿನ ಅನೇಕಾ ತಾಣಗಳು. ಬಹುಮುಖ್ಯವಾಗಿ, ಮಂದಾಳ ಪಟ್ಟೆ ಅಥವಾ ಗಾಳಿಪಟ ಚಿತ್ರದ ಮುಗಿಲ್ ಪೇಟೆ, ದುಬಾರೆ, ನಿಸರ್ಗಧಾಮ, ಪುಷ್ಪಗಿರಿ, ಮಲ್ಲಲ್ಲಿ ಜಲಪಾತ, ಬಿಸಿಲೆ, ಚಾರ್ಮಾಡಿ, ಕೆಮ್ಮಣ್ಣುಗುಂಡಿ ಇನ್ನು ಹಲವಾರಿವೆ. ಹಾಗೆಯೇ ನಾವು ಸುಳ್ಯಾ ಬಳಿಯಲ್ಲಿದ್ದ ದೇವರಗುಂಡಿ ಜಲಪಾತಕ್ಕೆ ಹೋಗಲು ನೋಡಿದಾಗಲೂ ಅಷ್ಟೇ, ಕೆಲವು ದಿನಗಳ ಹಿಂದೆ ಅಲ್ಲಿ ಯಾರೋ ಇಬ್ಬರು ಬಂದು ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಆ ಊರಿನ ಜನರು ಜಲಪಾತದ ಕಡೆಗೆ ಸುಲಭವಾಗಿ ಬಿಡುತ್ತಿರಲಿಲ್ಲ. ಯಾರೊ ಒಬ್ಬಿಬ್ಬರು ಮಾಡುವ ಇಂಥ ಕೃತ್ಯಗಳಿಂದಾಗಿ ಹಲವಾರು ಜನರಿಗೆ ತೊಂದರೆ ಉಂಟಾಗುತ್ತದೆ. ಕೆಲವು ಸ್ಥಳಗಳಲ್ಲಿ, ಕೊಲೆ ದರೋಡೆ ಇರುವುದು ಬಹಳ ಬೇಸರದ ಸಂಗತಿ. ಹಾಸನದಿಂದ ನಮ್ಮೂರಿಗೆ ಹೋಗುವ ಹಾದಿಯಲ್ಲಿ ಸ್ವಲ್ಪ ಕಾಡು ಇರುವುದರಿಂದ ಸಂಜೆ ಆರರ ನಂತರ ಬೈಕಿನಲ್ಲಿ ಓಡಾಡುವವರನ್ನು ಹಿಡಿದು ಸುಳಿಗೆ ಮಾಡುತ್ತಿದ್ದಾರೆ. ಸಮಾಜ ಎಲ್ಲಿಗೆ ನಮ್ಮನ್ನು ನಡೆಸುತ್ತಿದೆ ಎನಿಸುತ್ತದೆ.
ಇನ್ನೂ ಕೆಲವು ಊರುಗಳಲ್ಲಿ ಹೊರಗಿನವರು ಎಂದರೆ ಒಂದಕ್ಕೆ ಎರಡು ಬೆಲೆ ಕಟ್ಟುತ್ತಾರೆ. ಕಂಪ್ಲಿಗೆ ಹೋದಾಗ, ಮಾಮುಲಿ ಊಟ ಮಾಡಿ ಬರುವಾಗ, ನಾಲ್ಕು ಜನಕ್ಕೆ ೫೦೦ ರೂಪಾಯಿ ಆಗಿತ್ತು. ಜನ ಇಷ್ಟೊಂದು ಮೋಸ ಮಾಡುವುದಾದರೂ ಏಕೆ ಎನಿಸುತ್ತದೆ. ಹೊರಗಿನವರನ್ನು ಸುಳಿದು ಹಣ ಮಾಡುವುದರಿಂದಲೇ ಜನ ಪ್ರವಾಸವೆಂದರೇ ಬೇಡಪ್ಪ ಎಂದು ಬಿಡುತ್ತಾರೆ.