28 ಏಪ್ರಿಲ್ 2020

ಭೂತದ ಕೈಯಲ್ಲಿ ವರ್ತಮಾನ ಕೊಟ್ಟು ಭವಿಷ್ಯವನ್ನು ಕತ್ತಲಾಗಿಸುತ್ತಿರುವ ದೃಶ್ಯ ಮಾಧ್ಯಮಗಳು!




ಆತ್ಮೀಯರೇ,

ಈ ಲೇಖನವನ್ನು ಎರಡು ಪ್ರಮುಖ ವಿಚಾರಗಳನ್ನು ತಮ್ಮ ಮುಂದಿಡಲು ಬಳಸುತ್ತಿದ್ದೇನೆ. ಮೊದಲನೆಯದ್ದು, ಒಬ್ಬ ವ್ಯಕ್ತಿಯ ಹಿಂದಿನ ದಿನಗಳನ್ನು ಕೆದಕಿ, ಇಂದಿನ ಅಸ್ತಿತ್ವವನ್ನು ಹಾಳು ಮಾಡುವುದು ಅಥವಾ ಹೊಗಳಿ ಮೇಲಕ್ಕೇರಿಸುವುದು, ಎರಡನೆಯದ್ದು, ನಮ್ಮವರು ಹೊರಗಿನವರು ಎಂಬ ಬೇಧದಲ್ಲಿ ನಮಗೆ ನಾವೇ ಮೋಸ ಮಾಡಿಕೊಳ್ಳುತ್ತಿರುವುದು. ಅಂದರೇ, ನಮ್ಮವರು ಮಾಡುವುದೆಲ್ಲವೂ ಸರಿ, ಬೇರೆಯವರು ಮಾಡಿದರೆ ತಪ್ಪು ಎಂದು ಬೋಧಿಸುತ್ತಿರುವುದು.

ಇತ್ತೀಚೆಗೆ ಸೋನಿಯಾ ಗಾಂಧಿಯವರ ಹಿಂದಿನ ದಿನಗಳ ಕುರಿತು ಚರ್ಚೆಗಳಾದವು. ಕೆಲವರಿಗೆ ಇದು ಹೊಸವಿಚಾರವಿರಬಹುದು. ಆದರೇ, ನಾನು ಸೇರಿದಂತೆ ಅನೇಕರಿಗೆ ಅದೊಂದು ವಿಚಾರವೇ ಅಲ್ಲಾ. ಇಪ್ಪತ್ತು ವರ್ಷಗಳ ಹಿಂದೆ, ಸುಬ್ರಹ್ಮಣ್ಯನ್ ಸ್ವಾಮಿಯವರ ಈ ಕುರಿತು ಮಾತನಾಡುವಾಗ ನಿಜಕ್ಕೂ ಆಸಕ್ತಿ ಬರುತ್ತಿತ್ತು. ಆದರೇ, ದಿನ ಕಳೆದಂತೆ, ಅದ್ಯಾವುದು ಮುಖ್ಯವಲ್ಲವೆನಿಸತೊಡಗಿದೆ. ಇವರ ವಿಚಾರವನ್ನೇ ಹಿಡಿದು ಮಾತನಾಡೋಣ. ಅದಕ್ಕೂ ಮುಂಚಿತವಾಗಿ, ಒಂದು ವಿಷಯವನ್ನು ಸ್ಪಷ್ಟಪಡಿಸಬೇಕು. ನಾನು, ಕಾಂಗ್ರೇಸಿಗನೂ ಅಲ್ಲ ಬಿಜೆಪಿ ವಿರೋಧಿಯೂ ಅಲ್ಲ. ಓದಿದ ತಕ್ಷಣವೇ ತಾವು ಈ ಎರಡರಲ್ಲಿ ಒಂದು ಪಕ್ಷಕ್ಕೆ ಸೇರಿಸಿಬಿಡುತ್ತೀರಿ. ನನ್ನ ಪ್ರತಿಯೊಂದು ಬರವಣಿಗೆ ಬಂದಾಗಲೂ ಯಾವುದಾದರೂ ಒಂದು ಪಕ್ಷಕ್ಕೆ ನನ್ನನ್ನು ನೇತುಹಾಕಲು ಸಾಕಷ್ಟು ಪ್ರಯತ್ನಗಳು ನಡೆದಿವೆ. ಇರಲಿ, ವಿಷಯಕ್ಕೆ ಬರೋನ. 

