25 ಏಪ್ರಿಲ್ 2020

ಕೋಮು ಬೇಧ, ಜಾತಿ ಬೇಧ ಯಾರಿಗೆ ತಾತ್ಸಾರ? ಯಾರಿಗೆ ಆಹಾರ?



Photo Courtesy: PsychMatters

ಕೋಮು ದ್ವೇಷವೆಂಬ ಪದವನ್ನೇ ಬಳಸಬಹುದಿತ್ತಾದರೂ, ಆ ಪದದ ಬದಲಾಗಿ ಬೇಧವೆಂಬ ಪದವನ್ನು ಬಳಸಿದ್ದೇನೆ. ಅದಕ್ಕೆ ವಿವರಣೆಯನ್ನು ನೀಡುತ್ತೇನೆ. ಇತ್ತೀಚಿನ ದಿನಗಳಲ್ಲಿ ಕೋಮು ದ್ವೇಷದ ಸುದ್ದಿ ಅತಿಯಾಗುತ್ತಿವೆ. ಅದರಲ್ಲಿಯೂ, ಫೇಸ್‍ಬುಕ್, ವಾಟ್ಸಾಪ್ಪನಿಂದಾಗಿ ಎಂದರೇ ತಪ್ಪಿಲ್ಲ. ಇದನ್ನು ಸ್ವಲ್ಪ ಆಳಕ್ಕಿಳಿದು ಯೋಚಿಸೋಣ. ಈ ದ್ವೇಷಕ್ಕೆ, ಬೇಧಕ್ಕೆ ಕಾರಣಗಳೇನು? ಅದು ಯಾರಲ್ಲಿ ಹೆಚ್ಚಿದೆ? ಅದರಿಂದಾಗುತ್ತಿರುವ ಪರಿಣಾಮಗಳೇನು?

ಒಂದು ಕೋಮು, ಅಥವಾ ಜಾತಿ ಬೇಧ ಇಂದು ನಿನ್ನೆಯದಲ್ಲ. ಆದರೇ, ಅದು ನಮಗೆ ಹೆಚ್ಚಾಗಿ ಕಾಣುತ್ತಿರುವುದು ಇತ್ತೀಚೆಗೆ ಅನಿಸುತ್ತಿದೆ. ಆದರೇ, ವಾಸ್ತವಿಕತೆ ಬೇರೆ ಎಂಬುದು ನನ್ನ ನಿರ್ಣಯ. ಅದನ್ನು ನನ್ನ ಅನುಭವದ ಬುತ್ತಿಯಿಂದ ತೆಗೆದು ನಿಮಗೆ ಹೇಳುತ್ತೇನೆ. ಮೊದಲನೆಯದಾಗಿ, ಇದು ಯಾರಲ್ಲಿ ಹೆಚ್ಚು ಮತ್ತು ಏಕೆ? ನಾನು ಇಲ್ಲಿ ರಾಜಕೀಯ ಪಕ್ಷಗಳನ್ನಾಗಲೀ, ರಾಜಕಾರಣಿಗಳನ್ನಾಗಲೀ ತರುವುದಿಲ್ಲ. ಅದರ ಅನಿವಾರ್ಯತೆ ಕೂಡ ಇಲ್ಲ. ಪ್ರತಿಯೊಂದು ಪಕ್ಷವೂ ಧರ್ಮದ, ಜಾತಿಯ ಲೆಕ್ಕಚಾರದಲ್ಲಿ ಟಿಕೇಟ್ ನೀಡಿ, ಗೆದು ಅಧಿಕಾರಕ್ಕೆ ಬರುವುದು ಹಿಂದಿನಿಂದಲೂ ನಡೆದಿರುವುದು, ನಡೆಯುತ್ತಿರುವುದು ಮತ್ತು ನಡೆಯುವುದು ಕೂಡ. ಈ ಓಲೈಕೆ ರಾಜಕಾರಣಕ್ಕೆ ಯಾವ ಪಕ್ಷವೂ ವಿನಾಯಿತಿ ನೀಡಿಲ್ಲ.

