12 ಸೆಪ್ಟೆಂಬರ್ 2010

ಮೋಜಿನ ಅಮಲಿಗೆ ಮತ್ತೊಂದು ಹೆಸರು ಲಾಂಗ್ ರೈಡ್!!!!!!!!!!!!!

ಒಮ್ಮೆ ಬರೆದ ಮೇಲೆ ನಂತರ ನಾವು ಅದನ್ನು ಓದಲು ಹೋಗಬಾರದು, ಅಲ್ಲಿರುವ ತಪ್ಪುಗಳು, ಅಥವಾ ಅಲ್ಲಿರುವ ವ್ಯಾಕನಗಳು ಆ ಕ್ಷಣಕ್ಕೆ ಮಾತ್ರ ಸೀಮಿತವಾಗಿರುತ್ತವೆ. ಅಂದರೇ, ಹೇಳಿದ ಮಾತನ್ನು ಬದಲಾಯಿಸುತ್ತೇನೆಂದಲ್ಲ. ನಾನು ಏನೇ ಬರೆಯ ಹೊರಟರು ನನ್ನ ಮನಸ್ಸಿನಲ್ಲಿ ಮೂಡುವುದು, ನನ್ನಯ ಬಗೆಗಿನ ಉಪೇಕ್ಷೆ ಮಾತ್ರ. ನನ್ನ ಸೋಮಾರಿತನ, ನನ್ನ ಉಢಾಫೆತನ, ಜೀವನದೆಡೆಗಿನ ತಾತ್ಸಾರ, ತಿರಸ್ಕಾರ, ಬೇಜವಬ್ದಾರಿತನ. ಇಂಥಹುದೆಲ್ಲದ್ದನ್ನು ನಾನು ಸರಿತೂಗಿಸಲು ಅಥವಾ ಅದಕ್ಕೊಂದು ಗರಿ ತುಂಬಲು ಬಳಸಿದ್ದು, ಲಾಂಗ್ ರೈಡ್ ಎಂಬ ಬೈಕಿನ ಸವಾರಿ. ಹುಚ್ಚುತನದ ಉದ್ದಟತನದ ಬಗೆಗೆ ಕೆಲವೊಂದು ಅಂಶಗಳನ್ನು ಇಲ್ಲಿ ಬರೆಯಲೇಬೇಕಾಗಿದೆ. ನಾನು ಹೈದರಾಬಾದಿನಿಂದ ಬಂದಾಗಿನಿಂದ ನನ್ನಯ ಉಢಾಫೆತನ ಮಿತಿ ಮೀರಿ ಬೆಳೆಯತೊಡಗಿತು. ನಡು ರಾತ್ರಿಯವರೆಗೆ ಕುಡಿಯುವುದು, ಕುಡಿದ ಮೇಲೆ, ಬೈಕಿನಲ್ಲಿ ಪೆಟ್ರೋಲ್ ಇದೆಯೋ ಇಲ್ಲವೋ? ಗಾಡಿ ಕಂಡಿಷನ್ ಹೇಗಿದೆ? ಟೈರ್ ಸರಿ ಇದೆಯಾ? ಇಲ್ಲಾ ಇವ್ಯಾವುದೂ ನಮ್ಮಗೆ ಪ್ರಶ್ನೆಗಳೇ ಅಲ್ಲಾ. ಮಗಾ ಎಲ್ಲಿ ಆದರೂ ಹೋಗೋಣ, ಸರಿ ನಡಿ ಮುಗಿದೇ ಹೋಯಿತು. ಕುಡಿದ ಅಮಲಿನಲ್ಲಿ ಇಲ್ಲಿಂದ ಹೊರಟು ಮೈಸೂರು ಸೇರುವಾಗ ಮುಂಜಾನೆ ಐದು ಗಂಟೆ, ಎಲ್ಲಿಗೆ ಹೋಗುವುದು, ಅಲ್ಲಿರುವ ಸ್ನೇಹಿತರನ್ನು ಮಾತನಾಡಿಸಿಕೊಂಡು, ಹುಣಸೂರು ತಲುಪಿದೆವು. ಅಲ್ಲಿಂದ, ನಾಗರಹೊಳೆಗೆ ಹೋಗೋಣವೆಂದರೇ, ಇಲ್ಲ ಅಲ್ಲಿಗೆ ಬೈಕ್ ಗಳು ಹೋಗುವಂತಿಲ್ಲ. ಸರಿ ಬೇಡ ನಡಿ ಮಡಿಕೇರಿಗೆ ಹೋಗೋಣ. ಕುಶಾಲನಗರಕ್ಕೆ ಬಂದು ಮತ್ತೆ ಕುಡಿದು, ನಿಸರ್ಗಧಾಮದಲ್ಲಿ ಮಲಗಿದೆವು. ಸಂಜೆ ಆಗುವ ಸಮಯಕ್ಕೆ, ಮಂಜೇಶ್ ಗೆ ಫೋನ್ ಮಾಡಿ ಹೇಳಿದೊಡನೆ ಬನ್ನಿ ಮನೆಗೆ ಎಂದ ಅದಕ್ಕೋಸ್ಕರವೇ ತಾನೇ ನಾವು ಕಾಯ್ದಿದ್ದು. ಅಲ್ಲಿಗೆ ಹೋದರೆ, ಅವರ ಅಪ್ಪ ಸ್ವಲ್ಪ ಕುಡಿಯಿರಿ ಎಂದರು. ಮತ್ತೆ ಕುಡಿತದ ಅಮಲಿಗೆ. ನನಗೆ ನಡು ರಾತ್ರಿಯಲ್ಲಿ ಕುಡಿ ಎಂದರೂ, ಮುಂಜಾವಿನಲ್ಲಿ ಕುಡಿ ಎಂದರೂ ನೀರಿನಷ್ಟೇ ನಿರಾಳವಾಗಿ ಕುಡಿಯುತ್ತೇನೆಂಬುದು ಪಾಪ ಮಂಜೇಶ್ ಅವರ ಅಪ್ಪನಿಗೂ ಅರಿವಾಗಿದೆ.
ಮಂಜೇಶ್ ಅವರ ಅಪ್ಪ ಎಂದರೇ ನನಗಂತು ಬಹಳ ಅಭಿಮಾನ, ಕೇವಲ ಜೊತೆಯಲ್ಲಿ ಕುಡಿಯುತ್ತಾರೆಂಬುದಕ್ಕಲ್ಲ. ಅವರ ಎಂಥಹ ಕಿರಿಯರನ್ನು ಸ್ನೇಹಿತರಂತೆ ಮಾತನಾಡಿಸುತ್ತಾರೆ, ವಿಚಾರಿಸುತ್ತಾರೆ, ಸ್ವಲ್ಪವೂ ಅಹಂಕಾರವಿಲ್ಲದ ಸರಳತೆಯ ಮನುಷ್ಯ.ಅಲ್ಲಿಂದ ಮರುದಿನ ಬೆಳ್ಳಿಗ್ಗೆ ಎದ್ದು ಸುರಿಯುತಿದ್ದ ಮಳೆಯಲ್ಲಿಯೇ, ಎರಡು ಬೈಕ್ ಹತ್ತಿ ಮಡಿಕೇರಿ ಕಡೆಗೆ ಹೊರಟೆವು. ನಾನು ವಿಜಿ ಮಳೆಯಲ್ಲಿ ನೆನೆಯುವುದನ್ನು ಆನಂದಿಸುತಿದ್ದರೇ, ರೋಹಿತ್ ಮತ್ತು ಮಂಜೇಶ್ ಯಾರಿಗೆ ಬೇಕಿತ್ತು ಈ ಸಂಚಾರಿ, ಸವಾರಿ ಎಂದುಕೊಳ್ಳುತಿದ್ದರು. ಮಳೆಯಲ್ಲಿ ನೆನೆಯುವುದರ ಖುಷಿಯನ್ನು ಅನುಭವಿಸಿ ಆನಂದಿಸಿದರೇ ಮಾತ್ರ ತಿಳಿಯುತ್ತದೆ. ನಾನು ನನ್ನ ಕಾಲೇಜು ದಿನಗಳಲ್ಲಿ, ಮಳೆ ಬಂತೆಂದರೇ, ನಾನು, ದ್ವಾರಕೇಶ್, ಕಾಂತ, ಕಿಟ್ಟಿ, ರಘು ರಾತ್ರಿ ನಡು ರಾತ್ರಿ ಎನ್ನದೇ, ಮಳೆಯಲ್ಲಿ ನೆನೆದುಕೊಂಡು ಹಾಸ್ಟೇಲ್ ಇಂದ, ಹೊರಗೆ ನಡೆದು ಕುಣಿದು ಬರುತಿದ್ದೆವು. ಹಾಗೆಲ್ಲಾ ಬೆಂಗಳೂರಿನ ಅಲ್ಪ ಸ್ವಲ್ಪ ಮಳೆಗೆ ಅಷ್ಟೊಂದು ಖುಷಿ ಪಡುತ್ತಿದ್ದ ನಾವು, ಇಂಥಹ ಮಲೆನಾಡಿನ ಮಡಿಲಲ್ಲಿ ಸುರಿಯುವ ಜಡಿ ಮಳೆಯನ್ನು ಆನಂದಿಸದೇ ಇರಲು ಸಾಧ್ಯವೇ? ಕೊಡಗಿನಲ್ಲಿ ಕೇರಳ ಹೋಟೆಲ್ ಗಳಲ್ಲಿ ಕೊಡುವು ಉದ್ದನೆಯ ಗಾಜಿನ ಲೋಟದಲ್ಲಿನ ಟೀಯನ್ನು ಸವಿದವನೇ ಸವಿಯಬೇಕು. ಮಡಿಕೇರಿಗೆ ಹೋಗಿ ಅಲ್ಲಿಂದ ಗಾಳಿಪಟ ಸಿನೆಮಾ ತೆಗೆದಿರುವ ಮಂದಾಲಪಟ್ಟಿಗೆ ಹೊರಟೆವು. ಅದ್ಬುತವಾದ ಸ್ಥಳ, ಅದೆಷ್ಟು ಸೊಗಸಾಗಿದೆಯೆಂದರೇ ಹೇಳತೀರದು. ಅಲ್ಲಿ ಸ್ವಲ್ಪ ಸಮಯ ಕಳೆದ ನಂತರ ಮರಳಿ ಮಡಿಕೇರಿಗೆ ಬಂದೆವು. ಮಳೆ ಇನ್ನೂ ಸುರಿಯುತ್ತಲೇ ಇತ್ತು.
