27 ಜೂನ್ 2012

ಕನಸಲ್ಲಿಯೂ ಮೆರೆದ ವಾಸ್ತವಿಕತೆ!!!





ಕಳೆದವಾರ ಮಲಗಿದ್ದಾಗ ಇದ್ದಕ್ಕಿದ್ದ ಹಾಗೆಯೇ, ಎಚ್ಚರವಾಯಿತು, ನಿಧಾನವಾಗಿ ಕಣ್ಣು ಬಿಟ್ಟು ನೋಡಿದೆ. ಕತ್ತಲಾಗಿತ್ತು, ಆದರೇ ಕಣ್ಣಿನ ಅಂಚಿನಲ್ಲಿ ನೀರಿತ್ತು. ಇದೇನು ಕಣ್ಣೀರು, ಕನಸಿನಲ್ಲಿ ಅತ್ತಿದ್ದೀನಾ? ಅಂಥಹ ಕನಸು ಏನು ಬಿತ್ತು ಎಂದು ಹಿಂದಕ್ಕೆ ತಿರುಗಿದೆ. ಇತ್ತೀಚಿನ ದಿನಗಳಲ್ಲಿ ನಾನು ಮಾತನಾಡುವಾಗ ಹಲವಾರು ಬಾರಿ, ಸಾವಿನ ಬಗ್ಗೆ ಮಾತನಾಡಿದ್ದೇನೆ, ನಾನು ಸತ್ತರೇ? ಇಂಥಹ ಕುತೂಹಲ ನನಗೂ ಇದೆ, ನಾನು ಸತ್ತರೆ ಯಾರೆಲ್ಲ ಅಳಬಹುದು, ಎಷ್ಟು ಜನ ಸೇರಬಹುದು? ನನ್ನನ್ನು ಹೊಗಳುವವರೆಷ್ಟು, ದೂರುವವರೆಷ್ಟು? ಇದರ ನಡುವೆಯೇ ಈ ಕನಸ್ಸು ಬಿದ್ದಿದ್ದು ಅಚ್ಚರಿ ಎನಿಸಿತು. ಕನಸಿನ ಎಳೆಯನ್ನು ಬಿಡಿಸುತ್ತಾ ಹೋದೆ. ನಾನು ಬೈಕಿನಲ್ಲಿ ಆಫೀಸಿಗೆ ಬರುತ್ತಿರುವಾಗ, ದಾರಿ ಮಧ್ಯದಲ್ಲಿ ಯಾವುದೋ ಲಾರಿ ನನಗೆ ಡಿಕ್ಕಿ ಹೊಡೆದು ನಾನು ಒದ್ದಾಡುತ್ತಿದ್ದೆ. ನನ್ನನ್ನು ಅಲ್ಲಿಯೇ ಇದ್ದವರು ಆಸ್ಪತ್ರೆಗೆ ಸೇರಿಸಿದರು. ಅದು ನಾಗರಭಾವಿಯ ಪನೇಷಿಯಾ ಆಸ್ಪತ್ರೆ, ನಾನು ಜ್ನಾನ ತಪ್ಪಿದ್ದೇನೆ, ಆಸ್ಪತ್ರೆಗೆ ದಾಖಲು ಮಾಡಬೇಕು, ನನ್ನ ಕಡೆಯವರು ಯಾರೂ ಇಲ್ಲ. ನನ್ನ ಮೊಬೈಲ್ ನಲ್ಲಿರುವ ನಂಬರುಗಳನ್ನು ತೆಗೆಯಲು ನೋಡುತ್ತಾರೆ ಮೊಬೈಲ್ ಚೂರು ಚೂರಾದಂತಿದೆ, ಆದರು ಆನ್ ಆಯಿತು. ಆದರೇನು ಪ್ರಯೋಜನ, ಮೊಬೈಲಿಗೆ ಕೋಡ್ ಕೊಟ್ಟಿದ್ದೇನೆ, ಅದನ್ನು ಉಪಯೋಗಿಸಲು ಬರುತ್ತಿಲ್ಲ. ಅಲ್ಲಿ ನಿಂತಿದ್ದವರು ನನ್ನನ್ನು ಬೈಯ್ಯುತ್ತಿದ್ದಾರೆ. ಹೇಗೆ ಕಂಡು ಹಿಡಿಯುವುದು ಇವನು ಯಾರ ಕಡೆಯವನು ಎನ್ನುವಾಗಲೇ, ನನ್ನ ಗಾಡಿಯಲ್ಲಿದ್ದ ನನ್ನ ಆಫೀಸಿನ ಅಕ್ಷೆಸ್ ಕಾರ್ಡು ಸಿಗುತ್ತದೆ. ಅದರ ಹಿಂದೆ ಇಂದ ನಂಬರನ್ನು ತೆಗೆದು ಆಫೀಸಿಗೆ ಕರೆ ಮಾಡುತ್ತಾರೆ.