ಆದರೇ, ಸಾಮಾನ್ಯ ಜನರಲ್ಲಿ ಅನ್ಯ ಜಾತಿಯವರನ್ನು ಕಂಡರೇ ಅಥವಾ ಧರ್ಮದವರನ್ನು ಕಂಡರೇ ಸಹಿಸಲಾಗದೇ ಇರುವುದು ಏಕೆ? ಮತ್ತು ಯಾರಿಗೆ? ನಾನು ಗಮನಿಸಿದಂತೆ, ಇದು ಹೆಚ್ಚಾಗಿ ಕಾಣುತ್ತಿರುವುದು ವಿದ್ಯಾವಂತರಲ್ಲಿ ಮತ್ತು ನಗರವಾಸಿಗಳಲ್ಲಿ ಎಂದರೇ ತಪ್ಪಾಗುವುದಿಲ್ಲ. ಇದು ನನ್ನ ಅನುಭವದ ಮಾತು. ಹಳ್ಳಿಯವರಲ್ಲಿ ಬಹಳ ಕಡಿಮೆ. ಉದಾಹರಣೆಗೆ, ನನ್ನೂರು ಬಾನುಗೊಂದಿ, ಸರಗೂರು, ಕೊಣನೂರು, ಸಿದ್ದಾಪುರ ಇಲ್ಲಿ ನಾನು ಅತಿಯಾಗಿ ಜಾತೀಯತೆಯನ್ನು ಕಂಡಿಲ್ಲ. ಏಕೆ? ಎಂಬುದನ್ನು ನೋಡುತ್ತಾ ಹೋದರೆ, ಅಲ್ಲಿನ ವಸ್ತಸ್ಥಿತಿ ಬೇರೆಯದ್ದಾಗಿರುತ್ತದೆ. ನಮ್ಮಲ್ಲಿ ಎಲ್ಲಾ ಜಾತಿಯವರು ಇದ್ದಾರೆ, ಅವರನ್ನು ಅವರದ್ದೇ ಜಾತಿಯ ಹೆಸರಲ್ಲಿ ಕರೆಯುತ್ತೇವೆ, ಆಚಾರ್ರು, ಐನೋರು, ಸಾಬ್ರು, ಗೌಡ್ರು, ಶಟ್ಟ್ರೂ, ಮಡಿವಾಳ್ರೂ, ದಲಿತ ಅನ್ನೋ ಪದ ಇದ್ರೂ (ಅಸಂವಿಧಾನಿಕ ಪದಬಳಕೆ ಇವತ್ತಿಗೂ ಇದೆ), ಕೊಡಗಿಗೆ ಹೋದರೆ ಮಾಪಿಲ್ಲೆ, ಅವರವರ ಇದು ಕರೆಯುವವರಿಗೂ ಸಮಸ್ಯೆಯಿಲ್ಲ, ಕರೆಸಿಕೊಳ್ಳುವವನಿಗೂ ಇಲ್ಲ. ನೇರವಾಗಿಯೇ ಹೇಳುತ್ತಾರೆ ನೀವು ಗೌಡ್ರುಗಳು ಬಿಡ್ರಪ್ಪ, ನೀವು ಬ್ರಾಮೂನ್ರೂ ಬಿಡ್ರಪ್ಪ ಅಂತಾ.

