05 ಸೆಪ್ಟೆಂಬರ್ 2010

ದ್ರೊಹದ ಮಡುವಿನಲ್ಲಿ....!!!

ದೋಚುವುದು ಮಾನವ ಸಹಜ ಗುಣವೆನ್ನುವ ಮಟ್ಟಕ್ಕೆ ಬಂದಿದೆ. ವಂಚನೆ, ಮೋಸ, ಲಂಚಕೋರತನ ಇವೆಲ್ಲವೂ ಇಂದಿನ ಸಮಾಜದ ಏಳಿಗೆಯ ಪ್ರತೀಕವೆನಿಸಿದೆ. ಹೆಚ್ಚೆಚ್ಚು ಲಂಚ ಹೊಡೆದಷ್ಟು, ಹೆಚ್ಚು ವರದಕ್ಷಿಣೆ ಕೊಟ್ಟಷ್ಟು, ಹೆಚ್ಚು ಜನರನ್ನು ಮೋಸ ಮಾಡಿದಷ್ಟು ಅತಿ ಬುದ್ದಿವಂತಿಕೆ ಎನಿಸಿದೆ. ಮೊನ್ನೆ ಮೊನ್ನೆ ನನ್ನ ಸ್ನೇಹಿತನ ಮದುವೆಗೆಂದು ಮೈಸೂರಿಗೆ ಹೋಗಿ ಬಂದೆ, ಅವನು ಒಳ್ಳೆಯ ಉದ್ಯೋಗವನ್ನು ಮಾಜಿ ಮಂತ್ರಿಯ ಅನುಕಂಪದಿಂದ ಪಡೆದು, ಸಂಪಾದನೆಗೆ ತೊಡಗಿಸಿಕೊಂಡಿದ್ದಾನೆ. ನನ್ನ ಅನೇಕಾ ಸ್ನೇಹಿತರು ಮದುವೆಗೆ ಬಂದಿದ್ದರು, ಅವರೊಂದಿಗೆ ಮಾತನಾಡುವಾಗ, ಅವರೆಲ್ಲರಿಂದಲೂ ಬಂದ ವಿಷಯ ಲಂಚ, ದುಡ್ಡು, ದುಡ್ಡಿಲ್ಲದೇ ಬದುಕಿಲ್ಲ ಎನ್ನುವುದಕ್ಕಿಂತ, ದುಡ್ಡು ಹೊಡೆಯುವುದು ಚಾಣಾಕ್ಷತನ. ಅದರಂತೆಯೇ ಮನೆಗೆ ಬಂದಮೇಲೆ ನಮ್ಮ ಅಪ್ಪ ಫೋನ್ ಮಾಡಿ ಮೋಹನನ ಮದುವೆಗೆ ಹೋಗಿದ್ದ, ಎಂದರು. ನಾನು ಹೌದು ಎಂದಾಗ ಶುರು ಆಗಿದ್ದು, ವರದಕ್ಷಿಣೆಯ ವಿಷಯ, ಕಾರು ಕೊಟ್ಟಿದ್ದಾರಂತೆ, ಸೈಟು ಅಂತೇ?ನಾನು ಹೌದು ಬಿಡಿ ಅದರಲ್ಲೇನಿದೆ, ಇವನನ್ನು ಅವರು ಕೊಂಡುಕೊಂಡಿದ್ದಾರೆ ಎಂದರೇ, ನಮ್ಮಪ್ಪ ಹೇಳಿದರು, ಹುಡುಗಿಯ ತಂದೆ ನಮ್ಮ ಇಲಾಖೆಯವರು, ಬಹಳ ದುಡ್ಡು ಮಾಡಿದ್ದಾರೆ. ನಾನು ಹೇಳಿದೆ ಸರಿ ಹೋಯಿತಲ್ಲ, ಇವನು ಲಂಚಕೋರ ಅವರು ಲಂಚಕೋರರು