11 ಆಗಸ್ಟ್ 2020

ನಾ ಕಂಡ ಅಪರೂಪದ ವ್ಯಕ್ತಿ: ಗಿರೀಶ್ ತರಿಕೆರೆಯೆಂಬ ಮಾಂತ್ರಿಕ!!!



ಈ ಲೇಖನವನ್ನು ಬರೆಯುವುದಕ್ಕೆ ನಾನೆಷ್ಟು ಯೋಗ್ಯ ತಿಳಿದಿಲ್ಲ. ಆದರೂ, ಅವರ ಬಗ್ಗೆ ಈಗಲೇ ಬರೆಯುವುದು ಸೂಕ್ತ. ನಾಳೆ ಬೆಳಕಿಗೆ ಬಂದಾಗ, ನನಗೆ ತಿಳಿದಿತ್ತು ಎನ್ನುವುದು ಅಸಹ್ಯವೆನಿಸುತ್ತೆ. ಗಿರೀಶ್ ತರಿಕೆರೆಯೆಂಬ ಹೆಸರನ್ನು ಕೆಲವರು ಕೇಳಿರಬಹುದು, ಶಿಕ್ಷಕ ವರ್ಗದವರಂತೂ ಕೇಳಿರುತ್ತಾರೆ. ಅದರಲ್ಲಿಯೂ ಸರ್ಕಾರಿ ಶಾಲಾ ಶಿಕ್ಷಕರುಗಳು. ಅವರ ಬಗ್ಗೆ ಒಂದು ವಿಡಿಯೋ ಸಂದರ್ಶನ ಮಾಡುವ ಬಗ್ಗೆ ಆಲೋಚನೆಯಿದೆ. ಆದರೇ ಈ ಸಮಯದಲ್ಲಿ ಬೇಡ. ವ್ಯಕ್ತಿಯ ಪರಿಚಯ ಮಾಡಿಕೊಳ್ಳುವುದಾ?


ಅವರನ್ನು ನಾನು ಕಂಡಂತೆ ಎರಡು ಪುಟದಲ್ಲಿ ವಿವರಿಸೋದಾ? ಅವರಿಗೆ ತಿಳಿಸದೆ ಇದನ್ನು ಬರೆಯಬಹುದಾ? ಬರೆದರೆ! ಮುನಿಸುಕೊಂಡಾರೆ? ಜಗಳವಾಡಬಹುದೇ? ಹೇಳಿಯೇ ಬರೆಯುತ್ತಿದ್ದೇನೆ. ಅದರಲ್ಲೇನು? ಸ್ನೇಹಿತರೆನ್ನುವ ಸಲುಗೆಯು ಸೇರಿರಬಹುದು. ಬರೆಯುತ್ತಿರುವಾಗಲೇ ಫೋನ್ ಮಾಡಿ ಅನುಮತಿಯನ್ನು ಪಡೆದಿದ್ದೇನೆ. ಇರಲಿ ವಿಷಯಕ್ಕೆ ಬರೋಣ.


ಈ ಲೇಖನವನ್ನು ಎರಡು ಭಾಗಗಳಾಗಿ ನಿಮ್ಮ ಮುಂದಿಡುತ್ತಿದ್ದೇನೆ. ಮೊದಲನೆಯ ಭಾಗ, ಗಿರೀಶ್ ನನಗೆ ಪರಿಚಯವಾಗಿದ್ದು ಹೇಗೆ ಮತ್ತು ಅವರಲ್ಲಿ ನಾನು ಕಾಣುತ್ತ ಹೋದ ಬದಲಾವಣೆಗಳು. ಕೆಲವೊಂದು ವಿಚಾರಗಳು ಅವರಿಂದ ಕೇಳಿದ್ದು ಆಗಿದೆ, ಕೆಲವೊಂದು ನಾನು ಗಮನಿಸಿದ್ದು ಆಗಿದೆ. ನನಗೆ ಅವರು ಪರಿಚಯವಾಗಿದ್ದು 2016 ರ ಸಮಯದಲ್ಲಿ ಎಂಬ ನೆನಪು. ಸರಿಯಾಗಿ ನೆನಪಿಲ್ಲ. ಗಿರೀಶ್ ಮೂಡಿಗೆರೆಯವರು ಡೆವೆಲಪ್‍ಮೆಂಟ್ ಸ್ಕೂಲ್ಸ್ ಎಂದು, ತಂಡ ಕಟ್ಟಿಕೊಂಡು ಸರ್ಕಾರಿ ಶಾಲೆಗಳ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಆ ತಂಡದಲ್ಲಿ ಸಕ್ರೀಯವಾಗಿ ಇವರ ಸಂದೇಶಗಳು ಬರುತ್ತಿತ್ತು. ಅದಾದ ನಂತರ, ಸ್ನೇಹಿತ ಮಂಜೇಶ್‍ಗೆ ಈ ವಿಷಯವನ್ನು ತಿಳಿಸಿದಾಗ, ಅವರಿಬ್ಬರೂ ಒಂದೇ ಬ್ಯಾಚಿನಲ್ಲಿ ಮುಖ್ಯ ಶಿಕ್ಷಕರಾಗಿದ್ದು ತಿಳಿಯುತು.


