26 ಆಗಸ್ಟ್ 2024

ಹಾಗೆ ಸುಮ್ಮನೆ ಬಂದ ಆಲೋಚನೆಗಳು!!!

 



ನಮ್ಮ ತಂಡದ ಹಿರಿಯ ಸದಸ್ಯರಾದ ರಾಮಕೃಷ್ಣಪ್ಪ (ಆರ್.ಕೆ.)ಸರ್‌, ಪ್ರೊ.ಎನ್.ಇಂದಿರಮ್ಮ (ಎನ್.ಐ.)ಮೇಡಮ್‌, ಪ್ರೊ.ಉಮಾ ದೇವಿ ಮೇಡಮ್‌ ಮತ್ತು ನಾನು ಕಳೆದ ವಾರ ಐದು ದಿನಗಳು ಜೊತೆಯಲ್ಲಿ ಕಾಲ ಕಳೆದೆವು. ಚಟುವಟಿಕೆಗಳ ಮೂಲಕ ಪರಿಸರ ಶಿಕ್ಷಣಕ್ಕೆ ಬೇಕಾಗಿರುವ ಕಲಿಕಾ ಸಾಮಗ್ರಿಗಳು, ತರಬೇತಿಯ ಮಾದರಿಗಳನ್ನು ತಯಾರಿಸಿದೆವು. ಆರ್.ಕೆ. ಸರ್‌ ಮತ್ತು ಪ್ರೊ.ಎನ್.‌ ಐ. ರವರ ಅನುಭವಗಳ ಕುರಿತು ಬರೆದರು. ಚರ್ಚಿಸಿದ ಕೆಲವು ವಿಷಯಗಳನ್ನು ತಮ್ಮ ಮುಂದಿಡುತ್ತಿದ್ದೇನೆ.


ಮಾನ್ಯರೇ,


ಕಳೆದ ವಾರ ಅಂದರೆ ಆಗಸ್ಟ್‌ ೧೯ರಿಂದ ೨೩ ರ ವರೆಗೆ ತಾವು ಮೂವರು ನಮ್ಮ ಮನೆಗೆ ಬಂದದ್ದು ಸಂತೋಷದ ಜೊತೆಗೆ ನನಗೆ ಪುನಶ್ಚೇತನವಾದಂತಾಯಿತು. ಕೆಲವು ವಿಚಾರಗಳನ್ನು ಬರವಣಿಗೆಯ ಮೂಲಕ ತಿಳಿಸಲು ಯತ್ನಿಸುತ್ತೇನೆ. ಇದನ್ನು ತಾವುಗಳು ಇಲ್ಲಿರುವಾಗ ಮತ್ತು ನಾವು ಸೇರಿದ್ದೆಲ್ಲ ಕಡೆಯಲ್ಲಿಯೂ ಪ್ರಸ್ತಾಪಿಸದ್ದೇನೆ ಕೂಡ. ಆದರೂ ಮತ್ತೊಮ್ಮೆ ಹೇಳುವುದರಲ್ಲಿ ತಪ್ಪಿಲ್ಲ, ನಮ್ಮ ಮುಂದಿನ ಯೋಜನೆಗಳಿಗೂ ಇದು ಉಪಯೋಗವಾಗುತ್ತದೆಂಬ ಭರವಸೆಯಿದೆ. ನಾನು ನಂಬಿರುವ ಮತ್ತು ನಂಬಿ ಬದುಕುತ್ತಿರುವ ಕೆಲವು ಅಂಶಗಳನ್ನು ತಮ್ಮ ಮುಂದಿಡುತ್ತಿದ್ದೇನೆ.


ಮೊದಲನೆಯದಾಗಿ, ಸರಳತೆಯ ಬದುಕು ಅಷ್ಟು ಸರಳವಲ್ಲ. ನಾವಂದು ಕೊಂಡಂತೆ ಬದುಕುವುದು ಹೋರಾಟವೇ ಹೊರತು ಸುಲಭವಲ್ಲ. ಜನರು ಐಷಾರಾಮಿ ಬದುಕನ್ನು ಬಯಸುವುದು, ಸರಳವಾಗಿ ಇರಲು ಕಷ್ಟವಾಗಿರುವುದರಿಂದ ಅಷ್ಟೆ. ಜನರು ತಮ್ಮ ಇಡೀ ಜೀವಮಾನವನ್ನು ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಂಡು ತಾವು ಸುಖವಾಗಿರದೆ, ಬೇರೆಯವರನ್ನು ದುಖಃಕ್ಕೆ ತಳ್ಳುತ್ತಾರೆ. ಪ್ರತಿಯೊಂದು ಜೀವಿ, ಪ್ರತಿಯೊಬ್ಬ ವ್ಯಕ್ತಿಯೂ ವಿಭಿನ್ನ, ಅಲ್ಲಿ ಯಾರು ಮೇಲಿಲ್ಲ, ಯಾರೂ ಕೀಳಿಲ್ಲ. ಇಷ್ಟನ್ನು ಅರ್ಥೈಸಿಕೊಂಡರೆ ಸಾಕು. ನಾನು ನಾನಾಗಿಯೇ ಬದುಕುತ್ತೇನೆಂದು ಹೊರಟರೆ, ಅದಕ್ಕಿಂತ ತೃಪ್ತಿ ಮತ್ತೊಂದಿಲ್ಲ. ಬಹಳಷ್ಟು ಜನರು ಈ ಕೀಳರಿಮೆಯಿಂದ ಬದುಕುತ್ತಿದ್ದಾರೆ. ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವುದು ಕೀಳು, ನಡೆಯುವುದು ಕೀಳು, ರಸ್ತೆ ಬದಿಯ ಹೋಟೆಲಿನಲ್ಲಿ ಊಟ ಮಾಡುವುದು ಕೀಳು, ಸೀಬೆ ಹಣ್ಣು ತಿನ್ನುವುದು ಕೀಳು. ಪರ್ಯಾಯ ವಸ್ತುಗಳು ಇಂತಿವೆ, ಸ್ವಂತ ಕಾರಿನಲ್ಲಿ, ಓಲಾ ಊಬರ್‌ ಆದರೂ ಪ್ರಿಮಿಯಮ್‌ ಸೆಡನ್‌ ಬೇಕು, ದೊಡ್ಡ ಹೋಟೆಲಿನಲ್ಲಿ ಗಂಟೆಗಟ್ಟಲೆ ಕಾಯ್ದು ಊಟ ಮಾಡಬೇಕು, ಬಿಲ್‌ ಸಾವಿರ ರೂಗಳಲ್ಲಿ ಇರಬೇಕು, ಎಸಿ ಬಸ್‌, ಎಸಿ ರೈಲಿರಬೇಕು, ಡ್ರಾಗನ್‌ ಫ್ರೂಟ್‌, ಸೇಬು, ಡ್ರೈ ಫ್ರೂಟ್‌ ತಿನ್ನಬೇಕು, ಆರ್ಗಾನಿಕ್‌ ಅಂತಾ ಹೆಸರಿರಬೇಕು, ಬ್ರಾಂಡೆಡ್‌ ಬಟ್ಟೆ ಇರಬೇಕು, ಪಿಝ್ಝಾ, ಪೆಪ್ಸಿ, ಕೋಲಾ, ಇರಬೇಕು, ಹೀಗೆ ನಾವಲ್ಲದ ನಾವಾಗುವ ಹೋರಾಟವಿದು. ಅದು ಹೇಗೆಂದರೆ, “ಅಗಸನ ಕತ್ತೆ ಈ ಕಡೆ ಮನೆಯಲ್ಲಿಯೂ ಇಲ್ಲ ಆ ಕಡೆ ಹೊಳೆ ದಂಡೆಯಲ್ಲಿಯೂ ಇಲ್ಲ” ಎನ್ನುವ ರೀತಿ. ನಾವು ನಾವಾಗಿರುವುದನ್ನು ಬಿಟ್ಟು ಬೇರೆಯವರನ್ನು ಅನುಕರಣೆ ಮಾಡಲು ಹೋಗಿ ನರಳುತ್ತಿದ್ದೇವೆ. ನಾವು ನಾವಾಗಿರೋಣ.


ಎರಡನೆಯದಾಗಿ, ದೇಶ ಸುತ್ತಿ ನೋಡು, ಕೋಶ ಓದಿ ನೋಡು. ನಾನು ಬದುಕನ್ನು ಮೂರು ಭಾಗವಾಗಿ ವಿಂಗಡಿಸುತ್ತೇನೆ. ಒಂದು, ದೈಹಿಕವಾಗಿ, ಅಂದರೆ, ನಮ್ಮ ದೇಹಕ್ಕೆ ಶಕ್ತಿ ಬೇಕು ಅದಕ್ಕಾಗಿ ನಾವು ಆಗ್ಗಾಗ್ಗೆ ಊಟ, ತಿಂಡಿ, ತಿನಿಸು, ಪಾನೀಯ ಇತ್ಯಾದಿ ನೀಡುತ್ತೇವೆ. ಅದೇ, ರೀತಿ ಎರಡನೆಯದ್ದು, ಬೌದ್ಧಿಕತೆ, ಅಂದರೆ ನಮ್ಮ ತಲೆಗೆ ಒಂದಿಷ್ಟು ಬುದ್ದಿಯನ್ನು ನೀಡುತ್ತಲೇ ಇರಬೇಕು. ದೇಹಕ್ಕೆ ಹೇಗೆ ಮೂರೂ ಹೊತ್ತು ಊಟ ಕೊಡುತ್ತೇವೆ, ಹಾಗೆಯೇ ತಲೆಗೂ ಆಹಾರ ಅಂದರೆ, ವಿಷಯಗಳು, ವಿಚಾರಗಳನ್ನು ನೀಡುತ್ತಿರಬೇಕು. ಓದುವುದರಿಂದ, ಹೊಸ ವಿಚಾರಗಳನ್ನು ತಿಳಿದುಕೊಳ್ಳುವುದರಿಂದ, ಹೊಸ ಹೊಸ ಜನರನ್ನು ಭೇಟಿಯಾಗುವುದರಿಂದ, ಹೊಸ ಹೊಸ ಸ್ಥಳಗಳನ್ನು ನೋಡುವುದರಿಂದ. ಮೂರನೆಯದ್ದು, ಮನಸ್ಸಿಗೆ ಅಥವಾ ಮಾನಸಿಕವಾಗಿ ಆರೋಗ್ಯವಾಗಿರುವುದು. ಮನಸ್ಸಿಗೆ ಮುದ ನೀಡುವಂತಹ ಸಂಗೀತ, ನಾಟಕ, ಸಿನೆಮಾ, ಸಾಹಿತ್ಯ, ನೃತ್ಯ, ಆಟ, ಇತ್ಯಾದಿಗಳು ಸೇರುತ್ತವೆ. ಅದನ್ನು ಆಗ್ಗಾಗ್ಗೆ ಸಂತೋಷಗೊಳಿಸಬೇಕು. ಇಲ್ಲದ್ದಿದ್ದರೆ, ಜಡತ್ವ ಆವರಿಸುತ್ತದೆ.


