12 ಅಕ್ಟೋಬರ್ 2019

ಗುರುಪಾದ ಬೇಲೂರುರವರ ದೇವರಕಾಡಿನ ಸುತ್ತಾಮುತ್ತಾ ಮತ್ತು ಒಳಗೆ ಹೊರಗೆ!!!!

                                                      
ಸುಮಾರು ವರ್ಷವೇ ಆಗಿತ್ತು, ಕಥೆ ಕಾದಂಬರಿ ಓದಿ. ಬಹುಶಃ ಕೆ. ನಲ್ಲತಂಬಿಯವರು ಅನುವಾದಿಸಿದ್ದ ತಮಿಳಿನ ಕಥೆಗಳನ್ನು ಓದಿದ ನಂತರ ಬೇರಾವ ಪುಸ್ತಕಗಳನ್ನು ಓದಿರಲಿಲ್ಲ. ಅಷ್ಟರಮಟ್ಟಿಗೆ ಸೋಮಾರಿತನ ಸವಾರಿ ಮಾಡಿ ಗೆದ್ದಿದೆ. ಆಫೀಸಿನಲ್ಲಿ, ಹೀಗೆ ಸಹದ್ಯೋಗಿಗಳೊಂದಿಗೆ ಮಾತನಾಡುವಾಗ ನಮ್ಮ ಸಂಸ್ಥೆಯ ಮುಖ್ಯಸ್ಥರಾದ ಶ್ರೀಯುತ ಗುರುಪಾದಸ್ವಾಮಿಯವರ ಸಾಹಿತ್ಯಾಸಕ್ತಿ ಮತ್ತು ಸಾಹಿತ್ಯ ಕೃಷಿಯ ಬಗ್ಗೆ ಮಾತು ಬಂತು. ಶ್ರೀಯುತರು, ಸಂಸ್ಥೆಯ ಎಲ್ಲರಿಗೂ ಪುಸ್ತಕ ನೀಡಿ, ಇದನ್ನು ಓದಿ ಪ್ರತಿಕ್ರಿಯಿಸಿ ಎಂದು ಕೇಳಿದ್ದರೆಂದು. ಅವರು ಪುಸ್ತಕ ನೀಡುವ ಸಮಯದಲ್ಲಿ ನಾನಿಲ್ಲದೇ ಇದ್ದುದ್ದರಿಂದ ಪುಸ್ತಕ ಸಿಗಲಿಲ್ಲ. ಪುಸ್ತಕವನ್ನು ಯಾರಾದರೂ ಓದಿದ್ದಾರಾ? ಹೇಗಿದೆ? ಎಂದು ತಿಳಿದುಕೊಳ್ಳುವ ಕುತೂಹಲವೂ ಹೆಚ್ಚಾಯಿತು. ಹೀಗೆ ಪ್ರಯಾಣ ಮಾಡುವಾಗ ಮೊಬೈಲಿನಲ್ಲಿ ಲೇಖಕರ ವೆಬ್‍ಸೈಟ್ ನೋಡಿದೆ. ಕೆಲವು ಕವನಗಳು ಇಷ್ಟವಾದವು. ಅವರು ಬರೆದಿರುವ ಕಥೆಗಳನ್ನು ಯಾಕೆ ಓದಬಾರದೆಂದು ನಿರ್ಧರಿಸಿ, ಫೀಲ್ಡ್ ಇಂದ ಬಂದೊಡನೆ, ಭೇಟಿ ಮಾಡಿ, ಸರ್, ತಾವು ಬರೆದಿರುವ ಪುಸ್ತಕ ಬೇಕಿತ್ತು ಎಂದೆ. ಹೌದಾ? ಯಾವುದು? ಎಂದರು. ನನಗೆ ಪುಸ್ತಕದ ಹೆಸರೇ ಗೊತ್ತಿಲ್ಲ. ಸರಿ, ಇಲ್ಲಿ ಇಲ್ಲ, ನಾಳೆ ತಂದು ಕೊಡುತ್ತೇನೆಂದರು. ನಾನು ಹೊರಗೆ ಬಂದೆ. 