ನಮ್ಮ ಕಾರ್ಡಿನಲ್ಲಿರುವ ನಂಬರು ಗ್ಲೋಬಲ್ ಎಡ್ಜ್ ಕಛೇರಿಯದ್ದು, ಅಂತೂ ಕುಮಾರ್ ರವರಿಗೆ ನನ್ನ ಅಪಘಾತದ ವಿಷಯ ತಲುಪುತ್ತದೆ. ತಲುಪಿದರೇನು ಬಂತು ನೋಡಲೇನು ಆತುರದಲ್ಲಿ ಬರುವುದಿಲ್ಲ. ಅಯ್ಯೋ ಪಾಪವೆಂದು ಸುಮ್ಮನಾಗುತ್ತಾರೆ. ಆಸ್ಪತ್ರೆಯಲ್ಲಿ ನಾನು ಒಬ್ಬನೇ, ನಾನು ಸತ್ತಿದ್ದೇನೆಂಬುದರ ಅರಿವು ಅಲ್ಲಿದ್ದವರಿಗಿಲ್ಲ. ಪೋಲಿಸರು ಅಲ್ಲಿಗೆ ಆಗಮಿಸುತ್ತಾರೆ. ಹೌದಾ? ಮುಗಿತು, ಇಷ್ಟೇ ಪೋಲಿಸರ ಕೆಲಸ, ಬದುಕಿದಿದ್ದರೇ ನಾಲ್ಕು ಕಾಸಾದರೂ ಸಿಕ್ಕುತ್ತಿತ್ತು, ಈಗ ಅದೆಲ್ಲವೂ ಇಲ್ಲಾ. ಪೋಲಿಸರು ಮೊದಲು ಖಾತರಿ ಮಾಡಿಕೊಳ್ಳುತ್ತಾರೆ. ಕುಡಿದು ಸತ್ತಿಲ್ಲವೆನ್ನುವುದು ತೀರ್ಮಾನವಾದ ತಕ್ಷಣ ಲಾರಿ ಡ್ರೈವರಿನ ಬಳಿಗೆ ಹೋಗುತ್ತಾರೆ, ಅವರ ಜೇಬು ತುಂಬಿಸುವ ಕೆಲಸವೂ ನಡೆಯುತ್ತದೆ. ಯಾರು ಸತ್ತರೂ ಅತ್ತರೂ ಕೆಟ್ಟರೂ ಹಳೇ ಸಿನೆಮಾದಲ್ಲಿ ಬರುವ ವಜ್ರಮುನಿ, ಸುಧೀರ್, ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು ತರಹ ನಮ್ಮ ಪೋಲಿಸರು, ಡಾಕ್ಟರುಗಳು, ಕೆಲವು ಅಧಿಕಾರಿಗಳು. ನನ್ನ ಕಡೆಯವರು ಯಾರೂ ಇಲ್ಲವೆಂದು ತಿಳಿದು ಒಂದು ಮೂಲೆಗೆ ನನ್ನ ಶವವನ್ನು ತಳ್ಳುತ್ತಾರೆ. ವಿಚಿತ್ರವೆಂದರೇ ನಾನು ಸತ್ತಿರುವುದು ಅವರಿಗೆ ಇನ್ನೂ ತಿಳಿದಿಲ್ಲ, ತಿಳಿದಿಲ್ಲವೋ ಅಥವಾ ತಿಳಿಯದಂತೆ ನಾಟಕವಾಡುತ್ತಿದ್ದರೋ ನನಗೆ ತಿಳಿದಿಲ್ಲ. ನಮ್ಮ ಆಫೀಸಿಗೆ ಮತ್ತೊಮ್ಮೆ ಫೋನ್ ಮಾಡುತ್ತಾರೆ, ಆ ಸಮಯಕ್ಕೆ ಕುಮಾರ್ ಆಫೀಸ್ ಬಿಟ್ಟಿರುತ್ತಾರೆ, ಈಗ ಹೇಗೆ ಕಂಡು ಹಿಡಿಯುವುದೆಂದು ಪರದಾಡುತ್ತಿರುವಾಗಲೇ, ಕನ್ನಡ ನ್ಯೂಸ್ ಚಾನೆಲ್ ಗಳಲ್ಲಿ ಸುದ್ದಿ ಮೂಡುತ್ತದೆ.

