
ನಮ್ಮ ಆಲೋಚನೆಗಳು ನಮ್ಮನ್ನು ಕಾಡಿದಷ್ಟು, ತಿದ್ದಿದಷ್ಟು, ತೀಡಿದಷ್ಟು ಮತ್ತಾವುದೂ ನಮ್ಮನ್ನು ಕಾಡುವುದಿಲ್ಲ. ಜೀವನದ ಪಯಣದಲ್ಲಿ ಯಾವುದು ಸರಿ, ಯಾವುದು ತಪ್ಪು, ಎಡವಿದ್ದೆಲ್ಲಿ? ಬಿದ್ದಿದ್ದೆಲ್ಲಿ? ಬಿದ್ದೇನಾ? ಎದ್ದೇನಾ? ಬಿದ್ದರೇ ಎಲ್ಲಿ ಬಿದ್ದೆ? ಯಾರು ಬೀಳಿಸಿದರು? ಎದ್ದರೇ ಯಾರು ಎತ್ತಿದರು? ಹೀಗೆ ನೂರೆಂಟು ಆಲೋಚನೆಗಳು ನಮ್ಮೊಳಗೆ ಹರಿದಾಡುತ್ತಿರುತ್ತವೆ. ಎಲ್ಲರಿಗೂ ಈ ರೀತಿಯಾಗಿ ಕಾಡುತ್ತದೆಯೇ? ನನ್ನನಿಸಿಕೆ ಪ್ರಕಾರ ಹೌದು. ಆದರೇ, ಎಲ್ಲರೂ ತಮ್ಮನ್ನು ಮುಕ್ತವಾಗಿ ವಿಮರ್ಶೆಗೆ ಒಳಪಡಿಸಿಕೊಳ್ಳುತ್ತಾರೆಯೇ? ಎಂದರೆ ಅದಕ್ಕೆ ನನ್ನ ಉತ್ತರ, ಇಲ್ಲಾ ಸಾಧ್ಯವೇ ಇಲ್ಲ. ನಾನು ಆಗ್ಗಾಗ್ಗೆ, ಪ್ರತಿಪಾದಿಸುವ ಒಂದು ವಿಚಾರವೆಂದರೇ, ಮೊದಲು ನಮಗೆ ನಾವು ಬೆತ್ತಲಾಗಬೇಕು. ಮಡಿವಂತಿಕೆಯ ಸೋಗಿನಿಂದ, ಒಳ್ಳೆತನವೆಂಬ ಅಫೀಮಿನಿಂದ ಹೊರಬರಬೇಕು. ನಾವು ಏನು ಎನ್ನುವುದನ್ನು ನಾವು ಮೊದಲು ಅರಿಯಬೇಕು. ಒಳ್ಳೆಯದು ಕೆಟ್ಟದ್ದು ಎಂಬುದರ ಬಗ್ಗೆ ನನಗೆ ಅಷ್ಟು ಆಸಕ್ತಿಯಿಲ್ಲ. ಇದನ್ನು ನಾನು ಬಹಳಷ್ಟು ಬಾರಿ ಪ್ರಯೋಗಿಸಿದ್ದೇನೆ. ಒಬ್ಬನಿಗೆ ಸರಿಯೆನಿಸಿದ್ದು, ಮತ್ತೊಬ್ಬನಿಗೆ ತಪ್ಪೆನಿಸಬಹುದು. ಇದು ಎಲ್ಲಾ ಹಂತದಲ್ಲಿಯೂ ಹೌದು. ಮಾಂಸಹಾರಿಗೆ ಇಷ್ಟವಾಗುವ ಖಾದ್ಯ, ಸಸ್ಯಹಾರಿಗೆ ಹಿಂಸೆಯೆನಿಸಬಹುದು, ಕೆಲವರಿಗೆ ದೈಹಿಕ ಹಿಂಸೆ ಮಾತ್ರ ಹಿಂಸೆಯೆನಿಸುತ್ತದೆ, ಮಾನಸಿಕ ಹಿಂಸೆ ಏನೂ ಅನಿಸದೆ ಇರಬಹುದು. ಅದು ಅವರವರ ವಿವೇಚನೆಗೆ ಬಿಟ್ಟದ್ದು.
ನಮ್ಮೊಳಗೆ ನಡೆಯುವ ವಿದ್ಯಮಾನಗಳನ್ನು ನಾವು ಗ್ರಹಿಸಬೇಕು. ಏನು ನಡೆಯಿತ್ತಿದೆಯೆಂಬುದನ್ನು ಅರಿಯಬೇಕು. ಇತ್ತೀಚಿನ ದಿನಗಳಲ್ಲಿ ಗಮನಿಸಿದರೆ, ಅಯ್ಯೋ ಟೈಮ್ ಎಲ್ಲಿದೆ ಸಾರ್, ಎನ್ನವವರೇ ಹೆಚ್ಚು. ಬಿಟ್ಟರೇ, ನಮ್ಮ ಹಣೆಬರಹ, ಟೈಮ್ ಎಂದು ಕೈ ಚೆಲ್ಲವವರಿಗೇನೂ ಕಡಿಮೆಯಿಲ್ಲ. ನಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಲಾಗದೇ ಕಂಗೆಟ್ಟವರು ಮಾತ್ರ ಇದೆಲ್ಲವನ್ನೂ ಹೇಳಬಹುದು. ಕುಡಿತಕ್ಕೆ ದಾಸ್ಯನಾದವನು, ಕುಡಿತವನ್ನು ಕೆಟ್ಟದ್ದು ಎನ್ನಲಾರ, ಅಥವಾ ನಾನು ಕಲಿತು ನನ್ನ ಆರೋಗ್ಯ, ಜೀವನ ಹಾಳಾಗುತ್ತಿದೆ ಎನ್ನುವುದನ್ನು ಒಪ್ಪಲಾರ. ನಾನು ದುಡಿಯುತ್ತೇನೆ, ನಾನು ಕುಡಿಯುತ್ತೇನೆ? ಹೋದರೇ ನನ್ನ ಕಿಡ್ನಿ, ನನ್ನ ಲಿವರ್, ನಾನು ಬೇರೋಬ್ಬರ ದುಡ್ಡಲ್ಲಿ ಕುಡಿದಿಲ್ಲ ಎಂದು ವಾದಿಸುತ್ತಾನೆ. ನಾವು ನಮ್ಮ ತಪ್ಪನ್ನು ಮುಚ್ಚಿಡಲು, ನಾವು ಸರಿಯೆನಿಸಿಕೊಳ್ಳಲು ಬೇರೆಯವರನ್ನು ತಪ್ಪಿತಸ್ಥರನ್ನಾಗಿಸಲು ಪ್ರಯತ್ನಿಸುತ್ತೇವೆ.
ಕಾರಣವಿಲ್ಲದ ಬದುಕೆಲ್ಲಿದೆ? ಕಾರಣವಿಲ್ಲದೆ ಇರಲು ಸಾಧ್ಯವೇ? ಮುಂಜಾನೆ ಬೇಗ ಏಳದೆ ಇರುವುದಕ್ಕೆ ಕಾರಣವಿದೆ, ಕಚೇರಿಗೆ ಲೇಟಾಗಿ ಬರುವುದಕ್ಕೆ ಕಾರಣವಿದೆ. ಕುಡಿಯುವುದಕ್ಕೆ ಸೇದುವುದಕ್ಕೆ ಕಾರಣವಿದೆ. ಸ್ನಾನ ಮಾಡದೇ ಗಲೀಜಾಗಿರುವುದಕ್ಕೂ ಇದೆ. ಮಾಡುವ ಕೆಲಸ ನನ್ನದು, ನಾನು ಮಾಡಲೇಬೇಕೆಂಬ ದೃಢಕಲ್ಪನೆಯೊಂದಿದ್ದರೆ ಈ ಕಾರಣಗಳ ಸರಮಾಲೆ ಹತ್ತಿರವೂ ಸುಳಿಯುವುದಿಲ್ಲ. ನಾನು ನನ್ನನ್ನು ಅತಿಯಾಗಿ ವಿಮರ್ಶೆಗೆ ಒಳಪಡಿಸಿಕೊಳ್ಳುತ್ತೇನೆ. ಕಾರಣ ಸರಳ. ನಾನು ನನ್ನಲ್ಲಾಗುತ್ತಿರುವ ಬದಲಾವಣೆಯನ್ನು ಗಮನಿಸಿದರೆ, ನನ್ನ ಚಿತ್ತ ನನ್ನ ಪ್ರಗತಿಯತ್ತ ಸಾಗುತ್ತದೆ. ಎಷ್ಟೋ ದೂರ ಪಯಣಿಸಿದ ಮೇಲೆ, ನಾನು ದಾರಿ ತಪ್ಪಿದೆಯೆಂದರೇ! ಅಥವಾ ನೀ ಹೋಗುತ್ತಿರುವ ಹಾದಿ ತಪ್ಪೆಂದು ಬೇರೆಯವರು ಹೇಳಿದರೇ ಒಪ್ಪುತ್ತೇವಾ? ಸಾಧ್ಯವೇ ಇಲ್ಲ.
