ಎಕನಾಮಿಕ್ ಹಿಸ್ಟರಿ ಪೇಪರ್ ಮುಗಿಸಬೇಕು, ಪರಿಸರಕ್ಕೆ ಸಂಬಂದಿಸಿದ ಪೇಪರ್
ಮುಗಿಸಬೇಕು, ಡಿಎಫ಼್ ಗೆ ಕೆಲವು ನಿಯಮಗಳನ್ನು ಬರೆದು ಮುಗಿಸಬೇಕು. ಅಲ್ಲಾಡದೇ
ಕೂತು ಮಾಡಿದರೂ ಮೂರು ವಾರಕ್ಕೆ ಆಗುವಷ್ಟು ಕೆಲಸವಿದೆ. ಇದರ ನಡುವೆ ಆಫೀಸಿನಲ್ಲಿ ಇಂಟರನೆಟ್ ಸರಿಯಾಗಿ
ಕೆಲಸ ಮಾಡುತ್ತಿಲ್ಲವಲ್ಲವೆಂದು ಯೋಚಿಸುವಾಗ ಇಂದು ಬೆಳ್ಳಗ್ಗೆ ತಲೆಯಲ್ಲಿ ಒಡಾಡಿದ ಹುಳುಗಳು ನೆನಪಿಗೆ
ಬಂದೆವು. ಬೆಳ್ಳಿಗ್ಗೆ ನಳಪಾಕ ಮಾಡುವ ಸಮಯದಲ್ಲಿ, ಆ ದೇವಿಯ ಅನುಗ್ರಹದಂತೆ
ಟೊಮೋಟೊ ಬಾತ್ ಮಾಡಿದೆ. ದೇವಿಯನ್ನು ನೆನಪಿಸಿಕೊಂಡು ಮಾಡಿದ್ದರಿಂದ ಅದ್ಬುತವಾಗಿಯೇ ಬಂತು. ಅದಾದ ಮೇಲೆ
ಎಣ್ಣೆ ಅಂಟಿದ್ದ ಪಾತ್ರೆಗಳನ್ನು ತೊಳೆಯುತ್ತಿದ್ದೆ. ವಿಮ್ ಕಂಪನಿಯವರ ಲಿಕ್ವಿಡ್ ಹಾಕಿ ಉಜ್ಜಿದ ತಕ್ಷಣ
ಎಣ್ಣೆಯಲ್ಲ ಮಾಯವಾಯಿತು. ನನಗೆ ಅನೇಕ ವಸ್ತುಗಳ ಹೆಸರು ಗೊತ್ತಿಲ್ಲ. ಅನೇಕ ಹೋಟೆಲುಗಳಿಗೆ ಹೋದಾಗಲೂ
ಅಷ್ಟೇ, ಏನು ಚೆನ್ನಾಗಿದೆ ನಿಮ್ಮಲ್ಲಿ ಎಂದು ಕೇಳುತ್ತೇನೆ. ಆ ಮೆನು ನೋಡಿ
ನಿರ್ಧರಿಸಿದರೇ ನಮ್ಮ ಗತಿ ಅಷ್ಟೇ. ನಾನು ವಿಜಿ ಒಮ್ಮೆ ಹೋಟೆಲಿನಲ್ಲಿ ಕುಳಿತಾಗ ಅವನು ಆರ್ಡರ್ ಮಾಡಿದ,
ಹರಿಯಾಲಿನೋ ಹಳಿಯಾಲೀನೋ ಕಬಾಬ್ ಅಂತೆ, ಬಂದ ಮೇಲೆ ನೋಡಿದರೇ
ವಡೆ, ಸ್ವಲ್ಪ ಪುದಿನ ಗಿದಿನ ಚೆನ್ನಾಗಿ ಹಾಕಿದ್ದರು. ಈ ವಿಷಯ ಬಂದದ್ದು
ಯಾಕೆಂದರೇ, ನನಗೆ ಆ ಪಾತ್ರೆ ತೊಳೆಯುವ ಲಿಕ್ವಿಡ್ ಹೆಸರು ಗೊತ್ತಿಲ್ಲ,
ಈಗೆಲ್ಲಾ ಮಾಲುಗಳಾಗಿರುವುದರಿಂದ ಕೇಳುವ ಅವಶ್ಯಕತೆ ಇಲ್ಲ. ಅಲ್ಲಿರುವುದನ್ನು ಎತ್ತು
ಕೊಂಡು ಬಂದು ಬಿಲ್ ಪಾವತಿ ಮಾಡಿಬರುವುದಷ್ಟೆ.