ಸೋನಿಯಾ ಗಾಂಧಿಗೆ ವಯಸ್ಸು ಈಗ 73 ವರ್ಷ, ಅವರು ಮದುವೆಯಾಗಿ ಸುಮಾರು 50 ವರ್ಷಗಳಾಗಿವೆ. ಅವರು ಇಟಲಿ ಮೂಲದವರು, ಅದನ್ನು ಅವರು ಎಂದಿಗೂ ಇಲ್ಲ ಎಂದಿಲ್ಲ. ಸರ್ವೇಸಾಮಾನ್ಯವಾಗಿ ಇಟಲಿಯ ಹೆಸರೇ ಇರಬೇಕಿತ್ತು ಹಾಗಾಗಿ ಅಲ್ಲಿನ ಹೆಸರು ಇದೆ. ಅದರಲ್ಲಿ ತಪ್ಪೇನು? ಮದುವೆಯಾದ ನಂತರ ಗಂಡನ ಹೆಸರನ್ನು ಸೇರಿಸಿಕೊಳ್ಳುವುದು ವಾಡಿಕೆ, ಅದರಂತೆ ಗಾಂಧಿ ಸೇರಿದೆ. ಮದುವೆಗೆ ಮುಂಚಿತವಾಗಿ ಅವರು ಬಾರ್ ಗರ್ಲ್ ಆಗಿ ಕೆಲಸ ಮಾಡುತ್ತಿದ್ದರು ಎಂಬ ಮತ್ತೊಂದು ಆರೋಪ. ಅದರಲ್ಲಿ, ತಪ್ಪೇನು? ಬಾರ್ ಗರ್ಲ್ ಎಂದರೇನು? ಅವರ, ದುಡಿಮೆ ಅವರು ಆ ಉದ್ಯೋಗ ಮಾಡಿರುವುದು ತಪ್ಪೆ? ಅದು, ಕಳ್ಳತನವೇ? ದರೋಡೆಯೇ? ವಂಚನೆಯೇ? ಅದೊಂದು ಉದ್ಯೋಗವಲ್ಲವೇ? ಅದರಲ್ಲಿ ತಪ್ಪು ಹುಡುಕುವುದು ಎಂಥಹ ಮನಸ್ಥಿತಿ? ಮದುವೆಯಾದ ನಂತರ, ಗಂಡನ ಮನೆಗೆ ಹೋಗುವುದು, ಭಾರತೀಯ ಸಂಪ್ರದಾಯ. ಅದರಂತೆ, ಅವರು ಇಲ್ಲಿಗೆ ಬಂದರು ನೆಲೆಸಿದರು. 

ಇಲ್ಲಿ, ಗಮನಿಸಬೇಕಾದ ಪ್ರಮುಖ ವಿಚಾರವೆಂದರೇ, ಅವರು ಪ್ರೀತಿಸಿದ್ದು ಒಬ್ಬ ಪೈಲಟ್‍ನನ್ನು. ರಾಜೀವ್ ಗಾಂಧಿ, ಆ ಸಮಯಕ್ಕೆ ಒಬ್ಬ ಪೈಲಟ್ ಅಷ್ಟೆ. ಸೋನಿಯಾ ಗಾಂಧಿಗೆ ಕನಸು ಬಿದ್ದಿತ್ತ? ರಾಜೀವ್ ಗಾಂಧಿ ಪ್ರಧಾನಿಯಾಗುತ್ತಾರೆ? ಹತ್ಯೆಯಾಗುತ್ತೆ, ನಂತರ ಪಕ್ಷದ ಚುಕ್ಕಾಣಿ ಕೈಯಲ್ಲಿ ಸಿಗುತ್ತೆ ಅಂತಾ? ಕಟ್ಟುಕಥೆಗಳಿಗೆ ಸ್ವಲ್ಪವಾದರೂ ಮಿತಿಯಿರಬೇಕಿತ್ತು. ಅನೇಕರು ಭಾಷಣ ಬಿಗಿಯುತ್ತಾರೆ, ನನಗೆ ಚಿಕ್ಕಂದಿನಿಂದಲೇ ತಿಳಿದಿತ್ತು, ನಾನು ಇದೇ ಆಗುತ್ತೇನೆಂದು, ಹಾಗೆಯೇ ಆದೆ, ಅದೇ ಗುರಿಯ ಹಾದಿಯಲ್ಲಿ ಸಾಗಿದೆ. ಎಂತಹ ಮಣ್ಣು ಇರುವುದಿಲ್ಲ. ಅದನ್ನು ಇನ್ನು ಆಳಕ್ಕಿಳಿದು ವಿವರಿಸುತ್ತೇನೆ.