ಈ ಮೇಲಿನ ಮೂರು ವಿಷಯಗಳಲ್ಲಿ, ಒಂದು ವಿಚಾರವನ್ನು ತಾವು ಸೂಕ್ಷ್ಮವಾಗಿ ಗಮನಿಸಬೇಕು. ದೇಹಕ್ಕೆ ನೀವು ಯಾವ ರೀತಿಯ ಆಹಾರ ಕೊಟ್ಟು ಅಭ್ಯಾಸ ಮಾಡಿಸುತ್ತೀರೋ, ಅದು ಅದನ್ನು ಅನುಸರಿಸುತ್ತದೆ. ಉದಾಹರಣೆಗೆ: ಮಾಂಸಾಹಾರ ದೇಹ ಅದಕ್ಕೆ ಹೊಂದಿಕೊಳ್ಳುತ್ತದೆ, ಬೆಳ್ಳುಳ್ಳಿ ಇಲ್ಲದ ಅಡುಗೆ, ಅದು ಅದನ್ನೆ ಬಯಸುತ್ತದೆ, ಹೀಗೆ ನಾವು ಯಾವದನ್ನು ಕಲಿಸುತ್ತೇವೋ ಅದಕ್ಕೆ ಆ ದೇಹ ಹೊಂದಿಕೊಳ್ಳುತ್ತದೆ. ಅದೇ ರೀತಿ ಓದುವುದು ಕೂಡ, ನೀವು ಸಾಹಿತ್ಯ ಓದುವುದನ್ನು ಬೆಳೆಸಿಕೊಂಡರೆ ಸಾಹಿತ್ಯ, ಕಥೆ ಅಂದರೆ ಕಥೆ, ವಿಜ್ಞಾನವೆಂದರೆ ವಿಜ್ಞಾನ, ಮೆದುಳಿಗೆ ಎಲ್ಲವನ್ನು ಸ್ವೀಕರಿಸುವ ಶಕ್ತಿಯಿದೆ. ಮನಸ್ಸು ಅಷ್ಟೆ, ನೀವು ಯಾವ ರೀತಿಯ ಸಂಗೀತ ಕೇಳುವುದನ್ನು ಅಭ್ಯಸಿಸಿದರೆ ಅದು ಅದನ್ನೆ ಹಿಂಬಾಲಿಸುತ್ತದೆ. ಡಾ. ರಾಜ್‌ ಕುಮಾರ್‌ ಸಿನೆಮಾ ನೋಡುವುದನ್ನು ಕಲಿಸಿದರೆ ಮನಸ್ಸು ಅತ್ತ ವಾಲುತ್ತದೆ, ಲೂಸ್‌ ಮಾದನ ಸಿನೆಮಾ ತೋರಿಸುವುದನ್ನು ಕಲಿತರೆ ಅದು ಲೂಸ್‌ ಮಾದನ ಅಭಿಮಾನಿಯಾಗುತ್ತದೆ. ಎಲ್ಲವೂ ನಮ್ಮ ಕೈಯಲ್ಲಿದೆ. ಯಾವುದೂ ರಾತ್ರೋ ರಾತ್ರಿ ಆಗುವುದಿಲ್ಲ. ಗೆಲುವಿನ ಹಿಂದೆ ಶ್ರಮವಿದ್ದರೆ ಸೋಲಿನ ಹಿಂದೆ ಕಂತೆ ಕಂತೆ ಉಢಾಫೆತನದ ಸನ್ನಿವೇಶಗಳಿರುತ್ತವೆ.


