ನಾನು ನನ್ನ ಲ್ಯಾಂಡ್‍ಮಾರ್ಕ್ ಎಸ್.ಇ.ಎಲ್.ಪಿ. ಸಮಯದಲ್ಲಿ ನನ್ನ ಕಿವಿಗೆ ಬಿದ್ದ ಪದ ಆಟಿಸಂ, ಈ ಪದವನ್ನು ಮೊದಲು ಕೇಳಿರಲಿಲ್ಲ. ಇದ್ಯಾವ ಈ ಖಾಯಿಲೆಯೆಂಬ ಕುತೂಹಲವಿತ್ತು. ಡಾ. ಸುಧಾ ಎಂಬ ಕೋಚ್ ಒಬ್ಬರು ಸದಾ ಅವರ ಮಗನ ಬಗ್ಗೆ ಹೇಳುವಾಗ ನನಗೆ ಕುತೂಹಲ ಮೂಡಿತ್ತು. ಅದಾದ ಮೇಲೆ ಸ್ವಲ್ಪ ಗೂಗಲ್ ಮಾಡಿ, ನನ್ನ ಸ್ನೇಹಿತರ ಬಳಿಯಲ್ಲಿ ಕೇಳಿದೆ. ವಿಷಯ ಸ್ವಲ್ಪ ಗಂಬೀರವಾಗಿದೆ ಎನಿಸಿತು. ಅದರ ಬಗ್ಗೆ ಒಂದು ಲೇಖನ ಬರೆಯಬೇಕೆಂದಿದ್ದರು ಅದು ಸಾಧ್ಯವಾಗಲಿಲ್ಲ. ನನ್ನ ಬಳಿಯಲ್ಲಿ ಅಷ್ಟು ಸರಕು ಇರಲಿಲ್ಲ. ಆದರು ಅವರು ಕೊಟ್ಟಿರುವ ಒಂದು ಇಂಗ್ಲೀಷ್ ಬರವಣಿಗೆಯನ್ನು ಕನ್ನಡಕ್ಕೆ ತುರ್ಜುಮೆ ಮಾಡಿದೆ. ಮಾಡುವ ಸಮಯದಲ್ಲಿ ಅಲ್ಪ ಸ್ವಲ್ಪ ಗೊತ್ತಾಯಿತು. ನಿನ್ನೆ ಎಂದರೇ, 2ನೇ ಏಪ್ರಿಲ್ 2016ರಂದು ಬೆಂಗಳೂರಿನ ಫ್ರೀಡಂ ಪಾರ್ಕಿಗೆ ಹೋಗಿದ್ದೆ. ಸ್ವಲೀನತೆ ಕುರಿತು ಜಾಗೃತಿ ಕಾರ್ಯಕ್ರಮವಿತ್ತು.
ನಾನು ಅಲ್ಲಿಗೆ ತಲುಪಿದಾಗ 3.15 ಆಗಿತ್ತು ತಡವಾಯಿತಲ್ಲವೆಂದು ಓಡಿದೆ. ಕಾರ್ಯಕ್ರಮ ಇನ್ನೂ ಶುರುವಾಗಿರಲಿಲ್ಲ. ಹೋದವನು ಡಾ. ಸುಧಾ ಅವರನ್ನು ಭೇಟಿ ಮಾಡಿದೆ. ಅವರು ನನ್ನನ್ನು ಸ್ವಾಗತಿಸಿ, ಸ್ವಲೀನತೆಯಿರುವ ಅವರ ಮಗ ಕವಿನ್ ಅನ್ನು ಪರಿಚಯಿಸಿದರು. ಆ ಮಗುವು ನನ್ನ ಕಡೆಗೂ ಗಮನ ನೀಡದೇ ಹರೀಶ್ ಎಂದು ತನ್ನ ಕೆಲಸದಲ್ಲಿ ತೊಡಗಿತು. ಸಾಮಾಜಿಕತೆಯ ಒಳಗೆ ಮುಳುಗಿರುವ ನಮಗೆ ಇವೆಲ್ಲವು ಇರಿಸು ಮುರಿಸುಂಟಾಗುವಂತವು. ನಮ್ಮ ಮನೆಗಳಲ್ಲಿ ಯಾರಾದರೂ ಮನೆಗೆ ಬಂದರೆ ಅವರನ್ನು ಸರಿಯಾಗಿ ಮಾತನಾಡಿಸಿಲ್ಲವೆಂದರೆ ಯಾವ ಮಟ್ಟಗಿನ ಜಗಳವಾಗಬಹುದು ಅಲ್ಲವೇ? ಅಂತಹದ್ದರಲ್ಲಿ ಆ ಮಗು ಮನೆಗೆ ಯಾರು ಬಂದರೂ ಹೋದರೂ ನನಗೆ ಸಂಬಂಧವೇ ಇಲ್ಲವೆನ್ನುವಂತಿದ್ದರೆ?