ಮಹಾತ್ಮ ಗಾಂಧೀಜೀಯವರ ಜೀವನಕ್ಕೆ ಬರೋನ. ಅವರು ಕನಸು ಕಂಡಿದ್ದರಾ? ನಾನು ಮುಂದೊಂದು ದಿನ ಮಹಾತ್ಮ ಎನಿಸಿಕೊಳ್ಳುತ್ತೇನೆಂದು? ಅಥವಾ ರಾಷ್ಟ್ರಪಿತನಾಗಬೇಕೆಂದು ದುಡಿದರಾ? ನಾವುಗಳು ಅಷ್ಟೆ, ಪ್ರತಿಯೊಬ್ಬರೂ ಅಷ್ಟೆ, ಏನಾದರೂ ಸಾಧಿಸಬೇಕೆಂದು ಹೊರಡುತ್ತೇವೆ, ನಾವು ಹೀಗೆಯೇ ರೂಪಿಸಿಕೊಳ್ಳುತ್ತೇವೆಂದು ಬ್ಲೂ ಪ್ರಿಂಟ್ ಹಾಕಿ ಹೋಗುವುದಿಲ್ಲ. ಮನಸಾಕ್ಷಿಯಿಂದ ಕೇಳಿನೋಡಿ. ಇದೇ, ವಿಚಾರವನ್ನು ನರೇಂದ್ರ ಮೋದಿಯವರ ವಿಚಾರಕ್ಕೆ ತರೋನ. ಟೀ ಮಾರುತ್ತಿದ್ದವರು ಎಂದು ಹೇಳುತ್ತಾರೆ, ಅವರಿಗೆ ಕನಸು ಬಿದ್ದಿತ್ತ? ರವಿ ಬೆಳಗೆರೆಯವರು ಅತಿಯಾಗಿ ಕುಡಿದು ಬೀಳುತ್ತಿದ್ದರು ಎಂಬ ಮಾತುಗಳನ್ನು ಕೇಳಿದ್ದೇನೆ, ಹಾಗಂತ, ಅವರೊಬ್ಬ ಪ್ರಖ್ಯಾತ ಲೇಖಕರಾದ ಮೇಲೆ, ನೀನೊಬ್ಬ ಕುಡುಕ ಎಂದು ಅವರ ಪುಸ್ತಕಗಳನ್ನು ದೂರವಿಟ್ಟಿದ್ದೀವ? 

ಡಕಾಯಿತಿಯಾಗಿದ್ದ, ಪೂಲನ್ ದೇವಿ ಜನನಾಯಕಿಯಾಗಿದ್ದು? ಜೇಡರಹಳ್ಳಿ ಕೃಷ್ಣರವರು ರೌಡಿಯಿಸಂ ಬಿಟ್ಟು ರಾಜಕಾರಣಿಯಾಗಲಿಲ್ಲವೇ? ಮುತ್ತಪ್ಪ ರೈರವರು? ಅಷ್ಟೆಲ್ಲಾ ಏಕೆ ಸ್ವಾಮಿ, ತಮ್ಮ ಜೀವನವನ್ನೇ ತಾವುಗಳು ಒಮ್ಮೆ ಅವಲೋಕಿಸುತ್ತಾ ಬನ್ನಿ. ನಾನು ಇದನ್ನು ಅನೇಕ ಬಾರಿ ಹೇಳಿದ್ದೇನೆ, ಮತ್ತೊಮ್ಮೆ ಹೇಳುತ್ತೇನೆ. ನಮ್ಮ ಹಾಸ್ಟೆಲ್ ನಲ್ಲಿ ಅನೇಕರು, ಹಗಲು ರಾತ್ರಿ ಎನ್ನದೇ ಇಸ್ಪೀಟ್ ಆಡ್ತಾಯಿದ್ರು, ಬ್ಲೂಫಿಲ್ಮ್ ನೋಡ್ತಾ ಇದ್ರು, ಕೆಲವರಿಗೆ ಹುಡುಗಿಯ ಚಟಗಳು ಇತ್ತು, ಇನ್ನೇನೋ ಮಾಡ್ತಾ ಇದ್ರು. ಅವರಲ್ಲಿ ಅನೇಕರು, ಪೋಲಿಸ್ ಇಲಾಖೆಯಲ್ಲಿದ್ದಾರೆ, ರಾಜಕೀಯದಲ್ಲಿದ್ದಾರೆ, ಉಪನ್ಯಾಸಕರಾಗಿದ್ದಾರೆ. ಮುಂದೊಂದು ದಿನ ಇನ್ನು ಎತ್ತರಕ್ಕೆ ಬೆಳೆದು ಕಮಿಷನರ್ ಆಗಬಹುದು, ಮಂತ್ರಿಗಳಾಗಬಹುದು, ಪ್ರಾಂಶುಪಾಲರು, ನಿರ್ದೇಶಕರಾಗಬಹುದು. ಯಾರಿಗೆ ಗೊತ್ತು? ಆ ವಯಸ್ಸಿನಲ್ಲಿ, ಆ ಕಾಲಮಾನದಲ್ಲಿ ಏನಾಗಬೇಕಿತ್ತು ಅದು ಆಗಿದೆ. ಅದನ್ನೇ ಹಿಡಿದುಕೊಂಡು ಅವರ ತೇಜೋವಧೆಗೆ ಇಳಿದರೆ?