ಇಲ್ಲಿ ಬಹಳ ಗಂಬೀರವಾದ ವಿಷಯವೇನೆಂದರೆ, ನಾವು ಓದುತ್ತಾ, ಸುತ್ತಾಡುತ್ತ ಅಥವಾ ಹೊಸ ವಿಚಾರಗಳನ್ನು ತಿಳಿಯದೇ ಇದ್ದರೇ ನಮಗೆ ನಾವೇ ಬೋರ್‌ ಎನಿಸುತ್ತೇವೆ. ನೀವು ಗಮನಿಸಿ, ಕೆಲವರೊಂದಿಗೆ ಅರ್ಧ ಗಂಟೆ ಮಾತನಾಡುವುದಕ್ಕೂ ಆಗುವುದಿಲ್ಲ. ಬೋರ್‌ ಎನಿಸಿಬಿಡುತ್ತಾರೆ. ಕಳೆದ ಇಪ್ಪತ್ತು ಮೂವತ್ತು ವರ್ಷದಿಂದ ಊದಿದ್ದೇ ಊದುತ್ತಿದ್ದಾರೆ. ಅದೇ ಹಾಡು ಅದೇ ರಾಗ. ನಮ್ಮ ಮೆದುಳು ಮನಸ್ಸನ್ನು ನಾವು ಆಗ್ಗಾಗ್ಗೆ ರಿಚಾರ್ಜ್‌ ಮಾಡಿಕೊಳ್ಳಬೇಕು. ಕಾರಿಗೆ ಪೆಟ್ರೋಲ್‌ ಡಿಸೇಲ್‌ ಹಾಕುವಂತೆಯೆ. ಹಾಗಾಗಿಯೇ, ಕೆಲವು ಸಂಬಂಧಗಳು ಹಳಸಿಕೊಳ್ಳುವುದು. ಒಬ್ಬರೂ ಅಪಡೇಟ್‌ ಆಗಿ ಮುಂದಕ್ಕೆ ಹೋಗುತ್ತಿರುತ್ತಾರೆ ಮತ್ತೊಬ್ಬರು ಅಲ್ಲೇ ನಿಂತು ನಕ್ಷತ್ರ ಎಣಿಸುತ್ತಿರುತ್ತಾರೆ. ಒಂದು ವಯಸ್ಸು ದಾಟಿದ ನಂತರ ಮನಸ್ಸು ಮಾಗುತ್ತದೆ, ಮಾಗಲೇ ಬೇಕು. ಮಾಗುವಾಗ ಅದು ಲೌಕಿಕತೆಯಿಂದ ಅಲೌಕಿಕತೆಯೆಡೆಗೆ ಸಾಗುತ್ತದೆ. ಅದನ್ನು ನಾವು ಗುರುತಿಸಬೇಕು. ಕೊನೆ ಉಸಿರಿನ ತನಕ ಲೌಕಿಕತೆಯಲ್ಲಿ ಅಥವಾ ವಸ್ತು ಪ್ರಧಾನ ಮನಸ್ಥಿತಿಯಲ್ಲಿಯೇ ಇದ್ದರೆ, ನಿಮಗೆ ಅಂಕಿ ಸಂಖ್ಯೆಯಲ್ಲಿ ವಾಯಸ್ಸಾಗುತ್ತಿದೆಯೇ ಹೊರತು, ಸ್ವಾರ್ಥದ, ಲೌಕಿಕತೆಯ ಕೊಂಡಿಯನ್ನು ಕಳಚಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲವೆಂದೇ ಅರ್ಥ. ಇದನ್ನು ಗಮನಿಸಲು ಸೂಕ್ಷ್ಮ ಸಂವೇದನೆ ಇರಬೇಕಾಗುತ್ತದೆ. ಸಾಮಾನ್ಯ ಜ್ಞಾನದ ಕೊರತೆಯಿರುವವರಿಗೆ ನೈತಿಕತೆ, ಮೌಲ್ಯ, ಸೂಕ್ಷ್ಮ ಸಂವೇದನೆಯ ಕುರಿತು ಹೇಳುವುದು, “ಬೆತ್ತಲೆ ರಾಜ್ಯದಲ್ಲಿ ಬಟ್ಟೆ ತೊಟ್ಟಂತೆ” ಈಗ ನನ್ನ ಪರಿಸ್ಥಿತಿ ಹೆಚ್ಚು ಕಡಿಮೆ ಹೀಗೆ ಇದೆ. ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಕೆಲಸ, ನನ್ನ ಓದು, ನನ್ನ ಸುತ್ತಾಟ ಇಷ್ಟೆ!

 

