08 ಸೆಪ್ಟೆಂಬರ್ 2010

ನಿರಂತರ ನಿರುತ್ತರ!!!

ಸತ್ತು ಹೋಗುವಷ್ಟೂ ನಿನ್ನನ್ನು ಪ್ರೀತಿಸುತ್ತೇನೆ, ನೀನಿಲ್ಲದೇ ನನ್ನ ಬದುಕೇ ಇಲ್ಲವೆಂದು ಎಲ್ಲರಿಗೂ ಹೇಳಲಾಗುವುದಿಲ್ಲ. ಇದು ನಿನಗೆ ನಿನ್ನೊಬ್ಬಳಿಗೆ ಮಾತ್ರ ಹೇಳಲು ಸಾಧ್ಯ. ನಿನಗಿಂತಲೂ ಬಹುದೊಡ್ಡದಾಗಿರುವುದು ಈ ಭೂಮಿಯಲ್ಲಿ ಇರಲು ಸಾಧ್ಯವಿಲ್ಲ. ನನ್ನ ಎಲ್ಲಾ ನಿನ್ನೆಗಳು, ಎಲ್ಲಾ ನಾಳೆಗಳು ನಿನ್ನಿಂದಲೇ ತುಂಬಿವೆ. ಎಲ್ಲಿಯೂ ಎಂದಿಗೂ ಬೇಡಿಲ್ಲ ಬೇಡುವ ಜಾಯಮಾನ ನನ್ನದಲ್ಲ, ಹಾಗೆಂದು ಕಿತ್ತುಕೊಳ್ಳುವ ಮನಸ್ಸು ನನ್ನದಲ್ಲ. ನನ್ನದು ಕೇವಲ ನನ್ನದನ್ನು ಮಾತ್ರವೇ ಇಷ್ಟ ಪಡುವ ಮನಸ್ಸು ನನ್ನದು. ಬೇರೆಯವರ ಏನನ್ನೂ ಬಯಸಿಲ್ಲ ಬಯಸುವುದೂ ಇಲ್ಲ. ಕೊಡುವುದರಲ್ಲಿರುವ ಸುಖವೇ ಬೇರೆ ಎಂದು ಎಂದೋ ಓದಿದ್ದನ್ನೇ, ಆದರೂ ನಾನು ನಿನ್ನ ಹಿಂದೆ ಅಲೆದು, ಅಲೆದು, ನಿನಗಾಗಿ ಪರದಾಡಿ, ನೀನು ಇನ್ನೇನೂ ಸಿಕ್ಕಿದೆ ಎನ್ನುವಾಗ, ನಿನ್ನಿಂದ ದೂರಾಗುವ ವೇಳೆ ಬಂತೆಂದರೇ, ಅದು ಆಘಾತವೇ ಸರಿ. ನಾನು ಇನ್ನೂ ಬದುಕಿ ಬರುವುದೇನು? ನೀನೇ ತಾನೇ ನನ್ನೆಲ್ಲಾ ಕನಸುಗಳಿಗೆಲ್ಲಾ ವಿಷಯವೇ ನೀನಲ್ಲವೇ. ಪ್ರತಿ ಕ್ಷಣ, ಕ್ಷಣದೊಳಗೂ ನಾನು ನಿನ್ನನ್ನೇ ಜಪಿಸುತ್ತಿದ್ದೆ. ಬರಡಾಗಿದ್ದ ಬಾಳಲ್ಲಿ ನೀನು ಬಂದೆ ಬೆಳಕಾಗಿ ಎನ್ನುವುದನ್ನು ನಾನು ಒಪ್ಪುವುದಿಲ್ಲ. ನನ್ನ ಜೀವನ ಇತ್ತು ಅದಕ್ಕೊಂದು ರೂಪು ಬೇಕಿತ್ತು. ಆ ಸಮಯಕ್ಕೆ ನೀನು ಬಂದೆ, ಮೂರು ದಿನವಾ ಮೂರು ವರ್ಷವಾ ಮುವತ್ತು ತಿಂಗಳ? ನನ್ನೆಲ್ಲಾ ನಗುವಿಗೂ ಕಾರಣವಾದವಳು ನೀನಲ್ಲವೇ? ಕೇವಲ ನಗು ತಂದಿದ್ದಕ್ಕೆ ನನಗೆ ನೀನು ಹಿಡಿಸಿದ್ದಲ್ಲಾ, ನಿನ್ನಲ್ಲಿರುವ ಸಾವಿರ ಸಾವಿರ ಗುಣಗಳು ನಿನ್ನೊಂದಿಗೆ ಬೆರೆಯಲು ನನ್ನನ್ನು ಸೆಳೆದಿವೆ. ಕೇವಲ, ಹೊರನೋಟಕ್ಕೆ ನಾನು ನಿನ್ನನ್ನು ಇಷ್ಟಪಡಲಿಲ್ಲ. ಕೆಟ್ಟ ಕಾಲದಲ್ಲಿ, ನಮ್ಮ ನೆರಳು ಕೂಡ ನಮ್ಮ ಹಿಂದೆ ಬರುವುದಿಲ್ಲ.
ಇದು ಬಹಳ ಸತ್ಯವೆನಿಸಿದರೂ, ಕೂಡ ನಾವು ಎಂಥಹ ಸಮಯದಿಲ್ಲಿದ್ದರೂ, ನಮ್ಮೊಂದಿಗಿರುವುದು, ನೆನಪು. ಜೀವನದಲ್ಲಿ ಬರುವ ಎಲ್ಲಾ ಕೆಟ್ಟ ದಿನಗಳನ್ನು ನೆನಪಿಡುವ ನಾವು, ಒಳ್ಳೆಯ ಕ್ಷಣಗಳ್ಳನ್ನು ನಿರ್ಲಕ್ಷಿಸುವುದು ಏಕೆ? ನಾವು ಪ್ರೀತಿಸಿದ ವ್ಯಕ್ತಿ ದೂರಾದೊಡನೆ ಅವರ ನೆನಪುಗಳು ಸತ್ತು ಹೋಗುವುದಾದರೂ ಏಕೆ? ನೆನಪುಗಳನ್ನೆ ಕಟ್ಟಿ ಬದುಕಬೇಕಾ? ಇಲ್ಲ ಅವರೊಂದಿಗಿದ್ದ ಕ್ಷಣಗಳ ಒಳ್ಳೆಯದನ್ನು ಬಯಸಿ ಅದನ್ನು ಮಾತ್ರ ಇಟ್ಟು ಬದುಕುವ ಮಾರ್ಗ ಹುಡುಕಬೇಕಲ್ಲವೆ. ಬದುಕಿದ್ದು ನಮ್ಮನ್ನು ಬಿಟ್ಟು ಹೋದರೆ ನಾವು ವ್ಯಥೆ ಪಡುತ್ತೇವೆ, ಸಾಯಲು ಪ್ರಯತ್ನಿಸುತ್ತೇವೆ, ನನ್ನಂಥಹ ಕುಡುಕರಿಗೊಂದು ಅವಕಾಶ ಸಿಗುತ್ತದೆ, ದುಃಖವೆಂದು ಬಣ್ಣ ಕಟ್ಟಿ ಕುಡಿಯುತ್ತೇವೆ, ಕುಡಿದ ಅಮಲಿನಲ್ಲಿ ಪ್ರೀತಿಯನ್ನು ಸಪ್ಪೆಯಾಗಿಸುತ್ತೇವೆ. ಕುಡಿದಾಗ ಪ್ರೀತಿಯ ಮೇಲೆ ಬರುವ ಅಸಹ್ಯಕರ ಮಾತುಗಳು, ವರ್ಷಗಟ್ಟಲೇ ಪ್ರೀತಿಸಿದ ಜೀವವನ್ನು ಮಾನಭಂಗ ಮಾಡುತ್ತವೆ. ಎಂಥಹ ಕೊಳಕು ಮನಸ್ಸು ನಮ್ಮದಲ್ಲವೇ? ಕುಡಿದ ಅಮಲಿನಲ್ಲಿ ಕೆಲವೊಮ್ಮೆ ಪ್ರೀತಿಯ ಬಗೆಗೆ ಮರುಕಂಪ ಬರುತ್ತದೆ, ಪ್ರೀತಿಸಿದವರ ಮೇಲೆ ಅನುಕಂಪವುಂಟಾಗುತ್ತದೆ. ಅವರ ಸನ್ನಿವೇಶ, ಪರಿಸ್ಥಿತಿ, ನಮ್ಮನ್ನು ಎಬ್ಬಿಸುತ್ತದೆ. ಪರಿಸ್ಥಿತಿಯನ್ನು ಎದುರಿಸದೇ ದೂರಾಗುವದಾ ಪ್ರಿತಿ, ಪ್ರೀತಿಗಾಗಿ ಏನು ಬೇಕಿದ್ದರೂ ಮಾಡಬೇಕು, ಮಾಡಿ ಜಯಿಸಬೇಕೆಂದು ಬೊಬ್ಬೆ ಹೊಡೆಯುವ ಮಂದಿ ಹಲವಾರು ಸಿಗಬಹುದು. ಪ್ರೀತಿ ಪರಿಸ್ಥಿತಿಯಿಂದ ಬದಲಾಗುವುದಿಲ್ಲ, ಬದಲಾಗುವುದು ಮನಸ್ಥಿತಿ, ಕಷ್ಟಕಾರ್ಪನ್ಯಗಳು, ಪ್ರೀತಿಯನ್ನು ಮಂಕಾಗಿಸುತ್ತದೆ. ಹಣದ, ಅಧಿಕಾರದ ಅಥವಾ ಮತ್ತ್ಯಾವುದೋ ವಸ್ತುಗಾಗಿ ಓಡಾಡುವವರ ಬಗೆಗೆ ನನ್ನ ಮಾತಲ್ಲ. ನನ್ನ ಮಾತು, ಇಬ್ಬರೂ ಒಬ್ಬರಾಗಿದ್ದವರ ಪ್ರೀತಿ.
ಇಲ್ಲಿ ನೈತಿಕತೆ ಅನೈತಿಕತೆ ಮಾತು ಬರುವುದೇ ಇಲ್ಲ, ಒಬ್ಬರು ಮತ್ತೊಬ್ಬರಿಗೆ ವಸ್ತುವಲ್ಲ, ಅಧಿಕಾರವೂ ಅಲ್ಲ. ಜೀವನದಲ್ಲಿ ಅತಿ ಹೆಚ್ಚು ಭಯ ಪಡಿಸುವ, ಬೆಚ್ಚಿ ಬೀಳಿಸುವ ಪದವೆಂದರೇ, ರಿಜೆಕ್ಟ್, ತಿರಸ್ಕಾರ. ಯಾವುದೇ ವ್ಯಕ್ತಿಯನ್ನು ಕೇವಲ ಇದೊಂದೇ ಒಂದು ಪದದಿಂದ ಕೊಲ್ಲಬಹುದು. ಒಬ್ಬ ಮನುಷ್ಯ ಮತ್ತೊಬ್ಬನಿಂದ ತಿರಸ್ಕಾರಗೊಂಡಿದ್ದಾನೆಂದರೆ ಅವನ ಮನಸ್ಥಿತಿ ನಿಯಂತ್ರಣದಲ್ಲಿರುವುದಿಲ್ಲ. ಅನೇಕಾ ಪ್ರೀತಿ ಪ್ರೇಮದ ವಿಷಯದಲ್ಲಿ ಆತ್ಮ ಹತ್ಯೆ, ಕೊಲೆ, ಆಸಿಡ್ ಪ್ರಕರಣಗಳು ಬರುವುದು ಇದೊಂದರಿಂದಲೇ, ಅದೇ ತಿರಸ್ಕಾರ. ನನಗೂ ಹೀಗೆಯೇ ಆಗಿತ್ತಾ?ನಾನು ಯಾವುದೋ ಮೂಲೆಯಲ್ಲಿ ನನಗೆ ಎನಿಸಿತ್ತಾ ನಾನು ತಿರಸ್ಕಾರಗೊಂಡವನು ಎಂದು? ಇದಕ್ಕೆ ನನ್ನಲ್ಲಿ ಉತ್ತರವಿಲ್ಲ, ನಾನು ತಿರಸ್ಕಾರಗೊಂಡವನಾ? ಅಥವಾ ನಾನೇ ತಿರಸ್ಕರಿಸಿದೇನಾ? ಇದಕ್ಕೆ ಉತ್ತರವಿಲ್ಲ. ಇದೆಲ್ಲವೂ ಪರಿಸ್ಥಿತಿಯ ಮೇಲೆ ನಿಂತಿದೆ ಎಂದರೇ, ನಾನು ಬೇಜವಬ್ದಾರಿ ಮನುಷ್ಯನಾಗುತ್ತೇನೆ. ನಿನ್ನೊಂದಿಗೆ ಇರುತ್ತೇನೆಂದರೇ ಅದು ಆಗುವ ಮಾತಾ? ಎನಿಸುತ್ತದೆ. ಇದಕ್ಕೆಲ್ಲಾ ಉತ್ತರವೆಲ್ಲಿ? ನಾನು ಕಟ್ಟಿದ ಕನಸಿನ ಗೋಪುರದೊಳಗೆ ಹೋಗುವ ಮುನ್ನವೇ ಕುಸಿದು ಬಿದ್ದರೇ!
ಕನಸು ಕಾಣುವುದು ತಪ್ಪಲ್ಲಾ ಆದರೇ, ನಾವು ಕಂಡ ಕನಸೆಲ್ಲಾ ನನಸಾಗಬೇಕೆಂಬುದು ನಮ್ಮ ದುರ್ಬುದ್ದಿ ಮತ್ತು ದುರಾಸೆ. ಜೀವನದಲ್ಲಿ ಬಂದು ಹೋಗುವುದು ಪ್ರೀತಿ, ಪ್ರೀತಿಯಲ್ಲಿ ಜೀವನ ಬರುವುದಿಲ್ಲ. ಪ್ರೀತಿ ಬರುವ ಮುಂಚೆಯೂ ಜೀವನವಿತ್ತು ಪ್ರೀತಿ ಹೋದ ಮೇಲೆ ಕೂಡ ಜೀವನವಿರುತ್ತದೆ. ಹಾಗಿದ್ದಲ್ಲಿ ಪ್ರೀತಿಗಾಗಿ ಇಷ್ಟೊಂದು ಚಡಪಡಿಕೆ ಏಕೆ? ನಾನು