ಆದರೂ, ಯಾವ ತಾರತಮ್ಯ, ಜಗಳ ಗೊಂದಲಗಳು ಇಲ್ಲವೇ ಇಲ್ಲ. ನಮ್ಮಲ್ಲಿ ಬಸೀರು ಅಂತಾ ಪ್ರತಿ ವರ್ಷ ಬರ್ತಾನೆ, ಹೊಂಗೆ ಬೀಜ, ಹುಣಸೆ ಬೀಗ, ಭತ್ತ, ರಾಗಿ ವ್ಯಾಪಾರಕ್ಕೆ ಅವನ ಕುರಿತು ಸಮಸ್ಯೇನೇ ಇಲ್ಲಾ. ಇದು ನಾನು ಹುಟ್ಟಿದಾಗಿನಿಂದ ನೋಡಿದ್ದೇನೆ. ಹಾಗಂತ ಅಲ್ಲಿ ಜಗಳಗಳೇ ಆಗಿಲ್ವಾ? ಊರಿಂದ ಊರಿಗೆ ಜಗಳಗಳು ಆಗ್ತಾ ಇದ್ವು, ಬಾನುಗೊಂದಿ ಸರಗೂರಿಗೆ ಜಗಳ ಆಗಿದ್ದಾವೆ, ಬಾನುಗೊಂದಿ ಸಿದ್ದಾಪುರಕ್ಕೆ ಜಗಳ ಆಗಿದ್ದಾವೆ, ಕೊಣನೂರು ಹಂಡ್ರಂಗಿಗೆ ಜಗಳ ಆಗಿದೆ. ಅಲ್ಲೆಲ್ಲಿಯೂ ಜಾತಿ ಕಾರಣಕ್ಕೆ ಅಂತಾ ಅಲ್ಲ. ಎಲ್ಲರೂ ಒಂದೇ ಊರಲ್ಲಿ ಒಟ್ಟಿಗೆ ಬದುಕುತ್ತಿರುವಾಗ ಜಗಳ, ದ್ವೇಷ ಅನ್ನೋದು ಬರ್ತಾ ಇರಲಿಲ್ಲ.
ನಗರವಾಸಿಗಳ ಸಮಸ್ಯೆ ಏನು? ಬಹುತೇಕ ಒಂದೇ ಜಾತಿಯವರು ಒಂದೇ ಕಡೆಯಲ್ಲಿಯೇ ಇರುತಿದ್ದರು. ಉದಾಹರಣೆಗೆ, ಮೈಸೂರು, ಒಕ್ಕಲಿಗರೆಲ್ಲಾ ಕೆ.ಜಿ.ಕೊಪ್ಪಲು, ಪಡುವಾರಹಳ್ಳಿ, ಬ್ರಾಹ್ಮಣರು ಕೆ.ಆರ್. ಪುರಂ, ಅಗ್ರಹಾರ, ಅಶೋಕಪುರಂ ಅಲ್ಲಿ ದಲಿತರು, ಮಂಡಿಮೊಹಲ್ಲ ಮುಸಲ್ಮಾನರು, ಹೀಗೆ ಒಂದೇ ಕೋಮು ಅಥವಾ ಜಾತಿಯವರೆಲ್ಲಾ ಒಂದೆಡೆಗೆ ಇದ್ದರೇ ಅವರಿಗೆ ಅನ್ಯ ಜಾತಿಯ/ಧರ್ಮದವರೊಂದಿಗೆ ವ್ಯವಹಾರಗಳು ಇರುವುದಿಲ್ಲ. ಅವರು ಅನ್ಯರಂತೆ ಕಾಣುತ್ತಾರೆ. ಮುಂಜಾನೆ ಐದಕ್ಕೆ ಮೈಕ್ ಶಬ್ಧ ಕರ್ಕಶವೆನಿಸುತ್ತದೆ. ಗಣೇಶನ ಉತ್ಸವ ಗಜಿಬಿಜಿ ಅನಿಸುತ್ತೆ. ಕೊಣನೂರಿನಲ್ಲಿ ಮುಸಲ್ಮಾನರು ಬಂದು ಗಣೇಶ ಉತ್ಸವದಲ್ಲಿ ಭಾಗವಹಿಸುತ್ತಾರೆ, ದೇಣಿಗೆ ಕೋಡುತ್ತಾರೆ. ಯಾವುದೇ ತಾರತಮ್ಯವಿಲ್ಲ.

ಇನ್ನೊಂದು ಪ್ರಮುಖವೆಂದರೇ, ವಿದ್ಯಾವಂತರು. ಓದೋಕೆ ಅಂತಾ ಬಂದವರೆಲ್ಲರೂ ಅವರದ್ದೇ ಸಮುದಾಯದ ಹಾಸ್ಟೆಲ್ ಸೇರುವುದ, ಒಕ್ಕಲಿಗರ ಹಾಸ್ಟೆಲ್, ನಾಮಧಾರಿ, ಲಿಂಗಾಯತ, ಬ್ರಾಹ್ಮಣ, ಅಲ್ಲೆಲ್ಲಾ ಅವರದ್ದೇ ಜಾತಿಯವರೊಂದಿಗೆ ಸ್ನೇಹ ಮಾಡಿಕೊಂಡು, ಬೇರೆಯವರ ಕುರಿತು ಮಾತನಾಡಿ ಕೊನೆಯವರೆಗೂ ಅನ್ಯ ಜಾತಿ/ಧರ್ಮದವರಿಂದ ದೂರ ಉಳಿಯುತ್ತಾ ತಮಗೆ ತಿಳಿಯದೇ ದ್ವೇಷವನ್ನು ಬೆಳೆಸಿಕೊಳ್ಳುತ್ತಾರೆ.

ಅದರ ಜೊತೆಗೆ, ಇನ್ನೊಂದು ವಿಚಾರವೆಂದರೇ, ಮೀಸಲಾತಿ ಮತ್ತು ಉಚಿತ ಸವಲತ್ತುಗಳು. ಇದರಿಂದಾಗಿಯೇ ಅನೇಕ ಹಿಂದುಳಿದ ಜಾತಿಯವರನ್ನು ದ್ವೇಷಿಸುತ್ತಾರೆ. ನಾವು ಇಷ್ಟೆಲ್ಲಾ ಖರ್ಚುಮಾಡಿ ಓದಿದೆವು, ಅವರಿಗೆ ಎಲ್ಲವೂ ಉಚಿತ, ಮುಂಗಡವಾಗಿ ಅವರಿಗೆ ಕೆಲಸ ಸಿಗುತ್ತೆ, ಪ್ರಮೋಷನ್ ಸಿಗುತ್ತೆ ಅನ್ನುವ ಪುಕಾರುಗಳು. ಮುಸಲ್ಮಾನರ ಬಗ್ಗೆ ಕೂಡ ಇದೇ ಅಸಮಾಧಾನವಿದೆ, ಮೂರು ಜನರು ಹೆಂಡತಿಯರು, ಇಪ್ಪತ್ತು ಮಕ್ಕಳು. ನನಗೆ ಒಮ್ಮೊಮ್ಮೆ ತಮಾಷೆ ಎನಿಸೋದು, ಏನಂದ್ರೇ, ಅವರಿಗೆ ಮೂರು ಜನ ಹೆಂಡಿರು, ನನಗಿಲ್ಲ ಅನ್ನೋ ಬೇಸರನಾ? ಅಥವಾ ಕಾಳಜಿನಾ? ನಮ್ಮಲ್ಲಿಯೂ ನಮ್ಮಜ್ಜಿಗೆ ಆರು ಜನರು ಮಕ್ಕಳು, ಅವರ ಅಮ್ಮನಿಗೆ ಒಂಬತ್ತು ಮಕ್ಕಳು. ಕಾಲ ಬದಲಾದಂತೆ ಜನರು ಬದಲಾದರು. ಮುಸಲ್ಮಾನರಲ್ಲಿಯೂ ಅಷ್ಟೆ, ಪ್ರತಿಯೊಬ್ಬರು ಮೂರು ಹೆಂಡತಿಯರನ್ನು ಹೊಂದಿದ್ದಾರೆಯೇ? ಪ್ರತಿಯೊಬ್ಬರಿಗೂ ಐದಾರು ಮಕ್ಕಳಿದ್ದಾವೆಯೇ? ನನ್ನ ಬಹುತೇಕ ಎಲ್ಲಾ ಮುಸ್ಲೀಮ್ ಸ್ನೇಹಿತರಿಗೂ ಎರಡು/ಮೂರು ಮಕ್ಕಳು.

