28 ಏಪ್ರಿಲ್ 2020

ಇಂಟರ್ನೆಟ್ ಜ್ಞಾನದ ಮೂಲವಾಗಿ, ಟಿಕ್ ಟಾಕ್ ಲೈಕ್ಸ್ ಗೆ ಹಾತೋರೆಯುತ್ತಿರುವ ಯುವಜನತೆ!!!



ಆತ್ಮೀಯರೇ,

ಎರಡು ವಿಚಾರಗಳ ಕುರಿತು ಬಹಳ ದಿನಗಳಿಂದ ಬರೆಯಬೇಕೆಂದಿದ್ದೆ. ಅದಕ್ಕೆ ಸಕಾರಣವೆಂಬಂತೆ ಸ್ನೇಹಿತ ಚೇತನ್, ನೆನಪಿಸಿದ್ದು ಒಳ್ಳೆಯದಾಯಿತು. ಇದನ್ನು, ಸ್ವಲ್ಪ ಮನೋವಿಜ್ಞಾನ ಅಡಿಯಲ್ಲಿ ನೋಡುತ್ತಾ, ಒಂದು ವಿಚಾರವನ್ನು ಮಾತ್ರ ಈಗ ಪ್ರಸ್ತಾಪಿಸುತ್ತಿದ್ದೇನೆ. ಮತ್ತೊಂದು ವಿಚಾರವÀನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ. ಮಾಹಿತಿ ಕೇಂದ್ರಬಿಂದುವಾದ ಗೂಗಲ್ ಅಥವಾ ಅಂತರ್ಜಾಲದ ಕುರಿತು ನೋಡೋನ. ನನ್ನ ಅನೇಕ ಲೇಖನಗಳು ಈ ಕುರಿತು ಮಾತನಾಡಿದ್ದರೂ, ಇದರಲ್ಲಿ ಸ್ವಲ್ಪ ಆಳವಾಗಿ ನೋಡುತ್ತಿದ್ದೇನೆ. ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಣೆ ಬೇಕೇ ಬೇಕು ಅಲ್ಲವೇ?

ಎಲ್ಲಿಂದ ಎಲ್ಲಿಗೆ ಹೋಗಿದ್ದೇವೆಂಬುದನ್ನು ಅವಲೋಕಿಸುತ್ತಾ ಸಾಗೋಣ. ನಿಮ್ಮ ಜೀವನವನ್ನೇ ನೋಡಿ. ಹತ್ತು ವರ್ಷಗಳ ಹಿಂದೆ ಮನೆಯಲ್ಲಿ ಒಂದು ಸಾಂಬಾರ ಪುಡಿ ಮಾಡಬೇಕು, ಒಂದು ಚಟ್ನಿ ಪುಡಿ ಮಾಡಬೇಕು, ಇನ್ಯಾವುದೋ ಹೊಸ ಅಡುಗೆ ಕಲಿಯಬೇಕು, ಸಾಧನ ಯಾವುದಿತ್ತು? ಅಮ್ಮ, ಅಜ್ಜಿ, ಸಂಬಂದಿಕರು, ಅಕ್ಕಪಕ್ಕದ ಮನೆಯವರು ಜೊತೆಗೆ ಯಾವುದೋ ಪತ್ರಿಕೆಯಲ್ಲಿ ಬಂದದ್ದು ಇರಬಹುದು. ಅದೇ ರೀತಿ ಪ್ರವಾಸ ಹೋಗುವ ಮುನ್ನ, ಸ್ನೇಹಿತರನ್ನು ಕೇಳುವುದು, ಅಲ್ಲಿ ಏನಿದೆ? ಹೇಗಿದೆ? ಹೇಗೆ ಹೋಗಬೇಕು ಇತ್ಯಾದಿ. ಪ್ರಯಾಣದ ಸಮಯದಲ್ಲಿ ಹಾದಿಯಲ್ಲಿ ಹೋಗುವವರನ್ನೆಲ್ಲಾ ಕೇಳುವುದು ಇದು ಕೊಣನೂರಿಗೆ ಹೋಗುತ್ತಾ? ಇದು ಮೈಸೂರಿನ ರಸ್ತೆಯ? ಆರೋಗ್ಯದಲ್ಲಿ ಏರುಪೇರಾದರೇ, ಅಕ್ಕ ಪಕ್ಕದ ಮನೆಯುವರು, ಊರಿನವರು ಬಂದು ಕೆಮ್ಮು? ಈ ಕಷಾಯ ಮಾಡು, ಜ್ವರವೇ? ಅದನ್ನು ಕೊಡು. ಆ ಡಾಕ್ಟರ್ ಬಳಿ ಹೋಗು, ಅದನ್ನು ಮಾಡು, ಇದನ್ನು ಮಾಡು. ಶಾಲೆಗೆ ಸೇರಿಸುವಾಗ, ಕಾಲೇಜಿಗೆ ಸೇರಿಸುವಾಗ ಓದಿದ ಬಂಧುಗಳನ್ನು ಕೇಳುವುದು.