ಮುಂದಿನ ಅವರ ಪೀಳಿಗೆಯೂ ಅಲ್ಲಿಗೆ ಬರುತ್ತದೆ ಬಿಡಿ. ನಮ್ಮಪ್ಪ ಅಷ್ಟೇ ಸಂಯಮದಿಂದ ಹೇಳಿದರು, ಲಂಚ ತೆಗೆದುಕೊಳ್ಳದೇ ಇದ್ದಿದ್ದರೇ ಇಷ್ಟೋಂದು ಅದ್ದೂರಿ ಮದುವೆಗೆ ಸಾಧ್ಯವಾಗುತ್ತಿತ್ತೇ?ನಾನು ಹೇಳಿದೆ, ಹೌದು ಲಂಚವಿಲ್ಲದೇ ಇದ್ದಿದ್ದರೇ ಮಾನವೀಯತೆಯ ತಳಹದಿಯಲ್ಲಿಯೇ ಇರಬೇಕಾಗುತ್ತದೆ ಬಿಡಿ. ಅದು ಯಾರಿಗೂ ಬೇಡದ ವಸ್ತು ಎಂದು. ಲಂಚ ಕೊಡುವುದು ನಮ್ಮ ವ್ಯವಸ್ಥೆಯ ಒಂದು ಭಾಗವೇ ಆಗಿದೆ. ಅದು ಅಪರಾಧವೆಂಬುದು ನಮ್ಮಿಂದ ಬಹಳ ದೂರಕ್ಕೆ ಹೋಗಿದೆ.
ನನ್ನ ಅನೇಕಾ ಸ್ನೇಹಿತರು ಸಮಾಜದ ಏಳಿಗೆಯ ಬಗೆಗೆ ಮಾತನಾಡಿದರೂ, ಲಂಚದ ವಿರುದ್ದ ಉದ್ದೂದ್ದ ಭಾಷಣ ಬಿಗಿದರೂ, ಕಡೆಗೆ ಲಂಚಕ್ಕೆ ಶರಣಾಗಿದ್ದಾರೆ. ಇದೆಲ್ಲವೂ ಪರಿಸ್ಥಿತಿಯ ಒತ್ತಡವೇ? ಮಂಜೇಶ್ ಕೆ.ಪಿ.ಎಸ್.ಸಿ ಯಲ್ಲಿ ಎರಡು ಲಕ್ಷ ಕೊಡಬೇಕು ಎಂದಾಗ ನಾನು ಸರಿ ನನ್ನ ಕೈಲಾದಷ್ಟು ನಾನು ಕೊಡುತ್ತೇನೆ ಎಂದೆ. ಇದು ನಾನು ಭ್ರಷ್ಟಾಚಾರಕ್ಕೆ ಪರೋಕ್ಷವಾಗಿ ಸಹಕರಿಸುತ್ತಿದ್ದೇನೆ ಎಂದಾಯಿತ್ತಲ್ಲ. ಲಂಚವೆನ್ನುವುದನ್ನು ನಾವು ಒಪ್ಪಿಕೊಂಡಿದ್ದೇವೆ ಎನ್ನುವುದನ್ನು ನಾವು ಒಪ್ಪಿಕೊಳ್ಳಲೇ ಬೇಕು ಅಲ್ಲವೇ! ನಾನು ಇದುವರೆಗೂ ಒಬ್ಬ ಸ್ನೇಹಿತನಿಗೂ ಲಂಚಕೊಟ್ಟು ಕೆಲಸಕ್ಕೆ ಸೇರಬಾರದು ಎಂದು ಹೇಳಲು ಸಾಧ್ಯವೇ ಆಗಿಲ್ಲ. ಹೇಳಿದರೇ ಅವರು ನಮ್ಮ ಮಾತನ್ನು ಕೇಳುವುದಿಲ್ಲ, ಲಂಚ ಕೊಡದೇ ಕೆಲಸವೇ ಆಗುವುದಿಲ್ಲವೆಂಬ ಸತ್ಯ ನಮಗೆ ಅರಿವಾಗಿದೆ.