ನಿರುತ್ತರ. ದಾಸ್ಯನಾಗುವುದು ಎಂದಿಗೂ ಎಂದೆಂದಿಗೂ ತಪ್ಪು. ನಾನು ಕುಡಿತಕ್ಕೆ ದಾಸ್ಯನಾದೆ, ಕುಡಿತದಿಂದ ಸಿಗರೇಟಿಗೆ ದಾಸ್ಯನಾದೆ, ನಿದ್ದೆಗೆ ದಾಸ್ಯನಾದೆ, ನಿದ್ದೆಯಿಂದಾಗಿ ಸೋಮಾರಿತನಕ್ಕೆ ದಾಸ್ಯನಾದೆ, ಸೋಮಾರಿತನವನ್ನು ತೊಡಗಿಸಲು ಸುತ್ತಾಟವನ್ನು ಮೈಮೇಲೆ ಏರಿಸಿಕೊಂಡೆ, ಸುತ್ತಾಟ ಯಾವ ಪರಿ ನನ್ನನ್ನು ಆಳತೊಡಗಿತ್ತೆಂದರೇ, ವಾರಕೊಮ್ಮೆಯಾದರೂ ನಾನು ಸುತ್ತಾಡಲೇ ಬೇಕೆನ್ನುವ ಮಟ್ಟಕ್ಕೆ ಏರಿದೆ. ಮಾಡುವ ಕೆಲಸ ಬಿಟ್ಟು, ಪಿ ಎಚ್ ಡಿ ಎಂಬ ಪದಕ್ಕೆ ಮಣ್ಣು ಹಾಕಿ, ಸಂಬಳ ಕೊಡುವ ಕಂಪನಿಗೆ ಸರಿಯಾಗಿ ಕೆಲಸ ಮಾಡಿ ಒಪ್ಪಿಸಲಾರದ ಮಟ್ಟಿಗೆ, ಅಥವಾ ಪ್ರಾಣದ ಹಂಗನ್ನು ತೊರೆದು, ಒಂಬತ್ತು ಗುಡ್ಡದಲ್ಲಿ ಸತ್ತರೂ ಸರಿಯೇ ಎಂದು ಬೀಗುವ ಮಟ್ಟಕ್ಕೆ ಹೋದೆ. ಜೀವನದಲ್ಲಿ ಏನನ್ನು ಗಂಬೀರವಾಗಿ ಪರಿಗಣಿಸಬಾರದು ಆದರೇ ನಾನು ಜೀವನದ ಗಂಭೀರತೆಯನ್ನು ಮರೆತೆ ಮರೆತೆ ಎನ್ನುವುದಕ್ಕಿಂತ ಹೆಚ್ಚಾಗಿ ನನ್ನ ಉಢಾಫೆತನವೇ ಕಾರಣ.
ದೇಶದ ಬಗೆಗೆ, ಸಮಾಜದ ಬಗೆಗೆ, ವಿಜ್ನಾನದ ಬಗೆಗೆ ಸಂಸ್ಕೃತಿಯ ಬಗೆಗೆ ಉದ್ದುದ್ದ ಮಾತನಾಡಿ ಎಲ್ಲರೂ ಸರಿಯಿಲ್ಲವೆಂಬು ಒಂದೇ ಕಾರಣವನ್ನು ಇಟ್ಟುಕೊಂಡು ನಾನು ತಪ್ಪಾದೆ. ದೇಶದ ಬಗೆಗೆ ಮಾತನಾಡುವಾಗ ನನ್ನ ಸಾಧನೆ ಏನು? ನಾನು ಮಾಡಿರುವುದಾದರೂ ಏನು? ಈ ಪ್ರಶ್ನೆಯನ್ನು ನನ್ನ ಮುಂದೆ ಕೇಳಿದರೇ ನಾನು ನಿರುತ್ತರ. ಅಂಗವೈಕಲ್ಯವಿಲ್ಲ, ಕುರುಡು ಇಲ್ಲ, ಕೈ ಕಾಲು ಸರಿ ಇದೆ, ವಿದ್ಯೆ ಎಂಬುದು ಕೂಡ ಇದೆ, ಆದರೂ ಅದನ್ನು ಮೀರಿ ಬೆಳೆದ ಸೋಮಾರಿತನ ನನ್ನನ್ನು ಆಳಿದೆ ಆಳುತ್ತಿದೆ. ಓದುವಾಗ ಹಾತೊರೆಯುತ್ತಿದ್ದ ನಾನು ಕೆಲಸಕ್ಕೆ ಸೇರಿದ ಮರು ಕ್ಷಣ ಸೋಮಾರಿಯಾಗತೊಡಗಿದೆ. ಯಾರಿಗೂ ಇಲ್ಲದ ಕಡೆಗೆ ನನ್ನನ್ನು ನಾನು ಪೋಷಿಸಿಕೊಳ್ಳಲಾಗದ ಮಟ್ಟಕ್ಕೆ ಇಳಿದೆ. ಇವೆಲ್ಲವೂ ಒಂದು ದಿನದಲ್ಲಿ ಆದುದಲ್ಲ. ನಾನು ದಿನೇ ದಿನೇ ಕುಡಿದು, ಯಾವ ಕುಡುಕನಿಗೂ ಕಡಿಮೆಯಿಲ್ಲದ ಹಾಗೆ ಲಿವರ್ ತೂತು ಆಗುವ ತನಕ ಕಿಡ್ನಿಗೆ ತೊಂದರೆಯಿದೆ ಎನ್ನುವ ತನಕ ಕುಡಿದಿದ್ದೇನೆಂದರೆ ನಿಜಕ್ಕೂ ನಾನು ಕುಡಿದಿರುವುದೆಷ್ಟು? ನಾನು ಸೇದಿರುವುದೆಷ್ಟು? ಅರ್ಥವಿಲ್ಲದೇ ಸುತ್ತಿರುವುದೆಷ್ಟು? ಕೆಲಸಕ್ಕೆ ಬಾರದ ಮೂರನೇ ಗ್ರೇಡಿನ ಸಿನೆಮಾ ನೋಡಿರುವುದೆಷ್ಟು? ಇದಕ್ಕೆಲ್ಲಾ ನಾನು ನಿರುತ್ತರ. ಮನ ಬಿಚ್ಚಿ ನನ್ನನ್ನು ನಾನೇ ಪ್ರಶ್ನಿಸಿದರೂ ನನ್ನನ್ನು ನಾನು ಸಮರ್ಥಿಸಿಕೊಳ್ಳಲಾರದ ಮಟ್ಟಕ್ಕೆ ಇಳಿದಿದ್ದೇನೆ. ಇಷ್ಟೆಲ್ಲಾ ಇಟ್ಟುಕೊಂಡು ಪ್ರೀತಿಯ ಹಿಂದೆ ಬಿದ್ದು ಪ್ರೀತಿಸಿದವಳನ್ನು ಪೀಡಿಸಿ, ಕಾಡಿಸಿ ಕಡೆಗೆ ಅವಳೆಡೆಗೂ ಒಮ್ಮೆ ತಾತ್ಸಾರ ಮೂಡಬಹುದಲ್ಲವೇ? ಆಗಲೂ ನಾನು ನಿರುತ್ತರ. ಜವಬ್ದಾರಿಯೆನ್ನುವ ಪದ ಬಂದರೇ ನಾನು ನಿರುತ್ತರವೇ?