ಮಡಿಕೇರಿಗೆ ಬಂದವರು, ಅಲ್ಲಿದ್ದ ಮಂಗಳೂರು ಲಂಚ್ ಹೋಂನಲ್ಲಿ ಕುಡಿದು, ಹಂದಿಮಾಂಸವನ್ನು ಭರ್ಜರಿಯಾಗಿ ತಿಂದು ತಂಡಿಯಂಡಮೋಲ್ ಕಡೆಗೆ ಹೊರಟೆವು. ಕರ್ನಾಟಕದ ಅತಿ ಎತ್ತರವಾದ ಸ್ಥಳ ತಡಿಯಂಡಮೋಲ್, ಅದು ಮಡಿಕೇರಿಯಿಂದ ಎಂಬತ್ತು ಕಿಮೀ ದೂರವಿದ್ದರೂ ಮಡಿಕೇರಿ ಅಲ್ಲಿಂದ ಕಾಣುತ್ತದೆ. ಎತ್ತರದ ಗುಡ್ಡಕ್ಕೆ ಏರುವ ಸಮಯಕ್ಕೆ ಮತ್ತೆ ಕತ್ತಲಾಗತೊಡಗಿತು. ಇಷ್ಟು ಹತ್ತಿರಕ್ಕೆ ಬಂದು ಇದನ್ನು ನೋಡಲಾಗದೇ ಹೋದದ್ದು ಬಹಳ ಬೇಸರ ತರಿಸಿತ್ತು. ಮನೆಗೆ ತಲುಪುವ ತನಕವೂ ನಮಗೆ ಅದೇ ಕೊರೆಯುತಿತ್ತು. ಮನೆಗೆ ಬರುವ ಮುನ್ನಾ ಸಿದ್ದಾಪುರದಲ್ಲಿ ಮತ್ತೊಮ್ಮೆ ಕುಡಿದು, ಕುಡಿದ ಅಮಲಿನಲ್ಲಿ ನಾನು ವಿಜಿ ರೋಹಿತ್ ಎಂದೋ ನಮ್ಮಿಂದ ದೂರಾಗಿದ್ದ ಅದ್ಯಾವುದೋ ಹುಡುಗಿಯರ ವಿಷ್ಯಕ್ಕೆ ಜಗಳವಾಡಿ ನಾನು ವಾಪಸ್ ಬೆಂಗಳೂರಿಗೆ ನಾನು ಬೆಂಗಳೂರಿಗೆ ಈಗಲೇ ಹೋಗುತ್ತೇವೆಂದು ಹೊರಟೆವು ಕಡೆಗೆ ಯಾರೂ ಬೆಂಗಳೂರಿಗೆ ಹೋಗದೇ, ಮಂಜೇಶನ ಮನೆ ತಲುಪಿ ಅದ್ದೂರಿ ಮಾಂಸ ಭಕ್ಷಣೆ ಮಾಡಿದೆವು. ನಾಳೆ ಬೆಳ್ಳಿಗ್ಗೆ ಮತ್ತೆ ಅದೇ ಸ್ಥಳಕ್ಕೆ ಹೋಗಿ ನೋಡಿಬರಬೇಕೆಂದು ಹೊರಟೆವು. ರಾತ್ರಿ ತಾನೇ ಬಂದ ಸ್ಥಳದಿಂದ ಮತ್ತದೇ ಸ್ಥಳಕ್ಕೆ ಅದೂ ೯೦ಕಿಮೀ ನಷ್ಟೂ ದೂರ ಹೋಗುವುದಕ್ಕೆ ನಿರ್ಧರಿಸಿದೆವು. ಹೋಗುವ ಹಾದಿಯಲ್ಲಿ ನಮ್ಮ ಜೊತೆ ರೋಹಿತ್ ಇದ್ದರೇ ಮುಗಿದೇ ಹೋಯಿತು, ಬೆಳಗಾದೊಡನೆ ಸ್ವಲ್ಪ ಹಾಕಿಕೊಂಡು ಹೋಗೋಣವೆನ್ನುತ್ತಾನೆ. ಹೊರಗಡೆ ಬಂದಾಗ ಕಂಠಪೂರ್ತಿ ಕುಡಿಯಬೇಕೆಂಬುದು ಅವನ ನಿರ್ಣಯ. ಅವನ ಆಸೆಗೆ ಬೆಂಬಲ ಸೂಚಿಸಲು ನಾನಿದ್ದೆ, ನಾವಿಬ್ಬರೂ ವಿರಾಜಪೇಟೆಯ ಮುಂದೆ ಹೋಗುವಾಗ ರಸ್ತೆ ಬದಿಯಲ್ಲಿದ್ದ ಸಣ್ಣ ಬಾರಿನಲ್ಲಿ ಕುಳಿತು ಸ್ವಲ್ಪ ಕುಡಿಯಲು ಹೋದವರು ಕಂಠಪೂರ್ತಿಯಾಗಿ ಕುಡಿದು ಬಂದೆವು. ನಾನು ಕುಡಿದರೇ ಬೈಕ್ ಓಡಿಸುವ ಪರಿ ನನ್ನನ್ನೇ ಅನೇಕಾ ಬಾರಿ ಬೆಚ್ಚಿ ಬೀಳಿಸಿದೆ. ಹುಚ್ಚನಂತೆ, ನಾನು ಹೋಗುತ್ತಿದ್ದದ್ದು ಸ್ಪ್ಲೆಂಡರ್, ಮತ್ತೊಂದು ಅಪ್ಪಾಚೆ, ಕುಡಿದ ನಂತರ ಮುಂದಿನ ಮೂವತ್ತು ಕೀಮೀ ದೂರವನ್ನು ಒಮ್ಮೆಯೂ ಅವನಿಗೆ ಬಿಡದೇ, ನಾನೇ ಮುನ್ನುಗ್ಗಿದೆ. ನಾನು ಕುಡಿದು ಗಾಡಿ ಓಡಿಸುವಾಗ ನನ್ನ ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುವವರು ನಿಜಕ್ಕೂ ಹುಂಬರೇ, ಆ ಹುಂಬ ನಮ್ಮ ದ್ವಾರಕೇಶ್, ಅವನು ಯಾವುದಕ್ಕೂ ಎಂದಿಗೂ ಹೆದರಿದ ಮನುಷ್ಯನೇ ಅಲ್ಲ. ಹಾಗೂ ಹೀಗು ತಡಿಯಂಡಮೋಲ್ ಬೆಟ್ಟದ ತಪ್ಪಲಿಗೆ ಬಂದು ಅಲ್ಲಿಂದ ಒಂದೈದಾರು ಕೀಮೀ ದೂರ ಬೆಟ್ಟ ಹತ್ತಿದೆವು, ಸುತ್ತಲೂ ಕಾಡು ನಾವು ಏರುತ್ತಿರುವುದು ಮಾತ್ರ ಹುಲ್ಲುಗಾವುಲು, ನಾವಿರುವುದು ಕರ್ನಾಟಕದ ಅತಿ ಎತ್ತರದ ಬೆಟ್ಟದಲ್ಲಿ, ನಿಜಕ್ಕೂ ಅದ್ಬುತ, ಸೂರ್ಯಾಸ್ತವಾಗುತ್ತಿತ್ತು, ಒಂದು ಬಗಿಲಿಗೆ ಕರ್ನಾಟಕದ ಉದ್ದುದ್ದ ಘಟ್ಟಗಳು, ಬ್ರಹ್ಮಗಿರಿಯಿಂದ ದೂರದ ಪುಷ್ಪಗಿರಿ, ನಾಗರಹೊಳೆ ಗಡಿಯೂ ಕಾಣುತ್ತಿದೆ, ಮತ್ತೊಂದೆಡೆಗೆ ದೂರದ ಕೇರಳ ಹತ್ತಿರವಾದಂತೆ ಕಾಣುತ್ತಿದೆ. ವಯ್ನಾಡ್ ಬೆಟ್ಟಗಳ ಸಾಲುಗಳ ನೋಟ ಸವಿಯಲೇ ಬೇಕಾದದ್ದು. ಅಷ್ಟೊತ್ತು ನೋಡಿ ಆನಂದಿಸಿದ ಮೇಲೂ ನಮ್ಮ ದುರಾಸೆ ತೀರಲಿಲ್ಲ, ಇಲ್ಲಿಗೆ ಒಂದು ದಿನ ಬಂದು ಟೆಂಟ್ ಹಾಕಿ ಇರಬೇಕು ಮನಸಾರೆ ಕುಡಿಯಬೇಕು, ಕುಡಿಯುವುದೇ ಬದುಕೇ ನಮಗೆ!
ಅಲ್ಲಿಂದ ಹೊರಟು ಸಿದ್ದಾಪುರದಲ್ಲಿ ಮತ್ತೇ ಕುಡಿದು, ಕುಶಾಲನಗರಕ್ಕೆ ಬಂದೆವು. ಕುಶಾಲನಗರದಲ್ಲಿ ಮತ್ತೊಮ್ಮೆ ಕುಡಿದು, ಮಂಜೇಶನ ಸ್ನೇಹಿತನ ರೂಮಿಗೆ ಬಂದು ಬಿದ್ದೆವು. ಕುಡಿದ ಅಮಲಿನಲ್ಲಿದ್ದ ನಾವು ತಡವಾಗಿ ಹೋಗುವುದೆಂದರಿಂದ, ದ್ವಾರಕೇಶ್ ಮತ್ತು ರೋಹಿತ್ ಹೊರಟು ಹೋಗಿದ್ದರು. ಹತ್ತು ಗಂಟೆಗೆ ಹೊರಟ ನಾನು ವಿಜಿ ಶ್ರಿರಂಗಪಟ್ಟಣಕ್ಕೆ ಬಂದಾಗ ಹನ್ನೊಂದು ಗಂಟೆ, ಕೇವಲ ಒಂದು ಗಂಟೆಯಲ್ಲಿ ಕನಿಷ್ಟವೆಂದರೂ ಎಂಬತ್ತು ಕೀಮಿಗಿಂತ ಹೆಚ್ಚು ದೂರ ಬಂದಿದ್ದೇವು. ಸತ್ತರೂ ಸರಿಯೇ ನಡಿಯೋ ಹೋದಷ್ಟೂ ವೇಗದಲ್ಲಿ ಹೋಗೋಣವೆಂದು ಬಂದೆವು. ಇದು ನಮ್ಮ ಬಗೆಗೆ ನಮಗೆ ಇರುವು ತಾತ್ಸಾರವಲ್ಲದೇ ಮತ್ತೇನು?
ಕೆಲವು ದಿನಗಳ ನಂತರ, ಶೃಂಗೇರಿ, ಕೆಮ್ಮಣ್ಣುಗುಂಡಿಗೆ ಬೈಕಿನಲ್ಲಿ ಹೋಗಿಬರುವುದೆಂದು ಹೊರಟೆವು. ರಾತ್ರಿ ಹತ್ತು ಗಂಟೆಯ ವೇಳೆಗೆ ಬಿಟ್ಟು ತುಮಕೂರು ರಸ್ತೆಯಲ್ಲಿನ ಶೆಲ್ ಪೆಟ್ರೋಲ್ ಬಂಕಿನಲ್ಲಿ ನಂದನ ಬೈಕಿಗೆ ಪೆಟ್ರೋಲ್ ಹಾಕಿಸಿಕೊಂಡು ನಿಂತಿರುವ ಸಮಯಕ್ಕೆ ನೋಡಿದರೇ ಅವನ ಬೈಕಿನ ಪೆಟ್ರೋಲ್ ಟ್ಯಾಂಕ್ ತೂತಾಟ್ರೊಲ್ ಸೋರುತಿತ್ತು, ಇಂಥಹ ಸಂಧರ್ಭದಲ್ಲಿ ಗಾಡಿ ಓಡಿಸುವುದು ಅಸಾಧ್ಯವೆನಿಸಿತ್ತು. ಅದನ್ನು ರಾತ್ರಿ ಸಮಯದಲ್ಲಿ ಸರಿ ಮಾಡಿಸಲು ಸಾಧ್ಯವಿರಲಿಲ್ಲ. ಇದು ಒಳ್ಳೆ ಕಥಯಾಯಿತಲ್ಲವೆಂದು, ಖಾಲಿ ಬಾಟಲಿ ಇಡಿದು, ಟ್ಯಾಂಕಿನಲ್ಲಿದ್ದ ಪೆಟ್ರೋಲ್ ಅನ್ನು ನಮ್ಮ ಬಾಟಲಿಗಳಿಗೆ ತುಂಬಿದೆವು. ನಂತರ ನನ್ನ ಬ್ಯಾಗಿನಲ್ಲಿದ್ದ ಪಂಚರ್ ಸ್ಟಿಕರ್ ಹಾಕಿದರೇ ಹೇಗೆ ಎನಿಸಿತು. ಒಳ್ಳೆಯ ಉಪಾಯವೆನಿಸಿ, ಹಾಗೆಯೇ ಮಾಡಿದೆವು. ಆದರೂ, ನಂದನಿಗೆ ಅದು ಸಂಪೂರ್ಣ ತೃಪ್ತಿಯಾಗಿರಲಿಲ್ಲ. ಆದರೇ ಇಂದಿಗೂ ಅವನು ಹಾಗೆಯೇ ಬೈಕ್ ಓಡಿಸುತಿದ್ದಾನೆ. ಇಷ್ಟೇಲ್ಲಾ ಆದಮೇಲೆ, ಮುಂದೆ ನಿಂತು ಒಂದರ್ಧ ಗಂಟೆ, ನಿಂತು ಸಿಗರೇಟು ಸೇದಿ ಹೊರಟೆವು. ನಂದನಿಗೆ ಇರುವ ಒಂದು ಸಮಸ್ಯೆ ಎಂದರೇ, ಅವನು ಎಲ್ಲಿಗೆ ಹೊರಟಾಗಲೂ ಸುತ್ತಮುತ್ತಲಿನ ಜನರಿಗೆ ಅದು ತಿಳಿಯಲೇ ಬೇಕು, ಅದೊಂದು ಗೀಳಾಗಿ ಹೋಗಿದೆ. ನಿಂತು ಸಿಗರೇಟು ಸೇದುವಾಗ, ಎಲ್ಲರಿಗೂ ಕೇಳುವ ಹಾಗೆಯೇ ಹೇಳಿದ, ಅಲ್ಲಿದ್ದವರೆಲ್ಲ ಬಂದು ಇವನ ಬೈಕಿನ ಸ್ಥಿತಿಯನ್ನು ನೋಡಿ, ಅಲ್ಲಿಗೆ ಬಂದು ಪ್ರತಿಯೊಬ್ಬನು ಒಂದೊಂದು ಉಪದೇಶವನ್ನು ನೀಡಿ ಹೋದರು. ಇಲ್ಲಿಂದ ಹೊರಟು, ಕುಣಿಗಕಲ್ ಬಳಿಯಲ್ಲಿ ನಿಂತು ತಾತನ ಟೀ ಅಂಗಡಿಯಲ್ಲಿ ಟಿ ಸಿಗರೇಟು ಮುಗಿಸಿ, ಸುಧಿ ಅಲಿಯೇ ಅವನ ದೈನಿಕ ಕಾರ್ಯವನ್ನು ಮುಗಿಸಿದನು. ನಮ್ಮ ತಂಡದಲ್ಲಿ, ವಿಜಿ ಮತ್ತು ಸುಧಿ ಇದ್ದರೇ ಬ್ರೇಕ್ ಗಳು ನೀರು ಕಂಡಲೆಲ್ಲ ಇರುತ್ತವೆ. ಸಿಗರೇಟು ಕಂಡಲ್ಲಿ ನಂದನ ಬ್ರೇಕ್ ಇರುತ್ತದೆ, ಹೆಂಡ, ಹಂದಿಮಾಂಸ ಕಂಡಲ್ಲಿ ನನ್ನ ಬ್ರೇಕ್ ಖಂಡಿತವಾಗಿರುತ್ತದೆ.
ಮುಂಜಾನೆ ನಾಲ್ಕು ಗಂಟೆ ಹೊತ್ತಿಗೆ ಹಾಸನದ ಬಳಿಯಲ್ಲಿರುವ ಕಾಮತ್ ಹೋಟೆಲ್ ನಲ್ಲಿ ಭರ್ಜರಿಯಾಗಿ ಹೊಟ್ಟೆ ತುಂಬಾ ತಿಂದು ಮುನ್ನೆಡೆದೆವು. ತಿಂದಿದ್ದು ಭರ್ಜರಿ ಎನಿಸಿದರೂ, ಬೆಳ್ಳಿಗ್ಗೆ ಏಳು ಗಂಟೆಯ ಹೋತ್ತಿಗೆ, ಮತ್ತೆ ತಿನ್ನಲು ಚಿಕ್ಕಮಗಳೂರಿನಿಂದ ಮುಂದಕ್ಕೆ ನಿಲ್ಲಿಸಿದೆವು. ಅಲ್ಲಿ ಒಳ್ಳೆಯ ಕಾಫಿ, ಉಪ್ಪಿಟ್ಟು ತಿಂದು ಮುನ್ನೆಡೆದೆವು. ಪರಿಸರ ಅತ್ತ್ಯುತ್ತಮವಾಗಿ ಆನಂದಿಸುವಂತಿದ್ದರೂ, ವಿಜಿ ಗಾಡಿಯನ್ನು ಬೆಂಗಳೂರಿನಲ್ಲಿ ಓಡಿಸುವ ವೇಗಕ್ಕೆ ಓಡಿಸತೊಡಗಿದನು. ನಾನು ಬಹಳಷ್ಟು ಬಾರಿ ಹೇಳಿದ ಹಾಗೇಯೇ, ಹೊರಗಡೆ ಸುಂದರ ತಾಣಗಳು ಸಿಕ್ಕಾಗಲೂ ಜನರು ಅತಿ ವೇಗದಿಂದ ಅಲ್ಲಿನ ಸೌಂದರ್ಯವನ್ನು ಸವಿಯದೇ ಹೋಗುವುದು ಏಕೆ? ಇಷ್ಟೇ ಅಲ್ಲದೇ, ಬಹಳ ಘಾಟಿನಲ್ಲಿ ಚಲಿಸುವಾಗ ರಾತ್ರಿ ಹೊರಡುವುದು, ಇದೆಲ್ಲವೂ ನನಗೆ ಮೂರ್ಖತನವೆನಿಸಿದರೂ ಅವರಿಗೆ ಸಮಯ ಪ್ರಜ್ನೆ ಎನಿಸುತ್ತದೆ. ರಾತ್ರಿ ಪಯಣ ಮಾಡಿ ಸಮಯ ಉಳಿಸಬಯಸುತ್ತಾರೆ. ವಿಜಿ ಹಾಗೆಯೇ ವೇಗದಿಂದ ಹೋಗಿ ಮುಂದೆ ಒಂದು ತಿರುವಿನಲ್ಲಿ ಬಿದ್ದು ಗಾಯಗೊಂಡು ಕುಳಿತಿದ್ದರು. ಯಾರು ಬಿದ್ದಾಗಲೂ ಅಷ್ಟೇ ಅವರುಗಳ ತಪ್ಪನ್ನು ಅವರು ಒಪ್ಪುವುದೇ ಇಲ್ಲ ವಿನಾಕಾರಣ ಅದನ್ನು ಸಮರ್ಥಿಸಿಕೊಳ್ಳತೊಡಗುತ್ತಾರೆ. ನಾನು