ಸುದ್ದಿ ತಿಳಿದ ತಕ್ಷಣ ಕೆಲವು ಸ್ನೇಹಿತರು, ನೆಂಟರು ಬರುತ್ತಾರೆ. ಶವ ತೆಗೆದುಕೊಳ್ಳುವ ಸಮಯದಲ್ಲಿ ಅವರಿವರು ನಾಲ್ಕು ಕಾಸು ಖರ್ಚು ಮಾಡುತ್ತಾರೆ. ಅಂತೂ ಇಂತೂ ಶವವನ್ನು ನನ್ನೂರಿಗೆ ಸಾಗಿಸಿ ನನ್ನ ತಂದೆ ತಾಯಿಯರು ಅಳುತ್ತಾ ನನ್ನ ಶವ ಸಂಸ್ಕಾರವನ್ನು ಮುಗಿಸುತ್ತಾರೆ. ಮುಗಿದ ಮೇಲೆ ಮನೆಯಲ್ಲಿದ್ದ ನೆಂಟರು, ಬಂಧು ಭಾಂಧವರು, ನಮ್ಮಪ್ಪನನ್ನು ವಿಚಾರಿಸುತ್ತಾ ಹೋಗುತ್ತಾರೆ. ಯಾವುದಾದರೂ ಎಲ್..ಸಿ ಇತ್ತಾ? ಬೇರೆ ಏನಾದರೂ ಇನ್ಸುರೆನ್ಸ್ ಮಾಡಿಸಿದ್ದನಾ? ಆಸ್ಪತ್ರೆಯಲ್ಲಿ ಹೆಚ್ಚು ಖರ್ಚು ಆಯ್ತಾ? ಅವರ ಆಫೀಸಿನವರು ಯಾರಾದರೂ ಬಂದಿದ್ದರಾ? ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಬೀಳುತ್ತವೆ. ನಮ್ಮಪ್ಪನಿಗೆ ಏನು ಹೇಳಬೇಕು, ಏನು ಮಾತನಾಡುವುದು ಏನು ತೋಚುವುದಿಲ್ಲ. ಆಸ್ಪತ್ರೆಯಲ್ಲಿ ಖರ್ಚು ಏನೂ ಆಗಲಿಲ್ಲ, ಆಸ್ಪತ್ರೆಗೆ ತರುವ ಮುಂಚೆಯೇ ಜೀವ ಹೋಗಿತ್ತಂತೆ, ಅವನ ಸ್ನೇಹಿತರು ಎಲ್ಲವನ್ನೂ ನೋಡಿಕೊಂಡು ಇಲ್ಲಿಗೆ ತಂದಿದ್ದಾರೆ, ಒಳ್ಳೆಯ ಹುಡುಗರು ಅವರು ಇದ್ದಿದ್ದಕ್ಕೇ ಆಯ್ತು, ಇಲ್ಲ ಅಂದಿದ್ದರೇ ಕಷ್ಟ ಆಗುತ್ತಿತ್ತು ಅಂತಾ ಕಣ್ಣು ಒರೆಸಿಕೊಳ್ಳುತ್ತಾರೆ.

ಬಂದಿದ್ದವರು ಸುಮ್ಮನಿರುವುದಿಲ್ಲವಲ್ಲ, ನಮ್ಮವರೆಲ್ಲರೂ ಅಷ್ಟೇ ಗಮನಿಸಿ ನೋಡಿ, ಬಹಳ ವ್ಯಾವಹಾರಿಕವಾಗಿ ಮಾತನಾಡುತ್ತಾರೆ. ಆಗಬೇಕಿರುವುದೇನು, ಯಾವುದು ಮುಖ್ಯ ಅದನ್ನೇ ಹೆಚ್ಚು ಚರ್ಚಿಸುತ್ತಾರೆ. ಸತ್ತು ಹೋದವನ ತಿಕ ಅತ್ತಲೋ ಇತ್ತಲೋ ಎಂಬುದೊಂದು ಗಾದೆ ಮಾತು. ಸತ್ತ ಮೇಲೆ ಅವನ ಬಗ್ಗೆ ಯೋಚಿಸಿ ಏನೂ ಬರುವುದಿಲ್ಲ. ಮಾಡುವುದರ ಬಗ್ಗೆ ಯೋಚಿಸಬೇಕು. ಏನಾದರೂ ಚೀಟೀ ಗೀಟೀ ಹಾಕಿದ್ದನಾ ನೋಡಬೇಕಿತ್ತು, ಬ್ಯಾಂಕಿನಲ್ಲಿ ಏನಾದರೂ ಇಟ್ಟಿದ್ದಾನಾ ನೋಡಬೇಕಿತ್ತು ಎನ್ನುತ್ತಾರೆ. ನನ್ನ ಅನೇಕಾ ಸ್ನೇಹಿತರಿಗೆ ಕೋಪ ಬರುತ್ತದೆ. ಅವನು ಸತ್ತಿದ್ದಾನೆ, ಪಾಪ ಅವರಿಗೆ ಸಮಾಧಾನ ಮಾಡುವುದನ್ನು ಬಿಟ್ಟು ದುಡ್ಡಿನ ಬಗ್ಗೆ ಮಾತನಾಡ್ತಾರಲ್ಲ ಎನ್ನುತ್ತಾರೆ. ಆದರೇ ಅದು ಆ ಕ್ಷಣದ ಅನಿವಾರ್ಯತೆಯೆಂಬುದು ಹುಡುಗರಿಗೆ ಅರಿವಾಗುವುದಿಲ್ಲ. ಅವರು ಮುಂದುವರೆಸುತ್ತಾರೆ, ಆಫೀಸಿನವರು ಯಾರು ಬಂದಿರಲಿಲ್ಲವೇ? ಆಫೀಸಿನಲ್ಲಿ ಕೇಳಬೇಕಿತ್ತು. ಅವರು ಮಾಡಿಸಿರ‍್ತಾರೆ, ನಮ್ಮ ಬೆಮ್ಮತ್ತಿ ಸುಜಾತನ ಮಗ ಸತ್ತಾಗ ನೋಡ್ಲಿಲ್ವಾ ಹತ್ತು ಲಕ್ಷ ಬಂತಂತೆ, ನಮ್ಮ ಅಣ್ಣಯ್ಯಣ್ಣನ ಗಿರಿಜೆ ಗಂಡ ಸತ್ತಾಗಲೂ ಅಲ್ವಾ ಮೂರು ಲಕ್ಷ ಕೊಟ್ಟರು. ಆಫೀಸಲ್ಲಿ ಪೋಲಿಸು ಕೇಸು ಗೀಸು ಅಂತಾ ಹೆದರ‍್ಕೊಂಡು ಕೊಡ್ತಾರೆ. ಅದಕ್ಕೆ ಪಕ್ಕದ್ದಲ್ಲಿದ್ದವನು, ಇಲ್ಲಾ ಆಕ್ಸಿಡೆಂಟ್ ಗೆಲ್ಲಾ ಕೊಡಕ್ಕಿಲ್ಲ. ಅದಕ್ಕೆ ಆ ಲಾರಿಯವನ ಹತ್ತಿರ ಏನಾದರೂ ಸಿಕ್ಕಿದರೇ ಅಷ್ಟೇ, ಇಲ್ಲಂದ್ರೇ ಕೇಸು ನಡೆಸ್ಕೊಬಹುದು.

ಅದರ ಮಧ್ಯೆ ನಮ್ಮಜ್ಜಿ ಬಂದು ಹೇಳ್ತಾರೆ. ಅಯ್ಯೋ ಬಿಡಿ ಅವನೇ ಇಲ್ಲಾ ಅಂದಮೇಲೆ ದುಡ್ಡು ತಗೊಂಡು ಏನು ಮಾಡೋದು. ಸಂಬಳ ಕಮ್ಮಿ ಅಂತಾ ಪರದಾಡ್ತಾ ಇದ್ದ. ಅದರಲ್ಲೂ ಅಲ್ಲಿ ಇಲ್ಲಿ ಸ್ವಲ್ಪ ಉಳಿಸಿದ್ದರಲ್ಲೇ, ಟಿವಿ, ಫ಼್ರ‍ಿಡ್ಜ್, ವಾಷಿಂಗ್ ಮೆಷಿನ್ ಏನೇನೋ ತಂದ. ಕಳೆದ ಸಲ ಬಂದಾಗಲೂ ಅದೇ ಹೇಳ್ತಾ ಇದ್ದ, ಅವ್ವಾ ಸಂಬಳ ಸಾಲದಿಲ್ಲ, ಈಗ ಮದುವೆ ಮಾಡ್ಕೊಂಡು ಸಂಸಾರ ಮಾಡೋಕೆ ಆಗುತ್ತಾ? ನೀನೇ ಅರ್ಥ ಮಾಡಿಕೋ? ಮದುವೆ ಆಗೋಕೆ ಇಲ್ಲಾ ಅಂದ್ರು ಐದು ಲಕ್ಷ ಬೇಕು, ಬ್ಯಾಂಕಲ್ಲಿ ಐವತ್ತು ಸಾವಿರ ಇಲ್ಲ ಏನು ಮಾಡಲೀ ಅಂದ. ಐದು ಲಕ್ಷ ಯಾಕೆ ಮದುವೆಗೆ ಅಂದಿದ್ದಕ್ಕೆ, ಅಯ್ಯೋ ಬೀಗರ ಊಟಕ್ಕೆ ಬೇಕಲ್ಲವಾ, ಹತ್ತು ಕ್ವಿಂಟಲ್ ಮಟನ್ ಅಂದ್ರೂ ಮೂರು ಲಕ್ಷ, ಇನ್ನೂ ಬಟ್ಟೇ ಬರೇ ಅಂದ್ರೇ? ಹದಿನೇಳು ಜನ ಅಜ್ಜಿಯಂದಿರು, ಅವರ ಮಕ್ಕಳು, ಮೊಮ್ಮಕ್ಕಳು, ಊರಿನವರು, ಅಪ್ಪನ ಕಡೆಯವರು ಕಮ್ಮಿ ಜನನಾ? ಎಂದಿದ್ದ. ಎಂದರು. ಬ್ಯಾಂಕಲ್ಲೂ ಏನು ದುಡ್ಡು ಇಟ್ಟಿಲ್ಲ ಬಿಡಿ.

ಅದೇ ಸಮಯಕ್ಕೇ ಬೆಂಗಳೂರಿನಿಂದ ಬಂದಿದ್ದ ಕೆಲವು ಹುಡುಗರು ಹೊರಡಲು ತಯರಾಗುತ್ತಾರೆ, ಬರ್ತೀವಿ ಅಂಕಲ್ ಆಗಿದ್ದು ಆಯ್ತು ಏನೂ ಮಾಡೋಕೆ ಆಗಲ್ಲವೆನ್ನುತ್ತಾರೆ. ಅಲ್ಲಿದ್ದ ಬಹಳ ಸ್ನೇಹಿತರು ಹೊರಡುತ್ತಾರೆ. ಅವರನ್ನು ನೋಡಿದ ನಮ್ಮಜ್ಜಿ ಮತ್ತು ಕೆಲವರು ಪಾಪಾ ಈ ಹುಡುಗರು ಬಹಳ ಕಷ್ಟ ಪಟ್ಟಿದ್ದಾರೆ. ಅಲ್ಲಿಂದ ಅವರಿಲ್ಲ ಅಂದ್ರೇ ಕಷ್ಟ ಆಗ್ತಿತ್ತು ಎಂದರು. ಅಲ್ಲಿದ್ದ ಯಾರೋ ಕೇಳಿದರು ನೀವು ಅವನ ಜೊತೆ ಕೆಲಸ ಮಾಡ್ತೀರೇನಪ್ಪಾ? ಹುಡುಗರು, ಇಲ್ಲಾ ನಾವು ಜೊತೆಯಲ್ಲಿ ಓದಿದವರು ಎಂದರು. ಅವರು ಮಾತು ಮುಂದುವರೆಸುತ್ತಾ, ನೋಡ್ರಪ್ಪಾ, ಅವನು ಕೆಲಸ ಮಾಡ್ತ ಇದ್ದ ಜಾಗಕ್ಕೆ ಸ್ವಲ್ಪ ಹೋಗಿ ಮಾತಾಡಿ. ದುಡ್ಡಿನ ಆಸೆಗೆ ಅಂತಾ ಅಲ್ಲ, ಅಪ್ಪ ಅಮ್ಮ ಇಬ್ಬರೂ ವಯಸ್ಸಾಗಿದ್ದಾರೆ, ಅವರಿಗೂ ರಿಟೈರ್ಡ್ ಆಗಿದೆ. ಪಾಪಾ ಏನು ಮಾಡ್ತಾರೆ ಮುಂದಕ್ಕೆ ಅಲ್ವಾ? ವಯಸ್ಸಿಗೆ ಬಂದ ಮಕ್ಕಳು ಹೋದರೇ ಬದುಕೋಕೆ ಆಗುತ್ತಾ? ಒಬ್ಬನೇ ಮಗಾ ಬೇರೆ, ಜೊತೆಯಲ್ಲಿ ಯಾರಾದರೂ ಇದ್ದಿದ್ದರೇ ನೋಡ್ಕೊತಾ ಇದ್ರು ಈಗ ಯಾರು ನೋಡ್ಕೊತಾರೆ ಅಲ್ವಾ? ನಾವೇನು ಇಲ್ಲೇ ಇರೋಕೆ ಆಗುತ್ತಾ. ಸ್ವಲ್ಪ ಆಫಿಸಿನವರ ಜೊತೆ ಮಾತಾಡೀ.