ಅವರ ರೂಮಿನಿಂದ ಹೊರಗಡೆ ಬಂದಮೇಲೆ, ನನ್ನ ದಡ್ಡತನವನ್ನು ಎಲ್ಲಾ ಕಡೆಯೂ ಪ್ರದರ್ಶಿಸುತ್ತಿರುವುದರ ಬಗ್ಗೆ ಕೋಪ ಬಂತು. ನಾನೊಬ್ಬ ಸಾಹಿತ್ಯಾಸಕ್ತನಾಗಿ ಪುಸ್ತಕ ಕೇಳಿದ್ದರೂ, ಪುಸ್ತಕದ ಹೆಸರೇ ತಿಳಿಯದೇ ಒಬ್ಬ ಲೇಖಕರನ್ನು ಕೇಳಿದ್ದು ಎಷ್ಟರ ಮಟ್ಟಿಗೆ ಸರಿ? ಇದು, ಸಾಹಿತ್ಯ ಪ್ರೇಮಿಯಾಗಿ ಲೇಖಕರಿಗೆ ಮಾಡಿದ ಅವಮಾನವೆಂಬ ಗೊರಗು ಕೂಡ ಬಂತು. ನನ್ನ ಬಗ್ಗೆ ಏನು ತಿಳಿದುಕೊಂಡರೋ ಏನೋ ಎಂದು ಕೊರಗಿದೆ. ಅದೇನೇ ಇರಲಿ, ನನಗೆ ಪುಸ್ತಕ ಬೇಕು, ಅವರು ಏನು ಬರೆದಿದ್ದಾರೆ? ಹೇಗೆ ಬರೆದಿದ್ದಾರೆಂಬುದನ್ನು ತಿಳಿದುಕೊಳ್ಳಬೇಕು, ಮುಖ್ಯವಾಗಿ ಒಬ್ಬ ವಿಜ್ಞಾನ ಹಿನ್ನಲೆಯವರು ಅದರಲ್ಲಿಯೂ ಇಂಜಿನಿಯರ್ ಆದವರು, ಸರ್ಕಾರಿ ಹುದ್ದೆಯಲ್ಲಿ ಎತ್ತರದ ಸ್ಥಾನದಲ್ಲಿರುವವರು, ಬರೆಯುವುದಕ್ಕೆ ಬಿಡುವು ಹೇಗೆ? ಯಾವ ವಿಚಾರದ ¨ಗ್ಗೆ ಹೀಗೆ ಕೆಲಸವಿಲ್ಲದ ತಲೆಯೊಳಗೆ ನೂರೆಂಟು ತರ್ಲೆಗಳು ಶುರುವಾದವು. ಇದಾದ, ಕೆಲವು ದಿನಗಳ ನಂತರ, ನೀವು ಪುಸ್ತಕ ಕೇಳಿದ್ದೀರಿ ಅಲ್ವಾ? ಮರೆತುಬಿಟ್ಟೆ ಎಂದರು. ಕೆಲಸದ ಒತ್ತಡದಲ್ಲಿ ನೆನಪಿನಲ್ಲಿಡಲು ಸಾಧ್ಯವೇ, ನಾನು ಸುಮ್ಮನಾದೆ. 
ಮೊನ್ನೆ, ನಮ್ಮ ಆಫೀಸಿನ ಅಕೌಂಟ್ಸ್ ವಿಭಾಗದ ಸತೀಶನ ಜೊತೆ ಮಾತನಾಡುತ್ತ ಯಾವುದೋ ಫೈಲ್ ನೋಡುವಾಗ, ದೇವರ ಕಾಡು ಅವರ ಡ್ರಾಯರ್ ಅಲ್ಲಿದ್ದದ್ದು ಕಣ್ಣಿಗೆ ಬಿತ್ತು. “ರೀ, ಸತೀಶ್ ಆ ಪುಸ್ತಕ ತೆಗಿರಿ” ಎಂದೆ. “ಇದಾ ಸಾರ್?”, “ಹೌದು, ಅದೇ.” ಓದುತ್ತಿರಾ ಸಾರ್? “ನೋಡೋಣ ಕೊಡಿ,” ಎಂದೆ. ಇಲ್ಲಿ ಮತ್ತೊಂದು ಪ್ರಮುಖ ವಿಷಯವನ್ನು ಹೇಳಬೇಕು. ನಾನು ಬಹಳ ಗಮನಿಸಿರುವುದು, ಅನೇಕಾ ಸಂಸ್ಥೆಗಳಲ್ಲಿ, ನಮ್ಮ ವೈಯಕ್ತಿಕ, ಆಸೆಗಳೇನು? ಹವ್ಯಾಸಗಳೇನು? ಎಂಬುದರ ಮಾಹಿತಿಯನ್ನು ನಾವು ಹಂಚಿಕೊಂಡಿರುವುದಿಲ್ಲ, ಅವರು ಕೇಳಿರುವುದಿಲ್ಲ. ನನ್ನದೇ ವಿಚಾರವನ್ನು ಹೇಳಬೇಕೆಂದರೂ, ನನ್ನ ಸಾಹಿತ್ಯಾಸಕ್ತಿ, ನಾಟಕ, ಸಿನೆಮಾ, ಪ್ರವಾಸ, ಚಾರಣ, ಫೋಟೋಗ್ರಫಿ, ಸಂಗೀತ, ಜಾನಪದ, ಇತ್ಯಾದಿ ಇತ್ಯಾದಿ ಇದಾವುದೂ ತಿಳಿದಿಲ್ಲ ಅಥವಾ ತಿಳಿಸುವ ಅವಕಾಶವೂ ಸಿಕ್ಕಿರುವುದಿಲ್ಲ. ಇರಲಿ ವಿಷಯಕ್ಕೆ ಬರೋಣ. ಪುಸ್ತಕವನ್ನು ತಂದು ಮನೆಯಲ್ಲಿ ಓದಲು ಕುಳಿತೆ, ಹಿಂದಿನ ದಿನ ಹಬ್ಬದ ಪ್ರಯಾಣ, ಆಯಾಸದಿಂದಾಗಿ ಓದಲಾಗಲಿಲ್ಲ. ನಿದ್ದೆ ಹತ್ತಿತು. 