ಈಗ ಎಲ್ಲಿಗೆ ಬಂದಿದ್ದೇವೆ. ಕೈಯಲ್ಲಿ ಫೋನ್. ಲಾಕ್‍ಡೌನ್ ಆದ ನಂತರ ಯೂಟ್ಯೂಬ್‍ನಲ್ಲಿ ಅತಿ ಹೆಚ್ಚು ಹುಡುಕಿರುವುದು ಮನೆಯಲ್ಲಿಯೇ ವೈನ್ ತಯಾರಿಕೆ. ಎಷ್ಟರ ಮಟ್ಟಿಗೆ ಈ ಹುಡುಕಾಟಗಳು ನಡೆಯುತ್ತವೆಯೆಂದರೇ, ತಲೆ ನೋವು. ಎಡ ತಲೆನೋವಿಗೆ ಕಾರಣ ಮತ್ತು ಪರಿಹಾರ. ಬಲ ತಲೆನೋವಿಗೆ, ಮಧ್ಯ ತಲೆನೋವಿಗೆ. ವೈದ್ಯರ ಆಯ್ಕೆಗಾಗಿ ಹುಡುಕಾಟ ನಡೆದರೆ, ಆ ವೈದ್ಯ ನೀಡಿದ ಔಷಧಿಯನ್ನು ಇದೇ ಅಂತರ್ಜಾಲದ ಮೂಲಕ ಸರಿ ಇದ್ಯೋ ತಪ್ಪಿದ್ಯೋ ಎಂದು ತಿಳಿಯುವ ತನಕ ಹೋಗಿದೆ.

ನನ್ನ ಸ್ವಂತ ಅನುಭವವನ್ನು ಹೇಳುತ್ತೇನೆ. ಅದನ್ನು ನೋಡಿ ನಾನೆ ಹುಚ್ಚನಾಗಿಬಿಟ್ಟಿದ್ದೆ. ನನಗೆ ಕಳೆದ ವರ್ಷ ಬೀದಿ ನಾಯಿಯೊಂದು ಕಚ್ಚಿತ್ತು. ಇಂಜೆಕ್ಷನ್ ತೆಗೆದುಕೊಂಡರೂ, ಸ್ನೇಹಿತನೊಬ್ಬ ನನ್ನ ತಲೆಗೆ ಹುಳು ಬಿಟ್ಟಿದ್ದ. ನಾಯಿ, ಕಚ್ಚಿದರೇ, ರಾಹು ದೆಸೆ ಹೋಗುತ್ತದೆ. ಅದಕ್ಕೊಂದು ಪೂಜೆ ಮಾಡುತ್ತಾರೆ, ದಯವಿಟ್ಟು ಮಾಡಿಸು. ನಾನು ಕುತೂಹಲಕ್ಕಾಗಿ ಗೂಗಲ್‍ನಲ್ಲಿ ಹುಡುಕಿದರೇ, ಅಯ್ಯೋ ಭಗವಂತ, ಸಾವಿರ ಸಾವಿರ ಪ್ರತಿಕ್ರಿಯೆಗಳು. ಅದಕ್ಕೆಲ್ಲಾ ಪೂಜೆಯಿದೆ. ಶಾಂತಿ ಮಾಡಿಸುವುದು ಇದೆ.