ವಿಜಿಗೆ, ನಂದ ತಂದಿದ್ದ ಹಳೆಯದಾದ ಬ್ಯಾಂಡೇಜುಗಳನ್ನು ಸುತ್ತಿ, ಸುಮ್ಮನೆ ಇರಲು ಹೇಳಿ ನಿಧಾನಕ್ಕೆ ಬರುವಂತೆ ಆದೇಶಿಸಿ ಮುನ್ನೆಡೆದೆವು. ಅಲ್ಲಿಂದ ಶೃಂಗೇರಿಗೆ ತಲುಪಿ ರೂಮು ಪಡೆದು, ಸ್ನಾನ ಮಾಡುವ ವೇಳೆಗೆ, ಸುಸ್ತಾಗಿ ಹೈರಾಣವಾಗಿದ್ದೆವು. ಅಂತೂ ಸ್ನಾನ ಮಾಡಿ, ಪೂಜೆ ಮುಗಿಸಿ, ಊಟವನ್ನು ಮಾಡಿದೆವು. ಅಲ್ಲಿಗೆ ಬಂದಿದ್ದ ಅಯ್ಯಪ್ಪ ಭಕ್ತಾದಿಗಳ ಆರ್ಭಟವಂತೂ ತಾರಕ್ಕಕ್ಕೆ ಏರಿತು. ಭಕ್ತರ ಹೆಸರಿನಲ್ಲಿ ಮಾಡುವ ಅನಾಚಾರಗಳು ಮತ್ತಿನ್ನೆಲ್ಲಿಯೂ ಮಾಡಲು ಸಾಧ್ಯವಿಲ್ಲವೆನಿಸುತ್ತದೆ, ಅವರಿಗೆಲ್ಲರಿಗೂ ದೇವರು ನನ್ನೊಡನಿದ್ದಾನೆಂಬ ಭರವಸೆ ಎನಿಸುತ್ತದೆ. ಇದು ಒಂದು ಬಗೆಯ ರಾಜಕೀಯ, ಆಡಳಿತ ಪಕ್ಷದವರೆಂದು ಯಾವುದಕ್ಕೂ ಹೆದರುವುದೇ ಇಲ್ಲ, ನಮಗೆ ನಮ್ಮ ನಾಯಕರ ಬೆಂಬಲವಿದೆ, ಆಗುತ್ತದೆ, ಎಂದು ಬೀಗುತ್ತಾರೆ. ಇಲ್ಲಿಯೂ ಅಷ್ಟೇ, ಭಕ್ತಾದಿಗಳ ಹೆಸರಿನಲ್ಲಿ ಅವರು ಮಾಡುವ ಕೃತ್ಯಗಳನ್ನು ಒಮ್ಮೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಬಂದರೇ ತಿಳಿಯುತ್ತದೆ. ಅಲ್ಲಿಯೇ, ಏಕೆ, ಎಲ್ಲೆಡೆಯಲ್ಲಿಯೂ ಅಷ್ಟೇ ತಾನೇ, ಸಾವಿರಾರು ಕೀಮಿ ದೂರ ಬಂದಿರುವ ಜನರು, ದೇವರ ದರ್ಶನಕ್ಕೆ ಕೆಲವೇ ನಿಮಿಷಗಳು ಕಾಯಲು ಕೂಡ ತಾಳ್ಮೆ ಇರುವುದಿಲ್ಲ, ಊಟದ ಮನೆಯಲ್ಲಿಯಂತೂ ಅನ್ನ ಕಂಡು ಎಷ್ಟು ವರ್ಷವಾಯಿತೋ ಎನ್ನುವಂತೆ ಆಡುತ್ತಾರೆ. ಊಟ ಆದಮೇಲೆ ಎರಡು ನಿಮಿಷಗಳು ಕಾಯುವ ಸಂಯಮವಿಲ್ಲದೇ, ಓಡೋಡಿ ಹೋಗುತ್ತಾರೆ. ಇದು ಎಲ್ಲೆಡೆಯಲ್ಲಿಯೂ ಅಷ್ಟೇ, ಟ್ರ‍ಾಫಿಕ್ ನಲ್ಲಿ ಗಾಡಿ ಓಡಿಸುವಾಗ, ಬಸ್ ಹತ್ತುವಾಗ, ಇಳಿಯುವಾಗ, ಅದರಲ್ಲಿಯೂ ವಿಮಾನಗಳಲ್ಲಿ ಇಳಿಯುವಾಗಂತೂ, ಅಬ್ಬಾ ಕೆಲವೇ ನಿಮಿಷಗಳಿಗೆ ಅಲ್ಲಿ ದೊಡ್ಡ ಅನಾಹುತದ ಮಟ್ಟಕ್ಕೆ ಗಲಿಬಿಲಿ ಮಾಡಿಬಿಡುತ್ತಾರೆ. ಇವೆಲ್ಲದರ ಬಗೆಗೆ ಒಂದಿಷ್ಟೂ ಚರ್ಚೆಗಳನ್ನು ನಮ್ಮ ನಮ್ಮಲ್ಲಿಯೇ ಮಾಡಿ, ರೂಮಿಗೆ ಬಂದು, ಖಾಲಿ ಮಾಡಲು ಅಣಿಯಾಗುವಾಗ, ರೂಮು ಮೇಲ್ವಿಚಾರಕ ಬಂದು ನೀವು ಖಾಲಿ ಮಾಡುವುದಾದರೇ ರೂಮಿನ ಕೀ ಅನ್ನು ನಮಗೆ ನೀಡಿ ಅಲ್ಲಿಗೆ ಕೊಡುವುದು ಬೇಡವೆಂದ. ದುರಾಸೆ ಹಣ ಎಲ್ಲಿಂದೆಲ್ಲಿಗೋ ಎಳೆದೊಯ್ಯುತ್ತದೆ. ಅವನ ಆಲೋಚನೆ ಬಹಳ ಸರಳವಾಗಿತ್ತು. ನಾವು ರೂಮ್ ತೆಗೆದುಕೊಂಡದ್ದು ೨೪ಗಂಟೆಗಳಿಗಾಗಿ, ಖಾಲಿ ಮಾಡುತ್ತಿರುವುದು ಕೇವಲ ಮೂರು ಗಂಟೆಗಳಲ್ಲಿ, ಅಂದರೇ ಅದೇ ರೂಮನ್ನು ಬೇರೆಯವರಿಗೆ ಬಾಡಿಗೆ ನೀಡಬಹುದು, ಅದು ಡಿಮಾಂಡಿದ್ದರೆ ಹೆಚ್ಚಿಗೆ ಹಣಪಡೆದುಕೊಡಬಹುದು. ಭ್ರಷ್ಟಾಚಾರವೆಂಬುದು ನಮ್ಮ ಈ ಜನ್ಮ ಹಕ್ಕು.
ಅಂತೂ ರೂಮಿನ ಕೀಯನ್ನು ಅವನಿಗೆ ನೀಡದೆ, ಕಛೇರಿಗೆ ನೀಡಿ ರಸಿದಿ ಪಡೆದು, ಹತ್ತಿರವಿದ್ದ ಹೋಟೆಲಿನಲ್ಲಿ ಸೋಡಾ ಕುಡಿದು, ಸಿಗರೇಟು ಎಳೆದು ಹೊರಟೆವು. ನಮ್ಮ ಮುಂದಿನ ತಾಣ, ಕೆಮ್ಮಣ್ಣುಗುಂಡಿ, ಶೃಂಗೇರಿಯಿಂದ ಹೊರಟ ನಾವು, ಮುತ್ತೋಡಿ ಮಾರ್ಗದಿಂದ ಹೊರಟೆವು, ಮುತ್ತೋಡಿ ಅರಣ್ಯದೊಳಗಿಂದ ಹೋಗುವಾಗ ನಾವು ಕನಿಷ್ಟ ಒಂದು ಹುಲಿಯನ್ನಾದರೂ ಕಾಣಬಹುದೆಂದು ಬಯಸಿದ್ದೇವು ಆದರೇ ನಮಗೆ ತಕ್ಕಮಟ್ಟಿಗೆ ನಿರಾಸೆಯಾಯಿತು. ಆದರೂ, ನಮಗೆ ಒಂದು ಸಿಂಗಳಿಕ ಕಾಣಸಿಕ್ಕಿತು. ಅಲ್ಲಿ ನಿಧಾನವಾಗಿ ದಾರಿಯುದ್ದಕ್ಕೂ ನೋಡುತ್ತಾ ಹೋಗುವಾಗ, ಕಾಫಿ ತೋಟಗಳಿದ್ದವು, ಅದರ ನಡುವೆ ದೂರ ದೂರಕ್ಕೆ ಕೆಲವೊಂದು ಜಲಪಾತಗಳು ಕಣ್ಣಿಗೆ ಕಂಡವು. ದಟ್ಟನೆಯ ಕಾಡನ್ನು ಬಿಟ್ಟು ಮೇಲಕ್ಕೆರಿದ ತಕ್ಷಣ ಹುಲ್ಲುಗಾವಲು ಸಿಕ್ಕಿತು. ಕತ್ತಲಾಗತೊಡಗಿದ್ದರಿಂದ ಅದ್ಬುತವಾಗಿತ್ತು ಮುಸ್ಸಂಜೆ. ಆದರೂ ನಾವು ಇನ್ನೂ ಅರ್ಧದಷ್ಟು ದಾರಿಯನ್ನು ಅದೇ ಹುಲ್ಲುಗಾವಲು, ನಂತರ, ದಟ್ಟ ಕಾಡು, ಪ್ರಪಾತಗಳನ್ನು ದಾಟಿ ಹೋಗಬೇಕಿತ್ತು. ನಮಗೆ ಸ್ವಲ್ಪ ನಿರಾಸೆಯಾಗತೊಡಗಿತು. ಅದು ಅಂಥಹ ಸುಂದರ ನಿಸರ್ಗದ ಮಡಿಲೆಂಬುದು ತಿಳಿದಿದ್ದರೂ, ಕತ್ತಲಾಗಿದ್ದರಿಂದ ಅದನ್ನು ನಾವು ಅನುಭವಿಸಲಾಗುತ್ತಿರಲಿಲ್ಲ. ಕತ್ತಲಲ್ಲಿ ಬರುವಾಗ, ದೂರದಲ್ಲಿ ಕಾಡ್ಗಿಚ್ಚು ಬಿದ್ದಿದ್ದು, ಕಾಣತೊಡಗಿತು. ಬೇಸಿಗೆಯಲ್ಲಿ ಹುಲ್ಲುಗಾವಲು ಪ್ರದೇಶದಲ್ಲಿ ಬಹಳ ಎಚ್ಚರದಿಂದಿರಬೇಕಾಗುತ್ತದೆ, ಸ್ವಲ್ಪವೇ ಬೆಂಕಿ ಬಿದ್ದರೂ, ಇಡೀ ಹುಲ್ಲುಗಾವಲೇ ನಾಶವಾಗುವುದಲ್ಲದೇ, ಅಲ್ಲಿರುವ ವನ್ಯಜೀವಿಗಳು ಸೇರಿ ಸರ್ವನಾಶವಾಗುತ್ತದೆ. ನಾವು ಹುಲ್ಲುಗಾವಲಿನ ರಸ್ತೆಯಲ್ಲಿರುವಾಗ, ಮುಂದಕ್ಕೆ ರಸ್ತೆ ಯಾವುದೆಂಬುದೇ ಅರಿಯಾದಯಿತು. ರಸ್ತೆ ಎಂದರೇ ಅದು ಬರಿ ಕಲ್ಲುಗಳು ಬಿದ್ದಿರುವು ಗುಂಡಿಯಷ್ಟೇ! ನಮ್ಮ ತಳಹದಿಯಂತೂ, ಬೊಬ್ಬೆ ಬರುವ ಮಟ್ಟಕ್ಕೆ ಆಗಿಹೋಯಿತು. ಅದರ ನಡುವೆ ನಮ್ಮ ಗಾಡಿಗಳು ಕೈ ಕೊಟ್ಟರೇ ನಮ್ಮ ಗತಿ? ಹೀಗೆಲ್ಲಾ ನಕರಾತ್ಮಕವಾಗಿ ಯೋಚಿಸಬಾರದೆಂದರೂ ಸನ್ನಿವೇಶ ನೆನಪು ಮಾಡುತ್ತದೆ. ದೂರ ದೂರದಲ್ಲಿರುವ ದೇವರಿಂದ ಹಿಡಿದು ಹತ್ತಿರದ, ಆತ್ಮೀಯ ದೇವರುಗಳನ್ನು ಸೇರಿಸಿ ಎಲ್ಲರನ್ನೂ ಬೇಡಿಕೊಂಡು, ಪ್ರಾರ್ಥಿಸಿ ಹೊರಟೆವು. ಅಂತೂ ಇಂತೂ ಕಲ್ಲಿನ ರಸ್ತೆಯಲ್ಲಿ ಬಂದು ಕೆಮ್ಮಣ್ಣುಗುಂಡಿ ತಲುಪಿ ನಮ್ಮಲ್ಲಿದ್ದ ಸಿಗರೇಟು ಹಚ್ಚಿಸಿದರೇ, ಇನ್ನೂ ಹತ್ತು ಕೀಮೀ ದೂರ ಹೋಗಬೇಕು, ನನ್ನ ಸ್ನೇಹಿತ ಇರುವುದು, ಕಲ್ಲತ್ತಿಯಲ್ಲಿ ಎಂದ ನಮ್ಮ ನಂದ. ನಾನು ಬಾಯಿಗೆ ಬಂದ ಹಾಗೆ ಬೈಯ್ದುಕೊಂಡು ವಿಧಿಇಲ್ಲದೇ ಹೊರಟೆ. ಕೆಮ್ಮಣ್ಣುಗುಂಡಿಗೆ ಬಂದು ನಿಂತಲ್ಲೇ, ಎರಡು ಮೂರು ಸ್ಥಳದಲ್ಲಿ ಜನರು ಟೆಂಟ್ ಹಾಕಿಕೊಂಡು, ಬೇಯಿಸಿಕೊಂಡು ಅದಾಗಲೇ ನಮ್ಮ ದೇವಿಯನ್ನು ಮೈಮೇಲೆ ಏರಿಸಿಹೊರಟಿದ್ದರು. ನಾವು ಕಲ್ಲತ್ತಿಗೆ ಬಂದೊಡನೆಯೇ, ನಮ್ಮನ್ನು ಯೋಗಿ ಎಂಬ ಸ್ಥಳೀಯ ಮತ್ತು ನಂದನ ಸ್ನೇಹಿತ ಬಂದು ನಮ್ಮನ್ನು ವಿಶ್ರಾಂತಿ ಗೃಹದ ರೂಮಿಗೆ ಬಿಟ್ಟು, ರೆಡಿ ಆಗಲು ಹೇಳಿ ಹೊರಟನು. ಮಧ್ಯಾಹ್ನದಿಂದ ಹೊಟ್ಟೆ ಖಾಲಿ ಇದ್ದು ಬರೀ ನೀರು ಸಿಗರೇಟಿನಿಂದ ಬಳಲಿದ್ದ ಹೊಟ್ಟೆ ನಮ್ಮ ವಿರುದ್ದ ಗೊಣಗುಟ್ಟಿತು.
ನಾನು ವಿಜಿ ಅಲ್ಲೇ ಎದುರಿದ್ದ, ಅಂಗಡಿಗೆ ಹೋಗಿ, ಬಾಳೆ ಹಣ್ಣು, ಲೇಸ್, ಪುರಿ, ಮಾಜ಼ಾ, ಅಂತಾ ಎಲ್ಲಾ ತಿಂದು ಹೊರಗೆ ಬಂದು ನೋಡಿದ ಮೇಲೆ ನಮಗೆ ಬಹಳ ಬೇಸರವಾಯಿತು. ಯೋಗಿ ತನ್ನ ಹೋಟೆಲ್ ನಡೆಸುತ್ತಿದ್ದ, ಅವನಲ್ಲಿಗೆ ಬಂದು ಆಮ್ಲೇಟ್ ಹಾಕಲು ಹೇಳಿದೆವು. ಅವನು ಬೇಯಿಸಿ ತಂದು ಹಾಕಿದ್ದು, ಹಿಂದಿರುಗುವ ಮುನ್ನವೇ ನಾಲ್ಕು ಹೋಳಾಗಿ ಖಾಲಿಯಾಗುತ್ತಿತ್ತು, ಹೀಗೆ ಅದೆಷ್ಟೂ ತಿಂದೆವು ಅದನ್ನು ಯೋಗಿ ಬಿಟ್ಟರೇ ನಾವ್ಯಾರು ಗಣನೆಗೆ ತೆಗೆದುಕೊಳ್ಳಲಿಲ್ಲ. ಅಲ್ಲಿಂದ ಪಕ್ಕದ ಊರಾದ, ಲಿಂಗದಲ್ಲಿಗೆ ಹೋಗಿ, ಹೆಂಡತರಲು ನಾನು ನಂದ ಹೊರಟೆವು. ಅಲ್ಲಿಗೆ ಹೋಗುವಾಗ ನಂದ ಆ ಊರಿನಲ್ಲಿರುವ ದೆವ್ವದ ಬಗೆಗೆ ಕಥೆ ಹೇಳಲು ಶುರುಮಾಡಿದ. ನಂದನ ಒಂದು ವಿಚಿತ್ರ ನಡುವಳಿಕೆಯೇ ಇದು. ಅವನು ಕತ್ತಲಲ್ಲಿ, ಸ್ಮಶಾನದಲ್ಲಿ, ದಟ್ಟ ಕಾಡಿನ ನಡುವೆ, ದೆವ್ವ ಭೂತಗಳ ಬಗ್ಗೆ ಮಾತನಾಡುತ್ತಾನೆ. ಮನುಷ್ಯನ ವರ್ತನೆ ಕೂಡ ಆ ಸಮಯದಲ್ಲಿ ಅದರಿಂದ ಪ್ರಚೋದನೆ ಪಡೆದು ಅದರ ಕಡೆಗೆ ಚಿಂತಿಸಿ ಕಾಣುವುದೆಲ್ಲವೂ ದೆವ್ವದಂತೆಯೋ ಭೂತದಂತೆಯೋ ಅಥವಾ ಆಗುವುದೆಲ್ಲವೂ ದೆವ್ವಗಳಿಂದಲೇ ಎನಿಸುತ್ತದೆ. ಅನೇಕಾ ಬಾರಿ ಬೈಕುಗಳು ರಾತ್ರಿಯಲ್ಲಿ ರಸ್ತೆ ಮಧ್ಯೆ ನಿಂತಾಗ ಮೊದಲು ಯೋಚನೆ ಬರುವುದೇ ಅಂಥಹುದ್ದು, ಮತ್ತೂ ಶುರುವಾಗದೇ ಹೋದರೇ ಮುಗಿದೇ ಹೋಯಿತು. ಇಂಥಹ ಸನ್ನಿವೇಶ ಸ್ವತಃ ನಂದನಿಗೇ ಆಗಿದ್ದರೂ ಕೂಡ ಅವನು ಅದನ್ನು ಬದಲಾಯಿಕೊಂಡಿಲ್ಲ. ನಾವು ವಾಪಸ್ಸು ಬರುವಾಗ ಕತ್ತಲಿನಲ್ಲಿ ಮರಗಳ ನಡುವೆ, ದನಗಳು, ಎಮ್ಮೆಗಳು ಕೂಡ ನಮಗೆ ದೆವ್ವದಂತೆ ಕಾಣತೊಡಗಿದೆವು. ಅವನು ಹೇಳಿದ್ದು ಅದೇ ತೆರೆನಾದ ಕಥೆಯಾದ್ದರಿಂದ, ನಮ್ಮ ಕಥೆಗೆ ಎಮ್ಮೆಯೇ ನಾಯಕಿಯಾಗಿದ್ದಳು. ವಾಪಸ್ಸು ಬಂದು ನೋಡುವಾಗ ಸುಧಿ ಮಲಗಿದ್ದ. ಹೆಂಡವಿದ್ದರೂ, ಕೋಳಿ ಮಾಂಸವಿದ್ದರೂ ತಿನ್ನುವ ಮನಸ್ಥಿತಿ ನಮಗಿರಲಿಲ್ಲ. ಅದಕ್ಕೆ ಕಾರಣ ನಿನ್ನೆಯ ರಾತ್ರಿ ನಿದ್ದೆ ಇಲ್ಲದ ಪಯಣ, ಮತ್ತು ಆಗಷ್ಟೇ ತಿಂದಿದ್ದ ಆಮ್ಲೇಟ್. ಸುಧಿ ಈ ರೂಮಿನಲ್ಲಿ ದೆವ್ವವಿದೆ, ಆದ್ದರಿಂದ ನನಗೆ ಇಲ್ಲಿರಲು ಆಗುತ್ತಿಲ್ಲವೆಂದು ಕ್ಯಾತೆ ತೆಗೆದ. ಇಲ್ಲಿಂದ ಶುರುವಾದ ಅವನ ದೆವ್ವದ ಕಥೆ ಮೊನ್ನೆ ಮೊನ್ನೆಯವರೆಗೂ ನಮ್ಮನ್ನು ಹಿಂಸಿಸಿತ್ತು. ನಾವು ದೆವ್ವವನ್ನು ಹುಡುಕಿಕೊಂಡು ಯುನಿವರ್ಸಿಟಿಯಲ್ಲಿ ಅಮವಾಸ್ಯೆಯಂದು ಹುಣ್ಣಿಮೆಯಂದು ನಡುರಾತ್ರಿಯಲ್ಲಿ ಅಲೆದಾಡಿದೆವು.
