26 ಏಪ್ರಿಲ್ 2020

ಅನ್ಯರನ್ನಲ್ಲ, ನಮ್ಮವರನ್ನೇ ದೂರುವ ಚಟ!



ಈ ಲೇಖನ ಸಂಪೂರ್ಣವಾಗಿ ನನ್ನ ಅನುಭವದ್ದು, ನನ್ನವರೇ ಎನಿಸಿದ ಸ್ನೇಹಿತರ, ನಡುವಳಿಕೆಗಳನ್ನು ಕಂಡು ಬೇಸರವಾಗಿ, ಬಹಳ ವರ್ಷಗಳಿಂದಲೂ ತಡೆಹಿಡಿದಿದ್ದನ್ನು ಇಂದು ಬರೆಯುತ್ತಿದ್ದೇನೆ. ಅವರೆಲ್ಲರೂ ಇದನ್ನು ಓದುತ್ತಾರೆಂಬ ನಂಬಿಕೆಯಿಲ್ಲ, ಏಕೆಂದರೇ ಅವರಲ್ಲಿ ಅನೇಕರನ್ನು ಅವರ ಸ್ಥಾನವನ್ನು ತೋರಿಸಿ ಅಲ್ಲಿಯೇ ಇರಿಸಿದ್ದೇನೆ. ಆದರೂ, ನಿಮ್ಮ ಬದುಕಿನಲ್ಲಿಯೂ ಇಂತಹವರು ಇರುತ್ತಾರೆಂಬ ನಂಬಿಕೆ ಅವರಿಂದ ಎಚ್ಚರಿಕೆಯಿಂದಿರಿ ಎನ್ನುವ ಒಂದು ಸೂಚನೆಗಷ್ಟೆ.

ಶೀರ್ಷಿಕೆ ನೋಡಿ, ಅನಿಸುತ್ತಿರಬಹುದು, ಇದೆಂತಹ ಚಟವಪ್ಪಾ? ಹೀಗೂ ಒಂದು ಇದ್ಯಾ? ಇರಬಹುದು. ಕಾಲ ಕೆಟ್ಟಿದೆ, ಅಂತಾ ಸಮಾಧಾನ ಮಾಡಿಕೊಂಡು ಮುಂದಕ್ಕೆ ಓದಬೇಕು. ಕೆಲವರಿಗೆ ಒಂದು ಚಾಳಿಯಿರುತ್ತದೆ. ನೀವು ಗಮನಿಸಿ ನೋಡಿ. ಅವರಿಗೆ ಯಾರನ್ನಾದರೂ ದೂರುತ್ತಿರಬೇಕು, ಚಾಡಿ ಹೇಳುತ್ತಿರಬೇಕು, ದೂಷಿಸಬೇಕು. ಇದು ಯಾವ ರೀತಿ ಎಂದರೇ, ನಮ್ಮಲ್ಲಿ ಮದ್ದು ಹಾಕುವುದು ಅಂತಾ ಒಂದು ನಂಬಿಕೆಯಿದೆ. ಅದರ ಬಗ್ಗೆ ತಿಳಿಯದೇ ಇರುವವರಿಗೆ ಒಂದಿಷ್ಟು ವಿವರಣೆಯ ಅವಶ್ಯಕತೆಯಿದೆ. ಜೀವಂತವಾಗಿರುವ ಗೋಸುಂಬೆಯನ್ನು ಹಿಡಿದು, ತಂದು, ಅಡುಗೆಮನೆಯಲ್ಲಿ, ಒಲೆಯ ಮೇಲೆ ದೋಸೆ ಹರಲೆಯನ್ನು (ತವಾ/ಪಾನ್) ಇಟ್ಟು ಅದರ ನೇರಕ್ಕೆ ಮೇಲೆ ತಲೆಕೆಳಕ್ಕೆ ಮಾಡಿ ನೇತಾಕುತ್ತಾರೆ. ಅದರ ಬಾಯಿಂದ ರಕ್ತಸ್ರಾವವಾಗಿ, ಹನಿಗಳು ಹರಲೆಯ ಮೇಲೆ ಬೀಳುತ್ತವೆ. ಬಿದ್ದ ಹನಿಗಳು, ಸಣ್ಣ ಗುಳಿಗೆಯಾಗುತ್ತವೆ. ಆ ಗುಳಿಗೆಗಳನ್ನು ಗೌಪ್ಯವಾಗಿ, ಊಟದೊಂದಿಗೆ ಅಥವಾ ಕುಡಿಯುವ ಕಾಫಿ, ಟೀ, ಮಜ್ಜಿಗೆ ಇತ್ಯಾದಿ ಜೊತೆಗೆ ಸೇರಿಸಿಕೊಡುತ್ತಾರೆ. ಅದರಿಂದ ಸೇವಿಸಿದವರಿಗೆ ಆಹಾರ ಸೇರದೇ ಅನಾರೋಗ್ಯಕ್ಕೆ ತುತ್ತಾಗುತ್ತಾರೆ.

ಹೌದಾ! ಅದರಿಂದ ಅವರಿಗೆ ಏನು ಲಾಭ? ಎಂತಹದ್ದು, ಇಲ್ಲ ಇದೊಂದು ಮೂಢನಂಬಿಕೆ. ಇದು ಕೆಲವು ಜನರಿಗೆ ವಂಶ ಪಾರಂಪಾರಿಕವಾಗಿ ಬಂದಿರುತ್ತದೆ. ಅದನ್ನು ಅವರು ಮುಂದುವರೆಸಲೇಬೇಕು. ಇಲ್ಲವಾದಲ್ಲಿ, ಅವರ ಕುಟುಂಬಕ್ಕೆ ಹಾನಿಯಾಗುತ್ತದೆ ಎಂಬ ನಂಬಿಕೆ. ಇದು ನಿಜನಾ? ಸುಳ್ಳಾ? ಸರೀನಾ? ತಪ್ಪಾ? ಆ ಗೊಂದಲವೆಲ್ಲ ಬೇಡ. ಆ ಚರ್ಚೆಯೂ ಈಗ ಬೇಡ. ಅದರ ಕುರಿತು ಮತ್ತೊಮ್ಮೆ ಬರೆಯುತ್ತೇನೆ. ಅವರಿಗೆ ಅದೊಂದು ನಂಬಿಕೆ, ಅದೊಂದು ಚಟ, ಚಾಳಿ ಎಂದು ನಂಬಬೇಕು.