ನನಗೆ ಚೆನ್ನಾಗಿಯೇ ನೆನಪಿದೆ, ನಾವು ಪ್ರತಿ ತಿಂಗಳ ಮೊದಲನೇ ವಾರದಲ್ಲಿ ಇಡೀ ತಿಂಗಳಿಗೆ
ಬೇಕಾಗಿರುವ ಸಾಮಾನುಗಳನ್ನು ತರಬೇಕಿತ್ತು, ಅದರಲ್ಲೇನು ವಿಶೇಷ ಎನ್ನಬೇಡಿ.
ಅದನ್ನು ಬರೆಯುವುದಕ್ಕೆ ಕೂರುವುದು, ಪಟ್ಟಿ ತಯಾರಿಸುವುದು ಅದ್ಬುತಾವೆನಿಸುತ್ತದೆ.
ನಾನು ಹೈಸ್ಕೂಲಿಗೆ ಹೋದಮೇಲೆ ನಾನೇ ಬರೆಯುವುದು ತರುವುದು ಆಯ್ತು. ಬರೆಯುವ ಸಮಯದಲ್ಲಿ ನಾನು ಅಪ್ಪ
ಅಮ್ಮ ಮೂವರು ಸಂಪೂರ್ಣವಾಗಿ ನಮ್ಮನ್ನು ತೊಡಗಿಸಿಕೊಳ್ಳುತ್ತಿದ್ದೇವು. ಅಮ್ಮಾ ಅಡುಗೆ ಮನೆಯಲ್ಲಿ ಎಲ್ಲಾ
ಡಬ್ಬಿಗಳನ್ನು ನೋಡಿ ನೋಡಿ ಹೇಳುತ್ತಿದ್ದರೇ, ನಾನು ಬರೆಯುವುದು,
ಅಪ್ಪ ಎಷ್ಟು ಬೇಕೆಂದು ಹೇಳುವುದು ನಡೆಯುತ್ತಿತ್ತು. ಅಮ್ಮನ ಸರದಿ ಮುಗಿದ ಮೇಲೆ,
ಅಪ್ಪನ ಸರದಿ, ಬ್ಲೇಡ್, ಶೇವಿಂಗ್
ಕ್ರೀಂ ಹೀಗೆ, ಅದಾದ ನಂತರ ನನಗೆ ಬೇಕಿರುವ ಪೆನ್ನು ಪೆನ್ಸಿಲ್ ಹೀಗೆ ನಡೆಯುತ್ತಿತ್ತು.
ಒಂದು ತಿಂಗಳಿಗೆ ಆಗುವಷ್ಟು ಒಮ್ಮೆ ತಂದರೇ ಮುಂದಿನ ತಿಂಗಳು ಐದನೇಯ ತಾರೀಖಿನ ತನಕ ಆ ಅಂಗಡಿಗೆ ಕಾಲು
ಇಡುತ್ತಿರಲಿಲ್ಲ. ಅದಲ್ಲದೇ, ಅದೆಲ್ಲವೂ ಸಾಲದ ಲೆಕ್ಕದಲ್ಲಿ ತರುತ್ತಿದ್ದೆ.