ಮಾರನೆಯ ದಿನ ಪುಸ್ತಕ ತೆಗೆದೆ. ನನ್ನದೊಂದು ಕೆಟ್ಟ ಅಭ್ಯಾಸವೆಂದರೇ, ಪುಸ್ತಕ ಓದಿಸಿಕೊಳ್ಳುವಂತಿದ್ದರೇ ಮಾತ್ರ ಓದುವುದು. ಇಲ್ಲದಿದ್ದರೇ ಬದಿಗಿಡುವುದು. ಇದು ಎಲ್ಲರಿಗೂ ಹೌದು ಎನಿಸುತ್ತದೆ. ಮೊದಲೇ ಹೇಳಿದಂತೆ, ನಾನು ಓದುವುದನ್ನೇ ಮರೆತು ಬಿಟ್ಟೆ ಎನ್ನುವ ಹಂತಕ್ಕೆ ತಲುಪಿದ್ದೇನೆ. ಈ ಪುಸ್ತಕ ಸುಮಾರು 190 ಪುಟಗಳಿವೆ, ಎಷ್ಟು ದಿನವಾಗಬಹುದು? ನೆಚ್ಚೆನ ಲೇಖಕರ ಪುಸ್ತಕಳನ್ನು ಕೂತಲ್ಲಿಂದ ಏಳದೇ ಓದಿದ ದಿನಗಳಿವೆ, ಸತತವಾಗಿ 10-12 ಗಂಟೆಗಳ ಕಾಲ ಅಲ್ಲಾಡದೇ ಓದಿದ ದಿನಗಳಿವೆ. ತೇಜಸ್ವಿಯವರ ಬಹುತೇಕ ಪುಸ್ತಕಗಳು ಅದರಲ್ಲಿಯೂ ಜುಗಾರಿ ಕ್ರಾಸ್, ಕಾರಂತರ ಮರಳಿ ಮಣ್ಣಿಗೆ, ಮೂಕಜ್ಜಿಯ ಕನಸುಗಳು, ಅಳಿದ ಮೇಲೆ, ಹುಚ್ಚು ಮನಸ್ಸಿನ ಹತ್ತು ಮುಖಗಳು, ಕುವೆಂಪುರವರ ಮಲೆನಾಡಿನ ಚಿತ್ರಗಳು, ಹೆಗ್ಗಡತಿ, ಮದುಮಗಳು, ಭೈರಪ್ಪರವರ ದೂರ ಸರಿದರು, ದಾಟು, ರವಿ ಬೆಳಗೆರೆಯವರ ಹೇಳಿ ಹೋಗು ಕಾರಣ, ಯಂಡಮೂರಿಯವರ ಮುಂಗಾರಿನ ಮುಸ್ಸಂಜೆ, ಖುಷ್ವಂತ್ ಸಿಂಗ್‍ರ ದಿ ಕಂಪೆನಿ ವಿತ್ ವುಮೆನ್, ಟ್ರೈನ್ ಟು ಪಾಕಿಸ್ತಾನ್, ತರಾಸುರವರ ದುರ್ಗಾಮಸ್ತಾನ, ಹೀಗೆ ಹತ್ತು ಹಲವು ಇವೆ. ಹೊಸಬರ ಪುಸ್ತಕಗಳನ್ನು ಓದುವಾಗ ಅದೇನೋ ಒಂದು ರೀತಿಯ ಅಳುಕು ಬರುತ್ತದೆ. ನಾವೇನೂ ಬರೆದಿರುವುದಿಲ್ಲ, ಆದರೂ ಅವರೇನೂ ಬರೆದಿರುತ್ತಾರೆ ಮಹಾ ಎಂಬಂತೆ. ಆದರೂ, ಈ ಪುಸ್ತಕ ಬಹಳ ಚೆನ್ನಾಗಿಯೇ ಓದಿಸಿಕೊಂಡು ಹೋಯಿತು, ಸುಮಾರು 190 ಪುಟಗಳನ್ನು, ಕೇವಲ 5-6 ಗಂಟೆಗಳಲ್ಲಿ ಎರಡು ಹಂತಗಳಲ್ಲಿ ಓದಿ ಮುಗಿಸಿದೆ. 