ತದನಂತರದಲ್ಲಿ ಫೇಸ್‍ಬುಕ್ಕಿನಲ್ಲಿ ನನ್ನ ಬರವಣಿಗೆಗಳು ಅದರಲ್ಲಿಯೂ ಒಮ್ಮೆ ನಾನು ಸ್ಮಾರ್ಟ್ ಕ್ಲಾಸ್ ಕುರಿತು ಬರೆದ ಲೇಖನವನ್ನು ಅವರು ಮೆಚ್ಚಿದ್ದು ಮತ್ತು ಅದರ ಕುರಿತು ಎಲ್ಲರೊಂದಿಗೆ ಮಾತನಾಡಿದ್ದು ಕಂಡು ಬಂತು. ಒಮ್ಮೆ, ಅವರ ಶಾಲೆಗೆ ಹೋಗಬೇಕೆಂಬ ಮನಸ್ಸು ಬಂದು, ಅವರ ಶಾಲೆಗೆ ಭೇಟಿ ನೀಡಿದೆ. ಮೊದಲ ಭೇಟಿ, ಅದೆಷ್ಟು ಸಂತೋಷ ನೀಡಿತ್ತೆಂದರೆ, ಅದರ ಕುರಿತು ಬರೆದಿದ್ದೆ ಕೂಡ. ಒಬ್ಬ ವ್ಯಕ್ತಿ, ಹೇಗೆ ವಿಕಸನಗೊಳ್ಳುತ್ತಾ, ತನ್ನನ್ನು ತಾನು ಮಾರ್ಪಾಡುಮಾಡಿಕೊಳ್ಳುವುದರ ಜೊತೆಗೆ ಸುತ್ತಮುತ್ತಲಿನ ವಾತಾವರಣವನ್ನು ಬದಲಾಯಿಸುತ್ತಾನೆಂಬುದಕ್ಕೆ ಗಿರೀಶ್ ಒಂದು ನಿದರ್ಶನ. 


ಮೊದಲ ಭೇಟಿಯಲ್ಲಿ ಅವರಿಗೆ ಹಲವಾರು ಗೊಂದಲಗಳಿದ್ದವು. ಹೇಗೆ ಬದುಕಬೇಕು? ಏನು ಮಾಡಬೇಕು? ಚಿಕ್ಕಂದಿನಲ್ಲಿ ನೋಡಿದ ಅಂಬೇಡ್ಕರ್ ಸಿನೆಮಾ ಅವರನ್ನು ಬಹಳ ಆವರಿಸಿತ್ತು. ಅವರೇ, ಅನೇಕ ಬಾರಿ ಬರೆದುಕೊಂಡಿದ್ದಾರೆ. ಕೀಳರಿಮೆಯೊಂದಿಗೆ ಬದುಕನ್ನು ಕಟ್ಟಿಕೊಳ್ಳಲು ಪರದಾಡಿದ ದಿನಗಳಿವೆ. ಸರಳತೆಯನ್ನು ಮೈಗೂಡಿಸಿಕೊಳ್ಳುವುದು ಸರಳದ ಮಾತಲ್ಲ. ಮಾತನಾಡುವುದು ಬೇರೆ, ಬದುಕುವುದು ಬೇರೆ. ಬದಕು ನಮ್ಮೊಬ್ಬರದ್ದಲ್ಲ. ಅದರೊಂದಿಗೆ ಸಮಾಜವಿದೆ, ಮನೆ, ಸಂಸಾರ, ಮಕ್ಕಳು, ಸಹೋದ್ಯೋಗಿಗಳು, ನೆಂಟರು, ಇಷ್ಟರು, ಇಲ್ಲದವರು, ಎಲ್ಲರೂ ಇದ್ದೂ ಯಾರು ಇಲ್ಲದ ಬದುಕು. ಯಾರೂ ಇಲ್ಲದೇ ಎಲ್ಲರೂ ಇರುವಂತೆನಿಸುವ ಬದುಕು ಕೂಡ.


