ಕಳೆದ ಆರು ತಿಂಗಳಿಂದ ಸುಮಾರು ಎಪ್ಪತ್ತಕ್ಕೂ ಹೆಚ್ಚು ಶಾಲೆಗಳಿಗೆ ಭೇಟಿ ನೀಡಿದ್ದೇನೆ. ಸರ್ಕಾರಿ ಶಾಲೆಗಳ ಮಕ್ಕಳ ಮತ್ತು ಶಿಕ್ಷಕರ ಬಗ್ಗೆ ಜನರಲ್ಲಿ ಸ್ವಲ್ಪ ಮಟ್ಟಿಗೆ ಕೆಟ್ಟ ಅಭಿಪ್ರಾಯವಿದೆ. ನಾನು ಭೇಟಿ ನೀಡುತ್ತಾ ಹೋದಂತೆ ಅದ್ಭತವಾದ ಪ್ರಪಂಚಕ್ಕೆ ದಾರಿಯಾಯಿತು. ಪರ್ಯಟಣೆ ನನಗೆ ಹಳೆಯದಾದರೂ ಶಾಲೆಗಳಿಗೆ ಭೇಟಿ ಅದರಲ್ಲಿಯೂ ಕಾರ್ಯಕ್ರಮ ನೀಡುವುದಕ್ಕಾಗಿ ಹೋಗುವುದು, ಅದರ ಅನುಭವವನ್ನು ಬಣ್ಣಿಸುವುದಕ್ಕೆ ಸ್ವಲ್ಪ ಕಷ್ಟವೇ ಸರಿ. ವಿಷಯಾಂತರವಾಗುವುದು ಬೇಡ, ಇಲ್ಲಿ ನಾನು ಬರೆಯುತ್ತಿರುವುದು ಒಂದು ಶಾಲೆಯ ಕುರಿತು. ಬೇರೆ ಶಾಲೆಗಳ ವಿವರಣೆ ಇಲ್ಲಿಗೆ ಅವಶ್ಯಕತೆಯಿಲ್ಲ. ನಮ್ಮ ಸಂಸ್ಥೆ ವತಿಯಿಂದ ಇಂಧನ ಉಳಿತಾಯದ ಕುರಿತು ಶಾಲೆಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಿದ್ದೆವು. ಆ ತಯಾರಿಯಲ್ಲಿದ್ದ ನನಗೆ ಮಂಗಳವಾರ ಬೆಳ್ಳಿಗ್ಗೆ ಸೋಮವಾರಪೇಟೆ ತಾಲ್ಲೂಕಿನ ಕಿರಗಂದೂರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ. ಸುರೇಶ್‍ರವರು ಕರೆ ಮಾಡಿ ನಿಮ್ಮ ನಂಬರು ನನಗೆ ಯಾರಿಂದಲೋ ದೊರೆಯಿತು, ನಮ್ಮ ಶಾಲೆಗೆ ಬಂದು ಇಕೋ ಕ್ಲಬ್ ಕಾರ್ಯಕ್ರಮದಡಿಯಲ್ಲಿ ಮಕ್ಕಳಿಗೆ ಒಂದು ಕಾರ್ಯಕ್ರಮ ನೀಡಿದರೆ ಅನುಕೂಲವಾಗುವುದು ಎಂದು ತಿಳಿಸಿದರು. ನಿಮಗೆ ನಮ್ಮ ಶಾಲೆಗೆ ತಲುಪುವ ಎಲ್ಲಾ ವ್ಯವಸ್ಥೆಯನ್ನು ಮಾಡುತ್ತೇವೆಂದರು.
ನಾನು ಅವರ ಮಾತಿನಿಂದ ಖುಷಿಯಾಗಿ ದಿಢೀರನೇ ಒಪ್ಪಿಕೊಂಡೆ. ಶುಕ್ರವಾರವೆಂದು ಕಾರ್ಯಕ್ರಮದ ದಿನಾಂಕವೂ ನಿಗದಿಯಾಯಿತು. ನನಗೆ ಸುರೇಶ್‍ರವರು ನೀಡಿದ ಮಾಹಿತಿಯ ಪ್ರಕಾರ ಸೋಮವಾರಪೇಟೆಯಿಂದ 6-8 ಕಿಮೀಗಳು, ಹಾಗಾಗಿ ನಮ್ಮೂರಿನಿಂದ ಸುಮಾರು 30-35 ಕೀಮೀ ಆಗಬಹುದೆಂದು ಯೋಚಿಸಿದೆ. ನಮ್ಮ ಕಾರ್ಯಕ್ರಮಕ್ಕೆ ಬೆಂಬಲ ಕೊಡುವುದಕ್ಕೆ ಸುನೀಲ್ ಮತ್ತು ತಂಡ ಸೈಕಲ್‍ನಲ್ಲಿ ಬರುವುದೆಂದು ನಿರ್ಧರಿಸಿದೆವು. ಅದರಂತೆಯೇ, ಶುಕ್ರವಾರ ಬಾನುಗೊಂದಿ ಶಾಲೆ, ಸಿದ್ದಾಪುರ ಗೇಟ್, ರಂಗನಾಥಪುರ ಶಾಲೆಗೆ ಭೇಟಿ ನೀಡಿ ಹೊರಟೆವು. ರಂಗನಾಥಪುರ ಶಾಲೆಯ ನುಗ್ಗೆ ಸೊಪ್ಪಿನ ಸಾರು ನನ್ನನ್ನು ಅಲ್ಲಿಯೇ ಊಟ ಮಾಡುವಂತೆ ಮಾಡಿತು. ನನಗೆ ಸೊಪ್ಪಿನ ಸಾರು ಕೊಡುವ ಖುಷಿಯನ್ನು ಬೇರಾವ ಸಾರು ಕೊಡುವುದಿಲ್ಲ, ಅದರಲ್ಲಿಯೂ ನುಗ್ಗೆ ಸೊಪ್ಪು. ನನ್ನ ಈ ಆಸೆಯಿಂದಾಗಿ, ಒಂದು ಮೂವತ್ತರವರೆಗೂ ರಂಗನಾಥಪುರದಲ್ಲಿಯೇ ಉಳಿದೆ.
ರಂಗನಾಥಪುರದಿಂದ ಹೊರಟು ಸೋಮವಾರಪೇಟೆ ತಲುಪಿದೆ. ಸೋಮವಾರಪೇಟೆಯ ಬಸ್ ಸ್ಟಾಂಡ್ ಮತ್ತು ಮಲ್ಲಹಳ್ಳಿ ಜಲಪಾತದ ರಸ್ತೆ ಬಿಟ್ಟರೆ ಬೇರಾವ ಜಾಗದ ಪರಿಚಯವಿಲ್ಲ. ಅಲ್ಲಿ ಕೆಲವರನ್ನು ದಾರಿ ಕೇಳಿದೆ. ಕಿರಗಂದೂರಿಗೆ ದಾರಿ ಹೇಗೆ? ಯಾವ ಕಿರಗಂದೂರು? ತಾಕೇರಿ ರಸ್ತೆ? ಐಗೂರು ರಸ್ತೆ? ಜಾರಗಂದೂರು? ನಿಮಗೆ ಕಿರಗಂದೂರಿಗೆ ಹೋಗಬೇಕಾ? ತಾಕೇರಿಗಾ? ಅವರು ನನಗೆ ಮರು ಪ್ರಶ್ನೆ ಹಾಕಿದರು. ಪ್ರಶ್ನೆಗೆ ಮರು ಪ್ರಶ್ನೆ ನನ್ನದು, ತಾಕೇರಿ ಮೊದಲೋ ಅಥವಾ ಕಿರಗಂದೂರೋ? ಅವರು ನನಗೆ ಮತ್ತೆ ಹೇಳಿದರು, ಒಂದು ರಸ್ತೆಯಲ್ಲಿ ಹೋದರೇ ತಾಕೇರಿ ಮೊದಲು, ಮತ್ತೊಂದರಲ್ಲಿ ಹೋದರೇ ಕಿರಗಂದೂರು ಮೊದಲು. ಇದು ಅಪ್ಪಾ ಊರೆಂದರೇ, ಆಯ್ಕೆ ನಮ್ಮದು ಅದರಲ್ಲಿಯೂ ಯಾವ ಊರಿನ ಮೇಲೆ ಹೋಗಬೇಕೆಂಬುದು! ಅದ್ಬುತಾ. ಕೆಲವರು ಐಗೂರು ರಸ್ತೆ ಎಂದರು, ಕೆಲವರು ಕಬ್ಬಿಣದ ಸೇತುವೆ ಎಂದರು, ಕೆಲವರು ತಾಕೇರಿ ರಸ್ತೆ ಎಂದರು. ಆದರೂ ದೇವರ ಮೇಲೆ ಭಾರ ಹಾಕಿ, ತಾಕೇರಿಯೋ, ಮಡಿಕೇರಿಯೋ ಕಿರಗಂದೂರು ಶಾಲೆ ಬೇಕೆಂದು ಮುಂದಕ್ಕೆ ನಡೆದೆ. ದೇವರಿಗೆ ಒಂದು ರೂಪಾಯಿದು ಕರ್ಪೂರ ಹಚ್ಚದಿದ್ದರೂ ನನ್ನೆಲ್ಲಾ ಸಮಸ್ಯೆಗಳನ್ನು ಅವನ ಮೇಲೆ ಹಾಕುವುದನ್ನು ನಿಲ್ಲಿಸಿಲ್ಲ ನಾನು.