ದಲಿತರ ಮತ್ತು ಹಿಂದುಳಿದ ಜಾತಿಯವರನ್ನು ಮತ್ತು ಮೀಸಲಾತಿಯನ್ನು ವಿರೋಧಿಸುವ ಭರದಲ್ಲಿ ವಾಸ್ತವಾಂಶವನ್ನು ಮುಚ್ಚಿಡುತ್ತಿರುವುದು. ಎಪ್ಪತ್ತು ವರ್ಷಗಳ ಹಿಂದೆ, ದಲಿತರ ಜೀವನ ಹೇಗಿತ್ತೆಂಬುದನ್ನು ದಯವಿಟ್ಟು ಆತ್ಮ ಸಾಕ್ಷಿ ಸಮೇತ ವಿವೇಚಿಸಿ. ಅಷ್ಟೆಲ್ಲಾ ಏಕೆ? ನಾವು ಓದುವ ಸಮಯದಲ್ಲೆಯೇ ಹೇಗಿತ್ತು? ಆ ದಿನಗಳಿಗೆ ನಿಜವಾಗಿಯೂ ಅನಿವಾರ್ಯತೆ ಇತ್ತು. ಈಗಲೂ ಎಲ್ಲಾ ದಲಿತರ, ಹಿಂದುಳಿದ ವರ್ಗಗಳ ಪರಿಸ್ಥಿತಿ ಸಂಪೂರ್ಣವಾಗಿ ಸುಧಾರಿಸಿದೆ ಎಂದು ಹೇಳಲಾಗುವುದಿಲ್ಲ. ಅದರ ಜೊತೆಗೆ ಈ ದಿನಗಳಲ್ಲಿ ಆರ್ಥಿಕತೆಯ ಆಧಾರದಲ್ಲಿ ಮೀಸಲಾತಿ ಇಡುವುದು ಅವಶ್ಯಕತೆಯಿದೆ, ಏಕೆಂದರೇ ಹಳ್ಳಿಗಾಡಿನ ಆರ್ಥಿಕತೆ ಅಧೋಗತಿ ತಲುಪಿರುವುದು ಸತ್ಯ. ಅದರಂತೆಯೇ, ಜಾತಿ ಆಧಾರದಲ್ಲಿ, ಉಳ್ಳವರು ಉಚಿತ ಸವಲತ್ತುಗಳನ್ನು ಪಡೆದುಕೊಳ್ಳುವುದು ನಿಲ್ಲಬೇಕಾಗಿದೆ. ಆದರೇ, ನಮ್ಮಲ್ಲಿ ಉಚಿತವೆಂದರೇ ವಿಷವನ್ನು ಕೊಳ್ಳುವವರು ಕಡಿಮೆಯಿಲ್ಲ. ಹತ್ತು ರೂಪಾಯಿ ಉಚಿತ ಹಾಲಿಗೆ ಪರದಾಡಿದ್ದು ಕಂಡಿಲ್ಲವೇ? ಬೈಕ್‍ನಲ್ಲಿ ಬಂದು ಹಾಲು ಕೊಂಡವರೆಷ್ಟು? ತಾರಸಿ ಮನೆಯವರೆಷ್ಟು? ಇವೆಲ್ಲವೂ ಸರ್ಕಾರಗಳ ಕೈಯಲ್ಲಿರುವ ವಿಚಾರಗಳು, ಅವುಗಳನ್ನು ನಮ್ಮ ಮನದೊಳಕ್ಕೆ ತಂದು, ಅಣ್ಣ ತಮ್ಮಂದಿರಂತಿರಬೇಕಾದ ನಾವುಗಳು ಒಳಗೊಳಗೆ ಕತ್ತಿ ಮಸೆಯುವುದು ದುರಂತ.