ಅದರಂತೆಯೇ, ಕೆಲವರಿಗೆ ಬೇರೆಯವರ ಮೇಲೆ ದೂರುವುದು ಒಂದು ಚಟ. ಈ ರೀತಿಯ ಜನರು ಎಲ್ಲೆಡೆಯೂ ಸಿಗುತ್ತಾರೆ, ಅವರಿಗೇನೂ ಬರವಿಲ್ಲ. ಆಫೀಸಿನಲ್ಲಿಯೂ ಸಿಗುತ್ತಾರೆ, ಬಂಧುಗಳಲ್ಲಿಯೂ ಸಿಗುತ್ತಾರೆ, ಸ್ನೇಹಿತರಲ್ಲಿಯೂ ಇದ್ದಾರೆ. ಈ ಚಾಡಿಕೋರರಲ್ಲಿ ಮೂರು ಜಾತಿಯವರಿದ್ದಾರೆ. ಮೊದಲನೆಯವರು, ಚಾಡಿ ಹೇಳಿ ಲಾಭ ಪಡೆಯುವುದು, ಎರಡನೆಯವರು ನಾವು ಒಳ್ಳೆಯವರು ಎಂದು ಬಿಂಬಿಸಿಕೊಳ್ಳುವುದುಕ್ಕಾಗಿ ಆದರೇ ಈ ಮೂರನೆಯ ಜಾತಿಯವರು ಕೇವಲ ವಿಕೃತಿಗಾಗಿ ಮಾಡುವವರು.

ನಾನು ಇಲ್ಲಿ ಹೇಳುವ ಪ್ರತಿಯೊಂದು ವರ್ಗದವರು ನಿಮ್ಮ ಜೀವನದಲ್ಲಿ ಇದ್ದೇ ಇರುತ್ತಾರೆ. ದಯವಿಟ್ಟು, ಸೂಕ್ಷ್ಮವಾಗಿ ಅವಲೋಕಿಸುತ್ತಾ ಹೋಗಿ. ಈ ಮೊದಲನೆಯ ವರ್ಗದವರನ್ನು ನೋಡಿ, ಅವರು ನಮ್ಮ ಸಹದ್ಯೋಗಿಗಳಾಗಿಯೋ, ಅಥವಾ ನೆಂಟರಿಷ್ಟರೋ ಆಗಿರುತ್ತಾರೆ. ಅವರು, ನಮ್ಮ ಕುರಿತು ಇತರರಿಗೆ ಇಲ್ಲಸಲ್ಲದ ದೂರುಗಳನ್ನು ಹೇಳುತ್ತಾರೆ. ಅಥವಾ ನಮಗೆ ಬೇರೆಯವರ ಕುರಿತು ಹೇಳುತ್ತಿರುತ್ತಾರೆ. ಅವರಿಗೆ ಇದರಿಂದ ಏನು ಲಾಭ? ತಮ್ಮ ಮೇಲಧಿಕಾರಿಯನ್ನು ಓಲೈಸಿಕೊಳ್ಳಬೇಕು. ನಿಮ್ಮಿಂದ ಐದು ಸಾವಿರವೋ, ಹತ್ತು ಸಾವಿರವೋ ಮತ್ತ್ಯಾವುದೋ ಸಹಾಯ ಸದಾ ಆಗುತ್ತಿರಬೇಕು, ಈ ರೀತಿಯ ಅನುಕೂಲಕ್ಕೆ, ಸಹಾಯ, ಸಹಕಾರಕ್ಕೆ ಸುಲಭವಾಗಿ ಕಂಡುಹಿಡಿಯುವ ಮಾರ್ಗವಿದು. ಅಲ್ಲಿ, ಪ್ರಾಮಾಣಿಕತೆಯ ಕೊರತೆಯಿರುತ್ತದೆ. ಅದರಿಂದ ಹೊರಬರಲಾಗದೇ ಈ ಅನ್ಯ ಮಾರ್ಗಗಳನ್ನು ಅನುಸರಿಸುತ್ತಾರೆ.

ಎರಡನೆಯ ವರ್ಗದವರನ್ನು ಗಮನಿಸಿ ನೋಡಿ. ಅವರಿಗೊಂದು ಬಗೆಯ ಕೀಳರಿಮೆಯಿರುತ್ತದೆ. ಅಂದರೇ, ಅವರಿಗೆ ಅವರ ಸಾಮಥ್ರ್ಯದ ಅರಿವಿರುತ್ತದೆ. ಅವರು ಸಾಧಿಸಲಾಗದ ವಿಷಯಕ್ಕೆ ಅನ್ಯ ಮಾರ್ಗ ಹಿಡಿಯುತ್ತಾರೆ. ಅವರು, ನಾನು ನಿನ್ನಷ್ಟೆ ಉತ್ತಮ, ಸಮರ್ಥನು ಎಂದು ತೋರಿಸುವ ಹಟಕ್ಕೆ ಬಿದ್ದು, ನಿಮ್ಮನ್ನು ಅವರಿಗಿಂತ ಕೆಳಕ್ಕೆ ಇಳಿಸಲು ಪಣತೊಡುತ್ತಾರೆ. ಇದರೆಲ್ಲೇನು ಸುಖ? ಅದ್ಯಾವ ಪರಿಯ ಖುಷಿ? ಹೌದು, ನೀವು ಗಮನಿಸಿ, ರಾತ್ರಿಯೆಲ್ಲಾ ನಿಮ್ಮ ಜೊತೆಗೆ ಕುಡಿದಿರುತ್ತಾರೆ, ಹ್ಯಾಂಗ್ ಓವರ್‍ನಲ್ಲಿರುತ್ತಾರೆ. ಆದರೇ, ಹೊರಜಗತ್ತಿಗೆ ನಾನು ಹೋಗಿದ್ದೆ, ಆದರೇ ಅವರಷ್ಟು ಕುಡಿದಿಲ್ಲ. ಅವರ ಸಹವಾಸವೇ ಬೇಡ ಎನಿಸಿತ್ತು ಎನ್ನುತ್ತಾರೆ. ಆದರೇ, ಅದೇ ಬಿಟ್ಟಿ ಎಣ್ಣೆಗೆ ನಾಳೆ ಬೆಳ್ಳಿಗ್ಗೆ ಕಾಯುತ್ತಿರುತ್ತಾರೆ. ಇದು, ನನ್ನ ಕಾಲೇಜಿನ ದಿನಗಳಲ್ಲಿ ನೋಡುತ್ತಿದ್ದೆ. ಹಲವರು, ರಾತ್ರಿಯೆಲ್ಲಾ ನೀಲಿ ಸಿನೆಮಾ ನೋಡಿ, ನಾವು ಸಭ್ಯರೂ ಎಂಬಂತೆ ನಾಟಕದ ಬದುಕನ್ನು ಕಟ್ಟಿಕೊಂಡವರು. ಜೊಳ್ಳು ಸುರಿಸುತ್ತಾ, ಅಲೆದಾಡಿದವರು, ಆದರೇ ಹೊರಜಗತ್ತಿಗೆ ನಾನವನಲ್ಲವೆಂದು ಬದುಕ ಹೊರಟವರು. ಅವರ ಮನೆಗೆ ಹೋದರೇ ಸರಿಯಾಗಿ ಮಾತೇ ಆಡಿಸುವುದಿಲ್ಲ, ಊಟಕ್ಕೆ ಕರೆಯುವುದಿಲ್ಲ, ಕೊಡುವುದಿಲ್ಲವೆಂದೆಲ್ಲಾ ಹಂಗಿಸುತ್ತಾರೆ. ವಾತ್ಸವದಲ್ಲಿ ಅವರು ನಾಲ್ಕು ಜನರಿಗೆ ನೀರು ಕೊಟ್ಟಿರುವುದಿಲ್ಲ. ನಾನು ಸೋತರೂ ಪರವಾಗಿಲ್ಲ, ಅವನು ಗೆಲ್ಲಬಾರದೆಂಬ ಮನೋಭಾವದವರು. ವಿಶೇಷವೆಂದರೇ, ಇವರ್ಯಾರು ನಮ್ಮ ಶತ್ರುಗಳಲ್ಲ, ನಮ್ಮವರೆಂದು ನಂಬಿಸುತ್ತಾ ಬಂದವರು. ಇದನ್ನು ಎಲ್ಲಾ ಕಡೆಯಲ್ಲಿಯೂ ಎಲ್ಲರ ಬಗ್ಗೆಯೂ ಹೇಳುತ್ತಾ ಸಾಗಿದವರು.

ನಾನು ಇಲ್ಲಿ ಸ್ವಲ್ಪ ಹೆಚ್ಚಿನದನ್ನೇ ಹೇಳಬೇಕೆಂದು ಬಯಸುತ್ತೇನೆ. ಅದು ಹಲವರಿಗೆ ಹಿಡಿಸದೇ ಇರಬಹುದು, ಆದರೂ ಸ್ಥೂಲವಾಗಿ ಹೇಳಿರುತ್ತೇನೆ. ಇದರ ಹೆಚ್ಚಿನ ಮಾಹಿತಿ ತಮಗೆ ಬೇಕೆನಿಸಿದರೇ, ನಾನು ಅದನ್ನು ಮತ್ತೊಂದು ಲೇಖನದಲ್ಲಿ ವಿವರಿಸುತ್ತೇನೆ. ಇದು ಬಹಳ ಮುಖ್ಯವಾದ ವಿಚಾರವೆಂಬುದನ್ನು ಮಾತ್ರ ಖಡಖಂಡಿತವಾಗಿ ಹೇಳಬಲ್ಲೆ. ನಮ್ಮಲ್ಲಿ ಅನೇಕರಿಗೆ ತಾವು ಒಳ್ಳೆಯವರು ಎನಿಸಿಕೊಳ್ಳಬೇಕು ಅಥವಾ ಒಳ್ಳೆಯವರು ಎಂದು ಬಿಂಬಿಸಿಕೊಳ್ಳಬೇಕೆಂಬ ಚಪಲವಿರುತ್ತದೆ. ಇದನ್ನು ಚಪಲ ಎಂದೇ ನಾನು ಕರೆಯುವುದು. ಅದಕ್ಕೆ ಮಡಿವಂತಿಕೆಯ ಸೋಗು ಎಂದರೂ ತಪ್ಪಾಗದು. ಮನುಷ್ಯ ತಪ್ಪುಗಳನ್ನು ಮಾಡುತ್ತಿರಬೇಕು. ಎಡವುತ್ತಿರಬೇಕು. ಎಡವದೇ ಇರುವವನು ನಡೆಯಲಾರ. ನಿಮ್ಮ ಬದುಕನ್ನೇ ನೀವು ಅವಲೋಕಿಸುತ್ತಾ ಬನ್ನಿ. ಬಾಲ್ಯದಲ್ಲಿ ತುಂಟಾಟ, ಯೌವ್ವನದಲ್ಲಿನ ಪೋಲಿತನ, ಹರಯದಲ್ಲಿನ ಬೇಜವಬ್ದಾರಿಗಳು ಇವೆಲ್ಲವೂ ಇರಲೇಬೇಕು. ಬಾಲ್ಯದಲ್ಲಿನ ಮಗು ಪ್ರಬುದ್ಧತೆ ತೋರಿಸುವುದು ನನಗೆ ಅಸಹ್ಯ ಮತ್ತು ಅಸ್ವಾಭಾವಿಕವೆನಿಸುತ್ತದೆ.