ಎಷ್ಟರ ಮಟ್ಟಿಗೆ ಹುಡುಕುತ್ತಾರೆಂದರೇ, ಅಲ್ಲಿ ಉತ್ತರವನ್ನು ಕೊಡುವ ಮಂದಿಯೂ ಇರುತ್ತಾರೆ. ಎಷ್ಟರಮಟ್ಟಿಗೆ ಎಂದರೇ, ಗಂಡು ಮಗುವಾಗಲು ಯಾವ ಸಮಯದಲ್ಲಿ ಕೂಡಬೇಕು ಅಲ್ಲಿಂದ ಹಿಡಿದು, ಕುಡಿದು ಬೈಕ್‍ನಲ್ಲಿ ಒಂದು ಏರಿಯಾದಿಂದ ಇನ್ನೊಂದು ಏರಿಯಾಗೆ ಹೋಗಲು ಸೂಕ್ತ ಮಾರ್ಗ ಯಾವುದು? ಎನ್ನುವ ತನಕ. ಮಾಸ್ಟರು ಪಾಠ ಮಾಡುವ ಮುನ್ನವೇ ಇವರುಗಳು, ಇವರಿಗೆ ತಿಳಿದ ಉತ್ತರವನ್ನು ಮೊಬೈಲ್‍ನಿಂದ ತೆಗೆದಿರುತ್ತಾರೆ. ಅನೇಕರ ಪ್ರಶ್ನೆ ಅಥವಾ ತರ್ಕ, ಇದರಲ್ಲಿ ತಪ್ಪೇನು. ಸುಲಭದಲ್ಲಿ ಮಾಹಿತಿ ಸಿಗುತ್ತದೆಯೆಲ್ಲಾ. ನಿಮಗೆ ಇಂಟರ್ನೆಟ್ಟಿನಲ್ಲಿ ಸಿಗುವ ಮಾಹಿತಿಯನ್ನು ಕೊಡುವವರು ಯಾರು? ನುರಿತ ವೈದ್ಯರೇ? ತಜ್ಞರೇ? ಇಲ್ಲಾ, ಅವರು ನಮ್ಮಂತೆಯೇ ಯಾವುದೋ ಮೂಲೆಯಲ್ಲಿ ಕುಳಿತು ಅವನಿಗೆ ತೋಚಿದ್ದನ್ನು ಬರೆಯುವವನು.
ಆದರೇ, ಕೆಲವೊಂದು ಸ್ಥಳಗಳ ಕುರಿತು, ಹೋಟೆಲ್ ಅಥವಾ ಅಂಗಡಿಗಳ ಕುರಿತು ಮಾಹಿತಿಯನ್ನು ಅವರ ಸ್ವಂತ ಅನುಭವದಿಂದ ಹಂಚಿಕೊಂಡಿರುತ್ತಾರೆ. ಅದನ್ನು ನಾವು ಪರಿಗಣಿಸಬಹುದು, ಅದರಲ್ಲಿ ತಪ್ಪಿಲ್ಲ. ಆದರೇ, ಪ್ರತಿಯೊಂದಕ್ಕೂ ನೀವು ಇಂಟರ್ನೆಟ್ ನಂಬಿ, ಅಲ್ಲಿರುವುದು ಸತ್ಯವೆಂದು ಆಸ್ಪತ್ರೆಗೆ ಹೋಗಿ ಡಾಕ್ಟರ್ ಜೊತೆಗೆ ವಾದಕ್ಕಿಳಿಯುವುದು ಮೂರ್ಖತನ. ಅದರ, ಜೊತೆಗೆ ಮನಸ್ಸಿನಲ್ಲಿ ಗೊಂದಲಗಳು ಶುರುವಾಗುತ್ತವೆ. ಇದು, ಸರಿಯೇ? ತಪ್ಪೇ ಎಂದು. ಯಾವುದನ್ನು ನಂಬದೇ, ಕೊನೆಗೆ ತ್ರಿಶಂಕು ಮನಸ್ಥಿತಿಗೆ ಬಂದು ತಲುಪುತ್ತೇವೆ. ಆದ್ದರಿಂದ, ದಯವಿಟ್ಟು ಎಚ್ಚರದಿಂದಿರಿ.