ರಾತ್ರಿ ಅವನು ಕುಡಿಯದೇ ಮಲಗಿದ್ದರೂ, ಬೆಳ್ಳಿಗ್ಗೆ ಏಳು ಗಂಟೆಗೆ ನಾವೆಲ್ಲರೂ ಟೀ ಕುಡಿಯುವಾಗ ಅವನು ಹೆಂಡ ಕುಡಿದನೆಂದರೇ ಅವನ ನಿಯತ್ತಿನ ಬಗ್ಗೆ ನಿಮಗೂ ಅರಿವಾಗಿರಬೇಕಲ್ಲವೆ. ಕುಡಿದು ನಂತರ ಯೋಗಿಯ ಹೋಟೆಲ್ ನಲ್ಲಿ ಚಿತ್ರಾನ್ನ ತಿಂದು, ಟೀ ಕುಡಿದು, ದಮ್ ಹೊಡೆದು ಹೊರಟೆವು. ನನಗೆ ಸಣ್ಣ ಹೋಟೆಲಿನಲ್ಲಿ ಸಿಗುವ ಚಿತ್ರಾನ್ನ, ಅನ್ನ ಸಂಬಾರ್ ಎಂದರೇ ಎಲ್ಲಿಲ್ಲದೇ ಆಸೆ, ಸಿಕ್ಕಿದ್ದನ್ನು ದೋಚುವಷ್ಟು ತಿಂದುಬಿಡುತ್ತೇನೆ. ನಂತರ ಹಾಗೇಯೇ ಮೇಲಕ್ಕೆ ಬಂದು ಕೆಮ್ಮಣ್ಣುಗುಂಡಿಯಲ್ಲಿನ ಉದ್ಯಾನವನ್ನು ನೋಡಿ ಆನಂದಿಸಿ, ಅಲ್ಲಿರುವ ಜ಼ೆಡ್ ಪಾಯಿಂಟ್ ಹತ್ತಿರಕ್ಕೆ ಹೋದೆವು. ಕೆಮ್ಮಣ್ಣುಗುಂಡಿ ಅನೇಕಾ ಸಿನೆಮಾಗಳಲ್ಲಿ ಬಂದಿದೆ. ಅದು ಸುಂದರ ಪ್ರವಾಸಿ ತಾಣವೂ ಹೌದು. ನನಗೆ ಚಿಕ್ಕಮಗಳೂರಿನ ಜನರಲ್ಲಿರುವ ಒಂದು ಅಭಿಮಾನವೇ ಇದು. ಅಲ್ಲಿ ಭಾನುವಾರವಾಯಿತೆಂದರೇ, ಮನೆ ಮಕ್ಕಳು ಸಮೇತ ಹೋಗಿ ಹೊರಗಡೆ ಆನಂದಿಸಿ ಬರುತ್ತಾರೆ. ಹೈದರಾಬಾದಿನಲ್ಲಿಯೂ ಇದು ಮಾಮೂಲಿ. ಬೆಂಗಳೂರಿನ ಸೋಮಾರಿ ಜನಕ್ಕೆ ಭಾನುವಾರವೆಂದರೇ ಮನೆಯಲ್ಲಿ ಮಲಗುವುದು, ಸಾಧ್ಯವಾದರೇ ಒಂದಿಷ್ಟು ಮಾಂಸಭಕ್ಷಣೆ. ಆದ್ದರಿಂದಲೇ, ಚಿಕ್ಕಮಗಳೂರು ಜಿಲ್ಲೆಯ ಯಾವುದೇ ಪ್ರವಾಸಿ ಸ್ಥಳಗಳಿಗೆ ಹೋದರೇ, ಸ್ಥಳೀಯರೇ ಹೆಚ್ಚಿರುತ್ತಾರೆ.ಅಂತೂ ಇಂತೂ ಅಲ್ಲಿ ಸಮಯ ಕಳೆದು, ನಂತರ ಬಾಬಾ ಬುಡನ್ ಗಿರಿಯ ಮಾರ್ಗವಾಗಿ ಚಿಕ್ಕಮಗಳೂರು ತಲುಪುವ ಯೋಜನೆ ಹಾಕಿದೆವು. ಅಲ್ಲಿಯೇ ಇದ್ದ ಸಣ್ಣ ಹೋಟೆಲ್ ನಲ್ಲಿ ತಿಂದು, ಅಲ್ಲಿಂದ ಕಲ್ಲಿನ ರಸ್ತೆಯಲ್ಲಿ ಗಿರಿಯ ರಸ್ತೆ ಹಿಡಿದೆವು. ಅತಿ ಸುಂದರವಾದ ನಿಸರ್ಗದ ಮಡಿಲೆಂದರೇ ತಪ್ಪಿಲ್ಲ. ಯಾವುದೇ ಪ್ರವಾಸಿ ಪರಿಸರ ಪ್ರೇಮಿಯನ್ನು ಆಕರ್ಷಿಸುವ ಹೆಚ್ಚೆಚ್ಚು ಆಕರ್ಷಿಸುವುದು, ಹುಲ್ಲುಗಾವಲಿನ ಹಸಿರು, ಕುದುರೆಮುಖ, ಕೆಮ್ಮಣ್ಣುಗುಂಡಿ, ಚಾರ್ಮಾಡಿ, ಪುಷ್ಪಗಿರಿ, ತಡಿಯಂಡಮೋಲ್, ಮಂದಾಲಪಟ್ಟಿ, ಇವೆಲ್ಲವೂ ಅಷ್ಟೇ, ನೀವು ಅಲ್ಲಿ ಕುಳಿತರೆಂದರೇ ಎದ್ದು ಹೊರಡುವ ಮನಸ್ಸೇ ಬರುವುದಿಲ್ಲ ಅಂತಹ ವಾತಾವರಣ ನಿಮಗಿರುತ್ತದೆ. ಅದೆಲ್ಲವನ್ನೂ ಸವಿದು ಹೊರಡುವ ಸಮಯಕ್ಕೆ ಮಳೆ ಬರಲಾರಂಬಿಸಿತು. ಮಳೆ ಬಂತೆಂದರೇ ಈ ರಸ್ತೆಗಳಲ್ಲಿ ಓಡಾಡುವ ಭಾಗ್ಯ ನನ್ನ ಬಿಟ್ಟು ಹೋದ ಜೀವದ ಗೆಳತಿಗೂ ಬೇಡ. ಅಷ್ಟು ಘೋರವೆನಿಸುತ್ತದೆ.