ಮೂರನೆಯದಾಗಿ, ಹೊಗಳಿಕೆ, ಪ್ರಚಾರಪ್ರಿಯತೆ ಮತ್ತು ಸನ್ಮಾನ ಪ್ರಿಯತೆ. ನನ್ನ ಅನಿಸಿಕೆಯಲ್ಲಿ ಹೊಗಳಿಸಿಕೊಳ್ಳುವುದು ಅಥವಾ ನನ್ನನ್ನು ಹೊಗಳಲಿ ಎಂದು ಬಯಸುವುದು, ನನ್ನನ್ನು ಗುರುತಿಸಲಿ, ನನಗೆ ಪ್ರಶಸ್ತಿ, ಸನ್ಮಾನಗಳು ಬರಲಿ ಎಂದು ಬಯಸುವ ಮನಸ್ಸುಗಳು ಅತೃಪ್ತರು. ಪ್ರಚಾರಪ್ರಿಯತೆ ಒಂದು ರೀತಿಯ ಚಟ, ಅಫೀಮು ಇದ್ದ ಹಾಗೆ. ಒಮ್ಮೆ ಆ ಸುಳಿಗೆ ಸಿಲುಕಿದರೆ ಅಲ್ಲಿಂದ ಹೊರ ಬರುವುದಕ್ಕೆ ಆಗುವುದಿಲ್ಲ. ಅದೇ ರೀತಿ ಅಧಿಕಾರದ ದಾಹವೂ ಅಷ್ಟೆ. ಲಕ್ಷುರಿ ಬದುಕು ಅಷ್ಟೆ. ಎಲ್ಲವೂ ಉಪ್ಪಿನಂತೆಯೇ ಇರಬೇಕು. ರುಚಿಗೆ ಎಷ್ಟು ಬೇಕೋ ಅಷ್ಟೆ ಬಳಸಬೇಕು. ಅತಿಯಾಗಿ ಬಳಸಿದರೆ ಅದು ದಾಹವನ್ನುಂಟು ಮಾಡುತ್ತದೆ. ಈಗ ನಮ್ಮ ಸುತ್ತಮುತ್ತಲಿನ ಅನೇಕರನ್ನು ನೋಡಿ, ಪ್ರತಿಯೊಂದರಲ್ಲಿಯೂ ಹೆಸರು ಬರಬೇಕು, ಗುರುತಿಸಬೇಕು, ಅಧಿಕಾರ ಬೇಕು, ಹಣ ಗಳಿಸಬೇಕು, ದುಪ್ಪಟ್ಟು ಮಾಡಬೇಕು, ಇನ್ನೂ ಹೆಚ್ಚು ಮಾಡಬೇಕು, ಮಾಡುತ್ತಲೇ ಇರಬೇಕು, ಒಂದು ಸೈಟು, ಮತ್ತೊಂದು, ಮಗದೊಂದು ಹೀಗೆ ಸಾಯುವ ತನಕ ಆಸ್ತಿ ದುಡ್ಡು ಮಾಡುತ್ತಲೇ ಇರಬೇಕು. ಅವರಿಗೆ ಸುಮ್ಮನೆ ಇರುವುದಕ್ಕೆ ಆಗುವುದಿಲ್ಲ, ಅದೊಂದು ಚಟವಾಗಿರುತ್ತದೆ. ಕಾರು, ಈ ಕಾರು ಬದಲಾಯಿಸು, ಮತ್ತೊಂದು ಕಾರು, ಅದನ್ನು ಬದಲಾಯಿಸು ಮಗದೊಂದು, ಹೀಗೆ ಸಾಗುತ್ತಲೇ ಇರುತ್ತದೆ, ದಾಹ.


ನಾಲ್ಕನೆಯದಾಗಿ, ಕುತೂಹಲ ಅಥವಾ ಜೀವನಾಸಕ್ತಿ. ನಾನು ಇತ್ತೀಚೆಗೆ ನೋಡುತ್ತಿರುವಂತೆ ಬಹುತೇಕರು ಜೀವನದ ಕುರಿತು ಆಸಕ್ತಿ ಕಳೆದುಕೊಂಡಿದ್ದಾರೆ ಎನಿಸುತ್ತದೆ. ಕುತೂಹಲವೆಂಬುದು ಇಲ್ಲವೇ ಇಲ್ಲ. ಕಳೆದ ಎರಡು ದಶಕಗಳಲ್ಲಿ ಸುತ್ತಾಡುವುದು, ಪ್ರಯಾಣ, ಪ್ರವಾಸ, ಚಾರನ, ಟೆಂಪಲ್‌ ರನ್‌, ಪೂಜೆ, ಪುನಸ್ಕಾರಗಳಲ್ಲಿ ಜನರು ಹೆಚ್ಚಾಗಿ ತೊಡಗಿಸಿಕೊಂಡಿರುವುದು ಒಪ್ಪುವ ಮಾತು. ಆದರೇ, ಅವರು ಹೋದಲೆಲ್ಲ ಕ್ಯಾಮೆರಾ ಕಣ್ಣಿನಿಂದ ಪ್ರಕೃತಿ ನೋಡುತ್ತಿದ್ದಾರೆಯೇ ಹೊರತು, ಬರಿಗಣ್ಣಿನಿಂದಲ್ಲ ಎಂಬುದು ನನ್ನ ದೂರು. ನಾನು ನನ್ನ ಪ್ರೈಮರಿ ಶಾಲೆಯಿಂದಲೂ ಒಂಟಿಯಾಗಿ ಪ್ರಯಾಣಿಸುವುದನ್ನು ಕಲಿತೆ. ಕಲಿತೆ ಎನ್ನುವುದಕ್ಕಿಂತ ನನ್ನ ತಾತ ಧೈರ್ಯ ತುಂಬಿಸಿ, ಬಸ್/ಟೆಂಪೋ/ಮೆಟಡೋರ್‌ ಹತ್ತಿಸಿ ಕುಶಾಲನಗರದಿಂದ ನನ್ನೂರು ಬಾನುಗೊಂದಿಗೆ ಮತ್ತು ವಿರಾಜಪೇಟೆಗೆ ಕಳುಹಿಸುತ್ತಿದ್ದರು. ಜೇಬಿನಲ್ಲಿ ಒಂದು ಚೀಟಿ ಬರೆದಿಡುತ್ತಿದ್ದರು. ಅದು ನಾನು ಹೊರಟ ಊರಿನವರದ್ದು ಮತ್ತು ತಲುಪುವ ಊರಿನವರ ವಿಳಾಸ. ತಾತ ನನಗೆ ಸದಾ ಹೇಳುತ್ತಿದ್ದದ್ದು, ಬಸ್ಸಿನಲ್ಲಿ ನಿದ್ದೆ ಮಾಡಬೇಡ, ಹೊರಗಡೆ ಏನೆಲ್ಲಾ ನೋಡಬಹುದು ಅದನ್ನೆಲ್ಲಾ ನೋಡ್ತಾ ಇರು, ಹೊಲಕ್ಕೆ ಹೋದರೂ ಅಷ್ಟೆ, ಗದ್ದೆಗೆ ಹೋದರೂ ಅಷ್ಟೆ, ಅವರು ಪಕ್ಷಿಗಳು, ಚಿಟ್ಟೆಗಳು, ಪತಂಗಗಳು, ಹೀಗೆ ಎಲ್ಲವನ್ನು ನೋಡು ನೋಡು ಅಂತಾ ಬಲವಂತ ಮಾಡುತ್ತಿದ್ದರು, ಕ್ರಮೇಣವಾಗಿ ಅದು ನನಗೆ ಬಳುವಳಿಯಾಗಿ ಬಂತು.