ನನಗೆ ಬಹಳ ಕಾಡುತ್ತಿರುವ ಎರಡನೆಯ ಪ್ರಮುಖ ವಿಚಾರವೆಂದರೇ, ಈ ಟಿಕ್ ಟಾಕ್ ಗಿರಾಕಿಗಳು. ನಾನು ಆಗ್ಗಾಗ್ಗೆ, ಯೂಟ್ಯೂಬ್‍ನಲ್ಲೊ ಅಥವಾ ಫೇಸ್ಬುಕ್ಕಿನಲ್ಲಿಯೋ ಟಿಕ್ ಟಾಕ್‍ಗಳನ್ನು ಮತ್ತು ಅದರ ಮೆಮೆಸ್ ಗಳನ್ನು ನೋಡುತ್ತಿರುತ್ತೇನೆ. ನನಗೆ ಈ ಟೆಕ್ನಾಲಜಿ ಮೇಲೆ ಇಷ್ಟೊಂದು ಅವಲಂಬಿತರಾಗಿದ್ದಾರೆ ಮತ್ತು ಅದೆಷ್ಟು ಸಮಯವನ್ನು ಇದಕ್ಕಾಗಿ ಕಳೆಯುತ್ತಿದ್ದಾರೆ ಎಂದು. ಅದನ್ನು ಸ್ವಲ್ಪ ಆಳವಾಗಿ ಕೆಲವು ಸ್ನೇಹಿತರ ಜೊತೆಗೂ ಚರ್ಚಿಸಿದೆ. ಅದೊಂದು ಸಾಮಾಜಿಕ ಪಿಡುಗಾಗಿದೆ ಎಂದರೆ ತಪ್ಪಿಲ್ಲ. ಇದೆಂತಹ ಮಾತೆಂದು ಆಶ್ಚರ್ಯಪಡಬೇಡಿ. ನಿಮಗೂ ಇದರ ಅರಿವಿದೆ. ನಾನು ಅದನ್ನೇ ಹೇಳುವ ಅಗತ್ಯವಿಲ್ಲ. ನನ್ನ ಕಾಳಜಿಯಿರುವುದು ಅದು ಅವರುಗಳ ಮೇಲೆ ಬೀರುತ್ತಿರು ದುಷ್ಪರಿಣಾಮಗಳ ಕುರಿತು.

ಈ ಲೈಕ್ಸ್ ಸಿಂಡ್ರೋಮ್ ಅನ್ನೋ ಮಾತನ್ನು ತಾವುಗಳು ಕೇಳಿರಬಹುದು. ಅದರ ಆಳ ಅಗಲವನ್ನೊಮ್ಮೆ ನೋಡೋಣ. ಪ್ರತಿಯೊಬ್ಬ ಮನುಷ್ಯನಿಗೂ ಸಾಮಾನ್ಯವಾಗಿ ಜನರ ನಡುವೆ ಗುರುತಿಸಿಕೊಳ್ಳಬೇಕೆಂಬ ಹಂಬಲವಿರುತ್ತದೆ. ನಾನು ಪ್ರಸಿದ್ದಿಯಾಗಬೇಕೆಂದರೂ ತಪ್ಪಿಲ್ಲ. ಆದರೇ, ಹೇಗೆ ಆಗುವುದು? ಯಾವೆಲ್ಲ ಮಾರ್ಗಗಳಿವೆ? ಕೆಲವೊಂದು ಉತ್ತಮ ಮಾರ್ಗಗಳಿವೆ, ಆದರೇ ಪ್ರಯಾಣ ಕಷ್ಟಕರವಾಗಿರುತ್ತದೆ. ಸುಲಭದ ಮಾರ್ಗಗಳು ಬೇಗ ಸಿಗುತ್ತವೆ. ಆದರೇ, ಬಹಳ ದಿನ ಉಳಿಯುವುದಿಲ್ಲ. ಬರವಣಿಗೆಯ ಮಧ್ಯದಲ್ಲಿ ಇದೆಂತಹ ಪೀಠಿಕೆ ಎನ್ನಬೇಡಿ. ಶಾಲೆ ಅಥವಾ ಕಾಲೇಜಿಗೆ ಹೋಗುವ ವಿದಾರ್ಥಿಗಳು ಪ್ರಸಿದ್ದಿಯಾಗಲು ಇರುವ ಹಾದಿಗಳೇನು? ಚೆನ್ನಾಗಿ ಓದಬೇಕು, ಹೆಚ್ಚು ಅಂಕಗಳಿಸಬೇಕು. ಕ್ರೀಡೆಯಲ್ಲಿರಬೇಕು, ಪಠ್ಯೇತರ ಚಟುವಟಿಕೆಗಳಲ್ಲಿರಬೇಕು. ಇವೆಲ್ಲವೂ ಸ್ವಲ್ಪ ಶ್ರದ್ದೆ ಮತ್ತು ಶ್ರಮವನ್ನು ಕೇಳುತ್ತವೆ.

