14 ಆಗಸ್ಟ್ 2020

ನಾ ಕಂಡ ಅಪರೂಪದ ವ್ಯಕ್ತಿ: ಪ್ರೋ. ಎಂ.ಆರ್.ಎನ್, ಬಹುಕ್ಷೇತ್ರದ ದಿಗ್ಗಜ!!!



ಕೆಲವು ವ್ಯಕ್ತಿಗಳ ಬಗ್ಗೆ ಬರೆಯುವಾಗ ನಮ್ಮ ಸಾಮಥ್ರ್ಯ ಮತ್ತು ಯೋಗ್ಯತೆಯನ್ನು ನೋಡಿಕೊಳ್ಳಬೇಕಾಗುತ್ತದೆ. ಸಂದರ್ಶನ ಮಾಡಿ ಅವರ ಬಗ್ಗೆ ಬರೆಯುವುದು ಬೇರೆ. ಆದರೇ, ಅವರ ನಮ್ಮ ಒಡನಾಟವನ್ನು ಬರೆಯುವುದು? ದುಸ್ಸಾಹಸವೂ ಸರಿ. ನಾವು ಬರೆಯುವುದು ನಮ್ಮ ಅನಿಸಿಕೆಯಷ್ಟೆ. ಅದು ಸತ್ಯವಾ? ವಾಸ್ತವವಾ? ತಿಳಿದಿರುವುದಿಲ್ಲ. ಆ ಒಂದು ದುಸ್ಸಾಹಸಕ್ಕೆ ಇಂದು ಕೈ ಹಾಕಿದ್ದೇನೆ. ಇಂದು ನಾನು ಪರಿಚಯಿಸಿತ್ತಿರುವ ವ್ಯಕ್ತಿಯ ಹೆಸರು, ಪ್ರೋ. ಎಂ.ಆರ್.ಎನ್. ಪರಿಚಯ ಮಾಡುತ್ತಿದ್ದೇನೆ, ಎಂಬುದರಲ್ಲಿಯೇ ನನ್ನ ಅಹಂಕಾರ ಅಡಗಿದೆ. ಎಂ.ಆರ್.ಎನ್. ಸರ್ ಅವರನ್ನು ಪರಿಚಯ ಮಾಡಿಕೊಡುವ ಯೊಗ್ಯತೆಯಾಗಲೀ, ಅರ್ಹತೆಯಾಗಲೀ ನನಗಿಲ್ಲ. ಅವರು ಇಡೀ ರಾಜ್ಯಕ್ಕೆ ಚಿರಪರಿಚಿತರು. ಶಿಕ್ಷಣ ಕ್ಷೇತ್ರದಲ್ಲಿ ಹೆಸರಾಂತರು.


ಮೂರ್ನಾಲ್ಕು ವರ್ಷದ ಕೆಳಗೆ, ಸ್ನೇಹಿತರಾದ ಚನ್ನಪ್ಪರವರು, ಹತ್ತನೆಯ ತರಗತಿ ವಿದ್ಯಾರ್ಥಿಗಳಿಗಾಗಿ ಕಾರ್ಯಗಾರಗಳನ್ನು ಮಾಡುತ್ತಿದ್ದರು. ಆ ಸಮಯದಲ್ಲಿ ನಾನು ಅವರನ್ನು ನಮ್ಮ ಸೀಕೋ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನಲ್ಲಿ ಕಾರ್ಯಕ್ರಮ ನಡೆಸಿಕೊಡಲು ಮನವಿ ಮಾಡಿದ್ದೆ. ಅವರು, ಸಕರಾತ್ಮಕವಾಗಿ ಸ್ಪಂದಿಸಿ, ನಮ್ಮೊಡನೆ ನಮ್ಮ ಗುರುಗಳು ಮತ್ತು ಮಾರ್ಗದರ್ಶಿಗಳಾದ ಪ್ರೋ. ಎಂ.ಆರ್.ಎನ್Àವರು ಬರುತ್ತಾರೆ ಎಂದರು. ನಾನು ಎಮ್.ಆರ್.ಎನ್. ಸರ್ ಕೇಳಿದ್ದೆ. ಭೇಟಿಯಾಗಿರಲಿಲ್ಲ. ನಮ್ಮದು ಸಣ್ಣ ಕಾರ್ಯಕ್ರಮ, ಅಂಥಹವರನ್ನು ಕರೆಸುವುದೇ? ನಾನು ಚೆನ್ನಪ್ಪರವರಿಗೆ ಹೇಳಿದೆ, “ಸರ್, ಇದು ಸಣ್ಣ ಕಾರ್ಯಕ್ರಮ, ನೀವು ಸ್ನೇಹಿತರು, ನಮ್ಮ ಮನೆಯಲ್ಲಿ ತಂಗಬಹುದು, ಆದರೇ, ಅವರಿಗೆ ಅಲ್ಲಿ ಒಳ್ಳೆಯ ಲಾಡ್ಜ್ ಇರುವುದಿಲ್ಲ”. 