ಪುಸ್ತಕದ ಮುನ್ನುಡಿಯನ್ನು ನೋಡಿದೆ. ಕೆಲವರು ಮಾತ್ರ ಪುಸ್ತಕವನ್ನು ಸಂಪೂರ್ಣವಾಗಿ ಗ್ರಹಿಸಿ ಅದಕ್ಕೆ ತಕ್ಕನಾಗಿ ಬರೆದಿರುತ್ತಾರೆ. ನಾನು ಬಹಳ ಪ್ರಮುಖವಾದ ವಿಷಯವನ್ನು ತಮ್ಮ ಮುಂದಿಡುತ್ತಿದ್ದೇನೆ. ನಾನು ಈ ತನಕ ಹತ್ತಾರು ಪುಸ್ತಕಗಳನ್ನು ಓದಿದ್ದರೂ, ಯಾವುದಕ್ಕೂ ವಿಮರ್ಶೆ ಬರದಿಲ್ಲ. ನನಗೆ ತಿಳಿದ ಅಥವಾ ಅನಿಸಿದ್ದನ್ನು ನನ್ನ ಸ್ನೇಹಿತರ ಜೊತೆಯಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದೇನೆ. ಬಹುತೇಕ, ನುಡಿಗಳು ಹೀಗಿರುತ್ತವೆ “ಓದಲೇ ಬೇಕಾದ ಕೃತಿ”, ಮಿಸ್ ಮಾಡಿಕೊಳ್ಳಬೇಡಿ ಎಂದು. ಆದರೇ, ಈ ಪುಸ್ತಕದ ಕುರಿತು ಸ್ವಲ್ಪ ಹೆಚ್ಚಿಗೆ ಮಾತನಾಡೋಣ ಎನಿಸಿತು. ಅದಕ್ಕೆ, ಮೂಲ ಕಾರಣ, ಲೇಖಕರು ನಮ್ಮ ಮುಖ್ಯಸ್ಥರೆಂಬುದು ಒಂದಾದರೇ, ಬರವಣಿಗೆಯ ಹಿಂದಿರುವ ಉದ್ದೇಶ ಮತ್ತೊಂದು. ಪುಸ್ತಕದಲ್ಲಿ, ಐದು ಕಥೆಗಳಿವೆ. ದೇವರ ಕಾಡು, ಡಾಲರ್ ಸಿಕ್ಕಿದ ಕಥೆ, ಅನಂತ, ಹೊನ್ನಂಗಿಡಿ, ಮಿಂಚಿನಬಳ್ಳಿ. ನಾನು ಗಮನಿಸಿದ ಒಂದಿಷ್ಟು ಅಂಶಗಳನ್ನು ತಮ್ಮ ಮುಂದಿಡುತ್ತಿದ್ದೇನೆ. ಇದನ್ನು ಎರಡು ರೀತಿಯಲ್ಲಿ ಹೇಳಬಹುದು, ಒಂದು ಒಟ್ಟಾರೆಯಾಗಿ ಲೇಖಕರು ಯಾವ ಹಿನ್ನಲೆಯಲ್ಲಿ, ಏನನ್ನು ಹೇಳಲು ಬಯಸಿದ್ದಾರೆ? ಮತ್ತೊಂದು, ಒಂದೊಂದು ಕಥೆಯಲ್ಲಿಯೂ ಯಾವುದೆಲ್ಲ ಅಂಶಗಳನ್ನು ನಮಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದಾರೆ. 