ಸೋಮವಾರಪೇಟೆ ದಾಟಿ ಸೆಂಟ್. ಜೋಸೆಫ್ ಶಾಲೆ ಬಿಟ್ಟು ಮುಂದಕ್ಕೆ ಬಂದೆ, ಅಲ್ಲೊಂದು ಬೋರ್ಡ್ ಇತ್ತು, ಕಿರಗಂದೂರು, ತಾಕೇರಿ... ಇತ್ತು. ಸದ್ಯ ಸರಿಯಾದ ರಸ್ತೆಗೆ ಬಂದೆ ಎಂದು ಖುಷಿಯಿಂದ ಒಂದು ಕೀಮೀ ಮುಂದೆ ಬಂದರೇ ಎಡಕ್ಕೋ ಬಲಕೋ? ಅನುಮಾನ ಶುರುವಾಯಿತು. ಮಲೆನಾಡಿನಲ್ಲಿ, ಹಗಲು ಹೊತ್ತಿನಲ್ಲಿಯೇ ಒಬ್ಬರು ಸಿಗುವುದಿಲ್ಲವಲ್ಲ, ವಿಳಾಸ ಅಥವಾ ಮಾರ್ಗ ತಿಳಿಸುವುದಕ್ಕೆ ಎಂದು ಆಲೋಚಿಸಿದೆ. ಮೂರೇ ನಿಮಿಷದಲ್ಲಿ ರಾಕೇಟ್ ಬಂದಂತೆ ಒಂದು ಟ್ರಾಕ್ಟರ್ ಬಂತು, ಕಾರಿಗೆ ಗುದ್ದುವಂತೆ ಬಂದು, ಏನು ಎಂದ. ನಾನು ತಾಕೇರಿ ರಸ್ತೆ? ಎಂದೆ, ಕಿರಗಂದೂರು ಎಂದೆ. ಅವನು ಬಹಳ ವಿಶ್ವಾಸದಿಂದ ಈ ರಸ್ತೆ ಹೋಗಬಹುದು ಎನಿಸುತ್ತೆ, ಎಂದ. ನಾನು ಮತ್ತೆ ಕೇಳಿದೆ, ಎಷ್ಟು ದೂರ ಎಂದೆ, ಅದಕ್ಕವನು ಗೊತ್ತಿಲ್ಲ, ನಾನು ಯಾವತ್ತೂ ಹೋಗಿಲ್ಲ, ಜನರು ಹೋಗಿರೋದು ಕೇಳಿದ್ದೇನೆ, ಎಂದ. ಇದು ಚೆನ್ನಾಯಿತಲ್ಲವೆಂದು ನಡೆದೆ. ಹೋಗು ಹೋಗುತ್ತಾ ಸಂಪೂರ್ಣ ಇಳಿಜಾರು! ಅದೆಂಥಹ ಇಳಿಜಾರೆಂದರೇ ಬಹುಷóಃ 80-850 ಅಷ್ಟು! ಅದರ ಜೊತೆಗೆ, ಲೆಕ್ಕವಿಲ್ಲದಷ್ಟು ತಿರುವುಗಳು. ಅಯ್ಯೋ ದೇವರೇ, ನಾನಾವಾ ಪ್ರಪಾತಕ್ಕೆ ಇಳಿಯುತ್ತಿದ್ದೇನೆ ಎನಿಸಿತು. ಹೋಗ ಹೋಗುತ್ತಾ ಇಳಿಜಾರು, ಇನ್ನು ಇಳಿಜಾರು, ಇದ್ಯಾವ ಶಾಲೆ ದೇವರೇ? ಇದ್ಯವಾ ಊರು? ನಾನ್ಯಾಕೆ ಈ ಶಾಲೆಯ ಕಾರ್ಯಕ್ರಮವನ್ನು ಒಪ್ಪಿಕೊಂಡೆ ಎನಿಸತೊಡಗಿತು. ನನ್ನ ಜೊತೆಯಲ್ಲಿ ಬಂದಿದ್ದ ಮಂಜ ಹೇಳಿದ, ಅಲ್ಲಾ ನೀನು ಅಲ್ಲೇ ಹತ್ತಿರದಲ್ಲಿದ್ದ ಶಾಲೆಯನ್ನು ಬಿಟ್ಟು ಇಲ್ಲಿ ತನಕ ಒಪ್ಪಿಕೊಳ್ಳುವ ಅವಶ್ಯಕತೆಯಿತ್ತಾ? ನಾನು ದಿಢೀರನೇ ಹೇಳಿದೆ, ಒಂದು ದಿನ ಬಂದು ಹೋಗುವುದಕ್ಕೆ ನಾನು ಹೀಗೆ ಹೇಳಿದರೇ, ಪಾಪ ಮಾಸ್ಟರುಗಳು, ಟೀಚರುಗಳು ದಿನ ನಿತ್ಯ ಹೋಗಬೇಕಲ್ಲಾ ಅವರ ಗತಿ ಏನು ಎಂದೆ. ಅಲ್ಲಿಂದಲೇ ನನಗೆ ಆ ಶಾಲೆಯ ಶಿಕ್ಷಕರುಗಳ ಬಗ್ಗೆ ಗೌರವ ಬೆಳೆಯತೊಡಗಿತು.
ನಾಲ್ಕೈದು ಕೀಲೋಮೀಟರ್ ಆದಮೇಲೆ, ಇಳಿಜಾರು ಮುಗಿಯಿತು. ಒಂದು ಬೋರ್ಡ್ ಇದೆ, ಮಜವೆಂದರೆ, ಬೋರ್ಡಿನಲ್ಲಿ ಎರಡು ಕಡೆಗೆ ಕಿರಗಂದೂರು 5ಕೀಮೀ ತೋರಿಸಿದೆ. ನಾನು ತಬ್ಬಿಬ್ಬಾದೆ. ಎರಡು ಕಡೆಗೆ ಒಂದೇ ಊರಿಗೆ ಹೋಗುವ ದಾರಿಯ ಹೆಸರು ಮತ್ತು ಸೂಚಿ? ಯಾವ ನನ್ಮಗ ಗುರುವೇ ಬರೆದಿದ್ದು ಯಾವನೋ ಹೆಂಡ ಕುಡಿದು ಬರೆದಿರಬೇಕೆಂದು ಯೋಚಿಸಿ ನಿಂತೆ. ಯಾರದರೂ ಬಂದರೇ ಕೇಳೋಣವೆಂದು. ಪುಣ್ಯಾತ್ಮರೊಬ್ಬ ಕಾರಿನಲ್ಲಿ ಬಂದ ನಾನು ಕೇಳಿದೆ. ಕಿರಗಂದೂರಿಗೆ ದಾರಿ ಎಂದು. ಅವನು ಅಲ್ಲಿಗೆ ಯಾಕೆ? ಎಂದ. ತಲೆ ಹರಟೆ ನನ್ಮಗ ಎಂದುಕೊಂಡೆ. ಸರ್, ಹೈಸ್ಕೂಲಿಗೆ ಹೋಗಬೇಕೆಂದೆ. ಎರಡು ಕಡೆಯಿಂದ ಹೋಗಬಹುದೆಂದ. ನಾನು, ಯಾವುದು ಹತ್ತಿರ ಸರ್ ಎಂದೆ. ಎರಡು ಒಂದೇ ಎಂದ. ಅಯ್ಯೋ ಕರ್ಮವೇ ಎರಡು ಒಂದೇ ದೂರವಿರುವುದಕ್ಕೆ ಸಾಧ್ಯವೇ ಇಲ್ಲ. ಹೇಗೆ ತೀರ್ಮಾನ ತೆಗೆದುಕೊಳ್ಳುವುದು. ನಾನು ಬರುವಾಗ, ಒಂದು ಬೆಕ್ಕು ಅಡ್ಡ ಬಂದಿತ್ತು. ನಾನು ಅದನ್ನು ಲೆಕ್ಕಿಸದೇ ಬಂದಿದ್ದೆ. ಮಂಜ, ನನಗೆ ಹೇಳಿದ್ದ, ಬೆಕ್ಕು ಅಡ್ಡ ಬಂದಾಗ ನಿಲ್ಲಿಸಿ ಹೋಗು ಎಂದು. ಈಗ ಅವನ ರಾಗ ಶುರುವಾಯಿತು. ನಾನು ಹೇಳಿದೆ, ಲೋ ತಂದೆ ಸುಮ್ಮನೆ ಕೂತ್ಕೊಳ್ಳಪ್ಪ, ಹೋಗೋ ಬರೋ ಬೆಕ್ಕು ನಾಯಿಗೆ ಕಾರು ನಿಲ್ಲಿಸಿ ಬಂದರೇ ನಾವು ಮುಂದೆ ಹೋಗೋದಿಲ್ಲ ಅಲ್ಲೇ ಇರ್ತಿವಿ ಎಂದೆ.