ನಾನೇ ವೈಯಕ್ತಿಕವಾಗಿ ಹೇಳುತ್ತೇನೆ, ಬರೆದುಕೊಂಡಿದ್ದೇನೆ. ನಾವು ರಾತ್ರಿಯಿಡೀ ಕುಡಿಯುತ್ತಿದ್ದ ದಿನಗಳಿವೆ. ಬೈಕ್ ನಲ್ಲಿ ನೂರಾರು ಕಿಮೀ ಸುತ್ತಾಡುತ್ತಿದ್ದ ದಿನಗಳಿವೆ, ಕಾರಿನಲ್ಲಿ ಸಾವಿರಾರು ಕಿಮೀ ರಾತ್ರಿಯಿಡಿ ಓಡಾಡಿದ ದಿನಗಳಿವೆ. ಕಾಡು ಮೇಡನ್ನು ಸುಖಾ ಸುಮ್ಮನೆ ಅಲೆದಾಡಿದ ದಿನಗಳಿವೆ. ಸಿನೆಮಾ ನೋಡಲು ಮೂರು ಗಂಟೆ ಮುಂಚಿತವಾಗಿ ಥಿಯೇಟರ್ ಮುಂದೆ ನಿಂತ ದಿನಗಳಿವೆ. ಅವೆಲ್ಲವೂ ಆ ದಿನಗಳು. ಅದನ್ನು ಹಿಡಿದು ಬಂದು, ಈ ದಿನದ ನನ್ನ ದಿನಚರಿಗೆ ಹೋಲಿಸಿದರೇ? ನನ್ನ ಇಂದಿನ ಬದುಕು ಬದಲಾಗಿದೆ. ಮನುಷ್ಯ ವಿಕಸನಗೊಳ್ಳಬೇಕು. ಅದೊಂದು ನಿರಂತರ ಕ್ರಿಯೆ. ನೀವುಗಳು ನಿಮ್ಮನ್ನೇ ಪ್ರಶ್ನಿಸಿಕೊಳ್ಳಿ. ನೀವು ನಿಮಗಾಗಿ, ನಿಮ್ಮ ಬದಲಾವಣೆಗಾಗಿ ಒಮ್ಮೆ ಬೆತ್ತಲಾಗಿ. ನಮ್ಮ ತಪ್ಪುಗಳನ್ನು, ನ್ಯೂನ್ಯತೆಗಳನ್ನು ಒಪ್ಪುವುದಕ್ಕೆ ಗುಂಡಿಗೆ ಎರಡಿರಬೇಕು. ಅದು, ಸಾಮಾನ್ಯದ ಕೆಲಸವಲ್ಲ. ಸೋಗಾಡಿತನವನ್ನು ನಿಲ್ಲಿಸಿ.

