ಕೆಲಸದ ಒತ್ತಡದ ನಡುವೆಯೂ, ಮಾನಸಿಕ ನೋವಿನ ನಡುವೆಯೂ ಇದೊಂದು ಬರವಣಿಗೆಯನ್ನು ಬರೆದು ಮುಗಿಸಲು ಪಣ ತೊಟ್ಟಿದ್ದೇನೆ. ನಾನು ಬರೆಯುತ್ತಿರುವುದು ನನ್ನ ಓದುಗ ದೇವರನ್ನು ಮೆಚ್ಚಿಸಲೂ ಅಲ್ಲಾ ಓದುಗರನ್ನು ಹಿಡಿದು ಓದಿಸಲೂ ಅಲ್ಲಾ, ಕೆಲವೊಂದು ನೋವುಗಳು ಭಾವನೆಗಳು ಆರಿ ಹೋಗುವ ಮುನ್ನಾ, ಬರೆದಿಡಬೇಕು. ಮಲಗಿದ್ದಾಗ ಕನಸು ಬಂದಾಗಲೇ ಅದನ್ನು ಬರೆದಿಡಬೇಕು, ನಿದ್ದೆ ಬಂತು ಎಂದು ಮುಖ ತಿರುಗಿಸಿ ಮಲಗಿದರೇ, ಕನಸಿನ ಅರ್ಥ, ಸೌಂದರ್ಯ ನಿಮಗೆ ಸಿಗುವುದಿಲ್ಲ. ನಾನು ಮಧ್ಯಾಹ್ನ ನಮ್ಮ ಅಜ್ಜಿಗೆಂದು ಮೊಬೈಲ್ ತರುವುದಕ್ಕಿ ಹೋಗಿದ್ದೆ. ನಮ್ಮ ಅಜ್ಜಿ ಬಹಳ ದಿನಗಳ ಹಿಂದೆಯೇ ನನಗೊಂದು ಮೊಬೈಲ್ ಕೊಡಿಸು ಎಂದು ಕೇಳಿದ್ದರು. ನನ್ನ ಎತ್ತಿ ಆಡಿಸಿ ಪೋಷಿಸಿದ ನನ್ನಜ್ಜಿ ಮೊಬೈಲ್ ಕೇಳಿದ ಕೂಡಲೇ ತೆಗೆದುಕೊಡುವ ಮನಸ್ಸು ಮಾಡಲಿಲ್ಲ. ತೆಗೆಯುವೇ ತೆಗೆಯುವೇ ಎಂದು ಹತ್ತು ತಿಂಗಳುಗಳನ್ನೇ ಕಳೆದೆ. ಇಂದು ತೆಗೆಯಲೇ ಬೇಕೆಂದು ಅಂಗಡಿಗೆ ಹೋದೆ. ಹೋದವನು ಯಥಾ ಪ್ರಕಾರ ನನ್ನ ಕುಬ್ಜ ಮನಸ್ಸಿಗೆ ಕೆಲಸ ಕೊಟ್ಟೆ. ಅಂಗಡಿಗೆ ಹೋಗುವುದಕ್ಕೇ ಮುಂಚೆಯೇ ಇಂಟರ್ನೆಟ್ ನಲ್ಲಿ ಮೊಬೈಲ್ ಮಾಡೆಲ್ ನೋಡಿದೆ. ನಾನು ಮೊಬೈಲ್ ಕೊಳ್ಳುವ ಮುನ್ನಾ ಕನಿಷ್ಠ ಹತ್ತು ಜನರಿಗೆ ಫೋನ್ ಮಾಡಿದ್ದೆ. ಮೂರ್ನಾಲ್ಕು ದಿನ ಪರದಾಡಿ, ನಂತರ ನಿಧಾರ ಮಾಡಿದ್ದೆ. ಆದರೇ ಅಜ್ಜಿಗೆ ಮೊಬೈಲ್ ತೆಗೆಯುವಾಗ ಇಂಥಹ ಯಾವೊಂದು ಚರ್ಚೆ ನಡೆಯಲಿಲ್ಲ.