ಕೊನೆಗೂ ತೀರ್ಮಾನ ಮಾಡಿ ನೇರ ರಸ್ತೆ, ಎಂದರೇ ಎಡಕ್ಕೆ ಚಲಿಸಿದೆ. ಸದ್ಯ ಹತ್ತಿರಕ್ಕೆ ಬಂದಿದ್ದೇವೆಂದು ನಡೆದೆ. ಹೋಗುತ್ತ ಹೋಗುತ್ತಾ ಕಾಡು, ಸಂಪೂರ್ಣ ಕಾಡು, ಕಾಫಿ ತೋಟ, ಬೆಟ್ಟವೆಂದರೇ ಕಡಿಮೆ ಬೆಟ್ಟವಲ್ಲ, ಏರಿದಷ್ಟು ಎತ್ತರ. ನನ್ನ ಕಾರು ಎರಡನೆಯದು ಹೋಗಲಿ ಮೊದಲನೆಯ ಗೇರಿನಲ್ಲಿಯೇ ಹತ್ತುವುದಕ್ಕೆ ಅಳತೊಡಗಿತು. ನಾನು ಸಮಧಾನ ಮಾಡುತ್ತ, ನೋಡು ಇನ್ನು ಕೆಲವು ದಿನಗಳಷ್ಟೆ, ಸಮಧಾನವಾಗು ಎಂದು ಚಲಿಸಿದೆ. ಯಾಕೆ ಸ್ವಲ್ಪ ದಿನವೆಂದು ಕಾರು ಕೇಳಿತು. ಅದಕ್ಕೆ ನಾನು, ಬೇರೆ ಕಾರು ತೆಗೆದುಕೊಳ್ಳೊಣವೆಂದಿದ್ದೇನೆ, ನಿನಗೆ ಕಷ್ಡ, ವಯಸ್ಸಾಯಿತಲ್ಲವೇ ಎಂದೆ. ಮಗನೇ, ಬೆಂಗಳೂರಿನಿಂದ ರಾತ್ರೋ ರಾತ್ರಿ ದೂಧ್ ಸಾಗರ ಹೋದಾಗ, ಹಗಲು ರಾತ್ರಿ ಎನ್ನದೇ ಗೋವಾಕ್ಕೆ ಹೋದಾಗ, ಬಳ್ಳಾರಿ ಸಂಡೂರಿನ ಹೊಂಡದ ರಸ್ತೆಂiÀiಲ್ಲಿ ಸುತ್ತಾಡಿದಾಗ, ಶೃಂಗೇರಿ, ಧರ್ಮಸ್ಥಳದ ಗುಂಡಿ ರಸ್ತೆಯಲ್ಲಿ ದಢೂತಿ ಐದು ಜನರನ್ನು ಹಾಕಿಕೊಂಡು ಹಿಂಸೆ ನೀಡಿದಾಗ ವಯಸ್ಸಾಗಿರಲಿಲ್ಲವೇ ನನಗೆ ಎಂದಿತು. ಅದು ಹಾಗಲ್ಲ ಗುರುವೇ ಎಂದೆ, ಲೋ ಹರೀಶ ಸುಮ್ಮನೇ ಇರು, ಬೆಂಗಳೂರು ಬಾನುಗೊಂದಿ ರಸ್ತೆ ಹಾಳಾಗಿದ್ದ ಸಮಯದಲ್ಲಿ ವಾರಕ್ಕೆ ಹದಿನೈದು ದಿನಕ್ಕೆ ಊರಿಗೆ ನಿನ್ನನ್ನು ಕರೆದುಕೊಂಡು ಬಂದಿದ್ದು ನಾನು, ಯಾವತ್ತಾದರೂ ಒಂದು ದಿನ ನಿನಗೆ ತೊಂದರೆ ಕೊಟ್ಟಿದ್ದೀನಾ? ಎಲ್ಲಿಯಾದರೂ ನನಗೆ ಆರೋಗ್ಯ ಸರಿ ಇಲ್ಲವೆಂದು ಸಬೂಬು ಹೇಳಿದ್ದೀನಾ? ಆಸ್ಪತ್ರೆಯ ಕಡೆಗೆ ಮುಖ ಮಾಡಿ ತಿಂಗಳುಗಳಾಗಿದ್ದರೂ ನಾನು ನಿನ್ನನ್ನು ಬಿಸಿಲೆ ಘಾಟಿಗೆ ಕರೆದೊಯ್ದಿರಲಿಲ್ಲವೇ? ತಪ್ಪಾಯ್ತು ಬಿಡು ತಂದೆ ಎಂದು ಮುಂದಕ್ಕೆ ಹೋದೆ.