ಒಂದು ಸಾಮಾನು ಹೆಚ್ಚು ಕಡಿಮೆಯಾಗಿದ್ದರೇ ನಾಳೆ ಸ್ಕೂಲಿಗೆ ಹೋದಾಗ ಕೇಳಿಕೊಂಡು ಬರಬೇಕಿತ್ತು. ಇದಾದ
ನಂತರ ಪ್ರತಿ ಗುರುವಾರ ಕೊಣನೂರಿನಲ್ಲಿ ಸಂತೆ ಇರುತ್ತಿತ್ತು. ತರಕಾರಿ ತರುವ ಜವಬ್ದಾರಿ ನನ್ನ ತಲೆಯ
ಮೇಲೆ ಬಿತ್ತು. ಇಪ್ಪತ್ತು ರೂಪಾಯಿ ಕೊಡುತ್ತಿದ್ದರು, ಅದರಲ್ಲಿ ಮನೆಗೆ ಬೇಕಿರುವ
ಎಲ್ಲಾ ಸಾಮಾನುಗಳನ್ನು ತೆಗೆದುಕೊಳ್ಳುತ್ತಿದ್ದೆ. ನನಗೆ ಅಚ್ಚರಿ ಏನೆಂದರೇ, ನಾನು ಈಗ ತರುವ ಅದೇ ತರಕಾರಿಯನ್ನೇ ಅಂದೂ ತರುತ್ತಿದ್ದೆ. ಹಾಗಲಕಾಯಿ, ತೊಂಡೆಕಾಯಿ, ಬದನೆಕಾಯಿ, ಆಲೂಗೆಡ್ಡೆ.
ಇದರ ನಡುವೆ ನನಗೆ ಇಷ್ಟವಾಗುವ ಕರೀಮೀನು, ಒಣಗಿದ ಮೀನು, ಉಪ್ಪು ಮೀನನ್ನು ತರುತ್ತಿದ್ದೆ, ಕಡೆಯದಾಗಿ ಕಡ್ಲೆಪುರಿ ಇರಲೇಬೇಕಿತ್ತು.
ಇಷ್ಟೇಲ್ಲವೂ ಇಪ್ಪತ್ತು ರೂಪಾಯಿಗೆ, ಅದರಲ್ಲಿಯೇ ಎರಡು ರೂಪಾಯಿ ಉಳಿಸಿ ಅರ್ಧ
ಮಸಾಲ ಪೂರಿ ತಿಂದಿರುವ ದಿನಗಳಿವೆ.
ಇಷ್ಟೊಂದು ಪೈಸಾ ಟೂ ಪೈಸಾ ತರಕಾರಿ ತರುತ್ತಿದ್ದ ನಾನು ಈಗ ಖರ್ಚು
ಮಾಡುವ ರೀತಿ ನೋಡಿ ನನ್ನ ಗೆಳತಿಯೇ ಕೇಳಿದ್ದಾಳೆ, ನಿನಗೆ ದುಡ್ಡಿನ ಬೆಲೆ ಗೊತ್ತಿಲ್ಲವೆಂದು. ಆಗ ನನ್ನ ವಾದ
ಸರಣಿಯೂ ಇರುತ್ತದೆ ಬಿಡಿ. ಅದೆಲ್ಲವೂ ಬಾಯಿಯಿಂದ ಅವಳನ್ನು ಗೆಲ್ಲಲೂ ಮಾತ್ರ, ಒಳ ಮನಸ್ಸು ಹೇಳುತ್ತಿರುತ್ತದೆ ಹೌದು ನಾನು ಮಾಡುತ್ತಿರುವುದು ತಪ್ಪೆಂದು, ಒಪ್ಪಿದರೇ ಅವಳು ಇನ್ನೂ ಮೇಲೆ ಹೋಗುತ್ತಾಳೆಂಬ ಆತಂಕ. ನಾನು ಹೇಳಹೊರಟದ್ದು ಬದಲಾದ ಜೀವನ
ಮತ್ತು ಜೀವನ ಪದ್ದತಿಯ ಬಗ್ಗೆ. ನಾನು ಕನಸಿನಲ್ಲಿಯೂ ಊಹಿಸಿರಲಿಲ್ಲ ನಾನು ಇಂಥಹ ಒಂದು ಜಗತ್ತಿದೆ ಬರುತ್ತೇನೆಂದು.