ಅಸೂಯೆ ಎಂಬುದು ನಮ್ಮ ಮುಂದಿರುವ ಎರಡನೇ ಸವಾಲು, ನಾವು ನಮ್ಮನ್ನೇ ಪ್ರೀತಿಸದ, ಅಥವ ನಮ್ಮ ಮನೆಯವರನ್ನು, ಜೊತೆಯವರನ್ನು ಪ್ರೀತಿಸದ ಮಟ್ಟಕ್ಕೆ ಅಸೂಯೆಯ ಜೀವನವನ್ನು ಸಾಗಿಸುತಿದ್ದೇವೆ. ತಿಳಿದ ಮಟ್ಟಕ್ಕೆ ಸ್ನೇಹಿತರೆಂದು ಹೊರಗಡೆ ಹೇಳಿದರೂ, ಸ್ನೇಹಿತ ಒಂದು ಹೊಸ ಉಡುಪು, ಕಾರು, ಬೈಕು, ಸೈಟು ಅಥವಾ ಸಂಬಳ ಹೆಚ್ಚಿಗೆ ಪಡೆದಾಗ ಸಹಿಸಲಾರದಷ್ಟೂ ಮಟ್ಟಕ್ಕೆ ಹೋಗಿದ್ದೇವೆ. ಇದು ಯಾರನ್ನು ಹೊರತು ಪಡಿಸಿಲ್ಲ. ನಾನೇ ಮೇಲೆಂಬ ಅಹಂಕಾರ ಮಾತ್ರವಲ್ಲ, ನನಗೆ ಇಲ್ಲದ್ದು ಯಾರಿಗೂ ಬೇಡವೆನ್ನುವ ತುಚ್ಚ ಮನೋಭಾವ ಬಂದಿರುವುದು ಹೇಯವೆನಿಸುತ್ತದೆ. ಗಂಡ ಹೊಸದಾಗಿ ಮೊಬೈಲ್ ತೆಗೆದುಕೊಂಡರೇ ಅದನ್ನೂ ಅಸೂಯೆಯಿಂದ ಕಾಣುವ ಹಲವಾರು ಹೆಂಗಸರನ್ನು ನಾನು ಕಣ್ಣಾರೆ ಕಂಡಿದ್ದೇನೆ. ಮಕ್ಕಳಿಗೆ ಹೊಸದಾಗಿ ಏನಾದರು ಕೊಡಿಸಿದರೇ ಮುನಿಸಿಕೊಳ್ಳುವ ಮಹಿಳಾಮಣಿಯರಿದ್ದಾರೆ. ಇದೆಂಥಹ ಬದುಕು, ನಾವು ಎಲ್ಲಿ ಬದುಕುತ್ತಿದ್ದೇವೆ ಎನಿಸುತ್ತದೆ. ಸ್ವಂತ ಗಂಡನ ಅಥವಾ ಹೆಂಡತಿಯ ಏಳಿಗೆ ಸಹಿಸದವರು ಇಂಥಹ ಸಣ್ಣ ಬುದ್ದಿ ಇರುವವರು ಏನು ಸಾಧಿಸಿಯಾರು?
ಇದೆಲ್ಲವೂ ಒಂದೆಡೆಗೆಗಾದರೇ, ಮತ್ತೊಂದೆಡೆಗೆ ನನ್ನಂಥಹ ಹುಟ್ಟು ಸೋಮಾರಿಗಳು, ಯಾವುದನ್ನು ಮಾಡಲು ನಿರಾಸಕ್ತಿ ಹೊಂದಿದವರು. ಸದಾ ಮಲಗುವುದೋ, ಅಥವಾ ಒಮ್ಮೊಮ್ಮೆ ಹುಚ್ಚು ಬಂದಂತೆ ಸುತ್ತಾಡುವುದನ್ನು ಬಿಟ್ಟರೆ ಮಿಕ್ಕಾವ ಕೆಲಸವನ್ನು ನಾನು ಮಾಡಿಲ್ಲ. ಕೆಲವೊಮ್ಮೆ ನಾನು ಸೋಮಾರಿತನದ ಗುಂಗಿನಿಂದ ಹೊರಬರಲೋ ಅಥವಾ ಒಂದು ಬದಲಾವಣೆಯನ್ನೂ ನಿರೀಕ್ಷಿಸಿ ಸುತ್ತಾಡಲು, ಕಾಡು ಮೇಡು ಎಂದು ಅಲೆಯುವುದನ್ನು ನನ್ನ ಅನೇಕಾ ಸ್ನೇಹಿತರು ತಪ್ಪಾಗಿ ಅರ್ಥೈಸಿಕೊಂಡು ಅಬ್ಬಾ ನೀನು ನಿಜಕ್ಕೂ ಒಳ್ಳೆಯ ಅಭಿರುಚಿ ಇರುವಾತ. ಪ್ರವಾಸವೆಂದರೇ ಅದೆಷ್ಟು ಇಷ್ಟ ಪಡುತ್ತೀಯಾ! ಎಂದಿದ್ದಾರೆ. ಮೊನ್ನೆ ಯಾವತ್ತೋ ಹೆಂಡದ ಅಂಗಡಿಯಲ್ಲಿ ಕುಳಿತು ಹೆಂಡ ಕುಡಿಯುವಾಗ, ಪಕ್ಕದ ಮೇಜಿನಲ್ಲಿದ್ದವ ಹೇಳುತ್ತಿದ್ದ, ಆ ದಿನಗಳು ಬಹಳ ಚೆನ್ನಾಗಿದ್ದವು, ಕೆಲಸವಿರಲಿಲ್ಲ, ಕೇವಲ ಕುಡಿಯುವುದು, ಸೇದುವುದು, ಅಲೆಯುವುದು, ಮಹರಾಜನಂತಿದ್ದೆ ಎಂದು. ನಮ್ಮಲ್ಲಿರುವ ಅನೇಕಾ ಸಮಸ್ಯೆಗಳು ಉದ್ಬವವಾಗಿರುವುದು ಹೀಗೆಯೆ, ಮಹರಾಜ, ಮಹರಾಣಿ, ಹೀಗೆ ಕಲ್ಪನೆಗಳ ಕಾದಂಬರಿಗಳು ನಮ್ಮನ್ನು ದಾರಿ ತಪ್ಪಿಸಿವೆ. ರಾಜ ಮಹರಾಜರು ಜನರ ಜೀವನಕ್ಕೆ ದೇಶದ ಏಳಿಗೆಗೆ ಮಾಡಿದ ಸಾಹಸಗಳನ್ನು ಶ್ರಮಗಳನ್ನು ನಾವೆಂದು ಗುರುತಿಸಿಲ್ಲ, ಗುರುತಿಸಿದರೂ ಅವೆಲ್ಲವೂ ಸಾಮಾನ್ಯ ಜನತೆಗೆ ತಲುಪಿಸುವುದರಲ್ಲಿ ನಮ್ಮ ಪೂರ್ವಿಕರು ಸೋತಿದ್ದಾರೆ. ಇಂದಿಗೂ ಅಷ್ಟೇ, ನಮ್ಮ ಅನೇಕಾ ಸ್ನೇಹಿತರಿಗೆ ಅದರಲ್ಲಿಯೂ ಯುವಕರಿಗೆ, ಮಾದರಿ ನಾಯಕರಾಗಿರುವುದು ಇಂದಿನ ಅನೇಕಾ ರಾಜಕಾರಣಿಗಳು, ಅವರು ದೋಚಿರುವ ಕೋಟ್ಯಾಂತರ ರೂಪಾಯಿಗಳು, ಎಲ್ಲರನ್ನೂ ಆಕರ್ಷಿಸಿವೆ. ಕಾಲ್ ಸೆಂಟರ್ ಗಳು, ಐ.