ಬೆಟ್ಟ ಹತ್ತಿದಷ್ಟು ದೂರ ಹತ್ತಿದ್ದೇ ಆಯಿತು. ಯಾರಾದರೂ ಇದ್ದಾರೆಯೇ ಕೇಳೋಣವೆಂದುಗೊಂಡರೇ ಯಾರು ಇಲ್ಲ. ಅದರ ನಡುವೆ ಶಾಲೆಯಿಂದ ರಮೇಶ್ ಹಾಗೂ ಅದರ ಜೊತೆಯಲ್ಲಿಯೇ ಮೇಡಂ ಒಬ್ಬರು ಕರೆ ಮಾಡಿದರು. ಅವರು ನನ್ನನ್ನು ಕೇಳಿದರು ಸರ್ ಏನಿದೆ ನಿಮ್ಮ ಸುತ್ತ ಮುತ್ತ ಎಂದರು. ಸುತ್ತಲೂ ಕಾಡು, ಮತ್ತು ಕಾಫಿ ತೋಟವೆಂದೆ. ಸರ್, ನನಗೂ ಗೊತ್ತಾಗುತ್ತಿಲ್ಲ, ಯಾರಾದರೂ ಸಿಗಬಹುದು ವಿಚಾರಿಸಿಕೊಂಡು ಬನ್ನಿ ಎಂದರು. ಅದೇ ಸಮಯಕ್ಕೆ, ಕಡೆಗೂ ಒಬ್ಬ ಅವತಾರ ಪುರುಷನ ದರುಶನವಾಯಿತು. ಅಣ್ಣ ಕಿರಗಂದೂರು ಶಾಲೆಗೆ ದಾರಿ ಎಂದೆ. ಅವನು ಮೂವತ್ತು ಸೆಕೆಂಡ್‍ಗಳು ಯೋಚಿಸಿ ಹೇಳಿದ, ಅಲ್ಲಿ ಆ ಕಡೆ ಹೋಗಿ, ಅಲ್ಲಿ ಕಬ್ಬಿಣದ ಸೇತುವೆ ಬರುತ್ತದೆಯೆಂದ. ನಾವು ಬಂದಿರುವ ದಿಕ್ಕಿಗೆ ಕಳುಹಿಸುತಿದ್ದಾನೆ ಎನಿಸಿತು. ಆದರೂ ಮುಂದಕ್ಕೆ ಹೋಗಿ ಎಡಕ್ಕೆ ಚಲಿಸಿದೆ, ಮೂರು ರಸ್ತೆಗಳು ಕೂಡುವ ಸ್ಥಳ, ಸುಸ್ವಾಗತ ಕಿರಗಂದೂರು ಗ್ರಾಮಕ್ಕೆ ಎಂದಿದೆ ಬೋರ್ಡ್. ನಾನು ವಿಚಾರಿಸಿದ ಮೊದಲನೆಯ ವ್ಯಕ್ತಿ ಹೇಳಿದ್ದು ಎಡಕ್ಕೆ, ಈಗ ನಾನು ಮತ್ತೊಬ್ಬರನ್ನು ವಿಚಾರಿಸಿದೆ, ಅವರು ಮತ್ತೊಂದು ದಿಕ್ಕಿಗೆ ಹೇಳಿದರು. ನನಗೋ ದಿಗಿಲು, ಸಮಯ ಮೂರು ಮುಟ್ಟುತ್ತಿದೆ, ನಾನು ಹೇಳಿದ ಸಮಯ ಮೀರಿದೆ, ಕೊಟ್ಟ ಸಮಯಕ್ಕೆ ತಲುಪಿಲ್ಲವೆಂದರೇ ಹೇಗೆ? ಸರ್, ಬೋರ್ಡ್ ಈ ಕಡೆಗಿದೆ ಎಂದೆ. ನಿಮಗೆ ಬೇಕಿರುವುದು ಸ್ಕೂಲ್ ತಾನೇ? ಆ ಕಡೆಗೆ ಹೋಗಿ ಎಂದು ಸುಮ್ಮನಾದ. ನಾನು ಧೈರ್ಯ ಮಾಡಿ ಕಾರನ್ನು ಹಿಂದಕ್ಕೆ ತಿರುಗಿಸಿದೆ. ಸ್ವಲ್ಪ ದೂರ ಹೋದ ನಂತರ ಕೆಲವು ಮನೆಗಳು ಕಂಡವು. ಬಸ್‍ಗೆ ಕಾಯುತ್ತಿದ್ದವರೆನಿಸುತ್ತದೆ, ನಾನು ಕೇಳಿದೆ ಕಿರಗಂದೂರು ಶಾಲೆ ಎಲ್ಲಿದೆ? ಅವರು ಅಯ್ಯೋ ನೀವಾ ಹೋಗಿ ಮುಂದೆ ಇದೆ, ನಿಮ್ಮನ್ನೇ ಕಾಯ್ತಾ ಇದ್ದಾರೆ, ನಾನು ಕೂಡ ಬೆಳ್ಳಿಗ್ಗೆಯಿಂದ ಇಲ್ಲಿ ತನಕ ಕಾಯ್ದು ಕಾಯ್ದು ಬಂದೆ ಎಂದರು. ಹೋ ಹೋ ನಾವು ಪುಲ್ಲು ಪೇಮಸ್ಸು ಎಂದುಕೊಂಡು ಮುಂದೆ ಸಾಗಿದೆವು. ಬಹಳ ನಿಶಬ್ಧದ ಊರು, ಸ್ವಲ್ಪವೂ ಗದ್ದಲವಿಲ್ಲ, ಮುಂದೆ ಹೋದರೇ ಗ್ರಾಮ ಪಂಚಾಯಿತಿ ಆಫೀಸು, ಪ್ರಾಥಮಿಕ ಆರೋಗ್ಯ ಕೇಂದ್ರ ಕಂಡಿತು. ಇನ್ನೂ ಸ್ವಲ್ಪ ಮುನ್ನೆಡೆದರೆ, ಎಡ ಬದಿಯಲ್ಲಿ ಶಾಲಾ ಕಾಪೌಂಡು ಕಂಡಿತು. ಶಾಲಾವರಣದೊಳಗೆ ಹೋಗುವಾಗ ಬಹಳ ಶಿಸ್ತಿನಿಂದಿರುವ ಗೇಟು, ಬಹಳ ವಿಸ್ತಾರವಾದ ಮೈದಾನ, ಒಳಕ್ಕೆ ಹೋದ ತಕ್ಷಣ, ಟೀಚರ್, ಮಾಸ್ಟರು ನಮ್ಮನ್ನು ಸ್ವಾಗತಿಸಿದರು. ಅವರುಗಳ ಮುಖದಲ್ಲಿದ್ದ ಸಂತೋಷ ಮತ್ತು ಆತ್ಮೀಯತೆ ನಿಜಕ್ಕೂ ನನ್ನನ್ನು ಬೆರಗುಗೊಳಿಸಿತು. ನಾನು ನಮ್ಮ ಲ್ಯಾಂಡ್‍ಮಾರ್ಕ್‍ನ ಸ್ನೇಹಿತರಂತೆ ಎನಿಸತೊಡಗಿತು.
ಶಾಲೆಯ ಆವರಣ ತಲುಪಿದಂತೆ ಕಾರನ್ನು ನಿಲ್ಲಿಸಿ, ನನ್ನನ್ನು ಸ್ವಾಗತಿಸಿದ ಮಾಸ್ಟರಿಗೆ ವಂದಿಸಿದೆ. ಕ್ಷಮೆ ಕೇಳಿ ಸಭೆ ಆಯೋಜಿಸಿದ್ದ ರೂಮಿಗೆ ತಲುಪಿದೆ. ಒಬ್ಬರು ವಿದ್ಯಾರ್ಥಿನಿ ನೀರನ್ನು ತಂದು ಕೊಟ್ಟರು, ಲೋಟವು ಬಿಸಿಯಾಗಿತ್ತು. ಅಯ್ಯೋ ಬಿಸಿ ನೀರು ನಾನು ಕುಡಿಯುವುದಿಲ್ಲವೆಂದೆ. ಮಾಸ್ಟರು ಹೇಳಿದರು ಸರ್ ಇಲ್ಲಿ ನಮ್ಮ ಎಲ್ಲಾ ಮಕ್ಕಳಿಗು ಬಿಸಿ ನೀರನ್ನು ಸೇವಿಸಬೇಕೆಂದು ಹೇಳಿದ್ದೇವೆ, ಮತ್ತು ಶಾಲೆಯಲ್ಲಿ ಬಿಸಿ ನೀರನ್ನು ನೀಡುತ್ತೇವೆಂದರು. ನಿಜಕ್ಕೂ ಆಶ್ಚರ್ಯವಾಯಿತು. ಕಾರ್ಯಕ್ರಮ ಶುರುವಾಯಿತು, ಸ್ವಾಗತ ಭಾಷಣ ಮುಗಿಯಿತು. ಇಕೋ ಕ್ಲಬ್ ಸಂಚಾಲಕಿ ಶಿಕ್ಷಕಿ ನಮ್ಮ ಸಂಸ್ಥೆಯ ಬಗ್ಗೆ ಮಾತನಾಡಿದರು. ನಮ್ಮ ಸಂಸ್ಥೆಯ ಬಗ್ಗೆ ಬಹುóಷó ನನ್ನನ್ನು ಬಿಟ್ಟರೇ ಅವರೇ ಸರಿಯಾಗಿ ಹೇಳಿದ್ದು ಎನ್ನುವಷ್ಟು ಕರಾರುವಕ್ಕಾಗಿ ಹೇಳಿದರು. ನನಗೆ ಅಚ್ಚರಿ, ಸಂತೋಷ, ಹೆಮ್ಮೆ ಎಲ್ಲವೂ ಒಟ್ಟಿಗೆ ಬಂದಿತು. ಅದೆಷ್ಟರ ಮಟ್ಟಿಗೆ ಎಂದರೇ ನಮ್ಮ ಸಂಸ್ಥೆಯ ವೆಬ್‍ಸೈಟ್ ಅಥವಾ ಬ್ರೋಷರ್ ಇಂದ ನೋಡಿ ಹೇಳುವ ಮಾತಲ್ಲ, ಅದರ ಜೊತೆಗೆ ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದ್ದೇನೆ. ಕಿರಗಂದೂರು ಶಾಲೆಯ ಹೆಸರನ್ನೇ ತಿಳಿದಿರಲಿಲ್ಲ. ಅಲ್ಲಿನ ಶಿಕ್ಷಕರು ಗೊತ್ತಿಲ್ಲ, ಅವರಿಗೆ ನನ್ನ ಪರಿಚಯವೂ ಇಲ್ಲ. ಏಕೆಂದರೇ ಶಾಲೆಯ ಪ್ರಬಾರಿ ಮುಖ್ಯ ಶಿಕ್ಷಕರಿಗೂ ನನ್ನ ಬಗ್ಗೆಯಾಗಲೀ ನಮ್ಮ ಸಂಸ್ಥೆಯ ಬಗ್ಗೆಯಾಗಲೀ ತಿಳಿದಿರಲಿಲ್ಲ. ಏಕೆಂದರೇ, ಅವರು ನನಗೆ ಕರೆ ಮಾಡಿದಾಗ ನನ್ನನ್ನೇ ಕೇಳಿದ್ದರು.