ದಿನ ಕಳೆದಂತೆ ನಮ್ಮ ಆಸಕ್ತಿಗಳು, ಹವ್ಯಾಸಗಳು ನಮ್ಮಿಂದ ದೂರಾಗುತ್ತವೆ. ಕೆಲಸದ ಒತ್ತಡ, ದುಡಿಮೆ, ಮನೆ, ಸಂಸಾರ ಹೀಗೆ ಏನೇನೋ ಸಮಜಾಯಿಸಿ ಕೊಡುತ್ತೇವೆ. ನನ್ನದೇ ಉದಾಹರಣೆ ಕೊಡುವುದಾದರೇ, ಕಳೆದ ಒಂದೆರೆಡು ವರ್ಷದಲ್ಲಿ, ನಾನು ಓದಿದ್ದು ಕಡಿಮೆ, ಬರೆದಿದ್ದಂತೂ ಶೂನ್ಯ, ನನ್ನ ಹವ್ಯಾಸವೆಂದು ತಿಳಿದಿದ್ದು, ಫೋಟೋಗ್ರಫಿ, ನಾಟಕ ನೋಡುವುದು, ಸುತ್ತಾಡುವುದು, ಚಾರಣ, ಸಂಗೀತ, ಪ್ರವಾಸ, ಇವೆಲ್ಲವೂ ಮಾಯವಾಗಿವೆ. ಮುಂಜಾನೆ ಏಳುವುದು, ಆಫೀಸಿಗೆ ಹೋಗುವುದು ಬರುವುದು, ಅದೇ ಚರ್ಚೆ, ಅದೇ ಮಾತುಕತೆ, ಸಂಪೂರ್ಣವಾಗಿ ದಿನಪತ್ರಿಕೆ ಓದಿಯೇ ಎಷ್ಟೋ ದಿನಗಳಾಗಿವೆ, ಸ್ನೇಹಿತರೊಡನೆ ಕುಳಿತು ಹರಟೆ ಹೊಡೆದು ಮನಸ್ಸಾರೆ ನಕ್ಕಿ ಎಷ್ಟೋ ದಿನಗಳಾಗಿವೆ. ಇವೆಲ್ಲವೂ ರಾತ್ರೋರಾತ್ರಿ ಆದ ಬೆಳವಣಿಗೆಗಳಲ್ಲ, ಬೆಳೆಯುತ್ತ ಬೆಳೆಯುತ್ತ ಬಂದವುಗಳು. ಯಾಂತ್ರಕತೆಯ ಬದುಕು ನಮ್ಮದಾದಾಗ ಜೀವನದ ಮೇಲೆ ತಾತ್ಸಾರ ಮೂಡುತ್ತದೆ. ಇನ್ನೇನು ಬದುಕು ಮುಗಿಯಿತು ಎನಿಸುತ್ತದೆ. ನಕರಾತ್ಮಕತೆ ನಮ್ಮನ್ನು ಆಳುತ್ತದೆ. ಕ್ರಿಯಾತ್ಮಕತೆಗೆ ಹಾದಿಯೇ ಇರುವುದಿಲ್ಲ. ಇದ್ದರೂ ಯೋಚಿಸುವುದಿಲ್ಲ.
