14 ಆಗಸ್ಟ್ 2020

ನಾ ಕಂಡ ಅಪರೂಪದ ವ್ಯಕ್ತಿ: ದ್ವಾರಕೇಶ್ ಎಂಬ ನೇರ ನುಡಿಯ ನಿಷ್ಠುರವಾದಿ ಸ್ನೇಹಿತ!!!



ಮೇಲಿನ ಶೀರ್ಷಿಕೆಯನ್ನು ನೋಡಿದಾಗ ಸ್ವಲ್ಪ ಗೊಂದಲಗಳಿವೆ ಎನಿಸುವುದು ಸಹಜ. ಆ ರೀತಿಯ ಗೊಂದಲಗೊಳಿಸುವ ಜೊತೆಗೆ ಅಚ್ಚರಿ ಹುಟ್ಟಿಸುವ ಒಬ್ಬ ವ್ಯಕ್ತಿಯ ಕುರಿತು ಬರೆಯುತ್ತಿದ್ದೇನೆ. ಇವರ ಬಗ್ಗೆ ಬರೆಯುತ್ತಾ ಹೋದರೇ ಕಾದಂಬರಿಯಷ್ಟು ಬರೆಯಬಹುದು. ಅದು ಅವರ ವ್ಯಕ್ತಿತ್ವ ಜೊತೆಗೆ ನನ್ನ ಅವರ ಒಡನಾಟ, ಹೊಡೆದಾಟ, ಜಗಳ, ಜಂಜಾಟ ಇತ್ಯಾದಿಗಳೊಂದಿಗೆ ಸೇರಿರುವುದರಿಂದ. ಆದರೂ, ಸರಳವಾಗಿ ನೇರವಾಗಿ ಪರಿಚಯಿಸಲು ಪ್ರಯತ್ನಿಸುತ್ತೇನೆ. ನನ್ನ ಮತ್ತು ದ್ವಾರಕೇಶ್ ಅವರ ಒಡನಾಟ ಸುಮಾರು ಹದಿನಾರು ವರ್ಷದ್ದು. ಅವರ ಅನುಮತಿಯೊಂದಿಗೆ ಮುಕ್ತವಾಗಿ ಬರೆಯುತ್ತಿದ್ದೇನೆ. ಅದರಲ್ಲಿ ಕೆಲವು ಸೆನ್ಸಾರ್ ಆಗಬೇಕಿರುವ ಸುದ್ದಿಗಳು ಬರಬಹುದು. ಆದರೂ, ಓದುಗರು ಅವುಗಳನ್ನು ಒಪ್ಪಿಕೊಂಡು ಮುಂದಕ್ಕೆ ಹೋಗಬೇಕು.


ಈ ಬರವಣಿಗೆಯನ್ನು ನಾಲ್ಕು ವಿಧವಾಗಿ ವಿಂಗಡಿಸುತ್ತೇನೆ. ಮೊದಲನೆಯ ಭೇಟಿ, ನಾವು ಕಳೆದ ಕಾಲೇಜು ದಿನಗಳು ಮತ್ತು ನಂತರದ ದಿನಗಳು ಹಾಗೂ ಅವರ ವ್ಯಕ್ತಿತ್ವ. ನಾನು ಮೈಸೂರು ವಿವಿಯಿಂದ ಬೆಂಗಳೂರು ವಿವಿಗೆ ಬಂದದ್ದು ಎಂಎಸ್ಸಿ ಮಾಡುವುಕದಕ್ಕೆ. ಮೊದಲು ಜಿಯಾಲಜಿಗೆ ಸೇರಿದ್ದು ನಂತರ ನಾನು ಪರಿಸರ ವಿಜ್ಞಾನಕ್ಕೆ ಬಂದೆ. ಹಾಸ್ಟೆಲ್ ಬೇಕಿತ್ತು. ಅಲ್ಲೊಂದು ಕಂಡಿಷನ್ ಇತ್ತು. ಪ್ರತಿಯೊಂದು ರೂಮಿನಲ್ಲಿ ಇಬ್ಬರು ಸೀನಿಯರ್ ಇರುತ್ತಿದ್ದರು, ಅಂದರೇ ಎರಡನೆಯ ಸ್ನಾತಕೊತ್ತರ ವಿದ್ಯಾರ್ಥಿಗಳು. ಅವರ ಅನುಮತಿಯನ್ನು ಪಡೆದರೆ ಮಾತ್ರವೇ ಹಾಸ್ಟೆಲ್ ಗೆ ಅಡ್ಮಿಷನ್. ಹಾಸ್ಟೆಲ್‍ನಲ್ಲಿ ಸಾಮಾನ್ಯವಾಗಿ ಒಂದೋ ತುಮಕೂರು ಕಡೆಯವರು ಮತ್ತೊಂದು ಕೋಲಾರ ಕಡೆಯವರು. ಅವರೆಲ್ಲರೂ ಮೊದಲೇ ಅವರ ಸ್ನೇಹಿತರನ್ನೋ, ಬಂಧುಗಳನ್ನು ಸೇರಿಸಿಕೊಳ್ಳಲು ತಯಾರಿರುತ್ತಿದ್ದರು. ನಾನೋ, ಹೊರಗಡೆ ವಿವಿಯವನು ಮತ್ತು ಅಪರಿಚಿತನು ಕೂಡ. ನಾನು ಹೆಚ್ಚೂ ಕಡಿಮೆ ಎಲ್ಲಾ ರೂಮಿಗೂ ಹೋದೆ, ಕೋರಿಕೊಂಡೆ, ಎಲ್ಲರದ್ದೂ ಒಂದೇ ಪ್ರತಿಕ್ರಿಯೆ. ನಮ್ಮಲ್ಲಿ ಖಾಲಿಯಿಲ್ಲ, ಅದರಲ್ಲಿ ಹಲವರು ಸುಳ್ಳು ಹೇಳಿದ್ದರೂ ಕೂಡ. 


ಕೊನೆಯದಾಗಿ ಕಾರಿಡಾರಿನಲ್ಲಿ ಒಬ್ಬರು ಬರುತ್ತಿದ್ದರು, ಅವರನ್ನು ಕೇಳಿದೆ. ಅವರು ತಮ್ಮ ರೂಮಿಗೆ, ರೂಮ್ ನಂಬರ್ 81ಕ್ಕೆ ಕರೆದೊಯ್ದರು. ನನ್ನ ಬಗ್ಗೆ ವಿಚಾರಿಸಿದರು. ಯಾವ ಊರು? ಯಾವ ವಿಷಯ ಇತ್ಯಾದಿ. ನಾನು ಸಂಕೋಚದಿಂದ ಮತ್ತು ಆತಂಕದಿಂದ ಉತ್ತರಿಸಿದೆ. ಅವರ ಮುಂದಿನ ಪ್ರಶ್ನೆ ನಿನಗೆ ಕೊಡಗು ಗೊತ್ತಾ? ಶನಿವಾರಸಂತೆ ಗೊತ್ತಾ? ನಾನು ಹುಟ್ಟಿದ್ದು, ಪಿಯುಸಿ ಮಾಡಿದ್ದು ಕೂಡ ಕೊಡಗಿನಲ್ಲಿ ಎಂದೆ. ಸರಿ ಬಾ ಎಂದರು. ಅಲ್ಲಿಂದ ನೇರವಾಗಿ ಫಿಸಿಕ್ಸ್ ಕ್ಯಾಂಟೀನ್ ಕಡೆಗೆ ಕರೆದೊಯ್ದರು. ಅಲ್ಲಿ ತುಂತುರು ಮಳೆ ಬರುತ್ತಿತ್ತು. ಅವರು ಸಿಗರೇಟ್ ಹಚ್ಚಿದರು. ನಾನು ಅವರ ಮುಖ ನೋಡಿದೆ. ನಾನು ಸೇದುತ್ತಿದೆ, ನನಗೆ ಕೇಳಲಿಲ್ಲವಲ್ಲವೆಂಬುದು ನನ್ನ ನೋಟದ ಪ್ರತಿಕ್ರಿಯೆ. ಅವರ ಪ್ರಶ್ನೆ, ನೀನು ದೇವರನ್ನು ನಂಬುತ್ತೀಯ? ನಾನು ರೂಮಿಗೆ ಸೇರಿಸಿಕೊಳ್ಳುವುದಕ್ಕೂ ಇದಕ್ಕೂ ಏನು ಸಂಬಂಧ? ನಂಬುತ್ತೇನೆ ಅಂಧಾಭಿಮಾನವಿಲ್ಲ, ಭಕ್ತಿಯಿದೆ ಅಷ್ಟೆ ಎಂದೆ. ನೀನು ನಮ್ಮ ರೂಮಿಗೆ ಸೇರಿಕೊಳ್ಳಬಹುದು, ನಮಗೆ ದೇವರ ಮೇಲೆ ಅಷ್ಟೆನೂ ನಂಬಿಕೆಯಿಲ್ಲ, ನಮ್ಮ ರೂಮಿಗೆ ನಾವು ಬೀಗ ಹಾಕುವುದಿಲ್ಲ. ನಮ್ಮೆಲ್ಲಾ ಸ್ನೇಹಿತರು ಬರುವುದು ಹೋಗುವುದು ಹರಟೆ ಹೊಡೆಯುವುದು ಸಾಮಾನ್ಯ, ಅದರಿಂದ ನಿನಗೆ ತೊಂದರೆಯಿಲ್ಲವೆಂದರೇ ಬಾ ಎಂದರು. ಆ ದಿನದಿಂದ ನಾನು ಎರಡು ವರ್ಷವಿರುವ ತನಕವೂ ನಮ್ಮ ರೂಮಿಗೆ ನಾವು ಬೀಗವನ್ನೇ ಹಾಕಲಿಲ್ಲ, ಅದು ನಮ್ಮ ನಂಬಿಕೆ. ಯಾವ ರೂಮಿವರು ಬೇಕಿದ್ದರೂ ಬರಬಹುದಿತ್ತು, ಪುಸ್ತಕ ಹೊತ್ತು ಹೋಗಬಹುದಿತ್ತು, ಕೆಲವೊಮ್ಮೆ ನಮ್ಮ ಬಟ್ಟೆಗಳನ್ನು ಕೂಡ. ಯಾವುದಕ್ಕು ಚಿಂತಿಸುತ್ತಿರಲಿಲ್ಲ. ನಡು ರಾತ್ರಿಯವರೆಗೆ ಚರ್ಚೆಗಳು, ಪಠ್ಯಗಳಿಗಿಂತ, ಕಥೆ ಕಾದಂಬರಿಗಳೇ ಹೆಚ್ಚಿರುತ್ತಿದ್ದವು. ಅವುಗಳ ಮೇಲೆಯೇ ಚರ್ಚೆ. 


ಸಾಮ್ಯತೆಯೆಂದರೇ, ಮಳೆಯಲ್ಲಿ ನೆನೆಯುವುದು. ರಾತ್ರಿ ಮಳೆ ಬಂದರೇ ಅಲ್ಲಿಂದ ಮುಖ್ಯ ರಸ್ತೆಯ ತನಕ ನಡೆಯುವುದು, ನೆನೆಯುವುದು. ಅವರು ಪೋಲಿಸ್ ಇಲಾಖೆಗೆ ಸೇರಿದ ನಂತರವೂ ಕೆಲವು ದಿನಗಳು ನಮ್ಮೊಂದಿಗೆ ಇದ್ದರು. ಅಲ್ಲಿನ ಲಂಚಕೋರತನಕ್ಕೆ ಬೇಸತ್ತು ರಾಜಿನಾಮೆ ಕೂಡ ನೀಡಿದರು. ಅಲ್ಲಿನ ಒಂದು ಘಟನೆಯನ್ನು ಮುಂದಿಡುತ್ತೇನೆ. ರಾತ್ರಿ ಪಾಳಿಗೆ ಹೋಗುತ್ತಿದ್ದಾಗ ಇವರು ಹೊಸಬರಾಗಿದ್ದರಿಂದ ಇವರ ಹಿರಿಯ ಪೋಲಿಸರು ಅಂಗಡಿಗಳಲ್ಲಿ ಐದು, ಹತ್ತು ರೂಪಾಯಿಗಳನ್ನು ಕೇಳಿ ತರುವಂತೆ ಹೇಳುತ್ತಿದ್ದರು. ಅದೆಷ್ಟೋ ಬಾರಿ ಇವರ ಜೇಬಿನಿಂದಲೇ ತೆಗೆದು ಅವರಿಗೆ ನೀಡುತ್ತಿದ್ದರು. ಅದಾದ ನಂತರ ಪ್ರಥಮ ದರ್ಜೆ ಸಹಾಯಕರಾಗಿ ಮೀನುಗಾರಿಕೆ ಇಲಾಖೆಗೆ ಸೇರಿದರು, ನಡುವೆ ಕೆಎಎಸ್ ಕಾರಣಾಂತರಗಳಿಂದ ಕೈತಪ್ಪಿತು. ಹೆಂಡ ಕುಡಿದರೆ ನಾನೊಂದು ರೀತಿಯಲ್ಲಿ ಕೋತಿಗೆ ಹೆಂಡ ಕುಡಿಸಿದಂತೆ. ಅದೆನೋ ಒಂದು ರೀತಿ ವಿಕೃತ ಮನಸ್ಸು ನನ್ನದು, ಕುಡಿದ ನಂತರ ಜೊತೆಯಲ್ಲಿರುವವರಿಗೆ ಹಿಂಸೆ ಕೊಡುವುದು. ಅದು ಯಾವ ರೀತಿಯೆಂದರೆ, ಬೇಕೆಂದೆ ತಡಮಾಡುವುದು. ಅಥವಾ ಅವರು ಬೇಗ ಕುಡಿದು ಮುಗಿಸುತ್ತಿದ್ದರೋ ನಾನರಿಯೇ? ಅದೇ ರೀತಿ ಒಮ್ಮೆ ಸಿರಾದಲ್ಲಿ ಮದುವೆ ಕಾರ್ಯಕ್ರಮಕ್ಕೆ ಹೋದಾಗ ಎಷ್ಟತ್ತು ಆದರೂ ನಾನು ಏಳುತ್ತಿಲ್ಲ. ದೊಡ್ಡದಾಗಿ ಜಗಳವಾಡಿಕೊಂಡು ಬೀದಿರಂಪ ಮಾಡಿಬಿಟ್ಟೆ. 


ನನ್ನದೇ ತಪ್ಪಿದ್ದರೂ ದ್ವಾರಕೇಶ್ ನನ್ನ ಸಹಾಯಕ್ಕೆ ನಿಲ್ಲಬೇಕಿತ್ತು ಎನ್ನುವುದು ನನ್ನ ವಾದವಾಗಿತ್ತು. ಅವರಿಂದ ಅಂತರ ಕಾಯ್ದುಕೊಂಡೆ. ನಾನು ಕುಡಿದಾಗ ಅದೆಷ್ಟೋ ಸಂಭಂಧಗಳನ್ನು ಕಡಿದುಕೊಂಡದ್ದಿದೆ. ಆದರೇ, ದ್ವಾರಕೇಶ್ ವಿಚಾರದಲ್ಲಿ ಮಾತ್ರವೇ ನನಗೆ ಬೇಸರವಾಗಿದ್ದು, ಮಿಕ್ಕಿದವರು ಹೋದರೇ ಹೋಗಲಿ ಎಂದು ಬಿಟ್ಟೆ. ಈಗಲೂ ಬಿಟ್ಟಿದ್ದೇನೆ. ಕೆಲವು ವರ್ಷಗಳ ವಿರಹದಿಂದ ಹೊರಬಂದೆವು. ಈಗಲೂ ಒಮ್ಮೊಮ್ಮೆ ನಡೆಯುತ್ತವೆ, ನಾನು ಸ್ವಲ್ಪ ಸುಧಾರಿಸಿರುವುದರಿಂದ ಅವರು ಒಪ್ಪಿಕೊಂಡಿದ್ದಾರೆ. ಆದರೇ, ಅವರ ಕೆಲವು ಸ್ನೇಹಿತರು ನನ್ನಿಂದ ಅಂತರ ಕಾಯ್ದುಕೊಂಡಿದ್ದಾರೆ, ಅದರಿಂದ ನನಗೆ ಯಾವ ನಷ್ಟವೂ ಇಲ್ಲ. ಪ್ರಪಂಚ ವಿಶಾಲವಾಗಿದೆ, ನಮ್ಮನ್ನು ನಮ್ಮಂತೆಯೇ ಒಪ್ಪಿಕೊಳ್ಳುವರೊಂದಿಗೆ ಬದುಕಬೇಕು. ಅದು ನನ್ನ ಸಿದ್ಧಾಂತ. ಅದರಂತೆಯೇ ಬದುಕುತ್ತಿದ್ದೇನೆ. 