ನಮ್ಮ ತಾತನ ಬಗ್ಗೆ ಒಂದು ಮಾತಿತ್ತು, “ಐಯ್ಯಣ್ಣ ಮಾಸ್ಟ್ರು, ಮಲಗಿರೋ ನಾಯಿನೂ ಬಿಡಲ್ಲ, ಎಬ್ಬಿಸಿ ಮಾತಾಡಿಸ್ತಾರೆ” ಅಂತ. ಅವರು ಎಲ್ಲರನ್ನು ಮಾತಾಡಿಸ್ತಾ ಇದ್ರು. ಹಿಂದಿನ ಪೀಳಿಗೆ ಹಾಗಿತ್ತು. ಎಲ್ಲರನ್ನೂ ಮಾತಾಡಿಸೋದು, ಹೊಸಬರು ಬಂದ್ರೆ ಅವರ ಬಗ್ಗೆ ಕುತೂಹಲ, ಆಸಕ್ತಿ ಇರುತ್ತಿತ್ತು. ಈಗ ನೂರಾರು ಕಿಲೋಮೀಟರ್‌ ಕುಳಿತು ಬಸಿನಲ್ಲಿ ಅಥವಾ ರೈಲಿನಲ್ಲಿ ಪ್ರಯಾಣ ಮಾಡಿದ್ರೂ ಕೂಡ ಒಂದೇ ಒಂದು ಮಾತಿರಲ್ಲ. ನಾನು ಹೋಗಿರುವ ಅನೇಕ ಶಾಲೆಗಳಲ್ಲಿ ಕೂಡ, ಕುತೂಹಲಕ್ಕಾದರೂ ವಿದ್ಯಾರ್ಥಿಗಳು ಅಥವಾ ಶಿಕ್ಷಕರು ಬಂದು ಕೇಳುವುದಿಲ್ಲ. ನಾವು ಹೈಸ್ಕೂಲ್‌ ಓದುವಾಗ ಕಾಪೌಂಡ್‌ ಒಳಗಡೆ ಯಾರೇ ಬಂದರೂ ಓಡಿ ಹೋಗಿ, ಯಾರ್‌ ನೀವು? ಯಾಕ್‌ ಬಂದಿದ್ದೀರಿ? ಯಾವ್ವೂರು? ಹೀಗೆಲ್ಲಾ ಕೇಳ್ತಾ ಇದ್ವಿ. ಊರಿಗೆ ಬಂದ್ರೂ ಅಷ್ಟೆ, ಒಂದು ಸಿನೆಮಾ ಪೋಸ್ಟರ್‌ ಅಂಟಿಸೋಕೆ ಆಟೋ ಬಂದ್ರೆ ಅದರ ಹಿಂದೆ ಊರೆಲ್ಲಾ ಸುತ್ತಾಡ್ತಾ ಇದ್ವಿ. ಈಗಿನ ಮಕ್ಕಳಲ್ಲಿ ಆ ಉತ್ಸಾಹವೇ ಇಲ್ಲ. ಅದೇ ರೀತಿ, ಶಿಕ್ಷಕರಲ್ಲಿಯೂ ಇಲ್ಲ, ಪೋಷಕರಲ್ಲಿಯೂ ಇಲ್ಲ, ಸಾಮಾನ್ಯ ಜನತೆಯಲ್ಲಿಯೂ ಇಲ್ಲ. ಮುಂಜಾನೆ ವಾಕಿಂಗ್‌ ಇಂದ ಹಿಡಿದು, ಅಂಗಡಿಗಳ ಬಳಿಯಲ್ಲಿ ಅಥವಾ ಪಾರ್ಕ್‌ ಗಳಲ್ಲಿ ಎಲ್ಲಾ ಕಡೆ ಕಿವಿಗೆ ಬೀಳುವ ಮೂರ್ನಾಲ್ಕು ವಿಷಯಗಳು, ೧. ರಾಜಕೀಯ ಬೆಳವಣಿಗೆ ೨. ಸಿನೆಮಾ ನಟ/ನಟಿಯರ ಗಾಳಿಸುದ್ದಿ ೩. ಸೈಟು/ಕಾರು ಬಿಲ್ಡಂಗ್‌ ೪. ಹೆಚ್ಚೂ ಅಂದ್ರೆ ತೂಕ ಇಳಿಸುವುದು ೫. ರೀಲ್ಸ್/ಫೋಟೋಗಳು. ಇಷ್ಟನ್ನು ಹೊರತುಪಡಿಸಿ ಬೇರೆ ವಿಷಯಗಳು ತಮ್ಮ ಕಿವಿಗೆ ಬಿದ್ದಿದ್ದರೆ ನೀವೇ ಭಾಗ್ಯವಂತರು.