ನಾನು ಒಮ್ಮೆ ಸಾವನದುರ್ಗಕ್ಕೆ ಹೋದಾಗ ಅಲ್ಲಿದ್ದ ಒಬ್ಬ ಸಿಬ್ಬಂದಿ ಸಾರ್ ಒಬ್ಬರೇ ಬಂದರೆ ಏನಿರುತ್ತೆ ಇಲ್ಲಿ, ಜೊತೆಯಲ್ಲಿ ಕರೆದುಕೊಂಡು ಬಂದರೇ......! ಎಂದ. ನಾನು ನಿಜಕ್ಕೂ ತಬ್ಬಿಬ್ಬಾದೆ, ಜನರು ಪ್ರವಾಸಿ ತಾಣಕ್ಕೆ ಬರುವ ಉದ್ದೇಶ ಇದೇನಾ? ನೀವು ಸಾವನದುರ್ಗಕ್ಕೆ ಹೋದರೇ, ಅಲ್ಲಿನ ಉದ್ಯಾನವನ ದಾಟಿ ಮುಂದಕ್ಕೆ ಹೋಗವಾಗ ಅಲ್ಲಿನ ಸಿಬ್ಬಂದಿ ಇರುತ್ತಾನೆ, ಅವನು ಯಾವ ತಲೆ ಹಿಡುಕನಿಗೂ ಕಡಿಮೆಯಾಗಿ ವರ್ತಿಸುವುದಿಲ್ಲ. ಇದಕ್ಕೆ ಹೊಂದುವ ಮತ್ತೊಂದು ಸ್ಥಳವೇ ಎಡಕುಮೆರಿ, ಸಕಲೇಶಪುರದಿಂದ ರೈಲು ಹಳಿಗಳಿಂದ ಚಾರಣಕ್ಕೆ ನಡೆದು ಹೋದರೇ, ಸಿಗುವ ಒಂದು ನಿಲ್ದಾಣವೇ ಈ ಎಡುಕುಮೆರಿ, ಅಲ್ಲಿಗೆ ನಾವು ಐದು ಮಂದಿ ಬಹಳ ದಿನದ ಹಿಂದೆ ಹೋಗಿದ್ದೆವು. ಅಲ್ಲೊಬ್ಬ ಕುಮಾರ್ ಎನ್ನುವು ಸಿಬ್ಬಂದಿ ನಮ್ಮ ಜೊತೆಗೆ ನಡೆದುಕೊಂಡದ್ದು, ಮತ್ತೊಂದು ಅಸಹ್ಯಕರದ ಘಟನೆ. ನಗರದಲ್ಲಿರುವ ಬಹಳಷ್ಟು ಮಂದಿಗೆ ಪರಿಸರ ನಿಸರ್ಗವೆಂದರೆ ಅಲ್ಲಿರುವ ಹಸಿರು, ಅಪರೂಪಕ್ಕೊಮ್ಮೆ ಸಿಗುವ ಕೆಲವು ಪ್ರಾಣಿಗಳನ್ನು ಕಂಡು ಉಲ್ಲಾಸಗೊಳ್ಳುತ್ತಾರೆ. ಹೊರಗಡೆ ಹೋದಾಗ ಜೊತೆಗೊಂದು ಸಂಗಾತಿ ಇದ್ದರೇ ಮುಗಿದೇ ಹೋಯಿತು. ನಮ್ಮಲ್ಲಿ ಅನೇಕ ಹೆಂಗಳೆಯರು, ಹೊರಗೆ ಹೋಗುವಾಗ ಜೀನ್ಸ್, ಹಾಕುವುದು ಟಿ-ಶರ್ಟ್ ಧರಿಸುವುದು ಸ್ವಲ್ಪ ಸಾಮಾನ್ಯ. ಸದಾ ಮಾಮೂಲಿ ಉಡುಪಿನವರನ್ನೆ ಕಾಣುವ ಕುಮಾರಣ್ಣನಂತವರು ಅಪರೂಪಕ್ಕೆ ದಿವ್ಯ ಸೌಂದರ್ಯ ಕಂಡಾಗ, ಕಾಮದೇವನನ್ನು ಮೈಮೇಲೆ ತಂದುಕೊಳ್ಳುತ್ತಾರೆ. ನಾವು ತೆಗೆದುಕೊಂಡು ಹೋದ ಕೋಳಿ ಸ್ವಲ್ಪ ವಾಸನೆ ಬಂದು ಇದನ್ನು ಎಸೆಯುವುದು ಉತ್ತಮೆವೆನ್ನುವ ಸಮಯಕ್ಕೆ ನಮ್ಮ ಬಳಿಗೆ ಬಂದ ಕುಮಾರಣ್ಣ, ನಾನು ನಿಮಗೆ ಡೈರೆಕ್ಷನ್ ಮಾಡುತ್ತೇನೆಂದ. ಮೊದಲಿಗೆ ಸ್ವಲ್ಪ ಗೊಂದಲವಾದರೂ, ಅವನು ನಮಗೆ ನೀಡಬಯಸುತ್ತಿರುವುದು ಮಾರ್ಗದರ್ಶನವೆಂದಾಯಿತು. ನಮ್ಮಲ್ಲಿದ್ದ, ಕೋಳಿ, ಸಾಂಬಾರ ಪದಾರ್ಥಗಳು, ಅಕ್ಕಿ ಎಲ್ಲವನ್ನು ಅವನ ಕೈಗೆ ಒಪ್ಪಿಸಿದೆವು, ನಾಳೆ ಬೆಳ್ಳಿಗ್ಗೆ ನಮಗೆ ಅವಾವುದರ ಅವಶ್ಯಕತೆ ಇರಲಿಲ್ಲ. ಹಾಗೆಯೇ, ನಾವು ನಡೆದು ನಡೆದು ಸುಸ್ತಾಗಿದ್ದರಿಂದ, ನಮಗೆ ಕುಡಿಯುವ ಉತ್ಸಾಹವೂ ಇರಲಿಲ್ಲ. ಅವನು ನಮಗೆ ಸಹಾಯ ಮಾಡುತ್ತಿರುವುದರಿಂದ ಅವನಿಗೆ ಸ್ವಲ್ಪ ಕೊಡೋಣವೆಂದುಕೊಂಡೆ. ಮೊದಲಿಗೆ ಸ್ವಲ್ಪ ಕೊಟ್ಟು ಕಳುಹಿಸಿದೆ. ನಂತರ ಬಂದವನು, ಅದನ್ನು ಮತ್ತಾರೋ ಕುಡಿದರು, ಇನ್ನು ಸ್ವಲ್ಪ ಕೊಡಿ ಎಂದ. ನಾನು ಮತ್ತೆ ಕೊಡುವಾಗ, ಇದಕ್ಕೆ ನೀವು ನೀರು ಬೆರೆಸಿದ್ದಿರಿ ಎಂದ ನಾನು ಇಲ್ಲ ಎಂದೆ. ಇದರಲ್ಲಿ ಸ್ವೀಟು ಇದೆ ಎಂದ. ಅಂದರೆ ಪೆಪ್ಸಿ ಬೆರೆಸಿದ್ದೀನಿ ಎಂದಾಯಿತು. ಮೊದಲೆ ಕೋಪದಲ್ಲಿದ್ದ ನಾನು, ರೇಗಲು ಹೋಗದೇ ಅವನನ್ನು ಅಲ್ಲಿಯೇ ನಿಲ್ಲಿಸಿ, ನನ್ನ ಕೈಲಿದ್ದ ಅಷ್ಟೂ ಎಣ್ಣೆಯನ್ನು ಕುಡಿಯುವಂತೆ ಪುಸಲಾಯಿಸಿದೆ. ನನಗೆ ನಂದ ಸಾಥ್ ಕೊಟ್ಟು, ಕುಮಾರಣ್ಣನನ್ನು ಸಂಪೂರ್ಣ ಒಲ್ಡ್ ಮಂಕ್ ಗೆ ಶರಣು ಮಾಡಿಸಿದೆವು.