ಸರ್ಕಾರಿ ಉದ್ಯೋಗಗಳನ್ನು ಬಿಡಿ, ಖಾಸಗಿ ಸಂಸ್ಥೆಗಳಲ್ಲಿ ಕೂಡ ಪ್ರತಿಯೊಂದು ಜಾತಿಯವರ ಒಂದು ಸಮಿತಿ, ಸಂಘಗಳಿವೆ. ಪ್ರತಿಯೊಂದು ಜಾತಿಯವರು ವಾಟ್ಸಪ್, ಫೇಸ್‍ಬುಕ್ ಗುಂಪು ರಚಿಸಿಕೊಂಡಿಲ್ಲವೇ? ವಿದ್ಯಾವಂತರೆನಿಸಿಕೊಂಡವರು, ನಮ್ಮ ಜಾತಿವನಿಗೆ ಮಂತ್ರಿಗಿರಿ ಸಿಕ್ಕಿತೆಂದು ಸಂಭ್ರಮಿಸಿಲ್ಲವೇ? ನಮ್ಮವರೇ ಮಂತ್ರಿಗಳು, ನಮ್ಮವರೇ ಶಾಸಕರೆಂದು ಬೀಗಿಲ್ಲವೇ? ಮೊದಲು ನಾವು ಶುದ್ಧೀಯಾಗಬೇಕು. ಜಾತಿಯೆಂಬುದು ಧರ್ಮವೆಂಬುದು ಒಂದು ಆಚರೆಣೆಯಷ್ಟೆ, ಯಾವುದೂ ಮೇಲಿಲ್ಲ, ಯಾವುದೂ ಕೀಳಿಲ್ಲ. ಧರ್ಮದ ವಿಚಾರ ಬಂದಾಗ ನಮ್ಮದು ಶ್ರೇಷ್ಠ ಧರ್ಮವೆಂಬುವವರು, ಜಾತಿಯ ವಿಚಾರ ಬಂದಾಗ ಪ್ರಾಣಿ ಬಲಿ ಕೊಡುವುದು, ಮಾರಮ್ಮನ ಹಬ್ಬ, ಊರ ಹಬ್ಬಗಳನ್ನು ತುಚ್ಛವಾಗಿ ಕಾಣುವುದಿಲ್ಲವೇ? ಮಾಂಸ ತಿನ್ನುವ ಜಾತಿಯವರು ಕೀಳೆಂಬುದು ಬಂದಾಗ ಧರ್ಮದ ವಿಶಾಲತೆ ಅಡ್ಡ ಬರುವುದಿಲ್ಲವೇ? ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು ಅಷ್ಟೆ, ಅದಕ್ಕೆ ಈ ಧರ್ಮ, ಜಾತಿ, ಭಾಷೆಯ, ದೇಶದ ಅಡೆತಡೆಗಳಿರಬಾರದು.

ಹೆಮ್ಮೆಯಿಂದ ಹೇಳುತ್ತೇನೆ, ಭಾಷೆ ಬಾರದ ರಾಜ್ಯಗಳಲ್ಲಿ, (ತಮಿಳುನಾಡು, ಆಂದ್ರ, ಮಹರಾಷ್ಟ್ರ, ಓಡಿಸ್ಸಾ, ರಾಜಸ್ಥಾನ, ಉತ್ತರಖಾಂಡದ) ಹಳ್ಳಿಗಾಡುಗಳಲ್ಲಿ ನಾನು ಫೀಲ್ಡ್ ವಿಸಿಟ್ ಮಾಡಿದ್ದೇನೆ, ಅವರ್ಯಾರು ನನ್ನ ಜಾತಿ ಕೇಳಿಲ್ಲ, ಭಾಷೆಯ ಬಗ್ಗೆ, ರಾಜ್ಯದ ಬಗ್ಗೆ ತಕರಾರು ಎತ್ತಲಿಲ್ಲ. ಆ ನನ್ನ ಅನುಭವಗಳೇ ನನಗೆ ಜಾತಿಯಾಗಲೀ, ಭಾಷೆಯಾಗಲೀ, ಧರ್ಮವಾಗಲೀ ಮುಖ್ಯವೆನಿಸುವುದಿಲ್ಲ.