ಯಾವುದೋ ಒಂದು ಬೇಸಿಕ್ ಮಾಡೆಲ್ ತೆಗೆದರೇ ಆಯಿತೆಂದು ನಿರ್ಧರಿಸಿದೆ. ಅಂಗಡಿಗೆ ಹೋದವನೇ, ನೋಕಿಯಾದಲ್ಲಿ ಬೆಸಿಕ್ ಮಾಡೆಲ್ ಕೊಡಿ ಎಂದೆ. ಸರ್, ಬೇಸಿಕ್ ಮಾಡೆಲ್ ಅಂದ್ರೇ ಎಂಪಿತ್ರೀ, ರೇಡಿಯೋ ಬೇಕಾ? ಎಂದಾಗ ಇಲ್ಲ ಇಲ್ಲ ಪ್ಯೂರ್ ಬೇಸಿಕ್ ಮಾಡೆಲ್ ಎಂದು ನಗುನಗುತಾ ಹೇಳಿದೆ. ಒಂದು ಮೊಬೈಲ್ ಕೊಳ್ಳುವುದಕ್ಕೆ ಎರಡು ನಿಮಿಷ ಸಾಕಾಯ್ತು. ವಿಷಯ ಎರಡು ರೀತಿಯದ್ದಿದೆ. ಮೊದಲನೆಯದು ನಾನು ಇಲ್ಲಿಯ ತನಕ ಮೊಬೈಲ್ ಗಳ ಬಗ್ಗೆ ಮತ್ತು ಮೊಬೈಲ್ ನನ್ನ ಜೀವನದಲ್ಲಿ ಆಟವಾಡಿರುವುದರ ಬಗ್ಗೆ ಹೇಳುತ್ತೇನೆ. ಎರಡನೇಯದಾಗಿ ನಾನು ನಮ್ಮ ಅಜ್ಜಿಯ ವಿಷಯದಲ್ಲಿ ನಡೆದುಕೊಂಡ ರೀತಿಯದನ್ನು ವಿವರಿಸುತ್ತೇನೆ. ನಾವು ನಮ್ಮ ತಂದೆ ತಾಯಿಯ ಅಥವಾ ಹಿರಿಯರ ವಿಷಯದಲ್ಲಿ ನಡೆದುಕೊಳ್ಳುವ ರೀತಿ ನಿಜಕ್ಕೂ ಬೇಸರವನ್ನು ತರಿಸುತ್ತದೆ. ನಿನ್ನೆ ನಾನು ಮೊಬೈಲ್ ಕೊಳ್ಳುವ ಸಮಯದಲ್ಲಿ ಕಡಿಮೆ ದುಡ್ಡಿನ ಮೊಬೈಲ್ ಅನ್ನೇ ಹುಡುಕಿದೆ ಎನಿಸುತ್ತದೆ. ಅದು ಬಳಸಲು ಸುಲಭವೆನಿಸಿದರೂ, ಜೊತೆಯಲ್ಲಿಯೇ, ಅಜ್ಜಿಗೆ ಅಲ್ವಾ? ಮಾತನಾಡುವುದಕ್ಕೇ ಮಾತ್ರ ಇರುವುದು, ಅವರಿಗೆ ರೇಡಿಯೋ, ಕ್ಯಾಮೆರಾ, ಎಂಪಿತ್ರಿ ಏನೂ ಬೇಡವೆಂದು ನಿರ್ಧರಿಸಿದೆ. ಅದೆಲ್ಲವೂ ಇರುವ ಮೊಬೈಲ್ ಕೊಡಿಸಿದರೆ ತಪ್ಪೇನು? ಉಪಯೋಗಿಸದಿದ್ದರೇ ಇರಲಿ, ಒಳ್ಳೆಯ ಮೊಬೈಲ್ ಹಿಡಿದುಕೊಂಡು ಹೋದರೆ ತಪ್ಪಿಲ್ಲವಲ್ಲ. ನಾನು ಬ್ಲಾಕ್ ಆಂಡ್ ವೈಟ್ ಅಥವಾ ಕಡಿಮೆ ಮಟ್ಟದ ಮೊಬೈಲ್ ಹಿಡಿದುಕೊಂಡು ಹೋಗಲು ಮನಸ್ಸು ಒಪ್ಪುವುದಿಲ್ಲ. ಆದರೇ, ಅಪ್ಪ ಅಮ್ಮ ಅಜ್ಜಿಯ ವಿಷಯದಲ್ಲಿ ಮಾತ್ರ ಅವರಿಗೆ ಇದು ಸಾಕು, ಅದು ಸಾಕು ಎನ್ನುತ್ತೇವೆ. ನಾನು ಒಂದು ಜೊತೆ ಚಪ್ಪಲಿಗೆ ಮೂರು ಸಾವಿರ ಕೊಡುವುದಕ್ಕೆ ಹಿಂದೂ ಮುಂದೂ ನೋಡುವುದಿಲ್ಲ ಆದರೇ ಒಂದು ಮೊಬೈಲ್ ಗೆ ಹೀಗೆ ನೋಡಬೇಕಿತ್ತಾ? ಉಪಯೋಗಕ್ಕೇ ಬಾರದವರ ಜೊತೆ ಗಂಟೆಗಟ್ಟಲೇ ಹರಟೆ ಹೊಡೆಯುದಕ್ಕೆ ಹಣ ವ್ಯಯ ಮಾಡುತ್ತೇವೆ, ಮೂರು ಕಾಸಿಗೂ ಉಪಯೋಗಕ್ಕೆ ಬಾರದವರಿಗೆ ಉಣ್ಣಿಸಿ, ತಿನ್ನಿಸಿ, ಕುಡಿಸಿ ಕಳುಹಿಸುತ್ತೇವೆ. ನಮ್ಮನ್ನು ಹೆತ್ತು ಹೊತ್ತು ನಮಗೆ ಎಲ್ಲವನ್ನೂ ಕೊಟ್ಟವರ ಮೇಲೇಕೆ ಈ ಬಗೆಯ ಅಸಡ್ಡೆ ಎನಿಸಿತು.
ಮೂವತ್ತು ವರ್ಷ ನಮ್ಮನ್ನು ನೋಡಿಕೊಂಡವರನ್ನು ನಾವೇಕೆ ಹೀಗೆ ವಯಸ್ಸಾಯಿತೆನ್ನುವ ಕಾರಣಕ್ಕೆ ಕಡೆಗಣಿಸುತ್ತೇವೆ. ಮೂವತ್ತು ವರ್ಷ ಕಣ್ಣಿಗೆ ಎಣ್ಣೆ ಬಿಟ್ಟು ಕಾಯ್ದ ಅವರಿಗೆ ಮೂರು ವರ್ಷ ಸೇವೆ ಮಾಡುವುದಿಲ್ಲ. ಎಲ್ಲವನ್ನೂ ಹಣದಿಂದ ತೂಗುತ್ತೇವೆ. ಎಲ್ಲರೂ ಹೀಗೆ ಮಾಡುವುದಿಲ್ಲ ಆದರೇ ನಾನು ಮಾಡಿದ್ದೇನೆ. ಇದರ ಬಗ್ಗೆ ನನಗೆ ನನ್ನ ಬಗ್ಗೆ ತೀವ್ರ ಅಸಮಾಧಾನವಿದೆ. ಬೈಕ್ ಹತ್ತಿ ಊರೂರು ಸುತ್ತುವುದಕ್ಕೆ ಸಾವಿರಾರು ಕಳೆದಿದ್ದೇನೆ, ನಾಯಿ ನರಿಗಳಿಗೆ ಹಣ ವ್ಯಯ ಮಾಡಿದ್ದೇನೆ. ನಂಬಿಸಿ ಕೈಕೊಟ್ಟ ಅನೇಕರಿಗೆ ಸಾಲತೆತ್ತಿ ಕೈ ಸುಟ್ಟುಕೊಂಡಿದ್ದೇನೆ. ಐದು ರೂಪಾಯಿ ಟೀ ಕುಡಿಸುವುದಕ್ಕೆ ಲೆಕ್ಕ ಹಾಕುವವರಿಗೆ ಸಾವಿರ ಸಾವಿರ ಚೆಲ್ಲಿದ್ದೇನೆ. ಮೋಸಗಾರರನ್ನು ಸಾಕುವ ಮನಸ್ಸು ನಮ್ಮನ್ನು ಸಾಕಿದವರನ್ನು ಯಾಕೆ ಇಷ್ಟೊಂದು ಕೆಟ್ಟದ್ದಾಗಿ ನಡೆಸಿಕೊಡುತ್ತದೆ. ದಿನಕ್ಕೆ ಒಂದು ಸಿಗರೇಟು ಕಡಿಮೆ ಮಾಡಿದರೂ, 300 ರೂಪಾಯಿ ಉಳಿಯುತ್ತದೆ, ಅದನ್ನು ಮೂರು ಜನರ ಮೊಬೈಲ್ ಗೆ ರೀಚಾರ್ಜ್ ಮಾಡಿಸಿದರೇ ತಿಂಗಳಿಡೀ ಮಾತನಾಡುತ್ತಾರೆ, ಸಂತೋಷದಿಂದಿರುತ್ತಾರೆ. ನಾವು ಬೇಕಿಲ್ಲದ ಮೂರನೇ ದರ್ಜೆ ಸಿನೆಮಾ ನೋಡುವ ದುಡ್ಡನ್ನು ನಮ್ಮ ಪೋಷಕರೆಡೆಗೆ ಹಾಕಿದರೂ ಸಾಕು ಆನಂದ ಸಾಗರದಲ್ಲಿ ಮಿಯ್ಯುತ್ತಾರೆ. ನಾನು ಮನೆಗೆಂದು ಏನನ್ನು ತೆಗೆದುಕೊಂಡು ಹೋದಾಗಲೂ ನಮ್ಮಪ್ಪ ಅಮ್ಮ ಹೇಳಿರುವುದು ಒಂದೇ ಮಾತು, ಅಯ್ಯೋ ಇದನ್ನೆಲ್ಲಾ ಯಾಕೆ ತರುತ್ತೀಯಾ? ಸುಮ್ಮನೆ ದುಂದು ವೆಚ್ಚ ಮಾಡಬೇಡ, ನೀನು ಉಳಿಸಿಕೋ ಎಂದು. ಒಂದು ಸೀರೆ ಕೊಂಡೊಯ್ದರೂ ಅಷ್ಟೇ, ನನಗೆ ಯಾಕೆ ಮನೆಯಲ್ಲೇ ಇಷ್ಟೊಂಡು ಸೀರೆ ಇಲ್ವಾ? ಎನ್ನುತ್ತಾರೆ. ಮರುಕ್ಷಣವೇ ಅರ್ಧ ಊರಿಗೆ ತೋರಿಸಿರುತ್ತಾರೆ ನಮ್ಮ ಹರಿ ತಂದಿದ್ದು, ಎಂದು.
ನನ್ನ ಅನೇಕಾ ಮಹಾನುಭಾವರಿದ್ದಾರೆ, ಜೊತೆಯಲ್ಲಿಯೇ ಕುಡಿದಿರುತ್ತಾರೆ, ಆಮೇಲೆ ಹೇಳುತ್ತಾರೆ, ಅಯ್ಯೋ ಆ ನನ್ಮಗನ, ಅವನು ನಾಲ್ಕು ಕಾಸು ಬಿಚ್ಚಲ್ಲ, ಕಂಜ್ಯೂಸ್, ಕೇಳಿದರೇ ಕುಡಿಸಬೇಕಾಗುತ್ತೆ ಅಂತಾ ಕುಡಿಯೋದನ್ನೇ ಬಿಟ್ಟಿದ್ದೀನಿ ಅಂತಾ ನಾಟಕ ಆಡ್ತಾನೆ ಎಂದವರು