ನಮ್ಮ ಸಂಸ್ಥೆಯ ಕುರಿತು ಮಕ್ಕಳಿಗೆ ನನಗಿಂತಲೂ ಚೆನ್ನಾಗಿ ತಿಳಿಸಿದ್ದನ್ನು ಕಂಡು ನಾನು ನಿಬ್ಬೆರಗಾದೆ. ಇದು ನಿಜಕ್ಕೂ ಅಸಾಧ್ಯವಾದ ವಿಷಯವೂ ಹೌದು. ನಮ್ಮ ಸಂಸ್ಥೆಯ ಬಗ್ಗೆ ನನ್ನನ್ನು ಬಿಟ್ಟರೆ ಬೇರಾವ ವ್ಯಕ್ತಿಯೂ ಅಷ್ಟು ಚೆನ್ನಾಗಿ ಹೇಳಿದ್ದನ್ನು ನಾನು ಕೇಳಿಲ್ಲ. ನಮ್ಮ ಸಂಸ್ಥೆಯ ಮೂರು ಉದ್ದೇಶಗಳು, ಅದರ ಹಿನ್ನಲೆ, ಅದರ ಮುಂದಿನ ಹೆಜ್ಜೆ ಎಲ್ಲವನ್ನು ತಿಳಸಿದರು. ಇದು ಅತಿಶಯೋಕ್ತಿ ಎನಿಸಿದರೂ ಸರಿ, ನಾನು ಇಲ್ಲಿ ಬೇರೆ ಶಾಲೆಯವರನ್ನು ದೂರುತ್ತಿಲ್ಲ. ಆದರೇ, ನನ್ನ ಎಲ್ಲಾ ಶಾಲೆಗಳ ಭೇಟಿಗಳಲ್ಲಿ ಮೊದಲನೆಯ ಶಾಲೆಯಲ್ಲಿ ನಮ್ಮ ಸಂಸ್ಥೆಯ ಕುರಿತು ಪರಿಚಯ ಮಾಡಿಸಿದ್ದು. ಬಹುತೇಕ ಶಾಲೆಗಳಲ್ಲಿ ಎನ್.ಜಿ.ಓ ಸಂಸ್ಥೆಯವರು ಎಂದು, ನಮ್ಮ ಸಂಸ್ಥೆಯ ಹೆಸರನ್ನು ನೆನಪು ಮಾಡಿಕೊಳ್ಳದೇ ಕಾರ್ಯಕ್ರಮ ನಡೆಸಿದ್ದಾರೆ. ನೆನಪಿಟ್ಟಕೊಳ್ಳಬೇಕೆಂಬ ನಿಯಮವಿಲ್ಲ, ಅದನ್ನು ನಾವು ನಿರೀಕ್ಷಿಸುವುದು ಇಲ್ಲ. ಆದರೇ, ಇದು ನಿಜಕ್ಕೂ ಅನಿರೀಕ್ಷಿತ. ಹೌದು ನಾನು ಹೆಚ್ಚು ಬರೆಯುತ್ತಿದ್ದೇನೆ ಎನಿಸುತ್ತದೆ ನಿಮಗೆ! ಆದರೇ, ನಮ್ಮ ಸಂಸ್ಥೆಯ ಬಗ್ಗೆ ನಮ್ಮ ಕನಸುಗಳು ಬೇರೊಬ್ಬರಿಗೆ ತಲುಪಿದಾಗ ಆಗುವ ಸಂತೋಷವೇ ಬೇರೆ. ನಾವು ಪಾಠ ಮಾಡಿದ್ದನ್ನು ಮಕ್ಕಳು ಕಲಿತಾಗ ಆಗುವ ಸಂತೋಷ ಶಿಕ್ಷಕರಿಗೆ ಮಾತ್ರ ಗೊತ್ತು. ಇಲ್ಲಿಯೂ ಅಷ್ಟೆ, ನಮ್ಮ ಸಂಸ್ಥೆ ಮುಂದೊಂದು ದಿನ ಬೆಳೆಯುತ್ತದೆ, ಬೆಳೆದಾಗ ಹೊಗಳುತ್ತಾರೆ, ಆದರೇ, ಬೆಳೆಯುವ ಹಾದಿಯಲ್ಲಿ ಕೈ ಹಿಡಿದವರು, ನಂಬಿಕೆಯಿಟ್ಟು ಸಲುಹಿದವರು ಹತ್ತಿರವಾಗುತ್ತಾರೆ. ನಾನು ಪಿಎಚ್‍ಡಿ ಮಾಡಿದ ಮೇಲೆ ಬಹಳ ಶಿಕ್ಷಕರು, ಪ್ರೊಫೇಸರ್‍ಗಳು ನನ್ನನ್ನು ಮೆಚ್ಚುತ್ತಾರೆ, ಆದರೇ, ನಾನು ಪಿಯುಸಿಯಲ್ಲಿ ಫೇಲಾದಾಗ ನನ್ನನ್ನು ಪ್ರೋತ್ಸಾಹಿಸಿದ್ದು ಪ್ರಸನ್ನಮೂರ್ತಿಯವರು ಹಾಗಾಗಿಯೇ ನನ್ನ ಮನಸ್ಸಲ್ಲಿ ಅವರು ಎಂದಿಗೂ ಅಗ್ರಸ್ಥಾನದಲ್ಲಿದ್ದಾರೆ.
ಈ ಸನ್ನಿವೇಶದಲ್ಲಿಯೂ ಅಷ್ಟೇ, ನಾನು ಸುಮಾರು ನೂರೈವತ್ತು ಶಾಲೆಗಳಿಗೆ ಭೇಟಿ ನೀಡಿದ್ದೇನೆ. ಕೆಲವು ಶಾಲೆಗಳಿಗೆ ನಾನಾಗಿಯೇ ಹೋಗಿದ್ದೇನೆ. ಇನ್ನು ಕೆಲವಕ್ಕೆ ಆಹ್ವಾನದ ಮೇರೆಗೆ ಹೋಗಿದ್ದೇನೆ. ಡಿಎಸ್‍ಇಆರ್‍ಟಿ ಜೊತೆಗೆ ಸಾಹಿತ್ಯ ರಚನೆ ಮಾಡಿ, ನೂರಕ್ಕೂ ಹೆಚ್ಚು ಶಿಭಿರಾರ್ಥಿಗಳಿಗೆ ರಾಜ್ಯ ಮಟ್ಟದಲ್ಲಿ ತರಬೇತಿ ನೀಡಿದ್ದೇನೆ, ಹಾಸನ ಮತ್ತು ಕೊಡಗು ಡಯೆಟ್‍ನಲ್ಲಿ ತರಬೇತಿ ನೀಡಿದ್ದೇನೆ. ಹಲವಾರು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದ್ದೇನೆ. ಸಾವಿರಾರು ಜನರೊಂದಿಗೆ ನಮ್ಮ ಸಂಸ್ಥೆಯ ಆಶಯಗಳನ್ನು ಹಂಚಿಕೊಂಡಿದ್ದೇನೆ. ವಿವರಗಳನ್ನು, ಮಾಹಿತಿಯನ್ನು ಹೇಳಿದ್ದೇನೆ. ಆದರೇ, ಒಂದು ಶಾಲೆಯಲ್ಲಿ ನಾನು ಯಾವ ಮಾಹಿತಿಯನ್ನು ನೀಡದ ಶಾಲೆಯಲ್ಲಿ, ನಾನು ಹಿಂದೆಂದೂ ಭೇಟಿ ನೀಡದ, ಹಿಂದೆಂದೂ ಕಾಣದ, ಕಂಡಿರದ ಶಾಲೆಯಲ್ಲಿ, ನನಗೆಂದೂ ಪರಿಚಯವಿಲ್ಲದ ಶಿಕ್ಷಕರು ನಮ್ಮ ಸಂಸ್ಥೆಯ ಬಗ್ಗೆ ಇಷ್ಟು ಸವಿವರವಾಗಿ ಮಾತನಾಡಿದ್ದು ಹೃದಯಸ್ಪರ್ಷಿ ಎನಿಸಿತು. ಇದು ನಮ್ಮ ಸಂಸ್ಥೆಯ ಬಗ್ಗೆ ಮಾತನಾಡಿದರು ಎನ್ನುವುದಕ್ಕಲ್ಲ, ಮಾತಿನ ಗಂಭೀರತೆಯ ಬಗ್ಗೆ. ಒಂದು ಸಂಸ್ಥೆಯ ಬಗ್ಗೆ ಮೊದಲನೆಯ ಬಾರಿಗೆ ಮಾತನಾಡುವಾಗ ಸಂಪೂರ್ಣವಾಗಿ ತಿಳಿದು ಮಾತನಾಡುವುದು ಅಚ್ಚರಿ ಹಾಗೂ ಅದ್ಭುತಗಳಲ್ಲಿ ಒಂದು. ಮತ್ತೊಂದು ಗಮನಹರಿಸಬೇಕಾದ ವಿಷಯವೆಂದರೇ, ನಾವು ಪ್ರಯತ್ನಿಸುತ್ತಿರುವಂತೆ, ಅವರು ಕೂಡ ಚಟುವಟಿಕೆಗಳ ಮೂಲಕ ವಿಜ್ಞಾನವನ್ನು ಹೇಳಿಕೊಡುತ್ತಿರುವುದು. ಮಕ್ಕಳಿಗೆ ಅರ್ಥೈಸಲು ಶ್ರಮಿಸುತ್ತಿರುವುದನ್ನು ಕೇಳಿ ಸಂತಸವಾಯಿತು. ಅದರಲ್ಲಿಯೂ ಗಣಿತವನ್ನು ಚಟುವಟಿಕೆಗಳ ಮೂಲಕ ಮಕ್ಕಳಿಗೆ ಮನವರಿಕೆ ಮಾಡುವುದು ಸ್ವಲ್ಪ ಕಷ್ಟವೇ ಸರಿ.