ಸೋಮಾರಿತನದ ಪರಮಾವಧಿಯಲ್ಲಿಯೂ ಕಾರಣಗಳ ಅಂತೆ ಕಂತೆಗಳು ಸುರಿಮಳೆಯಿದೆ. ರಾತ್ರಿ ಎರಡು ಗಂಟೆಯ ತನಕ ಕುಡಿದು, ಗಾಡಿಯಲ್ಲಿಯ ಪೆಟ್ರೋಲ್ ಇರುವ ತನಕ ಹೋಗಿ ಅಲ್ಲಿಂದ ತಲ್ಲಿಕೊಂಡು ಬರೋಣ ಎನ್ನುವ ಹುಚ್ಚುತನ ನನಗಲ್ಲದೇ ಬೇರಾರಿಗೆ ಬರಲು ಸಾಧ್ಯ. ರಾತ್ರೋ ರಾತ್ರಿ ಬೈಕ್ ಹಿಡಿದು, ಕುಡಿದ ಅಮಲಿನಲ್ಲಿಯೋ ಅಥವಾ ತಲೆ ಕೆಟ್ಟ ಮಂಕಿನಲ್ಲಿಯೋ, ಅಥವಾ ಉಢಾಫೆತನದಲ್ಲಿಯೋ, ಮಡಿಕೇರಿಗೆ ಹೋದದ್ದು, ಕೆಮ್ಮಣ್ಣು ಗುಂಡಿಯ ತನಕ ಹೋದದ್ದು ಇವೆಲ್ಲವೂ ಪ್ರವಾಸವೇ? ನನ್ನ ತೆವಳಿಗೆ, ನನ್ನ ತಲೆ ಕೆಟ್ತ ಮೋಜಿ ನನ್ನ ಸ್ನೇಹಿತರಿಗೆಲ್ಲರಿಗೂ ತೊಂದರೆ ಸ್ನೇಹಿತರಿಗೆಲ್ಲಾ ಫೋನ್ ಮಾಡಿ ಅಲ್ಲಿಗೆ ಬರುತ್ತೇನೆಂದು ಹೇಳಿ ನಡು ರಾತ್ರಿಯವರೆಗೂ ಅವರು ನನಗಾಗಿ ಕಾದು ಕುಳಿತಿರುವುದು ಅವರ ಪೋಷಕರು ಅಯ್ಯೊ ಎಂಥಹ ಸ್ನೇಹಿತರಪ್ಪ ಇವರೆಲ್ಲಾ ಎಂದುಕೊಂಡಿರುವುದಿಲ್ಲವೇ? ಮುಂಜಾನೆ ನಾಲ್ಕು ಗಂಟೆಗೆ ಬೈಕ್ ಹತ್ತಿ ನಿರಂತರ ಮಧ್ಯರಾತ್ರಿ ಎರಡು ಗಂಟೆಯ ತನಕ ಸಂಪೂರ್ಣ ಸವೆದು ಹೋಗಿದ್ದ ಟೈರ್ ಅನ್ನು ಗಮನಿಸದೇ ಗಮನಕ್ಕೆ ಬಂದಿದ್ದರೂ ಕೂಡ ನಿರ್ಲಕ್ಷಿಸಿ, ಕುಶಾಲನಗರದಿಂದ, ಸೋಮವಾರಪೇಟೆ, ಬಿಸಿಲೆ ಘಾಟ್, ಸುಬ್ರಹ್ಮಣ್ಯ, ಸುಳ್ಯಾ, ಮಡಿಕೇರಿ, ಹೀಗೆ ಸುತ್ತಾಡಿ ಬರುವ ಮಟ್ಟಕ್ಕೆ ಬಂದಿದ್ದೇನೆಂದರೇ ನನ್ನ ಬೇಜವಬ್ದಾರಿತನದ ಹಿರಿಮೆ ಎಂಥಹದ್ದು. ನನ್ನ ಮಾತು ಎಲ್ಲಿಂದ ಎಲ್ಲಿಗೋ ಹೋಗುತ್ತಿದೆ. ಏನೇ ಹೇಳಿದರೂ ಎಲ್ಲವೂ ನನ್ನಯ ಬಗೆಗೆ ನನ್ನ ಸೋಮಾರಿತನದ ಬದುಕಿನ ಬಗೆಗೆಂಬುದು ಸತ್ಯ. ನಾನು ನನ್ನ ತೆವಳಿಗೆ, ಮನದಲ್ಲಿರುವುದನ್ನು ತೆಗೆದು ಅಕ್ಷರಗಳನ್ನಾಗಿಸುತಿದ್ದೇನೆ, ಅದನ್ನೆಲ್ಲಾ ನಿಮ್ಮ ಅಮೂಲ್ಯ ಸಮಯ ಕಳೆಯಲು ಓದಬೇಡಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...