ಸರ್ ಅವರ ಬಗ್ಗೆ ನಿಮಗೆ ತಿಳಿದಿಲ್ಲ. ಅಷ್ಟೊಂದು ಸರಳ ವ್ಯಕ್ತಿತ್ವ ಮತ್ತು ಮಗುವಿನಂತಹ ಮನಸ್ಸು ಎಂದರು. ಎಲ್ಲಾ ವಯಸ್ಸಿನವರ ಜೊತೆಗೆ ನಿಸ್ಸಂಕೋಚದಿಂದ ಬೆರೆಯುತ್ತಾರೆ ಎಂದರು. ಆದರೂ ನನಗೆ ಮನಸ್ಸಿನಲ್ಲಿ ಅಳುಕಿತ್ತು. ಹಿರಿಯವರು, ದೊಡ್ಡ ಹೆಸರು ಮಾಡಿರುವವರು, ಹೇಗೋ ಏನೋ ಎಂದು. ಜೊತೆಯಲ್ಲಿ ಪ್ರಯಾಣಿಸಲು ಶುರು ಮಾಡಿದ ಕೆಲವೇ ನಿಮಿಷಗಳಲ್ಲಿ ಆತ್ಮೀಯತೆ ಬೆಳೆಯಿತು. ಈಗ ಅದೆಷ್ಟರ ಮಟ್ಟಿಗೆ ಹೋಗಿದೆಯೆಂದರೆ ತಿಂಗಳಿಗೊಮ್ಮೆಯಾದರೂ ಹೋಗಿ ಮಾತನಾಡಿಸಬರಬೇಕು. ಅವರೊಡನೆ ವಿವಿಧ ವಿಚಾರಗಳ ಕುರಿತು ಚರ್ಚಿಸಬೇಕು. ಅವರೊಂದು ಮಹಾಗ್ರಂಥ ಅಗೆದಷ್ಟು ವಿಚಾರಗಳು ಬರುತ್ತವೆ. ನೂರು ಪುಸ್ತಕವನ್ನು ಒಮ್ಮೆಲೆ ಓದಿದಷ್ಟು. 


ನನ್ನ ಮಗಳು ಬಹುಶಃ ಹತ್ತು ತಿಂಗಳವಿದ್ದಾಗ ಒಮ್ಮೆ ಅವರ ಮನೆಗೆ ಹೋಗಿದ್ದೆ. ಮಗಳು ಅದೆಷ್ಟು ಆಸಕ್ತಿಯಿಂದ ಅವರ ಮಾತನ್ನು ಕೇಳಿದಳೆಂದರೆ, ಅವರ ಮಾತಿನ ಶಕ್ತಿಯೇ ಹಾಗಿತ್ತು. ಅವರು ಈ ವಯಸ್ಸಿನಲ್ಲಿಯೂ ಶಾಲೆಗಳಿಗೆ ಭೇಟಿ ನೀಡಬೇಕು ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವವನ್ನು ಬೆಳೆಸಬೇಕೆಂದು ಶ್ರಮಿಸುತ್ತಿದ್ದಾರೆ. ಮುಕ್ತವಾಗಿ ಯಾವ ವಿಚಾರವೇ ಆಗಲೀ ಒಪ್ಪಿಕೊಳ್ಳುತ್ತಾರೆ. ನಾನು ಒಮ್ಮೆ ಕೇಳಿದೆ, ಸರ್, ನಾನು ಏನನ್ನು ಸಾಧಿಸಿಲ್ಲ, ಆದರೂ ಅಹಂಮ್ಮಿನೊಳಗೆ ಮುಳುಗಿದ್ದೇನೆ, ಎನಿಸುತ್ತದೆ. ಬೇಸರ, ಕೋಪ ಬರುತ್ತದೆ. ತಮಗೆ ಕೋಪ ಬರುವುದಿಲ್ಲ ಇದು ಹೇಗೆ ಸಾಧ್ಯ? 