ನಮ್ಮಪ್ಪನನ್ನು ನೋಡಿ, ಅದ್ಯಾರೋ ಪ್ರೋಫೆಸರು, ಸಿ.ಎಂ. ಜೊತೆ ಇದಾರೆ ಅಂತೀದ್ರಲ್ಲಾ ಗೌಡ್ರೇ ಅಂದರು. ಹೂಂ ಕೆ.ವಿ..ರಾಜು ಅಂತಾ ಅವರ ಬಗ್ಗೆ ಆಗ್ಗಾಗ್ಗೆ ಹೇಳ್ತಾನೇ ಇದ್ದ, ಅವರಿಂದಾನೇ ಅಲ್ಲಿಗೆ ಸೇರ್ಕೊಂಡಿದ್ದು, ಅಲ್ಲಿಲ್ಲ ಅಂದಿದ್ರೇ, ಚೆನ್ನಾಗಿಯೇ ಇರ‍್ತಿದ್ದ ಎಂದರು. ಪಕ್ಕದ್ದಲ್ಲಿದ್ದ ವಿಜಿ ಮತ್ತು ನಂದ ನಗಲಾರದೇ ಇದ್ದರೂ ಅವರೆಲ್ಲಾ ಗಿತ್ತೋದೋರು, ಅವರೆಲ್ಲಾ ಎಲ್ಲಿ ಸಹಾಯ ಮಾಡ್ತಾರೆ, ಕೆಲಸ ಮಾಡಿಸಿಕೊಳ್ಳುವುದಕ್ಕೆ ಮಾತ್ರ ಎಂದರು. ಆದರೂ, ಅಲ್ಲಿ ಕೇಳಬಹುದಲ್ವಾ, ಅವರ ಆಫರ್ ಲೆಟ್ಟರ್ ಅಲ್ಲಿ ಇರುತ್ತೇ, ಎಲ್ಲಾ ಕಂಡಿಷನ್ಸ್, ಕವರೇಜ್ ಇರುತ್ತೆ, ಹೀಗೆ ಎಲ್ಲವನ್ನು ಚರ್ಚಿಸತೊಡಗಿದರು. ಅವನ ಆಫರ್ ಲೆಟ್ಟರ್ ಎಲ್ಲಿದೆ ಹುಡುಕಿ, ನೋಡೋಣ, ಅವನ ಲ್ಯಾಪ್ ಟಾಪ್ ನಲ್ಲಿ ಇರುತ್ತೇ ನೋಡಿದರೇ ಸಿಗಬಹುದು ಎಂದು ಹುಡುಕಿದರು. ಆಫರ್ ಲೆಟ್ಟರ್ ಅನ್ನೋ ಸುದ್ದಿನೇ ಇರಲಿಲ್ಲ. ಅಲ್ಲಿಂದ ಬಂದು ಡೆವಲಪ್ ಫೌಂಡೇಶನ್ ನಲ್ಲಿ ವಿಚಾರಿಸಿದರು. ಇಲ್ಲಿ ಚರ್ಚಿಸಿದ ಮೇಲೆ ತಿಳಿದು ಬಂದ ವಿಷಯವೇನೆಂದರೇ, ಹರೀಶನಿಗೆ ಆಫರ್ ಲೆಟ್ಟರ್ ಕೊಟ್ಟಿಲ್ಲ, ಅವನು ಕಾನೂನು ಪ್ರಕಾರ ನೋಡಿದರೇ ಇಲ್ಲಿ ಕೆಲಸ ಮಾಡುತ್ತಿದ್ದ ಎನ್ನುವುದಕ್ಕೆ ಯಾವುದೇ ಸಾಕ್ಷಿಯಿಲ್ಲ, ತಿಂಗಳು ತಿಂಗಳು ಸಂಬಳ ತೆಗೆದುಕೊಂಡಿಲ್ಲವೇ? ನೀವು ಸಂಬಳಕೊಟ್ಟಿದ್ದೀರಾ ಎಂದು ಕೇಳಿದರೇ, ಅದು ಗ್ಲೋಬಲ್ ಎಡ್ಜ್ ನಿಂದ ಕೊಟ್ಟಿರುವುದು, ಅಲ್ಲಿ ನಮೂದಿಸಿರುವುದು ಕನ್ಸಲ್ಟೆಂಟ್ ಕೆಲಸಕ್ಕಾಗಿ, ಅಂದರೇ ಅದು ಖಾಯಂ ಕೆಲಸವೂ ಅಲ್ಲಾ, ಅದಕ್ಕಾಗಿ ಅವನು ದಿನ ನಿತ್ಯ ಕೆಲಸಕ್ಕೆ ಬರುತ್ತಿದನೆಂಬುದಕ್ಕೆ ಸಾಕ್ಷಿಯೂ ಇಲ್ಲ.