ನನ್ನದೇ ಅನುಭವ ಹೇಳಬೇಕೆಂದರೇ, ನಾನು ತಪ್ಪು ಮಾಡುತ್ತಾ ಬೆಳೆಯುತ್ತಾ ಬಂದವನು. ಬದುಕು ಬದಲಾದಂತೆ ಬದಲಾಗಿಸಿಕೊಂಡವನು. ನನ್ನ ಆಲೋಚನೆಗಳು ನನ್ನ ಅನುಭವದಂತೆ ಬದಲಾದವುಗಳು, ಯಾವುದೋ ಒಂದು ಸಿದ್ದಾಂತಕ್ಕೋ ಮತ್ತೊಂದಕ್ಕೋ ಗಂಟಿಬಿದ್ದವನಲ್ಲ. ಅಷ್ಟೆಲ್ಲಾ ಏಕೆ, ಯಾವುದೋ ಒಂದೇ ಕೆಲಸಕ್ಕೇ ನೇತುಹಾಕೊಂಡವನಲ್ಲ. ಒಂದೇ ಕಂಪನಿಗೆ ಗೂಟ ಹೊಡೆದು ಕೂತವನಲ್ಲ. ನನಗೆ ಇಂದಿಗೂ ಅಷ್ಟೆ, ಲಾಕ್‍ಡೌನ್ ಪರಿಣಾಮ ಗರಿಷ್ಠ ಒಂದು ತಿಂಗಳು ಒಂದೇ ಊರಿನಲ್ಲಿ ಕುಳಿತಿರುವುದು. ಕಾಲೇಜು ದಿನಗಳಿಂದಲೂ ನಾನು ಗರಿಷ್ಠ ಕಾಲ ಒಂದೆಡೆ ಕುಳಿತವನಲ್ಲ. ಸುತ್ತಾಟವೇ ನನ್ನ ಬದುಕು, ಜನರನ್ನು ನೋಡಿ ಕಲಿಯುತ್ತಾ ಬಂದವನು ನಾನು. ಇರಲಿ, ವಿಷಯಕ್ಕೆ ಬರೋಣ. ನಮ್ಮಲ್ಲಿ ಆಗುವ ಬದಲಾವಣೆಗಳನ್ನು ಒಪ್ಪುವ ಮನಸ್ಥಿತಿಯನ್ನು ನಾವು ಬೆಳೆಸಿಕೊಳ್ಳಬೇಕು. ನಮ್ಮಲ್ಲಿರುವ ನ್ಯೂನ್ಯತೆಗಳನ್ನು ಒಪ್ಪಿಕೊಳ್ಳಬೇಕು. ಮನುಷ್ಯ ಎಂದಿಗೂ ಪರಿಪೂರ್ಣನಾಗಲಾರ ಮತ್ತು ಆಗಲೂಬಾರದು, ಏಕೆಂದರೇ ಅವನು ವಿಕಸನಗೊಳ್ಳುತ್ತಿರಬೇಕು. ಅವಿಷ್ಕಾರ ನಡೆಯುತ್ತಲೇ ಇರಬೇಕು. ಆದರೇ, ಹಲವರಿಗೆ ಇದನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ. ಅವರೆಲ್ಲರೂ ತಾನು ಒಳ್ಳೆಯವನು ಎಂಬ ಭ್ರಮೆಯನ್ನು ಸಾಕಲು ಹೋಗಿ ಮತ್ತೊಬ್ಬರನ್ನು ಕೆಟ್ಟವರನ್ನಾಗಿ ಬಿಂಬಿಸುತ್ತಾರೆ.

ನನ್ನ ಸ್ವಂತ ಅನುಭವದಲ್ಲಿ, ನನ್ನ ಬಗ್ಗೆ ನನ್ನ ಒಂದೆರಡು ಸ್ನೇಹಿತರು, ಅಪಪ್ರಚಾರವೆಂದು ಹೇಳುವುದಕ್ಕೆ ಆಗುವುದಿಲ್ಲ. ಆದರೂ, ನಾನು ಮಾಡುವುದನ್ನೆಲ್ಲಾ ಅನೇಕರಿಗೆ ಹೇಳುತ್ತಾ ಬರುತ್ತಿದ್ದರು, ಅದು ಮಸಾಲೆ ಸಮೇತ. ನಾನು ಇದ್ಯಾಕೆ? ಮೊದಲಿಗೆ, ಉತ್ತಮ ಸಂಬಳವಿದ್ದ ಕೆಲಸ ಬಿಟ್ಟು ಸೀಕೋ ಸಂಸ್ಥೆ ಕಟ್ಟುವಾಗ. ಹರೀಶ ಕೆಲಸ ಬಿಟ್ಟಿದ್ದಾನೆ. ಅವನಿಗೆ ಜೀವನದ ಗಂಬೀರತೆ ಗೊತ್ತಿಲ್ಲ, ಇನ್ನೂ ಕಾಲೇಜು ಹುಡುಗನ ತರಹ ಆಡ್ತಾನೆ. ಸ್ವಲ್ಪ ಬ್ಯಾಂಕ್ ಬ್ಯಾಲೆನ್ಸ್ ಇರಬೇಕು ಅಲ್ಲಿ ತನಕ ಅಷ್ಟೇ. ಈ ಸೋಷಿಯಲ್ ವರ್ಕ್ ಎಲ್ಲಾ ನಡೆಯುತ್ತಾ ಇವನಿಗೆ ಹುಚ್ಚು, ಇತ್ಯಾದಿ. ಊರೂರು ಸುತ್ತುತ್ತಾನೆ, ಯಾಕೆ ಬೇಕು? ದುಡಿಮೆಯಿಲ್ಲ ಹುಷಾರು, ಸಾಲ ಏನಾದರೂ ಕೇಳಿದ್ರೆ ಕೊಟ್ಟು ಸಿಕ್ಕಿ ಹಾಕೋಬೇಡ. ಹೀಗೆ.. ನನಗನಿಸಿದ್ದು, ನೀನು ನನ್ನ ಬಳಿಯೇ ಹೇಳಬಹುದಿತ್ತಲ್ಲವೇ? ಎಲ್ಲಿಯೋ ಕೆಲಸ ಮಾಡುವುದಕ್ಕೂ ಇಷ್ಟಪಡುವ ಬದುಕನ್ನು ಕಟ್ಟಿಕೊಳ್ಳುವುದಕ್ಕೂ ವ್ಯತ್ಯಾಸವಿದೆಯೆಂಬುದು ಅರಿವಾಗುವುದಿಲ್ಲ. ಬೆಟ್ಟ ಹತ್ತಿ ವಿಹಂಗಮ ನೋಟವನ್ನು ಸವಿಯಬೇಕೆಂದರೇ, ಬೆಟ್ಟ ಹತ್ತಲೇಬೇಕು, ಕಾಲು ಸವೆಸಲೇಬೇಕು. ಕೂತಲ್ಲಿಗೆ ಬರುವುದಿಲ್ಲ. ಕಾರಿನಲ್ಲಿ ಹೋಗೋದು ಎಂಬ ತಲೆಹರಟೆ ಉತ್ತರಬೇಡ. ಒಮ್ಮೆ ಬೆಟ್ಟವನ್ನು ಹತ್ತಿ ದಣಿದು, ಮೇಲೇರಿ ಕೂತು ನೋಡಿ ಅಲ್ಲಿನ ಖುಷಿಯೇ ಬೇರೆ. ನೀವು ಇಷ್ಟಪಟ್ಟ ಬದುಕಲ್ಲಿ ಎರಡೇ ಎರಡು ಹೆಜ್ಜೆ ಹಾಕಿ ಬದುಕಿನ ಸತ್ವವನ್ನು ನೋಡುವಿರಿ. ಹೋಗಲಿ ಇಂಥಹವರು ಇರುವುದು ಒಳ್ಳೆಯದೇ. ಮುಂದಕ್ಕೆ ಹೋಗೋಣ.

ಮೂರನೆಯ ವರ್ಗವಿದೆ, ಇದೊಂದು ಬಗೆಯೆ ಅತೃಪ್ತ ಮತ್ತು ವಿಕೃತ ಮನಸ್ಸಿನವರು. ಇವರು ಏಕೆ ಹೀಗೆ ಮಾಡುತ್ತಾರೆಂಬುದು ವಾತ್ಸವದಲ್ಲಿ ಅವರಿಗೆ ಅರಿವಿರುವುದಿಲ್ಲ. ಇವರು, ಅವರ ಸ್ವಂತದವರನ್ನು ಹಂಗಿಸುತ್ತ ಬದುಕುತ್ತಿರುತ್ತಾರೆ. ಅದೊಂದು ಬಗೆಯ ಸಂತೋಷವಿರಬಹುದು. ಅಲ್ಲಿ, ಅವರದ್ದೇ ಸಂಬಂಧಗಳನ್ನು ಹಳಸುತ್ತಿರುತ್ತಾರೆ. ಇದಕ್ಕೆ, ಉದಾಹರಣೆಗಳು, ಅನೇಕ ಮಧ್ಯಮ ವರ್ಗದವರು. ಅನೇಕ, ಪೋಷಕರನ್ನು ನೋಡಿ, ಅವರ ಮಕ್ಕಳನ್ನು ಕಂಡವರ ಎದುರು ದೂರುತ್ತಿರುತ್ತಾರೆ. ಅಯ್ಯೋ, ನನ್ನ ಮಗ ಹೀಗೆ, ನನ್ನ ಮಗಳು ಹೀಗೆ, ಅದೇ ಅವರ ಮಕ್ಕಳು ನೋಡಿ ಹೇಗಿದ್ದಾರೆ. ಎಷ್ಟೊಂದು ಬುದ್ದಿವಂತರು. ಇದೇ, ರೀತಿ ಅನೇಕ ದಂಪತಿಗಳನ್ನು ಗಮನಿಸಿ, ಹೆಂಡತಿಯನ್ನು ಗಂಡ, ಗಂಡನನ್ನು ಹೆಂಡತಿಯನ್ನು ದೂರುತ್ತಾ, ಬರುತ್ತಾರೆ. ಅವರಿಗೆ, ಅವರ ಮನೆಯವರ ಮಾನವನ್ನೇ ಹರಾಜು ಹಾಕುತ್ತಿದ್ದೇನೆಂಬ ಕನಿಷ್ಠ ಕಾಳಜಿಯೂ ಇರುವುದಿಲ್ಲ. ಅಣ್ಣ, ತಮ್ಮಂದಿರು, ಅಕ್ಕತಂಗಿಯರ ನಡುವೆಯೂ ಇದು ನಡೆಯುತ್ತಿರುತ್ತದೆ. ಆಪ್ತ ಸ್ನೇಹಿತರನ್ನು ಬಿಡುವುದಿಲ್ಲ. ಸಹಭಾಳ್ವೆಯನ್ನು ಅವರು ಬಯಸುವುದಿಲ್ಲ. ಅದರ ಅರ್ಥವೂ ಅವರಿಗಿರುವುದಿಲ್ಲ. ಇದಕ್ಕೇ ಪರಿಹಾರ ಕೇಳಿ. ಅವರ ಬಳಿಯಲ್ಲಿರುವುದಿಲ್ಲ. ಮಗ ಕೆಟ್ಟವನು, ಮನೆಯಿಂದ ಹೊರ ಹಾಕಿ ಎಂದು ಹೇಳಿ. ಅದು ಹೇಗೆ ಸಾಧ್ಯ ಎನ್ನುತ್ತಾರೆ. ಗಂಡ ಕೆಟ್ಟವನು, ಬಿಟ್ಟು ಹೋಗು ಎನ್ನಿ, ನಾನ್ಯಾಕೆ ಹೋಗಲಿ, ಎನ್ನುತ್ತಾರೆ. ಅಲ್ಲಮ್ಮ, ನೀನೇ ತಾನೇ ಹೇಳೊದು ನನ್ನ ಗಂಡ ಸರಿಯಿಲ್ಲ ಅಂತಾ, ಅವನ ಜೊತೆ ಯಾಕೆ ನರಕ, ಹೋಗು ಎನ್ನಿ. ಮಾತೇ ಇರುವುದಿಲ್ಲ.

ಇಲ್ಲಿ ಅಕ್ಷರಸ್ಥರಿಗೂ ಅನಕ್ಷರಸ್ಥರಿಗೂ ಒಂದು ವ್ಯತ್ಯಾಸವಿದೆ. ಅನಕ್ಷರಸ್ಥರಿಗೆ ಈ ತಾರತಮ್ಯವೆಂಬ ಅಥವಾ ಅಹಂಮಿನ ಸಮಸ್ಯೆಯಿರುವುದಿಲ್ಲ. ನಮ್ಮ ಮನೆಕೆಲಸದಾಕೆ, ಐದಾರು ಮನೆಗಳಲ್ಲಿ ಕೆಲಸ ಮಾಡುತ್ತಾರೆ. ಮೂರು ಜನರು ಗಂಡುಮಕ್ಕಳು. ಅವರ ಗಂಡ ವಿಪರೀತ ಕುಡಿತಾನೆ. ಕೆಲವೊಂದು ದಿನ ಬೀದಿಯಲ್ಲಿ ನಿಂತು ಅವಳಿಗೆ ಬೈಯ್ಯುವುದು, ಹೊಡೆಯುವುದು ಇದೆ. ನಾನು ಹೇ, ಯಾಕಪ್ಪ? ಅಂದ್ರೇ, ಅವನು ಏನಿಲ್ಲ ಸಾ, ಅಂತಾ ಹೊಗ್ತಾನೆ. ಅ ಹೆಂಗಸು ಕೂಡ, ಏನಿಲ್ಲಾ ಅಣ್ಣ. ಅಂತಾ ಹೋಗ್ತಾರೆ. ಅವರ ಮನೆಯ ಗುಟ್ಟನ್ನು ಅಲ್ಲಿಗೆ ಬಿಟ್ಟಿರುತ್ತಾರೆ. ಅದೇ, ಅಕ್ಷರಸ್ಥರ ಮೆನಯ ಬಿನ್ನಾಭಿಪ್ರಾಯಗಳು ಅಲ್ಲಿಗೆ ನಿಲ್ಲುವುದಿಲ್ಲ. ನಿಲ್ಲಲು ಅಹಂ ಬಿಡುವುದಿಲ್ಲ. ಅದೊಂದು ರೀತಿಯ ನಶೆ. ಅನೇಕರಿಗೆ ತಮ್ಮ ಅಹಂ ಅನ್ನು ತೋರಿಸುವುದು ಒಂದು ರೀತಿಯ ನಶೆ. ಆ ನಶೆಯಲ್ಲಿಯೇ ಅನೇಕ ಸಂಬಂಧಗಳನ್ನು ಕಳೆದುಕೊಂಡಿರುತ್ತಾರೆ ಅಥವಾ ಮುರಿಯುತ್ತಾರೆ. ನಾನು ತೋರಿಸ್ತಿನಿ ನೋಡು, ಏನು ಅಂತಾ ಅಂದುಕೊಂಡವರೇ!