ಅವರ ಬದುಕಿನ ಪರಿಕಲ್ಪನೆಯೆ ಅದ್ಬುತ. ನಾನು ಸಮಾಜವನ್ನು ಬದಲಾಯಿಸಲಾಗುವುದಿಲ್ಲ. ಅದು ಹೇಗಿದೆಯೋ ಹಾಗೆಯೇ ಒಪ್ಪಿಕೊಳ್ಳಬೇಕು. ನನ್ನ ನ್ಯೂನ್ಯತೆಗಳನ್ನು ಅದಾಗಿಯೇ ಒಪ್ಪಿಕೊಳ್ಳಬೇಕು. ನಾನು ಅವುಗಳನ್ನು ಅದುಮಿಟ್ಟುಕೊಳ್ಳಲು ಪ್ರಯತ್ನಿಸಿದಷ್ಟು ಅದು ಪುಟಿದೇಳುತ್ತದೆ. ಜೀವನದ ಹಾದಿಯಲ್ಲಿ ಕಲ್ಪನೆ ಮತ್ತು ಕುತೂಹಲ ಬಹಳ ಮುಖ್ಯ. ಒಬ್ಬ ವ್ಯಕ್ತಿಯ ಬಗ್ಗೆ ಆದರತೆ ಬರುವುದು ಇವೆರಡರಿಂದ. ಅವರ ಬಗ್ಗೆ ಕುತೂಹಲ ಬಂದಾಗ ಅವರ ಹತ್ತಿರಕ್ಕೆ ಹೋಗುತ್ತೆವೆ. ಅದರಂತೆಯೇ ಅವರ ಬಗ್ಗೆ ನಮ್ಮದೇ ಕಲ್ಪನೆಗಳು ಇರುತ್ತವೆ. ಅದು ಇರಬೇಕು ಮತ್ತು ಅದು ಕಲ್ಪನೆಯೆಂಬುದು ತಿಳಿದಿರಬೇಕು. 


ಬೆಂಗಳೂರಿನಿಂದ ಬೀದರ್, ಬೆಳಗಾವಿಯ ತನಕ ಬಸ್ಸಿನಲ್ಲಿ ಕುಳಿತು ಪ್ರಯಾಣ ಮಾಡುತ್ತಾರೆ. ಹವಾನಿಯಂತ್ರಿತ ಬಸ ಬೇಕೆನ್ನುವುದಿಲ್ಲ. ಕಾರ್ ಬೇಕು ಎನ್ನುವುದಿಲ್ಲ. ಯಾವುದೇ ವಿದ್ಯಾರ್ಥಿ ಅವರಿಗೆ ಕರೆ ಮಾಡಿದರೂ ಸ್ಪಂದಿಸುತ್ತಾರೆ. ನಾವು ಕಾರ್ಯಕ್ರಮ ನಡೆಸಿದ ನಂತರ ಕೆಲವ ಹತ್ತನೆಯ ತರಗತಿ ವಿದ್ಯಾರ್ಥಿಗಳು ಕರೆ ಮಾಡಿ ವಿಚಾರಿಸಿದ್ದಾರೆ. ಆಧ್ಯಾತ್ಮದಿಂದ ವಿಜ್ಞಾನದವರೆಗೆ, ಅದರ ನಡುವೆ ಡಿವಿಜಿ, ಸಂಸ್ಕøತ ಶ್ಲೋಕಗಳು ಎಲ್ಲವನ್ನು ಹಿತವಾಗಿ ಮಿಶ್ರಣ ಮಾಡಿ ಮಾತಿನಿಂದ ನಮ್ಮನ್ನು ಮನದುಂಬಿಸುತ್ತಾರೆ. ಕೈಗೆ ಸಿಕ್ಕ ಪ್ರತಿ ವಸ್ತುವಿನ ವಿವರಣೆಯನ್ನು ಮತ್ತೊಂದು ಪುರಾಣಕ್ಕೋ ಇತಿಹಾಸಕ್ಕೋ ಕೊಂಡಿಯನ್ನು ಬೆಸೆಯುತ್ತಾರೆ. 