ನಾವು ಮಳೆಯಲ್ಲಿ ಹೆಚ್ಚೆಂದರೇ ನಾಲ್ಕು ಕೀಮೀ ಬಂದಿರಲೂ ಇಲ್ಲ, ಸಂಪೂರ್ಣ ಒದ್ದೆಯಾಗಿದ್ದೆವು. ಮಲೆನಾಡಿನ ಮಳೆಯಂದರೇ ಹಾಗೆ, ಜಡಿ ಹಿಡಿದ ಹಾಗೆ ಸುರಿಯುತ್ತಲೇ ಇರುತ್ತದೆ. ಒಮ್ಮೆ ಬಂತೆಂದರೇ ಮುಗಿಯುತು ಹೊಸದಾಗಿ ಬಂದ ನೆಂಟರ ಹಾಗೆ ಬೇಗಹೋಗುವುದಿಲ್ಲ, ಇರಲು ಸುಮ್ಮನೆ ಬಿಡುವುದೂ ಇಲ್ಲ. ಮಧ್ಯೆದಲ್ಲಿ ಒಮ್ಮೆ ನಿಂತೆವು, ನಮ್ಮ ಅದೃಷ್ಟ ಕೈಕೊಟ್ಟು ಜೇಬಿನಲ್ಲಿದ್ದ ಸಿಗರೇಟು ಪೂರ್ತಿ ಒದ್ದೆಯಾಗಿದ್ದವು. ಮಳೆಯನ್ನು ಶಪಿಸುತ್ತಾ ಬೆಟ್ಟದ ಮೇಲಕ್ಕೆ ಹೋದೆವು. ಬಾಬಾ ಬುಡನ್ ಗಿರಿಯನ್ನು ನಾನು ನನ್ನ ಪಿಯುಸಿ ಸಮಯದಲ್ಲಿ ನೋಡಿದ್ದೆ. ಆಗ, ಈಗಿನಷ್ಟೂ ಪ್ರಚಾರ ಸಿಕ್ಕಿರಲಿಲ್ಲ. ಚಿಕ್ಕಮಗಳೂರು ಬಿಜೆಪಿಗೆ ವರವಾಗಿದ್ದು ಬಾಬಾ ಬುಡನ್ ವಿವಾದ. ನನಗೆ ನಿಜಕ್ಕೂ ಅರ್ಥವಾಗದ ವಿಷಯವೇ, ಈ ಜಾತಿ, ಧರ್ಮದ್ದು. ಎಂದು ಕೇಳಿಲ್ಲದ, ದೇವರುಗಳು, ನಮ್ಮ ಧರ್ಮದ್ದು ಎಂದರೇ ನಮಗೆ ದಿಡೀರನೆ ಅಭಿಮಾನ ಉಕ್ಕಿ ಹರಿಯುತ್ತದೆ. ಅದರಲ್ಲೀ ಮುಸ್ಲಿಮ್ ಭಾಂಧವರೇನೂ ಕಮ್ಮಿ ಇಲ್ಲ ಹಿಂದುಗಳೇನೂ ಕಮ್ಮಿಯಿಲ್ಲ, ಯಾರು ಯಾರಿಗೂ ಕಮ್ಮಿಯಿಲ್ಲವೆಂಬಂತೆ ವರ್ತಿಸುತ್ತಾರೆ. ನೀವು ಬಾಬಾ ಬುಡನ್ ಗಿರಿಗೆ ಹೋದರೂ ಅಷ್ಟೇ, ಎರಡು ಧರ್ಮದ ಜನರು ಈ ಸ್ಥಳ ಬಿಟ್ಟರೇ ಮತ್ತ್ಯಾವ ಸ್ಥಳವೂ ಪೂಜೆಗೆ ಯೋಗ್ಯವಲ್ಲವೆನ್ನುವ ಮಟ್ಟಕ್ಕೆ ಅಲ್ಲಿಗೆ ಬಂದು ಪೂಜಿಸುತ್ತಾರೆ. ಇದರಲ್ಲಿ ನಂಬಿಕೆಗಿಂತ ಪ್ರತಿಷ್ಟೆ ಅಧಿಕವಾಗಿರುತ್ತದೆ. ಜನರು ಎಲ್ಲವನ್ನು ಅಭಿಮಾನದ ಹೆಸರಿನಲ್ಲಿ, ಅಹಂಗೆ ತೆಗೆದುಕೊಳ್ಳುತ್ತಾರೆ. ಇದು ವ್ಯಕ್ತಿಗತ ಎನ್ನಲು ಸಾಧ್ಯವೇ ಇಲ್ಲ. ಎಲ್ಲರಿಗೂ ಅನ್ವಯಿಸುತ್ತದೆ. ಅಣ್ಣ ತಂಗಿ ಅಕ್ಕತಮ್ಮ ಎಂದು ಶುರುವಾಗುವ ಇದು ನನ್ನ ಧರ್ಮ ನನ್ನ ಜಾತಿಯಿಂದ ನನ್ನ ದೇಶ ಎನ್ನುವ ತನಕವೂ ಹೋಗುತ್ತದೆ. ಬೇಲೂರು ಹಳೇಬೀಡಿಗೆ ಕಾಲಿಟ್ಟರೂ ಅಷ್ಟೇ, ಮೊದಲು ಬೈಯ್ಯುವುದು ಮುಸ್ಲೀಮರಿಗೆ, ಸಾಬರು ಬಂದು ಎಲ್ಲವನ್ನು ಹಾಳು ಮಾಡಿದರು ಅದು ಇದು ಎಂದು. ಯುದ್ದದಲ್ಲಿ ಯಾರೂ ಅಣ್ಣ ತಮ್ಮನೆನ್ನುವುದಿಲ್ಲ, ಯುದ್ದ ಎಲ್ಲರಿಗೂ ಒಂದೇ ಅಲ್ಲವಾ?
ಬಾಬಾ ಬುಡನ್ ಗಿರಿಯನ್ನು ನೋಡುವಾಗ ಸಾಕಷ್ಟು ಮಳೆ ಸುರಿಯುತ್ತಿತ್ತು. ಬಜ್ಜಿ ಬೋಂಡಾ ಸಿಗರೇಟು ಟೀ ಮುಗಿಸಿಕೊಂಡು ಗಾಡಿಗೆ ಸ್ವಲ್ಪ ಪೆಟ್ರ‍ೋಲ್ ಹಾಕಿಸಿ ಹೊರಟೆವು. ನಮ್ಮ ಬೈಕಿನಲ್ಲಿ ಪೆಟ್ರ‍ೋಲ್ ಖಾಲಿ ಹಾಗುವ ಸಂಭವ ಹೆಚ್ಚಿತ್ತು, ಆದ್ದರಿಂದ ಜೊತೆಯಲ್ಲಿಯೇ ಹೋಗೋಣ ಖಾಲಿ ಆದರೇ ಅಲ್ಲಿ ಒಂದು ಗಾಡಿಯಿಂದ ಮತ್ತೊಂದಕ್ಕೆ ತೆಗೆಯೋಣ ಎಂದೆಲ್ಲಾ ಯೋಜನೆ ಹಾಕುತ್ತಿರುವಾಗಲೇ ನಮಗೇ ಪೆಟ್ರೋಲ್ ಸಿಕ್ಕಿತು. ನಾನು ಗಮನಿಸಿದ ಹಾಗೆ ಬಹಳಷ್ಟು ಬಾರಿ ನಾವು ವಿನಾಕಾರಣ ಪ್ರತಿಕ್ರಿಯಿಸಿ ಸಂಧರ್ಭಗಳನ್ನು ಬಿಗಡಾಯಿಸುತ್ತೇವೆ. ಪೆಟ್ರೋಲ್ ಕಡಿಮೆ ಇದೆ ಎನ್ನುವಾಗಲೇ, ಅಯ್ಯೋ ನಾನು ಅಲ್ಲಿಯೇ ಹಾಕಿಸು ಎಂದೇ ನೀನು ಕೇಳಲಿಲ್ಲ ಎಂದು ಒಬ್ಬ ಹೇಳಿದರೇ, ಮತ್ತೊಬ್ಬ ಇವನು ಯಾವಗಲೂ ಹೀಗೆ ಎನ್ನುವುದು. ಅದಕ್ಕೆ ಅವನು ನನ್ನ ಗಾಡಿ ಮೈಲೇಜು ಕಮ್ಮಿ ಆಗಿದೆ, ಇದು ಪೆಟ್ರ‍ೋಲ್ ಬಂಕಿನ ಮೋಸ ಎಂದು, ಅಥವಾ ಗಾಡಿ ರಿಪೇರಿ ಮಾಡುವ ಮಂಜನೇ ಕಾರಣನೆಂದು, ಹೀಗೆ ಕನಿಷ್ಟ ಹತ್ತು ಹದಿನೈದು ನಿಮಿಷ ಇರುವ ಇಲ್ಲದವರ ಎಲ್ಲರಿಗೂ ಉಗಿದೆವು. ಅದಲ್ಲದೇ ಇಲ್ಲಸಲ್ಲದೇ ಮನಸ್ಸನ್ನು ಹಾಳು ಮಾಡಿಕೊಂಡೆವು. ಈ ರೀತಿಯ ಸನ್ನಿವೇಶಗಳು ನಮ್ಮ ದಿನನಿತ್ಯ ಜೀವನದಲ್ಲಿ ಸದಾ ನಡೆಯುತ್ತಲೇ ಇರುತ್ತವೆ. ಸರಿಯಾಗಿ ಗಮನಿಸಿದರೇ ಇವೆಲ್ಲವೂ ನಾವು ಪ್ರತಿಕ್ರಿಯಿಸಬೇಕಾದವುಗಳು ಅಲ್ಲವೇ ಅಲ್ಲ. ಸ್ಪಂದನೆ ಮತ್ತು ಪ್ರತ್ರಿಕ್ರಿಯೆ ಎರಡರ ನಡುವೆ ತೆಲುವಾದ ವ್ಯತ್ಯಾಸವಿದೆ ಅರ್ಥೈಸಿಕೊಳ್ಳಬೇಕು. ನಾವು ಬೆಟ್ಟದಿಂದ ಚಿಕ್ಕಮಗಳೂರು ದಾರಿ ಹಿಡಿಯುವಾಗ ಆಗಲೇ ಎಂಟು ಗಂಟೆಯಾಗಿತ್ತು. ಬರುವಾಗ ನಾವು ಸ್ವಲ್ಪ ದಾರಿ ತಪ್ಪಿದಂತೆ ಎನಿಸಿದರೂ ಸರಿಯಾದ ರಸ್ತೆಯಲ್ಲಿಯೇ ಇದ್ದೆವು. ಬರುತ್ತಾ ದಾರಿಯಲ್ಲಿ, ರಸ್ತೆಯ ಬದಿಯಲ್ಲಿ ಹುಡುಗರು ಹುಡುಗಿಯರು ಸೇರಿಕೊಂಡು ಕುಡಿದು ಕುಣಿಯುತ್ತಿದದ್ದು ಸಾಮಾನ್ಯ ದೃಶ್ಯವಾಗಿತ್ತು. ಮೋಜೆಂದರೇ ನಮಗೂ ಖುಷಿ ಎನಿಸುತ್ತದೆ, ಮೋಜಿನಲ್ಲಿ ಕೂಡ ಆರೋಗ್ಯವಂತ ಮೋಜು ಮಾಡಬಹುದೆಂಬುದು ಅನೇಕರಿಗೆ ತಿಳಿಯುವುದಿಲ್ಲ, ಮೋಜೆಂದರೇ, ಕುಡಿಯುವುದು, ಕುಡಿದು ತೇಲುವುದು ಎಂದು ಭಾವಿಸುತ್ತಾರೆ. ಕುಡಿದು ತಮ್ಮದೇ ಹಾದಿಯಲ್ಲಿ, ಕುಣಿದು ಸಂಭ್ರಮಿಸುವುದು ಇದೆಯಲ್ಲಾ, ಅದು ಅದ್ಬುತಾ!