ಟಿ. ಬಿ ಟಿ ಗಳು ಹೀಗೆಯೇ ಅನೇಕ ಯುವಕರನ್ನು ಸೆಳೆದು ಕಡೆಗೆ ಬೀದಿಗೆ ತಂದು ನಿಲ್ಲಿಸಿದವು. ನಮ್ಮೂರಿನ ಅನೇಕಾ ಯುವಕರು ಬೆಂಗಳೂರಿಗೆ ಬರುವುದೊಂದು ಸಂತಸದ ಸುದ್ದಿಯೆಂದು ಇಲ್ಲಿಗೆ ಬಂದು ಪಡಬಾರದ ಕಷ್ಟ ಪಡೆಯುತಿದ್ದಾರೆ. ಆದರೂ ಅವರು ಊರಿಗೆ ಹೋದಾಗ ಅಲ್ಲಿನ ಹುಡುಗರಿಗೆ ಹೇಳುವುದು ಬೆಂಗಳೂರಿನ ವೈಭವದ ಬಗೆಗೆ, ಇಲ್ಲಿನ ಮೋಜಿನ ಬಗೆಗೆ, ಇಡೀ ಜೀವನದಲ್ಲಿ ಒಮ್ಮೆಯೂ ಇಲ್ಲಿನ ಪಬ್ ಗಳಿಗೆ, ಡಿಸ್ಕೋಗಳಿಗೆ, ಪಿ ವಿ ಆರ್ ಗೆ ಹೋಗದಿದ್ದರೂ ಊರಿಗೆ ಹೋದಾಗ ಅವರ ಬಾಯಲ್ಲಿ ನೀರು ಸುರಿಯುವ ಮಟ್ಟಿಗೆ ಅವರನ್ನು ಹುರಿದುಂಬಿಸುತ್ತಾರೆ.
ಹಳ್ಳಿಗಳಿಂದ ಪಟ್ಟಣಗಳಿಗೆ ಕೆಲಸ ಹುಡುಕಿ ಬರುವುದು ಇದೇ ಹೊಸತಲ್ಲ, ಅದು ಸನಾತನವಾಗಿದೆ. ಆದರೇ, ಅನಿವಾರ್ಯತೆ ಇಲ್ಲದೇ ಬರೀ ಮೋಜಿಗೆ ಬಂದು ಹಾಳಾಗಿ ಹೋಗುವ ಯುವಕರು ದಾರಿ ತಪ್ಪಿರುವುದು ವಿಪರ್ಯಾಸ. ಊರಿನಲ್ಲಿರುವ ಅನೇಕಾ ಯುವಕರು ಅಷ್ಟೇ, ನನ್ನಂತೆಯೇ, ಹಾಳಾಗಿ ಹೋಗಿದ್ದಾರೆ. ನಾನು ಬೆಂಗಳೂರಿನಲ್ಲಿದ್ದು, ಪಕ್ಕದಲ್ಲಿರುವ ಬಾರ್ ಗಳಲ್ಲಿ ಕುಡಿದರೇ, ಅವರು ನನ್ನೂರಿನಿಂದ ೬೦ ಕಿಮೀ ದೂರವಿರುವ ಹಾಸನಕ್ಕೋ, ಮೈಸೂರಿಗೋ, ಮಡಿಕೇರಿಗೋ ಹೋಗಿ ಕುಡಿದು, ಮೋಜು ಮಾಡಿ ಬರುತ್ತಿದ್ದಾರೆ. ನಮ್ಮೂರಿನ ನದಿ ದಂಡೆಯಲ್ಲಿ ಕುಳಿತು, ಕ್ಯಾಂಪ್ ಫೈರ್ ಹಾಕಿ ರಾತ್ರಿ ಇಡೀ ಕುಡಿದು, ಮೊಬೈಲ್ ನಲ್ಲಿರುವ ವಿಡೀಯೋ ಹಾಕಿ ಕುಣಿಯುತ್ತಾರೆ. ಮರಳು ತೆಗೆಯುವ ಕೆಲಸಕ್ಕೆ ಹೋಗುವಾಗ ನದಿ ದಂಡೆಯವರೆಗೂ ಬೈಕಿನಲ್ಲಿ ಹೋಗುವ ಇವರು, ಜೀನ್ಸ್ ಟೀ ಶರ್ಟ್ ಇಲ್ಲದೇ ಮನೆ ಬಿಟ್ಟು ಬರುವುದಿಲ್ಲ. ಗದ್ದೆ ಕೆಲಸಕ್ಕೆ ಕರೆದರೇ ಅದು ಯಾವುದೋ ಪಾಪ ಕಾರ್ಯಕ್ಕೆ ಕರೆಯುತ್ತಿದ್ದಾರೆನ್ನುವಂತೆ ನೋಡುತ್ತಾರೆ. ಇದೆಲ್ಲದರ ಹಿಂದಿರುವ ಅಂಶ ಒಂದೇ, ಮೋಜು, ಉಲ್ಲಾಸ.