ಚಿಕ್ಕವನಿದ್ದಾಗ ಅಮ್ಮ ಪಾತ್ರೆ ತೊಳೆಯುವುದಕ್ಕೆ ಪರದಾಡುತ್ತಿದ್ದ ರೀತಿ ಅಯ್ಯೋ ಎನಿಸುತ್ತದೆ. ನಮ್ಮ
ಮನೆಗೆ ನಲ್ಲಿಯೂ ಇರದ ಸಮಯದಲ್ಲಿ, ಪಕ್ಕದ ಮನೆಯವರ ನಲ್ಲಿಯಲ್ಲಿ ನೀರು ಹಿಡಿಯಬೇಕಿತ್ತು,
ಆಗ ಊರಿಗೆ ಟ್ಯಾಂಕ್ ಇರಲಿಲ್ಲ ಆದ್ದರಿಂದ ಕರೆಂಟ್ ಬಂದ ಸಮಯದಲ್ಲಿ ನೀರು ಬರುತ್ತಿತ್ತು,
ರಾತ್ರಿ ಒಂದು ಗಂಟೆ ಎರಡು ಗಂಟೆ ಎನ್ನುವುದನ್ನು ಲೆಕ್ಕಿಸದೇ ಅಮ್ಮಾ ನೀರು ಹಿಡಿಯುತ್ತಿದ್ದರು.
ನನಗೆ ಖುಷಿ ಎನಿಸುವುದು ಆ ಸಮಯದಲ್ಲಿ ನಾನು ಮಲಗಿರುತ್ತಿದ್ದೆ, ಆದರೇ ನಮ್ಮಪ್ಪ
ನೀರು ಹಿಡಿಯುವುದಕ್ಕೆ ಸಹಾಯ ಮಾಡುತ್ತಿದ್ದರು. ನಮ್ಮಪ್ಪನ ಬಗ್ಗೆ ಬೇರೇನೇ ಹೇಳಿದರೂ ಅವರು ಮನೆಯ ಕೆಲಸದ
ವಿಚಾರದಲ್ಲಿ ಬಹಳ ಒಳ್ಳೆಯವರು. ಅಡುಗೆ ಮಾಡಲು ಸಹಾಯ ಮಾಡಿದ ದಿನಗಳು ಇವೆ, ಅಡುಗೆ ಮಾಡಿದ ದಿನಗಳು ಇವೆ.