ನಾನು ಈ ಮೊದಲು ಎಲ್ಲಾ ಕಡೆಯಲ್ಲಿಯೂ ಉದಾಹರಿಸುತ್ತಿದ್ದದ್ದು ಎರಡು ಶಾಲೆಗಳು, ಮೊದಲನೆಯದು ಮಡಿಕೇರಿ ತಾಲ್ಲೂಕಿನ ಹಾಕತ್ತೂರು ಪ್ರೌಢಶಾಲೆ ಮತ್ತು ಎರಡನೆಯದು ಕಾನ್‍ಬೈಲ್ ಶಾಲೆ. ಒಂದರಲ್ಲಿ ಹೆಡ್‍ಮಾಸ್ಟರ್ ಶ್ರಮ ಮತ್ತು ಸ್ಥಳೀಯ ಸಂಸ್ಥೆಗಳ ಸಹಕಾರ ಎರಡನೆಯದರಲ್ಲಿ ಮಕ್ಕಳ ಶಿಸ್ತು ಮತ್ತು ಸ್ವಚ್ಚತೆಯ ಗುಣಮಟ್ಟ. ಈ ಸಭೆಗೆ ಬಂದಮೇಲೆ ಆ ಎರಡು ಶಾಲೆಗಳಿಗಿಂತ ಒಂದು ಹೆಜ್ಜೆ ಮುಂದಿದ್ದಾರೆನಿಸಿತು. ಕಾರ್ಯಕ್ರಮ ಸುಮಾರು ಒಂದು ಗಂಟೆಗಳ ಕಾಲ ನಡೆಯಿತು, ಒಂದು ಮಗು ಕೂಡ ಒಂದೇ ಒಂದು ಸಾರಿಯೂ ಅಕ್ಕ ಪಕ್ಕದಲ್ಲಿರುವ ಮಗುವಿನ ಜೊತೆಗೆ ಮಾತನಾಡುವುದಾಗಲೀ, ಗಲಾಟೆ ಮಾಡುವುದಾಗಲೀ ಮಾಡಲಿಲ್ಲ. ಶಾಲೆ ಬಿಟ್ಟು ಮನೆಗೆ ಹೋಗುವ ಸಮಯದಲ್ಲಿ ಅದರಲ್ಲಿಯೂ ನಾಲ್ಕು ಗಂಟೆಗೆ ಬಿಡಬೇಕಿದ್ದ ಶಾಲೆಯನ್ನು ನಾಲ್ಕು ಮುವತ್ತರವರೆಗು ಮುಂದುವರೆಸಿದೆ, ನಾನು ವಿಧ್ಯಾರ್ಥಿಯಾಗಿದ್ದರೇ ನಿಜಕ್ಕೂ ಕುಳಿತುಕೊಳ್ಳುತ್ತಿರಲಿಲ್ಲ. ಆ ಮಟ್ಟದ ಸಂಯಮ ಶಿಸ್ತು ಒಂದು ದಿನದಲ್ಲ, ಅದು ನಿರಂತರ ಕಾರ್ಯ, ದಿನಿನಿತ್ಯ ಅಭ್ಯಾಸದ ಫಲ. ಅದನ್ನು ಕರಗತಗೊಳಿಸುವಲ್ಲಿ ಶಿಕ್ಷಕರ ಪಾತ್ರ ಅವಿಸ್ಮರಣೀಯ. ಮಕ್ಕಳು ಮತ್ತು ಶಿಕ್ಷಕರು ಸಂಪೂರ್ಣ ತನ್ಮಯರಾಗಿ ನನ್ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನ್ನ ಭಾಗ್ಯ.
ಶಾಲೆಗೆ ಬರುವ ಬಹುತೇಕ ಎಲ್ಲಾ ಮಕ್ಕಳು ಕೂಲಿ ಕಾರ್ಮಿಕರ, ತೋಟದಲ್ಲಿ ಕೆಲಸ ಮಾಡುವವರ ಮಕ್ಕಳೆಂಬುದು ಗಮನಾರ್ಹ. ನಗರ ಪ್ರದೇಶಗಳಲ್ಲಿ ಬಡವರ ಮಕ್ಕಳೆಂದರೇ ಗಲೀಜು, ಸ್ವಚ್ಛತೆಯಿಂದ ದೂರವೆಂಬ ಮಾತುಗಳು ಕೇಳಿಬರುತ್ತಿರುತ್ತವೆ. ಈ ಶಾಲೆಯ ಮಕ್ಕಳು ಅದಕ್ಕೆ ಸಂಪೂರ್ಣ ವಿರುದ್ದವೆಂಬದು ಸತ್ಯ. ಅವರ ಮುಖದಲ್ಲಿರುವ ಉಲ್ಲಾಸ, ಕಲಿಯಬೇಕೆನ್ನುವ ಹಂಬಲ, ಮಿಂಚಿನ ನಗು, ಪ್ರಶ್ನೆಗೆ ತಟ್ಟನೆ ಉತ್ತರ ಹೇಳುವ ತವಕ, ಒಬ್ಬೊಬ್ಬರ ಉಡುಪು, ಸಮವಸ್ತ್ರವಾದರೂ ಸ್ವಚ್ಛತೆಯ ಪ್ರತೀಕವೆನ್ನುವಂತಿದ್ದರು. ಕಾರ್ಯಕ್ರಮ ಮುಗಿದ ಮೇಲೆ, ನಮ್ಮ ಹಿರಿಯ ಸ್ನೇಹಿತರಾದ ಶ್ರೀ. ನಲ್ಲತಂಬಿಯವರ ಫೋಟೋಗಳನ್ನು ನೀಡಬೇಕೆನಿಸಿತು. ಕಛೇರಿಯಲ್ಲಿ ಕುಳಿತಿದ್ದ ನನಗೆ ಒಮ್ಮೆ ಶಾಲೆಯನ್ನು ನೋಡೋಣವೆನಿಸಿತು. ಕೊಠಡಿಯ ಒಳಗೆ ನೋಡಿದೆ, ಹೊರಗೆ ನೋಡಿದೆ, ಮೈದಾನ, ಪಡಸಾಲೆಯನ್ನು ಗಮನಿಸಿದೆ. ಯಾವುದೋ ಸೆಳೆತವೆನಿಸಿತು ಆದರೆ ಅರ್ಥವಾಗಲಿಲ್ಲ. ನಾನು ದಡ್ಡನೆಂಬುದು ಸಾಬೀತಾದ ಸಮಯವದು. ಪ್ರಾರ್ಥನೆ ಮುಗಿದು ಹೊರಡುವ ಸಮಯ, ನಾನು ಸಮಾಜ ಶಿಕ್ಷಕರಾದ ರಮೇಶ್ ಮಾಸ್ಟರ ಜೊತೆಗೆ ಮಾತಿಗಿಳಿದೆ. ಈ ರೀತಿಯ ಶಾಲೆಯ ವಿಡೀಯೋ ಬೇಕು ನನಗೆ, ತಾವು ದಯಮಾಡಿ ಕೇವಲ ಎರಡು ನಿಮಿಷದ ಒಂದು ವಿಡಿಯೋ ಮಾಡಿ ಕಳುಹಿಸಿ ಎಂದೆ. ದಿಢೀರನೇ ನೆನಪಾಯಿತು, ವಿಡಿಯೋ ಮಾಡಿ ಕಳುಹಿಸಿ ಎಂದ ಯಾವ ಶಾಲೆಯ ವಿಡಿಯೋ ಕೂಡ ಇನ್ನು ನನ್ನ ಕೈ ತಲುಪಿಲ್ಲ. ನನ್ನ ಬಳಿಯಲ್ಲಿಯೇ ಕ್ಯಾಮೆರಾ ಇದ್ದು ನಾನು ಅವರನ್ನು ಕೇಳುವುದೇ? ನಾನು ಅವರನ್ನು ಕೇಳಿಕೊಂಡೆ ತಮಗೆ ತಡವಾಗುತ್ತದ್ದರೆ ಹೊರಡಬಹುದು, ನನಗೆ ಶಾಲೆ ಇಷ್ಟವಾಗಿದೆ, ಈ ಶಾಲೆಯನ್ನು ನೋಡಿ ಬೇರೆ ಶಾಲೆಯವರು ಸ್ಪೂರ್ತಿಕೊಂಡು ತಾವು ಹೀಗೆ ಮಾಡಬೇಕೆನ್ನಬಹುದೆಂದೆ. ರಮೇಶ್ ಸರ್, ನನಗೆ ವಿವರಿಸತೊಡಗಿದರು. ಸರ್, ತರಕಾರಿ ಎಲ್ಲಾ ಇಲ್ಲೇ ಬೆಳೆಯುವುದು, ಬನ್ನಿ ತೋರಿಸುತ್ತೇನೆಂದರು.