ನಾನು ಎರಡೂ ರೀತಿಯಲ್ಲಿಯೂ, ವಿವರಿಸಲು ಪ್ರಯತ್ನಿಸುತ್ತೇನೆ, ಒಟ್ಟಾರೆಯಾಗಿ ಹೇಳಬೇಕೆಂದರೇ, ಲೇಖಕರು ಪರಿಸರದ ಜೊತೆಗೆ ಸಹಭಾಳ್ವೆಯಿರಬೇಕೆಂಬುದನ್ನು ಮತ್ತು ಪ್ರಕೃತಿಯಲ್ಲಿ ಸಮತೋಲನ ಕಾಪಾಡುವ ಕಾರ್ಯ ನಿರಂತರವಾಗಿದೆ, ನಾವು ಹಿರಿಯರಿಂದ ಬಂದಿರುವುದನ್ನು ಮುಂದುವರೆಸುತ್ತಾ ಹೋಗಬೇಕೇ ಹೊರತು, ಪ್ರಕೃತಿಯನ್ನೇ ಬದಲಾಯಿಸುತ್ತೇನೆಂದಲ್ಲ ಎಂಬ ತರ್ಕವನ್ನು ಅಚ್ಚುಕಟ್ಟಾಗಿ ಬಿಂಬಿಸಿದ್ದಾರೆ. ಅದರ ಜೊತೆಗೆ, ಪ್ರೀತಿಯನ್ನು ಹಂಚಬೇಕೆಂಬುದು, ಪ್ರೀತಿ ಹಂಚಿದಷ್ಟೂ ಹೆಚ್ಚೆಚ್ಚೂ ಸಿಗುತ್ತದೆಯೆಂಬುದನ್ನು ತಿಳಿಸಿದ್ದಾರೆ. ಅಚ್ಚರಿಯ ವಿಷಯವೆಂದರೇ, ಮೊದಲನೇ ಕಥಾಸಂಕಲನದಲ್ಲಿ ಐದು ಕಥೆಗಳು ವಿಭಿನ್ನಾ ಮಾದರಿಯಲ್ಲಿರುವುದು. 

ದೇವರ ಕಾಡಿನಲ್ಲಿ, ಸಾಹಸಮಯ, ಸಮಾಜಮುಖಿಯ ಆಶಯಗಳಿದ್ದರೆ. ಡಾಲರ್ ಸಿಕ್ಕ ಕಥೆಯಲ್ಲಿ, ಹಾಸ್ಯಪ್ರಜ್ಞೆ ಎದ್ದು ಕಾಣುತ್ತದೆ, ಹಾಸ್ಯದಿಂದಲೇ ನೀತಿಯನ್ನು ರವಾನಿಸಿರುವುದು ಮೆಚ್ಚುಗೆಯಾಗುತ್ತದೆ. ಅನಂತದಲ್ಲಿ ವೈಜ್ಞಾನಿಕತೆಯ ಜೊತೆಗೆ ಸಾಂಪ್ರಾದಾಯಿಕತೆಯನ್ನು ಜೋಡಿಸಿರುವ ರೀತಿ ಅಚ್ಚರಿಯ ಜೊತೆಗೆ ಯಾವುದೋ ಬೇರೆ ಜಗತ್ತಿನಿಂದ ಭೂಮಿಯನ್ನು ನೋಡುವ ಕಾಲ್ಪನಿಕ ಜಗತ್ತನ್ನು ಕೊಡುತ್ತದೆ. ಹೊನ್ನಂಗಿಡಿ, ನಮ್ಮ ಬಾಲ್ಯವನ್ನು, ನಮ್ಮ ಸಂಸ್ಕøತಿ, ಸಂಪ್ರದಾಯವನ್ನು ಸೂಚಿಸಿ, ಭಾವನಾತ್ಮಕತೆಗೆ ದೂಡುತ್ತದೆ. ಕೊನೆಯದಾಗಿ, ಮಿಂಚಿನಬಳ್ಳಿ ಸಸ್ಪೆನ್ಸ್ ಕಥೆಯೆಂದರೂ ತಪ್ಪಿಲ್ಲ, ಜಿಎಂ, ಬಿಟಿ ವಿಚಾರಗಳನ್ನು ಇಟ್ಟುಕೊಂಡು ಅಲ್ಲೊಂದು ನಿಗೂಢತೆಯನ್ನು ಕಾಪಾಡುತ್ತಾ ಹೋಗುವುದು ಓದುಗನನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದೆಲ್ಲದರ ಹಿಂದಿರುವ ಪರಿಸರ ಕಾಳಜಿಗೆ ಧನ್ಯವಾದಗಳು. ಓದಲೇಬೇಕಾದ ಪುಸ್ತಕವೆನ್ನುವುದಕ್ಕಿಂತ ಬೇರೆ ಆಯಾಮದಲ್ಲಿ ಮಂಡನೆಯಾಗಿರುವುದು ಸಂತಸ. ತಮ್ಮ ಮುಂದಿನ ಎಲ್ಲಾ ಸಾಹಿತ್ಯ ಕೃಷಿಗಳಿಗೂ ಶುಭವಾಗಲಿ ಸರ್. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...