ಪಾತ್ರೆ ತೊಳೆಯುವುದಕ್ಕೆ ನೀರಿಗೆ ಸಮಸ್ಯೆ ಇದ್ದಾಗ, ನಮ್ಮಮ್ಮ ಮನೆಯಿಂದ ಸ್ವಲ್ಪ
ದೂರದಲ್ಲಿ ಹರಿಯುತ್ತಿದ್ದ ಹಾರಂಗಿ ನಾಲೆಗೋ ಅಥವಾ ಒಮ್ಮೊಮ್ಮೆ ಮನೆಯಿಂದ ಒಂದು ಕೀಮಿ ದೂರದಲ್ಲಿ ಹರಿಯುತ್ತಿದ್ದ
ಕಟ್ಟೇಪುರ ಕಾಲುವೆಗೋ ಹೋಗುತ್ತಿದ್ದರು. ಇಡೀ ದಿನದ ಪಾತ್ರೆಯಲ್ಲವನ್ನೂ ತುಂಬಿಕೊಂಡು ಕಾಲುವೆಗೆ ಹೋಗಿ
ತೊಳೆದುಕೊಂಡು ಬರುವುದು ನಮ್ಮಮ್ಮ ಅನುಸರಿಸಿದ ರೀತಿ. ಇದರಲ್ಲಿ ನನಗೆ ಬಹಳ ಸಮಸ್ಯೆಯಾಗುತ್ತಿತ್ತು,
ಮುಸ್ಸಂಜೆಯ ಸಮಯದಲ್ಲಿಯೂ ಅಥವಾ ಮುಂಜಾನೆಯಲ್ಲಿಯೋ ಹೋಗುತ್ತಿದ್ದರಿಂದ ನಾನು ಅವರ
ಜೊತೆಗೆ ಹೋಗಬೇಕಿತ್ತು. ನಮ್ಮಪ್ಪ ಅಮ್ಮನಿಗೆ ಬೈಯ್ಯುತ್ತಿದ್ದರು, ಅದೇನು
ನಿಮಗೆ ಸಂಜೆ ಸಮಯದಲ್ಲಿ ಹೋಗುತ್ತಿರಾ? ಸ್ವಲ್ಪ ಮುಂಚಿತವಾಗಿ ಹೋಗಿ ಬಂದರೇನು?
ಮುಸ್ಸಂಜೆ ಹೊತ್ತು ಹೇಗಿರುತ್ತದೆಯೋ ಹೇಗೋ? ಎಂದು. ಹೆಣ್ಣು
ಮಕ್ಕಳು ಮುಸ್ಸಂಜೆಯ ಸಮಯದಲ್ಲಿ ಕಾಲುವೆ ಕಡೆಗೆ ಅಥವಾ ಕಟ್ಟೆಯ ಕಡೆಗೆ ಹೋಗುತ್ತಿರಲಿಲ್ಲ. ನಮ್ಮೂರಿನ
ಸುತ್ತಲೂ ಕಾವೇರಿ ಹರಿಯುತ್ತದೆ. ಅದನ್ನು ನಿಮಗೆ ಬಣ್ಣಿಸಬೇಕೆಂದರೇ, ನೀವು
ಒಂದು ಹುರುಳಿ ಬೀಜವನ್ನು ತೆಗೆದುಕೊಂಡರೇ, ಅದರ ಬಲಭಾಗದಿಂದ ಬಂದು ಎಡಭಾಗದಿಂದ
ಹೊರಕ್ಕೆ ಹೋಗುತ್ತಿತ್ತು, ಗೊಂದಲವಾಗಬೇಡಿ. ಸರಿಯಾಗಿ ಹೇಳುತ್ತೇನೆ. ನಮ್ಮೂರಿಗೆ
ಕಾವೇರಿ ನದಿ ಬಲಕ್ಕೆ ಹರಿದು ಬಂದು ಊರಿನ ಜಮೀನನ್ನು ಬಳಸಿ ಎಡಕ್ಕೆ ಹಾದು ಹೋಗುತ್ತಿತ್ತು. ಬಲಭಾಗದಲ್ಲಿ
ಹರಿಯುವ ಕಡೆ, ಊರಿನವರು ಹೋಗಿ ಬಟ್ಟೆ ಬರೆಗಳನ್ನು ತೊಳೆಯುತ್ತಿದ್ದರು,
ಅಲ್ಲಿಯೇ ಹೊಳೆ ಬಸಪ್ಪನ ಗುಡಿ ಇದ್ದಿದ್ದರಿಂದ, ದೇವರು
ನಮ್ಮನ್ನು ಕಾಪಾಡುತ್ತಾನೆಂಬುದು ನಂಬಿಕೆ. ಆದರೇ, ಎಡಭಾಗದಲ್ಲಿ ಅರ್ಧ ವಯಸ್ಸಿಗೆ
ಸತ್ತವರನ್ನು ಸುಡುವುದು, ಊಳುವುದು ವಾಡಿಕೆಯಾಗಿತ್ತು. ಆದ್ದರಿಂದ ಕಟ್ಟೆ