ಹೆಮ್ಮೆಯ ವಿಚಾರವೆಂದರೆ ಡಾ. ಅಬ್ದುಲ್ ಕಲಾಂ ರವರೊಂದಿಗೆ ಎರಡು ದಿನಗಳನ್ನು ಕಳೆದಿದ್ದಾರೆ. ಡಾ. ಹೆಚ್. ನರಸಿಂಹಯ್ಯರವರ ಜೊತೆಗೆ ಸೇರಿಕೊಂಡು ಸಮುದಾಯದತ್ತ ವಿಜ್ಞಾನವನ್ನು ಕರೆದೊಯ್ದಿದ್ದಾರೆ. ರಾಜ್ಯ ವಿಜ್ಞಾನ ಪರಿಷತ್ತಿಗೆ ಅವರ ಕೊಡುಗೆ ಅಪಾರ. ಈ ದಿನಗಳಲ್ಲಿ ಅಲ್ಲಿಂದ ಅಂತರ ಕಾಯ್ದುಕೊಂಡಿರುವುದು ಅಲ್ಲಿನ ರಾಜಕೀಯಕ್ಕೆ ಕೈಗನ್ನಡಿಯೆಂದರೆ ತಪ್ಪಾಗದು. ಸರಸ ಸಂವಹನವೆಂಬ ಗುಂಪಿನನೊಂದಿಗೆ ಶಾಲಾ ಹಂತದಲ್ಲಿ ಹಲವಾರು ಚಟುವಟಿಕೆಗಳನ್ನು ಅಪಾರ ವಿದ್ಯಾರ್ಥಿ ಅಭಿಮಾನಿಗಳನ್ನು ಹೊಂದಿರುವುದು ಸಾರ್ಥಕತೆಕೆ ನಿದರ್ಶನ. 


ಕೊನೆಯ ಹನಿ: ತುಂಬಿದ ಕೊಡ ತುಳುಕುವುದಿಲ್ಲವೆನ್ನುವುದರ ಜೊತೆಗೆ ಯಾವುದೇ ನಿರೀಕ್ಷೆಯಿಲ್ಲದೆ ಬದುಕನ್ನು ಕಟ್ಟಿಕೊಂಡರೆ ಸ್ವರ್ಗದ ಬಾಗಿಲೇ ಸೃಷ್ಟಿಯಾಗುತ್ತದೆ ಎಂಬುದಕ್ಕೆ ಶ್ರೀಯುತರು ಕಾರಣ. ಅವರನ್ನು ಪರಿಚಯಿದ್ದಕ್ಕೆ ಚನ್ನಪ್ಪರವರಿಗೆ ಧನ್ಯವಾದಗಳು. ಚನ್ನಪ್ಪರವರು ಅದೇ ಹಾದಿಯಲ್ಲಿ ನಡೆಯುತ್ತಿರುವುದು ಸಂತಸದ ವಿಷಯ. 


ಇದು ಪೀಠಿಕೆಯಷ್ಟೆ. ಹೇಳುವುದು ಸಾಗರದಷ್ಟಿದೆ. 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...