ಈ ಲೇಖನದ ಎರಡನೆಯ ಭಾಗಕ್ಕೆ ಬರುತ್ತೇನೆ. ಮೊದಲ ಪ್ಯಾರದಲ್ಲಿ ಹೇಳಿದ್ದು, ತಮಗೆ ಅರ್ಥವಾಗಿರಲಿಲ್ಲವೆಂಬುದು ನನಗೆ ತಿಳಿದಿದೆ. ನಮ್ಮವರು ಮತ್ತು ಪರಕೀಯರು ಎಂಬ ಬೇಧಭಾವ ಮತ್ತು ಹೊಗಳಿಕೆಯ ಕುರಿತು ಮಾತನಾಡೋನ. ಇದನ್ನು, ಹೆಚ್ಚಿನ ಮಂದಿ ವಿರೋಧಿಸುವುದು ಖಂಡಿತ. ಇಲ್ಲಿನ ಬಹುತೇಕ, ಹೇಳಿಕೆಗಳು ಸೋಷಿಯಲ್ ಮೀಡಿಯಾದಲ್ಲಿ ಬಂದಿರುವ ಸುದ್ದಿಗಳ ಆಧಾರದಲ್ಲಿ ಮಾತ್ರ. ಇತ್ತೀಚೆಗೆ ಒಂದು ಪೋಸ್ಟ್ ತುಂಬಾ ಸುದ್ದಿ ಮಾಡಿತ್ತು, ಅದನ್ನು ಟಿವಿಯಲ್ಲಿ ಕೂಡ ನೋಡಿದ್ದೆ. ಇಂಗ್ಲೆಂಡ್‍ನಲ್ಲಿ ಅಲ್ಲಿನ ಪ್ರಧಾನಿಯವರು ಕೊರೋನ ಸೋಂಕಿನಿಂದ ಸಾರ್ವಜನಿಕ ಅಂತರ ಕಾಪಾಡಿಕೊಂಡು, ಮನೆಯಲ್ಲಯೇ ಉಳಿದರು. ಆ ಸಮಯದಲ್ಲಿ, ಭಾರತೀಯ ಮೂಲದವರಾದ ರಿಷಿರವರು ಅಲ್ಲಿನ ಜವಬ್ದಾರಿಯನ್ನು ನೋಡಿಕೊಂಡರು. ಈ ವಿಚಾರವನ್ನು, ನಮ್ಮ ಮಾಧ್ಯಮಗಳು ಭಾರತೀಯರ ಆಳ್ವಿಕೆಯಲ್ಲಿ ಇಂಗ್ಲೇಂಡ್ ಎಂಬ ಶೀರ್ಷಿಕೆಯ ಜೊತೆಗೆ ಸುದ್ದಿಮಾಡಿ ಸಂಭ್ರಮಿಸಿದರು. ಕೆಲವರಂತೂ, 300 ವರ್ಷದ ಸೇಡನ್ನು ತೀರಿಸಿಕೊಂಡಂತೆ ಆಚರಿಸಿದರು. 

ಇದೊಂದೆ ಸುದ್ದಿಯಲ್ಲ, ಅನೇಕ ವಿಚಾರಗಳನ್ನು ನೋಡಿ. ಭಾರತೀಯ ಮೂಲದವರು, ಯಾರೇ ಆಗಲಿ, ಹೊರದೇಶದಲ್ಲಿ ಚುನಾಯಿತರಾದರೇ, ಯಶಸ್ವಿಯಾದರೇ ಹಬ್ಬವನ್ನೇ ಮಾಡುತ್ತೇವೆ. ನಮ್ಮ ಭಾಷೆಯಲ್ಲಿ ಮಾತನಾಡಿದರೇ, ನಮ್ಮ ಭಾವುಟ ಅಲ್ಲಿ ಹಾರಿಸಿದರೇ ಮುಗಿದೇ ಹೋಯ್ತು. ಪರಕೀಯರು ನಮ್ಮ ಭಾಷೆಯಲ್ಲಿ ಮಾತನಾಡಿದರೇ ಎಷ್ಟೊಂದು ಸಂಬ್ರಮಿಸುತ್ತೇವೆ ಅಲ್ಲವೇ? ಬೇರೆ ದೇಶದ ಮಹಿಳೆಯರು ಸೀರೆ ಉಟ್ಟರೇ ಎಂಥಹ ಆನಂದ ಅಲ್ಲವೇ? ಪರಕೀಯರು ನಾಮ ಹಾಕಿ, ಕೃಷ್ಣನ ಜಪಿಸಿದರೆ ಅದೆಂತಹ ಉತ್ಸಾಹವಲ್ಲವೇ? ಅಲ್ಲಿನವರು ಯೋಗ ಮಾಡಿದರೇ ಎಲ್ಲಿಲ್ಲದ ಹೆಮ್ಮೆಯಲ್ಲವೇ? ಪಾಕಿಸ್ಥಾನದ ಹುಡುಗ ವಿರಾಟ್ ಕೋಹ್ಲಿಯ ಅಭಿಮಾನಿಯಾದರೇ ಎಂತಹ ಸಂತೋಷವಲ್ಲವೇ? ಬೇರೆ ಭಾಷೆಯ ನಟರು ಕನ್ನಡದಲ್ಲಿ ಮಾತನಾಡಿದ ಅದೆಂತಹ ಸಂಬ್ರಮವಲ್ಲವೇ? 