ಈ ಲೇಖನ ದೀರ್ಘವಾಯಿತು ಎನಿಸುತ್ತಿದೆ, ಹಾಗಾಗಿ ಉಳಿದ ವಿಚಾರವನ್ನು ಮುಂದಿನ ಭಾಗದಲ್ಲಿ ಹಂಚಿಕೊಳ್ಳುತ್ತೇನೆ. ಅದಕ್ಕೂ ಮುನ್ನಾ ಕೊನೆಯದಾಗಿ ಹೇಳುವುದೇನೆಂದರೆ, ನಮ್ಮ ಮೇಲೆ ನಮಗೆ ವಿಶ್ವಾಸವಿರಬೇಕು. ಈ ನಾವು ಅಥವಾ ನಾನು ಎಂದರೇನು? ನನ್ನ ಪ್ರಕಾರ, ನಾನು ಎಂದರೆ ನಾನು ಕೊಡುವ ಮಾತು. ನಾನು ಆಡುವ ಮಾತಿಗೂ ನಾನು ನಡೆದುಕೊಳ್ಳುವುದಕ್ಕೂ ನೇರ ಸಂಬಂಧವಿರಬೇಕು. ಸಂಬಂಧ ಮಾತ್ರವಲ್ಲ, ನಾನು ಆಡುವುದನ್ನೇ ಮಾಡಬೇಕು ಅಥವಾ ಮಾಡುವುದನ್ನೇ ಆಡಬೇಕು. ಬದ್ಧತೆ, ಸ್ವಚ್ಛತೆ ಮತ್ತು ಶಿಸ್ತಿನ ವಿಷಯಕ್ಕೆ ಬರೋಣ. ಒಂದು ವೈಯಕ್ತಿಕ ಜೀವನ, ಮತ್ತೊಂದು ವ್ಯಕ್ತಿಗತ ಜೀವನ ಇನ್ನೊಂದು ವೃತ್ತಿ ಜೀವನ. ನಾನು ಮಾಡುವ ಕೆಲಸ/ಕಾರ್ಯ ಚಟುವಟಿಕೆ ಯಾರ ಮೇಲೂ ನೇರವಾಗಿ ಅಥವಾ ಪರೋಕ್ಷವಾಗಿ ಪರಿಣಾಮ ಬೀರುವುದಿಲ್ಲ ಅದು ನನ್ನ ಮೇಲೆ ಮಾತ್ರವೇ ಬೀರುತ್ತದೆ ಎಂದಾದರೇ ಅದರ ಕುರಿತು ಹೆಚ್ಚು ಚಿಂತಿಸುವ ಅವಶ್ಯಕತೆಯಿಲ್ಲ. ಅಂದರೆ, ನಾನು ಒಬ್ಬನೇ ಇದ್ದೀನಿ, ಯಾರೂ ಇಲ್ಲ, ಭಾನುವಾರ ಬೇರೆ ಯಾವುದೂ ಬಹುಮುಖ್ಯ ಕೆಲಸವಿಲ್ಲ, ಆ ದಿನ ಮಧ್ಯಾಹ್ನದ ತನಕ ಮಲಗಿದರೂ ಅಂತಹ ಸಮಸ್ಯೆಯಿಲ್ಲ. ಆದರೇ, ಎರಡನೆಯ ಶನಿವಾರ ಹತ್ತು ಗಂಟೆಯ ವೇಳೆಗೆ ಬೋರಣಕಣಿವೆ ಶಾಲೆಯಲ್ಲಿರಬೇಕು, ತಂಡದ ಸದಸ್ಯರುಗಳು ಮತ್ತು ವಿದ್ಯಾರ್ಥಿಗಳು ನನ್ನ ಮೇಲೆ ಅವಲಂಬಿತರಾಗಿದ್ದಾಗ? ಖಂಡಿತವಾಗಿಯೂ ಮುನ್ನೆಚ್ಚರಿಕೆಯ ಅವಶ್ಯಕತೆಯಿರುತ್ತದೆ.