ಮನಸ್ಸಿಗೆ ಅದೆಷ್ಟು ನೋವಾಗುವುದಲ್ಲವೇ? ನಾನು ಹಾಗೆಯೇ ಸ್ವಲ್ಪ ಆಚೆ ಈಚೆ ಸುತ್ತಾಡಿದೆ. ಮಕ್ಕಳು ನೋಡುವುದಕ್ಕೆ ಸಾಮಾನ್ಯರಂತೆಯೇ ಇದ್ದಾರೆ, ಆದರೆ ಅಲ್ಪ ಸ್ವಲ್ಪ ಬೆಳವಣಿಗೆಯ ಕುಂಠಿತ, ಬೌತಿಕವಾಗಿ ಅಲ್ಲವೇ ಅಲ್ಲ, ಮಾನಸಿಕವಾಗಿ ಮಾತ್ರ.
ಮೊದಲ ಬಾರಿಗೆ ನೋಡಿದರೆ ನಮಗೇನು ಗೊತ್ತಾಗುವುದಿಲ್ಲ. ನಮ್ಮಂತೆಯೇ ಸಾಮಾನ್ಯರಾಗಿಯೇ ಕಾಣುತ್ತಾರೆ. ಕಾರ್ಯಕ್ರಮ ಶುರುವಾಗುವುದಕ್ಕೂ ಮುಂಚೆ ನಾನು ಒಳಗೆ ಹೋಗಿ ಕುಳಿತಿದ್ದೆ. ಬರುತ್ತಿದ್ದ ಮಕ್ಕಳನ್ನು ಗಮನಿಸುತ್ತಿರುವಾಗ, ಅವರ ತುಂಟತನ, ಮುಗ್ದತೆ, ಪೋಷಕರ ತಾಳ್ಮೆ ಹೆಮೆ ಎನಿಸಿತು. ತಾಯಂದಿರು ಹೇಳಿದ ಸ್ಥಳದಲ್ಲಿ ಮಕ್ಕಳು ಕೂರುವುದಕ್ಕೆ ಇಷ್ಟಪಡುತ್ತಿಲ್ಲ, ವೇದಿಕೆಯ ಮೇಲೆ ಓಡುತ್ತಾರೆ, ಜೋರಾಗಿ ಕೂಗುತ್ತಾರೆ, ಅಳುತ್ತಾರೆ, ನಗುತ್ತಾರೆ ಅವರದ್ದೇ ಪ್ರಪಂಚದಲ್ಲಿ ಅವರಿದ್ದಾರೆ. ಆ ಕ್ಷಣಕ್ಕೆ ನೆನಪಾಗಿದ್ದು ಮನಸಾರೆ ಸಿನೆಮಾದ ಹಾಡು “ನಾನು ಮನಸಾರೆ ನಗುವೇ, ನಗುವೇ”... ಕಾರ್ಯಕ್ರಮದ ಪ್ರಾರಂಭದಲ್ಲಿ ಒಂದು ಸಣ್ಣ ವೀಡಿಯೋ ತುಣುಕನ್ನು ಪ್ರದರ್ಶಿಸಲಾಯಿತು. ಆ ವಿಡಿಯೋ ನನ್ನನ್ನು ಹೊಸ ಪ್ರಪಂಚಕ್ಕೆ ಕರೆದೊಯ್ಯಿತೆಂದರೆ ತಪ್ಪಿಲ್ಲ. ನನಗೆ ಆಟಿಸಂ ಬಗ್ಗೆ, ಅದರಿಂದ ಬಳಲುತ್ತಿರುವ ಮಕ್ಕಳ ಬಗ್ಗೆ ವಿಶೇಷ ಕಾಳಜಿ ಮೂಡಿತೆಂದರು ತಪ್ಪಿಲ್ಲ. ನಾನು ಕೆಲವೊಮ್ಮೆ, ಸ್ವಲೀನತೆಯಿರುವ ಜನರನ್ನು