ಇದೆಲ್ಲವುದಕ್ಕೂ ಪರಿಹಾರವೇನು? ವಯಸ್ಸಾದಂತೆ ನಮಗೆ ಕಾಡುವ ಮತ್ತೊಂದು ಯೋಚನೆಗಳು ಹೀಗಿರುತ್ತವೆ. ಮೊದಲನೆದಾಗಿ, ನಾವು ಕಳೆದ ದಿನಗಳು ಮತ್ತು ಸಂಪನ್ಮೂಲಗಳು. ಎರಡನೆಯದು, ನಾವು ಪಡೆದ ಲಾಭ ನಷ್ಟ. ನನ್ನ ಸ್ವಂತ ಅನುಭವವನ್ನು ಇಲ್ಲಿಡುತ್ತೇನೆ. ನಾನು ಕನಿಷ್ಟ ಮೂರು ತಿಂಗಳಿಗೊಮ್ಮೆ ನನ್ನ ಮೊಬೈಲಿನಲ್ಲಿರುವ ಎಲ್ಲರಿಗೂ ಫೋನ್ ಮಾಡಿ ಅಥವಾ ಸಂದೇಶ ಕಳುಹಿಸಿ, ಹೇಗಿದ್ದೀರಿ, ಸುಮ್ಮನೆ ಕರೆ ಮಾಡಿದೆ ಅಂತಾ ಮಾಡುತ್ತಿದ್ದೆ. ಸ್ನೇಹಿತರ ಯೋಗ ಕ್ಷೇಮ ವಿಚಾರಿಸುವ ಕ್ರಮವಾಗಿತ್ತು. ನಾನು ಯಾವುದೇ ಹೊರ ಊರಿಗೆ ಹೋದರೇ, ಅಲ್ಲಿ ಯಾವ ಸ್ನೇಹಿತರಿದ್ದಾರೆ, ಅವರನ್ನು ಮಾತನಾಡಿಸುವುದು, ಜೊತೆಗೆ ಕೂತು ಊಟ ಮಾಡುವುದು ಸಾಮಾನ್ಯವಾಗಿತ್ತು. ಇತ್ತೀಚೆಗೆ, ನನ್ನೊಳಗೆ ಆದ ಬದಲಾವಣೆ, ನಾನು ಕರೆ ಮಾಡ್ತೀನಿ, ಕೇಳ್ತೀನಿ, ಅವರುಗಳು ಯಾರೊಬ್ಬರೂ ಮಾಡುವುದಿಲ್ಲವಲ್ಲ. ನೋಡೋಣ, ನಾನು ಮಾಡುವುದೇ ಬೇಡವೆಂದು ತೀರ್ಮಾನಿಸಿದೆ. ಸುಮಾರು 95% ಸ್ನೇಹಿತರು ಕಳೆದ ಒಂದು ವರ್ಷಕ್ಕಿಂತಲೂ ಹೆಚ್ಚನಿಂದ ನನಗೆ ಕರೆಯೇ ಮಾಡಿಲ್ಲ, ಬಿಡುವಿಲ್ಲದೇಯೂ ಇರಬಹುದು. ನಾನು ಈವರೆಗೂ ಭಾವನಾತ್ಮಕವಾಗಿ ಸ್ನೇಹಿತರಿಗಾಗಿ ಪರದಾಡಿದ್ದು ತಪ್ಪಾ? ನನ್ನ ಅನುಪಸ್ಥಿತಿ ಅವರಿಗೆ ಕಾಡುವುದಿಲ್ಲವೇ ಹೀಗೆ ಆಲೋಚನೆಗಳು ಹರಿದಾಡಿದವು.
ಪ್ರತಿಯೊಬ್ಬರಿಗೂ ತಮ್ಮದೇ ಆದ ಆದ್ಯತೆಗಳಿರುತ್ತವೆ. ನಾವು ಯಾವುದನ್ನು ಯಾರ ಮೇಲೂ ಹೇರಬಾರದು ಮತ್ತು ನಿರೀಕ್ಷಿಸಲೂ ಬಾರದು. ನಮ್ಮ ಆತ್ಮಕ್ಕೆ ಮನಸ್ಸಿಗೆ ತೃಪ್ತಿಕೊಡಬೇಕು. ಮನಸ್ಸು ಮತ್ತು ಮೆದುಳಿಗೆ ಆಗ್ಗಾಗ್ಗೆ ಆಹಾರ ಕೊಡುತ್ತಿರಬೇಕು. ಮೆದುಳಿಗೆ ಆಹಾರವೆಂದರೆ, ಹೊಸ ಪುಸ್ತಕ, ಹೊಸ ಜನರ ಭೇಟಿ, ಮಾಹಿತಿಗಳು. ಮನಸ್ಸಿಗೆಯೆಂದರೆ, ಪ್ರೀತಿ ಪಾತ್ರರೊಂದಿಗೆ ಸಮಯ, ಹವ್ಯಾಸಗಳು. ಯಾವುದನ್ನು ಹೆಚ್ಚು ಅಂತರವಿರುವಂತೆ ಮಾಡಬಾರದು. ನಮ್ಮ ಹಾದಿಯನ್ನು ನಾವು ಆಗ್ಗಾಗ್ಗೆ ಪರೀಕ್ಷಿಸಿಕೊಳ್ಳುತ್ತಿರಬೇಕು. ಆ ಹಾದಿಯಲ್ಲಿ ಮತ್ತೊಮ್ಮೆ ಹೆಜ್ಚೆ ಇಟ್ಟಿದ್ದೇನೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