ಕಡೆಗೆ ಹೋಗುವುದು, ಆ ಹಾದಿಯಲ್ಲಿ ನಡೆದಾಡುವುದು ಒಳ್ಳೆಯದಲ್ಲವೆಂಬ ನಂಬಿಕೆ
ಬಲವಾಗಿತ್ತು. ನಮ್ಮಮ್ಮ ಮುಸ್ಸಂಜೆಯಲ್ಲಿ ಪಾತ್ರೆ ತೊಳೆಯಲು ಹೋಗುವುದು, ಮುಂಜಾನೆಯ ಸಮಯಕ್ಕೆ ಹೋಗುವುದು ನಮ್ಮಪ್ಪನಿಗೆ ಹಿಡಿಸುತ್ತಿರಲಿಲ್ಲ. ಮೊದಲಿನಿಂದಲೂ ನಮ್ಮಮ್ಮನ
ಆರೋಗ್ಯ ಸರಿ ಇಲ್ಲದಿದ್ದರಿಂದಲೂ ಸ್ವಲ್ಪ ಜಾಸ್ತಿ ಕೆಲಸ ಮಾಡಿದ ದಿನಗಳು ಸುಸ್ತಾಗಿ ಮಲಗುತಿದ್ದರು.
ಆ ದಿನಗಳಲ್ಲಿ ನಮ್ಮಪ್ಪನ ಹರಿಕಥೆ ಶುರುವಾಗುತ್ತಿತ್ತು, ಬೇಡವೆಂದರೂ ಕೇಳುವುದಿಲ್ಲ,
ಮುಸ್ಸಂಜೆ, ಮುಂಜಾನೆ ಹೊಳೆಗೆ ಹೋಗುವುದು ಒಳ್ಳೆಯದಲ್ಲ
ಅದಕ್ಕೆ ಹೀಗೆ ಆಗುವುದು, ಅದು ಇದು ಎಂದು ಬೈಯ್ಯುತ್ತಿದ್ದರು. ಬೈಗುಳಕ್ಕೆ
ಪ್ರತಿಯಾಗಿ ನಮ್ಮಮ್ಮ ಹೋಗುವುದನ್ನೇನು ನಿಲ್ಲಿಸಲಿಲ್ಲ, ಆದರೇ,
ನನ್ನನ್ನು ತಮ್ಮೊಂದಿಗೆ ಕರೆದೊಯ್ಯುವುದನ್ನು ಶುರುಮಾಡಿಕೊಂಡರು.
ನಾನು ಮನೆಗೆ ಸಾಮಾನು ತರುವಾಗ, ಸಬೀನಾ ಪೌಡರ್ ಮತ್ತು ವಿಮ್
ಬಾರನ್ನು ತರುತ್ತಿದ್ದೆ. ನನಗಿಂದಿಗೂ ತಿಳಿಯದ ವಿಷಯವೆಂದರೇ, ನಮ್ಮಮ್ಮ ಅವುಗಳನ್ನು
ಮಿತವಾಗಿ ಬಳಸುತ್ತಿದ್ದರು. ಅದರ ಜೊತೆಗೆ, ಸಾಮಾನ್ಯವಾಗಿ ಬೂದಿ ಮತ್ತು ಹೊಳೆ
ದಂಡೆಯ ಮಣ್ಣನ್ನು ಬಳಸುತ್ತಿದ್ದರು. ನಾನು ನಮ್ಮಮ್ಮನಿಗೆ ಬೈಯ್ಯುತ್ತಿದ್ದೆ, ಅಲ್ಲಾ, ಚೆನ್ನಾಗಿರುವ ಸಬೀನಾ ಇರುವಾಗ, ವಿಮ್ ಬಾರ್ ಇರುವಾಗ ನೀವು ಈ ಬೂದಿಯಲ್ಲಿ, ಆ ಮಣ್ಣಿನಲ್ಲಿ ಪಾತ್ರೆಯನ್ನು
ಉಜ್ಜುತ್ತೀರಲ್ಲಾ? ಎಂದರೇ, ಅಮ್ಮ ಸಾವಧಾನದಿಂದ
ಹೇಳುತ್ತಿದ್ದರು, ವಿಮ್ ಬಾರಿಗೆ ಏನು ಕಡಿಮೆ ದುಡ್ಡಾ? ಏಳು ರೂಪಾಯಿ. ಮಣ್ಣಿಗೆ ಬೂದಿಗೆ ದುಡ್ಡು ಕೊಡಬೇಕಾ? ಸಬೀನಾ ಪುಡಿ
ಜೊತೆಗೆ ಬೂದಿ ಹಾಕಿ ತೊಳೆದರೇ ಪಾತ್ರೆ ಫಳ ಫಳವೆನ್ನುತ್ತದೆ, ಎನ್ನುತ್ತಿದ್ದರು.