ಗಿರೀಶ್ ಅದೆಷ್ಟು ಮಾಂತ್ರಕತೆಯನ್ನು ಮಾಡಿದ್ದಾರೆಂದರೇ. ಅವರ ಶಾಲೆಯಲ್ಲಿ ಶಿಕ್ಷಕರು ಸಮವಸ್ತ್ರ ಧರಿಸುತ್ತಾರೆ. ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಸಮವಸ್ತ್ರ ಧರಿಸುವುದು ಸಾಮಾನ್ಯ ಕಾರ್ಯವಲ್ಲ. ಅವರು ಅದನ್ನು ಸಾಧಿಸಿದ್ದು ಬಲವಂತದ ಹೇರಿಕೆಯಿಂದಲ್ಲ. ತಾಳ್ಮೆ ಮತ್ತು ಪ್ರೀತಿಯಿಂದ. ಆ ಶಾಲೆಗೆ ಭೇಟಿ ನೀಡಿದಾಗ ನನಗನಿಸಿದ್ದು, ಸಂಪೂರ್ಣ ಮನೆಯ ವಾತಾವರಣ. ಆತ್ಮೀಯತೆ, ಸೋದರತೆ. ಯಾರಲ್ಲಿಯೂ ಒಂದು ಚೂರು ಅಸೂಯೆಯಿಲ್ಲದೆ, ನಾಟಕೀಯತೆಯಿಲ್ಲದೆ ಇರುವುದು. ಒಮ್ಮೆ, ಒಂದು ಮಗು ಶೌಚಾಲಯದ ಹೊರಗೆ  ಮಲ ವಿಸರ್ಜನೆ ಮಾಡಿರುತ್ತದೆ. ಆಗ ಸ್ವತಃ ಗಿರೀಶ್ ಅದನ್ನು ಅಲ್ಲೇ ಇದ್ದ ಎಲೆಗಳಿಂದ ತೆಗೆಯುತ್ತಾರೆ. ಅದು ಸಾಮಾನ್ಯದ ಕೆಲಸವೆ? ನಾವೇ ನಮ್ಮಯ ಮಲವನ್ನು ಮುಟ್ಟಲು ಹಿಂಜರಿಯುವಾಗ, ಮುಖ್ಯ ಶಿಕ್ಷಕನಾಗಿ ಈ ಕೆಲಸ ಮಾಡಿದ್ದು! ಮೆಚ್ಚುಗೆಯಾಗಲೂ ಇದಕ್ಕಿಂತ ಬೇರೆ ಉದಾಹರಣೆ ಬೇಕೇ?


ಸರ್ಕಾರಿ ಶಿಕ್ಷಕರ ಬಗ್ಗೆ ಜನರಿಗೆ ವಿಭಿನ್ನ ಅಭಿಪ್ರಾಯಗಳಿವೆ. ಅದೇನೇ ಇರಲಿ, ಉತ್ತಮ ಅಭಿಪ್ರಾಯಗಳು ಕ್ಷೀಣಿಸಿರುವುದು ವಾಸ್ತವ. ಅವರು ಮಕ್ಕಳಿಗೆ ಟೂರ್ (ಪ್ರವಾಸಕ್ಕೆ) ಕರೆದೊಯ್ಯಲು ಮಾಡುವ ತಯಾರಿಯೇ ಅದ್ಬುತ. ಪ್ರವಾಸಕ್ಕೆ ಹೋಗುವ ಮುನ್ನಾ ಸ್ಥಳಗಳ ಮಾಹಿತಿಯನ್ನು ಸಂಗ್ರಹಿಸಿ, ಅವುಗಳನ್ನು ಮಕ್ಕಳಿಗೆ ವಿವರಿಸುತ್ತಾರೆ. ಪ್ರತಿಯೊಂದು ಮಗುವಿಗು ಒಂದು ಪ್ರತಿಯನ್ನು ನೀಡಲಾಗುತ್ತದೆ. ಪ್ರವಾಸಕ್ಕೆ ವಿದ್ಯಾರ್ಥಿಗಳಿಂದ ಸಂಗ್ರಹಿಸುವ ಹಣದ ಜೊತೆಗೆ ಎಲ್ಲಾ ಶಿಕ್ಷಕರು ಕೂಡ ತಮ್ಮ ವೆಚ್ಚವನ್ನು ತಾವೇ ಭರಿಸುತ್ತಾರೆ. ಪ್ರವಾಸ ಮುಗಿದ ಮೇಲೆ, ಸಂಪೂರ್ಣ ಖರ್ಚು ವೆಚ್ಚಗಳನ್ನು ನೋಟಿಸ್ ಬೋರ್ಡ್‍ಗೆ ಹಾಕಲಾಗುತ್ತದೆ. ಯಾವುದೇ ಕೆಲಸಕ್ಕೂ ಲಂಚ ಕೊಡದೇ ಬದುಕುವ ಹಾದಿಯಲ್ಲಿದ್ದಾರೆ.