ಹಿಯಾಳಿಸಿದ್ದೆನಾ? ಹಾಗೇನಾದರು ಮಾಡಿದ್ದರೆ ನಾನೆಂಥಹ ಘೋರ ಅಪರಾಧ ಮಾಡಿದ್ದೇನೆ ಎನಿಸಿತು. ಸ್ವಲೀನತೆಯ ಬಗ್ಗೆ ಇಲ್ಲಿ ಬರೆಯುವ ಅವಶ್ಯಕತೆಯಿಲ್ಲ, ಏಕೆಂದರೆ ನನ್ನ ಹಳೆಯ ಬರಹದಲ್ಲಿ ಅದರ ವಿವರಣೆಯನ್ನು ನೀಡಿದ್ದೆ. ಕಾರ್ಯಕ್ರಮದಲ್ಲಿ ಡ್ಯಾನ್ಸ್ ಇತ್ತು, ಅದೆಂತಹ ಅದ್ಬುತಾ ಪ್ರತಿಭೆಗಳು, ಹಾಡು ಹೇಳಿದರು. ಡಾ. ಸುಧಾ ಅವರ ಮಗ ಇಂಗ್ಲೀಷ್‍ನ ಒಂದು ಸಣ್ಣ ಕಥೆಯನ್ನು ವ್ಯಾಕನಿಸಿದ, ಅದ್ಬುತವೆನಿಸಿತು ನನಗೆ. ನಾನು ನಿಜಕ್ಕೂ ಕಳೆದು ಹೋದೆ. ಅದೆಂತಹ ಸೊಗಸಾಗಿ ಮೂಡಿ ಬಂತೆಂದರೆ, ವೇದಿಕೆಯ ಮೇಲೆ ಬಹಳ ಸರಾಳವಾಗಿ ಪದಗಳನ್ನು ಏರಿಳಿತದ ಮೂಲಕ ಪ್ರಸ್ತುತ ಪಡಿಸಿದನು.
ಒಂದೆರಡು ಮಕ್ಕಳು ಸ್ವಲ್ಪ ತುಂಟತನವನ್ನು, ಕೆಲವರು ನಾಚಿಕೆಯನ್ನು ತೋರ್ಪಡಿಸಿದರು. ಅವರ ತಂದೆ ತಾಯಂದರು ಸ್ವಲ್ಪವೂ ಕೋಪ ಮಾಡಿಕೊಳ್ಳದೇ ಅತಿವಿನಯದಿಂದ, ಪ್ರೀತಿಯಿಂದ ಅವರನ್ನು ಮುದ್ದಾಡಿಸಿದರು. ನನಗೆ ಅನಿಸಿದ್ದು ಆ ಮಟ್ಟದ ತಾಳ್ಮೆ, ಆ ಪ್ರೀತಿ, ಸಂಯಮ ಹೆಮ್ಮೆಯ ವಿಷಯ. ಸಂಗೀತದಲ್ಲಿ ಸಾಧನೆ ಮಾಡಿದವರು ಸ್ವಲೀನತೆಯಿಂದ ಬಳಲಿದ್ದರು ಎಂಬುದನ್ನು ನಂಬುವುದಕ್ಕೆ ಆಗಲಿಲ್ಲ. ನಾವು ನಮ್ಮ ಜೊತೆಯವರಿಗೆ ಸರಿಯಾದ ಪ್ರೀತಿ ನೀಡಿದರೆ ಎಂಥಹ ಅದ್ಬುತವನ್ನು ಬೇಕಿದ್ದರೂ ಸೃಷ್ಟಿಸಬಹುದೆಂಬುದಕ್ಕೆ ನಿನ್ನೆಯ ಕಾರ್ಯಕ್ರಮ ಉತ್ತಮ ಉದಾಹರಣೆ. ಎಲ್ಲರಲ್ಲಿಯೂ ಇದರ ಕುರಿತು ಜಾಗೃತಿಯ ಅನಿವಾರ್ಯತೆಯಿದೆ. ಆ ಹಾದಿಯಲ್ಲಿ ಸಾಗುತ್ತಿರುವ ಡಾ. ಸುಧಾ ತಂಡಕ್ಕೆ ಅಭಿನಂದನೆಗಳು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