ಅವರ ಮಾನವೀಯತೆಯ ಗುಣಕ್ಕೆ ಒಂದು ಉದಾಹರಣೆ ನೀಡುತ್ತೇನೆ. ಒಮ್ಮೆ ಮೈಸೂರಿನಲ್ಲಿ ಅವರು ಮತ್ತು ಅವರ ಸ್ನೇಹಿತ ಬೈಕಿನಲ್ಲಿ ಹೋಗುತ್ತಿದ್ದಾಗ ತಿರುವಿನಲ್ಲಿ ಒಂದು ಕಾರು ಬಂದು ಡಿಕ್ಕಿ ಹೊಡೆಯುತ್ತದೆ. ಇವರು ಕೆಳಗೆ ಬಿದ್ದಿದ್ದವರು ಎದ್ದು ಹೋಗಿ ಕಾರಿನಲ್ಲಿದ್ದವರಿಗೆ ಏನಾದರೂ ಪೆಟ್ಟಾಯಿತಾ ಎಂದು ಕೇಳುತ್ತಾರೆ. ಅವರದ್ದೇ ತಪ್ಪಿದ್ದರೂ ಸಮಾಧಾನ ಮಾಡಿ ಕಳುಹಿಸುತ್ತಾರೆ. ಫೋನ್ ಸಂಭಾಷಣೆಯಲ್ಲಿ ಹರಟೆಗೆ ಸ್ಥಳವಿರುವುದಿಲ್ಲ. ನೇರ ವಿಷಯಕ್ಕೆ ಬರಬೇಕು, ಅದು ಸ್ನೇಹಿತರಾದರೂ ಅಷ್ಟೆ, ಯಾರಾದರೂ ಅಷ್ಟೆ. ಸಾಮಾನ್ಯವಾಗಿ ನಾವುಗಳು ಯಾರಾದರೂ ಸಹಾಯ ಅಥವಾ ಮಾಹಿತಿ ಕೇಳಿದರೆ, ನೋಡೋಣ ವಿಚಾರಿಸಿ ಹೇಳ್ತೀನಿ ಎನ್ನುತ್ತೇವೆ. ದ್ವಾರಕೇಶ್ ಆ ಹಂತಕ್ಕೆ ಹೋಗುವುದಿಲ್ಲ. ಆಗುವುದಿದ್ದರೆ, ಆಗುತ್ತೆ ಎನ್ನುತ್ತಾರೆ, ಆಗುವುದಿಲ್ಲವೆಂದಾದರೇ ಆಗುವುದಿಲ್ಲವೆನ್ನುತ್ತಾರೆ. ಬೇರೆಯವರನ್ನು ಕಾಯಿಸುವುದಿಲ್ಲ. ಅಥವಾ ಅವರಿಗೆ ಆಗದೇ ಇದ್ದರೂ ಬರುತ್ತೇನೆ ಎನ್ನುವುದಿಲ್ಲ. 


ಈಗಲೂ ಕೋವಿಡ್ ಸಮಯದಲ್ಲಿ ಮನೆಯಲ್ಲಿ ಕುಳಿತು ಸಾಕಷ್ಟು ವಿಚಾರಗಳನ್ನು ಓದಿದ್ದಾರೆ. ಇದನ್ನು ಓದು ಎಂದು ಕಳುಹಿಸಿಕೊಡುತ್ತಾರೆ. ಮನೆಯ ಅಂಗಳವನ್ನಲ್ಲದೇ ಇಡೀ ಬೀದಿಯಲ್ಲಿ ಸಸಿಗಳನ್ನು ನೆಟ್ಟು, ಅವುಗಳಿಗೆ ನಿರೂಣಿಸುತ್ತಾರೆ. ಯಾವುದೇ ವಿಷಯಗಳಿರಬಹುದು, ವಿಜ್ಞಾನ, ತಂತ್ರಜ್ಞಾನ, ಔಷಧ, ಇತಿಹಾಸ, ರಾಜಕೀಯ ಸಮಗ್ರ ವಿಷಯಗಳನ್ನು ಅರ್ಥೈಸಿಕೊಂಡಿದ್ದಾರೆ. ಯಾವುದೇ ಸಿದ್ಧಾಂತಕ್ಕೆ ಅಂಟಿಕೊಳ್ಳದೆ, ಬದುಕನ್ನು ಕಟ್ಟಿಕೊಂಡಿದ್ದಾರೆ. ಯಾವುದಕ್ಕೂ ವಿಷಾಧಪಟ್ಟಿಕೊಳ್ಳುವುದಿಲ್ಲ. ಸ್ನೇಹಿತರ ಆರೈಕೆಗೆ ಮುಂದಿರುತ್ತಾರೆ. ಅವರ ಕಡೆಯಿಂದ ಎಷ್ಟೆಲ್ಲಾ ಸಹಾಯ ಮಾಡಬೇಕು ಅದನ್ನು ಕೈಮೀರಿ ಮಾಡುತ್ತಾರೆ. ಅಪಾರ ಸ್ನೇಹಿತರಲ್ಲದೇ, ಅವರ್ಯಾರನ್ನು ಕಳೆದುಕೊಳ್ಳದೇ ಪೋಷಿಸುತ್ತಾ ಬಂದಿದ್ದಾರೆ. 