ಇದನ್ನೇ, ನಮ್ಮ ಸಮಾಜದ ವಿಚಾರಕ್ಕೇ ದೇಶದ ವಿಚಾರಕ್ಕೆ ಹೋಲಿಸಿ ಒಮ್ಮೆ ಕಲ್ಪಿಸಿಕೊಳ್ಳಿ. ಇಲ್ಲಿಯೂ ಮೂರು ವರ್ಗವಿದೆ. ಮೊದಲನೆಯ ಮತ್ತು ಎರಡನೆಯ ವರ್ಗ ಅನ್ಯರನ್ನು ದೂಷಿಸುವ ವರ್ಗ, ರಾಜಕಾರಣಿಗಳು, ಲಂಚ ಕೊಟ್ಟು ಅಧಿಕಾರ ಪಡೆದವರು, ಜಾತಿ, ಧರ್ಮದ ಹೆಸರಲ್ಲಿ ಒಡಕು ಮೂಡಿಸಿ ಲಾಭ ಪಡೆದವರು. ಎಲ್ಲಾ ಜಾತೀಯ, ಎಲ್ಲಾ ಧರ್ಮದ ಮಠಾಧೀಶರು, ಮೌಲ್ವಿಗಳು, ಪಾದ್ರಿಗಳು ಮತ್ತು ಅನುಯಾಯಿಗಳು. ಬೇರೆ ಪಕ್ಷದವರನ್ನು ಕೆಟ್ಟದ್ದಾಗಿ ಬಿಂಬಿಸಿಯೇ ಗೆಲುವು ಸಾಧಿಸುತ್ತಾ ಬಂದವರು, ಗದ್ದುಗೆ ಏರಿದವರು. ಅನ್ಯ ಜಾತಿಯನ್ನು ನಿಂದಿಸಿ, ಅನ್ಯ ಧರ್ಮವನ್ನು ಹಿಯಾಳಿಸುತ್ತಲೇ ಆನಂದಿಸಿದವರು.

ಇಲ್ಲಿ ಹೆಚ್ಚಿನ ವಿವರಣೆಯ ಅವಶ್ಯಕತೆಯಿದೆ. ನೀವು ಹಾಗೆಯೇ ಗಮನಿಸಿ ನೋಡಿ, ನಮ್ಮಲ್ಲಿ ಒಂದು ಅಲಿಖಿತ ನಿಯಮವಿದೆ, ಅದು “ಒಬ್ಬನನ್ನು ಮೇಲೇರಿಸಲು ಮತ್ತೊಬ್ಬನನ್ನು ಕೆಳಕ್ಕಿಳಿಸಬೇಕು, ಅಥವಾ ಒಬ್ಬನನ್ನು ಕೆಳಗಿಳಿಸಲು ಮತ್ತೊಬ್ಬನನ್ನು ಮೇಲೇರಿಸಬೇಕು”.  ಉದಹಾರಣೆಗಳೊಂದಿಗೆ ನೋಡೋಣ. ಡಾ. ರಾಜ್ ಕುಮಾರ್ ಅವರನ್ನು ಕೆಳಗಿಳಿಸಲು ನಡೆದ ಪ್ರಯತ್ನವೇ ಡಾ. ವಿಷ್ಣುವರ್ಧನ್‍ರವರನ್ನು ತಂದದ್ದು ಅಥವಾ ತರಲು ಪ್ರಯತ್ನಿಸಿದ್ದು. ಅವರಿಬ್ಬರ ನಡುವೆ ಇಲ್ಲದ ಹೋಲಿಕೆ, ಬೇಧವನ್ನು ಅವರ ಅಭಿಮಾನಿಗಳು ಹುಟ್ಟುಹಾಕಲು ಪ್ರಯತ್ನಿಸಿದರು, ಅದನ್ನು ಹಲವರು ನಂಬುತ್ತಾ ಹೋದರು. ಅದೇ, ರೀತಿ ನೋಡಿ, ಗಾಂಧೀಜಿಯವರ ವಿಚಾರ ಬಂದಾಗ ಅವರನ್ನು ದೂಷಿಸಲು ಪರ್ಯಾಯವಾಗಿ ಅನೇಕರ ಹೆಸರುಗಳನ್ನು ತಂದರು. ನೇತಾಜಿ ಇರಬಹುದು, ಅಂಬೇಡ್ಕರ್ ಇರಬಹುದು. ಇವರ್ಯಾರು ಗಾಂಧೀಜಿಯನ್ನು ದ್ವೇಷಿಸಿರಲಿಲ್ಲ, ಅವರ ಕೆಲವು ವಿಚಾರಗಳಿಗೆ ಅಸಮಧಾನವಿತ್ತು, ಅದನ್ನೇ ಇಂದಿಗೂ ಎಳೆದುಕೊಂಡು ಹೋಗುತ್ತಿಲ್ಲವೇ?

ರಾಜಕೀಯವನ್ನೇ ನೋಡುತ್ತಾ ಬನ್ನಿ, ಅವರ ಒಳ್ಳೆಯತನವನ್ನೋ ಸಾಧನೆಯನ್ನೋ ಹೇಳಿ ಗದ್ದುಗೆ ಏರುವುದಕ್ಕಿಂತ ವಿರೋಧ ಪಕ್ಷದವರ ದುರ್ನಡತೆಯನ್ನು ಪ್ರಚಾರ ಮಾಡಿ ಗದ್ದುಗೆ ಏರಿದವರೇ ಹೆಚ್ಚು. ಮೋದಿಯವರು ಗದ್ದುಗೆ ಏರಿದ್ದು ಹೇಗೆ, ಹಿಂದಿನ ಡಾ. ಸಿಂಗ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹರಿಹಾಯ್ದು ತಾನೆ? ಮನಮೋಹನ್ ಸಿಂಗ್ ಅಧಿಕಾರಕ್ಕೆ ಬಂದದ್ದು ವಾಜಪೇಯಿ ಸರ್ಕಾರವನ್ನು ದೂಷಿಸುತ್ತಾ ಅಲ್ವೇ? ಇದು ಎಲ್ಲಾ ರಾಜ್ಯ ಮತ್ತು ರಾಷ್ಟ್ರರಾಜಕಾರಣದಲ್ಲಿ ಸಾಮಾನ್ಯವಾಗಿದೆ.