ಚಾಮರಾಜನಗರ ಜಿಲ್ಲೆಯ ದೀನಬಂಧು ಶಾಲೆಗೆ ಭೇಟಿ ನೀಡಿ, ಅದರಿಂದ ಸ್ಪೂರ್ತಿಗೊಂಡವರು ತಮ್ಮ ಇಬ್ಬರೂ ಮಕ್ಕಳನ್ನು ಅಲ್ಲಿಯೇ ಓದಲು ನಿರ್ಧರಿಸುತ್ತಾರೆ. ಅವರ ಮಡದಿ ಮತ್ತು ಮಕ್ಕಳು ಚಾಮರಾಜನಗರದಲ್ಲಿದ್ದರೇ, ಇವರು ತರಿಕೆರೆಯಲ್ಲಿಯೇ ಉಳಿಯಬೇಕಾಗುತ್ತದೆ. ಇದರ ನಡುವೆ, ಪ್ರಯಾಣದ ಸಮಯದಲ್ಲಿ (ವಾರಾಂತ್ಯಲ್ಲಿ) ರೈಲಿನಲ್ಲಿ ಕುಳಿತು ಬರೆಯುವುದು ಓದುವುದನ್ನು ಮುಂದುವರೆಸುತ್ತಾರೆ. ಅವರ ಸ್ನೇಹಿತರಿಂದಾಗಿ ಒಮ್ಮೆ ರಮಣಮಹರ್ಷಿ ಆಶ್ರಮದಲ್ಲಿ ಐದಾರು ದಿನಗಳನ್ನು ಕಳೆದದ್ದು, ಅವರ ಬದುಕಿನಲ್ಲಾದ ಬದಲಾವಣೆ. ಸೈದ್ದಾಂತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಅವರಲ್ಲಾಗಿರುವ ಬೆಳವಣಿಗೆ ಮೆಚ್ಚುವಂತದ್ದು. 


ನಾನು ಅವರೊಂದಿಗೆ ನಿನ್ನೆ ರಾತ್ರಿ ಮಾತನಾಡಿದೆ. ಹೊಸದಾಗಿ ಬಂದಿರುವ ಶಿಕ್ಷಣ ಕಾಯ್ದೆಯನ್ನು ಅದೆಷ್ಟರ ಮಟ್ಟಿಗೆ ಓದಿಕೊಂಡಿದ್ದಾರೆಂದರೇ ಆಶ್ಚರ್ಯವೇ ಆಯಿತು. ನಮಗೆಲ್ಲರಿಗೂ ಶಿಕ್ಷಕರೆಂದರೆ ಒಂದು ಚಿತ್ರವಿದೆÉ. ಇತಿಮಿತಿಗಳಿಂದಲೇ ನೋಡುತ್ತೇವೆ. ಇವರಿಷ್ಟೆ! ಎನ್ನುವ ತನಕವೂ ಹೋಗುತ್ತದೆ ಮನಸ್ಸು. ಈ ಮಾತುಗಳನ್ನು ಯಾರೂ ತಪ್ಪು ತಿಳಿಯಬಾರದೆಂಬುದು ನನ್ನ ಮನವಿ. ಆ ವಿಮರ್ಶೆಗಳು ನಿಜಕ್ಕೂ ಒಬ್ಬ ತಜ್ಞನಂತೆ ಕಾಣುತ್ತಾರೆ. ಇಂತಹವರು ಯಾಕೆ ಮುಖ್ಯ ಭೂಮಿಕೆಗೆ ಬರುತ್ತಿಲ್ಲವೆಂದು ನೋಡಿದರೆ, ಅವರಿಗೆ ಆಸಕ್ತಿಯೇ ಇಲ್ಲ. ಯಾರಿಗೋ ಕೈಚಾಚಬೇಕೆಂಬ ಹಂಬಲವಿಲ್ಲ. ಸರ್ಕಾರದಲ್ಲಿ ಅವಕಾಶ ಗಿಟ್ಟಿಸಲೇ ಪರದಾಡುವ ಜನರ ನಡುವೆ, ಇವರು ನಾನು ಸರಳವಾಗಿಯೇ ಇರುತ್ತೇನೆ ಎನ್ನುತ್ತಾರೆ. 