ಇದೆಲ್ಲವನ್ನೂ ಕೇಳಿದ ನನ್ನ ಸ್ನೇಹಿತರು, ಹೇಳಿದರು, ಹೌದು ಮಗಾ, ಎಲ್ಲರೂ ಇರುವಾಗ ಮಾತ್ರ. ನಾವು ಚೆನ್ನಾಗಿರುವಾಗ ಎಲ್ಲರೂ ಇರ‍್ತಾರೆ. ನೋಡು, ಹರೀಶ ಹೇಳ್ತಾ ಇದ್ದ, ಕೆವಿರಾಜು ಹಾಗೆ, ಕುಮಾರ್ ಹೀಗೆ, ಭಾರತ ಅಧೋಗತಿಗೆ ಇಳಿದಿದೆ, ಡೆವಲಪ್ ಮೆಂಟ್ ಫೌಂಡೇಶನ್ ಇಂದ ಒಳ್ಳೇ ಸಂಶೋಧನೆ ಮಾಡಿ ಹಾಗೆ ಮಾಡ್ತಿನಿ ಹೀಗೆ ಮಾಡ್ತಿನಿ, ನಮ್ಮ ನೀತಿ ನಿಯಮ ಆದರ್ಶ ಇಟ್ಟು ಬದುಕಬೇಕು. ನಮ್ಮ ಜನಕ್ಕೆ ಏನು ಬೇಕು ಅನ್ನೋದನ್ನು ತಿಳ್ಕೊಂಡು ಅವರಿಗೆ ಅದನ್ನು ಕೊಡಬೇಕು. ಏನೇನೋ ಹೇಳ್ತಾ ಇದ್ದ, ಈಗ, ಅವರ ಅಪ್ಪ ಅಮ್ಮನಿಗೆ ನಾಲ್ಕು ಕಾಸು ಕೊಡೋಕೂ ತಯಾರಿಲ್ಲ ಇವರ ಆಫೀಸು. ದುಡಿಯೋ ಸಮಯದಲ್ಲಿ, ಬೆಳ್ಳಿಗ್ಗೆ ಒಂಬತ್ತರಿಂದ ರಾತ್ರಿ ಒಂಬ್ಬತ್ತರ ತನಕ ದುಡಿದಿದ್ದಾನೆ. ಈಗ ನೋಡಿದರೇ ಅವನು ದುಡಿದಿರೋದಕ್ಕೆ ತಿಂಗಳು ತಿಂಗಳು ಸಂಬಳ ಕೊಟ್ಟಿದ್ದೀವಿ ಬಿಡೀ. ಎನ್ನುತ್ತಾರೆ. ಡೆವಲಪ್ ಮೆಂಟ್ ಫೌಂಡೇಶನಿನಲ್ಲಿಯೇ ದುಡ್ಡಿಲ್ಲ ಇನ್ನೂ ನಾವು ಅವನಿಗೆ ಕೋಡೋದು ಎಲ್ಲಿಂದ ಎನ್ನುತ್ತಾರೆ. ನೋಡೋಣ ಸರ್ಕಾರದಿಂದ ಏನಾದರೂ ಕೋಡಿಸೋಕೆ ಆಗುತ್ತಾ ಎನ್ನುತ್ತಾರೆ. ಸರ್ಕಾರದಿಂದ ದುಡ್ಡೂ ಬರೋ ಅಷ್ಟೋತ್ತಿಗೆ ಇವರ ಸರ್ಕಾರ ಇರುತ್ತಾ ಮಗಾ?