ನಾನು ಪಿ.ಎಚ್‍ಡಿ ಮಾಡಿದ್ದೇನೆ, ಇಂದಿಗೂ ಸರಗೂರಿನ ಬ್ರಾಹ್ಮಣರ ಮನೆಯ ಒಳಕ್ಕೆ ಹೋಗಿಲ್ಲ. ನನ್ನ ಸ್ನೇಹಿತರಿದ್ದಾರೆ. ಅವರ ಮಡಿವಂತಿಕೆಯನ್ನು ಗೌರವಿಸುತ್ತೇನೆ. ಮನೆ ಹೊರಾಂಗಣದಲ್ಲಿ ನಿಂತು ಮಾತಾಡಿಸುತ್ತೇನೆ. ಅದು ವೈವಿದ್ಯತೆ. ಹಾಗಂತ ನನಗೆ ಬ್ರಾಹ್ಮಣ ಸ್ನೇಹಿತರೇ ಇಲ್ಲವೇ? ಅನೇಕರಿದ್ದಾರೆ, ಸೇರಿಸುವವರ ಮನೆಗೆ ಹೋಗುತ್ತೇನೆ, ಊಟ ಮಾಡುತ್ತೇನೆ.

ಎಲ್ಲಾ ಜಾತಿಯ ಜನರೊಂದಿಗೆ ಬೆರೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ, ಎಲ್ಲಾ ಧರ್ಮದವರ ಮನೆಯಲ್ಲಿ ಊಟ ಮಾಡುವುದನ್ನು ಪ್ರಾರಂಭಿಸಿ, ನಿಮಗೆ ಅರಿಯದಂತೆ ಅವರ ಆಚಾರಗಳು, ವಿಚಾರಗಳು ಹಿಡಿಸುತ್ತಾ ಹೋಗುತ್ತವೆ. ದ್ವೇಷ ಮರೆಯಾಗುತ್ತ ಹೋಗುತ್ತದೆ. ಸೇರಿಸುವುದಿಲ್ಲವೇ ಬಿಟ್ಟು ಬಿಡಿ.

ಆದರೇ, ಒಂದು ವಿಚಾರವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇಲ್ಲಿ ರಾಜಕಾರಣಿಗಳನ್ನು ಹೊರತುಪಡಿಸಿ ಮೂರು ವರ್ಗವಿದೆ. ಮೊದಲನೆಯ ವರ್ಗ ಬೆಂಕಿ ಹಚ್ಚಿ ಎನ್ನುವುದು ಮತ್ತೊಂದು ಬೆಂಕಿ ಹಚ್ಚುವುದು. ಮೊದಲನೆಯವರ ಸಂಖ್ಯೆ ಬಹಳ ಕಡಿಮೆ. ಅವರುಗಳು, ಹೆಚಿನ ಸಂಖ್ಯೆಯ ಸೈನಿಕರನ್ನು ಬಳಸಿ, ಈ ಕೃತ್ಯವನ್ನು ಮಾಡಿಸುತ್ತದೆ. ಮಾಡಿಸಿದ್ದಕ್ಕೆ ತಕ್ಕ ಪ್ರತಿಫಲಗಳೂ ಸಿಗುತ್ತವೆ. ಸ್ಥಾನಮಾನಗಳು, ಆರ್ಥಿಕತೆ ಇತ್ಯಾದಿ. ಎರಡನೆಯ ಗುಂಪು, ಭಾವನಾತ್ಮಕವಾಗಿ ಸ್ಪಂದಿಸುದು. ಇವುಗಳಿಗೆ, ಯಾವ ಲಾಭಾಂಶವೂ ಇಲ್ಲ, ಮತ್ತು ಅದನ್ನು ನಿರೀಕ್ಷೆ ಕೂಡ ಮಾಡದೇ, ನಿಷ್ಠಾವಂತರಾಗಿ ಬದುಕುತ್ತಾರೆ. ಮೂರನೆಯ ವರ್ಗ ಚಾಚು ತಪ್ಪದೇ ಪಾಲಿಸುತ್ತದೆ, ಅದಕ್ಕೆ ಸಾಧಕ ಬಾಧಕಗಳ ಲೆಕ್ಕಚಾರವೇನೂ ಬೇಡ. ಈ ಗುಂಪು ಜಾತಿಯ ವಿಚಾರದಲ್ಲಿ, ಧರ್ಮದ ವಿಚಾರದಲ್ಲಿ ಅತ್ಯಾಚಾರಿಯನ್ನು ಸಮರ್ಥಿಸಿಕೊಳ್ಳುತ್ತದೆ, ಕೊಲೆಗಡುಕನನ್ನು ಕಾಪಾಡುತ್ತದೆ, ಅಮಾಯಕನನ್ನು ಕೊಲ್ಲುತ್ತದೆ, ಸ್ವಂತದವರನ್ನು ಕಳೆದುಕೊಳ್ಳುತ್ತವೆ. ಇವೆಲ್ಲವೂ ಭಾವನೆಗಳ ಗೊಂದಲದಲ್ಲಿ ಜೀವಿಸಲು ಹೊರಟಿರುವವರು. ಸರಿ ತಪ್ಪನ್ನು ಗುರುತಿಸಲೂ ಆಗದವು.