ಸಂಬಳ ಕಡಿಮೆ ಎಂದು ಮುಷ್ಕರ ಹೂಡುವ ಜನರ ನಡುವೆ, ನನಗೆ ಬರುತ್ತಿರುವ ಸಂಬಳ ಜಾಸ್ತಿಯಾಗಿದೆ ಎನ್ನುತ್ತಾರೆ. ಒಮ್ಮೊಮ್ಮೆ ಲಾಲ್ ಬಹುದ್ದೂರ್ ನೆನಪಾಗುತ್ತಾರೆ ಕೂಡ. ಈ ಸರಳತೆ ಹೇಗೆ ಸಾಧ್ಯ? ಇವರ ಈ ಆದರ್ಶಗಳೊಂದಿಗೆ ಒಂದು ಶಾಲೆಯನ್ನು ತೆರೆದರೆ, ದೇಶದ ಭವಿಷ್ಯ ಬದಲಾಗುವುದು ನಿಶ್ಚಯ. ಕನಿಷ್ಠ ವಸ್ತ್ರಗಳೇ ಸಾಕೆನ್ನುವ ಹಂತಕ್ಕೆ ತಲುಪುವುದು ಸಾಧ್ಯವೇ? ವೈರಾಗಿಯಾಗಿದ್ದರೇ ಒಪ್ಪಬಹುದಿತ್ತು. ವೈರಾಗಿಯಲ್ಲ. ಬಹಳ ಮೆಚ್ಚುಗೆಯ ವಿಚಾರವೆಂದರೆ, ನಾನು ಕರೆ ಮಾಡಿದಾಗ ನೇರವಾಗಿ, ಹೇಳಿದ್ದು. ಸರ್, ನಾನು ಈಗ ತಾನೇ ಮನೆಗೆ ಬಂದೆ, ಮಕ್ಕಳ ಜೊತೆ ಸಮಯ ಕಳೆಯಬೇಕು, ಹೆಚ್ಚು ಸಮಯ ಕೊಡುವುದಕ್ಕೆ ಆಗುವುದಿಲ್ಲವೆಂದು. ಇದು ಮೆಚ್ಚುವ ಕಾರ್ಯ. ನೇರ ವಿಷಯಕ್ಕೆ ಬರುವಂತೆ ನನಗೂ ಮಾಡಿತು. ಕಾಲಹರಣಕ್ಕೆ ಜಾಗವಿಲ್ಲವೆಂಬುದಿತ್ತು.  


ಕೊನೆಯ ಹನಿ: ಸರಳತೆಯ ಬಗ್ಗೆ ಮಾತನಾಡುವುದಕ್ಕೂ, ಅದನ್ನು ರೂಢಿಸಿಕೊಳ್ಳುವುದಕ್ಕು ಸಾಕಷ್ಟು ವ್ಯತ್ಯಾಸವಿದೆ. ಸರಳತೆ, ಸಿದ್ದಾಂತಗಳನ್ನೇ ಮೈಗೂಡಿಸಿಕೊಂಡು ಬದುಕುತ್ತಿರುವ ಗಿರೀಶ್, ಇಂದಿಗೆ ಎಲೆ ಮರೆಯ ಕಾಯಿಯಾಗಿದ್ದಾರೆ. ಮುಂದೊಂದು ದಿನ, ಹೆಮ್ಮರವಾಗಿ ಸಾಕಷ್ಟು ಮನಸ್ಸುಗಳನ್ನು ಪರಿವರ್ತಿಸುವ ಕಾಲವನ್ನು ನಾನು ನೋಡುತ್ತೇನೆ. 


ಅವರ ಬರವಣಿಗೆಗಳು, ಪುಸ್ತಕ ರೂಪದಲ್ಲಿ ಬರಲೆಂಬುದು ನನ್ನಯ ಆಶಯ. ಬರೆಯಲು ಸಾಕಷ್ಟಿದೆ, ಇದೊಂದು ಅಲ್ಪವಿರಾಮವಷ್ಟೆ. 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...