ಕಡಿಮೆ ಸಂಬಳ ಸಿಕ್ಕಿದರೂ ಸರ್ಕಾರಿ ಕೆಲಸ ಉತ್ತಮ್ಮ ಅಂತಾ ಅವರಪ್ಪ ಹೇಳ್ತಾ ಇದ್ದಿದ್ದು ಸರಿನೇ ಆಯ್ತಲ್ವಾ? ಕೆಲಸ ಏನು ಮಾಡ್ತೀವಿ ಅನ್ನುವಷ್ಟೇ ಮುಖ್ಯ ಎಲ್ಲಿ ಮಾಡ್ತೀವಿ ಯಾರ ಜೊತೆ ಮಾಡ್ತೀವಿ ಅನ್ನೋದು ಕೂಡ ಕನೋ ಎಂದರು. ನೋಡು ಗಾರ್ಮೇಂಟ್ಸ್ ಅಲ್ಲಿ ಕೆಲಸ ಮಾಡುವವರನ್ನ ನೋಡು, ಬರೋದು ಐದು ಸಾವಿರ ಸಂಬಳ ಹೇಗೆ ಇರ‍್ತಾರೆ, ಅವರ ಹತ್ತಿರ ಹೇಗೆ ಹೋದರೂ ಐವತ್ತು ಸಾವಿರ ದುಡ್ಡಿರುತ್ತೇ ಕನೋ. ಅವರ ಸಂಬಳದ ಹತ್ತು ಪಟ್ಟು, ನಾವು ನಮ್ಮ ಸಂಬಳದ ಹತ್ತು ಪಟ್ಟು ಸಾಲ ಮಾಡಿರ್ತಿವಿ. ಅವರು ನೋಡು ಪ್ರತಿಯೊಬ್ಬರೂ ಯಾವ್ದೋ ಒಂದು ಇನ್ಸುರೆನ್ಸ್ ಮಾಡಿಸಿರ‍್ತಾರೆ. ಇವನು ಒಂದು ಇನ್ಸುರೆನ್ಸ್ ಮಾಡಿಸಿಲ್ವಲ್ಲೋ. ಫ್ಯಾಕ್ಟರಿಲೀ ಕೆಲಸ ಮಾಡುವಾಗ ಸತ್ತರೂ ಅವರು ಎರಡು ಲಕ್ಷ ಆದರೂ ಕೊಡ್ತಾರೆ ಆದರೇ ಈ ನನ್ಮಕ್ಳು ನಾಲ್ಕು ಕಾಸು ಬಿಚ್ಚಿಲಿಲ್ಲವಲ್ಲೋ? atleast ಅವನ ಶವ ನೋಡೋಕೆ ಬರಬಹುದಿತ್ತು ಅಲ್ವಾ? ಅದಕ್ಕೇ ಮಗಾ ಜನ ಜಾಸ್ತಿ ಓದಿದವರು, ದೇಶ ಉದ್ದಾರ ಮಾಡ್ತೀನಿ ಅಂತಾ ಹೋಗೋರು ಸಾಮಾನ್ಯ ಮನುಷ್ಯರ ಭಾವನೆಗೆ ಬೆಲೆ ಕೊಡಲ್ಲ, ಅವರಿಗೆ ದೊಡ್ಡೋರು ಮಾತ್ರ ಕಣ್ಣಿಗೆ ಕಾಣ್ತಾರೆ, ಸಣ್ಣವರು ಕಾಣಲ್ಲ. ಅವರು ಮಾತನಾಡುತ್ತಿರುವಾಗಲೇ ನನ್ನ ಕಣ್ಣಲ್ಲಿ ನೀರು ಬಂದಿದ್ದು. ನಾವು ನಮ್ಮ ಮನೆಯವರ ನೆಮ್ಮದಿಗೆ ಕನಸು ಕಾಣುವುದನ್ನು ಬಿಟ್ಟು ದೇಶದ ಬಗ್ಗೆ ಕಂಡರೇ ಅರ್ಥವಿರುವುದಿಲ್ಲ, ಆದ್ದರಿಂದ ನಾನು ಡೆವಲಪ್ ಮೆಂಟ್ ಫೌಂಡೇಶನ್ ಕೆಲಸ ಬಿಟ್ಟು, ನೆಮ್ಮದಿಯ ಬದುಕನ್ನು ಕಟ್ಟಿಕೊಡುವ ಸಂಸ್ಥೆಗೆ ಸೇರಲು ನಿರ್ಧರಿಸಿದ್ದೇನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕನಸು-ನನಸಿನ ಪಯಣದ ಹಾದಿಯಲಿ ಬದ್ಧತೆ, ಜವಬ್ದಾರಿ, ಸೋಲಿನ ಭೀತಿ!!!

  ೨೯.೦೮.೨೦೨೪ ನಾವು ನಮ್ಮ ಕನಸುಗಳನ್ನು, ಆಸೆಗಳನ್ನು, ಬಯಕೆಗಳನ್ನು ಬೇರೆಯವರೊಂದಿಗೆ ಏಕೆ ಹಂಚಿಕೊಳ್ಳಬೇಕು? ಇದರ ಕುರಿತು ಸ್ವಲ್ಪ ಚರ್ಚಿಸೋಣ. ಮುಕ್ತವಾಗಿ. ಪ್ರತಿಯೊ...