ಇಂದಿಗೂ ಅಷ್ಟೇ ನಮ್ಮ ಮನೆಯಲ್ಲಿ ಪಾತ್ರೆ ತೊಳೆಯುವ ಜಾಗದಲ್ಲಿ, ಬೂದಿ,
ಮಣ್ಣು, ವಿಮ್ ಬಾರ್, ಜೊತೆಗೆ
ತೆಂಗಿನ ನಾರು ಇರುತ್ತದೆ. ನಾವು ಪರಿಸರ ಸ್ನೇಹಿ, ಮರುಪಯೋಗದ ಬಗ್ಗೆ ಉದ್ದುದ್ದ
ಭಾಷಣ ಮಾಡುತ್ತೇವೆ, ಆದರೇ ನಿಜಕ್ಕೂ ಅದನ್ನು ಪಾಲಿಸುತ್ತಿರುವುದು,
ಹಳ್ಳಿಯವರು ಮಾತ್ರ. ನನ್ನೂರಿನಲ್ಲಿ ಪಾತ್ರೆ ತೊಳೆಯುವುದಕ್ಕೆ ದಾರಿಯಲ್ಲಿ ಬಿದ್ದಿರುತ್ತಿದ್ದ
ಭತ್ತದ ಹುಲ್ಲನ್ನು ಬಳಸುತ್ತಿದ್ದರು, ತೆಂಗಿನ ನಾರು, ತೆಂಗಿನ ಕಾಯಿಯ ಜುಟ್ಟನ್ನು ಬಳಸುತ್ತಿದ್ದರು. ಇಂದಿಗೂ ಅಷ್ಟೇ, ಹಬ್ಬದ ದಿನ ಹೆಚ್ಚು ಜನರಿಗೆ ಅಡುಗೆ ಮಾಡಬೇಕಾದ್ದ ಸಂದರ್ಭದಲ್ಲಿ ಪಾತ್ರೆಗಳಿಗೆ ಹೊರಗಿನಿಂದ
ಮಣ್ಣಿನಲ್ಲಿ ಸಾರಿಸುತ್ತಾರೆ, ಹಾಗೆ ಮಾಡಿದರೆ ಮಸಿ/ಕಪ್ಪಾಗುವುದಿಲ್ಲವೆಂದು.
ಮನೆಯಲ್ಲಿ ಇಡ್ಲಿ ಮಾಡುವಾಗ ಇಡ್ಲಿ ಪಾತ್ರೆಗೆ ಅಮ್ಮಾ ನೀರಿಗೆ ಬೂದಿಯನ್ನಿ ಮಿಕ್ಸ್ ಮಾಡಿ ವರೆಸುತ್ತಿದ್ದರು.