ನಾನು ನನ್ನ ಕ್ಯಾಮೇರಾ ಹಿಡಿದು ಹೋಗುತ್ತಿದಂತೆ ಹೊಸ ವಿಸ್ಮಯವೇ ಕಣ್ಣೆದುರು ಬಂತು. ನೋಡುತ್ತಾ ಹೋದಷ್ಟು ತರಕಾರಿ ಗಿಡಗಳು, ಯಾವ ತರಕಾರಿ ಇಲ್ಲವೆನ್ನುವಂತಿಲ್ಲ. ತರಕಾರಿ ಗಿಡ ನೆಡುವಲ್ಲಿ ಶಿಸ್ತು, ಸಾಲು, ಸ್ವಚ್ಛತೆ. ಒಂದೇ ಒಂದು ಪ್ಲಾಸ್ಟಿಕ್ ಇಲ್ಲ, ಕಸ ಹರಡಿಲ್ಲ, ಮನೆಯ ಒಳಗೆ ಇರುವಷ್ಟೆ ಸ್ವಚ್ಛತೆ ಮೈದಾನದಲ್ಲಿ, ಮೈದಾನ ಮೀರಿಸುವಷ್ಟು ಸ್ವಚ್ಛತೆ ಕೈತೋಟದಲ್ಲಿ. ನಮ್ಮ ಸಂಸ್ಥೆ ಯಾವುದನ್ನು ಮಾಡಬೇಕೆಂದು ಆಶಿಸುತ್ತಿತ್ತೊ ಅದನ್ನು ಆಗಲೇ ಕಾರ್ಯರೂಪಕ್ಕೆ ತಂದಿದೆ ಈ ಶಾಲೆ. ಮತ್ತಾವ ಮಾತು ಬೇಕು, ಮತ್ತಾವ ಜಾಗೃತಿ ಕಾರ್ಯಕ್ರಮ ಮಕ್ಕಳಿಗೆ? ನನಗೆ ನನ್ನ ಬಗ್ಗೆ ಸ್ವಲ್ಪ ಅಂಜಿಕೆಯಾಯಿತು. ಶಾಲೆಯ ಪೂರ್ವಾಪರ ಯೋಚಿಸದೆ ನಾನು ಅರಿವಿನ ಬಗ್ಗೆ ಮಾತನಾಡಿದೆ ಎಂದು. ಎಲ್ಲದಕ್ಕೂ ಮೀರಿದ್ದು ಶಾಲೆಯ ಶೌಚಾಲಯಗಳು, ದೇವರ ಮನೆಯ ನೆಲದಂತೆ ಶುಚಿಗೊಳಿಸಲಾಗಿತ್ತು. ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಒಂದು ಸರ್ಕಾರಿ ಶಾಲೆ ಈ ಹಂತಕ್ಕೆ ಇರಬೇಕೆಂದರೇ ಅದರಲ್ಲಿ ವಿಧ್ಯಾರ್ಥಿಗಳ, ಶಿಕ್ಷಕರುಗಳ ಹಾಗೂ ಗ್ರಾಮಸ್ಥರ ಸಹಕಾರ ಮತ್ತು ಪಾತ್ರ ಮೆಚ್ಚುವಂತಹದ್ದು. ಅದರ ನಡುವೆ ರಶ್ಮಿ ಟೀಚರು, ನನಗೆ ಕೆಲವು ವಿಷಯಗಳನ್ನು ತಿಳಿಸಿದರು, ಸರ್, ನಾನು ಪ್ಲಾಸ್ಟಿಕ್ ಅನ್ನು ಹಾಕುವುದಕ್ಕೆ ಬಿಡುವುದಿಲ್ಲ. ಮಕ್ಕಳು, ಶಾಲೆಯಿಂದ ಮನೆಗೆ ತೆಗೆದುಕೊಂಡು ಹೋಗುತ್ತಾರೆ, ಅಲ್ಲಿಯಾದರೂ ಏನು ಮಾಡಬೇಕೆಂಬುದು ಅವರ ಪ್ರಶ್ನೆ. ನಾನು ಅದಕ್ಕೆ ಅವರಿಗೆ ಹೇಳಿದ್ದೆ, ಹರೀಶ್ ಸರ್ ಬರುತ್ತಾರೆ ನೀವು ಅವರನ್ನೇ ಕೇಳಿ ಎಂದು, ಎಂದರು. ಸದ್ಯದಲ್ಲಿ ಕಸ ವಿಲೇವಾರಿಗೆ ಏನು ಮಾಡುತ್ತಿದ್ದೀರಿ ಎಂದೆ. ಸರ್, ಹಸಿ ಕಸವನ್ನು ಹೇಗೋ ಎರೆಗೊಬ್ಬರ ಮಾಡುವುದಕ್ಕೆ ಬಳಸುತ್ತಿದ್ದೇವೆ. ಒಣ ಕಸದ್ದು ಪರವಾಗಿಲ್ಲ, ಆದರೇ, ನಮಗೆ ಸಮಸ್ಯೆಯಾಗಿ ಕಾಡುತ್ತಿರುವುದು, ಪ್ಲಾಸ್ಟಿಕ್ ಎಂದರು. ಶಾಲೆಯ ಹಂತದಲ್ಲಿ, ಇಷ್ಟೊಂದು ಸೂಕ್ಷವಾಗಿ ನೋಡಿದ ಮೊದಲ ಗುರು ಇವರು (ನನ್ನ ಜೀವನದಲ್ಲಿ). ನಾನು ಎರಡು ನಿಮಿಷ ಚಕಿತನಾದೆ. ನಾವು ನಗರ ಪ್ರದೇಶದಲ್ಲಿ ಪ್ಲಾಸ್ಟಿಕ್ ಅನ್ನು ಗಂಭೀರತೆಯಿಂದ ನೋಡುವಷ್ಟು ಗ್ರಾಮೀಣ ಪ್ರದೇಶದಲ್ಲಿ ನೋಡುವುದಿಲ್ಲ. ಆದರಿಲ್ಲಿ, ಒಂದು ಅಮೋಘವಾದ ಶಾಲೆಯ ನಿರ್ಮಾಣದಲ್ಲಿದ್ದಾರೆ. ಈ ಕಾರ್ಯಕ್ಕೆ ಕೈಜೋಡಿಸದೇ ಇದ್ದಲ್ಲಿ ಮತ್ತಾವ ಕೆಲಸ ಮಾಡಬೇಕು ನಾನು? ಬೆಂಗಳೂರಿನಲ್ಲಿಯಾದರೇ ಅಥವಾ ಮೈಸೂರಿನಲ್ಲಿಯಾದರೂ, ಹಳೆಯ ಪ್ಲಾಸ್ಟಿಕ್ ಅನ್ನು ಪುನರ್ಬಳಕೆಗೆ ಬಳಸುವ ಕೈಗಾರಿಕೆಗಳು ಸಿಗುತ್ತವೆ. ಆದರೇ, ಸೋಮವಾರಪೇಟೆಯಲ್ಲಿ ಸಿಗುವುದು? ಈ ಪ್ರದೇಶದಲ್ಲಿ ಕಸದ ಬಗ್ಗೆ ಗಮನ ಹರಿಸುವವರು ಸಿಗುವುದೇ ಕಷ್ಟ.