ನನಗೂ ಕೆಲವರು ಸ್ನೇಹಿತರಿದ್ದಾರೆ ದುಡ್ಡಿಲ್ಲದೇ ಇರುವವರಲ್ಲ, ಎಲ್ಲವೂ ಅಧಿಕಾವಾಗಿರುವವರು, ದುಡ್ಡಿದೆ, ಆಸ್ತಿಯಿದೆ, ಎಲ್ಲವೂ ಇದೆ. ಕುಡಿಯುವ ಮೋಜು ಮಾಡುವ ಸುತ್ತಾಡುವ ಎಲ್ಲಾ ಹಂಬಲಗಳು ಇವೆ. ಆದರೇ ಅದರ ಖರ್ಚಿನ ವಿಷಯ ಬಂದಾಗ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ಸ್ನೇಹವೆಂಬುದನ್ನು ಬರಿಯ ಮಾತಿನಲ್ಲಿ ಬಿಟ್ಟರೇ ಮಿಕ್ಕೆಲ್ಲಾ ಸಮಯದಲ್ಲಿಯೂ ಅವರು ದೋಚುವುದನ್ನು ಬಿಟ್ಟರೇ ಇನ್ನೆನೂ ಮಾಡುವುದಿಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋದರೇ, ನಮ್ಮ ದುಡ್ಡಿನಲ್ಲಿ ಕುಡಿಯುವಾಗ, ಹೆಚ್ಚು ಬೆಲೆಯ ಹೆಂಡ ಕುಡಿಯುವ ಗೆಳೆಯನೊಬ್ಬ ಅವನ ಖರ್ಚಿನಲ್ಲಿ ಕಡಿಮೆ ಬೆಲೆಯ ಹೆಂಡ ಕುಡಿಯುವುದು. ಅದು ಅಲ್ಲದೇ, ನಾನು ತಿಳಿದಿರುವಂತೆ ಮನುಷ್ಯ ಅದೆಷ್ಟು ಕೆಳ ಮಟ್ಟಕ್ಕೆ ಇಳಿಯುತ್ತಾನೆಂದರೇ ಅಯ್ಯೋ ದೇವುಡಾ ಎನಿಸಿದೆ. ದುಡ್ಡಿಗೆ ಕೊಡುವ ಒಂದಂಶ ಸ್ನೇಹಕ್ಕೆ ಸಂಬಂಧಗಳಿಗೆ ಕೊಟ್ಟಿದಿದ್ದರೇ ಸಮಾಜ ಅದೆಲ್ಲಿಯೋ ನಿಂತಿರುತಿತ್ತು. ನನ್ನ ಅನೇಕಾ ಸ್ನೇಹಿತರಂತೂ, ಫೋನ್ ಮಾಡಿದ ತಕ್ಷಣ ಕೇಳುವ ಮೊದಲ ಸಾಲು, ಬಂದರೇ ಏನಾದರೂ ಇದೆಯಾ? ಏನು ಇಲ್ಲವೆಂದರೇ ಅವರು ಈ ಕಡೆಗೆ ಬರುವುದೇ ಇಲ್ಲ. ಎಂಥಹ ವಿಪರ್ಯಾಸವಲ್ಲವೇ, ಸ್ನೇಹಿತರು ನಿಮ್ಮನ್ನು ಕಾಣಲು ಬರಬೇಕೆಂದರೇ, ಅವರಿಗೆ ನೀವು, ಹೆಂಡ, ಸಿಗರೇಟು, ಮೋಜಿಗೊಂದು ಸಿನೆಮಾ ಇರಲೇ ಬೇಕು ಇದು ಸ್ನೇಹವಾ ವ್ಯಭಿಚಾರವಾ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...