ನಾನು ಸದಾ ನನ್ನ ಬೈಕ್ ಅನ್ನು ಜೀವಂತ ವಸ್ತುವೆಂದೇ ತಿಳಿದಿದ್ದೇನೆ, ಹೆಚ್ಚೆಚ್ಚು ಒತ್ತಡ ಹೇರಿ ಗಾಡಿ ಓಡಿಸುವ ಯಾವುದೇ ಡ್ರೈವರ್ ಅನ್ನು ಕಂಡರೂ ನನಗೆ ಕೋಪ ಬರುತ್ತದೆ. ಈ ವಿಷಯದಲ್ಲಿ ನನಗೂ ವಿಜಿಗೂ ಬಹಳಷ್ಟು ಬಾರಿ ವಾದಗಳು ನಡೆದಿವೆ. ಅವನ ಪ್ರಕಾರ ಗಾಡಿ ಇರುವುದೇ ಓಡಿಸುವುದಕ್ಕೆ, ನನ್ನ ಪ್ರಕಾರ ಅದು ನಮ್ಮ ಸ್ನೇಹಿತ, ಸ್ನೇಹಿತನಂತೆಯೇ ನೋಡಿಕೊಳ್ಳಬೇಕು. ನಂದನೂ ಹಾಗೇಯೇ ನಡೆದುಕೊಳ್ಳುತ್ತಾನೆ. ಅಂದು ಬುಡನ್ ಗಿರಿಯಿಂದ ಕೆಳಗಿಳಿದ ಮೇಲೆ, ರಸ್ತೆ ಕೊರಕಲು ಬಿದ್ದಿದ್ದರಿಂದ ಎಚ್ಚರಿಕೆಯಿಂದ ಓಡಿಸಬೇಕಾದದ್ದು ಅವನ ಜವಬ್ದಾರಿ ಅಂಥಹ ಗುಂಡಿಯಲ್ಲಿಯೂ ತಾತ್ಸಾರದಿಂದ ಓಡಿಸಲು ಹೋಗಿ ಬೈಕಿನ ಬಲ್ಬ್ ಬರ್ನ್ ಆಗುವಂತೆ ಮಾಡಿಕೊಂಡ. ರಾತ್ರಿ ಆಗಲೇ ೯ಗಂಟೆ ಆಗಿತ್ತು. ನಾನು ನಂದ ವಾಪಸ್ಸು ಚಿಕ್ಕಮಗಳುರಿಗೆ ಬಂದು ಬಲ್ಬ ಹುಡುಕಿ ಒಂದು ಗಂಟೆ ವ್ಯರ್ಥಮಾಡಿದೆವು. ಕಡೆಗೆ ಹಾಗೇಯೇ ಒಂದು ಬೈಕಿನ ಬೆಳಕಿನ ನೆರವಿನಿಂದ ಹೋಗುವುದೆಂದು ನಿರ್ಧರಿಸಿದೆವು. ಅಷ್ಟೊತ್ತಿಗೆ ವಿಜಿ ಆರೋಗ್ಯ ಸ್ವಲ್ಪ ಹದಗೆಟ್ಟಿ ಅವನು ಬಸ್ಸಿನಲ್ಲಿ ಹೋಗಲು ನಿರ್ಧರಿಸಿದನು. ಅವನನ್ನು ಬೆಲೂರಿನಿಂದ ಅವರ ಊರಿನ ಬಸ್ ಹತ್ತಿಸಿ, ಅಲ್ಲಿಯೇ ನಾಲ್ಕು ಇಡ್ಲಿ ತಿಂದು, ಹೊರಟೆವು. ನಮ್ಮ ಬೈಕಿನ ಬೆಳಕಿನ ನೆರವಿನಿಂದ ನಾವು ಹೋಗುವುದೇ ಕಷ್ಟ ಅಂಥಹುದರಲ್ಲಿ ರಾತ್ರಿ ಇಡೀ ಬೆಂಗಳೂರಿನ ತನಕ ೨೫೦ ಕೀಮೀನಷ್ಟನ್ನು ತಲುಪುವುದು? ಆಗಿದ್ದಗಾಲಿ ಎಂದು ಹೊರಟೆವು, ದಾರಿಯಲ್ಲಿ ಬರುವಾಗ ಹಾಸನ ಬಿಟ್ಟು ಸ್ವಲ್ಪ ದೂರಕ್ಕೆ ಎರಡು ಅಪಘಾತಗಳು ನಮ್ಮನ್ನು ಸ್ವಲ್ಪ ದೃತಿಗೆಡುವಂತೆ ಮಾಡಿದವು. ನಾವು ಚನ್ನರಾಯಪಟ್ಟಣಕ್ಕೆ ಬಂದು ಅರ್ಧ ತಾಸು ವಿಹಾರಿಸಿ, ನಿಧಾನಕ್ಕೆ ಹೋಗೋಣವೆಂದು ನಿರ್ಧರಿಸಿದೆವು. ಆದರೂ ನಂದ ಒಮ್ಮೊಮ್ಮೆ ಹುಚ್ಚು ಹಿಡಿದವನಂತೆ ಹೋಗಿಬಿಡುತ್ತಿದ್ದ, ನಂದನಲ್ಲಿ ಇರುವ ಕೆಟ್ಟಗುಣವೆಂದರೇ, ಗಾಡಿ ಓಡಿಸುವಾಗ ತುಂಬಾ ಸೈಡಿಗೆ ಹೋಗುವುದು, ವಿಜಿಯದ್ದು ಇದಕ್ಕೆ ವಿರುದ್ದ ರಸ್ತೆ ಮಧ್ಯೆದಲ್ಲಿಯೇ ಹೋಗುವುದು. ಇವರಿಬ್ಬರು ಗಾಡಿ ಓಡಿಸುವಾಗ ಹಿಂದೆ ಕುಳಿತಿರುವವನು ಅವನ ಜೀವವನ್ನು ಒತ್ತೆಯಿಟ್ಟಿರಬೇಕು. ನನ್ನ ಹಿಂದೆ ಕುಳಿತಿದ್ದ ಸುಧಿ ಬೇರೆ ಆಗಾಗ ನಿದ್ದೆ ಮಾಡುವುದು, ಮುಂದೆ ನಂದ ಹುಚ್ಚನಂತೆ ಗಾಡಿ ಓಡಿಸುವುದು ನನಗೋ ಈ ನನ್ಮಕ್ಕಳ ಸಹವಾಸವೇ ಬೇಡವೆನಿಸತೊಡಗಿತ್ತು. ಬೆಳ್ಳೂರು ಇನ್ನು ಎರಡು ಕೀಮಿ ಇರುವಾಗ ನನ್ನ ಬೈಕ್ ಇದ್ದಕ್ಕಿದ್ದ ಹಾಗೆ ಎಳೆದಾಡಿದ ಹಾಗೆ ಆಯಿತು, ನಾನು ಗಾಡಿ ಪಂಚರ್ ಆಯಿತೆಂದು ತಿಳಿದು, ನಿಲ್ಲಿಸಿ ನೋಡುವಾಗ ಏನೂ ಆಗಿರಲಿಲ್ಲ. ಅದು ಸುಧಿ ನಿದ್ದೆ ಮಾಡುತ್ತಿದ್ದರಿಂದ ಅವನು ಆಚೀಚೆ ಎಳೆದಾಡಿರಬಹುದೆನಿಸಿತು. ಅಷ್ಟೊತ್ತಿಗೆ ನಂದ ನಮಗಿಂತ ಬಲು ದೂರ ಯಾವುದೋ ಬಸ್ಸಿನ ಲೈಟ್ ಹಿಡಿದು ಹೋಗಿದ್ದ. ನಾವು ಅಲ್ಲಿ ಗಾಡಿ ಅಲ್ಲಾಡಿದ್ದು, ದೆವ್ವದ ಕೆಲಸವೆಂದು ದೆವ್ವದ ಮೇಲಕ್ಕೆ ಹಾಕಿದೆವು.
ಮುಂದೆ ಬರುವಾಗ ನನಗೆ ನಿದ್ದೆ ಜೊಂಪು ಹತ್ತತೊಡಗಿತು. ನಿದ್ದೆ ತಡೆಯಲಾಗದೇ ಬರುತ್ತಿದ್ದರೇ ನಂದ ನನ್ನನ್ನು ವೇಗದಿಂದ ಬಾ ಎನ್ನುತ್ತಿದ್ದ. ಅತಿ ವೇಗ ತಿಥಿ ಬೇಗ ಎಂದರೂ ಕೇಳದೆ, ಎಂಬತ್ತು ತೊಂಬತ್ತು ವೇಗವೂ ಕಡಿಮೆ ಎನಿಸಿತ್ತು ಅವನಿಗೆ. ಅಂತೂ ಇಂತೂ ನಾವು ಮುಂಜಾನೆ ಐದು ಗಂಟೆಯ ಹೊತ್ತಿಗೆ ಸುಂಕದಕಟ್ಟೆ ತಲುಪಿದೆವು. ಅವರನ್ನು ಬಿಟ್ಟು ನಾನು ಮನೆಗೆ ಹೊರಡುವಾಗ ನನ್ನ ಗಾಡಿಯ ಬಲ್ಬ್ ಹತ್ತುತಿರಲಿಲ್ಲ. ಅಯ್ಯೋ ದೇವರೇ ಸದ್ಯಾ ಇಲ್ಲಿಯ ತನಕವಾದರೂ ತಲುಪಿಸಿದೆಯಲ್ಲ ಧನ್ಯವಾದಗಳು ಎಂದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...