ನಾನು ಇದನ್ನೆಲ್ಲಾ ಯಾಕೆ, ಹೇಳಿದನೆಂದರೇ, ನಾನು
ಮುಂಜಾನೆ ಪಾತ್ರೆ ತೊಳೆಯುವಾಗ ನನಗೆ ಕಿಂಚಿಷ್ಟೂ ಶ್ರಮವೆನಿಸಲಿಲ್ಲ. ನಾಲ್ಕು ಹನಿ ವಿಮ್ ಲಿಕ್ವಿಡ್
ನಿಂದ, ಉಜ್ಜಿದೆ, ನಲ್ಲಿಯಿಂದ ನೀರಿಗೆ ಹಿಡಿದೆ,
ಮುಕ್ತಾಯವಾಯಿತು. ಐದು ನಿಮಿಷದಲ್ಲಿ ಹತ್ತು ಹನ್ನೆರಡು ಪಾತ್ರೆಗಳನ್ನು ತೊಳೆದೆ.
ಪಾತ್ರೆಗಳಲ್ಲಿ ಮಸಿ ಇರಲಿಲ್ಲ, ಹೆಚ್ಚು ಕೊಳಕು ಇರಲಿಲ್ಲ. ಆ ದಿನಗಳಲ್ಲಿ
ಪಾತ್ರೆಗಳೆಲ್ಲಾ ಕಪ್ಪಾಗಿರುತ್ತಿದ್ದವು, ಸೌದೆಯಲ್ಲಿ ಅಡುಗೆ ಮಾಡುತ್ತಿದ್ದರಿಂದ,
ಅಡುಗೆ ಮಾಡುವಾಗ ಮಾಡಿದ ಮೇಲೆ ಎಲ್ಲ ಸಮಯದಲ್ಲಿಯೂ ಕಷ್ಟವೆನಿಸುತ್ತಿತ್ತು. ಈಗ ಎಲ್ಲವೂ
ಸರಾಗವಾಗಿದೆ. ಅಂಗಡಿಗೆ ಹೋಗಿ ಅಲ್ಲಿಂದ ಫೋನ್ ಮಾಡಿ, ಎಸ್ ಎಂಎಸ್ ಮಾಡಿ
ಕೇಳಬಹುದು, ಬೇಕಿರುವುದನ್ನು ಆಯ್ಕೆ ಮಾಡಿಕೊಂಡು ತೆಗೆದುಕೊಂಡು ಬರಬಹುದು.
ದುಡ್ಡಿಗೆ ಮಾತ್ರ ಬೆಲೆಯಿಲ್ಲ. ಇಪ್ಪತ್ತು ರೂಪಾಯಿಗೆ ಅಷ್ಟೆಲ್ಲಾ ತರುತ್ತಿದ್ದ ನಾನು, ಈಗ ಅರ್ಧ ಲೀಟರ್ ಹಾಲು, ಒಂದು ಸಿಗರೇಟು ಮತ್ತೊಂದು ಮಿಂಟ್ ತೆಗೆದುಕೊಂಡು
ಬರುತ್ತೇನೆ. ಇಪ್ಪತ್ತು ರೂಪಾಯಿಗೆ ಬರುವುದು ಅಷ್ಟು ಮಾತ್ರ. ಪಟ್ಟಣದ ಅನೇಕರಿಗೆ ನಾನು ಮೇಲೆ ಹೇಳಿದ
ಮಾತುಗಳು ಒಪ್ಪುವುದಿಲ್ಲ, ಹಿಡಿಸುವುದು ಇಲ್ಲ.
ಇಷ್ಟೆಲ್ಲಾ ಬರೆದ ಮೇಲೆ ನನಗೆ ಅನಿಸಿದ್ದು, ಈ ಬರವಣಿಗೆಯನ್ನು ಬರೆದಿದ್ದು
ವ್ಯರ್ಥ ನೀವು ಓದಿದ್ದು ವ್ಯರ್ಥ, ತಳವಿಲ್ಲ ಬುಡವಿಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