ಕೊನೆಯ ವರ್ಗವಿದೆಯಲ್ಲಾ, ಇದು ಜಾತಿ/ಧರ್ಮವನ್ನು ಅತಿಯಾಗಿ ವಿಜೃಂಭಿಸಿ ದೇಶವನ್ನೇ ಛಿದ್ರಗೊಳಿಸಲು ಪಣ ತೊಟ್ಟವರು. ನಮ್ಮ ದೇಶದ ಆರೋಗ್ಯ ಹಾಳಾಗುತ್ತದೆಯೆಂಬ ಸ್ವಲ್ಪ ಜ್ಞಾನವೂ ಇಲ್ಲದೇ, ಅದನ್ನೇ ಮಾಡುತ್ತಿರುವವರು. ಅನೇಕರು, ವಾದ ಮಾಡುವುದನ್ನು ವಿವರಿಸುತ್ತೇನೆ. ನಮ್ಮದು ಹಿಂದೂ ದೇಶ, ನಮ್ಮಲ್ಲಿ ಹಿಂದುಗಳು ಮಾತ್ರವಿರಬೇಕು. ಇನ್ನುಳಿದವರನ್ನು ಎಲ್ಲಿಗೆ ಕಳುಹಿಸಬೇಕು? ಕೇಳಿ ನೋಡಿ. ಉತ್ತರವಿಲ್ಲ. ಅವರಿಗೆ ಮೀಸಲಾತಿ ಕೊಟ್ಟು ಅವರನ್ನು ಹಿಡಿಯುವುದಕ್ಕೆ ಆಗುತ್ತಿಲ್ಲವೆನ್ನುತ್ತಾರೆ. ಈಗ ಏನು ಮಾಡೋದು? ಮೀಸಲಾತಿ ತೆಗೆದರೆ ಸರಿ ಹೋಗುತ್ತಾ? ಎಂದು ಕೇಳಿ. ಉತ್ತರವಿಲ್ಲ. ಅದರಂತೆಯೇ, ಮೇಲ್ಜಾತಿಯವರನ್ನು ದೂಷಿಸುವ ಮತ್ತೊಂದು ವರ್ಗವನ್ನು ಕೇಳಿ, ಇವರು ಜನರನ್ನು ಮೌಢ್ಯಕ್ಕೆ ತಳ್ಳಿದ್ದಾರೆ, ಎನ್ನುತ್ತಾರೆ. ಸರಿ, ಏನು ಮಾಡೋದು ಎಂದು ಕೇಳಿ. ಬಹಿಷ್ಕರಿಸಬೇಕು ಎನ್ನುತ್ತಾರೆ. ಆದರೇ, ಅವರುಗಳೇ ದೇವಸ್ಥಾನದಲ್ಲಿ ಸಾಲಾಗಿ ನಿಂತು ಕಾದು ದೇವರಿಗೆ ಅರ್ಚನೆ ಮಾಡಿಸುತ್ತಾರೆ. ಇವೆಲ್ಲವೂ ನಮ್ಮ ಮನೆಯೊಳಗಿನ ಆಂತರಿಕ ಬಿನ್ನಾಭಿಪ್ರಾಯಗಳಷ್ಟೆ. ಮನೆಯಲ್ಲಿ ಚಿಕ್ಕವರಿದ್ದಾಗ, ರೊಟ್ಟಿ ಸ್ವಲ್ಪ ದೊಡ್ಡದ್ದು ಚಿಕ್ಕದ್ದು ಆದರೇ, ಅಣ್ಣನಿಗೆ ದೊಡ್ಡ ರೊಟ್ಟಿ ನನಗೆ ಚಿಕ್ಕದ್ದು ಅಂತಾ ದೂರುತಿರಲಿಲ್ಲವೇ? ಅಥವಾ ಒಮ್ಮೊಮ್ಮೆ ಅಣ್ಣನೇ ನಮಗೆ ತೋರಿಸಿ ನೋಡು ನನಗೆ ದೊಡ್ಡ ರೊಟ್ಟಿ ನಿನಗೆ ಚಿಕ್ಕದ್ದು ಅಂತಾ ಹಂಗಿಸುತ್ತಿರಲಿಲ್ಲವೇ? ಅವೆಲ್ಲವೂ ಒಂದು ತುಂಟಾಟಿಕೆಗಾಗಿ ಅಷ್ಟೆ.