ಕೊನೆಯದಾಗಿ ಒಂದು ಮಾತು ಹೇಳುತ್ತೇನೆ. ಹಿಂದೆ, ಸೋಷಿಯಲ್ ಮೀಡಿಯಾ ಇರಲಿಲ್ಲ, ಸರ್ಕಾರಗಳು ಮತ್ತು ಜನಪ್ರತಿನಿಧಿಗಳು ನಿಜಕ್ಕೂ ಕೋಮು ಸೌಹಾರ್ಧತೆಗೆ ಶ್ರಮ ಪಡುತ್ತಿದ್ದರು. ಉದಹಾಹರಣೆಗೆ, ತೊಂಬತ್ತರ ದಶಕದಲ್ಲಿ ರಾಮ ಜನ್ಮಭೂಮಿ ವಿವಾದ. ಅದರಂತೆಯೇ, ನೋಡಿ ಅದರಲ್ಲಿಯೂ ಚಾಮರಾಜನಗರ ಜಿಲ್ಲೆಯಲ್ಲಿ ಜಾತಿ ಜಗಳಗಳು ಅತಿರೇಕವಾಗಿದ್ದವು. ದಲಿತ ಚಳುವಳಿಗಳೂ ಅಷ್ಟೆ. ದೇವಸ್ಥಾನಕ್ಕೆ ನುಗ್ಗುವುದಕ್ಕೆ, ತಡೆಯುವುದಕ್ಕೆ ಅದೆಷ್ಟೋ ರಕ್ತಪಾತಗಳು. ಆದರೇ, ಈಗ ಜನ ಬುದ್ದವಂತರಾಗಿದ್ದಾರೆ, ದೇವಸ್ಥಾನವನ್ನೇ ತಿರಸ್ಕರಿಸಿದ್ದಾರೆ, ರಾಮಮಂದಿರ ತಗೊಂಡು ಏನ್ ಮಾಡಬೇಕು ಅಂತಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ಮಾಧ್ಯಮಗಳು ಮುಸ್ಲೀಮರ ವಿರುದ್ಧ ಅದೆಷ್ಟು ಸಾಧ್ಯವೋ ಅಷ್ಟೂ ಬೆಂಕಿ ಹಚ್ಚಲು ಪ್ರಯತ್ನಿಸಿವೆ, ನಮಗೆ ಅರಿವಿದೆ ಯಾವುದು ಸತ್ಯ, ಯಾವುದು ಬೇಕು ಅಂತಾ. ಆದರೇ, ಕೆಲವು ಅಂಧರು, ಆ ಅಫೀಮಿನ ಗುಂಗಿನಲ್ಲಿ ನರಳುತ್ತಿದ್ದಾರೆ. ಅವರು, ಅಲ್ಲಿಂದ ಬರುವುದಕ್ಕೆ ಅಸಾಧ್ಯ, ಏಕೆಂದರೇ, ಧರ್ಮ/ಜಾತಿ ಯಾವತ್ತಿಗೂ ಅಫೀಮು. ದ್ವೇಷದಿಂದ ಸುಲಭಕ್ಕೆ ಮುಕ್ತಿ ದೊರೆಯುವುದಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...