ಇದ್ದಾರೆ. ನಿಯತ್ತಿಲ್ಲದ ನಾಯಿಗಳನ್ನು ಸಾಕುವುದಕ್ಕಿಂತ ಕಾಮಧೇನುವಿನಂಥಹ ಅಪ್ಪ ಅಮ್ಮನ ಬಗ್ಗೆ ಒಲವು ತೋರಿಸುವುದು ಉತ್ತಮವಲ್ಲವೇ? ನಾನು ಇಲ್ಲಿ ಯಾರನ್ನೂ ಬೆರಳು ಮಾಡಿ ತೋರಿಸುತ್ತಿಲ್ಲಾ. ಓದಿದವರಾರು ಇದು ನನಗೆ ಇವನು ಹೇಳುತ್ತಿದ್ದಾನೆಂದು ಭಾವಿಸುವುದು ಬೇಡ. ನನ್ನ ಅನೇಕ ಸ್ನೇಹಿತರು, ಗೆಳತಿಯರು ನನಗೆ ಪ್ರಾಣಕಿಂತ ಮಿಗಿಲು. ಆದರೇ, ಕೆಲವರು ದ್ರೋಹಿಗಳು ಅಷ್ಟೇ. ಜಗತ್ತನ್ನು ದುಡ್ಡಿನಿಂದಲೇ ಅಳೆದವರಿದ್ದಾರೆ ಅಂಥವರ ಬಗ್ಗೆ ಹೇಳಿದ್ದೇನು. ಅವರಿಂದ ದೂರವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇನೆ ಕೂಡ. ಆದರೂ, ಬೆನ್ನತ್ತಿ ಬರುವ ಭೂತದಂತೆ ಒಮ್ಮೊಮ್ಮೆ ಕಾಡುತ್ತಾರೆ. ಒಮ್ಮೆ ರುಚಿ ನೋಡಿದ ಬೆಕ್ಕು ಪದೇ ಪದೇ ಬರುವ ಹಾಗೆ. ಜೀವನದಲ್ಲಿ ಹಣ ಮುಖ್ಯವಾಗುವುದಿಲ್ಲ, ಕೇವಲ ಅಪ್ಪ ಅಮ್ಮ, ಮತ್ತೂ ಸತ್ಯವಾದ ನಾಲ್ಕು ಜನ ಸ್ನೇಹಿತರು. ನಿಮ್ಮ ಇರುವಿಕೆಗಾಗಿ ಬರುವವರು ನಿಮ್ಮಲ್ಲಿರುವುದನ್ನು ದೋಚುವ ತನಕ ಮಾತ್ರ. ಪ್ರೀತಿಗೆ ಬರುವವರ ನಿಮ್ಮಲ್ಲಿ ಏನೂ ಇಲ್ಲದಿದ್ದರೂ ಬರುತ್ತಾರೆ, ಜೊತೆಗಿರುತ್ತಾರೆ. ಹಾವಿಗೆ ವಿಷ ಎರೆಯುವ ಬುದ್ದಿಯನ್ನು ಬಿಡಬೇಕು ನಾವು. ಯಾವುದೋ ಮೋಹಕ್ಕೆ ಬಲಿಯಾಗಿ, ಬೇಡದ ನಾಯಿಯನ್ನು ಸಾಕಿ ಸಾಲ ಮಾಡುವುದಕ್ಕಿಂತ ಪ್ರೀತಿಯ ಅರಮನೆ ಕಟ್ಟುವುದು ಲೇಸು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