ಹಾಗಾದರೆ, ಸುಲಭ ಮಾರ್ಗ ಯಾವುದು? ಆಕರ್ಷಿತವಾಗಿ ಬಟ್ಟೆ ಧರಿಸುವುದು, ವಿಭಿನ್ನವಾಗಿ ಹೇರ್ ಕಟ್ ಮಾಡಿಸುವುದು. ಅಥವಾ, ಸ್ವಲ್ಪ ಹೀರೋಯಿಸಂ ತೋರಿಸುವುದು. ಯಾರನ್ನಾದರೂ ರೇಗಿಸುವುದು, ಹೊಡೆದಾಡುವುದು, ರೇಗಿಸುವುದು, ನಾನು ಯಾರಿಗೂ ಡೋಂಟ್ ಕೇರ್ ಎಂಬುದನ್ನು ಬಿಂಬಿಸುವುದು. ಕೆಲವೊಮ್ಮೆ ಮಾಸ್ಟರ್ ಅಥವಾ ಟೀಚರ್ ಗಳಿಗೆ ರೇಗಿಸುವುದು. ಒಟ್ಟಾರೆಯಾಗಿ, ಎಲ್ಲರ ಗಮನವನ್ನು ಸೆಳೆಯಬೇಕೆಂಬುದು ಬಯಕೆ. ಅದೇ ರೀತಿ, ಸಾಮಾಜಿಕ ಬದುಕಲ್ಲಿ ಸುಲಭ ಮಾರ್ಗಗಳಾವು? ಆ ಸಮಯಕ್ಕೆ ಸಿಕ್ಕಿರುವುದೇ, ಈ ಟಿಕ್ ಟಾಕ್ ಮಾದರಿಯ ಚಟುವಟಿಕೆಗಳು. ಎಷ್ಟು ಸಾಧ್ಯವೋ ಅಷ್ಟು ವಿಭಿನ್ನವಾಗಿ ಚಿತ್ರಿಸುವುದು. ಸೃಜನಶೀಲತೆಯೆಂಬ ಹೆಸರಲ್ಲಿ ಕೀಳು ಮಟ್ಟಕ್ಕೆ ಇಳಿದು ಜನರ ಗಮನವನ್ನು ಸೆಳೆಯಲು ಯತ್ನಿಸುವುದು. ಇವರುಗಳ ಈ ಮಂಗಾಟಕ್ಕೆ ತಕ್ಕನಾಗಿ ಕೆಲವು ಟಿವಿ ಚಾನೆಲ್ ನವರು ಇವರ ವಿಡೀಯೋಗಳನ್ನು ವೈರಲ್ ಮಾಡುತ್ತಾರೆ. ಅದು, ಇನ್ನು ಹೆಚ್ಚಿನ ಜನರನ್ನು ತನ್ನೆಡೆಗೆ ಸೆಳೆಯುತ್ತದೆ.