ನಂತರ ಶುರುವಾದದ್ದು, ಕುಮಾರಣ್ಣನ ಕಥಾ ಮಂಜರಿ, ಅವನ ಬಾಯಿಯಿಂದ ಮಾತುಗಳು, ಎಂಥವರನ್ನು ಬೆಚ್ಚಿ ಬೀಳಿಸಿಬೀಡುತ್ತಿದ್ದವು. ಅವನು ಒಲ್ಡ್ ಮಂಕ್ ಮಹಿಮೆಯಿಂದ ಅವನ ಹಿರಿಯ ಅಧಿಕಾರಿಗಳಿಗೆ ಬಾಯಿಗೆ ಬಂದಂತೆ ಬೈಯ್ದ, ಅದರಿಂದ ಒಂದು ಸುತು ಒದೆ ತಿಂದ, ನಂತರ ಬೇರೆ ತಂಡದ ಕೆಲವು ಹುಡುಗಿಯರು ಮಲಗಿರುವ ಸ್ಥಳಕ್ಕೆ, ಹೋಗಿ ಮಾಡಬಾರದ್ದು ಮಾಡಲೆತ್ನಿಸಿ ಒದೆ ತಿಂದ. ಅವನಿಗೇನು ಕಮ್ಮಿ ಇಲ್ಲವೆನ್ನುವಂತೆ ಮತ್ತೊಬ್ಬ ಸಿಬ್ಬಂದಿ ಬಿಟ್ಟ ಬೊಗಳೆ ಅಷ್ಟಿಷ್ಟಲ್ಲ. ಸ್ಟೇಷನ್ ನಲ್ಲಿ ಮಲಗುವ ಚಾರಣಿಗರನ್ನು, ಮನೆಗೆ ಬಂದು ಮಲಗಿ ಎಂದು ಹೇಳಿ ಕರೆದುಕೊಂಡು ಹೋಗಿ, ನಂತರ ೫೦೦-೧೦೦೦ರೂ ಗಳ ತನಕ ವಸೂಲಿ ಮಾಡುತ್ತಾನೆ. ವಿಚಿತ್ರವೆಂದರೇ ಅವನಿಗೆ ಸಂಬಳ ೨೫ಸಾವಿರ ರೂಗಳು.ಇದೆಂಥಹ ದುರಾಸೆ ಎನಿಸುತ್ತದೆ. ಸರ್ಕಾರಿ ಸಂಬಳ ಪಡೆದು ಭಿಕ್ಷೆ ಬೇಡುವ ಬದುಕು ಬೇಕಾ? ಅದರಂತೆಯೇ ಮತ್ತೊಂದು ಉದಾಹರಣೆ, ನಾವು ಒಂಬತ್ತು ಗುಡ್ಡಕ್ಕೆಂದು ಹೋಗಿ ತಪ್ಪಿಸಿಕೊಂಡಾಗ, ಅಲ್ಲಿಗೆ ಹೋಗಿರೆಂದು ಹಿರಿಯ ಅಧಿಕಾರಿಗಳು ಕಳುಹಿಸಿದ್ದರೆ, ತಂದ ನೀರು, ಹಣ್ಣು, ಬಿಸ್ಕತ್ ಗಳನ್ನು ನಮಗಿಂತ ಮುಂಚಿತವಾಗಿ ಅವರುಗಳೇ ತಿಂದಿದ್ದರು. ಮತ್ತು ನಮ್ಮ ಬಳಿಯಿಂದ ಹಣ ವಸೂಲಿ ಮಾಡಲು ಅವರು ಹಾಕಿದ ತಂತ್ರಗಳು ಒಂದೆರೆಡಲ್ಲ.
ಇದರಂತೆಯೇ, ದೇವಸ್ಥಾನಗಳು ಹೊರತಾಗಿಲ್ಲ, ಮೊನ್ನೆ ಬೆಲೂರಿಗೆ ಹೋದಾಗ ಅಲ್ಲಿನ ಪೂಜಾರಿಗಳು ನಡೆದುಕೊಳ್ಳುವ ರೀತಿ, ಅಬ್ಬಾ ದುಡ್ಡಿಗಾಗಿ ಹಾತೊರೆಯುವ ಅವರ ಮನಸ್ಥಿತಿ ದೇವರ ಬಗೆಗೆ ಇರುವ ಭಕ್ತಿಯನ್ನೇ ದೂರ ಮಾಡಿ ಬಿಡುತ್ತದೆ. ಧರ್ಮಸ್ಥಳದಲ್ಲಿ ಅದರಲ್ಲೂ ದೇವಳದ ಒಳಕ್ಕೆ ಹೋಗಲು ನಿಲ್ಲುವ ಸಾಲಿನಲ್ಲಿ, ಪೆಪ್ಸಿ, ಕೋಲಾ, ಲೇಸ್, ಕುರ್ ಕುರ್ರೆ ಮಾರುತ್ತಿರುವುದು ದುರಂತ. ಶಿಸ್ತಿನ ಸ್ಥಳವಾಗಿದ್ದ ದೇವಳಗಳು, ತಿಂದು ಕುಡಿದು ಮೋಜು ಮಾಡುವಂತ ಮಾರ್ಪಾಡಾಗಿರುವುದು, ಹಿಂದೆ ಸಿಗರೇಟು ಮಾರಾಟ ನಿಲ್ಲಿಸಿದ್ದ ಊರು ಮತ್ತೆ ಸಿಗರೇಟಿಗೆ ಬಲಿ ಆಗಿರುವುದು, ಭವಿಷ್ಯದ ಬಗೆಗೆ ನೋವು, ಆತಂಕ ಉಂಟುಮಾಡಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