ಇಲ್ಲಿ ಗಂಬೀರ ವಿಚಾರಗಳನ್ನು ನಿಮ್ಮ ಮುಂದಿಡುತ್ತೇನೆ. ಸದ್ಯದಲ್ಲಿ ಎಲ್ಲಾ ದೇಶದ, ಎಲ್ಲಾ ಧರ್ಮದ, ಎಲ್ಲಾ ಜಾತಿಯ ಜನರು ಎಲ್ಲಾ ದೇಶಗಳಲ್ಲಿಯೂ ಹಂಚಿ ಹರಡಿದ್ದಾರೆ. ಕೇರಳ ಒಂದು ರಾಜ್ಯದಿಂದ ಕನಿಷ್ಠ 25 ಲಕ್ಷದಷ್ಟು ಜನರು ಹೊರದೇಶದಲ್ಲಿದ್ದಾರೆ. ಎಲ್ಲಾ ದೇಶಗಳು, ಅವರ ಧರ್ಮದವರನ್ನು ಮಾತ್ರ ಇರಿಸಿಕೊಂಡು ಹೊರಹಾಕಿದರೇ ಗತಿ ಏನು? ಅಥವಾ ಕರ್ನಾಟಕವನ್ನೇ ತೆಗೆದುಕೊಳ್ಳಿ, ಕೇವಲ ಕನ್ನಡಿಗರು ಮಾತ್ರವೇ ಇಲ್ಲಿ ಇರಬೇಕೆಂದು ನಾವೆಲ್ಲರೂ ಹೊರಟರೇ, ಬೇರೆ ಭಾಷಿಕರು, ರಾಜ್ಯ ಬಿಟ್ಟು ಹೋಗುತ್ತಾರಾ? ಎಲ್ಲಿಗೆ ಹೋಗುತ್ತಾರೆ? ಕುಶಾಲನಗರದ ಪಕ್ಕದಲ್ಲಿ ಗುಮ್ಮನಕೊಲ್ಲಿ ಎಂಬ ಊರಿದೆ ಅದು ನನ್ನ ಅಜ್ಜಿಯ ಮನೆ. ಇಡೀ, ಊರು ನಮ್ಮ ಅಜ್ಜಿಯ ಮಾವನಿಗೆ ಸೇರಿದ್ದು. ಈಗ ಅಲ್ಲಿ ಕನಿಷ್ಠ ಎಂದರೂ ನಾಲ್ಕು ಸಾವಿರ ಜನಸಂಖ್ಯೆ ಇದೆ. ನೀವು ಹೊರಗಿನಿಂದ ಬಂದವರು ಹೋಗಿ ಎಂದು ದಬ್ಬುವುದೇ? ಹಳ್ಳಿಗಳಿಂದ ಬಂದು ಬೆಂಗಳೂರಲ್ಲಿ ಬದುಕನ್ನು ಕಟ್ಟಿಕೊಂಡ ನಮ್ಮನ್ನು ಬೆಂಗಳೂರಿಗರು ಹೊರಕ್ಕೆ ಹಾಕಿದರೇ?

ಇನ್ನೊಂದು ವಿಚಾರವೆಂದರೇ, ವೈವಿದ್ಯತೆ. ನೀವುಗಳು ಕಾಡನ್ನು ನೋಡಿರಬಹುದಲ್ಲವೇ? ಒಳಗೆ ಹೋಗದಿದ್ದರೂ ರಸ್ತೆ ಬದಿಯಲ್ಲಿ? ನೆಡುತೋಪಿಗೂ ಕಾಡಿಗೂ ವ್ಯತ್ಯಾಸವಿದೆ. ಒಂದೇ ಜಾತಿಯ ಮರಗಳಿದ್ದರೇ, ಅತವಾ ನಾವೇ ನೆಟ್ಟು ಬೆಳೆಸಿದರೇ ಅದನ್ನು ನೆಡುತೋಪು ಎನ್ನುತ್ತೇವೆ. ಕಾಡು ಎನ್ನುವುದಿಲ್ಲ. ಅಲ್ಲಿ, ವನ್ಯ ಜೀವಿಗಳು ಬದುಕಲಾರೆವು, ವೈವಿದ್ಯತೆ ಇರಲಾರದು. ಅದೇ, ನೈಸರ್ಗಿಕ ಕಾಡಿನಲ್ಲಿ ವಿವಿಧ ಸಸ್ಯಗಳು, ಮರಗಳು ಇರುವಲ್ಲಿ, ಎಲ್ಲಾ ಜೀವ ಸಂಕುಲಗಳು ಬದುಕನ್ನು ಕಟ್ಟಿಕೊಳ್ಳುತ್ತವೆ. ಒಂದೇ, ಧರ್ಮ, ಒಂದೇ ಜಾತಿಯವರಿಂದ ವೈವಿದ್ಯತೆ ಇರುವುದಿಲ್ಲ, ಬದುಕು ಬರುಡಾಗುತ್ತದೆ. ಎಲ್ಲರೂ ಇದ್ದರೇ ಜೀವನ. ಬಿನ್ನಾಭಿಪ್ರಾಯಗಳು ನಮ್ಮೊಳಗೆ ಇರಲಿ, ದೇಶ ಒಡೆಯುವ, ಸಮಾಜ ಒಡೆಯುವ ಕೆಲಸಗಳು ನಿಲ್ಲಲಿ.

ಕೊನೆಯದಾಗಿ: ಗಾಂಧೀಜಿಯವರ ಒಂದು ಕನಸ್ಸಿತ್ತು, ಅದನ್ನು ಬಹಳ ಒತ್ತಾಯಪೂರ್ವಕವಾಗಿ ಅವರು ಪ್ರತಿಪಾದಿಸುತ್ತಿದ್ದರು. ಅವರ, ಪ್ರಕಾರ ಯಾವ ದೇಶವೂ ಸೈನ್ಯೆಯನ್ನು ಹೊಂದಬಾರದು. ಎಂದರೇ, ಯಾವುದೇ ದೇಶಕ್ಕೆ ಆರ್ಮಿ/ಮಿಲಿಟರಿ ಇರಬಾರದು. ಸೈನ್ಯೆ ಇದ್ದರೇ ತಾನೇ ಯುದ್ದವಾಗುವುದು? ಇಡೀ ವಿಶ್ವವೇ ಒಂದು ಸಮುದಾಯದಂತಿರಬೇಕು. ಎಲ್ಲಾ ದೇಶಗಳು ಸೇರಿ ಒಂದು ಸಂಸ್ಥೆಯನ್ನು ಸ್ಥಾಪಿಸಿ, ಅದು ಶಾಂತಿ ಸೌಹಾರ್ಧತೆಯನ್ನು ಕಾಪಾಡಬೇಕು. ನಿಯಮಗಳನ್ನು ರೂಪಿಸಿ, ಜಾರಿಗೆ ತರಬೇಕು ಎಂದು ಬಯಸಿದ್ದರು. ಅದರಂತೆಯೇ, ನೀವು ಗಮನಿಸಿ ಪ್ರತಿಯೊಂದು ದೇಶವೂ ಅದೆಷ್ಟು ಹಣವನ್ನು ಸೈನ್ಯಕ್ಕಾಗಿ, ಯುದ್ದಕ್ಕಾಗಿ ಕಳೆಯುತ್ತಿದ್ದಾವೆ. ನಮ್ಮ ದೇಶವನ್ನೇ ನೋಡಿ, ಪಾಕಿಸ್ಥಾನವೆಂಬ ಸಣ್ಣ ದೇಶದೊಂದಿಗೆ ಸೆಣೆಸಲು ಅದೆಷ್ಟೂ ಜೀವಗಳನ್ನು ಬಲಿಕೊಡುತ್ತಿದ್ದೇವೆ. ಇಡೀ ಪ್ರಪಂಚವೇ ಒಂದು ಕುಟುಂಬವೆಂಬಂತೆ ಬದುಕುವ ಕಾಲ ಬರುವುದೇ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...