ಈಗ ಇದೆಷ್ಟರ ಮಟ್ಟಿಗೆ ಹೋಗಿದೆ ಎಂದರೇ, ಗಂಡ ಹೆಂಡತಿ ಮಲಗುವ ಕೋಣೆಯಿಂದ ಕೂಡ ಟಿಕ್ ಟಾಕ್ ಮಾಡುವುದು. ಶಾಲೆ, ಕಾಲೇಜು, ಬಸ್ ಸ್ಟಾಂಡ್ ಎಲ್ಲೆಂದರಲ್ಲಿ, ಹೇಗೆಂದರಲ್ಲಿ ವಿಡೀಯೋ ಮಾಡುವುದು.

ಇದು, ಮೊದಲನೆಯ ಹಂತವಾದರೆ, ಎರಡನೆಯದ್ದು, ನನ್ನ ವಿಡೀಯೋಗೆ ಲೈಕ್ಸ್ ಬರ್ತಾಯಿಲ್ಲ ಎಂದು, ಕೊರಗುವುದು. ಅನೇಕರು, ನನ್ನ ವಿಡೀಯೋಗಳಿಗೆ ಲೈಕ್ಸ್ ಯಾಕೆ ಕೊಡುತ್ತಿಲ್ಲವೆಂದು ಬಾಯಿಗೆ ಬಂದ ಹಾಗೆ ಬೈದು ವಿಡೀಯೋಗಳನ್ನು ಮಾಡುತ್ತಿದ್ದಾರೆ. ಕೆಲವರು, ಬೇಡುತ್ತಿದ್ದಾರೆ. ಆ ರೀತಿಯ ಮಾನಸಿಕ ಖಿನ್ನತೆಗೆ ಹೋಗಿದ್ದಾರೆ. ಅವೆಲ್ಲದರ ನಡುವಿನ ದುರಂತವೆಂದರೇ, ಆ ವಿಡೀಯೋಗಳನ್ನು ಟ್ರೋಲ್ ಎಂಬ ಹೆಸರಲ್ಲಿ ಅಶ್ಲೀಲವಾಗಿ ಎಡಿಟ್ ಮಾಡುವುದು. ಯುವ ಜನತೆಗೆ ಮಾತಿನ ಮೇಲೆ ಹಿಡಿತವೇ ಇಲ್ಲದೇ ಇಷ್ಟೊಂದು ಕೀಳು ಮಟ್ಟದಲ್ಲಿ ಅಶ್ಲೀಲ ಪದಗಳನ್ನು ಬಳಸುತ್ತಿರುವುದು ನಿಜಕ್ಕೂ ಸಮಾಜವೇ ತಲೆ ತಗ್ಗಿಸುವ ವಿಷಯ. ಇದು, ಹೀಗೆಯೇ ಮುಂದವರೆದರೆ, ಇದೊಂದು ಚಟಕ್ಕೆ ದಾಸರಾಗಿ ಜೀವ ಕಳೆದುಕೊಳ್ಳುವ ದಿನಗಳು ದೂರವಿಲ್ಲ. ಟಿವಿ ಮಾಧ್ಯಮದವರು ತಮ್ಮ ಟಿ.ಆರ್.ಪಿ ಹುಚ್ಚಾಟಕ್ಕೆ ಇಂತಹ ಯುವ ಶಕ್ತಿಯ ದಾರಿ ತಪ್ಪಿಸಿದ್ದು ದುರಂತ.ತಂತ್ರಜ್ಞಾನ ನಮ್ಮ ಜ್ಞಾನಾರ್ಜನೆಗೆ, ಬದುಕನ್ನು ಹಸನಾಗುವುದಕ್ಕೆ ಸಹಕಾರಿಯಾಗಬೇಕಿತ್ತು. ಅದನ್ನು, ಈ ರೀತಿ ಕಾಲಹರಣಕ್ಕೆ ಬಳಸುತ್ತಿರುವುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...