ಅದನ್ನೇ ಒಮ್ಮೆ ಉಲ್ಟಾ ಮಾಡಿನೋಡಿ. ಸಹಿಸಲು ಆಗುತ್ತದೆಯೇ? ಒಪ್ಪಲು ಸಾಧ್ಯವೇ? ನಮ್ಮ ಹೆಣ್ಣು ಮಕ್ಕಳು ತುಂಡುಡುಗೆ ಉಟ್ಟಾಗ, ಅದು ಒಂದು ದೇಶದ ವಿನ್ಯಾಸ, ಸಂಸ್ಕøತಿ ಎನಿಸುವುದಿಲ್ಲವೇಕೆ? ನಮ್ಮ ನಟರು ಬೇರೆ ಭಾಷೆಯಲ್ಲಿ ಮಾತಾಡಿದರೆ ಎಂತಹ ಕೋಪ? ನಮ್ಮವರು ಪಾಕಿಸ್ಥಾನದ ಆಟಗಾರರನ್ನು ಮೆಚ್ಚಿದರೇ ದೇಶದ್ರೋಹವಲ್ಲವೇ? ನಮ್ಮವರು ಚರ್ಚ್‍ಗೆ ಹೋದರೇ ಹಿಂದೂ ವಿರೋಧಿಯಲ್ಲವೇ? ನಮ್ಮವರು ಬೇರೆ ದೇಶದ ಚುಕ್ಕಾಣಿ ಹಿಡಿದರೆ ಸಂಬ್ರಮಿಸುವ ನಾವು, ನಮ್ಮ ದೇಶದ ಸೊಸೆ ಐವತ್ತು ವರ್ಷದಿಂದ ಇಲ್ಲಿಯೇ ಇದ್ದರೂ ಅವರನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಅಲ್ವಾ? ಇದೆಂತಹ ತಾರತಮ್ಯ. ಈ ರೀತಿಯ ಸಾವಿರಾರು ಉದಾಹರಣೆಗಳನ್ನು ನೀಡಬಲ್ಲೇ, ಆದರೇ ಅದರಿಂದ ಅಂತಹ ಉಪಯೋಗವಾಗುವುದಿಲ್ಲ. ತಾವುಗಳೇ ಒಮ್ಮೆ ಯೋಚಿಸಿನೋಡಿ. 

ಕೊನೆಹನಿ: ಜಗತ್ತು ಬದಲಾಗಿದೆ. ನಮ್ಮವರು, ಬೇರೆಯವರಿಂದ ಕಲಿಯಬೇಕು, ನಮ್ಮಿಂದ ಬೇರೆಯವರು ಕಲಿಯಬೇಕು. ಯಾವುದೂ ಪರಿಪೂರ್ಣವಲ್ಲ. ಮುಂದಕ್ಕೆ ಸಾಗಬೇಕಿದ್ದ ನಾವು, ಅದ್ಯಾಕೋ ಹಿಂದಕ್ಕೆ ಹೋಗುತ್ತಿರುವುದು ವಿಪರ್ಯಾಸ. ಇಲ್ಲಿ ಯಾವುದೂ ಶಾಸ್ವತವಲ್ಲ, ಯಾವುದೂ ಮುಖ್ಯವಲ್ಲ, ಯಾವುದೂ ಅಮುಖ್ಯವಲ್ಲ, ಜೀವನ, ಜಗತ್ತು ನಿರಂತರ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...