ನಾವು ಕೊಟ್ಟ ಮಾತನ್ನು ನಾವೇ ಉಳಿಸಿಕೊಳ್ಳಬೇಕು. ಅದು ನಮ್ಮ ಕರ್ತವ್ಯ. ಮತ್ತೊಬ್ಬರ ಸಮಯಕ್ಕೆ ಮತ್ತು ಭಾವನೆಗಳಿಗೆ ಗೌರವ ನೀಡಬೇಕು. ಆದರೇ, ನಾವು ಗಮನಿಸಿರುವುದರಲ್ಲಿ ಅನೇಕರು ಬಹಳಷ್ಟು ಬಾರಿ ಕಾಯಿಸುತ್ತಾರೆ, ಅವರಿಗೆ ಕಾಯುತ್ತಿರುವವರ ಸಮಯ, ಪರಿಸ್ಥಿತಿ ಅರ್ಥವೇ ಆಗುವುದಿಲ್ಲ, ಅಷ್ಟರ ಮಟ್ಟಕ್ಕೆ ಅವರನ್ನು ಜಡತ್ವ ಆವರಿಸಿರುತ್ತದೆ, ಇದು ವಿಪರ್ಯಾಸ. ಸಿನೆಮಾ ಮತ್ತು ರಂಗಶಂಕರದಲ್ಲಿನ ನಾಟಕ ಪ್ರದರ್ಶನ ಬಿಟ್ಟು ಬೇರಾವ ಕಾರ್ಯಕ್ರಮಗಳ ಬಗ್ಗೆ ಜನರಿಗೆ ನಂಬಿಕೆಯೇ ಇಲ್ಲ. ಅಂದರೆ, ಸಮಯಕ್ಕೆ ಸರಿಯಾಗಿ ಶುರುವಾಗುತ್ತದೆ ಎಂಬ ನಂಬಿಕೆಯಿಲ್ಲ. “ಅಯ್ಯೋ ಅವರು ಹೇಳ್ತಾರೆ, ಎಂಟು ಗಂಟೆಗೆ ಅಂತಾ, ಶುರುವಾಗೋದು ಹತ್ತು ಗಂಟೆ ಕಡಿಮೆಯಿಲ್ಲ ಸುಮ್ಮನೆ ಇರ್ರೀ ಸಾರ್‌,” ಅಂತಾರೆ. ಇನ್ನೊಂದು ವಿಷಯ ಮುಂಜಾನೆ ಬೇಗ ಏಳುವುದರ ಕುರಿತು, ತಾವುಗಳು ಕಂಡಂತೆ ನಾನು ಮುಂಜಾನೆ ನಾಲ್ಕು ಗಂಟೆಯ ಮೊದಲೇ ಎದ್ದಿರುತ್ತೇನೆ, ನಮ್ಮ ಜೊತೆಯವರು ಏಳು ಗಂಟೆಯ ಸಮಯಕ್ಕೆ ಏಳುವಾಗ ನನ್ನ ದಿನದ ಅರ್ಧ ಕೆಲಸ ಮುಗಿದಿರುತ್ತದೆ. ಬೇಗ ಏಳುವುದರ ಅನುಕೂಲತೆಯನ್ನು ಹೇಳುತ್ತೇನೆ, ಮುಂಜಾನೆ ಶಾಂತವಾಗಿರುತ್ತೆ, ಮನಸ್ಸಿಗೆ ಮುದ ಇರುತ್ತೆ ಅವೆಲ್ಲ ಒಂದು ಭಾಗವಷ್ಟೆ. 


ಮತ್ತೊಂದು ವಿಷಯವನ್ನು ಅವಲೋಕಿಸೋಣ:

ಒಂದು ದಿನಕ್ಕೆ ೨೪ ಗಂಟೆಗಳು

ನಾಲ್ಕು ಗಂಟೆಗೆ ಎದ್ದು ೧೧ ಗಂಟೆಗೆ ಮಲಗಿದರೆ, ಅವನಿಗೆ ಸಿಗುವ ಸಮಯ ೧೯ ಗಂಟೆಗಳು

ಏಳು ಗಂಟೆಗೆ ಎದ್ದು ೧೧ ಗಂಟೆಗೆ ಮಲಗಿದರೆ, ಅವನಿಗೆ ಸಿಗುವ ಸಮಯ ೧೬ ಗಂಟೆಗಳು

ಅಂದರೇ,

ದಿನಕ್ಕೆ ಮೂರು ಗಂಟೆಗಳು ಅಧಿಕವಾಗಿ ದೊರೆಯುತ್ತದೆ

ತಿಂಗಳಿಗೆ ೩*೩೦=೯೦ಗಂಟೆಗಳು

೯೦/೨೪=೩.೭೫ ದಿನಗಳು

ವರ್ಷಕ್ಕೆ ೪೫ ದಿನಗಳು

ಜೀವಿತಾವಧಿ ೬೦ ವರ್ಷಕ್ಕೆ = ೭೨೦ ದಿನಗಳು = ೬೦ ತಿಂಗಳುಗಳು = ೫ ವರ್ಷಗಳು ಅಧಿಕವಾಗಿ ದೊರೆಯುತ್ತವೆ.

ಬೇಗ ಏಳಿ, ಸಮಯವನ್ನು ಸಮರ್ಪಕವಾಗಿ ಬಳಸಿ.

ಮನಸ್ಸಿಗೆ ಆನಂದ ನೀಡಿ, ಮೆದುಳಿಗೆ ಆಹಾರ ನೀಡಿ, ದೇಹವನ್ನು ದಂಡಿಸಿ.

ಮುಂದುವರೆಯುವುದು….

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀ ಮುತ್ತಪ್ಪ ದೇವರ ಉತ್ಸವ: ದೈವ, ಆಚರಣೆ, ಭಕ್ತಿ ಮತ್ತು ಸಂಘಟನೆ!!!

  ಈ ಲೇಖನವನ್ನು ಕಳೆದ ವರ್ಷವೇ ಬರೆಯಬೇಕಿತ್ತು. ಕಾರಣಾಂತರಗಳಿಂದ ಬರೆದಿರಲಿಲ್ಲ ಅಥವಾ ಮತ್ತೊಮ್ಮೆ ವಿಶ್ಲೇಷಿಸಿ ಬರೆಯೋಣ ಎಂಬುದು ಇರಬಹುದು. ಮಾರ್ಚ್‌ ತಿಂಗಳ ಮೂವತ್ತು ಮತ್...