ನಾವಿಬ್ಬರೇ ಜೊತೆಗೆ ಅಲೆದಾಡಿದ್ದೇವೆ. ರಾತ್ರೋ ರಾತ್ರಿ ಬೈಕಿನಲ್ಲಿ ಬೆಂಗಳೂರಿನಿಂದ ಬಾನುಗೊಂದಿಗೆ ಹೋದದ್ದಿದೆ. ಮಧುಗಿರಿಗೆ ಹೋಗಿದ್ದೇವೆ. ಕೊಡಗಿನ ಅದ್ಯಾವುದೆಲ್ಲಾ ಕಾಡುಗಳನ್ನು ಸುತ್ತಾಡಿದ್ದೇವೆ. ಹಿರಿಯರೊಂದಿಗೆ ಹಿರಿಯರಾಗಿ, ಕಿರಿಯರೊಂದಿಗೆ ಕಿರಿಯರಾಗಿರುತ್ತಾರೆ. ಯಾವುದೇ ಕೆಲಸಕ್ಕೂ ಹಿಂಜರಿಯುವುದಿಲ್ಲ, ಬೇರೆಯವರ ತಟ್ಟೆ ತೊಳೆಯುವ ತನಕ. 


ಕೊನೆಯ ಹನಿ: ಸ್ನೇಹಿತರನ್ನು ಸಂಪಾದಿಸುವುದು ಮತ್ತು ಅವರನ್ನು ಜೀವನ ಪರ್ಯಂತ ಉಳಿಸಿಕೊಳ್ಳುವುದು ಸಾಮಾನ್ಯ ವಿಚಾರವಲ್ಲ. ನಮ್ಮೊಂದಿಗೆ ಉಂಡವರು, ತಿಂದವರು, ಕುಡಿದವರು ಜೀರ್ಣವಾದಂತೆ ನಮ್ಮನ್ನು ಮರೆಯುತ್ತಾರೆ. ಸಹಾಯ ಬೇಕಿದ್ದಾಗ ಮಾತ್ರವೇ ಬರುವ ಅನೇಕರಿದ್ದಾರೆ. ಅವುಗಳನ್ನು ಕಳೆಗಳಂತೆ ನಾವು ಕಿತ್ತು ಹಾಕುತ್ತೇವೆ. ಆದರೇ, ದ್ವಾರಕೇಶ್ ಅದೆಷ್ಟೆ ಬಾರಿ ಮೋಸ ಹೋದರೂ ಮುನ್ನುಗ್ಗುತ್ತಿದ್ದಾರೆ. ಯಾವುದೇ ಕಹಿ ಘಟನೆಗಳನ್ನು ಸಾಧಿಸುವುದಿಲ್ಲ. ಪ್ರತಿಯೊಬ್ಬ ಸ್ನೇಹಿತರ ಸಮಯಕ್ಕೆ ನಿಲ್ಲುತ್ತಾರೆ, ತಲೆಹರಟೆ ಮಾಡಿದರೆ ಅಲ್ಲಿಯೇ ಬೈಯ್ಯುತ್ತಾರೆ. ನನ್ನಂತಹವನನ್ನೇ ಸಹಿಸಿಕೊಂಡಿರುವುದು ಸಾಮಾನ್ಯದ ಕಾರ್ಯವೇ! 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...