ಒಂದು ಶಾಲೆ, ಅದರಲ್ಲಿಯೂ ಸರ್ಕಾರಿ ಶಾಲೆ, ಅದಕ್ಕೊಂದು ಸುಂದರವಾದ ಮೈದಾನವಿದೆ. ಕಾರಿಡಾರಿನಲ್ಲಿ ಶೋ ಗೆಂದು ಬೆಳೆಸಿರುವು ಅದರಲ್ಲಿಯೂ ಹೂವಿನ ಕುಂಡಗಳಲ್ಲಿ ಗಿಡಗಳಿವೆ. ನೂರಾರು ಕುಂಡಗಳು, ಮುಂದೆ ಹೂವಿನ ಗಿಡಗಳು, ಹಿತ್ತಲಿನಲ್ಲಿ ಕೈತೋಟ, ಅದರಲ್ಲಿ ಎಲ್ಲಾ ಬಗೆಯ ತರಕಾರಿಗಳು. ಕಸದಿಂದ ರಸವೆಂಬಂತೆ, ಎರೆಗೊಬ್ಬರ, ಬೇರೆ ಬೇರೆ ಕಸದ ಗುಂಡಿಗಳು, ಶುಚಿತ್ವಕ್ಕೆ ಮೆರಗು ನೀಡುವಂತೆ ಶುಚಿಯಾಗಿರು ಶೌಚಾಲಯ, ಸ್ವಚ್ಛತೆಯ ಪ್ರತೀಕದಂತಿರುವ ವಿಧ್ಯಾರ್ಥಿಗಳು, ಅವರಿಗೆ ಸ್ಪೂರ್ತಿಯ ಚಿಲುಮೆಯಾಗಿರುವ ಶಿಕ್ಷಕರುಗಳು.
ನಿಜ ಹೇಳಬೇಕೆಂದರೇ ನನಗೆ ಆ ಶಾಲೆಯನ್ನು ಬಿಟ್ಟು ಬರುವುದಕ್ಕೆ ಮನಸ್ಸೇ ಇರಲಿಲ್ಲ. ತಡವಾಗುತ್ತಿತ್ತು ಪಾಪ ಮಾಸ್ಟರು, ಟೀಚರು ಹಾಗೂ ಮೂರು ಜನ ಮಕ್ಕಳು 5.30 ಆದರೂ ಕಾಯುತ್ತಾ ಇದ್ದರು. ನಾನು ವಾಪಸ್ಸು ಹೋಗುವುದು ಹೇಗೆ, ಯಾವ ಮಾರ್ಗ ಸೂಕ್ತವೆಂದು ಕೇಳಿದೆ. ರಮೇಶ್ ಮಾಸ್ಟರು ಸೋಮವಾರಪೇಟೆಗೆ ಹೋಗುತ್ತಿದ್ದರು ಹಾಗೂ ರಶ್ಮಿ ಟೀಚರು ಐಗೂರು ಕಡೆಗೆ ಹೋಗುತ್ತಿದ್ದರು. ಅವರವರೇ ಚರ್ಚಿಸಿ ನಾನು ಐಗೂರು ಮೂಲಕ ಹೋಗುವುದು ಸೂಕ್ತವೆಂದರು. ಅದು ಸಂಪೂರ್ಣ ಕಾಡು, ರಸ್ತೆಯೂ ಸರಿಯಿಲ್ಲ. ಟೀಚರು ಒಬ್ಬರೇ ಸ್ಕೂಟರಿನಲ್ಲಿ ಆ ಕಾಡಿನಲ್ಲಿ ಹೋಗಿ ಸೇವೆ ಸಲ್ಲಿಸುತ್ತಿರುವುದು ನನಗೆ ಅವರ ಬಗ್ಗೆ ಬಹಳ ಹೆಮ್ಮೆ ಎನಿಸಿತು. ಹೊರಡುವ ಸಮಯದಲ್ಲಿ ಕೇಳಿದೆ, ಮೇಡಮ್ ನಮ್ಮ ಸಂಸ್ಥೆಯ ಬಗ್ಗೆ ನಿಮಗೆ ಮಾಹಿತಿ ನೀಡಿದವರು ಯಾರೆಂದು? ಆಗ ಅವರು ಹೇಳಿದರು, ಸರ್. ಕೊಡಗು ಡಯೆಟ್‍ಗೆ ಬಂದು ನೀವು ವಿಜ್ಞಾನ ಶಿಕ್ಷಕರನ್ನು ಕುರಿತು ಮಾತನಾಡಿದ ಮೇಲೆ ಮನೆಗೆ ಬಂದು ನಿಮ್ಮ ಸಂಸ್ಥೆಯ ವೆಬ್‍ಸೈಟಿನಲ್ಲಿ ನೋಡಿದೆ. ತಕ್ಷಣ ನಮ್ಮ ಹೆಡ್ ಮಾಸ್ಟರಿಗೆ ತಿಳಿಸಿದೆ ಅವರು ಖುಷಿಯಿಂದ ತಮ್ಮನ್ನು ಕರೆಸಿದರು ಎಂದು. ಒಬ್ಬ ಶಿಕ್ಷಕಿ ತನ್ನ ಮಕ್ಕಳಿಗೆ ಅನುಕೂಲವಾಗಲೆಂದು ತನ್ನ ವಿಷಯದ ಜೊತೆಗೆ ಇತರೆ ವಿಷಯಗಳನ್ನು ಅದರಲ್ಲಿಯೂ ಪರಿಸರ ವಿಷಯವನ್ನು ಅಂತರ್ಜಾಲದಲ್ಲಿ ತಿಳಿದು ಭೋಧಿಸುವುದು ಹೆಮ್ಮೆಯ ವಿಷಯ.
ಕೊನೆಯ ಹನಿಯಾಗಿ ತಮಗೆ ಹೇಳಬೇಕಿರುವುದು, ನಮ್ಮ ಸರ್ಕಾರಿ ಶಾಲೆಗಳಲ್ಲಿಯೂ ಅತ್ಯತ್ತಮ ಶಿಕ್ಷಕರಿದ್ದಾರೆ. ಮಕ್ಕಳಿಗೆ ಮತ್ತು ಸಮಾಜದ ಏಳಿಗೆಗೆ ಶ್ರಮಿಸುತ್ತಿರುವ ಇಂಥಹ ಶಿಕ್ಷಕರಿಗೆ ನಾವು ಬೆಂಬಲ ನೀಡಬೇಕು. ಶಾಲೆಗೆ ಒಬ್ಬರು ಇಂತಹ ಶಿಕ್ಷಕರು ಸಿಕ್ಕರೇ ಸಾವಿರಾರು ಮಕ್ಕಳ ಭವಿಷ್ಯ ಉಜ್ವಲವಾಗುವುದರಲ್ಲಿ ಅನುಮಾನವಿಲ್ಲ. ರಶ್ಮಿ ಮೇಡಮ್ ತಮಗೆ ಶುಭವಾಗಲಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